ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 30, 2022

ಗುಡಿಕಟ್ಟುವ ಕಾರ್ಮಿಕರ ಸಾಲಿನಲ್ಲಿ ನಾನೂ ಒಬ್ಬ!

 ನಮಸ್ಕಾರ.


ಬಹಳ ಸಮಯದ ನಂತರ ಇಮ್ದು ಹೊಸದಾಗಿ ಬ್ಲಾಗ್ ಬರೆಯಲು ಆರಂಭಿಸಬೇಕೆಂಬ ಓದುಗರ ಒತ್ತಾಸೆಯನ್ನು ಮನ್ನಿಸಿ, ಸಾಧ್ಯವಾದಷ್ಟು ಬರಹಗಳನ್ನು ಮಂಡಿಸಲು ಮರಳಿ ಬಂದಿದ್ದೇನೆ. 


ದಶಕಗಳ ಹಿಂದಿನ ಓದಿನ ಅಭಿರುಚಿ, ಆ ತಹತಹ, ಆ ಮಟ್ಟದ ಹವ್ಯಾಸ ಇಂದಿಲ್ಲ. ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಬಂದು, ವಿಶ್ವದ ಸಮಸ್ತ ಆಗುಹೋಗುಗಳು ಅರೆಕ್ಷಣದಲ್ಲಿ ದೃಶ್ಯ,ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಸಾಮಾಜಿಕ ಜಾಲತಾಣಗಳು ಸದಾ ಉಪಲಬ್ಧವಾಗಿರುವುದರಿಂದ ಬಹುಶಃ ಹೆಚ್ಚಿನ ಯಾರಿಗೂ ಓದುತ್ತ ಕೂರುವ ಜಾಯಮಾನ ಉಳಿದಿಲ್ಲ; ಅಪವಾದಗಳಿರಬಹುದು. ಪುಸ್ತಕಗಳು ಎಷ್ಟೇ ಮಹೋನ್ನತವಾಗಿದ್ದರೂ ಅವುಗಳನ್ನು ಕೊಂಡಿ ಓದಿ ಕಾಪಿಡುವ ಸಂಸ್ಕೃತಿಯೇ ಹೊರಟು ಹೋಯ್ತು ಎನ್ನಬಹುದೇನೋ! ಹಾಗಾಗಿಯೇ ಪ್ರಕಾಶಕರು ಪುಸ್ತಕಗಳನ್ನು ಹೊರತರಲು ಮೀನೆಮೇಷ ಎಣಿಸಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ ಎಂದರೆ ತಪ್ಪಲ್ಲ. ಆದರೂ ಗಟ್ಟಿ ಸಾಹಿತ್ಯಕ್ಕೊಂದು ರೂಪುರೇಷೆ, ಒಂದು ಆಯಾಮ, ಒಂದು ಘನತೆಯ ಚೌಕಟ್ಟು ಇರಬೇಕೆಂದರೆ ಅದಕ್ಕೆ ಪುಸ್ತಕಗಳ ರೂಪ ಇರಲೇಬೇಕು.


ವಿಕಾಸ ಜಗತ್ತಿನ ಸಹಜ ನಿಯಮ. ಬೆಳೆಯುತ್ತಿರುವ ವಿಶ್ವ ಎನ್ನುತ್ತೇವೆ; ಬೆಳೆಯುವುದು ಎಂದರೇನು? ಬೆಳೆಯುವುದಕ್ಕೊಂದು ಮಿತಿಯಿಲ್ಲವೇ? ಹಿಂದೆ ಕಾಣದ್ದನ್ನು ಮುಂದೆ ಕಾಣುವುದಷ್ಟೇ ಬೆಳವಣಿಗೆಯೇ? ಮುಂದೆ ಕಾಣುವುದೆಲ್ಲ ಸ್ಥಿರವೇ / ಶಾಶ್ವತವೇ? ಅಥವಾ ನಂತರದ ದಿನಗಳಲ್ಲಿ ಇನ್ನಾವುದೋ ಹೊಸತು ಎನ್ನುವುದು ಆವಿಷ್ಕಾರಗೊಂಡಿತು ಎಂದಾದರೆ ಮತ್ತೆ ಮುಂದಿನದು ಹಿಂದೆ ಬಿದ್ದು ಇನ್ನೊಂದು ಬರುತ್ತಾ ಸಾಗುವುದೇ? ಗೊತ್ತಿಲ್ಲ. ಅದನ್ನೇ ನಮ್ಮ ಗುಂಡಪ್ಪಗುರು ಹೇಳಿದರು:


ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |

ಜನರೆಲ್ಲರಾಗುಡಿಯ ಕೆಲಸದಾಳುಗಳು |

ಮನೆಯೇನು? ನಾಡೇನು? ಕ್ಯ್ಲವೇನು? ಮಠವೇನು?

ಎಣಿಸೆಲ್ಲವದೆಯೆಂದು-ಮಂಕುತಿಮ್ಮ


ಹಾಗಾಗಿ, ವಿಶ್ವವೆಂಬೀ ಗುಡಿಯ ಕಟ್ಟಡ ಕಾಮಗಾರಿ ಮುಗಿಯಿತೆಂಬುದಿಲ್ಲ! ಇದಕ್ಕೆ ಕಂತ್ರಾಟುದಾರರಿಲ್ಲ; ಕೇವಲ ಹಣಕ್ಕಾಗಿ ನಡೆಯುವ ವ್ಯವಹಾರ ಇದಲ್ಲ. ಇರುವ ರಂಗವೈವಿಧ್ಯಗಳಲ್ಲಿ ಅವುಗಳದ್ದೇ ಆದ ವಿಶಾಲ ವ್ಯಾಪ್ತಿಯಲ್ಲಿ, ಅದೆಷ್ಟು ಜನ ಕಾರ್ಮಿಕರು ! ಇರುವವರೆಲ್ಲರೂ ಕಾರ್ಮಿಕರೇ! ಅಂತಹ ಗುಡಿಕಟ್ಟುವ ಕಾರ್ಮಿಕರ ಸಾಲಿನಲ್ಲಿ ನಾನೂ ಒಬ್ಬ ನಿಂತು ಆಗಾಗ ಕಲ್ಲು ಮಣ್ಣು ಹೊತ್ತಿದ್ದೇನೆ; ಹೊರುತ್ತಲೇ ಇದ್ದೇನೆ. ಹಾಗಾಗಿ ಇದು ನನಗೆ ಸಹ್ಯ. ಯಾರೋ ಅತಿಥಿ, ಅಭ್ಯಾಗತ, ಆಗಂತುಕರು ಒಂದಷ್ಟು ಓದಿ ಖುಷಿಗೊಂಡು ಹೇಳಿದರೆ ಅದರಿಂದ ಸಿಗುವ ಆತ್ಮತೃಪ್ತಿಯೆಂಬ ಶೀಲ್ಡ್ ಇದೆಯಲ್ಲ ಅದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಹಾಗಾಗಿ, ಇಂದೇ, ಈಗಲೇ ರಂಗಕ್ಕೆ ಧಾವಿಸಿದ್ದೇನೆ. ಆಗಾಗ ಪ್ರವೇಶಿಸಿ ಪಾತ್ರ ನಿರ್ವಹಿಸುವ ನನ್ನ ಕೆಲಸವನ್ನು ರಂಗಕೌತುಕದಿಂದ ನೀವೆಲ್ಲ ಮನ್ನಿಸುತ್ತೀರಿ ಎಂದು ಭಾವಿಸಿ ನಿಮಗಿದೋ ಹೃತ್ಪೂರ್ವಕ ಸ್ವಾಗತ, ಧನ್ಯವಾದಗಳು  



Wednesday, February 3, 2016

"ಏರ್ ಲಿಫ್ಟ್ ನಲ್ಲಿ ಸಿಕ್ಕಾಪಟ್ಟೆ ಅಸಹಿಷ್ಣುತೆಯಿದೆ!"



 "ಏರ್ ಲಿಫ್ಟ್ ನಲ್ಲಿ ಸಿಕ್ಕಾಪಟ್ಟೆ ಅಸಹಿಷ್ಣುತೆಯಿದೆ!"

 "ಏರ್ ಲಿಫ್ಟ್ ನಲ್ಲಿ ಸಿಕ್ಕಾಪಟ್ಟೆ ಅಸಹಿಷ್ಣುತೆಯಿದೆ!" ಹೀಗೆ ಹೇಳಿದಾಗ ನೀವೆಲ್ಲ ಆಶ್ಚರ್ಯ ಪಡಬಹುದು. ಆದರೆ ಇದು ಸತ್ಯ. ಸತ್ಯ ಹೇಗೆಂಬುದು ನಿಮಗೆ ಈ ಕಥೆಯ ಕೊನೆಯಲ್ಲಿ ಗೊತ್ತಾಗ್ತದೆ. ಅಲ್ಲೀತನಕ ನೀವು ಸಹಿಷ್ಣುತೆಯಿಂದ ಹಿಂಬಾಲಿಸಲೇಬೇಕು.

ನೋಡಿ, ನಾವೀಗ ಮಾತಾಡ್ತಿರೋದು ಏರ್ ಲಿಫ್ಟ್ ಸಿನಿಮಾದ ಬಗ್ಗೆ.  ಭಾರತವೆಂಬ ಭಾರತದಲ್ಲಿ ಎಲ್ಲೆಲ್ಲೂ ಫೆಬ್ರಿಕೇಟೆಡ್ ಇಂಟಾಲರನ್ಸ್ ಹುಟ್ಟಿಕೊಂಡಾಗಲೇ ಈ ಸಿನಿಮಾ ನಿರ್ಮಾಣವಾಯಿತು. ಅವನ್ಯಾವನೋ ದನದ ಮಾಂಸ ತಿನ್ನಲು ಹೋಗಿ ಸತ್ತ ಎಂಬಲ್ಲಿಂದ ಹೊತ್ತಿಕೊಂಡದ್ದು ಬುದ್ಧಿಜೀವಿ ರೂಪದ ಹಲವಾರು ಸಾಹಿತಿಗಳು ಪ್ರಶಸ್ತಿಗಳನ್ನು ಮರಳಿಸುವವರೆಗೂ ನಡೆಯಿತು. ಪಾಕಿಸ್ತಾನಕ್ಕೆ ನಡೆದುಕೊಳ್ಳುವ ಕೆಲವು ಭಕ್ತರು ಈ ದೇಶ ತಮಗೆ ವಾಸಯೋಗ್ಯವಲ್ಲ ಎನ್ನುವವರೆಗೂ ನಡೀತು. ಇಲ್ಲಿನ ಉಪ್ಪು-ಅನ್ನ ತಿಂದ ಜನ ಅಲ್ಲೊಂದು ದೇಶವುಂಟು ಅದೇ ಲಾಯಕ್ಕೆಂದು ಹೇಳುವಾಗ ಹಡೆದವ್ವೆಗೆ ಮುಖ-ಮೂತಿ ನೋಡದೆ ಹೊಡೆಯುವ ಹುಡುಗನ ದೃಶ್ಯಾವಳಿ ಕಣ್ಣೆದುರು ಬಂತು; ಆದರೇನು ಮಾಡ್ತೀರಿ? ಹೇಳಿದವರು ತೀರಾ ಯಾರೋ ಬಾಲಕರು ಎಂದುಕೊಳ್ಳೋ ಹಾಗಿಲ್ಲ; ಅವರೆಲ್ಲ ಪ್ರಬುದ್ಧ ನಟರು, ನಿರ್ದೇಶಕರು ಎನಿಸಿಕೊಂಡು ಇದೇ ನೆಲದಲ್ಲಿ ಕೋಟಿ ಕೋಟಿ ಹಣವನ್ನು ಸಂಭಾವನೆಯಾಗಿ ಪಡೆದವರು. ದೇಶಕ್ಕೇನು ಕೊಟ್ಟರು?? ಛೆ, ಅದನ್ನೆಲ್ಲ ಕೇಳಲೇ ಬಾರದು. ದೊಡ್ಡವ್ಯಕ್ತಿಗಳ ವಿಷಯ! ಅವರೆಲ್ಲ ತೆರಿಗೆ ಕಟ್ಟದಿದ್ದರೂ ನಡೀತದೆ!!     

ಈಗ ಕೆಲವೊಂದು ಶಬ್ದಗಳನ್ನು ಗಮನಿಸೋಣ: ಮ್ಯಾನ್ಮಾರ್, ಯೆಮೆನ್, ನೇಪಾಳ, ಆಪರೇಷನ್ ಮೈತ್ರಿ ಎಂಬೆಲ್ಲ ಶಬ್ದಗಳನ್ನು ನೆನಪಿಸಿಕೊಳ್ಳುವಾಗ ಅಮೆರಿಕ ಸೇರಿದಂತೆ ವಿಶ್ವದ 27 ದೇಶಗಳು ರಕ್ಷಣೆಯ ಸಹಾಯಕ್ಕಾಗಿ ಭಾರತಕ್ಕೆ ಮೊರೆ ಇಟ್ಟಿದ್ದು ಈಗ ಹಳೆಯ ಸುದ್ದಿಯಾಗಿ ಮರೆತುಹೋಗಿದೆ, ಯಾರಿಗೆ? ಅಸಹಿಷ್ಣುತೆ ಎಂದು ಹಲುಬುತ್ತಿರುವವರಿಗೆ ಮತ್ತು ಅವರನ್ನು ಬೆಂಬಲಿಸುತ್ತಿರುವವರಿಗೆ. ’ಕಂಡರಾಗದ ಗಂಡನಿಗೆ ಮೊಸರಲ್ಲೂ ಕಲ್ಲು’ ಎಂಬುದೊಂದು ಜಾಣ್ನುಡಿ ಇದೆಯಲ್ಲವೇ? ಮೋದಿಯ ಸಮರ್ಥ ಆಡಳಿತದಿಂದ ತಮ್ಮ ಬೇಳೆ ಬೇಯದೆ ಕಂಗಾಲಾದ ಜನ ಅಸಹಿಷ್ಣುತೆಯನ್ನು ಹುಟ್ಟುಹಾಕಿದ್ದಾರೆ. ದಿನಬೆಳಗಾದರೆ ಕ್ಷುಲ್ಲಕ ಕಾರಣಗಳಿಗೆ ಮಾಧ್ಯಮಗಳ ಅಬ್ಬರದ ಪ್ರಚಾರಕೊಟ್ಟು ಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿಬಿಟ್ಟಿದೆ ಎಂಬಂತೆ ಬಿಂಬಿಸುತ್ತಾರೆ. ಅಲ್ಯಾರೋ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ರಾಹುಲ್ ಓಡಿಬಂದು ಮಾತನಾಡಿಸುವ ನಾಟಕ ನಡೆಯುತ್ತದೆ. ಅವರದ್ದೇ ಸರಕಾರದ ಆಡಳಿತವಿರುವ ಕರ್ನಾಟಕದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಗಮನಿಸುವವರೇ ಇಲ್ಲ. ಅಸಹಿಷ್ಣುತೆಯ ಜನರೆಲ್ಲ ಆಗ ಪರಮ ಸಹಿಷ್ಣುಗಳಾಗಿ ಮಲಗಿರುತ್ತಾರೆ. ಯಾವಾಗ ಬಿಟ್ಟಿ ಕಾಸು-ಕೂಳು ಸಿಗುತ್ತದೋ ಆಗ ಬೀದಿ ನಾಯಿಯಂತೆ ಮತ್ತೆ ಬೊಗಳಲು ಆರಂಭಿಸುತ್ತಾರೆ. ಅಂಥವರನ್ನೆಲ್ಲ ಹೇಗೆ ಬಳಸಿಕೊಳ್ಳಬೇಕೆಂಬುದಕ್ಕೆ ನುರಿತ 'ಹಸ್ತ'ರಿಗೆ ಕಲಿಸಿಕೊಡುವುದೇನೂ ಬೇಕಾಗಿಲ್ಲ.

ಪತ್ರಕರ್ತ ವಿಶ್ವೇಶ್ವರ ಭಟ್ಟರು ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ಬಗ್ಗೆ ಒಮ್ಮೆ ಬರೆದಿದ್ದರು;ಅದು ಯಾವುದೋ ರಾಮಾಯಣ ಕಾಲದ ಮಹಾನ್ವೇಷಣೆಯಲ್ಲಿ ಅವರು ತೊಡಗಿಕೊಂಡ ಸಂದರ್ಭ ಅಂತ ಕಾಣುತ್ತದೆ. ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು ಬೇರೆ ಮತ್ತು ಹೊಡೆದುಕೊಳ್ಳುವುದು ಬೇರೆ ಎಂದವರು ಹೇಳಿದ್ದರು. ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ಹಿಂದೆ ನಡೆಯುವ ಕಸರತ್ತುಗಳ ಬಗ್ಗೆ ಸಂಶೋಧಕ ಚಿದಾನಂದ ಮೂರ್ತಿಗಳು ಬಹಳ ಬರೆದಿದ್ದಾರೆ. ಶಿಫಾರಸ್ಸು ಮಾಡಿಸಲು ಯಾರ್ಯಾರು ಯಾರ್ಯಾರಿಗೆಲ್ಲ ಫೋನ್ ಮಾಡಿಸುತ್ತಾರೆ ಎಂಬುದಕ್ಕೆ ಜ್ವಲಂತ ವಿವರಣೆ ನೀಡಿದ್ದಾರೆ. ಅಂದರೆ, ಹೊಡೆದುಕೊಳ್ಳುವುದು ಎಂಬುದು ಇದೆಯೆಂದಾಯ್ತಲ್ಲವೇ?  ಪ್ರಶಸ್ತಿಗಳನ್ನು ಹೊಡೆದುಕೊಂಡವರಿಗೆ ಪಡೆದುಕೊಳ್ಳುವಾಗ ವ್ಯಯಿಸುವ ನಿಜವಾದ ಶ್ರಮದ,ಬೆವರಿನ ಬೆಲೆ ಅರ್ಥವಾಗುವುದಿಲ್ಲ. ಹಾಗೆ ಬಂದದ್ದು ಹೀಗೆ ಹೋಯ್ತು ಎಂಬರ್ಥದಲ್ಲಿ ಮರಳಿಸಿರಬಹುದು. ಪ್ರಶಸ್ತಿಯ ಜೊತೆಗೆ ಸಿಕ್ಕ ಹಮ್ಮಿಣಿಗಿಂತ ಈಗ ಅಕೌಂಟಿಗೆ ಬೀಳುವ ಭಕ್ಷೀಸು ಹೆಚ್ಚಿಗೆ ಇದ್ದಿರಬಹುದೇ?ಗೊತ್ತಿಲ್ಲ.

ಇವೆಲ್ಲ ಹಾಗಿರಲಿ, ಇಲ್ಲಿಯವರೆಗೆ ಪೀಠಿಕೆಯೇ ಆಯ್ತು, ಈಗ ನಿಧಾನವಾಗಿ ಸಿನಿಮಾದತ್ತ ಸಾಗೋಣ. ಜೀವ ಕೈಯ್ಯಲ್ಲಿ ಹಿಡಿದುಕೊಂಡು ಯುದ್ಧಭೂಮಿಯಿಂದ ನಮ್ಮ ಜನರನ್ನು ಅಲ್ಲಿಂದ ಯಶಸ್ವಿಯಾಗಿ ಕರೆತಂದ ಯೋಧರು, ಅವರಿಗೆ ಬೆನ್ನೆಲುಬಾಗಿ ಸಹಕರಿಸಿ ಧೈರ್ಯ ತುಂಬಿದ ಸದ್ಯದ ಕೇಂದ್ರ ಸರಕಾರ ಇಂಥದ್ದನ್ನೆಲ್ಲ ಅಸಹಿಷ್ಣುಗಳು ಗಮನಿಸುವುದಿಲ್ಲ. ಯಾಕೆಂದರೆ ಅಲ್ಲಿ ’ಹಸ್ತ’ಕ್ಷೇಪ ಮಾಡಲು ಅವಕಾಶ ಸಿಗಲಿಲ್ಲ! ಹಾಗಾದರೆ ಯಾವುದೋ ಕಾರಣಕ್ಕಾಗಿ ಒಮ್ಮಿಂದೊಮ್ಮೆಲೇ ರಣರಂಗವಾಗಿ ಮಾರ್ಪಡುವ ದೂರದ ಕೊಲ್ಲಿರಾಷ್ಟ್ರಗಳಲ್ಲಿ ಅಂತಹ ವತಾವರಣ ನಿರ್ಮಾಣವಾದಾಗಿನ ಪರಿಸ್ಥಿತಿ ಹೇಗಿದ್ದೀತು? ಆಗ ಅಲ್ಲಿನ ನಮ್ಮ ಜನರ ಎದೆಬಡಿತ ಹೇಗಿರಬೇಡ! ಅಂತಹ ಸನ್ನಿವೇಶಗಳಲ್ಲಿ ಹೃದಯವಂತ ಅಧಿಕಾರಿಗಳು ಹೇಗೆ ವರ್ತಿಸುತ್ತಾರೆ, ಅಸಹಿಷ್ಣುಗಳು ಅಲ್ಲಿಯೂ ಹೇಗೆ ಕೊಸರಾಡುತ್ತಾರೆ ಎಂಬುದೆಲ್ಲವನ್ನೂ ಅಡಕಮಾಡಿಕೊಂಡ ಕಥೆ ಏರ್ ಲಿಫ್ಟ್ ಎಂಬ ಸಿನಿಮಾದ್ದು. ರಾಜಾ ಕೃಷ್ಣ ಮೆನನ್ ನಿರ್ದೇಶಿಸಿ, ಅಕ್ಷಯ್ ಕುಮಾರ್, ನಿಮ್ರತ್ ಕೌರ್, ಪ್ರಕಾಶ್ ಬೆಳವಾಡಿ, ಇನಾಮುಲ್ಲಖ್, ಪೂರಬ್ ಕೊಹ್ಲಿ ಮೊದಲಾದವರು ಅಭಿನಯಿಸಿದ ಚಿತ್ರ.

1990ರ ಇರಾಕ್-ಕುವೈತ್ ಯುದ್ಧ ಭಾರತೀಯರು ಮರೆಯಲಾಗದ ಘಟನೆ. ಯುದ್ಧಗ್ರಸ್ತ ಕುವೈತ್’ನಲ್ಲಿ ಅಕ್ಷರಶಃ ಬೀದಿಪಾಲಾಗಿದ್ದ ತನ್ನ 1,700 ಮಂದಿಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರುವ ಬಹುದೊಡ್ಡ ಸವಾಲು ದೇಶದ ಮುಂದಿತ್ತು. ಅದು ಅಂತಾರಾಷ್ರ್ರೀಯ ರಾಜಕೀಯ ಸೌಹಾರ್ದ ಸಂಬಂಧದ ವಿಚಾರ. ಅಂತಾರಾಷ್ಟ್ರೀಯ ಮಾತುಕತೆ, ಸಂಪರ್ಕ ತೊಡಕುಗಳು ಮತ್ತು ಇರಾಕ್ ಮೇಲೆ ಪ್ರಬಲ ರಾಷ್ಟ್ರಗಳು ಹೇರಿದ ದಿಗ್ಬಂಧನ ಮುಂತಾದ ಸವಾಲುಗಳಿಂದಾಗಿ ರಾಜತಾಂತ್ರಿಕ ಪ್ರಕ್ರಿಯೆಗಳು ನಿರೀಕ್ಷಿತ ವೇಗದಲ್ಲಿ ನಡೆಯಲಿಲ್ಲ. ಕುವೈತ್ ನಲ್ಲಿದ್ದ ನಮ್ಮವರಿಗೆ ಅದೆಷ್ಟು ತೊಂದರೆಯಾಗಿತ್ತೆಂಬುದು ವರ್ಣಿಸಲಸಾಧ್ಯ. ಅನಿರೀಕ್ಷಿತವಾಗಿ ಕುವೈತ್’ನಲ್ಲಿ ಭಾರತೀಯರ ರಕ್ಷಣೆಗೆ ದೇವರು ಬಂದಹಾಗೆ ಬಂದವರು ಭಾರತೀಯ ಮೂಲದ ಉದ್ಯಮಿಗಳಾದ ಸನ್ನಿ ಮಾಥ್ಯೂ ಮತ್ತು ವೇದಿ ಎಂಬ ಹೃದಯವಂತ ಸಾಹಸಿಗಳು.

ಒಂದುಕಡೆ ಇರಾಕಿ ಪಡೆಗಳ ಅಟ್ಟಹಾಸ ಮತ್ತು ಇನ್ನೊಂದೆಡೆ ಭಾರತೀಯ ಆಡಳಿತಾತ್ಮಕ ಕಚೇರಿಗಳು ತೋರಿದ ಆರಂಭಿಕ ನಿರಾಸಕ್ತಿ ಇವೆರಡರ ನಡುವೆ ತಮ್ಮ ಜೀವ ಪಣಕ್ಕಿಟ್ಟು ಲಕ್ಷಾಂತರ ದೇಶಬಾಂಧವರ ರಕ್ಷಣೆಗೆ ಅವರಿಬ್ಬರು ನಡೆಸಿದ್ದ ಹೋರಾಟವೇ ಏರ್’ಲಿಫ್ಟ್ ಸಿನಿಮಾಕ್ಕೆ ಮೂಲಸ್ರೋತ ಇಂಧನ. ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಘಟಿಸಿದ್ದ  ಸೌದಿ ರಾಷ್ಟ್ರಗಳ ಯುದ್ಧ, ದೇಶ-ದೇಶಗಳ ನಡುವಿನ ಬಿಕ್ಕಟ್ಟು, ಹಲವು ಮಜಲುಗಳ ವೈಮನಸ್ಯಗಳ ನಡುವೆ ಸಿಕ್ಕ ವಲಸಿಗರ ಅಸಹಾಯಕತೆ ಎಲ್ಲವನ್ನೂ ಸಿನಿಮಾ ಮಾಡುವುದು ಸುಲಭವೇನೂ ಆಗಿರಲಿಲ್ಲ. ಬೇರೆ ಏನನ್ನಾದರೂ ಮಾಡಿಬಿಡಬಹುದು ಆದರೆ ಯುದ್ಧದ ದೃಶ್ಯಗಳನ್ನು ತೋರಿಸುವುದೇ ಹರಸಾಹಸ. ಘನತರವಾದ ಆ ಸವಾಲನ್ನು ನಿಭಾಯಿಸುವಲ್ಲಿ ನಿರ್ದೇಶಕ ರಾಜಾ ಕೃಷ್ಣ ಮೆನನ್ ಪ್ರಯತ್ನಿಸಿ ಯಶ್ವಿಯಾಗಿದ್ದು ಅಭಿನಂದನಾರ್ಹ.

ವಿದೇಶೀ ನೆಲ ಕುವೈತ್’ನಲ್ಲಿ ಯಶಸ್ವೀ ಉದ್ಯಮಿಯಾಗಿ ಐಷಾರಾಮಿ ಜೀವನದಲ್ಲಿ ಮುಳುಗಿದ್ದ ರಂಜಿತ್ ಕಟಿಯಾಲ್ ಅರ್ಧ ರಾತ್ರಿಯ ಫೋನ್ ಕರೆಯಿಂದ ಬೆಚ್ಚಿಬಿದ್ದಂತೆಯೇ ಬದುಕಿನಲ್ಲೂ ಬೆಚ್ಚಿಬಿದ್ದು ಹೊಸ ಆಘಾತಕ್ಕೆ ತೆರೆದುಕೊಳ್ಳುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಬದುಕೆಂದರೆ ಕೇವಲ ಉದ್ಯಮವಲ್ಲ; ತಾನು ತನ್ನವರು ಮತ್ತು ತನ್ನನ್ನು ನಂಬಿಕೊಂಡವರ ಸುರಕ್ಷತೆ ಎಷ್ಟು ಎಂಬುದರ ಅರಿವು ಮೂಡುತ್ತದೆ. ತನ್ನದೇ ಜೀವವನ್ನು ಪಣಕ್ಕಿಟ್ಟು ಲಕ್ಷಾಂತರ ಮಂದಿಯ ಜೀವ ಉಳಿಸುವ ಮಾನವೀಯ ಸಾಹಸಕ್ಕೆ ಮುಂದಾಗುತ್ತಾನೆ. ಅದೆಂತಹ ಸಾಹಸ? ಹೇಗೆಲ್ಲ ಹೋರಾಡಿ ಗೆಲ್ಲಬೇಕಾಯಿತು ಎಂಬುದು ಸಿನಿಮಾ ಕಥೆ.

ಈ ಸಿನಿಮಾದಲ್ಲಿ ಅತಿರಂಜಿತ ಹಾಡು ನರ್ತನಗಳು ಇಲ್ಲವೇ ಇಲ್ಲ. ಅನಾವಶ್ಯಕ ಬಡಿದಾಟಗಳೂ ಇಲ್ಲ. ಯಾವೊಂದು ದೃಶ್ಯವೂ ಅನಗತ್ಯ ಎನಿಸದಷ್ಟು ಸಹಜತೆಯಿಂದ ಕೂಡಿದೆ. ಆದರೂ ಪ್ರೀತಿ-ಪ್ರೇಮದ ದೃಶ್ಯಗಳಿವೆ, ಚಿಲ್ಲರೆ ನರ್ತನವೂ ಸೇರಿಕೊಂಡಿದೆ, ತೀರಾ ಮನದೊಳಗೆ ಗುನುಗುನಿಸುವಂಥದ್ದಲ್ಲವಾದರೂ ಇಂಪಾಗಿವೆ ಎನ್ನಬಹುದಾದ ಹಾಡುಗಳಿವೆ, ಕೌಟುಂಬಿಕ ಸಂಬಂಧಗಳು ಪ್ರಮುಖವಾಗಿ ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ರಂಜಿತ್ ಕಟಿಯಾಳ್ ಎಂಬ ಹೀರೋ[ಅಕ್ಷಯ್ ಕುಮಾರ], ತನ್ನ ಡ್ರೈವರ್ ಕೊಲೆಗೀಡಾಗಿದ್ದನ್ನು ಮಡದಿ[ನಿಮ್ರತ್ ಕೌರ್]ಗೆ ಹೇಳುವಾಗ ಕುಸಿದು ಕೂರುತ್ತಾನೆ. ಎಲ್ಲಿ ನೋಡಿದರೂ ಗುಂಡಿನ ಮೊರೆತ, ಬೆಂಕಿಯ ಜ್ವಾಲೆಗಳು, ಜನರ ಆಕ್ರಂದನ, ಜೀವಭಯದ ನಡುವೆಯೂ ಡ್ರೈವರ್ ನ ಕುಟುಂಬವನ್ನು ನೆನಪಿಟ್ಟುಕೊಂಡು ಅವರನ್ನೂ ಕರೆತರಲು ಮರೆಯುವುದಿಲ್ಲ.   

