'ಆಲೂ ಗಾರುಡಿ'
ಗಜಾನನಂ ಭೂ ತಗಣಾದಿ ಸೇವಿತಂ
ಕಪಿ ಸ್ಥ ಜಂಬೂ ಫ ಲಸಾರ ಭಕ್ಸಿತಂ
ಉಮಾ ಸುತಂ ಸೋಕ ವಿನಾಶ ಕಾ.....ರಣಂ
ನಮಾಮಿ ವಿಘ್ನೇಶ್ವರ ಪಾ ದ ಪಂಕಜಂ....ಜಂ......ಹ.......
ಗಜವದ ನಾ ಬೇಡುವೆ ಗೌರಿ ತ ನ ಯ
ಗಜವದ ನಾ ಬೇಡುವೆ.....
ತ್ರಿಜಗ ವಂ ದಿತ ನೇ ಸುಜನರಾ ಪೊರೆವ ನೇ
ಗಜವದ ನಾ ಬೇಡುವೆ........
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ......ಹರನಮಸ್ಪಾರ್ವತೀಪತೇ.................
ಹರಹರಾ ಹರಹರಾ ಮಹಾದೇವ .........
ಮೆರೆವ ಪುರದೊಳಗೆ ಬಿಹಾರವದೆನಿಸಿಹ
ಭುವಿಯದೇಶದೊಂದು ಚರಿತೆಯ ಪಾಡೇ
ಪಾಡಿ ಪೊಗಳಲ್ ಅತಿ ಮೋದವದೆನಿಸುವ
ಪಾಮರರುಧ್ಧರಿಸುವ ಕಥೆ ನೋಡ
ನಾರಾಯಣಾ........... ಕೃಷ್ಣಾ....... ನಾರಾಯಣಾ........ಕೃಷ್ಣಾ........ನಾ...ರಾ...ಯಣ
ಕೀರ್ತನಾರಂಭಕಾಲದಲ್ಲಿ ಹರಿದಾಸರು ಭಗವನ್ನಾಮ ಸ್ಮರಣೆ ಮಾಡುತ್ತಾರೆ... ಯುಗಯುಗದಲ್ಲೂ ತನ್ನ ನಾ ನಾ ಅವತಾರಗಳಿಂದ ಜಗದೊಡೆಯನಾಗಿರತಕ್ಕಂತಹ ಸ್ರೀಮನ್ನಾರಾಯಣ ತನ್ನ ಭಕ್ತರಮೇಲಿನ ಕಳಕಳಿಯಿಂದ, ಅವರ ಉದ್ಧಾರಕ್ಕಾಗಿ ತಾನೇ ಹಲವು ರೂಪಗಳಲ್ಲಿ ಭುವಿಯಲಿರುವ ಅವರ ಬಳಿ ಬಂದು ಸಲಹುತ್ತಾನೆಂದು ಗ್ನಾನಿಗಳು ಹೇಳುತ್ತಾರೆ. ಅಂತಹ ದಿವ್ಯಪುರುಷನನ್ನು ಕನಕ-ಪುರಂದರಾದಿ ಅನೇಕ ಹರಿದಾಸರು ನಾ ನಾ ರೀತಿಯಲ್ಲಿ ಸ್ಮರಣೆಮಾಡಿದ್ದಾರೆ.........
ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆ ...... ....ಗಳಿಗೆಲ್ಲ.......
ಅಲ್ಲಲ್ಲೇ .....ಆಹಾರ ವಿತ್ತವರು...... ಯಾರು
ಬಲ್ಲಿದನು ಕಾಗಿನೆಲೆಯಾದಿ ಕೇ ....ಶವರಾಯ
ಎಲ್ಲರನು ಸಲ ಹುವನು ಇದಕೆ...... ಸಂ .....ಶಯವಿಲ್ಲ ........
