ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 18, 2010

ಮೊದಲ ದಿನ ಮೌನ...ಅಳುವೇ ತುಟಿಗೆ ಬಂದಂತೆ


[minister or goon ?]

ಮೊದಲ ದಿನ ಮೌನ...ಅಳುವೇ ತುಟಿಗೆ ಬಂದಂತೆ


ಕೆಲವು ಘಟನೆಗಳು ಮನುಷ್ಯನಿಗೆ ಪಾಠಕಲಿಸುತ್ತವೆ. ಪ್ರತೀ ವ್ಯಕ್ತಿಗೂ ಅವರವರ ಅನುಭವಗಳು ಬದಲು. ಹುಟ್ಟಿನಿಂದ ಮುಪ್ಪಿನವರೆಗೆ ಅವರೆಲ್ಲರ ಕಥೆಗಳನ್ನು ಕೇಳಿದರೆ ಒಂದೊಂದೂ ರೋಚಕ. ನನಗೊಬ್ಬರು ಮುದಿವಯಸ್ಸಿನ ನಿವೃತ್ತ ಪೋಲೀಸ್ ಎಸ್. ಐ. ಸಿಕ್ಕಿದ್ದರು. ಅವರಿಗೂ ಈಗೀಗ ಪುಸ್ತಕಗಳ ಗೀಳು! ಪರಸ್ಪರ ಪರಿಚಯವಿನಿಮಯ ವಾಗಿ ಕೆಲದಿನಗಳ ಮೇಲೆ

" ಮಿಸ್ಟರ್ ಭಟ್ ನಿಮ್ಮಲ್ಲಿ ಏನೆಲ್ಲಾ ತುಂಬಿದೆಯಲ್ರೀ, ನನಗೆ ನೀವು ಪರಿಚಯವಾದ್ದು ಬಾಳಾ ಸಂತೋಷವಾಯ್ತು. ಅದ್ರೂ ಒಂದು ಅನುಮಾನ ನಮ್ಮಂತಾ ಮುದುಕರ ಜೊತೆ ನೀವು ಬೆರೆಯಲು ಮನಸ್ಸು ಮಾಡಬೇಕಲ್ಲ. ನಾವೆಲ್ಲಾ ಹಳೆಯ ಕಥೆಗಳನ್ನೇ ಹೇಳಿಕೊಳ್ಳುತ್ತಿರುವವರು " ಎಂದರು.

ನಾನು ಹೇಳಿದೆ " ನೋಡಿ ಸ್ವಾಮೀ, ಮುದುಕರು, ಹುಡುಗರು, ಮಕ್ಕಳು ಎಂಬ ಭೇದಭಾವವಿಲ್ಲ, ಅವರವರ ವಯಸ್ಸಿಗೆ ಅನುಗುಣವಾಗಿ ಸ್ಪ್ರಿಂಗ್ ಥರ ಅಡ್ಜಸ್ಟ್ ಮಾಡಿಕೊಳ್ಳಲು ನಾನು ತಯಾರಾಗಿಬಿಟ್ಟಿದ್ದೇನೆ. ಹೀಗಾಗಿ ಯಾರೊಂದಿಗಾದ್ರೂ ಹೊಂದಿಕೊಳ್ಳಬಲ್ಲೆ "

" ನಿಮಗೆ ಕಾರಂತ್ರ ಬಗ್ಗೆ ಗೊತ್ತಾ ? " --ನನಗೆ ಪ್ರಶ್ನೆ ಹಾಕಿದರು.

" ಏನೋ ಅಲ್ಪಸ್ವಲ್ಪ, ಅವರ ಕೆಲವು ಕೃತಿಗಳನ್ನು ಓದಿದ್ದೇನೆ "

" ಅಲ್ಲಾರೀ ಆ ಪುಣ್ಯಾತ್ಮ ಬರ್ದಿರೋ ’ಅಪೂರ್ವ ಪಶ್ಚಿಮ’ ಓದ್ತಾ ಇದೀನಿ ಏನ್ ಬರೀತಾರ್ರೀ ಅಬ್ಬಬ್ಬ ನಮ್ಗೆ ಮೊದ್ಲೆಲ್ಲ ಇದು ಗೊತ್ತೇ ಇರ್ಲಿಲ್ಲ "--ಕಾರಂತರ ಪ್ರವಾಸ ಕಥನವೊಂದರ ಬಗ್ಗೆ ಹೇಳಿದರು.

ಹೀಗೇ ಮಾತು ಬೆಳೆಯುತ್ತ ಹೋದಂತೇ ಒಮ್ಮೆ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತಾ ದುಃಖ ಉಮ್ಮಳಿಸಿ ಬಂದು ಕಣ್ಣಿಂದ ಎರಡು ಹನಿ ಉದುರಿದ್ದು ಕಾಣಿಸಿತು.

