ಚಿತ್ರ ಕೃಪೆ-ಫೋಟೋ ಸರ್ಚ್.ಕಾಂ
ಅಹಂಕಾರ
ಒಂದು ತರಗೆಲೆ ಹಾರಿ ಸಂದುಗೊಂದನು ಮೀರಿ
ಚಂದದಲಿ ಬೀಗುತ್ತ ಸೇರಲಾಗಸವ
ಮಂದಾಸನದಿಂದ ಬಿದ್ದ ನಹುಷನಂತೆ
ಸಂದಿತಿಳೆಗೈತಂದು | ಜಗದಮಿತ್ರ
ಮನದ ಮೂಸೆಯ ತುಂಬ ತಾನುತಾನೆಂತೆಂಬ
ವನದಿ ಮರ್ಕಟ ಕುಣಿವ ಹದವಿರದ ಕುಣಿತ
ಸನದು ಶಾಸನವಿಲ್ಲ ಅನುಭವದ ಪರಿಯಲ್ಲ
ಅನುಗಾಲ ತಿನ್ನುವುದು ! ಜಗದಮಿತ್ರ
ಅಶನಮದ ವಶನಮದ ಅರ್ಥ-ವೈಭೋಗ ಮದ
ಕುಶಲತೆಯ ಕಳೆಯುವುದು ಬುದ್ಧಿ ಬದಿಗೊತ್ತಿ
ವಿಷದವಹುದಾಮೇಲೆ ನೆಶೆಕಳೆದ ಹೊತ್ತಲ್ಲಿ
ಖುಷಿಯು ಶಾಶ್ವತವಹುದೇ ? ಜಗದಮಿತ್ರ
ಕಟ್ಟಿನೂರೆಂಟು ಬಂಗಲೆಗಳನು ಒಟ್ಟಿನಲಿ
ಮೆಟ್ಟುತೇಳುವ ಹಲವು ಬಡಜನಂಗಳನು
ಚಟ್ಟವೇರುವ ಮುನ್ನ ಪದಕುಸಿದು ಪರಿನೋಳ್ಪೆ
ಕಟ್ಟಕಡೆಗದು ಖಚಿತ | ಜಗದಮಿತ್ರ
ಆರ ನೂರನುಮಾಡಿ ನೂರು ಮುನ್ನೂರೆಂದು
ಹಾರೋಡಿ ಇರಿಸಿ ಹಣವನು ಬೆಳೆಯುವವನೇ
ವಾರಾನ್ನದಿಂ ಕಲಿವ ಮಕ್ಕಳನು ನೋಡಿಕಲಿ
ಭಾರವಪ್ಪುದು ಹೋಗೆ | ಜಗದಮಿತ್ರ
ಹಣವು ಅಧಿಕಾರ ಯೌವ್ವನವು ಮೇಳೈಸಿರಲು
ಗುಣವ ಸುಟ್ಟುರಿವೆ ಬಲು ಬಣಿವೆಗಳಮಾಡಿ
ಕಣಕಣದಿ ಕಾಮಾಂಧನಾದ ಲೋಲುಪನಿನ್ನ
ಅಣಕಿಸುವ ದಿನಬಹುದು | ಜಗದಮಿತ್ರ
ಯಶವು ಜಯಸಿರಿಯು ನಸುನಕ್ಕು ತಾನಡಿಯಿಡಲು
ಪಶುವಪ್ಪೆ ಮರೆತು ಕರ್ತವ್ಯ ಕುಲುಮೆಗಳ
ವಶವಾದ ಸಿರಿಯೊಮ್ಮೆ ಕೃಶವಾಗಿ ಕರಗಿರಲು
ಅಶನಕಲೆವಂತಕ್ಕು | ಜಗದಮಿತ್ರ
ದರ್ಪದೊಳು ರಾಜ್ಯಪದ ಪಟ್ಟಗಳ ಸುಖ ಪಡೆದು
ಅರ್ಪಿಸಿದರೆಲ್ಲ ತನು-ಮನ-ಧನವ ಮರಳಿ
ದರ್ಪಣದಿ ಕಂಡ ಸಿರಿಸಂಪತ್ತೆಲ್ಲ ನಮದಲ್ಲ
