ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 8, 2010

ಭಾಷೆ ಮತ್ತು ಅದರ ಮಹತ್ವ

ಭಾಷೆ ಮತ್ತು ಅದರ ಮಹತ್ವ

ಭಾಷೆ ವ್ಯಕ್ತಿತ್ವದ ಒಂದು ಮುಖ್ಯ ಭಾಗ, ಭಾಷೆಯಿಲ್ಲದೆ ವ್ಯವಹರಿಸುವುದು ಕಷ್ಟದ ಕೆಲಸ. ಎಷ್ಟು ಜಾಸ್ತಿ ಭಾಷೆ ಬರುತ್ತದೋ ಅಷ್ಟು ಒಳ್ಳೆಯ ಬೆಳವಣಿಗೆ ಸಾಧ್ಯ. ವ್ಯಕ್ತಿಯೊಬ್ಬ ಆಸ್ಸಾಮ್ ನಿಂದ ಬಂದಿದ್ರೆ ಅವನ ಕೂಡ ಅಸ್ಸಾಮ್ ಭಾಷೆಯಲ್ಲೇ ಮಾತನಾಡಿದರೆ ಅವನಿಗೆ ತುಂಬಾ ಅಪ್ಯಾಯಮಾನವೆನಿಸುತ್ತದೆ. ನೀವೇ ನೋಡಿ ನಿಮ್ಮ ಮೂಲ ಪ್ರದೇಶಗಳಿಂದ [from your native places] ಯಾರಾದರೂ ಬಂದಿದ್ದರೆ ಅವರನ್ನು ಮಾತಿನಿಂದಲೇ ನೀವು ಪತ್ತೆ ಹಚ್ಚುತ್ತೀರಿ, " ನೀವು ಧಾರವಾಡದವರಾ ? ಧಾರವಾಡದ ಭಾಷೆ ಚೆನ್ನಾಗಿ ಮಾತಾಡುತ್ತೀರಿ ಅದಕ್ಕೇ ಕೇಳಿದೆ " ಹೀಗೇ ಯಾರನ್ನೇ ಕಂಡರೂ ಮನಸ್ಸು ಮೊದಲು ಗೌರವಿಸುವುದು, ಹತ್ತಿರಕ್ಕೆ ಕರೆಯುವುದು ಪ್ರಾದೇಶಿಕ ಭಾಷೆ [native language]. ಇದನ್ನೇ ಮನಗಂಡಿದ್ದ ನಮ್ಮ ಕವಿ-ಸಾಹಿತಿಗಳು ಅವರದೇ ಭಾಷೆಗಳಲ್ಲಿ ಬರೆದರು,ಜನರಿಗೆ ಹತ್ತಿರವಾದರು. ಪ್ರತಿಯೊಂದು ಭಾಷೆ ಕೂಡ ಅದರದ್ದೇ ಆದ ಸೊಗಡಿನಿಂದ,ಸೊಬಗಿನಿಂದ ಕೂಡಿದೆ. ಯಾವುದು ಮೇಲು ಯಾವುದು ಕೆಳಗೆ ಎನ್ನುವ ಭಾಷಾಂಧಕಾರ ಸಲ್ಲ. ಮಾತೃ ಭಾಷೆ ಎನ್ನುವುದು ನಮ್ಮ ಜೀವನಾಡಿ, ಆದರೆ ಮಿಕ್ಕುಳಿದ ಭಾಷೆಗಳ ಬಗೆಗೂ ನಮಗೆ ಗೌರವ ಇರಲಿ.