ತಲ್ಲಣಿಸ ದಿರು ಕಂಡ್ಯ ತಾಳು ಮ.....ನ... ವೇ
ಕಲ್ಲಿಗೂ ಕಠಿಣವುಂಟೇ ..ಸ್ವಾಮೀ ? ಅಂತಹ ಕಲ್ಲೆಂಬ ಕಲ್ಲೊಳಗೆ ಹುಟ್ಟೀ ಕೂಗುವಂತಹ ಕಪ್ಪೆಗಳಿಗೂ ಕಾಡಲ್ಲಿರುವ ಗಿಡಮರಗಳಿಗೂ ಪಶು-ಪಕ್ಷಾದಿ ವನ್ಯ ಜೀವಿಗಳಿಗೂ ಅಲ್ಲಲ್ಲೇ ಇದ್ದಲ್ಲೇ...ಇರುವಲ್ಲೇ ... ಆಹಾರವನ್ನು ಕೊಟ್ಟವರು ಯಾರು .........ಎಲ್ಲವನ್ನೂ ಬಲ್ಲವನು ಆ ಸ್ರೀಹರಿ..... ಸ್ರೀಮನ್ನಾರಾಯಣ.....ನಂಬಿದವರಿಗೆ ಇಂಬುಗೊಟ್ಟು ಸಲಹುತ್ತಾ ಬಂದಿದ್ದಾನೆಂಬುದು ತಾತ್ಪರ್ಯ.........
ಇಂತಹ ಸ್ವಾರಸ್ಯಕರ ಕಥೆಯಲ್ಲಿ ಕಥೆಯಾಗಿ ತಮಗೆ ಅತಿ ವಿಶಿಷ್ಟವಾದೊಂದು ಕಥೆಯನ್ನು ಹೇಳುತ್ತಿದ್ದೇನೆ............
ಒಂದಾನೊಂದು ಕಾಲದಲ್ಲಿ ಬಿಹಾರ ಎಂಬ ದೇಶದಲ್ಲಿ ಆಲೂ ಪ್ರಸಾದ ಎಂಬತಕ್ಕಂತವನು ವಾಸವಿದ್ದನಂತೆ, ಅವನ ತಂದೆಗೆ ಹದಿಮೂರು ಮಕ್ಕಳು....
ಆಲೂ ಬೋಂಡಾ...ಗೆಣಸಿನ ಬೋಂಡಾ ...
ಥರ ಥರ ಬಜ್ಜೀ ........ಈರುಳ್ಳಿ ಪಕೋಡಾ .....
ಕಾಶೀ ಹಲ್ವಾ ....ಮಸಾಲ ಚೂಡಾ .......
ಬಿಸಿ ಬಿಸಿ ... ಚಾಯಿಗೆ ......ಹಲವರ ....ಬಾಯಿ .....
ಬಿಸಿ ಬಿಸಿ ... ಚಾಯಿಗೆ ......ಹಲವರ............... ಬಾ...ಯಿ
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ.............
ಹರಹರಾ ಹರಹರಾ ಮಹಾದೇವ .........
ಈ ಹದಿಮೂರು ಮಕ್ಕಳನ್ನೂ ಸಂಸಾರವನ್ನೂ ನಿಭಾಯಿಸಬೇಕಲ್ಲ? ಅದಕ್ಕಾಗಿ ಅಲೂವಿನ ತಂದೆ ಅಲೂ ಬೋಂಡ, ಗೆಣಸಿನ ಬೋಂಡಾ,ಮಿರ್ಚಿ ಬಜ್ಜೀ,ಈರುಳ್ಳಿ ಪಕೋಡ,ಕಾಶೀ ಹಲ್ವಾ,ಮಸಾಲ ಚೂಡ ಇತ್ಯಾದಿಯಾಗಿ ಜನರಿಗೆ ತಿಂಡಿ [ಮೇವನ್ನು!]ಯನ್ನು ಮಾರಾಟಮಾಡುವ ಚಿಕ್ಕ ಅಂಗಡಿ ನಡೆಸುತ್ತಿದ್ದ. ಪಾಪ ಬಡತನ! ಏನು ಮಾಡುವುದು? ಆದರೂ ತಾನು ಮಾಡುವ ಕೆಲಸದಲ್ಲಿ ಅತೀ ಶ್ರದ್ಧೆಯನ್ನು ಹೊಂದಿದ್ದ ಈತ ತನ್ನ ಮಕ್ಕಳಿಗೆ ಪ್ರೀತಿಯಿಂದ ಆತ ಮಾಡುವ ತಿಂಡಿಗಳ ಹೆಸರನ್ನೇ ಉಪನಾಮವಾಗಿ ಬಳಸುತ್ತಿದ್ದ. ಹೀಗೇ ನಮ್ಮ ಇಂದಿನ ಕಥಾನಾಯಕನಾದ ಸ್ರೀಮಾನ್ ಮುಕುಲ್ ಪ್ರಸಾದ 'ಆಲೂ ಪ್ರಸಾದ' ಎಂಬ ಹೆಸರಿನಿಂದ ಪ್ರಸಿಧ್ಧನಾಗಿದ್ದ !
