ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 30, 2010

ಅಹಂಕಾರ


ಚಿತ್ರ ಕೃಪೆ-ಫೋಟೋ ಸರ್ಚ್.ಕಾಂ

ಅಹಂಕಾರ

ಒಂದು ತರಗೆಲೆ ಹಾರಿ ಸಂದುಗೊಂದನು ಮೀರಿ
ಚಂದದಲಿ ಬೀಗುತ್ತ ಸೇರಲಾಗಸವ
ಮಂದಾಸನದಿಂದ ಬಿದ್ದ ನಹುಷನಂತೆ
ಸಂದಿತಿಳೆಗೈತಂದು | ಜಗದಮಿತ್ರ

ಮನದ ಮೂಸೆಯ ತುಂಬ ತಾನುತಾನೆಂತೆಂಬ
ವನದಿ ಮರ್ಕಟ ಕುಣಿವ ಹದವಿರದ ಕುಣಿತ
ಸನದು ಶಾಸನವಿಲ್ಲ ಅನುಭವದ ಪರಿಯಲ್ಲ
ಅನುಗಾಲ ತಿನ್ನುವುದು ! ಜಗದಮಿತ್ರ

ಅಶನಮದ ವಶನಮದ ಅರ್ಥ-ವೈಭೋಗ ಮದ
ಕುಶಲತೆಯ ಕಳೆಯುವುದು ಬುದ್ಧಿ ಬದಿಗೊತ್ತಿ
ವಿಷದವಹುದಾಮೇಲೆ ನೆಶೆಕಳೆದ ಹೊತ್ತಲ್ಲಿ
ಖುಷಿಯು ಶಾಶ್ವತವಹುದೇ ? ಜಗದಮಿತ್ರ

ಕಟ್ಟಿನೂರೆಂಟು ಬಂಗಲೆಗಳನು ಒಟ್ಟಿನಲಿ
ಮೆಟ್ಟುತೇಳುವ ಹಲವು ಬಡಜನಂಗಳನು
ಚಟ್ಟವೇರುವ ಮುನ್ನ ಪದಕುಸಿದು ಪರಿನೋಳ್ಪೆ
ಕಟ್ಟಕಡೆಗದು ಖಚಿತ | ಜಗದಮಿತ್ರ

ಆರ ನೂರನುಮಾಡಿ ನೂರು ಮುನ್ನೂರೆಂದು
ಹಾರೋಡಿ ಇರಿಸಿ ಹಣವನು ಬೆಳೆಯುವವನೇ
ವಾರಾನ್ನದಿಂ ಕಲಿವ ಮಕ್ಕಳನು ನೋಡಿಕಲಿ
ಭಾರವಪ್ಪುದು ಹೋಗೆ | ಜಗದಮಿತ್ರ

ಹಣವು ಅಧಿಕಾರ ಯೌವ್ವನವು ಮೇಳೈಸಿರಲು
ಗುಣವ ಸುಟ್ಟುರಿವೆ ಬಲು ಬಣಿವೆಗಳಮಾಡಿ
ಕಣಕಣದಿ ಕಾಮಾಂಧನಾದ ಲೋಲುಪನಿನ್ನ
ಅಣಕಿಸುವ ದಿನಬಹುದು | ಜಗದಮಿತ್ರ

ಯಶವು ಜಯಸಿರಿಯು ನಸುನಕ್ಕು ತಾನಡಿಯಿಡಲು
ಪಶುವಪ್ಪೆ ಮರೆತು ಕರ್ತವ್ಯ ಕುಲುಮೆಗಳ
ವಶವಾದ ಸಿರಿಯೊಮ್ಮೆ ಕೃಶವಾಗಿ ಕರಗಿರಲು
ಅಶನಕಲೆವಂತಕ್ಕು | ಜಗದಮಿತ್ರ

ದರ್ಪದೊಳು ರಾಜ್ಯಪದ ಪಟ್ಟಗಳ ಸುಖ ಪಡೆದು
ಅರ್ಪಿಸಿದರೆಲ್ಲ ತನು-ಮನ-ಧನವ ಮರಳಿ
ದರ್ಪಣದಿ ಕಂಡ ಸಿರಿಸಂಪತ್ತೆಲ್ಲ ನಮದಲ್ಲ
ತರ್ಪಣವ ಬಿಡು ಅದಕೆ | ಜಗದಮಿತ್ರ

ಸಂಪಾದಕನು ತಾನು ತಂಪೆರೆವೆ ಹಲಜನಕೆ
ಕಂಪು ಕಸುವಿನ ಸರಕು ಕೊಡುವ ಮದವೇರೆ
ಇಂಪಾಗಿ ಹಾಡುವಗೆ ಧ್ವನಿಪಟಲ ಒಡೆದಂತೆ
ಜೋಂಪು ಹಿಡಿವುದು ನಿನಗೆ | ಜಗದಮಿತ್ರ

ನಾನೆಂಬ ಪದವನ್ನು ಕಡೆಗಣಿಸು ಜೀವನದಿ
ಹೀನಬುದ್ಧಿಯ ತೊರೆದು ಅನುಕ್ಷಣ ಕ್ಷಣದಿ
ಆನೆಬಲ ಅಸುರಬಲ ಎನಿತೂ ನೆಮ್ಮದಿ ಥರದು
ಮಾನವನು ನೀನಾಗು | ಜಗದಮಿತ್ರ

Tuesday, June 29, 2010

ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!



ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!

ಗಣಪತಿಯ ಬಗ್ಗೆ ಬರೆದರೆ ಅದಕ್ಕೆ ಕೊನೆಯೇ ಇರುವುದಿಲ್ಲ, ನಾವು ಮನುಜರಾಗಿರುವುದರಿಂದ ಬರೆಯುವುದಕ್ಕೆ ಆದಿ ಇರಬಹುದು ಆದರೆ ಅಂತ್ಯಕಾಣಿಸುತ್ತೇನೆ ಎಂದು ಹೇಳುವ ದಾರ್ಷ್ಟ್ಯತೆ ಯಾರಲ್ಲಿಯೂ ಇಲ್ಲ;ಯಾಕೆಂದರೆ ಗಣಪನ ವಿಷಯವೇ ಹಾಗೆ. ಗಣಪ ಎಂದರೆ ಆತನೊಬ್ಬ ಜನತೆಯ ಅತೀ ಪ್ರೀತಿಪಾತ್ರ ದೇವರು. ಬಹುತೇಕ ಎಲ್ಲಾ ಕಡೆ ಅವನ ವಿಗ್ರಹಗಳನ್ನು ನೋಡುತ್ತೇವೆ. ಬಿಂದು ರೂಪದಿಂದ ಪ್ರಾರಂಭಗೊಳ್ಳುವ ಆತನ ರೂಪ ಇಂಥದ್ದೇ ಎನ್ನಲಾಗದ ರೀತಿ ಹಬ್ಬಿ ಹರಡುತ್ತದೆ. ಬಹಳ ಸರ್ತಿ ನಾವು ಯಾರೋ ನಮ್ಮನ್ನು ಕರೆದು " ನೋಡ್ರೀ ಇಲ್ಲಿ ನಮ್ಮನೇಲಿ ಕುಂಬಳಕಾಯಿಯಲ್ಲಿ ಗಣಪ ಮೂಡಿದ್ದಾನೆ, ನಮ್ಮಲ್ಲಿ ಟೊಮೇಟೊ ದಲ್ಲಿ ಮೂಡಿದ್ದಾನೆ" ಎಂದೆಲ್ಲ ಹೇಳುತ್ತಿರುತ್ತಾರೆ. ಅಲ್ಲಲ್ಲಿ ಆಗಾಗ ಕಾಣಿಸಿಕೊಳ್ಳುವ ಸೊಂಡಿಲ ಆಕೃತಿಯನ್ನು ಗಣಪನಿಗೆ ಹೋಲಿಸಿ ಖುಷಿಪಡುತ್ತಾರೆ. ವಿನಾಯಕನೇ ಹಾಗೆ. ಆತ ವಿಶ್ವವ್ಯಾಪಿ-ವಿಶ್ವಂಭರ. ಹದಿನೇಳು ಅವತಾರಗಳಲ್ಲಿ ವಿಜೃಂಭಿಸಿ ಅಸುರರನ್ನು ಸದೆಬಡಿದು ಮಹಾಭಾರತವನ್ನು ಅದರೊಳಗಣ ಭಗವದ್ಗೀತೆಯನ್ನೂ ನಮಗೆ ಬರೆದು ಕರುಣಿಸಿದ ಗೀರ್ವಾಣ ಲಿಪಿಕಾರ! ಸೊಂಡಿಲಿನಲ್ಲಿರುವ ಬೆರಳರೀತಿಯ ಆಕಾರದ ಭಾಗದಿಂದ ಬರೆದದ್ದೇ ಗೀರ್ವಾಣ ಲಿಪಿ! ಅದು ಓಘ, ಅದು ಅಮೋಘ, ಅದು ಆಮೋದ,ಅದು ಪ್ರಮೋದ,ಅದು ವಿಕಟ, ಅದು ವಿಲಂಬ, ಅದು ನಿರ್ವಿಕಾರ, ಅದು ಸದಾಕಾರ, ಅದು ಸದಾಲಂಬ,ಅದು ನಿರಾಲಂಬ ಹೀಗೆ ಏನೆಲ್ಲಾ ಹೇಳಹೊರಟರೂ ಅದು ಗಣನಾಯಕನ ಸಹಸ್ರನಾಮಗಳಲ್ಲಿ ಒಂದಾಗುತ್ತದೆ.

ಮಕ್ಕಳಿಗೆ ಬಾಲಗಣಪ ಆಟದ ವಸ್ತುವಾಗಿ ಲಭಿಸಿದರೆ ಕೆಲವರಿಗೆ ಆತ ಸ್ನೇಹಿತ, ಹಲವರಿಗೆ ಆದಿ ಪೂಜ್ಯನಾದರೆ ಇನ್ನೂ ಕೆಲವರು ಅವನನ್ನು ಅಲಂಕಾರಿಕ ವಸ್ತುವಾಗಿ ಮನೆಯಲ್ಲಿ ಇಟ್ಟುಕೊಳ್ಳಬಯಸುವವರು. ಯಾವುದೇ ಮಡಿ-ಮೈಲಿಗೆ-ಭಯ-ಭಕ್ತಿ ಇವುಗಳನ್ನೆಲ್ಲ ಮೀರಿದ ಅತಿ ಹೃದಯಸ್ಪರ್ಶೀ ದೇವರು ನಮ್ಮ ಗಣೇಶ. ಹಲ್ಲನ್ನು ವಕ್ರವಾಗಿ ಹೊಂದಿರುವುದರಿಂದ ವಕ್ರತುಂಡ ಎಂತಲೂ, ಕೋಪದಲ್ಲಿ ಒಂದು ಹಲ್ಲನ್ನು ಚಂದ್ರನತ್ತ ಮುರಿದೆಸೆದು ಇನ್ನೊಂದು ಕೋರೆದಾಡೆಯನ್ನು ಮಾತ್ರ ಇಟ್ಟುಕೊಂಡಿರುವುದರಿಂದ ಏಕದಂತ ಎಂತಲೂ, ಕೃಷ್ಣಮೃಗದ ಕಣ್ಣನ್ನು ಹೋಲುವ ಸಣ್ಣ ಕಣ್ಣುಳ್ಳವನದುದರಿಂದ ಕೃಷ್ಣಪಿಂಗಾಕ್ಷ ಎಂತಲೂ,ಆನೆಯ ಬಹುತೇಕ ಮೇಲ್ನೋಟವನ್ನು ಪ್ರದರ್ಶಿಸುವುದರಿಂದ ಗಜವಕ್ತ್ರ ಎಂತಲೂ, ಉದ್ದನೆಯ ದೊಡ್ಡ ಹೊಟ್ಟೆಯನ್ನು ಪಡೆದು ಲಂಬೋದರನೆಂತಲೂ,ವಿಕಟ ನಾಟಕದ ಸಕ್ರಿಯ ರೂವಾರಿಯಾಗುವುದರಿಂದ ವಿಕಟನೆಂತಲೂ,ವಿಘ್ನವನ್ನು ಕಾರಕ-ವಿಘ್ನ ನಿವಾರಕ ಎರಡೂ ಆಗಿರುವುದರಿಂದ ವಿಘ್ನರಾಜೇಂದ್ರನೆಂದೂ,ಹೊಗೆಯಬಣ್ಣದಲ್ಲೂ ಕಾಣಿಸುವುದರಿಂದ ಧೂಮ್ರವರ್ಣ ಎಂತಲೂ, ಬಿದಿಗೆಯ ಚಂದ್ರನನ್ನು ಹೋಲುವುದರಿಂದ ಮತ್ತು ಚಂದ್ರನಿಂದ ಪೂಜಿತನಾಗಿ ಅವನನ್ನು ಧರಿಸಿರುವುದರಿಂದ ಭಾಲಚಂದ್ರ ಎಂತಲೂ, ನಾಯಕರಿಗೆ ನಾಯಕನಾದುದರಿಂದ ವಿನಾಯಕ ಎಂತಲೂ ವರ್ಣಿಸಲ್ಪಟ್ಟಿದ್ದಾನೆ.

ಹಲವಾರು ಗಾಡಿಗಳ ಮುಂಭಾಗದಲ್ಲಿ ಕುಳಿತು ಕಣ್ಣಿಗೆ ಹರುಷತರುವ ಈತ ಮನೆಗಳ ಮುಂಭಾಗದಲ್ಲಿ, ಕಾರ್ಖಾನೆಗಳ ಮುಂಭಾಗದಲ್ಲಿ, ವಸತಿ ಸಮುಚ್ಚಯ-ಆಸ್ಪತ್ರೆ-ಹೋಟೆಲ್ ಹೀಗೇ ಎಲ್ಲೆಂದರಲ್ಲಿ ಗಣೇಶನ ಅತಿ ಚಿಕ್ಕ ವಿಗ್ರಹದಿಂದ ಹಿಡಿದು ಅತಿ ದೊಡ್ಡವಿಗ್ರಹಗಳನ್ನು ಕಾಣಬಹುದು. ಬೆನಕನ ಮೂರ್ತಿ ಇದ್ದುಬಿಟ್ಟರೆ ಅದೊಂದು ಸೇಕ್ಯುರ್ಡ್ ಪ್ಲೇಸ್ ಟು ಲಿವ್-ಇನ್ ಎಂದುಕೊಳ್ಳುವವರು ಎಷ್ಟೋ ಮಂದಿ. ಕೆಲವೆಡೆ ಘಟ್ಟದ ರಸ್ತೆಗಳಲ್ಲಿ ಅಲ್ಲೆಲ್ಲೋ ಅಡ್ಡಸಿಕ್ಕು ಪೂಜೆಗೊಳ್ಳುವ ’ಹಾದಿ ಗಣಪತಿ’ ಕೂಡ ಇರುತ್ತಾನೆ. ದುರ್ಗಮ ಪ್ರದೇಶಗಳಲ್ಲಿ, ಕಾಡು-ಮೇಡುಗಳಲ್ಲಿ ಅಂಡಲೆಯುವವರು ಕಷ್ಟಕಳೆಯಲು ನೆನೆದರೆ ಮೀನುಗಾರರು, ಸಮುದ್ರಯಾನಿಗಳು ತಮ್ಮನ್ನು ಸಂಕಷ್ಟದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಆತನನ್ನು ಇಟ್ಟು ಪ್ರಾರ್ಥಿಸುತ್ತಾರೆ. ಶಾಲೆಗಳಲ್ಲಿ ನಿಂತು ವಿದ್ಯಾಗಣಪತಿ ಎಂಬ ಅಭಿದಾನ ಪಡೆದ ಈತ ಕಾಶಿಯಲ್ಲಿ ಡುಂಢಿರಾಜನಾಗಿದ್ದಾನೆ! ಇತ್ತೀಚೆಗೆ ದೃಷ್ಟಿಗಣೇಶ ಎಂಬ ಹೊಸ ನಾಮವನ್ನು ಪಡೆದು ಅಂಗಡಿ-ಮುಂಗಟ್ಟು ಹಾಗೂ ಮನೆ-ಮಹಲುಗಳಲ್ಲಿ ಚಿತ್ರರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅಂತೂ ಗಣಪತಿಯನ್ನು ಬಿಟ್ಟು ನಮಗೆ ಯಾವ ಪೂಜೆಯನ್ನು ಮಾಡಿದರೂ ಅದು ತೃಪ್ತಿ ತರುವುದಿಲ್ಲ.

ಇಂತಹ ಸುಮುಖ ಕೆಲವುಕಡೆ ದುರ್ಮುಖನಾಗಿಯೂ ಕಾಣುವುದರಿಂದ ಏಕದರಲ್ಲಿ ಅನೇಕ-ಅನೇಕದರಲ್ಲಿ ಏಕ ಎಂಬುದನ್ನು ತನ್ನ ಬಹುರೂಪೀ ಪ್ರಸ್ತುತಿಯೊಂದಿಗೆ ಸಾದರಪಡಿಸುತ್ತಾನೆ. ಈ ವಿನಾಯಕ ವಿವಾಹಿತ ಎನ್ನುವವರು ಕೆಲವರಾದರೆ ಈತ ಅವಿವಾಹಿತ ಅಂತ ನಂಬಿ ಪೂಜಿಸುವವರು ಹಲವರು. ಅಣಿಮಾ,ಗರಿಮಾ,ಲಘಿಮಾದಿ ಹಲವು ಮೂಲ ಶಕ್ತಿಗಳ ಆಗರವನ್ನು ತನ್ನಲ್ಲೇ ಇರಿಸಿಕೊಂಡು ಅನಂತ ಶಕ್ತಿ ಸಂದೋಹನೆಂಬ ಹೆಗ್ಗಳಿಕೆಗೆ ಪಾತ್ರನಾದ ಈತ ಹಲವು ಹತ್ತು ಕೈಗಳು, ತಲೆಗಳು, ವಿರಾಟ್ ರೂಪಗಳನ್ನೆಲ್ಲ ತೋರಿಸಿ ಪರಮಾತ್ಮನ ಪೂರ್ಣರೂಪವೆಂತಲೂ ಕರೆಯಲ್ಪಟ್ಟಿದ್ದಾನೆ. ಕಾರ್ಯಗಳಿಗೆ ಜಯವನ್ನು ತಂದುಕೊಡುವ ಸಿದ್ಧಿ ಮತ್ತು ಮನಸ್ಸಿಗೆ ಹೆಚ್ಚಿನ ಮಟ್ಟದ ಜ್ಞಾನವನ್ನು ಕೊಡುವ ಬುದ್ಧಿ ಈ ಈರ್ವರನ್ನೂ ಹೆಂಡಿರನ್ನಾಗಿ ಪಡೆದು ಸಿದ್ಧಿ-ಬುದ್ಧಿವಿನಾಯಕನಾಗಿದ್ದಾನೆ. ಹಲವರು ಕ್ಷೇತ್ರಗಳಲ್ಲಿ ಅಲ್ಲಲ್ಲಿ ಸ್ಥಾನಿಕವಾಗಿ ಏನನ್ನೋ ಪಡೆದು ಹರಸುತ್ತ-ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಕಡ್ಲೆಗಣಪತಿ, ಬಟ್ಟೆವಿನಾಯಕ,ಉಪ್ಪಿನಗಣಪತಿ, ಟಿಟ್ವಾಳಾ ಗಣಪತಿ, ಜಂಭುಗಣಪತಿ ಹೀಗೆಲ್ಲ ಹಲವಾರು ಹೆಸರಿನಿಂದ ಮೆರೆಯುತ್ತಾನೆ.

ಬಹುತೇಕ ಹಿಂದೂ ಹಿರಿಯಡಿಗೆಗಳಲ್ಲಿ ದೇವರಿಗೆ ಉಪ್ಪು ನಿಷಿದ್ಧ, ಆದರೆ ಉಪ್ಪಿನಲ್ಲೇ ಸಿಕ್ಕು ಪ್ರತಿಷ್ಠಾಪಿತನಾಗಿ ಉಪ್ಪನ್ನೇ ನೇರವಾಗಿ ಹರಕೆಯಾಗಿ ಪಡೆಯುವ ಉಪ್ಪಿನಗಣಪನಿದ್ದಾನೆ ! ಮಯವಾದ ಬಟ್ಟೆಯ ಗಂಟನ್ನು ತನ್ನ ಮೈಮೇಲೆ ಪ್ರದರ್ಶಿಸುವುದರ ಮೂಲಕ ತನಗೆ ಬಟ್ಟೆ ಎಂದರೆ ಪ್ರೀತಿ ಎಂಬುದಾಗಿ ಪರೋಕ್ಷ ತಿಳಿಸಿ ಅದನ್ನೇ ಹರಕೆಯಾಗಿ ಪಡೆದು ಹರಸುವ ಬಟ್ಟೆವಿನಾಯಕನಿದ್ದಾನೆ. ಇದೆಲ್ಲ ಹೇಗಿದ್ದರೂ ವಿನಾಯಕ ಎಲ್ಲ ಶಕ್ತಿಗಳ ಸಂಗಮವೆನ್ನಲು ಕಾರಣಗಳಿವೆ. ಈತನಿಗೆ ಅಲಂಕಾರವೂ ಬೇಕು, ಅಭಿಷೇಕವೂ ಬೇಕು, ನೈವೇದ್ಯವೂ ಭರಪೂರಬೇಕು[ಹಾಗಂತ ನೈವೇದ್ಯ ನೀಡದಿದ್ದರೆ ಒಣಗಣೇಶನಾಗಿಯೂ ಇರಲು ಸಿದ್ಧ!]--ಅಂದರೆ ಯಾವುದು ಬೇಡ ಈತನಿಗೆ?ತಿನ್ನುವ ಎಲ್ಲಾ ವಸ್ತುಗಳೂ ಅತ್ಯಂತ ಮೋದಕರ-ಅತ್ಯಂತ ಸತ್ವಭರಿತ, ನಡೆಸುವ ಎಲ್ಲಾಕಾರ್ಯಗಳೂ ಅಷ್ಟೇ ತತ್ವಪೂರಿತ, ತೋರುವ ಆಕಾರಗಳೂ ತತ್ವ ಪ್ರೇರಿತ. ಹರಿ-ಹರ-ಬ್ರಹ್ಮರನ್ನು ಸೇರಿಸಿದಂತಿರುವ ಈತ ಇವರೆಲ್ಲರ ಮೂಲವಾದ ಪರಬ್ರಹ್ಮ ಎಂಬ ತತ್ವವನ್ನು ಸಾರಿ ತೋರಿಸುತ್ತಾನೆ.

ದೇವರನ್ನು ಹೆಚ್ಚಾಗಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸುತ್ತಾರೆ. ಆದರೆ ನಮ್ಮ ಬೆನವನಿಗೆ ದಿಕ್ಕೇ ಇಲ್ಲ. ಅದರಲ್ಲೂ ನೆಗೆಟಿವ್ ಎನರ್ಜಿಯ ದಿಕ್ಕು ಎಂದೇ ಖ್ಯಾತವಾದ ದಕ್ಷಿಣದಿಕ್ಕಿಗೆ ಮುಖಮಾಡಿರುವ ಗಣೇಶ ಸಿಕ್ಕರೆ ಅಲ್ಲಿ ನಮಗೆ ಅದು ಕನ್ವಟ್ ಆಗಿ ಪಾಸಿಟಿವ್ ಎನರ್ಜಿ ಆಗುತ್ತದೆ ಎಂಬುದು ಬಹಳ ವಿಶೇಷ! ಮನೆಯ ಎದುರಿಗೇ ರಸ್ತೆಯೊಂದು ನೇರವಾಗಿ ಬಂದು ಸೇರುವಂತಿದ್ದರೆ ಅಲ್ಲಿ ಗಣೇಶನ ವಿಗ್ರಹವನ್ನು ಇಡುತ್ತಾರೆ, ನಡೆಯಬಹುದಾದ ವಾಹನ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಸಿಗಲೆಂದು ಹಾಗೆ ಮಾಡಿರುತ್ತಾರೆ.

ಉಳಿದ ದೇವತೆಗಳು ತಾವು ಮಾಡಿಕೊಂಡ ಉಪದ್ವ್ಯಾಪಕ್ಕೆ ಗಣೇಶನ ಮೊರೆಹೊಕ್ಕು ಪರಿಹಾರ ಕಂಡುಕೊಂಡಿದ್ದು ಸರ್ವೇ ಸಾಮಾನ್ಯ. ಯಾಕೆಂದರೆ ಅತೀ ಬುದ್ಧಿವಂತ ದೇವರಾದ ಈತನಿಗೆ ಯಾವುದಾದರೊಂದು ಹೊಸಮಾರ್ಗಕಂಡುಬರುತ್ತದೆ ಎಂಬುದು ಅವರಿಗೆಲ್ಲ ತಿಳಿದೇಇದೆ. ಪರರು ಮಾಡಿದ ತಪ್ಪಿಗೆ ತಾನು ನೋವು ಸಹಿಸಿ ಅವರನ್ನು ಕಾಪಾಡಿದ ಪೇಚಿನಪ್ರಸಂಗಗಳು ಒಂದೆರಡಲ್ಲ. ಆತ್ಮಲಿಂಗವನ್ನು ರಾವಣನ ಕೈಯ್ಯಿಂದ ತಪ್ಪಿಸುವಾಗ ರಾವಣ ಕೊಟ್ಟ ಹೊಡೆತವನ್ನು ಒಂದಿನಿತೂ ಹೆದರದೇ ತಿಂದ ಈತ ಮಹಾನ್ ಧೈರ್ಯಶಾಲಿಯೂ ಕೂಡ. ತಂದೆ-ತಾಯಿಗೆ ಮೂರು ಸುತ್ತು ಬಂದು ಜಗತ್ತೇ ನಿಮ್ಮಲ್ಲಡಗಿದೆ ಎಂಬ ತತ್ವವನ್ನು ಬೋಧಿಸಿದ ಬುದ್ಧಿವಂತನೂ ಇವನೇ ಅಲ್ಲವೇ ? ಸ್ವಾಮಿನಿಷ್ಠೆಗೆ ಪ್ರತೀಕವಾದ ಈತ ಅಮ್ಮ ತನ್ನನ್ನು ದ್ವಾರದ ಕಾವಲುಗಾರನಾಗಿ ನಿಯೋಜಿಸಿದಾಗ ಅರಿಯದೇ ಮಾಡಿದ-ಶಿವನನ್ನೇ ಒಳಗೆ ಬಿಡದ ತಪ್ಪಿಗೆ ತನ್ನನ್ನೇ ಒಮ್ಮೆ ಬಲಿಕೊಟ್ಟುಕೊಂಡ ವೀರ ಮತ್ತು ಶೂರ!

ವೇದವ್ಯಾಸರು ಮಹಾವಿಷ್ಣುವಿನ ಸ್ವರೂಪವೇ ಅನ್ನುತ್ತಾರೆ. ಅಂಥವರು ಭಾರತ ಬರೆಯುವಾಗ ಅವರು ಶೀಘ್ರಗತಿಯಲ್ಲಿ ಹೇಳುತ್ತ ಹೋಗುವಾಗ ಬರೆದುಕೊಳ್ಳುವ ಲಿಪಿಕಾರನ ಅವಶ್ಯಕತೆಯಿತ್ತು. ಬರೇ ತಲೆಯಿಲ್ಲದ ಲಿಪಿಕಾರನಾದರೆ ಆತ ತಪ್ಪು ಮಾಡಿಯಾನು ಎಂದು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವ ಲಿಪಿಕಾರನೇ ಬೇಕೆಂಬ ಹುಡುಕಾಟಕ್ಕೆ ಮಿತಿಯಿರಲಿಲ್ಲ, ಯಾರೂ ಸಿಗುವ ಕುರುಹೇ ಇರಲಿಲ್ಲ! ಚಿಂತಾಕ್ರಾಂತರಾದ ವ್ಯಾಸರಲ್ಲಿಗೆ ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರ ನಾರದರೇ ಬಂದು ನಿಮ್ಮ ಚಿಂತೆಗೆ ಕಾರಣವೇನು ಎಂದು ಕೇಳಬೇಕಾಯಿತು! ವ್ಯಾಸರಿಂದ ಉತ್ತರ ಪಡೆದ ನಾರದರು ಗಣೇಶನ ಉಲ್ಲೇಖವನ್ನೂ ಆತ ಆವಿರ್ಭಾವವಾಗುವ ಕ್ರಮವನ್ನೂ ಅವನನ್ನು ಒಲಿಸಿಕೊಳ್ಳುವ ವೈಖರಿಯನ್ನೂ ತಿಳಿಸಿ ಈ ಬರವಣಿಗೆ ಆತನಿಂದಲ್ಲದೇ ಬೇರೆಯವರಿಂದ ಸಾಧ್ಯವಿಲ್ಲ ಎಂದುಬಿಟ್ಟರು. ವ್ಯಾಸರು ಗಣಪನನ್ನು ಆರಾಧಿಸಲಾಗಿ ಪ್ರಸನ್ನನಾದ ಸಿದ್ಧಿವಿನಾಯಕ ತನ್ನನ್ನು ಕರೆಸಿದ ಕಾರಣ ತಿಳಿದುಕೊಂದು ಅವರಿಗೊಂದು ನಿಬಂಧನೆ ವಿಧಿಸಿದ, ಏನೆಂದರೆ ವ್ಯಾಸರೇ ನೀವು ನಿಲ್ಲಿಸದೇ ನಿರರ್ಗಳವಾಗಿ ತೈಲಧಾರೆಯಂತೆ ಹೇಳುತ್ತ ಹೋಗಬೇಕು, ನೀವು ಮಧ್ಯೆ ಎಲ್ಲಾದರೂ ನಿಲ್ಲಿಸಿದರೆ ತಾನು ಲೇಖನಿ ಬಿಸುಟು ಹೊರಡುತ್ತೇನೆ ಎಂದು! ವ್ಯಾಸರಿಗೆ ವ್ಯಸನವಯಿತು, ಪುನಃ ಪ್ರಾರ್ಥಿಸಿ ತಾನು ಹೇಳುವುದನ್ನು ಅರ್ಥವಿಸಿಕೊಂಡು ಬರೆಯಬೇಕಾಗಿ ವಿನಂತಿಸಿದರು, ಇದಕ್ಕೆ ಇಬ್ಬರೂ ಸಮ್ಮತಿಸಿ ಭಾರತ ಬರೆಯಲ್ಪಟ್ಟಿತು, ತನ್ಮಧ್ಯೆ ಬರುವ ಹಲವು ಸಂಶಯಗಳನ್ನು ಬೇಕೆಂತಲೇ ಗಣೇಶ ಪ್ರಶ್ನೆಮಾಡಿ ತಿಳಿದುಕೊಂಡ. ಭಗವದ್ಗೀತೆಯನ್ನೂ ಒಳಗೊಂಡ ಮಹಾಭಾರತ ಗಣೇಶಗೀತೆಯನ್ನೂ ಸೇರಿಸಿಕೊಂಡಿತು! ಬರೆದು ಮುಗಿಸಿದ ಮಹಾಗಣಪತಿ ವೇದವ್ಯಾಸರಿಂದ ರಚಿಸಲ್ಪಟ್ಟ ಈ ಕಾವ್ಯ ಪಂಚಮವೇದವಾಗಲಿ ಎಂದು ಹರಸಿ ಹಾರೈಸಿ ಹೊರಟ. ಅದರ ಫಲವಾಗಿ ನಾವಿಂದು ಭಾರತವನ್ನು ಮೂಲ ಸಂಸ್ಕೃತದಲ್ಲಿ ಕಾವ್ಯವಾಗಿ ಪಡೆದಿದ್ದೇವೆ.

ನಿರಾಕಾರ ಮತ್ತು ಸದಾಕಾರ ಈ ಎರಡು ಮೂಲ ಸ್ವರೂಪದ ಆರಾಧನೆಯ ಕ್ರಮಗಳಾದರೆ ವಿಗ್ರಹರೂಪದ ಗಣಪನ ಉಪಾಸನೆಯಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎಂಬ ಎರಡು ವಿಧಗಳು. ಭಾಗಶಃ ಕುತ್ತಿಗೆಯ ಮೇಲ್ಭಾಗವನ್ನಷ್ಟೇ ಇಟ್ಟುಕೊಂಡು ಪೂಜಿಸುವುದು ಖಂಡೋಪಾಸನೆ, ಇಡೀ ಮೂರ್ತಿಯನ್ನು ಇಟ್ಟುಕೊಂಡು ಆರಾಧಿಸುವುದು ಅಖಂಡೋಪಾಸನೆ. [ಇನ್ನು ಕೆಲವರಂತೂ ಬರೇ ಒಂದು ಉರುಟು ಪ್ಲಾಸ್ಟಿಕ್ ರೂಪದಲ್ಲಿ ಅಲ್ಲೇ ಮಧ್ಯೆ ಸ್ವಲ್ಪ ಉಬ್ಬು ಸೊಂಡಿಲಾಕಾರಮಾಡಿ ನಮ್ಮ ವಾಹನಗಳಲ್ಲಿ ಇಟ್ಟುಕೊಂಡಿರುತ್ತೇವೆ.] ಭಾರತದ ಹಲವು ಪ್ರದೇಶಗಳಲ್ಲಿ,ರಾಜ್ಯಗಳಲ್ಲಿ ವಿವಿಧ ನಮೂನೆಯ ವಿಘ್ನೇಶ ವಿಗ್ರಹಗಳು ಕಾಣಸಿಗುತ್ತವೆ. ಕೆಲವು ಕೇಸರಿ ಬಣ್ಣದವು, ಹಲವು ಕಪ್ಪು ಶಿಲೆಯವು, ಇನ್ನು ಕೆಲವು ಬಿಳಿಯ ಗ್ರಾನೈಟ್ ನಿಂದ ಮಾಡಿದವು ಮತ್ತಿನ್ನೂ ಕೆಲವು ಮಣ್ಣಿನಿಂದ ಮಾಡಿದವುಗಳು. ಅಪರೂಪದಲ್ಲಿ ಮರದಲ್ಲಿ ತಯಾರಿಸಿದ ವಿಗ್ರಹಗಳು ಮತ್ತು ಲೋಹದಲ್ಲಿ ತಯಾರಿಸಿದವುಗಳೂ ಬಳಕೆಯಲ್ಲಿವೆ. ಮೂರ್ತಿ ಯಾವುದೇ ಆಗಿರಲಿ ಅದನ್ನು ತಂದ ಮೇಲೆ ಅದಕ್ಕೊಂದು ಸಂಸ್ಕಾರದ ಕ್ರಮ ಇರುತ್ತದೆ. ಅದನ್ನು ಮಾಡದ ಹೊರತು ಆ ಮೂರ್ತಿಯಲ್ಲಿ ದೇವರ ಪ್ರತಿಬಿಂಬ ಅಥವಾ ಛಾಯಾಬಿಂಬ ಪೂಜೆಗೆ ಅಣಿಗೊಂಡಿರುವುದಿಲ್ಲ. ಇದರಲ್ಲೂ ದೇವಸ್ಥಾನ, ಮನೆ/ಗೃಹ/ಮಹಲು, ವಾಹನ ಈ ರೀತಿ ಮೂರು ರೀತ್ಯಾ ವಿಭಜಿಸಿ ಆಯಾಯ ಸ್ಥಳಕ್ಕೆ ತಕ್ಕುದಾದ ವಿಗ್ರಹವನ್ನು ಪಡೆಯಬಹುದಾಗಿದೆ. ಇಲ್ಲಿ ಪೂಜೆಗೂ ಮುನ್ನ ನಡೆಸುವ ವೈದಿಕ ವಿಧಿ-ವಿಧಾನ ಸಂಸ್ಕಾರಗಳು ಆಯಾಯ ಸ್ಥಳ ಮತ್ತು ವಿಗ್ರಹದ ಸ್ವರೂಪಕ್ಕೆ ತಕ್ಕಂತೆ ಇರುತ್ತವೆ. ಉದಾಹರಣೆಗೆ ದೇವಸ್ಥಾನಕ್ಕಾದರೆ ಅಲ್ಲಿ ಆಗಮ ಶಾಸ್ತ್ರ ರೀತ್ಯಾ ಹೋಮಗಳು-ಶುದ್ಧೀಕರಣ,ಸಾತ್ವಿಕ ಬಲಿ[ಪ್ರಾಣಿ ಬಲಿಯಲ್ಲ], ಅಷ್ಟಬಂಧ ಇವೇ ಮೊದಲಾದ ಹಲವು ಹತ್ತು ಕಾರ್ಯಕ್ರಮಗಳಾದರೆ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಆವಾಹನಾ ಕಾರ್ಯಕ್ರಮದ ಪ್ರಮಾಣ ತುಂಬಾ ಕಮ್ಮಿ ಇರುತ್ತದೆ. ಅಂತೆಯೇ ವಾಹನದಲ್ಲಿ ಇಡುವ ಮೂರ್ತಿಗಳಿಗೆ ಅತೀ ಕಡಿಮೆ ಕಾರ್ಯದಿಂದ ಅವುಗಳಿಗೊಂದು ಸಂಸ್ಕಾರ ಕೊಡುತ್ತಾರೆ. ಈ ಸಂಸ್ಕಾರ ಕೊಡುವಿಕೆಯಿಂದ ವಿಗ್ರಹದ ತಯಾರಿಕಾ ಹಂತದಲ್ಲಿ ಆಗಿರಬಹುದಾದ ದೋಷಗಳು ಅಥವಾ ವಿಗ್ರಹ ರೂಪಕ್ಕೂ ಬರುವ ಮೊದಲು ಆ ಮೂಲವಸ್ತುವಿದ್ದ ರೀತಿ, ಅದರ ಹೀನ ಸ್ವರೂಪ, ಅದರಲ್ಲಿರುವ ನೆಗೆಟಿವ್ ಎನರ್ಜಿ ಎಲ್ಲಾ ತೆಗೆದು ಹಾಕಲ್ಪಡುತ್ತದೆ. ಇಷ್ಟಾದ ಮೇಲೆಯೇ ಮೂರ್ತಿ ಪೂಜೆಗೆ ಅರ್ಹವೇ ಹೊರತು ಅದಕ್ಕೂ ಮೊದಲು ಅದೊಂದು ಕಲಾಕೃತಿ ಅಷ್ಟೇ! ದೇವಸ್ಥನಗಳಲ್ಲಿ ಇರುವ ವಿಗ್ರಹಗಳು ಸ್ಥಿರ ಅಥವ ಅಚಲ ವಿಗ್ರಹಗಳೆಂದೂ ಮನೆ ಹಾಗೂ ವಾಹನಗಳಲ್ಲಿರುವ ವಿಗ್ರಹಗಳು ಚರ ಅಥವಾ ಚಲವಿಗ್ರಹಗಳೆಂದೂ ಗುರುತಿಸಲ್ಪಡುತ್ತವೆ. ದೇವಸ್ಥಾನಗಳಲ್ಲಿರುವ ವಿಗ್ರಹಗಳಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿ ಇದ್ದು ಮನೆಯಲ್ಲಿರುವ ವಿಗ್ರಹಗಳಲ್ಲಿ ಕಡಿಮೆ ಮತ್ತು ಇತರೆಡೆಗಳಲ್ಲಿರುವ ವಿಗ್ರಹಗಳಲ್ಲಿ ಅದು ಇನ್ನೂ ಕಡಿಮೆ ಇರುತ್ತದೆ.