ಹಾಗಾದರೆ ಬಹಳ ಗಡುಸಾಗಿರಬಹುದಾದ ಈ ಸಿನಿಮಾದಲ್ಲಿ ಹಾಸ್ಯವೇ ಇಲ್ಲವೇ? ಇಲ್ಲ ಅಂದೋರ್ಯಾರು? ಇದ್ದಾರಲ್ಲ ಅಸಹಿಷ್ಣು ಜಾರ್ಜ್ ಕುಟ್ಟಿ[ಪ್ರಕಾಶ್ ಬೆಳವಾಡಿ]! ಎಲ್ಲರಿಗೂ ಜೀವಭಯ ಹುಟ್ಟಿದ್ದರೆ ಜಾರ್ಜ್ ಕುಟ್ಟಿಗೆ ಮಾತ್ರ ಇಲ್ಲದ ಸಮಸ್ಯೆ ಕಾಡುತ್ತದೆ. ಭಾರತೀಯ ಮೂಲದ ಉದ್ಯಮಿಯಾಗಿರುವ ರಂಜಿತ್ ಎಂಬವರ ಕಚೇರಿಯಲ್ಲಿ ಐದುನೂರಕ್ಕೂ ಅಧಿಕ ಜನ ಅವಿತುಕೊಂಡು, ಇರುವ ಆಹಾರಗಳನ್ನು ಹಂಚಿಕೊಂಡು ದಿನದೂಡುತ್ತಿರುವಾಗ ಜಾರ್ಜ್ ಕುಟ್ಟಿ ಕಕ್ಕಸು ದುರ್ಗಂಧಮಯವಾಗಿದೆ ಎಂದು ತಗಾದೆ ತೆಗೆಯುತ್ತಾನೆ. ತಾತ್ಕಾಲಿಕ ವಸತಿ ಮಾಡಬೇಕಾದ ಜಾಗಗಳಲ್ಲೆಲ್ಲ ತನ್ನ ಕುಟುಂಬಕ್ಕೆ ಪ್ರತ್ಯೇಕ ಕೊಠಡಿ ಬೇಕೆಂದು ಹಠ ಹಿಡೀತಾನೆ. ಕುವೈತ್ ನಿಂದ ತಪ್ಪಿಸಿಕೊಂಡು ಹೊರಡುವ ಸಂದರ್ಭದಲ್ಲಿ ತಮ್ಮನ್ನು ಮೊದಲು ವಾಹನಗಳಿಗೆ ಹತ್ತಿಸಲಿಲ್ಲವೆಂದು ತಕರಾರು ಮಾಡ್ತಾನೆ. ಆ ಸಂದರ್ಭದಲ್ಲಿ ಅವನ ಮುಖ, ಕಣ್ಣುಗಳು, ಭಾವನೆ, ಮಾತುಕತೆ ಎಲ್ಲವೂ ಪ್ರಸಕ್ತ ಭಾರತದ ಅಸಹಿಷ್ಣುಗಳ ಪಾತ್ರವನ್ನೇ ಬಿಂಬಿಸುತ್ತವೆ. ಅವನ ಅಸಹಿಷ್ಣುತೆಯನ್ನು ರಂಜಿತ್ ಕಟಿಯಾಳ್ ಹೇಗೆ ನಿಭಾಯಿಸಿದ ಎಂಬುದೇ ಇಂದಿನ ಇಲ್ಲಿನ ಅಸಹಿಷ್ಣುಗಳಿಗೂ ದೊರೆಯುವ ಉತ್ತರ ಎಂದರೆ ತಪ್ಪಾಗಲರದು. ಪ್ರಕಾಶ್ ಬೆಳವಾಡಿಯವರ ಅಭಿನಯವೂ ಅತ್ಯಂತ ಸಹಜವಾಗಿದ್ದು ನೀವು ನಕ್ಕು ಹೊಟ್ಟೆ ಹುಣ್ಣಾಗಬಹುದು.....ಎಚ್ಚರ.    

ರಂಜನೆ, ಭಾವೋದ್ವೇಗದ ಪಾತ್ರಗಳಷ್ಟೇ ಹೆಚ್ಚಾಗಿ ಅಭಿನಯಿಸಿದ್ದ ಅಕ್ಷಯ್’ಕುಮಾರ್ ಏರ್’ಲಿಫ್ಟ್ ಮೂಲಕ ತಮ್ಮೊಳಗಿನ ನಟನ ಹೊಸ ಆಯಾಮವನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಅಲ್ಲಿ ಹೀರೋ ನಾಟಕೀಯ ಹೀರೋ ಆಗಿರದೆ ಅಸಲೀ ಹೀರೋ ಆಗಿರುವ್ಂತೆ ತಮ್ಮ ನಟನಾ ಚಾತುರ್ಯ ತೋರಿಸಿದ್ದಾರೆ. ಪ್ರಾಯಶಃ ಆ ಪಾತ್ರವನ್ನು ಇನ್ನಾರೋ ನಿರ್ವಹಿಸಿದ್ದರೆ ಅದು ಅಷ್ಟು ಸುಪಿಷ್ಟವಾಗಿ ಮೂಡಿಬರುತ್ತಿರಲಿಲ್ಲವೇನೋ. ಇಡೀ ಸಿನಿಮಾವೇ ಕಥಾನಾಯಕನ ಹೆಗಲ ಮೇಲಿದೆ.  ಸಿನಿಮಾ ಎಂದಮೇಲೆ ಸಾಕಷ್ಟು ಕುಂದುಕೊರತೆಗಳು ಇರುವುದು ಸಹಜವೇ. ಆದರೆ ಇಲ್ಲಿನ ಅವರ ನಟನೆಯಿಂದ ಈ ಸಿನಿಮಾದ ಕೊರತೆಗಳೆಲ್ಲ ಮರೆತುಹೋಗುತ್ತವೆ. ಅವರೊಂದಿಗೆ ಸದ್ದಾಂ ಸೇನಾಧಿಕಾರಿಯಾಗಿ ಇನಾಮುಲ್ಲಖ್, ಕನ್ನಡಿಗ ಪ್ರಕಾಶ್ ಬೆಳವಾಡಿ, ನಿಮ್ರತ್ ಕೌರ್ ಕೂಡ ಪ್ರಬುದ್ಧ ಅಭಿನಯ ನೀಡಿದ್ದಾರೆ. ಕುಮುದ್ ಮಿಶ್ರಾ ಹಾಗೂ ಪೂರಬ್ ಕೊಹ್ಲಿ ಕೂಡ ಮೆಚ್ಚುಗೆಗೆ ಅರ್ಹರು.

ಪ್ರಿಯಾ ಸೇಠ್ ಛಾಯಾಗ್ರಹಣ ಮೆಚ್ಚುವಂತಿದೆ. ಅಂಕಿತ್ ತಿವಾರಿ- ಅಮಾಲ್ ಮಲ್ಲಿಕ್ ಜೋಡಿಯ ಸಂಗೀತ ಚೆನ್ನಾಗಿಲ್ಲ ಎನ್ನೋದಕ್ಕಿಂತ ಈ ಸಿನಿಮಾಕ್ಕೆ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸಂಗೀತದ ಅಗತ್ಯ ಕಂಡು ಬರೋದಿಲ್ಲ. ಸಿನಿಮಾ ನೋಡುತ್ತಿದ್ದರೆ ಯಾವುದೋ ಒಂದು ಮನಮಿಡಿಯುವ ಡಾಕ್ಯುಮೆಂಟರಿ ನೋಡಿದಂತಿರುತ್ತದೆ. ಇತ್ತೀಚೆಗೆ ಬಂದ ಸಿನಿಮಾಗಳ ಪೈಕಿ ಐತಿಹಾಸಿಕ ವಿಷಯಾಧಾರಿತ ಯಶಸ್ವೀ ಸಿನಿಮಾಗಳಲ್ಲಿ ಇದೂ ಒಂದಾಗಿದ್ದು ಕಾಸು ಕೊಟ್ಟು ನೋಡುವ ಪ್ರೇಕ್ಷಕನ ಪೈಸೆಗೆ ಮೌಲ್ಯ ದೊರೆಯುತ್ತದೆ.

Sunday, March 22, 2015

ಗುರು, ಪ್ರಭುತ್ವ ಮತ್ತು ಸ್ವಸ್ಥ ಸಮಾಜ

 ಗುರು, ಪ್ರಭುತ್ವ ಮತ್ತು ಸ್ವಸ್ಥ ಸಮಾಜ

ಅನ್ಯದೇಶದ ದೊರೆಯು ಮಹಾನ್ಸೈನ್ಯದೊಡಗೂಡಿ ನಡೆಸಿದ ಅಕಾಲಿಕ ದಾಳಿಗೆ ಹೆದರಿದ ರಾಜನೊಬ್ಬ ಕಾಡಿಗೆ ಪಲಾಯನ ಮಾಡಿದ. ಆ ರಾತ್ರಿ ಮರವೊಂದರ ಕೆಳಗೆ ನಿದ್ದೆಯಿಲ್ಲದೇ ಮಲಗಿದ್ದ ವೇಳೆ, ಕಾಗೆಗಳ ಗೂಡಿಗೆ ಗೂಬೆಗಳು ದಾಳಿ ಮಾಡಿ ಅವುಗಳನ್ನು ಕುಕ್ಕಿಕುಕ್ಕಿ ಬೀಳಿಸುತ್ತಿರುವುದನ್ನು ಕಂಡ. ಹಗಲಿನಲ್ಲಿ ಕಣ್ಣು  ಕಾಣಿಸದ ಗೂಬೆಗಳಿಗೆ ಕಾಗೆಗಳು ಕಾಟ ಕೊಡುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು. ನಿಸರ್ಗದಿಂದ ಈ ಪಾಠ ಕಲಿತ ರಾಜ, ತನ್ನ ಶಕ್ತಿ, ದೌರ್ಬಲ್ಯಗಳನ್ನು ಅನ್ಯದೇಶದ ದೊರೆಯ ಶಕ್ತಿ, ದೌರ್ಬಲ್ಯಗಳಿಗೆ ಹೋಲಿಸಿಕೊಂಡು ರಣತಂತ್ರ ರೂಪಿಸಿ, ಯುದ್ಧ ಹೂಡಿ ಗೆದ್ದ. ವೈರಿಯ ದೌರ್ಬಲ್ಯವನ್ನು ಹಾಗೂ ತನ್ನ ಸಾಮರ್ಥ್ಯಗಳನ್ನು ಲೆಕ್ಕದಲ್ಲಿಟ್ಟುಕೊಂಡು ವ್ಯೂಹವನ್ನು ರೂಪಿಸಬೇಕೆಂಬುದು ಚಾಣಕ್ಯ ನೀತಿ. ಜಗತ್ಪ್ರಸಿದ್ಧನಾದ ಚಾಣಕ್ಯ ದಕ್ಷಿಣ ಭಾರತದಿಂದ ಉತ್ತರದೆಡೆಗೆ ತೆರಳಿದ ಕಪ್ಪುಬಣ್ಣದ ಕುಬ್ಜ ಕಾಯದ ವ್ಯಕ್ತಿ ಎನ್ನಲಾಗುತ್ತದೆ. ಬುದ್ಧಿಮತ್ತೆಯಲ್ಲಿ ಅವನನ್ನು ಮೀರಿಸುವ ರಾಜನೀತಿಗಳನ್ನು ಬರೆದವರು ಕಾಣಿಸುವುದಿಲ್ಲ.

ರಾಜಸನೀತಿಗೆ ಚಾಣಕ್ಯ ತಂತ್ರವೆಂಬುದು ಸರಿ. ಆದರೆ ಯಾರಿಗೂ ಕೇಡನ್ನು ಬಯಸದ ಯೋಗಿಗೆ, ವಿರಾಗಿಗೆ, ಸನಾತನ ಧರ್ಮಗುರುವಿಗೆ ಚಾಣಕ್ಯನ ರಣತಂತ್ರಗಳು ಬೇಕಾಗುವುದಿಲ್ಲ. ಒಂದೊಮ್ಮೆ ಅಂತಹ ರಣತಂತ್ರಗಳನ್ನು ಆತ ಬಳಸಿದರೆ ಆತ ಯೋಗಿಯೂ ಅಲ್ಲ, ವಿರಾಗಿಯೂ ಅಲ್ಲ, ಸನಾತನ ಧರ್ಮಗುರುವಂತೂ ಆಗಲು ಸಾಧ್ಯವೇ ಇಲ್ಲ.

ಈ ಮಹಾನ್ ಭಾರತ ಕಾಲಕಾಲಕ್ಕೆ ಭಾರತವೆಂಬ ಹೆಸರನ್ನು ಪಡೆದುಕೊಳ್ಳಲು ಇಲ್ಲಿ ಆಳಿದ ಭರತ ಚಕ್ರವರ್ತಿಗಳೇ ಕಾರಣ ಎನ್ನಲಾಗುತ್ತದೆ. ರಾಮಾಯಣದಲ್ಲಿ ಇಕ್ಷ್ವಾಕು ವಂಶಜ ಭರತನಿಂದ ಭಾರತವೆಂದು ಹೆಸರಾದರೆ ಮಹಾಭಾರತದಲ್ಲಿ ದುಷ್ಯಂತ-ಶಕುಂತಲೆಯರ ಮಗ ಭರತನಿಂದ ಭಾರತ ಆ ಹೆಸರನ್ನು ಪಡೆದುಕೊಂಡಿತು; ಒಟ್ಟಿನಲ್ಲಿ ಅಸಮ ಸಾಹಸಿಗಳು, ಪ್ರಜಾರಂಜಕ ಚಕ್ರವರ್ತಿಗಳು, ಅರಸರು, ರಾಜರು, ಮಾಂಡಲಿಕರು, ಪಾಳೇಗಾರರು ಆಳಿದ ಭೂ ಪ್ರದೇಶ ಇದಾಗಿದೆ. ರಾಜಪ್ರಭುತ್ವದ ಕಾಲದಲ್ಲಿ ರಾಜನಿಗೆ ರಾಜಗುರುಗಳು ಎಂಬವರು ಇರುತ್ತಿದ್ದು, ರಾಜನಾದವ ಕಾಲಕಾಲಕ್ಕೆ ಅವರ ಸಲಹೆಗಳನ್ನು ಪಡೆದೇ ರಾಜನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ. ಅಂದಿನ ದಿನಮಾನದಲ್ಲಿ ಗುರು ಪದವಿಯನ್ನು ಅಲಂಕರಿಸಿದವರು ಭ್ರಷ್ಟರಾಗಿರಲಿಲ್ಲ. ಆಂತರ್ಯದಲ್ಲಿ ವಿರಾಗಿಗಳಾಗಿರುತ್ತಿದ್ದ ಅವರು ರಾಜ ಕರೆಸಿಕೊಂಡಾಗ ಮಾತ್ರ ಆಸ್ಥಾನಕ್ಕೆ ಬಂದು ಸಲಹೆಗಳನ್ನು ನೀಡುತ್ತಿದ್ದರು. ತಮ್ಮ ವೈರಾಗ್ಯ, ತ್ಯಾಗ, ತಪಸ್ಸು, ಪಾರಮಾರ್ಥ ಜ್ಞಾನದೃಷ್ಟಿ ಇವೆಲ್ಲವುಗಳಿಂದ ಸ್ವಾರ್ಥ ರಹಿತವಾದ ಸಲಹೆಗಳನ್ನು ನೀಡುತ್ತಿದ್ದರು. ಗುರುವೆಂಬಾತ ತಪ್ಪೆಸಗುವ ಪ್ರಮೇಯ ಇರಲೇ ಇಲ್ಲವೆನ್ನಬಹುದು. ಅಂತಹ ಗುರು ಕಂಡಕಂಡವರೆದುರು ಇಂದಿನ ಹರೆಯದ ಹುಡುಗಿಯರಂತೆ ಹಲ್ಲು ಚಿಲಿಯುತ್ತಿರಲಿಲ್ಲ. ಆಳರಸರು ತಪ್ಪೆಸಗಿದ್ದರೆ ಅದನ್ನು ಖಂಡಿಸುವುದಕ್ಕೂ ಹಿಂಜರಿಯುತ್ತಿರಲಿಲ್ಲ. 

ಅವ್ಯಕ್ತವಾದ, ಅವಿಲಂಬಿಯಾದ “ಬ್ರಹ್ಮನ್” ಎಂಬ ಶಕ್ತಿಯೊಂದರಿಂದ ಶ್ರೀಮನ್ನಾರಾಯಣ ಎಂಬ ರೂಪ ಮೊಳೆದು, ನಾರಾಯಣನ ನಾಭಿ ಕಮಲದಿಂದ ಚತುರ್ಮುಖ ಬ್ರಹ್ಮ ಹುಟ್ಟಿಕೊಂಡು ಅಲ್ಲಿಂದಾಚೆಗೆ ಈ ಸೃಷ್ಟಿಯ ನಿರ್ಮಾಣವಾಯಿತು ಎಂಬುದು ನಮ್ಮ ವೇದ ಮೂಲಗಳ ಅಭಿಪ್ರಾಯ. ಅಮೂರ್ತವಾದದ್ದನ್ನು ಧ್ಯಾನಿಸುವುದು ಜನಸಾಮಾನ್ಯರಿಗೆ ಕಷ್ಟವಾಗಬಹುದೆಂದು ನಂತರದ ಸ್ತರದ ಋಷಿಮುನಿಗಳು ಮೂರ್ತರೂಪದಲ್ಲಿ ಶಕ್ತಿಯನ್ನು ಆರಾಧಿಸಲು ರೂಪಗಳನ್ನು ಕಲ್ಪಿಸಿಕೊಂಡರು ಎಂಬುದು ವಿದಿತವಾಗುವ ವಿಷಯ. ಆಚಾರ್ಯ ಶಂಕರರು ಇದನ್ನೇ ಪ್ರತಿಪಾದಿಸಿದ್ದರು. ಆದರೆ ಇಂದಿನ ಜಗತ್ತಿನ ವಿಚಿತ್ರ ಬೆಳವಣಿಗೆಗೆ ಶಂಕರರು ಕಾರಣರಲ್ಲ.

ಶಂಕರರ ನಂತರದ ಜಗತ್ತಿನಲ್ಲಿ ಅವರ ಬೋಧನೆಗೆ ವಿರೋಧವಾಗಿ ಬಂದ ಅನೇಕಾನೇಕ  ಪಂಥಗಳಲ್ಲಿ, ಕೆಟ್ಟ ಸಂಪ್ರದಾಯಗಳಲ್ಲಿ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಕೆಲಸ, ಗುಂಪುಗಾರಿಕೆ ಎಲ್ಲವೂ ನಡೆದವು; ಸ್ವಾಮಿ ಎನಿಸಿದವರಿಗೆ ಹತ್ತಿರವಾದವರು ಎನಿಸಿಕೊಂಡು ಸಮಾಜದ ಮುಖಂಡರೆನಿಸಿಕೊಳ್ಳುತ್ತಿದ್ದ ಜನ ತಮ್ಮ ಕೆಟ್ಟ ನಡವಳಿಕೆಗಳಿಗೆ ವಿರೋಧ ವ್ಯಕ್ತಪಡಿಸುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿಸುತ್ತಿದ್ದರು. ಆ ಕಾಲಘಟ್ಟಗಳ ವಿಧವೆಯರ ಪಾಡಂತೂ ಹೇಳತೀರದು. ವಿಧವೆ ಇನ್ನೊಂದು ಮದುವೆಯಾದರೆ ಆಕೆ ತನಗೆ ಸಿಗಲಾರಳೆಂಬ ಕಾಮತೃಷೆಯುಳ್ಳ ಮುಖಂಡರು ಅವಳ ಕೇಶ ಮುಂಡನ, ಆಭರಣಗಳ ವಿಸರ್ಜನ ಕ್ರಿಯೆಗಳನ್ನು ನಡೆಸುತ್ತಿದ್ದರು. ವಿಧವೆಯರ ದುರ್ಬಲ ಘಳಿಗೆಗಳಲ್ಲಿ ಅವರನ್ನು ಬಳಸಿಕೊಂಡು, ಮಕ್ಕಳು ಜನಿಸಿದರೆ ಆ ವಿಧವೆ ಮತ್ತು ಹುಟ್ಟಿದ ಮಗು ಇಬ್ಬರೂ ಸಹ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ದೂರದಲ್ಲೆಲ್ಲೋ ಹೇಗೋ ಜೀವ ಹಿಡಿದಿರಬೇಕಾದ ಪ್ರಮೇಯವಿತ್ತು. ಘಟಶ್ರಾದ್ಧ ಮತ್ತು ಫಣಿಯಮ್ಮ ಎಂಬೆರಡು ಸಿನಿಮಾಗಳು ಬಹುತೇಕ ಇಂತಹ ಘಟನೆಗಳನ್ನೇ ಹೇಳುತ್ತವೆ. ಇಂದಿನಂತೆ ಎಲ್ಲರೂ ಋಜುಮಾರ್ಗದವರಾಗಿರದ್ದು, ಅಧುನಿಕ ರೀತಿಯ ಸಂವಹನ, ಸಾರಿಗೆ ಮತ್ತು ಸಾಗಾಟ ಮಾಧ್ಯಮಗಳು ಇಲ್ಲದ್ದು ಅಂದಿನ ಆ ದುರಾಡಳಿತಕ್ಕೆ ಕಾರಣವಾಗಿತ್ತು ಎನ್ನಬಹುದು. ಅಂದು ವಿನಾಕಾರಣ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ನೊಂದು ಸತ್ತವರೆಷ್ಟೋ ಅರಿವಿಲ್ಲ. ಆದರೆ ಧರ್ಮಗುರುವಾದವರು ಇಂತಹ  ಸಾಮಾಜಿಕ ಪಿಡುಗುಗಳಿಗೆ ಮಂಗಳ ಹಾಡಲಿಲ್ಲ ಎಂಬುದು ಅತ್ಯಂತ ಖೇದಕರ. 

ಯುಗದ ಪ್ರಭಾವವೋ ಎಂಬಂತೆ ಇಂದಿನದಿನಗಳಲ್ಲಿ ಕಾವಿ ವೇಷದ ಅನೇಕರು ಭ್ರಷ್ಟರಾಗಿರುವುದನ್ನು ಕಾಣುತ್ತಿದ್ದೇವೆ. ವೈದಿಕ ಸತ್ಸಂಪ್ರದಾಯದಲ್ಲಿ ಸನ್ಯಾಸ ದೀಕ್ಷೆ ಪಡೆಯುವ ವ್ಯಕ್ತಿಗೆ ಕೆಲವು ಅರ್ಹತೆಗಳ ಅವಶ್ಯಕತೆಯನ್ನು ಹೇಳಿದ್ದಾರೆ. ಆದರೆ ಅವುಗಳ ಗೋಜೇ ಇಲ್ಲದ ಕೆಲವು ಬಿಕನಾಸಿಗಳೂ ಕೂಡ ಇಂದು ಸನ್ಯಾಸಿಗಳಾಗುತ್ತಿದ್ದಾರೆ. ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದ ಕಾಲಮಾನದಲ್ಲೂ ಇನ್ನೂ ಸಹ ಕೆಲವೆಡೆ ಬಹಿಷ್ಕಾರಗಳು ಕಂಡುಬರುತ್ತವೆ ಎಂದರೆ ಸಮಾಜ ಯಾರ ನಿರ್ದೇಶನಕ್ಕೆ ಒಳಪಟ್ಟಿದೆ ಎಂಬುದು ತಿಳಿಯುತ್ತಿಲ್ಲ. ರಾಮಾಯಣ-ಮಹಾಭಾರತಗಳಂಥ ಪ್ರಾಗೈತಿಹಾಸಗಳನ್ನು ಓದಲು ನಮಗೆಲ್ಲಿದೆ ಸಮಯ? ಹೀಗಾಗಿ ನೀತಿಯಾವುದು-ಅನೀತಿಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ!

ವೇದ ವಿಂಗಡನಾ ಕಾಲದ ಘಟನೆಯೊಂದನ್ನು ನಾವಿಲ್ಲಿ ನೋಡೋಣ: ವ್ಯಾಸರಿಗೆ ವೈಶಂಪಾಯನ ಎಂಬ ಶಿಷ್ಯರೊಬ್ಬರಿದ್ದರು. ಸಂಪಾದಕರಾದ ವ್ಯಾಸರು ತಾವು ಸಂಪಾದಿಸಿದ ಯಜುರ್ವೇದಕ್ಕೆ-ಅದರ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕೆ ವೈಶಂಪಾಯನರನ್ನು ಆಚಾರ್ಯರನ್ನಾಗಿ ನೇಮಿಸಿದ್ದರು. ವೈಶಂಪಾಯನರಿಗೆ ಇದ್ದ ಅನೇಕ ಶಿಷ್ಯರಲ್ಲಿ ಯಾಜ್ಞವಲ್ಕ್ಯರೂ ಒಬ್ಬರು. ಯಾವುದೋ ಕಠಿಣವಾದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ಋಷಿಗಳೆಲ್ಲರೂ ಸಭೆ ಸೇರಬೇಕೆಂದೂ, ಸಭೆಗೆ ಬಾರದಿದ್ದವರು ಬ್ರಹ್ಮಹತ್ಯಾ ದೋಷದಿಂದ ಬಳಲಬೇಕೆಂದು ಠರಾವುಮಾಡಿಕೊಂಡು ಸಭೆ ನಡೆಸಿದರು. ಅದೇಕಾಲಕ್ಕೆ ಯಾಜ್ಞಿಕರಾಗಿ ಯಜ್ಞದೀಕ್ಷೆಯೊಂದರಲ್ಲಿ ನಿರತರಾಗಿದ್ದ ವೈಶಂಪಾಯನರಿಗೆ ಆ ಸಭೆಗೆ ಹೋಗಲಾಗಲಿಲ್ಲ. ಪರಿಣಾಮವಾಗಿ ಅವರು ಬ್ರಹ್ಮಹತ್ಯಾ ದೋಷವನ್ನು ಅನುಭವಿಸುವ ಬದಲು ಅದಕ್ಕೆ ಪ್ರಾಯಶ್ಚಿತ್ತ-ಪರಿಹಾರ ಮಾಡೋಣವೆಂದು ವೈಶಂಪಾಯನರ ಶಿಷ್ಯಂದಿರು ಗುರುವಿನ ಬಗೆಗೆ ಕಾಳಜಿ ವಹಿಸಿದರು. ಆ ಸಮಯದಲ್ಲಿ ಯಾಜ್ಞವಲ್ಕ್ಯರು "ದುರ್ಬಲರಾದ ಈ ಶಿಷ್ಯರೆಲ್ಲ ಏನು ಮಾಡಿಯಾರು? ಅವರೆಲ್ಲಾ ಸುಮ್ಮನಿದ್ದರೆ ನಾನೊಬ್ಬನೇ ಕಠಿಣ ವ್ರತವನ್ನು ನಡೆಸಿ ಗುರುಗಳಿಗೆ ಬಂದ ದೋಷವನ್ನು ಪರಿಹರಿಸುತ್ತೇನೆ" ಎಂದುಬಿಟ್ಟರು. ಇದರಿಂದ ಬೇಸರಗೊಂಡ ವೈಶಂಪಾಯನರು, "ನಮ್ಮಿಂದ ಕಲಿತ ವೇದವನ್ನು ನಮಗೇ ಮರಳಿಸಿ ನೀವು ಇಲ್ಲಿಂದ ಹೊರಡಿ" ಎಂದು ಯಾಜ್ಞವಲ್ಕ್ಯರಿಗೆ ಅಪ್ಪಣೆ ಮಾಡಿಬಿಟ್ಟರು. ಆಗ ಯಾಜ್ಞವಲ್ಕ್ಯರು ಅದನ್ನು ವಾಂತಿ ಮಾಡಿದರೆಂದೂ, ಉಳಿದ ಶಿಷ್ಯರು ತಿತ್ತಿರಿ ಎಂಬ ಹಕ್ಕಿಗಳಾಗಿ ಅದನ್ನು ತಿಂದು ಸಂಗ್ರಹಿಸಿಕೊಂಡರೆಂದೂ ಐತಿಹ್ಯವೊಂದು ಭಾಗವತದಲ್ಲಿ ಹೇಳಲ್ಪಟ್ಟಿದೆ.

ಈ ಘಟನೆಯ ನಂತರ ಸೂರ್ಯನ ಕುರಿತಾಗಿ ಘೋರ ತಪಸ್ಸನ್ನಾಚರಿಸಿದ ಯಾಜ್ಞವಲ್ಕ್ಯರು, ತಮ್ಮ ಗುರುಗಳಾದ ವೈಶಂಪಾಯನರಿಗೂ ತಿಳಿದಿರದ ವೇದಗಳನ್ನು  ಸೂರ್ಯನಿಂದ ಪಡೆದರೆಂದು ಭಾಗವತ ಪುರಾಣದ ಶ್ಲೋಕಗಳು ಹೇಳುತ್ತವೆ.  ತಾವು ಕಂಡ ವೇದವನ್ನು ತಮ್ಮ  ಶಿಷ್ಯರ ಮೂಲಕ ಯಾಜ್ಞವಲ್ಕ್ಯರು ಪ್ರಚಾರಮಾಡಿದರು. ಪ್ರಥಮವಾಗಿ ವೈಶಂಪಾಯನರಿಂದ ಪ್ರಚುರಗೊಳ್ಳಲ್ಪಟ್ಟ ಯಜುರ್ವೇದದ ಭಾಗವನ್ನು ಕೃಷ್ಣಯಜುರ್ವೇದವೆಂದೂ ಯಾಜ್ಞವಲ್ಕ್ಯರಿಂದ ಪ್ರಚುರಗೊಂಡ ಭಾಗವನ್ನು ಶುಕ್ಲ ಯಜುರ್ವೇದವೆಂದೂ ಪರಿಗಣಿಸಲಾಗಿದೆ.

-ಅಂದಿನ ಋಷಿಗಳು ಹೀಗೆ ತಮ್ಮನು ದಂಡಿಸಿಕೊಳ್ಳುತ್ತಿದ್ದರು. ಇಂದು ಇಂಥದ್ದನ್ನೆಲ್ಲ ಕಾಣುವುದು ಸಾಧ್ಯವೇ ಇಲ್ಲವೆಂಬಂತಹ ಸ್ಥಿತಿ ಬಂದುಬಿಟ್ಟಿದೆ. ರಾಜಪ್ರಭುತ್ವದ ಕಾಲದಲ್ಲಿ ಸಿಗುತ್ತಿದ್ದ ನ್ಯಾಯ-ನೀತಿ ಇಂದು ಪ್ರಜಾಪ್ರಭುತ್ವದಲ್ಲಿ ಸಿಗುತ್ತಿಲ್ಲ. ಪ್ರದೇಶವೊಂದಕ್ಕೆ ಇಂದು ಹಲವು ಮಾಂಡಲಿಕರಿದ್ದಾರೆ; ಆದರೆ ಯಾರೂ ಅರಸರಲ್ಲ. ಆಳುವವರಿದ್ದಾರೆ; ಅವರಲ್ಲಿ ಪ್ರಜಾಹಿತದ ಯಾವ ಉದ್ದೇಶವೂ ಇಲ್ಲ. ತಮ್ಮ ಥೈಲಿ ತುಂಬಿಸಿಕೊಳ್ಳುವುದಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಾರಷ್ಟೆ. ಯಾವ ಅರ್ಹತೆಯೂ ಇಲ್ಲದೆ ಜಾತೀವಾರು ರಾಜಕೀಯಕ್ಕಾಗಿಯೇ ಹುಟ್ಟಿಕೊಂಡವರು “ಗುರು” ಮತ್ತು “ಗುರೂಜಿ” ಎನ್ನಿಸಿಕೊಳ್ಳುತ್ತ ತಮ್ಮ ಸಾಂಘಿಕ ತೋಳ್ಬಲದ ಸಂಕೇತವಾಗಿ ಆಳರಸರಿಗೆ ತಮಗೆ ತೋಚಿದ್ದನ್ನೇ ನೀತಿಯೆಂಬಂತೆ ಬೋಧಿಸುತ್ತಾರೆ! ಕಾವಿ ವೇಷ ಧರಿಸಿದವರಲ್ಲಿ ಧರ್ಮಬಾಹಿರರೂ, ನೀತಿಗೆಟ್ಟವರೂ, ಕಚ್ಚೆಹರುಕರೂ ಸೇರಿಕೊಂಡಿದ್ದಾರೆ.

ಗುರು ಎಂಬುದೊಂದು ಪದವಿ, ಅದು ತ್ಯಾಗ ಮತ್ತು ತಪಸ್ಸಿನಿಂದ ಸಿದ್ಧಿಸುವಂಥದ್ದೇ ಹೊರತು ಲೌಕಿಕವಾಗಿ ಕೊಡಲ್ಪಡುವ ಗೌರವ ಡಾಕ್ಟರೇಟ್ ಅಲ್ಲ! ದೀಕ್ಷೆ ಪಡೆದಂದಿನಿಂದ ವ್ಯಕ್ತಿ ಸನ್ಯಾಸಿಯೆನಿಸಿದರೂ ಗುರುತ್ವದ ಸಲ್ಲಕ್ಷಣಗಳು ಆತನಲ್ಲಿ ಜಾಗೃತವಾಗಿರುವುದಿಲ್ಲ. ಅದನ್ನು ಜಾಗೃತಗೊಳಿಸಿಕೊಳ್ಳಲಾರದವರು ಪವಾಡದ ಕಥೆಗಳನ್ನು ಹೆಣೆಯಲಿಕ್ಕೆ ತಮ್ಮ ರಾಜಕೀಯ ಬಳಗವನ್ನು ಬಳಸಿಕೊಳ್ಳುತ್ತಾರೆ.    

ಸನ್ಯಾಸಿಯಾಗಲು ಇರಬೇಕಾದ ಮೊದಲ ಅರ್ಹತೆಯೇ ಧರ್ಮಾತ್ಮನೆನಿಸುವುದು. ಯಾರು ಕಾಯಾ-ವಾಚಾ-ಮನಸಾ[ತ್ರಿಕರಣ] ಮೂರು ಸ್ತರಗಳಲ್ಲೂ ಒಂದೇ ವಿಧದ ಸಚ್ಚಾರಿತ್ರ್ಯ ಉಳ್ಳವರೋ ಅವರೇ ಧರ್ಮಾತ್ಮರೆನಿಸುತ್ತಾರೆಂದು ಪ್ರಕಾಂಡ ಪಂಡಿತರಾಗಿದ್ದ ಧಾರವಾಡದ ಭಾಲಚಂದ್ರ ಶಾಸ್ತ್ರಿಗಳು ಹೇಳಿದ್ದರು. ತ್ರಿಕರಣದಲ್ಲೂ ಭಿನ್ನತೆಯನ್ನೇ ಹೊಂದಿರುವ ವ್ಯಕ್ತಿಯನ್ನು ಸನ್ಯಾಸಿಯೆಂದು ಆತನಿಗೆ ಜೈಕಾರ ಹಾಕುತ್ತ ತಿರುಗುವುದರಿಂದ ಸಾಮಾಜಿಕ ಸ್ಸಾಸ್ಥ್ಯ ಹಾಳಾಗುತ್ತದೆ ಎಂಬುದನ್ನು ಗಮನಿಸಬೇಕು. ಭಕಸನ್ಯಾಸಿಯ ಕಥೆಯನ್ನು ಕೇಳಿದ್ದೀರಲ್ಲ? ಹಾಗೆ. ಢೋಂಗಿ ಸನ್ಯಾಸಿಗಳನ್ನು ಆರಾಧಿಸುವುದು ಮತ್ತು ಅಂಥವರಿಂದ ಪ್ರಧಾನ ವಿಗ್ರಹಗಳಿಗೆ ಅರ್ಚನೆ ಸಲ್ಲಿಸುವುದು ವಿರೋಧಾಭಾಸಕ್ಕೆ ಕಾರಣವಾಗುತ್ತದೆ. ಪ್ರತಿಯೊಂದು ವ್ಯಕ್ತಿಯ ದೇಹದ ಸುತ್ತ ಪ್ರಭಾವಲಯವೊಂದು ಇರುತ್ತದೆ ಎಂದು ವಿಜ್ಞಾನವೇ ಒಪ್ಪಿಕೊಂಡಿದೆ; ಅವರವರ ಧನಾತ್ಮಕ ಯಾ ಋಣಾತ್ಮಕ ಅರ್ಹತೆಗೆ ತಕ್ಕಂತೆ ಪ್ರಭಾವಲಯದ ಗಾತ್ರ ಮತ್ತು ಬಣ್ಣಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಋಣಾತ್ಮಕತೆಯಿಂದ ಕೂಡಿದ ವ್ಯಕ್ತಿ ಧನಾತ್ಮಕತೆಯಿಂದ ಕೂಡಿದ ವ್ಯಕ್ತಿಯ/ಕ್ಷೇತ್ರದ ಸಂಸರ್ಗ ಮಾಡುವುದರಿಂದ ಧನಾತ್ಮಕತೆಯಿರುವ ವ್ಯಕ್ತಿ/ಸ್ಥಳದ ಧನಾತ್ಮಕತೆಯಲ್ಲಿ ಕಡಿತವುಂಟಾಗುತ್ತದೆ. ಧನಾತ್ಮಕತೆಯನ್ನು ಮರಳಿ ಸಂಪಾದಿಸಲು ವ್ಯಕ್ತಿಯಾದರೆ ತ್ರಿಕರಣ ಶುದ್ಧಿಯಿಂದ ತಪಸ್ಸು ಅಥವಾ ಕ್ಷೇತ್ರವಾದರೆ ಕಲಾವೃದ್ಧಿ ಹವನವನ್ನು ಮಾಡಬೇಕಾಗುತ್ತದೆ. ಈ ಕಾರಣದಿಂದಲೇ ಮಡಿ-ಮೈಲಿಗೆ ಎಂಬ ಸಂಪ್ರದಾಯ ಜಾರಿಗೆ ಬಂದಿದೆ ಎನ್ನಬಹುದು. [ಇದು ಅಸ್ಪೃಶ್ಯತೆಗೆ ಕಾರಣವಲ್ಲ] ಇದನ್ನಾವುದನ್ನೂ ಪರಿಗಣಿಸದೇ ಎಲ್ಲರೂ ತಮತಮಗೆ ತೋಚಿದ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದರಿಂದ ನಿಜವಾದ ಧರ್ಮಗುರು ಯಾರೆಂಬುದನ್ನು ಅರಿಯುವ ಅರ್ಹತೆಯನ್ನೇ ಸಮಾಜ ಕಳೆದುಕೊಂಡಿದೆ.

ಮೇಲಾಗಿ, ಸನ್ಯಾಸಿಯಾದವನು ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲದಿದ್ದರೆ ಆತನನ್ನು ಸನ್ಯಾಸಿಯೆಂದು ಒಪ್ಪಿಕೊಳ್ಳಲೇಬಾರದು. ಯಾವುದೇ ಸನ್ಯಾಸಿ ಸಮಾಜದಲ್ಲಿ ಒಡಕನ್ನು ಉಂಟುಮಾಡಿ ಪಕ್ಷ-ಪಂಗಡ ಕಟ್ಟಿಕೊಂಡು, ಸಮಾಜದಲ್ಲಿ ಯಾರಿಗೇ ಆಗಲಿ, ವಿರೋಧವನ್ನು ವ್ಯಕ್ತ ಪಡಿಸಿದರೆ ಆತ ಢೋಂಗಿಯೆಂದು ಆ ಕ್ಷಣದಲ್ಲೇ ನಿರ್ಧರಿಸಬೇಕು. ನಿಜವಾದ ಸನ್ಯಾಸಿಗೆ ವೈರಿಗಳಿರುವುದಿಲ್ಲ; ತಪ್ಪಿತಸ್ಥರಿದ್ದರೆ ಆತ ಕರೆದು ತಿಳುವಳಿಕೆ ಹೇಳುವ ಸ್ಥಾನದಲ್ಲಿರುತ್ತಾನೆ. ಅನ್ಯರನ್ನು ತಿದ್ದುವ ಅರ್ಹತೆಯನ್ನು ಪರಿಶ್ರಮದಿಂದ ಪಡೆದುಕೊಂಡಿರುತ್ತಾನೆ. ವಿಪರ್ಯಾಸವೆಂದರೆ ಇಂದು ಕೆಲವು ಸಮಾಜ ಘಾತುಕರು ಕಾವಿ ವೇಷಗಳನ್ನು ತೊಟ್ಟಿದ್ದಾರೆ; ಉಳಿದ ಬಣ್ಣದ ವೇಷಗಳಲ್ಲೂ ಅಲ್ಲಲ್ಲಿ ಇದ್ದಾರೆನ್ನಿ. ಆದರೆ ಅಂಥವರ್ಯಾರೂ ಧರ್ಮಗುರುವೆನಿಸುವುದು ಸಾಧ್ಯವಿಲ್ಲ. ಅವರ ತೀಟೆಗೆ ತಕ್ಕಂತೆ ಅವರು ಜಗದ್ಗುರುವೆಂದಾದರೂ ಹೆಸರಿಟ್ಟುಕೊಳ್ಳಲಿ ಮಹಾಸಂಸ್ಥಾನ-ಪೀಠ ಎಂದೆಲ್ಲ ಹೆಸರಿಟ್ಟುಕೊಳ್ಳಲಿ-ಜಗದ್ಗುರುವಾಗುವ ನಿಜವಾದ ಅರ್ಹತೆ ತೋಳ್ಬಲದಲ್ಲಿಲ್ಲ; ಜಗದ್ಗುರುವಾಗುವ ಅರ್ಹತೆಯಿರುವುದು ಜಗತ್ತಿನ ಎಲ್ಲರಿಗೂ ಹಿತವನ್ನು ಬಯಸುವ ಆತ್ಮೋನ್ನತಿಯಿಂದ, ಕೌಶಿಕ ವಿಶ್ವಾಮಿತ್ರನಾಗುವ ಮುನ್ನ “ಬ್ರಹ್ಮ ತೇಜಂ ಬಲಂ ಬಲಂ” ಎಂದಿದ್ದನ್ನು ನೀವಿಲ್ಲಿ ನೆನೆದುಕೊಳ್ಳಬಹುದು.    

Friday, March 13, 2015

ಹುಲಿಯ ಚರ್ಮ ಧರಿಸಿದ ಮಾತ್ರಕ್ಕೆ................!!













ಹುಲಿಯ ಚರ್ಮ ಧರಿಸಿದ ಮಾತ್ರಕ್ಕೆ................!!

ಇದು ನಿಮಗೆಲ್ಲ ಗೊತ್ತೇ ಇರುವ ಪಂಚತಂತ್ರದ ಕಥೆ: ಇಂತಹ ಕಥೆಗಳನ್ನು ಅದೆಷ್ಟು ಸರ್ತಿ ಕೇಳಿದರೂ ರಂಜನೀಯ-ಸರಳ ನೀತಿ ಬೋಧಕವಾಗಿರುವುದರಿಂದ ಬೇಸರವೆನಿಸಲಾರದು. ಶುದ್ಧವಸ್ತ್ರನೆಂಬ ರಜಕ ನಿತ್ಯ ಬಟ್ಟೆಹೊರುವ ಕಾಯಕಕ್ಕೆ ಬಡಕಲು ಗಂಡು ಕತ್ತೆಯನ್ನು ಸಾಕಿಕೊಂಡಿದ್ದ. ಒಮ್ಮೆ ಹಾಗೆ ಹೋಗುತ್ತಿರುವಾಗ ಸತ್ತುಬಿದ್ದ ಹುಲಿಯೊಂದನ್ನು ಕಂಡವನೇ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದ. ಸತ್ತ ಹುಲಿಯ ಚರ್ಮವನ್ನು ಸುಲಿದು ಕತ್ತೆಯ ಶರೀರಕ್ಕೆ ಅದನ್ನು ಸುತ್ತಿ, ರಾತ್ರಿಯ ಹೊತ್ತು ಹತ್ತಿರದ ಹೊಲಗಳಿಗೆ ಮೇಯಲು ಬಿಟ್ಟ. ರೈತರು ಹುಲಿಯೆಂದು ಹೆದರಿ ಸುಮ್ಮನಿರುತ್ತಾರೆ, ತನ್ನ ಕತ್ತೆ ಚೆನ್ನಾಗಿ ಮೇಯ್ದು ದಷ್ಟ ಪುಷ್ಟವಾಗುತ್ತದೆ ಎಂಬುದು ಆವನ ಅನಿಸಿಕೆ. ರಜಕನ ಕತ್ತೆ ಭತ್ತ,ಕಬ್ಬು, ತೊಗರಿ,ಹುರುಳಿ, ಅವರೆ ಇವೇ ಮುಂತಾದ ಹೊಲಗಳಿಗೆ ನುಗ್ಗಿ ನಿರ್ಭಯವಾಗಿ ಬಯಸಿದ್ದನ್ನು ತಿನ್ನತೊಡಗಿತು. ಒಂದು ಬೆಳಗಿನ ಜಾವ ಇನ್ನಾವುದೋ ಹೆಣ್ಣು ಕತ್ತೆಯೊಂದು ಅಲ್ಲಿಗೆ ಮೇಯಲು ಬಂದು ಕೂಗತೊಡಗಿದ್ದನ್ನು ಕಂಡ ಮಡಿವಾಳನ ಕತ್ತೆ, ಹೆಣ್ಣು ಕತ್ತೆಯ ಹತ್ತಿರಕ್ಕೆ ತೆರಳಿ ಮೂಸುತ್ತ ತಾನೂ ಗಾರ್ದಭಗಾನ ಆರಂಭಿಸಿತು. ತಾವು ಕಂಡಿದ್ದು ಹುಲಿಯ ವೇಷದ ಕತ್ತೆಯನ್ನು ಎಂಬ ಅಸಲೀಯತ್ತು ಗೊತ್ತಾದಾಗ ಹೊಲಗಳ ರೈತರು ದೊಣ್ಣೆಗಳನ್ನು ತಂದು ಕತ್ತೆಗೆ ಸನ್ಮಾನ ಮಾಡಿದರು. ಅವಸರದಲ್ಲಿ ಸತ್ತೆನೋ ಇದ್ದೆನೋ ಎನ್ನುತ್ತಾ ಓಡುವಾಗ ಮಡಿವಾಳನ ಕತ್ತೆಯ ಹುಲಿಚರ್ಮ ಎಲ್ಲಿಯೋ ಬಿದ್ದು ಹೋಯಿತು. 

ಜನಜೀವನದಲ್ಲಿ ಅಪಾತ್ರರು ಪಾತ್ರರಾದಾಗ ಈ ಕಥೆ ಹೇಳಲ್ಪಡುತ್ತದೆ. ಅಪಾತ್ರರನ್ನು ಎಲ್ಲಿಡಬೇಕೋ ಅಲ್ಲಿಯೇ ಇಡುವುದನ್ನು ಬಿಟ್ಟು ಅವರನ್ನು ಘನತೆವೆತ್ತವರೆಂದೇ ಮೆರೆಯಿಸುವ ಕೆಲಸದಲ್ಲಿ ಕೆಲವರು ತೊಡಗಿಕೊಳ್ಳುತ್ತಾರೆ. ಅದೊಂದು ಥರದ ಬಿಸಿ ತುಪ್ಪದ ಕಥೆ. ತುಪ್ಪ ಬಿಸಿ ಇರುವಾಗ ನುಂಗಿದರೆ ಗಂಟಲು ಸುಡುತ್ತದೆ; ಉಗುಳಿದರೆ ತುಪ್ಪ ಯಾರಿಗೂ ಇಲ್ಲದೇ ಹಾಳಾಗಿ ಹೋಗುತ್ತದೆ. ಕೇವಲ ಬಿಸಿ ತುಪ್ಪವೊಂದೇ ಅಲ್ಲ; ಜಡ್ಡುತುಪ್ಪವೂ ಹಾಗೇ. [ನಮ್ಮಲ್ಲಿ ನಾರುವ ತುಪ್ಪವನ್ನು “ಜಡ್ಡುತುಪ್ಪ” ಎನ್ನುತ್ತೇವೆ; ಶಾರ್ಟ್ ಆಗಿ ‘ವಿಟೆಮಿನ್ ಝಡ್’ ಎಂದೂ ಕರೆಯುವುದುಂಟು] ಅಪರೂಪಕ್ಕೆ ಯಾರದೋ ಮನೆಗೆ ಹೋದಾಗ ಸತ್ಕಾರದಲ್ಲಿ [ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ತಾವೇ ಇಷ್ಟಪಟ್ಟು ತಯಾರಿಸಿಟ್ಟುಕೊಂಡ] ತುಪ್ಪವನ್ನು ಬಡಿಸಿಬಿಡುತ್ತಾರೆ. ಅರಿವಿಲ್ಲದೇ ಬಾಯಿಗೆ ಸೇರುವ ಅಂತಹ ತುಪ್ಪ ಕೂಡ ಒಳಗೂ ಹೋಗುವುದಿಲ್ಲ-ಹೊರಗೂ ಹೋಗಲಾರದಲ್ಲ! ನುಂಗಿದರೆ ಅರೆಕ್ಷಣದಲ್ಲಿ ವಾಂತಿ ಉಚಿತ; ಉಗುಳಿದರೆ ಆ ಮನೆಯವರು ಹಿಂದುಗಡೆ ಆಡಿಕೊಳ್ಳುವುದೂ ಖಚಿತ!! 


ಅಪಾತ್ರರಿಗೆ ದಾನವನ್ನೂ ಕೊಡಬಾರದು ಎಂಬುದೊಂದು ಹೇಳಿಕೆಯಿದೆ. ದಾನ ತೆಗೆದುಕೊಳ್ಳುವವನಿಗೆ ದಾನದ ಮಹತ್ವ ತಿಳಿದಿರಬೇಕು ಎಂದರ್ಥ. ಕೊಡುವ ದಾನ ಕೂಡ ಉಪಯೋಗಕ್ಕೆ ಬರುವ ಧನ-ಕನಕ-ದವಸ-ಧಾನ್ಯಾದಿ ವಸ್ತು ವಿಶೇಷಗಳಿಂದಲೇ ಕೂಡಿರಬೇಕೇ ಹೊರತು, ಹಾಲು ಹಿಂಡದ ಗೊಡ್ಡು ಹಸುವಿನಂಥದ್ದನ್ನು ದಾನ ಮಾಡಬಾರದು ಎಂಬುದು ನಿಯಮ. ರಾಜಕಾರಣದಲ್ಲಿರುವವರು ಸಾಮಾನ್ಯವಾಗಿ ತಮಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳಲು ಹೇಗಾದರೂ ಪ್ರಯತ್ನಿಸಿ ಅನೇಕಸಲ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂಬುದು ಹಲವರ ಅನಿಸಿಕೆ; ಯಾಕೆಂದರೆ ಈ ನೆಲದಲ್ಲಿ ಮಿಕ್ಕವರಿಗೆ ಅನ್ವಯಿಸುವ ಕಾನೂನು ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲ; ಅಪಾರ ಧನಿಕರೆನಿಸಿದವರಿಗೂ ಹಾಗೇ! 

ಕೆಲವೊಮ್ಮೆ ಅರ್ಹರೂ ತಮಗೆ ಅರ್ಹವಾದ ಸ್ಥಾನವನ್ನು ಅಲಂಕರಿಸಲು ಒಪ್ಪದ ಸನ್ನಿವೇಶಗಳಿರುತ್ತವೆ. ಅಜಾತಶತ್ರುವೆನಿಸಿದ ವಾಜಪೇಯಿಯವರು ತಮ್ಮದೇ ಕೇಂದ್ರ ಸರ್ಕಾರ ಆಡಳಿತದಲ್ಲಿದ್ದಾಗ ಭಾರತರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ತಾವೇ ಶಿಫಾರಸು ಮಾಡಿಕೊಳ್ಳಲು ಬರುತ್ತಿತ್ತು; ಹಾಗೆ ಮಾಡಲು ಅವರ ಸಹೋದ್ಯೋಗಿಗಳು ಸಲಹೆ ನೀಡಿದ್ದರೂ ವಾಜಪೇಯಿಯವರು ಹಾಗೆ ಮಾಡಲಿಲ್ಲ. ವಾಜಪೇಯಿಯಂತಹ ರಾಜಕಾರಣಿಗಳು ಶತಕೋಟಿಗೊಬ್ಬರು ಎನ್ನಬಹುದೇನೋ. ಈ ಸರ್ತಿ ಅವರಿಗೆ ‘ಭಾರತರತ್ನ’ ಪುರಸ್ಕಾರವನ್ನು ಘೋಷಿಸಲಾಯ್ತು ಎಂಬುದು ಹೆಮ್ಮೆ. ಇದರಿಂದ ‘ಭಾರತರತ್ನ’ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ. 
 
ಯಾವುದೇ ರಂಗವನ್ನು ತೆಗೆದುಕೊಳ್ಳಿ, ‘ಊರಿದ್ದಲ್ಲಿ ಹೊಲಸು ಇದ್ದಿದ್ದೇ’ ಎಂಬಂತೆ ಎಲ್ಲೆಡೆಯೂ ಕೆಲವು ಅಸಮರ್ಪಕ ಸಂಗತಿಗಳನ್ನು ಕಾಣುತ್ತೇವೆ. ಈ ಹಿಂದೆ ಕರ್ನಾಟಕದಲ್ಲಿ “ಗೌಡಾ” ಪಡೆಯುವವರ ಹಾವಳಿ ಹೆಚ್ಚಿತ್ತು! ಗೊತ್ತಿಲ್ಲದ ಜಗತ್ತಿನ ಯಾವುದೋ ದೇಶದವರು ನಮಗೇ ಗೊತ್ತಿಲ್ಲದ ನಮ್ಮ ನಾಡಿನ ‘ಮಹಾನುಭಾವ’ರ ‘ಘನಂದಾರಿ’ ಕೆಲಸಗಳನ್ನು ಅಲ್ಲಿಂದಲೇ ಕಂಡು, ಗುರುತಿಸಿ, ‘ಗೌಡಾ’ ಕೊಟ್ಟು ಕಳುಹಿಸುತ್ತಿದ್ದರು; ದುಬಾರಿ ಮೊತ್ತಕ್ಕೆ ಖರೀಸಿದಿಸಿದ್ದರೂ ಖರೀದಿಸಿದ್ದು ಬಹಿರಂಗ ಗೊಳ್ಳದ್ದದಿಂದ, ಮುಗುಮ್ಮಾಗಿ ಕಪ್ಪು ಗೌನಿನಲ್ಲಿ ನಿಂತು ಮುಖದಲ್ಲಿ ಹೊಸ ಖದರ್ ತೋರಿಸಿರುವುದೆಲ್ಲ ಈಗ ಹಳೆಯ ಸಂಗತಿ ಬಿಡಿ. ಅದಷ್ಟೇ ಅಲ್ಲ; ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳಲ್ಲೂ ಹೀಗೇನೇ ‘ಗೌಡಾ’ ಕೊಡುವ ವ್ಯವಸ್ಥೆ ಕೆಲಕೆಲವು ಕುಲಪತಿಗಳ ಸುಪರ್ದಿಯಲ್ಲಿ ನಡೆಯುತ್ತದೆ ಎಂಬ ಗುಸುಗುಸು ಟಿಸಿಲೊಡೆದು “ಢಂ” ಎನ್ನಿಸಲು ಯಾರಿಗೂ ಆಸಕ್ತಿಯಿರದೆ “ಠುಸ್” ಆಗಿಹೋಯ್ತಾದರೂ ಎಲ್ಲವನ್ನೂ ಕುಳಿತಲ್ಲೇ ಅಳೆಯುವ ಜನರ ಮನಸ್ಸಿಗೆ ಗೊತ್ತಿದೆ. 

“ಕೊಡುವುದೇನು? ಕೊಂಬುದೇನು? ಒಲವು-ಸ್ನೇಹ-ಪ್ರೇಮ
ಹೊರಗೆ ಬರಿದು ಒಳಗೆ ನಲಿದು ಇದ್ದವರಿಗೆ ನೇಮ” --ಬೇಂದ್ರೆಯವರ ಕವನದ ಈ ಸಾಲುಗಳಿಗೆ ಇಲ್ಲಿ ಬೇರೆ ಅರ್ಥವ್ಯಾಪ್ತಿಯನ್ನೇ ಕೊಡಬಹುದು!

ಪ್ರಶಸ್ತಿಗಳನ್ನು ಹೊಡೆದುಕೊಳ್ಳುವ ವಹಿವಾಟು ಆರಂಭವಾಗಿ ‘ಬೆಳ್ಳಿಹಬ್ಬ’ದ ವರ್ಷವೇ ಕಳೆದಿದೆ. ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ವಿರುದ್ಧ ವಿದ್ವಾಂಸ ಚಿದಾನಂದ ಮೂರ್ತಿಯವರು ಕೆಲವು ಕಡೆ ಬುಸ್ ಎಂದಿದ್ದಾರೆ. ಕೆಲವು ಪ್ರಶಸ್ತಿಗಳು ಮತ್ತು ಅವುಗಳನ್ನು ಹೊಡೆದುಕೊಳ್ಳುವುದರ ಹಿಂದಿನ ಮಸಲತ್ತುಗಳ ಬಗೆಗೆ ಖಾರವಾದ ಹೇಳಿಕೆಗಳು ಅವರ ಕೆಲವು ಲೇಖನಗಳಲ್ಲಿ ಕಾಣಿಸುತ್ತವೆ. ‘ಜ್ಞಾನಪೀಠ ಪ್ರಶಸ್ತಿ’ಯೂ ಕೆಲವೊಮ್ಮೆ ಇದೇ ರೀತಿ ಯಾರ್ಯಾರಿಗೋ ನೀಡಲ್ಪಟ್ಟಿದೆ ಎಂಬುದು ಅನೇಕರ ಅನಿಸಿಕೆ. ಹಲವು ಭಾಷೆಗಳಲ್ಲಿ ವಿದ್ವತ್ತುಳ್ಳ ಕನ್ನಡದ ಪ್ರಕಾಂಡ ಪಂಡಿತರೋರ್ವರು, “ಕನ್ನಡಕ್ಕೆ ಸಂದ ಮೊದಲ ನಾಲ್ಕು ಜ್ಞಾನಪೀಠಗಳನ್ನು ಹೊರತುಪಡಿಸಿದರೆ ಉಳಿದದ್ದರ ಬಗೆಗೆ ನಾನೇನೂ ಹೇಳಲಾಗದು”ಎಂದಿದ್ದಾರೆ. ಅಂದರೆ ಸತ್ಯವನ್ನು ಬಚ್ಚಿಟ್ಟು ನಾವು ‘ಹೊಡೆದುಕೊಳ್ಳುವ ವಿಕೃತಿ’ಯ ‘ಬೆಳ್ಳಿಹಬ್ಬ’ವನ್ನು ಆಚರಿಸಿಬಿಟ್ಟಿದ್ದೇವೆ!