ಇಂತಿಪ್ಪ ಆಲೂಪ್ರಸಾದ ಬಡತನದಲ್ಲೇ ಬೆಳೆದರೂ ವಿದ್ಯೆಯಲ್ಲಿ ಬಹಳ ಮುಂದಿದ್ದ, ಚೆನ್ನಾಗಿ ಓದುತ್ತಿದ್ದ. ಬರಬರುತ್ತಾ ಅಲೂ ಬೋಂಡದ ಥರ ಬೆಳೆಯತೊಡಗಿದ ! ಬೆಳೆದೂ ಬೆಳೆದೂ ಬೆಳೆದೂ ಕಾಲೇಜಿನ ಹಂತಕ್ಕೆ ಬಂದ!
ಸರ ಸರ ಬೆಳೆಯುತ ದೊಡ್ಡವನಾದ ನಮ್ಮ ಆಲೂ ಪ್ರಸಾದ ...
ಪರಿತಪಿಸುತ ತಮ್ಮಪ್ಪ-ಅಮ್ಮನ ಬಜ್ಜಿ ಅಂಗಡಿಯ ವಿ ...ವಾದ ...
ಗರಗರ ತಿರುಗುವ ತಮ್ಮ-ತಂಗಿಯರ ಕಂಡರೇ ಅದುವೇ ವಿಷಾದ..
ಪರಿಹರಿಸಲು ಓದಿಗೆ ಮುಂದೋಡಿದ ಮರೆಯುತ ಎಲ್ಲಾ ಖೇದ .... ...ಮರೆಯುತ........ಎಲ್ಲಾ........ಖೇದ
ಲಕ್ಷ್ಮೀರಮಣ ಗೋವಿಂದಾ ...ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ...........
ಹರಹರಾ ಹರಹರಾ ಮಹಾದೇವ .........
ಹೀಗೇ ಬೆಳೆದು ದೊಡ್ಡವನಾಗಿ ಕಾಲೇಜಿಗೆ ಹೋಗುತ್ತಾ ಹೋಗುತ್ತಾ ನಮ್ಮ ಆಲೂಗೆ ಬಹಳ ಗೆಳೆತನ ಹೆಚ್ಚಿತು, ಅನೇಕ ಸ್ನೇಹಿತರು ಒಗ್ಗೂಡಿದರು, ಆಗಾಗ ಮನದಣಿಯೇ ರೋಡಲಿ ಕ್ರಿಕೆಟ್ ಆಡುವರು ! ಬ್ಯಾಡ್ ಮಿಂಟನ್ ಆಡುವರು ! ಇನ್ನೂ ಅನೇಕ ಏನೇನೋ ಆಟಗಳನ್ನು ಸಾಂಗೋಪಾಂಗವಾಗಿ ಆಡುತ್ತಿದ್ದರು. ಹೀಗೇ ಕಾಲ ಕಳೆಯುತ್ತಾ ಕಳೆಯುತ್ತಾ ಏನಾಶ್ಚರ್ಯ ! ಒಂದು ದಿನ ಆಲೂ ಕಾಲೇಜಿನಲ್ಲಿ ಕಂಪ್ಯೂಟರ್ ಎಂಬತಕ್ಕಂತಹ ಅದೇನೋ ಗಣಕಯಂತ್ರ ಅಂತಾರಲ್ಲ ಅದನ್ನು ಬಳಸಲು ಕಲಿತ ! ಅದು ಹೇಗಾಯ್ತಪ್ಪಾ ಅಂತಂದರೆ ಅಲ್ಲೊಬ್ಬ ಸತ್ನಾಂ ಸಿಂಗ್ ಅಂತ ಮೇಷ್ಟ್ರು ಇರೋರು, ಅವ್ರೀಗೆ ಸಿಸ್ಯಂದ್ರು ಅಂದ್ರೆ ಭಾಳ ಖುಷಿ ! ತಮ್ಮ ಸಿಸ್ಯಂದ್ರಿಗೆ ಎಲ್ಲಾಥರದ ಸೌಲತ್ತು ಕೊಡೋರು. ಅದ್ರಲ್ಲಂತೂ ನಮ್ಮ ಕಥಾನಾಯಕನಾದ ಆಲೂ ಅಂದ್ರೆ ಪ್ರೀತಿ ಒಂದ್ ಕೈ ಜಾಸ್ತೀನೇ ಅನ್ನಿ. ಹೀಗಾಗಿ ಏನೋ ಬಡ ಹುಡುಗಾ ಅಂತಂದು ಕಂಪ್ಯೂಟರ್ ಕಲಿಸಿದರಂತೆ.
ಇರುವದೆಮ್ಮಲೊಂದು ಗಣಯಂತ್ರ ......
ಅಯ್ಯಾ ..........ಇರುವದೆಮ್ಮಲೊಂದು ಗಣಯಂತ್ರ ......
ಅದ ಬಳಸಲರಿಯದೇ ದುಃಖಿಪರು ........ಜನರು ....
ಇರುವದೆಮ್ಮಲೊಂದು............. ಗಣಯಂತ್ರ ......
ಇರುವದೆಮ್ಮಲೊಂದು............. ಗಣಯಂತ್ರ ......
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ......ಹರನಸ್ಪಾರವತೀಪ ತೇ ................ಹರಹರಾ ಹರಹರಾ ಮಹಾದೇವ .........
ಅಂತೂ ಇಂತೂ ಕಂಪ್ಯೂಟರ್ ಕಲಿತ ನಮ್ಮ ಆಲೂ ಯೇನ್ಮಾಡಿದಾನೆ ಗೊತ್ತೇ ಅದೇನೋ ಈ ಮೇಲು, ಎಲೆಕ್ಟ್ರಾನಿಕ್ ಅಂಚೆ ಅಂತಾರಲ್ಲ ಅದು ಅದನ್ನ ಮಾಡಕ್ಕೂ ಕಲ್ತು ಬುಟ್ಟಿದ್ದಾನೆ. ಕಲ್ತು ಕಲ್ತು ಅನೇಕರಿಗೆ ಈ ಮೇಲ್ ಕಳ್ಸಿದಾನೆ. ಇದ್ರಿಂದ ಅವನಿಗೆ ಗೆಳೆಯರ ಬಳಗ ಇನ್ನೂ ಜಾಸ್ತಿ ಆಗಿದೆ. ಜಾಸ್ತಿ ಆಗುತ್ತಾ ಆಗುತ್ತಾ ಕಾಲಕ್ರಮದಲ್ಲಿ ಇಡೀ ಬ್ರಹ್ಮಾಂಡವನ್ನೇ ವ್ಯಾಪಿಸುವಷ್ಟು ಗೆಳೆಯರ ಬಳಗವನ್ನು ಪಡೆದುಕೊಂಡ! ತದನಂತರ ಅವನಿಗೆ ನಮ್ಮ ಕಲ್ಯಾಣ ನಗರಿ ಬೆಂಗಳೂರಿನ ಮಾದೇಶನ ಪರಿಚಯವಾಯ್ತು , ಪರಿಚಯ ಸ್ನೇಹಕ್ಕೆ ತಿರುಗಿತು. ಇನ್ನೇನು ಹೋಗಿ-ಬಂದೂ ಮಾಡುವಷ್ಟು ಸ್ನೇಹ ಬೆಳೆಯಿತು. ಇಬ್ಬರೂ ಬಹಳ ಆಪ್ತರಾದರು.
