ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 5, 2010

ಯಕ್ಷಗಾನ-ದಶಾವತಾರಕಥೆಗಳಿಗೆ ಮೀಸಲಾಗಿರಲಿ


ಯಕ್ಷಗಾನ-ದಶಾವತಾರಕಥೆಗಳಿಗೆ ಮೀಸಲಾಗಿರಲಿ


ಕರಾವಳಿ ಜಿಲ್ಲೆಗಳ ಯಕ್ಷಗಾನವನ್ನು ನಮ್ಮ ಪೂರ್ವಜರು ಅತ್ಯಂತ ಬೇಸರದ ದಿನಗಳಾದ ಮಳೆಗಾಲದಲ್ಲಿ ಅವರ ಸಮಯಕಳೆಯುವದರ ಜತೆಗೆ ದೇವರ ಸೇವೆ ಎಂಬರೀತಿ ನಡೆಸಿಕೊಂಡು ಬಂದರು. ಅಂದಿನ ಪುಣ್ಯಪುರುಷರು ಬರೆದ ಆ ರಸಗವಳಗಳಲ್ಲಿ ಅದ್ಬುತ ಪ್ರಾಸಬದ್ಧ ಸಾಹಿತ್ಯ, ಪೂರಕ ಅರ್ಥ ಮತ್ತು ನವರಸಗಳ ರಸಪಾಕ ಇಳಿಸಿ ಸೋಸಿಕೊಟ್ಟ ಜಗನ್ನಿಯಾಮಕ ಮಹಾವಿಷ್ಣುವಿನ ದಶಾವತರದ ಕಥೆಗಳೇ ಅಡಕವಾಗಿವೆ. ರಾಮಾಯಣ, ಮಹಾಭಾರತ ಅಥವ ಭಾಗವತದಲ್ಲಿ ಬರುವ ಎಲ್ಲಾ ಕಥಾಭಾಗಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಹಾಗೆ ಅಲ್ಲಿಬರಬಹುದಾದ ಘಟನೆಗಳನ್ನೇ ಆಧರಿಸಿ ಹಾಸ್ಯಹೂರಣವನ್ನೂ ತುಂಬಿದರು. ಆದರೆ ಮೂಲಕಥಾಭಾಗಗಳಿಗೆ ಎಲ್ಲೂ ಘಾಸಿಯಾಗದಂತೇ, ಎಲ್ಲೂ ಆಭಾಸವಾಗದಂತೇ ಪ್ರಸಂಗಗಳನ್ನು ರಚಿಸಿದರು. ಅವುಗಳನ್ನು ಮೂಲವಾಗಿ ತಾಳಮದ್ದಲೆ ಎಂಬುದಾಗಿ ಪ್ರಾಯೋಗಿಕವಾಗಿ ಉಪಯೋಗಿಸಿ ಆಮೇಲೆ ನಾನಾ ಆವಿಷ್ಕಾರಗಳನ್ನು ಹಂತಹಂತವಾಗಿ ರೂಪಿಸಿದರು. ಇಂತಿಂತಹ ಪಾತ್ರಗಳಿಗೆ ಇಂತಿಂತಹ ವೇಷಭೂಷಣಗಳೆಂಬ ಒಂದು ಸತ್ಸಂಪ್ರದಾಯವನ್ನು ಹುಟ್ಟುಹಾಕಿದರು.

