ಚಿತ್ರಗಳ ಕೃಪೆ : ಶ್ರೀ ಸೂರ್ಯನಾರಾಯಣ ಭಜರಂಗದಳ ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆ
ಮಹಾಕುಂಭಮೇಳ: ೧೪೪ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಾತ್ರ ಘಟಿಸುವ ಮಹಾಜಾತ್ರೆ
ಮಹಾಕುಂಭಮೇಳ: ೧೪೪ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಾತ್ರ ಘಟಿಸುವ ಮಹಾಜಾತ್ರೆ
ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||
ಕುಂಭಮೇಳದ ಬಗ್ಗೆ ಒಂದಷ್ಟು ಓದಬಯಸುವ ಆಸ್ತಿಕ ಸನಾತನಿಗಳಿಗೆ ಆದರದ ಸ್ವಾಗತ. ಕುಂಭಕ್ಕೆ ಸನಾತನ ಧರ್ಮ ವಿಶೇಷ ಮಹತ್ವವನ್ನು ನೀಡಿದೆ. ಅದಕ್ಕೆ ಹಲವಾರು ಕಾರಣಗಳಿವೆಯಾದರೂ, ಸಮುದ್ರ ಮಥನದ ಕಾಲದಲ್ಲಿ ಘಟಿಸಿತ್ತು ಎನ್ನಲಾದ ಅಮೃತ ಬಿಂದು ಚೆಲ್ಲಿದ ಘಟನೆಯೇ ಪ್ರಮುಖವಾಗಿ ಕಾರಣವಾಗುತ್ತದೆ. ಭಾಗವತ ಪುರಾಣ, ವಿಷ್ಣು ಪುರಾಣ, ರಾಮಾಯಣ ಮತ್ತು ಮಹಾಭಾರತಗಳಲ್ಲಿ ಈ ಕುರಿತು ಹೇಳಿಕೆಗಳು ದೊರೆಯುತ್ತವೆ. ಗಂಗೆ, ಯಮುನೆ, ಸರಸ್ವತಿ, ನರ್ಮದೆ, ಶಿಪ್ರೆ ಈ ನದಿಗಳೇ ಕುಂಭಮೇಳಗಳ ಪ್ರಮುಖ ನದಿಗಳಾಗಿವೆ. ದೂರ್ವಾಸರಿಂದ ಶಾಪಗ್ರಸ್ತರಾದ ದೇವತೆಗಳು, ದಾನವರೊಡನೆ ಹೋರಾಡಲು ಅಶಕ್ತರಾಗಿ, ಏನೂ ಮಾಡಲೂ ತೋಚದೇ, ಬ್ರಹ್ಮನಲ್ಲಿಗೆ ತೆರಳಿದರು. ಬ್ರಹ್ಮ ಶಿವನಲ್ಲಿಗೂ, ಶಿವ ವಿಷ್ಣುವಿನಲ್ಲಿಗೂ ಅವರನ್ನು ಕಳಿಸಿದ್ದಾಯ್ತು. ತ್ರಿಮೂರ್ತಿಗಳು ಮೂವರೂ ಸೇರಿ ಕ್ಷೀರಸಮುದ್ರವನ್ನು ಮಥಿಸಲು ಸೂಚಿಸಿದರು. ಮೇರುಪರ್ವತವನ್ನು ಕಡೆಗೋಲಾಗಿಯೂ ವಾಸುಕಿಯನ್ನೇ ಹಗ್ಗವಾಗಿಯೂ ಬಳಸಿ ಕಡೆದ ಈ ಕೆಲಸದಲ್ಲಿ ದಾನವರೂ ಪಾಲ್ಗೊಂಡರು. ಮಥನಗೊಂಡ ಕ್ಷೀರಸಾಗರದಲ್ಲಿ ಹಲವು ಸುವಸ್ತುಗಳು ಕಾಣಿಸಿಕೊಂಡವು. ಎದುರಿಗೆ ಬಂದ ಹಾಲಹಲವನ್ನು ಶಿವ ತಾನೇ ಕುಡಿದು ಎಲ್ಲರನ್ನೂ ರಕ್ಷಿಸಿದ. ನಂತರ ಅಮೃತ ಕಲಶಹೊತ್ತ ಧನ್ವಂತರಿ ಹೊರಬಂದ. ಅಮೃತಕುಂಭ ಬಂದಾಗ ದೇವತೆಗಳು-ದಾನವರು ಎರಡೂ ಪಂಗಡಗಳಲ್ಲಿ ನಮಗೆ ಮೊದಲು ತಮಗೆ ಮೊದಲು ಎಂಬ ಜಗಳ ಹುಟ್ಟಿಕೊಂಡಿತು. ಜಗಳ ಬಗೆಹರಿಸಲು ಮೋಹಿನಿಯ ರೂಪಧರಿಸಿ ಬಂದ ಮಹಾವಿಷ್ಣುವನ್ನು ಕಂಡು ದಾನವರು ಮೋಹಗೊಂಡರು. ಅಮೃತಕುಂಭವನ್ನು ಮೋಹಿನಿ ಎರಡೂ ಗುಂಪುಗಳಿಗೆ ಕೊಡುವ ಮೊದಲು ಎತ್ತೊಯ್ಯುತ್ತಿದ್ದಾಗ ಅದರಿಂದ ನಾಲ್ಕು ಹನಿಗಳು ಉದುರಿದವು. ಇವು ಕ್ರಮವಾಗಿ ಪ್ರಯಾಗ, ನಾಸಿಕ, ಉಜ್ಜೈನಿ ಮತ್ತು ಹರಿದ್ವಾರಗಳಲ್ಲಿ ಬಿದ್ದವು. ಅಮೃತದ ಹನಿಗಳು ಬಿದ್ದ ಕ್ಷೇತ್ರಗಳಲ್ಲಿ ನದಿಗಳು ಅಮೃತಸದೃಶ ಫಲನೀಡುತ್ತವೆ ಎಂಬ ಅನಿಸಿಕೆಯಿಂದ ಅಂದಿನಿಂದ ಇಂದಿನವರೆಗೂ ಕುಂಭಮೇಳಗಳು ನಡೆಯುತ್ತಾ ಬಂದಿವೆ.
