ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 29, 2012

ಕರುವಿನ ಮೊರೆ

 ಚಿತ್ರಋಣ: ಮೈ ಇಂಡಿಯಾ ಪಿಕ್ಚರ್ಸ್ . ಕಾಂ
ಕರುವಿನ ಮೊರೆ

[ಹೋರಿಗರುವನ್ನು ಹುಟ್ಟಿದ ಕೆಲವೇ ದಿನಗಳಲ್ಲಿ ಅಮ್ಮನ ಹಾಲನ್ನು ತಪ್ಪಿಸಿದ ಮಾಲೀಕ ಕಟುಕರಿಗೆ ಮಾರುತ್ತಾನೆ, ಏನೂ ಅರಿಯದ ಆ ಮುಗ್ಧ ಕರುವಿನ ಬಾಯನ್ನೇ ಹೊಲಿದು [ಸಾಗಾಣಿಕೆಮಾಡುವಾಗ ಕೂಗಿಕೊಳ್ಳದಂತೇ] ಸಾಗಿಸುವಾಗಿನ ದೃಶ್ಯ ಹೃದಯವಿದ್ರಾವಕ, ಕಲ್ಪಿಸಿಕೊಳ್ಳಲೂ ಕಣ್ಣೀರು ಒಸರುವ ಇಂತಹ ಕೃತ್ಯಗಳು ಈಗ ನಡೆಯುತ್ತಿವೆ:]

ತಾಯಹಾಲನು ಬಿಡಿಸಿ ಬಾಯನ್ನೇ ಹೊಲಿಯುತ್ತ
ಮಾಯದೆಳೆತಂದರು ಹರನೇ
ಸಾಯಿಸಿ ತಿಂಬರು ಆರೂ ಕೇಳುವರಿಲ್ಲ
ರಾಯ ಮಾರಿದನೆನ್ನ ಬಿರನೇ

ಕಾಯದಳೆದೆನು ಇಹದಿ ಕಾಣದೀಕ್ರೌರ್ಯವ
ನೇಯ ಮಾನವ ರಚಿತ ಚಿತ್ರ 
ಪಾಯವಿಲ್ಲೆನಗಿನ್ನು ದೀನವೆನ್ನಯ ಜನ್ಮ
ಜೀಯ ಓದೀ ಮೂಕ ಪತ್ರ !

ಮಾಯಕದ ಮಳೆನಿಂತು ಭೂಮಿ ಬರಡಾಗುತ್ತ
ಕಾಯಕದೊಳು ನಷ್ಟವಾಗಿ
ಹಾಯುವ ಸಾಲದ ಜನರೀಗುತ್ತರಿಸುತ್ತ
ಬೇಯತೊಡಗಿದನುಳುವ ಯೋಗಿ 

ಬೀಯು ಇಲ್ಲದ ಹಟ್ಟಿ ಮೇವು ಇಲ್ಲದ ಬಯಲು
ನಾಯಿಗಿಂತಾ ಕಡೆಯ ಬಾಳು
ಛಾಯೆಕಾಣದು ಹೊರಗೆ ಮುಚ್ಚಿದವಾಹನ
ಕಾಯುತೊಯ್ದರು ಹೇಳೇ ಗೋಳು

ತೇಯುತಾಕೆಯ ಜೀವ ಹಾಲನ್ನೇ ಉಣಬಡಿಸಿ
ಗಾಯದಾ ಮೈಮನದಲ್ಲೂ
ಗೇಯುತಲೆನ್ನಮ್ಮ ಒಡೆಯನೊಳಿತನು ಬಯಸಿ
ಮೇಯದಾ ಆ ಹಸಿವಲ್ಲೂ

ನೋಯುತಲಿರುವಂತೇ ಮುರಿದು ಕಾಲ್ಗಳಮಡಚಿ
ಬಾಯಾರಿಕೆಗು ಏನೂ ಕೊಡದೇ
ಈಯುವ ಹಸುವಲ್ಲ ಬಸವಣ್ಣ ನಾನೆಂದು
ಹೇಯವಾಗಿಯೆ ಕಡಿದು ಬಡಿದೇ 


Saturday, April 28, 2012

ಐದು ಕಾಲಿನ ಮಂಚ ಕುಂಟ ಮಲಗಿದ್ದ !

 
ಅಖಂಡ ಭಾರತದ ಚಿತ್ರ ಕೃಪೆ: ಅಂತರ್ಜಾಲ.
ಐದು ಕಾಲಿನ ಮಂಚ ಕುಂಟ ಮಲಗಿದ್ದ !

ಮೂರು ಎನ್ನುವುದಕ್ಕಿಂತ ಎರಡು ಮತ್ತೊಂದು ಎನ್ನುವುದೇ ಸರಿ ಯಾಕೆಂದರೆ ಇಲ್ಲಿರುವ ವಿಷಯಗಳೇ ಹಾಗಿವೆ. ಜಾಸ್ತಿ ಕಾಲಹರಣ ಮಾಡುವುದಕ್ಕಿಂತ ನೇರವಾಗಿ ನಿಮ್ಮನ್ನು ಅಡಿಗೆಮನೆಗೇ ಕರೆದೊಯ್ದರೆ ಅಲ್ಲಿರುವ ಸಾಮಗ್ರಿ, ಅಡಿಗೆ ತಯಾರಾಗುತ್ತಿರುವ ಕ್ರಮ, ಅಡಿಗೆ ಮಾಡುತ್ತಿರುವವರ ಪ್ರವರ, ಅಡಿಗೆ ಮನೆಯ ಗಬ್ಬು ಎಲ್ಲವೂ ಕಾಣುವುದರಿಂದ ನನ್ನ ಕೆಲಸ ತುಸು ಕಮ್ಮಿಯಾಗುತ್ತದೆ.

ಅಡಿಗೆಮನೆ ಎಂದ ತಕ್ಷಣ ನೆನಪಾಯ್ತು: "ಮೊನ್ನೆ ಒಂದು ವಾರಪತ್ರಿಕೆಯ ಸಂಪಾದಕ ಬರೆದಿದ್ದಾನೆ-ನಾವು ದನಾನಾರು ತಿಂತೀವಿ ಕುರೀನಾರು ತಿಂತೀವಿ ಅದು ನಮ್ಮ ಜನ್ಮಸಿದ್ಧ ಹಕ್ಕು-ನಮ್ಮ ಆಹಾರ, ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇರುವುದಿಲ್ಲ. ನನ್ನ ಅಮ್ಮ ೮೦ ಕೋಳಿ ಸಾಕಿದ್ದಳು- ಅವುಗಳಿಗೆ ಹೊತ್ತಿನಲ್ಲಿ ಆಹಾರ ಹಾಕಿ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಕತ್ತರಿಸುವಾಗಲೂ ಅವುಗಳಿಗೆ ನೋವಾಗದಂತೇ ಕತ್ತರಿಸುತ್ತಿದ್ದಳು!" --ಈ ಮಹಾಶಯನ ಶಬ್ದಗಳು ಅವನಿಗೇ ಅರ್ಥವಾಗುವುದಿಲ್ಲವೇನೋ !! ಯಾವ ಜೀವಿಗೆ ತನ್ನ ಶರೀರದ ಭಾಗವನ್ನು ಕತ್ತರಿಸುವಾಗ ನೋವಾಗದೇ ಇದ್ದೀತು ? ಎಂಥಾ ಸಂಭಾವಿತ ಮಾತು ಆ ಸಂಪಾದಕನದು. ಇವತ್ತಿನ ಕಾಲಮಾನವೇ ಹಾಗೆ. ಒಂದುಕಾಲದಲ್ಲಿ ತಲ್ವಾರ್ ಹಿಡಿದವರೆಲ್ಲಾ ಇಂದು ಪತ್ರಿಕಾಕರ್ತರಾಗಿದ್ದಾರೆ; ಬಾಯಿಗೆ ಬಂದಿದ್ದನ್ನು ಹೇಳುತ್ತಾರೆ. ವಿಷಯಗಳೇನೂ ಸಿಗದಾಗ ಅಲ್ಪಸಂಖ್ಯಾತರು, ಗೋಹತ್ಯಾ ನಿಷೇಧ, ಅಯೋಧ್ಯೆಯ ರಾಮಮಂದಿರ, ಹಿಂದೂ ಧರ್ಮ, ಸಂಘಪರಿವಾರ-ಇವುಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಬರಿದೇ ಕುಯ್ಯುತ್ತಾರೆ, ದೇಶದಲ್ಲೇ ಹುಟ್ಟಿದ್ದರೂ ದೇಶದ್ರೋಹಿಗಳಂತೇ ಬದುಕುತ್ತಾರೆ. 

ಮಾಂಸಾಹಾರವನ್ನು ಕೆಲವು ದಿನಗಳಲ್ಲಿ ನಿಷೇಧಿಸಬೇಕು ಎಂದು ಸರಕಾರ ಹೊರಡಿಸಿದ ಕಾಯ್ದೆಗೆ ಅವರ ಅಡ್ಡಿ. " ನಾವೆಲ್ಲಾ ಮೊದಲು ೬ ತಿಂಗಳಿಗೋ ಮೂರು ತಿಂಗಳಿಗೋ ಮಾಂಸ ತಿಂತಾ ಇದ್ವಿ, ಈಗ ದಿನಾ ತಿಂತೀವಿ" ಎನ್ನುವ ಆತನ ಯಾರೋ ಮಿತ್ರ ಬ್ರಾಹ್ಮಣನಂತೆ ಆತ ಅಲ್ಲೆಲ್ಲಿಗೋ ಹೋಗಿಬರುವಾಗ " ಸಾವಿರಾರು ವರ್ಷಗಳಿಂದ ನಮ್ಮನ್ನೆಲ್ಲಾ ನೀವು ಇದರಿಂದ ವಂಚಿಸಿಬಿಟ್ಟಿದ್ದೀರಿ ಈಗಾದರೂ ತಿನ್ನಲು ಬಿಡಿ" ಎಂದು ಮಾಂಸ ತಿನ್ನಲು ಹೋದನಂತೆ, ಹೋಗಲಿ ಬಿಡಯ್ಯಾ ಆತ ನಿನ್ನ ಭಕ್ತ, ನಿನ್ನ ಸಂಗದಿಂದ ಹಾಗೆ ಹೋಗಿದ್ದಾನೆ, ಆದರೆ ಎಲ್ಲರೂ ಹೋದರೆ? ಇವತ್ತು ಮಾಂಸಾಹಾರ ಜಾತಿಯಿಂದ ಗುರ್ತಿಸಲ್ಪಡುವುದಿಲ್ಲ ಎಂಬ ಕಿಂಚಿತ್ ಬುದ್ಧಿಯೂ ನಿನಗೆ ಬೇಡವೇ ?  ಅಪರೂಪಕ್ಕೆ ತಿನ್ನುತ್ತಿದ್ದ ನೀನು ದಿನಾ ತಿನ್ನಲು ಆರಂಭಿಸಿರುವುದು ನೀನು ಯಾವ ಮಟ್ಟಕ್ಕೆ ಸಾಗುತ್ತಿರುವೆ ಎಂಬುದರ ಬಗ್ಗೆ ತಿಳಿಸುತ್ತದೆಯಲ್ಲವೇ?  ದಿನಬೆಳಗಾದರೆ ನಿನಗೂ ನಿನ್ನ ಮನೆ,ಮಕ್ಕಳು-ಮರಿಗಳಿಗೂ  ಹಾಲನ್ನು ನೀಡುವ ಗೋವನ್ನು ತಿನ್ನುವುದು ಸರಿಯೆಂದು ವಾದಿಸುವುವಾಗ ಜೀವಗಳಿಗೆ ಆಗುವ ನೋವಿಗೆ ನಿನ್ನಲ್ಲಿ ಬೆಲೆಯಿಲ್ಲ ಎಂಬುದು ಗೊತ್ತಾಗುತ್ತದೆ. ರಕ್ತಪಾತವನ್ನೇ ಕಂಡು ಅದನ್ನೇ ಉಂಡ ಮನಸ್ಸಿಗೆ ಅದು ಹೇಯ ಎನಿಸುವುದೇ ಇಲ್ಲ! ಆದರೂ ಸಮಾಜದಲ್ಲಿ ಮದಿರೆಗೂ ಮಧುರಾಮೃತಕ್ಕೂ ವ್ಯತ್ಯಾಸ ಇದೆ ಎಂಬುದನ್ನು ನೀನು ಅರಿಯಬೇಕಲ್ಲವೇ ? 

ಒಮ್ಮೆ ಬೆಂಗಳೂರಿನ ಶಿವಾಜಿನಗರದಲ್ಲಿ ನಾನು ಯಾವುದೋ ಕೆಲಸದ ನಿಮಿತ್ತ ಓಡಾಡುತ್ತಿದ್ದೆ. ಗಬ್ಬು ಗಲೀಜು ಮಾಂಸಾಹಾರದ ಹೋಟೆಲ್ ಗಳ ಹಿಂಭಾಗದಲ್ಲಿ ಅನಿವಾರ್ಯವಾಗಿ ತೆರಳುವ ಪ್ರಸಂಗ ಬಂತು. ಅಲ್ಲಿ ನೋಡಿದರೆ ದೇವನಿ ತಳಿಯ ಬಿಳಿಯ, ಅತ್ಯಂತ ಸುಂದರ ಹೋರಿಗರುವನ್ನು ಕಟ್ಟಿಹಾಕಿದ್ದರು. ಬಿಸಿಲು ಹೇಗಿತ್ತೆಂದರೆ ಯಾರೂ ಅಂತಹ ಬಿಸಿಲಲ್ಲಿ ನಿಲ್ಲಲಾರರು. ಯಾರೋ ಒಬ್ಬಾತ ಹುಡುಗ ಅದಕ್ಕೆ ಅದೇನನ್ನೋ ತಿನ್ನಲು ಕೊಟ್ಟ. ಅದು ತಿನ್ನುತ್ತಾ ಇತ್ತು. ಜಾಸ್ತಿ ಓಡಾಡಲೂ ಹಗ್ಗ ಉದ್ದವಿರಲಿಲ್ಲ. ಬಹುಶಃ ಮಾರನೇದಿನ ಅದು ಅನೇಕ ಹೊಟ್ಟೆ ಸೇರಿರುತ್ತದೆ!  ಆ ಕ್ಷಣದಲ್ಲಿ ಆ ಕರುವಿಗೆ ತನಗೆ ಘಟಿಸಬಹುದಾದ ನೋವಿನ ಪರಿವೆಯಿತ್ತೇ? ಇದ್ದರೂ ಕ್ರೂರ ನರರಾಕ್ಷಸರ ಕೈಲಿ ಸಿಕ್ಕಮೇಲೆ ಅದು ತಾನೇ ಏನುಮಾಡಲಾದೀತು. ಹಾಗೆ ನೋಡಿದರೆ ಮೊಲ, ಕುರಿ, ಕೋಳಿಗಳೆಲ್ಲವೂ ನೋವನ್ನು ಅನುಭವಿಸದೇ ಸತ್ತುಹೋಗುತ್ತವೇನು? ಮಾಂಸಾಹಾರ ಭಕ್ಷಿಸುವುದರಿಂದ ಇಂದ್ರಿಯಗಳಮೇಲಿನ ಹತೋಟಿ ಕಮ್ಮಿಯಾಗುತ್ತದೆ. ಪಂಚೇಂದ್ರಿಯಗಳು ತಮ್ಮಿಷ್ಟದಂತೇ ವರ್ತಿಸಲು ತೊಡಗುತ್ತವೆ. ಅದಕ್ಕೇ ಅದನ್ನು ಆದಷ್ಟೂ ಕಮ್ಮಿ ಬಳಸಬೇಕು ಎಂಬುದು ನಮ್ಮ ಸಲಹೆಯಾದರೆ ಎಗರಾಡುವ ಆ ಸಂಪಾದಕನನ್ನು ನೋಡಿ, ವಿದ್ಯಾಭೂಷಣರು ಹಾಡಿದ ’ಐದು ಕಾಲಿನ ಮಂಚ ಕುಂಟ ಮಲಗಿದ್ದ’ ಹಾಡು ನೆನಪಾಯ್ತು, ನೀವೂ ಸ್ವಲ್ಪ ಕೇಳಿಸಿಕೊಳ್ಳಿ, ಅರ್ಥಮಾತ್ರ ನನ್ನಲ್ಲಿ ಕೇಳಬೇಡಿ-ಅದು ನೇವೇ ಚಿಂತಿಸಿ ಗಳಿಸಬೇಕಾದದ್ದು ಎಂಬ ಕರಾರಿನ ಮೇಲೇ ನಿಮಗೆ ಹಾಡು ಕೇಳಿಸುತ್ತಿದ್ದೇನೆ! ಅಂದಹಾಗೇ ಇಂದಿನ ಕೆಲವು ಘಟನೆಗಳು ಈ ಹಾಡಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ ಎಂಬುದಷ್ಟನ್ನು ಹೇಳಬಲ್ಲೆ!! 




 ೧. ಪಾಕಿಗಳು ಸುಧಾರಿಸುವುದಿಲ್ಲ

ಉಗ್ರ ಕಸಬ್ ವರ್ಷಗಟ್ಟಲೆ ರಾಜೋಪಚಾರ ಪಡೆದು ನಮ್ಮ ಶಿರಸಿ ಮಾರಿಕೋಣ ಕೊಬ್ಬಿದಹಾಗೇ ಕೊಬ್ಬಿದ್ದಾನೆ! ಆತನಿಗೆ ಸರ್ವೋಚ್ಚನ್ಯಾಯಾಲಯ ಜೀವದಾನ ನೀಡಲೂ ಮುಂದಾಗಬಹುದು, ಯಾಕೆಂದರೆ ಭಾರತೀಯರಾದ ನಾವು ಯಾರು ಏನೇ ಮಾಡಿದರೂ ಸಹಿಸಿಕೊಳ್ಳುವವರೇ ಹೊರತು ಅವರಿಗೆ ಬುದ್ಧಿಕಲಿಸುವ ಬುದ್ಧಿ ನಮ್ಮಲ್ಲಿಲ್ಲ. ನಾನು ಬುದ್ಧಿಬಲ್ಲಾದಲಾಗಾಯ್ತು ನೋಡುತ್ತಲೇ ಇದ್ದೇನೆ: ಪಾಕಿಗಳು ಬದಲಾಗಿಲ್ಲ, ಬದಲಾಗಿ ಇಡೀ ಜಗತ್ತಿನಲ್ಲಿ ಉಗ್ರಗಾಮಿಗಳು ಹುಟ್ಟುವುದು ಮತ್ತು ಆಶ್ರಯ ಪಡೆಯುವುದು ಪಾಕಿಸ್ತಾನದಲ್ಲಿ ಎಂದು ಹೇಳಲೇಬೇಕಾಗಿದೆ. ಆರ್ಥಿಕವಾಗಿ ಸ್ವಾವಲಂಬನೆ ಇದ್ದಿದ್ದರೆ ಇಡೀ ಜಗತ್ತನ್ನೇ ನಡುಗಿಸುವ ರಕ್ಕಸರೇ ತುಂಬಿರುವ ಪಾತಕಿಗಳಸ್ಥಾನಕ್ಕೆ ಭಾರತದಲ್ಲಿರುವ ದೇಶದ್ರೋಹಿಗಳ ಅಪರಿಮಿತ ಸಹಕಾರ ಇದೆ. ಇಲ್ಲಿ ದೊಡ್ಡ ಹೂಸು ಬಿಟ್ಟರೂ ಅದು ಪಾಕಿಸ್ತಾನಕ್ಕೆ ಕೇಳಿಸುತ್ತದೆ! ಪಾಕಿಸ್ತಾನ ಕ್ರಿಕೆಟ್ ನಲ್ಲಿ ಗೆದ್ದರೆ ಇಲ್ಲಿರುವ ಪಾತಕಿಗಳು ಪಟಾಕಿ ಹಾರಿಸುತ್ತಾರೆ! ಕಳುಹಿಸಿದವರು ದೂರವಾಣಿ ಕರೆಯ ವಿವರಣೆ ಸಮೇತ ಸಿಕ್ಕಿಬಿದ್ದು, ನೇರವಾಗಿ ತಾವೇ ಹೊಣೆ ಎಂದಮೇಲೂ, ತಾನು ನಿರಪರಾಧಿ ಎಂಬ ಕಸಬ್ ನ ಮಾತಿಗೆ ಏನೆನ್ನಬೇಕು? ಹಾಗೆ ಯಾರಮೇಲೋ ದಾಳಿಮಾಡುವಾಗ ತಾನು ಏನು ಮಾಡುತ್ತೇನೆ ಎಂಬ ಪರಿವೆ ಆತನಿಗಿರಲಿಲ್ಲವೇ? ಮಾಡಬಾರದ ಕೆಲಸ ಮಾಡಿದವರಿಗೆ ತಕ್ಕ ಪ್ರಮಾಣದ ಶಿಕ್ಷೆ ವಿಧಿಸುವುದು ರಾಜಧರ್ಮವಾಗುತ್ತದೆ; ಪ್ರಸಕ್ತ ಕಸಬ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಸಾಮಾನ್ಯ ಕಾರಾಗ್ರಹದಲ್ಲಿಟ್ಟು ದುಡಿಸಬೇಕು ಮತ್ತು ನಂತರ ಆತನನ್ನು ಗಲ್ಲಿಗೇರಿಸಬೇಕು-ಇದನ್ನು ನೋಡಿದ ಪಾಕಿ ಯುವಕರು ಮತ್ತೆ ಇಂತಹ ಕೆಲಸಕ್ಕೆ ಮುಂದಾಗಬಾರದಂತಿರಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಮೂರೂ ಹೊತ್ತು ಮಾಂಸಾಹಾರವನ್ನೇ ತಿಂದು ಮನುಷ್ಯತ್ವಕ್ಕೆ ಬೆಲೆಯನ್ನೇ ಕಳೆದ ಜನ ಪಾಕಿಗಳು.


೨. ಹೊಲಗೇಡಾದ ವಿಶ್ವವಿದ್ಯಾಲಯಗಳು

ಸುಮಾರು ಘಟನೆಗಳಾದವು, ಆಗುತ್ತಲೇ ಇವೆ. ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡುವ ಮೇಲ್ದರ್ಜೆಯ ಶಿಕ್ಷಕರಲ್ಲಿ, ಮಹಾಮಹೋಪನ್ಯಾಸಕರಲ್ಲಿ, ಅಧ್ಯಾಪಕರಲ್ಲಿ ಅನೇಕರು ಕಚ್ಚೆಹರುಕರಾಗಿದ್ದಾರೆ. ಹಿಂದೆಲ್ಲಾ ವಿಶ್ವವಿದ್ಯಾಲಯಗಳ ಆ ಸ್ಥಾನಕ್ಕೆ ಗೌರವವೂ ಇತ್ತು; ಅದನ್ನು ಅಲ್ಲಿರುವ ಜನ ಜತನಗೊಳಿಸಿದ್ದರು-ತಮ್ಮ ಕಾಮನೆಗಳನ್ನು ಹಿಡಿತದಲ್ಲಿಟ್ಟಿದ್ದರು. ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತಿನಂತೇ ನಯ-ವಿನಯ ರೀತಿ-ನೀತಿಗಳಿದ್ದವು. ಇವತ್ತು ಲಾಬಿಮಾಡಿ ಸ್ಥಾನಗಳಿಸುವವರೇ ಜಾಸ್ತಿ ಇರುವುದರಿಂದ ಕೆಲಸವಿಲ್ಲದೇ ಖಾಲೀ ಕುಳಿತು ತಿಂಗಳಿನ ತಾರೀಕಿಗೆ ಸರಿಯಾಗಿ ಸಂಬಳ ಪಡೆಯುವ ಜನ ಸಂಶೋಧನಾ ವಿದ್ಯಾರ್ಥಿನಿಯರು ಸಿಕ್ಕರೆ ಸ್ವಲ್ಪ ಮಜಾ ಪಡೆಯುವ ಹುನ್ನಾರದಲ್ಲಿರುತ್ತಾರೆ! ಕೈಗೊಳ್ಳುವುದು ಸಂಶೋಧನೆ ಎಂದಮೇಲೆ ಮಾರ್ಗದರ್ಶಕರು ಮತ್ತು ಸಂಶೋಧಕರ ಪರಸ್ಪರ ಭೇಟಿ, ಸಂದರ್ಶನ ಇವೆಲ್ಲಾ ಇರುವುದೇನೋ ಸರಿ, ಭೇಟಿಯಲ್ಲೇ ತಮಗೆ ಇಂಥದ್ದನ್ನು ಕೊಟ್ಟರೆ ನಿನಗೆ ಸಹಕಾರ ನೀಡುವುದಾಗಿಯೂ ಇಲ್ಲದಿದ್ದರೆ ಅದು ಹೇಗೆ ಪೂರ್ಣಗೊಳಿಸುತ್ತೀಯೋ ನೋಡುತ್ತೇವೆ ಎಂಬ ಕಲಿಪುರುಷರ ಬುದ್ಧಿಜೀವಿ ವೇಷದ ಹಿಂದೆ ಅರ್ಜುನಸನ್ಯಾಸಿಯಂತಹ ಹಸಿದ ಹುಲಿಯೊಂದು ಕಾದುಕುಳಿತಿರುತ್ತದೆ. ಅನೇಕರು ಇಂತಹ ತೃಷೆಗಳಿಗೆ ಬಲಿಯಾಗಿಯೂ ಸುಮ್ಮನಿದ್ದಾರೆ, ಕೆಲವರು ಮಾತ್ರ ಕಚ್ಚೆಹರುಕರನ್ನು ಬೀದಿಗೆ ಎಳೆದಿದ್ದಾರೆ! ಇನ್ನೂ ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಅದೆಷ್ಟು ಜನ ಇಂತಹ ಕಚ್ಚೆಹರುಕ ಕಿರಾತಕರು ಇದ್ದಾರೋ; ಸಂಗತಿ ಇನ್ನೂ ಹೊರಬರಬೇಕಾಗಿದೆ.  

೩. ಭಾರತದ ಆರ್ಥಿಕಸ್ಥಿತಿ ನಿಜಕ್ಕೂ ಆತಂಕಕಾರಿಯೇ ? 

ಭಾರತದಲ್ಲಿ ಹೇರಳವಾದ ಸಂಪತ್ತಿದೆ; ಅದು ಎಲ್ಲರಿಗೂ ಗೊತ್ತು! ಬಡವ-ಶ್ರೀಮಂತರ ಅಂತರ ಮಾತ್ರ ಕಮ್ಮಿಯಾಗುವುದಿಲ್ಲ ಯಾಕೆಂದರೆ ಹಣ ವಿದೇಶೀ ಖಜಾನೆಗಳಲ್ಲಿ ಕೊಳೆಯುತ್ತಿದೆ. ಅಮೇರಿಕಾದಂತಹ ದೇಶಗಳು "ನೀವು ಆರ್ಥಿಕವಾಗಿ ದುರ್ಬಲರು" ಎಂದಮಾತ್ರಕ್ಕೆ ನಾವು ಹೆದರಬೇಕಾಗಿಲ್ಲ. ಆದರೆ ಒಂದು ಮಾತು ಸತ್ಯ: ಪಾಕಿಗಳು ಹೇರಳವಾಗಿ ಖೋಟಾನೋಟುಗಳನ್ನು ಭಾರತದಲ್ಲಿ ಚಲಾವಣೆಗೆ ಬಿಟ್ಟಿದ್ದಾರೆ. ಹಣದುಬ್ಬರ ಜಾಸ್ತಿಯಾಗಿ ನಿಗದಿತ ಮಟ್ಟಮೀರಿ ಹತೋಟಿ ಬರದಾಗ ದೇಶದ ಅರ್ಥವ್ಯವಸ್ಥೆ ಕುಸಿದುಹೋಗುತ್ತದೆ. ಅದನ್ನು ಸಾಧಿಸಲೆಂದೇ ಪಾಕಿಗಳು ಆ ಮಾರ್ಗದಲ್ಲೂ ದೊಡ್ಡಯೋಜನೆ ಹಾಕಿಕೊಂಡು ದೇಶದ ನಾಲ್ಕೂ ದಿಕ್ಕುಗಳಲ್ಲಿ ಪ್ರಸಾರವಾಗುವಂತೇ ಖೋಟಾನೋಟುಗಳನ್ನು ಚೆಲ್ಲಿದ್ದಾರೆ. ಕ್ಷಣಿಕ ಆಮಿಷಕ್ಕೆ ಬಲಿಯಾದ ದೇಶದ್ರೋಹಿಗಳು ಪಾಕಿಗಳ ಪ್ರತಿನಿಧಿಗಳಾಗಿ ನಡೆಸುತ್ತಿರುವ ಈ ಕೆಲಸ, ಸರಕಾರವೇ ನಡೆಸುವ ಯಾವ ಘನಕಾರ್ಯಗಳಿಗಿಂತಲೂ ಉತ್ತಮವಾಗಿ ನಡೆಯುತ್ತಿದೆ ಎಂದರೆ ಯಾರೂ ಆಶ್ಚರ್ಯಪಡಬೇಕಿಲ್ಲ! ಮನುಷ್ಯನೇ ತಯಾರಿಸಿದ ವಸ್ತುಗಳ ಪ್ರತಿರೂಪಗಳನ್ನು ಮತ್ತೊಂದು ಮಾನವ ಗುಂಪು ತಯಾರಿಸಲು ಸಾಧ್ಯವಿಲ್ಲವೇ?  ಹಣದುಬ್ಬರ ನಿಯಂತ್ರಿಸಬೇಕೇ? ದೇಶದ್ರೋಹಿಗಳ ಗಣತಿ ನಡೆಯಬೇಕು, ಇಲ್ಲಿ ಮಾರುವೇಷಗಳಲ್ಲಿ ಹುದುಗಿರುವ ಪಾಕಿಗಳ ಮತ್ತು ಅವರ ಗೂಢಚರ್ಯೆಯ ಕೆಲಸಗಳ ಬಣ್ಣ ಬಯಲಾಗಬೇಕು, ಉಗ್ರಗಾಮಿಗಳ ತಂಡವೂ ಸೇರಿದಂತೇ ಮತಾಂಧ ಪಾಕಿಗಳ ಸಂಪೂರ್ಣ ವಿನಾಶವಾಗಬೇಕು, ಬ್ರಷ್ಟ ಮತ್ತು ವೋಟ್ ಬ್ಯಾಂಕಿಂಗ್ ರಾಜಕಾರಣಿಗಳ ದಮನವಾಗಬೇಕು--ಇವಿಷ್ಟು ಸಾಧ್ಯವಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ನಮ್ಮಲ್ಲಿರುವ ದ್ರೋಹಿಗಳಿಗೆ ಮನೋ ನಿಗ್ರಹವಿಲ್ಲ; ಅರ್ಧರಾತ್ರಿಯಲ್ಲೇ ಐಶ್ವರ್ಯಗಳನ್ನು ಪಡೆಯುವಾಸೆಗೆ ಬಲಿಯಾಗಿ ಪಾಕಿಗಳು ತೋರುವ ಹುಲ್ಲನ್ನು ನೋಡುತ್ತಾ ಮುನ್ನಡೆಯುವ ಪಶುವಾಗಿದ್ದಾರೆ. ಅಣ್ಣಾ ಹಜಾರೆಯಂತಹ ದೇಶಭಕ್ತರ ದಂಡು ಹಳ್ಳಿಹಳ್ಳಿ, ಮಜರೆ ಮಜರೆಗಳಲ್ಲಿ ಕೆಲಸಮಾಡಬೇಕಾದ ಕಾಲ ಇದಾಗಿದೆ; ಪ್ರತಿಯೊಬ್ಬ ಭಾರತೀಯ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ!

೪. ಶಾಸಕರು, ಮಂತ್ರಿಗಳು ವಿಧಾನಸಭೆಯಲ್ಲೇ ಬ್ಲೂ ಫಿಲಂ ನೋಡಿದರು!

ನೋಡುತ್ತಾರೆ ಸ್ವಾಮೀ, ನೋಡುವುದಲ್ಲ ಹೀಗೇ ಬಿಟ್ಟರೆ ಅಲ್ಲೇ ನೀಲಿ ಚಿತ್ರಗಳನ್ನು ತಯಾರಿಸಲೂ ಅವರುಗಳು ಮುಂದಾಗಬಹುದು; ಯಾಕೆಂದರೆ ನಮ್ಮ ಸಂವಿಧಾನದಲ್ಲಿರುವ ಲೋಪ ಇದಾಗಿದೆ: ಚುನಾವಣೆಗೆ ನಿಲ್ಲುವವನು ಪಾತಕಿಯಾಗಿಲೀ, ಹುಚ್ಚನಾಗಲೀ ಆಗಿರಬಾರದು ಎಂದಿದೆ. ಆದರೆ ಇವತ್ತಿನ ದಿನ ಚುನಾವಣೆಗಳಿಗೆ ಸ್ಪರ್ಧಿಸುವವರಲ್ಲಿ ಪಾತಕಿಗಳೇ ಹೆಚ್ಚಿಗೆ ಇದ್ದಾರೆ. ಮಾಜಿ ರೌಡಿಗಳೇ ಹಾಲಿ ರಾಜಕಾರಣಿಗಳು ಎಂಬಂತಹ ವಿಪರ್ಯಾಸ ನಮ್ಮದು! ಎಲ್ಲವನ್ನೂ ಬಿಟ್ಟ ಅಂತಹ ಜನರಿಗೆ ಗಂಟುಕದ್ದುಕೊಂಡು ಇಂದ್ರಿಯಸುಖಗಳನ್ನು ಪಡೆದುಕೊಂಡು ಆಗಾಗ ಪರಸ್ಪರ ಅಪಹಾಸ್ಯಕರ ಮಾತುಗಳನ್ನಾಡುತ್ತಾ ರಾಜಕಾರಣಕ್ಕೆ ಇದ್ದ ಘನತೆಯನ್ನು ಕಳೆದುಬಿಟ್ಟಿದ್ದಾರೆ. ಪ್ರಜಾರಾಜಕೀಯ ಎಂಬುದು ಪ್ರಜೆಗಳಿಗೆ ಒಳಿತುಮಾಡುವ ಬದಲು ಪ್ರಜೆಗಳಿಂದ ಬಹಿರಂಗವಾಗಿ ಪಡೆದ ಕರಗಳನ್ನು ತಿಂದುಹಾಕುವ ಉದ್ಯಮವಾಗಿ ಬೆಳೆದಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನದಲ್ಲಿರುವ ಕೆಲವು ದೋಷಗಳಾಗಿವೆ; ಅವುಗಳ ಬದಲಾವಣೆಗೆ ಯಾರೂ ಮನಸ್ಸುಮಾಡಿಲ್ಲ, ಅವು ಪರಿಷ್ಕೃತವಾಗಬೇಕು.

೫. ಗೋಹತ್ಯೆ, ಸಂಘಪರಿವಾರ, ವೈದಿಕಶಾಹಿ ಮತ್ತು ಇತರೆ ಶಬ್ದಗಳು.

ಮಾತೆತ್ತಿದರೆ ಗೋಹತ್ಯೆ ಯಾಕೆ ಮಾಡಬಾರದು ಎಂಬ ಪ್ರಶ್ನೆ. ೨೮-೦೪-೨೦೧೨ರ ಹೊಸದಿಂಗಂತ ದಿನಪತ್ರಿಕೆಯಲ್ಲಿ ಲೇಖಕ ಮುಜಫರ್ ಹುಸೇನ್ ಬರೆದಿದ್ದಾರೆ: ಗೋವನ್ನು ಯಾಕೆ ಹತ್ಯೆಮಾಡಬಾರದು ಮತ್ತು ಯಾಕೆ ಪೂಜಿಸಬೇಕು ಎಂಬುದರ ಕುರಿತಾಗಿ.[ಅದನ್ನು ಅಂತರ್ಜಾಲದಲ್ಲೋ ಅಥವಾ ಇನ್ನೆಲ್ಲೋ ಲಭ್ಯವಿರುವಲ್ಲಿ ಹುಡುಕಿಕೊಂಡು ಓದಿಕೊಳ್ಳಬಹುದಾಗಿದೆ]ಪ್ರಾಚೀನ ಭಾರತದಲ್ಲಿ ಇದ್ದಿದ್ದು ಬರೇ ಸನಾತನ ಧರ್ಮ! ನಂತರ ಹಲವಾರು ಮತಗಳು ಹುಟ್ಟಿದವು. ಆದರೂ ನಿಜವಾದ ಭಾರತೀಯನೊಬ್ಬನಲ್ಲಿ ಆ ಸನಾತನ ಲಕ್ಷಣಗಳು ಹೇಗೆ ಗೋಚರಿಸುತ್ತವೆ ಎಂಬುದಕ್ಕೆ ಮುಜಫರ್ ಹುಸೇನ್, ಡ್ಯಾನಿ ಪಿರೇರಾ ಇಂತಹ ಲೇಖಕರುಗಳು ಉದಾಹರಣೆಗಳಾಗುತ್ತಾರೆ.

ಭಾರತದಲ್ಲಿ ಸಂಘಪರಿವಾರ ಇಲ್ಲದಿದ್ದರೆ ಇಷ್ಟುದಿನದಲ್ಲಿ ಸಂಪೂರ್ಣ ಭಾರತ ಪಾಕಿಸ್ತಾನವೇ ಆಗಿಬಿಡುತ್ತಿತ್ತು. ಭಾರತ ಸ್ವಲ್ಪವಾದರೂ ಭಾರತೀಯತೆಯನ್ನು ಉಳಿಸಿಕೊಂಡಿದ್ದರೆ ಅದು ಸಂಘಪರಿವಾರದ ಅಹರ್ನಿಶಿ ಪರಿಶ್ರಮದಿಂದ ಮಾತ್ರ! ಭಾರೀತೀಯರು ಎನಿಸಿದ ಎಲ್ಲರೂ ಸಂಘಪರಿವಾರದ ಸದಸ್ಯರೇ ಸರಿ. ಅವರು ಯಾವ ಮತಕ್ಕೇ ಸಂಬಂಧಿಸಿರಲಿ ದೇಶಸೇವೆಯಲ್ಲಿ ಮಾತ್ರ ಎಲ್ಲರೂ ಒಗ್ಗಟ್ಟಾಗಿರಬೇಕು.

ವೈದಿಕಶಾಹಿ ಎಂಬ ಪದ ಮೇಲೆ ಹೇಳಿದ ಸಂಪಾದಕನ ರೀತಿಯ ಯವುದೋ ತಲೆಹಿಡುಕ ಹುಟ್ಟುಹಾಕಿದ್ದು! ವೈದಿಕರು ಪ್ರಜೆಗಳಿಗೆ ತೊಂದರೆಮಾಡಲಿಲ್ಲ. ಅದೊಂದು ಅತೀ ತಪ್ಪು ಕಲ್ಪನೆ. ವೈದಿಕರ ಬಗ್ಗೆ ವೈದಿಕರ ಮಡಿಯ ಬಗ್ಗೆ ಕೆಂಡಕಾರುವ ನಾವೆಷ್ಟು ಸಂಭಾವಿತರು ಸ್ವಾಮೀ? ವೈದಿಕರೇ ಮುಂದಾಗಿ ನಿಂತು ಈ ರಾಜ್ಯ/ದೇಶದಲ್ಲಿ ಅದೆಷ್ಟೋ ರಾಜ ಸಂಸ್ಥಾನಗಳಿಗೆ ಧರ್ಮಬೋಧನೆ ಮಾಡಿದರು. ವೈದಿಕಧರ್ಮದಿಂದಲೇ ಕದಂಬರು, ಹಕ್ಕ-ಬುಕ್ಕರು ರಾಜ್ಯವಾಳಿದರು. ಮೌರ್ಯವಂಶದಂತಹ ಉತ್ತಮ ಆಡಳಿತ ನೀಡಿದ ರಾಜ್ಯ ಸ್ಥಾಪಿತವಾಗಿದ್ದು ಚಾಣಕ್ಯನೆಂಬ ಒಬ್ಬ ವೈದಿಕನಿಂದ ! ವೈದಿಕರು ಯಾರನ್ನೂ ತುಳಿಯಲಿಲ್ಲ, ಯಾವುದೋ ಕಾಲಘಟ್ಟದಲ್ಲಿ ಶ್ರೀಂತರಿಂದ ಬಡವರು ನೋವನ್ನು ಅನುಭವಿಸಿರಬಹುದು, ಆದರೆ ವೈದಿಕರು ಮೊದಲಿನಿಂದಲೂ ಬಡವರೇ ಹೊರತು ಶ್ರೀಮಂತರಲ್ಲ! ಪೂಜೆ-ಪುನಸ್ಕಾರಗಳಿಗೆ ಸಂಬಂಧಿಸಿದ ತಮ್ಮ ಅಚರಣೆಗಳಿಂದ ಬೇರೇ ಪಂಕ್ತಿಯಲ್ಲಿ ಊಟಮಾಡಿರಬಹುದೇ ಹೊರತು ವೈದಿಕರು ಇನ್ಯಾವ ತಪ್ಪನ್ನೂ ಎಸಗಲಿಲ್ಲ.

ಇದನ್ನೆಲ್ಲಾ ಓದುತ್ತಿರುವಾಗ ನಿಮಗೆ ’ಐದುಕಾಲಿನ ಮಂಚ ಕುಂಟ ಮಲಗಿದ್ದ’ ಹಾಡಿನ ಧ್ವನ್ಯಾರ್ಥ ಹೊಳೆದಿರಲೂ ಬಹುದು, ಅರ್ಥವಾಗದಿದ್ದ ಪಕ್ಷದಲ್ಲಿ ಮತ್ತೆ ಮತ್ತೆ ಕೇಳಿಸಿಕೊಳ್ಳಿ, ಅರ್ಥಮಾಡಿಕೊಳ್ಳುವ ಪ್ರಯತ್ನ ನಿಮ್ಮಿಂದ ನಡೆಯಲಿ ಎಂಬ ಸಲಹೆಯೊಂದಿಗೆ ನಮ್ಮಲ್ಲೇ ಇರುವ ಐಬುಗಳ ಬಗ್ಗೆ ತಿಳಿಸಿದ್ದೇನೆ. 

Tuesday, April 24, 2012

ದೀಪಂ ದೇವ ದಯಾನಿಧೇ-೬

ಚಿತ್ರಋಣ: ಅಂತರ್ಜಾಲ
ದೀಪಂ ದೇವ ದಯಾನಿಧೇ-೬

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ನಾಳೆ ವೈಶಾಖ ಶುದ್ಧ ಪಂಚಮಿಯಂದು ಶ್ರೀಶಂಕರ ಜಯಂತಿ, ತನ್ನಿಮಿತ್ತ ಈ ಕಂತಿನ ಪ್ರಸರಣ, ಎಲ್ಲರಿಗೂ ಶಂಕರ ಜಯಂತಿಯ ಹಾರ್ದಿಕ ಶುಭಾಶಯಗಳು.