" ಏನ್ ಸರ್ ಇಷ್ಟೆಲ್ಲಾ ಇಮೋಶನಲ್ ಆಗಿಬಿಟ್ಟರೆ ಹೇಗೆ ? "

" ಇಲ್ಲಾ ಭಟ್ರೇ ನಮ್ಗೆ ಪ್ರಾಯ್ದಲ್ಲಿ ಅಧಿಕಾರ ಇರೋವಾಗ ನಾವು ಮಾಡೋ ತಪ್ಪುಗಳು ತಿಳೀತಾ ಇರ್ಲಿಲ್ಲ, ಆ ತಪುಗಳನ್ನೇ ಸರಿ ಎಂದು ವಾದಿಸೋ ಬಿಸಿ ರಕ್ತ ನಮ್ದಾಗಿತ್ತು. ಇವತ್ತು ಆ ದಿನಗಳೆಲ್ಲ ಕಳೆದುಹೋದವು. ಕಳೆದ ದಿನಗಳಲ್ಲಿ ಮಾಡಿದ ಪಾಪ-ಪುಣ್ಯಗಳ ಲೆಕ್ಕಾಚಾರವನ್ನು ನಡೆಸಿದರೆ ನಮ್ಮ ವೃತ್ತಿಯಲ್ಲಿ ಹಲವೊಮ್ಮೆ ನಾವು ಅನ್ಯಾಯವಾಗಿ ಏನೇನೋ ಮಾಡಿಬಿಡುತ್ತೇವೆ. ಎಷ್ಟೋ ಜನರ ಶಾಪಗಳನ್ನು ನಾವು ಪರೋಕ್ಷ ಪಡೀಬೇಕಾಗತ್ತೆ. ಇಂತಹ ಮೌಲ್ಯಯುತ ಪುಸ್ತಕಗಳು ಮೊದಲೇ ಸಿಕ್ಕಿದ್ದರೆ ನಾವು ಬೇರೇ ರೀತಿಯಲ್ಲೇ ಬದುಕುತ್ತಿದ್ದೆವು. ಈಗ ಅನ್ನಿಸ್ತಿದೆ ನಾವೆಲ್ಲಾ ತಿನ್ನಲಿಕ್ಕಾಗಿ ಬದುಕಿದೆವು ಬದುಕಲಿಕ್ಕಾಗಿ ತಿನ್ನಲಿಲ್ಲ "

ಭಗವದ್ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸುವಂತೇ ನನಗೆ ಅವರು ಹೇಳುತ್ತಲೇ ಇದ್ದರು. ಅವರು ಯಾರಲ್ಲೂ ಹೇಳಿಕೊಳ್ಳಲಾರದ ಮನದ ಎಲ್ಲಾ ತುಮುಲಗಳನ್ನೂ ಹೇಳಿಕೊಂಡು ಮನ ಬಹಳ ಹಗುರವಾಯಿತು ಎಂದು ಸಂತಸ ಪಟ್ಟರು! ನಾನು ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದೆ. ಅದನ್ನು ಚಿಕ್ಕಮಕ್ಕಳಂತೇ ಮರುಕ್ಷಣವೇ ಇಂದಿನಿಂದಲೇ ಮಾಡುವುದಾಗಿ ಒಪ್ಪಿಕೊಂಡರು.

ಹೀಗೇ ಬದುಕಿನಲ್ಲಿ ಅಧಿಕಾರ, ಯೌವ್ವನ, ಹಣ ಇವೆಲ್ಲಾ ಇರುವಾಗ ಆಗಸದಲ್ಲಿ ಮೋಡಗಳು ಮುಸುಕಿದಂತೇ ನಮ್ಮ ಮನಸ್ಸಿಗೆ ದರ್ಪ, ಗತ್ತು, ಲೋಭ, ಕೋಪ ಇಷ್ಟೇ ಏಕೆ ಅರಿ ಷಡ್ವರ್ಗಗಳು ಮುಕುರಿಕೊಂಡುಬಿಡುತ್ತವೆ. ಈ ಮೋಡಗಳ ಮಬ್ಬಿನಲ್ಲಿ ನಮಗೆ ನಾವ್ಯಾರು ಎಂಬುದೇ ಮರೆತುಹೋಗುತ್ತದೆ. ನಾವು ನಡೆದದ್ದೇ ದಾರಿ, ನಾವು ಹೇಳಿದ್ದೇ ನೀತಿ, ನಾವು ಚಲಾಯಿಸಿದ್ದೇ ಹಕ್ಕು ಎಂಬ ಸರ್ವಾಧಿಕಾರೀ ಧೋರಣೆ ನಮ್ಮಲ್ಲಿ ಮನೆಮಾಡಿ ಕುಳಿತುಬಿಟ್ಟಿರುತ್ತದೆ. ಯಾರೇ ಹೇಳಿದರೂ ಅವರ ಮಾತನ್ನು ಚೂರೂ ಲಕ್ಷ್ಯಕ್ಕೆ ತೆಗೆದುಕೊಳ್ಳದವರು ನಾವಾಗಿರುತ್ತೇವೆ. " ಏ ಹೋಗೋ ಅವನ್ಯಾರೋ ವೇದಾಂತಿ ಅವನ್ಮಾತೆಲ್ಲಾ ಯಾರು ಕೇಳ್ತಾರೆ ? " ಎನ್ನುವ ಮಟ್ಟದಲ್ಲಿನಾವಿರುತ್ತೇವೆ. ಸರಿಯಾಗಿರುವ ಕೆಲವರ ನಡತೆಯಲ್ಲೂ ಸರಿಯಿಲ್ಲ ಎಂದು ಖಂಡಿಸುವ ಜನ ನಾವಾಗಿರುತ್ತೇವೆ. ಇದರಲ್ಲಿ ಗೆದ್ದಾಗ ನಮಗೊಂದು ರಕ್ಕಸನಗೆ ಬರುತ್ತದೆ. ಬೃಹದಾಕಾರಕ್ಕೆ ಬಾಯಗಲಿಸಿ ಗಹಗಹಿಸಿ ನಗುತ್ತೇವೆ. ಆ ನಗುವಿನ ಹಿಂದೇ ನಮ್ಮ ಅಧಃಪತನವೂ ನೆಲೆಸಿರುತ್ತದೆ! ಆದರೆ ನಮಗದರ ಅರಿವಿರುವುದಿಲ್ಲ ! ಯಾವ ಕಾರಣಕ್ಕೆ ನಾವು ಜೋರಾಗಿ ನಕ್ಕಿದ್ದೆವೋ ಅದೇ ಕಾರಣಕ್ಕೆ ನಾವು ಇನ್ನೂ ಜೋರಾಗಿ ಅಳುವ ಸಮಯ ಸನ್ನಿಹಿತವಾಗುತ್ತದೆ.

