ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 15, 2010

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು-ಭಾಗ ೨

[ಚಿತ್ರಕೃಪೆ : ಅಂತರ್ಜಾಲ ]

ಹಿಂದೂಸ್ಥಾನವು ಎಂದೂ ಮರೆಯದ

ಭಾರತ ರತ್ನವು ನೀನಾಗು-ಭಾಗ ೨



ಹಿಂದಿನವಾರ ವ್ಯಕ್ತಿತ್ವ ವಿಕಸನದ ಕೆಲವು ಟೆಸ್ಟ್ ಗಳ ಬಗೆಗೆ ತಿಳಿದುಕೊಂಡಿರಿ. ಈ ವಾರ ....

ವಿದ್ಯೆ-ಸಂಸ್ಕೃತಿ-ಸಂಸ್ಕಾರಗಳ ಕುರಿತು


ವಿದ್ಯೆ

ವ್ಯಕ್ತಿ ಯಾವುದಕ್ಕೆ ಸಂಬಂಧಿಸಿದ ವಿದ್ಯೆಯನ್ನು ಕಲಿತಿರುತ್ತಾನೋ ಅದನ್ನವಲಂಬಿಸಿ ವೃತ್ತಿಯನ್ನು ಆಯ್ದುಕೊಳ್ಳುವುದು ಸೂಕ್ತ. ಇದಕ್ಕೆ ಕೆಲವು ಅಪವಾದಗಳಿವೆ. ಡಿಗ್ರಿಯಿಂದ ಮೆಕಾನಿಕಲ್ ಎಂಜಿನೀಯರ್ ಆಗಿರುವ ವ್ಯಕ್ತಿ ಇಂದು ಸಾಫ್ಟ್ ವೇರ್ ಎಂಜಿನೀಯರ್ ಆಗಿ ಕೆಲಸಮಾಡುತ್ತಿರುವುದು. ಇದು ಸಾಧ್ಯವಲ್ಲ ಅಂತ ಅಲ್ಲ. ಡಿಗ್ರಿ ಎಂಬುದು ಒಂದು ತಳಹದಿ, ಅದರ ಮೇಲೆ ಯವುದೇ ವೃತ್ತಿಗೆ ಸಂಬಂಧಿಸಿದ ಹೆಚ್ಚಿನ ಉದ್ಯೋಗ ಸಂತುಲಿತ ತರಬೇತಿ [ job oriented course ]ಯನ್ನು ಪಡೆದುಕೊಂಡರೆ ಅವರು ಬೇರೆ ಬೇರೆ ರಂಗಕ್ಕೂ ಧಾವಿಸಬಹುದು.ಯಾವ ರಂಗದಲ್ಲಿ ತನಗೆ ಆಸಕ್ತಿ ಇದೆ ಎಂಬುದನ್ನು ವ್ಯಕ್ತಿಯ ಮನಸ್ಸು ಅಥವಾ ಅಂತರಂಗ ವ್ಯಕ್ತಿಗೆ ಹೇಳುತ್ತಿರುತ್ತದೆ.