ಹೂಯೆನ್ ತ್ಸಾಂಗ್ ಎಂಬ ಚೀನೀ ಯಾತ್ರಿಕ ಹರ್ಷವರ್ಧನನ ಕಾಲದಲ್ಲಿ[ಸುಮಾರು ೬೦೦ ಸಿ.ಈ] ಭಾರತಕ್ಕೆ ಬಂದಿದ್ದ. ಆಗಲೇ ಕುಂಭಮೇರ್ಳ ನಡೆಯುತ್ತಿರುವ ಬಗ್ಗೆ ಆತ ತನ್ನ ಬರಹಗಳಲ್ಲಿ ದಾಖಲಿಸಿದ್ದಾನೆ. ಅದಕ್ಕಿಂತಲೂ ಹಿಂದಿನ ದಾಖಲಿತ ಪುರಾವೆಗಳು ನಮಗೆ ಈಗ ಲಭ್ಯವಿಲ್ಲ; ಅವು ಇತಿಹಾಸದಲ್ಲಿ ಕಾರಣಾಂತರಗಳಿಂದ ಲುಪ್ತವಾಗಿವೆ. ಏನೇ ಇರಲಿ, ಪೂರ್ಣಕುಂಭಕ್ಕೂ ಕೂಡ ಅದೇ ಒಂದು ಹಿನ್ನೆಲೆಯಲ್ಲಿ ಬಹಳ ಮಹತ್ವವನ್ನು ಇತ್ತಿದ್ದಾರೆ. ಸನಾತನಿಗಳಲ್ಲಿ ಮಂಗಳಕಳಶಗಳಿಲ್ಲದ ಪೂಜೆಯೇ ಇಲ್ಲವೆನ್ನಬೇಕು. ಪೂಜೆ ಇದೆಯೆಂತಾದರೆ ಅಲ್ಲಿ ಕೊನೇಪಕ್ಷ ಒಂದು ಕಳಶವನ್ನಾದರೂ ಪೂಜಿಸುತ್ತಾರೆ.
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಕಲಶೇಸ್ಮಿನ್ ಸನ್ನಿಧಿಂ ಕುರು ||
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿಸ್ತಥಾ |
ಆಗಚ್ಛಂತು ಪವಿತ್ರಾಣಿ ಪೂಜಾರ್ಥಂ ಸತತಂ ಮಮ ||
ಹೀಗೆ ಮಂತ್ರವನ್ನು ಪಠಿಸುತ್ತಾ ನದಿಗಳನ್ನೂ ಪುಣ್ಯ ಪುಷ್ಕರಣಿಗಳ ತೀರ್ಥವನ್ನೂ ಕಲಶಗಳಲ್ಲಿ ಆವಾಹಿಸಿ ಪೂಜಿಸುತ್ತಾರೆ. ಯಾವುದೇ ಆರಾಧನೆಯಿದ್ದರೂ ಅಲ್ಲಿ ಕಲಶದಲ್ಲಿ ನೀರು ಇದ್ದೇ ಇರುತ್ತದೆ. ನೀರಿಲ್ಲದೇ ಕಲಶ ಅಪೂರ್ಣ, ಕಲಶವಿಲ್ಲದೇ ಪೂಜೆ ಅಪೂರ್ಣ. ಈ ಕಲಶವನ್ನೇ ಇನ್ನೊಂದು ಪದದಲ್ಲಿ ಕುಂಭ ಅಥವಾ ಪೂರ್ಣಕುಂಭ ಎಂತಲೂ ಕರೆಯುತ್ತೇವೆ. ಕುಂಭಗಳು ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ, ಮಣ್ಣು ಈ ರೀತಿಯಾಗಿ ಅವರವರ ಶಕ್ತ್ಯಾನುಸಾರ ಆಯಾ ಮೂಲವಸ್ತು/ಲೋಹ/ಮಿಶ್ರಲೋಹ/ಮಣ್ಣು ಗಳಿಂದ ತಯಾರಿಸಿಕೊಂಡಿರಬಹುದು/ಖರೀದಿಸಿ ಬಳಸಬಹುದು. ಆದರೆ ಕಬ್ಬಿಣ, ಪ್ಲಾಸ್ಟಿಕ್ ಬಳಕೆಗೆ ಪ್ರಾಶಸ್ತ್ಯವಿಲ್ಲ! ಕುಂಭಮೇಳಗಳು ಭಾರತದಲ್ಲಿ ಪ್ರಮುಖವಾಗಿ ನಾಲ್ಕು ಪ್ರದೇಶಗಳಲ್ಲಿ ನಡೆಯುತ್ತವೆ: ಪ್ರಯಾಗ, ಸಾಸಿಕ, ಉಜ್ಜೈನಿ ಮತ್ತು ಹರಿದ್ವಾರ ಇವೇ ಆ ಕ್ಷೇತ್ರಗಳಾಗಿದ್ದು ಮೂರು ವರ್ಷಗಳಿಗೊಮ್ಮೆ ಕ್ರಮವಾಗಿ ಒಂದೊಂದು ಕ್ಷೇತ್ರಗಳಲ್ಲಿ ಮೇಳ ಜರುಗುತ್ತಾ, ಪ್ರತೀ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಸರದಿಯಲ್ಲಿ ನಡೆಯುತ್ತದೆ. ಪೂರ್ಣಕುಂಭಮೇಳ ಹೀಗೆ ನಡೆದರೂ ಪ್ರಯಾಗ ಮತ್ತು ಹರಿದ್ವಾರಗಳಲ್ಲಿ ಪ್ರತೀ ಆರುವರ್ಷಗಳಿಗೊಮ್ಮೆ ಅರ್ಧಕುಂಭಮೇಳ ನಡೆಯುತ್ತದೆ. ಪ್ರತೀ ೧೪೪ನೇ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಹಾಕುಂಭಮೇಳ ಜರುಗುತ್ತದೆ-ಅದು ಈ ಸರ್ತಿ[೨೦೧೩]ನಡೆಯುತ್ತಿದೆ.
ಕುಂಭಮೇಳಗಳು ನಡೆಯುವುದಕ್ಕೆ ಸೂರ್ಯ[ಸೂರ್ಯನನ್ನು ಸನಾತನಿಗಳು ಗ್ರಹವೆಂದೇ ಕರೆಯುತ್ತಾರೆ], ಚಂದ್ರ ಮತ್ತು ಗುರು[ಬೃಹಸ್ಪತಿ] ಗ್ರಹಗಳ ಚಲನೆ ಕಾರಣವಾಗುತ್ತದೆ. ಗುರುವು ವೃಷಭರಾಶಿಯಲ್ಲೂ ಮತ್ತು ಸೂರ್ಯ ಮಕರರಾಶಿಯಲ್ಲೂ ಇದ್ದಾಗ ಕುಂಭಮೇಳ ಪ್ರಯಾಗದಲ್ಲಿ ನಡೆಯುತ್ತದೆ. ಗುರು ಮತ್ತು ಸೂರ್ಯ ಎರಡೂ ಸಿಂಹರಾಶಿಯಲ್ಲಿದ್ದಾಗ ನಾಸಿಕದಲ್ಲಿ ನಡೆಯುತ್ತದೆ. ಗುರು ಮತ್ತು ಸೂರ್ಯ ಎರಡೂ ವೃಶ್ಚಿಕರಾಶಿಯಲ್ಲಿದ್ದಾಗ ಮೇಳ ಉಜ್ಜೈನಿಯಲ್ಲಿ ನಡೆಯುತ್ತದೆ. ಸೂರ್ಯ ಕುಂಭರಾಶಿಯಲ್ಲಿದ್ದಾಗ ಕುಂಭಮೇಳ ಹರಿದ್ವಾರದಲ್ಲಿ ಘಟಿಸುತ್ತದೆ. ಕುಂಭಮೇಳಗಳು ಘಟಿಸುವಲ್ಲಿ ಸುಮಾರು ೧೦-೧೪ ವಿವಿಧ ಅಖಾಡಾಗಳ ಹಿಂದೂ ಜನ ಅಲ್ಲಿಗೆ ಸ್ನಾನಕ್ಕೆ ಬರುತ್ತಾರೆ. ಶೈವರು, ಶಾಕ್ತರು, ವೈಷ್ಣವರು, ಗಾಣಪತ್ಯರು, ಸ್ಕಾಂದರು, ನಾಗಾಸಾಧುಗಳೇ ಮೊದಲಾದ ವಿಭಿನ್ನ ಪಂಥಗಳ ಸನಾತನಿಗಳು ಈ ಮೇಳಗಳಲ್ಲಿ ಭಾಗವಹಿಸುತ್ತಾರೆ. ಮೇಳ ಸರಿಸುಮಾರು ಒಂದೂವರೆಯಿಂದ ಎರಡು ತಿಂಗಳ ಕಾಲ ಘಟಿಸುತ್ತದೆ. ಪುಣ್ಯನದಿಗಳ ಸಂಗಮದಲ್ಲಿ ಶಾಹಿಸ್ನಾನವೆಂಬ ಪುಣ್ಯಸ್ನಾನವೇ ಪ್ರಧಾನವಾದ ಕುಂಭಮೇಳದಲ್ಲಿ, ಸಂನ್ಯಾಸಿಗಳಿಗೆ ಧರ್ಮದೀಕ್ಷೆ, ಪೂಜೆ-ಪುನಸ್ಕಾರ, ಹೋಮ-ಹವನ, ಪುರಾಣ-ಪ್ರವಚನ-ಪಾರಾಯಣಗಳು, ಭಜನೆ-ಭಕ್ತಿ ಸಂಗೀತ-ನಾಮ ಸಂಕೀರ್ತನೆಗಳು, ಹರಿ-ಹರಕಥಾಕಾಲಕ್ಷೇಪಗಳು, ಧರ್ಮೋಪನ್ಯಾಸಗಳು, ಚಿಂತನ-ಮಂಥನ ಶಿಬಿರಗಳು, ಆಯುರ್ವೇದೀಯ ಚಿಕಿತ್ಸಾ ಶಿಬಿರಗಳು, ಯೋಗ-ಧ್ಯಾನ ತರಬೇತಿಗಳು, ಸಂಕಲ್ಪಸ್ನಾನ, ದಾನ-ಅನ್ನದಾನ, ಸಂನ್ಯಾಸಿಗಳ-ಸಾಧುಸಂತರ ಸೇವೆ, ಪ್ರಸಾದ ಭೋಜನ ಮೊದಲಾದ ಪುಣ್ಯಕಾರ್ಯಗಳು ನಡೆಯುತ್ತವೆ. ದಕ್ಷಿಣ ಭಾರತದ ಕರ್ನಾಟಕದಲ್ಲೂ ಕಾವೇರಿ-ಕಪಿಲಾ, ತುಂಗಾ-ಭದ್ರಾ, ಭೀಮಾ-ಅಮರಜಾ ಮೊದಲಾದ ನದಿಗಳ ಸಂಗಮ ಕ್ಷ್ರ್ಎತ್ರಗಳು ತಿರುಮಕೊಡಲು ನರಸೀಪುರದಂತಹ ತ್ರಿವೇಣಿ ಸಂಗಮಗಳೂ ಇವೆ. ತಿರುಮಕೊಡಲು ನರಸೀಪುರದಲ್ಲಿ ಅನೇಕ ವರ್ಷಗಳಿಂದ ಕುಂಭಮೇಳವನ್ನು ನಡೆಸಲಾಗುತ್ತಿದೆ, ಈ ವರ್ಷವೂ ಅದು ಇನ್ನೇನು ಆರಂಭಗೊಳ್ಳುತ್ತಿದೆ.
