ಚಿತ್ರ ಋಣ : ಅಂತರ್ಜಾಲ
[ಆತ್ಮೀಯ ನವ್ಯ ಓದುಗ ಪ್ರಿಯರೇ, ನಿಮ್ಮ ಖುಷಿಗಾಗಿ ಮಧ್ಯೆ ಮಧ್ಯೆ ಬರೆಯುವ ನವ್ಯದ ವ್ಯಂಜನ ತಗೊಳ್ಳಿ ]
[ಆತ್ಮೀಯ ನವ್ಯ ಓದುಗ ಪ್ರಿಯರೇ, ನಿಮ್ಮ ಖುಷಿಗಾಗಿ ಮಧ್ಯೆ ಮಧ್ಯೆ ಬರೆಯುವ ನವ್ಯದ ವ್ಯಂಜನ ತಗೊಳ್ಳಿ ]
’ಸುಬ್ರಾಯ ಪರಿಭ್ರಮಣ ’!
ಏನೋ ಬಹಳ ಮಂದಿ ಬರೆಯುತ್ತಾರಲ್ಲಾ
ತಾನೂ ಬರೆದರೆ ತೊಂದರೆಯೇನು
ಎಂಬ ಪರಿಕಲ್ಪನೆಯ ತೊಳಲಾಟದಲ್ಲಿ ಸಿಲುಕಿದ್ದ
ಸಾಣ್ಮನೆ ಸುಬ್ರಾಯ
ತಟ್ಟೆತೊಳೆಯುತ್ತಾ ನಿರ್ಧರಿಸಿಯೇ ಬಿಟ್ಟ
ಇನ್ನೇನಿದ್ದರೂ ಜೀವನದ ’ಬಿ’ ಸೈಡು
ಬರೆಯದೇ ಹೋದರೆ ಯಾರಿಗೂ
ತನ್ನಬಗ್ಗೆ ತಿಳಿಯುವುದೇ ಇಲ್ಲ ಹೀಗಾಗಿ
ರೇನಾಲ್ಡ್ ಪೆನ್ನಿನ ಇಂಕು
ಖಾಲಿಯಾಗುವವರೆಗೂ ಬರೆದ
ಗುಂಯ್ ಎನ್ನುವ ಸೊಳ್ಳೆಗಳನ್ನೂ ಲೆಕ್ಕಿಸದೇ
ಹೊರಗಿನಿಂದ ಬರುತ್ತಿರುವ
ಚರಂಡಿ ವಾಸನೆಗೂ ಮನಸ್ಸಲ್ಲಿ ಮಣೆಹಾಕದೇ
ಬರೋಬ್ಬರಿ ೩೦೦ ಪೇಜು ಬರೆದ!
ಪ್ರಕಟಿಸಿದ ಆತ್ಮಕಥೆಯನ್ನು
ಹತ್ತಾರು ಪುಸ್ತಕಗಳಂಗಡಿಗೆ ಕೊಂಡೊಯ್ದು ತೋರಿಸಿದ
ಯಾರೂ ತೆಗೆದುಕೊಳ್ಳುವ ಮನಸ್ಸುಮಾಡಲಿಲ್ಲ !
ಅಬ್ಬಾ ಎಂಥಾ ಖೂಳರು
ಒಬ್ಬರಿಗೂ ತನ್ನಿರುವಿಕೆಯ ಪರಿವೆಯೇ ಇಲ್ಲವೇ ?
ಬೀಡಿ ಅಂಗಡಿ ಇಟ್ಟುಕೊಂಡು
ತಾನು ಸಲ್ಲಿಸಿದ ಸೇವೆ ಮಾನ್ಯಮಾಡುವವರೇ ಇಲ್ಲವೇ ?
ಪ್ರಶಸ್ತಿ ಹಾಳಾಗಿ ಹೋಗಲಿ
ಕೊನೇಪಕ್ಷ ತನಗೊಂದು ಸಣ್ಣ
ಪೌರ ಸನ್ಮಾನ ಮಾಡಿದರೆ
ಅವರ ಗಂಟೇನು ಹೋಗುತ್ತಿತ್ತು!