ಸಭಾಲಕ್ಷಣ ಅಥವಾ ಸಭಾಪೂಜೆಯೊಂದಿಗೆ ಪ್ರಾರಂಭವಾಗುತ್ತಿದ್ದ ರಂಗಪ್ರಸಂಗ ತನ್ನೊಳಗೆ ಆದಿಪೂಜಿತನಾದ ಗಣಪನನ್ನು ಸ್ತುತಿಸಿ ಅಮೇಲೆ ಶಾರದಂಬೆಯನ್ನೂ ಹಲವು ಕವಿಜನರನ್ನೂ ಒತ್ತಟ್ಟಿಗೆ ನಮಿಸಿ ನಂತರ ಹೆಣ್ಣುವೇಷ, ಬಾಲಗೋಪಾಲರವೇಷ ಹೀಗೇ ಸಾಗಿ ಆನಂತರದಲ್ಲಿ ತೆರೆಕುಣಿತದೊಂದಿಗೆ ಸಭಾಲಕ್ಷಣಭಾಗ ಅಂತ್ಯವಾಗಿ ಪ್ರಮುಖ ಆಖ್ಯಾನದ ಕಥಾಭಾಗ ಪ್ರಾರಂಭಗೊಳ್ಳುತ್ತಿತ್ತು. ಪೂರ್ಣರಾತ್ರಿ ನಡೆಸಲ್ಪಡುವ ಈ ಯಕ್ಷಗಾನ ಅಂದಿನ ಆ ಕಾಲದಲ್ಲಿ ದೀವಟಿಗೆಗಳ ಬೆಳಕಿನಲ್ಲಿ ನಡೆಸಲ್ಪಡುತ್ತಿತ್ತು ಎಂಬುದು ತಿಳಿದುಬರುತ್ತದೆ. ಓದಲು ಬರೆಯಲು ಬಾರದ ಹಳ್ಳಿಯಜನರಿಗೂ ಸೇರಿದಂತೆ ಸಮಸ್ತಸಮಾಜಕ್ಕೆ ಒಳಿತನ್ನು ಪೌರಾಣಿಕ ಕಥೆಗಳ ಮೂಲಕವೇ ತಿಳಿಹೇಳುತ್ತಿದ್ದ ಕಾಲ ಅದಾಗಿತ್ತು. ಸಮಾಜದ ದ್ವೇಷ-ವೈಷಮ್ಯ, ದುಃಖ-ದುಮ್ಮಾನ, ಕಷ್ಟಕಾರ್ಪಣ್ಯ, ನೋವು-ನಲಿವು ಎಲ್ಲವನ್ನೂ ಸಮಷ್ಟಿಯಲ್ಲಿ ಬರುವಂತೇ ಬ್ಯಾಲೆನ್ಸಿಂಗ್ ಆಕ್ಟ್ ನಡೆಸುವುದು ಯಕ್ಷಗಾನದ ಉದ್ದೇಶವಾಗಿತ್ತು.

ಇಂತಹ ಕಥಾಭಾಗವನ್ನು ರಾಗ,ತಾಳ, ಲಯ-ಲಾಲಿತ್ಯಗಳಿಂದ, ಹಾವ-ಭಾವ ಭಂಗಿಗಳಿರುವ ಅತಿವಿಶಿಷ್ಟ ಕುಣಿತಗಳಿಂದ ಜನರನ್ನು ರಂಜಿಸುವಲ್ಲಿ ಸಮಗ್ರ ಕಲೆಯಾಗಿ ಯಕ್ಷಗಾನ ನಡೆದುಬಂದಿತ್ತು. ಪ್ರಾಯಶಃ ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಕೂಡ ಇದು ಸರಿಯಾಗೇ ನಡೆದಿತ್ತೆಂದರೆ ತಪ್ಪಾಗಲಿಕ್ಕಿಲ್ಲ! ಹಲವಾರು ಕಲಾವಿದರು ತಮ್ಮ ತಮ್ಮಲ್ಲೇ ಆ ಕಲೆಯ ಅಭಿವ್ಯಕ್ತಿಯನ್ನು ಸಾದರಪಡಿಸುವಲ್ಲಿ ಒಳ್ಳೆಯ ಕಂಠಸಿರಿಯಿಂದ ಭಾಗವತಿಕೆಯನ್ನೂ, ಲಯದ ಹದವರಿತು ಮದ್ದಲೆಯನ್ನೂ, ಪೂರಕವಾಗಿ ಗಚ್ಚುಗಾರಿಕೆಗಾಗಿ ಚಂಡೆಯನ್ನೂ ಮೈಗೂಡಿಸಿಕೊಂಡು ತೋರ್ಪಡಿಸಿದರೆ, ಕುಣಿತದಲ್ಲಿ ಹಾಗೂ ಮಾತುಗಾರಿಕೆಯಲ್ಲಿ ತಮ್ಮದೇ ಆದ ಘನತೆ,ಗಾಂಭೀರ್ಯ ಮತ್ತು ಪಾಂಡಿತ್ಯವನ್ನು ಪ್ರದರ್ಶಿಸಲು ಮುಮ್ಮೇಳದ ಕಲಾವಿದರು ಅವಿರತ ಶ್ರಮವಹಿಸುತ್ತಿದ್ದರು. ಯಕ್ಷಗಾನವನ್ನು ಕೇವಲ ಹೊಟ್ಟೆಪಾಡಿಗಾಗಿ ಅಳವಡಿಸಿಕೊಳ್ಳದೇ ರಂಜನೀಯ ಕಲಾಪ್ರಾಕಾರವಾಗಿ, ಸಮಾಜದ ಸೇವೆಯಾಗಿ ತನ್ಮೂಲಕ ಜನತಾಜನಾರ್ದನ ಸೇವೆಯಾಗಿ ಅದನ್ನು ನಡೆಸಿಕೊಡುತ್ತಿದ್ದರು. ಬಹುತೇಕ ಬಯಲಾಟಗಳೇ ನಡೆಯುತ್ತಿದ್ದ ಆ ಕಾಲದಲ್ಲಿ ಎಲ್ಲವೂ ಪೌರಾಣಿಕ ಪ್ರಸಂಗಗಳೇ ಆಗಿದ್ದವು. ನೋಡಿದ ಪ್ರಸಂಗವನ್ನೇ ನೋಡಲು ಬೇಸರವೇನೂ ಆಗುತ್ತಿರಲಿಲ್ಲ. ಕಾರಣವಿಷ್ಟೇ: ಒಂದೇ ಹಾಡನ್ನು ಹಲವರ ಕಂಠಸಿರಿಯಲ್ಲಿ ಹಲವು ರಾಗಗಳಲ್ಲಿ ನಾವು ಸಂಗೀತರಂಗದಲ್ಲಿ ಬಹಳಸರ್ತಿ ಕೇಳುವಂತೇ ಇಲ್ಲೂ ಕಲಾವಿದರು ಬದಲಾಗುತ್ತಿದ್ದರು, ಅಥವಾ ಉಳಿದ ರಂಗಭೂಮಿಯಂತೇ ಬಾಯಿಪಾಠ ಯಾ ಕಂಠಪಾಠಮಾಡಿ ಹೇಳುವ ಸಂಭಾಷಣೆಗಳು ಇಲ್ಲವಾದುದರಿಂದ ಪ್ರತೀದಿನ ಅದೇ ಪ್ರಸಂಗದ ಪುನರಾವರ್ತನೆಯಾದರೂ ಅರ್ಥಗಾರಿಕೆಯಲ್ಲಿ ವ್ಯತ್ಯಾಸವನ್ನು ಕಾಣಬಹುದಿತ್ತು. ಕೆಲವೊಮ್ಮೆ ಅತೀ ಉತ್ಕೃಷ್ಟ ಸನ್ನಿವೇಶಗಳು ಪಾತ್ರಧಾರಿಗಳ ಮಾತಿನ ಚಕಮಕಿಯಿಂದಲೋ ಅಥವಾ ಕುಣಿತದ ಭಂಗಿಗಳ ಪೈಪೋಟಿಯಿಂದಲೋ ಜನರಿಗೆ ಹರ್ಷವನ್ನು ತಂದುಕೊಡುತ್ತಿದ್ದವು.

೬೦ರ ದಶಕದ ನಂತರ ಕಾಲದಲ್ಲಿ ಬಹಳ ಪರಿವರ್ತನೆಗಳಾದವು. ಬಯಲಾಟದ ತಂಡಗಳೆಲ್ಲಾ ವ್ಯವಸಾಯೀ ಮೇಳಗಳಾಗಿ ತಂಬು-ಗುಡಾರ ಸಮೇತ ತಮ್ಮ ಬಿಡಾರವನ್ನು ಊರಿಂದೂರಿಗೆ ವರ್ಗಾಯಿಸುತ್ತ ಟಿಕೆಟ್ ಇಟ್ಟು ಆಟ ಆಡಿದರು. ಸಲ್ಲಬೇಕಾದ ಗೌರವವೇ, ತಪ್ಪೇನಿರಲಿಲ್ಲ. ಒಂದೊಂದು ಮೇಳಕ್ಕೂ ಒಬ್ಬೊಬ್ಬ ಯಜಮಾನರು, ಅವರ ಕೆಳಗೆ ಮೇಳದ ದಿನದ ವಹಿವಾಟಿನ ಉಸ್ತುವಾರಿಗೆ ಸಂಬಳದ ಮೇಲೆ ವ್ಯವಸ್ಥಾಪಕರು ಅವರ ಕೆಳಗೆ ಕಲಾವಿದರು, ತಂಬುಕಟ್ಟುವವರು ಹೀಗೇ ಎಲ್ಲರೂ ಸಮಯಕ್ಕನುಗುಣವಾಗಿ ತಂತಮ್ಮ ಕೆಲಸದಲ್ಲಿ ನಿರತರಾಗಿರುತ್ತ ಮೇಳವನ್ನು ನಡೆಸುವಲ್ಲಿ ಸಹಕರಿಸುತ್ತಿದ್ದರು. ಆನಂತರ ಕಂತ್ರಾಟುದಾರರು ತಯಾರಾದರು. ಓಮ್ದು ಪ್ರಸಂಗಕ್ಕೆ ಇಂತಿಷ್ಟು ಅಂತ ಮೇಳದ ಯಜಮಾನರಿಗೆ ಕೊಟ್ಟುಬಿಡುವುದು, ಟಿಕೆಟ್ ಕಂತ್ರಾಟುದಾರರೇ ವಿತರಿಸಿಕೊಂಡು ಬರುವ ಹೆಚ್ಚಿನ ಹಣವನ್ನು ಯಾವುದೋ ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಲು ಆರಂಭಿಸಿದರು.

