ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 19, 2011

|| ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ||

ಅಂತರ್ಜಾಲದ ಕೃಪೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗಾಗಿ


|| ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ||

ವ್ಯಾಸಂ ವಶಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಮೂಕಂ ಕರೋತಿ ವಾಚಾಲಂ ಪಂಗು ಲಂಘಯತೇ ಗಿರಿಮ್|
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||

ಪ್ರಿಯ ಶ್ರೋತೃವೃಂದವೇ, ಅಷ್ಟಾದಶ ಪುರಾಣಗಳನ್ನು ಬರೆದ ಮಹಾಮುನಿಗಳು ಮಿಕ್ಕಿದ್ದನ್ನು ನೀವೇ ಬರೆದುಕೊಳ್ಳಿ ಎಂದು ಜನರಿಗೇ ಬಿಟ್ಟುಬಿಟ್ಟರು. ಆ ಸಮಯದಲ್ಲಿ ಭಯಂಕರವಾಗಿ ತಲೆಕೆರೆಸಿಕೊಂಡ ಸೂತರು ಶೌನಕಾದಿ ಮುನಿಗಳಿಗೆ ಕಲಿಯುಗದ ಬ್ಯಾಂಕಮ್ಮಗಳ ಕುರಿತಾಗಿ ಒಂದು ಮಹಾಪುರಾಣವನ್ನು ಬೋಧಿಸಿದರು. ಪುರಾಣಗಳನ್ನು ಕದ್ದೂಮುಚ್ಚಿ ಕೇಳುವ ಚಟದವರಾದ ತಿಪ್ಪಾ ಭಟ್ಟರು ಇನ್ಯಾರೋ ಅದನ್ನು ಮತ್ಯಾರಿಗೋ ಮತ್ತೆಲ್ಲೋ ಹೇಳುವಾಗ ಆಡ್ಡಗೋಡೆಯ ಸಂದಿಯಲ್ಲಿ ನಿಂತು ಕೇಳಿಸಿಕೊಂಡರು ಎಂಬಲ್ಲಿಗೆ ಬ್ಯಾಂಕಮ್ಮಗಳ ಪುರಾಣ ಆರಂಭವಾದ ಹಾಗೇ.

ತ್ರೇತಾಯುಗದಲ್ಲಿ ವೈಕುಂಠದ ಶ್ರೀಮನ್ನಾರಾಯಣ ಭುವಿಯೆಂಬ ಈ ಭುವಿಯಲ್ಲಿ ಅಯೋಧ್ಯೆಯಲ್ಲಿ ದಶರಥ ಎಂಬಂಥಾ ರಾಜನಿಗೆ ಮಗನಾಗಿ ಜನಿಸಿದ. ಜನಿಸಿದ ಮಗನಿಗೆ ವಶಿಷ್ಠರಾದಿಯಾಗಿ ಋಷಿಗಳು ಸೇರಿ ’ರಾಮ’ ಎಂದು ನಾಮಕರಣಮಾಡಿದರು. ವಿದ್ಯಾಭ್ಯಾಸಕ್ಕಾಗಿ ಗುರು ವಿಶ್ವಾಮಿತ್ರರನ್ನು ಆಶ್ರಯಿಸಿದ ರಾಮ-ಲಕ್ಷ್ಮಣರು ಅಲ್ಲಿ ಹಲವಾರು ಅಸುರರನ್ನು ಕೊಂದರು. ಮಿಥಿಲಾ ನಗರದಲ್ಲಿ ಜನಕರಾಜನ ಕುವರಿಗೆ ಸ್ವಯಂವರವೆಂದರಿತ ವಿಶ್ವಾಮಿತ್ರರ ಅಣತಿಯಂತೇ ರಾಮ ಮಿಥಿಲೆಗೆ ತೆರಳಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು ಸೀತೆಯನ್ನು ಮದುವೆಯಾದ. ಪಟ್ಟಕ್ಕೆ ಉತ್ತರಾಧಿಕಾರಿ ರಾಮನಾಗುತ್ತಾನೆ ಎಂದು ಮಂಥರೆಯಿಂದ ಕಿವಿಯೂದಿಸಿಕೊಂಡ ಕೈಕೇಯಿ ರಾಮನ ವನವಾಸಕ್ಕೆ ಕಾರಣಳಾದಳು. ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮ ವನವಾಸಕ್ಕೆ ತೆರಳಿಯೇ ಬಿಟ್ಟ! ದಿನಗಳು ಕೆಲವು ಕಳೆದಮೇಲೆ ರಾಮ-ಲಕ್ಷ್ಮಣ ಕಾಡಿನಲ್ಲಿ ಕಂದಮೂಲಫಲಗಳನ್ನು ಹುಡುಕಿ ತಿರುಗುತ್ತಿರುವಾಗ ಭಯಂಕರವಾಗಿ ಭೋರ್ಗರೆವ ದನಿಯನ್ನು ಕೇಳಿದರು. ರಾಮನೆಂಬ ರಾಮನೇ ತತ್ತರಿಸಿ ಹೋಗಬೇಕು ಆ ಸದ್ದಿಗೆ! ಕೆಲವೇ ಕ್ಷಣಗಳಲ್ಲಿ ಸುಂದರವಾದ ರೂಪದ ಹೆಣ್ಣೊಬ್ಬಳು ರಾಮನನ್ನು ಮುಖಾಮುಖಿಯಾಗಿ ತನ್ನನ್ನು ಮದುವೆಯಾಗು ಎಂದಳು. ರಾಮ-ಲಕ್ಷ್ಮಣರು ಅಲ್ಲಿ ನಿಂತಾಗ ಅವರ ನಡುವೆ ಸುಮಾರು ದೂರದ ಜಾಗವಿತ್ತು. ರಾಮ ತಾನೊಲ್ಲೆ ತನಗೆ ಮದುವೆಯಾಗಿದೆ, ನನ್ನ ಅನುಜ ಲಕ್ಷ್ಮಣನಿದ್ದಾನೆ ಕೇಳು ಎಂದ. ಲಕ್ಷ್ಮಣನಲ್ಲಿಗೆ ತೆರಳಿದ ಆಕೆ ಅವಮಾನಿತಳಾಗಿ ಮತ್ತೆ ರಾಮನಲ್ಲಿಗೆ ಬಂದಳು. ಹೀಗೇ ಎರಡು ಮೂರು ರೌಂಡು ಹೊಡೆದಮೇಲೆ ಕೋಪದಿಂದ ಲಕ್ಷ್ಮಣ ಬಂದಿದ್ದ ಆ ಶೂರ್ಪನಖಿಯ ಮೂಗನ್ನು ಕತ್ತರಿಸಿ ಬಿಸಾಕಿದ.

ಮೂಗು ಕುಯ್ಸಿಕೊಂಡ ತಂಗಿ ಅಣ್ಣ ರಾವಣನ ಲಂಕೆಗೆ ಕೂಗುತ್ತಲೇ ತೆರಳಿದಳು. " ಓಹೋ ಹಾಗೋ ನೋಡಿಕೊಳ್ಳುತ್ತೇನೆ ಚಿಂತಿಸಬೇಡ " ಎಂದು ರಾವಣ ಸಮಾಧಾನಿಸಿದ. ಮುಂದೆ ರಾಮಾಯಣ ನಡೆದದ್ದು ನಿಮಗೆ ತಿಳಿದೇ ಇದೆ. ರಾಮಾಯಣ ಕಾಲದಲ್ಲಿ ಈ ಮೂಗು ಕುಯ್ಸಿಕೊಂಡ ಶೂರ್ಪನಖಿ ಅಲಾಯ್ದ ಒಂದು ದಿನ ಬಂದು ರಾಮನನ್ನು ಕಂಡಳು. " ಹೋಯ್ ರಾಮ ಇದೆಂಥದು ಮಾರಾಯ ? ನಿಂದೆಲ್ಲಾ ಬರೀ ಹೆಂಗಸರಲ್ಲಿ ಪೌರುಷ ತೋರೋದೇ ಆಗ್ಹೋಯ್ತು. ತಾಕತ್ತಿದ್ದರೆ ನನ್ನ ಕುಲ ಸಾವಿರವಾಗಲಿ ಎಂದು ವರ ಕೊಡು " ಎಂದು ಚಾಲೇಂಜ್ ಮಾಡಿಬಿಟ್ಟಳು! ಎಷ್ಟೆಂದರೂ ಹೆಣ್ಣಲ್ಲವೇ ಪಾಪ ಎಂದುಕೊಂಡ ಶ್ರೀರಾಮ " ತಥಾಸ್ತು, ಕಲಿಯುಗದಲ್ಲಿ ನಿಮ್ಮ ಕುಲ ಸಾವಿರವಾಗಿ ಬ್ಯಾಂಕುಗಳಲ್ಲಿ ಕೆಲಸಮಾಡುವಂತಾಗಲಿ " ಎಂದು ಹರಸಿಬಿಟ್ಟ!!