ವ್ಯಾವಹಾರಿಕವಾಗಿ ಇಂಗ್ಲೀಷ್ ಭಾಷೆ ಜಗತ್ತಿನ ಎಲ್ಲಾ ಕಡೆ ಪ್ರಭುತ್ವ ಸ್ಥಾಪಿಸಿದೆ, ಇದಕ್ಕೆ ಇಂಗ್ಲೀಷರ ವಿಶ್ವಪರ್ಯಟನ ಕಾರ್ಯ ಕಾರಣವಿರಬಹುದು. ನಾವು ನಮ್ಮ ಮಾತೃ ಭಾಷೆಯನ್ನೇ ಇಷ್ಟಪಟ್ಟರೂ ಸ್ಟೈಲ್ ಗಾಗಿ

"
ಗೋ ಯಾ "

" ವಾಟ್ ಮ್ಯಾನ್ ಯು ಆರ್ ನಾಟ್ ಹೆಲ್ಪಿಂಗ್ ಮಿ ? "

ಎಂದೆಲ್ಲಾ ಬರ್ಮುಡಾ ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತೇವೆ ! ನಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗೇ ಕಳಿಸುತ್ತೇವೆ! ಯಾಕೆಂದರೆ ನಮಗೆ ಗೊತ್ತು ಇಂಗ್ಲೀಷ್ ಅನ್ನೋದು ಅಷ್ಟು ಪಾಪ್ಯುಲರ್ !


ಒಂದು ಹಳ್ಳಿಗೆ ಬೆಂಗಳೂರಿಂದ ಕೆಲವು ಮಂದಿ ಹೋಗಿದ್ದರು, ಅದು ಅವರಿಗೆ ಹೊಸಾ ಪ್ರದೇಶ. ಸೃಷ್ಟಿಯ ಸೊಬಗನ್ನು ನೋಡಲು ಕಾತುರರಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಹಸಿರು ಕಾಡು ಇತ್ತೆಂದು ಅವರು ಹೋಗಿದ್ದರು,ಕಾಡಿಗೂ ಹಳ್ಳಿಗೂ ನಡುವೆ ಒಂದು ನದಿ. ಶರಾವತಿ ನದಿ ಅಂತಲೇ ಇಟ್ಟುಕೊಳ್ಳೋಣ. ಒಂದುಕಡೆ ಅವರಿಗೆ ನದಿ ದಾಟಿ ಆಚೆ ಹೋಗಬೇಕಾಗಿ ಬಂತು. ಅಲ್ಲಿ ಹೇಗೆ ಮಾಡುವುದು ಎಂದು ತಿಳಿಯಲಿಲ್ಲ, ಅಲ್ಲಿಯೇ ಚಿಕ್ಕ ಗುಡಿಸಲೊಂದಿತ್ತು, ಯಾರೋ ಒಬ್ಬಾತ ಏನೋ ಮಾಡುತ್ತಿದ್ದ,ಆತನನ್ನು ಮಾತನಾಡಿಸಲು ಹೋದಾಗ ಆತ ಶುದ್ಧ ಕನ್ನಡ ಗ್ರಾಮ್ಯ ಭಾಷೆಯಲ್ಲಿ ಮಾತನ್ನಾಡುತ್ತಿದ್ದ. ಹೋದವರು ಆತನ ಹತ್ತಿರ ಹೇಳಿದಾಗ ಆತ ತಾನೇ ಅಂಬಿಗನೆಂದೂ ತಾನು ದೋಣಿ ದಾಟಿಸಿ ನಿಮ್ಮನ್ನು ಆಚೆ ದಡಕ್ಕೆ ಬಿಡುವೆನೆಂದೂ ಬಹಳ ಸಂತೋಷದಿಂದ ಹೇಳಿದ. ದೋಣಿ ದಾಟಿಸಿದ ಕೂಡ ! ದೋಣಿ ದಾಟಿಸಿ ಆದ ಮೇಲೆ, ಬೆಂಗಳೂರಿನ ಈ ನೆಂಟರು ಅಭ್ಯಾಸ ಬಲದಿಂದ " ಥ್ಯಾಂಕ್ಸ್ " ಎಂದರು. ಆ ಅಂಬಿಗನಿಗೆ ಎಲ್ಲಿಲ್ಲದ ಕೋಪ ಬಂತು, ಕಣ್ಣು ಕೆಂಪಗಾಯ್ತು. ಏನೇನೋ ಬೈಯ್ದ. ಹೆಚ್ಚೇಕೆ ಅವರನ್ನು ಅಲ್ಲಿಂದ ಮುಂದಕ್ಕೆ ಅಟ್ಟಿಸಿ ಓಡಿಸಿದ, ಯಾಕೆಂದರೆ ಅವನ ಭಾಷೆಯಲ್ಲಿ " ಥ್ಯಾಂಕ್ಸ್ " ಅನ್ನೋದು ಒಂದು ಕೆಟ್ಟ ಅರ್ಥ ಕೊಡುವ ಶಬ್ಧವಾಗಿತ್ತು. ಹೋದವರಿಗೆ ಕಾಡು ನೋಡುವುದಕ್ಕಿಂತ ಮರಳಿ ಹೋಗುವ ಚಿಂತೆ ಕಾಡ ಹತ್ತಿತು! ನೆನೆಸಿಕೊಂಡರೆ ಮೈಯೆಲ್ಲಾ ಬೆವರುತ್ತಿತ್ತು ! ಆ ಅಂಬಿಗ ಇನ್ನು ಬರುವುದಿಲ್ಲ, ಹತ್ತಿರ ಹೋದರೆ ಹೊಡೆದರೂ ತಿನ್ನಬೇಕು ಅಷ್ಟೇ ! ಅವನನ್ನು ಬಿಟ್ಟು ಅಲ್ಲಿ ನದಿ ದಾಟಿಸಲು ಬೇರಾವುದೇ ಸೌಲಭ್ಯ ಇಲ್ಲ. ಹೀಗಾಗಿ ಮರಳಿ ಹೋಗುವಾಗ ಏನುಮಾಡುವುದು ಎಂಬುದೇ ಪರ್ವತಾಕಾರದ ಸಮಸ್ಯೆಯಾಗಿತ್ತು ! ಕೊನೆಗೆ ದೇವರು ದೊಡ್ಡವನು ಆ ಹಳ್ಳಿಯವ ಅವರ ತಪ್ಪನ್ನು ಯವುದೋ ಗಳಿಗೆಯಲ್ಲಿ ಕ್ಷಮಿಸಿದ್ದ, ಅವರನ್ನು ವಾಪಸ್ ಬಿಡುವುದು ತನ್ನ ಕರ್ತವ್ಯ ಎಂಬಂತೆ ಕರ್ತವ್ಯ ಪ್ರಜ್ಞೆ ಮೆರೆದಿದ್ದ, ಹೀಗಾಗಿ ಕೊನೆಗೊಮ್ಮೆ ಮರಳಲು ಸಹಾಯ ಮಾಡಿದ,ಈಗ ಮತ್ತೆ ಅವರು " ಥ್ಯಾಂಕ್ಸ್ " ಅನ್ನುವ ಬದಲು ಕೈಮುಗಿದರು , ಅದಕ್ಕಾತ ಕಿಸ ಕಿಸನೇ ನಕ್ಕ