[ಅದ್ವೈತದ ಕುರಿತು ಬರೆದಾಗ ದ್ವೈತ ಮತ್ತು ವಿಶಿಷ್ಟಾದ್ವೈತ ವಾದಿಗಳಿಗೆ ಹಗುರವೆನಿಸಬಹುದು. ಸಮಷ್ಟಿಯಲ್ಲಿ ಯಾವ ಗುಂಪಿಗೂ ಸೇರದೇ ಹೊರನಿಂತು ನೋಡಿದಾಗ, ಜೀವನದ ಹಲವು ಘಟ್ಟಗಳಲ್ಲಿ ಅ-ದ್ವೈತವನ್ನೇ ಕಾಣಬಹುದಾಗಿದೆ. ಇದಕ್ಕೆ ಭಗವಂತನೇ ಹೇಳಿದ ಭಗವದ್ಗೀತೆಯೇ ಒಂದು ಉದಾಹರಣೆಯಾಗುತ್ತದೆ! ಶಂಕರರು ಅದ್ವೈತವನ್ನು ಹೊಸದಾಗಿ ಕಂಡುಹಿಡಿಯಲಿಲ್ಲ ಬದಲಾಗಿ ವೇದ-ಶಾಸ್ತ್ರ-ಪುರಾಣಗಳನ್ನೆಲ್ಲಾ ಮಥಿಸುತ್ತಾ ತೆರಳಿದ ಅವರಿಗೆ ಅದ್ವೈತದ ಸಾಕ್ಷಾತ್ ದರುಶನವಾಗುತ್ತದೆ; ಅದನ್ನೇ ಅವರು ಪ್ರಸ್ತಾವಿಸುತ್ತಾರೆ ಮತ್ತು ಆ ಮೂಲದಿಂದಲೇ ಸನಾತನ ಧರ್ಮವನ್ನು ಪುನರುಜ್ಜೀವನ ಗೊಳಿಸುತ್ತಾರೆ. ಮಾಯಾ ತತ್ವದ ಹುರುಳನ್ನು ಅರಿಯಲಾಗದವರಿಗೆ ಅದ್ವೈತಕ್ಕೆ ನೆಲೆಯೇ ಇಲ್ಲವೆಂಬ ಅನಿಸಿಕೆಯುಂಟಾಗುವುದು ಸಹಜ; ಮಾಯಾತತ್ವವನ್ನು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲವಾದ್ದರಿಂದ ಕೆಲವರು ಕೆಲವು ಹಂತಗಳಲ್ಲೇ ನಿಂತರು. ಒಬ್ಬರು ಈ ಸೃಷ್ಟಿಯಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಆದರೂ ಪರಮಾತ್ಮ ಹಲವು ಮೂಲಗಳಿಂದ ಜಗತ್ತನ್ನು ನಡೆಸುತ್ತಾನೆ ಎಂದರೆ ಇನ್ನೊಬ್ಬರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದಿದ್ದಾರೆ! ಜಗತ್ತಿನ ಎಲ್ಲಾ ಧರ್ಮಗಳೂ ಹೇಳುವುದು ಏಕಮೂಲವನ್ನೇ ಹೊರತು ಬಹುಮೂಲವನ್ನಲ್ಲ. ಅದರಲ್ಲೂ ಸಾರ್ವಕಾಲಿಕವೆನಿಸುವ ಹಲವು ಕೃತಿಗಳಿಂದ ಜಗತ್ತನ್ನೇ ನಿಬ್ಬೆರಗಾಗಿಸಿದ ಶಂಕರರು ಅರಿಯದೇ ಯಾವುದನ್ನೂ ಒಪ್ಪಿಕೊಳ್ಳುವ ಸ್ವಭಾವದವರಾಗಿರಲಿಲ್ಲ. ಹೊರಗೆ ನಮ್ಮ ವಾದಗಳೇನೇ ಇದ್ದರೂ ಅಂತರಂಗದಲ್ಲಿ ಅನೇಕ ಬಾರಿ ನಾವು ಅದ್ವೈತದ ಅನುಭೂತಿಗೆ ಸಹಜವಾಗಿ ಒಳಪಡುತ್ತೇವೆ! ಆಚಾರ್ಯತ್ರಯರನ್ನೂ ನಮಿಸೋಣ, ಆದರೆ ಈ ಜಗತ್ತಿನ ಮೂಲ ಅದ್ವೈತ ತತ್ವವೆಂಬುದನ್ನು ಸಮಷ್ಟಿಯಿಂದ ಮನಗಾಣಲು ಮುನ್ನಡೆಯೋಣ. ಸರ್ವರಿಗೂ ಮತ್ತೊಮ್ಮೆ ಶ್ರೀಶಂಕರ ಜಯಂತಿಯ ಹಾರ್ದಿಕ ಶುಭಾಶಯಗಳು.]

ಶಂಕರರು ಈಗ ಬಾಲ ಸನ್ಯಾಸಿ. ಹೊರಟುನಿಂತ ಶಂಕರರಿಗೆ ಗುರುವೊಬ್ಬರ ಅಗತ್ಯತೆ ಕಾಣಿಸಿತು. ಜಗತ್ತಿನ ಸಕಲಜೀವರಾಶಿಗಳೂ ಸೇರಿದಂತೆ ಎಲ್ಲದರ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳಿಗೆ ಯಾರು ಕಾರಣರೋ ಅಂತಹ ಶಕ್ತಿಯನ್ನೇ ’ಗುರು’ ಎನ್ನುವುದು. ಅದೇ ಪರಬ್ರಹ್ಮ!

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||  

ಬ್ರಹ್ಮಸಾಕ್ಷಾತ್ಕಾರವನ್ನು ಪಡೆದ ಗುರುವನ್ನು ಪಡೆಯುವುದು ಉನ್ನತ ಕೆಲಸ. ಅವ್ಯಾಹತವಾಗಿ ಆವಿರ್ಭವಿಸುತ್ತಿರುವ ಅಂತರಾತ್ಮನ ನುಡಿಗಳನ್ನನುಸರಿಸಿ ಶಂಕರರು ನಡೆಯುತ್ತಿದ್ದರು. || ಸರ್ವಂ ಖಲ್ವಿದಂ ಬ್ರಹ್ಮ || ಎಂಬ ನುಡಿಯಂತೇ ನಮ್ಮಂತರಾತ್ಮವೇ ಆ ಪರಬ್ರಹ್ಮನ ಪ್ರತಿಬಿಂಬ. ನಮ್ಮಲ್ಲೇ ಕುಳಿತು ನಮ್ಮನ್ನು ನಡೆಸುವ ಆ ಶಕ್ತಿಯ ತನ್ನ ಮೂಲರೂಪದಿಂದ ಆವಿರ್ಭವಿಸಿದಾಗ ವ್ಯಕ್ತಿಗೆ ಆತ್ಮನ ಅರಿವುಂಟಾಗುತ್ತದೆ. ಕಾಲಟಿಯಿಂದ ಹೊರಟ ಶಂಕರರು ಉತ್ತರಾಭಿಮುಖವಾಗಿ ಗುರುವಿನ ಅನ್ವೇಷಕರಾಗಿ ನಡೆದರು. ಹಾದಿಯುದ್ದಕ್ಕೂ ಅನೇಕ ಪವಿತ್ರ ತಪೋಧಾಮಗಳನ್ನು ಸಂದರ್ಶಿಸುತ್ತಾ ನರ್ಮದಾನದೀ ತೀರಕ್ಕೆ ಬಂದು ತಲುಪಿದರು. ಪುಣ್ಯನದಿಗಳು ನಮ್ಮ ಜನ್ಮಜನ್ಮಾಂತರ ಪಾಪಗಳನ್ನು ನಾಶಮಾಡುವವಂತೆ. ಅದಕ್ಕೆಂತಲೇ ಹಿಂದೂಗಳು

ಗಂಚೇ ಚ ಯಮುನೇ ಚೈವ
ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ ಕುರು ||

ಎಂದು ಪುಣ್ಯನದಿಗಳನ್ನು ಪ್ರಾರ್ಥಿಸುವುದು ವಾಡಿಕೆ. ತಾನು ಉಪಭೋಗಿಸುವ ಶುದ್ಧಜಲದಲ್ಲಿ ಭಾರತದ ಸಪ್ತನದಿಗಳನ್ನು ಆವಾಹಿಸುವುದು ಒಂದು ಸಂಪ್ರದಾಯ. ಇಂತಹ ಸಪ್ತನದಿಗಳಲ್ಲಿ ಒಂದಾದ ನರ್ಮದಾ ನದೀತೀರದಲ್ಲಿ ಓಂಕಾರನಾಥ ಎಂಬುದೊಂದು ದಿವ್ಯತಾಣ. ಅಲ್ಲೊಬ್ಬ ಮಹಾಯೋಗಿಯ ನಿವಾಸವಿತ್ತು: ಅದು ಅಲ್ಲಿರುವ ಗುಹೆಯ ಒಳಗೆ. ಅಲ್ಲಿದ್ದವರೇ ಗೋವಿಂದ ಭಗವತ್ಪಾದರು. ಶುಕಾಚಾರ್ಯರ ಶಿಷ್ಯರಾದ ಗೌಡಪಾದಾಚಾರ್ಯರ ಶಿಷ್ಯರು ಈ ಗೋವಿಂದ ಭಗವತ್ಪಾದರು. ಸಮರ್ಥ ಗುರು ಸಿಗುವುದು ಹೇಗೆ ದುರ್ಲಭವೋ ಹಾಗೇ ಗುರುವಿಗೊಬ್ಬ ಸಮರ್ಥ ಶಿಷ್ಯ ಸಿಗುವುದೂ ಅಷ್ಟೇ ದುರ್ಲಭ. ಗೋವಿಂದ ಭಗವತ್ಪಾದರು ಬಹುದಿನಗಳಿಂದ ಶಿಷ್ಯನೊಬ್ಬನ ಆಗಮನದ ನಿರೀಕ್ಷಣೆಯಲ್ಲಿದ್ದರು. ಅವರಿಗೆ ಅದರ ಅರಿವಿತ್ತು; ದೃಷ್ಟಾಂತವೂ ಆಗಿತ್ತು. ಗೋವಿಂದ ಭಗವತ್ಪಾದರು ಯೋಗಶಾಸ್ತ್ರವನ್ನು ಭಾರತಕ್ಕೆ ಅನುಗ್ರಹಿಸಿದ ಮಹರ್ಷಿ ಪತಂಜಲಿಯ ಅವತಾರವೆಂದೂ ಹೇಳುವರು. ಶಂಕರರು ಅಲ್ಲಿಗೆ ಬಂದಾಗ ಗೋವಿಂದ ಭಗವತ್ಪಾದರು ಯೋಗಸಮಾಧಿಯಲ್ಲಿದ್ದುದನ್ನು ಕಂಡು ರೋಮಾಂಚನಗೊಂಡರು! ಈ ಗುರುಗಳ ಬಗ್ಗೆ ಕೇಳಿ ತಿಳಿದಿದ್ದರಾದರೂ ನೋಡಿರಲಿಲ್ಲ. ಬಹುದೂರದಿಂದ ತಾನು ಬಯಸಿ ಬಂದದ್ದು ತನಗೆ ಪ್ರಾಪ್ತವಾಗುವ ಸಕಾಲ ಸನ್ನಿಹಿತವಾಗುತ್ತಿರುವುದಕ್ಕೆ ಶಂಕರರು ಸಂತಸಗೊಂಡರು.

ಸಮಯ ಸರಿಯುತ್ತಲೇ ಇತ್ತು. ಕೆಲಹೊತ್ತಿನಲ್ಲೇ ಸಮಾಧಿಯಿಂದ ಎಚ್ಚೆತ್ತ ಗೋವಿಂದ ಭಗವತ್ಪಾದರು ಎದುರಿಗಿದ್ದ ತೇಜಸ್ವೀ ಬಾಲಕ ಶಂಕರರನ್ನು ಕಂಡರು. ಬ್ರಹ್ಮತೇಜಸ್ಸು ಶಂಕರರ ಮುಖದಲ್ಲಿ ಎದ್ದು ಕಾಣುತ್ತಿತ್ತು. ತನ್ನೆಡೆಗೆ ದೃಷ್ಟಿ ಹರಿಸಿದ ಗುರುವನ್ನು ಕಂಡು ಶಂಕರರು ದೀರ್ಘದಂಡ ಪ್ರಣಾಮವನ್ನು ಮಾಡಿದರು.

" ಮಹಾತ್ಮರೇ, ತಾವು ಬ್ರಹ್ಮಜ್ಞಾನಿಯೂ ಯೋಗಿ ಪತಂಜಲಿಯ ಸ್ವರೂಪಿಯೂ ಎಂಬುದನ್ನು ನಾನು ಬಲ್ಲೆ. ನಿಮ್ಮಿಂದ ಬ್ರಹ್ಮಜ್ಞಾನದ ಕುರಿತಾಗಿ ಅರಿಯಲು ಬಂದೆ. ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಅನುಗ್ರಹಿಸಿರಿ " ಎಂದು ಶಂಕರರು ಪ್ರಾರ್ಥಿಸಿದರು. 

ಬಾಲಕ ಶಂಕರರು ಕಾವಿ ಧರಿಸಿದ್ದರು, ಕೈಯ್ಯಲ್ಲಿ ದಂಡ-ಕಮಂಡಲಗಳಿದ್ದವು. ನೋಡುವುದಕ್ಕೆ ಸಾಕ್ಷಾತ್ ಪರಶಿವನ ಚಿಕ್ಕ ಮೂರ್ತಿಯಂತಿದ್ದರು. ಶಂಕರರನ್ನೇ ದಿಟ್ಟಿಸಿನೋಡಿದ ಗೋವಿಂದ ಭಗವತ್ಪಾದರಿಗೆ ವೇದವೇದಾಂತಗಳನ್ನೂ ಸಕಲ ಶಾಸ್ತ್ರವಿದ್ಯೆಗಳನ್ನೂ ಓದಿ ಅರಗಿಸಿಕೊಂಡು ವಿನಯವೇ ಮೈವೆತ್ತ ಈತನಿಗೆ, ತನ್ನ ಅವಶ್ಯಕತೆಯಾದರೂ ಏನಿದೆ ಎಂದೆನಿಸಿತು. ಆದರೂ ಅದನ್ನು ತೋರಗೊಡದೇ,

" ಅಯ್ಯಾ ಯಾರು ನೀನು ? " --ಪ್ರಶ್ನಿಸಿದರು.

ಶಂಕರರು ಈ ವೇಳೆಗಾಗಲೇ ಬ್ರಹ್ಮ ಸ್ವರೂಪದ ಬಗ್ಗೆ ಅರಿತಿದ್ದರು. ’ಅಹಂ ಬ್ರಹ್ಮಾಸ್ಮಿ’ --ನಾನು ಬ್ರಹ್ಮನೇ ಆಗಿದ್ದೇನೆ ಎಂಬುದರ ಅರಿವೂ ಅವರಲ್ಲಿತ್ತು.

" ಮಹಾತ್ಮರೇ, ನಾನೆಂಬುದು ಯಾವುದೂ ಇಲ್ಲ. ಪಂಚಭೂತಗಳೂ ಪಂಚೇಂದ್ರಿಯಗಳೂ ನಾನಲ್ಲ. ಎಲ್ಲವನ್ನೂ ಮೀರಿದ ಪರಾತ್ಪರನಾದ ಪರಮೇಶ್ವರನೇ ನಾನು. " ಎಂದರಾದರೂ ಲೌಕಿಕವಾಗಿ ತನ್ನ ಪರಿಚಯವನ್ನೂ ತಿಳಿಸಿದರು. 

ಶಂಕರರು ಕ್ರಮಬದ್ಧವಾದ ಸನ್ಯಾಸವನ್ನು ಸ್ವೀಕರಿಸಿರಲಿಲ್ಲ. ಅದನ್ನು ವಿಧಿವತ್ತಾಗಿ ನಡೆಸಬೇಕಾಗಿತ್ತು. ಅದನ್ನರಿತ ಗುರು ಗೋವಿಂದ ಭಗವತ್ಪಾದರು ಶುಭದಿನವೊಂದನ್ನು ಗೊತ್ತುಪಡಿಸಿ ಶಂಕರರಿಗೆ ವಿಧಿವತ್ತಾಗಿ ಸನ್ಯಾಸ ದೀಕ್ಷೆ ಅನುಗ್ರಹಿಸಿ "ಶ್ರೀಶಂಕರ ಭಗವತ್ಪಾದರು" ಎಂಬ ಅಭಿದಾನವನ್ನಿತ್ತರು. ಅಂದಿನಿಂದ ಶಂಕರರು ಶ್ರೀಶಂಕರಾಚಾರ್ಯರೆಂದೇ ಕರೆಯಲ್ಪಟ್ಟರು. ಇದೇ ಸಮಯದಲ್ಲಿ ಗೋವಿಂದ ಭಗವತ್ಪಾದರ ಚರಣಕಮಲಗಳನ್ನು ಸ್ಮರಿಸುತ್ತಾ ಶಂಕರರು ಗೋವಿಂದರಲ್ಲಿ ಗೋವಿಂದನನ್ನು ಕಂಡು ಗೋವಿಂದಾಷ್ಟಕವನ್ನು ರಚಿಸಿ ಸ್ತುತಿಸಿದ್ದಾರೆ.

ದಿ|ಎಂ.ಎಸ್.ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದಲ್ಲಿ ಗೋವಿಂದಾಷ್ಟಕವನ್ನು ಕೇಳೋಣ [ಗಾಯಕಿಗೂ, ಸಂಗೀತವೃಂದಕ್ಕೂ ಮತ್ತು ಇದನ್ನು ಯೂಟ್ಯೂಬ್ ಮೂಲಕ ಒದಗಿಸಿದವರಿಗೂ ವಂದನೆಗಳು]:

ಯಾವ ಗುರುವಿಗೆ ತನ್ನ ಶಿಷ್ಯ ತಮ್ಮನ್ನೂ ಮೀರಿಸುವ ಸಾಮರ್ಥ್ಯವನ್ನು ಪಡೆದರೆ ಖುಷಿಯಾಗುವುದಿಲ್ಲ? ತಂದೆಯೊಬ್ಬನಿಗೆ ಮಗ ತನ್ನನ್ನೂ ಮೀರಿಸುವ ಸಾಮರ್ಥ್ಯಗಳಿಸಿದಾಗ ಆಗುವ ಹರ್ಷ ಗುರುವೊಬ್ಬನಿಗೆ ತನ್ನ ಶಿಷ್ಯ ಹಾಗೆ ಮಾಡಿದಾಗ ಸಹಜವಾಗಿ ಉಂಟಾಗುತ್ತದೆ. ’ಮಾಂಡೂಕ್ಯ ಕಾರಿಕಾ’ ಎಂಬ ಗ್ರಂಥವನ್ನು ಬರೆದ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರಿಗೆ, ತನ್ನ ಶಿಷ್ಯ ಅದ್ವಿತೀಯ ಎಂಬ ಅನುಭೂತಿ ಮತ್ತು ಆತನ ಅತಿಶಯ ಬುದ್ಧಿಮಟ್ಟ ಅದಾಗಲೇ ಅರಿವಿಗೆ ಬಂದಿತ್ತು. ಬಹಳ ಹಿಂದೆ ಶುಕಾಚಾರ್ಯರ ಗುರುಗಳಾಗಿದ್ದ ವೇದವ್ಯಾಸರು ಗೋವಿಂದಪಾದರಿಗೆ ಹೇಳಿದ್ದರು: " ಮುಂದೆ ನಿನ್ನ ಶಿಷ್ಯ ನದಿಯೊಂದರ ಪ್ರವಾಹವನ್ನು ಕಮಂಡಲದಲ್ಲಿ ಕೂಡಿಹಾಕುತ್ತಾನೆ ಮತ್ತು ಆತನೇ ವೇದಾಂತಕ್ಕೆ ಭಾಷ್ಯಬರೆದು ಎಲ್ಲರನ್ನೂ ಜಾಗ್ರತಗೊಳಿಸುತ್ತಾನೆ" ಎಂದು! ಆ ಶಿಷ್ಯ ಈತನೇ ಎಂಬುದು ಗೋವಿಂದ ಭಗವತ್ಪಾದರಿಗೆ ಕೆಲವೇ ತಿಂಗಳುಗಳಲ್ಲಿ ತಿಳಿದುಬಂತು.

ಘಟನೆ ನಡೆದಿದ್ದು ಹೀಗೆ: ಏಕಪಾಠಿಯಾಗಿದ್ದ ಶಂಕರರು ಗುರುಗಳು ಒಮ್ಮೆ ಹೇಳಿದ್ದನ್ನು ಆ ಕ್ಷಣದಲ್ಲೇ ಅರಗಿಸಿಕೊಂಡುಬಿಡುತ್ತಿದ್ದರು. ಹಠಯೋಗ, ರಾಜಯೋಗ, ಜ್ಞಾನಯೋಗ ಮೊದಲಾದ ಹಲವು ವಿಭಾಗಗಳನ್ನು ಕಲಿಯುತ್ತಾ ಇರಲಾಗಿ ಒಂದು ದಿನ ಗುರು ಗೋವಿಂದರು ಎಂದಿನಂತೇ ಗುಹೆಯಲ್ಲಿ ಸಮಾಧಿಸ್ಥರಾಗಿದ್ದರು. ಆಗ ಮಳೆಗಾಲವಾಗಿದ್ದು ಎಲ್ಲೆಲ್ಲೂ ಮಳೆ ಜಾಸ್ತಿ ಸುರಿದು ನರ್ಮದೆಯೂ ಉಕ್ಕಿ ಹರಿಯತೊಡಗಿದಳು. ಉಕ್ಕಿ ಹರಿದ ನರ್ಮದೆಯ ಪ್ರವಾಹ ಗುಹೆಯ ಬಾಗಿಲಿಗೂ ಬಂದುಬಿಟ್ಟಿತು! ಇನ್ನೇನು ನೀರು ಒಳಗೆ ಪ್ರವೇಶಿಸಬೇಕು ಎಂಬಷ್ಟರಲ್ಲಿ ಶಂಕರರು ತನ್ನ ಕಮಂಡಲವನ್ನು ಗುಹೆಯ ಬಾಗಿಲಲ್ಲಿ ಇರಿಸಿ, ತಮ್ಮ ತಪಶ್ಶಕ್ತಿಯನ್ನು ಧಾರೆಯೆರೆದು ನುಗ್ಗಿಬರುತ್ತಿರುವ ನೀರನ್ನು ಅದರೊಳಗೆ ಅಡಗಿಸಿಬಿಟ್ಟರು. ಗೋವಿಂದ ಭಗವತ್ಪಾದರ ಮಿಕ್ಕುಳಿದ ಶಿಷ್ಯಂದಿರು ಇದನ್ನು ನೋಡಿ ಆಶ್ಚರ್ಯಚಕಿತರಾದರಲ್ಲದೇ ಶಂಕರರು ಮಹಾಮಹಿಮರೇ ಎಂಬುದನ್ನು ಅರಿತುಕೊಂಡರು.

ಸ್ವಲ್ಪ ಹೊತ್ತಿನ ಬಳಿಕ ಎಚ್ಚೆತ್ತ ಗೋವಿಂದ ಭಗವತ್ಪಾದರಿಗೆ ಎಲ್ಲದರ ಅರಿವೂ ಉಂಟಾಯ್ತು. ತನ್ನ ಸಮಾಧಿ ಸ್ಥಿತಿಗೆ ಭಂಗಬಾರದಿರಲೆಂದು ಶಂಕರರು ಪ್ರವಾಹವನ್ನು ಕಮಂಡಲದಲ್ಲಿ ಬಂಧಿಸಿದ್ದೂ ತಿಳಿಯಿತು. ವೇದವ್ಯಾಸರು ಹೇಳಿದ ಶಿಷ್ಯನನ್ನು ಈಗವರು ಸಾಕ್ಷಾತ್ ಕಂಡಿದ್ದರು; ವ್ಯಾಸರೇ ಹೇಳಿದಂತೇ ವೇದಾಂತ ಸೂತ್ರಕ್ಕೆ ಭಾಷ್ಯವನ್ನು ಬರೆಯುವ ಶಿಷ್ಯ ಈತನೇ ಎಂಬುದನ್ನು ಮನಗಂಡರು. ವೇದಾಂತದ ಅರ್ಥ ಜನಸಾಮಾನ್ಯರಿಗೆ ತಲ್ಪುವ ಸಲುವಾಗಿ ಅದರ ವ್ಯಾಖ್ಯಾನವನ್ನು ಮಾಡಬೇಕಾಗಿತ್ತು. ಈ ಕೆಲಸಕ್ಕೆ ಶಂಕರರೇ ತಕ್ಕವರು ಎಂದು ಗೋವಿಂದಪಾದರು ನಿರ್ಣಯಿಸಿದರು.

ಆನಂದತುಂದಿಲರಾದ ಗೋವಿಂದ ಭಗವತ್ಪಾದರು " ಶಂಕರರೇ, ನಿಮ್ಮ ಶ್ರದ್ಧಾ, ಭಕ್ತಿ, ನಿಷ್ಠೆಗಳೆಲ್ಲಾ ನನಗೆ ಬಹಳ ಮೆಚ್ಚುಗೆಯಾಗಿವೆ. ಬಹಳಕಾಲ ನಿಮ್ಮ ನಿರೀಕ್ಷೆಯಲ್ಲಿ ನಾನಿದ್ದೆ. ಈಗ ಆ ಕಾಲ ಪ್ರಾಪ್ತವಾಗಿದೆ. ಬ್ರಹ್ಮವೇನೆಂಬುದನ್ನು ನೀವು ಚೆನ್ನಾಗಿ ಅರಿತಿದ್ದೀರಿ. ನೀವು ಅನುಭವಿಸಿದ ಸತ್ಯ, ಆನಂದವನ್ನು ವೇದಾಂತದ ಮೂಲಕ ಸಮಸ್ತರಿಗೂ ತಿಳಿಸಿಕೊಡಬೇಕಾದ ಕೆಲಸ ಆಗಬೇಕಾಗಿದೆ. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಈ ಮೂರು ಭಾರತದ ಆಧ್ಯಾತ್ಮಿಕ ನಿಧಿಗಳಾಗಿವೆ. ಇವುಗಳಿಗೆ ನಿಮ್ಮ ಅನುಭವದಲ್ಲಿ ಭಾಷ್ಯವನ್ನು ಬರೆಯಿರಿ. ನಿಮ್ಮ ಯೋಗ ಸಾಧನೆಯಿಂದ ಬಯಸಿದ ಸಂಕಲ್ಪ ಈಡೇರುತ್ತದೆ. ಈ ಕಾರ್ಯಕ್ಕಾಗಿ ಅಪ್ಪಣೆ ಕೊಟ್ಟಿರುತ್ತೇನೆ. ಪವಿತ್ರ ಕಾಶೀ ಕ್ಷೇತ್ರಕ್ಕೆ ಹೋಗಿ, ಅಲ್ಲಿ ವಿಶ್ವೇಶ್ವರನ ದರ್ಶನಪಡೆದು, ನಿಮ್ಮ ಈ ಕಾರ್ಯವನ್ನು ಮುಂದುವರಿಸಿರಿ" ಎಂದು ಆಶೀರ್ವದಿಸಿದರು.

ಶಂಕರರು ಗುರುಗಳ ಕಾಲುಮುಟ್ಟಿ ನಮಸ್ಕರಿಸುತ್ತಾ " ಮಹಾಪ್ರಸಾದ ಹಾಗೇ ಆಗಲಿ" ಎನ್ನುತ್ತಾ ಅಪ್ಪಣೆಯನ್ನು ಶಿರಸಾವಹಿಸಿದರು. ಯಾವ ಕೆಲಸವನ್ನು ಮಾಡಲು ಬಹಳಕಾಲದಿಂದ ಕಾಯುತ್ತಿದ್ದರೋ ಅ ಕೆಲಸಕ್ಕೆ ಗುರುವಾಣಿ ಅಪ್ಪಣೆಯಾಗಿ ಪ್ರಾಪ್ತವಾಗಿತ್ತು! ಆಕ್ಷಣದಲ್ಲಿ ಶಂಕರರಿಗೆ ಅಲ್ಲವೂ ಬ್ರಹ್ಮಮಯವಾಗಿ ಕಾಣಿಸಿತು.

ಕೆಲದಿನಗಳಲ್ಲೇ ಗೋವಿಂದ ಭಗವತ್ಪಾದರು ದೇಹತ್ಯಾಗಮಾಡಿದರು. ಅವರ ಅಂತ್ಯವಿಧಿಗಳನ್ನು ಅಲ್ಲಿರುವ ಶಿಷ್ಯರ ಸಹಕಾರದೊಂದಿಗೆ ನೆರವೇರಿಸಿ, ಮಹಾಸಮಾಧಿ ಮುಗಿದಮೇಲೆ, ಶಂಕರರು ಕಾಶೀಕ್ಶೇತ್ರಕ್ಕೆ ಪ್ರಯಾಣ ಬೆಳೆಸಿದರು. ಗುಹೆಯಲ್ಲಿ ಇದ್ದ ಇತರ ಕೆಲವು ಸನ್ಯಾಸಿಗಳೂ ಶಂಕರರ ಜೊತೆಗೆ ಕಾಶಿಗೆ ತೆರಳಿದರು. ಆಗಿನ್ನೂ ಶಂಕರರಿಗೆ ಹನ್ನೊಂದು ವಯಸ್ಸು! ಮುಂದಿನ ತನ್ನ ಜೀವನವನ್ನು ವೇದಾಂತ ಪ್ರಸಾರಣೆಗೆ ಮೀಸಲಿಟ್ಟರು ಶಂಕರರು. ಜಗತ್ತಿನ ಸಕಲ ಜೀವಿಗಳೂ ಬ್ರಹ್ಮವಲ್ಲದೇ ಬೇರೇನೂ ಅಲ್ಲ. ಈ ತತ್ವದ ಅರಿವುಂಟಾದವನು ಜೀವನ್ಮುಕ್ತನಾಗುತ್ತಾನೆ-ಇದು ವೇದಾಂತದ ಸಾರವಾಗಿದೆ. ಶಂಕರ ಭಗವತ್ಪಾದರು ಜಗತ್ತಿಗೇ ವೇದಾಂತದ ದರ್ಶನದ ಸಾರವನ್ನು ತಿಳಿಸಲು ಕಟಿಬದ್ಧರಾದರು. ಕುಸಿದಿರುವ ಸನಾತನ ಧರ್ಮದ ಪುನರುತ್ಥಾನ ಕ್ರಿಯೆಯೂ ಆಗಬೇಕಿತ್ತು. ಇದನ್ನೇ ಮನದಲ್ಲಿ ಸಂಕಲ್ಪಿಸುತ್ತಾ ವಿಂಧ್ಯಪರ್ವತದ ದಟ್ಟಕಾಡುಗಳನ್ನೆಲ್ಲಾ ದಾಟಿ,[ಮಾರ್ಗಮಧ್ಯೆ ಹಲವು ಪುಣ್ಯಧಾಮಗಳನ್ನು ಸಂದರ್ಶಿಸಿದರು] ದೂರದ ಪ್ರಯಾಗವನ್ನು ತಲುಪಿ ಆ ಮೂಲಕ ವಾರಾಣಸಿಗೆ ತಲುಪಿದರು.   

ಭೈರವಿ ರಾಗದಲ್ಲಿ [ಕುವೆಂಪು ಅವರ ವೃಂದಾವನಕೆ ಹಾಲನು ಮಾರಲು.... ಹಾಡಿನ ದಾಟಿಯಲ್ಲಿ] ಸ್ವರಚಿತ ಶಂಕರ ಭಕ್ತಿ ಗೀತೆ, ರಚಿಸಿ ಹಾಡಬೇಕೆಂದಿದ್ದರೂ ಗಂಟಲು ಸೋಂಕಿನಿಂದ ಹಾಡಲು ಸಾಧ್ಯವಾಗಿಲ್ಲ, ಸರಳವಾಗಿ ಯಾರಾದರೂ ಹಾಡಿಕೊಳ್ಳಬಹುದಾಗಿದೆ.  

ಷಣ್ಮತಗಳನು ಸ್ಥಾಪಿಸಿ ನುಡಿದಾ
ಶಂಕರ ನಿಜದದ್ವೈತವನು
ಶಂಕರ ನಿಜದದ್ವೈತವನು
ಷಣ್ಮತಗಳಲಿ ಮಾಯೆಯ ಮೂಲವ
ಅರಿಯಲು ನುಡಿದಾ ತತ್ವವನು

ಭರತ ಭೂಮಿಯಲಿ ಧರ್ಮವು ನಶಿಸಿರೆ
ಕೊರತೆಯ ಕಂಡ ಎಳವೆಯಲೇ
ನಿರತವು ಕಾರ್ಯದಿ ಮಾರ್ಗವ ತೋರಿದ
ಪರತತ್ವದ ನಡೆ ಬಾಳ್ವೆಯಲೇ

ದಕ್ಷಿಣ ಉತ್ತರ ಪೂರ್ವ ಪಶ್ಚಿಮ
ರಕ್ಷಣೆಗೆಂದಾಮ್ನಾಯಗಳಾ
ಭಕ್ಷಣೆ ಬಲಿಗಳ ಜೀವದ ಹಿಂಸೆಯ
ತಕ್ಷಣ ನಿಲಿಸುವ ಕಾರ್ಯಗಳಾ

ಬಾಲಕ ಶಂಕರ ದೇಶವ ಸುತ್ತಿದ
ಕಾಲಟಿಯಿಂದಾರಂಭಿಸುತಾ
ಲೀಲೆಯು ಘನತರ ಹಸುಳೆಯು ವೇದವ
ಲಾಲಿತ್ಯದಿ ವಿಜೃಂಭಿಸುತಾ

ತನ್ನಾ ಜೀವನ ದೇಶಕೆ ಅರ್ಪಿಸಿ
ಚಿನ್ನಾಟದ ಆ ಬಾಲ್ಯದಲಿ
ಪನ್ನಗಧರನಾ ಮಾನವ ರೂಪದಿ
ಮುನ್ನಡೆದನು ಸಾಫಲ್ಯದಲಿ

                           [....... ಚರಿತ್ರೆ ಹೀಗೇ ಕಂತುಗಳಲ್ಲಿ ಮುಂದುವರಿಯುತ್ತದೆ]


Saturday, April 21, 2012

ಪದವಿ-ಪ್ರಮಾಣ

ಚಿತ್ರಋಣ: ಅಂತರ್ಜಾಲ 
ಪದವಿ-ಪ್ರಮಾಣ

ಕುದಿದ ಬೇರಿನ ನೀರು ತೆಗೆದಿರಿಸಿ ಪಾತ್ರೆಯಲಿ
ಹದದಿ ಕುಡಿಯುವ ವಿಧವ ಕಂಡ ಕೆಲವುಜನ
ಗೆದರಿ ತಾಳೆಯನೋಡಿ ವಿವಿಧ ರೋಗವ ಕಳೆವ
ಚದುರರಾದರು ಅರಿತು | ಜಗದಮಿತ್ರ

ನಿತ್ಯಜೀವನಕೆನುತ ಉಪಕರಣಗಳ ತಡಕಿ
ಸತ್ಯವಾಗಿಸುವಲ್ಲಿ ಬೆಂಬತ್ತಿ ಬಹಳ
ಪಥ್ಯವಲ್ಲದ ಕಷ್ಟ ಘಳಿಗೆಗಳ ಸಹಿಸಿದರು
ತಥ್ಯ ವಿಜ್ಞಾನತಮ | ಜಗದಮಿತ್ರ

ಓದಿ ಉರುಹೊಡೆಯುತ್ತ ಉತ್ತಮದ ಅಂಕಗಳ
ಸಾದರದಿ ಗೌರವವ ಪಡೆದರೆಲ್ಲಿಗದು?
ಕಾದ ಕಾವಲಿಯಲ್ಲಿ ಬೆಂದ ಹಿಟ್ಟಿನ ತೆರದಿ
ಸಾಧಕಗೆ ಪದವಿಯದು | ಜಗದಮಿತ್ರ

ಅರಿತ ವಿದ್ಯೆಯ ಪ್ರಕೃತ ಬಳಸಿ ಪ್ರಾಯೋಗಿಕದಿ
ನುರಿತ ಅನುಭವ ಪಡೆಯೆ ಕೊರತೆ ನೀಗುವೊಲು
ಒರತೆಯಿಂದಲಿ ನೀರು ಹೊರಹರಿದು ಬಂದಂತೆ
ಭರಿತ ಜ್ಞಾನವು ಶ್ರೇಷ್ಠ | ಜಗದಮಿತ್ರ  

ಅಳತೆ ಕೇವಲ ಲೆಕ್ಕ ವಿದ್ಯಾರ್ಥಿಯಾದವಗೆ
ಹಳತು ಹೊಸತರ ನಡುವೆ ಕುಳಿತು ಮಥಿಪನಿಗೆ
ಬೆಳೆತೆಗೆದ ಸಾಕ್ಷಿಗದೊ ಪದವಿ ಪತ್ರಗಳಷ್ಟೇ
ಕಳಿತ ಬುದ್ಧಿಯೆ ಮಿಗಿಲು | ಜಗದಮಿತ್ರ

ಜಗವು ಚಿಕ್ಕದು ಎನಿಸೆ ಸಂಪರ್ಕ ಮಾಧ್ಯಮದಿ
ನೊಗವ ಹೊತ್ತವಬಲ್ಲ ಭಾರದೇರಿಳಿತ
ಸೊಗವೆ ಮಾಹಿತಿಯರಿವು ನಿತ್ಯ ವಿಸ್ತರಿಸುವುದು?
ಬಗೆಯ ವಿಸ್ತಾರವದು | ಜಗದಮಿತ್ರ

ಇದಕಂಡೆ ಅದಕಂಡೆ ಬೆದಕುತ್ತ ಹದಿನಾರು
ಕೆದಕಿ ನೋಡಿದರಲ್ಲಿ ಸಾವಿರದ ನೂರು !
ಚಿದುಕುತ್ತ ನಡೆವಂಗೆ ಕಾಣದಚ್ಚರಿಯೆಷ್ಟೋ
ಬದುಕು ನಿತ್ಯದ ಪಾಠ | ಜಗದಮಿತ್ರ

ಹೊಸದಾದ ವಿಷಯಗಳ ಹೊತ್ತಗೆಯ ರೂಪದಲಿ
ಬೆಸಗೊಂಡ ಕೆಲವರದೊ ಒಟ್ಟುತೊಂದೆಡೆಗೆ
ಹೆಸರಿಟ್ಟು ಗುರುತಿಸುತ ವಿಶ್ವವಿದ್ಯಾಲಯವ
ಬೆಸುಗೆ ಮಾಹಿತಿಕೇಂದ್ರ | ಜಗದಮಿತ್ರ 

ರಸಗವಳವಂ ಕಾಣೆ ಖುಷಿಯು ಎಲ್ಲರ ಮೊಗದಿ
ಒಸಗೆ ನವಖಾದ್ಯಗಳ ನೈವೇದ್ಯವೆನಲು !
ಮೊಸರ ಕಡೆದಾವೇಳೆ ಕುಸುಕಿ ಮಜ್ಜಿಗೆ ಬೆಣ್ಣೆ
ಕಸುವು ನಿಷ್ಣಾತನದು | ಜಗದಮಿತ್ರ

ಕೆಲವ ಕಲಿಯಲು ಬೇಕು ಓದಿನಾಲಯಗಳಲಿ
ಹಲವನರಿಯಲು ಮಿಳಿತು ಬಲ್ಲ ಬಳಗದಲಿ 
ಇಲಿ-ಜೇನು-ಗೆದ್ದಲಿನ ತಂತ್ರಗಾರಿಕೆಗಳಲಿ
ಛಲ ಬೇಕು ಅರಿಯುವೊಲು | ಜಗದಮಿತ್ರ 


Wednesday, April 18, 2012

ಯುವ ಪೀಳಿಗೆಗೆ ಬದುಕುವ ಕಲೆಯನ್ನು ಕಲಿಸಿ !

ಚಿತ್ರಋಣ : ಅಂತರ್ಜಾಲ
ಯುವ ಪೀಳಿಗೆಗೆ ಬದುಕುವ ಕಲೆಯನ್ನು ಕಲಿಸಿ !

ಒಂದು ಕೆ.ಜಿ ಹಣ್ಣುಗಳೊಂದಿಗೆ ವೃದ್ಧ ದಂಪತಿಯನ್ನು ಭೇಟಿಯಾದೆ. ಬೆಂಗಳೂರಿನ ಮಲ್ಲೇಶ್ವರದ ಅಪಾರ್ಟ್ ಮೆಂಟ್ ಒಂದರಲ್ಲಿ ಅವರ ವಾಸ. ಯಜಮಾನರಿಗೆ ಅಜಮಾಸು ೯೩-೯೪ ವರ್ಷ, ಯಜಮಾನರ ಯಜಮಾನತಿಯವರಿಗೆ ಒಂದೈದು ಕಮ್ಮಿ ಇರಬಹುದು. ಒಂದು ಚಿಕಿತ್ಸಾಲಯದಲ್ಲಿ, ಅವರು ಮುಪ್ಪಿನ ನೋವಿನ ತೊಂದರೆಗಳಿಗೆ ಅಲ್ಲಿಗೆ ಬಂದಾಗ, ನಾನು ಇನ್ನವುದೋ ಕಾರಣದಿಂದ ಅದೇ ಸಮಯಕ್ಕೆ ಅಲ್ಲಿಗೆ ತೆರಳಿದ್ದಾಗ, ವೈದ್ಯರ ಸಂದರ್ಶನಕ್ಕೆ ಸರದಿಯಲ್ಲಿ ಕಾಯುವಾಗ ಆದ ಚಿಕ್ಕ ಪರಿಚಯ. ಗಂಟೆಯ ಕಾಲ ಮಾತನಾಡಿ ನಮಗೇ ಯಾವುದೋ ಜನ್ಮದ ಋಣವೆಂಬಂತೇ ಹರಟಿದ್ದು ವಿಶೇಷ! ಆ ವೃದ್ಧರ ಜೊತೆಯಲ್ಲಿ ಮನೆಯಲ್ಲಿ ಯಾರೂ ಇಲ್ಲ. ಅವರೇ ಸಾಮಾನು ತಂದುಕೊಳ್ಳಬೇಕು, ಅವರೇ ಅಡಿಗೆ ಮಾಡಿಕೊಳ್ಳಬೇಕು, ಅವರೇ ಪರಸ್ಪರ ಮಾತನಾಡಿ ಕಾಲವ್ಯಯಿಸಬೇಕು, ಅವರೀರ್ವರ ನೋವಿಗೂ-ನಲಿವಿಗೂ ಅವರೇ ಅವರೇ ಮತ್ತು ಅವರೇ! ಯಾಕೆ ಸಂತನಭಾಗ್ಯ ಇಲ್ಲವೇ? ಇದೆಯಪ್ಪಾ, ಎಲ್ಲವೂ ಇದೆ; ಮಗ ಅಮೇರಿಕದಲ್ಲಿ ದೊಡ್ಡ ವೈದ್ಯ, ಮಗಳು ಬೆಂಗಳೂರಿನಲ್ಲೇ ಇದ್ದು ಆಕೆ ಇವರಿಗಿಂತಾ ಮುಪ್ಪಾದವರಂತೇ ಇದ್ದಾಳಂತೆ-ಗೂರಲು ಉಬ್ಬಸ ರೋಗದ ಅವಳ ಯಜಮಾನರನ್ನೂ ಅವಳ ಮಕ್ಕಳನ್ನೂ ಸಂಭಾಳಿಸುವುದೇ ಅವಳಿಗೆ ಕಷ್ಟವಾಗಿ ಈ ಕಡೆ ತಲೆಹಾಕಲು ಆಗುತ್ತಿಲ್ಲವಂತೆ. ವೈದ್ಯ ಮಗ ಅಮೇರಿಕಾದಿಂದ ಎರಡೋ ಮೂರೋ ವರ್ಷಗಳಿಗೊಮ್ಮೆ ಫ್ಲೈಯಿಂಗ್ ವಿಸಿಟ್ ಕೊಡುತ್ತಿರುತ್ತಾನಂತೆ. ಮಗನ ಜೀವನ ಅಲ್ಲಿ ಸುಖಕರವಾಗಿದೆ ಎಂಬ ಮಾನಸಿಕ ಸಂತೋಷದಲ್ಲೇ ತಮ್ಮ ಕಷ್ಟಗಳನ್ನು ಮರೆಯುತ್ತಾ ಕಾಲಹಾಕುತ್ತಿದ್ದಾರೆ. ಇಬ್ಬರೂ ಹುಷಾರಿಲ್ಲದೇ ಏಳಲಾಗದಿದ್ದರೆ ದೂರವಾಣಿಯ ಮುಖಾಂತರ ಔಷಧ ಅಂಗಡಿಯ ಮಾಲೀಕನಿಗೆ ಅಥವಾ ಗೊತ್ತಿರುವ ಚಿಕಿತ್ಸಾಲಯದ ವೈದ್ಯರ ಸಹಾಯಕರಿಗೆ ದುಂಬಾಲು ಬೀಳುತ್ತಾರೆ; ಒಲ್ಲದ ಮನಸ್ಸಿನಲ್ಲೇ ಅವರು ಅಲ್ಪಸ್ವಲ್ಪ ಸಹಕಾರ ನೀಡಿದರೆ ಉಂಟು ಇಲ್ಲದಿದ್ದರೆ ಇಲ್ಲ.