ನಮಗೆ ಗೊತ್ತಿರದ ಅನೇಕ ಚೀನೀಯರ ಕಪ್ಪೆಯನ್ನೋ-ಕವಡೆಯನ್ನೋ ತಂದು ಅದು ವಾಸ್ತು ಎಂದು ದುಡ್ಡುಮಾಡುವವರು ಭಾರತದ ಎಲ್ಲೆಡೆ ಹಬ್ಬಿದ್ದಾರೆ. ಅದಕ್ಕೆ ಬದಲಾಗಿ ನಮ್ಮ ಕಣ್ಣೆದುರು ಕುಳಿತರೆ ಅತ್ಯಂತ ಕಿರಿದದ ವಿಗ್ರಹವಾಗಿಯೂ ಎಲ್ಲ ಪಾಸಿಟಿವ್ ಎನರ್ಜಿಯನ್ನು ಎಳೆದು ತರಬಲ್ಲ ಗಣೇಶನನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ ? ಒಬ್ಬ ಲಾಫಿಂಗ್ ಮ್ಯಾನ್ ಬದಲಿಗೆ ನಗುತ್ತ ನೃತ್ಯಮಾಡುವ ನಾಟ್ಯಗಣೇಶನನ್ನು ಇಟ್ಟುಕೊಳ್ಳಬಹುದಲ್ಲ ?


ಸರಿಗಮಪದನಿಸ ಹಾಡೀ
ನಮ್ಮ ಬೆನಕಣ್ಣನ ಕೊಂಡಾಡೀ ||ಪ||

ಮೊರದಗಲದ ಕಿವಿಯಿಂದಾ ದುಗುಡವ
ಹರ ಸುತ ಕೇಳುತ ಬಂದಾ
ಮಿರಿಮಿರಿ ಮಿಂಚುವ ಕಣ್ಣು ಸೊಂಡಿಲ
ಹರಿದಾಡಿಸಿ ತಾ ನಿಂದಾ ||೧||

ಲಂಬೋದರನನು ಹೊತ್ತು ಮೂಷಕ
ಅಂಬೆಗಾಲಿಡುವ ಪರಿಯು
ತುಂಬಿತು ಹೃನ್ಮನವೆಲ್ಲಾ ಖುಷಿಯಲಿ
ಸಂಭ್ರಮಿಸುವ ದಿನಚರಿಯೂ ||೨||

ಅದ್ಭುತ ಮಾಯಾಲೋಕ ಈ ಗಣಪ
ಸದ್ದುಮಾಡದಲೇ ಬರುವಾ
ನಿದ್ದೆಯಲಿಹ ಜನವೆಲ್ಲಾ ಕೇಳಿ
ಎದ್ದು ನಿಂತು ನಾವ್ ಕರೆವ ||೩||

ಶುದ್ಧಮನವು ಸಾಕವಗೆ ನಮ್ಮನು
ಉದ್ಧರಿಸಲು ಬರುವವಗೆ
ಪೆದ್ದುತನದಿ ನಾವೆಲ್ಲಾ ಈ ಪರಿ
ಗುದ್ದಾಡಲೇಕೆ ಒಳಗೆ ||೪||



Monday, June 28, 2010

ಮೀಸೆ ಪುರಾಣದ ಅಂತ್ಯ ಭಾಗವು !!


ಮೀಸೆ ಪುರಾಣದ ಅಂತ್ಯ ಭಾಗವು !!


ಮೀಸೆಯೆಂಬಾ ಕಾಡ ಏಕೈಕ ದೊರೆ ನಾನು

ಕೂಸುಗಳ ಹೆದರಿಸುವೆ ಹುರಿ ಮೀಸೆ ತಿರುವಿ
ಈಸುಖದೊಳೆನ್ನ ಸಂಪತ್ತು ಅಡಗಿಹುದಮಿತ
ವಾಸುದೇವನ ಪರಮ ಕೃಪೆಯಿಂದ ಸತತ

ಹಬ್ಬ ಹರಿದಿನಗಳಲಿ ಉಣ್ಣುವುದು ಪಾಯಸವ
ಉಬ್ಬುತ್ತ ನನಗಧಿಕ ವ್ಯಂಜನಾದ್ರಿಯಲಿ
ತಬ್ಬಿಬ್ಬು ಹಲವು ಜನ ಬೋಳಿಸಿದರಾಗಾಗ
ಹುಬ್ಬು ಏರಿಸಿ ನೋಡಿಹರು ಬಹಳ ಸಮಯ

--ಇವು ಮೀಸೆಯ ಮಹತ್ವವನ್ನು ಸಾರುವ ಮುಕ್ತಕಗಳು! ಕೆಲವ್ರಿಗೆ ಮೀಸೆ ಆಸ್ತಿಯಾಗಿದ್ದರೆ ಇನ್ನು ಕೆಲವರಿಗೆ ಮಕ್ಕಳನ್ನು ಹೆದರಿಸುವ ಹತ್ಯಾರ! ಮತ್ತೆ ಕೆಲವರ ಮೀಸೆಯಂತೂ ಆಗಾಗ ಏನಾದರೊಂದನ್ನು ಮೆದ್ದುಕೊಂಡೇ ಇರುತ್ತದೆ. ಹಬ್ಬ-ಹರಿದಿನಗಳಲ್ಲಿ ಪಾಯಸ ಮುಂತಾದವನ್ನು ಪಡೆದರೆ ಮತ್ತೆ ಕೆಲವೊಮ್ಮೆ ಕರಿದ ಪದಾರ್ಥಗಳ ಕೆಲಭಾಗವನ್ನು ಸ್ವೀಕರಿಸುವುದು. ಮೀಸೆಯನ್ನು ಕೆಲವುಸಲ ಬೇಡ ಅಂತ ಬೋಳಿಸಿಬಿಟ್ಟರೆ ನೋಡುವ ಪರಿಚಯದ ಜನರೆಲ್ಲ ತಬ್ಬಿಬ್ಬು " ಇವನು ಅವನೇನಾ ಅಥವಾ ಇವನು ಬೇರೇನಾ ? " ಎಂದು ತಮ್ಮೊಳಗೇ ಪ್ರಶ್ನೆ ಹಾಕಿಕೊಂಡು ನಿಲ್ಲುತ್ತಾರೆ, ನೋಡುತ್ತಾರೆ, ನಗೆಯಾಡಿ ಮೀಸೆ ಬೋಳಿಸಿಕೊಂಡವ ಪ್ರತಿಕ್ರಿಯಿಸುತ್ತಾನೋ ಎಂದು ಕಾದುನೋಡುತ್ತಾರೆ.

ಮೀಸೆಯನ್ನು ಬೋಳಿಸಿಕೊಳ್ಳುವುದು ಇಂಗ್ಲೀಷರಿಂದ ಅದರಲ್ಲೂ ಅಲೇಕ್ಸಾಂಡರ್ ನಿಂದ ಬಂತು ಎಂಬುದು ಒಂದು ಕಥೆ. ಆದರೆ ಅದು ಹೌದೋ ಅಲ್ಲವೋ ಅಂತೂ ನಮ್ಮ ಬಾಲೀವುಡ್ ಅಣ್ಣಗಳೆಲ್ಲ ಮೀಸೆ ಇಲ್ಲದವರೇ ಆಗಿದ್ದಾರೆ. ಅವರ ಲೆಕ್ಕದಲ್ಲಿ ಮೀಸೆ ಇರದಿದ್ದರೆ ಬಹಳ ಚಿಕ್ಕವರಂತೇ ಕಾಣುತ್ತೇವೆ ಎಂದಿರಬಹುದು. ಬೇರೆ ಪ್ರಾಂತೀಯ ಸಿನಿಮಾ ರಂಗಗಳಲ್ಲೂ ಮೀಸೆ ಬೋಳಿಸಿಕೊಳ್ಳುವ ನಟರು ಬಹಳ ಇದ್ದಾರೆ. " ನಾನು ಹೇಳಿದ್ದು ಆಗಲಿಲ್ಲ ಅಂದರೆ ಮೀಸೆ ಬೋಳಿಸಿಕೊಳ್ಳುತ್ತೇನೆ ?" ಎಂದು ಪಂಥಕ್ಕೂ ಮೀಸೆಯನ್ನೇ ಬಳಸುವ ಜನ ಇದ್ದಾರೆ. ಇದರಲ್ಲೇ ವಿಭಿನ್ನತೆ ಮೆರೆತು ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಎನ್ನುವವರಿದ್ದಾರೆ. ಮೀಸೆ ಇಟ್ಟುಕೊಂಡು ಬೇಡದ ಕೆಲಸವೋ ಮಾಫಿಯಾ ಕೆಲಸವೋ, ದೇಶದ್ರೋಹಿ ಕೆಲಸವೋ ಮಾಡಿ ಆ ನಂತರ ಗೊತ್ತಾಗದಿರಲಿ ಎಂದಿ ಗಡ್ಡ ಮೀಸೆ ತಲೆ ಎಲ್ಲವನ್ನೂ ಒಮ್ಮೆಲೇ ಬೋಳಿಸಿ ತಿರುಗುವ ಮಂದಿ ಒಂದೆಡೆ ಆದರೆ, ಇನ್ನೊಂದೆಡೆ ಎಲ್ಲವನ್ನೂ ಮೊದಲೇ ಬೋಳಿಸಿಕೊಂಡು ಅಂಥಾ ಕುಕೃತ್ಯಗಳಲ್ಲಿ ತೊಡಗಿ ನಂತರ ಅವುಗಳನ್ನ ಕೃತ್ರಿಮವಾಗಿ ಅಂಟಿಸಿಕೊಂಡು ತಲೆಮರೆಸಿಕೊಳ್ಳುವವರೂ ಇದ್ದಾರೆ!

ಕೇರಳ ಪ್ರಾಂತದಲ್ಲಿ ಮೀಸೆಗೆ ಬಹಳ ಪ್ರಧಾನ್ಯತೆ. ಎದುರಿಗೆ ಬಂದ ವ್ಯಕ್ತಿ ದಟ್ಟ ಕಪ್ಪು ಪೊದೆ ಮೀಸೆಯನ್ನು ಹೊಂದಿದ್ದರೆ ಆತ ಬಹುತೇಕ ಮಲಯಾಳಿಯೇ ಎಂಬ ಕಾಲವೊಂದಿತ್ತು, ಈಗಲೂ ಇದೆ ಆದರೆ ಬಣ್ಣಗಳ ಬಳಕೆಯ ಮಹಿಮೆಯಿಂದ ಈಗ ಎಂಥಾ ಬಿಳೀ ಅಥವಾ ಸಮ್ಮಿಶ್ರ ಬಣ್ಣದ ಮೀಸೆಯನ್ನೂ ಕೂಡ ಕಪ್ಪು ಮೀಸೆಯನ್ನಾಗಿ ಮಾಡಬಹುದಲ್ಲ-ಹೀಗಾಗಿ ಆ ಹೇಳಿಕೆಯನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಕೈಬಿಡಲಾಗಿದೆ! ಮಮ್ಮುಟ್ಟಿ ಎಂಬ ನಟನ ಮೀಸೆ ನೋಡಿದ್ದೀರಲ್ಲ, ಹೆಚ್ಚು ಪಕ್ಷ ಕೇರಳದ ಮೀಸೆಗಳೆಲ್ಲ ಆ ಮಾದರಿಯಲ್ಲೇ ಇರುತ್ತವೆ. ಅಲ್ಲಿನ ತೆಂಗಿನಕಾಯಿ ಮಿಶ್ರಿತ ಆಹಾರ ಸೇವನಾಕ್ರಮ, ಕೊಬ್ಬರಿ ಎಣ್ಣೆಯ ಬಹೂಪಯೋಗ ಇವುಗಳಿಂದ ಕೇರಳಿಗರ ಕೂದಲು-ಮೀಸೆ ಎಲ್ಲವೂ ಕಪ್ಪಗೇ ಇರುತ್ತವೆ. ಎಲ್ಲೋ ಜಿರಲೆಗಳ ಮಧ್ಯೆ ಅಪರೂಪಕ್ಕೊಂದು ಬಿಳಿಜಿರಲೆ ಇರುವಂತೇ ಅಪರೂಪಕ್ಕೊಬ್ಬೊಬ್ಬರು ಬಿಳೀ ಬಣ್ಣದ ಮೀಸೆ ಹೊಂದಿರುತ್ತಾರೆ ಅಲ್ಲಿ. ವ್ಯಾಪಾರಮಾಡುವ ಕೇರಳದ ಕಾಕಾಗಳು ದಪ್ಪ ಮೀಸೆಯೊಂದಿಗೆ ಮೊದಲಿನ ಒಂದು ಗುಂಡಿ ತೆರೆದಿಟ್ಟ ಕಪ್ಪು ಕೂದಲು ಭರಿತ ಎದೆಯನ್ನು ಪ್ರದರ್ಶಿಸುತ್ತ ಉದ್ದ ತೋಳಿನ ಅಂಗಿಯ ತೋಳಭಾಗವನ್ನು ಮೇಲಕ್ಕೆ ಸುತ್ತಿ ಒಂಥರಾ ಯುನಿಫಾರ್ಮಿಟಿ ಮೆರೆಯುತ್ತಾರೆ!

ಹಿಟ್ಲರ್, ಐನಸ್ಟೈನ್ ಇವರುಗಳ ಮೀಸೆಯನ್ನೆಲ್ಲ ನೋಡಿರುವಿರಲ್ಲ? ನಮ್ಮಲ್ಲಿ ಮೀಸೆಯ ವೆರೈಟಿಗೇನು ಬರಗಾಲವೇ? ಸಂಗೊಳ್ಳಿ ರಾಯಣ್ಣನ ಮೀಸೆ, ಕೃಷ್ಣದೇವರಾಯನ ಮೀಸೆ, ಶಿವಾಜಿಯ ಮೀಸೆ, ಟಿಪ್ಪುವಿನ ಮೀಸೆ ಹೀಗೇ ರಾಜರುಗಳ ಕಾಲದಿಂದ ಹಿಡಿದು ಇಂದಿನ ನಮ್ಮ ಮಂತ್ರಿಮಹೋದಯರುಗಳ ಮೀಸೆಗಳನ್ನು ನೋಡಿ ಒಬ್ಬೊಬ್ಬರದು ಒಂದೊಂಥರ! ಯುನಿಟಿ ಇನ್ ಡೈವರ್ಸಿಟಿ !! ಅಂದಹಾಗೇ ನಮ್ಮ ಭಾರತೀಯರ ಮೇಲೆ ಮೊಘಲರು ಮೊದಲಾಗಿ ದಂಡೆದ್ದು ಬಂದಾಗ ಅಂದಿನ ಹಿಂದಿನ ಕಾಲದಲ್ಲಿ ಗ್ರಾಮ್ಯ ಪ್ರದೇಶಗಳಲ್ಲಿ ಬಹಳ ಲೇಟೆಸ್ಟ್ ಎನ್ನುವ ಆಯುಧಗಳು ಯಾವುದೂ ಇರಲಿಲ್ಲವಂತೆ. ಆಗ ತುಂಬಾ ಜನಸೇರಿ ಬ್ರಾಹ್ಮಣರು ಬುದ್ಧಿವಂತರು ವಿಚಾರಿಸೋಣ[ ಇಲ್ಲದಿದ್ದರೆ ಬಂದ ಆ ದಂಡನ್ನು ಹಿಮ್ಮೆಟ್ಟಿಸದೇ ತಾವೆಲ್ಲ ಜೀವಗಳನ್ನು ಬಲಿಗೊಡಬೇಕಲ್ಲ ಎಂಬ ಕಾರಣಕ್ಕಾಗಿ] ಎಂದು ಹೋದರಂತೆ. ಕೆಲವು ತಲೆ ಇರುವ ಬ್ರಾಹ್ಮಣರು ಕಲೆತು ಬಹುಬೇಗ ಚಿಂತನ ಮಂಥನ ಮಾಡಿ ಒಂದು ಪ್ಲಾನ್ ಮಾಡಿದರಂತೆ! ಅದರ ಪ್ರಕಾರ ನಮ್ಮ ಪ್ರಾಂತಗಳಲ್ಲಿ ಬಹುತೇಕರಿಗೆ ಮೀಸೆ ಇದೆ, ಅದರಂತೆ ತೋಟಗಳಲ್ಲಿ ಬಾಳೆಗಿಡಗಳೂ ಹುಲುಸಾಗಿ ಬೆಳೆದಿರುತ್ತವೆ. ಆ ಬಾಳೆಗಿಡಗಳನ್ನು ಕಡಿದು ಅವುಗಳ ಮಧ್ಯದ ಟ್ಯೂಬ್ ಲೈಟ್ ಥರದ ದಿಂಡನ್ನು ಒಂದೇ ಅಳತೆಗೆ ಮಾಡಿಕೊಳ್ಳುವುದು, ಬಿಳೇ ಪಂಚೆ ತೊಟ್ಟು, ಬಿಳೇ ಬಾಳೆಯ ದಿಂಡುಗಳನ್ನು ಎಲ್ಲರೂ ಹೆಗಲಮೇಲೆ ಇಟ್ಟುಕೊಂಡು ಒಂದೇ ಮಂದಗತಿಯಲ್ಲಿ ನಾಲ್ಕಾರು ಸಾಲಿನಲ್ಲಿ ನಡೆಯುವುದು, ಅವರಲ್ಲಿ ಕೋಲಕಾರನಾದ ವ್ಯಕ್ತಿ ಕೆಲವು ಸೂಚನೆಗಳನ್ನು ಕೊಡುವುದು, ಆ ಸೂಚನೆಗಳಂತೆ ಎಲ್ಲರೂ ನಡೆದುಕೊಳ್ಳುವುದು --ಎಂದು ನಿರ್ಧಾರಮಾಡಿಕೊಂಡರಂತೆ. ಹಾಗೆ ಮಾಡಿಕೊಂಡು ಮುಂದೆ ಹೋಗುವಾಗ ಕೋಲಕಾರನಿಗೆ ಉಚ್ಚೆಗೆ ಹೋಗುವ ಅವಸರವಾಯಿತು. ಆತ ಮೀಸೆ ತಿರುವುತ್ತ ಅಲ್ಲೇ ಪಕ್ಕಕ್ಕೆ ಸರಿದು ಬಿಳಿಯ ಬಾಳೆಯ ದಿಂಡನ್ನು ಎಡಹೆಗಲಮೇಲೆ ಸರಿಯಾಗಿ ಹಿಡಿದು ಮೂತ್ರಕ್ಕೆ ಕುಳಿತ. ಅವನೇ ಕ್ಯಾಪ್ಟನ್ ಎಂದಮೇಲೆ ಅನುಸರಿಸಬೇಕಲ್ಲವೇ ? ಎಲ್ಲರೂ ಅದೇ ರೀತಿ ಅನುಸರಿಸಿದರು. ಎದುರಿಗೆ ದೂರದಲ್ಲಿ ನೋಡುತ್ತ ನಿಂತಿದ್ದ ಮೊಘಲ್ ಸೈನ್ಯಾಧಿಪತಿಗಳು ಎಂತಹ ಶಿಸ್ತಿನ ಭಾರತೀಯ ಸೈನ್ಯವಪ್ಪಾ ಈ ಹಳ್ಳಿಗಳಲ್ಲಿ ಎಂದುಕೊಳ್ಳುವುದರ ಜೊತೆಗೆ ತಾವು ಜನುಮದಲ್ಲೇ ಕಂಡರಿಯದ ವಿಚಿತ್ರ ಮತ್ತು ಅದ್ಬುತ ಬಂದೂಕಿಗೂ ಮಿಗಿಲಾಗಿ ಅಡ್ವಾನ್ಸ್ಡ್ ಆಗಿರುವಂತೆ ಕಾಣುವ ಬಿಳಿಯ ಆಯುಧವನ್ನು ಕಂಡು ತಮ್ಮ ಸೈನ್ಯವನ್ನು ಮರಳಿ ಒಯ್ದರಂತೆ! ಇಲ್ಲೂ ನಮ್ಮ ಮೀಸೆ ಕೂಡ ಕೆಲಸಮಾಡಿದೆ!

ಮೀಸೆಯನ್ನು ಬಳಸಿಕೊಂಡು ಹಲವು ಗಿನ್ನೆಸ್ ದಾಖಲೆಗಳು ನಡೆದಿವೆ ಅಲ್ಲವೇ ? ಮೀಸೆಯಿಂದ ತುಂಬಿದ ಬಿಂದಿಗೆ ಎತ್ತುವುದು, ಭಾರದ ಕಲ್ಲನ್ನು ಎತ್ತುವುದು, ಮೀಸೆಗೆ ದಾರಕಟ್ಟಿ ಅದರ ಇನ್ನೊಂದು ತುದಿಯನ್ನು ಕಾರಿಗೆ ಕಟ್ಟಿ ಎಳೆದವರಿದ್ದಾರೆ. ಇಷ್ಟೇ ಏಕೆ ಮೀಸೆಯನ್ನು ಮಾರುದ್ದ ಬೆಳೆಸಿ ಕೂದಲಿನಂತೆ ಕಾಪಾಡುವ ಬಾಬಾಗಳು ನೋಡಸಿಗುತ್ತಾರೆ. ತೊಳೆಯದೇ ಹಾಗೇ ಬಿಡುವ ಉದ್ದನೇ ಮೀಸೆ ಉದ್ದದ ಮಲಬಾರ್ ಹೊಗೆಸೊಪ್ಪಿನ ಕಟ್ಟನ್ನು ಕಾಣುವ ಹಾಗೇ ಕಾಣುತ್ತದೆ. ಕೆಲವರು ಕಣ್ಣಲ್ಲಿ ನಕ್ಕಂತೆ ಇನ್ನು ಕೆಲವರು ತಮ್ಮ ಮೀಸೆಯಲ್ಲೇ ನಗುತ್ತಾರೆ ಅದು ಹೇಗೆ ಎಂದರೆ ಅನುಭವದಿಂದ ಮಾತ್ರ ನೀವದನ್ನು ತಿಳಿಯಲು ಸಾಧ್ಯ! ಅವರು ನೇರವಾಗಿ ಗಹಗಹಿಸಿ ನಗುವುದೇ ಇಲ್ಲ, ಅವರು ಮೀಸೆಯುಳ್ಳ ಮೇಲ್ದುಟಿಯನ್ನು ಸ್ವಲ್ಪ ಅಗಲಿಸಿದರೆಂದರೆ ಅಲ್ಲಿ ನಗೆ ಮೂಡಿಬರುತ್ತದೆ.

ನಮ್ಮ ಮಹಾಭಾರತ, ಪುರಾಣ ಇವುಗಳಲ್ಲೆಲ್ಲ ಬರುವ ಎಲ್ಲಾ ಪಾತ್ರ್ಧಾರಿಗಳೂ ಮೀಸೆ ಹೊಂದಿದ್ದರು. ಇಂತಿಂಥವರಿಗೆ ಇಂತಿಂಥಾ ಮೀಸೆ ಇತ್ತು ಎಂಬುದು ಬಹಳ ಜನಜನಿತ. ಆ ಪಾತ್ರ ಕಣ್ಣ ಮುಂದೆ ಬಂದಾಗ ಆ ರೀತಿಯದೇ ಮೀಸೆ ಇದ್ದರೆ ಸರಿ, ಇಲ್ಲದಿದ್ದರೆ ಆ ಪಾತ್ರವನ್ನು ನಾಟಕ-ಯಕ್ಷಗಾನ ಮೊದಲಾದವುಗಳಲ್ಲಿ ಅಭಿನಯಿಸುವ ವ್ಯಕ್ತಿಗೆ ಅನುಭವ ಸಾಲದು ಎಂದುಕೊಳ್ಳುತ್ತಾರೆ ಜನ. ಮೀಸೆಯಲ್ಲಿ ಇನ್ನೂ ಒಂದೆರಡು ರೀತಿಯನ್ನು ನಾನಿಲ್ಲಿ ಹೇಳಲೇಬೇಕು. ಒಂದು ಸೇನಾ ಮೀಸೆ, ಗಾಬರಿಯಗಬೇಡಿ-ಸೇನೆಗೆ ಮೀಸೆಯಿರುವುದಿಲ್ಲ ಅದರೆ ಸೈನಿಕರಿಗಿರುತ್ತದಲ್ಲ, ಅಲ್ಲಿ ಬಹುತೇಕ ಅವರದ್ದಾದ ಒಂದು ರೀತಿ ಇರುತ್ತದೆ. ಇನ್ನೊಂದು ಮುಳ್ಳು ಮೀಸೆ-ಅದು ಹೇಗೆ ಎಂದರೆ ನೀವು ಮುಳ್ಳುಹಂದಿಯನ್ನು ಚಿತ್ರದಲ್ಲಾದರೂ ನೋಡಿರಲಿಕ್ಕೆ ಸಾಕು-ಅದೇ ರೀತಿ ನಮ್ಮಲ್ಲಿ ಕೆಲವರ ಕೂದಲು ಮೀಸೆ ಎಲ್ಲ ಮುಳ್ಳಿನ ರೀತಿ ನಿಂತಿರುತ್ತದೆ, ಬಹಳ ಸ್ಟ್ರಾಂಗು ! ತಾಗಿದರೆ ಗಾಯವೇ ಆಗಬೇಕು. ಈ ಮೀಸೆಗೆ ಶತ್ರುಪರಾಜಯ ಮೀಸೆ ಎಂದೂ ಕರೆಯುತ್ತಾರೆ! ವಿರಜಾ ಮೀಸೆಯ ಬಗ್ಗೆ ವಿಸ್ತರಿಸಿ ಹೇಳಿರಲಿಲ್ಲ, ಅದು ವಿರಕ್ತರಿಗೆ ಬರುವ ಮೀಸೆ. ನಮ ಸನ್ಯಾಸಿಗಳೆಲ್ಲ ಗಡ್ಡ-ಮೀಸೆಗಳನ್ನು ಅಂದಕ್ಕಾಗಿ ಬಿಡುವುದಿಲ್ಲ, ಬದಲಾಗಿ ಪ್ರತೀ ಹುಣ್ಣಿಮೆಗೊಮ್ಮೆ ಅವರು ತಲೆ-ಗಡ್ಡ-ಮೀಸೆ ಎಲ್ಲವುಗಳನ್ನೂ ಮುಂಡನಮಾಡಿಸಿಕೊಳ್ಳುತ್ತಾರೆ. ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ಬರುವವರೆಗೆ ಯಾವುದೇ ನಿಯಂತ್ರಣ ಅಥವಾ ಕತ್ತರಿಸುವಿಕೆ ಇಲ್ಲದೇ ತನಗಿಷ್ಟಬಂದಹಾಗೇ ತಾನೇ ಬೆಳೆವ ಮೀಸೆ ವಿರಜಾಮೀಸೆ.

ನಮ್ಮ ಕನ್ನಡದಲ್ಲಿ ಫ್ಲಾವರ್ ಬ್ರಾಕೆಟ್ಟಿಗೆ ಮೀಸೆ ಕಂಸ ಎನ್ನುತ್ತೇವೆ. ಮಹಾಭಾರತದಲ್ಲಿಯ ಕಂಸನಿಗೂ ಈ ಮೀಸೆಕಂಸಕ್ಕೂ ಯಾವುದೇ ಸಂಬಂಧವಿಲ್ಲ, ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ-ಹುನ್ನಾರವೂ ಇಲ್ಲ, ಎಲ್ಲಾ ಓಪನ್ ಓಪನ್! ಈ ಮೀಸೆ ಕಂಸದ ಥರದ ಮೀಸೆ ಕೆಲವರಿಗೆ ಇರುತ್ತದೆ. ಅದನ್ನು ಅವರು ಹಾಗೇ ಒಪ್ಪವಾಗಿ ಹೂವಿನ ಥರವೇ ಇಟ್ಟುಕೊಂಡಿರುತ್ತಾರೆ. ಇಂತಹ ಮೀಸೆಯುಳ್ಳವರು ಪ್ರಾಯಶಃ ಕಿಡಿಗೇಡಿಗಳಾಗಿರುವುದಿಲ್ಲ. ಇನ್ನು ಸಮ್ಮಿಶ್ರ ಸರಕಾರದಂತೆ ಬಣ್ಣದಲ್ಲೂ, ಬೆಳವಣಿಗೆಯಲ್ಲೂ ವಿವಿಧ ರೀತಿಯ ಮಿಶ್ರಣವನ್ನು ತೋರಿಸುವ ಮೀಸೆ ಸಮ್ಮಿಶ್ರ ಮೀಸೆ.
ಮತ್ತೊಂದು ಶೈಲಿಯೆಂದರೆ ಅದು ಪಾರ್ಕಿನಲ್ಲಿ ಹೊಸದಾಗಿ ಹಾಕಿದ ಹಸಿರುಚಿಗುರಿನ ಹಾಗೇ ಕೂದಲುಗಳನ್ನೆಲ್ಲ ೨-೩ ಸೆಂಟಿಮೀಟರ್ ಗೆ ಕಟಾವ್ ಮಾಡಿ ಕಾಲೊರೆಸುವ ತೆಂಗಿನನಾರಿನ ಮ್ಯಾಟ್ ನಂತೆ ಮುಟ್ಟಿದರೆ ಕುಶನ್ ಥರದ ಫೀಲಿಂಗ್ ಕೊಡುವ ’ಪಾರ್ಕ್ ಮೀಸೆ’.

ಇತ್ತೀಚೆಗೆ ತರಾವರಿ ಬಣ್ಣಗಳು ಬಂದಿರುವುದರಿಂದ ಕಪ್ಪುಬಣ್ಣವನ್ನು ಹೊದ್ದ ಟೆಫ್ಲಾನ್ ಕೋಟೆಡ್ ಮೀಸೆ, ಅರಗೆಂಪು ಬಣ್ಣ ಹೊಂದಿದ ಕಾಪರ್ ಬಾಟಮ್ ಮೀಸೆ, ಕಂದು ಬಣ್ಣ ಹೊಂದಿದ ನೈಲಾನ್ ಮೀಸೆ, ಅಧಿಕ ಇಳುವರಿ ತೋರುವ ಬಳುವರೀ ಮೀಸೆ[ಬಳ್ಳಿಯ ಥರ ಹರಡಿರುತ್ತದೆ], ಕುರುಚಲು ಗಿಡಗಳ ಥರ ಕಾಣಿಸುವ ಕುರುಚಲು ಮೀಸೆ, ಮಧ್ಯೆ ಮಧ್ಯೆ ಕಲೆಗಳಿಂದ ಕಂಗೊಳಿಸುವ ಕಜ್ಜಿಮೀಸೆ, ಮಸಾಲೆದೋಸೆಯನ್ನು ಅರ್ಧಮಡಿಸಿದ ಹಾಗೇ ಕಾಣುವ ಮಸಾಲೆ ಮೀಸೆ, ಚಪ್ಪನ್ನೈವತ್ತಾರು ದೇಶಗಳನ್ನು ಸೇರಿಸಿ ಹೊಸೆದು ಒಂದು ಭಾರತವನ್ನು ಕಟ್ಟಿದಂತೆ ಮೀಸೆಯನ್ನು ಅದು ಹುಟ್ಟಿದ ಜಾಗದಿಂದಲೇ ಅಡ್ಡಡ್ಡ ತಿರುವಿ ಹದಗೊಳಿಸಿ ಜೈಕಿಸಾನ್ ದೃಶ್ಯಕ್ಕೆ ತೋರಿಸಲು ಮಾಡಿದ ಮೀಸೆ ಜೈಕಿಸಾನ್ ಮೀಸೆ!ಇವೆಲ್ಲ ಬಹುರೂಪೀ ಮೀಸೆಯ ಶತಾವತಾರಗಳು!


ಮಾವಂದಿರಿಗೆ ಮೀಸೆ ಜಾಸ್ತಿ ಇರುತ್ತಿತ್ತೆಂದೋ ಏನೋ ಅಂತೂ ಮೀಸೆಮಾವ ಎನ್ನುವುದು ಜನಪ್ರಿಯ ಶಬ್ಧ ಅಲ್ಲವೇ ? ಕೆಲವರು ಪೋಲೀಸನಿಗೂ ಮೀಸೆಮಾವ ಎನ್ನುತ್ತಾರೆ. [ಉತ್ತರ ಭಾರತದಲ್ಲಿ ಪೋದ್ದಾರ್ ಎನ್ನುವ ಪೊಲೀಸರಿಗೆ ಪೋದ್ದಾರ್ ಮೀಸೆ ಎನ್ನಬಹುದು] ಮೀಸೆ ಅತ್ತೆ ಎನ್ನಲೂ ಅಡ್ಡಿಯಿಲ್ಲವೇನೋ ಕೆಲವು ಅತ್ತೆಯರಿಗೂ ತೆಳ್ಳಗೆ ಮೀಸೆ ಕಾಣಸಿಗುತ್ತದೆ![ಇದನ್ನ ಹಾರ್ಮೋನ್ ವೈಪರೀತ್ಯ ಎನ್ನುತ್ತಾರೆ!]


ಕೊನೆಯದಾಗಿ ಮೀಸೆಗೊಂದು ಮಂಗಳ ಮುಕ್ತಕ-

ಮೀಸೆ ಜನಕ ತುಟಿಯತನಕ ಬೆಳೆಸು ಪುಕ್ಕಟೆ
ಕಾಸು ಕೊಟ್ಟು ಬೆಳೆವ ಗೊಡವೆ ಇಲ್ಲವಲ್ಲವೇ ?

ವ್ಯಸನಕೊಮ್ಮೆ ಉಜ್ಜಿಕೊಳಲು ಮೀಸೆ ಬೇಡವೇ?
ಹಸುಳೆಯಂತೆ ಕಾಣಲೆಂದು ಬೋಳಿಸುವುದೇ ?
ಅಸುರ-ಸುರರು-ನರರು ಎಂಬ ಭೇದವಿಲ್ಲದೇ
ಕುಶಲ ಪೇಳ್ವ ಮಾರ್ಗದಲ್ಲಿ ಅಂದವಾನಡೆ !

Sunday, June 27, 2010

ಕರೆದಳಾರಾಧೆ


ಕೃಷ್ಣನ ಬಗ್ಗೆ ರಾಧೆಗಿದ್ದ ಪ್ರೀತಿ ಅಪ್ರತಿಮ. ಅದು ಅಮೋಘ,ಉತ್ಕಟ,ಅನನ್ಯ,ಅನೂಹ್ಯ, ಬಣ್ಣಿಸಲಸದಳ. ಪ್ರಾಯಶಃ ಈ ಪ್ರಪಂಚದಲ್ಲಿ ಬೇರಾವ ಸಂಗಾತಿಯೂ ಕೊಡಲಾರದ ಪ್ರೇಮವನ್ನು ತನ್ನ ಕೃಷ್ಣನಿಗಾಗಿ ಆಕೆ ಮೀಸಲಿರಿಸಿದ್ದಾಳೆ. ಕೃಷ್ಣನೊಬ್ಬ ಕಳ್ಳ, ಹೆಂಗುಸರ ಮಳ್ಳ, ಕೃಷ್ಣನೊಬ್ಬ ತಲೆಹಿಡುಕ, ಕೃಷ್ಣನೊಬ್ಬ ವಾಚಾಳಿ, ಕೃಷ್ಣನೊಬ್ಬ ಗೊಲ್ಲ, ಕೃಷ್ಣನೊಬ್ಬ ಕುತ್ಸಿತ-ಕಪಟ ನಾಟಕರಂಗ ಹೀಗೇ ಜನಸಮುದಾಯುದಲ್ಲಿ ಅಲ್ಲಲ್ಲಿ ಗುಲ್ಲೆದ್ದಿದ್ದರೂ ಆ ಬೆಂಕಿಯ ಕಿಡಿಗೆ ತನ್ನ ಬದುಕಿನ ಪ್ರೀತಿಯನ್ನು ಬಲಿಕೊಡುವ ಸಾದಾ ಹೆಣ್ಣಾಗಿರಲಿಲ್ಲ ರಾಧೆ! ಲೋಕದ ಕಣ್ಣಿಗೆ ರಾಧೆ ಹೆಣ್ಣೇ ಸರಿ ಆದರೆ ಅವಳ ಆಂತರ್ಯದಲ್ಲಿ ಕೃಷ್ಣನ ಮೂರ್ತಿ ಕಡೆದು ನಿಲ್ಲಿಸಲ್ಪಟ್ಟಿತ್ತು;ಪ್ರತಿಷ್ಠಾಪಿಸಲ್ಪಟ್ಟಿತ್ತು. ಕೃಷ್ಣನಿಗಾಗಿ ಅವಳು ಏನನ್ನೂ ಮಾಡಿಯಾಳು. ಆಗೊಮ್ಮೆ ಈಗೊಮ್ಮೆ ಕೃಷ್ಣನನ್ನು ಹುಡುಕಲು ತನ್ನ ಸಖಿಯರನ್ನು ಕಳಿಸುವಳು, ಅವರು ತಾವು ಒಲ್ಲೆ ಎಂದಾಗ ಪುರಸ್ಕಾರದ ಆಮಿಷವೊಡ್ಡಿ ತನ್ನ ಮನದಿನಿಯನನ್ನು ಹುಡುಕಿಕೊಡುವಂತೆ ಗೋಗರೆಯುವಳು.

ರಾಜಕಾರ್ಯದಲ್ಲಿ ಮಗ್ನನಾದ ಕೃಷ್ಣ ಮನೆಗೆ ಬರುವುದು ವಿಶ್ರಾಂತಿಗಾಗಿ ಮಾತ್ರ, ಅದೂ ನಡುರಾತ್ರಿ ಕಳೆದ ಮೇಲೆ ಬಂದು ಮತ್ತೆ ಬೆಳಗಿನ ನಸುಕಿನಲ್ಲೇ ಎದ್ದು ಹೋಗುವ ಪರಿಪಾಟ! ಯಾವ ಹೆಂಡತಿ ಸಹಿಸಿಯಾಳು?ಸರಿಯಾದ ಮಾತಿಲ್ಲ,ಕಥೆಯಿಲ್ಲ, ಊಟ-ತಿಂಡಿ ಜೊತೆಗಿದ್ದು ಮಾಡಿ ವರುಷಗಳೇ ಕಳೆದಿವೆ!ತನ್ನ ಹೆಣ್ತನದ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳಲಾರಳು. ಅಕ್ಕಪಕ್ಕದ ಮನೆಯ ಹೆಂಗಳೆಯರು ಯಾಕಮ್ಮಾ ನಿನ್ನ ಕೃಷ್ಣ ಪ್ರತೀ ರಾತ್ರಿ ತಡವಾಗಿ ಬರುವುದು ಎಂದು ಪರಸ್ಪರರು ನೋಡಿಕೊಂಡು ನಕ್ಕಾಗ ಕರುಳಿಗೆ ಬೆಂಕಿಯಿಟ್ಟಂತೆ ಚುಂಯ್ ಗುಡುವ ಅನುಭವ,ಆದರೂ ಮುಚ್ಚಿಕೊಳ್ಳುತ್ತಿದ್ದಳು! ನೋವನ್ನ ಬಚ್ಚಿಟ್ಟುಕೊಳ್ಳುತ್ತಿದ್ದಳು!ಒಸರುವ ಕಣ್ಣೀರನ್ನು ಸೆರಗಿನಿಂದ ಒರೆಸಿ ಆ ಕ್ಷಣ ಅದು ಅವರ ಕಣ್ಣಿಗೆ ಕಾಣದಂತೆ ಮಾಡುತ್ತಿದ್ದಳು. ಅವರಿಗೆ ಸರಿಯಾಗಿ ಬೈದು ಮರಳಿಬಂದು ಬಾಗಿಲು ಹಾಕಿಕೊಂಡು ಪಲ್ಲಂಗದ ಮೇಲೆ ಬೋರಲು ಬಿದ್ದು ಮನ ಹಗುರಾಗುವವರೆಗೂ ಅತ್ತುಬಿಡುವಳು.


ತಂಗದಿರನ ಪೂರ್ಣರಾತ್ರಿಗಳಲ್ಲಿ, ಮಂದ ಮಾರುತ ಹಾಯ್ದು ಮೈಯೆಲ್ಲ ಪುಳಕಗೊಳ್ಳುವಾಗ ಕೃಷ್ಣ-ತನ್ನ ಸಖ ಹತ್ತಿರವಿದ್ದರೆ ಪರಮಸುಖ ಎಂದುಕೊಳ್ಳುವಳು. ಆತ ಬರಬೇಕಲ್ಲ. ಆತ ಬಂದಾಗ ಹಿಂದಿನ ಕಥೆಗಳನ್ನೆಲ್ಲ ಮರೆತು ಹೊಸ ಬದುಕು ಪ್ರಾರಂಭಿಸೋಣವೆಂಬ ಬಯಕೆ ಆಕೆಯದು;ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂದಿದ್ದು ಬಹುಶಃ ರಾಧಾ-ಕೃಷ್ಣರನ್ನು ನೋಡಿಯೇ ಇರಬೇಕು! ಮನಸು ಹೇಳ ಬಯಸಿದೆ ನೂರೊಂದು ! ನನಸಮಾಡಲಾಗದಾ ಮಾತೊಂದು !

ಒಮ್ಮೊಮ್ಮೆ ಕೃಷ್ಣ ಬರುವ ಸಮಯ ಎಚ್ಚರವಿದ್ದು ಚೆನ್ನಾಗಿ ಬೈದು ಮಂಗಳಾರತಿ ಎತ್ತುವಾ ಎನಿಸುತ್ತದೆ, ಆತನ ಕೂಡ ಘನ ಘೋರ ಮಾತಿನ ಕಾಳಗ ನಡೆಸಿ ಮತ್ತಿನ್ನಾತ ಎಲ್ಲೂ ಹೋಗದೇ ಸಂಜೆಯೊಳಗೇ ಮನೆ ಸೇರುವಂತೆ ಮಾಡಬೇಕೆನಿಸುತ್ತದೆ. ಚಿವುಟಿ ಕೃಷ್ಣನನ್ನು ಗುದ್ದಾಡಿ ಹಣ್ಣುಗಾಯಿ-ನೀರುಗಾಯಿ ಮಾಡುವ ಕೋಪ ಆವರಿಸುತ್ತದೆ. ನೀನು ಬರಲೇ ಬೇಡ ಎಂದು ಬಾಗಿಲು ಹಾಕಿ ಬಿಡುವಾ ಎನಿಸುತ್ತದೆ. ಸವತಿಯರ ನೆನಪಾದಾಗ ಅವಡುಗಚ್ಚಿ ಸೊಂಟಕಟ್ಟಿ ಎಲ್ಲರ ಸೊಂಟ ಮುರಿದುಹಾಕುವ ಈರ್ಷ್ಯೆ ಉಕ್ಕಿಬರುತ್ತದೆ! ಬರಿಗೈಲಿ ಕೃಷ್ಣನನ್ನು ಎಲ್ಲೂ ಕಾಣಲಿಲ್ಲ ಎಂದು ಬರುವ ಸಖಿಯರಿಗೆ ನಖದಿಂದ ಶಿಖದವರೆಗೂ ಬೈಯ್ದು ಅಟ್ಟುವ ಕ್ರೋಧ ಆವರಿಸುತ್ತದೆ! ಆದರೆ ಕೃಷ್ಣ ಬರುತಿದ್ದಂತೆ ದೀಪಕ್ಕೆ ಮುತ್ತಿಡುವ ಪತಂಗದಂತೇ ತನ್ನ ಸ್ಥಿತಿ. ಕೃಷ್ಣ ಬಂದಾಗ ಆತ ತನ್ನ ತೋಳ್ತೆಕ್ಕೆಯಲ್ಲಿ ಒಂದೇ ಒಂದು ನಿಮಿಷ ಬಂಧಿಸಿ ರಮಿಸಿದರೆ ಸಾಕು ಸುಯ್ಯನೆ ಬಂದ ಬಿರುಗಾಳಿ ತರಗೆಲೆಯನ್ನು ಹಾರಿಸಿಕೊಂಡು ಹೋದಂತೆ ತನ್ನಲ್ಲಿರುವ ಎಲ್ಲಾ ವೈರುಧ್ಯಗಳೂ ಮಾಯ! ಹೀಗಾಗಿ ಕೃಷ್ಣನ ಈ ಮಾಯೆಯಲ್ಲಿ ತನ್ನನೇ ಮೀಯಿಸಿಕೊಂಡ ರಾಧೆ ಕೃಷ್ಣನನ್ನು ಅರ್ಥವಿಸತೊಡಗುತ್ತಾಳೆ.

ಕೃಷ್ಣ ಜಗತ್ತಿಗೇ ಗುರುವಾಗತಕ್ಕವನು, ಕೃಷ್ಣನೊಬ್ಬ ಲೋಕೋದ್ಧಾರಕ, ಕೃಷ್ಣನೊಬ್ಬ ಸಕ್ರಿಯ ಪರಿಪೂರ್ಣ ಆದರ್ಶ ರಾಜಕಾರಣಿ, ಕೃಷ್ಣ ಹಲವು ಗೋಪ-ಗೋಪಿಕೆಯರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಘನಾಢ್ಯ, ಕೃಷ್ಣನೊಬ್ಬ ಸಾವಿರ ಸಾವಿರ ಸಂಖ್ಯೆಯ ಗೋವುಗಳನ್ನು ಮೈದಡವಿ ಸಂತೈಸಿ ಅವುಗಳಿಗೆ ಹುಲ್ಲು-ನೀರು-ಆಸರೆ ಕಲ್ಪಿಸುವ ವ್ಯವಸ್ಥಾಪಕ, ಕೃಷ್ಣನೊಬ್ಬ ಸಮಾಜ ಘಾತುಕನಾದ ಕಾಳೀಯನ ಮರ್ದಕ,ಕೃಷ್ಣನೊಬ್ಬ ಮುರಳೀಗಾನ ವಿಲೋಲ, ಕೃಷ್ಣನೊಬ್ಬ ಅಸುರೀ ಶಕ್ತಿ ಭಂಜಕ...ಹೀಗೇ ತನ್ನಲ್ಲಿ ತನಗೇ ಗೊತ್ತಿಲ್ಲದಂತೆ ಮನಸ್ಸಿನ ಉದ್ದಗಲ-ಆಳಗಳಲ್ಲಿ,ಮನದ ಪ್ರತೀ ಮೂಸೆ ಮೂಸೆಯಲ್ಲಿ, ಶರೀರದ ಅಣು ಅಣುವಿನಲ್ಲಿ-ಕಣ ಕಣದಲ್ಲಿ ಆತನನ್ನು ಆಹ್ವಾನಿಸಿಕೊಳ್ಳುತ್ತಾಳೆ. ಆ ಮೋಹ ವ್ಯಮೋಹ, ಅತಿ ವ್ಯಾಮೋಹ, ಅದು ಬಿಟ್ಟಿರಲಾರದ ನಂಟು. ಅದು ಪ್ರೀತಿಯ ಸಾರ್ಥಕ್ಯದ ಗಂಟು, ಅದು ಸುಲಲಿತ ದಾಂಪತ್ಯದ ’ಸರಿಗಮಪದನಿಸ’. ಇಂತಹ ವೇಳೆ ರಾಧೆ ಕೃಷ್ಣನ ಕುರಿತಾಗಿ ಯೋಚಿಸಿದ್ದು ಹೀಗೆ--

ಕರೆದಳಾರಾಧೆ

ನಗುಮೊಗದಿ ಕರೆದಳಾರಾಧೆ
ವರ ಕೃಷ್ಣಗೆ ನೀಡುತ ಸರಸದ ಬೋಧೆ

ಕಡೆಗಣ್ಣ ನೋಟ ತಾ ಹರಿಸಿ
ಒಡೆಯನ್ನ ಹೃದಯದಲಿ ಇರಿಸಿ
ನಡುರಾತ್ರಿವರೆಗೆ ಬಾರದಿಹ
ಒಡಲಾಳದ ನೋವನು ಮರೆಸಿ

ತಂಗದಿರನ ತಂಪು ಬೆಳಕಲ್ಲಿ
ಅಂಗಳದ ತುಂಬ ಹಾಲ್ ಚೆಲ್ಲಿ
ಮಂಗಳದ ಸೌಕುಮಾರ್ಯ
ರಂಗೆದ್ದು ಕುಣಿಯಿತದೋ ಅಲ್ಲಿ

ತಂಗಾಳಿ ತುಸುವೆ ತಾ ಬೀಸಿ
ಅಂಗಾಂಗಕೆ ಪರಿಮಳ ಪೂಸಿ
ಸಂಗಾತಿಯ ಕರೆಯುತ ಮನಸು
ಸಂಘರ್ಷಗಳನು ಪರಿಹರಿಸಿ

ಅದು ನಿಲ್ಲದ ಪ್ರೀತಿಯ ಮೋಹ
ಬದಲಾಗದ ಅತಿ ವ್ಯಾಮೋಹ
ಅದುಮಿಟ್ಟು ಕೊಳದ ಆ ಶರೀರ
ವದರಿತ್ತು ಮುರಳಿಯೇನಮಃ

ಹದಿನಾರು ಸಾವಿರದ ನೂರು
ಚದುರುತ್ತ ಸವತಿಯರು ಜೋರು!
ಎದುರಾಳಿ ಸತ್ಯಭಾಮೆಯೆನಗೆ
ಅದಕಿಲ್ಲ ಕೋಪ ಬಳಿಸಾರು

Saturday, June 26, 2010

ಬಾಡೀ ಲ್ಯಾಂಗ್ವೇಜ್


ಬಾಡೀ ಲ್ಯಾಂಗ್ವೇಜ್

ಹಿಂದೊಮ್ಮೆ ಹೇಳಿದ್ದೆ, ಬಾಡೀ ಲ್ಯಾಂಗ್ವೇಜ್ ಬಹಳ ಮುಖ್ಯ ಎಂದು, ತಮಗೆಲ್ಲ ನೆನಪಿರಬಹುದು. ಇದನ್ನು ಸಹಜವಾಗಿ ತಿಳಿಯಬೇಕಾದರೆ ಟಿ.ವಿ ಪೋಗೋ ವಾಹಿನಿಯಲ್ಲಿ 'ಮಿಸ್ಟರ್ ಬೀನ್' ನ ಒಂದೆರಡು ಕಂತುಗಳನ್ನಾದರೂ ನೋಡಿ! ಅಲ್ಲಿ ಹಾಸ್ಯವೂ, ತರಲೆ ಪ್ಲಾನುಗಳೂ, ಜನಸಾಮಾನ್ಯನ ಮನಸ್ಸಲ್ಲಿ ಉದ್ಭವವಾಗುವ ಎಲ್ಲ ಮನೋ ತರಂಗಗಳು ಕಾಣಸಿಗುತ್ತವೆ! ಮನುಷ್ಯ ಇನ್ನೊಬ್ಬ ಅಥವಾ ಒಂದು ಜನರ ಗುಂಪಿನ ಮಧ್ಯೆ ತನ್ನ ಶಾರೀರಿಕ ಚರ್ಯೆಗಳಿಂದ ಮೇಲಾಗಿ, ಕೀಳಾಗಿ ಅಥವಾ ಸಮಾನವಾಗಿ ಕಾಣುತ್ತಾನೆ !

ಮುಖದ ಬಗ್ಗೆ ಕೂಡ ಹಿಂದೆ ಬರೆದಿದ್ದೇನೆ. ಮನುಷ್ಯನ ಯವ್ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ದೊಡ್ಡವರೆದುರು,ಚಿಕ್ಕವರೆದುರು, ಕಚೇರಿಯಲ್ಲಿ ತನಗಿಂತ ಉನ್ನತ ದರ್ಜೆಯಲ್ಲಿರುವವರೆದುರು, ಕಂಪನಿಯ ಮುಖ್ಯಸ್ಥರ ಎದುರು, ತನ್ನ ಕಂಪನಿಅಯನ್ನು ಪ್ರತಿನಿಧಿಸಿ ಬೇರೆ ಕಚೇರಿಗೆ ಹೋದಾಗ ಅವರೆದುರು ಹೀಗೇ ವಿವಿಧ ಸ್ಥಳ,ಕಾಲ,ದೇಶ,ಭಾಷೆ ಇವುಗಳನ್ನೆಲ್ಲ ನೋಡಿಕೊಂಡು ಅಲ್ಲಿಗೆ ತಕ್ಕುದಾಗಿ ನಡೆಯಲು ಶಾರೀರಿಕವಾಗಿ ನಮ್ಮ ಭಾವನೆಗಳನ್ನು ಮೂಕ ಅಭಿನಯದ ಮೂಲಕ ಅಭಿವ್ಯಕ್ತಗೊಳಿಸುವುದು ಬಾಡಿ ಲ್ಯಾಂಗ್ವೇಜ್.

ಇದನ್ನು ಅಭ್ಯಸಿಸಲು ಮೊದಲು ತುಂಬಾ ಸುಲಭ ಉಪಾಯವೆಂದರೆ ಮೂಕರೊಟ್ಟಿಗೆ ವ್ಯವಹರಿಸುವುದು. ಅಲ್ಲಿ ಅವರಿಗೆ ಅನೇಕ ಘಟನೆಗಳನ್ನು ವಿವರಿಸುವಾಗ ಹಲವು ರೀತಿಯ ಆಂಗಿಕಾಭಿನಯಮಾಡಿ ತೋರಿಸಬೇಕಾಗುತ್ತದೆ. ಚೂರು ತಪ್ಪಿದರೂ ಅವರಿಗೆ ಬೇರೆಯೇ ಆದ ರೀತಿಯಲ್ಲಿ ಅರ್ಥವಾಗಿರುತ್ತದೆ. ಹೀಗಾಗಿ ಬಹಳ ಕಾಳಜಿಯಿಂದ ವ್ಯವಹರಿಸಬೇಕಾಗುವುದರಿಂದ ಆ ಜವಾಬ್ದಾರಿಯೇ ಸಹಜವಾಗಿ ನಮಗೆ ಮೂಕಾಭಿನಯವನ್ನು ಅಥವಾ ಬಾಡಿ ಲ್ಯಾಂಗ್ವೇಜ್ ಅನ್ನು ಕಲಿಯಲು ಸಹಕಾರಿಯಾಗುತ್ತದೆ.

ಮನುಷ್ಯನಿಗೆ ದೇವರುಕೊಟ್ಟ ಅತ್ಯಪೂರ್ವ ಸಂಪರ್ಕ ಮಾಧ್ಯಮವೇ ಬಾಡಿಲ್ಯಾಂಗ್ವೇಜ್. ಕಣ್ಣು,ಮೂಗು,ಬಾಯಿ ಇವುಗಳ ಜೊತೆಗೆ ಕೈಗಳನ್ನೂ ಇನ್ನೂ ಕೆಲವೊಮ್ಮೆ ಕಾಲುಗಳನ್ನೂ ಸೇರಿಸಿ ಅಭಿನಯದ ಮೂಲಕ ಅಭಿವ್ಯಕ್ತಗೊಳಿಸಲ್ಪಡುವ ವಿಷಯಕ್ಕೆ ಯಾವುದೇ ಭಾಷೆಯ ಗಡಿಮಿತಿ,ಪರಿಮಿತಿ ಇಲ್ಲ. ಉದಾಹರಣೆಗೆ ನಿದ್ದೆ ಮಾಡು ಎನ್ನುವುದನ್ನು ತೋರಿಸುವಾಗ ಕೈಯನ್ನು ತಲೆಯ ಪಕ್ಕಕ್ಕೆ ಹಿಡಿದು ತಲೆಯನ್ನು ಕೈಯ ಮೇಲೆ ಆನಿಸಿತೋರಿಸುತ್ತೇವೆ, ಜಗತ್ತಿನ ಯಾವ ಮೂಲೆಗೆ ಹೋದರೂ ಇದೇ ಪದ್ಧತಿ ಬಳಸಲ್ಪಡುತ್ತದೆ.

ಅಳುವುದು, ನಗುವುದು, ಕೆಮ್ಮುವುದು, ಬಾಯಲ್ಲಿ ಕೈಯಿಟ್ಟು ಸೀಟಿಹಾಕುವುದು ಇವೆಲ್ಲ ಭಾಷೆಯನ್ನು ಆಧರಿಸದ ಪ್ರಕ್ರಿಯೆಗಳು. ಈ ಅಳು-ನಗುಗಳಲ್ಲೇ ವೈವಿಧ್ಯತೆ ಇದ್ದು ಅವುಗಳನ್ನೂ ಹತೋಟಿಯಲ್ಲಿಡಲು ಏನು ಮಾಡಬೇಕು ಎಂಬುದನ್ನು ಈ ಶರೀರ ಪ್ರಕ್ರಿಯಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಕೆಲವರು ಚಪ್ ಚಪ್ ಚಪ್ ಎಂದು ಶಬ್ಢಮಾಡುತ್ತ ತಿಂದುಂಡು ಮಾಡುತ್ತಾರೆ, ಇದು ನಾಗರಿಕ ಸಮಾಜದಲ್ಲಿ ಅಸಹನೀಯವೆನಿಸುತ್ತದೆ, ಕೆಲವರು ವಿಪರೀತ ಗೊರಕೆ ಹೊಡೆಯುತ್ತಾರೆ, ಕೆಲವರು ತಮ್ಮ ವಸ್ತುಗಳನ್ನು ಬೇರೆಯವರ ತಾಬಾ ವಹಿಸಿ ಬಹಳ ಹೊತ್ತು ಅವರು ಮರಳಿಬರುವುದೇ ಇಲ್ಲ, ಕೆಲವರು ಪಕ್ಕದ ಮನೆಯವರಿಗೆ ತೊಂದರೆಯಾಗುವಷ್ಟು ಸಂಗೀತದ ಧ್ವನಿಯನ್ನು ದೊಡ್ಡದಾಗಿಮಾಡಿ ಕೇಕೇ ಹಾಕುತ್ತಾರೆ, ಇನ್ನು ಕೆಲವರು ತಮ್ಮ ಮನೆಯ ನಾಯಿಯನ್ನು ಪಕ್ಕದ ಮನೆಯ ಗೇಟಿನ ಎದುರಿಗೆ ನಿಲ್ಲಿಸಿ ಮಲ-ಮೂತ್ರ ವಿಸರ್ಜಿಸಲು ಅನುಕೂಲ ಕಲ್ಪಿಸಿಕೊಡುತ್ತಾರೆ, ಕೆಲವರು ಸಂಜೆಯಾಯಿತೆಂದರೆ ಹತ್ತಿರದ ಮನೆಗಳಿಗೆ ಸಂಚಾರಹೊರಟು ದಿನಾ ಉಪದ್ರವ ಅಥವಾ ಉಪಗ್ರಹವಾಗಿ ಕಾಡುತ್ತಾರೆ! ---ಹೀಗೆಲ್ಲ ಹಲವು ಹತ್ತು ಆಭಾಸದ ಪ್ರಕ್ರಿಯೆಗಳು ನಮಗೆ ಅರಿಯದೇ ಸಮಾಜದಲ್ಲಿ ನಡೆದೇ ಇವೆ. ಮನುಷ್ಯ ಹೇಗಾದರೂ ಇರಬಹುದು ಬಿಡಿ ತೊಂದರೆ ಏನಿಲ್ಲ-ಅದು ಆತ ಹಳ್ಳಿಯಲ್ಲಿ ಅವನ ಸ್ವಂತದ ಜಮೀನಿನಲ್ಲಿ ಇರುವಾಗ, ಅವನದೇ ಮನೆಯಲ್ಲಿ ಅವನ ಹೆಂಡತಿ-ಮಕ್ಕಳು ಆತನ ಬೆವರಿನ ನಾತ ಸಹಿಸಲಾರರು, ಆತ ಕಂಡಲ್ಲಿ ಉಗುಳುವುದನ್ನು ಇಷ್ಟಪಡಲಾರರು, ಆತ ವಿನಾಕಾರಣ ಹರಿಹಾಯುವುದನ್ನು ನೆನಪಿಸಿಕೊಳ್ಳಲೂ ಆರರು!

ವ್ಯಕ್ತಿ ಅರಮನೆಯಲ್ಲಿ ಹೇಗಿರಬೇಕು, ಗುರುಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೆಲ್ಲ ಒಂದು ತರ್ಕಬದ್ಧ ನಿರ್ಧಾರಿತ ವಿಷಯ. ಇದನ್ನೇ ಉದಹರಿಸುವುದಾದರೆ ನಮ್ಮ ಪೋಲೀಸಣ್ಣಗಳು ಎಲ್ಲಾದರೂ ಯಾರದರೂ ಮಡಿದ ಜಾಗಕ್ಕೆ ಬಂದರೆ ತಮ್ಮ ಟೋಪಿ ತೆಗೆಯುತ್ತಾರೆ-ಯಾಕೆಂದರೆ ಅದು ಅವರಿಂದ ಸತ್ತವರಿಗೆ ಸಿಗುವ ಗೌರವ! ಟಕ್ ಟಕ್ ಟಕ್ ಅಂತ ನಡೆದು ಬಂದು ಸೆಲ್ಯೂಟ್ ಹೊಡೆದು ಪುರಸ್ಕಾರ ಸ್ವೀಕರಿಸುತ್ತಾರೆ--ಅದು ಅಲ್ಲಿನ ಕರ್ತವ್ಯ ನಿಷ್ಠೆಯ ಪ್ರದರ್ಶನ.

ಇತ್ತೀಚೆಗೆ ಅಮೇರಿಕಾದಲ್ಲಿ ನ್ಯೂ ಈಯರ್ ದಿನ ನಮ್ಮ ಪುರೋಹಿತರಿಂದ ಶಾಲುಹೊದೆಸಿಕೊಂಡು ತೃಪ್ತಿಪಟ್ಟ ಅಮೇರಿಕಾ ಅಧ್ಯಕ್ಷ ಒಬಾಮಾ, ಭಾರತೀಯ ಸಂಜಾತರ ಸಂಸ್ಕೃತಿಗೆ ಮತ್ತು ಬಿಹೇವಿಯರಲ್ ಸೈನ್ಸ್ ಗೆ ಮಾರುಹೋದವರು! ಅಂದರೆ ನಮ್ಮಲ್ಲಿ ಉಚ್ಚಮಟ್ಟದ ಸಂಸ್ಕೃತಿ ಇದೆ-ಆದರೆ ನಾವು ಬಹುತೇಕರು ಅದನ್ನು ಅಳವಡಿಸಿಕೊಳ್ಳುತ್ತಿಲ್ಲ ಅಲ್ಲವೇ? ನಿಜವಾಗಿಯೂ ಇದು ಅಪ್ಪಟ ಸತ್ಯ, ಬಾಡೀ ಲ್ಯಾಂಗ್ವೇಜ್ ಅನ್ನುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ!

ಕೊಲೆಗಡುಕ ನಗುಮುಖವನ್ನು ಹೊತ್ತಿರುವುದಿಲ್ಲ, ನಗೆಹೊನಲಿನ ಮಧ್ಯೆ ಯಾರೂ ಅಳುತ್ತಕೂರುವುದಿಲ್ಲ, ಪೋಲೀಸಣ್ಣ ಕೆಂಗಣ್ಣು ಬಿಡದೇ ಇದ್ದರೆ ಕಳ್ಳನ ಬಾಯಿಂದ ಸತ್ಯಹೊರಬೀಳುವುದಿಲ್ಲ, ಬಾಂಬು ಹಾಕುವವರು ತಮ್ಮಲ್ಲಿ ಬಾಂಬಿದೆ ಎಂದು ಹೇಳುತ್ತ ತಿರುಗುವುದಿಲ್ಲ, ಮಂತ್ರಿಗಿರಿಯಲ್ಲಿರುವವರು ಸಾದಾ ಸೈಕಲ್ ನಲ್ಲಿ ಓಡಾಡುವುದಿಲ್ಲ, ಉಪಾಧ್ಯಾಯರು ಮರೆಗುಳಿಯಾಗಿರುವುದಿಲ್ಲ, ಜ್ಯೋತಿಷ್ಕರು ಪೆದ್ದರಾಗಿರುವುದಿಲ್ಲ ಇವೆಲ್ಲ ಅವರವರ ವೃತ್ತಿ ಅಥವಾ ಕೆಲಸಕ್ಕೆ ತಕ್ಕುದಾಗಿ ಅವರು ನಡೆಯುವ ರೀತಿಗಳು.

ವಿದ್ಯೆಗೆ ವಿನಯವು ಪೂರಕ ಅಥವಾ ತುಂಬಿದ ಕೊಡ ತುಳುಕುವುದಿಲ್ಲ ಎಂದು ನಾವು ಹೇಳುತ್ತೇವೆ-ಅರ್ಥ ಏನೆಂದರೆ ವಿದ್ಯೆ ಸರಿಯಾಗಿ ಕಲಿತವರು ವಿನಯವಂತರಾಗಿರುತ್ತಾರೆ. ಸಮರ್ಪಕವಾಗಿ ಕಲಿಸದ ಗುರುಗಳಿಂದ ಅಥವಾ ಸಂಸ್ಕಾರ ರಹಿತ ಗುರುಗಳಿಂದ ಪಡೆದ ವಿದ್ಯೆ ವಿನಯವನ್ನು ಕೊಡುವುದರ ಬದಲು ಇನ್ನೇನನ್ನೋ ಕೊಡುತ್ತದೆ. ಗುಣ-ಸ್ವಭಾವ ಒಳ್ಳೆಯದಾದರೆ ಅವರನ್ನು ತುಂಬಿದ ಬಿಂದಿಗೆಗೆ ಹೋಲಿಸುತ್ತಾರೆ-ತುಂಬಿದ ಬಿಂದಿಗೆ ತುಳುಕುವುದಿಲ್ಲ ಅದು ಅರ್ಧ ಅಥವಾ ಕಾಲುಭಾಗ ತುಂಬಿದ್ದರೆ ಆಗ ಎತ್ತಿಕೊಂಡು ಹೋಗುವಾಗ ತುಳುಕುತ್ತದೆ ಹೇಗೋ ಅದೇ ರೀತಿಯಲ್ಲಿ ಅಲ್ಪವನ್ನು ತಿಳಿದವ ಜ್ಞಾನಿಗಿಂತ ಮಿಗಿಲಾಗಿ ಆಡುತ್ತಾನೆ, ಜ್ಞಾನಿ ತಾನು ಬಹಳ ತಿಳಿದುಕೊಂಡವನೆಂದು ಬಡಾಯಿ ಕೊಚ್ಚಿಕೊಳ್ಳಲಾಗಲೀ, ಪ್ರದರ್ಶಿಸಲಾಗಲೀ ಹೋಗುವುದಿಲ್ಲ. ಕೆಲವೊಮ್ಮೆ ಕೆಲವರು ತಮ್ಮ ಢಾಂಬಿಕತೆಯನ್ನು ಹೊರಜಗತ್ತಿಗೆ ಪ್ರದರ್ಶಿಸುತ್ತಿರುತ್ತಾರೆ, ಅಲ್ಲಿ ಅವರ ನಡಾವಳಿಯನ್ನು ನೋಡಿದರೆ ಅವರೇನು ಕುಬೇರನ ಮಕ್ಕಳೇ ಇರಬೇಕೇನೋ ಎಂಬಂತಿರುತ್ತದೆ, ಅಸಲಿಗೆ ಮನೆಗೆ ಹೋದರೆ ಕುಳಿತುಕೊಳ್ಳಲು ಸರಿಯಾದ ಖುರ್ಚಿಗಳಿರುವುದಿಲ್ಲ! ಬೂಟಾಟಿಕೆಗಿಂತ ನೈಜ ಸ್ಥಿತಿಯಲ್ಲಿರುವುದು ಬಹಳ ಉತ್ತಮ ಮತ್ತು ಸಂತೃಪ್ತಿದಾಯಕ.

ಒಬ್ಬ ನಿಜವಾದ ಸಾಧುವನ್ನು, ಒಬ್ಬ ಸಹಜ ಸನ್ಯಾಸಿಯನ್ನು, ಒಬ್ಬ ನಿಜವಾದ ದೊಡ್ಡವ್ಯಕ್ತಿಯನ್ನು ಕಂಡಾಗ ನಮ್ಮ ಮನದೊಳಗೆ ನಮ್ಮ ಆಂತರ್ಯವೇ ಹೇಳಿಬಿಡುತ್ತದೆ---ಇವರು ನಿಸ್ಪೃಹರು, ಇವರು ಸದಾಚಾರಿಗಳು, ಇವರು ಗೌರವಿಸಲು ಯೋಗ್ಯರು--ಎಂದು ಅದು ನಿರ್ಧರಿಸಿಬಿಡುತ್ತದೆ. ಪ್ರತೀ ವ್ಯಕ್ತಿಯ ದೇಹದ ಹೊರಗೆ ನಮ್ಮ ಕಣ್ಣಿಗೆ ಕಾಣದ ಒಂದು ಪ್ರಭಾವಳಿ ಇದೆ, ಅದು ಪ್ರಕಾಶಮನ್ವಾಗಿರುತ್ತದೆ, ಅದರ ಗಾತ್ರ ಹೆಚ್ಚಿದ್ದಷ್ಟೂ ವ್ಯಕ್ತಿ ಬಹಳ ಎತ್ತರಕ್ಕೇರಿದವನು ಎಂದರ್ಥ, ಅದು ಕಮ್ಮಿ ಇದ್ದಷ್ಟೂ ವ್ಯಕ್ತಿ ಕೆಳಮಟ್ಟದವನು ಎಂದು ತಿಳಿಯಬೇಕು. ನಮ್ಮ ಜೀವ ವಿಜ್ಞಾನ ಇನ್ನೂ ಅದನ್ನು ಸಂಶೋಧಿಸುತ್ತಿದೆ ಆದರೆ ನಮ್ಮ ವೇದ ಅದನ್ನು ಪ್ರಸ್ತುತಪಡಿಸಿದೆ!ಈ ಪ್ರಭಾವಳಿ ನಮ್ಮ ಪೂರ್ವ ಜನ್ಮದ ಸುಕೃತದಿಂದ ಲಭಿಸಿರುತ್ತದೆ! ನಾವು ನಮ್ಮ ದೇಹ ಮತ್ತು ಮನಸ್ಸನ್ನು ಒಳ್ಳೆಯ ಸಂಸ್ಕಾರದವರಲ್ಲಿ ಪಳಗಿಸಿದರೆ ಅದು ಪಳಗಿಸಿದ ಆನೆಯಂತೆ ಒಂದು ಹದಕ್ಕೆ ಬರುತ್ತದೆ! ನಮ್ಮ ಸಮರ್ಪಕ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಸಮರ್ಪಕ ವ್ಯಕ್ತಿಗಳಿಂದ ಸರಿಯಾದ ಬಾಡೀ ಲ್ಯಾಂಗ್ವೇಜ್ ಹೊರಡುತ್ತದೆ!

ಒಬ್ಬ ಮುತ್ಸದ್ಧಿಯನ್ನು ಮಾತನಾಡಿಸಿ ನೋಡಿ ಅಬ್ಬಾ ಎಂತಹ ಮುತ್ಸದ್ಧಿ ಇನ್ನೊಮ್ಮೆ ಅವರೊಡನೆ ಮಾತಾಡಬೇಕು ಎನಿಸುತ್ತದೆ ಅಲ್ಲವೇ? ಅಲ್ಲಿಗೆ ಕಾರಣ ಇಷ್ಟೇ- ಆತ ಮುತ್ಸದ್ಧಿಯಾಗಿದ್ದು ಅವರ ಜ್ಞಾನಲಹರಿ ಅವರ ಭಾವಾಭಿನಯದೊಂದಿಗೆ ನಮ್ಮ ಶರೀರದ ಪ್ರಭಾವಳಿಯನ್ನೂ ಮೀರಿ ನಮ್ಮನ್ನು ತಲ್ಪಿದೆ, ಮಿಕ್ಕುಳಿದವರದ್ದು ಮೇಲಿಂದ ಮೇಲೆ ತೇಪೆ ಹಾಕಿದ ಹಾಗೇ ಇರುತ್ತದೆ!

ಕೆಲವರಿಗೆ ಎಲ್ಲಿ ಮಲಗಬಾರದು, ಯಾವುದರ ಮೇಲೆ ಕೂರಬಾರದು, ಯಾವುದನ್ನು ಮುಟ್ಟಬಾರದು, ಯಾವುದನ್ನು ಕೀಳಬಾರದು, ಯಾವುದನ್ನು ತುಳಿಯಬಾರದು ಇವೆಲ್ಲ ಅರಿವಿಗಿರುವುದಿಲ್ಲ, ರಸ್ತೆಯಲ್ಲಿ ನಡೆಯುವಾಗ ಪಿಚಕ್ ಪಿಚಕ್ ಅಂತ ಅಸಭ್ಯವಾಗಿ ಉಗುಳುವವರು,ಬಸ್ಸಿನಲ್ಲಿ ಕುಳಿತು ಕೆಳಗಡೆ ನೋಡದೇ ಪಕ್ಕದ ಕಿಟಕಿಯಲ್ಲಿ ಉಗುಳುವವರು, ರಸ್ತೆಯಲ್ಲಿ ಬಾಳೆಹಣ್ಣಿನ ಸಿಪ್ಪೆ ಬಿಸಾಡುವವರು, ಮೂಸಂಬಿ-ಕಿತ್ತಳೆ ಇತ್ಯಾದಿ ಹಣ್ಣು ತಿಂದಿ ಸಿಪ್ಪೆ ಎಲ್ಲೆಂದರಲ್ಲಿ ತೂರುವವರು, ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕಂಡಲ್ಲಿ ಬಿಸಾಡುವವರು, ಸಿಗರೇಟು-ಬೀಡಿಗಳನ್ನು ಬೆಂಕಿಸಮೇತ ಹಾಗೇ ಕಂಡಕಂಡಲ್ಲಿ ಬಿಸಾಡುವವರು ಈ ಥರ ಹಲವಾರು ವ್ಯಕ್ತಿಗಳನ್ನು ಕಾಣುತ್ತೇವಲ್ಲ, ಮಾತನಾಡಿದರೆ " ನಾವೇನಾದ್ರೂ ಮಾಡ್ಕೋತೀವಿ ನಿಮಗೇನೀವಾಗ? " ಅಂತ ಎಗರಿಬರುವವರಿಗೆ ಏನೆನ್ನಬೇಕು? ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿ ಅಸಹ್ಯ ವಾಸನೆ ಹುಟ್ಟಿಸುವವರು ಹಲವರಿರುತ್ತಾರೆ. ಕೈಯ್ಯನ್ನು ತಲೆಯ ಹಿಂದಕ್ಕೆ ಕಟ್ಟಿ ಆಕಳಿಸುವವರು, ಟಪ್ ಟಪ್ ಟಿಪ್ ಎಂದು ಕೈಯ ನೆಟ್ಟಿಗೆ ತೆಗೆಯುವವರು ಅನೇಕರಿದ್ದಾರೆ. ಆದರೆ ಇವರಿಗೆಲ್ಲ ಯಾವ ಗುರು ಬೋಧಿಸಿದನೋ ಶಿವನೇ ಬಲ್ಲ!

ಒಳ್ಳೆಯದನ್ನು ತರುವ ಶರೀರ ಪ್ರಕ್ರಿಯೆಗಳನ್ನು ಸರಿಯಾದ ಗುರುವಿನಿಂದ ಅರಿಯೋಣ, ಜಗದಲ್ಲಿ ಒಳ್ಳೆಯ ವ್ಯಕ್ತಿತ್ವ ಪಡೆದು ಆದಷ್ಟು ಉನ್ನತಿಯನ್ನು ಪಡೆಯೋಣ ಎಂಬ ಸದಾಶಯದೊಂದಿಗೆ ಸದ್ಯಕ್ಕೆ, ಇಂದಿಗೆ ಈ ಲೇಖನದಿಂದ ಬೀಳ್ಕೊಡಲೇ ?

Friday, June 25, 2010

’ಇದು ದೀಪ ಇರುತ್ತದೆ’!!!


’ಇದು ದೀಪ ಇರುತ್ತದೆ’!!!


ದೀಪಕ್ಕೆ ’ಇದು ದೀಪ ಇರುತ್ತದೆ’ ಎಂದು ಯಾರೂ ಬೋರ್ಡು ಹಾಕುವುದಿಲ್ಲ ಅಲ್ಲವೇ? ದೀಪವನ್ನು ನೋಡಿದ ತಕ್ಷಣ ನಮಗೆ ಗೊತ್ತು ಅದು ದೀಪ್ ಎಂಬುದು! ಯಾಕೆಂದರೆ ಅದು ಸುತ್ತಲ ಪ್ರದೇಶಕ್ಕೆ ಬೆಳಕು ಹರಿಸಿರುತ್ತದೆ. ಹಾಗೆಯೇ ಜ್ಞಾನಿಗಳು, ಮಹಾತ್ಮರು ಎಲ್ಲರ ಬದುಕು. ಅವರು ತಾವು ಇಂಥವರು ಅಂಥವರು ಮೆಂತೆ ಕದ್ದವರು ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಅದೆಲ್ಲಾ ಏನಿದ್ದರೂ ರಾಜಕೀಯದವರಿಗೆ ಬಿಟ್ಟಿದ್ದು. ಇತ್ತೀಚಿನ ರಾಜಕೀಯದ ಹಲವು ದುಂದುಗಾರಿಕೆಗಳಲ್ಲಿ ಸಮಾವೇಶಗಳೂ ಒಂದು. ಸಾಧನೆ ಮಾಡಿದ್ದರೆ ಅದನ್ನು ಜನತೆ ಮೆಚ್ಚುತ್ತಾರೆ, ಅದಕ್ಕಾಗಿ ಸಮಾವೇಶ ಯಾತಕ್ಕೆ ಬೇಕು ? ಹಿಂದೆ ರಾಮರಾಜ್ಯವನ್ನು ನಾವು ಕೇಳಿಲ್ಲವೇ? ಅಂತಹ ಅನ್ವರ್ಥಕ ನಾಮ ಪಡೆದ ರಾಜ್ಯ ಅದಾಗಿತ್ತು, ಅಲ್ಲೆಲ್ಲೂ ಈ ಥರದ ಸಮಾವೇಶಗಳು ನಡೆದಿರಲಿಲ್ಲ ಅಲ್ಲವೇ? ನಡೆದಿದ್ದಾದರೆ ಅದು ಉಲ್ಲೇಖಗೊಳ್ಳುತ್ತಿತ್ತು.

ಇಂದಿನ ಜನತೆ ಪಾಲಾಗಿ ಹೋಗಿದ್ದಾರೆ, ಕೈ ಬೆಂಬಲಿಗರು,ಕಮಲ ಬೆಂಬಲಿಗರು,ತೆನೆಹೊತ್ತ ಮಹಿಳೆ ಬೆಂಬಲಿಗರು ಹೀಗೆಲ್ಲ ಹಲವಾರು ಬೆಂಬಲಿಗರುಗಳು--ಆ ಬೆಂಬಲಿಸುವಿಕೆಗೆ ಅರ್ಥವೇ ಇಲ್ಲ! ಪಕ್ಷದ ಕಾರ್ಯಕರ್ತನಾಗಿ ಕಾಸು ಹೊಡೆಯುವ ಪ್ಲಾನು! ಅಲ್ಲಿ ನ್ಯಾಯ-ನೀತಿ-ಧರ್ಮ ಎಲ್ಲ ಬರೇ ಪುಸ್ತಕಗಳಲ್ಲಿವೆ. ನಾನು ಈ ಮೊದಲೇ ಬರೆದಂತೆ ಹಳ್ಳಿ ಹಳ್ಳಿಗಳಲ್ಲೂ ಈ ರಾಜಕೀಯ ಹೊಕ್ಕು ಅಕ್ಕ-ಅಣ್ಣ ಎಂದುಕೊಂಡಿದ್ದ ಮಂದಿಯೆಲ್ಲ ಈಗ ಆ ಪಕ್ಸದ ಅಧ್ಯಕ್ಸರು ಈ ಪಕ್ಸದ ಕಾರ್ಯಕರ್ತ್ರು ಅಂತಲೇ ಗುರುತಿಸಿಕೊಳ್ಳುತ್ತಾರೆ....ಏನಾಗಿದೆ ನಮ್ಮ ಜನರಿಗೆ? ನಮಗೆ ಬೇಕಾದುದು ಒಳ್ಳೆಯ ಸೌಲಭ್ಯಸಹಿತ ಸಂತೃಪ್ತ ಜೀವನ-ಅದನ್ನು ದೊರಕಿಸಿ ಕೊಡುವಂತಹ ಸರಿಯಾದ ವ್ಯಕ್ತಿ ಯಾರೋ ಅವನಿಗೆ ಪಕ್ಷಭೇದವಿಲ್ಲದೇ ಮತದಾನ ಮಾಡಬೇಕು. ಮೇಲಾಗಿ ಇಡೀ ದೇಶದಲ್ಲಿ ಎರಡೇ ಪಕ್ಷಗಳಿದ್ದರೆ ಆಗ ದಿನಬೆಳಗಾಗಿನ ದ್ಯಾವು,ಸಿದ್ದು,ಜಾನು, ರಾಮು ಇವರೆಲ್ಲರ ಕಿತ್ತಾಟ-ತೇಪೆ ಹಚ್ಚಿಕೊಂಡು ರಾಜಕೀಯ ಅಧಿಕಾರ-ದುಡ್ಡಿನ ಲಾಲಸೆಗಾಗಿ ತೆಕ್ಕೆಹಾಕಿಕೊಳ್ಳುವುದು ನಿಲುತ್ತದೆ, ಪಕ್ಷಾಟನೆ- ಕುದುರೆ ವ್ಯಾಪಾರ ಎಲ್ಲಾ ಮಾಯವಗಿ ಜನತೆ ನಿರುಂಬಳರಾಗುತ್ತಾರೆ! ಆದರೆ ’ಅಂದಕಾಲತ್ತಿಲ್’ ಎಂಬಂತೆ ಸ್ವಾತಂತ್ರ್ಯ ಬಂದಾಗ ಅರ್ಜೆಂಟಾಗಿ ಮಾಡಿದ ನಮ್ಮ ಸಂವಿಧಾನದಲ್ಲಿ ಅನೇಕ ನ್ಯೂನತೆಗಳಿವೆ-ಅವುಗಳು ಹಾಗೇ ಇರುವವರೆಗೂ ರಾಜಕೀಯದವರ ಆಸ್ತಿ ಬೆಳೆಯುತ್ತದೆ-ಹಲವಾರು ಅನುಪಯುಕ್ತ ಸಮಾವೇಶಗಳು ನಡೆಯುತ್ತಲೇ ಇರುತ್ತವೆ!

ಎಲ್ಲಿಯವರೆಗೆ ಸಂವಿಧಾನದ ತಿದ್ದುಪಡಿ ಆಗುವುದಿಲ್ಲವೋ ಅಲ್ಲೀವರೆಗೆ ನ್ಯಾಯವೇ ಮೂರ್ತಿವೆತ್ತಂತ ವೆಂಕಟಾಚಲೈಯ್ಯ, ಸಂತೋಷ ಹೆಗ್ಡೆ ಇಂಥವರಿಗೆಲ್ಲ ನೋವು ಸಹಜ! ಕಥೆಯೋಮ್ದು ನೆನಪಿದೆ -ನೀನು ಹೊಡೆದ ಹಾಗೇ ಮಾಡು, ನಾನು ಸತ್ತಹಾಗೇ ನಟಿಸುತ್ತೇನೆ’ ಎಂದು, ಅದೇ ರೀತಿ ನೀವು ಹಿಡಿದ ಹಾಗೇ ಮಾಡು, ನಾವು ಶಿಕ್ಷಿಸಿದ ಹಾಗೇ ಮಾಡುತ್ತೇವೆ ಎಂದು ಆಳುವ ದೊರೆಗಳು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರುವ ಕೆಲಸ ಸದ್ಯ ಲೋಕಾಯುಕ್ತ ಸ್ಥಾನದ್ದು! ಅದರಲ್ಲೂ ಕಳ್ಳರನು-ಖೂಳರನ್ನು ಹಿಡಿಯುವಗಲೇ ಫೋನು,ಬೆದರಿಕೆ ಇತ್ಯಾದಿ! ಯಾಕಾಗಿ ಮಾಡಬೇಕು ಇದನ್ನು, ನಮ್ಮ ಜನರಿಗೆ ದಮ್ಮಿದ್ದರೆ ಎದ್ದು ಬಂದು ಚಳುವಳಿ ನಡೆಸಿ ಲೋಕಯುಕ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸಲಗುವುದಿಲ್ಲವೇ? ಇದು ಲೋಕಾಯುಕ್ತರಿಗೆ ಮಾತ್ರವಲ್ಲ- ಎಲ್ಲ ಆ.ಭಾ.ಸೇ, ಆ.ಕ.ಸೇ ಮುಂತಾದ ಬ್ಯೂರೋಕ್ರಾಟ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಎತ್ತಾಕಿ ಅವನನ್ನು ಎಂದರೆ ಅಲ್ಲಿಂದ ರಾತ್ರೋ ರಾತ್ರಿ ವರ್ಗಾವಣೆ- ಏನು ಅ ಅಧಿಕಾರಿಗೆ ನಮಗಿರುವಂತೆ ಹೆಂಡತಿ-ಮಕ್ಕಳು ಇರುವುದಿಲ್ಲವೇ, ಸಂಸಾರದ ಆರೋಗ್ಯ,ಮಕ್ಕಳ ವಿದ್ಯಾಭ್ಯಾಸ ಇವೆಲ್ಲದರ ಕುರಿತು ವರ್ಗಾಯಿಸುವಾಗ ದೊರೆಗಳು ವಿಚಾರಿಸುತ್ತಾರೆಯೇ? ಇಲ್ಲವಲ್ಲ. ತನ್ನ ಬಚಾವಿಗಾಗಿ, ತನ್ನ ಉಳಿವಿಗಾಗಿ ತನ್ನಿಂದ ಆದ ಹೆಚ್ಚಿನ ಕಾಣಿಕೆಯನ್ನು ಕಾಣದ ಕೈಗೆ ಕೊಡಬೇಕಾಯಿತು ಆತ! ಅಲ್ಲಿಂದಲೇ ಶುರು ಬ್ರಷ್ಟಾಚಾರ! ಬ್ರಷ್ಟಾಚಾರದ ನಿರ್ಮೂಲನೆ ಮೇಲಿಂದ ಕೆಳತನಕ ಆಗ್ಬೇಕೇ ಹೊರತು ಕೆಳಗಿನಿಂದ ಮೇಲೆ ಹೋಗುತ್ತಾ ಹೋದರೆ ಶತಶತಮಾನಗಳು ಕಳೆದರೂ ಅದು ಲಂಗು-ಲಗಾಮು ಇಲ್ಲದೇ ಬೆಳೆಯುತ್ತದೆ! ಇದನ್ನು ನೋಡಿದಾಗ ನಮಗೆ ರಾಜರುಗಳ ಆಳ್ವಿಕೆಯೇ ಮೇಲೆಸುತ್ತದೆ ಅಲ್ಲವೇ?

ಇನ್ನೊಂದನ್ನು ತಮ್ಮೆಲ್ಲರಲ್ಲಿ ಹೇಳಬೇಕಾಗಿದೆ, ಇವತ್ತು ಜನಸಂಖ್ಯೆಯ ದೃಷ್ಟಿಯಲ್ಲಿ ಮೈನಾರಿಟಿ ಎಂಬುದು ಆ ಮಟ್ಟದಲ್ಲಿ ಇಲ್ಲ, ಎಲ್ಲಾ ಮೈನಾರಿಟಿ ಈಗ ಬದಲಾಗಿ ಮೆಜಾರಿಟಿಗೆ ಬಂದಿದೆ! ಮೈನಾರಿಟಿ-ಮೆಜಾರಿಟಿ, ಆ ಕೋಮು -ಈ ಕೋಮು,ಆ ಜಾತಿ-ಈಜಾತಿ, ಹಿಂದ-ಅಹಿಂದ,ಮೀಸಲಾತಿ-ಒಳಮೀಸಲಾತಿ ಇವೆಲ್ಲ ಯಾತಕ್ಕೆ ಸ್ವಾಮೀ? ಭಾರತ ಒಂದೇ, ಇಲ್ಲಿನ ಪ್ರಜೆಗಳೆಲ್ಲ ಒಂದೇ ಎಂಬ ಏಕರೂಪದ, ತಾರತಮ್ಯವಿರದ ಆಢಳಿತವನ್ನು ಇಟ್ಟು ಯಾರು ಪರಿಶ್ರಮದಿಂದ ಮೇಲೆಬರುತ್ತಾರೋ ಅಂತವರಿಗೆ ಆದ್ಯತೆ ಕೊಟ್ಟರೆ ಅಲ್ಲಿಗೆ ಬಹುಪಾಲು ಬ್ರಷ್ಟಾಚಾರ ವೇಗವಾಗಿ ಕಡಿಮೆಯಾಗುತ್ತದೆ. ಸುಳ್ಳು ಸರ್ಟಿಫಿಕೇಟ್ ಗಳು,ಜಾತಿ ಪತ್ರಗಳು, ಆದ್ಯತಾ ಪತ್ರಗಳು, ಶಾಸಕ-ಸಂಸದ-ಮಂತ್ರಿಗಳ ಪರ್ಸನಲ್ ಆದ್ಯತೆಗಳು ಎಲ್ಲವೂ ಹೊರಹೊರಟು ಟ್ರಾನ್ಸ್ಪರಂಟ್ ಆಢಳಿತವಾಗುತ್ತದೆ. ಖಜಾನೆಗೆ ಬರುವ ಮತ್ತು ಹೋಗುವ ಹಣದ ಲೆಕ್ಕದ ಜೊತೆಗೆ ಸರಕಾರೀ ಕೆಲಸಗಳನ್ನು ಮಾಡುವ ಗುತ್ತಿಗೆದಾರರಿಗೆ ಕೆಲವೊಂದು ನಿಬಂಧನೆಗಳನ್ನು ಹಾಕಿದರೆ ಅಲ್ಲಿ ಬ್ರಷ್ಟಚಾರ ಕಮ್ಮಿ ಆಗುತ್ತದೆ. ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಹುಕಾಲ ತಿಂದು ಬದುಕಿರುವ ಹಳೆಯ ಭೂತಗಳಮೇಲೆ ಸ್ವತಂತ್ರ ಲೋಕಾಯುಕ್ತರು ತಮ್ಮ ಮಾಂತ್ರಿಕತೆಯನ್ನು ಮೆರೆದರೆ ಅಲ್ಲಿಗೆ ಹಲವು ಹಂತಗಳ ಬ್ರಷ್ಟಾಚಾರ ಕಮ್ಮಿ ಆಗುತ್ತದೆ. ಆದರೆ ನಮ್ಮ ಸ್ಥಿತಿ ಹೇಗಿದೆ ಎಂದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬಂತಾಗಿದೆ! ಇದನ್ನೆಲ್ಲ ಗ್ರಹಿಸಿಯೇ ಸರಿಯಾದ ವ್ಯಕ್ತಿ ಲೋಕಾಯುಕ್ತರಾಗಿರಲು ಹೇಸುತ್ತಾರೆ, ಈಗ ಶ್ರೀ ಹೆಗ್ಡೆಯವರಿಗೆ ಆಗಿದ್ದೂ ಅಷ್ಟೇ!

ತಮ್ಮೊಳಗೇ ಕಿತ್ತಾಟ, ಮುಸುಕಿನ ಗುದ್ದಾಟ ಮುಗಿಸಿಕೊಳ್ಳದ ಜನ ಸಮಾವೇಶ ಮಾಡುವುದೇತಕ್ಕೆ? ಅಷ್ಟಾಗಿಯೂ ಇವರು ಮಾಡಿದ ಅಂತಹ ಘನಂದಾರೀ ಕೆಲಸ ಯಾವುದೇ ಸರಕಾರ ಮಾಡಲಗದಂತಹ ಅಸಾಮಾನ್ಯ ಕೆಲಸವೇನು? ನೆರೆಪರಿಹಾರದ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ, ಬೇಕಾದಲ್ಲಿ ರಸ್ತೆ ಮಾಡುವುದು ಬಿಟ್ಟು ಬೇಡದಲ್ಲಿ ರಸ್ತೆ, ಬೋರು, ಅಂಡರ್ಪಾಸು ಇತ್ಯದಿ ಮಾಡುತ್ತ ಇದನ್ನೇ ಹೆಗ್ಗಳಿಕೆಯೆನ್ನುವವರಿಗೆ ಏನೆನ್ನಬೇಕು? ಇದಕ್ಕೇ ಹೇಳಿದ್ದು ಸಾಧಿಸಿದವರು ಅದನ್ನು ಸಮಾವೇಶ ಕರೆದು ತೋರಿಸಬೇಕಿಲ್ಲ, ಜನರಿಗೆ ಕಣ್ಣಿದೆ,ಬುದ್ಧಿಯಿದೆ. ಮತದಾರ ದೂರದಿಂದ ನೋಡುತ್ತಿರುತ್ತಾನೆ! ಹೊಗೆಯ ಮೂಲ ಬೆಂಕಿ ಎಂಬುದು ಎಲ್ಲರಿಗೂ ಗೊತ್ತು! ಇದಕ್ಕಾಗಿ ಕೋಟಿಗತ್ತಲೇ ಖರ್ಚುಮಾಡಿ ಸಮಾವೇಶಬೇಕೆ? ಹೋಗಲಿ ಸಮಾವೇಶದಲ್ಲಿ ನಿಜವಾಗಿ ’ಸಾಧನೆ’ಗೈದ ಸಂಪಂಗಿ,ರೇಣುಕ, ಹಾಲಪ್ಪ ಇವರೆಲ್ಲರಿಗೂ ಸನ್ಮಾನವನ್ನಾದರೂ ಮಾಡಿ!

ಕೊನೆಯದಾಗಿ ಒಂದುಮಾತು,ನಿನ್ನೆಯ ಒಂದು ದಿನಪತ್ರಿಕೆಯೊಂದರಲ್ಲಿ ಒಬ್ಬರು ಬರದ್ರು ಇಂಥಾ ಮಂತ್ರಿ-ಅವರೊಳಗೆ ನೀವರಿಯದ ಇಂಥಾ ಒಳ್ಳೆಯ ಮುಖಗಳು ಅಂತ. ಸ್ವಾಮೀ ಹತ್ತುಮಂದಿಯ ಆಸ್ತಿಯಾದ ಭೂಮಿಯಲ್ಲಿ ನಿಸರ್ಗವನ್ನು ದೋಚುವ ಗಣಿಗಾರಿಕೆಯಿಂದ ಗಳಿಸಿದ ಹಣವನ್ನು ತಮ್ಮ ಸ್ಥಾನಭದ್ರತೆಗೆ ಉಪಯೋಗಿಸುತ್ತಿದ್ದಾರೆ, ಅದಿಲ್ಲಾ ಅವರು ಮುಂದೆ ಅಧಿಕಾರಕ್ಕೆ ಬರುವುದಿಲ್ಲ! ಅಧಿಕಾರವಿಲ್ಲದಿದ್ದರೆ ಗಣಿ ಕೈತಪ್ಪಿ ಹೋಗುತ್ತದೆ! ಹೀಗಾಗೇ ಬರೆದ ಆ ಮಹನೀಯರಿಗೊಂದು ಹೇಳುತ್ತೇನೆ ನಾವರಿಯದ ಅ ಮುಖ ನಾವರಿಯದಿದ್ದರೂ ಅರಿತೇ ಇರುವುದು! ಅಲ್ಲಿ ಸ್ವಾರ್ಥವೇ ಇದೆ! ನಮ್ಮ ಹಿಂದಿನ ಜನಾಂಗ ನಿಸರ್ಗವನ್ನು ಇಷ್ಟೊಂದು ದೋಚಿರಲಿಲ್ಲ! ನನಗೂ ಒಂದಷ್ಟು ಅನುಕೂಲ ಕೊಡಿ-ಹಲ್ವಾರು ಜನರಿಗೆ ದಿನಾ ಅನ್ನಸತ್ರ ಮಾಡುತ್ತೇನೆ, ಹಲವು ಚಿಕ್ಕ-ಪುಟ್ಟ ಸೌಲಭ್ಯ ಕೊಡಿಸುತ್ತೇನೆ, ಸಾಮೂಹಿಕ ಮದುವೆಮಾಡಿಸುತ್ತೇನೆ--ಇದೆಲ್ಲಾ ರಾಜಕೀಯದವರ ಅಂಗಸೌಷ್ಟವ ಸ್ವಾಮೀ, ಅದಕ್ಕಿಂತಾ ಭಿನ್ನವಾದ ಬೇರಾವ ರೀತಿಯ ಮುಖವಿದೆಯೇ ಹೇಳಿ? ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಬಹಳಕಾಲ ಬರೋದಿಲ್ಲ ಅನ್ನೋ ಗಾದೆ ಇದ್ಯಲ್ಲ ಹಾಗೇ ಜನಸಾಮಾನ್ಯನಿಗೆ ಅವನು ದುಡಿದು ತಿನ್ನಲು ಅನುಕೂಲವಾಗುವ ಪರಿಸರ ನಿರ್ಮಿಸಬೇಕೇ ಹೊರತು ಕ್ಷಣಿಕ ಆಮಿಷಗಳು-ದಾಸೋಹಗಳು ಜನರಲ್ಲಿ ಆಲಸ್ಯವನ್ನು ಬೆಳೆಸುತ್ತವೆ, ಜನ ತಮ್ಮತನವನ್ನು ಕಳೆದುಕೊಳ್ಳುತ್ತಾರೆ-ಇದು ಸಮಾಜಕ್ಕೆ ಅಂಟುವ ಪಾರ್ಕಿನ್ಸನ್ ಕಾಯಿಲೆಯಾಗುತ್ತದೆ. ದಾಸೋಹ ನಡೆಸಲು ಮಠ-ಮಾನ್ಯಗಳಿವೆ,ಮಂದಿರ-ಮಸೀದಿಗಳಿವೆ, ಅವುಗಳನ್ನು ನಡೆಸುವುದಕ್ಕಿಂತ ಆ ಅನಿವಾರ್ಯತೆ ಜನರಲ್ಲಿ ತಲೆದೋರದಂತೆ ನೋಡಿಕೊಳ್ಳಿ! ವೀರ ಮಯೂರವರ್ಮರು-ಹೊಯ್ಸಳರು-ವಿಜಯನಗರದ ಅರಸರು ಆಳಿದ ಈ ನಾಡಿನಲ್ಲಿ ಸ್ವಾವಲಂಬನೆಯ ಮಂತ್ರ ಹೇಳಿಕೊಡಿ, ಭಿಕ್ಷಾಟನೆ ಬೇಡ ಅಲ್ಲವೇ? ನಮ್ಮಲ್ಲಿನ ರಾಜಕೀಯಕ್ಕೆ ಸದ್ಯ ಎಚ್.ಎನ್ ರಂತಹ ಶಿಕ್ಷಣ ಕೊಡುವವರು, ನಿಜಲಿಂಗಪ್ಪ-ಕಡಿದಾಳು ಮಂಜಪ್ಪ ಥರದವರು ಬೇಕು. ಆವರು ನಿತ್ಯ ಅವರ ಮನೆಗಳಲ್ಲಿ ದಾಸೋಹ ಮಾಡಲಿಲ್ಲ, ಪತ್ರಿಕೆಗಳಲ್ಲಿ ಬಹಳ ಕಾಣಿಸಿಕೊಳ್ಳಲಿಲ್ಲ ಬದಲಿಗೆ ಜನಸಾಮಾನ್ಯನ ಮನೆಯಲ್ಲಿ ದಿನದ ದಿನಸಿಗೆ ಕೊರತೆ ಆಗದಂತೆ ನೋಡಿಕೊಂಡರು, ಅವರ ಮನೆಗಳಲ್ಲಿ ದಿನವೂ ದೀಪ ಬೆಳಗುವಂತೆ ಕಣ್ಣಿಟ್ಟು ಕಾದರು! ಅವರು ಮಡಿದಾಗ ಅವರ ಅಂತ್ಯಕಿಯೆಗೆ ಹೊರತಾಗಿ ಅವರಲ್ಲಿ ಬೇರಾವ ಕಾಸೂ ಇರಲಿಲ್ಲ-ಹೇಳಿಕೊಳ್ಳುವಂತಹ ಸ್ಥಿರಾಸ್ತಿಯೂ ಇರಲಿಲ್ಲ! [ಆದ್ರೆ ಆಂಧ್ರದಲ್ಲಿ ವೈ ಎಸ್ ಆರ್ ಸತ್ತಾಗ ಅವರ ಪರಿವಾರದ ಆಸ್ತಿ ೩೩ಸಾವಿರ ಕೋಟಿ ರೂಪಾಯಿ ಅಂತ ಹಲವು ಮಿಂಚಂಚೆಗಳು ಇನ್ನೂ ಪ್ರಚಲಿತದಲ್ಲಿವೆ -ಇವರೂ ಬದುಕಿದ್ದಾಗ ದಾಸೋಹಿಗಳಾಗಿದ್ದರು,ಈ ಮಿಂಚಂಚೆ ತಮಗೂ ಬಂದಿರಬಹುದು!] ಅಂತಹ ಸುಪುತ್ರರು ಬೇಕು ಕರ್ನಾಟಕಕ್ಕೆ, ಅಂತಹ ನಿಸ್ಪೃಹರು ಬೇಕು ನಮ್ಮ ದೇಶಕ್ಕೆ !

ಬಹಳ ಕೊರೆದುಬಿಟ್ಟೆನೇ? ಬೇಸರವಾಯಿತೇ? ಎಂದಿನಂತೆ ಒಂದು ಚಿಕ್ಕ ಹಾಡಿನೊಂದಿಗೆ ಮಂಗಳ ಹಾಡೋಣ ಅಲ್ಲವೇ?


ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಭೂಮ್ಯಾಗೆ ಹಣವಚೆಲ್ಲಿ ಮಂಕ್ರಿಯಪ್ಪ ಕಾರೇರಿ ಬಂದ ................

ಮಳೆ-ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಸ್ಯಾಮಿಯಾನ್ದ ಮೇಲ್ ಮಂಜು ಹನಿ ಇಂಗೋಗೈತೆ
ಫ್ಲೆಕ್ಸು ಹಾರುತಿದೆ ಧೂಳು ಹರಡುತಿದೆ
ಜನತೆ ನೋಡುತಿದೆ ಹಣೆ ಚಚ್ಚಿಕೊಳ್ಳುತಿದೆ !

ಯಾಕ್ಲಾ ಲೂಸ್ ಮಾದ ಗುರ್ ಗುಟ್ತೀಯ್ಯಾ......?
ಎಣ್ಣೆ ಸಾಕಾಯಕಿಲ್ವಾ.....?

ರೈತರಿಗೆ ಹೊಸ ಸೌಲತ್ತನ್ನು
ಕೊಡುವೆನೆಂದು ಕಿತ್ತು ಭೂಮಿಯನ್ನು
ಕೈತೋರಿಸಿ ಅವರ್ಗೆ ಆಕಾಸ್ನಾಗೆ
ಹಾರೋದರು ಬೇಗ ಇಮಾನ್ದಾಗೆ
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಗಣಿಗಳಲಿ ಧಣಿಗಳು ಚೆನ್ನಾಗ್ಮೆದ್ದು
ಗಡಿಭಾಗದ ಜನಕ್ಕೊರ್ಸಿ ’ಜೇನುಕೈನ’
ಪೇಪರ್ನಾಗೆ ಮಿಂಚಿ ನಾ ನಾ ಥರ
ಆಗವ್ರೆ ಬಲು ಜೋರು ಶಿವನೇ ಹರ
ಓಹೋ ಹೋ ಹೋ ಹೋ ಹೋ ಆಹಾಹಾ......ಹೋ

ನೆರೆಕಂಬಳ ಗ್ಲೋಬಲ್ ಇನ್ವಸಟ್ಮಂಟು
ಎಲ್ಲಾದ್ರಾಗೂ ಉಂಟು ನೋಟಿನ ನಂಟು!
ತಮ್ಮೊಳಗೇ ತಾವ್ಯಾರು ತೋರ್ಸ್ಗಂಬುದು
ಈ ಇಸ್ಯಕ್ಕೊಂದಷ್ಟು ಖರ್ಚಾಕೋದು
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಏ ಏ ಎಲ್ಲಾಪ್ಪಾ ಇವ್ರೂ ಏಳ್ಲಾ ಮಾದ ಹೊತ್ತಾಯ್ತದೆ, ಹೊಟ್ಟೆ ಚುರುಗುಟ್ತೈತೆ ಮನೇಲಿ ಹಿಟ್ಟು ಆಗೋಗದೆ....ಮಂಕ್ರಿಯಪ್ಪೋರ್ನ ಕೇಳ್ದೆ ಒಸಿ ಇರು ಇನ್ನೊಂದ್ಕಿತಾ ಇಲೆಕ್ಸನ್ನಾಗೆ ಬತ್ತೀನಿ ಅಂತಂದ್ರು...ಹೋಗುದ್ಕೆ ಕೈಗೊಂದ್ ಕೆಂಪ್ ನೋಟ್ ಕೊಟ್ಟವ್ರೆ..ಭಾಳಾ ವಳ್ಳೆ ಜನ ನಮ್ಮ ಮಂಕ್ರಿಯಪ್ಪ್ನೋರು...ಊಟಿಲ್ಲಾ ಅಂದ್ರೆ ತಮ್ಮನೆತಾವ ಮಾಡ್ಕಂಡೋಗ್ಬುಡು ಅಂದ್ರು....ಏಳ್ರಪೋ .....ಹೇ ಹೇ...ಹೇ........

Thursday, June 24, 2010

ಐಷಾರಾಮೀ ಅವತಾರಿಗಳು!!




ಐಷಾರಾಮೀ ಅವತಾರಿಗಳು!!


ನಮ್ಮ ಸುತ್ತಲ ಹತ್ತು ರಾಜ್ಯಗಳಲ್ಲಿ ಹುಡುಕಿದರೆ ಸಿಗುವವರು ಹಲವು ಅವತಾರಿಗಳು. ಇವರೆಲ್ಲ ಅವತಾರಿಗಳಲ್ಲ ಬದಲಾಗಿ ನಿತ್ಯಾನಂದನದ್ದಲ್ಲದ ಇನ್ನೊಂದು ರೀತಿಯ ದಗಾಕೋರರು. ಅಂಥಾ ಬಾಬಾ ಇಂಥಾ ಬಾಬಾ ಅಂತೆಲ್ಲ ಕರೆದುಕೊಳ್ಳುವ ಇವರು ಅಸಲಿಗೆ ಯಾರಿಗೂ ಒಳಿತನ್ನು ಮಾಡುವ ಶಕ್ತಿಯನ್ನಾಗಲೀ, ಮಂತ್ರಶಕ್ತಿಯನ್ನಾಗಲೀ ಹೊಂದಿದವರಲ್ಲ. ಇವರ ಕೆಲಸ ಏನೆಂದರೆ ನಾಳೆ ಯಾವ ಪ್ಲಾನು ಹಾಕಿ ವಸೂಲಿ ಮಾಡುವುದು ಎನ್ನುವುದು. ಇವರಲ್ಲಿ ಕೆವರು ಕಾವಿ ವೇಷ ತೊಟ್ಟರೆ ಇನ್ನು ಕೆಲವರು ಶುಭ್ರವಾದ ರೇಷ್ಮೆ ಬಟ್ಟೆ ತೊಡುವವರು. ದಿನವಿಡೀ ಸ್ಥಳೀಯ ಮಾಧ್ಯಮಗಳಲ್ಲಿ ಶೋಭಿಸುತ್ತ ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಬಕಗಳು!

ಯಾವ ಮಹಾತ್ಮನೂ ಈ ಜಗದಲ್ಲಿ ತಾನು ಮಹಾತ್ಮ ತಾನು ಅವತಾರಿ ಎಂದು ಘೋಷಿಸುವುದಿಲ್ಲ! ಅದನ್ನು ಸಮಾಜ, ಜನರು ಗುರುತಿಸುತ್ತಾರೆ. ಆದರೆ ಇಂತಹ ಬಾಬಾಗಳಲ್ಲಿ ಹಾಗಲ್ಲ ಇವರ ಆರಂಭಿಕ ಹಂತವೇ ಒಂಥರಾ ಉದ್ಭವ ಮೂರ್ತಿಯಂತೇ ರಾತ್ರೋರಾತ್ರಿ! ಸುತ್ತ ವ್ಯವಸ್ಥಿತ ಗುಂಪುಗಳನ್ನು ’ಸೇವೆಗೆ’ ಅಪಾಯಿಂಟ್ ಮಾಡಿಕೊಳ್ಳುವುದು! ಇಂತಹ ಸಾಲಿನಲ್ಲಿ ಅನೇಕರು ಇದ್ದರೂ ನಮಗೆ ಅತೀ ಹತ್ತಿರದ ಮತ್ತು ಅಬ್ಬರದ ಪ್ರಚಾರ ಪಡೆದ ಬಾಬಾ ಅಂದರೆ ’ಅಮ್ಮ-ಭಗವಾನ್’! ಯಕ್ಕಶ್ಚಿತ್ತ ಸಾಮಾನ್ಯ ಇನ್ಶೂರನ್ಸ್ ಕಾರ್ಯಕರ್ತನೊಬ್ಬ ತನಗೆ ಜ್ಞಾನೋದಯವಾಯಿತು ಎಂದು ಹೆಂಡತಿಯ ಸಮೇತ ಪೀಠಮಾಡಿಸಿ ಕೂತು ಆರ್ಥಿಕವಾಗಿ ದೇಶದುದ್ದಗಲ ಬೆಳೆದು ಹೆಮ್ಮೆರವಾಗಿ ನಿಂತಿರುವುದು! ತಮ್ಮ ಮನೆಯ ಅಪ್ಪ-ಅಮ್ಮನನ್ನೇ ವೃದ್ಧಾಶ್ರಮದಲ್ಲಿಟ್ಟಿರುವ ಅನೇಕ ಭಕ್ತರು ಈ ಅಮ್ಮ-ಭಗವಾನ್ ಎಂದು ಅವರೇ ಹೇಳಿಕೊಟ್ಟು ಕರೆಸಿಕೊಳ್ಳುವವರನ್ನು ಆರಾಧಿಸುವುದು. ಮೂಲತಃ ಆಂಧ್ರದವನಾದ ಈ ಮನುಷ್ಯನ ಪರಿವಾರ ಗಣದಲ್ಲಿ ಗಡಿ ಭಾಗದ ಮತ್ತು ಆಂಧ್ರಮೂಲದ ಜನಗಳೇ ಜಾಸ್ತಿ! ಇದು ’ಕಲ್ಕಿ’ಯ ಆವಾಹನೆ !

’ನೇಮಂ’ ಆಶ್ರಮವೆಂಬ ಪಂಚತಾರಾ ವ್ಯವಸ್ಥೆಯ ಕಟ್ಟಡ ಕಟ್ಟಿಕೊಂಡು ಅಲ್ಲಿ ಬಗೆಬಗೆಯ ಹೊಸ ಹೊಸ ವಿನ್ಯಾಸದ ಪೀಠಗಳನ್ನು, ಆಸನಗಳನ್ನು, ಪಲ್ಲಂಗಗಳನ್ನು ಮಾಡಿಸಿಕೊಂಡು ಗಟ್ಟಿಯಾಗಿ ತಳವೂರಿ ಕೂತಿದ್ದಾನೆ ಈ ಮನುಷ್ಯ. ಪ್ರಾರಂಭದಲ್ಲಿಯ ಛಾಯಚಿತ್ರಗಳನ್ನು ನೀವು ನೋಡಬೇಕು, ಆಗ ಬರೇ ಸಾದಾ ಬಿಳೀ ಗ್ರನೈಟು ಕಲ್ಲು ಹಾಸಿದ ನೆಲದ ಕಟ್ಟಡ ಬಾಗಿಲ ಮುಂತೆ ನಿಂತು ಹಳದಿ ಬಟ್ಟೆ ಧರಿಸಿ, ತಲೆಗೂ ಅದನ್ನೇ ಕಟ್ಟಿಕೊಂಡು, ತನ್ನೆರಡೂ ಕೈಗಳನ್ನು ಮುಂದೆ ಚಾಚಿ ನಿಂತು ಪೋಸು ಕೊಟ್ಟಿದ್ದನ್ನು ಅನೇಕರು ತಪ್ಪಾಗಿ ನಮಗೆ ತಿಳಿಹೇಳಿದ್ದು " ಕಲ್ಕಿ ಬಂದಿದ್ದಾರೆ, ಅಗೋ ನೋಡಿ ನಿಮ್ಮ ಕಷ್ಟಗಳನ್ನೆಲ್ಲ ನನ್ನ ಕೈಗೆ ಹಾಕಿ ಎಂದು ಕರೆಯುತ್ತಾರೆ" ಎಂದು! ಅಲ್ಲಿ ಆತ ಕೈ ಚಾಚಿದ್ದು ಬನ್ನಿ ಭಕ್ತರೇ ಮತ್ತಷ್ಟು ಜನರನ್ನು ಕರೆತನ್ನಿ, ಹಣ-ಕಾಣಿಕೆ ನೀಡಿ, ಪೂಜೆ ಮಾಡಿ, ಆರತಿ ಎತ್ತಿ ಎಂದು! --ಇದು ನಕಲಿ ಕಲ್ಕಿಗೆ ಆಸನ


ಹಲವರು ಜನ ಪ್ರತಿಮೆಗಳನ್ನಿಟ್ಟು ಪೂಜಿಸಿದರು, ಫೋಟೋ ಇಟ್ಟು ಧ್ಯಾನಿಸಿದರು. ಮನೆಗಳಲ್ಲಿ,ಕಛೇರಿಗಳಲ್ಲಿ,ಆಸ್ಪತ್ರೆಗಳಲ್ಲಿ,ಉದ್ದಿಮೆಯ ಜಾಗಗಳಲ್ಲಿ, ಸ್ಕೂಲು-ಕಾಲೇಜುಗಳಲ್ಲಿ ಎಲ್ಲಿಲ್ಲ ಹೇಳಿ? ಪ್ರಾಯಶಃ ಗಣಕ ಯಂತ್ರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರವಾದ ವಸ್ತುಗಳಲ್ಲಿ ಈ ಗಂಡ-ಹೆಂಡಿರ ಫೋಟೋ ಪ್ರಮುಖ ಸ್ಥಾನ ವಹಿಸಿದೆ! ಫೋಟೋಗಳಿಗೆ ಚಿಕ್ಕ ಪೀಠಗಳು, ಬಣ್ಣದ ಹಾರಗಳು, ಹೂವುಗಳು, ಸುಗಂಧ ದ್ರವ್ಯಗಳು, ಫೋಟೋಗಳಲ್ಲಿ ಅವರು ಕಂಡುಬಿಟ್ಟರೆ ಸಾಕು ಅಡ್ಡಡ್ಡ ಉದ್ದಂಡ ನಮಸ್ಕರಿಸುವವರು, ಪ್ಯಾಂಟಿನಜೇಬಿನಲ್ಲಿಯೇ ಕೈಮುಗಿಯುವ ಪ್ರತಿಷ್ಠೆಯ ಜನರು, ಹಾಲು ಹರಿಯುತ್ತಿದೆ-ಜೇನು ತೊಟ್ಟಿಕ್ಕುತ್ತಿದೆ ಎನ್ನುವವರು, ಅರಿಶಿನ-ಕುಂಕುಮ ಉದುರುತ್ತಿದೆ ಎನ್ನುವವರು ಒಂದೇ ಎರಡೇ -ಜನ ಮಳ್ಳೋ ಜಾತ್ರೆ ಮಳ್ಳೋ ಎಂದಿದ್ದು ಇದಕ್ಕೇ ಇಅರಬೇಕು--ಇದು ಈ ಕಲ್ಕಿಗೆ ಪಾದ್ಯ

ಜನ ತರಹೇವಾರಿಯಲ್ಲಿ ಅನೇಕರನ್ನು ಸೇರಿಸುವುದು, ಅಲ್ಲಲ್ಲಿ ಮೀಟಿಂಗ್ ಸಂಘಟಿಸುವುದು, ಕಲ್ಕಿಯ ಬಗ್ಗೆ ಬಹಳ ವಾಕ್ಚಾತುರ್ಯ ಉಪಯೋಗಿಸಿ ವಟಗುಡುವ ಹದಿಹರೆಯದ ಸುಂದರ ಹೆಣ್ಣು ಆಚಾರ್ಯರುಗಳು-ಪ್ರಾಚಾರ್ಯರುಗಳು, ಈ ಆಚಾರ್ಯರುಗಳನ್ನು ನೋಡಲು ಹಸಿದ ಕಣ್ಣು-ಮೈಮನ ಹೊತ್ತು ಬಂದ ಪಡ್ಡೆ ಹುಡುಗರು-ಹೈಕಳು-ವಿಷಯಲಂಪಟರು ಛೆ ಛೆ ಹೇಳತೀರದು....ಕಲ್ಕೀ ಗುಣಗಾನ ವೈಭವ, ಕಣ್ಣಾರೆ ನೀವು ನೊಡಬೇಕು. ಅಲ್ಲಿ ಬಂದವರಿಗೆಲ್ಲ ಕೆಲವೊಮ್ಮೆ ತಿಂಡಿ-ಊಟ, ತರಾವರಿ ವ್ಯವಸ್ಥೆ!--ಇದು ಡೂಪ್ಲಿಕೇಟ್ ಕಲ್ಕಿಗೆ ಅರ್ಘ್ಯ

ಮನೆಗಳಲ್ಲಿ ಮಹಿಳೆಯರದೇ ಒಡ್ಡೋಲಗ. ಹಾಲಿನ ಅಭಿಷೇಕ, ಪಂಚಾಮೃತದ ಅಭಿಷೇಕ, ಎಳೆನೀರಿನ ಅಭಿಷೇಕ,ದೇವರಿಗೆ ಹೇಳುವ ಮಂತ್ರಗಳನ್ನು ಪುರೋಹಿತರಿಂದ ಹೇಳಿಸಿ ಅಭಿಷೇಕ---ಇತಿ ಸ್ನಾನಂ||

ಸ್ನಾನಾನಂತರೇ ಆಚಮನೀಯಂ [ಸ್ನಾನದ ತರುವಾಯ ಬಾಯಿತೂಳೆಯಲು ನೀರು] ಇದಕ್ಕೆಲ್ಲ ಕಲ್ಕಿಗೆ ಉಪಯೋಗಿಸುವುದು ಪನ್ನೀರು, ರೋಸ್ ವಾಟರ್, ವಿ ಐ ಪಿ ಅವತಾರಿಗೆ ತಕ್ಕುದಾದ ವ್ಯವಸ್ಥೆ ಇಡಬೇಕಷ್ಟೇ ?

ಭೂಷಣಕ್ಕೆ ಅಂದರೆ ತೊಟ್ಟುಕೊಳ್ಳಲು ರೇಷ್ಮೆ ವಸ್ತ್ರಗಳು, ದಿರಿಸುಗಳು, ಅಮ್ಮಗೆ ತುಟ್ಟಿಯ ರೇಷ್ಮೆ ಸೀರೆ,ಝರಿ ಶಾಲು ಇತ್ಯಾದಿಗಳು ಭಕ್ತರಮನೆಗಳಲ್ಲಿ! ಅವುಗಳನ್ನು ’ನೇಮಂ’ ಗೆ ಹೋಗುವಾಗ ಕೊಂಡೊಯ್ದು ತಲ್ಪಿಸುವುದು! ಫಾರಿನ್ ಸೆಂಟ್ ಗಳನ್ನೂ ಕೊಡುತ್ತಾರೆ, ಭುವಿಗೆ ಬಂದ ಕಲ್ಕಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಲ್ಲ! ಅದಕ್ಕೇ ಆದರೆಕಲ್ಕಿ ಕಾಲ ಕಾಲಕ್ಕೆ ಎಡಮುದುಕು ಚಹರೆ ತೋರುತ್ತಿದ್ದಾರಲ್ಲ! ಕಲ್ಕಿ ಬಹಳಕಾಲ ಇರುವುದಿಲ್ಲವೇ? ಛೆ ಛೆ ಅವತಾರಿಗಳು ತಮ್ಮ ಅವತಾರಗಳನ್ನು ಬಂದಕಾರಣ ಮುಗಿದ ಮೇಲೆ ಮುಗಿಸಿಹೊರಡುತ್ತಾರಲ್ಲವೇ? ಹಾಗಾದರೆ ೨೦೧೨ಕ್ಕೆ ಪ್ರಳಯವಾಗುವುದು ಗ್ಯಾರಂಟಿ ಅಂದಾಯ್ತು ಅಲ್ಲವೇ? ಆದರೆ ಒಂದು ಯುಗಕ್ಕೆ ನಾಲ್ಕು ಪಾದಗಳು ಎನ್ನುತ್ತದೆ ವೇದ. ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ, ಅಂದಮೇಲೆ ಪ್ರಳಯವೆಲ್ಲಿ ಬಂತು? ಒಹೋ ೨೦೧೨ಕ್ಕೆ ಪ್ರಳಯ ಎನ್ನುವುದೆಲ್ಲ ಕಟ್ಟು ಕಥೆ! ನಮ್ಮ ಈ ಕಲ್ಕಿ ಹತ್ತಿರ ಸದ್ಯಕ್ಕೆ ಖಡ್ಗ ಮತ್ತು ಬಿಳೇ ಕುದುರೆ ಎಲ್ಲ ಇಲ್ಲವಲ್ಲ? ಅದರ ತಯಾರಿ ಇನ್ನೂ ಆಗಿಲ್ಲವೆಂತಲೋ ಬಿಡಿ.

ಮಾಲೆಗಳೆಂದರಾಯಿತೆ ಬಹುಶಃ ತಿರುಪತಿ ತಿಮ್ಮಪ್ಪನಿಗೂ ಇಂತಹ ಮಾಲೆಗಳು ಸಿಗಲಿಕ್ಕಿಲ್ಲ! ಅಷ್ಟು ಮಾಲೆಗಳು, ಬಣ್ಣ ಬಣ್ಣದ ಹೂವುಗಳಿಂದ ಮಾಡಲ್ಪಟ್ಟವು, ರೇಷ್ಮೆ ಗೂಡುಗಳಿಂದ ಮಾಡಲ್ಪಟ್ಟವು ಎಲ್ಲವನ್ನೂ ಕಲ್ಕ್ಯಾರ್ಪಣಗೈಯ್ಯುವುದು ಕಲ್ಕಿ ಭಕ್ತರ ಬಯಕೆ. ಅದರಲ್ಲೂ ಕಲ್ಕಿ ಮೊದಲು ಹೇಳಿಕೊಟ್ಟ ಶ್ಲೋಕವೇ ಬೇರೆ, ಈಗ ಅನುಗ್ರಹಿಸುವ ’ಮೂಲಮಂತ್ರ’ವೆಂಬ ಶ್ಲೋಕವೇ ಬೇರೆ. ಮೂಲಮಂತ್ರದ ಅರ್ಥವೇ ಗೊತ್ತಿರದ ಇಂಥವ್ರಿಗೆ ಮೂಲಮಂತ್ರ ಎಂಬ ಶಬ್ಧದ ಪ್ರಯೋಗಮಾಡಬೇಕೆಂಬುದು ಗೊತ್ತು! ಇದು ನಿತ್ಯಾನಂತನಿಂದ ಬಳುವಳಿ ಪಡೆದಿದ್ದಿರಬಹುದು!
ಮೊದಲು ಅವರ ಶ್ಲೋಕ ಹೀಗೆನ್ನುತ್ತಿತ್ತು

ಭಗವತಿ ಪದ್ಮಾವತೀ ಸಮೇತ ಕಲ್ಕಿ ಭಗವತೇ ನಮಃ |

ಆದರೆ ಅದು ನಗೆಪಾಟಲಾದಮೇಲೆ ಹೀಗೆ ಪರಿಷ್ಕರಿಸಲಾಗಿದೆ--

ಭಗವತೀ ಸಮೇತ ಕಲ್ಕಿ ಭಗವತೇ ನಮಃ |

ಇದುವರೆಗೆ ಯಾವ ಗುರುವೂ ತನ್ನನ್ನೇ ಹೀಗೆ ಜಪಿಸಿ ಎಂದು ಹೇಳಿಲ್ಲ-ಹೇಳಿದ್ದು ಕೇಳಿಲ್ಲ! ಆದಿ ಶಂಕರರನ್ನೂ ಸೇರಿದಂತೆ ಎಷ್ಟೊಂದು ಜನ ಸಾಧು-ಸಂತರು ಬಂದರೂ ಅವರೆಲ್ಲ ತನ್ನನ್ನೇ ಜಪಿಸಿ ಎನ್ನಲಿಲ್ಲ. -ಹೀಗೇ ಇದು ಈ ಕಲ್ಕಿಗೆ ಮಾಲಾರ್ಪಣೆ

ಧೂಪ ದೀಪ ಹೇಗೂ ನಮ್ಮ ಹಿಂದೂ ಪೂಜೆಗಳಲ್ಲಿ ಅತಿ ಸಹಜ. ಭಕ್ತರೆನಿಸಿಕೊಂಡವರು ಹಾರುತ್ತಾ ಕುಣಿಯುತ್ತಾ ಆರತಿ ಮಾಡುವವರಿದ್ದಾರೆ, ಅಮ್ಮ-ಭಗವಾನರ ಕೃಪೆಯಿಂದಲೇ ತಾವು ಬದುಕಿದೆವು ಅನ್ನುವವರಿದ್ದಾರೆ. ಅವರಿಂದಲೇ ನಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಗೋಳೋ ಎಂದು ಅಳುವವರಿದ್ದಾರೆ! ನಮ್ಮ ದುಃಖತಪ್ತ ಜನರಿಗೆ, ಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳಲು,ಧೈರ್ಯತುಂಬಲು ಕೆಲವು ಜನ ಬೇಕು. ಇದನ್ನೇ ನಾಯ್ಡು ದುರುಪಯೋಗ ಮಾಡಿಕೊಂಡು ಕಲ್ಕಿಯಾದ! ಒನ್ಸ್ ವೀಕನೆಸ್ ಈಸ್ ಅದರ್ಸ್ ಗೇನ್ !


ಇಷ್ಟು ಸಾಕು ಎನಿಸುತ್ತದೆ,

ಅಭ್ಯುತ್ಥಾನಮ್ ಸ್ವಾಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ|
ಸ್ನಾನಂ ವಾಸೋ ಭೂಷಣಾಂಗಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ||

ಈ ರೀತಿ ಸುಮಾರಾಗಿ ನಮ್ಮ ಸಂಸ್ಕೃತದಲ್ಲಿ ಹೇಳುವಂತೆ ಷೋಡಷೋಪಚಾರ ಮಾಡಿದ್ದೇನೆ. ನನ್ನ ಪ್ರೀತಿಯ ಮಹಾಜನಗಳೇ ಕಲ್ಕಿ ಭೂಮಿಯ ಮೇಲೆ ಇನ್ನೂ ಹುಟ್ಟಿಲ್ಲ! ಇಷ್ಟು ಬೇಗ ಹುಟ್ಟುವುದೂ ಇಲ್ಲ! ಒಂದೊಮ್ಮೆ ಆತ ಹುಟ್ಟಿದ್ದರೂ ಪ್ರಬುದ್ಧ ಸ್ಥಿತಿಗೆ, ಪ್ರಕಾಶಮಾನ ಸ್ಥಿತಿಗೆ ಬರುವುದು ಕಲಿಯುಗದ ನಾಲ್ಕನೇ ಪಾದದಲ್ಲಿ! ಹೀಗಾಗಿ ಯಾರೋ ದಾರಿ ಹೋಕರು ಟವೆಲ್ ಹಾರಿಸಿ ತಾನೇ ಕಲ್ಕಿ ಬಂದಿದ್ದೇನೆ-ಜನರ ಕಷ್ಟಗಳನ್ನೆಲ್ಲ ನುಂಗಿಹಾಕುತ್ತೇನೆ ಅಂದಾಗ ಹೋಗಿ ದಬಕ್ಕನೆ ಬೋರಲು ಬೀಳುವುದು ಬಹಳ ವಿಷಾದನೀಯ, ಈ ವಿಷಯದಲ್ಲಿ ಈ ಕಲ್ಕಿ ಲಕ್ಕಿ! ದಿನವೂ ಐಷಾರಾಮೀ ಬದುಕನ್ನು ಬದುಕುತ್ತಿರುವ ಪಂಚತಾರಾ ದಂಪತಿ ಅಮ್ಮ-ಭಗವಾನ್ ಎನಿಸಿಕೊಳ್ಳಲು ನಾಚಿಕೆ ಪಡುತ್ತಿಲ್ಲ ನೋಡಿ, ನೀವೂ ಹೋಗಬಹುದು-ಆರತಿ ಮಾಡಬಹುದು! ನೇಮಂ.......ನೇಮಂ ! ಶಿಸ್ತಾಗಿ ಇಸ್ತ್ರಿ ಮಾಡಿದ ಗರಿಗರಿಯಾದ ರೇಷ್ಮೆ ಬಟ್ಟೆಗಳನ್ನು ತೊಟ್ಟು ಗಂಡ-ಹೆಂಡತಿ ತಮ್ಮ ಕಾಲ್ಕೆಳಗೆ ಹಲವರನ್ನು ಅಡ್ಡಬೀಳಿಸುವ ಜಾಗವೇ ನೇಮಂ ! ಪುಣ್ಯಾತಗಿತ್ತಿ ಅಮ್ಮ ಎನಿಸಿಕೊಂಡವಳಿಗೆ ಹುಬ್ಬು ಡ್ರೆಸ್ ಮಾಡಲು ಅದ್ಯಾವ ಹೆಣ್ಣುಮಗಳಿದ್ದಳೊ ಗೊತ್ತಿಲ್ಲ. ಅಂತೂ ಈ ದಂಪತಿ ಪಟ್ಟಾಗಿ ಬಂದು ಆಸೀನರಾದರೆ ಅಲ್ಲಿ ಬಹಳ ಮಂದಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಾರೆ-ಅದೇ ನೇಮಂ! ಅಶ್ರಮದ ಒಳಗೆ ನಡೆಯುವ ಹದಿಹರೆಯದ ಹೆಣ್ಣು ಆಚಾರ್ಯರುಗಳ ನೇಮಂ ಎಲ್ಲ ಇನ್ನೂ ಹೊರಬರುವುದರಲ್ಲಿದೆ, ಕಾಯುತ್ತಿರಿ ಇದು ಮತ್ತೊಂದು ನಿತ್ಯ ಆನಂದ ಪರಮಹಂಸ ಸ್ಥಿತಿ!

ಉಪಚಾರದ ಕೊನೆಯ ಘಟ್ಟ- ಪ್ರಣಾಮ-ಇದನ್ನು ಮಾತ್ರ ಗೋವಿಂದನಿಗೆ ಇಟ್ಟುಬಿಡೋಣ, ಯಾಕೆಂದರೆ ಎಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರಿರುತ್ತಾರೋ ಅಲ್ಲೀವರೆಗೆ ನಾಮಹಾಕುವವರೂ ಇರುತ್ತಾರಂತೆ! ನಾಮವನ್ನೇ ಪ್ರಧಾನವಾಗಿ ಹೊಂದಿದ ತಿಮ್ಮಪ್ಪಾ ನಮಗೆ ಮಾತ್ರ ಬೇರೆಯವರು ನಾಮಹಾಕದಂತೆ ಕಾಪಾಡಪ್ಪಾ ಎಂದು ಅವನಿಗೇ ನಮಿಸಿಬಿಡೋಣ ಎಂಬುದು ದೃಢವಾದ ತೀರ್ಮಾನ. ಹೇ ಭಗವಂತ ನೀನು ಕಳೆದ ಒಂಬತ್ತು ಅವತಾರಗಳಲ್ಲೂ ಪಟ್ಟ ಪಾಡು ಅಷ್ಟಿಷ್ಟಲ್ಲ, ನಿನ್ನ ಹತ್ತನೆಯ ಅವತಾರದ ಜಾಗಕ್ಕೆ ನಾವು ಭೂಲೋಕದ ಮಂದಿ ಈಗಾಗಲೇ ಒಬ್ಬನನ್ನು ಕುಳ್ಳಿರಿಸಿಬಿಟ್ಟಿದ್ದೇವೆ. ಇಲ್ಲೀವರೆಗೆ ನೀನು ನಮಗೆ ನಾಮ ಹಾಕಿಸುತ್ತಿದ್ದೆಯಲ್ಲ ಈಗ ನಿನಗೂ ಭೂಸುರರ ಬಿಸಿ ತಟ್ಟಲಿ ಎಂಬ ಸಲುವಾಗಿ ನಾಮ ಹಾಕಿಬಿಟ್ಟಿದ್ದೇವೆ! ಹೇಗೆ ಆಗದೇ? ನೀನು ಕಾವೇರೀ ತೀರದಲ್ಲಿ ಮುಂದೆಂದೋ ಬರುವೆಯೆಂದು ಹೇಳುತ್ತಾರೆ. ಆದರೆ ಸದ್ಯ ನೀನು ಬಂದರಂತೂ ಜನ ಜಾಗದಲ್ಲಿರುವ ಈ ಕಲ್ಕಿಯಿಂದ ’ಪ್ರಸಾದ’ಪಡೆದು ನಿನ್ನನ್ನೇ ಡೂಫ್ಲಿಕೇಟು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ! ಇಲ್ಲಿ ಜನ ಹಾಗೆ ’ಪ್ರಸಾದ’ ಸ್ವೀಕರಿಸುವಾಗ ನೋಡಲಿರಲಿ ಅಂತ ಹುಡುಕಿದರೆ ನಮ್ಮ ಲೋಕಾಯುಕ್ತರೂ ಬಿಟ್ಟು ಬಿಟ್ಟು ಹೋಗುತ್ತಿದ್ದಾರೆ, ನಾವು ಅಸಹಾಯರು ದೇವಾ... ತಿರುಪತೀ ವೆಂಕಟರಮಣ ಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ....ಗೋವಿಂದಾ.......ಗೋವಿಂದ!!

Tuesday, June 22, 2010

ಹೀಗೆರಡು ಕಥೆಗಳು

ಹೀಗೆರಡು ಕಥೆಗಳು

ತಂಪಿನ ವಾತವರಣದಲ್ಲಿ ಕಾಪಿ ಕುಡಿಯುತ್ತ ಕುಳಿತ ಶಾಂತಾಳಿಗೆ ಹಳೆಯ ನೆನಪುಗಳು ಕಾಡಿದವು. ಟಿವಿಯಲ್ಲಿ ಹಲವು ಸಲ ಕಂಡಿದ್ದರೂ ತನ್ನ ಪ್ರೀತಿಯ ಪ್ರಶಾಂತ್ ಅದೇ ಥರದ ವ್ಯಕ್ತಿ ಅಂತ ತಿಳಿದಿರಲಿಲ್ಲ ಅವಳಿಗೆ. ಜೀವನ ಹೂ ಬನವಾಗಿತ್ತು. ಬಗೆಬಗೆಯ ಡ್ರೆಸ್ ಗಳು, ವಿವಿಧ ಲಿಪ್ ಸ್ಟಿಕ್-ಮೇಕಪ್ ಸಾಮಗ್ರಿಗಳು, ತರಾವರಿ ಚಪ್ಪಲಿಗಳು, ನೂರೆಂಟು ನಮೂನೆಯ ಆಭರಣಗಳು, ಲೇಟೆಸ್ಟ್ ಸೆಲ್ ಫೋನ್ ಹ್ಯಾಂಡ್ ಸೆಟ್ ಗಳು ಇವೆಲ್ಲವನ್ನೂ ಪಡೆದು ರಾಣಿಯಂತೆ ಮೆರೆದಿದ್ದಳು! ಅಪ್ಪ-ಅಮ್ಮ ಅಡ್ಡಿ ಮಾಡಿರಲಿಲ್ಲ, ಮಗಳು ಏನು ಮಾಡಿದರೂ ಸೈ ಎನ್ನುವ ಪರಿಪಾಟದವರಾಗಿದ್ದರು. ಮಗಳು ಕಾಲೇಜಿನಲ್ಲಿ ಏನು ಓದಿದಳು, ಎಲ್ಲಿ ಕುಳಿತಳು, ಯಾಕೆ ಇಷ್ಟು ತಡವಾಗಿ ಮನೆ ಸೇರಿದಳು--ಇದನ್ನೆಲ್ಲ ವಿಚಾರಿಸುವ ಜನವೇ ಅಲ್ಲ ಅವರು! ಹೀಗಾಗಿ ತಾನು ಗಂಡು ಬೀರಿಯಾಗೇ ಬೆಳೆದಳು! ಅಂದದಲ್ಲಿ ಯಾವ ಸಿನಿಮಾ ಹೀರೋಯಿನ್ ಗೂ ಕಮ್ಮಿ ಇರಲಿಲ್ಲ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಸುಶ್ಮಿತಾ ಸೇನ್ ಎಲ್ಲರ ಒನಪು ಒಯ್ಯಾರದ ಜೊತೆಗೆ ಬಿಪಾಷಾ ಬಸುವಿನ ಮಾದಕತೆ ತುಂಬಿಕೊಂಡವಳು, ಇದನ್ನೆಲ್ಲ ತನ್ನ ಶಾಶ್ವತ ಬೆಡಗು ಎಂದು ಭಾವಿಸಿ ಅನೇಕ ಹುಡುಗರ ನಿದ್ದೆಗೆಡಿಸಿದ್ದಳು. ಪಡ್ಡೆ ಹೈಕಳು ಲೋ ಜೀನ್ಸ್ ತೊಟ್ಟು ನಡೆವಾಗ ಅವರ ತೆಳು ಸೊಂಟಕ್ಕೆ ಮಾರುಹೋಗುತ್ತಿದ್ದ ತಾನು ಅನೇಕರನ್ನು ಬಯಸುವ ಮನೋಭಾವನೆ ಹೊಂದಿದ್ದಳು. ರಮೇಶನ ಕೂದಲು ಚೆನ್ನಾಗಿದ್ದರೆ ನವೀನನ ಕಣ್ಣು ಚೆನ್ನಾಗಿತ್ತು, ರೋಹಿತ್ ನ ಎತ್ತರ ಇಷ್ಟವಾದರೆ ಪ್ರತೀಕ್ ನ ಮುಖ ತುಂಬಾ ಮುಗ್ಧವಾಗಿತ್ತು. ಯಾರನ್ನೂ ದೂರವಿಡಲು ಮನಸಾಗುತ್ತಿರಲಿಲ್ಲ. ಕೊನೆಗೊಮ್ಮೆ ಎಲ್ಲವನ್ನೂ ಒಬ್ಬನಲ್ಲೇ ಪಡೆಯಲಾಗದಿದ್ದರೂ ಇರಲಿ ಎಂದು ಪ್ರಶಾಂತ್ ನನ್ನು ಪ್ರೀತಿಸಲು ಪ್ರಾರಂಭಿಸಿದಳು.

ಅತ್ತ ಪ್ರಶಾಂತನ ಕಥೆಯೇ ಬೇರೆ ಇದ್ದುದು ಇವಳಿಗೆ ತಿಳಿದಿರಲಿಲ್ಲ. ಅದೊಂದು ಬಣ್ಣದ ಚಿಟ್ಟೆ ಎಂಬುದು ಅರಿವಿಗೆ ಬಂದಿರಲಿಲ್ಲ, ಹೀಗಾಗಿ ಹೋಟೆಲ್, ಐಸ್ ಕ್ರೀಮ್ ಪಾರ್ಲರ್, ಸೈಬರ್ ಕೆಫೆ,ಪಾರ್ಕು ಅಂತೆಲ್ಲ ಹಲವು ಕಡೆ ಜೊತೆಗೇ ಓಡಾಡುತ್ತಿದ್ದಳು. ದಿನಗಳೆದಂತೆ ಅವನಲ್ಲಿ ತುಂಬಾ ಅನುರಕ್ತನಾಗಿದ್ದಳು. ಅವನ ಜೊತೆಗಿರುವಾಗ ತಾನು ಏನುಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಡುತ್ತಿದ್ದಳು.

ಹೀಗೇ ಒಂದು ದಿನ ದೂರದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬರೋಣವೆಂದ ಪ್ರಶಾಂತನಿಗೆ ಅಂಟಿಕೊಂಡು ಹೊರಟೇ ಬಿಟ್ಟಳು. ಮೈಸೂರಿನಲ್ಲಿ ರಾತ್ರಿ ಉಳಿದು ಮಾರನೇದಿನ ಹೋಗೋಣವೆಂಬ ಆತನ ಒತ್ತಯಾಕ್ಕೆ ಒಲ್ಲೆ ಎನ್ನಲಾಗಲಿಲ್ಲ. ಆ ರಾತ್ರಿ ಆ ರಾತ್ರಿ ಅವಳು ಬಯಸಿದ ರಾತ್ರಿಯೂ ಆಗಿತ್ತು. ಅಂದು ಆತ ಲೊಚ ಲೊಚನೆ ಕೊಟ್ಟ ಸಿಹಿ ಮುತ್ತುಗಳ ನೆನಪಾದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ! ಆತನ ಬರಿಮೈಯ ಬಿಸಿಯಪ್ಪುಗೆ, ಉದ್ವೇಗದ ಪ್ರೀತಿ, ಆಮೇಲೆ ಅವನು ಕೊಟ್ಟ ಶರೀರ ಸುಖ ಇದನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ.

ಮರಳಿ ತಿಂಗಳಾಗುವಾಗ ಇದ್ದಕಿದ್ದಲ್ಲೇ ವಾಂತಿಗೆ ಶುರುವಾಯಿತು. ಚಿಕಿತ್ಸೆಗಾಗಿ ವೈದ್ಯರನ್ನು ಕಂಡಾಗ ಅವರು ಕುರುಹು ನೋಡಿ ಪುನಃ ಪರೀಕ್ಷೆಮಾಡಿ ಬಸುರಿ ಎಂದು ಹೇಳಿಬಿಟ್ಟರು. ಅಲ್ಲಿಯವರೆಗೆ ಜೊತೆಗಿದ್ದ ಪ್ರಶಾಂತ ಆವತ್ತಿನಿಂದ ಜೊತೆಯನ್ನೇ ತೊರೆದ. ಎಲ್ಲೂ ಹೇಗೂ ಸಿಗದೇ ಕಣ್ಮರೆಯಾದ. ತಿಂಗಳದಿನ ದಿನವೂ ಎಲ್ಲೋ ಹೇಗೋ ತನ್ನೊಂದಿಗೆ ಸುಖಿಸುತ್ತಿದ್ದ ಆತನಿಗೆ ಬಸುರಿ ಎಂಬ ಸುದ್ದಿ ತಿಳಿದ ತಕ್ಷಣ ತಾನು ಬೇಡವಾಗಿದ್ದಳು.

ಕಥೆಯನ್ನು ತಿಳಿಯದ ಮನೆಯಲ್ಲಿ ಮಗಳಿಗೆ ಯಾಕೋ ಆರೋಗ್ಯ ಸರಿಯಿಲ್ಲವೆಂದಷ್ಟೇ ಗೊತ್ತಿತ್ತು. ಅದೇನು ಮಹಾ ದಿನವೆರಡು ದಿನಗಳಲ್ಲಿ ಮಾಮೂಲೀ ಸರಿಹೋಗುತ್ತದೆ ಎಂದುಕೊಂಡಿದ್ದರು. ಪಾಪ ಅವರಿಗೇನು ಗೊತ್ತು ರಾಣಿಯ ಮೇಜವಾನಿ!ಆಮೇಲೆ ನಡೆದಿದ್ದೇ ಬೇರೆ. ಎಚ್ಚರ ತಪ್ಪಿ ಬಿದ್ದಿದ್ದ ತನ್ನನ್ನು ಯರೋ ಆಸ್ಪತ್ರೆಗೆ ಸೇರಿಸಿದ್ದರು. ಚೀಲದಲ್ಲಿರುವ ಮಾಹಿತಿಯಿಂದ ಮನೆಗೆ ತಿಳಿಸಿ ವೈದ್ಯರು ಅಪ್ಪ-ಅಮ್ಮನನ್ನು ಕರೆಸಿದ್ದರು. ವಿಷಯ ತಿಳಿದ ಅವರು ಕಕ್ಕಾವಿಕ್ಕಿಯಾಗಿ ಕುಸಿದು ತಲೆಗೆ ಕೈಹಚ್ಚಿ ಕುಳಿತಿದ್ದರು. ತನ್ನೊಂದಿಗೆ ಕೇಳಿದರು. ಪರಿಸ್ಥಿತಿ ತನ್ನ ಕೈಮೀರಿ ಹೋಯಿತು ಎಂದು ಆಗ ಅರಿವಿಗೆ ಬಂದ ತನಗೆ ಅಬಾರ್ಷನ್ ಮಾಡಿಸಲಾಯಿತು. ಜೊತೆಗೆ ವೈದ್ಯರು ತನಗೆ ಎಚ್.ಐ.ವಿ ಸೋಂಕು ತಗುಲಿರುವುದಾಗಿ ಹೇಳಿದರು. ರಾಣಿಯಂತೆ ಮೆರೆದ ತಾನು ಶರೀರದ ಕಸುವನ್ನೆಲ್ಲ ಕಳಕೊಂಡು ದಾಸಿಯಂತೆ,ಭಿಕ್ಷುಕಿಯಂತೆ ಕುಬ್ಜಳಾಗಿಬಿಟ್ಟಿದ್ದಳು.