ಸಿನಿಮಾ ಮತ್ತು ಟಿವಿ ಮಾಧ್ಯಮ ಪ್ರಚಾರಕ್ಕೆ ಬಂದಮೇಲೆ, ಬಳಕೆ ಜಾಸ್ತಿಯಾದಮೇಲೆ, ಯುವಜನಾಂಗ ತಮ್ಮ ಉದರಂಭರಣೆಗಾಗಿ ಪರಊರಿಗೆ ಹೊರಟಮೇಲೆ ಯಕ್ಷಗಾನದ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂತು. ಮೇಳಗಳನ್ನು ನಡೆಸುತ್ತಿದ್ದ ಯಜಮಾನರುಗಳು ಕೈಸುಟ್ಟುಕೊಂಡರು. ಹಾಗೂ ಹೀಗೂ ಹತ್ತಾರು ವರ್ಷ ಸಾಲದಲ್ಲೋ ಸೋಲದಲ್ಲೋ ನಡೆಸುತ್ತ ಆಮೇಲೆ ಮೇಳದ ಬೋರ್ಡುಮಾತ್ರ ಹಾಗೇ ಇಟ್ಟುಕೊಂಡು ಮಿಕ್ಕುಳಿದ ತಂಬು-ತುರಾಯಿಗಳನ್ನು ಹುಟ್ಟಿದಷ್ಟಕ್ಕೆ ಮಾರಾಟಮಾಡಬೇಕಾಗಿ ಬಂದದ್ದು ಕಾಲಘಟ್ಟದಲ್ಲಿ ನಡೆದ ವಿಪರ್ಯಾಸ. ಈ ದಿಸೆಯಲ್ಲಿ ದಿ| ಕೆರೆಮನೆ ಶಂಭು ಹೆಗಡೆಯವರು ತಮ್ಮ ಮುಂದಾಲೋಚನೆಯಿಂದ ಬಹಳ ಶೀಘ್ರವಾಗಿ ಮೇಳವನ್ನು ಮೊಟಕುಗೊಳಿಸಿ ಕಾಲಮಿತಿ ಪ್ರಯೋಗವೆಂಬ ಹೊಸತನವನ್ನು ರೂಪಿಸಿದರು. ಕೇವಲ ೩ ಘಂಟೆಯಲ್ಲಿ ಪ್ರಸಂಗವನ್ನು ಮುಗಿಸುವ ಪರಿಪಾಠ ಬೆಳೆಯಿತು. ಆನಂತರ ಹಲವರು ಅವರನ್ನು ಅನುಸರಿಸಿದರು.