ಅಯ್ಯಾ ಕರುಣದಿ ಕಾಯೋ ಮಾದೇಶ್ವರಾ ಎನ್ನ
ಗೆಳೆಯನೆ ನೀನು ಮಾದೇಶ್ವರಾ ....ಹೇ ಶಂಕರ ಅಭಯಂಕರ
ನಿನ್ನ ' ಗಳಿಕೆ ' ಆಪಾರ ನೀನು ' ಈ ಮೇಲು' ದೂರ
ಕರುಣದಿ ಕಾಯೋ ಮಾದೇಶ್ವರಾ..............
ಅಂತೂ e ಸ್ನೇಹ ಈ ಸ್ನೇಹಕ್ಕೆ ತಿರುಗಿ ಗೆಳೆಯ ಮಾದೇಸನ ಬಹಳ ಒತ್ತಾಯದ ಮೇರೆಗೆ ಆಲೂ ಪ್ರಸಾದ ಬೆಂಗಳೂರಿಗೆ ಬರಬೇಕೆಂದು ತೀರ್ಮಾನಿಸಿದ, ಬಂದು ವಾರದ ಕಾಲ ಇದ್ದು ವಾಪಸ್ಸು ಹೋಗಬೇಕೆಂದು ಅಂದುಕೊಂಡ. ಹೇಗೆ ಬರಬೇಕು, ಯಾವ ರೀತಿ ಬರಬೇಕು ಎಂದೆಲ್ಲ ಕೇಳಿ ತಿಳಿದುಕೊಂಡ. ಅಷ್ಟಕ್ಕೂ ಗೆಳೆಯ ಹೇಳಿದ 'ನೀನ್ಯಾಕೆ ಇಲ್ಲೇ ಕೆಲಸಮಾಡಬಾರದು ? ಎಂದು ಕೇಳಿದ. ಅದಕ್ಕೆ ಆಲೂ ಉತ್ತರಿಸಿದ್ದು ಒಳ್ಳೆಯ ಕಂಪನಿಯಲ್ಲಿ ಜಾಬು ಸಿಕ್ಕಿದ್ರೆ ತೊಂದ್ರೆ ಇಲ್ಲಾ ಅಂತ.
' ಇನ್ಫೋಸಿಸ್ ' ಎಂಬತಕ್ಕಂತಹ ಅಸಾಮಾನ್ಯ ತಂತ್ರಾಂಶದ ಮಾನಸ ಸರೋವರ ಇದೆಯೆಂತಲೂ, ದೈವಾಂಶ ಸಂಭೂತರಾದ ಕೆಲವರು ಸೇರಿ ಅದನ್ನು ತಮ್ಮ ದಶಕಗಳ ಕಾಲದ ತಪಶ್ಯಕ್ತಿಯನ್ನೆಲ್ಲ ಧಾರೆಯೆರೆದು ಪ್ರತಿಷ್ಥಾಪಿಸಿದರೆಂತಲೂ ಮತ್ತು ಯಾರೇ ಬಂದರೂ ಮೊದಲು ಅದು ಕೈಬೀಸಿಕರೆಯುತ್ತದೆಂತಲೂ ಗೆಳೆಯ ಮಾದೇಶ ಹೇಳಿದ! ಅದರ ಬಿರಡಿಂಗನ್ನು ರಾತ್ರೋರಾತ್ರಿ ದೇವತೆಗಳಂತವರು ಕಟ್ಟಿ ಬೆಳಗಾಗುವುದರೊಳಗೆ ಮುಗಿಸಿದ ರೀತಿ ಮುಗಿಸಿದ್ದರೆಂತಲೂ ಹೇಳಿಬಿಟ್ಟ! ಇಷ್ಟೆಲ್ಲಾ ಕೇಳಿದ ಮೇಲೆ ನಮ್ಮ ಆಲೂವಿಗೆ ಬಾಯಲ್ಲಿ ಬಂತು ಜೊಲ್ಲೂ.., ಆ ಕ್ಷಣವೇ ಬೆಂಗಳೂರಲ್ಲಿ ಇರುವುದಕ್ಕೆ ನಿರ್ಧರಿಸಿದ್ದಾಗಿ ತಂದೆ-ತಾಯಿಗೆ ಹೇಳಿಬಿಟ್ಟ ! ಕೆಲವೇ ದಿನಗಳಲ್ಲಿ ಹೊರಟೂ ಬಿಟ್ಟ, ಎಲ್ಲ ಗೆಳೆಯ ಮಾದೇಶನ ಸಹಕಾರದಿಂದಾ....