|| ಸುಖಸ್ಯಾ ನಂತರಂ ದುಃಖಂ || ಈ ಜೀವನದ ಪ್ರತೀ ಹಂತದಲ್ಲೂ ಏಳು ಬೀಳುಗಳು ಏರಿಳಿತದ ರಸ್ತೆಗಳಂತೆ ಸದಾ ಇರುತ್ತವೆ! ಆದರೆ ನಮಗೆ ಇದರ ಪರಿವೆಯೇ ಇಲ್ಲದೇ ನಾವು ಬರೇ ಸುಖವನ್ನೂ ಬರೇ ಆನಂದವನ್ನೂ ಬಯಸುತ್ತಿರುತ್ತೇವೆ. ಬರೇ ಸುಖವಿದ್ದರೆ ಕಷ್ಟವೇನೆಂದೂ ತಿಳಿಯುವುದಿಲ್ಲ, ಹಾಗಿರುವಾಗ ಅಲ್ಲಿ ಅನುಭವಿಸುವ ಸುಖ ವಿಶೇಷವಾಗೇನೂ ಕಾಣಿಸುವುದಿಲ್ಲ. ಕಾರು ಇಟ್ಟುಕೊಂಡವನು ಆರ್ಥಿಕವಾಗಿ ಸೋತು ಬೈಕ್ ನಲ್ಲಿ ಓಡಾಡುವಾಗ ಅವನಿಗೆ ಕಾರಲ್ಲಿ ತಿರುಗಿದ ನೆನಪಾಗಿ ಅಳುಬರುತ್ತದೆ. ರೇಮಂಡ್ಸ್ ಸೂಟ್ ನಲ್ಲಿ ಮೆರೆದವನು ಸಾದಾ ಪ್ಯಾಂಟು ಧರಿಸಬೇಕಾಗಿ ಬಂದಾಗ ಅವನಿಗೆ ವ್ಯಥೆಯಾಗುತ್ತದೆ. ಮಂತ್ರಿಯಾಗಿದ್ದು ಮೆರೆದು ನಂತರದ ಚುನಾವಣೆಯಲ್ಲಿ ಬಿದ್ದು ಮನೆಸೇರಿದಾಗ ಹಾವಿಗೆ ಹಲ್ಲುಕಿತ್ತ ಅನುಭವವಾಗುತ್ತದೆ! ಅತೀ ಬಡವನಿಗೆ ಪ್ಲೇವಿನ್ ಥರದ ಲಾಟರಿ ಹೊಡೆದಾದ ಆತ ತಿಂಗಳಬೆಳಕೂ ಮೈಗೆ ಶಾಖತರುತ್ತದೆ ಎಂದು ಕೊಡೆಹಿಡಿದು ಓಡಾಡುತ್ತಾನೆ! ತೀರಾ ನಿಕೃಷ್ಟ ಸ್ಥಿತಿಯಲ್ಲಿದ್ದವರ ಮಗನೋ ಮಗಳೋ ಎಲ್ಲೋ ಒಂದು ಸಾಫ್ಟ್ ವೇರ್ ನೌಕರಿಗೆ ಸೇರಿಬಿಟ್ಟರೆ ತಮ್ಮ ಮುಂದೆ ಯಾರೂ ಇಲ್ಲ ಅನ್ನುವ ರೀತಿಯಲ್ಲಿ ಬದುಕತೊಡಗುತ್ತಾರೆ! ಇವೆಲ್ಲಾ ನಾವು ನೋಡುವ ಹಲವು ಜೀವನಕ್ರಮಗಳು.

ಏನಿರಲಿ ಬಿಡಲಿ ಜೀವನ ತನಗೆ ದೈವೀದತ್ತವೆಂದು ತಿಳಿದು ಪ್ರಾಮಾಣಿಕವಾಗಿ ದುಡಿದು ಇದ್ದುದರಲ್ಲಿ ತೃಪ್ತಿ ಪಟ್ಟು ಜೀವಿಸಿದರೆ ಅಲ್ಲಿ ಏರಿಳಿತಗಳು ಕಮ್ಮಿ ಇರುತ್ತವೆ. ಹೀಗೆ ಮಾಡಲು ಮನಸ್ಸಿಗೆ ಸಂಸ್ಕಾರ ಬೇಕು. ಮನಸ್ಸಿಗೆ ಸದುದ್ದೇಶ ಬೇಕು. ಒಳ್ಳೆಯ ಸಂಸ್ಕಾರವಿಲ್ಲದ ಮನಸ್ಸು ಹುಳುಬಿದ್ದ ಹಣ್ಣಿನಂತಿರುತ್ತದೆ. ಸಂಸ್ಕಾರಗೊಂಡ ಮನಸ್ಸು ಪುಟಕೊಟ್ಟ ಬಂಗಾರದಂತೆ ಹೊಳೆಯುತ್ತಿರುತ್ತದೆ!