ಪೀಠ, ವಿದ್ಯೆ, ತಪಸ್ಸು, ತ್ಯಾಗ, ಅನುಭವ ಮತ್ತು ಅರ್ಹತೆಗಳ ಪ್ರಶ್ನೆ ಬಂದಾಗ ಈಗೀಗ ಹಲವು ಘಟನೆಗಳು ಧುತ್ತನೆ ಎದುರಿಗೆ ಬರುತ್ತವೆ. ಧಾರ್ಮಿಕ ಪೀಠಗಳಿಗೆ ಅಂಟಿಕೊಂಡು ಕೂತವರು ನಡೆಸುವ ನೆಳಲು-ಬೆಳಕಿನಾಟಕ್ಕೆ ಬಲಿಯಾದ ಮಂದಿ ದನಿಯೆತ್ತಿದರೆ ಅವರ ವಿರುದ್ಧ ತಾಲಿಬಾನ್ ರೀತಿಯ ದಾಳಿಗಳು ನಡೆಯುತ್ತವೆ. ಧರ್ಮದ ಹೆಸರಿನಲ್ಲಿ ನಡೆಯುವ ದುರಾಚಾರಕ್ಕಂತೂ ಲೆಕ್ಕವೇ ಇಲ್ಲ. ಇತ್ತೀಚೆಗೆ, ಆಳುವ ಸರಕಾರವನ್ನೇ ಬೆದರಿಸಿದ್ದ ಅನೇಕ ‘ಸಂತ’ರನ್ನು ನಾವು ಕಂಡಿದ್ದೇವೆ. ಇಂತಹ ‘ಸಂv’ರಿಗೆಲ್ಲ ಅವರವರದ್ದೇ ಆದ ತಾಲಿಬಾನ್ ಪಡೆಯಿರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡೇ ವ್ಯವಹರಿಸಬೇಕಾಗುತ್ತದೆ. ಅರ್ಹತೆಯಿಲ್ಲದಿದ್ದರೂ, ಭಕ್ಷೀಸು- ಫಲಾನುಭವಿ ಬಾಲಬಡುಕರನ್ನು ಕಟ್ಟಿಕೊಂಡು, ತಾವೇ ದೇವರೆಂದೋ, ಸ್ವಾಮಿಯೆಂದೋ, ಸಂತನೆಂದೋ ಭೋಂಗುಬಿಡುತ್ತಾ, ಮುಗ್ಧ ಜನgನ್ನು ಬಣ್ಣದ ಮಾತುಗಳಿಂದ ಮಂತ್ರಮುಗ್ಧರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ತಮ್ಮ ರಕ್ಷಣೆಗೆ “ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ” ಎಂಬ ಅಸ್ತ್ರವನ್ನು ಬಳಕೆಮಾಡಿಕೊಳ್ಳುತ್ತಾರೆ. ವಾಸ್ತವವಾಗಿ ನಿಜವಾದ ಹಿಂದೂಗಳಿಗೆ ಇಂತಹ ಸಂತರನ್ನು ತಮ್ಮಲ್ಲಿ ಇರಿಸಿಕೊಳ್ಳುವುದು ಹೇಗೆಂಬುದು ಮೇಲೆ ಹೇಳಿದ ಜಡ್ಡುತುಪ್ಪದ ಕಥೆಯಾಗಿದೆ; ಇವರನ್ನೆಲ್ಲ ಇರಿಸಿಕೊಳ್ಳುವುದೂ ಹಿಂದೂ ಧರ್ಮದ ನೀತಿಯೆಂದು ಯಾರೂ ತಿಳಿಯಬೇಕಾಗಿಲ್ಲ; ಶುದ್ಧ ಹಿಂದೂ ಧರ್ಮ ಇದನ್ನೆಲ್ಲ ಸಹಿಸುವುದೂ ಇಲ್ಲ. ಉತ್ತಮನಾಗಿದ್ದ-ದಾನಶೂರನೆನಿಸಿದ್ದ ಕರ್ಣ, ವೇದವ್ಯಾಸರಿಂದಲೇ “ದುಷ್ಟ ಚತುಷ್ಟಯ”ರಲ್ಲಿ ಒಬ್ಬನೆಂದು ವಿಂಗಡಿಸಲ್ಪಟ್ಟ ಧರ್ಮಸೂಕ್ಷ್ಮವನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.  

ಕಲೆ, ಸಾಹಿತ್ಯ, ಸಂಗೀತ ಲೋಕಗಳಲ್ಲಿಯೂ ಸಹ ಇಂತಹ ಧರ್ಮಸೂಕ್ಷ್ಮವನ್ನು ಅರಿತು ನಡೆಯಬೇಕಾದ ಅಗತ್ಯವಿದೆ. ದೊಡ್ಡ ನಟನೊಬ್ಬನ ಮಕ್ಕಳು ಎಂಬ ಕಾರಣಕ್ಕೆ ಮಸಿಮಂಗನ ಮುಸುಡಿಯ ಅನರ್ಹರನ್ನೂ ದೊಡ್ಡ ನಟರೆಂಬಂತೆಯೇ ಸಂಭಾಳಿಸುತ್ತಿದ್ದೇವೆ. ದೊಡ್ಡ ರಾಜಕಾರಣಿಗಳ ಮಕ್ಕಳನ್ನೂ ಸಹ ಅದೇ ಒಂದು ಕಾರಣಕ್ಕೆ ನಾವು ಮುಖಸ್ತುತಿ ಮಾಡುತ್ತಿದ್ದೇವೆ. ಸಮಾಜದಲ್ಲಿ ಕೆಲವರಿಗೆ ಮುಂದೆ ಪ್ರಭಾವೀ ಅನರ್ಹರಿಂದ ತಮಗೆ ಯಾವುದೋ ಕೆಲಸ ಆಗಬೇಕೆಂದಿರುತ್ತದೆ; ಹೀಗಾಗಿ ನಿಜವಿಷಯದ ಅರಿವಿದ್ದೂ ಸಹ ಅನರ್ಹರನ್ನು ಅರ್ಹರೆಂದೇ ಹೊಗಳಿ ಜೈಕಾರ ಹಾಕುತ್ತಿರುತ್ತಾರೆ. ಇನ್ನೂ ಕೆಲವರಿಗೆ ಅನರ್ಹರಿಂದ ಯಾವುದೋ ಸಹಕಾರ ಸಿಕ್ಕಿರುತ್ತದೆ; ಆ ಹಂಗಿನಲ್ಲಿ ಇವರು ಅನರ್ಹರನ್ನು ಅರ್ಹರೆಂದೇ ಹೇಳುತ್ತಿರುತ್ತಾರೆ.  

ಭ್ರಷ್ಟ ಸಮಾಜದ ಇನ್ನೊಂದು ಮುಖವೆಂದರೆ ಸತ್ಯ ಹೇಳಿದರೆ ತಮಗೆಲ್ಲಿ ಕುತ್ತು ಬರುತ್ತದೋ ಎಂದು ಇನ್ನೊಬ್ಬರು ಹೇಳಿದ್ದಕ್ಕೆ  ಕಣ್ಮುಚ್ಚಿ  ಹೂಂ.....ಗುಟ್ಟುವ ಅಥವಾ ಅನುಮೋದಿಸುವ ಅನಿವಾರ್ಯತೆಯಲ್ಲಿ ಅನೇಕರು ತೊಳಲುತ್ತಿದ್ದಾರೆ.  ಇಂತಹ ಸಿನಿಕತನ ನಿರ್ನಾಮವಾಗದ ಹೊರತು ಶುದ್ಧ ಸಮಾಜದ ನಿರ್ಮಾಣ ಸಾಧ್ಯವಾಗುವುದಿಲ್ಲ. ಹಣಕ್ಕಾಗಿ ಅಥವಾ ಇನ್ನಾವುದೋ ಪ್ರಲೋಭನೆಯಿಂದಾಗಿ ಇರುವ ಸಂಗತಿ ಮುಚ್ಚಿಟ್ಟು-ಬಚ್ಚಿಟ್ಟು ಇನ್ನೊಂದನ್ನೇ ಕಟ್ಟಿ ಹೇಳಿದರೆ-ಬಿಂಬಿಸಿದರೆ ಕತ್ತೆ ಹುಲಿಯ ಚರ್ಮವನ್ನು ಸುತ್ತಿಕೊಂಡದ್ದು ನೆನಪಾಗುತ್ತದೆ. ಹೋಗಲಿ, ಕತ್ತೆಗಾದರೆ ಬುದ್ಧಿಯಿರಲಿಲ್ಲ-ಅದು ಒಡೆಯನ ಒತ್ತಾಯಕ್ಕೆ ತಕ್ಕಂತೆ ನಡೆಯುತ್ತ ಹೊಟ್ಟೆಯ ಹಸಿವಿಗೆ ಹೊಲವನ್ನು ಮೆಂದಿತ್ತು. ಬುದ್ಧಿವಂತ ಮನುಷ್ಯರಲ್ಲಿ ಒಳ್ಳೊಳ್ಳೆಯ ಸ್ಥಾನಗಳಲ್ಲಿ ಅರ್ಹತೆಯಿಲ್ಲದೇ ಕೂತವರು ಕತ್ತೆಯಂತೆ ವರ್ತಿಸಿದರೆ ಏನು ಹೇಳಬೇಕು? ಇದಕ್ಕೆಲ್ಲ ಪರಿಹಾರವೆಂದು?

ಪೌಲಸ್ತ್ಯಃ ಕಥಮನ್ಯದಾರಹರಣೇ ದೋಷಂ ನ ವಿಜ್ಞಾತವಾನ್
ಕಾಕುತ್ಸ್ಥೇನ ಹೇಮಕಾಂತಿಹರಿಣಸ್ಯಾಸಂಭವೋ ಲಕ್ಷಿತಃ
ಅಕ್ಷಾಣಾಂ ನ ಯುಷ್ಟರೇಣ ವಿಷಮೋ ದೃಷ್ಟೋ ವಿಪಾಕಃ ಕಥಂ
ಪ್ರತ್ಯಾಸನ್ನವಿಪತ್ತಿ ಮೂಡಮನಸಾಂ ಪ್ರಾಯೋ ಮತಿಃ ಕ್ಷೀಯತೆ|
                                      -ಪಂಚತಂತ್ರ
[ಅನ್ಯರ ಮಡದಿಯನ್ನು ಕದ್ದೊಯ್ಯುವುದು ತಪ್ಪೆಂದು ರಾವಣನಿಗೇಕೆ ಹೊಳೆಯಲಿಲ್ಲ? ಬಂಗಾರದ ಜಿಂಕೆ ಮಾಯಾಜಿಂಕೆಯೆಂದು ರಾಮನಿಗೇಕೆ ತಿಳಿಯಲಿಲ್ಲ? ಜೂಜು-ಪಗಡೆಯಾಟ ದುಃಖದ ಘಟನೆಗಳ ಸರಮಾಲೆಯನ್ನೇ ಹೆಣೆಯಬಹುದೆಂಬುದು ಧರ್ಮಾತ್ಮನಾದ ಯುಧಿಷ್ಠಿರನಿಗೇಕೆ ಗೊತ್ತಾಗಲಿಲ್ಲ? ದುಷ್ಟರನ್ನು/ದುಷ್ಟತನವನ್ನು ಹಿಡಿದುಕೊಳ್ಳುವುದು, ಮೆಚ್ಚಿಕೊಳ್ಳುವುದು, ಆರಾಧಿಸುವುದು,  ಬುದ್ಧಿಗೆ ಮಂಕು ಕವಿಯುವಂತೆ ಮಾಡುತ್ತದೆ; ರಾವಣನಿಗೂ, ರಾಮನಿಗೂ, ಯುಧಿಷ್ಠಿರನಿಗೂ ಆಗಿದ್ದು ಇದೇ.] 

ಕನ್ನಡಕ್ಕೆ ಹೊಸ ಹೊಸ ಪ್ರಶಸ್ತಿಗಳೂ, ಗೌ.ಡಾ.ಗಳೂ ಬಂದು ಧೂಳೆಬ್ಬಿಸುತ್ತಿರುವ ಈ ಹೊತ್ತಿನಲ್ಲಿ ಹಲವೆಡೆ ಅಪಸ್ವರಗಳು ಎದ್ದಿವೆ, ಏಳುತ್ತಿವೆ; ಹುಲಿಯ ಚರ್ಮದ ಹೊದಕೆಯಲ್ಲಿ ಸಾಹಿತ್ಯದ ಹೊಲದಲ್ಲಿ ಪ್ರಶಸ್ತಿಯ ಬೆಳೆಯನ್ನು ಮೆಂದಿದ್ದು  ಕತ್ತೆಯೆಂದು ತಿಳಿಯಲು ಬಹುಶಃ ಬಹಳ ಕಾಲ ಬೇಕಾಗಲಿಕ್ಕಿಲ್ಲ; ಕತ್ತೆಯನ್ನು ಹುಲಿಯೆಂದೇ ಸಂಭ್ರಮಿಸುವ ಮುಟ್ಠಾಳರೂ ಈ ಸಮಾಜದಲ್ಲಿ ಇಲ್ಲವೆಂದು ಅಂದುಕೊಳ್ಳಬೇಕಾಗಿಲ್ಲ!    
------o೦o------

Wednesday, February 4, 2015

ಇರುವೆ ಸರಿಯುವ ಸದ್ದು, ಮೊಗ್ಗು ಬಿರಿಯುವ ಸದ್ದು, ಮಂಜು ಇಳಿಯುವ ಸದ್ದು ಕೇಳಬಲ್ಲ...ನನ್ನ ಮೊರೆಯನು ಏಕೆ ಕೇಳಲೊಲ್ಲ?

ಇರುವೆ ಸರಿಯುವ ಸದ್ದು, ಮೊಗ್ಗು ಬಿರಿಯುವ ಸದ್ದು, ಮಂಜು ಇಳಿಯುವ ಸದ್ದು ಕೇಳಬಲ್ಲ...ನನ್ನ ಮೊರೆಯನು ಏಕೆ ಕೇಳಲೊಲ್ಲ?  

ನನ್ನ ಜೀವನದಲ್ಲಿ ಕಾವ್ಯಾರಾಧನೆ ಆರಂಭಗೊಂಡಿದ್ದು ಪ್ರಾಥಮಿಕ ಶಾಲೆಯಿಂದಲೇ ಎನ್ನಬೇಕು. ಅಂದು ಇಂದಿನಂತೆ ಕಂಡಿದ್ದಕ್ಕೆಲ್ಲ ಕಂಪ್ಯೂಟರು-ಗೂಗಲ್ಲು ಇರಲಿಲ್ಲ. ಹೊಸ ಪಠ್ಯಪುಸ್ತಕ ನಮ್ಮ ಕೈಗೆ ಬಂದಾಗ, ಅದರ ವಾಸನೆಯನ್ನು ಆಘ್ರಾಣಿಸಿ ಸುಖಿಸಿದವರು ನಾವು. ತುಂಗಳುಗಳ ತರುವಾಯ, ಅಂತಹ ಪುಸ್ತಕಗಳಲ್ಲೇ ನವಿಲುಗರಿಯನ್ನು ಇರಿಸಿ ಅದು ಮರಿಹಾಕುತ್ತದೆ ಎಂದು ಯಾರೋ ಹೇಳಿದ್ದನ್ನು ನಂಬಿಕೊಂಡು ಕಾದು ಕುಳಿತವರು. ಚಿಕ್ಕ ಸೀಸೆಯಲ್ಲಿ ಕೊಬ್ಬರಿ ಎಣ್ಣೆಯನ್ನು ತುಂಬಿಸಿಕೊಂಡು ಇಷ್ಟವೆನಿಸಿದ ಪರಿಮಳದ ಊದುಬತ್ತಿಯನ್ನು ತಿರುಚಿ-ಪುಡಿಮಾಡಿ ಆ ಬಾಟಲಿಯೊಳಕ್ಕೆ ಹಾಕಿ, ಕುಲುಕಿ ಅದನ್ನೇ ಅತ್ತರುಮಾಡಿ ಕೈ-ಮೈಗೆ ಹಚ್ಚಿಕೊಂಡು ಸಂಭ್ರಮಿಸಿದವರು. ಬಹುಕಾಲದ ನಂತರ ಯಾರೋ ನೆಂಟರು ತಂದ ಲಿಂಬು ಪೆಪ್ಪರಮಿಂಟನ್ನು ಶಾಲೆಯಲ್ಲಿ ಒಬ್ಬರೇ ತಿನ್ನಲಾಗದೇ ಅಂಗಿಯಲ್ಲಿ ಕಚ್ಚಿ-ಕಾಗೆ ಎಂಜಲು ಮಾಡಿ ಹಂಚಿತಿಂದವರು. ಮಾಗಿಯ ಚಳಿಯ ಮುಂಜಾವಿನಲ್ಲಿ ಅರೆಬಿರಿದ ಹೂಗಳ ಮೇಲೆ ಮುತ್ತುಗಟ್ಟಿದ ಇಬ್ಬನಿಗಳನ್ನು ಕಂಡು ಆಹ್ಲಾದವನ್ನು ಎದೆಗಿಳಿಸಿಕೊಂಡವರು. ಸುತ್ತಲ ಪರಿಸರದ ಹಸಿರು ಗಿಡಮರಗಳ ಟೊಂಗೆಗಳಲ್ಲಿ ಸ್ವಚ್ಛಂದದಲ್ಲಿ ಅಲೆಯುವ-ಇಷ್ಟಬಂದಲ್ಲಿ ಕುಳಿತು ಕೂಗುವ ಹಾಡು ಹಕ್ಕಿಗಳ ವಿಭಿನ್ನ ರಾಗಮಾಲಿಕೆಗಳನ್ನು ಕಣ್ಮನದ ತುಂಬ ಗಟ್ಟಿಯಾಗಿ ತುಂಬಿಸಿಕೊಂಡವರು. ಹರಿಯುವ ನೀರಿನಲ್ಲಿ ತೆಪ್ಪವನ್ನು ತೇಲಿಬಿಟ್ಟು ಅದರ ಮೇಲೆ ಸವಾರಿಹೊರಟು ಗೋತಾ ಹೊಡೆದು ದಡ ಸೇರಿದವರು. ಹಳ್ಳಿಯ ರಸ್ತೆಗಳಲ್ಲಿ ಸೈಕಲ್ ಕಳಿಯುವ ಸಾಹಸಕ್ಕೆ ತೊಡಗಿ ಮೈಕೈಗಳಲ್ಲಿ ಆದ ಗಾಯ ಮನೆಮಂದಿಗೆ ಕಾಣಿಸಿದಂತೆ ಕದ್ದುಮುಚ್ಚಿ ಕಳೆದವರು. ವಸಂತದ ಮಾವಿನ ಪೀಚುಗಳನ್ನು ಕಿಸೆಗಳಲ್ಲಿ ತುಂಬಿಸಿ ತಂದು, ಸಹಪಾಠಿಗಳೊಡನೆ ಭುಂಜಿಸಿದವರು. ಜೀವನದ ಆ ಘಟ್ಟದಿಂದಲೇ ಕಾವ್ಯಾಲಾಪ ಹರಿದುಬಂದಿತು. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸದೇ ಇದ್ದರೂ ರಾಗ-ತಾಳ-ಲಯಗಳನ್ನು ಅನುಭವಿಸಲಾರದ ಜನವಲ್ಲ.   

ಕನ್ನಡಕ್ಕೆ ತನ್ನ ಅಂತಃಸತ್ವದ ಅಮೃತಧಾರೆಯನ್ನು ಪಂಪ್ ಮಾಡಿದ ಪಂಪನಿಂದ ಹಿಡಿದು ಕುಮಾರವ್ಯಾಸ, ಹರಿಹರ, ರಾಘವಾಂಕ, ರನ್ನ, ಜನ್ನ, ಪೊನ್ನ, ಲಕ್ಷ್ಮೀಶ ಎಂಬೆಲ್ಲಾ ಮಹನೀಯ ಪೂರ್ವಸೂರಿಗಳ ಕಾವ್ಯಾಲಾಪವನ್ನು ಕೇಳದ ಅರಸಿಕರು ನಾವಾಗಿರಲಿಲ್ಲ.

ಪೌರಜನವೈತರಲು ಬಂಡಿಯ
ನೂರ ಹೊರವಂಡಿಸಿದನೆಲ್ಲರು
ದೂರದಲ್ಲಿರಿ ಸಾವವನೆ ತಾ ಸಾಕು ದೈತ್ಯನಲಿ
ಸಾರಿ ನೀವೆಂದೆನುತ ಹೂಡಿದ
ಹೋರಿಗಳ ಹೊಯ್ದುಬ್ಬರಿಸಿ ರಣ
ಧೀರ ಮಾರುತಿ ಮಿಕ್ಕು ಹರಿಸಿದನಸುರನಿದ್ದೆಡೆಗೆ

ಎಡೆಯಲೇ ಭಕ್ಷ್ಯಾದಿಗಳ ಬರಿ
ಹೆಡೆಗೆಯುಳಿದವು ಕೂಳೊಳರ್ಧವ
ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜೆಯಲಿ
ಕುಡಿದು ಪಕ್ಕಲೆ ನೀರನೊಯ್ಯನೆ
ನಡೆಸಿ ತಂದನು ಕಂಡು ದನುಜನ
ನುಡಿದನೆಲವೋ ಕುನ್ನಿ ಕೂಳಿದೆ ತಿನ್ನು ಬಾರೆನುತ

ಕನ್ನಡದ ಹರವಿ ಎಂಬ ಪದ ಇಂದಿನ ಕೆಲವರಿಗೆ ಗೊತ್ತಿಲ್ಲ, ಈಗೀಗ ಹಳ್ಳಿಗಳಲ್ಲೂ ಸಹ ಆ ವಸ್ತುವೂ ಮತ್ತು ಆ ಶಬ್ದವೂ ಮಾಯವಾಗತೊಡಗಿವೆ! ಉತ್ತರ ಕರ್ನಾಟಕದಲ್ಲಿ ಮತ್ತು ಆ ಭಾಷೆಯ ಪದ ಬಾಹುಳ್ಯದ ಪ್ರಭಾವವಿರುವ ಉತ್ತರ ಕನ್ನಡದಲ್ಲಿಯೂ ಸಹ ಹರವಿ ಅಥವಾ ಹರಿವೆ ಎಂಬ ಪದವನ್ನು ಬಳಸುವುದುಂಟು. ಹರವಿ ಎಂದರೆ ದೊಡ್ಡ ಪಾತ್ರೆ, ಮಣ್ಣಿನ ಅಥವಾ ಲೋಹದ ಹಂಡೆ ಎಂದರ್ಥ. ಕುಮಾರವ್ಯಾಸನ ಭೀಮ ಹಾಲು-ತುಪ್ಪವನ್ನೂ ಸಹ ಹಂಡೆಗಳೋಪಾದಿಯಲ್ಲಿ ಹೊಡೆದು-ಸುರಿದು, ಜಗತ್ತಿಗೆಲ್ಲ ಕೇಳಿಸುವಂತೆ "ಡರ್" ಎಂದು ತೇಗಿದ್ದನ್ನು ಕಲ್ಪಿಸಿಕೊಂಡು ತೃಪ್ತರಾದವರು ನಾವು. 

ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರಪಾರ್ವರ
ಹಿಂಡುವೆನುಯಿವ ಸಹಿತೆನುತ ಹಲು ಮೊರೆದನಮರಾರಿ

ಮತ್ತೆ ಶೇಷಾನ್ನದಲಿ ತೋರುತ
ತುತ್ತುಗಳ ತೂಗುತ್ತ ಮಾರುತಿ
ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ
ಇತ್ತಲೆನ್ನಯ ಹಸಿವು ಹೆಚ್ಚಿದೆ
ತುತ್ತು ಹೊಗದೊಳಗಿವನ ತೊಡಗಲ
ದೆತ್ತಲಕಟಾ ವಿಧಿಯೆನುತ ಮುರಿದೆದ್ದನಮರಾರಿ

ಎರಡು ಕೈಯನು ಬಲಿದು ಮುಷ್ಟಿಯೊ
ಳೆರಗಿದನು ಖಳ ಬೆನ್ನನೇನಂ
ದರಿಯನಿತ್ತಲು ಭೀಮ ಬಲುದುತ್ತುಗಳ ತೋಟಿಯಲಿ
ಮರನ ಮುರಿದೆರಗಿದರೆ ಪುನರಪಿ
ಮುರಿದು ನೋಡಿದು ಬಹೆನು ನಿಲ್ಲೆನು
ತರೆಗೆಲಸ ಪೂರೈಸಲೆಂದನು ನಗುತ ಕಲಿಭೀಮ

ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ

ಉಂಡೆವೈ ಸಮಚಿತ್ತದಲಿ ನೀವ್
ಕೊಂಡಿರೈ ಘಾಯಗಳನೆಡೆಯಲಿ
ಹಿಂಡುವಿರಲೈ ನಾವು ಸಹಿತೀ ಊರ ಹಾರುವರ
ಉಂಡೆವೈ ಹಲ ಕಾಲಕಿಂದನ
ಲುಂಡದೂಟ ಕಣಾ ನಿಧಾನವು
ಖಂಡಪರಶುವಿನಾಣೆನುತ ಮದವೇರಿದನು ಭೀಮ

ಖ್ಯಾತಿಗೊಳ್ಳದ ಮುನ್ನ ಪವನಜ
ನೋತು ಕೊಟ್ಟನು ತನ್ನ ಹೊಯ್ಗಳ
ನಾತನೀತನು ಮುಳಿದು ಬಳಿಕಿವನೇನ ಮಾಡುವನೊ
ಈತನೆದ್ದನು ಗಜರಿ ಬಳಿಕಿನೊ
ಳಾತನಿದಿರಾದನು ಸುರಾರಿಯ
ವಾತಜನ ಹೋರಟೆಗೆ ಕೊರಳಳುಕಿದುದು ವಾಸುಕಿಯ

ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲಿ
ಕೊಡಹಿದನು ಕಲಿ ಭೀಮನವನು
ಗ್ಗಡದ ಸತ್ವದಿಯುಂಡ ಕೂಳಿನ
ಕಡುಹ ತೋರೆಂದೊರಲಿ ತುಡಿಕಿದನನಿಲ ನಂದನನ

ಸಿಕ್ಕಿದನು ಕಲಿಭೀಮನೆನೆ ಕೈ
ಯಿಕ್ಕಿ ಕೊಟ್ಟನು ಮೈಯನಸುರನ
ಹೊಕ್ಕು ತಿವಿದನು ತಿರುಗಿ ಬದಿಯೆಲು ನುಗ್ಗು ನುಸಿಯಾಗೆ
ಬಿಕ್ಕುಳಿಯ ತಾಳಿಗೆಯ ಮೂಗಿನೊ
ಳೊಕ್ಕು ರುಧಿರದ ಧಾರೆ ಬಿಗಿದುರೆ
ಡೊಕ್ಕರಿಸಲಸು ನೀಗಿತಸುರನ ತನುವ ನಿಮಿಷದಲಿ

ಕೊಂದು ಧನುಜನ ಹೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆಯೆಂದುದು ನೆರದ ಪೌರಜನ

-ಕುಮಾರವ್ಯಾಸ ಭಾರತದ ಈ ಭಾಗ ನಮ್ಮ ಪಠ್ಯದಲ್ಲಿತ್ತು. ವರ್ಷಗಳ ಕಾಲ ಜಪ-ತಪ-ಉಪವಾಸ ನಿರತ ಕೃಶಕಾಯದ ಮಹಾಮುನಿಯೊಬ್ಬನ ಶರೀರವನ್ನು ಹೋಲುವ ಸಣಕಲು ಶರೀರದ ಶಾನಭಾಗ್ ಮಾಸ್ತರರು ಕುಮಾರವ್ಯಾಸನ ಕಾವ್ಯದ ಭಕಾಸುರ ವಧೆಯ ಸಂದರ್ಭದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸುವಾಗ ಮಾಸ್ತರರಿಗೆ ಧಾರಾಳ ಸಹಕಾರವನ್ನಿತ್ತು ಮನದಲ್ಲೇ  ಬಕಾಸುರನಿಗೆ  ನಾಲ್ಕು ಬಿಟ್ಟು ಖುಷಿಪಟ್ಟುಕೊಂಡವರು ನಾವು!