ಚಂಗನೆ ಜಿಗಿದಂಬರದಲಿ ಹಾರಿದ ಡೆಕ್ಕನ್ ವಿಮಾನದಲಾಗ
ಭಂಗವ ಕಳೆಯಲು ಇನ್ಫೋಸಿಸ್ಸು ಒಂದೇ..... ದಾರಿ..... ಯದೀಗ !
ಸಂಗದಿ ಗೆಳೆಯರು ಸಲುಗೆಯಲಿದ್ದರು ಕಳೆಯಿತು ದಿನವದು ಬಹಳ
ವಾಂಗೀ ಬಾತನು ಚಿತ್ರಾನ್ನವನೂ ತಿನ್ನುತ ಕಳೆದರು ದಿನ ಸರಳ......
ವಾಂಗೀ ಬಾತನು ಚಿತ್ರಾನ್ನವನೂ ತಿನ್ನುತ ....... ಕಳೆದರು..... ದಿನ...... ಸ.. ರ.. ಳ......
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ...........
ಹರಹರಾ ಹರಹರಾ ಮಹಾದೇವ .........
ಹರಹರಾ ಹರಹರಾ ಮಹಾದೇವ .........
ಹೀಗೇ ಕಾಲಕಳೆಯುತ್ತಿರಲಾಗಿ ಕನಡಾ ಬಾರದ ನಮ್ಮ ಆಲೂ, ರೂಮಿಗೆ ಸಾಮಾನು ತರಲೆಂದು ಗೆಳೆಯ ಮಾದೇಸನಿಲ್ಲದಾಗ ಸೆಟ್ಟಿ ಅಂಗಡಿಗೆ ಹೋಗುತ್ತಾನೆ.
ಸೆಟ್ಟಿ ಕೇಳಿದ " ಏನ್ ಕೊಡ್ಲೀ ಸಾರ್ ?"
" ಮೇಣ , ಸೂಜಿ ಮತ್ತು ರಿಗೆ ಕೊಡಿ " ಹೇಗೋ ಕನಡಾದಲ್ಲಿ ಗೆಳೆಯ ಹೇಳಿದ್ದನ್ನು ನೆನಪಿಸಿಕೊಂಡು ಹೇಳಿದ ನಮ್ಮ ಆಲೂ, ಸೆಟ್ಟಿಗೆ ಹಿಂದಿ ಬರುವುದಿಲ್ಲ, ಆಲೂಗೆ ಕನಡಾ ಬರುವುದಿಲ್ಲ!
" ಮೇಣ, ಸೂಜಿ ಕೊಡ್ತೀನಿ, ರಿಗೆ ನಮ್ಮಂಗ್ಡೀಲಿಲ್ಲ ಬೇರೆಲ್ಲಾದ್ರೂ ವಿಚಾರ್ಸಿ " ಸೆಟ್ಟಿಗೆ ' ರಿಗೆ ' ಎಂದರೆ ಏನು ಎಂಬುದು ತಲೇಲಿ ಒಂಥರಾ ಹುಳಬಿಟ್ಟ ಹಾಗಾಯ್ತು !
ಮೆಣಸು ಜೀರಿಗೆ ..... ಮೆಣಸು ಜೀರಿಗೆ......ಮೆಣಸು ಜೀರಿಗೆ .......ಮೆಣಸು
ಮೆಣಸು ಜೀರಿಗೆ .......ಮೇಣ ಸೂ ಜೀ ರಿಗೆ...... ಮೆಣಸೂ ಜೀ ರಿಗೆ...... ಮೆಣಸು
ಮೇಣ ...ಸೂಜಿ.... ರಿಗೆ....... ಮೇಣ... ಸೂಜಿ.... ರಿಗೆ........ ಮೇಣ... ಸೂಜಿ... ರಿಗೆ....ಮೇಣ ...