ಬರುತ್ತ ಬರುತ್ತಾ ತ್ರೇತ, ದ್ವಾಪರ ಕಳೆದು ಕಲಿಯುಗ ಬಂದೇಬಿಟ್ಟಿತು! ಹಣಕಾಸಿನ ವ್ಯವಹಾರಕ್ಕಾಗಿ ವ್ಯವಸ್ಥಿತ ರೂಪವೊಂದನ್ನು ಕೊಡುವಲ್ಲಿ ಕಲಿಯುಗದ ಗಂಡಸರು ಮುಂದಾದರು. ಆ ವ್ಯವಸ್ಥಿತ ಹಣಕಾಸು ಸಂಸ್ಥೆಗಳು ಮೂಲದಲ್ಲಿ ಖಾಸ್ಗೀ ಮಟ್ಟದಲ್ಲಿ ನಡೆಯುತ್ತಿದ್ದವು. ಯಾವಾಗ ಅದೂ ಸ್ಥಿರವಲ್ಲ; ಹಣದ ವ್ಯವಹಾರ ನೋಡಿ, ಯಾರಿಗಾದರೂ ಮೋಸವಾದೀತು ಎಂಬ ಕಾರಣಕ್ಕೆ ಪ್ರಜೆಗಳು ಎಂಬತಕ್ಕಂಥವರು ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ನಡೆಸುವ ಸರಕಾರ ಎಂಬ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಅದನ್ನು ಹತೋಟಿಯಲ್ಲಿ ಇಟ್ಟುಕೊಂಡರು. ಇಂತಹ ಸಂಸ್ಥೆಗಳನ್ನು ನ್ಯಾಷನಲೈಸ್ಡ್ ಬ್ಯಾಂಕುಗಳು ಎಂದು ಕರೆಯಲಾಯಿತು.

ಈ ನ್ಯಾಷನಲೈಸ್ಡ್ ಬ್ಯಾಂಕುಗಳಲ್ಲಿ ಕೆಲಸಮಾಡುವ ಮಂದಿಯನ್ನು ನಿಗದಿಪಡಿಸಬೇಕಲ್ಲಾ ? ಅದಕ್ಕೇ ಕೆಲವು ಪೂರಕ ಪರೀಕ್ಷೆಗಳನ್ನು ಆಯಾ ಬ್ಯಾಂಕುಗಳ ಆಡಳಿತ ಮಂಡಳಿ ಕೈಗೊಂಡಿತು. ರಾಮನ ಶಾಪ ಓ ಸಾರಿ ವರ ಎಲ್ಲಾದರೂ ಸುಳ್ಳಾಗುವುದುಂಟೇ ? ಒಡ್ಡಿದ ಪರೀಕ್ಷೆಗಳಿಗೆ ಎಲ್ಲೆಲ್ಲಿಂದಲೋ ಈ ಶೂರ್ಪನಖಿ ವಂಶಸ್ಥರು ಬಂದುಬಿಟ್ಟರು! ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೀಟುಗಳಲ್ಲಿ ಆಸೀನರಾಗಿಯೂ ಬಿಟ್ಟರು !!ತಮ್ಮೊಳಗೇ ಪುಳಕಗೊಂಡ ಬ್ಯಾಂಕಿನ ಗಂಡು ಕೆಲಸಗಾರರು ನಿತ್ಯವೂ ಶೂರ್ಪನಖಿಯರನ್ನು ಹೊಗಳಿಯೇ ಹೊಗಳಿದರು.