ಹಿಂದೆಲ್ಲ ಮುಂಜಾವಿನಲ್ಲೇ ಎದ್ದ ಗರತಿಯರು ಅಂಗಳ ಸಾರಿಸಿ ರಂಗೋಲಿ ಇಟ್ಟು ಉದಯರಾಗದಲ್ಲಿ "ನಾರಾಯಣ ಗೋವಿಂದ ಜಯಜಯ" ಎಂಬೀ ಮೊದಲಾದ ದೇವರ ನಾಮಗಳನ್ನು ಹಾಡಿಕೊಳ್ಳುತ್ತಿದ್ದುದಕ್ಕೆ ಸಾಧ್ಯವಾದಷ್ಟು ದನಿಗೂಡಿಸಿದವರು. ಈಚೆಮನೆಯ ಸಾವಿತ್ರಕ್ಕ ಅದನ್ನು ಹಾಡುವಾಗ ಆಚೆಮನೆಯ ಸೀತಕ್ಕ "ನಂದೂ ಹಾಗೇಯ" ಎಂದಾರೆ, ಸೀತಕ್ಕ ಹಾಗೆ ಸಾಂಕೇತಿಕವಾಗಿ ಹೇಳಿದ್ದಕ್ಕೆ ಸಾವಿತ್ರಕ್ಕನಲ್ಲಿ ಕಾರಣ ಕೇಳಿದವರು ನಾವು. ಗಂಡನ ಹೆಸರನ್ನು ಹೇಳದಷ್ಟು ಗೌರವವನ್ನು ಕೊಡುತ್ತಿದ್ದ ನೀರೆಯರನ್ನು ಅಂದಿನ ನಮ್ಮ ಸಮಾಜ || ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ || ಎಂಬುದನ್ನು ಆಚರಣೆಯಲ್ಲಿಟ್ಟ ಜನರನ್ನು ಕಂಡವರು ನಾವು. ಅಂಗಳವೇ ಇಲ್ಲದ ಇಂದಿನ ದಿನಗಳಲ್ಲಿ ರಂಗೋಲಿ-ಹಾಡು-ಹಸೆಗಳೆಲ್ಲ ಕಥೆಗಳೆಂತೆನಿಸಿದ ಬಳಿಕ, ನೀರೆಯರು ಸೀರೆಗಳನ್ನು ತೊರೆದು ಜೀನ್ಸ್-ಟೀ ಶರ್ಟ್ ತೊಟ್ಟು ತರಾವಾರಿಯಲ್ಲಿ ಗುಡ್ಡ-ದಿಣ್ಣೆ-ಪ್ರಸ್ಥಭೂಮಿಗಳನ್ನು ಪ್ರದರ್ಶಿಸುತ್ತಿರುವಾಗ, ಹಲ್ಕಿರಿದು ಹಿಂದೆಬಿದ್ದ ಪಡ್ಡೆಗಳ-ವಿಟರ ಮನದ ಭಕಾಸುರನ ವಧೆಗೆ ಇಂದು ಕುಮಾರವ್ಯಾಸನ ಕಾವ್ಯ ಬಳಕೆಯಾಗದಿರುವುದು ವಿಷಾದನೀಯ. ಎತ್ತರದ ಎದೆಯನ್ನು ಇನ್ನಷ್ಟು ಎತ್ತರಿಸಿ ಒತ್ತರಿಸಿ ಒಕ್ಕೊರಲಲ್ಲಿ "ನಮ್ಮಲ್ಲಿ ಒಡಕಿರುವವರೆಗೂ ಈ ಗಂಡಸರು ಹತ್ತಿಕ್ಕುತ್ತಲೇ ಇರುತ್ತಾರೆ" ಎನ್ನುತ್ತಾ ಬಾವುಟ ಬೀಸುವ ಸಂಘಟನೆಗಳನ್ನು ಕಟ್ಟುವುದರಲ್ಲಷ್ಟೇ ಮುಂದಾದ ಆ ಮಂದಿಗೆ ಜಾರುವ ಸೆರಗನ್ನು ಕೊರಳ ಸುತ್ತ ಎಳೆದು, ಬಲಭಾಗದಿಂದ ಕೊಂಡೊಯ್ದು ಸೊಂಟಕ್ಕೆ ಸಿಕ್ಕಿಸಿಕೊಂಡು, ಡೈವೋರ್ಸ್ ಇಲ್ಲದ ಸುಂದರ ಜೀವನವನ್ನು ನಡೆಸುತ್ತಿದ್ದ ಭಾರತೀಯ ನಾರಿಯ ಸಂಸ್ಕೃತಿಯ ಮಹತ್ವದ ಅರಿವಾದರೂ ಎಲ್ಲಿ ಬರಬೇಕು?    

’ಎಂಡ್ಕುಡುಕ ರತ್ನ’ನಿಂದ ಖ್ಯಾತರಾದ ರಾಜರತ್ನಂ ಮಕ್ಕಳಿಗಾಗಿ ಬರೆದ ಬಣ್ಣದ ತಗಡಿನ ತುತ್ತೂರಿಯಿಂದ ಆರಂಭಗೊಂಡ ನಮ್ಮ ಕಾವ್ಯಾರಾಧನೆ ಇಂದಿಗೂ ಹಾಗೆಯೇ ಮುಂದರಿದಿದೆ. ಆಗಾಗ ನಡುನಡುವೆ ಹಲವಾರು ಕವಿಜನರು ಬಂದು ಹೋಗಿದ್ದಾರೆ. ಕವಿ ನಿಸಾರ್ ಅಹಮದ್ ಅವರು ನಾವು ಕಂಡ ಅದೇ ನಿಸರ್ಗದ ನಿತ್ಯೋತ್ಸವವನ್ನು ಪದಗಳಲ್ಲಿ ಹೀಗೆ ಹೇಳಿದ್ದಾರೆ:

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ
ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯೆ ನಿತ್ಯೋತ್ಸವ 

ನಮ್ಮ ಜೀವನದುದ್ದಕ್ಕೂ ಹೊಸದನ್ನು ಸ್ವೀಕರಿಸುತ್ತಲೇ ಹಳತನ್ನು ಕಳೆದುಕೊಳ್ಳುತ್ತಲೇ ಬಂದವರು ನಾವು. ಈ ಜಗತ್ತು ಯಾರಿಗೂ ಶಾಶ್ವತವಲ್ಲ ಎಂಬ ಅನಿಸಿಕೆ ನಮ್ಮಲ್ಲಿರಲಿಲ್ಲ; ಅದರ ಅರಿವು ಬರುವ ಹೊತ್ತಿಗೆ ನಾವು ಅತಿ ಎಳವೆಯಲ್ಲಿ ಕಂಡ ಹಲವು ಹಿರಿಯರು ಗೋಡೆಯಲ್ಲಿ ಚಿತ್ರಪಟಗಳಾಗಿಬಿಟ್ಟರು. ಬದುಕಿದ್ದರೆ ಇಂದಿಗೆ ನೂರು ತುಂಬುತ್ತಿದ್ದ ನರಸಿಂಹಸ್ವಾಮಿಗಳು ಹೀಗೆ ಬರೆದಿದ್ದಾರೆ:

ಗಾರೆಗೋಡೆಯ ಚಿತ್ರ ಸಾಲು ಪರಿಷತ್ತಿನಲಿ
ಒಬ್ಬೊಬ್ಬರದೂ ಒಂದು ಜೀವ
ನನಗೆ ಎಡೆಯಿರಬಹುದು ಅವರಿರುವ ಸಾಲಿನಲಿ
ಮನವ ತುಂಬಿದ್ದುಂಟು ನಮ್ರಭಾವ

ನರಸಿಂಹ ಸ್ವಾಮಿಗಳ ಹಾಡುಗಳಲ್ಲಿ ಇರುವ ಭಾವತೀವ್ರತೆಗೆ ಅವರು ಬಳಸುವ ಪದವಿನ್ಯಾಸಗಳೇ ಕಾರಣವಾಗಿವೆ. ಬಡತನದಲ್ಲಿ ಹಲವು ಮಕ್ಕಳ ತಂದೆಯಾಗಿ ಸಂಸಾರದ ನೊಗವೆಳೆದ ನರಸಿಂಹ ಸ್ವಾಮಿಗಳಿಗೆ ಎಲ್ಲೋ ಅಲ್ಪಸಮಯ ಮನೆಯಲ್ಲಿ ಕುಳಿತಾಗ ಕೂಡ ಗೋಡೆಯಮೇಲಿನ ಹಿರಿಯರ ಚಿತ್ರಪಟಗಳ ಸಾಲು ಕಣ್ಣಿಗೆ ಬಿದ್ದಿದೆ. ಮುಂದೊಂದು ದಿನ ತನಗೂ ಸಹ ಆ ಚಿತ್ರ ಪರಿಷತ್ತಿನಲ್ಲಿ ಜಾಗ ದೊರೆಯಬಹುದು ಎಂಬ ಭಾವನೆ ಕವಿ ಮನದಲ್ಲಿ ಹಾದು ಹೋಗಿದೆ. ಆ ಯೋಚನೆಯನ್ನೇ ಪದಗಳಲ್ಲಿ ಅವರು ಹೇಳಿದ್ದಾರೆ.

ಇಂದು ಕಾಲ ಬದಲಾಗಿದೆ ಎಂದರೆ ಅನೇಕರು ತಕರಾರು ತೆಗೆಯುವುದುಂಟು. ಎಲ್ಲಾ ಕಾಲದಲ್ಲೂ ಒಳಿತು-ಕೆಡುಕುಗಳು ಇದ್ದೇ ಇದ್ದವು; ಒಳಿತು ಕೆಡುಕಿಗೆ ಕಾಲ ಕಾರಣವಲ್ಲ ಎಂಬುದು ಕೆಲವರ ವಾದ. ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಪರಿಸರದಲ್ಲಾದ ಬದಲಾವಣೆಗಳನೂ ವೈಪರೀತ್ಯಗಳನ್ನೂ ಗಮನಿಸಿದರೆ ಹಿಂದೆಂದೂ ಇಷ್ಟೊಂದು ಬದಲಾವಣೆಗಳು ಆಗಿರಲಿಕ್ಕಿಲ್ಲ ಎನಿಸುತ್ತದೆ. ವಿಜ್ಞಾನಯುಗ ತನ್ನ ಪ್ರಖರತೆಯನ್ನು ದಟ್ಟವಾಗಿಸುತ್ತ ನಡೆದಂತೆ ಮಾನವೀಯ ಮೌಲ್ಯಗಳು ಮತ್ತು ಪರಿಸರ ಕಾಳಜಿ ಎಲ್ಲವೂ ಕಡಿಮೆಯಾಗುತ್ತ ಹೋಗಿರುವುದು ಕಾಣುತ್ತದೆ. ಆಧುನಿಕತೆಯ ಕಾರಣವೊಡ್ಡಿ ಆದರ್ಶಗಳನ್ನು ಬಲಿಗೊಟ್ಟಿರುವುದು ಢಾಳಾಗಿ ಕಾಣುತ್ತದೆ. ಇಂದಿನ ನವ ಗೃಹಗಳಲ್ಲಿ ಹಿರಿಯರ ಚಿತ್ರಪರಿಷತ್ತು ಕಾಣುವುದು ಕಡಿಮೆ.  ಕವಿ ಕನಕದಾಸರು ಮನುಷ್ಯ ಸಂಸ್ಕಾರದ ಬಗೆಗೆ ಹೀಗೆ ಬರೆಯುತ್ತಾರೆ:

ಗಿಳಿಯ ಮರಿಯನು ತಂದು ಪಂಜರ | ದೊಳಗೆ  ಪೋಷಿಸಿ
ಕಲಿಸಿ ಮೃದು ನುಡಿಗಳನು ಲಾಲಿಸಿ | ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹಿ ಮತಿಯನು ಎನ್ನ ಜಿಹ್ವೆಗೆ | ಮೊಳಗುವಂದದಿ ನಿನ್ನ ನಾಮಾ|
ವಳಿಯ ಪೊಗಳಿಕೆಯಿತ್ತು  ರಕ್ಷಿಸು  ನಮ್ಮ ನನವರತ ||

ಅದೇನೋ ಸರಿ ಆದರೆ ನಮ್ಮ ಸಂತೋಷಕ್ಕಾಗಿ ಕಾಡುಹಕ್ಕಿಗಳನ್ನು ನಾಡಿನ ಗೂಡಿನಲ್ಲಿ ಬಂಧಿಸುವುದೆಷ್ಟು ಸರಿ ಎಂಬುದು ಇನ್ನೊಬ್ಬ ಕವಿಯ ಪ್ರಶ್ನೆ:

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು?
ಯಾರ ನಂಬಿ ಇನ್ನು ಜೀವ ಹಿಡಿಯಲಿ ನಾನು
ಅರ್ಥವಿಲ್ಲದ ಹಾಡ ಹಾಡಲೇನು?

ನಾನು ಪಂಜರ ಪಕ್ಷಿ ಇನ್ನು ನನಗಾರು ಗತಿ
ಕೇಳಬಯಸುವಿಯೇನು ನನ್ನ ಕಥೆಯಾ?
ಯಾರ ಸಂತೋಷಕ್ಕೆ ಹಿಡಿದು ತಂದರೋ ನನ್ನ
ಅರಿಯಬಲ್ಲೆಯ ನನ್ನ ಒಡಲ ವ್ಯಥೆಯಾ?


-ಕವಿ ಎಸ್.ಎಸ್.ಮಸಳಿಯವರ ಈ ಕವನವನ್ನು ಅರ್ಥೈಸಿಕೊಂಡು ನಾವು ಅತ್ತ ದಿನಗಳು ಹಲವು; ಇಂದಿಗೂ ಬಂಧಿತ ಹಕ್ಕಿಗಳನ್ನು ಕಂಡಾಗ ಅವರ ಈ ಹಾಡು ನೆನಪಿಗೆ ಬರುತ್ತದೆ.  ತನ್ನ ಸುಖಕ್ಕಾಗಿ ಮನುಷ್ಯ ಏನೆಲ್ಲವನ್ನೂ ಮಾಡುತ್ತಾನೆ ಎಂಬುದನ್ನು ಗ್ರಹಿಸಿದಾಗ ಮನುಷ್ಯನೆಷ್ಟು ಕ್ರೂರಿ ಎಂಬುದು ಗೊತ್ತಾಗುತ್ತದೆ. ಅಧುನಿಕತೆಯ ದಾಪುಗಾಲಿನ ಭರಕ್ಕೆ ನಲುಗಿದ ಹಳ್ಳಿಗಳಲ್ಲೂ ಸಹ  ಮೊಬೈಲ್  ಟವರ್ ಗಳು ತಲೆಯೆತ್ತಿವೆ, ಹಳೆಯ ಮರಗಳು ಕಡಿಯಲ್ಪಟ್ಟಿವೆ. ಹಕ್ಕಿಗಳ ಸಂತತಿ ಕ್ಷೀಣಿಸುತ್ತಿದೆ. ದೇಸೀ ಗೋವುಗಳೂ ಸಹ ಮಾಯವಾಗುತ್ತಿವೆ. ಮಲೆನಾದಿನ ತನ್ನ ಬಾಲ್ಯದ ಪರಿಸರದಲ್ಲಿ ತಾನು ಕಂಡುಂಡು ಸುಖಿಸಿದ ಸುಂದರ ದೃಶ್ಯಗಳನ್ನು ಕುರಿತು ಕವಿ ಕುವೆಂಪು ಹೀಗೆ ಬರೆಯುತ್ತಾರೆ:


ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ

ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿಮ್ಮನೆನಗಿರಲಿ

ಬಾಲ್ಯ ಸುಖವಾಗಿರುವುದಕ್ಕೆ, ನೆಮ್ಮದಿಯಾಗಿರುವುದಕ್ಕೆ, ನೈಸರ್ಗಿಕವಾಗಿರುವುದಕ್ಕೆ ಪಡೆದುಬಂದಿರಬೇಕು. ಸುದೈವ ವಶಾತ್ ನನ್ನ ಬಾಲ್ಯದಲ್ಲಿ ನನಗೆ ನಿಸರ್ಗ ಸೌಂದರ್ಯದ ಕೊರತೆ ಕಾಡಲಿಲ್ಲ. ಕುವೆಂಪು ಅವರು ವರ್ಣಿಸಿದ ಪರಿಸರವೇ ಹೆಚ್ಚುಕಡಿಮೆ ನಮ್ಮದಾಗಿತ್ತು. ನಾವು ಹಳ್ಳಿಗಳಲ್ಲಿ ನಿಸರ್ಗದೊಂದಿಗೆ ಮತ್ತು ಅಲ್ಲಿನ ಕೃಷಿ-ಕೃಷಿಯೇತರ ಕೆಲಸಗಾರರೊಂದಿಗೆ ಬೆರೆತು-ಕಲೆತು-ಮಿಳಿತು ಕಲಿತ ಪಾಠಗಳೇ ನಮ್ಮ ಜೀವನದ ನಿಜವಾದ ಪಾಠಗಳು ಎನ್ನಬಹುದು. ಚೊಂಯ ಪಟ್ಕ ಚೊಂಯ ಪಟ್ಕ ಚೊಂಯ ಪಟ್ಕ  ಎಂದು ಉಜ್ಜಿತೆಗೆದ ಕೂಪಿನ ಹೆರೆಯುವಿಕೆಗೆ ತಲೆಯೊಡ್ಡಿ ಕಲ್ಲಮೇಲೆ ಕುಳಿತು ಕೂದಲು ಕತ್ತರಿಸಿಕೊಂಡವರು ನಾವು. ಇದ್ದಿಲು+ಉಮಿ ಸೇರಿಸಿ ಮಾಡಿಟ್ಟ ಪುಡಿಯಿಂದ ಹಲ್ಲುಜ್ಜುತ್ತಿದ್ದ ಮತ್ತು ಹಲ್ಲನ್ನು ಚೆನ್ನಾಗಿಯೇ ಇಟ್ಟುಕೊಂಡಿದ್ದ ಜನರನ್ನು ಕಂಡವರು ನಾವು. ಗೋಪರೊಡನೆ ಗೋಪರಾಗಿ ತಿಮ್ಮರೊಡನೆ ತಿಮ್ಮರಾಗಿ ನಿಸರ್ಗದಮ್ಮನ ಕೆಚ್ಚಲ ಹಾಲನ್ನು ನೇರವಾಗಿಯೇ ಹೀರಿದವರು. ಹಲವು ಹಸು-ಕರುಗಳನ್ನು ಸ್ವತಃ ಮೇಯಿಸಿ, ಲಾಲನೆ-ಪಾಲನೆಮಾಡಿ, ಆಡಿಸಿ ಬೆಳೆದ ನನಗೆ ಇಂದಿನ ಹಳ್ಳಿಗಳು ಆ ವಿಷಯದಲ್ಲಿ ಬರಡಾಗಿ ಬಿಕೋ ಎಂದಂತೆನಿಸುತ್ತದೆ. 

ಅಂತಹ ನನ್ನ ಬಾಲ್ಯದಿಂದ ಕನ್ನಡದ ಅನೇಕ ಕವಿಗಳ ಕವನಗಳನ್ನು ಓದುತ್ತಲೇ ಬೆಳೆದವನು ನಾನು. ಬಾಲ್ಯದಲ್ಲಿ ಚೆನ್ನಾಗಿ ಹಾಡುತ್ತೇನೆಂದು ಶಹಭಾಸ್ಗಿರಿಯನ್ನೂ ಪಡೆದುಕೊಂಡಿದ್ದೆ. ನನ್ನ ಬಾಲ್ಯದ ಕಾಲ ನವೋದಯ ಕವಿಗಳ ಕಾಲ. ಹಾಗಿದ್ದರೂ ಇಂದಿನ ನವ್ಯ-ನವ್ಯೋತ್ತರ ಮತ್ತು ಪ್ರಗಾಥಗಳಂಥ ಆಘಾತಕಾರೀ ಕವನಗಳು ಅಂದಿರಲಿಲ್ಲ. ಛಂದಸ್ಸು-ಅಲಂಕಾರ ಇಲ್ಲದಿದ್ದರೂ ಕೊನೇ ಪಕ್ಷ ಕವನದಲ್ಲಿ ಪ್ರಾಸವಾದರೂ ಇರುತ್ತಿತ್ತು. ಅಂತಹ ನವೋದಯ ಕಾಲದಲ್ಲಿಯೇ ಕುವೆಂಪು, ಬೇಂದ್ರೆ, ಪುತಿನ, ಕಣವಿ ಮೊದಲಾದ ಕವಿಗಳ ಹಾಡುಗಳನ್ನು ಕೇಳುತ್ತಲೇ ಬೆಳೆದೆ. ಕವಿಗಳ ಸಾಲಿನಲ್ಲಿ ಒಬ್ಬೊಬ್ಬರದ್ದೂ ವಿಶಿಷ್ಟ ಅನುಭೂತಿಯನ್ನು ನೀಡುವ ಕವಿಶೈಲಿ. ಆದರೂ ಎಲ್ಲಾ ಕವಿಗಳ ನಡುವೆ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕವನಗಳು ಮಾತ್ರ ಸದಾ ನನ್ನನ್ನು ಸೆರೆಹಿಡಿದುಬಿಟ್ಟವು.

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ,
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಬುವಿಗೆ?

ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು,
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ,
ನಿದ್ದೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು!

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ,
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ,
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗೂ ಮೂರು ನಾಮ!

-ಜಗವನ್ನಾಳುವ ತಿಮ್ಮಪ್ಪನಿಗೂ ಮೂರು ನಾಮ ಹಾಕಿ ರಮಿಸ ಬಲ್ಲ ಇಂಥಾ ಸಾಹಿತ್ಯಕ್ಕೆ ಮನಸೋಲದ ಅರಸಿಕರುಂಟೇ?   

ಬಾಲ್ಯದಲ್ಲಿ ನಾನು ಓದಿದ ಅನೇಕ ಕವಿಗಳನ್ನು ಖುದ್ದಾಗಿ ನೋಡುವುದು ಸಾಧ್ಯವಿರಲಿಲ್ಲ; ಕಾಣದ ದೂರದಿಂದ ಕವನಿಸುವ ಕವಿಗಳೆಲ್ಲರ ಬಗೆಗೆ ಅಪಾರವಾದ ಗೌರವವಿತ್ತು. ಬೆಂಗಳೂರಿಗೆ ನಾನು ಬಂದ ನಂತರ ನಾನು ಓದಿದ್ದ ಕೆಲವು ಕವಿಗಳು ತಮ್ಮ ವೃದ್ಧಾಪ್ಯದಲ್ಲಿ ಇಲ್ಲಿಯೇ ಇದ್ದಾರೆ ಎಂಬುದು ತಿಳಿಯಿತು. ಆ ಪೈಕಿ ಕೆಲವರನ್ನು ನಾನು ಭೇಟಿ ಮಾಡಿದ್ದೇನೆ; ಸಾಕ್ಷಾತ್ ದರ್ಶನದಿಂದ ಅತೀವ ಸಂತೋಷ ಅನುಭವಿಸಿದ್ದೇನೆ. ಎರಡು ವರ್ಷಗಳ ಕೆಳಗೆ ಸಮಾರಂಭವೊಂದರಲ್ಲಿ ಎನ್.ಎಸ್.ಎಲ್ ಅವರನ್ನೂ ಮಾತನಾಡಿಸಿದೆ.   

ಇರುವೆ ಸರಿಯುವ ಸದ್ದು -ಎಂದು ನಾನು ಆರಂಭಿಸುತ್ತಿದ್ದಂತೆ ಮುಂದಿನ ಸಾಲುಗಳನ್ನು ಸ್ವತಃ ಅವರೇ ಹೇಳಿದರು. ಇಂತಹ ಸಾಲುಗಳಲ್ಲಿ ಕವಿ ಪರಕಾಯ ಪ್ರವೇಶಮಾಡುತ್ತಾನೆ. ಭಟ್ಟರು ಸೃಷ್ಟಿಸಿದ ರಾಧೆಯ ಪ್ರತಿಮೆಯಲ್ಲಿ ಎಂತಹ ಭಾವೋತ್ಕಟತೆ ಇದೆಯೆಂದರೆ, ತನ್ನ ನಲ್ಲ ಕೃಷ್ಣ ಎಷ್ಟೆಲ್ಲಾ ಸಮರ್ಥ ಎಂಬುದನ್ನು ತಿಳಿಸುವ ಆಕೆ ತನ್ನನ್ನು ಮಾತ್ರ ಕೇಳನಲ್ಲಾ ಎಂದು ಸಮಸ್ಯೆ ಹೇಳಿಕೊಳ್ಳುತ್ತಾಳೆ. ಹಾಗಂತ ಅದು ಆಕ್ಷೇಪವೇನೂ ಅಲ್ಲ, ತನ್ನನ್ನು ನೇರವಾಗಿ ಆಲಿಸದಿದೆಯೂ   ತನ್ನೊಳಗನ್ನು ಅರಿಯಬಲ್ಲ ಗಂಡನ ಬಗ್ಗೆ ಆಕೆಗೆ ಹೆಮ್ಮೆಯಿದೆ. ಭವಬಂಧನದಿಂದ ಮುಕ್ತಿಯನ್ನು ಕರುಣಿಸಬಲ್ಲ ಅಸಾಮಾನ್ಯನ ನಲ್ಲೆಯಾಗಿರುವ ಈ ಗೋಪಿಕೆ ಬಣ್ಣಿಸುವ ವೈಖರಿಯನ್ನೊಮ್ಮೆ ನೋಡಿ:

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು


-ಇಂತಹ ಕವನಗಳು ನೇರವಾಗಿ ಎದೆಯಲ್ಲಿ ಜಾಗ ಗಿಟ್ಟಿಸಿಕೊಂಡುಬಿಡುತ್ತವೆ. ಈ ಹಿಂದೆ ಲೇಖಕ ಚೇತನ್ ಭಗತ್ ಅವರ ಕಾದಂಬರಿಯೊಂದರ ಬಗ್ಗೆ ಬರೆದಿದ್ದೆ. ಆರಂಭಿಕ ಒಂಬತ್ತು ವರ್ಷಗಳ ಕಾಲ ಅವರ ಬರಹಗಳನ್ನು ಪ್ರಕಟಿಸುವ ಪ್ರಕಾಶನಗಳು ಅವರಿಗೆ ಸಿಕ್ಕಿರಲಿಲ್ಲವಂತೆ. ಆಂಗ್ಲ ಭಾಷೆಯಲ್ಲಿ ಬರೆದ ಹೊತ್ತಗೆಗಳಾದರೂ ಸಹ ಪುಸ್ತಕ ಓದುವವರೇ ಇಲ್ಲ ಎನ್ನುತ್ತಿದ್ದರಂತೆ ಪ್ರಕಾಶಕರು. ಒಬ್ಬನಂತೂ "ಹಾಲಿವುಡ್ ಸಿನಿಮಾದವರಿಗೆ ಕೊಡಿ, ಯಶಸ್ವಿಯಾದರೆ ನಂತರ ಪುಸ್ತಕ ಮಾಡೋಣ" ಎಂದಿದ್ದನಂತೆ. ಇಂದು ಅವರ ಪುಸ್ತಕಗಳಿಗೆ ಇರುವ ಬೇಡಿಕೆ ನಿಮಗೆ ತಿಳಿದಿರಬಹುದು. ಕವಿ-ಸಾಹಿತಿಗಳಿಗೆ ತಮ್ಮದೇ ಅದ ಆಪ್ತ ಶೈಲಿ ಮತ್ತು ಇಷ್ಟದ ಕಥಾವಸ್ತುಗಳಿರುತ್ತವೆ. ಬರಹವೆಂಬುದು ಬರಹಗಾರನಿಗೆ ಕೇವಲ ವೃತ್ತಿಯಾಗದೇ ಅದು ಶಕ್ತಿಯೂ ಆಗಿದ್ದರೆ, ಆಗ ಮೈದಳೆಯುವ ಬರಹಗಳು ಸಶಕ್ತವಾಗಿರುತ್ತವೆ, ಸಮೃದ್ಧವಾಗಿರುತ್ತವೆ; ಓದುಗರಿಗೆ ಪುಷ್ಕಳ ಭೋಜನವನ್ನು ಒದಗಿಸುತ್ತವೆ. ಬರಹಗಾರನಾಗಿ ನಾನೂ ಸಹ ಚೇತನ್ ಭಗತ್ ಅವರು ಅನುಭವಿಸಿದ ಅನಾಮಿಕ ಸ್ಥಿತಿಯನ್ನು ಅನುಭವಿಸಿದ್ದೇನೆ; ಈಗ ಆ ಸ್ಥಿತಿಯಿಲ್ಲ, ಪುಸ್ತಕಗಳನ್ನು ಪ್ರಕಾಶಕರೇ ನೇರವಾಗಿ ಕೇಳಿ ಪಡೆಯುತ್ತಾರೆ. ಸಹೃದಯೀ ಓದುಗರೂ ಸಹ ಅಪಾರ ಸಂಖ್ಯೆಯಲ್ಲಿ ಬೆಳೆದು ನಿಂತಿದ್ದಾರೆ. ನಾನೆಲ್ಲೇ ಬರೆದರೂ ನನ್ನ ಜಾಡನ್ನು ಹಿಡಿದು ಓದುವ ಮಟ್ಟಕ್ಕೆ ಅಭಿಮಾನ ಹೊಂದಿದ್ದಾರೆ; ಎಲ್ಲೆಲ್ಲಿ ಬರೆಯುತ್ತೀರಿ ಎಂದು ಮಿಂಚಂಚೆ ಕಳಿಸಿ ಎಂದು ಕೋರಿಕೊಂಡವರೂ ಇದ್ದಾರೆ.  ಅವರೆಲ್ಲರಲ್ಲಿಯೂ ಸ್ಥಿತನಾಗಿರುವ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ಈ ಕಾವ್ಯಾರಾಧನೆಯ ಒಡ್ಡೋಲಗ ಇಲ್ಲಿಗೇ ಮುಗಿಯುವುದಿಲ್ಲ, ಮೆಚ್ಚಿನ ಅನೇಕ ಕವಿಗಳನ್ನೂ ಸಂದರ್ಶಿಸಬೇಕೆಂಬ ಉತ್ಕಟೇಚ್ಛೆಯೊಂದು ಹಾಗೆಯೇ ಉಳಿದಿದೆ. ಕವಿ ಎನ್.ಎಸ್.ಎಲ್. ಅವರಲ್ಲಿ ನಿಮ್ಮನ್ನು ಕಾಣಬರುತ್ತೇನೆಂದಾಗ ಒಪ್ಪಿಗೆ ನೀಡಿದ್ದರು, ಅದಕ್ಕೆ ಸಮಯ ಸನ್ನಿಹಿತವಾಗುತ್ತಾ ಇದೆ ಎನಿಸುತ್ತದೆ. ಮತ್ತೊಮ್ಮೆ ಆಗ ಅವರ ಬಗೆಗೆ ಬರೆಯುತ್ತೇನೆ. ಮಧುರವಾದ ಅವರ ಹಾಡಿನೊಂದಿಗೆ ಇಂದಿನ ಲೇಖನ ಭಾಗವನ್ನು ಮುಗಿಸೋಣ, ನಮಸ್ಕಾರ.    