ಮೇಣ... ಸೂಜಿ ....ರಿಗೆ.....ಮೇಣ.... ಸೂಜಿ ...ರಿಗೆ ..ಮೇಣ.... ಸೂಜಿ ರಿಗೆ....ಮೇ .. .....ಣ...
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ.....ಹರನಮಸ್ಪಾರ್ವತೀಪತೇ................
ಹರಹರಾ ಹರಹರಾ ಮಹಾದೇವ .........
'ರಿಗೆ' ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಹುಡುಕುತ್ತಾ ಅನೇಕ ಅಂಗಡಿಗಳ ಭೂ ಪ್ರದಕ್ಷಿಣೆ ಮಾಡಿ ಕೊನೆಗೂ ಸಿಗದೇ ನೇ...ಟ್ಟಗೆ ರೂಮಿಗೆ ಬಂದು ಮಲಗಿಬಿಟ್ಟ ನಮ್ಮ ಆಲೂ. ಕೆಲವು ಗಂಟೆ ಕಳೀತು. ಕೆಲಸಕ್ಕೆ ಹೋಗಿದ್ದ ಮಾದೇಸ ರೂಮಿಗೆ ಬಂದ, ಇನ್ನೇನು ಅಡಿಗೆ ಮಾಡಲು ಹುಡುಗ್ರು ಸುರುಹಚ್ಚಿಕೊಳ್ಳಬೇಕು, ಅಷ್ಟರಲ್ಲಿ ಮಾದೇಸ ಕೇಳಿದ " ಆಗ್ಲೇ ಫೋನ್ ನಲ್ಲಿ ಮೆಣಸು-ಜೀರಗೆ ತಂದಿಡು ಅನ್ನಲ್ಲಪ್ಪಾ ಎಲ್ಲಿಟ್ಟಿದ್ದೀಯ ? " ಆಲೂ ತಾನು ತಂದಿದ್ದನ್ನು ಮಾದೇಶನ ಕೈಗೆ ಕೊಡುತ್ತಾನೆ! ಏನಾಶ್ಚರ್ಯ ಪೊಟ್ಟಣ ಬಿಡಿಸಿ ನೋಡಿದಾಗ ಅದರೊಳಗೆ ಇದ್ದುದು ಒಂದು ಉದ್ದ ಸೂಜಿ ಮತ್ತು ಸ್ವಲ್ಪ ಮೇಣ ! ಆಲೂ ಹೇಳುತ್ತಲೇ ಇದ್ದ
" ಓ ಆಪ್ ಬೋಲಾತಾನ 'ರಿಗೆ' ಓ ಕಿದರ್ ಭೀ ನಹೀ ಮಿಲರಹಾಹೈ "
" ಓ ಆಪ್ ಬೋಲಾತಾನ 'ರಿಗೆ' ಓ ಕಿದರ್ ಭೀ ನಹೀ ಮಿಲರಹಾಹೈ "
ಅಲ್ಲಯ್ಯಾ ನಾನು ತರ ಹೇಳಿದ್ದು ಮೆಣಸು-ಜೀರಿಗೆ, ನೀನು ತಂದಿದ್ದು ಏನು ಎಂದು ಹಿಂದಿಯಲ್ಲಿ ಎಕ್ಷಪ್ಲೇನ್ ಮಾಡುತ್ತಾನೆ.