ಯಾವಾಗ ಹಾಸಿಗೆಯಲ್ಲಿ ’ಬಿ’ ಸೈಡ್ ಆದನೋ
ಆಗಲೇ ಕುಸಿದುಬಿದ್ದ ಕನಸಿನಿಂದ
ಆಚೆ ಬಂದ ಆತನಿಗೆ ಬಾಯಾರಿದಂತಾಗಿತ್ತು
ಬಾಯಿಂದ ಮಾತೇ ಹೊರಡದ ರೀತಿ !
ಅಷ್ಟಕ್ಕೂ ತಾನುಮಾಡಿದ ಮಹಾಪರಾಧವೇನು ?
ಕನಸುಕಾಣುವುದು ತಪ್ಪಲ್ಲವಲ್ಲ!
ಕನಸಿಗೆ ಬಣ್ಣವಿಟ್ಟು ಬಾಲಹಚ್ಚಿ
ಬಾಲಂಗೋಚಿಯಂತೇ ಹಾರಬಿಟ್ಟರೆ
ಅದು ಮೇಲೇರಲು ಸಾಧ್ಯವೇ ?
ಹೌದೌದು ವಿಜ್ಞಾನ ಇಷ್ಟೆಲ್ಲಾ ಮುಂದುವರಿದಿದೆ
ಕನಸೇ ಬೀಳದ ಹಾಗೇ ಅಥವಾ
ನಮಗೆ ಬೇಕಾದ ಕನಸುಗಳು ಮಾತ್ರ
ಬೀಳುವ ಹಾಗೇ ಮಾಡಲಾಗದೇ ?
ಏನೇನೋ ಮಾಡುತ್ತೇವೆ ಎನ್ನುತ್ತಾರಪ್ಪ
ಹಾಲು ಹಿಂಡಲು ಯಂತ್ರಮಾಡಿದರು
ಅಡಿಕೆ ಸಿಪ್ಪೆ ಸುಲಿಯಲು ಯಂತ್ರಮಾಡಿದರು
ಹಾಲನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ
ತುಂಬಿಸಿ ಸೋರದಂತೇ ಅಂಟಿಸುವ ಯಂತ್ರವನ್ನೂ ಮಾಡಿದರು
ಸೊಳ್ಳೆ ಹೊಡೆಯಲು ಬ್ಯಾಟುಮಾಡಿದರು
ಸೊಳ್ಳೆ-ನೊಣ ಹಿಡಿಯಲು ಯಂತ್ರಮಾಡಿದರು
ಇಷ್ಟೆಲ್ಲಾ ಮಾಡಿದವರಿಗೆ
ಅವೆಲ್ಲದರ ಜೊತೆ
ಸತ್ತ ಮನುಷ್ಯರಿಗೆ ಜೀವಕೊಡುವ ಯಂತ್ರ ?
ಪುನಃ ’ಎ’ ಸೈಡ್ ತಿರುಗಿತು ಬಾಡಿ !
ಹಾಸಿಗೆಯಲ್ಲಿ ನಡೆದ ಈ ಮಹಾಯುದ್ಧದಲ್ಲಿ
ಸುಬ್ರಾಯ ಹೈರಾಣಾಗಿದ್ದ !
೯೦ ಎಮ್ಮೆಮ್ ಕ್ಯಾಸೆಟ್ಟಿನ ಟೇಪು
ಸುಮಾರಾಗಿ ಓಡಿ ಸಿಕ್ಕಾಕಿಕೊಂಡಿತ್ತು!
ಪಡ್ಡು ಮಾಡಿದ್ದೇನೆಂದು ಹೆಂಡತಿ ಕರೆದಾಗ
ಗಡ್ಡ ತುರಿಸಿಕೊಳ್ಳುತ್ತಾ ಎದ್ದುಹೋದ !