ಯಾರಾದರೂ ಮನೆಗೆ ಬಂದರೆ ಕಷ್ಟಪಟ್ಟು ಬಾಗಿಲು ತೆರೆಯುತ್ತಾರೆ; ಬೆಂಗಳೂರಿನಂತಹ ನಗರದಲ್ಲಿ ಹೆಚ್ಚುತ್ತಿರುವ ಕೊಲೆ-ಸುಲಿಗೆಗಳಿಂದ ಹೆದರುತ್ತಾ ದೇವರಮೇಲೆ ಭಾರ ಹಾಕಿ ಬಾಗಿಲು ತೆರೆಯುವುದು ಅವರ ಅಭ್ಯಾಸ. ಬಾಗಿಲಿಗೆ ಅಂಟಿಸಿರುವ ನಿಮ್ನ ಮಸೂರದ ಗಾಜಿನಲ್ಲೂ ಹೊರಗೆ ನಿಂತವರ ಗುರುತು ಹಿಡಿಯುವುದು ಕಷ್ಟ. ಬಾಗಿಲು ತೆರೆಯುವವರೆಗೆ ಮಾತಂತೂ ಕೇಳಿಸದು. "ನಮಗಂತೂ ಓಡಾಟ ಕಷ್ಟ, ನೀವು ಬರ್ತಾ ಇರಿ" ಎಂದಿದ್ದರು, ಬಹಳ ದಿನಗಳ ನಂತರ ಒಮ್ಮೆ ಹೋಗಿದ್ದೆ. ಆಮೇಲೆ ಮತ್ತೊಮ್ಮೆ ಮಗುದೊಮ್ಮೆ ಹೀಗೇ ಆಗಾಗ ಆದಾಗ ಕಂಡು ಬರುತ್ತೇನೆ. ಅದಕ್ಕೂ ಹೆಚ್ಚಿನದೇನನ್ನೂ ನಾನು ಮಾಡಲಾಗಿಲ್ಲ. ಅವರದನ್ನು ಬಾಯ್ಬಿಟ್ಟು ಕೇಳಲೂ ಇಲ್ಲ ಎನ್ನಿ. ನಾನು ಹೋದಾಗ ಇಬ್ಬರೂ ಕೂತು ಮಾತನಾಡುತ್ತಾರೆ. ಮುದುಕರಾದರೂ ಮನೆ ಗುಡಿಸಿ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ. ಕೆಲಸದಾಕೆಯನ್ನು ಕರೆಯಲು ಹೆದರಿಕೆಯಂತೆ. ಅವರದ್ದೇ ಮನೆಗೆಲಸ! ಎಲ್ಲಕ್ಕೂ ಸ್ವಾವಲಂಬನೆ! ನನ್ನನ್ನು ಕಂಡರೆ ಮೊಮ್ಮಗನನ್ನು ಕಂಡಂತಾಗುತ್ತದೋ ಏನೋ, ಪಾಪ ಬಹಳ ಖುಷಿಪಡುತ್ತಾರೆ. ಇದನ್ನು ಹೀಗೆ ಯಾಕೆ ಹೇಳಿದೆ ಎಂಬುದನ್ನು ಮುಂದೆ ಅವಲೋಕಿಸೋಣ.

ಧಾವಂತದ ಜೀವನಘಟ್ಟದಲ್ಲಿ ಹುಟ್ಟಿದ್ದೇವೆ. ಜನಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಪಶುಗಳ ಮೆಂದೆಯ ಮುಂದೆ ಆಹಾರ ರಾಶಿಹಾಕಿದರೆ, ಅವು ಗಬಗಬನೇ ತಿನ್ನುತ್ತವೆ, ತನಗೇ ಎಲ್ಲವೂ ಸಿಗಲಿ ಎಂದು ಹಾತೊರೆಯುತ್ತವೆ. ಅದೇ ತರಹದ ಹವಣಿಕೆ ನಮ್ಮೆಲ್ಲರದಾಗಿದೆ. ಸಿಕ್ಕಿದ್ದಕ್ಕೆ ತೃಪ್ತರಲ್ಲ; ಭಾರತೀಯ ಸಂಸ್ಕೃತಿ ಇಲ್ಲೂ ಮಾಯವಾಗುತ್ತಿದೆ! ಮಕ್ಕಳು ಹುಟ್ಟುತ್ತಿರುವಂತೆಯೇ ಅವರಿಗೆ ವಿದ್ಯಾಭ್ಯಾಸ ಕೊಡಿಸುವ ತವಕ, ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ದೊಡ್ಡ ಸ್ಕೂಲಿಗೇ ಸೇರಲಿ ಎಂಬ ಬಯಕೆ. ಆಂಗ್ಲ ಮಾಧ್ಯಮದಲ್ಲೇ ಓದಲಿ ಎಂಬುದರ ಜೊತೆಗೆ ಎಲ್.ಕೆ.ಜಿ ಯಿಂದಲೇ ಅವರಮೇಲೆ ಒತ್ತಡ. ಹೆಚ್ಚಿನ ಅಂಕಗಳನ್ನು ಪಡೆಯುವುದಕ್ಕೆ ಚಾಕಲೇಟ್ ಐಸ್ ಕ್ರೀಮ್ ಅಥವಾ ಆಡುವ ಸಲಕರಣೆಗಳ ಕೊಡಿಸುವಿಕೆಯ ಆಮಿಷ! ಪ್ರತೀ ನಿತ್ಯ ಮಕ್ಕಳಿಗೆ "ನೀನು ಜಾಣ ಆಗಬೇಕು, ಎಲ್ಲರಿಗಿಂತಾ ಜಾಸ್ತಿ ಮಾರ್ಕ್ಸು ತೆಗೀಬೇಕು" ಇದೇ ಗೀತೆಯ ಬೋಧನೆ! ಯಾರ ಎದುರೂ ಸೋಲಬಾರದು, ಯಾವುದೇ ಕಾರಣಕ್ಕೂ ಸೋಲೊಪ್ಪಿಕೊಳ್ಳಬಾರದು ಎಂಬ ಪಾಠ! "ಹೆಚ್ಚಿನ ಅಂಕ ತೆಗೆಯದಿದ್ದರೆ ಮಮ್ಮಿ-ಡ್ಯಾಡಿಗೆ ಬೇಸರವಾಗಿ ನಾವೇನ್ ಮಾಡ್ತೀವೋ ಗೊತ್ತೇಇಲ್ಲ" ಎಂಬ ಇಮೋಶನಲ್ ಬ್ಲ್ಯಾಕ್ ಮೇಲ್ ! ಒಂದೊಮ್ಮೆ ಕಡಿಮೆ ಅಂಕದ ಫಲಿತಾಂಶ ಬಂದರೆ ಮಕ್ಕಳಲ್ಲಿ ಮಾನಸಿಕೆ ಉದ್ವಿಗ್ನತೆ, ಖಿನ್ನತೆ-ಆತ್ಮಹತ್ಯೆಗೆ ಯತ್ನ, ಕೆಲವೊಮ್ಮೆ ಆತ್ಮಹತ್ಯೆ ಕೂಡ!

ಕೇವಲ ಹೆಚ್ಚಿನ ಅಂಕಗಳೇ ಪ್ರಧಾನವೇ? ನಿಜಕ್ಕೂ ಅಲ್ಲ! ವ್ಯಕ್ತಿ ಏನಾಗಬೇಕೋ ಅದು ಮೊದಲೇ ಆತನ ಹಣೆಯಮೇಲೆ ಬರೆದಿರುತ್ತದೆ. ಇಲ್ಲಿ ಸಣ್ಣ ತಮಾಷೆಯನ್ನೂ ಅನುಭವಿಸಿಬಿಡೋಣ ಅಲ್ಲವೇ? ಹಾಸ್ಯಸಾಹಿತಿ ಬೀಚಿ ವೈಯ್ಯಕ್ತಿಕವಾಗಿ ಹೇಗೆ ಇದ್ದರೆಂಬುದನ್ನು ಬಿಟ್ಟರೆ, ಹಾಸ್ಯಚಟಾಕಿಗಳನ್ನೇ ಕೊಟ್ಟಿದ್ದಾರೆ! ತಿಮ್ಮ ಶಾಲೆಯಲ್ಲಿ ಓದುತ್ತಿದ್ದ. ದಡ್ಡ ಅಂದರೆ ಆ ಶಬ್ದಕ್ಕೇ ಅಪಮಾನ! ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದ ತಿಮ್ಮನ ಮನೆಗೆ ಒಮ್ಮೆ ಆತನ ಮೇಷ್ಟ್ರು ಬಂದಿದ್ದರು. ಊಟ ಮುಗಿಸಿ ಹರಟುತ್ತಾ ತಿಮ್ಮನ ಪಾಲಕರು " ನಮ್ಮ ತಿಮ್ಮ ಓದಿನಲ್ಲಿ ಈ ಸರ್ತಿ ಉತ್ತೀರ್ಣನಾಗಬಹುದೇ?" ಕೇಳಿದ್ದರಂತೆ. "ಏನು ಮಾಡೋಣ, ಸಾಕಷ್ಟೂ ಪರಿಶ್ರಮದಿಂದ ಕಲಿಸಿದ್ದೇನೆ, ತಲೆಗೇ ಹತ್ತೋದಿಲ್ಲ. ಆತನ ಹಣೆಯಲ್ಲಿ ಬರೆದಹಾಗೇ ಆಗುತ್ತದೆ-ನೀವೇನೂ ಚಿಂತಿಸಬೇಡಿ" ಎಂದಿದ್ದರಂತೆ ಮೇಷ್ಟ್ರು. ಫಲಿತಾಂಶ ನೀಡುವ ದಿನ ತಿಮ್ಮ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿ ಕನ್ನಡಿಯ ಮುಂದೆ ಕುಳಿತಿದ್ದ. ಕನ್ನಡಿನೋಡಿಕೊಂಡು ನಾಮದ ಕಡ್ಡಿಯಿಂದ ’ಪಾ’ ಎಂದು ತಿರುವು ಮುರುವಾಗಿ ಬರೆದುಕೊಂಡ! ಬೇಗನೇ ಹೊರಟು ಶಾಲೆಗೆ ತಲ್ಪಿದ. ಶಾಲೆಗೆ ಬಂದ ತಿಮ್ಮನನ್ನು ಕಂಡ ಅನೇಕ ವಿದ್ಯಾರ್ಥಿಗಳು ನಕ್ಕರು. ತಿಮ್ಮನ ಮೇಷ್ಟ್ರು ಕೇಳಿದರು "ಅದೇನೋ ತಿಮ್ಮ ಹಣೆಯಮೇಲೆ ’ಪಾ’ ಎಂದು ಬರೆದುಕೊಂಡು ಬಂದ್ಬುಟ್ಟಿದ್ದೀಯಾ?" ತಿಮ್ಮ ಹೇಳಿದರೆ"ನೀವೇ ಹೇಳಿದ್ರಲ್ಲ ಗುರುಗಳೇ ನನ್ನ ಹಣೆಯಮೇಲೆ ಬರೆದ ಹಾಗೇ ಆಗುತ್ತದೆ ಎಂದು ಅದಕ್ಕೇ" ಎಂದನಂತೆ! ಮೇಷ್ಟ್ರೂ ಸೇರಿದಂತೇ ಅಲ್ಲಿರುವ ಎಲ್ಲರೂ ನಕ್ಕು ನಕ್ಕು ಸುಸ್ತಾದರಂತೆ.

ನಾನು ಹೇಳಿದ್ದು ಈ ಹಣೆಬರಹವನ್ನಲ್ಲ; ಬದಲಾಗಿ ಬ್ರಹ್ಮ ಬರಹ. ಅದನ್ನು ನಾವು ಓದಲಾರೆವು; ಆದರೆ ಕೊನೆಗೆ ವ್ಯಕ್ತಿ ಏನಾಗಬೇಕೋ ಅದು ಅಲ್ಲಿ ಗುಪ್ತಮುದ್ರಿತವಾಗಿರುತ್ತದೆ. ಇವತ್ತಿನ ಎಂತಹುದೇ ಮೇಧಾವಿ, ಮಹನೀಯ, ರಾಷ್ಟ್ರಪಿತ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಬ್ಯುಸಿನೆಸ್ ಟೈಕೂನ್ ಇಂತಹ ಯಾವುದೇ ಸ್ಥಾನವೂ ಆಗಬಹುದು-ವ್ಯಕ್ತಿ ಯಾವ ಸ್ಥಾನಕ್ಕೆ ಏರಬೇಕೆಂಬುದು ಪೂರ್ವನಿರ್ಧರಿತ ವಿಷಯವಾಗಿರುತ್ತದೆ. ನಾವು ಪ್ರಯತ್ನಿಸಿದ್ದೆಲ್ಲಾ ಆಗುವುದಿಲ್ಲ ಯಾಕೆಂದರೆ ಪ್ರಯತ್ನ ಮಾಡಿದ್ದೆಲ್ಲಾ ಸಿಗಲೇಬೇಕೆಂಬುದು ಸೃಷ್ಟಿಯ ನಿಯಮವಲ್ಲ! ಒಳ್ಳೆಯ ಉದ್ದೇಶವನ್ನಿಟ್ಟು ಪ್ರಯತ್ನಿಸುವುದು ನಮ್ಮ ಕರ್ತವ್ಯ; ಫಲಾಫಲಗಳು ದೈವೀ ಸಂಕಲ್ಪ. ಎಲ್ಲಾ ಪಾಲಕರಿಗೂ ತಮ್ಮ ಮಕ್ಕಳು ಅಥವಾ ಮಗು ಸಾಮಾನ್ಯ ಮಗುವಲ್ಲಾ, ಅದು ಬಹಳ ದೊಡ್ಡ ವ್ಯಕ್ತಿಯಾಗಿ ಬೆಳಗಬೇಕು, ನಮ್ಮಂತೇ ಕಷ್ಟಪಡಬಾರದು ಎಂಬುದು ಸಹಜ ಅನಿಸಿಕೆಯಾಗಿರುತ್ತದೆ. ಕೂಲಿ ಮಾಡುವ ದಂಪತಿಗೆ ಸ್ವಲ್ಪ ಆದಾಯ ಹೆಚ್ಚಿಸಿಕೊಂಡು ತಮ್ಮ ಮಗುವನ್ನು ಓದಿಸಿ-ಅದು ಯಾವುದಾದರೂ ಚಿಕ್ಕ ಉದ್ಯೋಗ ಹಿಡಿಯಲಿ ಎಂದೂ, ಮೇಷ್ಟ್ರು ತಮ್ಮ ಮಗ ವೈದ್ಯನೋ ಎಂಜಿನೀಯರೋ ಆಗಲೆಂದೂ, ವಕೀಲರು ತಮ್ಮ ಮಗಳು ಎಮ್.ಎಸ್ ಮುಗಿಸಿ ಯಾವುದಾದ್ರೂ ಎಮ್.ಎನ್.ಸಿ.ಯಲ್ಲಿ ಒಳ್ಳೆಯ ಹುದ್ದೆಗಳಿಸಿ ವಿದೇಶದಲ್ಲಿರುವ ಗಂಡನನ್ನು ಪಡೆಯಲೆಂದೂ ಹೀಗೆಲ್ಲಾ ಪ್ರತಿ ದಂಪತಿಗೂ ಅವರ ಮಟ್ಟಕ್ಕೆ ತಕ್ಕಂತೇ ಹಲವು ಕನಸುಗಳು ಇರುತ್ತವೆ. ಆ ಕನಸುಗಳನ್ನು ಪರಿಪೂರ್ಣಗೊಳಿಸುವಲ್ಲಿ ಅವರ ಮನಸ್ಸು ನೆಟ್ಟಿರುತ್ತದೆ. ಆ ಕಾರಣದಿಂದ ತಮ್ಮ ಮಕ್ಕಳನ್ನು ಸದಾ ಈ ಮೇಲೆ ಹೇಳಿದಂತೇ ಒತ್ತಡಕ್ಕೀಡುಮಾಡುತ್ತಾರೆ. ಬೇಸಿಗೆಯ ರಜಾ ಬಂದರೆ ಸಾಕು-ಚಿಕ್ಕ ಮಕ್ಕಳು ಜೈಲಿನಿಂದ ಹೊರಬಿಟ್ಟ ಖೈದಿಗಳಂತೇ ಸಂತಸವನ್ನು ಅನುಭವಿಸುತ್ತಾರೆ; ಯಾವಾಗ ಸ್ಕೂಲಿನ ಮರುಚಾಲನೆಯ ಸಮಯ ಬಂತೋ ತಲೆಯಮೇಲೆ ಗೋಡೆ ಹರಿದುಬಿದ್ದವರ ರೀತಿ ಇರುತ್ತಾರೆ!

ಹಾಗಾದರೆ ಮಕ್ಕಳಿಗೆ ನಾವು ಒತ್ತಡ ಹಾಕುವುದು ತಪ್ಪೇ? ಇಲ್ಲದಿದ್ದರೆ ಆಡುವ ವಯಸ್ಸಿನಲ್ಲಿ ಅವರು ಆಟವಾಡುತ್ತಾ ಓದುವುದೇ ಇಲ್ಲವಲ್ಲಾ? ಒತ್ತಡ ಹಿತಮಿತವಾಗಿರಬೇಕು, ಅತಿಯಾಗಬಾರದು. ನೇರವಾಗಿ ಹಾಗೆ ಒತ್ತಡ ಹಾಕುವುದಕ್ಕಿಂತಾ ಭಿನ್ನಮಾರ್ಗದಲ್ಲಿ ಅವರಿಗೆ ಅದನ್ನು ತಿಳಿಸುವ ಕೆಲಸವಾಗಬೇಕು. ಎಲ್ಲಕ್ಕೂ ಮೊದಲಾಗಿ ಅವರಿಗೆ ಕಾಲಕ್ಕೆ ತಕ್ಕ ಉತ್ತಮ ಸಂಸ್ಕಾರಗಳನ್ನು ಕೊಡಬೇಕು. ಚಿತ್ರಗಳಿಂದ ಕೂಡಿದ ರಂಜನೀಯ ನೀತಿಕಥೆಗಳ ಮೂಲಕ, ನಮ್ಮ ರಾಮಾಯಣ-ಮಹಾಭಾರತದ ಕಥೆಗಳ ಮೂಲಕ, ಪಂಚತಂತ್ರದಂತಹ ಕಥೆಗಳ ಮೂಲಕ ನೀತಿಸಾರವನ್ನು ಅವರು ಅರಿಯುವಂತೇ ಮಾಡಬೇಕು. ಅದು ಅವರಿಗೆ ರಂಜನೆಯನ್ನೂ ನೀಡುವುದರ ಜೊತೆಗೆ ಸಮಾಜದಲ್ಲಿ ಅವರು ನಿರ್ವಹಿಸಬೇಕಾದ ಪಾತ್ರದ ಪರಿಕಲ್ಪನೆಯನ್ನೂ ಅವರ ಮನಸ್ಸಿಗೆ ತಂದುಕೊಡುತ್ತದೆ. ಶಿವಾಜಿ ಮಹಾರಾಜರಿಗೆ ಅವರ ತಾಯಿ ಜೀಜಾಬಾಯಿ ರಾಮಾಯಣ-ಮಹಾಭಾರತದ ಕಥೆಗಳನ್ನು ರಂಜನೀಯವಾಗಿ ಹೇಳುತ್ತಿದ್ದಳಂತೆ. ಶಿವಾಜಿಯವರಿಗೆ ಯಾರಾದರೂ ರಾಜನಾಗೆಂದು ಬೋಧಿಸಿದರೇ? ನೀನು ಹೆಚ್ಚಿನ ಅಂಕಗಳಿಸಲಿಲ್ಲವೆಂದು ಜರಿದರೇ? ಇಲ್ಲ. ನಾವೇ ಗೌರವಿಸುವ ಗಾಂಧೀಜಿಯ ಹೆಸರಿನಲ್ಲಿ ’ಗಾಂಧೀಕ್ಲಾಸು’ ಎಂದು ನಾವು ಆಡಿಕೊಳ್ಳುತ್ತಿರುತ್ತೇವೆ; ನಮ್ಮ ಗಾಂಧೀಜಿ ಓದಿನಲ್ಲಿ ಹೆಚ್ಚಿನ ಅಂಕಗಳಿಸುತ್ತಿದ್ದರೇ? ಹಾಗಾದರೆ ಅವರು ರಾಷ್ಟ್ರಪಿತ ಎನಿಸಿದರಲ್ಲ ಹೇಗೆ?

ಅಂಕಕ್ಕೂ ಪ್ರಾಯೋಗಿಕತೆಗೂ ಯಾವ ಸಂಬಂಧವೂ ಇಲ್ಲ. ನಮ್ಮ ಮಲೆನಾಡಿನಲ್ಲಿ ಕೆಲವು ಹಳ್ಳಿಯ ಅಭಿಯಂತರರಿದ್ದಾರೆ. ಹರಿಯುವ ನೀರಿಗೆ ಟರ್ಬೈನ್ ಅಳವಡಿಸಿ ಅಲ್ಲಲ್ಲಿ ಪ್ರಾದೇಶಿಕ ವಿದ್ಯುತ್ ಕೊರತೆಯನ್ನು ನೀಗಿಸಿದ್ದಾರೆ. ನೀರು ಈ ಮಟ್ಟದಲ್ಲಿ ಹರಿಯುತ್ತದೆ-ಇದಕ್ಕೆ ಇಂತಹ ಯಂತ್ರ ಮತ್ತು ಗಾಲಿಗಳನ್ನು ಅಳವಡಿಸಬೇಕು ಎಂದು ಪಕ್ಕಾ ಲೆಕ್ಕಕೊಡುವ ಅವರು ಯಾವ ವಿಶ್ವವಿದ್ಯಾಲಯಗಳಿಂದ ಪದವಿಪತ್ರ ಪಡೆದವರಲ್ಲ; ಆದರೆ ಪದವಿ ಪಡೆದ ಇಲೆಕ್ಟ್ರಿಕಲ್ ಎಂಜಿನಿಯರ್ ಅವರ ಮುಂದೆ ಕೈಕಟ್ಟಿ ನಿಂತು ’ಜೀ ಹುಜೂರ್’ ಎನ್ನುವಷ್ಟು ಪ್ರಯೋಗಶೀಲತೆ ಅವರದ್ದು. ಅನೇಕ ಕೃಷಿಪರ ಯಂತ್ರಗಳನ್ನು ಎಂಜಿನೀಯರಿಂಗ್ ಕಲಿಯದ ವ್ಯಕ್ತಿಗಳೇ ತಯಾರಿಸಿದ್ದಾರೆ. ಪದವಿ ಎಂದರೇನು ? ವಿಶ್ವವಿದ್ಯಾಲಯ ಕೊಡುವ ಅರ್ಹತಾಪತ್ರ. ವಿಶ್ವವಿದ್ಯಾಲಯ ಹೇಗೆ ಹುಟ್ಟಿತು? ಅನಾದಿ ಕಾಲದಲ್ಲಿ ವಿಷಯಗಳನ್ನು ಅರಿತ ಜನ ತಮ್ಮ ಅನುಭವ ಜನ್ಯ ವಿಷಯಗಳನ್ನು ಪುಸ್ತಕಗಳನ್ನಾಗಿ ಬರೆದು ಮಾಹಿತಿಗಳನ್ನು ಕ್ರೋಡೀಕರಿಸಿದರು. ಆ ಕ್ರೋಡೀಕರಣಗೊಂಡ ಮಾಹಿತಿಗಳನ್ನು ವಿಂಗಡಿಸಿ ಬೇರೆ ಬೇರೆ ವಿಭಾಗಗಳನ್ನು ಮಾಡಿದರು. ಉದಾಹರಣೆಗೆ ಮೂಲದಲ್ಲಿ ಇದ್ದ ಎಂಜಿನೀಯರಿಂಗ್ ವಿಭಾಗದಲ್ಲಿ ಸಿವಿಲ್, ಮೆಕಾನಿಕಲ್ ಮತ್ತು ಇಲೆಕ್ಟ್ರಿಕಲ್ ವಿಷಯಗಳು ಮಾತ್ರ ಇದ್ದವು. ಈಗ ವಿದ್ಯುನ್ಮಾನ, ಇನ್ಫಾರ್ಮೇಶನ್ ಸೈನ್ಸ್, ಬಯೋ ಟೆಕ್ನಾಲಜಿ ಸೇರಿದಂತೇ ಹಲವಾರು ವಿಷಯಗಳೂ ವಿಭಾಗಗಳೂ ಇವೆ. ಅನುಭವದ ಮೂಟೆಯನ್ನು ಹಂಚಿಕೊಳ್ಳುವುದಕ್ಕೆ ಪಠ್ಯವೊಂದೇ ಆಧಾರವಲ್ಲ; ಪ್ರಯೋಗಶೀಲತೆಯೂ ಆಧಾರವೇ. ಸುಮಾರು ೧೮ನೇ ಶತಮಾನದ ವರೆಗೂ ಕುಲಕಸುಬು ಎಂಬುದೊಂದಿತ್ತು. ಅಪ್ಪ ಏನುಮಾಡುತ್ತಾನೆ ಎಂಬುದನ್ನು ಗಮನಿಸಿದ ಮಗು ಸಹಜವಾಗಿ ಆಡಾಡುತ್ತಾ ಅದನ್ನು ಕಲಿತು ಪಳಗುತ್ತಿತ್ತು. ಈಗ ಕುಲಕಸುಬು ಎಂಬುದಿಲ್ಲ; ಯಾರು ಯಾವ ಕಸುಬನ್ನೇ ಬೇಕಾದರೂ ಆಯ್ದುಕೊಳ್ಳಬಹುದು. ಆದರೆ ಪ್ರಾಯೋಗಿಕವಾಗಿ ಅಪ್ಪ ತನ್ನ ಮಗುವಿಗೆ ಕಲಿಸಿದಂತೇ ಕಲಿಸುವ ಯಾವ ಗುರುವೂ ಇವತ್ತಿನ ದಿನ ಕಾಣುತ್ತಿಲ್ಲ.

’ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬುದೊಂದು ಗಾದೆ. ಮುರುಡೇಶ್ವರ ಆರ್.ಎನ್. ಶೆಟ್ಟರು ಎಂಜಿನೀಯರಿಂಗ್ ಪದವೀಧರರಲ್ಲ; ಅವರ ವಯೋಮಾನದ ಅನೇಕ ಉದ್ಯಮಿಗಳೂ ಹಾಗೇನೆ. ಆಗ ಈಗಿನಂತೇ ಕುಳಿತಲ್ಲೇ ಕಲಿಯಲು ಗಣಕಯಂತ್ರಗಳೂ ಇರಲಿಲ್ಲ. ಆದರೆ ಶೆಟ್ಟರು ಸಿವಿಲ್ ಕಟ್ಟಡಗಳನ್ನೂ ರಸ್ತೆಗಳನ್ನೂ ನಿರ್ಮಿಸುವತ್ತ ಮನಮಾಡಿದರು. ಯಾರೂ ಕೈಹಾಕದ ಕೆಲವು ಸಾಹಸಕಾರ್ಯಗಳಿಗೆ ಎಳವೆಯಲ್ಲೇ ಎದೆಗಟ್ಟಿಮಾಡಿಕೊಂಡು ನುಗ್ಗಿದರು. ಹಾಗಾದರೆ ಅವರಲ್ಲಿ ಅಷ್ಟೊಂದು ಹಣವಿತ್ತೇ? ಇರಲಿಲ್ಲ. ಹಿಂದೆ ಯಾರಾದರೂ ಬೆಂಬಲ ಇತ್ತರೇ? ಅದೂ ಇಲ್ಲ. ಅವರು ಸ್ವಯಂಭೂ! ಸ್ವಯಂಭೂ ಎಂದರೆ ಸ್ವತಃ ತಾನೇ ಉದ್ಭವಗೊಂಡ ಎಂದರ್ಥ. ಈ ಭರತ ಭೂಮಿಯ ಕೆಲವು ಜಾಗಗಳಲ್ಲಿ ಸ್ವಯಂಭೂ ಲಿಂಗಗಳೂ ವಿಗ್ರಹಗಳೂ ಇವೆ. ನೆಲದಿಂದ ತಂತಾನೇ ಮೇಲೆದ್ದುನಿಂತ ಅಂತಹ ಘನಾಕೃತಿಯನ್ನು ’ಸ್ವಯಂಭೂ’ಎಂದು ಹೆಸರಿಸಿದ್ದಾರೆ. ಇಂತಹ ಹಲವಾರು ’ಸ್ವಯಂಭೂ’ಗಳು ನಮ್ಮಲ್ಲಿದ್ದಾರೆ. ಇವತ್ತು ಆರ್.ಎನ್.ಶೆಟ್ಟರಲ್ಲಿ ಕೆಲಸಮಾಡುತ್ತಿರುವ ಎಂಜಿನೀಯರುಗಳೆಷ್ಟೋ! ಅದರಂತೆ ವಿ.ಆರ್.ಎಲ್ ಸಮೂಹದ ವಿಜಯ ಸಂಕೇಶ್ವರರನ್ನು ಕಾಣುತ್ತೇವೆ; ಕ್ಲೀನರ್ ಆಗಿ ಆರಂಭಿಸಿದ ವೃತ್ತಿಯಲ್ಲೇ ತಾದಾತ್ಯ್ಮತೆ ತಂದುಕೊಂಡು, ತನ್ನ ಕಷ್ಟಾರ್ಜಿತದಲ್ಲಿ ಒಂದೊಂದೇ ಲಾರಿ ಖರೀದಿಸುತ್ತಾ, ಈಗ ಯಾವ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದು ನಮಗೆ ತಿಳಿದೇ ಇದೆ. ಪತ್ರಿಕೋದ್ಯಮ ಅವರ ರಂಗವೇ ಆಗಿರಲಿಲ್ಲ; ಅನಿರೀಕ್ಷಿತವಾಗಿ ಅದಕ್ಕಿಳಿದ ಅವರು ಅದರಲ್ಲೂ ಯಶಸ್ಸು ಪಡೆದಿದ್ದಾರೆ. ಇವರಿಗೆಲ್ಲಾ ಯಾರಾದರೂ ಹೆಚ್ಚಿನ ಅಂಕಪಟ್ಟಿ ನೀಡಿದರೇ? ಖಂಡಿತಾ ಇಲ್ಲ. ಅಂದಮೇಲೆ ಅಂಕವೇ ನಿರ್ಣಾಯಕವಲ್ಲ; ಪದವಿಯೇ ಪ್ರಮಾಣವಲ್ಲ ಎಂಬುದು ಅರಿವಾಗುತ್ತದೆ. ಆದರೂ ಲೆಕ್ಕದ ಭರ್ತಿಗೆ ಪದವಿ ಇರಲಿ, ಬೇಡಾ ಎನ್ನುವುದಿಲ್ಲ. ಬೆಳೆಯುವ ವ್ಯಕ್ತಿ ಹಬ್ಬುವ ಬಳ್ಳಿಯಂತೇ ಪದವಿಯಿಂದಾಚೆಯ ಪ್ರಾತ್ಯಕ್ಷಿಕ ಜ್ಞಾನದ ಹಿತ್ತಲಲ್ಲಿ ತನನ್ನು ಹಬ್ಬಿಸಿಕೊಳ್ಳಬೇಕು!

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ

ಮಹಾತ್ಮ ಡೀವೀಜಿ ಹೇಗೆ ಹೇಳಿದ್ದಾರೆ ನೋಡಿ. ತಲೆಯಮೇಲೆ ಮಣಿಯೊಂದನ್ನು ಇಟ್ಟರೆ ಚೆನ್ನಾಗಿಯೇ ಕಾಣುತ್ತದೆ. ಬಾಗಿದರೆ ಅಲುಗಾಡಿದರೆ ಅದು ವಾಲಲೂ ಬಹುದು, ಬಿದ್ದುಹೋಗಲೂ ಬಹುದು. ತಲೆಯೊಳಗಂತೂ ಹೋಗಲು ಆಗದಲ್ಲಾ? ಪುಸ್ತಕಗಳನ್ನು ಓದಿ ಪಡೆದ ಪದವಿಯಿಂದ ಪ್ರಯೋಗಶೀಲತೆ ಅಥವಾ ಸ್ವಾನುಭವ ಎಂಬುದು ಸಾಕಾಗುವುದಿಲ್ಲ! ಅದೇ ಚಿತ್ತದಲ್ಲಿ ತಂತಾನೇ ಬೆಳೆದರಿವು ಗಿಡಮರಗಳಲ್ಲಿ ಅರಳಿದ ಪುಷ್ಪದಂತೇ ಎಂದಿದ್ದಾರೆ. ಇವತ್ತೀಗ ನಾವು ಉಪಯೋಗಿಸುವ ವಿದ್ಯುತ್ತಿನಿಂದ ಹಿಡಿದು ಹಲವು ಉಪಕರಣಗಳನ್ನು ಕಂಡುಹಿಡಿದ ವಿಜ್ಞಾನಿಗಳಲ್ಲಿ ಹಲವರು ಪದವಿಯ ಗೊಡವೆಗೆ ಸಿಲುಕಿದವರಲ್ಲ! ಆಟವಾಡುತ್ತಿದ್ದ ಬೆಂಜಮಿನ್ ಫ್ರಾಂಕ್ಲಿನ್ ನ ಗಾಳಿಪಟ ಮಿಂಚಿನ ಸೆಳೆತಕ್ಕೆ ಅದುರಿ ಆತನ ಕೈಗೆ ಶಾಕ್ ತಗುಲಿದ ಘಳಿಗೆಯಿಂದ ಆತನ ಚಿತ್ತದಲ್ಲಿ ಸದಾ ಅದೇ ಧ್ಯಾನ; ಅದನ್ನೇ ಕಾಣುವ ಮತ್ತೆ ಅವಧರಿಸುವ ಆಸೆ. ಆ ಪ್ರಯತ್ನವೇ ವಿದ್ಯುತ್ತಿನ ಅರಿವನ್ನು ಆತನಿಗೆ ನೀಡಿತು; ಆತನ ಶೋಧನೆ ಹಲವರಿಗೆ ಉಪಕೃತಿಯಾಯಿತು. ಇದನ್ನೇ ವಸ್ತುಸಾಕ್ಷಾತ್ಕಾರ ಎನ್ನುವುದು!

ಯಾರೋ ಒಬ್ಬಾತ ತಮಾಷೆ ಮಾಡುತ್ತಿದ್ದ. ತನಗೆ ಕಂಪ್ಯೂಟರ್ ನಲ್ಲೇ ಡ್ರೈವಿಂಗ್ ಹೇಳಿಕೊಡುತ್ತಾರೆ, ರಸ್ತೆಗೆ ಹೋಗುವುದೇ ಬೇಡ ಎಂದ! ನನಗೋ ದಿಗಿಲು. ಗಣಕಯಂತ್ರದಲ್ಲಿ ಚಿತ್ರಗಳ ಮೂಲಕ ವೀಡಿಯೋಗಳ ಮೂಲಕ ಪಾಠಮಾಡಬಹುದು, ಆದರೆ ವಸ್ತುತಃ ಆತ ಕಾರನ್ನೋ ಮತ್ಯಾವುದೋ ವಾಹನವನ್ನೋ ಸ್ವತಃ ಚಲಾಯಿಸುತ್ತಾ ರಸ್ತೆಗೆ ನಡೆದಾಗ ಅಲ್ಲಿ ಆತ ಎದುರಿಸುವ ಸವಾಲುಗಳು ಹಲವು. ವಾಹನವೊಂದು ಯಂತ್ರವಷ್ಟೇ? ಅದರ ವೇಗ, ವೇಗೋತ್ಕರ್ಷ, ಇಂಧನನಿರ್ವಹಣೆ, ಎದುರಿಗೆ ಬರುವ ಇತರ ವಾಹನಗಳಿಗೆ ಜಾಗಕೊಡುವಿಕೆ, ಅಡ್ಡಬರುವ ಜೀವಿಗಳಿಂದ/ವಾಹನಗಳಿಂದ ತಪ್ಪಿಸಿಕೊಳ್ಳುವಿಕೆ, ಅನಿರೀಕ್ಷಿತವಾಗಿ ಸಂಭವಿಸಬಹುದಾದ ಅವಘಡಗಳನ್ನು ಎದುರಿಸುವ ಸಿದ್ಧತೆ--ಹೀಗೇ ಕಲಿಯಬೇಕಾದದ್ದು ಹಲವಾರು. ಸಂಗೀತ ಹೇಳಿಕೊಡುವ ಗುರುಗಳ ಜೊತೆಗೇ ಹಾಡುವುದು ಬೆಣ್ಣೆತಿಂದಷ್ಟೇ ಸುಲಭ, ಅವರು ಹಾಡುವುದನ್ನು ನಿಲ್ಲಿಸಿಬಿಟ್ಟರೆ ನಮ್ಮ ಬಾಯಿಂದ ಹೊರಡುವ ಸ್ವರಗಳನ್ನು ಕೇಳಿ ಅವರೂ ಸೇರಿದಂತೇ ಉಳಿದವರು ಮೆಚ್ಚಬೇಕಲ್ಲಾ? ಇಲ್ಲದಿದ್ದರೆ "ಓ ಅವ ಮಾರಾಯ ಬಾಯಿ ತೆಗೆದರೆ ಬೊಂಬಾಯಿ" ಎಂದುಕೊಂಡು ಜನ ಎದ್ದುಹೋದಾರು! ನಮ್ಮಲ್ಲಿ ನಗರಗಳಲ್ಲಿರುವ ಅಧುನಿಕ ವೈದಿಕರಲ್ಲಿ ಕೆಲವರು ಪ್ರಾಯೋಗಿಕವಾಗಿ ತರಬೇತಿ ಪಡೆಯದೇ ಬಂದವರೂ ಇರುತ್ತಾರೆ, ಸಾಕಷ್ಟು ಓದಿಕೊಳ್ಳದೇ ಯಜ್ಞಕ್ಕೆ ಆಹುತಿ ನೀಡುವಾಗ ಪ್ರಧಾನ ಪುರೋಹಿತರ ಜೊತೆಗೆ ಕೊನೆಯಲ್ಲಿ ಸ್ವಾಹಾ ಎನ್ನುತ್ತಿರುತ್ತಾರೆ! "ಸ್ವಾಮೀ ಯಾರಿಗೆ ಸ್ವಾಹಾ ಎಂದು ಆಹುತಿ ಹಾಕಿದಿರಿ" ಎಂದರೆ ಅರಿವಿರುವುದಿಲ್ಲ, ಸಂಸ್ಕೃತ ಭಾಷಾಪ್ರೌಢಿಮೆಯೂ ಇರುವುದಿಲ್ಲ. ಗಟ್ಟುಹಾಕಿದ ಮಂತ್ರಗಳನ್ನು ಉಪಯೋಗಿಸುವಾಗ ಅವುಗಳ ಅರ್ಥವ್ಯಾಪ್ತಿಯ ಅವಲೋಕನವೇ ಇರುವುದಿಲ್ಲ! ಶಾಸ್ತ್ರವಷ್ಟೇ ಮುಗಿಯಿತೇ ಬಿಟ್ಟರೆ ಪುರೋಹಿತರ ಸ್ವಾಧ್ಯಾಯ ಯಾವ ಮಟ್ಟಕ್ಕೆ ಬಂತು ಎಂಬುದನ್ನು ನಾವು ಕೇಳಬೇಕಾಗುತ್ತದೆ. ಸಮಾಜದಲ್ಲಿ ಇನ್ನೊಬ್ಬರಿಗೆ ಉಪದೇಶ ನೀಡುವ ಮೊದಲು ನಾವು ಅಧ್ಯಯನ ಶೀಲರಾಗಬೇಕು; ಪ್ರಾಕ್ಟಿಕಲ್ ಮಾಡಿ ಪರಿಣತರಾಗಬೇಕು.

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೆ ನೆಲವಿಹುದು-ಮಂಕುತಿಮ್ಮ

ಎಂದ ಡೀವೀಜಿ ಈ ಮುಕ್ತಕವನ್ನು ಬರೆಯುವಾಗ ಸ್ವತಃ ತಾವು ಜಟಕಾ ಗಾಡಿಗಳಿಗೆ ಬಣ್ಣ ಬಳಿಯುವ ಕೆಲಸಮಾಡಿದ್ದರಂತೆ!

ಏನಾನುಮಂ ಮಾಡು ಕೈಗೆದೊರೆತುಜ್ಜುಗವ
ನಾನೇನು ಹುಲುಕಡ್ಡಿಯೆಂಬ ನುಡಿಬೇಡ
ಹೀನಮಾವುದುಮಿಲ್ಲ ಜಗದಗುಡಿಯೂಳಿಗದಿ
ತಾಣ ನಿನಗಿಹುದಿಲ್ಲಿ-ಮಂಕುತಿಮ್ಮ

ಯಾವ ಕೆಲಸವೂ ಯವ ಉದ್ಯೋಗವೂ ಮೇಲು-ಕೀಳು ಎಂದೆಣಿಸದೇ ಪಾಲಿಗೆ ಬಂದದ್ದನ್ನು ಶ್ರದ್ಧೆಯಿಂದ ಮಾಡು ಎಂದಿದ್ದ ಅವರು ಆಡಿದ್ದನ್ನು ಮಾಡಿಯೂ ತೋರಿಸಿದ ಪುಣ್ಯಾತ್ಮ! ಮಕ್ಕಳ ಬದುಕನ್ನು ಪಾಲಕರೇ ನಿರ್ಧರಿಸಲಾಗುವುದಿಲ್ಲ; ಹಾಗಂತ ಹಾಗೇ ಕೂರುವುದೂ ಅಲ್ಲ. ನಮ್ಮ ಕರ್ತವ್ಯಗಳನ್ನಷ್ಟೇ ನಾವು ಮಾಡಲು ಸಮರ್ಥರು. ಫಲಾಫಲಗಳು ನಮ್ಮ ನಿರ್ಧಾರವಲ್ಲ. ನಮಗಿಂತ ಹಿರಿದಾದ, ನಮ್ಮಲ್ಲಿದ್ದೂ ನಮಗೆ ಕಾಣದ ಜಗನ್ನಿಯಾಮಕ ಶಕ್ತಿ ಅದನ್ನು ನಿರ್ಧರಿಸುತ್ತದೆ. ಮದುವೆ ಮನೆಗೆ ಹೊರಟ ದಿಬ್ಬಣಿಗರು ಸ್ಮಶಾನ ಸೇರುವ ವಾರ್ತೆಯನ್ನು ಹಲವಾರು ಸರ್ತಿ ಕೇಳುತ್ತೇವೆ. ಹೊರಟಿದ್ದು ಮದುವೆಗೆ-ತೆರಳಿದ್ದು ಮಸಣಕ್ಕೆ: ನಿರ್ಧಾರ ವಿಧಿಯೆಂಬ ಸಾಹೇಬನದು!