ಉದಾಹರಣೆಗೆ ಕೆಲವರಿಗೆ ಗಣಿತ ಪುಸ್ತಕ ತೆರೆದರೆ ನಿದ್ದೆಬರುತ್ತದೆ, ಜೀವಶಾಸ್ತ್ರ ತುಂಬಾ ಖುಷಿಕೊಡುತ್ತದೆ, ಇನ್ನು ಕೆಲವರಿಗೆ ವಿಜ್ಞಾನವೆಂದರೆ ಮಾರುದೂರ-ಸಾಮಾಜಿಕ ವಿಜ್ಞಾನ ಪಾರವಾಗಿಲ್ಲ, ಕೆಲವರಿಗೆ ಉಳಿ-ಸುತ್ತಿಗೆ ಕೊಟ್ಟರೆ ಒಳ್ಳೇ ಕೆಲಸಮಾಡುತ್ತಾರೆ-ಶಾಲೆಗೆ ಕಳಿಸಿದರೆ ಅಲ್ಲಿ ನಿದ್ದೆಮಾಡಲು ಪ್ರಯತ್ನಿಸುತ್ತಾರೆ. ಕೆಲವರಿಗೆ ಆಟ ಅದರಲ್ಲೂ ಕ್ರಿಕೆಟ್ ತುಂಬಾ ಇಷ್ಟ ಓದುವುದು ಬೇಡ.ಇವೆಲ್ಲ ವೈರುಧ್ಯಗಳ ನಡುವೆಯೂ ವ್ಯಕ್ತಿಗೆ ಬಲವಂತವಾಗಿಯಾದರೂ ಸಾಮಾನ್ಯ ಜ್ಞಾನ ಬರುವವರೆಗೆ ತಕ್ಕಮಟ್ಟದ ಕಲಿಕೆ [ Foundation Education ] ಕೊಡಲೇಬೇಕು, ಇಲ್ಲವೆಂದರೆ ಅವರು ಅನಕ್ಷರಸ್ಥರಾಗಿ ಉಳಿದುಬಿಡುತ್ತಾರೆ. ಸಾಮಾನ್ಯವಾಗಿ ವ್ಯಕ್ತಿಗೆ ಅತೀ ಮುಖ್ಯ ಘಟ್ಟವೆಂದರೆ ಪ್ರೌಢಶಾಲೆಯನ್ನು ಮುಗಿಸಿ ಕಾಲೇಜಿಗೆ ಸೇರುವ ಸಮಯ, ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ನುರಿತ ಹಿತೈಷಿಗಳಿಂದ ಆಗಬೇಕು. ವ್ಯಕ್ತಿಗೆ ಎಲ್ಲವನ್ನೂ ವಿಷಯಗಳನ್ನೂ ತೆರೆದಿಟ್ಟು, ಎಲ್ಲವುಗಳಬಗೆಗೆ ಸ್ಥೂಲವಾಗಿ ಸೂಕ್ತ ಮಾಹಿತಿ ಒದಗಿಸಬೇಕು. ಹತ್ತಾರುಬಾರಿ ವಿಚಾರಿಸಲು ವ್ಯಕ್ತಿಗೆ ಕೆಲದಿನಗಳ ಸಮಯವನ್ನು ಕೊಡಬೇಕು. ನಂತರ ಆ ವ್ಯಕ್ತಿಯಿಂದ ಬಂದ ಉತ್ತರವನ್ನು ಮಾರ್ಮಿಕವಾಗಿ ವಿಶ್ಲೇಷಿಸಬೇಕು. ಹೀಗೆ ಸಾಕಷ್ಟು ಸಾವಧಾನವಾಗಿ ಇಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದೇ ವಯಸ್ಸಿಗೆ ವ್ಯಕ್ತಿ ಹದಿವಯಸ್ಸಿನಲ್ಲಿರುವುದರಿಂದ ವ್ಯಕ್ತಿಗೆ ವಿರುದ್ಧಲಿಂಗೀ ವ್ಯಕ್ತಿಯಲ್ಲಿ ಆಕರ್ಷಣೆಯುಂಟಾಗುವುದು ಸಹಜ ಪ್ರಕ್ರಿಯೆ, ಆದರೆ ಅದನ್ನೇ ಹಿಂಬಾಲಿಸಿ,ಅದನ್ನೇ ಮುಖ್ಯವಿಷಯವನ್ನಾಗಿ ವ್ಯಕ್ತಿ ಪರಿಗಣಿಸದಂತೆ ತಕ್ಕ ವಿಲಂಬಿತ ಮಾರ್ಗದರ್ಶನ ಅಗತ್ಯ. ಈ ಹದಿವಯಸ್ಸಿನ ಕುರಿತಾದ ಸಮಸ್ಯೆಗಳನ್ನು ಇನ್ನೊಮ್ಮೆ ನೋಡೋಣ.