ಅಂತೂ ಕೊನೆಗೆ ಕನಡಾ ಬಾರದ ಮಿತ್ರನ ಹುಚ್ಚಾಟ ನೋಡಿ ಮಾದೇಸನಿಗೆ ನಗು ತಡೆಯಲಾಗಲಿಲ್ಲ ! ಗಡಗಡ ಗಡಗಡ ಮೈ ಅಲುಗಾಡಿಸಿ ಬೃಹದಾಕಾರವಾಗಿ ನಕ್ಕಿದ್ದಾನೆ ಮಾದೇಸ. ಕ್ಷಣಾರ್ಧದಲ್ಲಿ ತನ್ನ ತಪ್ಪಿನ ಅರಿವಾಗಿ ಎತ್ತರದಲ್ಲಿ ಬಹು ಎತ್ತರದಲ್ಲಿ ಹಾರಾಡುತ್ತಿರುವ ಆಲೂ ನೆಲಕ್ಕೆ ಕುಸಿದಿದ್ದಾನೆ ! ದೀನನಾಗಿ ಬಹು ದೀನನಾಗಿ ಪರಿ ಪರಿಯಾಗಿ ತನ್ನನ್ನು ಪೀಡಿಸದಿರುವಂತೆ ಗೆಳೆಯನಲ್ಲಿ ಪ್ರಾರ್ಥಿಸಿದ್ದಾನೆ ! ಆದರೂ ಮೆಣಸು-ಜೀರಿಗೆಯನ್ನು ತನ್ನ ಗಾರುಡೀ ವಿದ್ಯೆಯಿಂದ ಮೇಣ-ಸೂಜಿ-ರಿಗೆ ಮಾಡಿದ ಆಲೂ ಎಂಬ ಮಹಾಮಹಿಮನನ್ನು ಮಾದೇಸ ಬಹಳವೇ ಗೋಳುಹುಯ್ದುಕೊಳ್ಳುತ್ತಾನೆ. ಹೀಗೇ ಕಾಲಾನಂತರದಲ್ಲಿ ಅನಿವಾರ್ಯವಾಗಿ ಆಲೂಪ್ರಸಾದ ನಮ್ಮ ಕನಡಾವನ್ನು ಕಲಿತ, ಮುಂದೆ ಈ ಸ್ನೇಹಿತರು ಬಹುಕಾಲ ಸುಖದಿಂದಿದ್ದರು ಎಂಬಲ್ಲಿಗೆ 'ಲಾಲೂ ಗಾರುಡಿ' ಎಂಬ ಈ ಪುಣ್ಯ ಕಥಾಕಾಲಕ್ಷೇಪಕ್ಕೆ ಮಂಗಳಹಾಡೋಣ, ಭಗವಂತ ಈ ಕಥೆಯನ್ನು ಬಹಳ ಸ್ರದ್ಧಾ-ಭಕ್ತಿಯಿಂದ ಇಲ್ಲಿಯತನಕ ಕೇಳಿದ್ದಕ್ಕೆ ತಮಗೆಲ್ಲರಿಗೂ ಆಯುರಾರೋಗ್ಯ ಐಸ್ವರ್ಯವಿತ್ತು ಸುಖ-ಶಾಂತಿ ನೆಮ್ಮದಿಯಿಂದ ಬಾಳುವಂತಾಗಲೆಂದು ಸ್ರೀಮನ್ನಾರಾಯಣನಲ್ಲಿ ಪ್ರಾರ್ಥಿಸುತ್ತಾ ಎಲ್ಲರಿಗೂ ಮಂಗಳವನ್ನು ಪಾಡೋಣ............
ಮಂಗಳವಾಗಲಿ ಸರ್ವರಿಗೆ ಶುಭ ಮಂಗಳವಾಗಲಿ ಸರ್ವರಿಗೆ.....
ಜಯ ಮಂಗಳವಾಗಲಿ ಸರ್ವರಿಗೆ ಶುಭ ಮಂಗಳವಾಗಲಿ ಸರ್ವರಿಗೆ .......
ಲಕ್ಷ್ಮೀರಮಣ ಗೋವಿಂದಾ ....ಗೋವಿಂದಾ.....ಅಂಜನೇಯ ವರದ ಗೋವಿಂದಾ .....ಗೋವಿಂದ........ತಿರುಪತಿ ವೆಂಕಟರಮಣಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ ಗೋವಿಂದ....ಹರನಮಸ್ಪಾರ್ವತೀಪತೇ...............
ಹರಹರಾ ಹರಹರಾ ಮಹಾದೇವ .........