ಮೊನ್ನೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ---
ಕಾರ್ಮಿಕ ಸಚಿವ ಬಚ್ಚೇ ಗೌಡರು ಅದ್ಯಾವುದೋ ಉದ್ಯಮಿ ಭರತ್ ಗೆ ಕಪಾಳಮೋಕ್ಷ ಕರುಣಿಸಿದ್ದಾರೆ! ಆತ ಮಾಡಿದ ತಪ್ಪೇನು ಎಂದು ಕೇಳಿದರೆ ಆತ ಮಂತ್ರಿಯಾದ ತನ್ನ ವಾಹನವನ್ನು ಹಿಂದಕ್ಕೆ ಹಾಕಿದ ಅದಕ್ಕೇ ಹಾಗೆಮಾಡಿದೆ ಅಂದಿದ್ದಾರೆ. ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದೆಲ್ಲಾ ಪ್ರತ್ಯಕ್ಷದರ್ಶಿಗಳು ಹೇಳಿದ್ದನ್ನು ಮಾಧ್ಯಮಗಳು ವರದಿಮಾಡಿವೆ. ಅವರು ಎಲ್ಲಿಗೆ ಹೋಗಿದ್ದರು ? ಹಾಸನಜಿಲ್ಲೆಗೆ ಸ್ವಾತಂತ್ರ್ಯೋತ್ಸವಕ್ಕಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಭಾಗವಹಿಸಿದ್ದರು. ಅಲ್ಲಿ ಅಂದಿನ ಸಭೆಗಳಲ್ಲಿ ಹುತಾತ್ಮರ ಬಗ್ಗೆ, ಮಹಾತ್ಮ ಗಾಂಧೀಜಿ ಬಗ್ಗೆ ಬರೆದುಕೊಟ್ಟ ಭಾಷಣವನ್ನು ತಪ್ಪುತಪ್ಪಾಗಿ ಅಂತೂ ಮಾಡಿಮುಗಿಸುತ್ತಾರೆ! ಗಾಂಧೀಜಿ ಹೇಳಿದರು -ತನ್ನ ಒಂದು ಕೆನ್ನೆಗೆ ಹೊಡೆದೆಯಲ್ಲಪ್ಪಾ ಇನ್ನೊಂದು ಕೆನ್ನೆಗೂ ಹೊಡಿ ಎಂದು. ಸಚಿವರಿಗೆ ಅದು ಅರ್ಥವಾಗಿದ್ದು " ಒಂದೇ ಕೆನ್ನೆಗೆ ಹೊಡೆಯಬೇಡಪ್ಪಾ ಇನ್ನೊಂದು ಕೆನ್ನೆಗೂ ಹೊಡಿ" ಎಂದು! ಪಾಪ ಅವರೇನು ಮಾಡುತ್ತಾರೆ? ಬರುವಾಗ ಪ್ರಾಯೋಗಿಕವಾಗಿ ಅದನ್ನು ಅಳವಡಿಸಿಕೊಂಡಿದ್ದಾರೆ;ಮಹಾತ್ಮರನ್ನು ಅನುಸರಿಸುವ ದಿನವಲ್ಲವೇ ಅದಕ್ಕೆ!

ಈ ಕಥೆ ನಿಮಗೆ ಸಂಸ್ಕಾರವನ್ನು ತೋರಿಸುತ್ತದೆ. ನಮ್ಮ ಆಸ್ಥಾನದಲ್ಲಿ ಈಗ ನರ್ಸಕ್ಕನ ಪ್ರೀತಿಯ ರೇಣುಕಾಚಾರ್ಯರಿದ್ದಾರೆ, "ಇರ್ಲಿಬಿಡಿ" ಎಂದು ಲಂಚಪಡೆದು ಗೆದ್ದ ಸಂಪಂಗಿಯಿದ್ದಾರೆ, ಸ್ನೇಹಿತನ ಹೆಂಡತಿಯನ್ನು ಕಾಮಿಸಲು ಹೋದ ಹಾಲಪ್ಪ ಇದ್ದಾರೆ, ಇನ್ನೂ ಕೆಲವು ಕಾಳಪ್ಪ ಗೂಳಪ್ಪ ಎಲ್ಲಾ ಇದ್ದಾರೆ. ಎಲ್ಲೋ ಕಕ್ಕಸು -ಬಚ್ಚಲುಮನೆ ತೊಳ್ಕೊಂಡು ಇದ್ದ ಇವರನ್ನೆಲ್ಲಾ ಆರಿಸಿ ಕಳುಹಿಸಿದ ನಮಗೆ ಇರುವ ಸಂಸ್ಕಾರ ಎಂಥದು ? --ಇದನ್ನು ನಾವು ಆಲೋಚಿಸಬೇಕು! ಕಲ್ಚರ್ ಬಿಗಿನ್ಸ್ ಎಟ್ ದಿ ರೂಟ್ !

