ಆಸೆ
ಬಡತನಕೆ ಹಸಿವು ಸಿರಿತನಕೂ ಹಸಿವು
ಬಿಡಿಸಿನೋಡಲು ವಿಷಯವಸ್ತುವದು ಬದಲು
ಎಡಬಿಡದೆ ಅದುಬೇಕು ಇದುಬೇಕು ತನಗೆಂದು
ಬಡಬಡಿಸಿ ನೋಯದಿರು | ಜಗದಮಿತ್ರ
ಅಂಗಡಿಗಳಿಹವಿಲ್ಲಿ ಸ್ವರ್ಗಸೀಮೆಯ ಥರದಿ
ಅಂಗಳಕೆ ಕರೆಯುವರು ಅದೂ ಇದೂ ಎನುತ
ಬಂಗಾರ ಮುತ್ತು ರತ್ನಗಳಷ್ಟೇ ಬದುಕಲ್ಲ
ಸಿಂಗಾರ ಸದ್ಗುಣವು | ಜಗದಮಿತ್ರ
ವೇಗದಲಿ ಗಳಿಸುತ್ತ ಜಾಗ ಪಡೆಯುವ ಆಸೆ
ಬೇಗ ಸ್ವಂತದ್ದೆಂಬ ಮನೆ ಕಟ್ಟುವಾಸೆ
ಭೋಗಿಸಲು ಅದು ಸಾಲ ಮತ್ತೆ ವಾಹನ ಬೇಕು
ತ್ಯಾಗಿಗಳು ಬೆರಳೆಣಿಕೆ | ಜಗದಮಿತ್ರ
ಗುಣಕೆ ಗೌರವವಿಲ್ಲ ಮನಕೆ ಮನ್ನಣೆಯಿಲ್ಲ
ಒಣಜಂಬ ಬಲುಜೋರು ಬಲು ಕಾರುಬಾರು
ಕುಣಿಯುವರು ಕುಡಿಯುತ್ತ ಹುಡುಗ-ಹುಡುಗಿಯರ್ ರಾತ್ರಿ
ಕಣಕಣದಿ ಕಾಮಿಸುತ | ಜಗದಮಿತ್ರ
ಇರಗೊಡದು ಈ ಕಾಲ ಮಳೆಯಿಲ್ಲ ಬೆಳೆಯಿಲ್ಲ
ಬರೇ ಪಂಚೆ ಪಟ್ಟೆ ಸೀರೆಯನುಟ್ಟು ತಿರುಗೆ
ಅರಿದಿನಿತು ಹೊಲದಲ್ಲಿ ಕೃಷಿಕಾರ್ಯವಂ ಮಾಡು
ತಿರೆಯ ಮರೆಯದೆ ನಿತ್ಯ | ಜಗದಮಿತ್ರ
ದಿನಕೊಂದು ಹೊಸ ಯಾತ್ರೆ ಜನಕೊಂದು ಹೊಸ ಮಾತ್ರೆ
ಕನವರಿಸಿದಾಗೆಲ್ಲ ಕೈಗೆ ಕಮಲ ದಳ
ಮನೆಯೇನು ಮಠವೇನು ಬಿಡದ ಜಾಗವದುಂಟೆ
ನೆನೆದು ನುಂಗುವರೆಲ್ಲ | ಜಗದಮಿತ್ರ
ಬಣ್ಣಹಚ್ಚಿದ ಬೆಡಗು ಈ ಜೀವ ಈ ಭಾವ
ಕಣ್ಣು ಮೂಗು ಬಾಯಿ ಕಿವಿಯು ಚರ್ಮವದು
ಅಣ್ಣ ಕೇಳೈ ನಿನ್ನ ಕೈಯ್ಯೊಳಿರೆ ವಾಂಛಿತವು
ಮಣ್ಣಾದರೂ ಕೀರ್ತಿ | ಜಗದಮಿತ್ರ