ನನಗೆ ಗೊತ್ತಿರುವ ಒಬ್ಬ ದಂಪತಿ ತಮ್ಮ ಚಿಕ್ಕ ಮಗನಿಗೆ ಈಗಿನಿಂದಲೇ ಅತಿಯಾದ ಒತ್ತಡವನ್ನು ಹಾಕುತ್ತಿದ್ದಾರೆ; ನಾನು ಅದನ್ನು ಅವರಿಗೆ ಹೇಳಿಯೂ ಇದ್ದೇನೆ. ಮೊನ್ನೆ ಮೊನ್ನೆ ಯಾವುದೋ ಚಿಕ್ಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಬಂದಿದ್ದಕ್ಕೆ ಮಗು ಇಡೀ ದಿನ ಅಳುತ್ತಿತ್ತಂತೆ! ಕಾರಣರು ಯಾರು: ಅಪ್ಪ-ಅಮ್ಮ. ಜೀವನ ಎಂಬುದು ಪರೀಕ್ಷೇಯೇ ವಿನಃ ಮಿಕ್ಕಿದ ಪರೀಕ್ಷೆಗಳಲ್ಲಿ, ಚುನಾವಣೆಗಳಲ್ಲಿ ಸೋಲು-ಗೆಲುವು ಇದ್ದಿದ್ದೇ. ಪ್ರಯತ್ನಿಸದೇ ಗೆಲ್ಲುವ ಭರವಸೆಯನ್ನು ತಳೆಯಬೇಕೆಂದು ನಾನು ಹೇಳುತ್ತಿಲ್ಲ. ಒಂದುಪಕ್ಷ ಗೆಲ್ಲದೇ ಇದ್ದರೂ ಆ ಫಲಿತಾಂಶವನ್ನು ಸ್ವೀಕರಿಸುವ, ಯಾಕೆ ತಪ್ಪಾಯ್ತು ಎಂದು ಪರಾಮರ್ಶಿಸುವ ಸ್ವಭಾವವನ್ನು ಮಕ್ಕಳಿಗೆ ಕಲಿಸಿದರೆ, ಫಲಿತಾಂಶ ವ್ಯಕ್ತಿರಿಕ್ತವಾದಾಗ ಈ ಜಗತ್ತೆಷ್ಟು ಕ್ರೂರಿ ಎಂದುಕೊಳ್ಳುತ್ತಾ ಸಾಯುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ವಸ್ತುಸ್ಥಿತಿಯನ್ನು ಇದ್ದಹಾಗೆ ಸ್ವೀಕರಿಸಿಕೊಂಡು ಜೀವನ ನಿಭಾಯಿಸುವ ಕಲೆಯನ್ನು ಪಾಲಕರು ಮಕ್ಕಳಿಗೆ ಕಲಿಸಿಕೊಡಬೇಕು. ಜವಾನನ ಮಗ ಜವಾನನೇ ಆಗಬೇಕೆಂದಲ್ಲ, ಕಂಡಕ್ಟರ್ ಮಗ ಕಂಡಕ್ಟ್ರೇ ಆಗಬೇಕೆಂದೂ ಅಲ್ಲ, ಹಿಂದೊಮ್ಮೆ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕವಾಡ್ ಇಂದು ರಜನೀಕಾಂತ್ ಆಗಿಲ್ಲವೇ? ಇದನ್ನೇ ನಾನು ಹೇಳಿದ್ದು-ಅದು ಬರೆದಿರುತ್ತದೆ!

ಆಯ್ತು, ಇನ್ನು ಮಕ್ಕಳು ತಮ್ಮನ್ನು ಪೊರೆಯಲಿ, ನಮ್ಮ ವೃದ್ಧಾಪ್ಯದಲ್ಲಿ ಮಕ್ಕಳು ತಮ್ಮ ಸಹಾಯಕ್ಕೆ ಬರಲಿ ಎಂಬ ನಿರೀಕ್ಷಣೆಯನ್ನು ಇಟ್ಟುಕೊಳ್ಳುವ ಕಾಲ ಇದಲ್ಲ! ನಾನು ಆರಂಭದಲ್ಲಿ ಹೇಳಿದ ಕಥೆಯನ್ನು ಇಲ್ಲಿ ಬಳಸಿಕೊಳ್ಳಿ. ಜಮಾನ ಬದಲಾಗಿದೆ ಎನ್ನುವ ನಮ್ಮ ಜನಾಂಗ ಅವಿಭಕ್ತ ಕುಟುಂಬದ ಸಂಸ್ಕೃತಿಯನ್ನು ತೊರೆದು ಎರಡು-ಮೂರು ದಶಕಗಳೇ ಕಳೆದವು. ಈಗ ಎಲ್ಲರಿಗೂ ವೈಯ್ಯಕ್ತಿಕ ಸ್ವಾತಂತ್ರ್ಯ ಬೇಕು ಎನ್ನುವ ಹೊಸ ಜಮಾನ. ಗಂಡನಿಗೇ ಬೇರೆ ರೂಮು ಹೆಂಡತಿಗೇ ಬೇರೆ ಕೋಣೆ ಮತ್ತು ಮಗು ಅಥವಾ ಮಕ್ಕಳಿಗೂ ಬೇರೆ ಬೇರೆ ರೂಮು ಬಯಸುವ ಕಾಲ! ವ್ಯಕ್ತಿ ತನಗೆ ತನ್ನದೇ ಆದ ಸಮಯ ಬೇಕು ಎಂದುಕೊಳ್ಳುತ್ತಾ ಕೆಲವು ವಿಷಯಗಳಲ್ಲಿ ಗೌಪ್ಯವಾಗಿರುವುದರಿಂದ ಅವಿಭಕ್ತ ಕುಟುಂಬದಲ್ಲಿರುವಂತೇ ಕುಟುಂಬದ ಇತರ ಸದಸ್ಯರೊಡನೆ ತನ್ನ ವಿಷಯಗಳನ್ನು ಹಂಚಿಕೊಳ್ಳ ಬಯಸುವುದಿಲ್ಲ!

ಒಂದು ಕಾಲಘಟ್ಟದಲ್ಲಿ ಪನ್ನಾ ಲೆಕ್ಕದಲ್ಲಿ ಬಟ್ಟೆ ತೆಗೆದುಕೊಂಡು ಎಲ್ಲರಿಗೂ ಸಮವಸ್ತ್ರ ಎಂಬರೀತಿ ಚಡ್ಡಿ-ಅಂಗಿ ಹೊಲಿಸಿಕೊಂಡ ಅವಿಭಕ್ತ ಕುಟುಂಬದ ಮಕ್ಕಳು ಈಗ ಅಪ್ಪಂದಿರಾಗಿದ್ದಾರೆ; ಅವರ ಮಕ್ಕಳಿಗೆ ಆ ತರಹದ ಉಡುಪು ಅಸಹ್ಯ. ಉಡುಪು ಇರಲಿ, ಯಾವುದೇ ವಿಷಯದಲ್ಲೂ ಹೊಂದಾಣಿಕೆ ಎಂಬುದೇ ಇರುವುದು ಕಷ್ಟ. ಯಾಕೆ ಹೀಗೆ ಎಂದರೆ ಮಮ್ಮಿ-ಡ್ಯಾಡಿ ಹೇಳಿಕೊಟ್ಟ ಸೋಲೊಪ್ಪಿಕೊಳ್ಳಬಾರದ ದುರಭಿಮಾನ! ಅವಿಭಕ್ತ ಕುಟುಂಬದಿಂದ [ಕೆಲವು ಚಿಕ್ಕಪುಟ್ಟ ವಿಷಯಗಳಿಗೆ ಅನಾನುಕೂಲವೆನಿಸಿದರೂ]ಆಗುವ ಲಾಭ ಬಹಳವಿತ್ತು. ಇವತ್ತು ವಿಭಕ್ತ ಕುಟುಂಬಗಳಲ್ಲಿ ಆಜ್ಜ-ಅಜ್ಜಿಯ ಕಾನ್ಸೆಪ್ಟ್ ಇರುವುದೇ ಕಮ್ಮಿ! ಗ್ರಾನ[ಗ್ರಾಂಡ್ ಪಾ] ಗ್ರಾನಿ ವೃದ್ಧಾಶ್ರಮದಲ್ಲಿ ಇರುತ್ತಾರೆ, ಮೊಮ್ಮಕ್ಕಳಿಗೆ ಅವರ ಸಂಪರ್ಕವೇ ಇರುವುದಿಲ್ಲ! ಸುದೈವವಶಾತ್ ವಿಭಕ್ತ ಕುಟುಂಬದ ತಮ್ಮ ಮಕ್ಕಳ ಮನೆಯಲ್ಲೇ ಇದ್ದರೂ ಅಜ್ಜ ಒಬ್ಬ ಮಗನ/ಳ ಮನೆಯಲ್ಲಿ ಅಜ್ಜಿ ಇನ್ನೊಬ್ಬ ಮಗನ/ಳ ಮನೆಯಲ್ಲಿ! ಇದು ಸರದಿಯ ಪ್ರಕಾರ ಅದಲು ಬದಲಾಗಬಹುದು. ವೃದ್ಧಾಪ್ಯದಲ್ಲಿ ಗಂಡ-ಹೆಂಡತಿ ಸಾಮೀಪ್ಯವನ್ನು ಹಂಚಿಕೊಳ್ಳಲು ಆಸ್ಪದವಿಲ್ಲ. ಈ ಸಂಸ್ಕಾರ ನಮಗೆ ಬೇಕಿತ್ತೇ? ಅಧುನಿಕರೆನಿಸಿದ ನಮ್ಮಲ್ಲಿ ಯಾರ ಬಾಯಿಂದಲಾದರೂ ನೆಮ್ಮದಿಯಿಂದಿದ್ದೇವೆ ಎಂದು ಹೇಳಿಸಿ ನೋಡೋಣ! ದೂರವಾಣಿಯಲ್ಲಿ "ಎಲ್ಲಾ ಚೆನ್ನಾಗಿದ್ದೀವಿ" ಎಂದವನ ಮನೆಯಲ್ಲಿ ಮಡದಿ ಬೊಗಸೆಗಟ್ಟಲೆ ಮಾತ್ರೆ ನುಂಗುತ್ತಿರುತ್ತಾಳೆ. "ಬನ್ನಿ ಮನೆಗೆ, ಆರಾಮಾಗಿ ಒಂದೆರಡು ದಿನ ಇದ್ದು ಹೋಗಬಹುದಂತೆ" ಎಂದವನೇ ತನ್ನ [ಒತ್ತಡಗಳಲ್ಲಿ ಜರ್ಜರಿತನಾಗಿ] ಅಕಸ್ಮಾತ ಬಂದುಬಿಟ್ಟರೆ "ಅಯ್ಯೋ ವಕ್ರಸ್ತಲ್ಲಪ್ಪಾ ಶನಿ" ಎಂದು ಸ್ವಗತದಲ್ಲಿ ಹೇಳಿಕೊಳ್ಳುವ ಕಾಲ ಇದಾಗಿದೆ.

ಕಾಲಕ್ಕೆ ತಕ್ಕಂತೇ ರಸ್ತೆಬದಿಯಲ್ಲಿ ಫಾಸ್ಟ್ ಫುಡ್ ವ್ಯವಸ್ಥೆ; ಕುಂತು ತಿನ್ನಲೂ ಆಗದ ಅವ್ಯವಸ್ಥೆ! ನಮಗೆ ಸ್ವಾಸ್ಥ್ಯವಿಲ್ಲ ಯಾಕೆಂದರೆ ನಾವು ತಿನ್ನುವುದೂ ಕೂಡ ಧಾವಂತದಲ್ಲಿ. ಎಷ್ಟೋ ದಿನ ನಾನು ತಿಂಡಿಯಾದ ಮೇಲೆ ಚಾ ಕುಡಿದೆನೋ ಇಲ್ಲವೋ ಎಂಬುದನ್ನೇ ಮರೆತಿರುತ್ತೇನೆ ಯಾಕೆಂದರೆ ಅದರ ಬಗ್ಗೆ ಲಕ್ಷ್ಯ ಇರುವುದಿಲ್ಲ! ತಿನ್ನುವ ಆಹಾರ ನಮ್ಮೊಳಗಿರುವ ಪರಮಾತ್ಮನ ಭಾಗವಾದ ಆತ್ಮನಿಗೆ ನಿವೇದಿಸುವ ಪೂಜೆಯ ಕೆಲಸ ಎಂದು ತಿಳಿದು, ಸ್ವಚ್ಛತೆಯುಳ್ಳ ಪ್ರದೇಶದಲ್ಲಿ, ಸ್ವಚ್ಛ ಬಟ್ಟೆ ಧರಿಸಿ, ಶುಚಿ-ರುಚಿಯಾಗಿ ಮಾಡಿದ ಆಹಾರವನ್ನು ನಿಧಾನವಾಗಿ ಸೇವಿಸಿದರೆ ಅದರ ಅಗುಳು ಅಗುಳೂ ಕೂಡ ನಮಗೆ ರಯಿಸುತ್ತದೆ. ಒಬ್ಬಾತ ಕೇಳಿದರು: ನಾನು ಫಾಸ್ಟ್ ಫುಡ್ ನಲ್ಲಿ ಊಟ ಮಾಡುವುದು, ಅಲ್ಲಿ ಎಲ್ಲಿ ಯಾವ ಅಪೋಶನ ತೆಗೆದುಕೊಳ್ಳಲಿ/ಚಿತ್ರ ಇಡಲಿ--ಎಂದು. ಆಹಾರವನ್ನು ವಾಣಿಜ್ಯವ್ಯವಹಾರವಾಗುಳ್ಳ ಪ್ರದೇಶಗಳಲ್ಲಿ ಅಂತಹ ಕೆಲಸಕ್ಕೆ ಕೈಹಾಕದಿರುವುದೇ ಒಳಿತು. ತಮಾಷೆಗೆ ನಾವು ಹೇಳುವುದಿದೆ: ಜಿರಲೆ ಬಿದ್ದ ದೋಸೆಹಿಟ್ಟಿನಿಂದ ಜಿರಲೆಯನ್ನು ಎತ್ತಿ ಬಿಸಾಡಿ, ಅದನ್ನೇ ಹುಯ್ದುಕೊಡುವುದರಿಂದ ದೋಸೆ ಗರಿಗರಿಯಾಗಿರುತ್ತದೆ ಎಂದು. ಎಷ್ಟೇ ಸ್ವಚ್ಛತೆ ಎಂದು ಬೋರ್ಡು ಹಾಕಿಕೊಂಡರೂ ಹೋಟೆಲ್ ಗಳಲ್ಲಿ ಕೆಲವಂಶಗಳಲ್ಲಾದರೂ ಮಾಲಿನ್ಯ ಇದ್ದೇ ಇರುತ್ತದೆ; ಅದು ಕಾಣದಂತೇ ಕ್ಲೋಸ್ಡ್ ರೂಮ್ ನಲ್ಲಿರುತ್ತದೆ!

ಮಹಾರಾಷ್ಟ್ರ ಮೂಲದವರಾಗಿ ಬೆಂಗಳೂರಿನಲ್ಲಿ ಉದ್ಯಮಿಯಾದ ವಯೋವೃದ್ಧ ಮರಾಠೀ ವ್ಯಕ್ತಿಯೊಬ್ಬರಲ್ಲಿ ಹರಟುತ್ತಿದ್ದೆ. ಪಕ್ಕದ ಮನೆಯಾತ ಸತ್ತರೂ ಗೊತ್ತಾಗದ, ಮಾನವೀಯ ಸಂಬಂಧಗಳಿಗೆ ಮೌಲ್ಯವೇ ಇಲ್ಲದ ಈ ಕಾಲದಲ್ಲೂ, ಮಳೆಗಾಲವೊಂದರಲ್ಲಿ ಮುಂಬೈಯ್ಯಲ್ಲಿ ಮಳೆನೀರು ನಿಂತು ಜನಸಂದಣಿ ಅಲ್ಲಲ್ಲೇ ಉಳಿಯಬೇಕಾದ ಪ್ರಸಂಗವೊದಗಿದಾಗ, ರಕ್ತಗತವಾಗಿ ಬಂದ ಭಾರತೀಯತೆ ಎಚ್ಚೆತ್ತು, ಗುರುತು ಪರಿಚಯ ಇರದವರು ನಿಂತ ಆ ಯಾ ಪ್ರದೇಶಗಳ ಮನೆಗಳಲ್ಲೇ ಎರಡೆರಡು ದಿನ ಆತಿಥ್ಯ ಪಡೆದರು ಎಂದ ಅವರು, ಭಾರತೀಯ ಮೂಲ ಸಂಸ್ಕೃತಿಯ ’ಅತಿಥಿ ದೇವೋಭವ’ ಎಂಬ ಉಲ್ಲೇಖವನ್ನು ನೆನೆದು ಗದ್ಗದಿತರಾದಾಗ ಅವರ ಗರಳೇ ಬದಲಾಗಿತ್ತು; ಕಣ್ಣ ಹನಿಗಳು ಉದುರಿದವು! ಹರಟಿದರೆ ಮುಗಿಯದ ಸಂಸ್ಕೃತಿ-ಸಂಸ್ಕಾರಗಳ ಕುರಿತ ಬರಹಗಳು, ನಮ್ಮ ಲೆಕ್ಕವನ್ನೆಲ್ಲಾ ಪಕ್ಕಕ್ಕಿಟ್ಟು ಹನುಮಗಾತ್ರಕ್ಕೆ ಬೆಳೆಯುತ್ತಲೇ ಹೋಗುತ್ತವೆ! ರಾಮಕೃಷ್ಣ ಮಠದ ಸ್ವಾಮಿ ಜಗದಾತ್ಮಾನಂದರು ಸುಮಾರು ೨೦ ವರ್ಷಗಳಿಗೂ ಮುನ್ನವೇ ’ಬದುಕಲು ಕಲಿಯಿರಿ’ ಎಂಬ ದೀವಿಗೆಯನ್ನು ಬೆಳಗಿಸಿದರು, ಇಂತಹ ಹೊತ್ತಗೆಯನ್ನು ನಮ್ಮೆಲ್ಲಾ ಅಧುನಿಕ ಕನ್ನಡಿಗರು, ಯುವಕರು ದಯಮಾಡಿ ಓದಿಕೊಳ್ಳಿ. ಆರ್ಷೇಯ ಸಂಸ್ಕೃತಿಯನ್ನು ಮರಳಿ ಜಾರಿಗೆ ತನ್ನಿ, ಮಮ್ಮಿ-ಡ್ಯಾಡಿ ಎಂಬ ವಿದೇಶೀ ಪದಗಳ ಅಂಧಾನುಕರಣೆ ಬಿಟ್ಟು ಸ್ವಚ್ಛಗನ್ನಡದಲ್ಲಿ ಅಪ್ಪ-ಅಮ್ಮ ಎಂದು ಹೇಳಲು ಮಕ್ಕಳಿಗೆ ತಿಳಿಸಿ, ಹಿರಿಯರು ನೀಡಿದ ಪುಣ್ಯಕಥಾನಕಗಳ ಆಂತರ್ಯವನ್ನು ನೀವರಿಯದಿದ್ದರೂ, ಅರಿತವರ ಮೂಲಕ ಮಕ್ಕಳಿಗೆ ಉಣಬಡಿಸಿ. ಮಕ್ಕಳಮೇಲೆ ಇಲ್ಲದ ಒತ್ತಡ ಹಾಕಬೇಡಿ. ಹಣೆಯಲ್ಲಿ ಯಾರಾಗಬೇಕೆಂದಿದೆಯೋ ಅವರು ’ಅವರೇ’ ಆಗುತ್ತಾರೆ! ದುಡಿಯುವ ಯಂತ್ರಗಳ ಬದಲಿಗೆ ಮಾನವರನ್ನು ಬೆಳೆಸಿ! ಪ್ರಕೃತಿಯನ್ನೂ ಸುತ್ತಲ ಜನರನ್ನೂ ಅರಿತು ಬದುಕುವ, ಬದುಕ ಕಲಿಯುವ ಭಾರತೀಯರನ್ನಾಗಿ ಬೆಳೆಸಿ ಎಂಬ ಬಿನ್ನವತ್ತಳೆಯೊಂದಿಗೆ ನೀವು ಹಾಗೆ ಮಾಡುತ್ತೀರಿ ಎಂಬ ವಿಶ್ವಾಸದಿಂದ ನಿಮಗೆ ಅಡ್ವಾನ್ಸ್ ಆಗಿ ನನ್ನ ಧನ್ಯವಾದಗಳೂ, ಅಭಿನಂದನೆಗಳೂ, ನಮಸ್ಕಾರಗಳೂ ಸಲ್ಲುತ್ತವೆ.

Saturday, April 14, 2012

ಕಾಡುವ ಪುಟ್ಟಣ್ಣನ ಗಾಢ ನೆನಪುಗಳು

ಚಿತ್ರಋಣ : ಅಂತರ್ಜಾಲ
ಕಾಡುವ ಪುಟ್ಟಣ್ಣನ ಗಾಢ ನೆನಪುಗಳು

ಧೂಪದ ಘಾಟಿನ ಹೊಗೆ ಅಂಕದ ಪರದೆಯ ಹಿಂದಿನಿಂದ ಧಾವಿಸಿ ನೇರವಾಗಿ ಕುಳಿತ ಪ್ರೇಕ್ಷಕರ ಮೂಗಿಗೆ ಧಾವಿಸುತ್ತಿದ್ದಂತೆಯೇ ರಂಗಗೀತೆ ಆರಂಭಗೊಳ್ಳುತ್ತಿತ್ತು. ಅದು ದೈವ ಸ್ತುತಿ. ಬಹುತೇಕ ಪ್ರದರ್ಶಿಸಲಿರುವ ನಾಟಕದಲ್ಲಿ ಅಭಿನಯಿಸುವ ಬಹುತೇಕ ನಟನಟಿಯರು ಅಲ್ಲಿ ಹಾಜರಿರುತ್ತಿದ್ದರು. ಅದು ತಯಾರಿಯ ಪೂರ್ವಸೂಚನೆಯೂ ಹೌದು. ಎಲ್ಲಾ ಪಾತ್ರಧಾರಿಗಳೂ ಬಣ್ಣ-ದಿರಿಸುಗಳಿಂದ ಸಜ್ಜಾಗಿ ಕಣ್ಣಿಗೆ ಕಾಣಿಸಿದಾಗಲೇ ಕಂಪನಿಯ ಯಜಮಾನರಿಗೆ ತುಸು ನಿರುಂಬಳ! ಕುಮಟಾದ ಕುಡ್ತಗಿ ಬೈಲಿನಲ್ಲಿ ಉತ್ತರಕರ್ನಾಟಕದ ಕಡೆಯ ಹಲವು ನಾಟಕ ಕಂಪನಿಗಳು ಬೇಸಿಗೆಯಲ್ಲಿ ತಮ್ಮ ತಂಬು ಹೂಡುತ್ತಿದ್ದವು. ಅವುಗಳಲ್ಲಿ ಹುಚ್ಚೇಶ್ವರ ನಾಟಕ ಕಂಪನಿ, ಕಮತಗಿ ಕೂಡ ಒಂದು. ಬೇಸಿಗೆಯಲ್ಲಿ ಹಾಗೆ ಬರುವ ಅವರು ಸುಮಾರು ಎರಡೂವರೆ ಮೂರು ತಿಂಗಳುಗಳತನಕ ಪ್ರತಿನಿತ್ಯ ನಾಟಕ ನಡೆಸುತ್ತಿದ್ದರು. ನಾಟಕಗಳನ್ನು ನೋಡಲು ಅವರಿಗೆ ಸಾಕಷ್ಟು ಜನ ಸಿಗುತ್ತಿದ್ದರು ಎಂಬುದೂ ಅವರಿಗೆ ಮನವರಿಕೆಯಾಗಿತ್ತು.

ನಮ್ಮಲ್ಲಿನ ವಾಣಿಜ್ಯ ಬೆಳೆಯಾದ ಅಡಕೆಗೆ ಮಾರುಕಟ್ಟೆ ದೊರೆಯುತ್ತಿದ್ದುದು ಕುಮಟಾದಲ್ಲೇ. ಹೊನ್ನಾವರ, ಕುಮಟಾ, ಭಟ್ಕಳ ಈ ಮೂರೂ ತಾಲೂಕುಗಳಲ್ಲಿ ಬೆಳೆದ ಅಡಕೆಗಳು ಮಾರಾಟಕ್ಕೆ ಸಿದ್ಧವಾದಮೇಲೆ ಮಾರುವ ಸಲುವಾಗಿ ರೈತರು ಹಳ್ಳಿಗಳಿಂದ ಖಾಸಗೀ ವಾಹನಗಳಲ್ಲಿ ಅಡಕೆ ಮೂಟೆಗಳನ್ನು ತುಂಬಿಸಿಕೊಂಡು ಕುಮಟಾದಲ್ಲಿರುವ ೫-೬ ಮಂಡಿಗಳಿಗೆ ಬರುತ್ತಿದ್ದರು. ಒಕ್ಕಲುತನ ಹುಟ್ಟುವಳಿ ಪೇಟೆ ಸಮಿತಿಯ ಸ್ವಂತ ಪ್ರಾಂಗಣವಿಲ್ಲದ ಆ ಕಾಲದಲ್ಲಿ ಖಾಸಗಿ ಮಂಡಿಗಳಲ್ಲಿ ಜನ ಅವುಗಳನ್ನು ತೂಕಮಾಡಿ ಇರಿಸಿಕೊಂಡು ಖರೀದಿದಾರರ ಗುಪ್ತ ಟೆಂಡರ್ ಗಳ ಮೂಲಕ [ಆರ್.ಎಂ.ಸಿ ನಿರ್ದೇಶನದಲ್ಲಿ]ಹೆಚ್ಚಿಗೆ ದರವನ್ನು ನಿಗದಿಪಡಿಸಿಕೊಂಡು ಮಾರಿಹೋಗುತ್ತುದ್ದರು. ಈ ಪ್ರಕ್ರಿಯೆಗೆ ಒಂದು ರಾತ್ರಿ ಮತ್ತು ಒಂದು ಹಗಲು ಸಮಯ ಹಿಡಿಯುತ್ತಿತ್ತು. ರೈತರು ಮಂಡಿಗಳವರು ಕೊಡುವ ಜಾಗಗಳಲ್ಲೇ, ಅವರು ಕೊಡುವ ಹಾಸಿಗೆ-ಹೊದಿಕೆಗಳನ್ನು ಬಳಸಿ ಮಲಗುತ್ತಿದ್ದರು. ಹೀಗೆ ರಾತ್ರಿ ಉಳಿಯಬೇಕಾಗಿ ಬಂದ ರೈತರು ಮನೋರಂಜನೆಗಾಗಿ ನಾಟಕ ಸಿನಿಮಾಗಳನ್ನು ನೋಡುತ್ತಿದ್ದರು.

ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿದ್ದ ನನ್ನಂತಹ ಮಕ್ಕಳಿಗೆ ರಜಕಳೆಯುವುದರೊಳಗೆ ನಾಟಕ, ಸಿನಿಮಾಗಳನ್ನು ನೋಡುವುದೇ ಒಂದು ಖುಷಿ. ಕೆಲವೊಮ್ಮೆ ಕಥೆಗಳು ಅರ್ಥವಾಗದಿದ್ದರೂ ಅಲ್ಲಿನ ಬಣ್ಣಬಣ್ಣದ ದೀಪಾಲಂಕಾರಗಳು, ದೃಶ್ಯ[ಸೀನು]ಗಳು ಬಹಳ ಸೆಳೆಯುತ್ತಿದ್ದವು. ಹಾಸ್ಯವಂತೂ ಸಹಜವಾಗಿ ಅರ್ಥವಾಗಿಬಿಡುತ್ತಿತ್ತು. ಕಥಾನಾಯಕ, ಖಳನಾಯಕರಿಗಿಂತಾ ಹಾಸ್ಯದವರಿಗೆ ಕಾಯುತ್ತಿದ್ದ ಸಮಯವೇ ಜಾಸ್ತಿ. ಅವರುಗಳ ಹಾಸ್ಯದಿಂದ ಇಡೀ ಸಭೆ ಘೊಳ್ಳೆಂದು ನಗುವಾಗ ಅದೆಂಥದೋ ಅನಿರ್ವಚನೀಯ ಆನಂದ ನಮಗೂ ಸಿಗುತ್ತಿತ್ತು! ಅಜ್ಜ, ನನ್ನ ಎಳವೆಯಲ್ಲೇ ಕುಮಟಾದಲ್ಲಿ ತನ್ನ ಖಾಸಗೀ ಮಂಡಿಯನ್ನು ಅತಿಕಷ್ಟದಲ್ಲೇ ಧೈರ್ಯದಿಂದ ಆರಂಭಿಸಿದ್ದ. ಅಜ್ಜನಿಗೆ ವ್ಯವಹಾರದ ಜಂಜಡಗಳಿದ್ದರೂ ಮೊಮ್ಮಗನ ಮೇಲೆ ಅಕ್ಕರೆಯೂ ಇತ್ತು. ಬೇಸಿಗೆಯ ರಜಾಕಾಲ ಬಂದಾಗ ಅಜ್ಜನನ್ನು ಕಾಡೀ ಬೇಡಿ ಜೊತೆಗೆ ಗಂಟುಬಿದ್ದು ಕುಮಟಾಕ್ಕೆ ತೆರಳಿ ಅಲ್ಲಿ ಮಂಡಿಯಲ್ಲೇ ತಂಗುತ್ತಿದ್ದೆ. ಅಜ್ಜ ಮತ್ತು ನಮ್ಮೆಲ್ಲರ ಊಟ-ತಿಂಡಿ ಅರ್ಧ ಕಿಲೋಮೀಟರ್ ದೂರವಿರುವ ಗಣಪಯ್ಯ ಭಟ್ಟರ ಖಾನಾವಳಿಯಲ್ಲಿ ನಡೆಯುತ್ತಿತ್ತು. ಅಲ್ಲೇ ಸ್ನಾನ ಶೌಚವನ್ನೂ ಮುಗಿಸಿಕೊಳ್ಳಬೇಕಾಗುತ್ತಿತ್ತು. ಮನೋರಂಜನೆಯ ಮುಂದೆ ಅದ್ಯಾವುದೂ ಅಡೆತಡೆ ಅನ್ನಿಸುತ್ತಲೇ ಇರಲಿಲ್ಲ. ಅಜ್ಜ ತನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾಗ, ಅಲ್ಲಿಗೆ ಬಂದಿರುವ ರೈತರಲ್ಲಿ ಯಾರಾದರೂ ನಾಟಕಕ್ಕೋ ಸಿನಿಮಾಕ್ಕೋ ಹೊರಟವರನ್ನು ಹಿಡಿದುಕೊಂಡು ನಾನೂ ಹೊರಟುಬಿಡುತ್ತಿದ್ದೆ. ನನಗೂ ಅವರಿಗೂ ಟಿಕೆಟ್ಟಿಗಾಗಿ ಅಜ್ಜನೇ ಅವರಕೈಗೆ ಹಣ ಕೊಟ್ಟು ಕಳುಹಿಸುತ್ತಿದ್ದ.

’ಕಣ್ಣಿದ್ದರೂ ಬುದ್ಧಿಬೇಕು’, ’ರತ್ನಮಾಂಗಲ್ಯ’ ಮೊದಲಾದ ಕೆಲವು ನಾಟಕಗಳನ್ನು ನಾನು ನೋಡಿದ್ದೇನೆ. ಸೊಸೆತಂದ ಸೌಭಾಗ್ಯ, ಶಂಕರ್ ಗುರು ಈ ಎರಡು ಸಿನಿಮಾಗಳನ್ನೂ ನೋಡಿದ ನೆನಪಿದೆ. ಒಮ್ಮೆ ಇಂತಹ ಒಂದು ಬೇಸಿಗೆಯಲ್ಲೇ ಮಾಸ್ಟರ್ ಹಿರಣ್ಣಯ್ಯನವರ ’ಲಂಚಾವತಾರ’ವನ್ನೂ ನೋಡಿದ್ದಿದೆ.[ಅವರು ಕೆಲವು ದಿನಗಳ ಮಟ್ಟಿಗೆ ಕುಮಟಾದಲ್ಲಿ ಮಂಡಳಿಯ ಕ್ಯಾಂಪ್ ಮಾಡಿದ್ದರು] ಪರದೆಯ ಹೊರಗಿನ ಸಾಮ್ರಾಜ್ಯವನ್ನಷ್ಟೇ ಕಂಡಿದ್ದ ನನಗೆ ಅಲ್ಲಿನ ಪಾತ್ರಧಾರಿಗಳು ಎಷ್ಟು ಭಾಗ್ಯವಂತರಪ್ಪಾ ಎನಿಸುತ್ತಿತ್ತು ಬಿಟ್ಟರೆ ನಾಟಕ ಮುಗಿದಮೇಲೆ ನನಗೆಲ್ಲೂ ಅವರು ಕಾಣಸಿಕ್ಕಿರಲಿಲ್ಲ. ಎತ್ತರಕ್ಕೆ ಕಟ್ಟುವ ತಂಬಿನಲ್ಲಿ ಸಕಲವ್ಯವಸ್ಥೆಯೂ ಇರುತ್ತಿದ್ದು ಅವರೆಲ್ಲಾ ಹಾಯಾಗಿದ್ದಾರೆ ಎಂದೇ ನನ್ನ ಭಾವನೆ. ಕಮತಗಿ ಕಂಪನಿಯ ಕೆಲವು ಪಾತ್ರಧಾರಿಗಳು ಸೈಡ್ ವಿಂಗ್‍ಗಳಲ್ಲಿ ನಿಂತು ಬೀಡಿ ಸೇದುತ್ತಿದ್ದುದು ಒಮ್ಮೊಮ್ಮೆ ಕಾಣಿಸುತ್ತಿತ್ತು! ಪಾತ್ರದ ದಿರಿಸಿನಲ್ಲಿ ಶ್ರೀಮಂತರಂತೇ ಕಾಣುವ ಅವರು ಬೀಡಿ ಚಟಕ್ಕೆ ಅಂಟಿಕೊಂಟಿದ್ದೇಕೆ ಎಂಬ ಕುತೂಹಲವೂ ಮೂಡಿತ್ತು.

ಪುಟ್ಟಣ್ಣ ತಯಾರಿಸಿದ ’ರಂಗನಾಯಕಿ’ ನೋಡಿದವನೇ ನಾಟಕಕಂಪನಿಗಳವರ ನಿಜಜೀವನದ ರಹಸ್ಯಗಳನ್ನು ಅರಿತು ಮರುಕಪಟ್ಟೆ. ನಾಟಕ ಕಂಪನಿಯ ಯಜಮಾನರ ಪಾತ್ರಧಾರಿ"ನಾಗರಾಜ್ ಶೆಟ್ರೇ ನೀವು ರಾತ್ರಿಯ ಹೊತ್ತಲ್ಲಿ ಬಣ್ಣಬಣ್ಣದ ದೀಪಾಲಂಕಾರದಲ್ಲಿ ಬಣ್ಣಬಣ್ಣದ ಸೀನುಗಳ ಮುಂದೆ ಮಾತ್ರ ನಮ್ಮನ್ನು ನೋಡಿದ್ದೀರಿ, ಬಣ್ಣದ ಪರದೆಯ ಹಿಂದೆ ಇರುವ ನಮ್ಮ ಜೀವನವನ್ನು ನೀವು ನೋಡಿಲ್ಲ! ಸ್ವಲ್ಪ ಅದನ್ನೂ ನೋಡಿ, ಹೇಯ್ ಯಾರಲ್ಲಿ ಸ್ವಲ್ಪ ಅರಮನೆ ಸೀನನ್ನು ಮೇಲೆತ್ರಪ್ಪಾ" ಎಂದಾಗ ನಿಧಾನವಾಗಿ ಮೇಲೆದ್ದ ಅರಮನೆ ಪರದೆಯ ಹಿಂದೆ ನಾಟಕದವರ ನಿಜಜೀವನದ/ನಿತ್ಯಜೀವನದ ಕಟುವಾಸ್ತವ ದೃಶ್ಯಗಳು ಕಾಣಿಸುತ್ತವೆ ! ಇಂತಹ ಹಲವು ದೃಶ್ಯಕಾವ್ಯಗಳನ್ನು ಬರೆಯುವುದರಲ್ಲಿ ಪುಟ್ಟಣ್ಣ ನಿಷ್ಣಾತರಾಗಿದ್ದರು. ಅದೇ ಕಾರಣಕ್ಕೇ ಸಿನಿಮಾ ಪುಟ್ಟಣ್ಣ ಕಣಗಾಲ್ ನಿರ್ದೇಶನದ್ದು ಎಂದರೆ ಬಿಸಿ ಬಿಸಿ ದೋಸೆ ಇದ್ದಂತೇ ಜನರಿಗೆ ರುಚಿಸುತ್ತಿತ್ತು. ಪ್ರೇಕ್ಷಕರು ಪಾತ್ರಗಳಲ್ಲಿ ತಲ್ಲೀನರಾಗಿ ತಮ್ಮ ಜೀವನದ ಕಷ್ಟಗಳನ್ನು ಆ ಮೂರುಗಂಟೆಗಳ ಕಾಲ ಮರೆಯುತ್ತಿದ್ದರು; ಜೊತೆಗೆ ಉತ್ತಮ ಸಂದೇಶಗಳನ್ನು ಪುಟ್ಟಣ್ಣನವರ ಸಿನಿಮಾಗಳಿಂದ ಪಡೆಯುತ್ತಿದ್ದರು.

ಶುಭ್ರವೇಷ್ಟಿ ರಾಮಸ್ವಾಮಯ್ಯ ಸೀತಾರಾಮ ಶರ್ಮ ಅಲಿಯಾಸ್ ಎಸ್.ಆರ್. ಪುಟ್ಟಣ್ಣ ಕಣಗಾಲ್ ಹುಟ್ಟಿದ್ದು ಡಿಸೆಂಬರ್ ೧, ೧೯೩೩ ರಂದು, ಮೈಸೂರಿನ ಕಣಗಾಲ್ ಎಂಬ ಹಳ್ಳಿಯಲ್ಲಿರುವ ಮುಲುಕುನಾಡು ಬಡ ಬ್ರಾಹ್ಮಣ ಕುಟುಂಬವೊಂದರಲ್ಲಿ. ಉದರಂಭರಣೆಗಾಗಿ ಉತ್ತಮ ಕೆಲಸಗಳನ್ನು ಹುಡುಕುತ್ತಾ ಅನಿವಾರ್ಯವಾಗಿ ಆಯ್ಕೆಮಾಡಿಕೊಂಡ ತಾತ್ಕಾಲಿಕ ವೃತ್ತಿಗಳು ಹಲವು; ಅವುಗಳಲ್ಲಿ ಒಬ್ಬ ಕ್ಲೀನರ್ ಆಗಿ, ಒಬ್ಬ ಸೇಲ್ಸ್ ಮನ್ ಆಗಿ, ಒಬ್ಬ ಶಿಕ್ಷಕನಾಗಿಯೂ ಕೆಲಸಮಾಡಿದ್ದಿದೆ, ಎಲ್ಲಕ್ಕಿಂತಾ ಹೆಚ್ಚಾಗಿ ಪಬ್ಲಿಸಿಟಿ ಹುಡುಗನಾಗಿ ಕೆಲಸಮಾಡುವಾಗ ಸಿನಿಮಾದೆಡೆಗೆ ಆಕರ್ಷಿತರಾದವರು ಪುಟ್ಟಣ್ಣ. ಕಪ್ಪು-ಬಿಳುಪು ಸಿನಿಮಾಗಳನ್ನು ಅಂದಿನದಿನಗಳಲ್ಲಿ ದಿಗ್ದರ್ಶಿಸುತ್ತಿದ್ದ ಬಿ.ಆರ್. ಪಂತುಲು ಅವರ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದು ಪುಟ್ಟಣ್ಣನ ಯಶೋಗಾಥೆಯ ಟರ್ನಿಂಗ್ ಪಾಯಿಂಟ್. ನಿರ್ದೇಶಕನಾಗಿ ಯಾವೆಲ್ಲಾ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕೋ ಅವಷ್ಟನ್ನೂ ಸುಪ್ತವಾಗಿ ಹೊಂದಿದ್ದ ಪುಟ್ಟಣ್ಣ, ಸಿನಿಮಾಗಳನ್ನು ಕೇವಲ ವಾಣಿಜ್ಯವ್ಯಾಪಾರದ ದೃಷ್ಟಿಯಿಂದ ತಯಾರಿಸದೇ ಉತ್ತಮ ಕಥೆಗಳನ್ನು ಆಯ್ದುಕೊಂಡು ಅವುಗಳನ್ನಾಧರಿಸಿ ತಯಾರಿಸುತ್ತಿದ್ದರು.

ನಾನು ಎಷ್ಟೋ ಸರ್ತಿ ನನ್ನ ಲೇಖನಗಳಲ್ಲಿ ಹೇಳಿದಹಾಗೇ, ಶಿಲ್ಪಿಯೊಬ್ಬ ಉಳಿಯಿಂದ ಮೂರ್ತಿಯನ್ನು ಕೆತ್ತುವ ಮುನ್ನವೇ ಇಡೀ ಮೂರ್ತಿಯ ಕಲ್ಪನೆ ಅವನ ಮನದಲ್ಲಿ ಮೂರ್ತರೂಪ ತಳೆದಿರುತ್ತದೆ, ಸಂಗೀತಗಾರನೊಬ್ಬ ಹಾಡುವ ಹಾಡಿಗೆ ಭಾವಗಳ-ರಾಗಗಳ ಕಲ್ಪನೆ ಮೊದಲೇ ಆತನ ಮನದಲ್ಲಿ ಮೂಡಿರುತ್ತವೆ, ಕಾದಂಬರಿಕಾರನೊಬ್ಬ ಬರೆಯುವ ಮುನ್ನವೇ ಇಡೀ ಕಾದಂಬರಿಯ ಕಥಾಹಂದರ ಅವನಲ್ಲಿ ನಿಚ್ಚಳವಾಗಿ ಒಡಮೂಡಿರುತ್ತದೆ. ಅದರಂತೇ ಸಿನಿಮಾವೊಂದನ್ನು ಮಾಡುವ ಮುನ್ನವೇ ಇಡೀ ಸಿನಿಮಾ ಯಾವ ರೀತಿ ಇರಬೇಕೆಂಬ ಕಲ್ಪನೆ ಪುಟ್ಟಣ್ಣನವರಿಗೆ ಇರುತ್ತಿತ್ತು. ಹಣಕ್ಕಾಗಿಯೇ ಅವರು ಕೆಲಸಮಾಡಿದವರಲ್ಲ; ಕಥೆಯನ್ನು ಓದಿ ಆಸ್ವಾದಿಸಿ ಸ್ವೀಕೃತವೆನಿಸಿದರೆ ಆ ಕಥೆಯಲ್ಲಿ ಬರುವ ಪಾತ್ರಗಳಿಗೆ ಸರಿಹೊಂದುವ ವ್ಯಕ್ತಿಗಳನ್ನು ಅವರು ಹುಡುಕುತ್ತಿದ್ದರು. ಬಣ್ಣ, ಮೈಕಟ್ಟು, ಮುಖಚಹರೆ, ಕೂದಲು, ಆಳ್ತನ, ಸ್ವಭಾವ ಎಲ್ಲವನ್ನೂ ಗಮನಿಸಿ ಕಥೆಗಳಲ್ಲಿನ ಪಾತ್ರವನ್ನು ಸಾಧ್ಯವಾದಷ್ಟೂ ನೈಜವಾಗಿ ಹೊರಹೊಮ್ಮಿಸಬಲ್ಲ ವ್ಯಕ್ತಿಗಳನ್ನು ಆಯ್ದುಕೊಳ್ಳುತ್ತಿದ್ದರು. ಹೀಗೇ ಆಯ್ದುಕೊಂಡ ಕಲಾವಿದರನ್ನು ಉತ್ತಮವಾಗಿ ಪಳಗಿಸುತ್ತಿದ್ದರು! ಪುಟ್ಟಣ್ಣ ರೂಪಿಸಿದ ಕಲಾವಿದರಲ್ಲಿ ಕಲ್ಪನ, ಆರತಿ, ಲೀಲಾವತಿ, ಜಯಂತಿ, ಪದ್ಮಾವಾಸಂತಿ, ವಿಷ್ಣುವರ್ಧನ್, ಶ್ರೀನಾಥ್, ರಜನೀಕಾಂತ್, ಅಂಬರೀಶ್, ಜೈಜಗದೀಶ್, ಗಂಗಾಧರ್, ವಜ್ರಮುನಿ, ಚಂದ್ರಶೆಖರ್, , ಶಿವರಾಮ್, ಶ್ರೀಧರ್, ರಾಮಕೃಷ್ಣ, ಅಪರ್ಣಾ ಸಾಕಷ್ಟು ಹೆಸರನ್ನು ಪಡೆದಿದ್ದಾರೆ.