ಸಂಸ್ಕೃತಿ

ವ್ಯಕ್ತಿಯ ಹುಟ್ಟನ್ನು ಅವಲಂಬಿಸಿ ಅವನ ಸುತ್ತಲ ಜಗತ್ತಿನಲ್ಲಿ ಯಾವ ತೆರನಾದ ಆಚಾರ-ವಿಚಾರಗಳಿವೆಯೋ ಅದನ್ನು ವ್ಯಕ್ತಿ ಮೈಗೂಡಿಕೊಳ್ಳುತ್ತಾನೆ. ಉದಾಹರಣೆಗೆ ನಮ್ಮಲ್ಲಿ ನಾವು ಹಿಂದೂ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕೃತಿ, ಅರೇಬಿಯನ್ ಸಂಸ್ಕೃತಿ ಅಂತೆಲ್ಲ ಹೇಳುತ್ತೇವೆ. ಇಲ್ಲಿ ನಮಗೆ ಕಾಣುವುದು ನಮ್ಮ ದೇಶ-ಭಾಷೆ, ಉಡುಪು, ಆಹಾರ-ವಿಹಾರ, ನಡವಳಿಕೆ ಇವುಗಳ ಉಪಸ್ಥಿತಿ ಅಥವಾ ಪ್ರಸ್ತುತಿ. ಮಡಿಪಂಚೆಯನ್ನುಟ್ಟು ಪಂಚಾಗ ಶ್ರವಣ ಮಾಡಬಹುದೇ ಹೊರತು ಯಾವುದೇ ಕಛೇರಿಯಲ್ಲಿ ಕೆಲಸಮಾಡುವುದು ಅನುಕೂಲಕರವಲ್ಲ. ಪ್ಯಾಂಟ್ ಹಾಕಿಕೊಂಡು ಪೂಜೆಮಾಡುವುದೂ ಸಮಂಜಸವಲ್ಲ. ಬಣ್ಣಬಣ್ಣದ ದಿರಿಸು ಶಾಲಾಮಕ್ಕಳಿಗೆ,ದಾಯಿಗಳಿಗೆ[ನರ್ಸ್ ಗಳು],ಸಮಾಜಸೇವಕರಿಗೆ ಯೋಗ್ಯವಲ್ಲ. ಕೊಳೆಯಾದ ಹಳೆ ಬಟ್ಟೆ ಮದುವೆ ಮುಂತಾದ ಸಮಾರಂಭಗಳಲ್ಲಿ ಧರಿಸಲು ಯೋಗ್ಯವಲ್ಲ. ಯಾರೋ ಹಾಡುತ್ತಿರುವಾಗ ಮುಂದೆ ಕುಳಿತು ಕಿಸಕ್ಕನೆ ನಗುವುದು ತರವಲ್ಲ. ಭಾಷಣದ ಮಧ್ಯೆ ಸಭಾಂಗಣದಲ್ಲಿ ಗುಜುಗುಜು ಮಾತನಾಡುವುದು, ಮದುವೆ ಮನೆಯಲ್ಲಿ ’ಈ ದೇಹದಿಂದ ದೂರವಾದೆ ಏಕೆ ಆತ್ಮನೇ’ ಎನ್ನುವ ಹಾಡು ಹಾಕುವುದು, ಗಲ್ಲಿಗಳಲ್ಲಿ ಗಣೇಶಾದಿ ವಿಗ್ರಹಗಳನ್ನು ಕೂರಿಸಿ ’ಹೂಂ ಅಂತೀಯಾ ಇಲ್ಲಾಂತೀಯಾ...’ ಹಾಡು ಹಾಕುವುದೂ ಸರಿಯಲ್ಲ. ಹೀಗೇ ನಮ್ಮ ಹಿಂದೆ ನಮ್ಮ ಪೂರ್ವಜರು ಬೆಳೆತೆಗೆದು ನಡೆತಂದ ಕೆಲವು ಆದರ್ಶಗಳಿವೆ---ಅವನ್ನೇ ಒಟ್ಟಾಗಿ ’ಸಂಸ್ಕೃತಿ’ ಎನ್ನುತ್ತೇವೆ. ಈ ಸಂಸ್ಕೃತಿ ಎನ್ನುವಲ್ಲಿ ಪ್ರಾದೇಶಿಕ ಭಿನ್ನತೆ ಇದ್ದರೂ ನಾವೇ ಹೇಳಿಕೊಂಡಂತೆ ನಮ್ಮದು ವಿವಿಧತೆಯಲ್ಲಿ ಏಕತೆ. ಅದಕ್ಕೇ ನಮ್ಮ ದೇಶದಲ್ಲಿ ಅನೇಕ ರಾಜ್ಯಗಳೆಂದು ವಿಂಗಡಿಸಿರುವುದು. ಸಂಸ್ಕೃತಿ ಹಳ್ಳಿಯಿಂದ ->ತಾಲೂಕಿಗೆ->ಜಿಲ್ಲೆಗೆ->ರಾಜ್ಯಕ್ಕೆ->ದೇಶಕ್ಕೆ ಹೀಗೆ ಬದಲಾಗುತ್ತಾ ಹೋಗುತ್ತದೆ. ಆದಾಗ್ಯೂ ದೇಶದ ಅತೀ ಸಾಮಾನ್ಯ ಪ್ರಜೆ ಅಥವಾ ಶ್ರೀಸಾಮಾನ್ಯನನ್ನು ಗಣನೆಗೆ ತೆಗೆದುಕೊಂಡು ಇದು ನಮ್ಮ ’ದೇಶದ ಸಂಸ್ಕೃತಿ’ ಎಂದು ಗುರುತಿಸಿದ್ದಾರೆ. ಹೀಗೆ ಗುರುತಿಸಲ್ಪಟ್ಟ ಸಂಸ್ಕೃತಿಯನ್ನು ಮಾನ್ಯಮಾಡುವುದು ಅಲ್ಲಲ್ಲಿಯ ಜನರ ಹಿತಾಸಕ್ತಿಗಳನ್ನು ಕಾಪಾಡಿದಂತೆಯೇ, ಇದನ್ನು ಮನದಂದು ವ್ಯಕ್ತಿ ತನ್ನ ರೂಢಮೂಲ ಕೊಳಕು ಸಂಸ್ಕೃತಿಯನ್ನು ಬಿಟ್ಟು ಸ್ಥಳೀಯ ಹಾಗೂ ಉತ್ತಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಎಲ್ಲರಿಗೂ ಒಳಿತು.