ಯಕ್ಷಗಾನದ ನಿಜವಾದ ಅಭಿವ್ಯಕ್ತಿ ಬರುವುದು ಅದನ್ನು ಪ್ರಸಂಗದಲ್ಲಿ ಇರುವ ಎಲ್ಲಾ ಹಾಡುಗಳನ್ನೂ ಸನ್ನಿವೇಶಗಳನ್ನೂ ಬಳಸಿ ಪ್ರದರ್ಶಿಸಿದಾಗ ಮಾತ್ರ! ಹಾಡುಗಳನ್ನು ಕತ್ತರಿಸಿ, ಅರ್ಥವನ್ನೂ ಮೊಟಕುಗೊಳಿಸಿ ಮಾಡುವ ಯಕ್ಷಗಾನ ಹೊಸದಾಗಿ ನೋಡುವವರಿಗೆ ಅರ್ಥವಾಗದೇ ಹೋದರೆ ಹಳಬರಿಗೆ ಹುಣಿಸೇಹಣ್ಣು ತಿಂದ ಅನುಭವ! ಏತನ್ಮಧ್ಯೆ ತೆಂಕು-ಬಡಗು-ಬಡಾಬಡಗು ಎಂಬ ಮೂರುತೆರನಾದ ಯಕ್ಷಗಾನ ತಿಟ್ಟುಗಳಲ್ಲಿ ಕೆಲಸಕ್ಕೆ ಬಾರದ ಏನನ್ನೋ ಕೂಗುವ ಭಾಗವತರುಗಳು ಹುಟ್ಟಿಕೊಂಡರು! ಇಂದು ಇಲ್ಲಿ ನಾಳೆ ಮತ್ತೆಲ್ಲೋ, ಒಟ್ಟಿನಲ್ಲಿ ದುಡ್ಡಿಗಾಗಿ ಕಲೆಯನ್ನು ಪ್ರಚುರಪಡಿಸುವ ’ಕಲಾವಿದರೇ’ ಜಾಸ್ತಿಯಾದರು. ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಟ್ಟರೆ ಮಿಕ್ಕುಳಿದಂತೇ ಎಲ್ಲೂ ಯಕ್ಷಗಾನದ ವೃತ್ತಿನಿರತ ಪರಿಪೂರ್ಣ ಮೇಳಗಳಿಲ್ಲ. ಕಲಾವಿದರು ಕಟ್ ಆಂಡ್ ಪೇಸ್ಟು ! ನೀವೇ ಓದಿದ ಹಲವಾರು ಹ್ಯಾಂಡ್ ಬಿಲ್ ಗಳಲ್ಲಿ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಪರಿಗಣಿಸಿ, ಬಹುತೇಕ ಎಲ್ಲರೂ ಎಲ್ಲಕಡೆಗೂ ಇರುತ್ತಾರೆ! ಹೀಗಾಗಿ ಇಂಥವರು ಇಂಥಾ ಮೇಳಕ್ಕಷ್ಟೇ ಸೀಮಿತ ಎಂಬ ಕಾಲ ಹೊರಟುಹೋಗಿದೆ. ಇದನ್ನೂ ಸಹಿಸಿಕೊಳ್ಳೊಣ.

ಆದರೆ ದುರದೃಷ್ಟವೆಂದರೆ ಪೌರಾಣಿಕ ಪ್ರಸಂಗಗಳು ನಿಧಾನವಗಿ ಮರೆಯಾಗಿ ಸಾಮಾಜಿಕ ಪ್ರಸಂಗಗಳು ಕಾಲಿಟ್ಟಿವೆ. ಕಮರ್ಷಿಯಲ್ ಸಿನಿಮಾಗಳ ರೀತಿಯಲ್ಲೇ ಯಾವುದೋ ರಾಜ, ಒಂದು ಯುದ್ಧ, ಒಂದೆರಡು ಹಾಸ್ಯಮಯ ಸನ್ನಿವೇಶ, ಒಂದು ಡ್ಯೂಯೆಟ್ ಇದೆಲ್ಲಾ ಶುರುವಾಗಿ ಇದೂ ಯಕ್ಷಗಾನವೇ ? ಎಂದು ನಮ್ಮಂತರಂಗವನ್ನೇ ನಾವು ಕೇಳಿಕೊಳ್ಳಬೇಕಾದ ಸಮಯ ಬಂದಿದೆ. ಸಾಮಾಜಿಕ ಪ್ರಸಂಗ ಅದು ಎಷ್ಟೇ ಚೆನ್ನಾಗಿದ್ದರೂ ಪೌರಾಣಿಕ ಸತ್ಯಗಳನ್ನು, ಸತ್ವಗಳನ್ನು ಹೊಂದಿರಲು ಸಾಧ್ಯವಿಲ್ಲ, ಮತ್ತು ಜನತೆ ಪರಮಾತ್ಮನ ಕ್ರಿಯೆಗಳನ್ನು ಒಪ್ಪಿಕೊಳ್ಳುವುದಕ್ಕೂ ಯಾವುದೋ ಸಾಮಾಜಿಕ ಪುರುಷನ ಕ್ರಿಯೆಗಳನ್ನು ಒಪ್ಪಿಕೊಳ್ಳುವುದಕ್ಕೂ ಅಜಗಜಾಂತರವಿದೆ. ಇಂದಿನ ಯುವ ಪೀಳಿಗೆಗೆ ಒಳ್ಳೆಯ ಸಂದೇಶಗಳು ಸಿಗಬೇಕಾದ ಕಾಲ ಹೋಗಿ ಪ್ರೇಕ್ಷಕರಲ್ಲೂ ಸಿನಿಮಾ ನೋಡುವಂತೇ ಕಳಪೆ ತರಗತಿಯ ಪ್ರೇಕ್ಷಕರು ತಯಾರಾಗುತ್ತಿದ್ದಾರೆ. ಸಂಪ್ರದಾಯ ಬದ್ಧ ಯಕ್ಷಕಲಾಭಿಮಾನಿಗಳಿಗೆ ಇದು ನುಂಗಲಾರದ ಬಿಸಿತುತ್ತಾಗಿದೆ. ಆದರೂ ಯಕ್ಷಗಾನವೇ ಮರೆಯಾಗಬಾರದೆಂಬ ಒಂದೇ ಸದಾಶಯದಿಂದ ನನ್ನಂತಹ ಹಲವು ಪ್ರೇಕ್ಷಕರು ಸುಮ್ಮನೇ ಸಹಿಸಿ ಕಣ್ಣು ಕಣ್ಣು ಬಿಡುತ್ತಿದ್ದೇವೆ!