-------------೦------------

ಬಹಳ ಜನ ಸೇರಿದ್ದರು ಅಲ್ಲಿ. ಯಾಕೆ ಎಂಬುದು ಹಿಂದೆ ನಿಂತವರಿಗೆ ಗೊತ್ತಾಗುತ್ತಿರಲಿಲ್ಲ. ರೈಲ್ವೇ ಲೈನಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ ಎಂಬುದಷ್ಟೇ ತಿಳಿದ ಸುದ್ದಿ. ಅಂತೂ ಇಂತೂ ನುಗ್ಗುತ್ತ ನುಗ್ಗುತ್ತ ಮುಂದೆ ಹೋಗಿ ನೋಡಿದರೆ ಅಭಿಷೇಕ್! ಅಭಿಷೇಕ್ ಬಹಳ ಸ್ಫುರದ್ರೂಪಿ ಯುವಕ, ಆಗತಾನೇ ಮದುವೆಯಾಗಿದ್ದ. ೭-೮ ವರ್ಷಗಳಿಂದ ಕೆಲಸಮಾಡಲು ಬಂದು ಹತ್ತಿರದ ಓಣಿಯಲ್ಲೇ ಉಳಿದುಕೊಂಡ ಆತನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು.ಹಾಗೆ ನೋಡಿದರೆ ಆತನ ಮನೆಗೆ ಬರಹೋಗುವವರೂ ಕಡಿಮೆಯೇ. ವೃತ್ತಿಯ ಹೊರತು ಇನ್ನಾವುದೇ ವ್ಯವಹಾರಗಳಲ್ಲಿ ತೊಡಗಿಕೊಂಡ ವ್ಯಕ್ತಿಯಲ್ಲ ಆತ.

ಸಖರಾಯಪಟ್ಟಣದ ಅಭಿಷೇಕ್ ಗೆ ಇದ್ದುದೊಂದೇ ಆಸೆ. ತಾನು ಹೇಗಾದರೂ ಮಾಡಿ ದುಡಿಯಬೇಕು. ಮನೆಯಲ್ಲಿರುವ ಅಪ್ಪ-ಅಮ್ಮನನ್ನು ಬಡತನದ ಬವಣೆಯಿಂದ ಪಾರುಮಾಡಬೇಕು. ತಂಗಿಗೊಬ್ಬ ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಬೇಕು. ಅಮೇಲೆ ತಾನು ಮದುವೆಯಾಗಿ ಹಾಯಾಗಿ ಇರಬೇಕು ಎಂಬುದು.

ನಮ್ಮ ಎಣಿಕೆಗಳೇ ಒಂದು, ವಿಧಿಲಿಖಿತವೇ ಇನ್ನೊಂದು ಅಲ್ಲವೇ? ಅಭಿಷೇಕ್ ಬೆಂಗಳೂರಿಗೆ ಬಂದು ಕೆಲಸ ಆರಂಭಿಸಿದ್ದು ನಿಜ, ದುಡಿದದ್ದನ್ನು ಒದಷ್ಟು ಊರಿಗೆ ಕೊಟ್ಟು ತಂದೆ ಮಾಡಿದ್ದ ಸಾಲವನ್ನು ತೀರಿಸಿದ್ದು ನಿಜ. ತಂಗಿಯನ್ನು ಅಂತೂ ಕಷ್ಟಪತ್ತು ಮದುವೆ ಮಾಡಿದ್ದೂ ಸತ್ಯ. ತಾನು ಮದುವೆಯಾಗಿದ್ದೂ ಅಷ್ಟೇ ಸತ್ಯ.

ಮದುವೆಯಾಗುವಾಗ ಬಹಳ ಮುದ್ದಾಗಿ ಕಂಡ ಹುಡುಗಿ ಮದುವೆಯಾದ ಕೆಲಸಮಯದ ನಂತರ ಬಣ್ಣ ಬದಲಾಯಿಸಿದ್ದಳು! ಅವಳಿಗೆ ತನ್ನ ಕಡೆಯವರನ್ನು ಬಿಟ್ಟರೆ ಗಂಡನ ಮನೆಯವರಾಗಲೀ ನೆಂಟರಿಷ್ಟರಾಗಲೀ ಬಂದರೆ ಹಿಡಿಸುತ್ತಿರಲಿಲ್ಲ. ನೋಡಲು ಅತಿ ಸುಂದರಿಯಾಗಿದ್ದ ಮುಗ್ಧಳಂತೇ ಕಾಣುತ್ತಿದ್ದ ಹುಡಿಗಿಗೆ ಗಂಡನ ಜುಟ್ಟುಹಿಡಿದು ಮಣಿಸುವ ಸ್ವಭಾವವಿತ್ತು. ಮನೆಯಲ್ಲಿ ತಂದೆ-ತಾಯಿ, ಸ್ಕೂಲಲ್ಲಿ ಶಿಕ್ಷಕರು ಹೆದರಿಸದಷ್ಟು ಹೆದರಿಕೆ ಉಂಟುಮಾಡುವ ಕಠಿಣ ಮನಸ್ಕಳಾಗಿದ್ದಳು ಆ ಹುಡುಗಿ! ಗೋಮುಖ ವ್ಯಾಘ್ರ ಅಂದರೆ ಅವಳೇ ಎನ್ನುವಷ್ಟು ಧೂರ್ತೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಅಭಿಷೇಕ್ ನ ತಂದೆಗೆ ಆರೋಗ್ಯ ಹದಗೆಟ್ಟಿತು. ಸಾಕಷ್ಟು ಉಪಚಾರಗಳಾದಮೇಲೆ ತಿಳಿದಿದ್ದು ಅವರಿಗೆ ಲಿವರ್ ಕ್ಯಾನ್ಸರ್ ಇದೆ ಎಂಬುದು! ಮನುಷ್ಯನ ಲಿವರ್ ಹೇಗೆ ಎಂದರೆ ಅದರ ಹತ್ತರಲ್ಲಿ ಒಂದು ಭಾಗ ಕೆಲಸಮಾಡುತ್ತಿದ್ದರೂ ಅದು ಮಾಮೂಲೀಯಾಗಿ ಕಾಣುತ್ತದೆ. ಹೊರನೋಟಕ್ಕೆ ಇಡೀ ಲಿವರ್ ಸರಿ ಇದೆ ಎಂಬರೀತಿ ಇರುತ್ತದೆ. ಯಾವಾಗ ಕೊನೇ ಹಂತ ತಲ್ಪುತ್ತದೋ ಆಗ ಮಾತ್ರ ಗೊತ್ತಗುವುದು ಲಿವರ್ ಕ್ಯಾನ್ಸರ್! ಈ ವಿಷಯ ಕೇಳಿ ಅಭಿಷೇಕ್ ತುಂಬಾ ನೊಂದ. ಅಮ್ಮ ನೋಯದಿರಲೀ ಎಂದು ಅಮ್ಮನಿಗೆ ರಿಪೋರ್ಟ್ ನಲ್ಲಿ ಬಂದಿದ್ದನ್ನು ಮರೆಮಾಚಿದ್ದ. ಒಳಗೆ ತಡೆಯಲಾರದ ಬೇಗುದಿ ಹೊತ್ತ ಅಭಿಷೇಕ್ ಗೆ ಮನಸ್ಸಿಲ್ಲುದ್ದುದು ಅಪ್ಪನಿಗೆ ಹೇಗಾದರೂ ಅದನ್ನು ವಾಸಿಮಾಡಿಸಲು ಸಾಧ್ಯವೇ ಎಂಬುದು. ತನ್ನ ಸಂಬಳ ಅಂತಹ ಕಾಯಿಲೆಯ ಉಪಚಾರಕ್ಕೆಲ್ಲ ಸಾಲುತ್ತಿಲ್ಲ, ಅದಕ್ಕಾಗಿ ಹೇಗಾದರೂ ಮಾಡಿ ಸಾಲಮಾಡಿಯಾದರೂ ಅಪ್ಪನನ್ನು ಬದುಕಿಸಬೇಕೆಂಬ ಬಯಕೆ ಮತ್ತು ಕರ್ತವ್ಯಪ್ರಜ್ಞೆ ಅವನನ್ನು ಕಾಡುತ್ತಿತ್ತು.

ಮನೆಯಲ್ಲಿ ವಿಷಯ ತಿಳಿದ ಅರ್ಧಾಂಗಿ ಕಾಳಿಯಾಗಿದ್ದಳು. ಸಂಬಳದಲ್ಲಿ ಒಂದು ಪೈಸೆ ಸಹ ಆತನ ಅಪ್ಪನ ಖರ್ಚಿಗಾಗಿ ಕೊಡಲು ಸಿದ್ಧಳಿಲ್ಲವೆಂದು ಘೋಷಿಸಿಬಿಟ್ಟಿದ್ದಳು. ಆಗತಾನೇ ಜಾಗತಿಕ ಆರ್ಥಿಕ ಮುಗ್ಗಟ್ಟು ಒಕ್ಕರಿಸಿದುದರಿಂದ ಜಾಸ್ತಿ ರಜವನ್ನು ಹಾಕಿದರೆ ಕಂಪನಿಯಲ್ಲಿ ಕೆಲಸದಿಂದ ತೆಗೆಯಬಹುದೇಂಬ ಆತಂಕ ಬೇರೆ. ಸ್ನೇಹಿತರಲ್ಲಿ ಸಾಲ ಕೇಳೋಣವೆಂದು ಒಬ್ಬಿಬ್ಬರನ್ನು ವಿಚಾರಿಸಿದಾಗ ಅವರಲ್ಲಿ ಹುಟ್ಟುವುದು ೨೫-೩೦ ಸಾವಿರ, ಲಕ್ಷಗಟ್ಟಲೇ ಹಣ ಪಾವತಿಸಬೇಕಾಗಿರುವುದೆಲ್ಲಿ ಈ ಅಲ್ಪ ಹಣವೆಲ್ಲಿ, ಅದೂ ಪಡೆದ ಸಾಲವನ್ನು ಮರಳಿಸುವ ದಾರಿಯಾವುದು? ಸಮಸ್ಯೆಗಳ ತಿಕ್ಕಾಟ ಗಂಭೀರ ಹಂತಕ್ಕೆ ತಲ್ಪಿತು. ಅಭಿಷೇಕ್ ರಾತ್ರಿ ಬಹುಹೊತ್ತಿನತನಕ ಚಿಂತಿಸುತ್ತಿದ್ದ. ಬೇಳಗಾಗಬೇಕು. ಆಗ ಅತೀವವಾಗಿ ನೊಂದ ದುರ್ಬಲ ಮನಸ್ಸಿನಲ್ಲೇ ತನ್ನ ತಂದೆ-ತಾಯಿಯ ಕ್ಷಮೆ ಬೇಡಿ ಹೊರ ಹೊರಟ ಅಭಿಷೇಕ್ ರೈಲ್ವೇ ಲೈನಿಗೆ ಧುಮುಕಿದ್ದ. ಧುಮುಕಿ ಇಹಲೋಕ ತೊರೆದಿದ್ದ. ಹಕ್ಕಿ ಸಾತಂತ್ರ್ಯ ಪಡೆದಿತ್ತು- ಹೆಂಡತಿಯಿಂದ, ಮರುಗಿತ್ತು ತಂದೆ-ತಾಯಿಯನ್ನು ಪೊರೆಯಲಾಗದ ಅಸಹಾಯಕತೆಯಿಂದ.

Monday, June 21, 2010

ಡಿಫರೆಂಟಾಗಿ ಮೀಸೆ ಪುರಾಣ !!


[ಚಿತ್ರಗಳ ಕೃಪೆ : ಅಂತರ್ಜಾಲ ]

ಡಿಫರೆಂಟಾಗಿ ಮೀಸೆ ಪುರಾಣ !!

ವಕ್ರತುಂಡ ಮಹಾಕಾಯ

ಮಂಗತಿಂತೋ ಬಾಳೇಕಾಯ ||

-ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಸೆಗಾಗಿ ಅಂತ ಉದ್ದುದ್ದ ಬೆಳೆದ ಗಡ್ಡ ನೀವುತ್ತ ಬಂದ ನಮ್ಮ ಕುಂದಾಪುರ ಆಚಾರಿ. ನೀವೇನೇ ಅಂದರೂ ನಮ್ಮ ಮೀಸೆ ಸುಬ್ರಾವ್ ಸಂಗಡ ನಾವೆಲ್ಲಾ ಸೇರಿಕೊಂಡರೆ ಆ ದಿನ್ನವೇ ಬ್ಬೇರೆ [ಇಲ್ಲಿ ಒತ್ತು ಕೊಟ್ಟು ಹೇಳಿರುವುದೇ ಅದಕ್ಕೆ!].ಮೀಸೆ ಅಂದಾಕ್ಷಣ ನೆನಪಿಗೆ ಹಲವರು ಬರುತ್ತಾರೆ, ಯಾಕೇಂತ ನಿಮಗೆ ಹೊಸದಾಗಿ ಹೇಳೊದೇನೂ ಬೇಡ! ಹುರಿಮೀಸೆ, ಕುರಿಮೀಸೆ, ಬೆಕ್ಕಿನ ಮೀಸೆ, ಜಿರಲೆ ಮೀಸೆ, ಗಿರಿಜಾ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಚಿಗುರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಹೀಗೇ ಮೀಸೆಗಳನ್ನು ಲಿಸ್ಟ್ ಹಾಕುತ್ತ ಹೋದರೆ ಮೀಸೆಯ ಬಹುದೊಡ್ಡ ಲೋಕ ತೆರೆದುಕೊಳ್ಳುತ್ತದೆ.

ಯಾಕೇಂದ್ರೆ ಬಹುತೇಕ ನಮ್ಮಲ್ಲಿನ ಗಂಡಸರ ಐನಾತಿ ಆಸ್ತಿಯೇ ಮೀಸೆ! "ಸಾ ಮೀಸೆ ಟ್ರಿಮ್ ಮಾಡ್ಲಾ?" ಅಂತ ಹಜಾಮ ಕೇಳದ್ರೆ ಹುಷಾರಪ್ಪಾ ಸ್ವಲ್ಪ ಎಡಕ್ಕೆ ಸ್ವಲ್ಪ ಬಲಕ್ಕೆ ಸ್ವಲ್ಪ ಮೇಲೆ ಸ್ವಲ್ಪ ಕೆಳಗೆ ಎಂದೆಲ್ಲ ಅವನ ಕತ್ತರಿಗೆ ನಾವು ಕನ್ನಡಿಯಲ್ಲಿ ನೋಡುತ್ತಾ ಗೈಡ್ ಮಾಡುವಷ್ಟು ಜಗದಗಲದ ಮೌಲ್ಯ ಪಡೆದಿರುವುದು ಮೀಸೆ!

ದಶಕಂಠನಳಿದ ಮರುದಿನ
ಉಳಿದ ಕಪಿಗಳು ಸೇರಿ
ಅವನ ಮತ್ತವನ ಸೋದರ ಕುಂಭಕರ್ಣನ
ಹರವಾದ ಎದೆಯ ಮೆಲೆ ಹತ್ತಿ ಮನಸೋ ಇಚ್ಛೆ ಥಕಥಕ ತೈ
ಎಂದು ತಾವ್ ಕುಣಿದೂ...........
ಮಸಣವಾಗಿರ್ಪ ವಸುಧೆಯ ಭಾಗದೋಳ್
ಅಸುರ ಭುಜಬಲರು ನಿಸ್ಸಹಾಯರಾಗಿ ಮಲಗಿರಲು
ಗಸಗಸನೆ ಅವರ ಮೀಸೆಯಂ ಹಸಿ ಹುಲ್ಲು ಕೊಯ್ದಂತೇ ಕುಯ್ದು
ಮತ್ತೆ ಪ್ರೀತಿಯಿಂದವುಗಳಂ ತಂದು ನಾಟಿ ಮಾಡಿ ನೀರೆರೆಯಲ್ಕೆ
ನಸುನಕ್ಕ ರಾಮ ಕಪಿವೃಂದವಂ ಕರೆಯುತ್ತ ಏನದೇನೆನ್ನಲಾಗ
ಪಶುಗಳೈ ನೀವು ನಿಮಗ್ಯಾಕೆ ಮಂಡೆ ಸರಿಯಿಲ್ಲ
ಅಶುತೋಷ ಕೊಟ್ಟಿರ್ಪ ವರವಿಕ್ಕು ಪೆಂಡಿಂಗಲ್ಲಿ ಅದನ್ನು
ಖುಷಿಯಾಗಿ ನಿಮಗೀವೆ ನಡೆಯಿರೆಂದೆನಲು ಹರುಷಗೋಂಡಾ ಮಂಗಗಳ್
ಹಸನು ಮಾಡೆಮ್ಮ ಬದುಕ ನಮ್ಮನು ಮನುಜರಿಂ ಬೇರ್ಪಡಿಸು
ಅತಿಶಯದಿ ಅವರ್ಗೆ ಗುರುತಿರ್ಪಂತೆ ಪುಕ್ಸಟೆ ಬೆಳೆವಂತ ಪೊದೆ ಮೀಸೆಯಂ ಅನುಗ್ರಹಿಸಿ
ಅಶನವಶನಾದಿಗಳನೆಲ್ಲ ತೆಗೆದುಕೊಂಡಂತೆ ಮೀಸೆಯ ಬೆಳೆಯಗೊಡೆಂದು ಬೇಡಿದರು
ಕುಶಲದಲಿ ಭಕ್ತವತ್ಸಲ ತಾನು ಮುನ್ನಡೆದು
ಕೃಷವಾದ ದಣಿದ ಕಪಿಗಳನೆಲ್ಲ ಸಂತೈಸಿ
ಅಶರೀರವಾಗಿ ಅಡಗಿದ್ದು ಶರೀರದಲಿ
ಸಶರೀರಿಯಾಗಿ ಮೂಗಿನ ಕೆಳಗೆ ಬೆಳೆದು ನೆಲೆನಿಂತು
ಕಸದೋಪಾದಿಯಲಿ ಗರಿಕೆ ಹುಲ್ಲಿನಂದದಲಿ
ಮಿಸುನಿಗೂ ಮಿಕ್ಕ ಬೆಲೆ ಪಡೆದು ಬದುಕೆಂದು
ಹರಸಿ ಪರಮ ಸಂತೋಷದಿಂದಾ.....ಆಆಆಅ.....ಆಆಆಆಆ.....ಆ.

ಬೋಲೋ ಮೀಸೆಮಹಾರಾಜಕೀ ಜೈ.... [ಮೀಸೆ ಮಹಾರಾಜನ ಥರವೇ ಅಲ್ಲವೇ? ]

ನಮ್ಮಲ್ಲಿ ಹಿಂದಕ್ಕೆ ಒಬ್ಬ ಬೇಳೆರಾಯ ಅಂತಿದ್ದ! ಬೇಳೆ ದರ ಜಾಸ್ತಿ ಅಂತ ಹೇಳುತ್ತಿಲ್ಲ. ನಿಜವಾಗಿಯೂ ಆ ಹೆಸರಿನ ವ್ಯಕ್ತಿಯೊಬ್ಬನಿದ್ದ. ಅವನು ಬೇಳೆ ಮಾರುತ್ತಿದ್ದುದೇನೂ ಕಂಡು ಬಂದಿಲ್ಲ, ಆದರೂ ಅವನಿಗೆ ಅದ್ಯಾಕೆ ಆ ಹೆಸರೋ ಗೊತ್ತಿಲ್ಲ! ಇರಲಿ, ನಮ್ಮ ಕಣ್ಣಿರೋದು ಸದ್ಯ ಅವನ ಮೀಸೆ ಮೇಲೆ! ಅವನಿಗೆ ಫಿಲ್ಟರ್ ಮೀಸೆ ಇತ್ತು. ನಾವೆಲ್ಲ ಆತ ನಮ್ಮನೆಗೆ ಬಂದಾಗ ಚಾ ಮಾಡಿದರೆ ಸೋಸದೇ ಹಾಗೇ ಕೊಡಿ ಬೇಳೆರಾಯರಿಗೆ ಅಂತ ತಮಾಷೆ ಮಾಡುತ್ತಿದ್ದೆವು. ಆತನ ಮೀಸೆಯ ಒರಿಜಿನಲ್ ಕಲರ್ ಬೆಳ್ಳಗಿದ್ದರೂ [ಆತ ಎಡಮುದುಕನಾಗಿದ್ದ] ಮೀಸೆ ಫಿಲ್ಟರ್ ಕೆಲಸ ಮಾಡೀ ಮಾಡೀ ಕಲರ್ ಕಲರ್ ವ್ಹಾಟ್ ಕಲರ್ ಅನ್ನೋ ರೀತಿ ಆಗುತ್ತಿತ್ತು. ಅದರಲ್ಲೂ ಆತ ಬ್ರಹ್ಮಾನಂದದಿಂದ ಎಲೆ ಅಡಿಕೆ ಹಾಕಿಕೊಂಡು ಅಗಿದಗಿದು ಆಗಾಗ ಪ್ಸೋ ಪ್ಸೋ ಪ್ಸೋ ಪ್ಸೋ ಪು ಅಂತ ಅದನ್ನು ಉಗುಳುವಾಗ ಶೇಕಡಾ ೨೦ ಮೀಸೆಯಲ್ಲಿ ಪಾಸಾಗದೇ ಮರಳುತ್ತಿತ್ತು. ಹೀಗೆ ಹೊರಳಿ ಮರಳುವ ಮಧ್ಯೆ ಮೀಸೆಗೆಲ್ಲ ಕೆಂಪು ಬಣ್ಣವನ್ನು ಕೊಟ್ಟು ಮೇಲರ್ಧಬಿಳಿ-ಕೆಳಾರ್ಧ ಕೆಂಪು ಆಗಿರುವ ಮೀಸೆಯನ್ನು ನೋಡಿದರೆ ಸ್ಕೂಲ್ ಹುಡುಗರ ಯುನಿಫಾರ್ಮ್ ನೆನೆಪಾಗುತ್ತಿತ್ತು! ಅಂತಹ ಅದ್ಬುತ ಮೀಸೆಯನ್ನು ಹದವಾಗಿ ಸ್ನಾನ ಮಾಡಿಸಿ,ಕೊಬ್ಬರಿ ಎಣ್ಣೆ ಉಜ್ಜಿ ನಯವಾಗಿ ಹೊಳೆವಂತೆ ಮಾಡಿ, ಅದರ ಹಿಂಡಲ್ಲೇ ಬಾಯಗಲಿಸಿ ನಗುವ ನಗುವಿನ ಸೌಂದರ್ಯವೇ ಬ್ಬೇರೆ!

"ಏನ್ ರಾಯ್ರೇ ಬರಲೇ ಇಲ್ಲ ಬಹಳ ದಿವ್ಸ ಆಯ್ತು" ಅಂದ್ರೆ

"ಆರಾಮಿರ್ಲಿಲ್ಲ, ಘಟ ಇದ್ರೆ ಮಠ ನೋಡ್ಕಂಡ ಬಿಡು,ಶರೀರ ಮುಖ್ಯ ಅಲ್ಲವೇ " ಎಂದುಕೊಂಡು
ನಕ್ಕು ಬಿಟ್ಟರೆ ರಾಯರ ಫಿಲ್ಟರ್ ಮೀಸೆಗೆ ಬೀಳದ ಜನವೇ ಇಲ್ಲ! ಇರ್ಲಿ ಪಾಪ ಮುದುಕ ಈಗಿಲ್ಲ, ಬನ್ನಿ ಹೀಗೆ ಮತ್ಯಾವ್ದೋ ಕೇಸ್ ನೋಡೊಣ-

ಮೀಸೆ ಅಂದುಬಿಟ್ಟರಾಯಿತೇ, ನೀವೇ ಹೇಳಿ ನೋಡುವಾ, ನಮ್ಮ ಬಂಗಾರು ಆಡಳಿತದಲ್ಲಿದ್ದಾಗ ಬಹಳಮಂದಿ ಅವರ ಭಕ್ತರೆಲ್ಲ ಅದೇ ಥರ ಮೀಸೆ ಬೆಳೆಸಿದ್ದರು. ಇನ್ನೂ ಕೆಲವರು ಅವರ ಥರ ಮಾಡಲು ಹೋಗಿ ಅದು ಆಕಡೆಗೂ ಈಕಡೆಗೂ ಇಲ್ಲದೇ ಏನೋ ವಿಚಿತ್ರ ಶೇಪ್ ಪಡೆದಾಗ ಸದ್ಯ ಬೇಡ ಬಿಡು ಎಂದು ಸಂಪೂರ್ಣ ಬೋಳಿಸಿಕೊಂಡಿದ್ದರು!

ಅಣ್ಣಾವ್ರ ಸಿನಿಮಾ ಪಾತ್ರಗಳಲ್ಲಿರುವ ಕೆಲವು ಮೀಸೆಯ ಇಷ್ಟೈಲ್ ನೋಡಿ ತಾವೂ ಅದೇ ರೀತಿ ಬಿಟ್ಟುಕೊಂಡವರು ಕೆಲವರಾದರೆ, ಅಂಬರೀಸು ಜೈಜಗದೀಸು ರಜನೀಕಾಂತು ಇವ್ರದ್ದೆಲ್ಲ ಒಂದೊಂದ್ಕಿತಾ ಒಂದೊಂದು ಪಾರ್ಟ್ ಬಂದಾಗ ಅರ್ಜಿನಮೂನೆ ಅಂದಾಂಗೆ ಅದೇ ನಮೂನೆ ಮೀಸೆ ಹೊತ್ತ ಮಹನೀಯರು ಹಲವರು.

ಅದೇ ಕಾಲಕ್ಕೆ ’ಮೀಸೆ ಹೊತ್ತ ಗಂಡಸಿಗೇ ಡಿಮಾಂಡಪ್ಪೋ ಡಿಮಾಂಡು....’ ಹಾಡು ಬರುತ್ತಿತ್ತು. "ಏನೂ ಇರ್ಲಿ ಒಂದ್ ಇಷ್ಯ ಗ್ಯಾರಂಟಿ ಮೀಸೆ ಇಲ್ದೇ ಇದ್ರೆ ಅಂವ ಗಂಡಸೇ ಅಲ್ಲ" ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದ ಕುಂದಾಪುರ.

ಇನ್ನು ನಾವು ಮದುವೆಗೆ ಹೋದಾಗ ಬಹಳ ಸಮಯ ಸಿಗುತ್ತಿತ್ತು. ಊಟಕ್ಕೆ ತಯಾರಾಗುವವರೆಗೆ ಯಾಉ ಯಾವ ರೀತಿ ಮೀಸೆ ಬಿಟ್ಟಿದ್ದಾರೆ, ಯಾರಿಗೆ ಅದು ಯಾವರೀತಿ ಕಾಣುತ್ತದೆ ಎಂಬೆಲ್ಲ ವಿಷಯದ ಮೇಲೆ ಮನದಲ್ಲೇ ಪ್ರಬಂಧ ಬರೆಯಲ್ಪಡುತ್ತಿತ್ತು. ಒಮ್ಮೆ ಒಬ್ಬ ಸುಮಾರು ೨೪-೨೫ ವರ್ಷದ ಹುಡುಗ ಅಂತ್ರಟಿಕೆ ಮೀಸೆ ಬಿಟ್ಟಿದ್ದನ್ನು ಕಂಡಿದ್ದು ಇನ್ನೂ ನೆನೆಪಿದೆ! ಅಂತ್ರಟಿಕೆ ಅಂದ್ರೆ ಅರ್ಥ ಆಯ್ತೇ? ಅದು ಮೂಗಿಗೂ ಮೇಲ್ದುಟಿಗೂ ಇರುವ ಜಾಗವನ್ನು ಭೂಮಧ್ಯರೇಖೆ ಹಾದುಹೋದ ಹಾಗೇ ಮಧ್ಯದಲ್ಲಿ ಒಂದು ನಾಮ ಎಳೆದ ರೀತಿ ಇತ್ತು.[ಅಂತ್ರಟಿಕೆ ಅಂದರೆ ಮೇಲೂ ಅಲ್ಲ ಕೆಳಗೂ ಅಲ್ಲ ಅಂತ] ಆತನನ್ನು ನೋಡಿದರೇ ನಗುಬರಿಸುತ್ತಿತ್ತು! ಬಹಳ ಜನ ಆತನನ್ನು ನೋಡಿ ನಗುತ್ತಿದ್ದರೂ ಆತನೂ ನಗುತ್ತಿದ್ದ, ಆದರೆ ವಿಷಯ ಆತನ ಮೀಸೆಯೇ ಆಗಿತ್ತು!ಅದು ಅವನಿಗೆ ತಿಳಿದಿರಲಿಲ್ಲ. ಬಿಟ್ಟಾಕಿ ಮಾಣಿ ಪೋರ ಪಾಪ ಹೋಗ್ಲಿ.

ಸಾಹಿತಿಗಳೂ ಮೀಸೆಯಲ್ಲೇನೂ ಕಮ್ಮಿ ಇಲ್ಲ. ಹಿರಿಯ ಕವಿಗಳಲ್ಲಿ ಪೊದೆ ಮೀಸೆಯ ಕವಿಗಳನ್ನೂ, ಕಡ್ಡಿ ಮೀಸೆಯ ಕವಿಗಳನ್ನೂ ಕಾಣಬಹುದಾಗಿದೆ. ಪೊದೆ ಮೀಸೆ ಎಂದರೆ ಅದು ಹದವಗಿ ಪಾರ್ಕಿನಲಿ ಬೆಳೆಸಿದ ಕ್ರೋಟನ್ ಸಸ್ಯದ ಥರ ಇರುತ್ತದೆ,ಆಕಾರದಲ್ಲಿ ಗಿಡಗಳ ಪೊದೆಯನ್ನೇ ಹೋಲುವುದರಿಂದ ಅನ್ವರ್ಥನಾಮವನ್ನು ಕೊಡಲಾಗಿದೆ! ಕಡ್ಡಿ ಮೀಸೆ ಎಂದರೆ ತುಟಿಯ ಮೇಲ್ಭಾಗದಲ್ಲಿ ಇನ್ನೇನು ಒಂದು ಎಮ್ ಎಮ್ ಕೆಳಗೆ ಬಂದರೆ ತುಟಿಯೇ ಎಂಬಲ್ಲಿ ಸ್ಥಾನ ಪಡೆದಿರುವ ವಕ್ರ ರೆಖಾಕಾರದ ಮೀಸೆ. ಅವರಿಗೆ ಮೀಸೆ ಬೇಕು ಆದರೆ ಜಾಸ್ತಿ ಬೇಡ. ಹದವಾಗಿ ರಂಗೋಲಿ ಎಳೆ ಬಿಟ್ಟ ಹಾಗೇ ಒಂದೇ ಕಡ್ಡಿಯನ್ನು ತಲೆಕೆಳಗಾದ ಆಂಗ್ಲ ಸಿ ಅಕ್ಷರದಂತೆ ಇಟ್ಟುಕೊಳ್ಳುವುದು. ಇದನ್ನು ಬಹಳಕಡೆ ನೋಡಿದ್ದಿದೆ.

ಗಿರಿಜಾಮೀಸೆಯನ್ನು ಬಿಡುವವರು ವೀರಪ್ಪನ್ ಅಥವಾ ಅದೇ ರೀತಿಯ ಮೀಸೆಯನ್ನೇ ಬಲವಾಗಿ ನೀವಿಕೊಳ್ಳುತ್ತ ಅದರ ಆಕಾರದಲ್ಲೇ ಹೆದರಿಸುವವರು. ನೋಡಿ ವೀರಪ್ಪನ್ ನನ್ನು[ಫೋಟೊ ನೋಡಿ ಆತ್ ಈಗಿಲ್ಲ!] ನೋಡಲು ಗಾಳಿಗೆ ಹಾರಿ ಹೋಗುವಂತಿದ್ದರೂ ತುಂಬಾಲೆಯ ಶರೀರವಾದರೂ ಕೆ.ಜಿಯಷ್ಟು ಮೀಸೆ ಹೊತ್ತಿದ್ದ! ಜನ ಆ ಮೀಸೆಯನ್ನು ನೋಡಿಯೇ ಗಡ ಗಡ ಗಡ ಗಡ ...ಎನ್ನುತ್ತಿದ್ದರು. ನಮ್ಮ ಪೋಲೀ ಸಣ್ಣಗಳೆಲ್ಲ ಚಡ್ಡಿಯಲ್ಲಿ ಚೇಳು ಕುಟುಕಿದ ಹಾಗೇ ಯಮಯತಾನೆ ಪಡುತ್ತಿದ್ದರು. ಇತ್ತ ಕರ್ತವ್ಯ ಅತ್ತ ಜೀವಭಯ ! ಉಸ್ಸಪ್ಪಾ ವೀರಪ್ಪಾ ಸದ್ಯ ಸತ್ಯಲ್ಲ!

ಕೆಲವರಿಗೆ ಬೆಕ್ಕಿನ ಪ್ರವೃತ್ತಿ, ಉಣ್ಣುವುದು-ತಿನ್ನುವುದು ಎಲ್ಲಾ ಬೆಕ್ಕಿನ ಥರವೇ! ಅವರ ಮೀಸೆ ಕೂಡ ಹಾಗೇ. ಯಾಕೆಂದರೆ ಪಾಪ ಅವರಿಗೆ ಜಾಸ್ತಿ ಮೀಸೆ ಬೆಳೆಯೋದಿಲ್ಲ, ಆದಕಾರಣ ಅವರು ಮೀಸೆಯ ಜಾಗದಲ್ಲಿ ಅಡ್ಡಡ್ಡ ತಿರುವಿದ ಉದ್ದನೆಯ ಕೆಲವು ಕೂದಲನ್ನು ಬಿಟ್ಟಿರುತ್ತಾರೆ. ಇಂಥವರಿಗೆ ತಲೆಯೂ ಕೂಡ ನವಿಲು ಕೋಸಿನಥರ ಅದರ ಮೇಲೆ ನಾಲ್ಕೇ ನಾಲ್ಕು ಕೂದಲು.

ಜಿರಲೆ ಮೀಸೆ ಇನ್ನೂ ವಿಚಿತ್ರ, ಅಲ್ಲಿ ಮೀಸೆ ಒಮ್ಮೆ ಅಡಗುತ್ತದೆ ಇನ್ನೊಮ್ಮೆ ಹೌದೋ ಅಲ್ಲವೋ ಎಂಬಂತೆ ಕಾಣಿಸುತ್ತದೆ, ಇದು ಜಿರಲೇ ಮೀಸೆ. ಜಿರಲೆ ತಿಂದ ಮೀಸೆ ಬೇರೆ- ಮೀಸೆಯ ಮಧ್ಯೆ ಮಧ್ಯೆ ಗ್ಯಾಪ್ ಬಿಟ್ಟಿದ್ದರೆ ಅದು ಜಿರಲೆ ತಿಂದ ಮೀಸೆ!

ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಸಿಗುವ ನಾ ಮೇಲೋ ತಾ ಮೇಲೋ ಎಂದು ತಿರು ತಿರುವಿ ಬಿಡುವ ತುದಿ ಮೇಲಾದ ಮೀಸೆ ಹುರಿ ಮೀಸೆ!ಉದ್ದ ಹುರಿಯಂತೆ ತಿರುತಿರುವಿ ಬಿಡುವ ಈ ಮೀಸೆಯಲ್ಲಿ ಎನೋ ಸಾಧಿಸಿದ ಹಂಬಲವಿರುತ್ತದೆ-ಸಾಧನೆ ಶೂನ್ಯವಾದರೂ ಮೀಸೆಗೇನ್ರಿ ಬಂತು ಬರಗಾಲ, ಅದೇ ಬರಗಾಲ ಬಂದ್ರೂ ಮೀಸೆಗೆ ಬರಗಾಲವಿಲ್ಲ ಅಲ್ಲಿ!

ಕೆಲವರದು ಮೊಟ್ಟೆ ಮೀಸೆ-ಥೇಟ್ ಕೋಳಿ ಮೊಟ್ಟೆಯ ಹಾಗೇ ಸಕತ್ ಮಿಲಿಟ್ರಿ ಕಟ್ ಮಾಡಿಸಿ ಕಾಪಿಡುವ ಮೀಸೆ ಮೊಟ್ಟೆ ಮೀಸೆ, ಈ ಮೀಸೆ ಪೊದೆ ಮೀಸೆಯ ಒಡಹುಟ್ಟಿದ ಮೀಸೆ ಎನ್ನಬಹುದು!