ಇನ್ನೊಂದು ಕಥೆ ನೋಡಿ---
ಇಪ್ಪತ್ತು ಕೋಟಿ ಹಣವನ್ನು ಮಾಯಾಜಾಲದಿಂದ ಕೊಟ್ಟು ರಾಜ್ ಕುಮಾರ್ ರನ್ನು ಬಿಡಿಸಿದ ನಮ್ಮ ಹಿಂದಿನ ಎಸ್.ಎಮ್.ಕೃಷ್ಣ ನಡೆಸಿದ ಸರಕಾರ ಪ್ರಾಮಾಣಿಕರೂ, ನಿಗರ್ವಿಯೂ, ಸಾತ್ವಿಕರೂ, ಸದಭಿರುಚಿಯ ಮಾಜಿಮಂತ್ರಿಯೂ, ನಿಷ್ಠಾವಂತ ರಾಜಕಾರಣಿಯೂ ಆದ ಎಚ್.ನಾಗಪ್ಪನವರನ್ನು ವೀರಪ್ಪನ್ ನಿಂದ ಬಿಡಿಸಲಿಲ್ಲ! ಇಲ್ಲಿ ಪಾರ್ವತಮ್ಮ ಗಲಾಟೆಮಾಡಿದರು, ಮುಖ್ಯಮಂತ್ರಿಯ ಮನೆಗೇ ನುಗ್ಗಿಬಿಟ್ಟರು, ಅಭಿಮಾನಿಗಳು ಎನಿಸಿದ ಜನ ದೊಂಬಿ ಶುರುಮಾಡಿದರು, ರಾಜಕುಮಾರ್ ಅದೃಷ್ಟವೂ ಚೆನ್ನಾಗಿತ್ತು-ಈ ಎಲ್ಲಾ ಫ್ಯಾಕ್ಟ್ಸ್ ಸೇರಿ ಅವರ ಬಿಡುಗಡೆಯಾಯಿತು. ಅಧಿಕಾರದಲ್ಲಿಲ್ಲದ ಮಾಜಿಮಂತ್ರಿಯೊಬ್ಬರ ಹೆಂಡತಿಯಾಗಿ, ಅಸಹಾಯಳಾಗಿ ಕಂಡ ಕಂಡ ಮಠಮಾನ್ಯಗಳ ಮೊರೆ ಹೊಕ್ಕು ಪ್ರಾರ್ಥಿಸಿ ತನ್ನ ಗಂಡನ ಬಿಡಿಸುವಿಕೆಗಾಗಿ ಹಂಬಲಿಸಿದವರು ಶ್ರೀಮತಿ ಪರಿಮಳಾ ನಾಗಪ್ಪ. ಆದರೆ ಇವರಿಗೆ ಸಪ್ಪೋರ್ಟ್ ಸಿಗಲಿಲ್ಲ!--ಮಂತ್ರಿಯಾಗಿದ್ದಾಗ ಮನೆಯಲ್ಲಿ ಗಂಟು ಕಟ್ಟಿರದಿದ್ದಕಾರಣ ಹಣವೇ ಇಲ್ಲದೇ ವೀರಪ್ಪನ್ ಗೆ ಎಲ್ಲಿಂದ ಕೊಡುವುದು? ಅಲ್ಲವೇ ? ಹತರಾದ ದಿ| ನಾಗಪ್ಪ ಪ್ರತೀ ದಿನ ಬಹಳ ಹೊತ್ತು ಶಿವಪಂಚಾಕ್ಷರೀ ಮಂತ್ರವನ್ನು ಬರೆಯುತ್ತಿದ್ದರಂತೆ! ಅನ್ಯಾಹಾರಿಗಳಲ್ಲದ ಅವರಿಗೆ ವೀರಪ್ಪನ್ ಬೇಯಿಸುವ ಮಾಂಸದಡುಗೆಗಳು ಬೇಡವಾಗಿದ್ದವು ಅದೂ ಅಲ್ಲದೇ ಬಹಳ ಸಂಸ್ಕಾರಯುತರಾಗಿದ್ದ ಅವರ ದಿನಚರಿಗೆ ತುಂಬಾ ಹೊಡೆತ ಬಿದ್ದಿತ್ತು. ಸಂಚಿತಕರ್ಮ ನೆಗೆಟಿವ್ ಜಾಸ್ತಿ ಆಗಿರುವಾಗ ಯಾರೂ ಏನೂ ಮಾಡಲೂ ಆಗಲಿಲ್ಲ, ಕಾಳಸಂತೆಯ ಹಣ ಒದಗಿ ಬರಲಿಲ್ಲ ಪರಿಣಾಮ ಕಾಣುತ್ತಾ ಕಾಣುತ್ತಾ ಮುತ್ಸದ್ಧಿಯೊಬ್ಬನನ್ನು ಈ ರಾಜ್ಯ ಕಳೆದುಕೊಂಡಿತು.
ಇದು ಕಲಿಯುಗ!