ನತೋಸ್ಮಿ ತುಂಗಾಂ ವಿಲತಸ್ತರಂಗಾಂ ಅಘೌಘಭಂಗಾಂ ಹರಿಪಾದಸಂಗಾಂ |
ನತೋಸ್ಮಿ ಭದ್ರಾಂ ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ||
ಸ್ನಾನಕ್ಕೆ ವಿಶಿಷ್ಟ ಮಹತ್ವವನ್ನು ನೀಡಿದ ಸನಾತನ ಧರ್ಮದಲ್ಲಿ ನದಿಗಳಿಗೆ ಅತ್ಯಂತ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಪಾಪಿಗಳು, ಪಾಮರರು, ಜನಸಾಮಾನ್ಯರು ಸ್ನಾನಮಾಡುವುದರಿಂದ ನದಿಗಳು ಅಪವಿತ್ರವಾದರೆ ಸಂತ-ಮಹಂತ-ಸಂನ್ಯಾಸಿಗಳು-ಯೋಗಿಗಳು ಸ್ನಾನಮಾಡುವುದರಿಂದ ನದಿಗಳು ಪವಿತ್ರಗೊಳ್ಳುತ್ತವೆ ಎಂದು ಧರ್ಮ ಹೇಳುತ್ತದೆ. ಜನಸಾಮಾನ್ಯರಿಗೆ ನಿತ್ಯವೂ ಸಂಗಮಗಳಲ್ಲಿ ಸಾಧು-ಸಂತರು ದೊರೆಯುವುದು ಕಷ್ಟ. ಕುಂಭಮೇಳಗಳ ಸಮಯದಲ್ಲಿ ಸ್ನಾನದ ಜೊತೆಜೊತೆಗೇ ಸ್ಥಳದಲ್ಲಿಯೇ ಸಾಧು-ಸಂತರ ದರ್ಶನ, ಪಾದಸ್ಪರ್ಶನ, ಪಾದಸೇವನ, ಸಂತಭಿಕ್ಷೆ ಮೊದಲಾದ ಕಾರ್ಯಗಳಿಗೆ ಅವಕಾಶವೊದಗುತ್ತದೆ. ನಿತ್ಯವೂ ಸಂಗಮದಲ್ಲಿ ಸ್ನಾನಮಾಡಲಾಗದ ಸಾಧು-ಸಂತರಿಗೆ ಈ ಸಮಯದಲ್ಲಿ ಅಂಥಾ ಅವಕಾಶ ಲಭಿಸುತ್ತದೆ. ಈ ಕಾರಣಗಳಿಂದ ಕುಂಭಮೇಳಗಳು ನಡೆಯುತ್ತವೆ.
ಅಸಂಖ್ಯ ಸಾಧು-ಸಂತರು ಭಾಗವಹಿಸುವ ಕುಂಭಮೇಳಗಳಲ್ಲಿ ಒಂದೊಂದು ಅಖಾಡಾಗಳಿಗೂ ಸಂಬಂಧಿಸಿದಂತೇ ಅವರವರ ಪ್ರವೇಶ ಮಾರ್ಗಗಳು, ತಾತ್ಕಾಲಿಕ ವಸಾಹತುಗಳು ಆಯಾ ಕ್ಷೇತ್ರಗಳಲ್ಲಿ ನಿರ್ಮಾಣಗೊಳ್ಳುತ್ತವೆ. ಬಂದ ಭಕ್ತನಿಗೆ ಕಣ್ಣು ಹರಿಸಿದಷ್ಟೂ ಎಲ್ಲೆಲ್ಲೂ ಭಗವಾಧ್ವಜಗಳೇ ಕಾಣಿಸುವುದರ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಧು-ಸಂತರು ಸಂಗಮದೆಡೆಗೆ ತೆರಳುತ್ತಿರುವುದು ಕಾಣುತ್ತದೆ. ಆಗಾಗ ಮೆರವಣಿಗೆಗಳಲ್ಲಿ ಸಾಗುವ ಮಂಡಲೇಶ್ವರ, ಮಹಾಮಂಡಲೇಶ್ವರ ಮೊದಲಾದ ಹಿರಿಯ ಸಂತರನ್ನು ನಾವು ಕಾಣಬಹುದಾಗಿರುತ್ತದೆ. ಪ್ರಾದೇಶಿಕವಾಗಿ ನಡೆಯುವ ಜಾತ್ರೆಗಳೇ ದೊಡ್ಡದೆನಿಸಿದರೆ ಕುಂಭಮೇಳಗಳು ನಾವರಿಯದ ಬೃಹದ್ ಗಾತ್ರದವಾಗಿರುತ್ತವೆ. ಎಲ್ಲಿ ನೋಡಿದರೂ ಜನ ಜನ ಜನ. ಅಬಾಲವೃದ್ಧರಾದಿಯಾಗಿ ಕುಂಟರು, ಕುರುಡರು, ಹೆಳವರು, ಅಶಕ್ತರೂ ಸಹ ಇತರರ ಸಹಾಯ ಪಡೆದು ಪುಣ್ಯಸ್ನಾನದಲ್ಲಿ ಭಾಗವಹಿಸುತ್ತಾರೆ. ಭಜನೆ, ವಾದ್ಯಘೋಷ, ವೇದಘೋಷ, ಅಖಂಡ ನಾಮಸ್ಮರಣೆ ಇವೆಲ್ಲಾ ಸತತ ನಡೆದೇ ಇರುತ್ತವೆ. ಸರಕಾರ ಕಲ್ಪಿಸುವ ವಿದ್ಯುದ್ದೀಪಗಳಿಂದ ಅಲಂಕೃತವಾದ ಮೇಳಪುರಿಯಂತೂ ಇಂದ್ರನಗರಿಯಂತೇ ಕಂಗೊಳಿಸುತ್ತದೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗಿ ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು-ಮಂಕುತಿಮ್ಮ
ಕಷ್ಟಗಳು ಮನುಷ್ಯ ಸಹಜ. ಸುಖದ ಜೊತೆಗೆ ದುಃಖ ಎಂಬುದು ಅದರ ಇನ್ನೊಂದು ಮುಖ. ಸದಾ ದುಃಖವೇ ಇರುವುದಿಲ್ಲ, ಸದಾ ಸುಖವೂ ಇರುವುದಿಲ್ಲ; ಅವು ಬದಲಾಗುತ್ತಿರುತ್ತವೆ. ಭುವಿಯ ಬದುಕಿಗೆ ಬರುವ ಜೀವಾತ್ಮನ ಬದುಕಿನ ಚಹರೆಗಳೂ ಬದಲಾಗುತ್ತಿರುತ್ತವೆ. ಹಿಂದೆ ಯಾರದೋ ಆಗಿದ್ದ ಆಸ್ತಿ ಇಂದು ನಮ್ಮದಾಗಿರಬಹುದು, ನಾಳೆ ಇನ್ನಾರದೋ ಆಗಲಿದೆ! ಪರಿವರ್ತನೆ ಜಗದ ನಿಯಮ ಎಂದು ಗೀತೆ ಸಾರುತ್ತದೆ. ನಾವು ಇಲ್ಲೇ ಶಾಶ್ವತವಾಗಿ ನೆಲೆಸಿ ಎಲ್ಲದನ್ನೂ ನಮ್ಮದನ್ನಾಗೇ ಇರಿಸಿಕೊಳ್ಳುತ್ತೇವೆ ಎಂಬುದು ಆಗದಮಾತು. ನಮಗಿಂತಾ ಮೂರು-ನಾಲ್ಕು ತಲೆಮಾರಿನ ಹಿಂದಿನ ನಮ್ಮ ಪೂರ್ವಜರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ! ನಮ್ಮ ನಂತರದ ನಾಲ್ಕು ತಲೆಮಾರಿನವರಿಗೂ ನಮ್ಮ ಬಗೆಗೆ ತಿಳುವಳಿಕೆ ಇರುವುದಿಲ್ಲ. ಗೋಡೆಗೆ ಆನಿಸಿದ ಪೂರ್ವಜರ ಚಿತ್ರಪಟಗಳು ಕಾಲಾನುಕ್ರಮದಲ್ಲಿ ಹಾಳಾಗಿಹೋದಮೇಲೆ ಅಲ್ಲಿ ಬೇರೇ ಚಿತ್ರಪಟಗಳು ಬರಬಹುದು ಅಥವಾ ಗೋಡೆಯೇ ಕುಸಿದು ಹೊಸದಾಗಿ ನಿರ್ಮಾಣಗೊಳ್ಳಬಹುದು! ನಾನು -ನನ್ನದು-ನಮ್ಮದು ಎಂಬ ಆ ಸಂಕುಚಿತ ಭಾವದ ಅಭಾವ ಉಂಟಾಗಬೇಕಾದರೆ ನಾವು ಮಹಾಕುಂಭಮೇಳಗಳಂತಹ ಮೇಳ ನೋಡಬೇಕು. ನಮ್ಮ ಕಷ್ಟಗಳೆಲ್ಲಾ ಒಮ್ಮೆ ಮರೆತುಹೋಗುತ್ತವೆ. ದೈವಸಾನ್ನಿಧ್ಯದಲ್ಲೇ ನಾವಿರುವಂತಹ ಬೇರೊಂದೇ ಲೋಕದ ಅನುಭವವನ್ನು ಕುಂಭಮೇಳ ನಮಗೆ ನೀಡುತ್ತದೆ. ಅನುಕೂಲವುಳ್ಳವರು ದಾನ ಮಾಡುತ್ತಾರೆ, ಅನುಕೂಲವಿಲ್ಲದವರು ದಾನ ಸ್ವೀಕರಿಸುತ್ತಾರೆ. ಪ್ರಸಾದ ಭೋಜನ ಮಾಡುವಾಗ ಸಾಲಿನಲ್ಲಿ ಬಡವ-ಬಲ್ಲಿದ-ಭಿಕ್ಷುಕ ಎಂಬ ಭೇದವಿಲ್ಲದೇ ಎಲ್ಲರೂ ಕುಳಿತು ಅನ್ನಬ್ರಹ್ಮನನ್ನು ನೆನೆದು ಪ್ರಸಾದ ಭುಂಜಿಸುತ್ತಾರೆ. ಭಗವಂತ ಕೊಟ್ಟ ಅವಕಾಶದಲ್ಲಿ ನಾವು ನಮ್ಮದೇ ಒಳಗವಚಗಳನ್ನು ನಿರ್ಮಿಸಿಕೊಂಡು ಒಳ ಅವಕಾಶವನ್ನು ಹುಟ್ಟಿಸಿಕೊಳ್ಳುತ್ತೇವೆ. ಮಡಕೆಯ ಒಳಗೆ ಇರುವ ಅವಕಾಶ [ಜಾಗ] ಮಡಕೆಯೊಡೆದಾಗ ಹೊರಗಿನ ಅವಕಾಶದಲ್ಲಿ ಲೀನವಾಗುತ್ತದೆ. ಮಡಕೆಯೊಳಗೆ ಇರುವ ಜಾಗ ಹೊರಗಿನ ಜಾಗಕ್ಕೆ ಸೇರಿದಾಗ ಹೊರಗಿನ ಜಾಗ ಹೆಚ್ಚಾಯಿತೋ? ಇಲ್ಲ. ಹೊರಗಿನ ಜಾಗದಲ್ಲಿ ಮಡಕೆಯನ್ನೇರ್ಪಡಿದರೆ ಅಲ್ಲಿನ ಜಾಗದಲ್ಲಿ ಕಮ್ಮಿಯೇನೂ ಆಗುವುದಿಲ್ಲ, ಬದಲಾಗಿ ಆ ಜಾಗ ಮಡಕೆಯೊಳಗೆ ಇರುತ್ತದೆ, ಅಷ್ಟೇ. ನದಿಗಳು ವರ್ಷಪೂರ್ತಿ ಹರಿದು ಸಮುದ್ರಕ್ಕೆ ಸೇರಿ ಸೇರಿ ಸೇರಿ ಸಮುದ್ರ ಉಕ್ಕಿಯೋಯ್ತೋ? ಇಲ್ಲ! ಯಾಕೆಂದರೆ ಸಮುದ್ರದ ನೀರೇ ಸೂರ್ಯನ ಕೃಪೆಯೆಂಬ ಕಿರಣಗಳಿಂದ ಆವಿಯಾಗಿ, ಘನೀಕರಿಸಿ ಮೋಡವಾಗಿ, ಮಳೆಯಾಗಿ, ಭೂಮಿಯಲ್ಲಿ ಇಂಗಿ, ಮತ್ತೆ ಬಿಂದುವಾಗಿ-ಹನಿಹನಿ ಸೇರಿ ಹರಿವತೊರೆಯಾಗಿ, ಹಳ್ಳ-ನದಿಯಾಗಿ ಕೊನೆಗೊಮ್ಮೆ ಸಿಂಧುವನ್ನು ಸೇರುವುದೇ ಪ್ರಕೃತಿ ನಿಯಮ. ಈ ಚಾಲನೆಗೆ ಸೃಷ್ಟಿಕರ್ತ ಭಗವಂತ ನಮ್ಮಿಂದ ಪ್ರತಿಫಲವಾಗಿ ಏನನ್ನೂ ಕೇಳುವುದಿಲ್ಲ; ಬದಲಾಗಿ ಕಾಲಕಾಲಕ್ಕೆ ಮಳೆಯಾದರೇ ಭೂಮಿತಾಯಿ ಹಸಿರುಡುತ್ತಾಳೆ, ಫಲಭರಿತವಾಗುತ್ತಾಳೆ. ಅಂತಹ ಅನನ್ಯ ದಿವ್ಯ ಶಕ್ತಿಯ ನೆನಪಿನಲ್ಲಿ, ಆ ದಿವ್ಯ ಸ್ಮರಣೆಯಲ್ಲಿ ಕೆಲಹೊತ್ತು ಕಳೆಯುವ ಮಂಗಲಮಯ ಸನ್ನಿವೇಶವೇ ಕುಂಭಮೇಳ.
ಸಲಿಲ ಗಂಗೆ ಜಲತರಂಗೆ ತುಂಗೆ ಭದ್ರೆ ಪಾವನ
ಜಲಲ ಜಲದಿ ಮಿಂದು ಧನ್ಯವಾಯಿತೆನ್ನ ಜೀವನ
ಕಲಿಕಲ್ಮಷ ಅಘನಾಶಿನಿ ಯಮುನೆ ಸಿಂಧು ಸರಸತೀ
ನಲಿಯುತ ಕಾವೇರಿ ಕಪಿಲೆ ಅದದೊ ಆ ಶರಾವತಿ
ಒಲಿದು ಕಾಳಿ ಕೃಷ್ಣೆ ಭೀಮೆ ಅಮರಜಾ ನರ್ಮದಾ
ಬೆಳೆದ ಶಿಪ್ರ ಅಲಕನಂದ ಕುಮುದ್ವತಿಯರಾಮುದ
ಮಲಪ್ರಭಾ ಆ ಘಟಪ್ರಭಾ ಚಂದ್ರಭಾಗ ಫಲ್ಗುಣಿ
ಹಲವ ನೆನೆವೆ ಗೋದಾವರಿ ಗಂಡಕಿ ನೇತ್ರಾವತಿ
ಇಳೆಯ ಖುಷಿಗೆ ಬೆಳೆಯ ತೃಷೆಗೆ ಬೆಳಕನೀಡೆ ಹರಸುತ
ಕಲಕಲಕಲ ಕಲರವದೊಳು ಮಂದಗಮನೆ ಹರಿಯುತ
ಬಲಗೊಳಿಸುವ ನದಿತಾಯ್ಗಳೆ ಬೆಳಗಲೆಮ್ಮ ಭಾರತ
ಮಿಲನಗೊಂಡ ನಿಮ್ಮ ಕಂಡೆ ಕುಂಭಮೇಳ ಸಾರುತ
ಕೊಳೆತೊಳೆಯಿತು ಮನ ಹರುಷದಿ ಪಡೆದು ಆಯ್ತನನ್ಯವು
ಬಳುವಳಿಯದು ನೆನಪಸಾರ ನೀವದೆಷ್ಟು ಧನ್ಯವು !