ದೃಶ್ಯಗಳನ್ನು ಕಣ್ಣಲ್ಲಿ ತಂದುಕೊಂಡು, ಕಣ್ಣಿಗೆ ಕಟ್ಟುವಂತೇ ಪಾತ್ರ ನಿರ್ವಹಿಸುವ ಕಲಾವಿದರಿಗೆ ವಿವರಿಸುವ ಮತ್ತು ಮನದಟ್ಟುಮಾಡುವ ಕಲೆ ಪುಟ್ಟಣ್ಣನವರಿಗೆ ಕರಗತವಾಗಿತ್ತು. ಪಾತ್ರಗಳಲ್ಲಿ ಪಾತ್ರಪೋಷಕರು ಪರಕಾಯಪ್ರವೇಶ ಮಾಡಿದಂತೇ ಭಾವತಲ್ಲೀನತೆಯಿಂದ ನಟಿಸಬೇಕೆಂಬ ಆಪೇಕ್ಷೆ ಅವರದಾಗಿತ್ತು. ಬಿಡಿಸುತ್ತಿರುವ ಚಿತ್ರದಲ್ಲಿ ಬಣ್ಣವೋ ರೇಖೆಯೋ ತಪ್ಪಿದಾಗ ಚಿತ್ರಕಲಾವಿದನಿಗೆ ಆಗುವ ನೋವಿನಂತೇ ಚಿತ್ರೀಕರಣದ ವೇಳೆ, ಪಾತ್ರಧಾರಿಗಳು ಪುನರಪಿ ಮಾಡುವ ತಪ್ಪುಗಳು ಪುಟ್ಟಣ್ಣನವರಿಗೆ ಕೋಪ ಬರಿಸುತ್ತಿದ್ದವು. ಹಾಗೆ ಕೋಪಬಂದಾಗ ದವಡೆಗೆ ಬಿಟ್ಟಿದ್ದೂ ಇದೆ. ದೃಶ್ಯ ಉತ್ಕೃಷ್ಟವಾಗಿ ಮೂಡಿಬಂದಾಗ ಸ್ಥಳದಲ್ಲೇ ಬೆನ್ನು ತಟ್ಟಿದ್ದೂ ಇದೆ! ಕಲಾವಿದರು ತಾದಾತ್ಮ್ಯತೆಯಿಂದ ನಡೆದುಕೊಂಡಾಗ ಪಾತ್ರ ಸಮರ್ಪಕವಾಗಿ ಮೂಡುವುದರ ಜೊತೆಗೆ ಸಿನಿಮಾ ಎಂಬುದು ಸಿನಿಮಾ ಎನಿಸದೇ ನೋಡುಗನಿಗೆ ನಿಜಜೀವನದ ಘಟನೆಗಳನ್ನು ನೋಡಿದಹಾಗೇ ಭಾಸವಾಗುತ್ತದೆ ಎಂಬುದು ಪುಟ್ಟಣ್ಣನವರ ಅಭಿಪ್ರಾಯವಾಗಿತ್ತು; ಅವರದನ್ನು ಸಾಬೀತುಪಡಿಸುವಲ್ಲಿ ಯಶಸ್ಸನ್ನೂ ಪಡೆದರು.

೬೦ ರ ದಶಕದಲ್ಲಿ ಪೌರಾಣಿಕ ಕಥೆಗಳು ಸಿನಿಮಾಕ್ಕೆ ಅಳವಡಿಸಲ್ಪಡುತ್ತಾ ಖಾಲಿಯಾದವು ಎನ್ನಿಸಿದಾಗ ಪುಟ್ಟಣ್ಣ ಆಯ್ದುಕೊಂಡಿದ್ದು ಕನ್ನಡ ಸಾಹಿತ್ಯವನ್ನು. ಕನ್ನಡದ ಕಥೆ, ಕವನ, ಕಾದಂಬರಿಗಳನ್ನು ರಾಶಿಹಾಕಿಕೊಂಡು ಓದಿದ ಪುಟ್ಟಣ್ಣ ಅವುಗಳಲ್ಲಿ ಮನಮಿಡಿಯುವ ಕೆಲವಷ್ಟನ್ನು ಆಯ್ದುಕೊಂಡರು. ಉತ್ತಮ ಕಾದಂಬರಿಕಾರರಾಗಿದ್ದ ತ್ರಿವೇಣಿ, ಭಾರತೀಸುತೆ ಮೊದಲಾದವರ ಕೃತಿಗಳನ್ನು ಸಿನಿಮಾಕ್ಕೆ ಅಳವಡಿಸುವಲ್ಲಿ ಪುಟ್ಟಣ್ಣ ಸಿದ್ಧಹಸ್ತರಾದರು. ಎರಡೂವರೆ-ಮೂರುಗಂಟೆ ಸಿನಿಮಾ ನೋಡಿದರೆ ಕಾದಂಬರಿಯೊಂದರ ಕಥಾಹಂದರವನ್ನು ನೈಜವಾಗಿ ನೋಡಿದ ಅನುಭವ ಪ್ರೇಕ್ಷಕನಿಗಾಗುತ್ತಿತ್ತು. ’ಬೆಳ್ಳಿಮೋಡ’ ಎಂಬ ಸಿನಿಮಾದಿಂದ ಆರಂಭಗೊಂಡ ಪುಟ್ಟಣ್ಣನ ದೃಶ್ಯಕಾವ್ಯಗಳು ಗೆಜ್ಜೆಪೂಜೆ, ಶರಪಂಜರ, ನಾಗರಹಾವು, ಧರ್ಮಸೆರೆ, ರಂಗನಾಯಕಿ, ಉಪಾಸನೆ, ಶುಭಮಂಗಳ, ಎಡಕಲ್ಲುಗುಡ್ಡದಮೇಲೆ, ಸಾಕ್ಷಾತ್ಕಾರ ....ಹೀಗೇ ’ಮಸಣದ ಹೂವು’ ತನಕವೂ ಅವರು ಬರೆದಿದ್ದು ಹಲವು ರೂಪಕಗಳು. ಕನ್ನಡಕ್ಕೆ ೨೪ ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ಪುಟ್ಟಣ್ಣನಂತಹ ನಿರ್ದೇಶಕರು ಇನ್ನೊಬ್ಬರಿಲ್ಲ.

ಕನ್ನಡ ಸಾಹಿತ್ಯದ ಕಥಾಹಂದರಗಳನ್ನು ಚಲನಚಿತ್ರಗಳಿಗೆ ಅಳವಡಿಸುವಾಗ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತಿತ್ತು. ಸಾಹಿತ್ಯ ಮತ್ತು ಸಿನಿಮಾಗಳ ನಡುವಣ ಕಂದಕವನ್ನು ತುಂಬಿಸಿಕೊಳ್ಳುವಲ್ಲಿ ಪುಟ್ಟಣ್ಣ ಮತ್ತು ನಟಿ ಕಲ್ಪನಾ ಒಟ್ಟಾಗಿ ಕೆಲಸಮಾಡಿದರು-ಅದು ತ್ರಿವೇಣಿಯವರ ’ಬೆಕ್ಕಿನಕಣ್ಣು’ ಕಾದಂಬರಿಯನ್ನು ಸಿನಿಮಾಮಾಡುವ ಸಮಯದಲ್ಲಿ. ಮನುಷ್ಯರಿಗೆ ದೌರ್ಬಲ್ಯಗಳು ಸಹಜ. ಮೊದಲೇ ನಾಗಲಕ್ಷ್ಮಿ ಎಂಬವರನ್ನು ಮದುವೆಯಾಗಿ ಮಕ್ಕಳ ತಂದೆಯಾಗಿದ್ದ ಪುಟ್ಟಣ್ಣ ಅದ್ಯಾವ ಘಳಿಗೆಯಲ್ಲಿ ಕಲ್ಪನಾಳಿಗೆ ಮನಸೋತರೋ ತಿಳಿಯುತ್ತಿಲ್ಲ. ಅಂತೂ ಪುಟ್ಟಣ್ಣ ಮತ್ತು ಕಲ್ಪನಾ ಒಟ್ಟಿಗೇ ಕೆಲಸಮಾಡುತ್ತಾ ತಮ್ಮ ಖಾಸಗೀ ಬದುಕಿನಲ್ಲೂ ಒಂದಾದರು! ಇದು ಸಿನಿಮಾರಂಗವಷ್ಟೇ ಅಲ್ಲ ಕನ್ನಡ ಜನರೆಲ್ಲರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ಮುಂದೆ ಕೆಲವು ಸಿನಿಮಾಗಳ ತನಕ ಒಟ್ಟಾಗಿ ನಡೆದ ಈ ಜೋಡಿ ಶರಪಂಜರದ ನಂತರ ಯಾಕೋ ನಿಂತುಹೋಯ್ತು! ಸಂಬಂಧ ಹಳಸುವುದಕ್ಕೆ ಯಾರು ಕಾರಣರು ಎಂಬುದು ನಿಜಕ್ಕೂ ತಿಳಿದಿಲ್ಲ. ಆ ನಂತರ ಕಲ್ಪನಾ ಮಾನಸಿಕವಾಗಿ ಜರ್ಜರಿತವಾಗೇ ಇದ್ದರು ಎಂಬುದು ತಿಳಿದುಬರುತ್ತದೆ. ಪುಟ್ಟಣ್ಣನವರಿಂದ ಬೇರ್ಪಟ್ಟ ಕಲ್ಪನಾಳ ದೇಹಸುಖಕ್ಕಾಗಿ ಹಾತೊರೆಯುತ್ತಿದ್ದ ಭಕಗಳು ಹಲವು! ಆಕೆಯ ಮನೋಸ್ಥಿತಿಗೆ ವಿರುದ್ಧವಾಗಿ ಆಕೆಯನ್ನು ಬಳಸಿಕೊಂಡಿದೂ ಅಲ್ಲದೇ ಮಾಡಿದ ಸಾಲವನ್ನು ತೀರಿಸಲಾಗದ ಹಂತದಲ್ಲಿ ಅರೆಹುಚ್ಚಿಯಾಗಿದ್ದ ಕಲ್ಪನಾ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಳು. ನಡುವಯಸ್ಸಿಗೂ ಮುನ್ನವೇ ಕಲ್ಪನಾ ಎಂಬ ತಾರೆ ಆತ್ಮಹತ್ಯೆಗೆ ಶರಣಾದಳು ಎನ್ನುತ್ತಾರೆ; ಅದು ಸಿಟ್ಟಿನ ಕೈಯ್ಯಲ್ಲಿ ಹೊಡೆದುಂಟಾದ ಹತ್ಯೆಯೋ ಅಥವಾ ಆತ್ಮಹತ್ಯೆಯೋ ನೋಡಿದವರಿಲ್ಲ. ಗೋಟೂರಿನ ಬಂಗಲೆಯಲ್ಲಿ ವಜ್ರದ ಹರಳನ್ನು ಪುಡಿಮಾಡಿ ನುಂಗಿ ಸತ್ತಳು ಎಂದು ಆಕೆಯ ಅಂದಿನ ಪತಿಯಾಗಿದ್ದ ನಾಟಕಕಾರ ಗುಡಗೇರಿ ಬಸವರಾಜ್ ಹೇಳುತ್ತಾರೆ.

ಮಿನುಗುತಾರೆಯ ನಿರ್ಗಮನದ ನಂತರದಲ್ಲಿ ಆರತಿ ಎಂಬ ನಟಿ ಪುಟ್ಟಣ್ಣನ ವೈಯ್ಯಕ್ತಿಕ ಜೀವನಕ್ಕೆ ಕಾಲಿಟ್ಟಳು. ತಾನು ಬೇರೇ ಅಲ್ಲ ಆರತಿ ಬೇರೇ ಅಲ್ಲ ಎಂದುಕೊಳ್ಳುತ್ತಾ ಆರತಿಗಾಗಿ ಹಗಲಿರುಳೂ ಹೊಸಹೊಸ ದೃಶ್ಯಕಾವ್ಯಗಳನ್ನು ಹುಡುಕುತ್ತಾ, ಆಕೆಗೆ ತರಬೇತಿ ನೀಡಿ ಉತ್ತಮ ಅಭಿನೇತ್ರಿಯನ್ನಾಗಿ ರೂಪಿಸುತ್ತಾ ನಡೆದರು ಪುಟ್ಟಣ್ಣ. ಗೆಜ್ಜೆಪೂಜೆ, ನಾಗರಹಾವು, ಎಡಕಲ್ಲು ಗುಡ್ಡದಮೇಲೆ, ಉಪಾಸನೆ, ಕಥಾಸಂಗಮ, ಶುಭಮಂಗಳ, ಬಿಳಿಹೆಂಡ್ತಿ, ಧರ್ಮಸೆರೆ, ರಂಗನಾಯಕಿ ಮೊದಲಾದ ಚಿತ್ರಗಳಲ್ಲಿ ಆರತಿಯನ್ನು ಹಂತಹಂತವಾಗಿ ತಿದ್ದಿತೀಡಿ ಉತ್ತಮ ಅಭಿನೇತ್ರಿಯನ್ನಾಗಿಸಿದರು. ಈ ವೇಳೆಗಾಗಲೇ ಕನ್ನಡ, ಮಲಯಾಳಂ. ತಮಿಳು, ತೆಲುಗು ಮತ್ತು ಹಿಂದಿ-ಇಷ್ಟು ಭಾಷೆಗಳಲ್ಲಿ ಪುಟ್ಟಣ್ಣ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರೂ ಕನ್ನಡದ ಆರತಿ ಅವರ ಮನದನ್ನೆಯಾಗಿ ಮನೆಮಾಡಿಬಿಟ್ಟಿದ್ದರು! ರಂಗನಾಯಕಿಯ ನಂತರ ಆರತಿ ಮತ್ತು ಪುಟ್ಟಣ್ಣರ ನಡುವಣ ಸಂಬಂಧ ಏಕಾಏಕೀ ಮುರಿದುಬಿತ್ತು! ಆರತಿಯದೇ ತಪ್ಪು ಎಂದು ಪುಟ್ಟಣ್ಣ ಕಾವ್ಯಮಯವಾಗಿ ಹೇಳಿದರು, ಪುಟ್ಟಣ್ಣನ ಸಂಶಯ ಅತಿರೇಕವಾಯ್ತು ಎಂದು ಮುನಿಸಿಗೊಂಡು ದೂರವಾದೆನೆಂದು ಆರತಿ ಹೇಳಿದರು. ಹೆಣ್ಣು-ಗಂಡಿನ ನಡುವೆ ಇರುವ ವೈಯ್ಯಕ್ತಿಕ ಸಂಬಂಧ ಈರುಳ್ಳಿಯ ಒಳಗಿನ ಪಾರದರ್ಶಕ ಸಿಪ್ಪೆಯಂತೇ ಅತೀ ತೆಳ್ಳಗಿನದು; ಅದಕ್ಕೆ ಘಾಸಿಯಾಗದಂತೇ ಕಾಯ್ದುಕೊಳ್ಳುವಲ್ಲಿ ಇಬ್ಬರ ಪಾತ್ರವೂ ಮಹತ್ವದ್ದು! ಸಾರ್ವಜನಿಕ ರಂಗದಲ್ಲಿ ಸೆಲಿಬ್ರಿಟಿಗಳಾಗಿರುವ ನಟ-ನಟಿ-ನಿರ್ದೇಶಕರಿಗೆ, ಕಲಾವಿದರಿಗೆ ಹಲವರ ಸಂಪರ್ಕಗಳು ಬರುತ್ತಿರುತ್ತವೆ. ಅಲ್ಲಿ ಪ್ರಾಮಾಣಿಕವಾಗಿ ವಸ್ತುನಿಷ್ಟವಾಗಿ ಗಂಡ-ಹೆಂಡಿರು ಎಂದು ಬಹಳಕಾಲ ಒಟ್ಟಿಗೇ ಬದುಕುವುದು ಸುಲಭದ ಮಾತಲ್ಲ. ಯಾವಘಳಿಗೆಯಲ್ಲೂ ಯಾರೂ ಯಾರಿಗೋ ತಮ್ಮ ಮನಸ್ಸನ್ನು ಕೊಟ್ಟುಬಿಡಬಹುದು! ಆಗ ಹಾಲಿ ಚಾಲ್ತಿಯಲ್ಲಿರುವ ಸಂಗಾತಿಯನ್ನು ಅವರು ಮರೆಯಲೂ ಬಹುದು, ದ್ರೋಹಬಗೆಯಲೂ ಬಹುದು! ಭಾವಜೀವಿಯಾಗಿದ್ದ ಪುಟ್ಟಣ್ಣ ನಿಜಜೀವನದ ಈ ಮಜಲುಗಳಲ್ಲಿ ಮಾತ್ರ ಗೆಲ್ಲಲಿಲ್ಲ! ಮನೆಯಲ್ಲಿ ಧರ್ಮಪತ್ನಿ ಕಾಯಾ ವಾಚಾ ಮನಸಾ ತನ್ನ ಪತಿಯೇ ಸರ್ವಸ್ವ ಎಂಬ ಸಾಧ್ವಿ ಇದ್ದರೂ ಬಣ್ಣದ ಲೋಕದ ಬೆಳಕಿನಲ್ಲಿ, ಬೆಡಗಿನಲ್ಲಿ ತಾನೇ ಶಿಲ್ಪಿಯಾಗಿ ರೂಪಕೊಟ್ಟ ಮದನಕನ್ನಿಕೆಯರಿಗೆ ತಾನೇ ಯಜಮಾನನೆಂಬ ಇರಾದೆ ತಳೆದರು.

ಪುಟ್ಟಣ್ಣ ನಿರ್ದೇಶಿಸಿದ ಚಿತ್ರಗಳು: [ಎಲ್ಲಾ ಭಾಷೆಗಳ ಚಿತ್ರಗಳೂ ಸೇರಿವೆ]
___________________________________________________________

೧೯೬೫ --ಪಕ್ಕಲೊ ಬಲ್ಲೆಂ -ತೆಲುಗು

೧೯೬೬ --ಬೆಳ್ಳಿ ಮೋಡ

೧೯೬೬ --ಪೂಚ ಕಣ್ಣಿ-ಮಲಯಾಳಂ

೧೯೬೮ --ಟೀಚರಮ್ಮ- ತಮಿಳು

೧೯೬೮ ಪಲಮನಸುಲು-ತೆಲುಗು

೧೯೬೯ --ಮಲ್ಲಮ್ಮನ ಪವಾಡ

೧೯೬೯-- ಕಪ್ಪು ಬಿಳುಪು

೧೯೬೯-- ಗೆಜ್ಜೆ ಪೂಜೆ

೧೯೭೦ -- ಕರುಳಿನ ಕರೆ

೧೯೭೧ --ಸುದರುಂ ಸೂರವಲಿಯುಂ-ತಮಿಳು

೧೯೭೧-- ಶರಪಂಜರ

೧೯೭೧ ಸಾಕ್ಷಾತ್ಕಾರ

೧೯೭೧ --ಇರುಳುಂ ಒಲಿಯುಂ-ತಮಿಳು

೧೯೭೨ --ಇದ್ದರು ಅಮ್ಮಾಯಿಲು-ತೆಲುಗು

೧೯೭೨ ನಾಗರಹಾವು

೧೯೭೩ --ಎಡಕಲ್ಲು ಗುಡ್ಡದ ಮೇಲೆ

೧೯೭೪ ಉಪಾಸನೆ

೧೯೭೪ --ಝಂಹ್ರೀಲಾ ಇನ್ಸಾನ್-ಹಿಂದಿ

೧೯೭೫ --ಕಥಾಸಂಗಮ

೧೯೭೫ -- ಶುಭ ಮಂಗಳ

೧೯೭೫ -- ಬಿಳಿ ಹೆಂಡ್ತಿ

೧೯೭೬ --ಫಲಿತಾಂಶ

೧೯೭೬ --ಕಾಲೇಜು ರಂಗ

೧೯೭೮ -- ಪಡುವಾರಳ್ಳಿ ಪಾಂಡವರು

೧೯೭೯ --ಧರ್ಮಸೆರೆ

೧೯೮೦ --ಹಮ್ ಪಾಂಚ್-ಹಿಂದಿ

೧೯೮೧-- ರಂಗನಾಯಕಿ

೧೯೮೨ --ಮಾನಸ ಸರೋವರ

೧೯೮೩ --ಧರಣಿ ಮಂಡಲ ಮಧ್ಯದೊಳಗೆ

೧೯೮೪ --ಅಮೃತ ಘಳಿಗೆ

೧೯೮೪ --ಋಣಮುಕ್ತಳು

೧೯೮೪-- ಮಸಣದ ಹೂವು

೨೦೦೬ --ಸಾವಿರ ಮೆಟ್ಟಿಲು


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು:
_______________________________

೧೯೬೯-- ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಸ್ಕ್ರೀನ್ ಪ್ಲೇ- ಗೆಜ್ಜೆ ಪೂಜೆ
೧೯೬೯ --ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಫೀಚರ್ ಫಿಲ್ಮ್-ಗೆಜ್ಜೆ ಪೂಜೆ
೧೯೭೨ -- ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಫೀಚರ್ ಫಿಲ್ಮ್ ಇನ್ ಕನ್ನಡ-ಶರಪಂಜರ

ಫಿಲ್ಮ್‍ಫೇರ್ ಅವಾರ್ಡ್ಸ್ ಸೌಥ್:
_____________________________

೧೯೭೩-- ಅತ್ಯುತ್ತಮ ಕನ್ನಡ ನಿರ್ದೇಶಕರು -ಎಡಕಲ್ಲು ಗುಡ್ಡದಮೇಲೆ
೧೯೭೯--ಅತ್ಯುತ್ತಮ ಕನ್ನಡ ನಿರ್ದೇಶಕರು-ಧರ್ಮಸೆರೆ
೧೯೮೧--ಅತ್ಯುತ್ತಮ ಕನ್ನಡ ನಿರ್ದೇಶಕರು-ರಂಗನಾಯಕಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:

೧೯೬೭-೬೮ -- ಎರಡನೇ ಅತ್ಯುತ್ತಮ ಚಲನಚಿತ್ರ- ಬೆಳ್ಳಿಮೋಡ
೧೯೬೯-೭೦ -- ಮೊದಲನೇ ಅತ್ಯುತ್ತಮ ಚಲನಚಿತ್ರ - ಗೆಜ್ಜೆಪೂಜೆ
೧೯೭೦-೭೧ --ಮೊದಲನೇ ಅತ್ಯುತ್ತಮ ಚಲನಚಿತ್ರ- ಶರಪಂಜರ
೧೯೭೨-೭೩ -- ಎರಡನೇ ಅತ್ಯುತ್ತಮ ಚಲನಚಿತ್ರ -ನಾಗರಹಾವು
೧೯೭೫-೭೬ -- ನಾಲ್ಕನೇ ಅತ್ಯುತ್ತಮ ಚಲನಚಿತ್ರ-ಕಥಾಸಂಗಮ

ಇವಿಷ್ಟು ತನ್ನ ೪೧ ವಯಸ್ಸಿನ ಒಳಗೇ ಪುಟ್ಟಣ್ಣ ಪಡೆದ ಪ್ರಶಸ್ತಿಗಳು ಎಂದಮೇಲೆ ಪುಟ್ಟಣ್ಣ ಬದುಕಿದ್ದರೆ ಜಗತ್ತಿನ ಒಬ್ಬ ಅತ್ಯುತ್ತಮ ನಿರ್ದೇಶಕ ಎಂದು ಗಿನ್ನೆಸ್ ದಾಖಲೆಯನ್ನೇ ಸೃಷ್ಟಿಮಾಡುತ್ತಿದರೋ ಏನೋ!

ಆರತಿ ಹೊರಗೆ ಅಡಿಯಿಟ್ಟಮೇಲೆ ಆದ ಆಘಾತದಿಂದ ಪುಟ್ಟಣ್ಣ ಬಹುತೇಕ ಹೊರಬರಲೇ ಇಲ್ಲ! ನಿಧಾನವಾಗಿ ಆ ನಂತರದಲ್ಲಿ ಮಾನಸ ಸರೋವರ, ಮಸಣದ ಹೂವು, ಅಮೃತಘಳಿಗೆ ಮೊದಲಾದ ಸಿನಿಮಾ ಮಾಡಿದರು. ಆ ವೇಳೆಗೆ ಪದ್ಮಾವಾಸಂತಿ ನಾಯಕಿಯಾಗಿ ಅವರ ಸಿನಿಮಾಗಳಲ್ಲಿ ಅಭಿನಯಿಸಿದರೂ ಪುಟ್ಟಣ್ಣನ ಎದೆಯೊಳಗೆ ಆಕೆ ಸೇರಲಿಲ್ಲ! ಮಾನಸ ಸರೋವರದ ’ನೀನೇ ಸಾಕಿದಾ ಗಿಣಿ’ ಎಂಬ ಹಾಡು ಹೆಚ್ಚುಪಕ್ಷ ಆರತಿಯನ್ನೇ ಗುರಿಮಾಡಿ ಅಳವಡಿಸಿದ ಹಾಗೇ ಭಾಸವಾಗುತ್ತಿತ್ತು. [ಜೀವಿತದಲ್ಲಿರುವಾಗಲೇ ಆರಂಭಿಸಿದ್ದ ’ಸಾವಿರ ಮೆಟ್ಟಿಲು’ ಎಂಬ ಸಿನಿಮಾವೊಂದು ಹಾಗೇ ನಿಂತಿದ್ದು ಪುಟ್ಟಣ್ಣನ ಮರಣಾನಂತರ ೨೦೦೬ ರಲ್ಲಿ ಪೂರ್ಣಗೊಂಡಿತು.]ಸಾವರಿಸಿಕೊಂಡು ಹೂತುಹೋದ ರಥದ ಗಾಲಿಯನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದ ಕರ್ಣನಹಾಗೇ ಜೀವನದ ಕಹಿಘಟನೆಗಳನ್ನು ಮರೆಯಲು ಯತ್ನಿಸುತ್ತಿರುವಾಗಲೇ ಸಾವು ಪುಟ್ಟಣ್ಣನವರನ್ನು ಬರಸೆಳೆದುಬಿಟ್ಟಿತು. ಜೂನ್ ೫, ೧೯೮೫ ರಂದು ತನ್ನ ೫೧ನೇ ವಯಸ್ಸಿನಲ್ಲೇ ಪುಟ್ಟಣ್ಣ ಗತಿಸಿಹೋದರು; ಕನ್ನಡ ಚಿತ್ರರಂಗದಲ್ಲಿ ಮತ್ತೆ ಅಂತಹ ದೃಶ್ಯಕಾವ್ಯಗಳನ್ನು ಬರೆಯಬಲ್ಲವರು ಇಲ್ಲವಾದರು.

ಈಗೀಗ ಕನ್ನಡ ಸಿನಿಮಾಗಳನ್ನು ನೋಡಲೇ ಮನಸ್ಸಾಗುತ್ತಿಲ್ಲ. ನೋಡಿದರೂ ಪುಟ್ಟಣ್ಣನ ಛಾಪಿನ ನಿರ್ದೇಶಕರು ಯಾರೂ ಕಾಣಸಿಗುತ್ತಿಲ್ಲ. ಒಬ್ಬರಂತೇ ಒಬ್ಬರಿರುವುದಿಲ್ಲ ಎಂಬುದೇನೋ ಸರಿ ಆದರೆ ಅವರ ಹಾದಿಯಲ್ಲೇ ಸಾಗಿ ಅನೇಕ ಉತ್ತಮ ಕಥೆಗಳನ್ನು ಚಲನಚಿತ್ರಗಳಿಗೆ ಅಳವಡಿಸಬಹುದಿತ್ತು; ಅದರ ಬದಲು ಚಿತ್ರಾನ್ನದಂತಹ ಚಿತ್ರಗಳನ್ನೂ ಮಚ್ಚು-ಲಾಂಗುಗಳ ಸಂಸ್ಕೃತಿಗಳನ್ನೂ ಮೆರೆಯಿಸುತ್ತಿದ್ದಾರೆ. ಕೆಲವು ನಿರ್ದೇಶಕರು ಕೈಲಾಗದು ಎಂದು ಕೈಬಿಟ್ಟಿದ್ದಾರೆ; ನಿವೃತ್ತಿ ಘೋಷಿಸಿಕೊಂಡಿದ್ದಾರೆ. ವೈಯ್ಯಕ್ತಿಕವಾಗಿ ಪುಟ್ಟಣ್ಣನವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಕಿಯರನ್ನು ತಮ್ಮೆದೆಯೊಳಗೆ ಬಿಟ್ಟುಕೊಂಡೂ ಹೊರಗೆ ಕಾಣಿಸದೇ ಇರುವ ’ಸಾಚಾ’ ನಿರ್ದೇಶಕರುಗಳೂ ಇದ್ದಾರೆ. ಹೇಳಿದೆನಲ್ಲಾ ಸೆಲೆಬ್ರಿಟಿ ಮನುಷ್ಯನ ತೆವಲುಗಳೇ ಹಾಗೆ! ಆದರೆ ಪುಟ್ಟಣ್ಣನ ಹಾಗೇ ನೋವಿನಲ್ಲೂ ಮೈಕೊಡವಿಕೊಂಡು ಏಳಬಲ್ಲ ನಿರ್ದೇಶಕರಿಲ್ಲ. ಪುಟ್ಟಣ್ಣನವರ ನೆನಪಾದಾಗ ತೆರೆಯಿಂದ ಮರೆಗೆ ಸರಿದು ಯಾವುದೇ ಮಾಧ್ಯಮಗಳಲ್ಲೂ ಮುಖತೋರಿಸದೇ ತಮ್ಮಷ್ಟಕ್ಕೇ ತಾವಿರುವ ಆರತಿಯವರೂ ನೆನಪಾಗುತ್ತಾರೆ. ಕನ್ನಡ ಸಿನಿಮಾರಂಗದ ಕಾಲಘಟ್ಟವೊಂದರಲ್ಲಿ ಕಂಡ ಈ ವ್ಯಕ್ತಿಗಳು ಹೊಸಚಿತ್ರವೊಂದರ ಪಾತ್ರಗಳಂತೇ ಮನದಲ್ಲಿ ಉಳಿದುಬಿಡುತ್ತಾರೆ. ಉತ್ತಮ ಹಳೆಯ ಚಿತ್ರಗಳ ಯಾದಿಯಲ್ಲಿ ಪುಟ್ಟಣ್ಣ ಕಾಣುತ್ತಾರೆ-ಕಾಡುತ್ತಾರೆ, ನೆನಪು ಗಾಢವಾಗಿ ಮೈಮನವನ್ನೆಲ್ಲಾ ಪುಟ್ಟಣ್ಣ ಆವರಿಸಿಕೊಂಡುಬಿಡುತ್ತಾರೆ.

Thursday, April 12, 2012

ಮದ್ಯ, ಮಾಂಸ, ಮಾನಿನಿಯರ ಮಧ್ಯೆ ಮಿಲಿಯನೇರ್ ಮಲ್ಯ ಬರೆದ ಮತ್ತಿಳಿಸುವ ಕಥೆ!

ಚಿತ್ರಋಣ: ಅಂತರ್ಜಾಲ
ಮದ್ಯ, ಮಾಂಸ, ಮಾನಿನಿಯರ ಮಧ್ಯೆ ಮಿಲಿಯನೇರ್ ಮಲ್ಯ ಬರೆದ ಮತ್ತಿಳಿಸುವ ಕಥೆ!

ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಯನ್ನು ಯಾರು ಯಾವ ಕಾಲದಲ್ಲಿ ಮಾಡಿದರೋ ತಿಳಿಯದಲ್ಲ. ಭರತಭೂಮಿ ಎಂಬುದು ಆದರ್ಶ ಮಾನವ ಮೌಲ್ಯಗಳ ನೆಲೆವೀಡು. ಇಂಥಾ ನೆಲದಲ್ಲೇ ಯುಗದ/ಕಾಲದ ಪ್ರಭಾವದಿಂದ ಮಾನವೀಯ ಮೌಲ್ಯಗಳಿಗೇ ಮೌಲ್ಯವಿಲ್ಲದಂತಾಗಿದೆ. ಶ್ರೀರಾಮ ಜನಿಸಿ, ಆಳಿ, ಆದರ್ಶ ಯಾವುದೆಂದು ತೋರಿಸಿಕೊಟ್ಟ ಈ ದೇಶದಲ್ಲಿ, ಪ್ರಾಜ್ಞರು ಹೇಳುತ್ತಲೇ ಬಂದರು: "ಮದ್ಯ, ಮಾಂಸ ಮತ್ತು ಮಾನಿನಿ" ಈ ಮೂರನ್ನು ದೂರವಿಡಿ ಎಂಬುದಾಗಿ. ಇಲ್ಲಿ ಮಾನಿನಿ ಎಂದರೆ ಕೇವಲ ಬೆಲೆವೆಣ್ಣುಗಳು ಎಂದರ್ಥ. ಮದ್ಯಕುಡಿದ ಯಾವ ಪ್ರಾಣಿಯೂ ತನ್ನ ಇತಿಮಿತಿಯನ್ನು ಮೀರಿ ವಿಚಿತ್ರಗತಿಯಲ್ಲಿ ವರ್ತಿಸುತ್ತದೆ, ಯಾಕೆಂದರೆ ಮದ್ಯದ ಮತ್ತು ನೆತ್ತಿಗೇರಿದಾಗ ಎಲ್ಲಿ ಏನಾಗುತ್ತಿದೆ ಎಂದಾಗಲೀ, ತಾನು ಏನು ಮಾಡುತ್ತಿದ್ದೇನೆ ಎಂದಾಗಲೀ ಅರ್ಥವಾಗದಲ್ಲ. ಮದ್ಯ, ಮಾಂಸ ಮತ್ತು ಮಾನಿನಿ ಈ ಮೂರೂ ಒಮ್ಮೆ ನಮ್ಮನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡರೆ ಅವುಗಳಿಂದ ಬಿಡುಗಡೆ ಬಹುತೇಕ ಸಾಧ್ಯವಿಲ್ಲ. ಅಂಥದ್ದರಲ್ಲಿ ಕಾಲಗತಿಯಲ್ಲಿ ಮದ್ಯ ತಯಾರಿಕೆಯನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡು ಕೆಲವರು ಬೆಳೆದರು. ಅದೆಷ್ಟೋ ಕುಟುಂಬಗಳು ಅವರ ತಯಾರಿಕೆಯ ಮದ್ಯವನ್ನು ನಿತ್ಯವೂ ಕುಡಿಯುತ್ತಾ ಬೀದಿ ಪಾಲಾದವು!

ದುಶ್ಯಂತ-ಶಕುಂತಲೆಯರ ಪ್ರಿಯ ಪುತ್ರ-ಚಕ್ರವರ್ತಿ ಭರತನ ಹೆಸರಿನಿಂದ ಭಾರತವೆನಿಸಿದ ಈ ಪುಣ್ಯನೆಲದಲ್ಲಿ, ಸಗರಪುತ್ರ ಭಗೀರಥ ತನ್ನ ಅಖಂಡ ತಪಸ್ಸಿನಿಂದ ಗಂಗೆಯನ್ನು ಧರೆಗೆ ಕರೆತಂದ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ನಿಜ ಘಟನೆಗಳನ್ನೇ ಕಥೆಯನ್ನಾಗಿಸಿದ ಇತಿಹಾಸವನ್ನು, ವಿಜ್ಞಾನವೆಂಬ ಕನ್ನಡಕ ಹಾಕಿಕೊಂಡು ಹಳದಿ ಬಣ್ಣದಲ್ಲೇ ಎಲ್ಲವನ್ನೂ ನೋಡುತ್ತಾ ನಾವು ತೆರಳುವಾಗ, ಜೀವ ಇರುವ ಜೀವಿಯೂ ನಮಗೆ ಸತ್ತ ಪ್ರಾಣಿಯ ಹಾಗೇ ಕಾಣಿಸುವುದು ಸಹಜ; ಯಾಕೆಂದರೆ ಅದು ನಮ್ಮ ಅಧಿಕಪ್ರಸಂಗದ ಪರಾಕಾಷ್ಠೆ. ಒಬ್ಬ ಓದುಗ ಮಿತ್ರರು ಕಳೆದವಾರದ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ: ವಿಜ್ಞಾನದಲ್ಲಿ ಆತ್ಮ ಎಂದರೆ ಜೀವ, ಜೀವ ಹುಟ್ಟಿತು ಮತ್ತು ಜೀವ ಸತ್ತಿತು ಎಂದರ್ಥವಂತೆ! ಗಣಕಯಂತ್ರದಲ್ಲಿ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಗಳಿರುವಂತೇ ನಮ್ಮ ದೇಹ ಒಂದು ಹಾರ್ಡ್‍ವೇರ್ ಮತ್ತು ನಮ್ಮ ಆತ್ಮವೆಂಬುದು ಸಾಫ್ಟ್‍ವೇರ್ ನಂತೇ ಎಂದರೆ ತಪ್ಪಲ್ಲ. ನಮ್ಮೊಳಗೇ ನೆಲೆಸಿ ನಮ್ಮಿಂದ ಎಲ್ಲಾ ಕೆಲಸಗಳನ್ನೂ ನಡೆಸುವ ದಿವ್ಯ ಚೈತನ್ಯದ ಅನನ್ಯ ಅನುಭವ ಬಹುತೇಕರಿಗೆ ಅನಾವರಣಗೊಳ್ಳುವುದೇ ಇಲ್ಲ! ಯಾಕೆಂದರೆ ಅವರ ಲೆಕ್ಕದಲ್ಲಿ ಆತ್ಮ ಎಂಬುದೊಂದು ಜೀವ ಅಷ್ಟೇ. ಆತ್ಮದ ಒಂದು ರೂಪ ಜೀವಾತ್ಮ ಹೌದು, ಆದರೆ ಅದೇ ಕೇವಲ ಜೀವವಲ್ಲ ಬದಲಾಗಿ ಜೀವಾತ್ಮ. ಆ ದಿವ್ಯ ಚೈತನ್ಯವನ್ನು ನಾವು ಅರ್ಥಮಾಡಿಕೊಳ್ಳಲು ಬಹಳ ಪರಿಶ್ರಮ ಪಡಬೇಕಾಗುತ್ತದೆ. ಸಾಮಾನ್ಯ ದೃಷ್ಟಿಗೆ ಕಾಣದ ತ್ರೀಡೀ ಸಿನಿಮಾಗಳಲ್ಲಿ ವಿಶಿಷ್ಟ ಕನ್ನಡಕಗಳಿಂದ ತ್ರೀಡೀ ಅನುಭವ ಪಡೆಯುವುದು ಸಾಬೀತಾಗಿದೆಯಲ್ಲವೇ? ಅದನ್ನೇ ಸ್ವಲ್ಪ ಭಗವದ್ಗೀತೆಗೆ ಹೋಲಿಸಿದಾಗ ಅಲ್ಲಿ ಅರ್ಜುನನಿಗೆ ಶ್ರೀಕೃಷ್ಣ ದಿವ್ಯಚಕ್ಷುವನ್ನು ಕರುಣಿಸುವುದು ತಿಳಿದುಬರುತ್ತದೆ. ಪ್ರಾಯಶಃ ನಮ್ಮ ಮಾನವ ಶಕ್ತಿಗೆ ಸಹಜಗತಿಯಲ್ಲಿ ಅಂತಹ ದಿವ್ಯ ಚಕ್ಷುಗಳನ್ನು ಪಡೆಯುವ ಯೋಗ್ಯತೆ ಇಲ್ಲವಾಗಿದೆ; ಎಂದಮಾತ್ರಕ್ಕೆ ಕೃಷ್ಣ ದಿವ್ಯಚಕ್ಷುವನ್ನು ನೀಡಿದ್ದು ಬರೇ ಕಥೆ ಎಂಬ ವಾದ ಅಸಮರ್ಪಕವಾಗುತ್ತದೆ. ನವ ನಾಗರಿಕತೆಯೆಂಬ ಧಾವಂತದ ಬದುಕಿನ ಚಣಗಳಲ್ಲಿ ನಮ್ಮವರು ನಮಗೆ ಹೇಳಿಕೊಟ್ಟ ಮೌಲ್ಯಗಳನ್ನೇ ನಾವು ಪ್ರಶ್ನಿಸುವಂತಾದೆವು.

ಹೀಗೊಂದು ಉದಾಹರಣೆ ತೆಗೆದುಕೊಳ್ಳೋಣ: ಹುಟ್ಟಿದಾಗ ಶಿಶುವಿಗೆ ಅಮ್ಮ-ಅಪ್ಪನ ಸ್ಪಷ್ಟ ಗುರುತು ಸಿಗುವುದಿಲ್ಲ. ಅದಕ್ಕೆ ಅಳುವುದೊಂದೇ ಗೊತ್ತು! ಹಸಿವಾದರೆ ಅಥವಾ ಏನೋ ತೊಂದರೆಯಾದರೆ ಅಳುವುದು. ಅಳುವಾಗ ಯಾರೋ ಎತ್ತಿದರೆ ಸ್ವಲ್ಪ ಸುಮ್ಮನಾಗುವ ಶಿಶು ಅಮ್ಮನ ಎದೆಹಾಲು ಕುಡಿದು ಹಸಿವು ನೀಗಿದಾಗ ಉಲ್ಲಾಸದಿಂದಿರುತ್ತದೆ. ನಿತ್ಯವೂ ಕೆಲವುಸರ್ತಿ ಹಾಲು ಕುಡಿಯುತ್ತಾ ಕುಡಿಯುತ್ತಾ ತನ್ನನ್ನು ಆರೈಕೆ ಮಾಡುತ್ತಿರುವ ವ್ಯಕ್ತಿಯೊಡನೆ ಆತ್ಮೀಯ ಬಾಂಧವ್ಯವನ್ನು ಶಿಶು ಪಡೆದುಕೊಳ್ಳುತ್ತದೆ! ಇದು ಹೊರನೋಟಕ್ಕೆ ಕಾಣುವ ದೃಶ್ಯ. ಅಪ್ಪ-ಅಮ್ಮನಿಂದ ಹೊರಡುವ ಆತ್ಮೀಯ ತರಂಗಗಳಿಂದ ಮಗು ಅಪ್ಪ-ಅಮ್ಮನನ್ನು ನಿಧಾನವಾಗಿ ಗುರುತಿಸುತ್ತದೆ ಎಂಬುದು ಭಾರತೀಯ ಸಂಸ್ಕೃತಿಯ ಮೂಲದ ಸಂದೇಶ. ಮಗು ಬೆಳೆದು ದೊಡ್ಡದಾದ ಮೇಲೆ, ಮನೆಯಲ್ಲಿ ಹಿರಿಯರು ಅಥವಾ ಇತರ ಸಂಬಂಧಿಕರು "ನೋಡು ನಿನ್ನ ಅಪ್ಪ-ಅಮ್ಮ" ಎಂದು ಹೇಳಿದರೆ, ವೈಜ್ಞಾನಿಕವಾಗಿ ತರ್ಕಿಸುತ್ತಾ ಅಪ್ಪ-ಅಮ್ಮನನ್ನೇ ಅಲ್ಲಗಳೆಯಬಹುದು. [ಇತ್ತೀಚೆಗೆ ಬಂದ ಡಿ.ಎನ್.ಏ ಪರೀಕ್ಷೆಯಿಂದ ಮಾತ್ರ ಮಗುವಿನ ಅಪ್ಪ-ಅಮ್ಮನನ್ನು ಗುರುತಿಸಲು ಮಗುವಿಗೆ ಸಾಧ್ಯವಿದೆ.] ಹೇಗೆ ಆಳವಾದ ಅಧ್ಯಯನದಿಂದ ಡಿ.ಎನ್.ಏ ಎಂಬ ಪರೀಕ್ಷಾ ಪದ್ಧತಿ ಲಭ್ಯವಾಯ್ತೋ ಅದೇ ತೆರನಾಗಿ ನಾವು ನಮ್ಮದಾದ ಭಾರತೀಯ ಮೌಲ್ಯಗಳ ಪರೀಕ್ಷೆಗೆ ಆಳವಾದ ಅಧ್ಯಯನ ನಡೆಸಿಕೊಳ್ಳುವುದು ಒಳಿತು! ಇಲ್ಲದಿದ್ದರೆ ರಾಮ-ಕೃಷ್ಣ-ಭಗೀರಥ ಇವೆಲ್ಲಾ ಕೇವಲ ಕಪೋಲಕಲ್ಪಿತ ಕಥೆಗಳ ಪಾತ್ರಗಳಾಗಿ ಕಾಣುತ್ತವೆ.