ಇಷ್ಟೆಲ್ಲಾ ಬರೆದದ್ದು ಕೇವಲ ನಮ್ಮ ಸಂಸ್ಕೃತಿ ಸರಿಯಿರಬೇಕೆಂಬ ಕಾರಣಕ್ಕೆ! ನಿನ್ನೆ ರಾತ್ರಿ ಕುಡುಕನೊಬ್ಬ ಸಿಕ್ಕ. ಆತ ಹಗಲಲ್ಲಿ ಯಾವುದೋ ಬಟ್ಟೆ ಕಾರ್ಖಾನೆಯಲ್ಲಿ ಕಾರ್ಮಿಕ. ಸಂಬಳ ಬಂದಿದ್ದರಲ್ಲಿ ಎಷ್ಟು ಕುಡಿತಕ್ಕೆ ಎಂದು ಗೊತ್ತಿಲ್ಲ. ನಾನು ಕುಡಿಯಲು ನೀರಿನ ಕ್ಯಾನ್ ಒಂದನ್ನು ತರಲು ಹೋಗಿದ್ದೆ. ಆತ ಬಹಳ ಮಾತಾಡಿಸಿದ, ಅನುಮಾನ ಬಂತು ನನಗೆ! ಆದ್ರೂ ಅನಿವಾರ್ಯವಾಗಿ ಮಾತನಾಡಿದೆ. ಪ್ರತೀ ಮಾತಿಗೆ "ಸರ್ ಒಂದೇಳ್ತೀನಿ ಬೇಜಾರ್ಮಾಡ್ಕೋಬೇಡಿ " ಎನ್ನುತ್ತಿದ್ದ. ನಾನು ಆದಷ್ಟೂ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದೆ. " ಈ ರೀತಿ ಜಗತ್ತೆಲ್ಲಾ ಮಳೆ ಬೀಳ್ತೈತೆ ಇಲ್ಲಿ ಕರೆಂಟಿಲ್ಲಾ ಅಂದ್ರೆ ನನ್ಮಕ್ಳು ರಾಜ್ಕಾರ್ಣಿಗ್ಳು ಏನ್ಮಾಡ್ತವ್ರೆ ? " ಅಂತಿದ್ದ, ಬಾಯಿತಪ್ಪಿ "ಈ ಸಲ ಮಳೆ ಸರಿಯಾಗಿ ಆಗ್ತಾ ಇಲ್ಲಪ್ಪ " ಅಂದ್ಬಿಟ್ಟೆ ! ತಕಳಿ ಜೋರಾಗ್ಬಿಡ್ತು ! "ರೀ ನೀವೇನ್ರಿ ನೀವು ನಿಮಗ್ ಮಾತ್ರ ಮಳೆ ಇಲ್ವಾ ನೀವೇ ಫಸ್ಟು ಹಿಂಗೇಳ್ತಾಯಿರೋದು ಜಗತ್ತೆಲ್ಲಾ ಮಳೆ ಬೀಳ್ತೈತೆ " ಅಬ್ಬರಿಸುತ್ತಿದ್ದ! ನನಗೆ ಅಲ್ಲಿಗೆ ಸಾಕಾಯಿತು- ಇದು ಪಲಾಯನವಾದವಲ್ಲ. ಆತನ ಮನಸ್ಸಿಗೆ ಎಣ್ಣೆ ಮುಸುಕಿದೆ! ಆ ಘಳಿಗೆಯಲ್ಲಿ ಮೊದಲೇ ಸಂಸ್ಕಾರರಹಿತನಾದ ಆತ ಏನುಮಾಡಲೂ ಹೇಸುವವನಲ್ಲ! ಬರಿದೇ ನನ್ನ ಪೌರುಷವನ್ನು ತೋರಿಸುತ್ತೇನೆ ಎನ್ನುವ ಬದಲು ಅಂಥವರಿಂದ ದೂರವಿದ್ದರೇ ಒಳ್ಳೆಯದು. ಅಂಥವರನ್ನು ಸರಿಯಿದ್ದಾಗ [ಎಣ್ಣೆಹಾಕಿರದಿದ್ದಾಗ] ನಾನು ತಿದ್ದಬಲ್ಲೆ ಆದರೆ ಈ ಸನ್ನಿವೇಶದಲ್ಲಿ ಅಲ್ಲ. ಅದಕ್ಕೇ ಅಲ್ಲಿಂದ ತಕ್ಷಣಕ್ಕೆ ನಾನು ಹೊರಟೆ.