ಸಂಸ್ಕಾರ

’ಮನೆ
ಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು’ಎಂಬ ಮಾತು ಕೇಳಿದ್ದೀರಿ. ನಮ್ಮಲ್ಲಿ ಇನ್ನೊಂದು ಗಾದೆ ಇದೆ ’ತಾಯಿಯಂತೆ ಕರು ನಾಯಿಯಂತೆ ಬಾಲ’ ಎಂಬುದಾಗಿ. ಅರ್ಥ ತಾಯಿ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮೊದಲ ಗುರುವಾಗುತ್ತಾಳೆ. ಅವಳ ನಡೆ-ನುಡಿ, ಆಚಾರ-ವಿಚಾರಗಳು ಜೊತೆಗಿರುವ ಸಣ್ಣಮಗುವಿನ ಮನಸ್ಸಿನ ಮೇಲೆ ನೇರ ಪರಿಣಾಮಬೀರುತ್ತವೆ. ನೀವು ಪರೀಕ್ಷಿಸಿ ನೋಡಿ ಚಿಕ್ಕವಯಸ್ಸಿನ ಮಗು ತಾಯಿ ಮಾಡುವ ಅನೇಕ ಚಟುವಟಿಕೆಗಳನ್ನು ಬಹಳ ಗಮನಿಸುತ್ತದೆ,ಅನುಕರಿಸುತ್ತದೆ. ’ಮಗಾ ಇಲ್ಲಿ ಕೂರಬಾರದು, ಕಂಡಲ್ಲಿ ಉಗುಳಬಾರದು, ನಿನ್ನ ಬಟ್ಟೆ ನೀನೇ ಒಗೆದುಕೊಳ್ಳಬೇಕು, ಊಟದ ತಾಟಿನಲ್ಲಿ ಕೈತೊಳೆಯಬಾರದು, ದಿನಾಲೂ ಸ್ನಾನಮಾಡಬೇಕು, ದೇವರಿಗೆ ನಮಸ್ಕರಿಸಬೇಕು, ಹಿರಿಯರನ್ನು ಗೌರವಿಸಬೇಕು’ ಹೀಗೆ ತಾಯಿ ಹೇಳಿಕೊಟ್ಟರೆ ಅದನ್ನು ನಿಧಾನವಾಗಿ ಹಂತ ಹಂತವಾಗಿ ಮಗು ಅರಗಿಸಿಕೊಂಡು ತನ್ನಲ್ಲಿ ಅಳವಡಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ತಾಯಿ ಹೇಳುವ ನೀತಿಕಥೆಗಳು ಮಕ್ಕಳ ಮನಸ್ಸಿನಮೇಲೆ ಅಗಾಧಪರಿಣಾಮ ಬೀರುತ್ತವೆ. ಈ ವಿಷಯದಲ್ಲಿ ಶಿವಾಜಿಯ ಬಾಲ್ಯ, ತಿಲಕರ ಬಾಲ್ಯ, ಸ್ವಾಮಿ ವಿವೇಕಾನಂದರ ಬಾಲ್ಯ ತಮಗೆ ನೆನೆಪಿಗೆ ಬರಬಹುದು[ಓದಿದ್ದರೆ!] ಸಂಸ್ಕಾರದಲ್ಲಿ ಹಡೆದ ಸಂಸ್ಕಾರ ಮತ್ತು ಪಡೆದ ಸಂಸ್ಕಾರ ಎಂಬುದಾಗಿ ಗುರುತಿಸಬಹುದು. ಪಡೆದ ಸಂಸ್ಕಾರ ನಮ್ಮ ತಾಯಿಯಿಂದ ಬಂದ ಬಳುವಳಿ ಮತ್ತು ಹಡೆದ ಸಂಸ್ಕಾರ ಪೂರ್ವಜನ್ಮದ ಪುನರ್ಸ್ಮೃತಿಯಿಂದ ಬಂದದ್ದು. ಒಬ್ಬ ಅತೀ ಚಿಕ್ಕಹುಡುಗ ಅದ್ಬುತವಿದ್ಯೆಗಳಲ್ಲಿ ಪಾರಂಗತನೆಂದರೆ ಅದು ಅವನ ’ಪೂರ್ವದ ಮನ’ದ ಆಸ್ತಿ. ವ್ಯಕ್ತಿಯಲ್ಲಿ ಹುದುಗಿರುವ ಸುಪ್ತಶಕ್ತಿಯಾಗಿರುವ ಆತ್ಮ ಎಂಬುದು ಹೊಂದಿರುವ ಕೆಲವೇ ಲಕ್ಷಣಗಳಲ್ಲಿ ಮನಸ್ಸು ಎಂಬುದೂ ಕೂಡ ಸೇರಿಕೊಂಡಿದೆ. ಈ ಮನಸ್ಸಿನ ಒಳಮನಸ್ಸು ಎನ್ನುತ್ತೇವಲ್ಲ ಅದೇ ಸುಪ್ತಮನಸ್ಸು ಈ ಆತ್ಮದ ಅವಿಭಾಜ್ಯ ಅಂಗ ! ನಾವು ಮಾಡುವ ಎಲ್ಲ ಕೆಲಸಗಳನ್ನು ನೋಟ್ ಮಾಡಿಕೊಳ್ಳುವುದು ಯಾ ನಮೂದಿಸಿಕೊಳ್ಳುವುದು ಈ ಸುಪ್ತಮನಸ್ಸಿನ ಕೆಲಸ. ಇದರ ಬಗ್ಗೆ ಇನ್ನೊಮ್ಮೆ ವಿಸ್ತರಿಸಿ ಹೇಳುತ್ತೇನೆ. ಅದಕ್ಕೇ ನಮ್ಮ ಹಿರಿಯರು ನಮ್ಮ ಸುಪ್ತಮನಸ್ಸು ನಾವು ಮಾಡುವುದನ್ನು ನೆನಪಿಡಲಿ ಅಂತ ಆಗಾಗ ಭಗವನ್ನಾಮಸ್ಮರಣೆ ಮಾಡುತ್ತಿದ್ದರು, ಒಳಿತನ್ನು ಚಿಂತಿಸುತ್ತಿದ್ದರು, ಪರೋಪಕಾರಿಗಳಾಗಿದ್ದರು, ಕಷ್ಟಸಹಿಷ್ಣುಗಳಾಗಿದ್ದರು,ಸ್ವಾವಲಂಬಿಗಳಾಗಿದ್ದರು, ಸತ್ಯಸಂಧರಾಗಿದ್ದರು, ಭಕ್ತರಾಗಿದ್ದರು, ಭಾವುಕರಾಗಿದ್ದರು.