ತರ್ಪಣವ ಬಿಡು ಅದಕೆ | ಜಗದಮಿತ್ರ
ಸಂಪಾದಕನು ತಾನು ತಂಪೆರೆವೆ ಹಲಜನಕೆ
ಕಂಪು ಕಸುವಿನ ಸರಕು ಕೊಡುವ ಮದವೇರೆ
ಇಂಪಾಗಿ ಹಾಡುವಗೆ ಧ್ವನಿಪಟಲ ಒಡೆದಂತೆ
ಜೋಂಪು ಹಿಡಿವುದು ನಿನಗೆ | ಜಗದಮಿತ್ರ
ನಾನೆಂಬ ಪದವನ್ನು ಕಡೆಗಣಿಸು ಜೀವನದಿ
ಹೀನಬುದ್ಧಿಯ ತೊರೆದು ಅನುಕ್ಷಣ ಕ್ಷಣದಿ
ಆನೆಬಲ ಅಸುರಬಲ ಎನಿತೂ ನೆಮ್ಮದಿ ಥರದು
ಮಾನವನು ನೀನಾಗು | ಜಗದಮಿತ್ರ
[ದರ್ಪಣದಿ ಕಂಡ ಸಿರಿಸಂಪತ್ತೆಲ್ಲ ನಮದಲ್ಲ
ReplyDeleteತರ್ಪಣವ ಬಿಡು ಅದಕೆ | ಜಗದಮಿತ್ರ]
ಬಲು ಮೆಚ್ಚುಗೆಯಾಯ್ತು.
ಅರ್ಥಪೂರ್ಣ ಕಗ್ಗಗಳು. ಸಾತ್ವಿಕ ಆಶಯಗಳನ್ನೊಳಗೊಂಡ ಈ ಕಗ್ಗಗಳು ಅರ್ಹರಿಗೆ ದಾರಿದಿವಿಗೆಯಾಗಲಿ. ನಿಮಗೆ ಧನ್ಯವಾದಗಳು.
ReplyDeleteಜಗದಮಿತ್ರ ರಚಿಸಿ ಹಾಡಿರುವ ಅಹ೦ಕಾರದ ಕುರಿತಾದ ಈ ಕವನ ತು೦ಬಾ ಚೆನ್ನಾಗಿ, ಅರ್ಥಪೂರ್ಣವಾಗಿ ಮೂಡಿದೆ.
ReplyDeleteGood one sir...
ReplyDeleteLittle hard to digest.
ತು೦ಬಾ ಚೆನ್ನಾಗಿದೆ.
ReplyDeleteಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಆಗಾಗ ಶನಿಕಾಟ ತಪ್ಪಿದ್ದಲ್ಲ, ಸೆಲ್ಲು ಮತ್ತು ನೆಟ್ಟು ಎರಡೂ ಕೆಲವೊಮ್ಮೆ ಕೈಕೊಟ್ಟು ಕೂರುತ್ತವೆ. ಹೀಗಾಗಿ ನಾನು ಮಿತ್ರರ ಬ್ಲಾಗ್ ಗಳಿಗೆ ಬರಲಾಗುತ್ತಿಲ್ಲ, ದಯವಿಟ್ಟು ಕ್ಷಮಿಸಿ, ಇದು ಕೆಲವುದಿನ ಮಾತ್ರ, ಆಮೇಲೆ ಮಾಮೂಲು, ಓದಿದ ,ಪ್ರತಿಕ್ರಿಯಿಸಿದ ಎಲ್ಲಾಮಿತ್ರರಿಗೆ ಧನ್ಯವಾದಗಳು
ReplyDelete