Sunday, December 28, 2014

ಪಿಕೆ ಮತ್ತು ಸೋನಿಯಾ ಕೇಬಲ್‌ಗಳು ಸೃಜನಶೀಲತೆಯನ್ನು ತೋರಿಸುತ್ತವೆ





'ಪಿಕೆ' ಮತ್ತು 'ಸೋನಿಯಾ ಕೇಬಲ್‌'ಗಳು ಸೃಜನಶೀಲತೆಯನ್ನು ತೋರಿಸುತ್ತವೆ

ಸಿನಿಮಾ ನೋಡುವುದು ನನ್ನ ದೊಡ್ಡ ಹವ್ಯಾಸವೇನಲ್ಲ; ನೋಡುವುದಿಲ್ಲ ಎಂದೇನೂ ಇಲ್ಲ. ಆಗೀಗ ಅನುಕೂಲವಾದಾಗ ಸಿನಿಮಾ ನೋಡುವುದುಂಟು; ಬಿಡುಗಡೆಗೊಳ್ಳುವ ಸಾವಿರಾರು ಪುಸ್ತಕಗಳಲ್ಲಿ ಯಾವುದು ಉತ್ತಮವೆಂದು ಆಯ್ದುಕೊಳ್ಳುವುದೆಷ್ಟು ಕಷ್ಟವೋ ಬಿಡುಗಡೆಗೊಳ್ಳುವ ಸಿನಿಮಾಗಳ ಆಯ್ಕೆಯೂ ಅಷ್ಟೇ ಕಷ್ಟ. ಸಂಗೀತ, ಸಾಹಿತ್ಯ ಮತ್ತು ಕಲೆಗಳಲ್ಲಿ ಯಾವುದನ್ನಾದರೂ ಆಗಾಗ ಆಸ್ವಾದಿಸುವುದು ಸಂಸಾರಿಗಳಿಗೆ ಒಳಿತೇ; ಜೀವನದ ಜಂಜಡಗಳಿಂದುಂಟಾದ ಮಾನಸಿಕ ಕ್ಲೇಶಗಳನ್ನು ಕಳೆಯಲು ಅವು ಸಹಕಾರಿ. ಕಾಲಮಾನ ಮಾತ್ರ ವಿಚಿತ್ರವಾಗಿದೆಯಲ್ಲ; ಕೆಲವೊಮ್ಮೆ ತಲೆನೋವಿಗೆ ತೆಗೆದುಕೊಂಡ ಮಾತ್ರೆಯ ಸೈಡ್ ಇಫೆಕ್ಟ್ ಜಾಸ್ತಿಯಿದ್ದು ಇನ್ನಾವುದೋ ತೊಂದರೆ ಕಾಣಿಸಿಕೊಳ್ಳಬಹುದು; ಅಂತೆಯೇ ಮನರಂಜನೆಗಾಗಿ ನೋಡುವ ಸಿನಿಮಾಗಳಿಂದ ಮನೋವ್ಯಾಕುಲ, ಮನೋವ್ಯಾಧಿ ಉಂಟಾಗಲೂ ಬಹುದು! ಯಾಕೆಂದರೆ ಇವತ್ತಿನ ಕೆಲಸಗಳೆಲ್ಲವೂ ಹಣಗಳಿಕೆಯ ಒಂದೇ ಉದ್ದೇಶದಿಂದ ನಡೆಯುವಂತವು; ಅಲ್ಲಲ್ಲಿ ಕೆಲವು ಮಾತ್ರ ಭಿನ್ನವಾಗಿ ನಿಲ್ಲುತ್ತವೆ.   

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು: ಎಲ್ಲರಿಗೆ ಎಲ್ಲವೂ ಹಿಡಿಸುವುದು ಸಾಧ್ಯವಿಲ್ಲ, ವ್ಯಕ್ತಿ ಬೆಳೆದುಬಂದ ಪರಿಸರಕ್ಕೆ, ಸಂಸ್ಕೃತಿಗೆ, ಜಾಯಮಾನಕ್ಕೆ ಅವನದ್ದೇ ಆದ ಆಯ್ಕೆಗಳಿರುತ್ತವೆ. ಬಹುತೇಕರು ಮೆಚ್ಚುವ ಉತ್ತಮ ಸಾಮಾನ್ಯ ಅಂಶಗಳನ್ನೊಳಗೊಂಡ ಕೃತಿಗಳನ್ನು ನಾವೆಲ್ಲರೂ ಅರಿವಿಲ್ಲದೆಯೇ ಮೆಚ್ಚುತ್ತೇವೆ; ಇದಕ್ಕೊಂದು ಉದಾಹರಣೆ ಕೊಡುವುದಾದರೆ ಮೈಕ್ರೋಸಾಫ್ಟ್ ಆಫೀಸ್; ಮೈಕ್ರೋಸಾಫ್ಟ್ ಆಫೀಸ್ನಲ್ಲಿ ಜನಸಾಮಾನ್ಯರ ದಿನನಿತ್ಯದ ಲಿಖಿತ ಸಂವಹನಕ್ಕೆ ಬೇಕಾದ ಬಹುತೇಕ ಆಯ್ಕೆಗಳನ್ನು ಕೊಡಲಾಗಿದೆ-ಇದು ಗಣಕಯಂತ್ರ ಬಳಸುವವರಿಗೆಲ್ಲ ಗೊತ್ತಿರುವ ಸಂಗತಿ. ಅದೇ ವಿಧದಲ್ಲಿ ಇಂದು ತಯಾರಾಗುವ ಅನೇಕ ದಿನಬಳಕೆ ವಸ್ತುಗಳಲ್ಲಿ, ದಿರಿಸುಗಳಲ್ಲಿ ಅಂಥದ್ದೇ ಸಾಮಾನ್ಯ ಅಂಶಗಳು ಅಡಕವಾಗಿರುತ್ತವೆ; ಎಲ್ಲಿಯೋ ಸಿದ್ಧಗೊಳ್ಳುವ ಉಡುಪು ನನ್ನನ್ನೂ ಮೆಚ್ಚಿಸುವುದರ ಜೊತೆಗೆ ನನ್ನಂತಹ ಅನೇಕರನ್ನು ಮೆಚ್ಚಿಸಬಹುದು; ಇನ್ನೆಲ್ಲಿಯೋ ತಯಾರಾದ ತಿನಿಸೊಂದು ಹಲವರಿಗೆ ಇಷ್ಟದ ಖಾದ್ಯವಾಗಬಹುದು. ಕೆಲವೊಮ್ಮೆ ಇಂತಹ ಆಯ್ಕೆಗಳು ಮನದಲ್ಲಿ ಅಚ್ಚೊತ್ತಿದಾಗ ಅದದೇ ತಯಾರಿಕಾ ಸಂಸ್ಥೆಗಳನ್ನು ನಾವು ಆಧರಿಸುವಷ್ಟರ ಮಟ್ಟಿಗೆ ನಮ್ಮ ಮನಸ್ಸು ಹೊಂದಿಕೊಂಡುಬಿಡುತ್ತದೆ. ಅದೇ ಕಾರಣಕ್ಕಾಗಿ ಬೀಗವೆಂದರೆ ಗಾಡ್ರೆಜ್ ಮತ್ತು ಟೂತ್ ಪೇಸ್ಟ್ ಎಂದರೆ ಕಾಲ್ಗೇಟ್ ನಮಗೆ ನೆನಪಾಗಿಬಿಡುತ್ತದೆ!

ಕನ್ನಡದ ಕಾದಂಬರಿಗಳ ಸರದಿಗೆ ಬಂದರೆ ಭೈರಪ್ಪನವರು ಆದ್ಯತೆಯಲ್ಲಿ ಇರುತ್ತಾರೆ; ಇದರರ್ಥ ಮಿಕ್ಕುಳಿದವರ ಕಾದಂಬರಿಗಳು ತಿರಸ್ಕೃತವೆಂದಲ್ಲ-ಅವುಗಳಲ್ಲೂ ಅನೇಕರ ಕೃತಿಗಳು ಉತ್ತಮವಾಗಿರಬಹುದು. ಕಾಲು ಶತಮಾನದ ಹಿಂದಿನ ಕಾದಂಬರಿಗಳಲ್ಲಿರುವ ಗುಣಮಟ್ಟ ಅಧುನಿಕ ಯುವ ಬರಹಗಾರರ ಕಾದಂಬರಿಗಳಲ್ಲಿ ಕಾಣಿಸುವುದಿಲ್ಲ.  ಬರವಣಿಗೆ ಸಹಜವಾದ ಶೈಲಿಯಲ್ಲಿ ಜನಜೀವನದ ಹಲವು ಮಜಲುಗಳನ್ನು ಅಡಕಮಾಡಿಕೊಂಡು ಮೂಡಿದರೆ ಆಗ ಅದು ಜನರಿಗೆ ಇಷ್ಟವಾಗುತ್ತದೆ. ತುಂಬಾ ಸ್ಟ್ರಿಕ್ಟ್ ಆದ ಸಂಗೀತ ಲಯಗಳಿಗೆ ಹೊಂದಿಸಿಕೊಂಡು ಹಾಡುವಾಗ ಅರ್ಥಕೆಡದಂತೆ, ರಸಭಾವಗಳಿಗೆ ಕೊರತೆಯಾಗದಂತೆ ಹಾಡಿದರೆ ಮಾತ್ರ ಇಷ್ಟವಾಗುತ್ತದೆ; ರಾಗದ ತಿಟ್ಟು-ತಿಲ್ಲಾನಗಳನ್ನು ಮಾತ್ರ ಗಮನಿಸುತ್ತ ಕೇ-ಶವನ ಎಂದು ಪದವನ್ನು ಒಡೆದುಬಿಟ್ಟರೆ ಆಗ ಅರ್ಥಗೆಡುತ್ತದೆ; ಎಷ್ಟೋ ಸಮಯ ಸಂಗೀತ ಅಭ್ಯಸಿಸಿದವರಲ್ಲಿ ಈ ವಿಧದ ವ್ಯತ್ಯಯಗಳು ಕಾಣುವುದುಂಟು; ಅದಕ್ಕಾಗಿಯೇ ಔಪಚಾರಿಕ ಸಂಗೀತದ ತರಬೇತಿಯಿಲ್ಲದಿದ್ದರೂ ಮನೆಯೆದುರು ನಿಂತು ತಂಬೂರಿ ಮೀಟಿ ಹಾಡುವ ಅನಾಮಿಕ ಭಿಕ್ಷುಕನ ಹಾಡೂ ಸಹ ಕೆಲವೊಮ್ಮೆ ಇಷ್ಟವಾಗುತ್ತದೆ, ಪುಟ್ಟ ಚಾ ದುಖಾನಿನಲ್ಲಿ ಅಭ್ಯಾಸ ಬಲದಿಂದ ಗಿರ್ರನೆ ಹೊಯ್ದೆತ್ತಿ ಕೊಡುವ ಬಿಸಿಬಿಸಿ ಮಸಾಲೆದೋಸೆಯೂ ಇಷ್ಟವಾಗುತ್ತದೆ. ಕೆಲಸಮಾಡುವ ವ್ಯಕ್ತಿಗೆ ಮಾಡುವ ಕೆಲಸದಲ್ಲಿ ಸಂತೃಪ್ತಿ ಮತ್ತು ತಾದಾತ್ಮ್ಯತೆ ಇರಬೇಕಷ್ಟೆ.  

ಹುಟ್ಟಿದ ಜೀವಿಗೆ ಅನುಗಾಲವೂ ಒಂದಲ್ಲೊಂದು ಚಿಂತೆ ಇದ್ದಿದ್ದೇ, ಮನುಷ್ಯರ ಚಿಂತೆಯನ್ನಷ್ಟೇ ನಾವರ್ಥಮಾಡಿಕೊಂಡಿರಬಹುದು ಯಾಕೆಂದರೆ ಮಿಕ್ಕ ಜೀವ ಪ್ರಭೇದಗಳ ಬೌದ್ಧಿಕದ ಬಗೆಗೆ ನಮಗೆ ಸ್ಪಷ್ಟತೆಯಿಲ್ಲ.

ಒಮ್ಮೆ ಹೂದೋಟದಲಿ ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ-ಮಂಕುತಿಮ್ಮ

ಮಹಾತ್ಮ ಡಿವಿಜಿ ಹೇಳಿದಂತೆ ಬದುಕಿನ ಏಕತಾನತೆಯನ್ನು ಕಳೆದುಕೊಳ್ಳಲು ಉದ್ಯಾನ ವಿಹಾರವೂ ಬೇಕು, ಗೆಳೆಯರೊಡನೆ ಹರಟೆಯೂ ಬೇಕು, ಸಂಗೀತ-ಶಾಸ್ತ್ರಗಳೂ ಬೇಕು, ಸಂಸಾರದ ಕೆಲಸವೂ ಬೇಕು, ಮೌನವೂ ಬೇಕು. ಸಪ್ತಸ್ವರಗಳು ಸೇರಿದಾಗಲೇ ಸಂಗೀತ ಸುಲಲಿತವಾಗಿ ಕೇಳಲು ಹಿತವಾಗಿರುತ್ತದೆ; ಕೇವಲ ಒಂದೇ ಸ್ವರವನ್ನು ದೀರ್ಘಕಾಲ ಅನುಭವಿಸಿನೋಡಿ-ಗೊತ್ತಾಗುತ್ತದೆ. ಬೆಳ್ಳನ ಬೆಳಕಿನಲ್ಲಿ ಸಪ್ತ ವರ್ಣಗಳಿವೆಯೆಂಬುದು ನಮಗೀಗ ಗೊತ್ತಿದೆ, ಪ್ರಾಯಶಃ ಸೂರ್ಯನಿಗೆ ಅದೇ ಕಾರಣದಿಂದ ಸಪ್ತಾಶ್ವ ಎಂದಿರಲಿಕ್ಕೂ ಸಾಕು.  ಇಂತಹ ಏಳಂಕಿಯ ಏಳರಾಟಗಳು ವ್ಯಕ್ತಿ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿರುವುದರಿಂದ ಇರುವುದರಲ್ಲೇ ನೆಮ್ಮದಿಯನ್ನು ಗಳಿಸಿಕೊಳ್ಳಲು ಮನಸ್ಸನ್ನು ಕೆಲಹೊತ್ತು ಅನ್ಯಾನ್ಯ ವಿಷಯಗಳೆಡೆಗೆ ತೊಡಗಿಸುವುದು ಅನಿವಾರ್ಯ; ಇದನ್ನೆಲ್ಲ ಬಿಟ್ಟು ಮನಸ್ಸನ್ನು ಸ್ವನಿಯಂತ್ರಣಕ್ಕೆ ತೆಗೆದುಕೊಂಡು, ಜಿತೇಂದ್ರಿಯನಾಗಿ, ಧ್ಯಾನಾಸಕ್ತನಾಗಿ ಜೀವನ್ಮುಕ್ತನಾಗುವವನೇ ಯೋಗಿ. 

ಯುಗಧರ್ಮದಂತೆ ಕಲಿಯುಗದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯಗಳನ್ನು ನಮ್ಮಲ್ಲಿ ಕೆಲವರು ಮಾತ್ರ ಮನಗಾಣುತ್ತಾರೆ. ದೇವರು-ಧರ್ಮಗಳ ಹೆಸರಿನಲ್ಲಿ ಕೆಲವರು ಹೇಗೆ ಮೋಸಮಾಡುತ್ತಾರೆ ಎಂಬ ಕಥಾವಸ್ತುವನ್ನು ಹಾಸ್ಯಮಯವಾಗಿ ತೋರಿಸಿದ್ದು ‘ಪಿಕೆ’ ಸಿನಿಮಾ. ಅಮೀರ್ ಖಾನ್ ನಟಿಸಿರುವ ‘ಪಿಕೆ’ ಸಿನೆಮಾವನ್ನು ಜಾಣ ಸಿನೆಮಾ ಎಂದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಧರ್ಮ ಎಂಬ ಗಂಭೀರ ವಿಷಯವನ್ನು  ಸೂಕ್ಷವಾಗಿ ಮತ್ತು ನಾಜೂಕಾಗಿ ಹಾಸ್ಯಮಯವಾಗಿ ಚಲನಚಿತ್ರದಲ್ಲಿ ನಿಭಾಯಿಸಿರುವುದಕ್ಕೆ ರಾಜಕುಮಾರ್ ಹಿರಾನಿಯೊಬ್ಬ "ಧೈರ್ಯವಂತ ನಿರ್ದೇಶಕ" ಎಂದು ಹೇಳಿದ್ದು ನಿಜವೆನ್ನಿಸಿತು. ಅಲ್ಲಲ್ಲಿ ಕೆಲವರು "ಹಿಂದೂ ಸಂಪ್ರದಾಯಗಳನ್ನು ಗೇಲಿ ಮಾಡಲಾಗಿದೆ" ಎಂದು ದೂಷಿಸುತ್ತಿರುವುದನ್ನು ಕಂಡಾಗ  ಸಂಪ್ರದಾಯದ ಹೆಸರಿನಲ್ಲಿ ನಡೆಯುವ ದಗಲ್ಬಾಜಿ ವಹಿವಾಟುಗಳನ್ನು ಪ್ರಶ್ನಿಸಲೇ ಬಾರದೇ ಎಂದೆನಿಸುತ್ತದೆ; ಯಾಕೆಂದರೆ ಇಂದು, ನೂರು ಕುರಿಗಳಲ್ಲಿ ಒಂದು ಕುರಿ ಹೋದರೆ ತಲೆಕೆಡಿಸಿಕೊಳ್ಳಬೇಕಿಲ್ಲ-ಮಿಕ್ಕಿದ ತೊಂಬತ್ತೊಂಬತ್ತು ಕುರಿಗಳು ನಮ್ಮೆಡೆಯಲ್ಲೇ ಇವೆ ಎಂದು ಲೆಕ್ಕಹಾಕುವ ಮತ್ತು ಅಂತಹ ಅಂಧಶ್ರದ್ಧಾಳುಗಳ ಮುಂದೆ ದರ್ಬಾರ್ ನಡೆಸುವ ಸ್ವಾಮಿಗಳು, ಬಾಬಾಗಳು ಹಲವರು ಕಾಣಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಅಂಥದ್ದೊಂದು ಬಾಬಾನ ‘ದರ್ಬಾರ್’ಗೆ ಹೋಗಬೇಕೆಂದರೆ ೨,೫೦೦ ರೂಪಾಯಿಗಳನ್ನು  ಮೊದಲೇ ರವಾನಿಸಿ ರಸೀದಿ ಇರಿಸಿಕೊಳ್ಳಬೇಕಾಗುತ್ತದೆ. ದರ್ಬಾರ್ ನಲ್ಲಿ ಬಾಬಾ ತನ್ನನ್ನು ನಂಬಿಬಂದವರು ಹೇಳುವ ಸಮಸ್ಯೆಗಳನ್ನೂ ಮತ್ತು ಅಂಥವರಿಗೆ ಬಾಬಾ ನೀಡುವ ಸಲಹೆಗಳನ್ನು ಗಮನಿಸಿದರೆ  ಎಂಥಾ ಬಕರಾಗಳೂ ಇಲ್ಲಿದ್ದಾರಲ್ಲಾ ಎನಿಸುತ್ತದೆ. ಸಮೂಹಸನ್ನಿಯಂತೆ ಮೈಕ್ ಹಿಡಿದು ಬಾಬಾನನ್ನು ಹೊಗಳುವ ಜನ ಹಿಂದಿನ ಭೇಟಿಗಳಲ್ಲಿ ಬಾಬಾ ಹೇಳಿದ ಸಲಹೆಗಳಿಂದ ಪರಿಹಾರ ಸಿಗದಿದ್ದರೂ, ಯಾವುದೋ  ಪ್ರಲೋಭನೆಯಿಂದ  ಬಾಬಾನನ್ನು ಹೊಗಳೇ ಹೊಗಳುತ್ತಾರೆ!!  

ಧರ್ಮದ ಆಚರಣೆಗಳು ಆದರ್ಶಮಯವಾಗಿರಬೇಕೇ ಹೊರತು ಅಂಧಾನುಕರಣೆಗಳಾಗಬಾರದು. ಇಂದು ಧರ್ಮಾಚರಣೆಗಳಲ್ಲಿ ಸೇರಿಕೊಂಡಿರುವ ಅಥವಾ ಅಧುನಿಕ ‘ಬಾಬಾ’ಗಳು, ‘ಸಂನ್ಯಾಸಿ’ಗಳು ಸೃಷ್ಟಿಸಿರುವ ಕೆಲವು ಆಚರಣೆಗಳು ಅರ್ಥಹೀನವಾಗಿವೆ ಎಂಬುದನ್ನು ಜನ ಮನಗಾಣಬೇಕು. ಕಲಿಯುಗದಲ್ಲಿ ಕೆಲವರಿಗೆ ದುಡ್ಡುಮಾಡಲು ಸುಲಭದ ದಾರಿಯೆಂದರೆ ‘ಬಾಬಾ’ಗಳಾಗುವುದು.   ಧರ್ಮದ ಹೆಸರಿನಲ್ಲಿ ಹಣಮಾಡುವ ಬಾಬಾವರ್ಗ ಮತ್ತವರ ಬೆಂಬಲಿಗರು ಇಂತಹ ಸಿನಿಮಾಗಳ ಬಗ್ಗೆ ಅಪಸ್ವರ ಎತ್ತುತ್ತಾರೆ.

ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಈ ಸಿನೆಮಾವನ್ನು ಮುಕ್ತಕಂಠದಿಂದ ಪ್ರಶಂಸಿಸಿರುವುದನ್ನು ಗಮನಿಸಿದಾಗ ಅವರಿಗೆ ನಿಜವಾಗಿಯೂ ಈ ಸಿನಿಮಾದ ಕಥೆ ಅರ್ಥವಾಗಿದೆ ಎನ್ನಿಸಿತು. “ ನಿರ್ಭೀತಿಯಿಂದ ತಯಾರಿಸಿದ ಅದ್ಭುತವಾದ ಸಿನಿಮಾ ಇದು. ಎಲ್ಲರೂ ನೋಡಲೇಬೇಕು.  ಇಂತಹ ವಿಶಾಲವಾದ ವೈವಿಧ್ಯಮಯ ದೇಶವಾದ ಭಾರತದಲ್ಲಿ ಜನ್ಮ ನೀಡಿರುವುದು ನಮ್ಮ ಪುಣ್ಯ. ಜಾತಿಯಾಗಲೀ, ಜನಾಂಗವಾಗಲೀ, ಭಾಷೆಯಾಗಲೀ, ಪ್ರಾದೇಶಿಕತೆಯಾಗಲೀ ಮತ್ತು ಧರ್ಮವಾಗಲೀ ನಮ್ಮ ದೇಶದ ಐಕ್ಯತೆಯನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ಎಲ್ಲ ರಾಷ್ಟ್ರಭಕ್ತರ ಕರ್ತವ್ಯ" ಎಂದಿದ್ದಾರೆ ಅವರು.

ಸಿನಿಮಾದಲ್ಲಿ ಧರ್ಮದ ಅಥವಾ ದೇವರ ಅವಹೇಳನವೇನೂ ಇಲ್ಲ; ಮೌಢ್ಯವನ್ನು ಸಂಕೇತಿಸುವ ಹಲವು ದೃಶ್ಯಗಳನ್ನು ಕಾಣಬಹುದಾಗಿದೆ. ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಮತ್ತು ಅಮೀರ್ ಖಾನ್ ಇವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಷ್ಟು ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು ಎನ್ನಬಹುದು. ಮಾನವೀಯತೆ ಮತ್ತು ವಾಸ್ತವಿಕ ಅಂಶಗಳು ಈ ಸಿನಿಮಾದಲ್ಲಿವೆ. ಆದ್ದರಿಂದಲೇ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಮತ್ತು ಗಲ್ಲಿಗಲ್ಲಿಗಳಲ್ಲೂ ಈ ಮಟ್ಟದ ಗುಲ್ಲೆಬ್ಬಿಸುವಲ್ಲಿ ಯಶಸ್ವಿಯಾಗಿದೆ. 

‘ಸೋನಾಲಿ ಕೇಬಲ್’ ಎಂಬ ಇನ್ನೊಂದು ಸಿನಿಮಾದಲ್ಲಿರುವ ಪ್ರಮುಖ ಕಲಾವಿದರು ಹೊಸಬರು. ವಾಸ್ತವವಾಗಿ ಹೊಸಬರ ಸಿನಿಮಾಗಳನ್ನು ನೋಡುವಾಗ ಎರಡನೇ ಧೋರಣೆಯೇ ಹೆಚ್ಚಿಗೆ ಇರುತ್ತದೆ. ಸಿನಿಮಾ ಸಾಗುವ ಜಾಡು ಹಿಡಿದು ಕೆಲನಿಮಿಷದಲ್ಲೇ ಅದರ ನಾಡಿಮಿಡಿತವನ್ನು ಅರಿಯಬಲ್ಲ ಜನ ಇದ್ದಾರೆ. ಜಾಗತೀಕರಣದಿಂದ ದೇಶದ ಚಿಕ್ಕ-ಪುಟ್ಟ ಉದ್ಯಮಿಗಳಿಗೆ, ವ್ಯಾಪಾರ-ವಹಿವಾಟುದಾರರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ ಎಂಬುದು ಈ ಸಿನಿಮಾ ಕಥೆಯ ಥೀಮ್ ಆಗಿದೆ. ಬೃಹತ್ ಮಟ್ಟದ ಟಿವಿಕೇಬಲ್ ಮತ್ತು ಇಂಟರ್ನೆಟ್ ಸರ್ವಿಸ್ ಪ್ರೊವೈಡಿಂಗ್ ಕಂಪನಿ ಬಾಗಿಲು ತೆರೆದು, ಸಣ್ಣ ಮತ್ತು ಪ್ರಾದೇಶಿಕ ಕೇಬಲ್ ಉದ್ಯಮಗಳನ್ನು  ತನ್ನ ಕಬಂಧ ಬಾಹುಗಳಲ್ಲಿ ಹಿಡಿದು ಹೇಗೆ ಆಪೋಶನ ತೆಗೆದುಕೊಳ್ಳುತ್ತದೆ ಎಂಬುದು ಕಥೆಯ ಮುಖ್ಯಪಾಠ. ಭಾರತದಂಥ ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಭೂಭಾಗ ಕಮ್ಮಿ ಇರುವಲ್ಲಿ, ಬಡತನ ಹೆಚ್ಚಿದ್ದು ಧನಿಕರು ಕಮ್ಮಿ ಇದ್ದಾರೆ. ಅಖಂಡ ಭಾರತದಲ್ಲಿ ಮಧ್ಯಮವರ್ಗದವರೇ ಹೆಚ್ಚಿಗೆ ಇದ್ದಾರೆ. ತಮ್ಮ ನಿತ್ಯದ ಅಗತ್ಯಕ್ಕೆ ಅನುಕೂಲವಾಗುವ ಹಲವಾರು ಸೇವೆಗಳನ್ನು ಇಲ್ಲಿನ ಜನ ಬಯಸುತ್ತಾರೆ. ಅದರಲ್ಲಂತೂ ಕನ್ಸ್ಯೂಮರ್ ಡ್ಯೂರೇಬಲ್ಸ್ ವಸ್ತುಗಳ ಖರೀದಿಸಿ ನಂತರದಲ್ಲಿ ಮಾರಾಟದ ನಂತರ ಬೇಕಾಗುವ ಸರ್ವಿಸ್ [ಸೇವೆ]ಯನ್ನು ಬಯಸುವ ಮಂದಿಯೇ ಇಲ್ಲಿ ಹೆಚ್ಚಿಗೆ ಇದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿನ ಜನರಷ್ಟು ಸಮಯವಾಗಲೀ, ಆರ್ಥಿಕ ಅನುಕೂಲವಾಗಲೀ ಇಲ್ಲದ ಜನರಿಗೆ ಸೇವೆಗಾಗಿ ಕಾಲ್ ಸೆಂಟರ್ಗೆ ಕಾಲ್ ಮಾಡಿಕೊಂಡು,  “ ಕ್ಕಾ॒ಗಿ ಒಂದನ್ನು ಒತ್ತಿ, ॒॒ಕ್ಕಾ॒ಗಿ ಎರಡನ್ನು ಒತ್ತಿ, ಅದಕ್ಕಾಗಿ ಮೂರನ್ನು ಒತ್ತಿ” ಎಂಬುದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದು ಸಾಧ್ಯವಿಲ್ಲ. 