ಸಂಸ್ಕಾರ ರಹಿತ ಮನುಷ್ಯರು ಬದುಕಿದ್ದರೂ ಸತ್ತಂತೆಯೇ ! ರವಿಗೌಡನೆಂಬ ಸುಮಾರು ೨೬ ರ ವಯಸ್ಸಿನ ವ್ಯಕ್ತಿಯೊಬ್ಬ ಆಟೋ ಓಡಿಸುತ್ತಿದ್ದ. ಆತ ಆಗಾಗ ಮಿತ್ರರೊಬ್ಬರ ಕಾಂಡಿಮೆಂಟ್ಸ್ ಅಂಗಡಿಗೆ ಬರುತ್ತಿದ್ದ. ಒಂದಿನ ಸಿಗರೇಟು ಸಾಲವಾಗಿ ಕೊಡದಿದ್ದುದಕ್ಕೆ ಹೊಯ್ದ ಎಣ್ಣೆಯ ಅಮಲಿನಲ್ಲಿ ಅವರ ಶೋ ಕೇಸ್ ಎಲ್ಲಾ ಒಡೆದು ಪುಡಿಮಾಡಿದ. ಬಡವರಾಗಿದ್ದ ಅವರು ಬದುಕಿಗಾಗಿ ಸಾಲಮಾಡಿ ನಡೆಸುತ್ತಿದ್ದ ಆ ಅಂಗಡಿ ಮುಂಗಟ್ಟು ವಿನಾಕಾರಣ ಹಾಳಾಗಿದ್ದಕ್ಕೆ ಬಹಳೇ ಬೇಸತ್ತರು. ನಾನೊಂದು ಸಲಹೆ ನೀಡಿದೆ--ನೀವು ಇನ್ನುಮೇಲೆ ಅಂಗಡಿಯಲ್ಲಿ ಬೀಡಿ-ಸಿಗರೇಟು ಇಡಲೇಬೇಡಿ, ಅದಕ್ಕೆ ಬರುವುದೇ ಬೇರೆ ತರಗತಿಯ ಜನ! ಮತ್ತು ರವಿಗೌಡ ಬಹಳ ದಿನ ಬದುಕುವುದಿಲ್ಲ ಎಂತಲೂ ನನ್ನ ಬಾಯಲ್ಲಿ ಸಹಜವಾಗಿ ಉದ್ಗಾರವಾಗಿಬಿಟ್ಟಿತ್ತು. ಮುಂದೆ ಅವರು ಅದುಹೇಗೋ ಸರಿಪಡಿಸಿಕೊಂಡರು, ನನ್ನ ಸಲಹೆ ಅಳವಡಿಸಿಕೊಂಡರು. ವರ್ಷಪೂರ್ತಿಯಾಗಿತ್ತೋ ಇಲ್ಲವೋ ರವಿಗೌಡ ತಾನೂ ಪುಡಿರೌಡಿಯಾಗಿದ್ದು ರೌಡಿಗಳಿಂದ ಕೊಲ್ಲಲ್ಪಟ್ಟ. ಆತನ ಹೆಂಡತಿ-ಮಗುವಿನ ಸ್ಥಿತಿ ಗೋಳಾಗಿದೆ.

ಈಗ ಇನ್ನೊಂದು ಸಣ್ಣ ಮಾತು: ನಾವು ತಿನ್ನುವ ಆಹಾರಕ್ಕೂ ನಮ್ಮ ಮನಸ್ಸಿಗೂ ನೇರ ಹೊಂದಾಣಿಕೆಯಿದೆ. ಆಹಾರದಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಈ ಮೂರು ಥರದ ಆಹಾರಗಳು ನಮಗೆ ಸಿಗುತ್ತವೆ. ಸಾತ್ವಿಕ ಆಹಾರ ತಿನ್ನುವವರು ಸಾತ್ವಿಕರಾಗಿಯೂ, ರಾಜಸ ಆಹಾರ ತಿನ್ನುವವರು ರಾಜಸಮನೋವೃತ್ತಿಯವರಾಗಿಯೂ ಮತ್ತು ತಾಮಸ ಆಹಾರ ತಿನ್ನುವವರು ತಾಮಸ ಅಥವಾ ನೀಚ ಮನೋವೃತ್ತಿಯವರಾಗಿಯೂ ಬೆಳೆಯುತ್ತಾರೆ! ಹಣ್ಣು-ಹಂಪಲು-ತರಕಾರಿಗಳನ್ನು ತೀರಾ ಅತಿಯಾದ ಉಪ್ಪು-ಖಾರ-ಸಿಹಿ-ಹುಳಿ ಬಳಸದೇ ತಿಂದರೆ ಅದು ಸಾತ್ವಿಕ, ಕೆಲವು ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ಸೇರಿದಂತೆ ಶಾಖಾಹಾರ, ಮಾಂಸಾಹಾರ ಅಧಿಕ ಉಪ್ಪು-ಖಾರ-ಸಿಹಿ-ಹುಳಿ ಇವನ್ನು ಆಹಾರಕ್ರಮದಲ್ಲಿ ಅಳವಡಿಸಿಕೊಂಡವರು ರಾಜಸರಾಗುತ್ತಾರೆ. ಎರಡನೆಯ ಎಲ್ಲವನ್ನೂ ಅತೀ ತಂಪು, ಅತೀ ಬಿಸಿ ಅಥವಾ ಹಳಸಿದ್ದು, ಘಾಟು ಹೊಂದಿರುವಂಥದ್ದು, ತಯಾರಿಸಿ ದಿವಸಗಳೇ ಆಗಿರುವಂಥದ್ದು ಇವನ್ನೆಲ್ಲಾ ತಿನ್ನುವವರು ತಾಮಸಾಹಾರಿಗಳು. ಆಯಾಯ ಆಹಾರಗಳಂತೇ ನಮ್ಮ ಮನಸ್ಸೂ ಕೂಡ, ಉತ್ತಮ, ಮಧ್ಯಮ ಮತ್ತು ಅಧಮ ಗುಣ-ಸ್ವಭಾವ ಸಂಸ್ಕಾರಗಳನ್ನು ಪಡೆಯುತ್ತದೆ. ಈಗ ನೀವೇ ನಿರ್ಧರಿಸಿ ನೀವು ಯಾವ ಆಹಾರದವರೆಂದು.