ಇಡೀ ಈ ಭೂಮಿಯಲ್ಲಿ ಘಟಿಸುವ ನೈಸರ್ಗಿಕ ವಿಕೋಪಗಳನ್ನು ಯಾವುದೇ ವಿಜ್ಞಾನವೂ ಇದುವರೆಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ; ಇದಕ್ಕೆ ನಿನ್ನೆ ಘಟಿಸಿದ ಭೂಕಂಪವೂ ಸಾಕ್ಷಿ. ಸುನಾಮಿ ಬಂದರೆ ಸಾಗರ ತೀರದಿಂದ ಎತ್ತರಕ್ಕೆ ಓಡಬಹುದೇ ಹೊರತು ಸುನಾಮಿ ಬಾರದಂತೇ ತಡೆಯಲು ನಮ್ಮಿಂದ ಸದ್ಯಕ್ಕಂತೂ ಸಾಧ್ಯವಿಲ್ಲ! ಸೃಷ್ಟಿ-ಸ್ಥಿತಿ-ವಿನಾಶ ಈ ಮೂರನ್ನೂ ನಿಸರ್ಗ ತನ್ನ ಕೈಯ್ಯಲ್ಲೇ ಇಟ್ಟುಕೊಂಡಿದೆ; ಕಾಣದ ಆ ನೈಸರ್ಗಿಕ ಜಗನ್ನಿಯಾಮಕ ಶಕ್ತಿಯೇ ದೇವರು ಎಂಬುದಾಗಿ ನಮ್ಮಲ್ಲಿನ ಪ್ರಾಜ್ಞರು ವೇದವಿಜ್ಞಾನದಿಂದ ತಿಳಿಸಿಕೊಟ್ಟಿದ್ದಾರೆ.

ಮರಳಿ ಮುಖ್ಯ ವಿಷಯಕ್ಕೆ ಬರೋಣ: ಹಣಗಳಿಕೆಗೆ ಹಲವಾರು ಮಾರ್ಗಗಳಿವೆ. ಈ ಜಗತ್ತಿನಲ್ಲಿ ಇಂದಿನ ದಿನಮಾನದಲ್ಲಿ ಅಡ್ಡದಾರಿಯಲ್ಲಿ ಅಥವಾ ಕೆಟ್ಟಮಾರ್ಗಗಳಲ್ಲಿ ಗಳಿಕೆಯಾಗುವಷ್ಟು ಒಳ್ಳೆಯ ಮಾರ್ಗಗಳಿಂದ ಕಷ್ಟಸಾಧ್ಯ. ಒಳ್ಳೆಯ ಮಾರ್ಗಗಳಲ್ಲಿ ಆದಾಯ ಬರಲಿಕ್ಕೆ ಅಡೆತಡೆಗಳು ಬಹಳ, ಅದೇ ಅಡ್ಡಮಾರ್ಗಗಳಿಂದ ಬರಬಹುದಾದ ಆದಾಯ ಹೇರಳ! ಹಣವನ್ನೇ ಎಲ್ಲದಕ್ಕೂ ವ್ಯವಹಾರ ಮಾಧ್ಯಮವನ್ನಾಗಿ ಬಳಸಿಕೊಂಡಮೇಲೆ ಹಣಗಳಿಕೆಯ ಆಸೆ ಅತಿಯಾಗಿಹೋಯ್ತು. ಹಣವಿಲ್ಲದಿದ್ದರೆ ಏನೂ ನಡೆಯದೆಂಬ ಹೇಳಿಕೆ ಪ್ರಚುರಗೊಂಡು ಹಣಕ್ಕಾಗಿ ಹೆಣವೂ ಬಾಯ್ದೆರೆಯುವ ಸನ್ನಿವೇಶಗಳು ಸೃಷ್ಟಿಯಾದವು. ಮುಂದುವರಿದ ಜಗತ್ತಿನಲ್ಲಿ, ಆಧುನಿಕತೆಯ ಗಳಿಕೆಯ ಮಾರ್ಗವಾಗಿ ಮಲ್ಯ ಕುಟುಂಬ ಹೆಂಡದ ಉದ್ಯಮವನ್ನು ಆಯ್ದುಕೊಂಡಿತು. ಯಾವಾಗ ಹೆಂಡಕ್ಕೆ ರಾಜಮುದ್ರೆ ಬಿದ್ದು ಅದು ಅಧಿಕೃತವಾಗಿ ಮಾರಾಟಮಾಡಲ್ಪಟ್ಟಿತೋ ಆಗ ಅದರ ಸ್ಥಾನ ಬಹಳ ಮೇಲಕ್ಕ್ರ್‍ಏರಿತು ಮಾತ್ರವಲ್ಲ ಹೆಂಡ ಇಳಿಸುವ ಮಂದಿ ದೊರೆಗಳಾಗಿ ಬೆಳೆದರು! ಬಡಕಾರ್ಮಿಕ, ಕೆಳಮಧ್ಯಮ, ಮಧ್ಯಮಧ್ಯಮ ವರ್ಗಗಳ, ಗೃಹಿಣಿಯರ ಅಳಲು ಹೆಂಡದ ದೊರೆಗಳ ಸುಪ್ಪತ್ತಿಗೆಗೆ ಕೇಳಿಸಲೇ ಇಲ್ಲ! ಆದಾಯ ಸಾಲದೇ ಮಗಳ ಮದುವೆ ಮಾಡಲಾಗದ್ದಕ್ಕೋ, ಮನೆಕಟ್ಟಲಾಗದ್ದಕ್ಕೋ, ಪಡೆದಸಾಲ ಮರಳಿಸಲಾಗದ್ದಕ್ಕೋ ಆಯಾಸವಾಗಿ ತಲೆಯಮೇಲೆ ಕೈಹೊತ್ತ ಜನ ನೆಮ್ಮದಿಯನ್ನರಸುತ್ತಾ ನಡೆದಾಗ, ಹೆಂಡದ ದೊರೆಗಳು "ಕುಡಿದು ನೆಮ್ಮದಿ ಗಳಿಸು" ಎಂದು ಕೈಬೀಸಿ ಕರೆದರು. ಕುಡಿದ ಕೆಲಘಳಿಗೆ ಲೋಕವನ್ನೇ ಮರೆಯುವ ಹಂಬಲದಿಂದ ಆರಂಭಿಸಿದ ಕುಡಿತ ಕ್ರಮೇಣ ಇಡೀ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನೇ ಬದಲುಮಾಡಿತು; ಬೀದಿಪಾಲುಮಾಡಿತು. ನಿಯಂತ್ರಣವಿಲ್ಲದೇ ಬೆಳೆದ ಹೆಂಡದ ದೊರೆಗಳಿಗೆ ಸಾಮಾಜಿಕ ಕಳಕಳಿ ಎಂಬುದು ಹಾಸ್ಯಾಸ್ಪದ ವಿಷಯವಾಗಿ ಕಂಡು ಫ್ರೆಂಚ್ ಗಡ್ಡದ ನಡುವಿನಲ್ಲೇ ಅವರು ಮುಸಿಮುಸಿ ನಕ್ಕರು.

ಕುಡಿಯುವವರಿಗೆ ಮಾಂಸವೂ ಜಾಸ್ತಿ ಬೇಕು. ಕುಡಿತವೇ ಹಾಗೆ ಎನ್ನುವವರೂ ಇದ್ದಾರೆ. ಗುಂಡು-ತುಂಡು ಇಲ್ಲದಿದ್ದರೆ ಆತ ಗಂಡೇ ಅಲ್ಲ ಎಂದುಕೊಳ್ಳುವ ಅದೆಷ್ಟೋ ಮಂದಿ ಅವುಗಳಾಚೆಗಿನ ಲೋಕದ ವ್ಯಾಪ್ತಿಯನ್ನು ಕಾಣುವುದೇ ಇಲ್ಲ. ಒಳಗೆ ಹೋದ ಗುಂಡು ಹೊರಗಿನ ಗುಂಡನ್ನೂ ಜೊತೆಗೆ ಮಾಂಸವನ್ನೂ ಕರೆವುದಂತೆ. ನೆಶೆಯೇರಿ ಮಗ್ಗುಲಾಗುವಾಗ [ಅದು ತಿಪ್ಪೆಯಲ್ಲೋ ರಸ್ತೆಯಲ್ಲೋ ಚರಂಡಿಯಲ್ಲೋ ಇನ್ನೆಲ್ಲೋ: ಅದಕ್ಕೆ ಇಂಥದ್ದೇ ಜಾಗವೆಂಬುದಿಲ್ಲ] ಮಾನಿನಿಯ ನೆನಪಾಗುವುದಂತೆ! ಸ್ವಲ್ಪ ಮತ್ತಿಳಿದು ಎದ್ದವರು ಸೀದಾ ಬೆಲೆವೆಣ್ಣುಗಳನ್ನರಸಿ ಹೋಗುವ ಸಂದರ್ಭವೂ ಇದೆಯೆಂದು ಕೇಳಿದ್ದೇನೆ. ನಮ್ಮ ಜೀವನದಲ್ಲಿ ಅದೆಷ್ಟೋ ಹಕ್ಕುಗಳಿಗೆ ’ಜನ್ಮಸಿದ್ಧ’ ಎಂದು ಬೋರ್ಡು ಹಾಕುವ ನಾವು, ಭಕ್ಷಣೆಗಾಗಿ ಜೀವಿಗಳ ಹತ್ಯೆಮಾಡುವುದು ಅವುಗಳ ಜನ್ಮಸಿದ್ಧ ಬದುಕುವ ಹಕ್ಕನ್ನು ಕಸಿದಂತೇ ಆಗುವುದಿಲ್ಲವೇ? ಇನ್ನೊಂದನ್ನು ಹೇಳಬೇಕು: ಅಲ್ಲಿಲ್ಲಿ ಜಾತ್ರೆ, ಮಾರಿದೇವಸ್ಥಾನಗಳಲ್ಲಿ ಬಲಿಹಾಕುವ ಪ್ರಾಣಿಗಳ ಬಗ್ಗೆ ಮಾತ್ರ ದಯೆತೋರುವ ಔದಾರ್ಯ ಮೆರೆಯುವ ನಮ್ಮ ಮಾಧ್ಯಮ ಬಂಧುಗಳಲ್ಲಿ ಬಹುತೇಕರಿಗೆ ನಿತ್ಯ ಹಗಲಿರುಳೂ ಊಟಕ್ಕೆ ಚಿಕನ್, ಮಟನ್ ಗಳೇ ಬೇಕು! ತಿನ್ನುತ್ತಿರುವ ಅಂತಹ ಆಹಾರಗಳ ಹಿಂದೆ ನಡೆಯುವ ಕ್ರೌರ್ಯಗಳನ್ನು ಅವರು ಮರೆಯುತ್ತಾರಲ್ಲಾ ಇದಕ್ಕೇನೆನ್ನಬೇಕು? ಭಾನುವಾರ ಬಂತೆಂದರೆ ನಗರಗಳಲ್ಲಿ ಅಸಂಖ್ಯ ಕುರಿ-ಕೋಳಿಗಳ ಹನನವಾಗುತ್ತದೆ. ಸರ್ವೇಸಾಮಾನ್ಯವಾಗಿರುವ ಈ ಕೆಲಸಕ್ಕೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ! ಯಾಕೆಂದರೆ ಅಧಿಕ ಮಸಾಲೆಯನ್ನು ಹಾಕಿ ತಯಾರಿಸಿದ ತುಂಡಿನ ರುಚಿ ಈ ಎಲ್ಲವನ್ನೂ ಮರೆಸಿಬಿಡುತ್ತದೇನೋ.

ಜೀವಿಗಳ ಹನನವಾಗುವಾಗ ಅವುಗಳ ಸಾವಿನ ಆ ಕ್ಷಣದಲ್ಲಿ ವಿಶೇಷ ರಾಸಾಯನಿಕವೊಂದು ಬಿಡುಗಡೆಯಾಗಿ ಅವುಗಳ ದೇಹವ್ಯಾಪಿ ಹಬ್ಬುವುದಂತೆ. ಇದು ತಿನ್ನುವ ಜನರಿಗೆ ಲೋ ಪಾಯ್ಸನ್ ಎನ್ನುತ್ತಾರೆ ಕೆಲವು ತಜ್ಞರು. ಮಾಂಸಾಹಾರ ತಯಾರಾದ ನಂತರ ರಕ್ಷಿಸುವಾಗ ಅಥವಾ ಹಸಿಮಾಂಸವನ್ನು ಕಾಪಿಡುವಾಗ ಪರಿಸರದಲ್ಲಿ ಮೀಥೇನ್ ಅನಿಲ ಬಿಡುಗಡೆಯಾಗುವುದಂತೆ. ಅದು ಪರಿಸರದ ಉಷ್ಣಾಂಶ ಹೆಚ್ಚಿಸಲು ಕಾರಣವಾಗುತ್ತದೆ ಎಂಬುದನ್ನು ಕೆಲವು ಪರಿಸರವಾದಿಗಳು ತಿಳಿಸುತ್ತಾರೆ. ಈರುಳ್ಳಿ-ಬೆಳ್ಳುಳ್ಳಿಗಳ ವಾಸನೆ ನಮ್ಮನ್ನು ಎಲ್ಲಿದ್ದರೂ ಸೆಳೆಯುತ್ತದಲ್ಲವೇ? ಆಹಾರದಲ್ಲಿ ಅವುಗಳ ಉಪಯೋಗದಿಂದ ಆಹಾರದ ಅಭಿರುಚಿ ಮತ್ತು ವಿವಿಧ ರೀತಿಯ ಆಹಾರಗಳ ವ್ಯಾಮೋಹ ಹೆಚ್ಚುತ್ತದೆ; ಜಿಹ್ವಾಚಾಪಲ್ಯ ಅತಿಯಾಗುತ್ತದೆ. ತುಂಡು ತಿಂದು ಬೆಳೆದ ವ್ಯಕ್ತಿ ತುಂಡಿಲ್ಲದೇ ಬಹುಕಾಲ ಹಾಗೇ ಕಳೆಯುವುದು ಕಷ್ಟಸಾಧ್ಯ. ಲೌಕಿಕದೆಡೆಗೆ ಅಧಿಕವಾಗಿ ಸೆಳೆಯುವ ಈ ಆಹಾರಕ್ರಮದಿಂದ, ಕಣ್ಣಿಗೆ ಕಾಣುವ ಜಗದಲ್ಲಿ ನಾವು ಮತ್ತಷ್ಟು ಹೆಚ್ಚಿನ ಮಟ್ಟದ ವ್ಯಾಮೋಹವನ್ನೂ ಬಾಂಧವ್ಯವನ್ನೂ ಹೊಂದಿ ಇದಕ್ಕೂ ಮೀರಿದ ಚಿಂತನೆಗೆ ನಾವು ತೊಡಗಿಕೊಳ್ಳಲು ಸಾಧ್ಯವಾಗುವುದೇ ಇಲ್ಲ! ಅದಕ್ಕಾಗಿ ಮಾಂಸಾಹಾರ ಮಾನವನಿಗೆ ಒಳಿತಲ್ಲ ಎಂಬ ವಾದವಿದೆ. "ನಮ್ಮ ತಿನ್ನುವ ಆಹಾರಕ್ಕೆ ಕಲ್ಲುಹಾಕುವವರು ನೀವು ಯಾರು? ನಾವು ನಮಗೆ ಬೇಕಾದ್ದನ್ನು ತಿನ್ನುತ್ತೇವೆ, ಮಾಂಸಾಹಾರ ನಮ್ಮ ಜನ್ಮಸಿದ್ಧಹಕ್ಕು" ಎಂದು ವಾದಿಸುವ ಜನ ತುಂಬಾ ಇದ್ದಾರೆ. ಒಳಿತನ್ನು ತಿಳಿಸಬಹುದೇ ಹೊರತು ಹೇರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಕಥೆಯನ್ನು ಹೇಳುತ್ತೇನೆ :

ಬಹುದೊಡ್ಡ ಪೂಜಾರಿಯ ಮನೆಯ ಎದುರಿನ ಮನೆಯಲ್ಲಿ ಪ್ರಸಿದ್ಧ ವೇಶ್ಯೆಯೊಬ್ಬಳು ವಾಸವಿದ್ದಳಂತೆ. ಪ್ರತಿನಿತ್ಯ ಹೊತ್ತಲ್ಲದ ಹೊತ್ತಿನಲ್ಲಿ ಗಿರಾಕಿಗಳು ಬರುತ್ತಲೇ ಇರುತ್ತಿದ್ದರು. ಮೈಮಾರಿ ಗಳಿಸಿದ ಹಣದಿಂದ ಭವ್ಯ ಬಂಗಲೆಯನ್ನೂ ಕಟ್ಟಿಸಿದ್ದಳು, ಬಂಗಲೆಯ ತುಂಬಾ ವೈಭವೋಪೇತ ಪೀಠೋಪಕರಣಗಳನ್ನೂ ಮಾಡಿಸಿಹಾಕಿದ್ದಳು. ಪೂಜಾರಿ ಪೂಜೆ ಮಾಡುತ್ತಾ ಶ್ರೀಮಂತಿಕೆಗಾಗಿ ಪ್ರಾರ್ಥನೆ ಮಾಡುತ್ತಲೇ ಇದ್ದರೂ ಆತ ಬಡವನಾಗಿಯೇ ಇದ್ದ; ನಿತ್ಯವೂ ವೇಶ್ಯೆಯ ಜೀವನವನ್ನು ವೈಭೋಗವನ್ನೂ ನೋಡುತ್ತಿದ್ದ. ಇಬ್ಬರೂ ಮುದುಕಾಗಿ ಸತ್ತರು. ಯಮ ತನ್ನ ನಿಯಮವಾಗಿ ಅವರನ್ನು ವಿಚಾರಣೆಗೊಳಪಡಿಸಿದ. ವೇಶ್ಯೆಗೆ ಸ್ವರ್ಗ ಮತ್ತು ಪೂಜಾರಿಗೆ ನರಕವೆಂದು ಘೋಷಿಸಿದ! ಕಾರಣ ಕೇಳಿದಾಗ ಯಮ ವಿವರಿಸಿದ: "ಪೂಜಾರೀ, ವೇಶ್ಯೆ ತನಗೆ ಯಾರೂ ಗತಿಯಿಲ್ಲದಾಗ ತನ್ನ ದೇಹವನ್ನೇ ಮಾರಿ ಬದುಕಿದಳಾದರೂ ಹೆಚ್ಚಿನ ಹೊತ್ತು ಆಕೆ ಭಗವಂತನ ನೆನಪಿನಲ್ಲಿ ಕಳೆಯುತ್ತಿದ್ದಳು, ಗಿರಾಕಿಗಳ ಜೊತೆ ಮಲಗಿದ್ದಾಗಲೂ ಆಕೆಗೆ ದೈವಧ್ಯಾನ ಇಷ್ಟವಾಗುತ್ತಿತ್ತು. ನೀನಾದರೋ ದೇವರಮುಂದೆ ಕುಳಿತಾಗಲೂ ಈ ವೇಶ್ಯೆಯನ್ನೇ ನೆನೆಯತೊಡಗಿದ್ದೆ. ಆಕೆಯ ಮಾರ್ಗ ಸರಿಯಲ್ಲ ಎಂಬುದನ್ನೇ ಲೆಕ್ಕಹಾಕುತ್ತಾ ಪರೋಕ್ಷ ಅಲ್ಲಿ ಬರಹೋಗುವವರನ್ನೂ ಗಳಿಕೆಯನ್ನೂ ಲೆಕ್ಕಹಾಕುತ್ತಾ ನಿನ್ನ ಸಮಯವನ್ನೆಲ್ಲಾ ಅದರಲ್ಲೇ ಕಳೆದೆ. ಯಾಂತ್ರಿಕವಾಗಿ ದೇವರಪೂಜೆಯನ್ನು ನಡೆಸಿದ್ದರಿಂದ ನಿನ್ನ ಅಕೌಂಟಿನಲ್ಲಿ ಪಾಪ ಸಂಚಯವಾಗಿದೆ. ಹೀಗಾಗಿ ನಿನ್ನನ್ನು ನರಕಕ್ಕೆ ಕಳಿಸಬೇಕಾಗಿದೆ" ಎಂದನಂತೆ.

ಮೇಲಿನ ಕಥೆ ಅರ್ಥವಾಗಿರಬೇಕಲ್ಲ? ಅದರಂತೇ "ಛೇ, ನೀವು ಮಾಂಸ ತಿನ್ನುತ್ತೀರಿ..ಅದು ಸರಿಯಲ್ಲ" ಎಂದು ಹೇಳುವ ಬಗ್ಗೆ ನಾನಂತೂ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಒಳಿತಲ್ಲ ಎಂದಷ್ಟೇ ಹೇಳುವುದು ಮಿತ್ರನಾಗಿ ನನ್ನ ಕರ್ತವ್ಯ ಎಂದು ಭಾವಿಸಿ ನನ್ನ ಸಲಹೆ ಇತ್ತಿದ್ದೇನೆ. ಮಾಂಸಾಹಾರ ಸಲ್ಲ ಎಂದು ನಿಮಗೇ ಸಹಜವಾಗಿ ಅನಿಸುವವರೆಗೂ ಅದು ನಡೆಯುತ್ತಲೇ ಇರುತ್ತದೆ. ಒತ್ತಾಯಕ್ಕೆ ಅದನ್ನು ತ್ಯಜಿಸಿದರೂ ಕುಳಿತಲ್ಲೇ ಅದರ ಧ್ಯಾನಮಾಡುತ್ತಾ ಇದ್ದರೆ ಪುನಃ ಅದನ್ನು ತಿಂದು ಉಂಟಾಗುವ ಮನೋಸ್ಥಿತಿಯೇ ಒದಗುತ್ತದೆ! ಅದಕ್ಕೇ ||ಮನ ಏವ ಮನುಷ್ಯಾಣಾಂ || ಎಂದಿದ್ದಾರೆ. ನಮ್ಮ ಮನಸ್ಸಿನಂತೇ ನಮ್ಮ ನಡೆ; ಅದಕ್ಕೆ ತಕ್ಕಂತೇ ಫಲಪ್ರಾಪ್ತಿ! ಈ ಲೋಕದಲ್ಲಿ ಬೇಡದ ವಿದ್ಯೆಗಳು ಬೇಗನೇ ಹತ್ತುತ್ತವೆ. ಅದೇ, ಬೇಕಾದ ವಿದ್ಯೆಗಳು ಬೇಕೆಂದರೂ ಬರುವುದು ಕಡಿಮೆ. ಆ ಬೇಕಾದ ವಿದ್ಯೆಗಳನ್ನು ಪಡೆಯುವಾಗ ನಮ್ಮ ಕೆಲವು ರೂಢಮೂಲ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಆಗ ’ತ್ಯಾಗ’ ಹುಟ್ಟಿಕೊಳ್ಳುತ್ತದೆ. ಮನುಷ್ಯ ತ್ಯಾಗದಿಂದಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ತ್ಯಾಗಿಯಲ್ಲದವ ಭೋಗಿಯಾಗಿರುತ್ತಾನೆ. ಸದ್ಯಕ್ಕೆ ನಾವು ತ್ಯಾಗ-ಭೋಗಗಳ ಸಮನ್ವಯದಲ್ಲಿ ಇರಲು ಪ್ರಯತ್ನಿಸಿದರೂ ಭೋಗದ ತೂಕವೇ ಜಾಸ್ತಿಯಾಗಿದೆ. ಭೋಗ ಜಾಸ್ತಿಯಾದಷ್ಟೂ ಆಸೆ ಜಾಸ್ತಿಯಾಗುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂಬುದು ಬುದ್ಧನ ಹೇಳಿಕೆಯಾಗಿದೆ. ಆಸೆಯಾದಾಗ ಪಡೆಯುವ ಬಯಕೆಯಾಗುತ್ತದೆ. ಬಯಕೆ ನೆರವೇರದಿದ್ದಾಗ ದುಃಖವಾಗುತ್ತದೆ; ಖೇದವಾಗುತ್ತದೆ.

ಬೆಲೆವೆಣ್ಣುಗಳ ಹೇರಳ ಆಸ್ತಿ ಎಲ್ಲರ ಕಣ್ಣನ್ನೂ ಕೋರೈಸುತ್ತಿದೆ. ಪದ್ಮಾಲಕ್ಷ್ಮಿಯಿರಬಹುದು, ಸನ್ನಿ ಲಿಯಾನ್ ಇರಬಹುದು-- ಇಂಥವರು ನಾಗರಿಕ ಸಮಾಜದಲ್ಲಿ ನೂರಾರು ಶ್ರೀಂಮತರಿಗೆ ತಮ್ಮ ದೇಹವನ್ನು ಮಾರಿಕೊಳ್ಳುತ್ತಾ, ತಮ್ಮ ಕಾಮಕೇಳಿಯ ನೀಲೀಚಿತ್ರಗಳನ್ನೂ ಮಾರುತ್ತಾ ಯಥೇಚ್ಛ ಹಣ-ಒಡವೆಗಳನ್ನೋ ಸ್ಥಿರಾಸ್ತಿಗಳನ್ನೋ ಪಡೆದುಕೊಳ್ಳುತ್ತಾರೆ. ಮಾನಸಿಕ ನೆಮ್ಮದಿಯನ್ನಾಗಲೀ ಉನ್ನತ ಸಂಸ್ಕಾರಗಳನ್ನಾಗಲೀ ಅವರು ಗಳಿಸುವುದೂ ಇಲ್ಲ; ಕೊಡವುದೂ ಇಲ್ಲ. ಹೆಣ್ಣಿಗೆ ಶೀಲ ಮುಖ್ಯ ಎನ್ನುತ್ತೇವಲ್ಲ, ದೇಹಸುಖವನ್ನು ಒಬ್ಬರಿಗಿಂತ ಹೆಚ್ಚಿನ ಜನರಿಗೆ ಹಂಚಿಕೊಂಡಾಗ ಅಲ್ಲಿ ಕೌಟುಂಬಿಕ ನೆಲೆಗಟ್ಟು ಮರೆಯಾಗುತ್ತದೆ; ಹೆಣ್ಣಿನ ಸಹಜ ಶೀಲ ನಶಿಸಿಹೋಗುತ್ತದೆ. [ಈ ವಿಷಯದಲ್ಲಿ ವಿಧವೆಯ ಪುನರ್ವಿವಾಹಕ್ಕೊಂದು ಕ್ಷಮಾಪಣೆ ನೀಡಬಹುದಷ್ಟೇ.] ಅಲ್ಲೇನಿದ್ದರೂ ಕಾಸಿನ ವ್ಯವಹಾರ. ಇವತ್ತು ಹೆಚ್ಚಿನ ಕಾಸಿದ್ದವನ ಜೊತೆ, ನಾಳೆ ಅವನ ಖಜಾನೆ ಖಾಲಿಯಾದಾಗ ಇನ್ನೊಬ್ಬ ಸಿರಿವಂತನ ಜೊತೆ. ಜೀವನದ ಕಷ್ಟ-ಸುಖಗಳಲ್ಲಿ ಅವರೆಂದೂ ಪಾಲುದಾರರಾಗುವುದಿಲ್ಲ. ಅಂಗಡಿಗಳಲ್ಲಿ ಕಾಸುಕೊಟ್ಟು ವಸ್ತುಗಳನ್ನು ಖರೀದಿಸಿದಂತೇ ಬೆಲೆವೆಣ್ಣುಗಳಿಗೆ ಕಾಸುಕೊಟ್ಟು ಕ್ಷಣಿಕ ಸುಖವನ್ನಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಹಲವುಜನರ ಸಂಪರ್ಕದಿಂದ ಸಹಜವಾಗಿ ರೋಗಗ್ರಸ್ತವಾಗುವ, ವೇಶ್ಯೆಯರ ಗುಹ್ಯಾಂಗಗಳ ಸಂಪರ್ಕದಿಂದ ರೋಗಗಳು ಹಬ್ಬುವುದಂತೂ ನಿಶ್ಚಿತವಾಗಿದೆ. ಅವರಾಡುವ ಮತ್ತಿನಾಟಗಳಿಗೆ ಮನಸೋತ ಜನ ಯಾವುದೋ ಸುಖದ ಹುಡುಕಾಟದಲ್ಲಿ ಬೆಲೆವೆಣ್ಣುಗಳನ್ನು ಬಯಸುತ್ತಾರೆ. ಮಾಧ್ಯಮಗಳೂ ಅಂತಹ ಮಹಿಳಾಮಣಿಗಳನ್ನೇ ಹೊಗಳುವುದರಿಂದಲೋ, ಗುರುತಿಸುವುದರಿಂದಲೋ ವೇಶ್ಯೆಯರು ಬೇಡಿಕೆಯನ್ನು ಜಾಸ್ತಿಮಾಡಿಕೊಂಡು ಅಂತರ್ರಾಷ್ಟ್ರೀಯ ಮಟ್ಟದವರಾಗಲೂ ಬಹುದು! ಅಧುನಿಕ ವೇಶ್ಯೆಯರಿಗೆ ಸಂವಹಿಸಲು ಸುಲಭದ ಮಾರ್ಗಗಳಾಗಿ ಸಾಮಾಜಿಕ ಜಾಲತಾಣಗಳಿವೆ! ವೇಶ್ಯೆ ಎಂದಿಗೂ ಒಳಿತನ್ನು ಮಾಡುವುದಿಲ್ಲ ಎಂಬ ಅರಿವು ಇದ್ದರೂ ಕಾಣದ ಸೆಳೆತ, ಗುಂಗು, ಕ್ಷಣಿಕ ಸುಖದ ವ್ಯಾಮೋಹ ಜನರನ್ನು ಅವರೆಡೆಗೆ ಒಡ್ಡಿ, ಮನೆಯ ಧನ-ಕನಕಗಳು ಖಾಲಿಯಾಗುವವರೆಗೂ ಅನೇಕ ಜನ ಬೆಲೆವೆಣ್ಣುಗಳ ಸಹವಾಸದಲ್ಲಿರುತ್ತಾರೆ; ಪಾಪದ ಹೆಂಡಿರು-ಮಕ್ಕಳನ್ನು ಬೀದಿಗೆ ತರುತ್ತಾರೆ.

ವೇಶ್ಯೆಯರಲ್ಲಿ ಹಲವು ಸ್ತರಗಳಿವೆ. ಇವತ್ತಿನ ಜೀವನದಲ್ಲಿ ಪಾಶ್ಚಾತ್ಯ ಶೈಲಿಯ ಲಿವ್-ಇನ್ ಕಾಲಿಟ್ಟಿದೆ.ಇಲ್ಲಿಯೂ ಕೆಲವು ಹೆಣ್ಣುಗಳು ಬೆಲೆವೆಣ್ಣುಗಳ ರೀತಿಯಲ್ಲೇ ಇರುತ್ತಾರೆ. ಬೇಕಾದ ಸುಖವನ್ನು ಬೇಕಷ್ಟು ದಿನ ಪಡೆದುಕೊಂಡು ಆಮೇಲೊಂದು ದಿನ ಪಡೆದಿದ್ದನ್ನೇ ಪಡೆದು ಬೇಸರವಾದಾಗ ಹೊಸದರ ’ಸಂಶೋಧನೆ’ಗೆ ತೊಡಗುವ ಲಿವ್-ಇನ್ ಪಾರ್ಟ್‍ನರ್ಸ್, ಯಾರಾದರೊಬ್ಬರ ’ಹೊಸ ಸಂಶೋಧನೆ’ ಬಹಿರಂಗಗೊಂಡಾಗ ಬೇರಾಗುತ್ತಾರೆ. ನಂತರ ಮತ್ತೊಂದು ಹೊಸ ಲಿವ್-ಇನ್ ! ಹೀಗೇ ಅದೆಷ್ಟು ಲಿವ್-ಇನ್ ನಡೆಯುತ್ತದೋ ದೇವರೇ ಬಲ್ಲ. ಸ್ವೇಚ್ಛೆಗೆ ಇಲ್ಲಿ ಕಡಿವಾಣವಿರುವುದಿಲ್ಲ; ಯಾರೂ ಹೇಳಿಕೇಳಿ ಮಾಡುವವರಿರುವುದಿಲ್ಲ. ಸಮಾಜದ ಯಾರಿಂದಲೂ ಇವರು ನಿಯಂತ್ರಿತರಲ್ಲ. ಅಕಸ್ಮಾತ್ ಮಕ್ಕಳು ಜನಿಸಿದರೆ ಆಗಿನ ಗತಿ ಶಿವನೇಬಲ್ಲ! ಮುಪ್ಪಿನ ದಿನಗಳಲ್ಲಿ ಎಲ್ಲೋ ವೃದ್ಧಾಶ್ರಮದ ಮೂಲೆಗಳಲ್ಲಿ ಮಂಚದಮೇಲೆ ಬಿದ್ದುಕೊಂಡು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವ ಜನ ತಯಾರಾಗುತ್ತಾರೆ.

ಮಲ್ಯ ಮದ್ಯ ತಯಾರು ಮಾಡಿದ. ಮದ್ಯದಿಂದ ಮಂದಿ ಹಾಳಾದರು. ಅದೇ ಮಂದಿ ಮದ್ಯದ ಅಮಲಿನಲ್ಲಿ ಮಾಂಸವನ್ನೂ ಮಾನಿನಿಯರನ್ನೂ ಹುಡುಕಿದರು. ಬಿಕನಿ ತೊಟ್ಟ ಮಗಳವಯಸ್ಸಿನ ಮಾನಿನಿಯರ ಜೊತೆ ಮಲ್ಯ ಕ್ಯಾಲೆಂಡರ್ ತಯಾರಿಸಿ ಹಂಚಿದ! ತಾನೂ ಕುಡಿದ, ಶಿಲ್ಪಾಶೆಟ್ಟಿಯಂತಹ ಬಳುಕುಬಳ್ಳಿ ಲಲನೆಯರನೇಕರನ್ನು ಅಪ್ಪಿ ಕುಣಿದ; ಅವರೊಟ್ಟಿಗೆ ದಿನಗಳನ್ನೇ ಕಳೆದ. ಹೆಂಡದ ಗಳಿಕೆಯಲ್ಲಿ ಏನು ಮಾಡಬೇಕೆಂದು ತೋರಲಿಲ್ಲ. ಕುದುರೆ ರೇಸ್ ಆಡಿದ, ಟಿಪ್ಪೂ ಖಡ್ಗವನ್ನೂ ಗಾಂಧೀಜಿಯ ವಾಚನ್ನೂ ದುಬಾರಿ ಬೆಲೆ ತೆತ್ತು ತಂದು ದೇಶೋದ್ಧಾರಮಾಡುವುದಾಗಿ ಸಾರಿದ! ’ಗೌಡಾ’ ಖರೀದಿಸಿದ! ಹಣಬಲದಿಂದ ರಾಜಕೀಯಕ್ಕೆ ಇಳಿದು ಎಮ್.ಎಲ್.ಸಿಯೂ ಆದ. ಜಗತ್ತಿನಲ್ಲಿ ತನ್ನನ್ನು ಬಿಟ್ಟರೆ ಯಾರೂ ಇಲ್ಲವೆನ್ನುವ ದುರಹಂಕಾರ ಬೆಳೆಸಿಕೊಂಡವ ವಿಮಾನಯಾನದ ವ್ಯವಹಾರಕ್ಕೆ ಆರಂಭಿಸಿದ! ಜನ, "ವೈನ್‍ನಲ್ಲಿ ಬಂದಿದ್ದು ಪ್ಲೇನ್ ನಲ್ಲಿ ಹೋಯ್ತು" ಎಂದು ನಕ್ಕರು, ಕಾರ್ಟೂನು ಕ್ಯಾಲೆಂಡರ್ ನಲ್ಲಿ ಬಿಕನಿ ಹುಡುಗಿಯರು ಅವನಿಂದ ತಪ್ಪಿಸಿಕೊಂಡು ಓಡುತ್ತಿರುವಂತೇ ಚಿತ್ರಿಸಿ ನಕ್ಕರು, ಭಿಕ್ಷುಕನ ಪಕ್ಕದಲ್ಲಿ ಇನ್ನೊಬ್ಬ ಭಿಕ್ಷುಕನನ್ನಾಗಿ ಕಾರ್ಟೂನು ಬರೆದು ನಕ್ಕರು, ಮತ್ತಿನ್ನೇನೇರ್‍ನೋ ಮಾಡಿ ನಕ್ಕರು. ಪ್ರತಿನಿತ್ಯ ಕುಡಿದು ಬರುವ ಗಂಡಂದಿರ ನೊಂದ ಪತ್ನಿಯರ ಶಾಪವೋ ಎಂಬಂತೇ ಪ್ಲೇನ್ ಬ್ಯುಸಿನೆಸ್ಸು ನೆಲಕಚ್ಚಿತು! ಅದು ಹಾಗೆ ಮಕಾಡೆ ಮಲಗುವಾಗ ಮಲ್ಯನ ಕೋಟಿನ ಜೇಬುಗಳಲ್ಲಿ ಹೊಲಿದು ರಿಪೇರಿ ಮಾಡಲಾಗದಷ್ಟು ದೊಡ್ಡ ತೂತುಗಳು ಕಾಣಹತ್ತಿದವು !

ಒಂದುಕಾಲಕ್ಕೆ ವಿದೇಶದಲ್ಲಿ ದುಬಾರಿ ಬೆಲೆಯ ಕಾರ್ ನಿಲ್ಲಿಸಲು ಸುರಕ್ಷಿತವಾದ ಜಾಗ ಹುಡುಕುತ್ತಾ, ಅದನ್ನು ಬ್ಯಾಂಕೊಂದರ ಅಡಮಾನವಾಗಿ ಅಲ್ಲಿನ ನೆಲಮಹಡಿಯಲ್ಲಿ ಇಟ್ಟು ಅತಿದುಬಾರಿ ಬಾಡಿಗೆಹಣವನ್ನು ಉಳಿಸಿದ ಮಹಾನ್ ಮೇಧಾವಿ ಎಂಬ ದಂತಕಥೆ ಸೃಷ್ಟಿಸಿದ್ದ ಮಲ್ಯನಲ್ಲಿ ಮುಂದೊಂದು ದಿನ ಕಾರುಗಳೂ ಇಲ್ಲವಾಗಬಹುದು! ಕರಗದ ಸಾಲಕ್ಕೆ ಪರಿಹಾರವಾಗಿ, ನಿರ್ಮಿಸಿದ ಗಗನಚುಂಬೀ ಕಟ್ಟಡಗಳು ಪರಭಾರೆಯಾಗಲೂ ಬಹುದು. ಹಾರುವ ಕುದುರೆಯನ್ನು ನಾನಂತೂ ಕಂಡಿಲ್ಲ, ರೆಕ್ಕೆಗಳಿರುವ ಆ ಕುದುರೆಯ ರೆಕ್ಕೆಮುರಿದ ಸ್ಥಿತಿ ಈಗಲೇ ಕಾಣುತ್ತಿದೆ ಎಂದರೆ ಇದು ಅತಿಶಯೋಕ್ತಿಯಲ್ಲ! ಜ್ಯೋತಿಷ್ಯದವರು, ಹಕ್ಕಿಶಕುನದವರು, ಸಂಖ್ಯಾಶಾಸ್ತ್ರಿಗಳು, ’ವಾಸ್ತು ತಜ್ಞರು’, ಟೆರಟ್ ಕಾರ್ಡ್ ರೀಡರ್ಸ್, ಕಾಫೀ ಕಪ್ ಓದುವವರು, ಕ್ರಿಸ್ಟಲ್ ಬಾಲ್ ರೀಡರ್ಸ್ ಆದಿಯಾಗಿ ಎಲ್ಲರೂ ಮಲ್ಯನ ಗ್ರಹಗತಿಯ ಬಗ್ಗೆ ಮಾಧ್ಯಮಗಳಲ್ಲಿ ಹರಟುವ [ಹರಟುತ್ತಾ ತಾವು ಪುಗಸಟ್ಟೆ ಪ್ರಚಾರ ಪಡೆದುಕೊಳ್ಳುವ] ಸ್ಥಿತಿ ಈಗಲೇ ಉಂಟಾಗಿದೆ! ಯಾವ ಉತ್ತಮ ಸಲಹೆಗಾರನ ಮಾತನ್ನೂ ಕೇಳದ ಮಲ್ಯನ ಈ ಆರ್ಥಿಕ ಸ್ಥಿತಿಗೆ ಅಜಾಗರೂಕತೆಯ ಮತ್ತು ಅಮಲುಗೊಂಡ ಮನಸ್ಸೇ ಕಾರಣವಾಗಿದೆ. ಎಷ್ಟೇ ಚೇತರಿಸಿಕೊಂಡರೂ ಕಳೆದುಹೋದ ಗೌರವ ಖರೀದಿಸಲು ಬರುವಂಥದ್ದಲ್ಲ. ಯಾವ ಸಮಾಜ ಹಣದಿಂದ ಎಲ್ಲರನ್ನೂ ಅಳೆಯುತ್ತದೋ ಅದೇ ಸಮಾಜ ಮಲ್ಯನನ್ನೂ ಅದೇ ಹಣದಿಂದ ಅಳೆಯುತ್ತಲೇ ಇತ್ತು! ಯಾವಾಗ ಮಲ್ಯನ ಕೊಡೆ

ತಿಪ್ಪಾ ಭಟ್ಟರ ಚಂದಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

ಅಂತನ್ನಿಸುವ ಸ್ಥಿತಿಗೆ ಬಂತೋ ಆಗ ಒಬ್ಬೊಬ್ಬರಾಗಿ ಮಲ್ಯನನ್ನು ತೊರೆಯುತ್ತಿದ್ದಾರೆ. ಬಗಲಲ್ಲಿ ಆತುಕೊಂಡು ಮುತ್ತಿಕ್ಕಿ ಗಮನಸೆಳೆಯುತ್ತಿದ್ದ ಗಗನ ಸಖಿಯರಿಗೂ ಮಲ್ಯ ಬೇಡ, ವರ್ಷಗಟ್ಟಲೇ ಉತ್ತಮ ಸಂಬಳ ಪಡೆದ ವಿಮಾನ ಚಾಲಕರಿಗೂ ಮಲ್ಯ ಬೇಡ, ಸಾವಿರ ಕೋಟಿಗಳಲ್ಲಿ ವ್ಯವಹಾರಿಕ ಖಾತೆ ಚಾಲ್ತಿಯಲ್ಲಿಟ್ಟು ನಡೆಸಿ ಬೇಕಷ್ಟು ಲಾಭವುಣಿಸಿದ್ದರೂ ಅಂತಹ ಬ್ಯಾಂಕಿನವರಿಗೂ ಮಲ್ಯ ಬೇಡ! ಕುರುಕ್ಷೇತ್ರದ ಕೌರವನಂತೇ ದುರಭಿಮಾನದಿಂದ ಸೆಣಸಾಡುತ್ತಿರುವ ಮಲ್ಯ ನನ್ನ ದೃಷ್ಟಿಗೆ ಗೋಚರವಾಗುತ್ತಿದ್ದಾನೆ. ’ಮಿಲಿಯನೇರ್ ಮಲ್ಯನ ಮಗನ ಮನದನ್ನೆ’ಯೆಂದು ಗುರುತಿಸಿಕೊಂಡು, ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಪ್ಪನ ಪಕ್ಕದಲ್ಲೇ ಕುಳಿತ ಆ ಮಗನನ್ನು [ಕುಮಾರಿಸ್ವಾಮಿ-ಬಿ.ಎಸ್.ವೈ ಸಮ್ಮಿಶ್ರ ಸರಕಾರ ಆರಂಭಿಸಿದಾಗ, ಟವೆಲ್ ಮುಚ್ಚಿಕೊಂಡು ಯಾರಿಗೂ ಕಾಣದಹಾಗೇ ತೂತುಗಳ ಮುಖಾಂತರ ದೂರದಿಂದ ಅದನ್ನೇ ದೃಷ್ಟಿಸುತ್ತಿದ್ದ ದೇವೇಗೌಡರ್‍ರ್‍ರಂತೇ]ಅಪ್ಪ ಓರೆನೋಟದಲ್ಲಿ ನೋಡುತ್ತಿದ್ದರೂ, ತುಟಿ ಹರಿಯುವಷ್ಟು ಚುಂಬಿಸಿದ ದೀಪಿಕಾ ಈಗ ’ಬೇರೇ ಸಂಸ್ಥೆಯ ವಿಮಾನ’ ಹತ್ತಿ ಬೈಬೈ ಹೇಳಿದ್ದಾಳೆ ! ಇಲ್ಲೇ ನಿಮಗೂ ನಾನು ಬೈಬೈ ಹೇಳದೇ ಇದ್ದರೆ ’ಪುರಾಣ’ ಬಹಳ ಉದ್ದವಾದೀತಲ್ಲವೇ ? ಗತ್ಯಂತರವಿಲ್ಲ, ಸದ್ಯಕ್ಕೆ ಬೈಬೈ !!