ಕಾರಿರುಳೊಳಾಗಸದಿ ತಾರೆ ನೂರಿದ್ದೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ ಮಾನುಷಸಖನ
ಕೋರುವುದು ಬಡಜೀವ-ಮಂಕುತಿಮ್ಮ

ರಾತ್ರಿಯ ಕತ್ತಲ ಹಾದಿಯಲ್ಲಿ ಕೇವಲ ತಾರೆಗಳ ಬೆಳಕು ನಮಗೆ ಮಹತ್ತರ ಗುರುತಾಗಲು ಸಾಧ್ಯವಿಲ್ಲ. ದೂರದ ದೇವರು ಸಹಾಯ ಮಾಡುತ್ತಾನೆಂದುಕೊಂಡರೂ, ಆ ಕ್ಷಣದಲ್ಲಿ ಅತ್ಯಂತ ತ್ವರಿತವಾಗಿ ನಮ್ಮ ಕಣ್ಣಿಗೆ ಮನೆಯಲ್ಲಿ ಬೆಳಗುವ ಬೆಳಕೊಂದು ಬಿದ್ದಾಗಲೇ ಸಮಾಧಾನ. ಅದೇ ವಿಧವಾಗಿ ಬಹುದೊಡ್ಡ ತಾಜ್ಮಹಲ್ ಹೋಟೆಲ್ನಂಥ ಸ್ಟಾರ್ಹೋಟೆಲ್ ಒದಗಿಸುವ ಹೈ ಟೀ ಆತಿಥ್ಯವನ್ನು ಅನುಭವಿಸುವ ಆರ್ಥಿಕ ಮಟ್ಟ ಎಲ್ಲರದ್ದಲ್ಲ, ಕಾಕಾ ಅಂಗಡಿಯ ಅರ್ಧ ಕಪ್ ಚಾ ಕುಡಿದು ತೃಪ್ತಗೊಳ್ಳುವ ಮಧ್ಯಮ, ಕೆಳಮಧ್ಯಮ, ಬಡಜನರೇ ಹೆಚ್ಚಾಗಿರುವ ಈ ಭಾರತದಲ್ಲಿ ಕಾಲ್ ಸೆಂಟರ್ ವ್ಯವಸ್ಥೆ ಬಂದಾಗಿನಿಂದ ಪ್ರಾದೇಶಿಕ ಸರ್ವಿಸ್ ಉದ್ಯಮಿಗಳ ಮತ್ತು ಗ್ರಾಹಕರ ನಡುವಿರುತ್ತಿದ್ದ ಆತ್ಮೀಯ ವಾತಾವರಣ ಹೊರಟುಹೋಗಿದೆ; ಸರ್ವಿಸ್ ಪಡೆದುಕೊಳ್ಳಲು ಜನತೆ, ಅದರಲ್ಲೂ ವಯೋವೃದ್ಧ ಗ್ರಾಹಕರು ಪರದಾಡಬೇಕಾಗಿದೆ ಎಂಬ ಸಂದೇಶವನ್ನು ಈ ಸಿನಿಮಾ ರವಾನಿಸುತ್ತದೆ. ತರುಣಿಯೋರ್ವಳ ಸ್ವಂತ ಉದ್ಯಮ, ಸಾಹಸ, ಉತ್ಸಾಹ ಅಥವಾ ಜೋಶ್, ಎಳವೆಯಿಂದ ಅಮ್ಮನಿಲ್ಲದೆ ಕುಡುಕ ಅಪ್ಪನ ಗರಡಿಯಲ್ಲಿ ಬೆಳೆದ ಅವಳ ಬದುಕು, ಅವಳ ಪ್ರೇಮ, ಉದ್ಯಮದ ಸೋಲು, ಹತಾಶೆ, ಮತ್ತೆ ಉದ್ಯಮದಲ್ಲಿ ಗೆಲ್ಲುವ ವೈಖರಿ ಎಲ್ಲವನ್ನೂ ಸಹಜವಾಗಿ ಕ್ರೋಡೀಕರಿಸಲಾಗಿದೆ. ಪ್ರತಿಯೊಂದು ಪಾತ್ರವೂ ಸಿನಿಮಾದ ಪಾತ್ರವಾಗಿರದೇ ಎದುರು ಘಟಿಸುವ ಘಟನೆಯಷ್ಟು ನೈಜ  ಅನುಭವವನ್ನು ನೀಡುತ್ತದೆ. ಪಾತ್ರಗಳ ಜೀವಂತಿಕೆ, ಯುವ ಜೀವಗಳ ಲವಲವಿಕೆ ಇಡೀ ಸಿನಿಮಾವನ್ನು ಮತ್ತೊಮ್ಮೆ ನೋಡುವಂತೆ ಮಾಡುತ್ತದೆ.

ಮಚ್ಚು-ಲಾಂಗು  ಸಾಂಗು ಎನ್ನುವ ಕನ್ನಡದ ಸಿನಿಮಾ ಮಂದಿಗೆ ಇಂತಹ ಚಿತ್ರಕಥೆಗಳು ಹೊಳೆಯುವುದೇ ಇಲ್ಲ ಎಂಬುದು ವಿಪರ್ಯಾಸ. ಬೇಡದ ಹಲವು ಸಿನಿಮಾಗಳ ಮಧ್ಯೆ ಉತ್ತಮ ಸಂದೇಶಗಳಿರುವ ಇಂತಹ ಸಿನಿಮಾಗಳು ರಂಜಿಸುತ್ತಲೇ ಭಿನ್ನವೆಂದು ಎತ್ತರದ ಸ್ತರದಲ್ಲಿ ನಿಲ್ಲುತ್ತವೆ. ನೀವೂ ಒಮ್ಮೆ ನೋಡುವ ಮನಸ್ಸು ಮಾಡಿ; ನೋಡುತ್ತ ಮನಸ್ಸನ್ನು ನಿರುಮ್ಮಳ ಮಾಡಿ.

Tuesday, December 23, 2014

ಯೋಗಿಯೋ ಭೋಗಿಯೋ ಹೇಳುವೆಡೆ ಆತ್ಮವಂಚನೆ ಬೇಡ!




ಯೋಗಿಯೋ ಭೋಗಿಯೋ ಹೇಳುವೆಡೆ ಆತ್ಮವಂಚನೆ ಬೇಡ!


ಬಹಳ ವರ್ಷಗಳ ಹಿಂದೆಯೇ ಹಿಮಾಲಯದ ಸಂತ ಸ್ವಾಮಿ ರಾಮ ಬರೆದ ‘ಲಿವಿಂಗ್ ವಿತ್ ದಿ ಹಿಮಾಲಯನ್ ಮಾಸ್ಟರ್ಸ್’ ಎಂಬ ಅವರ ಆತ್ಮಕಥೆಯನ್ನು ಓದಿದ್ದೆ. ತೀರಾ ಇತ್ತೀಚೆಗೆ ಯುವ ಲೇಖಕ ಚೇತನ್ ಭಗತ್ ಬರೆದ ‘ಹಾಫ್ ಗರ್ಲ್ಫ್ರೆಂಡ್’ ಎಂಬ ಕಾದಂಬರಿಯನ್ನೂ ಓದಿದ್ದೇನೆ. ಮೊದಲನೆಯದು ಆಧ್ಯಾತ್ಮಿಕ ಶಿಖರಗಾಮಿಗಳ ರೋಚಕ-ತ್ಯಾಗಮಯ ಬದುಕನ್ನು ಸಾಲಾಗಿ ತೆರೆದಿಡುತ್ತ, ಮನುಷ್ಯ ಜೀವಿತದ ಘನ ಉದ್ದೇಶಗಳ ಬಗೆಗೆ ಸಾರಿದರೆ, ಎರಡನೆಯದು ಲೌಕಿಕ ಬದುಕಿನ ಭಾವಶೃಂಖಲೆಗಳನ್ನು ಬಣ್ಣಿಸುತ್ತ ಐಹಿಕ ಬದುಕಿನ ಕ್ಷಣಿಕ ಆನಂದವನ್ನು ನೀಡುತ್ತದೆ. ಇವೆರಡೂ ಪರಸ್ಪರ ವಿರುದ್ಧ ದಿಸೆಯಲ್ಲಿ ಸಾಗುವ ವಿಷಯವಸ್ತುಗಳ ಕಥಾ ಹಂದರಗಳನ್ನು ಒಳಗೊಂಡಿದ್ದು, ಎರಡೂ ಆಪ್ತವಾಗುತ್ತವೆ.

ನಿಜವಾದ ತ್ಯಾಗಿಯಾರು? ಯೋಗಿ ಯಾರು? ಆತನ ಜೀವನ ವೈಖರಿಯ ದಿನಚರಿಯೆಂಥದ್ದು? ಆತ ಎದುರಿಸುವ ಸವಾಲುಗಳೆಂಥವು? ಲೌಕಿಕವಾದ ಭಾವನಾತ್ಮಕ ಸಂಬಂಧಗಳನ್ನು ಆತ ಹೇಗೆ ಕಳೆದುಕೊಳ್ಳುತ್ತಾನೆ ಎಂಬುದರ ಬಗೆಗೆ ಸ್ವಾಮಿ ರಾಮ ಚೆನ್ನಾಗಿ ಹೇಳಿದ್ದಾರೆ. ಯೋಗಿಯಾಗುವ ಮೊದಲಿನ ಹಂತದಲ್ಲಿ ಉಡಾಫೆಮಾಡುವ ಹುಡುಗನಾಗಿ ತನ್ನ ಗುರುವಿಗೆ ವಿರುದ್ಧವಾಗಿ ಹೇಗೆಲ್ಲಾ ನಡೆದುಕೊಂಡೆ ಮತ್ತು ಅದರ ಪರಿಣಾಮವೇನಾಯ್ತೆಂಬುದರ ಬಗೆಗೂ ವಿಶದವಾಗಿ ವಿವರಿಸಿದ್ದಾರೆ. ಅರಿಷಡ್ವರ್ಗಮುಕ್ತ ಯೋಗಿಗಳನ್ನು ಕಾಣಲು ಆಯ್ಕೆಯೇ ಅನಿವಾರ್ಯ ಎಂಬುದೂ ಸಹ ಗೊತ್ತಾಗುತ್ತದೆ. ಯೋಗಿಯ ಮೊದಲ ಹಂತವೇ ಅಹಂಕಾರದ ದಮನ[‘ನಾನು’ ಎಂಬುದರ ನಾಶ] ನಾನು ಎಂಬುದನ್ನು ಅನಂತದಲ್ಲಿ ಅಡಕವಾಗಿಸುವುದೇ ಯೋಗಿಯ ಗುರಿ-ಅದೇ ಮೋಹ ಕ್ಷಯ ಅಥವಾ ಮೋಕ್ಷ. ಸಾಧನಾ ಪಥದಲ್ಲಿ ಒಂದೊಂದು ಸಾಧುವಿಗೂ, ಒಬ್ಬೊಬ್ಬ ಸಂತನಿಗೂ ಸಹಜವಾಗಿ ಅಂಟಿರುವ ವೈಶಿಷ್ಟ್ಯವನ್ನು ಮತ್ತು ಅದರ ಮಹತ್ವಗಳನ್ನೂ ಸ್ವಾಮಿ ರಾಮ ಉದಾಹರಿಸಿದ್ದಾರೆ. ತನ್ನ ಗುರುವಿನ ಔದಾರ್ಯದಿಂದ ತಾನು ನೇರವಾಗಿ ಸಂದರ್ಶಿಸಿದ ಅನೇಕ ಸಂತರನ್ನು ಆ ಹೊತ್ತಗೆಯುದ್ದಕ್ಕೂ ಓದುಗರಿಗೆ ಪರಿಚಯಿಸುತ್ತಲೇ ನಡೆಯುತ್ತಾರೆ. ಸಂತ ಊರೊಳಗಿದ್ದರೆ ಹೇಗೆ? ಮತ್ತು ಊರಾಚೆಯ ಬೆಟ್ಟ-ಗುಡ್ಡ-ಪರ್ವತ-ಗುಹೆ-ಗಹ್ವರಗಳಲ್ಲಿ ಇದ್ದರೆ ಹೇಗೆ? ಎಂಬುದನ್ನೂ ತೋರಿಸುತ್ತಾರೆ. ನಿವೃತ್ತಿ ಪಥ-ಪಥಿಕರಾದ ಸಂತರಲ್ಲಿ ಕುಂಡಲಿನಿ ಶಕ್ತಿಯ ಸಕಾರಾತ್ಮಕ ಬಳಕೆ ಹೇಗಾಗುತ್ತದೆ ಎಂಬುದನ್ನೂ ಅಲ್ಲಿ ಕಾಣಬಹುದಾಗಿದೆ.   

ಮುದ್ದಿಗೆ-ಪ್ರೀತಿಗೆ ಅಂಟಿಕೊಂಡ ಹಿಮಕರಡಿಯೊಂದು ಹಿಮಾಲಯದ ಗುಹೆಯ ಹೊರಗೆ ಸದಾ ಇರತೊಡಗಿದಾಗ, “ಸಾಧಕನಿಗೆ ಯಾವುದೇ ನಂಟು-ಮೋಹ ಇರಕೂಡದು” ಎಂದು  ಸ್ವಾಮಿರಾಮರಿಗೆ ಅವರ ಗುರು ಆದೇಶಿಸಿದ್ದು ನೆನಪಿಗೆ ಬರುತ್ತದೆ. ಭಾರತದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳಪ್ರದೇಶಗಳಲ್ಲಿ ಅಥರ್ವಣ ವೇದದ ಭಾಗಗಳನ್ನು ‘ಬ್ಲ್ಯಾಕ್ ಮ್ಯಾಜಿಕ್’ ಮಾಡಲು ದುರುಪಯೋಗ ಮಾಡುವುದನ್ನು ಲೇಖಕರು ಸಾಕ್ಷಾತ್ಕರಿಸಿ ತೋರಿಸುತ್ತಾರೆ. ಕರವೀರಮಠದ ಶಂಕರಾಚಾರ್ಯ ಪೀಠ ತನಗೊಲಿದು ಬಂದರೂ, ತನ್ನಾತ್ಮ ಸಾಧನೆಗೆ ಸಮಯವೇ ಸಿಗುವುದಿಲ್ಲವೆಂಬ ಕಾರಣಕ್ಕೆ, ಹೇಳದೇ ಕೇಳದೇ ಪೀಠತ್ಯಾಗ ಮಾಡಿದ್ದನ್ನೂ ಅವರು ದಾಖಲಿಸಿದ್ದಾರೆ. ಮನುಷ್ಯ ಸಹಜ ಭಾವನೆಗಳು, ತುಮುಲ-ಗೊಂದಲಗಳು, ದ್ವಂದ್ವ-ಇಬ್ಬಂದಿತನಗಳು, ದ್ವೇಷಾಸೂಯೆಗಳು, ಕೋಪ-ವಿಕೋಪಗಳು, ಇಷ್ಟಾನಿಷ್ಟಗಳು, ಹಲವಿಧ ಸೆಂಟಿಮೆಂಟ್ಸ್ ಎಲ್ಲ ಮಜಲುಗಳೂ ಅತ್ಯಂತ ಸಹಜಗತಿಯಲ್ಲಿ ಆಯಾಯ ಕಾಲದಲ್ಲಿ ತನ್ನಲ್ಲಿ ಹೇಗೆ ಸ್ಫುರಿಸಿದವು ಎಂಬುದರ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. 

ಹರೆಯದ ಹುಡುಗರಿಗೆ ಹಸಿವಿನ ಬಾಧೆ ಬಹಳ; ಅದು ದೇಹದ ಬೆಳವಣಿಗೆಯ ಕಾಲ. ದಿವಸಕ್ಕೊಮ್ಮೆ ಮಾತ್ರ ಒಂದೋ ಎರಡೋ ಚಪಾತಿ-ಪಲ್ಯ ತಿಂದು ಬದುಕುತ್ತಿದ್ದ ಸಂತರ ಗುಹೆಯಲ್ಲಿ ವಾಸಿಸುತ್ತಿದ್ದ ಸ್ವಾಮಿ ರಾಮರಿಗೆ ಒಮ್ಮೆ, “ನಾಲ್ಕಾರು ದಿನಗಳಿಂದ ಏನನ್ನೂ ತಿಂದಿರದ ಸಂತರೊಬ್ಬರು ಗುಹೆಗೆ ಬರುತ್ತಿದ್ದಾರೆ, ಇಂದಿನ ನಿನ್ನ ಆಹಾರವನ್ನು ಅವರಿಗೆ ಕೊಟ್ಟುಬಿಡು” ಎಂದು ಹೊರಗಿನಿಂದ ಬಂದ ತನ್ನ ಗುರು ಹೇಳಿದಾಗ, ಹಸಿವನ್ನು ತಡೆದುಕೊಳ್ಳಲಾರದೇ, ತನ್ನ ಆಹಾರ ಯಾರಿಗೂ ಕೊಡೆನೆಂದು ಗುರುವಿನೊಡನೆ ಜಗಳವಾಡಿ, ನಂತರ ನಿಧಾನವಾಗಿ ನಡುಗುತ್ತ ಬಂದು ಕುಳಿತ ವಯೋವೃದ್ಧ ಸಂತನ ಪಾದ ತೊಳೆದು, ತನ್ನ ಪಾಲಿನ ಭೋಜನವನ್ನು ಅವರಿಗೆ ನೀಡುವ ಸ್ವಾಮಿ ರಾಮರಿಗೆ, “ಮಗೂ, ಮುಂದೆಂದೂ ನೀನೇ ಇಚ್ಛಿಸಿ ಆಹಾರ ಸ್ವೀಕರಿಸುವವರೆಗೆ ನಿನಗೆ ಹಸಿವು ಬಾಧಿಸದು” ಎಂದು ಆಶೀರ್ವದಿಸಿದ ಘಟನೆ ನೆನೆದು ನನ್ನ ಕಣ್ಣಾಲಿಗಳು ಆನಂದಬಾಷ್ಪ ಹರಿಸಿದವು; ಆ ಸಂತನ ಆಶೀರ್ವಾದ ನಿಜವಾಗಿದ್ದನ್ನು ಸ್ವಾಮಿ ರಾಮ ನೆನೆದಿದ್ದಾರೆ.    

 ಇತ್ತೀಚೆಗೆ “ಸಶಕ್ತ ಯೋಗ ಮುದ್ರೆಗಳು” ಮತ್ತು “ಚೈತನ್ಯ ಚಕ್ರಗಳು” ಎಂಬೆರಡು ಯೋಗಾಧಾರಿತ ಹೊತ್ತಗೆಗಳನ್ನು ಬರೆದು ಮುದ್ರಣಕ್ಕೆ ಕಳುಹಿಸಿದ್ದೇನೆ. ಯೋಗದ ಬಗೆಗೆ ಅಧ್ಯಯನಕ್ಕೆ ತೊಡಗಿದಾಗ ಮಹರ್ಷಿ ಪತಂಜಲಿಯ ಅಷ್ಟಾಂಗಯೋಗ ಮತ್ತು ಪಾತಂಜಲ ಯೋಗಸೂತ್ರಗಳಂತಹ ಹಲವು ಆಕರಗಳನ್ನು ಓದಿಕೊಳ್ಳುವ ಅನಿವಾರ್ಯತೆಯಿತ್ತು ಮತ್ತು ಆ ಓದು ಇಷ್ಟವೂ ಆಗಿತ್ತು. “ಯೋಗಃ ಚಿತ್ತವೃತ್ತಿ ನಿರೋಧ” ಎಂದು ಪತಂಜಲಿ ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ. ಮನುಷ್ಯನಿಗೆ ಚಿತ್ತವೃತ್ತಿಯನ್ನು ಹದ್ದುಬಸ್ತಿನಲ್ಲಿಡುವುದು ಸುಲಭ ಸಾಧ್ಯವಲ್ಲ; ಚಿತ್ತವೃತ್ತಿ ನಿರೋಧಿಸುವುದಕ್ಕೆ ಪೂರಕ ಆಹಾರ ಮತ್ತು ಯೋಗದ ಸಮನ್ವಯ ಆಗಬೇಕಾಗುತ್ತದೆ. ಯೋಗವೆಂದರೆ ಕೇವಲ ಯೋಗಾಸನಗಳಲ್ಲ; ಯಮ, ನಿಯಮ, ಅಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ  ಧ್ಯಾನ, ಸಮಾಧಿಗಳೆಂಬ ಎಂಟು ಅಂಗಗಳನ್ನೊಳಗೊಂಡ ಆಚರಣೆಯೇ ಯೋಗ ಮತ್ತು ಅದನ್ನು ತನ್ನದಾಗಿಸಿಕೊಳ್ಳುವುದೇ ಸಾಧಕನ ಯೋಗಾಯೋಗ! ಎಲ್ಲವನ್ನೂ ನೋಡಿಯೂ ಯಾವ ಭಾವನೆಗಳಿಗೂ ಕಟ್ಟುಬೀಳದೇ, ತನ್ನನ್ನೇ ತಾನು ನಿಗ್ರಹಿಸಿಕೊಳ್ಳುವ ಕಲೆ ಯೋಗದಿಂದ ಕರಗತವಾಗುತ್ತದೆ. ಅಷ್ಟಾಂಗ ಯೋಗದ ಮೊದಲ ನಾಲ್ಕು ಅಂಗಗಳು ಮುಗಿದ ಮೇಲೆ ಸಾಧಕನಿಗೆ ಎರಡು ಮಾರ್ಗಗಳು ಕಾಣ ಸಿಗುತ್ತವೆ: ಒಂದು ಮುಮುಕ್ಷುತ್ವವನ್ನು ಹೊಂದುವುದು-ಯೋಗಿಯಾಗುವುದು, ಇನ್ನೊಂದು ಮಂತ್ರಗಳನ್ನು ಯಂತ್ರರಚನೆಗಳಲ್ಲಿ ಬಂದಿಸುವ ತಾಂತ್ರಿಕ-ಮಾಂತ್ರಿಕನಾಗುವುದು. ತಾಂತ್ರಿಕ-ಮಾಂತ್ರಿಕನಿಗೆ ಕೆಲವು ಸಿದ್ಧಿಗಳು ಪ್ರಾಪ್ತವಾಗಿದ್ದರೂ ಸಿದ್ಧಿಗಳ ದುರುಪಯೋಗದಿಂದ ಆತ ತನ್ನ ಜೀವನವನ್ನು ತಾನೇ ಹಾಳುಮಾಡಿಕೊಳ್ಳುತ್ತ ಕ್ಷಣಿಕ ಧನ-ಕನಕ-ವಶೀಕರಣ-ವ್ಯಾಮೋಹದಿಂದ ಐಹಿಕ ಸುಖಲೋಲುಪನಾಗುತ್ತಾನೆ. ಸಾಧನಾಪಥದ ಆರಂಭಿಕ ಹಂತಗಳಲ್ಲಿ ಸಿದ್ಧಿಸುವ ಇಂತಹ ಶಕ್ತಿಗಳನ್ನು ಉಪಯೋಗಿಸದೇ ಮುನ್ನಡೆದರೆ ಯೋಗಿ ಮೋಕ್ಷವನ್ನು ಪಡೆಯುತ್ತಾನೆ.  

ಭವ್ಯ ಭಾರತದಲ್ಲಿ, ಅದರಲ್ಲೂ ಸನಾತನ ಧರ್ಮದ ಪುನರುತ್ಥಾನ ಮಾಡಿದ ಅದಿಶಂಕರ ಪರಂಪರೆಯಲ್ಲಿ ಸಂನ್ಯಾಸಿಗಳಾಗುವ ವ್ಯಕ್ತಿಗೆ, ಸಂಸ್ಕೃತ ಭಾಷಾ ವಿದ್ವತ್ತಿನ ಜೊತೆಗೆ,   ಚತುರ್ವೇದಗಳು, ಅಷ್ಟಾದಶ ಪುರಾಣಗಳು, ಷಟ್ ಶಾಸ್ತ್ರಗಳು, ಭಗವದ್ಗೀತೆ, ಬ್ರಹ್ಮಸೂತ್ರ ಮೊದಲಾದ ಹಲವು ಪಾರಮಾರ್ಥಿಕ ಜ್ಞಾನದಾಯಿಗಳು ಕಂಠಸ್ಥವಾಗಿ-ಹೃದ್ಗತವಾಗಿರಬೇಕು. ಆ ವ್ಯಕ್ತಿಯ ಜನ್ಮಜಾತ ಸ್ವಭಾವ ಸದಾ ನಿವೃತ್ತಿ ಮಾರ್ಗಕ್ಕಾಗಿ ಹಾತೊರೆಯುವಂಥದ್ದಾಗಿರಬೇಕು. ರಾಗ-ದ್ವೇಷಗಳು ಯಾರಲ್ಲಿ ಲುಪ್ತವಾಗಿವೆಯೋ ಆತನೇ ವೈರಾಗಿ, ಅಥವಾ ಬೈರಾಗಿ. ಅಂತಹ ಬೈರಾಗಿಗೆ ಈ ಲೋಕದ ಯಾವುದೇ ಚರಾಚರ ವಸ್ತು-ವಿಷಯಗಳಲ್ಲಿ ಖಾಸಗಿಯಾದ ಯಾವುದೇ ಹಿತಾಸಕ್ತಿಗಳೂ ಇರಕೂಡದು. ಧರ್ಮಮಾರ್ಗವನ್ನು ಶಿಷ್ಯರಿಗೆ ಪ್ರಬೋಧ ಮಾಡುವುದು ಮಾತ್ರ ಆತನ ಕರ್ತವ್ಯ.

ಆದಿಶಂಕರ ಪರಂಪರಯನ್ನೇ ಅನುಮೋದಿಸಿದ್ದು ಸಮರ್ಥ ಪರಂಪರೆ. ಅಂತಹ ಪರಂಪರೆಯಲ್ಲಿ ಕಳೆದ ಶತಮಾನದಲ್ಲಿ ನಾವು ಭಾಗವಾನ್ ಶ್ರೀಧರ ಸ್ವಾಮಿಗಳನ್ನು ಕಂಡಿದ್ದೇವೆ. ಶ್ರೀಧರ ಸ್ವಾಮಿಗಳ ಭಕ್ತರೊಬ್ಬರ ಮನೆಯಲ್ಲಿ ಪಾದಪೂಜೆ ನಡೆದಿದೆ. ತೀರ್ಥವನ್ನು ತೆಗೆದುಕೊಳ್ಳಲು ಹೊರಟ ಮನೆಯೊಡತಿಯ ಕಣ್ಣಲ್ಲಿ ಕಣ್ಣೀರು ಕಂಡ ಸ್ವಾಮಿಗಳು "ಯಾಕಮ್ಮಾ ಕಣ್ಣೀರು?" ಎಂದು ಕೇಳುತ್ತಾರೆ. ಅದಕ್ಕೆ ಆ ಮನೆಯೊಡತಿ, “ಗುರುಗಳೇ, ತಾವು ನಮ್ಮ ಮನೆಗೆ ಪಾದಾರ್ಪಣೆ ಮಾಡಿರುವ ಈ ಸಂದರ್ಭದಲ್ಲಿ, ನನ್ನ ಮಗ ತಮ್ಮ ಕೈಯ್ಯಿಂದ ತೀರ್ಥ ತೆಗೆದುಕೊಳ್ಳುವ ಅವಕಾಶದಿಂದ ವಂಚಿತನಾದನಲ್ಲಾ ಎಂದು ದುಃಖವಾಗುತ್ತಿದೆ” ಎನ್ನುತ್ತಾ ಕಣ್ಣೀರಿಡುತ್ತಾಳೆ. ಆಗ ಶ್ರೀಧರ ಸ್ವಾಮಿಗಳು ಹೇಳುತ್ತಾರೆ, “ಅಷ್ಟಕ್ಕೆ ಕಣ್ಣೀರೇಕೆ? ಇಗೋ ನೋಡು ನಿನ್ನ ಮಗನಿಗೆ ತೀರ್ಥಕೊಟ್ಟಿದ್ದಾಯ್ತು” ಎಂದು ಹೇಳಿ, ಒಂದು ಉದ್ಧರಣೆ ತೀರ್ಥವನ್ನು ಅರ್ಘ್ಯಪಾತ್ರೆಗೆ ಬಿಡುತ್ತಾರೆ. “ಈಗ ನೀನು ತೀರ್ಥ ತೆಗೆದುಕೊ” ಎಂದು ಆ ತಾಯಿಗೆ ತೀರ್ಥಕೊಡುತ್ತಾರೆ. ಕೆಲವೇ ದಿನಗಳಲ್ಲಿ ಕಾಶಿಯಲ್ಲಿ ಓದುತ್ತಿದ್ದ ಮಗನಿಂದ ಪತ್ರವೊಂದು ಬರುತ್ತದೆ; ಅದರಲ್ಲಿ ಅವನು ಈ ರೀತಿ ಬರೆದಿರುತ್ತಾನೆ: “ಕಾಶಿಯ ವಿಶ್ವನಾಥನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ಎಲ್ಲರಿಗೂ ಗಂಗೆಯ ತೀರ್ಥವನ್ನು ಕೊಡುತ್ತಿದ್ದರು. ನಾನೂ ಕೈ ಒಡ್ಡಿದೆ, ಆಶ್ಚರ್ಯವಾಯ್ತು, ನನ್ನ ಕೈಗೆ ಬಂದದ್ದು ಪಂಚಾಮೃತ." ಘಟನೆಯನ್ನು ಕೇಳುವಾಗ ಭಕ್ತರಿಗೆ ರೋಮಾಂಚನವಾಗುತ್ತದೆ. ಅಂದು ಭಗವಾನ್ ಶ್ರೀಧರಸ್ವಾಮಿಗಳು ಅರ್ಘ್ಯಪಾತ್ರೆಗೆ ಹಾಕಿದ ಪಂಚಾಮೃತತೀರ್ಥವು ಕಾಶಿಯಲ್ಲಿದ್ದ ಆ ತಾಯಿಯ ಮಗನಕೈಗೆ ಬಿದ್ದಿತ್ತು!