ಒಮ್ಮೆ ಬೆಂಗಳೂರಲ್ಲಿ ನನಗಿನ್ನೂ ಸ್ಟಾರ್ ಹೋಟೆಲ್ ಗಳಲ್ಲಿ ಊಟಮಾಡಿ ಅಭ್ಯಾಸವಿರದ ಸಮಯ, ಆಗ ಒಂದು ಕಂಪನಿಯ ಸೆಮಿನಾರ್ ಇತ್ತು. ಸೆಮಿನಾರ್ ಮುಗಿದು ಎಲ್ಲರೂ ಡಿನ್ನರ್ ಗೆ ತೆರಳಿದೆವು. ಅಲ್ಲಿ ಅಂದಿಗೆ ಅವರು ರೆಡಿಮಾಡಿಸಿದ್ದು ಬರೇ ವೆಜಿಟೇರಿಯನ್ ಫುಡ್ ಮಾತ್ರ. ಎಲ್ಲರೂ ಬಫೆಗೆ ತೆರಳಿದೆವು. ನನ್ನ ಜೊತೆ ಕೆಲವು ವೃತ್ತಿನಿರತ ಗೆಳೆಯರಿದ್ದರು. ಅವರು ಅದೂ ಇದೂ ನನಗೆ ಬಡಿಸುತ್ತಾ ಪನ್ನೀರ್ ಮಸಾಲ ಬಡಿಸಿಬಿಟ್ಟರು! ನನಗೆ ಪನ್ನೀರ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅದನ್ನು ಸ್ಪೂನ್ ನಿಂದ ಪ್ರೆಸ್ ಮಾಡಿದಾಗ ಮಾಂಸದ ಉಂಡೆಯ ಥರ ಮೆತ್ತಮೆತ್ತಗೆ ಮೆತ್ತಮೆತ್ತಗೆ! ನನಗೆ ಅಸಹ್ಯವಾದರೂ ಇನ್ನೊಮ್ಮೆ ಅದನ್ನು ಪರೀಕ್ಷಿಸಿ ನೋಡೋಣ ಅಂತ ಪ್ರೆಸ್ ಮಾಡಿದರೆ ಪಕ್ಕದಲ್ಲಿ ಮಜಾ ತೆಗೆದುಕೊಳ್ಳುತ್ತಿದ್ದ ನನ್ನ ಸ್ನೆಹಿತರು ನಕ್ಕೂ ನಕ್ಕೂ ನನ್ನನ್ನು ಮಾನಸಿಕವಾಗಿ ಎಲ್ಲರ ಎದುರಿಗೆ ಹೈರಾಣಾಗುವಂತೆ ಮಾಡಿದ್ದರು. ಮೊದಲೇ ಸಂಕೋಚ ಪ್ರವೃತ್ತಿಯವನಾದ ನನಗೆ ಎಲ್ಲವನ್ನೂ ಬಿಸಾಕಿ ಅಲ್ಲಿಂದ ಕಾಲ್ಕಿತ್ತರೆ ಸಾಕಾಗಿತ್ತು! ಒಂಚೂರೂ ಮಾತನಾಡಲು ಆಗದ ಮನೋಸ್ಥಿತಿ ನನ್ನದಾಗಿತ್ತು. ಅದು ಯಾವುದೋ ನಾನ್ ವೆಜ್ ಅಂತ ಮನಸ್ಸು ತಿಳಿದುಬಿಟ್ಟಿತ್ತು. ಪನ್ನೀರಿನ ಬಿಳಿಯ ಬಣ್ಣ ಮಧ್ಯೆ ಕಾಣಿಸಿಕೊಂಡಾಗಲಂತೂ ಚರ್ಮ ಕಿತ್ತಾಗ ನಮಗೆ ಎಲುಬು ಕಾಣಿಸಿದ ಹಾಗಾಗಿ " ಥೂ ಇದೇನೋ ಇಸ್ಸೀ ಬೇಡಪ್ಪಾ ಶಿವಾ " ಎಂದು ಸ್ವಗತ ಸಾರಿತ್ತು. ಅದು ಪನ್ನೀರ್ ಮಸಾಲ ಎಂಬುದು ಆಮೇಲೆ ತಿಳಿದಿದ್ದು. ಅಂದಿನ ನನ್ನ ಸ್ಥಿತಿ ಹೊಸದಾಗಿ ಗಂಡನ ಮನೆ ಸೇರಿದ ಹಳೆಯ ಕಾಲದ ಹೆಣ್ಣಿನ ಥರ ಇತ್ತು ಎಂದರೆ ತಪ್ಪಲ್ಲ! ಈ ಘಟನೆ ನೆನಪಾದಾಗ ನನಗೆ ನರಸಿಂಹ ಸ್ವಾಮಿಯವರ ’ ಮೊದಲ ದಿನ ಮೌನ ...ಅಳುವೇ ತುಟಿಗೆ ಬಂದಂತೆ ’ ಹಾಡು ಈ ಅರ್ಥದಲ್ಲಿ ಕಾಣಿಸುತ್ತದೆ!


ನೀವು ಯಾರೇ ಆಗಿರಿ, ನಿಮ್ಮಲ್ಲಿ ನನ್ನ ಪ್ರಾರ್ಥನೆ ಇಷ್ಟೆ-- ಸಹನೆ, ಸಹಿಷ್ಣುತೆ, ಸೌಜನ್ಯ, ಸೌಶೀಲ್ಯ ಇವನ್ನೆಲ್ಲಾ ಬೆಳೆಸಿಕೊಂಡು, ಕೆಟ್ಟಚಟಗಳಿಂದ ದೂರವಿದ್ದು, ಆದಷ್ಟೂ ಸಜ್ಜನರ ಸಹವಾಸದಲ್ಲಿರಿ. ಸತ್ ಸಂಸ್ಕಾರದಿಂದ ಸಿಗುವ ಫಲ ಬಹಳ ಉತ್ತಮವಾಗಿರುತ್ತದೆ.