Tuesday, April 10, 2012

ರಸಿಕ ಜನಗಳೆ ಕೇಳಿ ರಸದ ಔತಣವ ಕಸುವ ತೋರುವ ಕಲೆಯ ಬಿಸುಪಿನಾಲಯವ

ಚಿತ್ರಋಣ: ಅಂತರ್ಜಾಲ
ರಸಿಕ ಜನಗಳೆ ಕೇಳಿ ರಸದ ಔತಣವ
ಕಸುವ ತೋರುವ ಕಲೆಯ ಬಿಸುಪಿನಾಲಯವ

ಭಾಮಿನಿಯೊಂದನ್ನು ಬರೆದು ಯಕ್ಷಗಾನ ಲೋಕಕ್ಕೆ ನಿಮ್ಮನ್ನು ತಾತ್ಕಾಲಿಕವಾಗಿ ಕರೆದೊಯ್ಯುವ ಅಭಿಲಾಷೆ ನನ್ನದು:

ಬಡಗು ತೆಂಕಿನ ಎರಡು ತಿಟ್ಟೊಳು
ಬೆಡಗು ಬಿನ್ನಾಣಗಳ ವೈಭವ
ನಡೆವುದತಿಶಯ ಸುಖದ ಸೇವೆಯು ಕಲೆಯ ರಸಿಕರಿಗೆ |
ಅಡಿಗಡಿಗೆ ಸಂಗೀತಗಾಯನ
ಒಡನೊಡನೆ ಮುದಗೊಳಿಪ ನರ್ತನ
ಕೊಡುವುದುತ್ತಮ ನೀತಿ ಪಾಠವ ಕುಳಿತ ಸಭಿಕರಿಗೆ ||

ಯಕ್ಷಗಾನದಲ್ಲಿ ಆದಿಪ್ರಾಸಕ್ಕೆ ನಮ್ಮ ಕವಿಗಳು ಒತ್ತುಕೊಟ್ಟಿದ್ದಾರೆ. ಸನ್ನಿವೇಶಕ್ಕೆ ಸರಿಯಾಗಿ ಪದ್ಯವನ್ನು ಆದಿಪ್ರಾಸದಲ್ಲಿ ರಚಿಸಿದ್ದು, ಯಕ್ಷಗಾನದ ಆದಿಕವಿಗಳ ರಸಾಭಿರುಚಿಯನ್ನು ತೋರಿಸುತ್ತದೆ. ಕನ್ನಡ ಸಾರಸ್ವತ ಲೋಕದಲ್ಲಿ ಬಳಕೆಯಾದ ಅನೇಕ ಹಳ-ನಡು-ಹೊಸಗನ್ನಡ ಪದಗಳನ್ನು ಯಕ್ಷಗಾನದಲ್ಲಿ ಕಾಣಬಹುದಾಗಿದೆ. ಯಕ್ಷಗಾನದ ಹಾಡು ಒಮ್ಮೆ ಕೇಳಿದರೆ ಮರೆತು ಹೋಗುವಂಥದ್ದಲ್ಲ! ನೋಡಿದ ಪ್ರಸಂಗದ ಕೆಲವು ಪದ್ಯಗಳು ಅನೇಕ ತಿಂಗಳುಗಳತನಕ ಮನದಲ್ಲೇ ಗುನುಗುನಿಸುವುದಿದೆ. ಪದ್ಯಗಳಲ್ಲಿನ ಸಾಹಿತ್ಯಕ ಪದಗಳು ನೆನಪಿಗೆ ಬಾರದೇ ಇದ್ದರೂ, ಆ ರಾಗಗಳು ಆ ತಾಳಗಳು ನಮ್ಮನ್ನು ಮತ್ತೆ ಮತ್ತೆ ಯಕ್ಷಲೋಕದಲ್ಲಿ ವಿಹರಿಸುವಂತೇ ಮಾಡುತ್ತವೆ. ನೋಡುಗನನ್ನು ಅವನು ಹೊಸಬನೋ ಹಳಬನೋ ಕಲೆ ಗೊತ್ತಿರುವವನೋ ಗೊತ್ತಿರದವನೋ ಇದಾವುದರ ಭೇದವಿಲ್ಲದೇ ಕುಳಿತಲ್ಲೇ ಕಟ್ಟಿಹಾಕುವ ತಾಕತ್ತಿರುವ ಒಂದೇ ಸಮಗ್ರ ಕಲೆ ಎಂದರೆ ಅದು ಯಕ್ಷಗಾನ ಮಾತ್ರ! ಹುಟ್ಟಿನಿಂದ ಉಡುಪಿಯವನಾದಮಾತ್ರಕ್ಕೆ ಕವಿ ಮುದ್ದಣ ಯಕ್ಷಗಾನ ಪ್ರಸಂಗಗಳನ್ನು ರಚಿಸಬೇಕಿರಲಿಲ್ಲ. ಅವಿಭಜಿತ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹಿಂದೆ ಅದೆಷ್ಟೋ ಕವಿಗಳು ಆಗಿ ಹೋಗಿದ್ದಾರೆ. ಉತ್ತರಕನ್ನಡದ ಖ್ಯಾತ ಯಾನ ತಾಣವಾದ ’ಯಾಣ’ ಎಂಬುದೊಂದು ನಿತ್ಯಹರಿದ್ವರ್ಣ ಕಾಡುಮಟ್ಟೆ. ಅಲ್ಲಿ ಇತ್ತೀಚಿನವರೆಗೂ ಯಾವುದೇ ವಾಹನಗಳ ಓಡಾಟ ಸಾಧ್ಯವಿರದಷ್ಟು ಕಾಡಿತ್ತು; ಸರಿಯಾದ ರಸ್ತೆ ಇರಲಿಲ್ಲ-ಅಂತಹ ಕಾಡಿನಲ್ಲೂ ಹಿಂದೆಂದೋ ಜೀವಿಸಿದ್ದ ಬತ್ತಲೇಶ್ವರ ಎಂಬ ಕವಿ ’ಬತ್ತಲೇಶ್ವರ ರಾಮಾಯಣ’ವನ್ನು ಬರೆದಿದ್ದಾನೆ. ಅಂದಿನಿಂದ ಇಂದಿನವರೆಗೆ ಅದೆಷ್ಟೋ ಅಜ್ಞಾತ ಕವಿಗಳು ಕರಾವಳಿ ಜಿಲ್ಲೆಗಳಲ್ಲಿ ಆಗಿಹೋಗಿದ್ದಾರೆ. ಮಳೆಗಾಲದ ೬ ತಿಂಗಳು ಬಿಡದೇ ಧೋಗುಟ್ಟುವ ಮುಸಲಧಾರೆಯಲ್ಲಿ, ಹೊರಗೆ ಯಾವ ಕೆಲಸಕ್ಕೂ ತೆರಳಲಾಗದ ಆ ಕಾಲಘಟ್ಟದಲ್ಲಿ, ಕವಿಗಳ ಮನದಲ್ಲಿ ರೂಪುಗೊಂಡ ಕಲೆ ’ಯಕ್ಷಗಾನ’.

ನಾನು ಹಲವರಲ್ಲಿ ಹೇಳಿಕೊಂಡಿದ್ದೇನೆಂದರೆ ನನ್ನಲ್ಲಿ ಆದಿಪ್ರಾಸದ ಆಸೆ ಹುಟ್ಟಿಸಿದ್ದು, ಹಾಗೆ ಬರೆಯುವ ಪ್ರವೃತ್ತಿ ಬೆಳೆಸಿ ಪೋಷಿಸಿದ್ದು ಇದೇ ಯಕ್ಷಗಾನ! ಮೂಲದಲ್ಲಿ ತಾಳಮದ್ದಳೆಯ ರೂಪದಲ್ಲಿ ಆವಿರ್ಭವಿಸಿದ ಯಕ್ಷಗಾನಕ್ಕೆ ಚಂಡೆಯ ಉಪೋದ್ಘಾತದ ಅಬ್ಬರವಿರಲಿಲ್ಲ. ಚಂಡೆ ಎಂಬುದು ಇಂದಿಗೂ ನೇರವೇದಿಕೆಯ ಕುಣಿತ ಮಿಳಿತದ ಆಟಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಆದರೂ ಚಂಡೆಯ ಸದ್ದನ್ನು ಕೇಳುವ ಬಯಕೆಯಿಂದ ಈಗೀಗ ತಾಳಮದ್ದಳೆಯಲ್ಲೂ ಅದನ್ನು ಬಳಸುತ್ತಿದ್ದಾರೆ. ಪ್ರಸಂಗಗಳು ಅವವೇ ಆಗಿದ್ದರೂ ನೋಡಿದಷ್ಟೂ ಇನ್ನೂ ಮತ್ತೂ ನೋಡಲು ಮನಸ್ಸು ಹಾತೊರೆಯುತ್ತದೆ. ಹಿಂದಿನ ನಮ್ಮ ಪೂರ್ವಜರನೇಕರಿಗೆ ಇಡೀ ಪ್ರಸಂಗಗಳೇ ಬಾಯಿಪಾಠವಾಗಿರುತ್ತಿದ್ದವು ಎಂದರೆ ಎಷ್ಟರಮಟ್ಟಿಗೆ ಅವರು ಆ ಪ್ರಸಂಗಗಳನ್ನು ನೋಡಿರಬಹುದು ಎಂಬುದು ಗೊತ್ತಾಗುತ್ತದೆ. ೧೭-೧೮ನೇ ಶತಮಾನದಲ್ಲಿ ನಮ್ಮ ಹಳ್ಳಿಗಳಲ್ಲಿ ಧ್ವನಿವರ್ಧಕಗಳಾಗಲೀ ವಿದ್ಯುತ್ತಾಗಲೀ ಇದ್ದಿರಲಿಲ್ಲವಲ್ಲ. ಸೇರಿದ ಸಾವಿರಾರು ಸಭಾಸದರಿಗೆ ಕಲೆಯ ಸೊಬಗನ್ನು ಉಣಬಡಿಸುವ ಕಾರ್ಯ ಕೇವಲ ದೊಂದಿಗಳ ಬೆಳಕಿನಲ್ಲೇ ಆಗಬೇಕಾದ ಪ್ರಮೇಯವಿತ್ತು. ಪಾತ್ರಧಾರಿಗಳಿಗೂ[ಕುಣಿಯುವವರಿಗೂ] ಸೂತ್ರಧಾರಿಗಳಿಗೂ[ಭಾಗವತರಿಗೂ] ಗರಳು ಸರಿಯಾಗಿ ಇರಬೇಕಾಗುತ್ತಿತ್ತು. ಸಹಜವಾಗಿ ಅಂದು ಅವರು ಮಾತನಾಡಿದರೆ ಯಾ ಹಾಡಿದರೆ ಆ ಇಡೀ ಸಭೆಗೆ ಅದು ಕೇಳಿಸುತ್ತಿತ್ತು ಮಾತ್ರವಲ್ಲ ರಕ್ಕಸ ಪಾತ್ರಧಾರಿ "ಅಲಲಲ ಕೀ ಹ" ಮುಂತಾಗಿ ವಿಚಿತ್ರವಾದ ಪದಗಳಿಂದ ಕೂಗುವುದಿತ್ತು. ಹಾಗೆ ಕೂಗಿದ್ದು ೪-೫ ಕಿ.ಮೀ. ದೂರದವರೆಗೆ ಕೇಳಿಸುತ್ತಿತ್ತು ಎಂದವರಿದ್ದಾರೆ! ಅದಕ್ಕೆ ಬಹುಶಃ ಶಬ್ದಮಾಲಿನ್ಯ ರಹಿತ ಅಂದಿನ ದಿನಮಾನಗಳೂ ಕಾರಣವಾಗಿದ್ದಿರಬಹುದು. ಇವತ್ತು ಆ ಮಟ್ಟಿನ ಗತ್ತು ಗೈರತ್ತು ಕಾಣಸಿಗುವುದಿಲ್ಲ ಎನ್ನುವವರೂ ಇದ್ದಾರೆ.

ತಾಳಮದ್ದಳೆಯಲ್ಲಿ ಭಾಗವಹಿಸುತ್ತಲೇ ಹೊಸ ಆಯಾಮ ಕೊಟ್ಟು, ಮತ್ತಷ್ಟು ಅಂದವಾಗಿ ಯಕ್ಷಕಲೆಯನ್ನು ಪ್ರಚುರಪಡಿಸುವ ಸಲುವಾಗಿ, ಯಾರೋ ಪುಣ್ಯಾತ್ಮ ತೊಡಗಿಕೊಂಡಿರಬೇಕು! ತಲೆಯ ಮೇಲೆ ಕಿರೀಟ ಅಥವಾ ಮುಂಡಾಸು[ಪೊಗಡೆ], ಭುಜದಮೇಲೆ ಭುಜಕೀರ್ತಿ ಎಂಬ ಆಭರಣ, ಕೊರಳಿಗೆ ಕಂಠಹಾರ, ತೋಳಿಗೆ ತೋಳ್ಬಂಧಿ, ಎದೆಯಗಲದ ಎದೆಗವಚ, ಕರ್ಣಕುಂಡಲದ ರೀತಿಯ ಕಿವಿಯಾಭರಣ, ಕೇದಗೆ ಮುಂದಲೆ, ಕೈಬಳೆಗಳ ರೀತಿಯ ಆಭರಣ, ವಡ್ಯಾಣ, ಕೆಂಪು ಚೌಕುಳಿ ಧೋತಿಯ ಒಳಗಡೆ ಕಪ್ಪು ಪೈಜಾಮಿನ ರೀತಿಯ ತೊಡುಗೆ, ಕಾಲಿಗೆ ಬಿಗಿಗೊಳಿಸುವ ಬಳೆಗಳು ಮತ್ತು ಗೆಜ್ಜೆ, ಆಭರಣಗಳ ಬಣ್ಣಕ್ಕೆ ಹಿನ್ನೆಲೆ ಹೊಂದಾಣಿಕೆಯಾಗಿ ಕೆಂಪು/ಹಸಿರು/ಕಪ್ಪು ಬಣ್ಣದ ಅಂಗಿಗಳು,[ದೈತ್ಯ ವೇಷಕ್ಕೆ ಕಪ್ಪು ಅಂಗಿಯನ್ನೂ ಶ್ರೀಕೃಷ್ಣ ವೇಷಕ್ಕೆ ಹಸಿರು ಅಂಗಿಯನ್ನೂ, ರಾಜಪಾತ್ರಗಳಿಗೆ ಕೆಂಪು ಅಂಗಿಯನ್ನೂ ತೊಡುವುದು ಯಕ್ಷಗಾನದ ಸಂಪ್ರದಾಯ]ವಿವಿಧ ಅಂಗವಸ್ತ್ರಗಳು, ವಿಪುಲ ಕಪ್ಪು ಕೇಶರಾಶಿಯ ವಿನ್ಯಾಸ ಇವುಗಳನ್ನೆಲ್ಲಾ ಗಮನಿಸಿದರೆ ಪ್ರಾಯಶಃ ಇದಕ್ಕೆ ಒಂದು ಕಲಾಮೇಳವೇ ತೊಡಗಿಕೊಂಡಿತ್ತೇನೋ ಎನಿಸುತ್ತದೆ. ತನ್ನ ಹೆಚ್ಚುಗಾರಿಕೆಯಿಂದ ಈಗೀಗ ದೇಶವ್ಯಾಪೀ ಅಷ್ಟೇ ಏಕೆ ವಿದೇಶಗಳವರೆಗೂ ತನ್ನ ಕಂಪನ್ನು ಬೀರಿರುವ ಈ ಕಲೆಯ ಛಾಯಾಚಿತ್ರಗಳು ಎಲ್ಲಿದ್ದರೂ ನೋಡುಗರ ಕಣ್ಣನ್ನು ಅರೆನಿಮಿಷ ಸೆಳೆಯದೇ ಇರುವುದಿಲ್ಲ!

ರಸಿಕ ಜನಗಳೆ ಕೇಳಿ ರಸದ ಔತಣವ
ಕಸುವ ತೋರುವ ಕಲೆಯ ಬಿಸುಪಿನಾಲಯವ

ಹೆಸರು ಕೇಳಿದ ಜನರು ಹೊಸದಾಗಿ ಕಂಡು
ಬೆಸಗೊಂಡು ಕರೆತಂದರದೊ ನೋಡಿ ದಂಡು !

ಹಸನಾದ ಬೆಣ್ಣೆಯನು ಮೆಲುವ ಗೋಪಾಲ
ಕಸೆಯಂಗಿ ಕುಣಿತದಾ ಹಾಸ್ಯಸಖ ಲೋಲ

ಬುಸುಗುಡುವ ಮಾಗಧನು ಕೌರವಾದಿಗಳು
ನಸುನಗುವ ಶ್ರೀರಾಮ ಶಬ್ದವೇದಿಗಳು !

ತುಸುವೇಳೆಯಲ್ಲಿಯೇ ವೇಷಕಟ್ಟುವರು
ನಸುಕು ಹರಿಯುವವರೆಗೆ ಕೋಶಕೊಟ್ಟವರು


--ಹೀಗೊಂದು ನನ್ನ ಪ್ರಾಸಬದ್ಧ ರಚನೆಯೊಂದಿಗೆ ನಿಮ್ಮನ್ನು ಮತ್ತೊಮ್ಮೆ ಹಂಗಿಸುವ ನೆನಪಾಯ್ತು. ಕಾಲವೊಂದರಲ್ಲಿ ರಾತ್ರಿ ೯:೩೦ ರಿಂದ ಮಾರನೇ ಬೆಳಗಿನ ೬:೩೦ರ ವರೆಗೆ ಯಕ್ಷಗಾನ ನಡೆಯುವಾಗ ಎರಡು ಪ್ರಸಂಗಗಳನ್ನು ನಡೆಸುತ್ತಿದ್ದರು. ಚಳಿಗಾಲದಲ್ಲಿ ಆರಂಭವಾಗುವ ವೃತ್ತಿಪರ ಮೇಳಗಳು ಮಳೆಗಾಲದ ಆರಂಭದ ವರೆಗೂ ಸುಮಾರು ನಾಲ್ಕು ತಿಂಗಳು ಪ್ರತಿನಿತ್ಯ ಬೇರೆ ಬೇರೆ ಕಡೆಗಳಲ್ಲಿ ತಂಬು ಹೂಡಿ ಆಟವಾಡಿ ಜನರನ್ನು ರಂಜಿಸುತ್ತಿದ್ದವು. ದುಡ್ಡಿಲ್ಲದ ಕೆಲವು ಜನ ಯಕ್ಷಗಾನವನ್ನು ನಿತ್ಯ ನೋಡುವ ಮಹದಾಸೆಯಿಂದ ತಂಬು ಕಟ್ಟುವ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ನಮ್ಮಂತಹ ಎಳೆಯ ಕರುಗಳು ಚೌಕಿ[ಗ್ರೀನ್ ರೂಮ್]ಗೆ ಹೋಗಿ ಯಕ್ಷಗಾನದ ವೇಷಧಾರಿಗಳನ್ನು ಕಂಡುಬರುವುದಿತ್ತು. ವೇಷತೊಟ್ಟವರು ಪರಿಚಯ ಹಿಡಿದು ನಕ್ಕರೂ ನಮಗೆ ಅವರು ಯಾರು ಎಂಬುದು ಕೆಲವೊಮ್ಮೆ ಸ್ಪಷ್ಟವಾಗದೇ ಗೊಂದಲವುಂಟಾಗುತ್ತಿತ್ತು. ನಿಜಜೀವನದಲ್ಲಿ, ಖ್ಯಾತ ನಟರೋರ್ವರ ತಲೆಯ ಒಂದು ಭಾಗ ಸ್ವಲ್ಪ ಓರೆಯಿದ್ದು, ಅವರು ಕೀಚಕನ ವೇಷಹಾಕಿದ್ದಾಗ ತಗುಲಿದ ಭೀಮನ ಹೊಡೆತಕ್ಕೆ ಹಾಗಾಗಿರಬಹುದೆಂಬ ಊಹೆಗಳೂ ಮನದಲ್ಲಿ ಎದ್ದುಬಿಡುತ್ತಿದ್ದವು! [ಸಾಯುವುದಿಲ್ಲ ಸಾಯುವಂತೇ ನಾಟಕವಾಡುತ್ತಾರೆ ಎಂದು ಯಾರೋ ಹೇಳಿದ್ದರು; ಹೀಗಾಗಿ ಕೀಚಕ ಮುಂತಾದ ವಧೆಗೊಳಗಾಗುವ ಪಾತ್ರಗಳನ್ನು ಮಾಡಿದವರು ಸಾಯುವುದಂತೂ ಇಲ್ಲ ಎಂಬುದು ಖಾತ್ರಿಯಾಗಿತ್ತು!]

ಯಕ್ಷಗಾನದ ಪರಿಪೂರ್ಣ ಅಭಿರುಚಿ ಇರುವವರಿಗೆ ನೋಡಿದ ಅದೇ ಪ್ರಸಂಗ ಇನ್ನೊಮ್ಮೆ ನೋಡಿದಾಗ ಹೆಚ್ಚಿಗೆ ಸಿಗುವ ಬೋನಸ್ ಎಂದರೆ : ವಿಶಿಷ್ಟ ಕುಣಿತದ ವಿಭಿನ್ನ ಪಾತ್ರಧಾರಿಗಳು, ಪಾತ್ರಧಾರಿಗಳ ಭಾಷಾಪ್ರಯೋಗದಿಂದ ಅವರವರ ವೈಯ್ಯಕ್ತಿಕ ಜೀವನದ ಮಜಲುಗಳನ್ನೂ ಬಿಂಬಿಸುವ-ಜೊತೆಗೆ ಪ್ರಸಕ್ತ ವಿದ್ಯಮಾನಗಳನ್ನು ಲೋಕಾಭಿರಾಮವಾಗಿ ಅಳವಡಿಸಿಕೊಳ್ಳುವ-ಆಮೂಲಕ ಏಟಿಗೆದಿರೇಟು ಎಂಬ ಸನ್ನಿವೇಶ ನಿರ್ಮಿಸಿ ಜಾಣತನ ತೋರಿಸುವ ಅರ್ಥಗಾರಿಕೆ, ಇನ್ನೂ ಹೆಚ್ಚೆಂದರೆ ಪಾತ್ರಧಾರಿಗಳ ಆಳವಾದ ಅಧ್ಯಯನಶೀಲತೆಯಿಂದ ದೊರೆಯಬಹುದಾದ ಕಥೆಯ ಆಳ-ಅಗಲದ ವ್ಯಾಪ್ತಿಗೆ ಮೆರುಗು ನೀಡುವ ಸಭಿಕರಿಗೆ ಗೊತ್ತಿರದ ಅಂಶಗಳ ಸೇರ್ಪಡೆ. ಯಕ್ಷಗಾನ ಸಮಗ್ರ ಕಲೆ ಎನಿಸಿಕೊಳ್ಳಲಿಕ್ಕೆ ಇದೂ ಒಂದು ಕಾರಣ. ಇಲ್ಲಿ ಪ್ರಸಂಗ ಪುಸ್ತಕಗಳಿವೆಯೇ ಹೊರತು ಕಥೆಗಳು ಗದ್ಯದಲ್ಲಿ ಹೇಳಲ್ಪಟ್ಟಿಲ್ಲ ಅಥವಾ ಸಂಭಾಷಣೆ ಬರೆಯಲ್ಪಟ್ಟಿಲ್ಲ. ಸಂಭಾಷಣೆ ಎಂಬುದು ಬಾಯಿಪಾಠ ಮಾಡಿಕೊಂಡು ಹೇಳುವ ರಿವಾಜಿನದಲ್ಲ. ಬದಲಾಗಿ ಅದು ವ್ಯಕ್ತಿಗತವಾಗಿರುತ್ತದೆ. ರಾಮನ ಪಾತ್ರ ನಿರ್ವಹಿಸುವಾತ ಶ್ರೀರಾಮನನ್ನು ಸಮಗ್ರವಾಗಿ ಅಧ್ಯಯನ ಮಾಡಿರಬೇಕು, ರಾಮನ ಜೀವನದ ಸಂಪೂರ್ಣ ಪರಿಚಯ ಆತನಿಗಿರಬೇಕು, ಜೊತೆಗೆ ಅಂದು ಆಡಲಿರುವ ಪ್ರಸಂಗದಲ್ಲಿ ಪೂರಕವಾಗಬಲ್ಲ ಅಂಶಗಳನ್ನು ಆತ ಹೇಳುವಂತಿರಬೇಕು. ಉದಾಹರಣೆಗೆ ಹನುಮಂತನಿಗೆ ವಾನರ ಸೈನ್ಯವನ್ನು ಕಟ್ಟುವಂತೇ ಶ್ರೀರಾಮ ಹೇಳುವಾಗ ವಾನರವೀರರ ಬಗೆಗಿನ ಮಾಹಿತಿ ರಾಮಪಾತ್ರಧಾರಿಗಿರಬೇಕು. ಹನುಮಂತನ ಪಾತ್ರಧಾರಿ ಜಾಂಬವ, ಅಂಗದ ಮೊದಲಾದ ಹಲವು ಹೆಸರುಗಳನ್ನು ಹೇಳುತ್ತಾನೆ. ಹನುಮನ ಪಾತ್ರ ನಿರ್ವಹಿಸುವ ವ್ಯಕ್ತಿಗೆ ಆ ಹೆಸರುಗಳೂ ಮತ್ತು ಅವರ ಪಾತ್ರಪರಿಚಯವೂ ಚೆನ್ನಾಗಿ ಇದ್ದರೆ ಮಾತು ಸರಾಗವಾಗಿಯೂ ಸುಂದರವಾಗಿಯೂ ಹೊರಹೊಮ್ಮಬಹುದು.

ಊರ ಜಾತ್ರೆಗಳಲ್ಲಿ ಪೂರ್ಣರಾತ್ರಿ ಯಕ್ಷಗಾನ ನೋಡುವ ಪರಿಪಾಟವಿತ್ತು. ಜಾತ್ರೆಯಲ್ಲಿ ತೇರನೇರಿ ಮೆರೆದು ಇಳಿದ ದೇವರು ಪಲ್ಲಕ್ಕಿಯಲ್ಲಿ ಕೂತು ಮೃಗಯಾವಿಹಾರಕ್ಕೆ ಭೇರಿತಾಡನದ ಮೂಲಕ ಹೋಗಿ ಬರುವ ಪದ್ಧತಿ ಇರುತ್ತದೆ. ನಮ್ಮಲ್ಲಿನ ಕೆಲವೆಡೆ ರಥವನ್ನು ಎಳೆಯುವುದು ಸಾಯಂಕಾಲ ೬:೦೦ ಗಂಟೆಗೆ. ಅದರ ನಂತರ ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಅಷ್ಟಿಷ್ಟು ಸುಡುಮದ್ದು ಪ್ರದರ್ಶನ. ಅದಾದ ನಂತರ ’ಮೃಗಯಾವಿಹಾರ’! ಮೃಗಯಾವಿಹಾರವೆಂದರೆ ಮೃಗಬೇಟೆ. ದೇವರನ್ನು ರಾಜನೆಂದೇ ಭಾವಿಸಿ ದೇವರಿಗೆ ರಾಜೋಪಚಾರ ಪೂಜೆ ನಡೆಸುವುದು ಜಾತ್ರೆಯ/ಉತ್ಸವದ ವೈಭವಗಳಲ್ಲೊಂದು ಅಂಗ. ವೇದ-ವೇದಾಂಗಗಳಿಂದಲೂ, ಸಂಗೀತ-ಸಾಹಿತ್ಯಗಳಿಂದಲೂ, ಶೃತಿ-ಮೌರಿ ವಾದ್ಯಗಳಿಂದಲೂ ಅಷ್ಟಾಂಗ ಸೇವೆ ನಡೆಸಿದ ಸ್ವಲ್ಪ ಸಮಯದಲ್ಲೇ ಉತ್ಸವ ಮೂರ್ತೀ-ಮಹಾರಾಜರನ್ನು ಪಲ್ಲಕ್ಕಿಯಲ್ಲಿಟ್ಟು, ರಾಜ ಮೃಗಬೇಟೆಗೆ ನಡೆದ ಎಂಬಂತಹ ಸನ್ನಿವೇಶವನ್ನು ಸೃಷ್ಟಿಸಿ, ಡೋಲು, ಭೇರಿ, ನಗಾರಿ, ಫಳ, ಶಂಖ, ಜಾಗಟೆ, ಕೊಂಬು-ಕಹಳೆ, ಪಂಚವಾದ್ಯ ಮೊದಲಾದ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಇಡೀ ರಥಬೀದಿಯುದ್ಧಕ್ಕೂ ಕರೆದೊಯ್ದು ಒಂದು ನಿಶ್ಚಿತ ಅರಳೀ ಕಟ್ಟೆಯೋ ಮತ್ತೆಲ್ಲೋ ಸ್ವಲ್ಪ ಹೊತ್ತು ವಿಶ್ರಮಿಸಿ, ಅಲ್ಲಿ ಮತ್ತೆ ಚಿಕ್ಕದೊಂದು ಆರತಿಯೋ ಲಘು ಪೂಜೆಯೋ ನಡೆಸಿ, ಮರಳಿ ದೇವರು ದೇವಸ್ಥಾನದೊಳಕ್ಕೆ ಬಿಜಯಂಗೈಯ್ಯುವಂತೇ ಮಾಡುವುದೇ ಮೃಗಯಾವಿಹಾರ. ಪಲ್ಲಕ್ಕಿಯಲ್ಲಿ ಈ ಸಮಯದಲ್ಲಿ ಸಾಂಕೇತಿಕ ಬಿಲ್ಲು-ಬಾಣಗಳೂ ಇಡಲ್ಪಡುತ್ತವೆ! ಮೃಗಯಾವಿಹಾರ ಮುಗಿದ ತರುವಾಯ ನಮ್ಮಂಥವರಿಗೆ ಯಕ್ಷಗಾನ ಇರದಿದ್ದರೆ ಜಾತ್ರೆ ಅಪೂರ್ಣ! ಎಷ್ಟೋ ಕಡೆ ದೇವರಿಗೆ ಹರಕೆ/ಸೇವೆಯ ಆಟವಾಗಿ ವೃತ್ತಿಮೇಳಗಳವರು ಅಂದು ಮುಫ್ತಿಯಾಗಿ ಆಟವನ್ನು ನಡೆಸಿಕೊಡುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಮಕ್ಕಳಾಡುವ ಆಟ ಮಕ್ಕಳಾಟವಾದರೆ ದೊಡ್ಡವರಾಡುವುದು ಬಹುತೇಕ ಯಕ್ಷಗಾನವೇ ಆಗಿತ್ತು, ಅದನ್ನೂ ಬಯಲಲ್ಲಿ ಆಡುತ್ತಿದ್ದುದರಿಂದ ’ಬಯಲಾಟ’ ಎಂಬ ಹೆಸರು ಪಡೆದಿತ್ತು.

ನಸುನಾಚಿದವಳ ಮೊಗ ಹಿಡಿದೆತ್ತಿ ಕೇಳಿ
ಪಿಸುಮಾತಲವಳ ಸೌಂದರ್ಯವನು ಹೇಳಿ

ಬಸಿದು ಕೊಡುವೆನು ಜೇನು ಸನಿಹಬಾರೆನುತ
ಕೊಸರಿಕೊಂಡವಳ ಬರಸೆಳೆದು ಕೂರೆನುತ

ಹಸೆಮಣೆಗೆ ಏರುವರು ಹೊಸದು ಎಂಥದಿದು ?
ಬಿಸಜನಾಭನ ದಯೆಯು ಎಮ್ಮಮೇಲಿಹುದು

ಶೃಂಗಾರ ರಸದ ಅಭಿವ್ಯಕ್ತಿಯಂತೂ ಬಹಳೇ ಮುದನೀಡುತ್ತದೆ. ಕಾಲಕ್ಕೆ ತಕ್ಕಂತೇ ನಮ್ಮ ಯುವ ಪೀಳಿಗೆಯ ಸ್ತ್ರೀ ವೇಷಧಾರಿಗಳು ಉಡುಪು-ತೊಡುಪುಗಳಲ್ಲಿ ಸಾಕಷ್ಟು ಮಾರ್ಪಾಟುಗಳನ್ನು ಮಾಡಿಕೊಂಡು ಇಂದಿನ ನಿಜವಾದ ಸ್ತ್ರೀಯರನ್ನೂ ನಾಚಿಸುವಷ್ಟು ನೈಜತೆಯನ್ನು ತಮ್ಮ ಕಲೆಗಾರಿಕೆಯಲ್ಲಿ ತೋರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶೃಂಗಾರ ಸನ್ನಿವೇಶಗಳಿಗೆ ತಕ್ಕಂತೇ ಪದ್ಯಗಳೂ ಹಂಸಧ್ವನಿ ರಾಗವನ್ನೋ ಮೋಹನ ರಾಗವನ್ನೋ ಬಳಸುವುದು ಬಹಳ ಚಂದ.

ಒಟ್ಟಂದದ ರಾಜನ ಒಡ್ಡೋಲಗದಿಂದ ಹಿಡಿದು ವನವಿಹಾರ, ಜಲಕ್ರೀಡೆ, ಪ್ರೇಮಸಲ್ಲಾಪ, ಯುದ್ಧ, ಸಂಧಾನ, ವಿಜಯಯಾತ್ರೆ, ಮದುವೆ, ವಿಯೋಗ, ವಿರಹ, ನಿರ್ಯಾಣ ಮೊದಲಾದ ಮಾನವ ಜೀವನದ ಎಲ್ಲಾ ಮಜಲುಗಳನ್ನೂ ದಶಾವತಾರದ ಕಥೆಗಳ ಮೂಲಕ ತಿಳಿಸುವ ಈ ಕಲೆಗೆ ಈಗೀಗ ಸಾಮಾಜಿಕ ಕಥೆಗಳೂ ಸೇರಿವೆಯಾದರೂ ಪೌರಾಣಿಕ ಕಥಾಭಾಗಗಳ ನೀತಿಬೋಧೆಯನ್ನು ಹೇಳುವಲ್ಲಿ ಸಾಮಾಜಿಕ ಕಥೆಗಳು ಹಿಂದೆಬೀಳುತ್ತಿವೆ. ಮೇಲಾಗಿ ಇಂದಿನ ಯಕ್ಷಗಾನದ ಕವಿಗಳು ಛಂದಸ್ಸನ್ನೂ ವ್ಯಾಕರಣವನ್ನೂ ಮನಸಿಗೆ ಬಂದ ಹಾಗೇ ಬಳಸುತ್ತಿದ್ದಾರೆ ಎಂಬುದೂ ತೋರಿಬರುತ್ತದೆ. ಯಕ್ಷಗಾನ ಕಲೆ ಬಾಳಬೇಕಾದರೆ ಅದನ್ನು ಪೌರಾಣಿಕ ಪ್ರಸಂಗಗಳಿಗಷ್ಟೇ ಮೀಸಲಾಗಿರಿಸಬೇಕು ಎಂಬುದು ಹಲವು ಯಕ್ಷಗಾನ ಪ್ರಿಯರ ಅನಿಸಿಕೆಯಾಗಿದೆ.

ಪ್ರಸವ ವೇದನೆಯಲ್ಲಿ ಛಂದಗಳ ಮರೆತು
ಹಸಿದವಗೆ ಉಣಬಡಿಸೆ ಅದು ಹೋಕು ಸೋತು !

ಕಸವ ಗುಡಿಸುವುದದರ ಧರ್ಮ ಮೂಲದಲಿ
ಒಸಗೆ ಈವುದೆ ರೀತಿ ನೀತಿ ಮಾರ್ಗದಲಿ ?

ಕೆಲವರು, ಯಕ್ಷಗಾನದ ಬೆಳವಣಿಗೆಗೆ ಹೊಸಹೊಸ ಪ್ರಸಂಗಗಳ ಸೇರ್ಪಡೆಯೂ ಆಗಬೇಕು ಎನ್ನುವವರಿದ್ದಾರೆ. ನನ್ನ ದೃಷ್ಟಿಕೋನ ಹೀಗಿದೆ: ಪುರಾಣಗಳಲ್ಲಿ ಇನ್ನೂ ಹಲವು ಸನ್ನಿವೇಶಗಳಿವೆ; ಅವುಗಳಿನ್ನೂ ಯಕ್ಷಗಾನದಲ್ಲಿ ಪ್ರಸಂಗಗಳಾಗಿ ಅಳವಡಿಕೆಯಾಗಿಲ್ಲ! ನವಕವಿಗಳು ಯಾರು ಯಕ್ಷಗಾನ ಬರೆಯುತ್ತಾರೋ ಅಂಥವರು ಪುರಾಣಗಳನ್ನು ಸರಿಯಾಗಿ ಅರಿತುಕೊಂಡರೆ, ಆಗ ಹೊಸ ಪೌರಾಣಿಕ ಪ್ರಸಂಗಗಳನ್ನೇ ಸಿದ್ಧಪಡಿಸಬಹುದಾಗಿದೆ. ಹಾಗೆ ಬರೆಯುವಾಗ ಕನ್ನಡದ ವ್ಯಾಕರಣ, ಛಂದಸ್ಸು, ಪ್ರಾಸ ಇವುಗಳನ್ನೆಲ್ಲ ಕರತಲಾಮಲಕವನ್ನಾಗಿ ಮಾಡಿಕೊಂಡು ಬರೆದರೆ ಉತ್ತಮ. ರಂಜನೆಯ ಜೊತೆಜೊತೆಗೆ ಸಮಾಜದಲ್ಲಿನ ಕೊಳೆಯನ್ನು ತೊಳೆಯಲು ಯಕ್ಷಗಾನ ಪ್ರಸಂಗ ಬಳಸುವಂತಿರಬೇಕು. ಹೇಗೋ ಬರೆದು ಮುಗಿಸಿ ಆಡಲು ಕೊಟ್ಟರೆ ಆಗ ಪ್ರಸಂಗವೇನೋ ರಂಜಿಸಬಹುದಾದರೂ ಇಂದಿನ ಕಮರ್ಷಿಯಲ್ ಸಿನಿಮಾಗಳ ರೀತಿ ಮೌಲ್ಯಗಳು ನೆಲಕಚ್ಚುವ ಸಾಧ್ಯತೆಯೇ ಜಾಸ್ತಿ.

ಯಕ್ಷಗಾನವೆಂಬ ನಮ್ಮ ಕನ್ನಡನೆಲದ ಈ ಅದ್ಭುತ ಕಲೆ ಸದಾ ಎಲ್ಲೆಡೆ ದಂತಕಥೆಯಾಗಿರಲಿ; ಎಲ್ಲೆಲ್ಲೂ ಜನ ಖುಷಿಯಿಂದ ನೋಡಿ ಆನಂದಪಡುವ ಸ್ಥಾನಮಾನ ಕಾಪಾಡಿಕೊಳ್ಳಲಿ; ಮಾನವ ಸಹಜಧರ್ಮದ ನೀತಿಧ್ಯೇಯಗಳನ್ನು ಎತ್ತಿಹಿಡಿಯಲಿ ಎಂದು ಆಶಿಸುತ್ತಾ, ಯಕ್ಷಗಾನ ಪಾತ್ರಧಾರಿಗಳಿಂದಲೂ, ಸೂತ್ರಧಾರಿಗಳಿಂದಲೂ ಮತ್ತು ಪ್ರಸಂಗಕರ್ತರಿಂದಲೂ ಅದನ್ನೇ ಅಪೇಕ್ಷಿಸುತ್ತಾ, ನಿರೀಕ್ಷಿಸುತ್ತಾ ಮತ್ತೆ ಅವರೆಲ್ಲರಿಗೂ ಶುಭ ಹಾರೈಸುತ್ತಾ, ಎತ್ತಿದ ಸ್ವರಚಿತ ಪದ್ಯದ ಸೊಲ್ಲಿನಿಂದಲೇ ಮಂಗಳಹಾಡುತ್ತಿದ್ದೇನೆ :

ರಸಿಕ ಜನಗಳೆ ಕೇಳಿ ರಸದ ಔತಣವ
ಕಸುವ ತೋರುವ ಕಲೆಯ ಬಿಸುಪಿನಾಲಯವ

Sunday, April 8, 2012

’ಭೀಮಾ ತೀರದಲ್ಲಿ’ ಎಸೆದ ಕಲ್ಲಿಗೆ ಹಣ್ಣು ಬೀಳಲೇ ಇಲ್ಲ!


’ಭೀಮಾ ತೀರದಲ್ಲಿ’ ಎಸೆದ ಕಲ್ಲಿಗೆ ಹಣ್ಣು ಬೀಳಲೇ ಇಲ್ಲ!