ಹಳ್ಳಿಯಲ್ಲಿ ಗುಂಯ್ಗುಡುವ ದೊಡ್ಡ ನೊಣವನ್ನು ನೋಡಿರುತ್ತೀರಿ, ಇಂಥ ನೊಣ ತಲೆಕೆಳಗಾಗಿ ಅಥವಾ ತಲೆ ಮೇಲಾಗಿ ಮೂಗಿನ ಕೆಳಗೆ ಏನೋ ತಿನ್ನುತ್ತ ಕೂತ ಸ್ಟೈಲಿನ ಮೀಸೆಯೊಂದಿದೆ. ಅದನ್ನು ಫ್ರೆಂಚ್ ಮೀಸೆ ಎನ್ನುತ್ತಾರಂತೆ! ನೊಣದಷ್ಟೇ ಜಾಗದಲ್ಲಿ ಬೆಳೆಸಿ ಬಾಕಿ ಎಲ್ಲಾ ಜಾಗವನ್ನೂ ನುಣ್ಣಗೆ ಬೋಳಿಸಿ ಬೆಳೆಸುವ ಕಲಾವಿದರಿಗೆ ರಾಜ್ಯಪ್ರಶಸ್ತಿ ಕೊಟ್ಟರೂ ಕಮ್ಮಿಯೇ!

ಕುಡಿಮೀಸೆ ಗಂಡು ಬಲು ಅಂದ....ಹಾಡನ್ನು ಸ್ವಲ್ಪ ಹಳಬರು ಕೇಳಿದ್ದಾರೆ, ಈಗೆಲ್ಲ ಅವು ಬಾಕ್ಸ್ ಗಳಲ್ಲೂ ಇರುವುದು ಡೌಟು! ಈಗೇನಿದ್ದರೂ ಈ ಟಚ್ಚಲಿ ಏನೋ ಇದೆ ಅಲ್ಲವೇ? ಕಾಲಾಯ ತಸ್ಮೈ ನಮಃ || ಕುಡಿ ಮೀಸೆ ಎಂದರೆ ಆಗತಾನೇ ಕುಡಿಯೊಡೆಯತೊಡಗಿದ್ದು. ಅದು ಎಷ್ಟರ ಮಟ್ಟಿಗೆ ಅಂದವೋ ಹುಡುಗಿಯರನ್ನೇ ಕೇಳಬೇಕು.

ಮರೆತೇ ಬಿಟ್ಟಿದ್ದೆ--ಈಗೀಗ ಕುದುರೆ ಲಾಳಾಕೃತಿಯ ಮೀಸೆ ಬೆಳೆಸಿ ಅದನ್ನು ಗಡ್ಡಕ್ಕೂ ಸೇರಿಸಿ ಮಧ್ಯದಲ್ಲಿ ಸಣ್ಣ ಬಕ್ರೀ ಕಾ ದಾಡಿ ಎಂಬ ಕುರಿ ಗಡ್ಡವನ್ನು ಕೆಳತುಟಿಯ ಇಮ್ಮೀಡಿಯೇಟ್ ಕೆಳಗೆ ಬಿಟ್ಟು ಜುಗಲ್ ಬಂದಿ ಮಾಡುವ ಕಾರ್ಪೋರೇಟ್ ಕಲಾವಿದರಿದ್ದಾರೆ ! ನಿಜವಾಗಿಯೂ ಜಗದಲ್ಲಿ ಕುಶಲಕರ್ಮಿಗಳಿಗೆ ಅವಾರ್ಡ್ ಇದ್ದರೆ ಅದನ್ನು ಇವರಿಗೇ ಮೀಸಲಿಡಬೇಕು!

ಎಲ್ಲದರಲ್ಲೂ ಪ್ರಾಧಾನ್ಯತೆ, ಮೀಸಲಾತಿ, ಒಳಮೀಸಲಾತಿ ಎನ್ನುವ ಹೆಂಗಸರೂ ಕಮ್ಮಿ ಎಂದು ತಿಳಿದರೆ ನಮಗಿಂತಾ ಪೆದ್ದರು ಬೇರೆ ಇಲ್ಲ! ಹೆಂಗಸರಿಗೂ ಮೀಸೆ ಇದೆ ಕಣ್ರೀ! ಆದರೆ ಪಾಪ ಈ ವಿಷಯದಲ್ಲಿ ಮಾತ್ರ ಅವರು ಮೀಸೆಲಾತಿ ಕೇಳೋದಿಲ್ಲ. ಇದ್ರಲ್ಲಾದ್ರೂ ಆ ಗಂಡಸ್ರು ಏನಾದ್ರೂ ಮಾಡ್ಕೊಂಡು ಹಾಳಾಗ್ ಹೋಗ್ಲಿ ಅಂತ ಬಿಟ್ಟುಬಿಟ್ಟಿದ್ದಾರೆ. ಅಪರೂಪಕ್ಕೆ ಬಂದರೆ ಅದನ್ನು ನಿವಾಳಿಸಿ ಕಿತ್ತೆಸೆಯಲು ವ್ಯಾಕ್ಸಿಂಗ್ ಮೊರೆ ಹೊಕ್ಕಿದ್ದಾರೆ! ಕಾಣುತ್ತಿಲ್ಲವೇ ನಿಮಗೆ ವೀಟ್ ಎಂಬ ಕ್ರೀಮಿನ ಜಾಹೀರಾತಿನಲ್ಲಿ ಕತ್ರೀನಾ ಕಬಡ್ಡಿ!

ಇದ್ದುದನು ಹೋಗಾಡೆ ಎದ್ದು ಮತ್ತೆ ತಾ ಬಕ್ಕು
ಮುದ್ದು ಮುಖದಲಿ ಕೆಲವರ್ಗೆ ಸೊಕ್ಕು ಮಿಕ್ಕೆಲವರ್ಗೆ
ಬಿದ್ದು ನಗಿಸುವ ಅಸಹ್ಯಕರ ತಾನಕ್ಕು
ಮುದ್ದೆ ತಿಂದರೂ ನಿದ್ದೆ ಮರೆತರೂ ಕದ್ದಾದರೊಮ್ಮೆ
ಮೀಸೆಯ ಮುಟ್ಟಿ ನೋಡಿಕೋ ಎಂದ | ಮರ್ಮಜ್ಞ

ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಯೆ ಮೇಲು
ನೀಟಾಗಿ ಮೀಸೆಬಿಟ್ಟವ ಮೇಲು ಮೀಸೆಯಂ
ಘಾಸಿಗೊಳಿಸಿದರೆ ಮುಖದ ಅಂದವೇ ಕೆಡುಗು| ಮರ್ಮಜ್ಞ


ನೆರೆಬಂದ ಕಾಲಕ್ಕೆ ಕರೆದು ದಾನವ ಮಾಡು
ಹುರಿಮೀಸೆ ತಿರುವಿ ಮನಸಾರೆ ಆ ’ಕೈ’ಗೆ
ಬರಬರನೆ ಸುರಿಯೆ ಸಂಪದವಕ್ಕು ಬೇಕಾದರ್ಗೆ
ಹರಿಯ ರೂಪದ ನರಿಯು ನೋಡ | ಮರ್ಮಜ್ಞ

ಮೀಸಾ ಯಾಕ್ಟು ಹಾಕಿದ್ದ ನಮ್ಮ ಇಂದ್ರಮ್ಮ ನಮಗೆಲ್ಲ ಮೀಸೆಯನ್ನು ನೆನಪಿಟ್ಟುಕೊಳ್ಳಲು ಆ ಕಾಯ್ದೆಗೇ ಹಾಂಗೆಸ್ರು ಇಟ್ಟುಬುಟ್ಟವ್ರೇ ಕಣ್ಲಾ ಅಂದ ಮೀಸೆ ಎಳ್ಕೋತ ಕಣ್ತಿರುವಿ ಲೂಸ್ ಮಾದ!

|| ಇತಿ ಶ್ರೀ ಮೀಸೆ ಪುರಾಣಕ್ಕೆ ಸದ್ಯಕ್ಕೆ ಪೂರ್ಣವಿರಾಮಂ ||

[ಮೀಸೆ ಪುರಾಣದ ಮುಂದಿನ ಭಾಗಕ್ಕಾಗಿ ಕಾದಿರಿ , ಮುಂದಿನವಾರದಲ್ಲಿ !]

Sunday, June 20, 2010

ಅಪ್ಪನ ಪ್ರೀತಿ


ಜಗತ್ತಿನಲ್ಲಿ ಅಪ್ಪ-ಅಮ್ಮ ಜೀವಂತ ದೈವಗಳು ಎಂಬುದನು ತಿಳಿದೇ ಇದ್ದೇವೆ. [ನಮ್ಮಲ್ಲಿ ನಾವು ಅಪ್ಪನನ್ನು ಪ್ರೀತಿಯಿಂದ ಅತೀ ಹತ್ತಿರದ ಭಾವನೆಯ ಅನುಭೂತಿಗಾಗಿ ಏಕವಚನದಿಂದಲೇ ಕರೆಯುತ್ತೇವೆ!] ಅಮ್ಮ ಎಷ್ಟು ಮುಖ್ಯವೋ ಅಪ್ಪನೂ ಅಷ್ಟೆ ಪ್ರಾಮುಖ್ಯ. ಅಮ್ಮ-ಅಪ್ಪ ಈರ್ವರು ಒಂದೇ ನಾಣ್ಯದ ಎರಡು ಮುಖಗಳು. ಅಮ್ಮನನ್ನು ನೆನೆದು ಅಪ್ಪನನ್ನು ಮರೆತರೆ ಅದು ಅರ್ಧವಾದಕೆಲಸ. ಮಗುವಿಗೆ ಅಪ್ಪನಿಲ್ಲದೇ ಅಮ್ಮನಿಲ್ಲ ಅಲ್ಲವೇ? ಇಂದಿನ ನಿಫ್ಟ್ ಎಂಬ ತಂತ್ರಜ್ಞಾನ ಕಾಲ ಬಂದು ತಂದೆಯಿಲ್ಲದೇ ಮಗುಹುಟ್ಟುವ ಕಾಲ ಬೆಳೆದರೂ ಅದು ನಿಸರ್ಗ ಇಷ್ಟಪಡುವ ಕೆಲಸವಲ್ಲ, ಅದು ಪೂರಕವೂ ಅಲ್ಲ. ಅಲ್ಲೂ ಪರೋಕ್ಷವಾಗಿವೀರ್ಯದಾನಮಾಡಿದ ತಂದೆಯೊಬ್ಬ ಇದ್ದೇ ಇರುತ್ತಾನೆ. ಮಗುವಿನ ಬೆಳವಣಿಗೆಯಲ್ಲಿ ಅಪ್ಪ ಎಂದರೆ ಅದು ಧೈರ್ಯದ ಇನ್ನೊಂದುರೂಪ! ಏನೇ ಸಮಸ್ಯೆ ಇರಲಿ ಅಪ್ಪ ಬಗೆಹರಿಸಿಬಿಡುತ್ತಾನೆ ಎಂಬ ಅಚಲ ನಂಬಿಕೆ ಅಪ್ಪನಮೇಲೆ. ಮೆತ್ತಗಿರುವ-ಜಾರುವ ಹಸಿನೆಲದಮೇಲೆ ನಿಧಾನವಾಗಿ ಅನುಮಾನಿಸಿ ಕಾಲಿಡುವಾಗ, ಶಾಲೆಯಲ್ಲಿ ಬೇರೆ ಸಹಪಾಠಿಗಳು ತೊಂದರೆ ಕೊಟ್ಟರೆ ಅವರನ್ನೆಲ್ಲನಿಭಾಯಿಸುವಾಗ, ಶಾಲೆಯ ಪರೀಕ್ಷೆಗಳನ್ನು ಬರೆಯುವಾಗ, ಸೈಕಲ್ ಕಲಿಯುವಾಗ ಇನ್ನೂ ಹಲವು ಪ್ರಾಥಮಿಕ ಸನ್ನಿವೇಶಗಳಲ್ಲಿಅಪ್ಪನಿರದಿದ್ದರೆ ಅದು ಸಪ್ಪೆ, ಗೌಣ.

ಅಪ್ಪ ನನಗೇನು ಕೊಟ್ಟ ಎನ್ನುವ ಹಲವರ ಅನಿಸಿಕೆ ತರವಲ್ಲ. ಅಪ್ಪ ನಮಗೆ ಜನ್ಮ ಕೊಟ್ಟ! ಸಾಕಷ್ಟು ಕಾಲ ಅನ್ನ ಕೊಟ್ಟ. ತಕ್ಕಮಟ್ಟಿಗೆವಿದ್ಯೆ ಕೊಟ್ಟ. ಬದುಕುವ ಕಲೆ ಹೇಳಿಕೊಟ್ಟ. ತನ್ನಿಂದಾದ ರೀತಿಯಲ್ಲಿ ಜ್ಞಾನ ಕೊಟ್ಟ, ಸಂಸ್ಕಾರ ಕೊಟ್ಟ. ಅಪ್ಪ ಇನ್ನೇನೂಕೊಡಬೇಕಾಗಿಲ್ಲ! ಅಲ್ಲಿಗೆ ಅಪ್ಪನ ಕರ್ತವ್ಯ ಒಂದರ್ಥದಲ್ಲಿ ಮುಗಿಯಿತು. ಅಣ್ಣತಮ್ಮಂದಿರಿದ್ದರೆ ಅಪ್ಪ ಆಸ್ತಿ ಪಾಲುಮಾಡುವಾಗಪಕ್ಷಪಾತ ಮಾಡಿದ ಎಂದು ಗುದ್ದಾಡುವವರಿದ್ದಾರೆ. ಅಪ್ಪನಿಗೇ ಪಾಲು ಕೊಟ್ಟು ಹೊರದಬ್ಬುವವರೂ ಇದ್ದಾರೆ! ಪೇಟೆ-ಪಟ್ಟಣಗಳಲ್ಲಿಅಪ್ಪ-ಅಮ್ಮರನ್ನು ವೃದ್ಧಾಶ್ರಮದಲ್ಲಿ ಬಿಟ್ಟುಬರುವವರಿದ್ದಾರೆ. ಇಂತಹ ಎಲ್ಲರಲ್ಲಿ ನನ್ನ ಪ್ರಾರ್ಥನೆ ಇಷ್ಟೇ- ನಮಗೆ ನಮ್ಮ ಅಪ್ಪ ಹೇಗೋಹಾಗೇ ಮುಂದೆ ನಾವೂ ಅಪ್ಪನ ಸ್ಥಾನವನ್ನು ಪಡೆದಿದ್ದೇವೆ ಯಾ ಪಡೆದಿರುತ್ತೇವೆ ಅಲ್ಲವೇ? ಒಂದೊಮ್ಮೆ ನಮ್ಮ ಅಪ್ಪನನ್ನು ನಾವುದೂರಮಾಡಿದರೆ ಮುಂದೆ ನಮ್ಮನ್ನೂ ನಮ್ಮ ಮಗು/ಮಕ್ಕಳು ದೂರಮಾಡಿಯೇ ಮಾಡುವುದು ಪ್ರಕೃತಿ ಸಹಜ ಧರ್ಮ!

ನಾವು ಹುಟ್ಟುವ ಪೂರ್ವ, ಅಮ್ಮನ ಹೊಟ್ಟೆಯಲ್ಲಿರುವಾಗ, ಅಮ್ಮನಿಗೆ ಬೇಕಾದ ಎಲ್ಲಾರೀತಿಯ ವೈದ್ಯಕೀಯ-ಆಹಾರಸೌಲಭ್ಯಗಳನ್ನು ಪೂರೈಸಿದ್ದು ಅಪ್ಪ, ನಮ್ಮ ಎಳವೆಯಲ್ಲಿ ನಾವು ರಾತ್ರಿಯೆಲ್ಲ ಅಳುವಾಗ ಹಗಲಿಡೀ ಕೆಲಸಮಾಡಿ ದಣಿದ ಅಪ್ಪಅಮ್ಮನಜೊತೆಗೂಡಿ ನಮ್ಮನ್ನು ರಮಿಸಿದ್ದಿಲ್ಲವೇ? ರಾತ್ರಿಗಳಲ್ಲಿ ತನ್ನ ಹೆಗಲಮೇಲೆ ಹೊತ್ತು ಓಡಾಡಿ ನಮ್ಮ ಅಳುವಿಗೆ ಕಾರಣಹುಡುಕುತ್ತ ಅಪ್ಪ ತನ್ನ ಮಂಜಾದ ಕಣ್ಣನ್ನು ಒರೆಸಿಕೊಳ್ಳಲಿಲ್ಲವೇ? ವಾಂತಿ-ಭೇದಿ-ಜ್ವರ-ಶೀತ ಬಾಧಿಸಿ ನಾವು ಸೋತುಸಣಕಲಾದಾಗ ಮನಸಾ ಅಮ್ಮನಂತೆ ಮರುಗಿದ್ದು ಅಪ್ಪನಲ್ಲವೇ? ಪರೀಕ್ಷೆಗಳಲ್ಲಿ ನಾವು ಕಡಿಮೆ ಅಂಕಗಳನ್ನುಪಡೆದಾಗ/ಅನುತ್ತೀರ್ಣರಾದಾಗ ನಮ್ಮ ಅಳುವಿನಲ್ಲಿ "ಹೆದರಬೇಡ, ಜಗತ್ತು ವಿಶಾಲವಾಗಿದೆ, ಹುಟ್ಟಿಸಿದ ದೇವರುಹುಲ್ಲುಮೇಯಿಸುವುದಿಲ್ಲ, ನೀನು ಒಂದಲ್ಲ ಒಂದುದಿನ ಗೆದ್ದೇ ಗೆಲ್ಲುತ್ತೀಯ" ಎಂದು ಆತ್ಮವಿಶ್ವಾಸ ಉಳಿಸಿ-ಬೆಳೆಸಿದ್ದು ಅಪ್ಪನಲ್ಲವೇ? ಸ್ಥಿತಿವಂತರ ಮಕ್ಕಳು ಹಲವು ಸೌಕರ್ಯ ಪಡೆದು ಓದುವಾಗ ತನ್ನಮಕ್ಕಳಿಗೆ ತನ್ನಿಂದ ಅಷ್ಟು ಕೊಡಲಾಗಲಿಲ್ಲವಲ್ಲ ಎಂದುನೊಂದುಕೊಂಡ ಮಹಾನುಭಾವ ಅಪ್ಪನಲ್ಲವೇ? ತನ್ನ ಅರ್ಥಿಕ ಸಂಕಷ್ಟಗಳೇನೇ ಇದ್ದರೂ ನಮಗೆಲ್ಲ ಏನೂ ತೊಂದರೆಯಾಗದಂತೆ, ನಮಗದರ ಬಿಸಿ ತಟ್ಟದಂತೆ ಸಾಕಿ-ಸಲಹಿದ ವಾತ್ಸಲ್ಯಮಯಿ ಅಪ್ಪನಲ್ಲವೇ? ತನ್ನ ಹಲವು ನೋವನ್ನು ಮರೆತು ನಮ್ಮ ಏಳಿಗೆಯನ್ನುಸದಾ ಬಯಸಿ ಹಲವು-ಹತ್ತು ಶಾಲೆ-ಕಾಲೇಜುಗಳಿಗೆ ಅಲೆದಾಡಿ ನಮಗಾಗಿ,ನಮ್ಮ ವಿದ್ಯಾರ್ಜನೆಗಾಗಿ ಹುಡಿಕಿ ಒದಗಿಸಿದ್ದುಕರುಣಾಮಯಿ ಅಪ್ಪನಲ್ಲವೇ ? ಎಲ್ಲಿಲ್ಲ ಅಪ್ಪ? ಅಪ್ಪನನ್ನು ನೆನೆಯದವ ಬೆಪ್ಪ!

ಅಪ್ಪನನ್ನು ನೆನೆಯಲು ಒಂದೇ ಒಂದು ದಿನ ಸಾಕೇ ? ಇಲ್ಲವಲ್ಲ? ವಿದೇಶಗಳಲ್ಲಿ ಅಲ್ಲಿನ ಸಂಸ್ಕೃತಿಗಳಲ್ಲಿ ಅಪ್ಪ-ಅಮ್ಮ ಬೇರಾಗಿರುವನರಕ ಸದೃಶ ಸನ್ನಿವೇಶಗಳಲ್ಲಿ, ಮಕ್ಕಳಿಗೆ ಅಪ್ಪ ಯಾರೆಂದೇ ಅರಿವಿರದ ಜೀವನಕ್ರಮದಲ್ಲಿ, "ಹಾಯ್ ದಿಸ್ ಈಸ್ ಯುವರ್ ಡ್ಯಾಡ್ " ಎಂದು ತೋರಿಸುವ ದಿನ ಅಪ್ಪನದಿನ ಅರ್ಥಾತ್ ಫಾದರ್ಸ್ ಡೇ. ನಮ್ಮಲ್ಲಿ ಹುಟ್ಟಿದಾರಭ್ಯ ಅಂತ್ಯದವರೆಗೆ ಬುದ್ಧಿತಿಳಿದಾಗಿಂದಯಾವ ಕೆಲಸ್ವನ್ನು ಮಾಡಬೇಕಾದರೂ ತಂದೆ-ತಾಯಿಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವುದು ನಮ್ಮ ಸಂಸ್ಕೃತಿಅಲ್ಲವೇ? ಈಗಿನ ಬೆಳವಣಿಗೆಗಳಲ್ಲಿ ಅಪ್ಪನಿಗೇ ಪಿಸ್ತೂಲು ತೋರಿಸುವ, ಅಪ್ಪನನ್ನೇ ಮುಗಿಸುವ ಹಲವು ರಾಕ್ಷಸರಿರಬಹುದು ಆದರೆಅದು ನಮ್ಮ ಮೂಲ ಸಂಸ್ಕಾರವಲ್ಲವಷ್ಟೇ? ಆಂಗ್ಲಭಾಷೆಯ ವ್ಯಾಮೋಹದಿಂದ ಅಪ್ಪನನ್ನು ಡ್ಯಾಡ್, ಡ್ಯಾಡೀ ಎಂದೆಲ್ಲ ಅಪಸ್ವರದಿಂದಕರೆಯುವುದು ಎಷ್ಟು ಅಸಹನೀಯ ಅಲ್ಲವೇ ? ನಮ್ಮಲ್ಲಿಯ ಭಾಷೆಗಳಲ್ಲಿರುವಂತೆ ಅಪ್ಪಾ, ಬಪ್ಪಾ, ಪಾಪಾ ಅಂತೆಲ್ಲ ಅಲ್ಲಲ್ಲಿಗೆತಕ್ಕಂತೆ ಕರೆದರಾಗುವುದಿಲ್ಲವೇ ? ಅದಕ್ಕೇ ನನಗನ್ನಿಸಿದ್ದು ನಮ್ಮ ಆರ್ಷೇಯ ಸಂಸ್ಕೃತಿಯಲ್ಲಿ ಮಾತಾ-ಪಿತರನ್ನುಪೂಜಿಸುವ,ನಮಿಸುವ,ಗೌರವಿಸುವ,ಸತ್ಕರಿಸುವ,ಆದರಿಸುವ,ಆರಾಧಿಸುವ,ಸೇವಿಸುವ ಕಾರ್ಯಗಳು ಪ್ರತೀ ಹಂತದಲ್ಲಿವೆಎಂದಮೇಲೆ ನಮ್ಮ ಭಾರತೀಯ ಸತ್ಸಂಪ್ರದಾಯ ಎಷ್ಟು ಅರ್ಥಪೂರ್ಣ ಅಲ್ಲವೇ? ಏನೂ ಇರಲಿ ಭರಿಸಲಾಗದ ಋಣಗಳಲ್ಲಿ ಅಪ್ಪನಋಣವೂ ಒಂದೆಂದು ಹೇಳಿದರೆ ತಪ್ಪಾಗದಲ್ಲ? ಬನ್ನಿ ಹಾಗಾದರೆ ಅಪ್ಪನಿಗೆ ಒಮ್ಮೆ ಎರಗೋಣ,ನೆನೆಯೋಣ,ನಮಿಸೋಣ>>

ಅಪ್ಪನ ಪ್ರೀತಿ

ತಂದೆ ನಿನ್ನಯ ಋಣವ ಎನಿತು ಮರೆಯಲಿ ನಾವು
ಮಂದಹಾಸದಿ ಎಲ್ಲ ಕಷ್ಟ ಕಳೆವುದಕೆ
ಚಂದಿರನ ತೋರಿಸುವ ಕಾಲದಿಂದಲೂ
ಒಂದಿನಿತು ಬರವಿಲ್ಲ ಪ್ರೀತಿ ಸೆಳವದಕೆ

ಮಗುಚಾಡಿ ಮಲಗಿದ್ದು ಅಂಬೆ ಹರೆವಾಗೆಲ್ಲ
ನಗುತೋಡಿ ಬಂದು ಅಪ್ಪುತ ಮುದ್ದು ಮಾಡಿ
ಬಗೆಯ ಆರ್ಥಿಕ ಕಷ್ಟ ನಿನಗಿರಲು ಅದುಮಿಟ್ಟು
ಮೊಗೆದು ಬಡಿಸಿದೆ ನಮ್ಮ ಜೋಪಾನಮಾಡಿ

ಅಮ್ಮನಿಗೆ ಜೊತೆಯಾಗಿ ಸಮ್ಮತಿಸಿ ನೂರೆಂಟು
ಬೊಮ್ಮ-ಹನುಮರ ರೀತಿ ಹಲವು ಬೊಂಬೆಗಳ
ಚಿಮ್ಮಿ ನೆಗೆಯುವ ಜಿಂಕೆ-ಕುದುರೆಗಳ ತಂದಿತ್ತು
ಸುಮ್ಮನಾಗಿಸಿ ನಕ್ಕೆ ನಿನ್ನ ಕೂಸುಗಳ

ಬೆಳೆದು ದಡ ಸೇರಿದನು ಹದವರಿತು ನೆನೆನೆನೆದು
ಕಳೆದ ಕಷ್ಟದ ದಿನವ ಹಂಬಲಿಸಿ ಮರುಗಿ
ಮಳೆಯು ಭೋರ್ಗರೆದಂತೆ ನದಿಗೆ ನೆರೆ ಬಂದಂತೆ
ತೊಳೆದು ಮನಹಗುರಾಯ್ತು ತಾನೇ ತಾನಾಗಿ

ಬೆಳಗು ಬೈಗಿನಲೊಮ್ಮೆ ಅಪ್ಪ ಹತ್ತಿರವಿರಲು
ಎಳೆವೆಯದು ನಮಗಿರಲಿ ಎಂಬ ಕನಸಿನಲಿ
ಅಳುವ ನಮ್ಮೆಲ್ಲರನು ರಮಿಸಿ ಸಂತೈಸುತ್ತ
ಬೆಳಗಿದೆಯೊ ಹಣತೆಯನು ನಮ್ಮ ಹೃದಯದಲಿ

Saturday, June 19, 2010

ಶ್ರೀಕೃಷ್ಣನ ನೆನೆದು


ಶ್ರೀಕೃಷ್ಣನನ್ನು ನಾವು ನೋಡುವುದು ಬರೇ ನವನೀತ ಚೋರ, ಹೆಂಗಸರ ಮಳ್ಳ, ಕಪಟ ರಾಜಕಾರಣಿ ಎಂದೆಲ್ಲ ಹೌದಷ್ಟೇ ? ಆದರೆ ಕೃಷ್ಣ ಬದುಕಲ್ಲಿ ತನ್ನ ಸ್ವಾರ್ಥಕ್ಕಾಗಿ ಯಾವರೀತಿ ಬದುಕಿದ ಅಥವಾ ತಾನು ಎಷ್ಟು ಕೋಟಿ ನುಂಗಿದ ಎಂದು ಯಾವತ್ತಾದರೂ ಯಾರಾದರೂ ನೋಡಿದೆವೇ ? ಇಲ್ಲವಲ್ಲ ? ಕೃಷ್ಣ ನಮ್ಮ ಥರದಲ್ಲೇ ಮನುಷ್ಯನಾಗಿದ್ದ ಎಂದಮೇಲೆ ಅವನಿಗೆ ನಮ್ಮಂತೆ ಬೇಕು-ಬೇಡಗಳು ಜೀವನದಲ್ಲಿ ಇರುತ್ತಿದ್ದವಲ್ಲ, ಆದರೆ ಅವುಗಳ ಬಗ್ಗೆ ಆತ ಒಂದು ಕ್ಷಣವೂ ಚಕಾರವೆತ್ತಲಿಲ್ಲ. ಮಳೆಬಂದಾಗ ಇಂದ್ರನ ಮಾತು ಕೇಳಿಸಲು, ಇಂದ್ರನಿಗೆ ಬುದ್ಧಿ ಕಲಿಸಲು ಮಂದರಗಿರಿಯನ್ನೇ ಅದೂ ಕಿರುಬೆರಳಿಂದ ಎತ್ತಿ ಹಿಡಿದ, ಚಂದಿರನ ಪ್ರತಿಬಿಂಬವನ್ನು ಹಾಲ ಬಿಂದಿಗೆಯಲ್ಲಿ ಕಂಡು ಶ್ಯಮಂತಕ ಮಣಿಯ ಕಳ್ಳ ಎನಿಸಿಕೊಂಡ, ಹಂದರದಲ್ಲಿ ಹದಿನಾರು ಸಾವಿರ ಕನ್ನಿಕೆಯರನ್ನು ಬಿಡಿಸಿ ಅವರು ಅನಾಥರಾಗದಿರಲಿ ಎಂಬ ಕೇವಲ ಆ ಒಂದು ದೃಷ್ಟಿಯಿಂದ ಅವರೆಲ್ಲ ತನ್ನ ಹೆಂಡಿರು ಎಂದ-ಆದರೆ ಭೋಗಿಸಲಿಲ್ಲ,ಬಳಸಲಿಲ್ಲ-ಬದುಕು ಕೊಟ್ಟ!, ಕುಂತಿಯ ಮಗ ನೀನು ಕರ್ಣಾ ನಿನಗೆ ತಮ್ಮಂದಿರೊಟ್ಟಿಗೆ ಯುದ್ಧ ಬೇಡವೆಂದ, ದಾಸಿಯ ಮಗ ವಿದುರನ ಮನೆಯಲ್ಲಿ ಬಿಂದು ಹಾಲನ್ನು ಕುಡಿದು ಹಾಲಿನ ಸಿಂಧು-ಸಾಗರವನ್ನೇ ಹರಿಸಿದ, ಬಾಲ್ಯ ಸ್ನೇಹಿತ ಕುಚೇಲನನ್ನು ಅಂಗಳದ ವರೆಗೆ ಓಡೋಡಿ ಬಂದು ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿ-ಆತನ ಪಾದ ಪೂಜೆ ಮಾಡಿ, ಆತ ಸಂಕೋಚದಿಂದ ಕೊಡದೇ ಇದ್ದ ಬೇಡಿ ತಂದ ಅವಲಕ್ಕಿಯನ್ನು ಕಟ್ಟಿತಂದಿದ್ದ ಚಿಂದಿಯನ್ನು ಬಿಡಿಸಿ ಮುದದಿಂದ ಮೆದ್ದು-ಮನಸಾರೆ ಸ್ವೀಕರಿಸಿ ಬಂದ ಕಾರಣವನ್ನು ಆತ ಹೇಳದೇ ಇದ್ದರೂ ಆತನ ಕಣ್ಣಲ್ಲೇ ಅದನ್ನು ಗ್ರಹಿಸಿ ಅನುಗ್ರಹಿಸಿದ ಅತಿಮಾನುಷ ಶಕ್ತಿ ನಮ್ಮ ಕೃಷ್ಣನಲ್ಲವೇ ? ಜನಸಾಮಾನ್ಯರ ಮಧ್ಯೆ ಇದ್ದೂ ಎಲ್ಲರಲ್ಲಿ ಒಬ್ಬನಾಗಿ ಅತಿ ಸಾಮಾನ್ಯರಂತೆ ಬದುಕಿದ ಕೃಷ್ಣ ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ! ತನ್ನ ಬದುಕಿನಲ್ಲಿ ಹುಟ್ಟಿದಾರಭ್ಯ ತರಾವರಿ ಸಮಸ್ಯೆಗಳು ಎದುರಾಗುತ್ತಿದ್ದರೂ ಅವೆಲ್ಲಕ್ಕೂ ಸಾವಧಾನವಾಗಿ, ಬಹುತಾಳ್ಮೆಯಿಂದ-ಬಹು ಜಾಣ್ಮೆಯಿಂದ ಬೆಣ್ಣೆಯ ಮೇಲಿನ ಕೂದಲನ್ನೋ ಕಣ್ಣಲ್ಲಿ ಬಿದ್ದ ಕೂದಲನ್ನೋ ತೆಗೆವಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದ.

ಜಗದ್ಗುರು ಎಂದು ನಾಮಫಲಕವನ್ನು ಕೃಷ್ಣ ಹಾಕಿಕೊಳ್ಳಲಿಲ್ಲ. ನಮ್ಮ ಜನರಲ್ಲೇ ಇರುವ ಅನೇಕ ಜ್ಞಾನಿಗಳು ಅವನ ರೂಪವನ್ನು ಅರಿತು ಅವನೊಬ್ಬ ಕಾರಣೀಭೂತ ವಿಭೂತಿ ಪುರುಷ ವ್ಯಕ್ತಿತ್ವ ಎಂದು ಹಾಗೆ ಕರೆದು ಗೌರವಿಸಿದರು. ಜಗತ್ತಿಗೇ ಅಪ್ರತಿಮ ಕೊಡುಗೆಯಾಗಿ ಶ್ರೀಮದ್ಭಗವದ್ಗೀತೆಯನ್ನು ಕರುಣಿಸಿದ ಕೃಷ್ಣ ಹಿಂದಿನ-ಇಂದಿನ-ಮುಂದಿನ ಅಥವಾ ಸಾರ್ವಕಾಲಿಕ ಸತ್ಯವನ್ನು-ತಥ್ಯವನ್ನು ಬೋಧಿಸಿದ, ಬೋಧಿಸಿ ಗುರುವಾದ! ಇವತ್ತಿಗೂ ಅದರ ಒಂದೊಂದು ಅಂಶವೂ ಅತಿಮೌಲ್ಯಯುತ. ಹಲವು ತೆರನಾದ ಮಾರ್ಗದರ್ಶಕರು, ನಿರ್ದೇಶಕರು, ನಿರ್ಮಾಪಕರು, ಸನ್ಯಾಸಿಗಳು, ವಿಜ್ಞಾನಿಗಳು ಕಾಯಂ ಅಭ್ಯಸಿಸುತ್ತ ಅಳವಡಿಸಿಕೊಳ್ಳಲು ಬಯಸುವ, ಜಗತ್ತಿಗೇ ಭಾರತಕೊಟ್ಟ, ಮಹಾಭಾರತ ಕೊಟ್ಟ ಮಹಾನ್ ಕೊಡುಗೆ ನಮ್ಮ ಭಗವದ್ಗೀತೆ. ಬ್ರಹ್ಮಲೀನ ಪೂಜ್ಯ ಶ್ರೀ ಜಯದಯಾಲ ಗೋಯಂದಕಾ ರವರು ಅತೀ ಕಡಿಮೆ ವೆಚ್ಚದಲ್ಲಿ ತನ್ನ ಸೇವಾರೂಪವಾಗಿ ಗೀತಾ ಪ್ರೆಸ್, ಗೋರಖಪುರ ಇದರಮೂಲಕ ಹರಿಸುತ್ತಿರುವ ಸೇವಾಸುಧೆ ಈ ಭಗವದ್ಗೀತೆಯ ಪ್ರತಿಗಳ ಪ್ರಸರಣೆ. ಗೀತಾಮೃತವನ್ನು ಅಂದು ಕರುಣಿಸಿದ ಶ್ರೀಕೃಷ್ಣನನ್ನೂ ಅದನ್ನು ಬಹುಭಾಷೆಗಳಲ್ಲಿ ಮುದ್ರಿಸಿ ಸ್ವಂತಖರ್ಚಿನಲ್ಲಿ ವಿತರಿಸಿದ ಶ್ರೀ ಜಯದಯಾಲರನ್ನೂ ಹಲವು ಬಾರಿ ನೆನೆಯೋಣ, ನಮ್ಮ ಹಲವು ಕಾರ್ಯಕ್ರಮಗಳಲ್ಲಿ ನಮ್ಮ ಪ್ರೀತಿಪಾತ್ರರಿಗೆ ಒಂದೊಂದು ಪ್ರತಿಯನ್ನು ಕೊಡುವ ಮೂಲಕ ಅದರಲ್ಲಿರುವ ಜ್ಞಾನವನ್ನು-ವಿಜ್ಞಾನವನ್ನು ಎಲ್ಲೆಡೆ ಪಸರಿಸೋಣ ಅಲ್ಲವೇ ?


ಶ್ರೀಕೃಷ್ಣನ ನೆನೆದು


ಗುರುತರದ ಭಾರ ನಗುಮೊಗದಿ ಹೊತ್ತು
ಸಿರಿ ಕೃಷ್ಣ ನಿಂತ ಜಗದಿ
ಅರಿವುಂಟುಮಾಡಿ ನಿಜ ಬದುಕಿನರ್ಥ
ತೆರೆದಿಟ್ಟ ಗೀತೆ ಇಹದಿ

ಬಲುನೋವ ಸಹಿಸಿ ನಲಿವೆಲ್ಲ ತ್ಯಜಿಸಿ
ಅಲೆದಲೆದು ರಾಜಕಾರ್ಯ
ನೆಲೆನಿಂತು ಹಲವು ಸಂಕುಲವ ನಡೆಸಿ
ಒಲಿದಿತ್ತ ಬಾಳು ನವ್ಯ

ನಡೆತಂದ ಬಡವ ಸ್ನೇಹದಿ ಕುಚೇಲ
ಒಡಹುಟ್ಟಿದಂತ ಪ್ರೀತಿ
ಒಡೆದಾಡಲಿಲ್ಲ ಬಡತನದ ಕಷ್ಟ
ಬಿಡುಗಣ್ಣಲರಿತ ರೀತಿ !