ದಿ| ಶಂಭುಹೆಗಡೆ ಅಥವಾ ದಿ| ಮಹಾಬಲ ಹೆಗಡೆಯವರು ಪೌರಾಣಿಕ ಪ್ರಸಂಗಗಳ ಹೊರತು ಒಂದೇ ಒಂದು ಹೆಜ್ಜೆಯನ್ನು ಬೇರೆಡೆ ಇಡಲಿಲ್ಲ. ಯಕ್ಷಗಾನದ ಪೌರಾಣಿಕ ಮೌಲ್ಯವರ್ಧನೆಗೆ ಕೆರೆಮನೆಯವರ ಕೊಡುಗೆ ಬಹಳ. ಕೆರೆಮನೆ ಮೇಳ ಇಂದು ಹೊರಗಿನ ಹಲವು ಕಟ್ ಆಂಡ್ ಪೇಸ್ಟ್ ಕಲಾವಿದರನ್ನೇ ಕರೆತಂದು ಪ್ರಸಂಗ ಮಾಡಿದರೂ ಪೌರಾಣಿಕ ಪ್ರಸಂಗವನ್ನು ಮಾತ್ರ ನಡೆಸುವುದು ಮೆಚ್ಚತಕ್ಕ ವಿಷಯ. ಇದು ಶಂಭುಹೆಗಡೆಯವರ ಆಶಯವಾಗಿತ್ತು. ಹೇಳಬೇಕೆಂದರೆ ಮುಖ್ಯವಾಗಿ ದಕ್ಷಿಣಕನ್ನಡ ಜಿಲ್ಲೆಯ ಮೇಳಗಳಲ್ಲಿ ಕೆಲವು ಮೇಳಗಳು ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ನೂತನ ಸಾಮಜಿಕ ಪ್ರಸಂಗಗಳನ್ನು ಆಡುತ್ತಿದ್ದಾರೆ. ಇದು ನನಗನಿಸಿದಂತೇ ಖಂಡನಾರ್ಹ ಬೆಳವಣಿಗೆ. ಇದಲ್ಲದೇ ಒಂದೇ ರಾತ್ರಿ ಒಳ್ಳೊಳ್ಳೆಯ ನಾಲ್ಕಾರು ಪೌರಾಣಿಕ ಪ್ರಸಂಗಗಳನ್ನು ಅಡುವುದು ಆ ಪ್ರಸಂಗಗಳಿಗೆ ಮಾಡುವ ಅಪಚಾರ. ಕಲಾವಿದರನೇಕರನ್ನು ಒಗ್ಗೂಡಿಸಿ ಕಂತ್ರಾಟು ತೆಗೆದುಕೊಂಡು ನಗರಗಳಲ್ಲಿ ಈ ಥರರ ಪ್ರಯೋಗ ನಡೆಸುತ್ತಿರುವವರು ಬಹಳಜನ ಇದ್ದಾರೆ. ಸ್ವಾಮೀ ನಿಮ್ಮ ಜೇಬು ತಾತ್ಕಾಲಿಕವಾಗಿ ತುಂಬಬಹುದು, ಪ್ರಸಂಗದ ಔಚಿತ್ಯ ಮರೆಯಾಗಿ, ಕಲೆಯ ಕೊಲೆಯಾಗಿ ಎಲ್ಲ ಪ್ರಸಂಗಗಳೂ ಚೌ ಚೌ ಆಗಿ ಯಕ್ಷಗಾನವನ್ನು ನೊಡಿದ್ದ ಮೊದಲಿನ[ಹಳೆಯ] ಖುಷಿಯೂ ಅಳಿಸಿಹೋಗಿ ಹೇಸಿಗೆಹುಟ್ಟಬಹುದು.