ಪಡೆದ ಸಂಸ್ಕಾರವನ್ನು ತಿದ್ದಬಹುದೇ ಹೊರತು ಹಡೆದ ಸಂಸ್ಕಾರವನ್ನು ತಿದ್ದಲು ಬರುವುದಿಲ್ಲ. ಉದಾಹರಣೆಗೆ : ಗಿಳಿಗಳು ಹಾರುತ್ತವೆ-ಮೊದಲಾಗಿ ಯಾರು ಕಲಿಸಿದರು ? ಹಡೆದ ಸಂಸ್ಕಾರ, ಸಾಕಿದ ಗಿಳಿಗಳು ಮಾತನ್ನು ಅನುಕರಿಸುತ್ತವೆ-ಪಡೆದ ಸಂಸ್ಕಾರ. ಈ ಪಡೆದ ಸಂಸ್ಕಾರದಲ್ಲಿ ಹಲವು ಬಗೆ. ಒಂದು ತಾಯಿ ಗಿಳಿಗೆ ಎರಡು ಮರಿಗಳು-ತಾಯಿಕಳೆದುಕೊಂದು ಬೇರೆಬೇರೆಯಾಗಿ ಒಂದು ಸನ್ಯಾಸಿಯಮನೆಗೂ ಇನ್ನೊಂದು ಕಟುಕನ ಮನೆಗೂ ಹೋಗಿ ಬೆಳೆಯುತ್ತವೆ ಈ ಕಥೆ ಸುಮಾರಾಗಿ ಎಲ್ಲರಿಗೂ ಗೊತ್ತಿದೆಯಲ್ಲವೇ ? ಅದನ್ನೇ ಪಡೆದ ಸಂಸ್ಕಾರವೆನ್ನುವುದು. ಬಂಗಾರವು ಮೂಲರೂಪದಲ್ಲಿ 'ಮಿಸುನಿಯಾಗಿರುತ್ತದೆ' ಮೆತ್ತಗಿರುತ್ತದೆ, ಅದನ್ನು ತಾಮ್ರ ಮುಂತಾದ ಲೋಹ ಬೆರೆಸಿ ಒಂದು ಹಂತಕ್ಕೆ ಬಂದಾಗ ಅದನ್ನು ನಾವು ಆಭರಣಕ್ಕೆ ಬಳಸುತ್ತೇವೆ.ಮಿಸುನಿ ಅದರ ಹಡೆದ[ಮೂಲ] ರೂಪ , ಆಭರಣಮಾಡಿ ಧರಿಸಿದ ಮೇಲೂ
ಅದರಲ್ಲಿರುವ ಬೇರೆ ಬೇರೆ ಲೋಹಗಳಿಂದ ಅದರ ಬಣ್ಣ ಸ್ವಲ್ಪ ಮಾಸುತ್ತದೆ , ಮತ್ತೆ ಅದಕ್ಕೆ ಪುಟ [ಪಾಲಿಶ್] ಕೊಟ್ಟು ಹೊಳೆಯುವಂತೆ ಮಾಡುತ್ತೇವೆ, ಹೀಗೇ ಪಡೆದ ಸಂಸ್ಕಾರ ಕಮ್ಮಿ ಇರುವಾಗ,ಹಳಸಿದಾಗ ಅದನ್ನು ತರಬೇತಿಯಿಂದ ಮತ್ತೆ ಪ್ರಜ್ವಲಿಸುವಂತೆ ಮಾಡಲು ಸಾಧ್ಯ!

ಹೀಗೆ ವ್ಯಕ್ತಿತ್ವ ವಿಕಸನದಲ್ಲಿ ವಿದ್ಯೆ-ಸಂಸ್ಕೃತಿ-ಸಂಸ್ಕಾರಗಳು ಪ್ರಮುಖಪಾತ್ರವಹಿಸುತ್ತವೆ ಅಥವಾ ಅವುಗಳೇ ವ್ಯಕ್ತಿಯ ವ್ಯಕ್ತಿತ್ವದ ಆಧಾರ ಸ್ತಂಭಗಳು!

[ಮುಂದಿನವಾರ ನೋಡೋಣ..................]