ಘನ ಘೋರ ಕ್ರೂರ ತನ್ನ ಮಾವ ಕಂಸ
ಅನಗತ್ಯವಾಗಿ ಜನರ
ಮನಬಂದರೀತಿ ಹುರಿದುಂಬ ಭೀತಿ
ನೆನೆದಲ್ಲಿ ಕೃಷ್ಣ ಕುವರ

ಹದಿನಾರು ಸಾವ್ರ ಹೆಂಗಳೆಯರನ್ನು
ಹುದುಗಿಟ್ಟು ಕಾರಾಗೃಹದಿ
ಹದಮೀರಿ ನಡೆದ ನರಕಾಸುರನ್ನ
ಸದೆಬಡಿದು ಬಿಡಿಸಿ ಭರದಿ

ಇದಕಂಡ ನಮ್ಮ ಬಹು ಜನತೆಯೆಲ್ಲ
ವದರಿದರು ಕಪಟನೆನುತ
ಎದುರಿರುವ ಸತ್ಯ ಅರಿತಿಲ್ಲ ಕೊನೆಗೂ
ಬದುಕನ್ನು ನೀಡ್ದ ಪಾಠ

ಕೌರವಗೆ ಸಾರಿ ಪ್ರತಿ ಬಾರಿ ಬಾರಿ
ರೌರವದ ನರಕ ನೆನೆದು
ಗೌರವಕೆ ಕುತ್ತು ತಂದಿತ್ತ ಹೊತ್ತು
ಸೌರವಗೂ ವಿಷಯ ಪೇಳ್ದು

ನವನೀತ ಕಳ್ಳ ಹೆಂಗಸರ ಮಳ್ಳ !
ಭವರೋಗ ವೈದ್ಯ ನಿನ್ನ
ಅವನಿಯೊಳು ಜನತೆ ಆಡಿಹರು ಹಲವು
ಅವತಾರಿ ಕ್ಷಮಿಸೊ ಮುನ್ನ


ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೇ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ ||

Friday, June 18, 2010

ಐಲವಾಯು!


ಐಲವಾಯು!

ಪ್ರಾಣವಾಯು, ಅಪಾನವಾಯು, ಉದಾನವಾಯು ಇವುಗಳ ಬಗ್ಗೆಲ್ಲ ತಿಳಿದಿರುವುದು ಸಹಜ. ಯಾಕೆಂದರೆ ಅವೆಲ್ಲ ಶರೀರದ ವ್ಯವಸ್ಥೆಗೆ ಸಂಬಂಧಿಸಿದ್ದಾಗಿರುವುದರಿಂದ ಅವು ಜೀವನದ ಹಲವು ಘಟ್ಟಗಳಲ್ಲಿ ಸುದ್ದಿಗೆ ಬರುವಂತ ವಿಷಯಕ್ಕೆ ವಸ್ತುಗಳು. ಆದರೆ ಐಲವಾಯು ಎಂಬುದೊಂದಿದೆ ಎಂದರೆ ನೀವು ಆಶ್ಚರ್ಯಪಡಬೇಕು! ವಸ್ತುಶಃ ನಿಜ ಇದು! ಹೌದಾ ಹಾಗಾದ್ರೆ ಎಷ್ಟೆಲ್ಲಾ ವಿಜ್ಞಾನ ತತ್ವಜ್ಞಾನ ಪುಸ್ತಕಗಳನ್ನು ಮತ್ತು ವೇದ ಪುರಾಣಗಳನ್ನೂ ಓದಿದ್ದೇವೆ, ಅನೇಕ ಕವಿ-ಸಾಹಿತಿಗಳ ಕೃತಿಗಳನ್ನೊ ಓದಿದ್ದೇವೆ. ಇದುವರೆಗೆ ನಾವು ಈ ವಾಯುವಿನ ಬಗ್ಗೆ ಕೇಳಲೇ ಇಲ್ಲವಲ್ಲ ಎಂದು ಕಾತುರಾಗುವುದು ಸಹಜ. ಈ ವಾಯುವಿನ ಸಂಶೋಧನೆ ಸುಮಾರು ೨೦-೨೧ ವರ್ಷಗಳ ಹಿಂದೆ ನಡೆಯಿತು. ಇದರ ಸಂಶೋಧನೆಗೆ ಬಹಳ ಕಾಲ ಹಿಡಿಯಲಿಲ್ಲವಾದರೂ ಇದರ ಪರಿಶೋಧನೆಗೆ ಪರಿತಪಿಸಬೇಕಾಗಿತ್ತು! ಹೀಗಾಗಿ ಈ ವಾಯುವಿಗಿರುವ ಮೌಲ್ಯ ಜಗತ್ತಿನಲ್ಲಿ ಇಂದಿಗೂ ಬೇರಾವ ವಾಯುವಿಗೂ ಇಲ್ಲ!

ಸರಿಸುಮಾರು ೨೦-೨೧ ವರ್ಷಗಳ ಹಿಂದೆ ನಮ್ಮ ಕರಾವಳಿಯ ಹಳ್ಳಿಯ ರಸ್ತೆಗಳಲ್ಲಿ ಸೈಕಲ್ ಗಳದೇ ಕಾರುಬಾರು! ಯಾಕೆಂದರೆ ಸೈಕಲ್ ಬಡವರ-ಜನಸಮಾನ್ಯರ ಬದುಕಿನ ಜೀವನಾಡಿ ಅಲ್ಲವೇ? ಹೀಗಾಗಿ ತುಂಬಾ ಮಂದಿ ಉಪಯೋಗಿಸುವ ಅಗ್ಗದ ವಾಹನವೆಂದರೆ ಸೈಕಲ್. ಎಷ್ಟೋ ಮನೆಗಳಲ್ಲಿ ಕಾರು, ಜೀಪುಗಳಿದ್ದರೂ ಅರ್ಜೆಂಟಿಗೆ ಅಂತ ಒಂದು ಸೈಕಲ್ ಇದ್ದೇ ಇರುತ್ತಿತ್ತು. ಯಾವುದೇ ಇಂಧನವನ್ನು ಬೇಡದ ನಾವು ತುಳಿದಂತೆ ನಡೆಯುವ ಬಡಪಾಯಿ ಸಂಗಾತಿ ಇದು. ಇಂತಹ ಸೈಕಲ್ ಗಳನ್ನು ಒಬ್ಬೊಬ್ಬರು ಒಂದೊಂದು ರೀತಿ ಇಟ್ಟುಕೊಳ್ಳುತ್ತಿದ್ದರು.

ಕೆಲವರು ಮಳೆಗಾಲ ಪ್ರಾರಂಭವಯಿತೆಂದರೆ ಅದಕ್ಕೆ ತುಕ್ಕು ಹಿಡಿಯದಿರಲೆಂದು ರಿಮ್ಮು, ಜಿಮ್ಮು ಹೊಳೆಯುವ ಭಾಗಗಳುಗಳಿಗೆಲ್ಲ ಚಿನ್ನದ ಬಣ್ಣದ ಯಾವುದೋ ದ್ರವ್ಯವನ್ನು ಲೇಪಿಸುತ್ತಿದ್ದರು. ಇನ್ನು ಕೆಲವರು ಸೈಕಲ್ಲಿಗೆ ಅಲಂಕಾರವನ್ನು ಬಹಳ ಕಾಳಜಿಯಿಂದ ಮಾಡುತ್ತಿದ್ದರು. ಅದಕ್ಕೆ ಹಿಡಿಕೆ[ಹ್ಯಾಂಡಲ್]ಗೆ ಮೆತ್ತಗಿನ ರಬ್ಬರಿನ ಕವಚ, ಸೀಟಿಗೆ ಬಹುಬಣ್ಣದ ಲೇಟೆಸ್ಟ್ ಕವರು, ಸೀಟಿನ ಮುಂದಿನ ಹಾರೆಗೆ ಲೇಸು ಹಚ್ಚಿದ ಪ್ಲಾಸ್ಟೀಕು ಕವರು, ಮಡ್ ಗಾರ್ಡ್ ಕೊನೆಗೆ ಬಲೂನು ಆಕೃತಿಯ ರಬ್ಬರ್ ಹಾಳೆ, ಚಕ್ರಗಳ ನಡುವೆ ಸುತ್ತುವ ಬಣ್ಣ ಬಣ್ಣಗಳುಳ್ಳ ಗೊಂಡೆಯ ದಂಡೆ, ಬ್ರೇಕಿನ ಹಿಡಿಕೆಗೆ ಯಾವುದಾದರೂ ಬಣ್ಣದ ಪ್ಲಾಸ್ಟಿಕ್ ಕವರು ಹೀಗೆ ಸರ್ವರೀತಿಯಲ್ಲಿ ಒಳ್ಳೇ ಮದುಮಗಳು ಸಜ್ಜುಗೊಂಡಂತೆ ರೆಡಿಯಾಗುತ್ತಿತ್ತು ಸೈಕಲ್ಲು. ಕೆಲವರು ಹಳ್ಳಿಗಳಲ್ಲಿ ದಿನಾಲೂ ಎಮ್ಮೆ ಮೀಸಿದಂತೆ ಸೈಕಲ್ಲನ್ನೂ ಮೀಸುತ್ತಿದ್ದರು. ಹಳ್ಳಿಗಳ ಮಣ್ಣು ರಸ್ತೆಗಳಲ್ಲಿ ಓಡಾಡಿ ಕೊಳೆ ಹಿಡಿದ ಸೈಕಲ್ಲಿನ ಗಾಲಿಗಳು ತೊಳೆದು ನಿಲ್ಲಿಸಿದಾಗ ಹೊಸದೇನೋ ಎನ್ನಿಸುವಷ್ಟು ಮಿರಿಮಿರಿ ಮಿಂಚುತ್ತಿದ್ದವು. ಬಹುಶಃ ಜೀವವಿದ್ದರೆ ಆ ಸೈಕಲ್ಲಿಗೆ ಸ್ನಾನಮಾಡಿಸಿ ಮೈಯ್ಯುಜ್ಜಿಕೊಟ್ಟಾಗ ತುಂಬಾ ಹಾಯೆನಿಸುತ್ತಿತ್ತೋ ಏನೋ! ಅಂತೂ ಸೈಕಲ್ಲುಗಳು ದಿನಾಲೂ ತಯಾರಿಗೊಳ್ಳುವ ಸುಂದರ ವಧುಗಳಾಗಿದ್ದವು! ಆದರೆ ಈ ವಧುಗಳಿಗೆ ಗಂಡು ಬೇಕಾಗಿರಲಿಲ್ಲ ಅಷ್ಟೇ!

ಆ ಕಾಲದಲ್ಲಿ ಇವತ್ತಿನ ರೀತಿಯಲ್ಲಿ ಮನೆಮನೆಯಲ್ಲಿ ಟಿವಿಗಳಿರಲಿಲ್ಲ. ಅಸಲಿಗೆ ಬಾಂಬೆ ಯಿಂದ ಬಂದ ನಮ್ಮ ಪಕ್ಕದ ಮನೆಯ ಚಿಕ್ಕಪ್ಪ ಟಿವಿ ಸುದ್ದಿ ಹೇಳುತ್ತಿದ್ದರೆ ನಾವೆಲ್ಲಾ ಕಣ್ಣನ್ನು ಹಿಗ್ಗಿಸಲಾಗುವಷ್ಟೂ ಹಿಗ್ಗಿಸಿ, ಕತ್ತು ಉದ್ದಮಾಡಿ, ಶಿಸ್ತಾಗಿ ಕೂತು ಕೇಳುವ ಅತಿಕೌತುಕದ ವಿಷಯ ಅದಾಗಿತ್ತು! ಟಿವಿ ಹೇಗಿರುತ್ತದೆ ಅದರಲ್ಲಿ ಹೊರಗಿನ ಜನ ಯಾರಿಗೂ ತಿಳಿಯದಂತೆ ಒಳಗೆ ಬಂದು ಹೇಗೆ ಕುಣಿಯುತ್ತಾರೆ ಎಂಬುದು ಅರ್ಥವಾಗುತ್ತಿರಲಿಲ್ಲ. ಅದರ ಪ್ರಸಾರ ಹೇಗೆ ಎಂಬುದು ಪ್ರಾಯಶಃ ಆ ನಮ್ಮ ಚಿಕ್ಕಪ್ಪನಿಗೂ ಆಗ ತಿಳಿದಿರಲಿಲ್ಲ. ಕಪ್ಪು-ಬಿಳುಪು ಬಣ್ಣದಲ್ಲಿ ಕಾಣಿಸುತ್ತಿತ್ತಂತೆ. ಅಪರೂಪಕ್ಕೆ ವರುಷಕ್ಕೊಮ್ಮೆ ಬರುವ ಆ ಚಿಕ್ಕಪ್ಪ ಬರುವ ದಾರಿಯಲ್ಲಿ ಧಾರವಾಡದ ಪೇಡಾವನ್ನು ತರುತ್ತಿದ್ದರು. ಅವರ ಮನೆಯ ಸಹೋದರರ ಮಕ್ಕಳಿಗೂ ಸೇರಿದಂತೆ ನಮಗೂ ಅದರಲ್ಲಿ ಪಾಲು ಕೊಡುತ್ತಿದ್ದರು. ಅದರ ಅದ್ಬುತ ರುಚಿ ಮರೆಯಲಾರದ ’ಸ್ವಾಹಾನುಭವ’! ಅವರು ಊರಿಗೆ ಬಂದಾಗ ಆಗೀಗ ಕಾರಣಮಾಡಿಕೊಂಡು ಅವರನ್ನು ಮಾತಾಡಿಸಲು ಹೋಗುವುದಿತ್ತು. ನಮಗೆ ಬರಬಹುದಾದ ಸಂಭಾವನೆ ಬರಲಿ ಎಂಬ ’ಮಾಮೂಲೀ’ ಕೇಳುವ ವಿಸಿಟ್ ಅದಾಗಿರುತ್ತಿತ್ತು. ಪಾಪ ಆ ಚಿಕ್ಕಪ್ಪ ಬರಿಗೈಲಿ ಎಂದಿಗೂ ವಾಪಸ್ಸು ಕಳಿಸುತ್ತಿರಲಿಲ್ಲ. ಅವರಿಗೆ ಬಾಂಬೆಯ ಜೀವನ ಅಭ್ಯಾಸವಾಗಿಹೋದಂತಿತ್ತು. ಊಟಕ್ಕೆ ಚಪಾತಿಯೇ ಇರಬೇಕಾಗುತ್ತಿತ್ತು. ದಿನಾಲೂ ದಾಡಿಮಾಡಿಕೊಳ್ಳಬೇಕಾಗುತ್ತಿತ್ತು. ಆಗಾಗ ಅವರು ತಮ್ಮ ಮಕ್ಕಳು ಅತ್ತರೆ ಸುಮ್ಮನಿರಿಸಲು ಶುಶ್ರಾವ್ಯವಾಗಿ ಓಂ ಜೈ ಜಗದೀಶಹರೇ ಹಾಡನ್ನು ಹಾಡುತ್ತಿದ್ದರು. ಹೀಗಾಗಿ ನಮಗೆಲ್ಲರಿಗೆ ಏನಾದರೊಂದು ಹೊಸತನ್ನು ವರುಷಕ್ಕೊಮ್ಮೆ ತರುವ ಕ್ರಿಸ್ ಮಸ್ ತಾತನಂತೆ ಅವರಾಗಿದ್ದರು!

ಚಿಕ್ಕವರಿರುವಾಗ ನಾವು ಅಷ್ಟಾಗಿ ಸಿನಿಮಾ ನೋಡಿರಲಿಲ್ಲ. ಒಮ್ಮೆ ನಮ್ಮ ಬಾಂಬೇ ಚಿಕ್ಕಪ್ಪ ಬಂದಾಗ ನಾವೆರಡು-ಮೂರು ಮನೆಯವರು ಸೇರಿ ಬಾಡಿಗೆ ಕಾರು ಹಿಡಿದು ಸಿನಿಮಾ ನೋಡಬೇಕೆಂದು ತೀರ್ಮಾನವಾಯಿತು. ಅದು ಯಾವುದೋ ನಮ್ಮ ಅಣ್ಣಾವ್ರ ಸಿನಿಮಾ. ಅಂಬಾಸಿಡರ್ ಕಾರಿನಲ್ಲಿ ಕಮ್ಮೀ ಕಮ್ಮೀ ಅಂದರೂ ಹದಿನಾಲ್ಕು ಜನ ಹಿಡಿಸುತ್ತಿದ್ದರು! ಆ ಕಮ್ಪನಿಯ ಕಾರು ಇವತ್ತಿಗೂ ಅದೇ ತನ್ನತನ ಉಳಿಸಿಕೊಂಡಿದೆ-ಆದರೆ ಸೀಟು ಅಷ್ಟೊಂದು ಹಿಡಿಸುವುದಿಲ್ಲ ಈಗ! ಹಾಳಾದ ಜ್ವರ ನನಗೆ ಅದೇದಿನ ಒಕ್ಕರಿಸಬೇಕೆ? ನಾನು ಹೋಗಲು ನಮ್ಮ ಮನೆಯ ಹಿರಿಯರು ಅಪ್ಪಣೆಕೊಡಲಿಲ್ಲ. ಮ್ಯಾಟನಿ ಬಿಟ್ಟು ಮಿಕ್ಕುಳಿದ ಶೋ ಗೆ ಹೋದರೆ ನಟನಟಿಯರಿಗೆ ಸುಸ್ತಾಗಿಬಿಟ್ಟಿರುತ್ತದೆ ಅವರು ಚೆನ್ನಾಗಿ ಆಕ್ಟ್ ಮಾಡುವುದಿಲ್ಲ ಹೀಗಾಗಿ ಇನ್ನೊಮ್ಮೆ ಮುಂದಿನವಾರ ಇನ್ನಷ್ಟು ಜನ ಸೇರಿ ಹೋಗೋಣ ಎಂದಿದ್ದರು ನಮ್ಮ ಚಿಕ್ಕಪ್ಪ. ಹೇಗಾದರೂ ಮಾಡಿ ಸಿನಿಮಾಗೆ ಅವರೊಟ್ಟಿಗೆ ಹೋಗುವ ಆಸೆ. ಆಂತೂ ಕೂಗಿ ಕಬ್ಬರಿದು ಹಠಮಾಡಿದ ಮೇಲೆ ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಹಾಗೇ ಅನುಮತಿ ಸಿಕ್ಕಿತು. ನನಗೆ ಆಗಾದ ಸಂತೋಷ ಬಹುತೇಕರಿಗೆ ದೇಶಕ್ಕೆ ಸ್ವಾತಂತ್ರ್ಯಬಂದಾಗಲೂ ಆಗಿರಲಿಕ್ಕಿಲ್ಲ!

ಅಂತೂ ನಾನೂ ಸೇರಿದಂತೆ ನಾವು ಸಿನಿಮಾ ನೋಡಲು ಹೊರಟೆವು. ಕಿರ್ರನೆ ಕಿರುಚಿದ ಬೆಲ್ಲು ನಮಗೆ ಹೊಸದು. ಒಮ್ಮೆ ನಾವೆಲ್ಲಾ ಬೆಚ್ಚಿದೆವು-ಕಾಡಿನಿಂದ ನಾಡಿಗೆ[ಊರಿಗೆ]ಬಂದ ಜಿಂಕೆಮರಿಗಳ ಸ್ಥಿತಿ ನಮ್ಮದಾಗಿತ್ತು. ಸಿನಿಮಾ ಶುರುವಿಟ್ಟಿತು. ಅದೇನೋ ಬಾಲ್ಕನಿಯಂತೆ ಅದರಲ್ಲಿ ಕುಳಿತುಕೊಂಡಿದ್ದೆವು. ಜನ್ಮದಲ್ಲಿಯೇ ನೋಡಿರದ ಮೆತ್ತನ ಸೀಟುಗಳನ್ನು ಬಹಳಸಲ ಮುಟ್ಟಿ ಮುಟ್ಟಿ ನೋಡಿದೆವು. ಓ ಬದುಕೇ ನೀನೆಂಥ ಸುಂದರ! ಸ್ವರ್ಗದಲ್ಲಿರುವಷ್ಟು ಸುಖಪಟ್ಟೆವು! ಸಿನಿಮಾದಲ್ಲಿ ಅನೇಕ ಪಾತ್ರಧಾರಿಗಳು ಬಂದು ಹೋಗುತ್ತಿದ್ದರು.ನಡು ನಡುವೆ ಅಂದಿನ ಸಿನಿಮಾಗಳಲ್ಲಿ ಸ್ಲೋ ಮೋಶನ್ ಇರುತ್ತಿತ್ತು. ಆಗೆಲ್ಲ ನಾನಂದುಕೊಳ್ಳುವುದು ಅಜ್ಜ ಹೇಳಿದ್ದು ನಿಜ-ಪಾತ್ರಧಾರಿಗಳಿಗೆ ಕುಣಿದೂ ಕುಣಿದೂ ಸುಸ್ತಾಗಿಬಿಟ್ಟಿದೆ ಪಾಪ! ಪಾತ್ರಧಾರಿಗಳು ಎಲ್ಲಿರುತ್ತಾರೆ ಮತ್ತು ಹೇಗೆ ವೇದಿಕೆಯ ಮೇಲೆ ಬರುತ್ತಾರೆ ಎಂಬುದು ತಿಳಿದಿರಲಿಲ್ಲ. ನಮ್ಮ ಮೇಲ್ಗಡೆ ಇರುವ ಮಹಡಿಯಿಂದ ಪರದೆಯ ಹಿಂದುಗಡೆಗೇ ನೇರ ಇಳಿಯಲು ವ್ಯವಸ್ಥೆ ಇದೆ ಎಂದುಕೊಂಡಿದ್ದೆ ನಾನು. ಬಾಯಿತೆಗೆದರೆ ಸಿನಿಮಾನೋಡುವಾಗ ಮಾತನಾಡಬೇಡ ಎನ್ನುತ್ತಿದ್ದರು ನಮ್ಮ ಗುಂಪಿನವರು. ಅವರಿಗೆಲ್ಲ ಸಿನಿಮಾ ಅರ್ಥವಾಗುತ್ತಿತ್ತು. ನನಗೆ ವಯಸ್ಸು ೮-೯ ಇರುವುದರಿಂದ ಅಷ್ಟೊಂದು ಅರ್ಥಮಾಡಿಕೊಳ್ಳುವ ಮನೋ ಬೆಳವಣಿಗೆ ಅಂದಿಗೆ ಆಗಿರಲಿಲ್ಲ. ಹೀಗಾಗಿ ನನ್ನ ಕುತೂಹಲವಿರುವುದು ನಟ-ನಟಿಯರು ಎಲ್ಲಿರುತ್ತಾರೆ ಮತ್ತು ಹೇಗೆ ಅಷ್ಟು ಬೇಗ ದಿರಿಸುಗಳನ್ನು ಮತ್ತು ಇನ್ನಿತರ ಚಪ್ಪಲಿ ಮುಂತಾದವಸ್ತುಗಳನ್ನು ಬದಲಿಸಿಕೊಂಡು ಬರುತ್ತಾರೆ ಎಂಬುದರ ಮೇಲಿತ್ತು. ಅರ್ಥವಾಗಿರಲಿಲ್ಲ-ಅರ್ಥ ಮಾಡಿಸಿದವರೂ ಇಲ್ಲ. ಜ್ವರ ಬಂದಿದೆಯೆಂಬ ಕಾರಣಕ್ಕೆ ಹೋಗದಂತೆ ತಡೆಯಲು ಚಿಕ್ಕಪ್ಪ ಆರೋಗ್ಯದ ಹಿತಾರ್ಥ ಹೇಳಬೇಕಾಗಿ ಬಂದು ಹೇಳಿದ ಆ ಸುಳ್ಳು ಬಹುವರ್ಷಗಳವರೆಗೆ [೩-೪ ವರ್ಷಗಳವರೆಗೆ] ಹಾಗೇ ಅಚ್ಚೊತ್ತಿ ಬೇರೇ ನನ್ನ ಸಹಪಾಠಿಗಳಿಗೆಲ್ಲ ನನಗೆ ಸಿನಿಮಾ ಬಗ್ಗೆ ಬಹಳಗೊತ್ತಿರುವವನಂತೆ ಅದನ್ನೇ ಮನದಟ್ಟು ಮಾಡಿಸಿದ್ದೆ! ಅಂತೂ ಕೆಲವರುಷ ನಮ್ಮಲ್ಲಿಯ ಯಾವ ಮಕ್ಕಳೂ ಮ್ಯಾಟನಿ ಶೋ ಬಿಟ್ಟು ಮಿಕ್ಕುಳಿದ ಶೋ ಗಳಿಗೆ ಹೋಗುತ್ತಿರಲಿಲ್ಲ. ಇದೊಂಥರ ಕೂಗುಮಾರಿಯ ಹಬ್ಬುರೋಗದಂತೆ ಮಕ್ಕಳಲ್ಲೇ ಸುತ್ತುಹಾಕುತ್ತಿತ್ತು!

ಆ ಕಾಲದಲ್ಲಿ ಶಹರಗಳಲ್ಲಿ ಸಿನಿಮಾಗಳು ಬಿಡುಗಡೆಯಾದ ನಂತರ ಅವುಗಳ ಹೆಸರಿನಲ್ಲಿ ಅನೇಕ ವಸ್ತುಗಳು ಬರುತ್ತಿದ್ದವು. ಅಥವಾ ಅನೇಕ ವಸ್ತುಗಳ ಮೇಲೆ ಸಿನಿಮಾ ಹೆಸರೋ, ನಟ-ನಟಿಯರ ಹೆಸರೋ, ಯಾವುದೋ ಸಣ್ಣ ಡೈಲಾಗೋ ಅಚ್ಚಿಸಲ್ಪಟ್ಟು ಮಾರಾಟ ಜಾಸ್ತಿಮಾಡಿಸಿಕೊಳ್ಳುತ್ತಿತ್ತು! ಹೀಗಿರುವಾಗ ನಮ್ಮ ಮಿತ್ರ ಸೈಕಲ್ಲಿನ ಅನೇಕ ಕವರುಗಳ ಮೇಲೆ ಕೂಡ ಅಂತಹ ಅಕ್ಷರಗಳು ಬಣ್ಣ ಬಣ್ಣಗಳಲ್ಲಿ ಪ್ರಿಂಟ್ ಆಗಿರುತ್ತಿದ್ದವು. ಅವುಗಳನ್ನೆಲ್ಲ ಕೈಯ್ಯಲ್ಲಿ ಮುಟ್ಟಿನೋಡಿ ಹೇಗೆ ಮುದ್ರಿಸಿರಬಹುದು ಎಂಬುದನ್ನು ತಿಳಿದುಕೊಳ್ಳುವ ಆಸೆಯಾಗುತ್ತಿತ್ತು. ಹಲವ್ಯ್ ಸೈಕಲ್ ಓನರ್ ಗಳಿಗೆ ಬಗೆಬಗೆಯ ಚಿತ್ತಾರ-ಹೆಸರು ಮುದ್ರಿಸಿದ ಕವರುಗಳನ್ನು -ಲೇಟೆಸ್ಟ್ ಆಗಿ ಬಂದವುಗಳನ್ನು ಹಾಕಿಕೊಳ್ಳುವುದು ಘನತೆಯ ಪ್ರಶ್ನೆಯಾಗಿತ್ತು! ಹೀಗೇ ಹಲವಾರು ಮುದ್ರಿತ ಅಕ್ಷರಗಳ ಸೀಟ್ ಕವರ್ ಗಳಲ್ಲಿ ಒಂದರಮೇಲೆ ನನ್ನ ಸ್ನೇಹಿತನೊಬ್ಬ ಓದಿದ್ದು ’ ಐಲವಾಯು’! ಓದಿದ್ದೇ ಓದಿದ್ದು ಅವನಿಗೆ ಅದರ ಅರ್ಥ ತಿಳಿಯಲಿಲ್ಲ, ಅರ್ಥ ತಿಳಿಯುವ ಕುತೂಹಲವಾಯಿತು. ಆ ಕ್ಷಣದಿಂದ ನಮ್ಮಿಬ್ಬರದೂ ಅದರ ಅರ್ಥವೇನು, ಅದು ಯಾವ ಭಾಷೆಯ ಶಬ್ಧ, ಅದು ಯಾವ ಸಿನಿಮಾ ಹೆಸರು ಎಂಬುದನ್ನು ತಿಳಿಯುವ ಬೇಟೆಗೆ ಚಾಲನೆ ನೀಡಲಾಯಿತು.

ಹೀಗೆ ಪ್ರಾರಂಭವಾದ ಬೇಟೆಯಲ್ಲಿ ಯಾರೂ ನಮಗೆ ಅದರ ಅರ್ಥ ಹೇಳುವವರಿರಲಿಲ್ಲ! ಮುದುಕರಿಗೆ ಅದರಬಗ್ಗೆ ಗೊತ್ತಿಲ್ಲ-ಗಂಧಗಾಳಿ ಇಲ್ಲ, ಯುವಕರಿಗೆ ಬಹಳ ಅಧೀಕ್ಷಣಿ-ಅವರು ಹೇಳುವುದಿಲ್ಲ! ಯಾರನ್ನು ಹಿಡಿಯುವುದು. ಚಿಂತಿಸಿ ಕೊನೆಗೊಮ್ಮೆ ಕಾಲೇಜಿಗೆ ಹೋಗುವ ಕೆಲವು ಹೆಣ್ಣುಮಕ್ಕಳ ಹತ್ತಿರ ಕೇಳಿದೆವು- ಅವರೆಲ್ಲ ಪಿಸಪಿಸನೇ ನಕ್ಕು ಸುಮ್ಮನಾದರು. ಪಾಪ ನಮ್ಮ ಪಾಡು ಬೇಡ! ಧೈರ್ಯಗೆಡಲಿಲ್ಲ! ಧೈರ್ಯಂ ಸರ್ವತ್ರ ಸಾಧನಂ!--ಮೇಷ್ಟ್ರು ಹೇಳಿದ್ದರು. ಒಂದು ವಿಷೇಶವೆಂದರೆ ನಮ್ಮ ಊರಲ್ಲಿ ನಾವು ಗಂಡು ಟೀಚರ್ ಗಳನ್ನಲ್ಲದೇ ಹೆಣ್ಣು ಟೀಚರ್ ಗಳನ್ನೂ ’ಸರ್’ ಎಂದೇ ಸಂಬೋಧಿಸುತ್ತಿದ್ದೆವು! ನಮಗೆ ಪಾರಿಭಾಷಿಕ ಶಬ್ಢದ ಅರ್ಥ ಗೊತ್ತಿರದೆ ಆ ವಿಪರ್ಯಾಸ ನಡೆಯುತ್ತಿತ್ತು. ಆದರೂ ಚಿಕ್ಕಮಕ್ಕಳೆಂಬ ಕಾರಣಕ್ಕೋ ಅಥವಾ ಅವರಲ್ಲಿಯೂ ಹಲವರಿಗೆ ಆಂಗ್ಲ ಭಾಷೆ ಬರದೇ ಇದ್ದುದಕ್ಕೋ ಯಾರೂ ನಮಗೆ ಹಾಗೆ ಹೇಳಬಾರದು ಎಂದು ಹೇಳಿಕೊಟ್ಟಿದ್ದಾಗಲೀ ತಾಕೀತುಮಾಡಿದ್ದಾಗಲೀ ಇರಲಿಲ್ಲ! ’ಸರ್’ ಎಂಬುದು ಲಿಂಗಭೇದವನ್ನು ಅವಲಂಬಿಸಿದ್ದು ಎಂಬುದು ನಮಗಂದಿ ತಿಳಿದಿರಲಿಲ್ಲ. ’ಸರ್’ ಎಂಬುದೊಂದು ದೊಡ್ಡ ಗೌರವವಾಚಕ ಶಬ್ಧ ಎಂದೇ ತಿಳಿದ ಮೂರ್ಖ ವಿದ್ಯಾರ್ಥಿಗಳು ನಾವಾಗಿದ್ದೆವು. ಇರಲಿ.

ಅಂತೂ ಮೋದಲೇ ಹೇಳಿದಂತೆ ಧೈರ್ಯದಿಂದ ನಮ್ಮ ಬೇಟೆ ಮುಂದುವರಿಯಿತು. ನಮ್ಮಲ್ಲಿರುವ ಸರ್ವಶಕ್ತಿಯನ್ನೂ ಉಪಯೋಗಿಸಿ ಸುತ್ತುತ್ತ ಕೇಳುತ್ತಿದ್ದೆವು. ಒಂದುದಿನ ಯಾವುದೋ ಪಕ್ಕದ ಹಳ್ಳಿಯ ಕಾಲೇಜು ಕನ್ಯೆಯೊಬ್ಬಳು ದಾರಿಯಲ್ಲಿ ಸಿಕ್ಕಳು. ಅವಳಲ್ಲಿ ಕೇಳಿ ನೋಡೊಣ ಎಂದುಕೊಂಡು ಹತ್ತಿರಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ನನ್ನನ್ನು ದುರುಗುಟ್ಟಿ ನೋಡಿದ ಆ ಹುಡುಗಿ ನನ್ನ ಸ್ನೇಹಿತನಿಗೆ ಕಪಾಳಮೊಕ್ಷ ಕಾಣಿಸಿದಳು. ನಮ್ಮ ಪ್ರಸಾದವೆಲ್ಲ ಒಣಗಿಹೋಗಿ ಅ ದಿನದಿಂದ ಬಹಳಕಾಲದವರೆಗೆ ’ ದೈರ್ಯಂ ಸರ್ವತ್ರ ಸಾಧನಂ ’ ಹೇಳಿಕೆಯನ್ನು ಹೇಳಿಕೊಟ್ಟವರಿಗೆ ಮನಸ್ಸಿನಲ್ಲೇ ಗೊತ್ತಿರುವ ಶಾಪ ಹಾಕುತ್ತ ಆ ಹೇಳಿಕೆಯನ್ನು ಹಾಗೇ ಪಕ್ಕಕ್ಕೆ ತಳ್ಳಿದ್ದೆವು.

ಕಾಲಾನಂತರದಲ್ಲಿ ಯಾವುದೋ ಒಂದುದಿನ ಇನ್ನೊಂದು ಸೈಕಲ್ ಮೇಲೆ ಅದೇ ಬರಹ ಕಂಡಿತು. ಅದು 'ಐ ಲವ್ ಯೂ' ಎಂಬುದು ನಮಗೆ ಗೊತ್ತಾಗಿದ್ದು ಆ ದಿನ. ಅದರ ಅರ್ಥವನ್ನು ಸ್ವಲ್ಪ ಸ್ವಲ್ಪ ಸಹಜವಾಗಿ ತಿಳಿದುಕೊಳ್ಳುವ ಮಟ್ಟಿಗೆ ನಾವು ಬೆಳೆದಿದ್ದೆವು. ಆದರೆ ಆ ಪದದ ಬಳಕೆಯನ್ನು ಮಾತ್ರ ಇನ್ನೆಂದೂ ಮಾಡಬಾರದಷ್ಟು ನಿಶ್ಚೇಷ್ಟಿತಗೊಂಡ ಮನಸ್ಸು ನಮ್ಮದಾಗಿತ್ತು! ಹೀಗೆ ಜೀವನದಲ್ಲಿ ಇದುವರೆಗೂ ಕೂಡ ಈ ಐಲವಾಯುವನ್ನು ಉಪಯೋಗಿಸುವಾಗ ಬಹಳ ಜಾಗರೂಕರಾಗಿರುತ್ತಿದ್ದೇವೆ. ಯಾವುದು ಜಗತ್ತಿನಲ್ಲಿ ಪ್ರಾಮುಖ್ಯವೋ ಅದರ ಅರ್ಥಗೊತ್ತಿರದೇ ಅಪಾತ್ರರಿಗೆ ಅದನ್ನು ಹೇಳಿಕೊಂಡಾಗ ಆದ ಅಪಘಾತ, ಈಗಲೂ ಆತಂಕ ಒಡ್ಡುತ್ತದೆ. ಐಲವಾಯು ವಿನ ಮಹಾತ್ಮೆಯೇ ಹಾಗೆ. ಎಲ್ಲಸ್ನೇಹಿತರಮೇಲೂ ಪ್ರೀತಿಯಿಂದ, ಸ್ನೇಹದಿಂದ, ಅಕ್ಕರೆಯಿಂದ, ಮಮತೆಯಿಂದ, ವಾತ್ಸಲ್ಯದಿಂದ ’ಐಲವಾಯು’ ಶಬ್ಧ ಪ್ರಯೋಗಿಸಲೇ ? ಯಾಕೆಂದರೆ ಅದರ ವಿಸ್ತಾರ ಬಹುದೊಡ್ಡದು ಅಲ್ಲವೇ?