ಎರಡು ಚಿಕ್ಕ ಪ್ರಸಂಗಗಳು ಅಥವಾ ಒಂದೇ ದೊಡ್ಡ ಪ್ರಸಂಗವಿದ್ದರೆ ಸಾಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.


ನಾನು ಯಕ್ಷಗಾನ ಕಲವಿದರಲ್ಲಿ ಒಂದು ಪ್ರಾಮಾಣಿಕ ಹಾಗೂ ನೇರ ವಿನಂತಿಯನ್ನು ಮಾಡಲು ಬಯಸುತ್ತೇನೆ:
ನಿಮ್ಮಲ್ಲಿ ಬಹುತೇಕರು ಬಡವರು, ಸ್ಥಿತಿವಂತರಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಅನಿವಾರ್ಯ ಸಹಜ ವಿಷಯ. ಜೀವನದಲ್ಲಿ ನೀವು ಹಣಗಳಿಕೆಯನ್ನೇ ಮುಖ್ಯಗುರಿಯಾಗಿ ಇಟ್ಟುಕೊಳ್ಳದೇ, ಊಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡು [ನೌಕರಿಯೋ, ಬೇರೇ ವೃತ್ತಿಯೋ, ಕೃಷಿಯೋ ಇತ್ಯಾದಿ ] ಕೇವಲ ನಿಮ್ಮಲ್ಲಿರುವ ಕಲೆಯನ್ನು ಬಳಸಿ ಸಮಾಜದಲ್ಲಿ ಒಂದಷ್ಟು ಒಳಿತನ್ನು ಮಾಡಲು ಯಕ್ಷಗಾನವನ್ನು ಬಳಸಿ. ಯಾವುದೇ ಕಾಲಘಟ್ಟವನ್ನು ತೆಗೆದುಕೊಂಡರೂ ಕವಿ,ಕಲಾವಿದರು ಶ್ರೀಮಂತರೇನಲ್ಲ. ಇದು ಸಿನಿಮಾರಂಗದ ಕೆಲವರನ್ನು ಬಿಟ್ಟು ಅಲ್ಲೂ ಉಳಿದವರಿಗೆ ಅನ್ವಯಿಸುತ್ತದೆ. ಬಡತನದಲ್ಲೇ ಬದುಕಬೇಕೆಂದು ಬರೆದಿದ್ದರೆ ಅದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲವಲ್ಲ. ಹೀಗಾಗಿ ಕೇವಲ ಬಡತನ ನಿವಾರಣೆಗಾಗಿ ಕಲೆಯನ್ನು ಮಾಧ್ಯಮವಾಗಿ ಇಟ್ಟುಕೊಂಡು ಯಾಂತ್ರಿಕವಾಗಿ ಪಾತ್ರಪೋಷಣೆ ಮಾಡಿದರೆ ಅದರಲ್ಲಿ ಹುರುಳಿರುವುದಿಲ್ಲ. ದುಡ್ಡು ಬೇಕು ನಿಜ, ದುಡ್ಡಿಗಿಂತ ನಿಮ್ಮ ಸೇವಾ ಮನೋಭಾವ ನಿಮ್ಮನ್ನು ಸತ್ತಮೇಲೂ ಜೀವಂತವಾಗಿಡಬಲ್ಲದು.