. " ಓ ಒಡ್ಯಾ ನಂಕೈ.ಮುಗುದ್ಬ್ಯಾಡ ಬಿಡ್ರ, ದ್ಯಾವರವ್ನೆ, ಎಲ್ಲಾ ಘನಾಕಿಟ್ಟಿರ್ಲಿ, ಇನ್ನೊಂದಪಾ ಬನ್ನಿ " ಎಂದ.

ಹಾಗೆ ಹೇಳುವಾಗ ಆತನ ಮುಖದಲ್ಲಿ ಮಗುವಿನಂತ ಮುಗ್ಧ ಭಾವವಿತ್ತು, ಆತ್ಮೀಯತೆ ಇತ್ತು, ಪ್ರೀತಿಯಿತ್ತು, ' ಪಾಪ, ಏನೂ ಗುತ್ತಿಲ್ಲ ಅವ್ರಗೆ ' ಎನ್ನುವ ಮನೋಧರ್ಮ ಇತ್ತು, 'ಬೇರೆ ಊರಿಂದ ಬಂದರೆ, ಸಹಾಯ ಮಾಡಬೇಕು ' ಎನ್ನುವ ತಿಳುವಳಿಕೆ ಇತ್ತು. ಅವೆಲ್ಲವನ್ನೂ ಮಿಳಿಸಿ ಆತ ತನ್ನದೇ ಗ್ರಾಮ್ಯ ಭಾಷೆಯಲ್ಲಿ ಶುಭಹಾರೈಸಿ ಅವರನ್ನು ಬೀಳ್ಕೊಟ್ಟಿದ್ದ ! We learn the lesson ' be a Roman when you are in Rome ' ! ಹಳ್ಳಿಗರು ಎಂದೂ ಕೆಟ್ಟವರಾಗಿರುವುದಿಲ್ಲ, ಅವರಲ್ಲಿ ಅಲ್ಲಿನ ಪರಿಸರದ ನಿತ್ಯ-ಸತ್ಯದ ಬದುಕಿನ ಅರಿವಿರುತ್ತದೆ. ಆದರೆ ಅವರಿಗೆ ಆರ್ಥವಾಗದ ಭಾಷೆ ಅಪಾರ್ಥಕ್ಕೆ ಕಾರಣವಾದರೆ ಆಗ ಆಗುವ ಅನಾಹುತಗಳೇ ಬೇರೆ. ಇಂತಹ ಸನ್ನಿವೇಶಗಳಲ್ಲಿ ಆಂಗಿಕಾಭಿನಯ [ Body Language ] ಬಳಸುವುದು ಸೂಕ್ತ.

ಎಷ್ಟೋ ಜನರಿಗೆ ಆಂಗಿಕಾಭಿನಯ ಬರುವುದೇ ಇಲ್ಲ. ಆಂಗಿಕಾಭಿನಯದ ಕಲ್ಪನೆ ಬಂದರೆ ಅನೇಕರು ಭಾಷೆ ಗೊತ್ತಿರದಿದ್ದರೂ ಕೆಲಕಾಲ ಬದುಕಬಹುದು. ಯಾರೋ ಸುಲಭವಾಗಿ ನರ್ತಿಸಲು ತನಗೆ ಬರುವುದಿಲ್ಲ, ಹೇಗೆ ಮಾಡಬೇಕೆಂದೇ ತಿಳಿಯುವುದಿಲ್ಲ, ಸಾದಾ-ಸೀದಾ ಡ್ಯಾನ್ಸ್ [ನೃತ್ಯ] ಮಾಡುವ ಒಂದು ಸ್ಟೆಪ್ ಹೇಳಿಕೊಡುತ್ತೀರಾ ಎಂದು ನಮ್ಮ ಕನ್ನಡದವರೇ ಆದ ತಮಿಳಿನಲ್ಲಿ ಬೆಳಗಿದ ಪ್ರಭುದೇವ ಎಂಬ ಸಿನಿಮಾ ನಟನನ್ನು ಕೇಳಿದರು. ಅದಕ್ಕೆ ಆತ ಕೊಟ್ಟ ಉತ್ತರ-
"
೧. ನಿಮ್ಮ ಬಲಗೈ ಮೇಲೆತ್ತಿ ಬಲ್ಬ್ ಹಾಕುವ ರೀತಿ ತಿರುಗಿಸಿ,

ಈಗ ಅದನ್ನು ನಿಲ್ಲಿಸಿ

೨. ನಿಮ್ಮ ಎಡಗಾಲಿನ ತುದಿಯಿಂದ ಆರದೇ ಬಿದ್ದಿರುವ ಸಿಗರೇಟ್ ತುಂಡನ್ನು ಹೊಸಕುತ್ತಾ ಆರಿಸಲು ಪ್ರಯತ್ನಿಸಿ