’ಶೂರ್ಪನಖಾ’ ಎಂದರೆ ಹೆಸರೇ ಎಷ್ಟು ಚಂದನೋಡಿ! ಅಂತಹ ಶೂರ್ಪನಖಿಯರ ನಖಗಳೂ ಕೆಲವೊಮ್ಮೆ ಶೂರ್ಪವಾಗೇ ಇರುತ್ತವೆ, ಹಲವು ಬಣ್ಣಗಳನ್ನು ಧರಿಸುತ್ತವೆ. ಎಲ್ಲರೂ ಶೂರ್ಪನಖವುಳ್ಳವರಲ್ಲ ಎಂಬ ಕಾರಣಕ್ಕೆ ಸಮೂಹಿಕವಾಗಿ ಬ್ಯಾಂಕಮ್ಮಗಳು ಎಂದುಬಿಡೋಣ ಅಲ್ಲವೇ? ಇಂತಹ ಬ್ಯಾಂಕಮ್ಮಗಳು ನಿತ್ಯವೂ ಚಳಿಯಲ್ಲಿ ಬೆಳಿಗ್ಗೆ ಬರುವುದು ತಡವಾಗಿ. ನಿಗದಿತ ಸಮಯಕ್ಕಿಂತ ೧೫ ನಿಮಿಷಗಳು ಮೊದಲೇ ಬ್ಯಾಂಕಿನ ದಿನದ ವಹಿವಾಟು ಮುಗಿಸದಿದ್ದರೆ ಅವರು ಬ್ಯಾಂಕಮ್ಮಗಳೇ ಅಲ್ಲ ! ಬೆಳ್ಳಂಬೆಳಿಗ್ಗೆ ಹತ್ತುಗಂಟೆಗೆಲ್ಲಾ ಸೀಟನ್ನು ಅಲಂಕರಿಸುವ ಅವರ ನಿತ್ಯದ ದಿರಿಸುಗಳು ಸಿನಿಮಾ ನಟಿಯರನ್ನು ಹೋಲುವಂತಿರುತ್ತವೆ. ಒಂದೇ ಸಮ ಕೆಲಸಮಾಡಿ ಬೇಜಾರಾಗುತ್ತದೆ ನೋಡಿ ಯಾರಾದರೂ " ನೀವು ತುಂಬಾ ಚೆನ್ನಾಗ್ ಕಾಣಸ್ತೀರ " ಎಂದರೆ ಆಕಾಶಕ್ಕೆ ಮೂರೇ ಗೇಣು!! ನಿಮಗೆ ಬ್ಯಾಂಕುಗಳಲ್ಲಿ ಕೆಲಸ ಬೇಗ ಆಗಬೇಕೋ ? ಹಾಗಾದರೆ ಬ್ಯಾಂಕಮ್ಮಗಳನ್ನು ಹೊಗಳಿ! ಅದಿಲ್ವೋ " ಏನ್ ಬೇಕ್ರಿ ಅಲ್ಹೋಗ್ರಿ " ಎಂದು ಅವರು ವಾಚಾಮಗೋಚರವಾಗಿ ನೀವು ಬ್ಯಾಂಕಿಗೆ ಬಂದಿದ್ದೇ ಅಪರಾಧ ಎನ್ನುವ ರೀತಿಯಲ್ಲಿ ನೋಡುವುದರಲ್ಲಿ ಯಾವುದೇ ಸಂಶಯವಿಲ್ಲ!

ಬಂಗಾರದ ಸರ ಖರೀದಿಸಿದ್ದು, ಚೀಟಿ ಹಾಕಿದ್ದು, ಮಗ-ಮಗಳು ಓದುತ್ತಿರುವುದು ಅಥವಾ ಇನ್ಫೋಸಿಸ್ಸು-ವಿಪ್ರೋ ಸೇರಿರುವುದು ಇತ್ಯಾದಿಗಳಿಂದ ಹಿಡಿದು ತರಕಾರೀ ಮಾರುಕಟ್ಟೆಯ ವರೆಗಿನ ಎಲ್ಲಾ ಸುದ್ದಿ ಮತ್ತು ಕ್ಷೇಮಸಮಾಚಾರಗಳ ಪರಸ್ಪರ ವಿಲೇವಾರಿ ಆದಮೇಲೇಯೇ ನಿಮಗೆ ಬಟವಾಡೆಮಾಡಬೇಕಾದ ಕೆಲಸಕ್ಕೋ ಠೇವಣಿ ತೆಗೆದುಕೊಳ್ಳಬೇಕಾದ ಕೆಲಸಕ್ಕೋ ಮತ್ತಿನ್ಯಾವುದಕ್ಕೋ ಅವರು ಬರುವುದು. ಅಲ್ಲೀವರೆಗೆ ಅವರಿಗೆ ಪುರುಸೊತ್ತಿರುವುದಿಲ್ಲ. ಅಷ್ಟೇ ಹೊತ್ತಿಗೆ ಸರಿಯಾಗಿ ಕಾಫಿ ಬರುತ್ತದೆ, ಮಾರ್ನಿಂಗ್ ಕಾಫೀ ಬ್ರೇಕು. " ಸರ್ವರ್ ಬರ್ತಾ ಇಲ್ಲ" " ಲಾಗಿನ್ ಆಗ್ತಾ ಇಲ್ಲ" ಎಂಬ ಹೇಳಿಕೆಗಳು ತೀರಾ ಸಾಮಾನ್ಯ. ಅವನ್ಯಾವನೋ ಹತ್ತಿರ ಬಂದು " ಈಗ ಬರ್ತಾ ಇದೆ ನೋಡಿ " ಎಂದು ಅರ್ಧಘಂಟೆ ಬಿಟ್ಟು ಹೇಳಿಹೋಗುತ್ತಾನೆ. ಅಲ್ಲೀವರೆಗೂ ನೀವು ನಿಂತೇ ಇರಬೇಕು, ಕಾದೇ ಇರಬೇಕು.