ಇಂದು ನಮ್ಮಲ್ಲಿನ ಅಧುನಿಕ ‘ಸಂನ್ಯಾಸಿ’ಗಳಲ್ಲಿ ಕೆಲವರು ಐಪ್ಯಾಡ್-ಐಫೋನ್ ಮೂಲಕ ವಾಟ್ಸಾಪ್ ಬಳಸಿ ತೀರ್ಥಕೊಡುವ ಚಿತ್ರವನ್ನು ಕಳುಹಿಸುತ್ತಾರೆಯೇ ಶಿವಾಯಿ ಇವರಲ್ಲಿ ಅಂತಹ ಯಾವ ಯೋಗ್ಯತೆಯೂ ಎಳ್ಳಿನಷ್ಟೂ ಇರುವುದಿಲ್ಲ; ಇದಕ್ಕೆ ಕಾರಣಗಳನ್ನು ಹುಡುಕಿದಾಗ ಯಾವ ಘನ ಆರ್ಹತೆಯಾಗಲೀ, ಸಾಧನೆಯಾಗಲೀ, ಜನ್ಮಜಾತ ವೈರಾಗ್ಯವಾಗಲೀ ಅವರಲ್ಲಿ ಇರುವುದಿಲ್ಲ ಎಂಬುದು ಸ್ಪಷ್ಟವಾಗುವುದರ ಜೊತೆಗೆ, ಕಳ್ಳಬೆಕ್ಕು ಕಣ್ಮುಚ್ಚಿ ಹಾಲುಕುಡಿದಂತೆ  ಈ ಲೋಕದ ಸಕಲ ಸುಖೋಪಭೋಗಗಳನ್ನು ಸಂಸಾರಿಗಿಂತಲೂ ಅಧಿಕವಾಗಿ ಅನುಭವಿಸುವವರಾಗಿರುವುದು ಕಂಡುಬರುತ್ತದೆ. ಮೇಲಾಗಿ ಸಮಾಜದಲ್ಲಿ ಅಲ್ಲಲ್ಲಿರುವ ಸಾಂಸಾರಿಕ ದುರುಳರು ತಮ್ಮ ವೈರಿನಿಗ್ರಹಕ್ಕಾಗಿ ಪ್ರಯೋಗಿಸುವ ವಾಮಾಚಾರಗಳಂಥದ್ದನ್ನು ಇವರೂ ಬಳಸಿಕೊಂಡು “ಶಾಪ” ಎಂದು ಭೋಂಗು ಬಿಡುವುದೂ ನಡೆಯುತ್ತಿದೆ.

ಇಂಥವರನ್ನು ಕಂಡಾಗ ಚೇತನ್ ಭಗತ್ ಅವರ ‘ಹಾಫ್ ಗರ್ಲ್ಫ್ರೆಂಡ್’ ಕಾದಂಬರಿಯ ಹಲವು ಅಂಶಗಳು ನನಗೆ ನೆನಪಿಗೆ ಬರುತ್ತವೆ. ರಿಯಾ ಸೋಮನಿ ಮತ್ತು ಮಾಧವ್ ಝಾ ಎಂಬಿಬ್ಬರ ನಡುವಿನ ಪ್ರೇಮ್ ಕಹಾನಿ ಹೇಗೆ ಆರಂಭ ಗೊಂಡಿತು, ಹೇಗೆಲ್ಲ ತಿರುವು ಪಡೆದುಕೊಂಡಿತು, ಹೇಗೆ ಸುಖಾಂತ್ಯ ಕಂಡಿತು ಎಂಬುದು ಮನದಟ್ಟಾಗುತ್ತದೆ. ಸಹಜಗತಿಯಲ್ಲಿ ಸಾಗುವ ಅಧುನಿಕ ನಗರ ಜನಜೀವನ ವಿಧಾನದಲ್ಲಿ ಘಟಿಸಿಹೋಗಬಹುದಾದ ಕಥೆಯೊಂದರಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ವ್ಯಾವಸಾಯಿಕ, ಆಹಾರ್ಯಕ, ದಾನ-ದತ್ತಿ, ಪ್ರೇಮ-ಭಗ್ನಪ್ರೇಮ-ಕಾಮ, ಅಸಹಾಯಕತೆ, ಭಾಷಾಬಳಕೆಯ ವೈಕಲ್ಯ ಸ್ಥಿತಿ ಎಲ್ಲಾ ವಿಷಯಗಳನ್ನೂ ಹಿತಮಿತವಾಗಿ ಬೆರೆಸಿ ಹದಪಾಕ ಇಳಿಸಿದ ಕಾದಂಬರಿಯಲ್ಲಿ, ಭಾವನೆಗಳ ಎಳೆಎಳೆಗಳನ್ನು ಅನುಭವಿಸುವುದೇ ಒಂದು ಕ್ಷಣಿಕಾನಂದ. “ಏ ಲೋ ಕ್ಲಾಸ್ ಕ್ಯಾನ್ ಸ್ಮೆಲ್ ಲೋ ಕ್ಲಾಸ್ ”, “ಗವರ್ನಮೆಂಟ್ ಎಂಪ್ಲಾಯೀಸ್ ಆರ್ ದಿ ಲೋವೆಸ್ಟ್ ರಿಸ್ಕ್ ಟೇಕರ್ಸ್ ಆನ್ ದಿ ಅರ್ಥ್” ಎಂಬ ಕೆಲವು ಹೇಳಿಕೆಗಳು ಹಾದುಹೋಗುವಾಗ ನಮಗರಿವಿರದಂತೆಯೇ ನಗು ಉಮ್ಮಳಿಸುತ್ತದೆ. ಕಾದಂಬರಿಯಲ್ಲಿ ಲೇಟೆಸ್ಟ್ ತಂತ್ರಜ್ಞಾನದ ಹಲವು ಸಾಧನ-ಸಲಕರಣೆಗಳನ್ನೂ ಅಂತರ್ಜಾಲ ಮತ್ತು ಯೂಟ್ಯೂಬ್ ಮೊದಲಾದ ವಿಷಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ದತ್ತಿ ಪ್ರತಿಷ್ಠಾನವನ್ನು ಹೆಸರಿಸಿದ್ದು ಬಿಲ್ ಗೇಟ್ಸ್ ಬಂದುಹೋಗುವ ಸನ್ನಿವೇಶ ಮತ್ತು ಅದಕ್ಕಾಗಿ ಮಾಧವ್ ಝಾನ ಇಂಗ್ಲೀಷ್ ಕಲಿಕೆ ಇವೆಲ್ಲವೂ ಓದುಗನನ್ನು ರಂಜಿಸುತ್ತವೆ. ನಡುಗಾಲದ ಕೃತಿಗಳಲ್ಲಿರುವಷ್ಟು  ಸೆಂಟಿಮೆಂಟ್ಸ್ ಇಟ್ಟುಕೊಳ್ಳದ, ನವಕಾಲದ ತರುಣ-ತರುಣಿಯರ ಹಾವ-ಭಾವ-ಬಾಂಧವ್ಯಗಳ ಸಮ್ಮೇಲನಗಳು ಕಮರ್ಷಿಯಲ್ ಸಿನಿಮಾ ಒಂದಕ್ಕೆ ಸರಿಯೆನಿಸುತ್ತವೆ. ಮುದ್ದಣ-ಮನೋರಮೆಯರ ಸರಸ-ಸಲ್ಲಾಪದ ನಡುವೆ ಚೇಟ-ಚೇಟಿಯರು ಬಂದು ಹೋಗುವಂತೆ, ಕಾದಂಬರಿಯ ನಡುನಡುವೆ ಕೃತಿಕಾರ ಚೆತನ್ ಭಗತ್ ಸ್ವತಃ ಪಾತ್ರವಾಗಿಬಿಡುತ್ತಾರೆ. ಇದನ್ನೆಲ್ಲ ಓದುವಾಗ, ಓದುವಷ್ಟು ಹೊತ್ತು ನಗರ ನಾಗರಿಕರಿಗೆ ಒಂಥರಾ ಖುಷಿ ಕೊಡುವುದು ಸುಳ್ಳಲ್ಲ.  ಆದರೆ ಇದೊಂದು ಸಂಪೂರ್ಣ ಅಪರ ಅಥವಾ ಲೌಕಿಕ-ಪ್ರಾಪಂಚಿಕ ಜೀವನ ವ್ಯಾಪಾರದ ಕಥೆಯೇ ಹೊರತು ಆತ್ಮೋದ್ಧಾರದ ಮಾತು ಇಲ್ಲಿ ಎಲ್ಲಿಯೂ ಬರುವುದಿಲ್ಲ.

ಓದುವ ಸಾಹಿತ್ಯಗಳಲ್ಲಿ ಪ್ರಬೋಧ ಸಾಹಿತ್ಯ,  ಪ್ರಮೋದ ಸಾಹಿತ್ಯ ಮತ್ತು ಪ್ರಮಾದ ಸಾಹಿತ್ಯ ಎಂಬ ಮೂರು ಪ್ರಕಾರಗಳಿರುತ್ತವೆಂದು ನಾನು ಹಲವೆಡೆ ವದರಿದ್ದಿದೆ. ರಾಜಾಜ್ಞೆಯಂತೆ ಹೀಗೇ ನಡೆದುಕೊಳ್ಳತಕ್ಕದ್ದು ಎಂದು ಬೋಧಿಸುವುದು ಪ್ರಬೋಧ ಸಾಹಿತ್ಯ[ಉದಾಹರಣೆಗ: ವೇದಗಳು, ದರ್ಶನಗಳು], ಜನಜೀವನದಲ್ಲಿ ಹೀಗೆ ಬದುಕಬೇಕೆಂಬ ಲೌಕಿಕ ಜ್ಞಾನ-ಅಮೋದಗಳನ್ನು ನೀಡುವುದು ಪ್ರಮೋದ ಸಾಹಿತ್ಯ[ಉತ್ತಮ ಕಥೆ, ಕವನ, ಕಾದಂಬರಿ ಮೊದಲಾದವು], ಪ್ರಾಚೀನ ಸತ್ಪರಂಪರೆಗೆ ವಿರೋಧಾಭಾಸ ಹುಟ್ಟಿಸಿ ಮಾನಸಿಕ ಕ್ಲೇಶ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುವುದು ಪ್ರಮಾದ ಸಾಹಿತ್ಯ[ಪೀತ ಪತ್ರಿಕೆಗಳು, ‘ಬುದ್ಧಿಜೀವಿಗಳ’ ಬರಹಗಳು ಮೊದಲಾದವು ಇದಕ್ಕೆ ಉದಾಹರಣೆಗಳು] ಮುದುಡಿ ಚಾದರ ಎಳೆದುಕೊಂಡು ಮಲಗಿದ ಮನಸ್ಸಿಗೆ ಮುದನೀಡುವ ಸ್ನೇಹಿತನ ಚೇತರಿಕೆಯ ಮಾತಿನ ಸರಣಿಯಂತಿರುವ ‘ಹಾಫ್ ಗರ್ಲ್ ಫ್ರೆಂಡ್ ’ ಒಂದು ಪ್ರಮೋದ ಸಾಹಿತ್ಯ ಎನ್ನಬಹುದಾಗಿದೆ.      

ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||

-೨೪ಕ್ಕೂ ಅಧಿಕ ಛಂದಸ್ಸುಗಳನ್ನು ಬಳಸಿ ಬರೆದ ತನ್ನ ರಘುವಂಶ ಮಹಾಕಾವ್ಯದ ಆರಂಭದಲ್ಲಿ ಈ ಮಹಾಕವಿ ಕಾಳಿದಾಸ ಹೀಗೆ ಜಗನ್ನಿಯಾಮಕ ಶಕ್ತಿಯನ್ನು ವಂದಿಸಿದ್ದಾನೆ. ಮಾತು ಮತ್ತು ಅರ್ಥ ಇವೆರಡರ ಸಂಬಂಧ ಪಾರ್ವತಿ-ಪರಮೇಶ್ವರಂತೆ ಬೇರ್ಪಡಿಸಲು ಸಾಧ್ಯವಾಗದ್ದು ಎಂಬುದನ್ನು ಇದೇ ಹೇಳಿಕೆಯಲ್ಲಿ ಸಂಧಿ, ಸಮಾಸ, ವಿಭಕ್ತಿ ಪ್ರತ್ಯಯಗಳ ಜೋಡಣೆಯಲ್ಲಿಯೂ ವೈಶಿಷ್ಟ್ಯ ಮೆರೆದು, ಪದವಿನ್ಯಾಸಗಳ ಮೂಲಕ ವಾಕ್ ಮತ್ತು ಅರ್ಥಗಳ ಅನ್ಯೋನ್ಯತೆಯನ್ನು ವಿವರಿಸಿದ್ದಾನೆ. ಪದಪ್ರಯೋಗಗಳಲ್ಲಿ ಕವಿಯು ತನ್ನ ಜಾಣ್ಮೆ, ಸಮಯೋಚಿತತೆಗಳನ್ನು ತೋರಿಸಬೇಕು ಎಂಬುದು ಇಲ್ಲಿ ಗೊತ್ತಾಗುತ್ತದೆ. ‘ಹಾಡಿ ಹಾಡಿ ರಾಗ ಉಗುಳಿ ಉಗುಳಿ ರೋಗ’ ಎಂಬುದು ವಾಡಿಕೆಯ ಮಾತು; ಅದೇ ವಿಧವಾಗಿ ಅಧ್ಯಯನಶೀಲತೆಯಲ್ಲಿ ಆಳವಾಗಿ ತೊಡಗಿಕೊಂಡು ತನ್ನ ನಿರಂತರ ಪ್ರಯತ್ನದಿಂದ ಪ್ರಾಪ್ತವಾಗುವ ಶೈಲಿಯಿಂದ ಓದುಗನಿಗೆ ಕಾವ್ಯ ರುಚಿಸುವಂತೆ ಮಾಡುವುದರ ಜೊತೆಗೆ ಕವಿಯ ಮನದಾಶಯ, ಅನುಭವಿಸಿದ ಆನಂದವನ್ನು ಓದುಗ-ಸಹೃದಯನಿಗೂ ವೇದ್ಯವಾಗುವಂತೆ ಕಾವ್ಯರಚನೆ ಸಾಧ್ಯವಾಗಬೇಕು. ಶೈಲಿ, ಛಂದಸ್ಸು, ವಸ್ತುವಿನ ಆಯ್ಕೆ, ಕವಿಸಮಯದ ಔಚಿತ್ಯ, ಸಮಯೋಚಿತ ಪದಪುಂಜಗಳ ಜೋಡಣೆ ಇವೆಲ್ಲವೂ ಕಾವ್ಯ ಪ್ರಯತ್ನದಿಂದ ಮಾತ್ರ ಕವಿಗೆ ಲಭಿಸುವಂಥವು.

ಸಂಸ್ಕೃತ ಕವಿಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿ-ಪರಂಪರೆಗಳ ಅರಿವಿನ ಬಗ್ಗೆ ಅವರ ಕೃತಿಗಳು ನೀಡುವ ಜ್ಞಾನ ಅಪಾರ; ಹೀಗಾಗಿಯೇ, ವೈದಿಕ ವಾಙ್ಮಯದಲ್ಲಿ ಇಲ್ಲಿನ ಸಾಹಿತ್ಯಗಳ ಬಳಕೆಯಾಗುತ್ತ ಬಂದಿರುವುದು ಕಾಣುತ್ತದೆ. ಆದಿಕವಿ ವಾಲ್ಮೀಕಿ, ರಾಮಾಯಣ ಮಹಾ-ಕಾವ್ಯವನ್ನು ಬರೆದಿದ್ದರೂ, ದಶರಥನನ್ನುಳಿದು ರಾಮನ ಪೂರ್ವಜರ ಬಗೆಗೆ ನಮಗೆ ಮಾಹಿತಿ ಸಿಗುವುದಿಲ್ಲ; ಅದರಂತೆಯೇ ರಾಮನ ಮಕ್ಕಳು ಲವ-ಕುಶರು ಆಳ್ವಿಕೆಗೆ ಬರುವ ಹೊತ್ತಿಗೆ ರಾಮಾಯಣ ಕಥಾನಕ ಮುಗಿದುಬಿಡುತ್ತದೆ. ಆದರೆ ರಘುವಂಶದಲ್ಲಿ ಸ್ವಯಂಭೂ ಮನುವಿನಿಂದ ಆರಂಭಗೊಂಡು ಅಗ್ನಿವರ್ಣನ ವರೆಗಿನ ತಲೆಗಳಿಗಳನ್ನು ನಾವು ಕಾಣಬಹುದಾಗಿದೆ. ಶ್ರೀರಾಮನ ವಂಶಸ್ಥರೆಲ್ಲರೂ ಪುಣ್ಯಪುರುಷರೇ ಆಗಿದ್ದರು. ಆದರೆ, ಶ್ರೀರಾಮನ ನಂತರದಲ್ಲಿ ಆ ವಂಶದಲ್ಲಿ ಜನಿಸಿದ ‘ಅಗ್ನಿವರ್ಣ’ನೆಂಬೊಬ್ಬಾತ ಮಾತ್ರ ಇದಕ್ಕೆ ವಿರುದ್ಧವಾದ ಅವಗುಣಗಳನ್ನು ಹೊಂದಿದ್ದು ಐಹಿಕ ಸುಖಲೋಲುಪನೂ, ಲಂಪಟನೂ ಆಗಿದ್ದನೆಂದು ತಿಳಿದುಬರುತ್ತದೆ. ತಾನೇ ದೇವರೆಂಬಂತೆ ಬಿಂಬಿಸುತ್ತ ತನ್ನ ಪಾದಪೂಜೆಯನ್ನೇ ಮಾಡಿ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಹೀಗಿದ್ದ ಅಗ್ನಿವರ್ಣನ ಪಾಪಕೃತ್ಯಗಳಿಂದ ರಘುವಂಶ ಅಂತ್ಯಗೊಂಡಿತು ಎಂಬುದು ವಿಷಾದ.  

ಪ್ರತೀ ವ್ಯಕ್ತಿಯೊಳಗೂ ಆತ್ಮನಲ್ಲಿ ಪರಮಾತ್ಮ ಅಂಶಾಂಶ ರೂಪದಿಂದ ನೆಲೆಸಿದ್ದಾನೆಂದು ಗೀತೆಯಲ್ಲಿ ಹೇಳಿದ್ದಾನೆ. ನಮ್ಮ ಶರೀರದಲ್ಲಿರುವ ಕಾವು, ಬಿಸಿ, ಆಹಾರ ಜೀರ್ಣವಾಗುವಿಕೆ, ತ್ಯಾಜ್ಯ ವಿಲೇವಾರಿ ಇವುಗಳನ್ನೆಲ್ಲ ಗಮನಿಸಿದಾಗ ವ್ಯಕ್ತಿ ಕೇವಲ ಶರೀರವಲ್ಲ, ಶರೀರದೊಳಗಿನ ಅವ್ಯಕ್ತ ಶಕ್ತಿಯೂ ಸೇರಿದ ಸ್ಥಿತಿ ಎಂಬುದು ಅರಿವಿಗೆ ಬರುತ್ತದೆ. ಕಳ್ಳನ ಮನದೊಳಗಿನ ಅತ್ಮ ಕಳ್ಳನನ್ನು “ನೀನೊಬ್ಬ ಕಳ್ಳ” ಎಂದು ಸದಾ ಹಂಗಿಸುತ್ತದೆ, ಸುಳ್ಳನ / ದ್ರೋಹಿಯ ಮನದೊಳಗಿನ ಆತ್ಮ “ನೀನೊಬ್ಬ ಸುಳ್ಳ, ನೀನೊಬ್ಬ ದ್ರೋಹಿ” ಎಂದು ಜರೆಯುತ್ತದೆ, ಕೊಲೆಗಡುಕನೊಳಗೆ ಸ್ಥಿತವಾದ ಆತ್ಮ “ನೀನೊಬ್ಬ ಪಾತಕಿ” ಎಂದು ಆಗಾಗ ಆತನ ಪಾತಕ ಕೃತ್ಯಗಳನ್ನು ಕನಸಿನ ರೂಪದಲ್ಲಿ ತೋರಿಸಿ ಭಯ ಹುಟ್ಟಿಸುತ್ತಲೇ ಇರುತ್ತದೆ, ಕಾಮುಕನ ಶರೀರಾಂತರ್ಗತ ಆತ್ಮ “ನೀನೊಬ್ಬ ಲಂಪಟ” ಎಂದು ಬಡಬಡಿಸುತ್ತಲೇ ಇರುತ್ತದೆ. ನಾವು ನಡೆಸಿದ ಕುಕೃತ್ಯಗಳನ್ನು ಆತ್ಮ ಸಮ್ಮತಿಸುವುದಿಲ್ಲ. ಆತ್ಮ ಸಮ್ಮತಿಸದ ಕೃತ್ಯಗಳನ್ನು ನಡೆಸಿದಾಗ ನಾವೇ ನಮ್ಮಾತ್ಮ ಘಾತುಕರಾಗಿ ಬೆಳೆಯುತ್ತೇವೆ. ಆತ್ಮವಂಚನೆ ಮಾಡಿಕೊಳ್ಳುತ್ತ ಹತ್ತುಹರದಾರಿ ಹೇಗೋ ಸಾಗಬಹುದು; ಆದರೆ ಅಲ್ಲಿಂದ ಮುಂದಕ್ಕೆ ಆತ್ಮವಂಚನೆಗೆ ತಕ್ಕ ಶಾಸ್ತಿ ಶತಸ್ಸಿದ್ಧ ಎಂಬುದು ಹಲವು ಪ್ರಬೋಧ ಸಾಹಿತ್ಯಗಳ ಅನುಭವ ಸಿದ್ಧಾಂತ.  ಜಗತ್ತನೇ ಗೆದ್ದ ಅಲೆಕ್ಸಾಂಡರ್, ಸರ್ವಾಧಿಕಾರ ಧೋರಣೆಯ ಹಿಟ್ಲರ್, ನೆಪೋಲಿಯನ್ ಮತ್ತು ಇತ್ತೀಚಿನ ಸದ್ದಾಂ ಹುಸೇನ್ ಮೊದಲಾದವರ ಕಥೆಗಳನ್ನು ನೋಡಿದಾಗ ಇದು ಸತ್ಯವೆಂಬ ಅರಿವುದೊರೆಯುತ್ತದೆ. ಯಾವ ಸ್ಥಾನಕ್ಕೆ ನಾವು ಅರ್ಹರೋ ಅಂತಹ ಸ್ಥಾನವನ್ನು ಮಾತ್ರ ನಾವು ಅಲಂಕರಿಸಬಹುದು, ಅನುಭವಿಸಬಹುದು, ಅದರ ಹೊರತಾಗಿ ಅರ್ಹತೆಗೂ ಮೀರಿದ ಸ್ಥಾನವನ್ನು ಅಧಿಕಾರಬಲದಿಂದ ಅತಿಕ್ರಮಿಸಿ, ಸ್ಥಾನದ ಮೌಲ್ಯಗಳನ್ನು ಕಳೆಯತೊಡಗಿದರೆ ಆಪತ್ತು ಸಂಭವಿಸುತ್ತದೆ. ಗಿಂಡಿಮಾಣಿಯಿಲ್ಲದೇ 'ಕಮಂಡಲಿಗೆ' ಹೋಗಲೂ, ಹಸ್ತೋದಕ ಸಿಗದೇ ಊಟ ಮಾಡಲೂ ಕರ್ಮಾಧಿಕಾರ ಇಲ್ಲದ ಸಂನ್ಯಾಸಿ ಎನಿಸಿಕೊಂಡವ, ಯೂಟ್ಯೂಬ್ ವೀಡಿಯೋ ನೋಡಬಹುದೇ? ಫೇಸ್ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ವಿಹರಿಸಬಹುದೇ? ಐಫೋನ್, ಐಪ್ಯಾಡ್, ವಾಟ್ಸ್ಯಾಪ್ಗಳ ಮೂಲಕ ಗುಪ್ತವಾಗಿ ಸಂವಹಿಸಬಹುದೇ?-ಎಂಬುದನ್ನು ಇಂದಿನ ಕೆಲವು ‘ಸಂನ್ಯಾಸಿ’ಗಳು ಅರಿತುಕೊಳ್ಳಬೇಕು.  

ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಪಿತಿ ರತಿಃ ಆಜ್ಞಾಪರಾಃ ಸೇವಕಾಃ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸನೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||

[ಅರ್ಥ: ಆನಂದ ತುಂಬಿದ ಮನೆ, ಬುದ್ಧಿವಂತ ಮಕ್ಕಳು, ಎದುರು ವಾದಿಸದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮಮಾರ್ಗದಲ್ಲಿ  ಆರ್ಜಿಸಿದ ಧನ, ಸ್ವಪತ್ನಿಯಲ್ಲಿ ನಲಿಯುವಿಕೆ, ಆಜ್ಞೆಯನ್ನು ಮೀರದ ಸೇವಕರು, ಅತಿಥಿ ಸತ್ಕಾರ, ಅನುದಿನ ಭಗವದಾರಾಧನೆ, ಇಷ್ಟವಾದ ಅನ್ನ ಪಾನಾದಿಗಳು, ಸಾಧ್ಯವಾದಷ್ಟು ಸದಾ ಸಾಧು-ಸಂತರ ಸತ್ಸಂಗ, ಸೇವೆ- ಇವಿಷ್ಟು ಇದ್ದರೆ ಗೃಹಸ್ಥಾಶ್ರಮವು ಧನ್ಯವಾಗುತ್ತದೆ].

ಅಧುನಿಕ ದಿನಮಾನದಲ್ಲಿಯೂ ಸಂತರಂತೆ ಬದುಕಿದ ಸಂಸಾರಿಗಳಿದ್ದಾರೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂವ ಚತುರಾಶ್ರಮಗಳಲ್ಲಿ ಗೃಹಸ್ಥಾಶ್ರಮ ಮಾತ್ರ ಉಳಿದ ಮೂರೂ ಆಶ್ರಮಗಳಿಗೆ ಆಧಾರವಾಗಿದೆ. ಗೃಹಸ್ಥ ಭಕ್ತರ-ಶಿಷ್ಯರ ಅನ್ನ-ಅನುಪಾನದಿಂದ ಮಿಕ್ಕವರಿಗೆ ಅನುಕೂಲವಾಗುತ್ತದೆ; ಆದರಿಲ್ಲೊಂದು ಧರ್ಮಸೂಕ್ಷ್ಮವಿದೆ- ವ್ರತನಿಷ್ಠ ಬ್ರಹ್ಮಚಾರಿಯೂ, ವಾನಪ್ರಸ್ಥನೂ, ಸಂನ್ಯಾಸಿಯೂ ಗೃಹಸ್ಥರನ್ನು ಮನದುಂಬಿ ಆಶೀರ್ವದಿಸುತ್ತಾರೆ-ಅವರ ಆಶೀರ್ವಾದದ ಬಲದಿಂದಲೇ ಗೃಹಸ್ಥ ಅವರಿಗೆ ಪುನರಪಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಆಶ್ರಮ ಧರ್ಮಕ್ಕೆ ಯಾವಾಗ ಕುತ್ತುಂಟಾಗುತ್ತದೋ ಆಗ ಅಲ್ಲಿ ಅಧರ್ಮ ಕಾಲಿಡುತ್ತದೆ. ಅದು ಧರ್ಮದ ನ್ಯೂನತೆಯಲ್ಲ; ಆಚರಿಸುವ ವ್ಯಕ್ತಿಗಳಲ್ಲಿರುವ ಐಬು!

ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು; ಅದರಲ್ಲೂ ಸಂನ್ಯಾಸಿಯಾದವನು ತಾನು ಯೋಗಿಯೋ ಅಥವಾ ಭೋಗಿಯೋ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.  

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿ-ಪಿಪೀಲಿಕಾಂತ-ತನುಷು ಪ್ರೋತಾ ಜಗತ್ಸಾಕ್ಷಿಣೇ |
ಸೈವಾಹಂ ನ ಚ ದೃಶ್ಯ ವಸ್ತ್ವಿತಿ ದೃಢಾಪ್ರಜ್ಞಾಪಿ ಯಸ್ಯಾಸ್ತಿಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

ಕಾಶಿಯಲ್ಲಿ ಭಗವತ್ಪಾದ ಶ್ರೀಶಂಕರರು ಚಾಂಡಾಲನಲ್ಲೂ ದೈವದರ್ಶನ ಮಾಡಿದೆ ಎಂದು ತಮ್ಮ ಮನೀಷಾ ಪಂಚಕದಲ್ಲಿ ಹೇಳಿದ್ದಾರೆ. ಯಾವುದೋ ಐಹಿಕ ಲಾಭದ ದುರುದ್ದೇಶದಿಂದ ಹೊರಗೆ ಯೋಗಿಯಂತೆ ದಿರಿಸು ಧರಿಸಿ ಒಳಗೆ ಭೋಗಿಯಾದರೆ ಅದು ಆತ್ಮವಂಚನೆಯ ಪರಮಾವಧಿಯಾಗುತ್ತದೆ. ಕಾವಿ ಬಟ್ಟೆಯನ್ನು ಧರಿಸಿದ ಕೆಲವರು ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಹೀರೋ ಆಗಿ ನಟಿಸಿದ್ದಾರಂತೆ, ಮಾಂಸಾಹಾರವನ್ನು ಭುಂಜಿಸಿದ್ದಾರಂತೆ, ನಟೀಮಣಿಯರೊಂದಿಗೆ ಡ್ಯಾನ್ಸ್ ಆಡಿದ್ದಾರಂತೆ; ಅವರ ಪಂಥ ಬೇರೆ ಇರಬಹುದು, ಆದರೆ ಇದು ಕಾವಿ ಬಟ್ಟೆಗೂ ಮತ್ತು ಹಿಂದೂ ಧರ್ಮಕ್ಕೂ ಮಾಡಿದ ಅಪಚಾರವೆಂಬುದು ಖಚಿತ. ಗೀತೆಯಲ್ಲಿ ಹೇಳಿದ ಚಾತುರ್ವರ್ಣಗಳಿಗೆ ಅತೀತವಾದ ಹಂತ ಯೋಗಿ/ಸಂನ್ಯಾಸಿಯದ್ದು. ‘ಯೋಗಿ’ಯೆನಿಸಿ ಗೊತ್ತಿದ್ದೂ ತಪ್ಪು ಮಾಡಿದರೆ ಅದಕ್ಕೆ ಪ್ರಾಯಶ್ಚಿತ್ತವೂ ಅದೇ ಪ್ರಮಾಣದಲ್ಲಿ ವಿಪರೀತ ಹೆಚ್ಚಿಗೆ ಇರುತ್ತದೆ ಎಂದು ಶಾಸ್ತ್ರ ಸಾರುತ್ತದೆ; ಕಾಲಘಟ್ಟದಲ್ಲಿ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ, ಅವರವರು ಮಾಡಿದ್ದನ್ನು ಅವರವರೇ ಉಣ್ಣಬೇಕಾಗುತ್ತದೆ.