ಈಗ ಅದನ್ನು ನಿಲ್ಲಿಸಿ

ಈಗ ಮೇಲಿನ ಎರಡೂ ಕೆಲಸಗಳನ್ನು ಏಕಕಾಲದಲ್ಲಿ ಮಾಡಿ. ನೀವೀಗ ಒಂಥರಾ ಡ್ಯಾನ್ಸ್ ಮಾಡುತ್ತಿದ್ದೀರ ಅಲ್ಲವೇ ? "

ಹೀಗೇ ಆಂಗಿಕಾಭಿನಯ ಜೀವನದಲ್ಲಿ ಬಹಳ ಉಪಯುಕ್ತ, ಅದು ಎಲ್ಲಾ ಕಡೆಗೂ ಉಪಯೋಗಕ್ಕೆ ಬರಬಹುದಾದ, ಹೆಚ್ಚಿನ ಕಲಿಕೆ ಬೇಕಾಗದ ಒಂದು ಭಾಷೆ!

ಎಲ್ಲಾದರೂ ಹೋದಾಗ ನಮ್ಮ ಭಾಷೆಯವರು ಸಿಕ್ಕಿ ಬಿಟ್ಟರೆ ನಮ್ಮ ಖುಷಿಯೇ ಬೇರೆ ! ಉದಾಹರಣೆಗೆ ಉತ್ತರಪ್ರದೇಶಕ್ಕೆ ಹೋಗಿದ್ದೀರಿ, ಏನೋ ಕೆಲಸದಲ್ಲಿ ನಿರತರಾಗಿದ್ದೀರಿ, ನಿಮಗೆ ಅಲ್ಲಿ ಅನೇಕ ದಿನಗಳ ನಂತರ ಒಬ್ಬರ ಪರಿಚಯವಾಗುತ್ತದೆ, ಆತ ಕನ್ನಡದವರೇ ಅಂತ ತಿಳಿದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ ! ಅಲ್ಲೇ ಶುರು 'ಉತ್ತರಪ್ರದೇಶ್ ಕನ್ನಡ ಸಂಘ'. ಅಮೇರಿಕಾ ಅಥವಾ ಬೇರೆ ದೇಶಗಳಿಗೆ ಹೋದಾಗ ಅದು ಇನ್ನೂ ಹೆಚ್ಚು

" ಅಯ್ಯೋ ನೀವು ಉಡುಪಿ ಕೃಷ್ಣ ಹೋಟೆಲಿನಲ್ಲಿ ಕೆಲಸ ಮಾ
ಡುತ್ತಿದ್ದಿರಲ್ಲವೇ ಮ್ಯಾನೇಜರ್ ಆಗಿ ಈಗ ಇಲ್ಲಿ ?"

" ಇಲ್ಲಿ ಅವರದ್ದೇ ಬ್ರಾಂಚು ಉಂಟು ಮಾರಾಯರೇ ಅದಕ್ಕೇ, ನನಗೆ ಇಂಗ್ಲೀಷು ಚೆನ್ನಾಗಿ ಬರ್ತಿತ್ತು, ಯಜಮಾನರು '
ಪ್ರದೀಪ ನೀನು ಅಮೆರಿಕಾದಲ್ಲಿ ಸ್ವಲ್ಪ ದಿನ ಇದ್ದು ಬಾ' ಅಂತ ಕಳಿಸಿದ್ದು, ನೀವು ಏನುಮಾಡುವುದು ಇಲ್ಲಿ ? "

ಎಂದು ಶುರುವಿಟ್ಟುಕೊಳ್ಳುತ್ತೇವೆ.

|| ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

ಎಂಬಂತೆ ನಮಗೆ ಮಾತೃ ಭಾಷೆಯ, ಮಾತೃ ಭೂಮಿಯ ಕೊಡು-ಕೊಳ್ಳುವಿಕೆಯ ಅದಮ್ಯ ಪ್ರೀತಿ, ಆ ತುಡಿತ ಅದು ಅನನ್ಯ-ಅನೂಹ್ಯ, ಅನುಭವ ಮಾನ್ಯ!

[ ಮುಂದಿನವಾರ ನೋಡೋಣ ...............]