ಕೆಲವು ಬ್ಯಾಂಕುಗಳಲ್ಲಿ ಕರೆಂಟು ಹೋದರೆ ಬ್ಯಾಂಕಮ್ಮಗಳಿಗೆ ಹಬ್ಬವೇ ಹಬ್ಬ! ಸುದ್ದಿಯ ಸಡಗರ!! ಯೂಪಿಎಸ್ಸು ಎರಡು ಮೂರು ಕಂಪ್ಯೂಟರುಗಳಿಗೆಮಾತ್ರ ಸಾಕು, ಮಿಕ್ಕಿದ್ದಕ್ಕೆ ಕರೆಂಟು ಬರಬೇಕು ಎಂಬ ಹೇಳಿಕೆ ನೀಡಿ ಕೂತಿರುತ್ತಾರೆ. ಜಾಸ್ತಿ ಮಾತಾಡಿದಿರೋ ನಿಮ್ಮನ್ನು ನಖದಿಂದ ಶಿಖದವರೆಗೂ ದುರುಗುಟ್ಟಿ ನೋಡಿ ಜನ್ಮ ಜಾಲಾಡಿಬಿಟ್ಟಾರು ಹುಷಾರು! ಯಾಕೆಂದರೆ ವಂಶವಾಹಿನಿ ಪ್ರಭಾವ !!ಯಾರದೋ ಹುಟ್ಟಿದ ಹಬ್ಬವಾದರೆ ಬ್ಯಾಂಕಮ್ಮಗಳಲ್ಲಿ ಕೆಲವರಿಗೆ ಪರ್ಮಿಶನ್ ಮೇಲೆ ರಜೆ! ಎಲ್ಲೋ ಜಾತ್ರೆ ಇದ್ದರೆ ಅವರೂ ಹೋಗಬೇಕು ಪಾಪ ಮನುಷ್ಯರಲ್ವೇ? ಅಂತೂ ಯಾರದೋ ದುಡ್ಡು ಎಣಿಸುವವರು ಎಲ್ಲಮ್ಮನ ಜಾತ್ರೆ ಮಾಡುವುದಂತೂ ಗ್ಯಾರಂಟಿ! ಪಾಸ್ ಬುಕ್ ವಗೈರೆ ನೀವು ವಾರಕ್ಕೂ ಮೊದಲೇ ಕೊಟ್ಟಿರಬೇಕು! ಈಗ ಕೈಲಿ ಬರೆಯುವ ಪ್ರಮೇಯವೇ ಇಲ್ಲ, ಎಲ್ಲಾ ಸಸಾರ, ಆದರೆ ಬಟನ್ ಒತ್ತುವುದು ತ್ರಾಸದಾಯಕ!! ಅಲ್ಲಿ ಶೂರ್ಪ’ನಖ’ ಅಡ್ಡಬರುತ್ತದೆ! ಉಗುರು ಕಟ್ಟಾದರೆ ಥೂ ಅಸಹ್ಯವಪ್ಪ, ಅವರಂತೂ ಸಹಿಸಲಾರರು! ತಿಂಗಳ ಸಂಬಳ ಎಣಿಸಿಕೊಳ್ಳುವಾಗಲೂ ನಖದ ಪ್ರಶ್ನೆಯೇ ಬರುವುದಿಲ್ಲ, ಸಂಬಳ ನೇರ ಅಕೌಂಟಿಗೇ ಜಮಾ ಆಗುತ್ತದೆಯಲ್ಲ!