ಥಳ ಥಳ ಥಳ ಹೊಳೆವ ಜ್ಯೋತಿ ಮಂಗಳನೀರಾಜನ
ಅಲೆಅಲೆಯಲು ನರ್ತಿಸುತಿಹ ನೀವು ಅದಕೆ ಭಾಜನ
[ನದಿತಾಯಂದಿರಿಗೆ ಸ್ವರಚಿತ ಕವನದಾರತಿ]
ರಾಮಾಯಣದ ಶ್ರೀರಾಮಚಂದ್ರಮನ ಪೂರ್ವಜ ರಾಜರ್ಷಿ ಭಗೀರಥ, ತನ್ನ ಪೂರ್ವಜ ಸಗರಚಕ್ರವರ್ತಿಯ ಪುತ್ರರೆನಿಸಿ, ಕಪಿಲಮಹರ್ಷಿಯ ಶಾಪದಿಂದ ಬೂದಿಯಾಗಿಬಿದ್ದಿದ್ದ ಸಾವಿರ ಜೀವಾತ್ಮರಿಗೆ ಸದ್ಗತಿಯನ್ನೊದಗಿಸುವ ಸಲುವಾಗಿ, ತನ್ನ ಅಖಂಡ ತಪಸ್ಸಿನಿಂದ ದೇವಗಂಗೆಯನ್ನು ಭೂಮಿಗೆ ತಂದ-ಆಕೆಯೇರ್ ಭಾಗೀರಥಿ. ಅಂತಹ ದೇವಗಂಗೆ-ಭಾಗೀರಥಿ ಮಹರ್ಷಿ ಜಹ್ನುವಿನಿಂದ ಆಪೋಷಣೆಗೊಳಗಾಗಿ, ಆತನ ಕಿವಿಯಿಂದ ಹೊರಹೊರಟು ಜಾಹ್ನವಿಯಾದಳು. [ಕಾಶಿಯಲ್ಲಿ ಆಕೆಯ ಸುತ್ತ ಸಾವಿರಾರು ಕಥೆಗಳು ಜನರ ಬಾಯಲ್ಲಿವೆ. ಅಂತಹ ಕಥೆಗಳಲ್ಲಿ ಪಂಡರಾಪುರದ ಸಂಸ್ಥಾಪಕ ಪುಂಡಲೀಕನ ಕಥೆಯೂ ಒಂದು. ಕಾಶಿಯಲ್ಲಿರುವ ಸ್ನಾನ ಘಟ್ಟಗಳಲ್ಲಿ ಕೋಟ್ಯಂತರ ಭಕ್ತರಿಗೆ ದಿವ್ಯಾನುಭವಗಳು ಆಗಿವೆ.] ನಂತರ ವಿವಿಧ ಹಂತಗಳಲ್ಲಿ ವಿವಿಧ ಹೆಸರುಗಳಲ್ಲಿ ಹರಿದ ಗಂಗಾಮಾಯಿ, ಪ್ರಯಾಗದಲ್ಲಿ, ಸೂರ್ಯಪುತ್ರಿ-ಯಮನ ಸಹೋದರಿಯಾದ ಯಮುನೆಯನ್ನೂ ಜ್ಞಾನವಾಹಿನಿಯಾದ ಸರಸ್ವತಿಯನ್ನೂ ಸಂಗಮಿಸುತ್ತಾಳೆ. ಅಂತಹ ಕ್ಷೇತ್ರವನ್ನು ಧರ್ಮಸೂತ್ರಗಳು ದಾಖಲಿಸಿವೆ. ಬೆಳ್ಳಗಿನ ಅಲೆಗಳ ನದಿಗೆ ಕಪ್ಪುನೀರಿನ ನದಿಯು ಸೇರುವ ಸ್ಥಳದಲ್ಲಿ, ಅಕ್ಷಯವಾದ ಆಲದಮರವಿದೆ. ಅಂತಹ ಸಂಗಮದ ಕ್ಷೇತ್ರ ತೀರ್ಥರಾಜ ಪ್ರಯಾಗವೆನಿಸಿದೆ. ಪ್ರಾಗೈತಿಹಾಸಿಕ ದಾಖಲೆಗಳು ಹೇಳುವ ಇಂತಹ ಪುಣ್ಯ ಸ್ಥಳಗಳಲ್ಲಿ ಸ್ನಾನಮಾಡುವುದು ಸನಾತನಿಗಳಲ್ಲಿ ಹೆಚ್ಚಿನ ಜನರಿಗೆ ಜೀವನದಲ್ಲಿ ಒಮ್ಮೆಮಾತ್ರ ಸಿಗುವ ಭಾಗ್ಯ. ಅದಕ್ಕಾಗಿ ಕುಂಭಮೇಳದಂತಹ ಜಾತ್ರೆಗಳು ನಡೆಸಲ್ಪಡುತ್ತವೆ.
ಈ ಸರ್ತಿ ನಮ್ಮ ಜೀವಿತಾವಧಿಯಲ್ಲೇ ೧೪೪ ವರ್ಷಕ್ಕೊಮ್ಮೆ ಜರುಗುವ ಮಹಾಕುಂಭಮೇಳ ಈಗ ಪ್ರಯಾಗದಲ್ಲಿ ನಡೆಯುತ್ತಿದೆ. ಆರಂಭದಾರಭ್ಯ ಇಲ್ಲೀವರೆಗೆ ಸರಿಸುಮಾರು ೪೫-೫೦ ಕೋಟಿ ಜನ ಶಾಹಿಸ್ನಾನ ಮಾಡಿ ಪುನೀತರಾಗಿದ್ದಾರೆ. ಜನವರಿ ೨೭ ರಿಂದ ಆರಂಭಗೊಂಡ ಈ ಮಹಾಕುಂಭಮೇಳದಲ್ಲಿ ಕೆಳಕಂಡ ಹಬ್ಬಗಳ ಆಚರಣೆಗಳು ನಡೆದಿವೆ/ನಡೆಯುತ್ತವೆ:
• 14 January 2013 (Monday) – Makar Sankranti
• 27 January 2013 (Sunday) – Paush Purnima
• 6 February 2013 (Wednesday) – Ekadashi Snan
• 10 February 2013 (Sunday) – Mauni Amavasya Snan (Main Bathing Day)
• 15 February 2013 (Friday) – Vasant Panchami Snan
• 17 February 2013 (Sunday) – Rath Saptami Snan