ವರಕವಿ ಬೇಂದ್ರೆ, ಖ್ಯಾತ ಕವಿ-ಸಾಹಿತಿ ಡೀವೀಜಿ ಇವರೆಲ್ಲಾ ಬಡತನದಲ್ಲೇ ಇದ್ದರು. ಡೀವಿಜಿಯವರಿಗೆ ಸನ್ಮಾನಮಾಡಿ ಕೊಟ್ಟ ಅಂದಿನ ಕಾಲದಲ್ಲಿ ಒಂದುಲಕ್ಷ ಮೊತ್ತದ ಹಣವನ್ನು ಅವರು ಬಳಸಲಿಲ್ಲ, ಬದಲಾಗಿ
ಅದನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಕೊಟ್ಟು ತಮ್ಮ ಔದಾರ್ಯಮೆರೆದರು. ಅವರು ತೀರಿಕೊಂಡಾಗ ಅವರಲ್ಲಿದ್ದ ಹಳೆಯ ಕಬ್ಬಿಣದ ಪೆಟ್ಟಿಗೆಯೊಂದನ್ನು ತೆರೆದು ನೋಡಿದಾಗ ಅವರಿಗೆ ಬಂದಿದ್ದರೂ ಉಪಯೋಗಿಸದೇ ಇದ್ದ ಹಲವು ಚೆಕ್ ಗಳು ಕಾಣಸಿಕ್ಕವು! ಹಾಗಂತ ಸನ್ಮಾನದ ಮರುದಿನವೇ ಮನೆಗೆ ಬಂದ ನೆಂಟರಿಗೆ ಕಾಫಿ-ತಿಂಡಿ ಕೊಡಲು ಸಾಮಗ್ರಿಯಿರದೇ ಪಕ್ಕದ ಶೆಟ್ಟರ ದಿನಸಿ ಅಂಗಡಿಗೆ ಚೀಟಿಕೊಟ್ಟು ಕಳಿಸಿ ದಿನವೆರಡರ ಮಟ್ಟಿಗೆ ಸಾಲದ ರೂಪದಲ್ಲಿ ಸಾಮಗ್ರಿ ಒದಗಿಸುವಂತೇ ಕೇಳಿದ ಮಹಾನುಭಾವರು ಡೀವೀಜಿ!

ಪ್ರೇಕ್ಷಕರಲ್ಲಿ ಮತ್ತು ಯಕ್ಷಗಾನ ಅಭಿಮಾನಿಗಳಲ್ಲಿ ಒಂದು ವಿಜ್ಞಾಪನೆ:
ಆದಷ್ಟು ಹೆಚ್ಚಿನ ರೀತಿಯಲ್ಲಿ ನಾವು ಕಲಾವಿದರಿಗೆ ಸಹಕರಿಸೋಣ. ಅವರಲ್ಲಿ ಅನೇಕರಿಗೆ ಕಾಯಿಲೆ-ಕಸಾಲೆ ಆದರೂ ಕೂಡ ಖರ್ಚಿಗೆ ಇಲ್ಲದ ಅಯೋಮಯ ಪರಿಸ್ಥಿತಿ ಇದೆ. ಕೆಲವರಂತೂ ಚಿಂತೆ ಮರೆಯಲು ಚಟಗಳ ದಾಸರಗಿದ್ದಾರೆ. ಹೀಗಿರುವಾಗ ಬೇರೆ ಬೇರೆ ವೃತ್ತಿಯಲ್ಲಿರುವ ನಾವು ನಮ್ಮ ಕೈಲಾದ ಮಟ್ಟಿಗೆ ಆರ್ಥಿಕವಾಗಿ ಕಲೆಯನ್ನು ಪೋಷಿಸಲು ನೆರವಾಗೋಣ ಎಂದು ಕೋರಿಕೊಳ್ಳುತ್ತೇನೆ. ಅಲ್ಲದೇ ಪೌರಾಣಿಕ ಪ್ರಸಂಗಗಳ ಉಳಿವಿಗಾಗಿ ಪೂರ್ಣರಾತ್ರಿ ಪ್ರದರ್ಶನಗಳನ್ನು ಪ್ರೋತ್ಸಾಹಿಸಲೂ ಕೂಡ ಪ್ರಾರ್ಥಿಸುತ್ತೇನೆ.

ಯಕ್ಷಗಾನದ ಅಭಿಮಾನಿಗಳಲ್ಲಿ ಇಷ್ಟನ್ನು ತೋಡಿಕೊಳ್ಳಬೇಕಿತ್ತು, ಹೇಳಿಕೊಂಡಿದ್ದೇನೆ. ಭರತ ಭೂಮಿಯ, ಅದರಲ್ಲೂ ಕರ್ನಾಟಕದ ಸಮಗ್ರ ಕಲೆಯಾದ ಯಕ್ಷಗಾನ ಚಿರಕಾಲ ತನ್ನತನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೆಗ್ಗಳಿಕೆ ಮತ್ತು ಕರ್ತವ್ಯಕೂಡ, ಈ ದಿಕ್ಕಿನಲ್ಲಿ ಯೋಚಿಸಿ ಹೆಜ್ಜೆ ಇರಿಸೋಣವೇ ? ನಮಸ್ಕಾರ.