ಇಂತೀ ಪರಿಯಲ್ಲಿ ಒಂದಾನೊಂದು ಕಾಲಕ್ಕೆ ಒಂದಾನೊಂದು ಬ್ಯಾಂಕಿನಲ್ಲಿ ಒಬ್ಬ ಆಂಟಿ ಸೋ ಸಾರಿ ಒಬ್ಬ ಬ್ಯಾಂಕಮ್ಮ ಇದ್ದಳು. ಅವಳಮನೆ ಫ್ಯಾಷನ್ನೋ ಅವಳನ್ನು ನೋಡಬೇಕಾಗಿತ್ತು. ತ್ರೀಪೋರ್ಥ್ ಪ್ಯಾಂಟು ಟೀ ಶರ್ಟಿನಲ್ಲಿ ರಾರಾಜಿಸುತ್ತಿದ್ದ ಅವಳ ಸುತ್ತ ಹಲವು ಕಥೆಗಳೇ ಇದ್ದವು. ತಾನು ಯಾವುದೇ ಸಿನಿಮಾ ನಟಿಗೂ ಕಮ್ಮಿ ಇಲ್ಲ ಎಂದುಕೊಂಡು ಓಡಾಡುತ್ತಿದ್ದ ಅವಳಿಕೆ ಅದಾಗಲೇ ಮೂರ್ನಾಲ್ಕು ಮದುವೆಗಳೂ ವಿಚ್ಛೇದನಗಳೂ ನಡೆದುಹೋಗಿದ್ದವಂತೆ ಎಂಬುದು ಕೆಲವು ಗ್ರಾಹಕರ ಅಂಬೋಣವಾಗಿತ್ತು. ಸಖಿಯರ ಮಧ್ಯೆ ಕುಳಿತುಕೊಳ್ಳುವ ರಾಣಿಯಂತೇ ಮಿಕ್ಕ ಬ್ಯಾಂಕಮ್ಮಗಳ ಮಧ್ಯೆ ವಿಹರಿಸುತ್ತಿದ್ದ ಆ ಬ್ಯಾಂಕಮ್ಮನ ಖರ್ಚಿಗೆ ಬರುವ ಸಂಬಳ ಸಾಲುತ್ತಿದ್ದುದು ಡೌಟು. ಜಗತ್ತಿನಲ್ಲಿರುವ ಎಲ್ಲಾ ಸೆಂಟೂ, ಎಲ್ಲಾ ಲೋಶನ್ನೂ ಎಲ್ಲಾ ಪೌಡರೂ ಅವಳ ತಾಬಾ ಇದ್ದವು!ಇಷ್ಟೆಲ್ಲಾ ಹಾರಾಡುತ್ತಿದ್ದ ಆಕೆಯೆ ವೃತ್ತಿಜೀವನದಲ್ಲಿ ಕೆಲಸಮಾತ್ರ ಆಮೆವೇಗಕ್ಕೂ ಕಮ್ಮಿಯದು. ತಪ್ಪೆಣಿಸುವ ಮ್ಯಾನೇಜರ ಕಡೆಗೆ ಹೆಪ್ಪುಗಟ್ಟಿದ ಕಡು ಲಿಪ್‍ಸ್ಟಿಕ್ ಪೂಸಿತ ದಿವ್ಯ ನಗೆಯನ್ನು ಬೀರಿಬಿಟ್ಟರೆ ಅವರು ತೆಪ್ಪಗಾಗಿಬಿಡುತ್ತಿದ್ದರು!

ಪುರಾಣ ಮುಂದುವರಿಸುವ ಸಮಯದಲ್ಲಿ ಬೆಕ್ಕು ಅಡ್ಡ ಬಂದಿದ್ದರಿಂದ ಇಲ್ಲಿಗೇ ನಿಲ್ಲಿಸಿಬಿಟ್ಟರು! ತಿಪ್ಪಾ ಭಟ್ಟರಿಗೆ ರಸಭಂಗವಾಗಿ ಮಹಾಕೋಪಾವಿಷ್ಟರಾಗಿ ಪಂಚೆ ಕೊಡವಿಕೊಂಡು ಎದ್ದುಹೋದರು ಎಂಬಲ್ಲಿಗೆ ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ಸದ್ಯಕ್ಕೆ ಮಂಗಲವಪ್ಪುದು.

ಮಂಗಲಂ ಕೋಸಲೇಂದ್ರಾಯ ಮಹನೀಯ ಗುಣಾಭ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್ ||

ವೇದವೇದಾಂತವೇದ್ಯಾಯ ಮೇಘಶ್ಯಾಮಲಮೂರ್ತಯೇ |
ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಳಮ್ ||

ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇಃ |
ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಳಮ್ ||