• 21 February 2013 (Thursday) – Bhisma Ekadashi Snan
• 25 February 2013 (Monday) – Maghi Purnima Snana
• 10 March 2013 (Sunday) – Mahashivratri
ಸ್ಥಾನಿಕ ಸರಕಾರ ಮಹಾಕುಂಭಮೇಳದಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸಿದೆ. ಸಾವಿರ ಜನ ಸೇರಿದ ಜಾಗದಲ್ಲೇ ಅನಾನುಕೂಲಗಳು, ಕೊರತೆಗಳು, ವ್ಯವಸ್ಥೆಯಲ್ಲಿನ ದೋಷಗಳು ಕಾಣುತ್ತವೆ, ಹೀಗಿರುವಾಗ ಕೋಟ್ಯಂತರ ಜನ ತಿಂಗಳಾನುಗಟ್ಟಲೆ ನಿತ್ಯ ಹರಿದು ಬಂದು-ಹೋಗಿ ಮಾಡುತ್ತಿರುವಾಗ ಯಾವ ಮಟ್ಟದ ವ್ಯವಸ್ಥೆ ಮಾಡಿರಬಹುದೆಂಬುದನ್ನು ನಾವು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೊಬ್ಬರೂ ಕೊರತೆಯಾಯ್ತು ಎಂದುಕೊಳ್ಳುವಂತೇ ಇರದ ಕುಂಭಮೇಳ ಎನ್ನಿಸಿದೆ. ತಾತ್ಕಾಲಿಕವಾಗಿ ಹಾಕಿರುವ ತಂಬು-ಗುಡಾರಗಳಲ್ಲಿ ಯಾತ್ರಿಕರು ತಂಗಬಹುದಾಗಿದೆ. ಕುಡಿಯುವ ನೀರಿಗೆ, ಶೌಚಕ್ಕೆ, ಊಟೋಪಚಾರಗಳಿಗೆ, ಸಾಮಾನು ವಗೈರೆ ಬಂದೋಬಸ್ತಾಗಿ ಇಟುಕೊಳ್ಳಲಿಕ್ಕೆ, ರಕ್ಷಣೆಗೆ, ಸಂವಹನಮಾಧ್ಯಮಗಳಿಗೆ, ಮಾಧ್ಯಮಗಳಿಗೆ, ಸಾಗಾಟ-ಸಾರಿಗೆಗೆ, ಕಳೆದುಹೋದವರನ್ನು ಹುಡುಕಲಿಕ್ಕೆ ಎಲ್ಲದಕ್ಕೂ ಪ್ರತ್ಯೇಕ ವಿಭಾಗಗಳಿವೆ. ವಿಶ್ವಹಿಂದೂ ಪರಿಷತ್ತಿನ ವಿರಾಟ್ ಸಭಾಂಗಣದಲ್ಲಿ ಧರ್ಮಸಮ್ಮೇಳನಗಳು ನಿತ್ಯವೂ ನಡೆಯುತ್ತಿವೆ. ಜಗತ್ತಿನಲ್ಲಿಯೇ ಇಷ್ಟುದೊಡ್ಡ ಪ್ರಮಾಣದ ಜಾತ್ರೆ ಇನ್ನೊಂದಿಲ್ಲ ಎಂಬುದು ವಿಶೇಷವಾಗಿದೆ. ಕುಂಭಮೇಳದಲ್ಲಿ ಭಾಗವಹಿಸಿಬಿಟ್ಟರೆ ಮುಗಿಯುವವರೆಗೂ ಇದ್ದುಬಿಡುವ ಮನಸ್ಸಾಗುತ್ತದೆ, ನೋಡಿಮುಗಿಯಿತು ಎಂಬ ಭಾವನೆ ಬರುವುದಿಲ್ಲ; ಇನ್ನೂ ಇನ್ನೂ ನೋಡಬೇಕು, ಮತ್ತಷ್ಟು ಕಣ್ತುಂಬಿಸಿಕೊಳ್ಳಬೇಕು, ನಾನಾ ರೀತಿಯ ಸಾಧು-ಸಂತರನ್ನೂ ಅವರ ವೈಶಿಷ್ಟ್ಯಗಳನ್ನೂ ಕಂಡು-ಕೇಳಿ ತಿಳಿದುಕೊಳ್ಳಬೇಕು ಎನಿಸುತ್ತದೆ. ಇದ್ದರೆ ಇಂಥಾದ್ದೊಂದು ಧರ್ಮವಿರಬೇಕೆಂಬ ಧನ್ಯತೆ ಒಳಗಿನಿಂದ ಹರಿದುಬರುತ್ತದೆ; ಹೊರನಡೆವಾಗ ಹೃದಯ ತುಂಬಿಬಂದು ಕಣ್ಣುಗಳು ತಂತಾನೇ ಆನಂದಬಾಷ್ಪವನ್ನು ಉದುರಿಸುತ್ತವೆ. ತೀರ್ಥರಾಜ ಪ್ರಯಾಗ ಎಂದೂ ಮರೆಯದಂತೆ ಮನದಲ್ಲಿ ಉಳಿದುಹೋಗುತ್ತದೆ. ಸಾಧ್ಯವಾದವರು ಹೋಗಿಬನ್ನಿ, ಸಾಧ್ಯವಾಗದವರು ಕೇಳಿ-ತಿಳಿದು ಆನಂದಿಸಿ, ತೀರ್ಥರಾಜ ಪ್ರಯಾಗಕ್ಕೊಮ್ಮೆ ಸಾಷ್ಟಾಂಗ ನಮಸ್ಕಾರ, ಗಂಗಾ-ಯಮುನಾ-ಸರಸ್ವತಿಯರಿಗೂ ಪ್ರತ್ಯೇಕ ಪ್ರತ್ಯೇಕ ನಮಸ್ಕಾರಗಳು, ಮಹಾಕುಂಭಮೇಳ-ತೀರ್ಥಸ್ನಾನದ ಪುಣ್ಯಕಥೆಯನ್ನು ಕೇಳಿದ ನಿಮಗೂ ನಮಸ್ಕಾರ.
ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||