ಪತ್ರಕರ್ತರೆಲ್ಲಾ ಸಾಹಿತಿಗಳಲ್ಲ, ಆದರೆ ಸಾಹಿತಿಗಳು ಪತ್ರಕರ್ತರಾಗಲೂ ಬಹುದು ಎಂಬುದು ನನ್ನ ಅನಿಸಿಕೆ. ಭಾಷಾ ಪ್ರೌಢಿಮೆಯನ್ನು ಬೆಳೆಸಿಕೊಂಡು ಕೆಲವರು, ಹಲವು ಸಾಹಿತಿಗಳ ಮತ್ತು ಜನಪದರ ಪದಪುಂಜಗಳನ್ನು ಅಲ್ಲಲ್ಲಿ ಬಳಸುತ್ತಾ, ಹೊಸದೇನನ್ನೋ ಕೊಡುತ್ತೇನೆ ಎನ್ನುತ್ತಾ ಹಳೆಯ ಹೆಂಡವನ್ನೇ ಹೊಸ ಬಾಟ್ಲಿಯಲ್ಲಿ ತುಂಬಿಸಿ ಕುಡಿಯಬಹುದಾದ ಅಮಾಯಕರಿಗೆ ಕುಡಿಸಲೂಬಹುದು. ಮತ್ತೇರುವ ಅಭ್ಯಾಸ ಬೆಳೆಸಿಕೊಂಡ ಆ ಜನಕ್ಕೆ ಮೊದಲು ಕೊಟ್ಟ ಒಂದು ಲೋಟದ ನಂತರ ಸುರುವಿದ್ದೆಲ್ಲಾ ಚರಂಡಿ ನೀರೇ, ಆದರೂ ಗೊತ್ತಾಗುವುದಿಲ್ಲ! ಕೊಳೆತ ನಾಯಿಮರಿಯೂ ಸೇರಿದಂತೇ ಹಲವು ಹೊಲಸು ತುಂಬಿ ಹುಳಗಳಿಂದ ನಾರುವ ಹುಳಿನೀರಿನ ಬಗ್ಗಡವನ್ನು ಬೇಯಿಸಿ ಕಳ್ಳಭಟ್ಟಿ ಇಳಿಸಿ ಕೊಟ್ಟರೂ ಅಂಥವರು ಕುಡಿದೇ ಕುಡಿಯುತ್ತಾರೆ! ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದನ್ನು ಗುರುತಿಸಲಾಗದ ಒಂದು ಓದುಗವರ್ಗ ಸಮಾಜದಲ್ಲಿದೆ. ಅವರಿಗೆ ಪಕ್ಕದ ಮನೆಯ ಯಮುನಾ ಯಾರ ಜೊತೆಗೋ ರಾತ್ರಿ ಮಲಗುವ ಗಾಳಿ ಸುದ್ದಿಬೇಕು ! ಕೊನೇಮನೆ ಲಕ್ಷ್ಮೀನಾರಣಪ್ಪನ ಮಗಳು ಪಾರು ಅದ್ಯಾವುದೋ ಹುಡುಗನ ಜೊತೆ ಪರಾರಿಯಾದ ಇತಿಹಾಸ ಬೇಕು. ಮಿಕ್ಕುಳಿದಂತೇ ರಾಜಕಾರಣಿಗಳು, ಸಿನಿಮಾಮಂದಿ ಕದ್ದುಮುಚ್ಚಿ ಬಿಚ್ಚುತ್ತಾ ಬೋರಲಾಗುವ ರಂಜನೀಯ ವ್ಯಂಜನಗಳ ಗಂಟು ಬರುತ್ತಲೇ ಇರಬೇಕು. ನಡೆದದ್ದೆಷ್ಟೋ ಸುಮ್ನೇ ಕಟ್ಟಿಬರೆದಿದ್ದೆಷ್ಟೋ ಲೆಕ್ಕಕ್ಕೇ ಇಲ್ಲ! ಬರೆದಿದ್ದೆಲ್ಲಾ ಸತ್ಯ, ಅವು ವೇದಗಳಷ್ಟೇ ಮಾನ್ಯ ಎಂದು ಸಮರ್ಥಿಸಿಕೊಳ್ಳುವ ಕೆಲವರನ್ನು ಅಲ್ಲಗಳೆಯಲು ಆ ಓದುಗವರ್ಗ ಒಪ್ಪುವುದಿಲ್ಲ. ಅದು ನಡೆದುಬಂದ ಬಿಡಲಾರದ ಹೆಂಡದ ಸಹವಾಸ!

ಪತ್ರಕರ್ತರಾದವರಲ್ಲಿ ಬದಲಾವಣೆಯೆ ಗಾಳಿ ಬೀಸಿದ್ದು ಒಂದೆರಡು ಕೆಟ್ಟ ಪತ್ರಿಕೆಗಳಿಂದ. ಅವುಗಳ ಯಜಮಾನರುಗಳು ರೋಲ್ ಕಾಲ್ ಆರಂಭಿಸಿದ್ದರಿಂದ. ದಶಕಗಳ ಹಿಂದೆ ಅದನ್ನು ಆರಂಭಿಸಿದ ಒಬ್ಬಾತ ಮಠಮಾನ್ಯಗಳ ಹಿಂದೆ ಬಿದ್ದ. ಮಂಚದಕೆಳಗೆ ಸಂಸಾರ ನಡೆಸುವ ಹಲವು ಸಂಸಾರಿಗಳ-ಮಠಗಳ ಜೊತೆಗೆ ಉತ್ತಮ ಸಾಮಾಜಿಕ ಮೌಲ್ಯವರ್ಧನೆಗಾಗಿ, ಅಸ್ಥಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಮಠಗಳೂ ಆ ಯಾದಿಯಲ್ಲಿದ್ದವು. ಒಂದಾದಮೇಲೊಂದರಂತೇ ವರದಿ ಮಾಡುತ್ತಾ ನಡೆದ ಆತ ಸನ್ಯಾಸಿಯೊಬ್ಬರಿರುವ ಮಠವೊಂದಕ್ಕೆ ಕರೆಮಾಡಿದ! ಅವರದಕ್ಕೆ ಸೊಪ್ಪು ಹಾಕಲಿಲ್ಲ. ಊದಿದ ರಣಕಹಳೆಗೆ ತಲೆಬಾಗುತ್ತಾರೆಂಬ ’ಜಾಣ’ನ ಧೋರಣೆ ತಲೆಕೆಳಗಾಗಿತ್ತು. ಪತ್ರಿಕೆಯಲ್ಲಿ ಅತಿ ಕೆಟ್ಟಪದಗಳಲ್ಲಿ ಕಥೆ ಹುಟ್ಟಿಸಿ ಬರೆದ. ಸಮಾಜದ ಆ ವರ್ಗದ ಓದುಗರು ಆಗಲೂ ಇದ್ದರಲ್ಲಾ ಅವರು ಓದಿ ಖುಷಿಪಟ್ಟರು. ಕೆಲವೇ ದಿನಗಳಲ್ಲಿ ಇನ್ಯಾರಿಂದಲೋ ಮೂಳೆ ಮುರಿಯುವಷ್ಟು ಚೆನ್ನಾಗೇ ಹೊಡೆತವನ್ನೂ ತಿಂದ! [ಸನ್ಯಾಸಿಗಳ ಮನ ನೋಯಿಸಿದ್ದಕ್ಕೆ ಇರಬಹುದೇ?] ಕಾಲ ಒಂದೇ ರೀತಿ ಇರುವುದಿಲ್ಲವಲ್ಲ, ಈಗ ಆ ಪತ್ರಿಕೆ ಹೇಳಹೆಸರಿಲ್ಲ; ಯಾರೂ ಸರಿಯಾಗಿ ಮೂಸಿಯೂ ನೋಡುವುದಿಲ್ಲ.

ಅದೇ ಗರಡಿಯಲ್ಲಿ ಕೆಲವರು ಬೆಳೆದರು! ತಿಂಗಳ ಖರ್ಚಿಗೆ ಹಣ ಕಮ್ಮಿಯಾಗಿದ್ದಕ್ಕೆ ಅಪರೂಪಕ್ಕೆ ರೋಲ್ ಕಾಲ್ ಮಾಡುತ್ತಿದ್ದ ಅವರಿಗೆ ಕ್ರಮೇಣ ಅದೇ ಮಾಮೂಲಾಗಿಹೋಯ್ತು! ಮಾತೆತ್ತಿದರೆ ’ನಿನ್ನ ಸುದ್ದಿ ಪತ್ರಿಕೇಲಿ ಬರೆದು ಮಾನ ಹರಾಜು ಹಾಕ್ತೀನಿ ಇಲ್ಲಾಂದ್ರೆ ಇಷ್ಟು ಕೊಡು’ ಎಂಬ ಹೇಳಿಕೆ. ಒಬ್ಬಾತ ತಾನು ಮಾಡಿದ ಪತ್ರಿಕೆಯ ತುಂಬೆಲ್ಲಾ ಬರೆದಿದ್ದು: ಕೊಲೆ-ಮಾನಭಂಗ ಆಧರಿಸಿದ ರೋಚಕ ಕಥೆಗಳನ್ನು, ಅನೈತಿಕ ಸಂಬಂಧಗಳ ಕುರಿತಾಗಿ ಕಟ್ಟಿದ ಕಥೆಗಳನ್ನು, ಪರನಿಂದನೆಯ ಕೆಟ್ಟ ಲೇಖನಗಳನ್ನು, ರಾಜಕೀಯ ಮತ್ತು ಸಿನಿಮಾಮಂದಿಗಳ ಕುರಿತಾದ ಸ್ವಲ್ಪ ’ಇದ್ದದ್ದೂ’ ಬಹಳ ’ಇಲ್ಲದ್ದೂ’ ಸೇರಿಸಿದ ವ್ಯಂಜನಗಳನ್ನು! ಬಹುತೇಕ ಪತ್ರಿಕೆ ನಡೆದಿದ್ದೇ ಕಾಮಕೇಳಿಗಳ ಕುರಿತಾದ ಕೆಟ್ಟ ರಂಜನೀಯ ಪದಗಳಿಂದ ಮತ್ತು ಹೆಗ್ಗಣಬಿದ್ದು ಹೊಲಸು ನಾರುವ ಕಡ್ಲೇಹಿಟ್ಟನ್ನೇ ಬಳಸಿ ಕಮಟುತ್ತಿರುವ ಎಣ್ಣೆಯಲ್ಲಿ ಬಜ್ಜಿ-ಬೋಂಡಾ ಕರಿದು ಕೊಟ್ಟ ಸಾಹಸಗಾಥೆ! ಓದುಗರ ಆ ವರ್ಗ ಬರೆದಿದ್ದೆಲ್ಲವನ್ನೂ ಕಣ್ ಕಣ್ ಬಿಟ್ಟು ಓದಿದರು! ಅದೇ ವರ್ಗ ಅಭಿಮಾನೀ ಬಳಗವಾಗಿಯೂ ಬೆಳೆಯಿತು!

ಇಂದಿನ ಸಮಾಜದಲ್ಲಿ ಒಳಿತನ್ನು ಮಾಡಿದರೆ ಫ್ಯಾನ್ ಫಾಲೋವಿಂಗ್ ಯಾರಿಗೂ ಇರುವುದಿಲ್ಲ! ಅದೇ, ಕೆಡುಕನ್ನು ಮಾಡಿದರೆ ಮಾರನೇ ದಿನದಿಂದಲೇ ಹಲವು ಜನ ಹಿಂಬಾಲಕರು ತಯಾರಾಗುತ್ತಾರೆ-ಹೀಗಾಗುತ್ತಿರುವುದು ದುರಂತ. ಅಭಿಮಾನಿಗಳ ಖದರ್ ಗಮನಿಸಿ ಅವರನ್ನು ಆದಷ್ಟೂ ಹೊಗಳುತ್ತಾ ಅಟ್ಟಕ್ಕೆ ಏರಿಸಿ ತನ್ನ ಬೇಳೇ ಬೇಯಿಸಿಕೊಂಡ ಪತ್ರಿಕೆಯಾತನ ಹಣದ ಥೈಲಿ ತುಂಬುತ್ತಲೇ ನಡೆಯಿತು. ಸಹಜವಾಗಿ ಊರಿದ್ದಲ್ಲಿ ಹೊಲಗೇಡು ಎಂಬಂತೇ ಅಲ್ಲಲ್ಲಿ ಬೇಡದ ಘಟನೆಗಳು ಸಂಭವಿಸುತ್ತಿರುವುದರಿಂದಲೂ, ಅವುಗಳಲ್ಲೇ ಪರ ಮತ್ತು ವಿರೋಧಿ ಬಣಗಳಿರುವುದರಿಂದಲೂ, ಯಾರಿಂದ ಹೆಚ್ಚಿಗೆ ಸಿಗುತ್ತದೋ ಅವರಿಗೆ ಪೂರಕವಾಗಿ ವರದಿಗಳು ಪ್ರಕಟವಾದವು! ಪತ್ರಿಕಾಧರ್ಮವೆಲ್ಲ ಇರಲಿ, ಕೊನೇಪಕ್ಷ ಸಮಾಜಕ್ಕೆ ತಾನು ಕೊಡುತ್ತಿರುವ ಮೌಲ್ಯಯುತ ಕೃತಿಗಳೇನು ಎಂಬುದನ್ನು ತಿಳಿಯದೇ ಕೇವಲ ಸ್ವಾರ್ಥಿಯಾಗಿ ಬರೆದಿದ್ದೇ ಬರೆದಿದ್ದು; ಜಿಲೆಟಿನ್ ಟ್ಯಾಬ್ಲೆಟ್ ಹಾಕಿ ಸ್ವಚ್ಛವಾಗಿ ಕಾಣುವಂತೇ ಮಾಡಿದ ನೀರನ್ನು, ’ಶುದ್ಧ ಮಿನರಲ್ ವಾಟರ್’ ಎಂದು ಕ್ಯಾನ್ ಗಳಲ್ಲಿ ತುಂಬಿಸಿ ಮಾರಾಟಮಾಡಿ ಹಣ ಎಣಿಸಿಕೊಳ್ಳುವ ಕೆಲಮಂದಿಯಂತೇ ತನ್ನ ಪತ್ರಿಕೆಯಲ್ಲಿ ಇಂತಹ ವರದಿಗಳು ಬರುತ್ತಿರುವುದೇ ನಿಮ್ಮ ಪುಣ್ಯ ಎನ್ನುವ ರೀತಿಯಲ್ಲಿ ಬರೆದ!

ಗಂಟುಗಳು ಬಂದವು! ಹೊಸಹೊಸ ಜಾಗಗಳ ಖರೀದಿ ನಡೆಯಿತು. ಹೊಸಹೊಸ ಕಟ್ಟಡಗಳು ತಲೆ ಎತ್ತಿದವು. ಹಣಮಾಡುವ ’ವಿದ್ಯಾಕೇಂದ್ರ’ಗಳೂ ಹುಟ್ಟಿದವು. ಈಗ ಕೋಟ್ಯಂತರ ವಹಿವಾಟು! ಸದಾ ಬೇರೇ ಜನರ ಬಗ್ಗೇ ಬರೆಯುತ್ತಾ ಕಾಸೆಣಿಸಿಕೊಂಡಾತ ಬರೆದಿದ್ದು ಅನುವಾದಿತ ಕೆಲವು ಕೃತಿಗಳು, ಮತ್ತದೇ ಕಾಮಕಾಂಡಗಳ ಬಗೆಗಿನ ಪುಸ್ತಕಗಳು, ಯಾರೋ ಅಲ್ಲೆಲ್ಲೋ ಕದ್ದು ಹಣಮಾಡಿದರು ಎಂದು ಬೊಟ್ಟುಮಾಡುವ ಕೃತಿಗಳು, ಯಾವುದೋ ಭಾಷೆಯಲ್ಲಿ ಖ್ಯಾತವಾದ ಕೆಲವು ಕೃತಿಗಳ ಸಮ್ಮಿಶ್ರಿತ ರೂಪವಾಗಿ ’ತನ್ನದೇ ಹೊಸದೆ’ಂದು ಪ್ರಕಟಿಸಿದ ರಟ್ಟೆಗಾತ್ರದ ಕೃತಿಗಳು--ಹೀಗೇ ಎಲ್ಲವೂ ಒಟ್ಟಾರೆ ಕೃತಿಗಳೇ ಹೊರತು ಬರೆದ ಅಷ್ಟೂ ಪುಸ್ತಕಗಳಲ್ಲಿ ಸಾಮಾಜಿಕವಾಗಿ ಯಾವ ಉತ್ತಮ ಸಂದೇಶಗಳಿವೆ ? ಯಾವ ಉತ್ತಮ ಸಂಸ್ಕೃತಿಯನ್ನು ಅವು ಬಿಂಬಿಸುತ್ತವೆ ಎಂಬುದನ್ನು ಸಮಾಜವೇ ತಿಳಿದು ನೋಡಬೇಕಾಗಿದೆ. ಕೇವಲ ತನ್ನ ಭಾಷಾ ಪ್ರೌಢಿಮೆಯಿಂದಲೂ, ಗಳಿಸಿದ ಅಪಾರ ಸಂಪತ್ತಿನಿಂದಲೂ ಇವತ್ತು ಕವಿ-ಸಾಹಿತಿಗಳನ್ನು ಖರೀದಿಸುವ ಮಟ್ಟಕ್ಕೆ ಬೆಳೆದದ್ದು ನೋಡಿದರೆ ಯುಗಧರ್ಮ ಸುಳ್ಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕರೆದಾಗ ಹೋಗದಿದ್ದರೆ ತಮ್ಮ ಬಗ್ಗೂ ಅಪಸ್ವರದಲ್ಲಿ ಕೂಗಬಹುದೆಂಬ ಅನುಮಾನದಿಂದಲೋ ಅಥವಾ ಅಷ್ಟೆಲ್ಲಾ ಸರ್ತಿ ಕರೆದಾಗ ಹೋಗದೇ ಇರುವುದು ತಮ್ಮ ಧರ್ಮವಲ್ಲ ಎಂಬ ಅನಿಸಿಕೆಯಿಂದಲೋ ಅನೇಕ ಕವಿ-ಸಾಹಿತಿಗಳೂ ಆಗಾಗ ಆತ ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು; ಅನಿವಾರ್ಯವಾಗಿ ಹಾಡಿಹೊಗಳಿದರು.

ಮಹಾನ್ ಲಂಪಟನಾದ ಆತನಿಗೆ ಹೊಗಳಿಸಿಕೊಳ್ಳುವುದೆಂದರೆ ಪರಮಪ್ರೀತಿ. ಹಸಿರು ಹುಲ್ಲನ್ನು ಕಂಡ ಜಾನುವಾರುಗಳು ನೆಟ್ಟಗೆ ಅಲ್ಲಿಗೇ ದೌಡಾಯಿಸಿದಂತೇ ’ಮೇವು’ಕಂಡರೆ ಬಿಡುವ ಜಾಯಮಾನದ್ದಲ್ಲ ಈ ಪಾರ್ಟಿ! ಅನೇಕ ಹೆಂಗಸರೂ ಹುಡುಗಿಯರೂ ತಮ್ಮ ಮನೆಗಳಲ್ಲಿ ಆಶ್ರಯವನ್ನೇ ಕಳೆದುಕೊಂಡಿದ್ದು ಈತನ ಹಲ್ಕಟ್ ಲೇಖನಗಳಿಂದ. ಹುಟ್ಟಿಸಿ ಕಟ್ಟಿಬರೆದ ಕಥೆಗಳಿಂದ ಮರ್ಯಾದೆಗೆ ಅಂಜಿ ಸತ್ತುಹೋದವರು ಅದೆಷ್ಟು ಮಂದಿಯೋ ಲೆಕ್ಕ ಸಿಗುತ್ತಿಲ್ಲ. ಸದಾ ಬೇರೇ ವ್ಯಕ್ತಿಗಳ ವೈಯ್ಯಕ್ತಿಕ ಬದುಕಿನ ಬಗ್ಗೇ ಕಾತುರನಾಗಿ, ಬೊಕ್ಕಸಕ್ಕೆ ಕಾಣಿಕೆ ಬಾರದಿದ್ದಾಗ ತನಗೆ ಬೇಕಾದ ರೀತಿಯಲ್ಲಿ ಬರೆಯುವ ಆತನ ವೈಯ್ಯಕ್ತಿಕದಲ್ಲಿ ಅದೆಷ್ಟು ಹೆಣ್ಣುಗಳು ಮಗ್ಗುಲಾಗಿ ನರಳಿದವೋ ಶಿವನೇ ಬಲ್ಲ! ಕೇವಲ ಭಾಷಾಪ್ರೌಢಿಮೆಯಿಂದ ಆಡುವ ಮಾತುಗಳು ರಸಬೆಲ್ಲ; ಅದಕ್ಕೆ ತಲೆದೂಗದ ಶ್ರೋತ್ರಗಳಿಲ್ಲ! ಪರಿಸ್ಥಿತಿಯನ್ನು ತನಗೆ ಬೇಕಾದಹಾಗೇ ತಿರುಗಿಸಿಕೊಳ್ಳುವ ಸನ್ನಾಹದಲ್ಲಿ ಬಹುತೇಕ ಯಶಸ್ವಿಯಾಗುತ್ತಿದ್ದ ಆತ ನಿನ್ನೆ ಎಸೆದ ಕಲ್ಲಿಗೆ ಮಾತ್ರ ಹಣ್ಣು ಬೀಳಲೇ ಇಲ್ಲ; ಬದಲಾಗಿ ಹೊಡೆದ ಕಲ್ಲು ಮರಳಿ ಆತನ ಮೈಮೇಲೇ ಬಿದ್ದಿದ್ದು ಹಲವರಿಗೆ ಮಜವಾಗಿ ಗೋಚರಿಸಿತು!

ತನ್ನ ಮತ್ತು ತನ್ನ ಬಳಗದ ಯಾವುದೇ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ವೈಯ್ಯಕ್ತಿಕ ಪ್ರವಾಸ, ಸಿನಿಮಾ ಏನೇ ಇದ್ದರೂ ಅವುಗಳೆಲ್ಲದರ ಬಗ್ಗೆ ’ಅಪಾರ’ದರ್ಶಕವಾಗಿ ಪತ್ರಿಕೆಯಲ್ಲಿ ಕೊಚ್ಚಿಕೊಳ್ಳುವ ಆ ಪತ್ರಕರ್ತ ತನ್ನನ್ನು ಬಿಟ್ಟರೆ, ಕನ್ನಡನೆಲದಲ್ಲಿ ಬರವಣಿಗೆಯಲ್ಲಿ ಟಾಪ್ ಮೋಸ್ಟ್ ಎನಿಸುವ ಬೇರೇ ಯಾರೂ ಸಿಗುವುದಿಲ್ಲ ಎಂಬ ಹಮ್ಮು ಬೆಳೆಸಿಕೊಳ್ಳುವುದರ ಜೊತೆಗೆ, ಇಡೀ ಪತ್ರಿಕೆ ಆತನನ್ನೇ ಪರೋಕ್ಷ ಸ್ತುತಿಸುತ್ತಿರುವಂತೇ ಮಾಡಿ ಓದುಗರ ಆ ವರ್ಗಕ್ಕೂ ಅದೇ ಭ್ರಮೆ ಹುಟ್ಟಿಸಿಬಿಟ್ಟಿದ್ದಾನೆ. ತನ್ನ ಪುಸ್ತಕಗಳು ಅಷ್ಟು ಖರ್ಚಾದವು ಇಷ್ಟು ಖರ್ಚಾದವು ಎಂದು ಡಂಗುರ ಸಾರಿಕೊಳ್ಳುವ ಮನೋವೃತ್ತಿ ಪ್ರತೀ ಸಂಚಿಕೆಯಲ್ಲೂ ಢಾಳಾಗಿ ಕಾಣುತ್ತದೆ. ದಿನಪತ್ರಿಕೆಯನ್ನೋ ವಾರಪತ್ರಿಕೆಯನ್ನೋ ನಡೆಸುವ ಇತರ ಕೆಲವರು ’ಗೆಸ್ಟ್ ರೈಟರ್’ ಅಥವಾ ಅಂಕಣಬರಹಗಾರನಾಗಿ ಕರೆದಿದ್ದಾರೆ- ಅವರಿಗೆ ಗೊತ್ತು ತನ್ನ ತಾಕತ್ತು ಎಂದು ತನ್ನನ್ನು ತಾನೇ ಪ್ರತೀ ಹೆಜ್ಜೆಯಲ್ಲೂ ಹೊಗಳಿಕೊಳ್ಳುವ ಆತನಿಗೆ, ಬೇರೇ ಯಾರೋ ತಮ್ಮನ್ನು ಸ್ವಲ್ಪ ಮಟ್ಟಿಗೆ ಹೊಗಳಿಕೊಂಡರೆ ಅದಕ್ಕೆ ’ಸ್ವಕುಚಮರ್ದನ’ ಎಂಬ ಪದವನ್ನು ಬಳಸಿ ಟೀಕಿಸುವ ಸ್ವಭಾವ.

ಸಮಾಜದಲ್ಲಿ ಯಾವುದೋ ಪ್ರದೇಶದಲ್ಲೋ ಹಳ್ಳಿಯ ಮೂಲೆಯಲ್ಲೋ ನಡೆದ ಯಾವುದೇ ಘಟನೆಗಳನ್ನು ವರದಿಯಾಗಿ ಪ್ರಕಟಿಸಿದರೆ ಅದು ಲೇಖಕನ ಇಂಟೆಲೆಕ್ಚ್ವಲ್ ಪ್ರಾಪರ್ಟಿ ಆಗುವುದಿಲ್ಲ. ಲೇಖಕ ತನ್ನ ಸ್ವಂತಿಕೆಯಿಂದ ಪಾತ್ರಗಳನ್ನು ಕಲ್ಪಿಸಿಕೊಂಡೋ, ಯಾವುದೋ ಸ್ಫೂರ್ತಿಯನ್ನು ಪಡೆದು ಅದನ್ನು ಆಧಾರವಾಗಿಟ್ಟುಕೊಂಡೋ ಕಥೆ, ಕಾದಂಬರಿಗಳನ್ನೋ ಕೃತಿಗಳನ್ನೋ ಬರೆದರೆ ಆಗ ಮಾತ್ರ ಅವು ಆತನ ಇಂಟೆಲೆಕ್ಚ್ವಲ್ ಪ್ರಾಪರ್ಟಿಯಾಗುತ್ತವೆ. ಎಲ್ಲೋ ನಡೆದ ಘಟನೆಗಳನ್ನು "ನಾನು ಮೊದಲಾಗಿ, ಖುದ್ದಾಗಿ ಹೋಗಿ ಇದ್ದು, ಊಟಮಾಡಿ, ನೋಡಿ, ಕೇಳಿ, ಗ್ರಹಿಸಿ ವರದಿ ಬರೆದೆ" ಎಂದಮಾತ್ರಕ್ಕೆ ಅದು ಅದು ಹಕ್ಕುಸ್ವಾಮ್ಯದ ಕಥೆಯಲ್ಲ! ಅಲ್ಲಿ ನಡೆದಿದ್ದ ಅಹಿತಕರ ಘಟನೆಗಳ ವರದಿಯನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ತಿಳಿದುಕೊಳ್ಳಬಹುದು, ವರದಿಯನ್ನೂ ತಯಾರಿಸಿಕೊಳ್ಳಬಹುದು. ಅಲ್ಲಿನ ಘಟನೆಗಳನ್ನು ಆಧರಿಸಿ ಸಿನಿಮಾವನ್ನೋ ನಾಟಕವನ್ನೋ ತಯಾರು ಮಾಡಿದರೆ ಅದರಲ್ಲಿ ತಪ್ಪೇನೂ ಇರುವುದಿಲ್ಲ.

ಸಿನಿಮಾಗಳು ಹಣಮಾಡಲೆಂದೇ ಇರುವುದಾದರೆ ಹಲವು ನಿರ್ಮಾಪಕ ನಿರ್ದೇಶಕರು ನಿದ್ರೆಮಾತ್ರೆಗಳ ಮೊರೆಹೋಗುತ್ತಿರಲಿಲ್ಲ. ಉತ್ತಮ ಸಿನಿಮಾಗಳನ್ನು ತಯಾರಿಸಿದ ಕೆಲವರು ಹಣವನ್ನು ಎಣಿಸಿಕೊಂಡರು ಎಂಬುದರಲ್ಲೂ ಎರಡು ಮಾತಿಲ್ಲ. ಸದ್ಯಕ್ಕೆ ’ಭೀಮಾತೀರದಲ್ಲಿ’ ಎಂಬ ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯಗಳು ಹಬ್ಬಿವೆ. ವಾಣಿಜ್ಯಕವಾಗಿ ತಯಾರಿಸಿಲಾದ ರಂಜನೀಯ ಸಿನಿಮಾ ಅದು ಎಂಬುದನ್ನು ಜನ ಹೇಳತೊಡಗಿದ್ದಾಗಲೇ ’ನಿರ್ಮಾಪಕನಿಗೆ ಬೆದರಿಕೆಯ ಕರೆ’ ಎಂಬ ಸುದ್ದಿ ಬಂತು. ಮಧ್ಯಾಹ್ನದ ಹೊತ್ತಿಗೆ ಮಾಧ್ಯಮ ವಾಹಿನಿಯೊಂದರಲ್ಲಿ ಕೇಳಿಬರುತ್ತಿದ್ದ ದೂರವಾಣಿಯ ಮಾತುಗಳಲ್ಲಿ, ಪೊದೆಯ ಹಿಂದೆ ನಿಂತ ಹುಲಿಯ ಘರ್ಜನೆ ಕೇಳಿಬರುತ್ತಿತ್ತು! ಸದರೀ ವಾಹಿನಿಯವರು ಆ ಸಿನಿಮಾ ನಿರ್ಮಾಪಕನನ್ನು ನೇರವಾಗಿ ಸಂದರ್ಶಿಸುತ್ತಿದ್ದರು. ತಾವು ಯಾವುದೇ ಕಥೆಯನ್ನು ನೇರವಾಗಿ ಬಳಸಿಕೊಂಡಿಲ್ಲ ಎಂದು ಆತ ಹೇಳುತ್ತಿದ್ದ. ಆದರೂ ಹುಲಿಯ ಅಬ್ಬರ ಜಾಸ್ತಿಯಾಗುತ್ತಲೇ ಇತ್ತು. ಮೊದಲು ಸಿನಿಮಾದಲ್ಲಿ ಬರುವ ಕೆಲವು ಪಾತ್ರಗಳ ಹೆಸರುಗಳನ್ನು ಬದಲಾಯಿಸಬೇಕೆಂಬ ಒತ್ತಾಯವನ್ನು, ಹುಲಿ ಪರೋಕ್ಷವಾಗಿ ತನ್ನ ಅನುಯಾಯಿಯಿಂದ ಮಂಡಿಸಿತು! ಆಮೇಲೆ " ಇಡೀ ಪಾತ್ರಗಳನ್ನೇ ತೆಗೆದು ಹಾಕೋಕ್ಕೇಳೋ ತಮ್ಮಾ" ಎಂದಿತು. ಇನ್ನೊಂದು ಕಡೆಯಿಂದ ಇನ್ನೊಂದು ದೂರವಾಣಿಯಲ್ಲಿ ಮಾತನಾಡುತ್ತಿದ್ದ [ಸಿನಿಮಾದಲ್ಲಿ ಬರುವ ಚಿಕ್ಕ ಪಾತ್ರವೊಂದರ ಹೆಸರಿನ ವ್ಯಕ್ತಿಯ ಮಗನೆನ್ನಲಾದ]ವ್ಯಕ್ತಿಗೆ ಕುಮ್ಮಕ್ಕು ಕೊಟ್ಟು ಕರೆಮಾಡಿಸಿದ್ದು ಯಾರೆಂಬುದು ಎಲ್ಲರಿಗೂ ತಿಳಿದು ಹೋಗಿತ್ತು!

ಅಷ್ಟಕ್ಕೂ ಪೊದೆಯ ಹಿಂದಿನ 'ಹುಲಿ' 'ಆಹಾರಕ್ಕಾಗಿ'
ಹಂಬಲಿಸಿರುವುದು ಎಲ್ಲರಿಗೂ ತಿಳಿದುಹೋದ ವಿಷಯವಾಗಿದೆ! ನಂತರ ವಾಹಿನಿಯವರು ಹುಲಿಯನ್ನೂ ಮಿಕಗಳನ್ನೂ ಕರೆಸಿದರು, ಮಾತಾನಾಡಿಸಿದರು. ತಾನು ಆ ವರದಿಯ ಪಿತಾಮಹ ಇಲ್ಲೇ ಇರುವಾಗ ಕೊನೇಪಕ್ಷ ತನ್ನನ್ನು " ಅಣಾ ಒಂದ್ ಸಿನ್ಮಾ ಮಾಡ್ತಿದೀವಿ ಅಂತ ಕೇಳ್ಬೋದಾಗಿತ್ತಲ್ಲಾ" ಎಂಬ ಗುಟುರು! ತನ್ನ ಧೋರಣೆ ಯಾರಿಗೂ ಸ್ಪಷ್ಟವಾಗದಿರಲಿ ಎಂದು, ಆ ಘಟನೆಗಳು ನಡೆದ ಉತ್ತರಕರ್ನಾಟಕದ ಆ ಭಾಗದ ಜನರಿಗೆ ಈ ಸಿನಿಮಾ ನಿರ್ಮಾಪಕರು ಧನಸಹಾಯಮಾಡಬೇಕೆಂಬ ತಾಕೀತು, ಮತ್ತು ಸಿನಿಮಾದಲ್ಲಿ ಬಳಸಿಕೊಂಡ ನಾಯಕಪಾತ್ರದ ಹೆಸರಿನ ವ್ಯಕ್ತಿಯ ಹೆಂಡತಿಗೆ ಜೀವಿತಕ್ಕೆ ಅಂತ ೫೦ ಲಕ್ಷ ಕೊಡಿ ಎಂಬ ಡಿಮಾಂಡು! ’ಸಾಮಾಜಿಕ ಕಳಕಳಿ’ ಬಹಳವಾಗಿರುವ ಆತ, ಬೆಂಗಳೂರಿನಲ್ಲಿ ನಾಕಾರು ಹಣಗಳಿಕೆಯ ಶಾಲೆಗಳನ್ನು ನಡೆಸಿದಂತೇ ಉತ್ತರಕರ್ನಾಟಕದ ಆ ಭಾಗದಲ್ಲೂ ಧರ್ಮಾರ್ಥ ಶಾಲೆಗಳನ್ನು ನಡೆಸಬಹುದಿತ್ತಲ್ಲಾ ?

ನಮ್ಮಲ್ಲೊಬ್ಬ ಅತೀ ದಡ್ಡನಿದ್ದ. ’ಗುರುಶಿಷ್ಯರು’ ಎಂಬ ಸಿನಿಮಾದಲ್ಲಿ ಕಾಣುವ ದಡ್ಡರ ತೆರನಾದವ. ಆತನ ಅಮ್ಮ ಅತನಿಗೆ ಕಲಿಸಿಕೊಟ್ಟಿದ್ದು ದೇವರಪೂಜೆ ಮಾತ್ರ. ದಡ್ಡ ವಯಸ್ಸಿನಲ್ಲಿ ದೊಡ್ಡವನಾಗುತ್ತಾ ನಡೆದ. ತಂದೆ-ತಾಯಿಗಳು ಕಾಲವಾಗಿಹೋದರು. ಅಣ್ಣಂದಿರು ಇವನನ್ನು ಮನೆಯಲ್ಲಿ ಇರಿಸಿಕೊಳ್ಳದಾದರು. ಊರೂರು ಅಲೆಯುತ್ತಾ ಕಂಡವರ ಮನೆಯಲ್ಲಿ ದೇವರಪೂಜೆಗಳನ್ನು ಮಾಡುತ್ತಾ ಬದುಕುತ್ತಿದ್ದ. ಪಕ್ಕದೂರಿನಲ್ಲೊಂದು ದೇವಸ್ಥಾನವಿತ್ತು. ಅಲ್ಲೊಂದು ಪುರೋಹಿತರ ಕುಟುಂಬ. ಆ ಪುರೋಹಿತರು ಈತನ ದಡ್ಡತನಕ್ಕೆ ಮರುಗಿ, ಸರಕಾರದಿಂದ ಸಿಗಬಬಹುದಾದ ಮಾಶಾಸನ ಸಿಗುವಂತೇ ವ್ಯವಸ್ಥೆಮಾಡಿಸಿ ಅವನ ಹೆಸರಲ್ಲೊಂದು ಬ್ಯಾಂಕ್ ಅಕೌಂಟ್ ತೆರೆಯಿಸಿಕೊಟ್ಟರು. ಊರೂರು ತಿರುಗಿ "ನಾನು ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದೇನೆ ಎಲ್ಲಾ ಬನ್ನಿ" ಎನ್ನುತ್ತಿದ್ದ. ನಿಗದಿತವಾದ ಒಂದು ದಿನ ಮೇಲೆ ಹೇಳಿದ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯನ್ನೂ ನಡೆಸುತ್ತಿದ್ದ. ಅನೇಕ ಮನೆಗಳಲ್ಲಿ ಅವನ ಪೂಜೆಯ ಕಾರ್ಯಕ್ರಮಕ್ಕಾಗಿ ಐದೋ ಹತ್ತೋ ರೂಪಾಯಿ ಕೊಟ್ಟು ಕಳುಹಿಸುತ್ತಿದ್ದರು. ಆ ಪುರೋಹಿತರು ತಮ್ಮಲ್ಲೇ ಕೆಲವು ಜನರನ್ನು ಸೇರಿಸಿಕೊಂಡು ಅಡುಗೆಮಾಡಿ ಅಲ್ಲಿಗೆ ಬಂದ ದಡ್ಡನ ಅತಿಥಿಗಳಿಗೆ, ಆ ದಿನ ಊಟಹಾಕುತ್ತಿದ್ದರು. ಸಮಾಜದಿಂದ ಪಡೆದ ಹಣಕ್ಕೆ ತನ್ನ ಮಾಶಾಸನದ ಹಣವನ್ನೂ ಸೇರಿಸಿಕೊಂಡು ದೇವಕಾರ್ಯಮಾಡಿ ಎಲ್ಲರಿಗೂ ಉಣಬಡಿಸುವ ಕೆಲಸ ನಡೆಸಿದ್ದ ಆ ದಡ್ಡ ಈಗ ದಿವಂಗತ.

ಸಮಾಜದ ಯಾವುದೋ ಭಾಗಕ್ಕೆ ಯಾವುದೋ ಘಟನೆಗಳಿಂದಲೋ, ನಿಸರ್ಗ ವಿಕೋಪದಿಂದಲೋ ತೊಂದರೆಯಾದಾಗ, ಅಲ್ಲಿನ ಅವರ ಜೀವನಕ್ರಮದ ಸುಧಾರಣೆಗಾಗಿಯೋ ಮೂಲವಾಗಿ ಬೇಕಾದ ಅನ್ನ-ವಸತಿ-ಬಟ್ಟೆಗಾಗಿಯೋ ಸಮಾಜದಿಂದ ಅನುಕೂಲಸ್ಥ ಭಾಗದಿಂದ ಹಣವನ್ನು ಕೇಳಿ ಕ್ರೋಡೀಕರಿಸಿ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿ ಬಹುತೇಕ ಮಾಧ್ಯಮಗಳ/ಪತ್ರಿಕೆಗಳ ಕರ್ತವ್ಯ. [ಮೇಲಿನ ಕಥೆಯಲ್ಲಿ ಕಂಡ ದಡ್ಡನೂ ಸಹ ಊರಿಗೇ ಒಂದು ಮಧ್ಯಾಹ್ನದ ಊಟಹಾಕುವ ಜನೋಪಕಾರೀ ಕೆಲಸ ಮಾಡಿದ್ದನಲ್ಲವೇ?]ಅದನ್ನೇ ತಮ್ಮ ಹೆಚ್ಚುಗಾರಿಕೆ ಎಂದು ಬಿಂಬಿಸಿಕೊಳ್ಳುವುದು ನಿಜಕ್ಕೂ ಸಲ್ಲ. ತಮ್ಮ ಬದುಕಿಗಾಗಿ, ತಮ್ಮ ಮಾಧ್ಯಮದ ಉಳಿವಿಗಾಗಿ-ಏಳ್ಗೆಗಾಗಿ, ಸಮಾಜದಿಂದ ಪರೋಕ್ಷವಾಗಿ ಸಹಾಯ ಪಡೆದ ಜನ, ತಮಗೆ ಆಗುವ ಲಾಭದಲ್ಲಿ ಎಷ್ಟುಪಾಲು ಅಂತಹ ಕಾರ್ಯಗಳಿಗೆ ಕೊಟ್ಟಿದ್ದಾರೆ? ಸಮಾಜದಿಂದಲೇ ಕ್ರೋಡೀಕರಿಸಿ ನೀಡುವ ಆ ದಾನ, ಗುಡ್ಡದಮೇಲೋ ಗೋಮಾಳದಲ್ಲೋ ಮೇಯುವ ದನವನ್ನು ಕರೆದು ಗೋದಾನ ಮಾಡಿದ ಹಾಸ್ಯಪ್ರಹಸನದಂತೇ ಅನಿಸುವುದಿಲ್ಲವೇ? ಬಹಳವಾಗಿ ಇಂಟೆಲೆಕ್ಚ್ವಲ್ ಪ್ರಾಪರ್ಟಿ ಹೊಂದಿರುವ ಮಾಧ್ಯಮಗಳವರು ಇತ್ತೀಚಿನ ದಿನಗಳಲ್ಲಿ ಅಪಾರ ಆಸ್ತಿಯನ್ನೂ ಗಳಿಸುತ್ತಿದ್ದಾರೆ ಎಂಬುದರಲ್ಲಿ ಲವಲೇಶವೂ ಸುಳ್ಳಿಲ್ಲ. ತಮ್ಮ ಆಸ್ತಿಯ ವೃದ್ಧಿಯನ್ನು ಅವರು ಯಾವ ಮಾರ್ಗದಲ್ಲಿ ಮಾಡಿಕೊಂಡರು ಎಂಬುದನ್ನು ಮಾತ್ರ ಅವರವರೇ ಆತ್ಮವಿಮರ್ಶೆಯ ಮೂಲಕ ಅರಿತುಕೊಳ್ಳಬೇಕಾಗಿದೆ. ಅಂತಹ ಅಪಾರವಾದ ಆಸ್ತಿಗಳಲ್ಲಿ ನೂರಕ್ಕೆ ಒಂದನ್ನು ವಿನಿಯೋಗಿಸಿ ಹಾಳೂರನ್ನು ಉದ್ಧಾರಮಾಡಲು ಸಿದ್ಧರಾಗಬಹುದಲ್ಲ?

ಕೆಲವರು ಪತ್ರಕರ್ತರ ಸೋಗಿನಲ್ಲಿ ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದಕ್ಕೆ ನಿನ್ನೆಯ ಪ್ರಹಸನ ಜ್ವಲಂತ ನಿದರ್ಶನವಾಗಿದೆ; ಇನ್ನಾದರೂ ಆ ಓದುಗವರ್ಗ ಎಚ್ಚೆತ್ತು, ಬದಲಾಗಿ ತಾವು ಏನನ್ನು ಓದಬೇಕು ಮತ್ತು ಏನನ್ನು ಓದಬಾರದು ಎಂಬುದನ್ನು ಅರಿಯಬೇಕಾಗಿದೆ. ಸಮಾಜದ ಎಲ್ಲಾ ವರ್ಗಗಳಿಂದಲೂ ಉತ್ತಮ ಓದಿನ ಅಭಿರುಚಿಯನ್ನು ನಿರೀಕ್ಷಿಸಬಹುದೇ ?