ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 29, 2010

ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!



ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!

ಗಣಪತಿಯ ಬಗ್ಗೆ ಬರೆದರೆ ಅದಕ್ಕೆ ಕೊನೆಯೇ ಇರುವುದಿಲ್ಲ, ನಾವು ಮನುಜರಾಗಿರುವುದರಿಂದ ಬರೆಯುವುದಕ್ಕೆ ಆದಿ ಇರಬಹುದು ಆದರೆ ಅಂತ್ಯಕಾಣಿಸುತ್ತೇನೆ ಎಂದು ಹೇಳುವ ದಾರ್ಷ್ಟ್ಯತೆ ಯಾರಲ್ಲಿಯೂ ಇಲ್ಲ;ಯಾಕೆಂದರೆ ಗಣಪನ ವಿಷಯವೇ ಹಾಗೆ. ಗಣಪ ಎಂದರೆ ಆತನೊಬ್ಬ ಜನತೆಯ ಅತೀ ಪ್ರೀತಿಪಾತ್ರ ದೇವರು. ಬಹುತೇಕ ಎಲ್ಲಾ ಕಡೆ ಅವನ ವಿಗ್ರಹಗಳನ್ನು ನೋಡುತ್ತೇವೆ. ಬಿಂದು ರೂಪದಿಂದ ಪ್ರಾರಂಭಗೊಳ್ಳುವ ಆತನ ರೂಪ ಇಂಥದ್ದೇ ಎನ್ನಲಾಗದ ರೀತಿ ಹಬ್ಬಿ ಹರಡುತ್ತದೆ. ಬಹಳ ಸರ್ತಿ ನಾವು ಯಾರೋ ನಮ್ಮನ್ನು ಕರೆದು " ನೋಡ್ರೀ ಇಲ್ಲಿ ನಮ್ಮನೇಲಿ ಕುಂಬಳಕಾಯಿಯಲ್ಲಿ ಗಣಪ ಮೂಡಿದ್ದಾನೆ, ನಮ್ಮಲ್ಲಿ ಟೊಮೇಟೊ ದಲ್ಲಿ ಮೂಡಿದ್ದಾನೆ" ಎಂದೆಲ್ಲ ಹೇಳುತ್ತಿರುತ್ತಾರೆ. ಅಲ್ಲಲ್ಲಿ ಆಗಾಗ ಕಾಣಿಸಿಕೊಳ್ಳುವ ಸೊಂಡಿಲ ಆಕೃತಿಯನ್ನು ಗಣಪನಿಗೆ ಹೋಲಿಸಿ ಖುಷಿಪಡುತ್ತಾರೆ. ವಿನಾಯಕನೇ ಹಾಗೆ. ಆತ ವಿಶ್ವವ್ಯಾಪಿ-ವಿಶ್ವಂಭರ. ಹದಿನೇಳು ಅವತಾರಗಳಲ್ಲಿ ವಿಜೃಂಭಿಸಿ ಅಸುರರನ್ನು ಸದೆಬಡಿದು ಮಹಾಭಾರತವನ್ನು ಅದರೊಳಗಣ ಭಗವದ್ಗೀತೆಯನ್ನೂ ನಮಗೆ ಬರೆದು ಕರುಣಿಸಿದ ಗೀರ್ವಾಣ ಲಿಪಿಕಾರ! ಸೊಂಡಿಲಿನಲ್ಲಿರುವ ಬೆರಳರೀತಿಯ ಆಕಾರದ ಭಾಗದಿಂದ ಬರೆದದ್ದೇ ಗೀರ್ವಾಣ ಲಿಪಿ! ಅದು ಓಘ, ಅದು ಅಮೋಘ, ಅದು ಆಮೋದ,ಅದು ಪ್ರಮೋದ,ಅದು ವಿಕಟ, ಅದು ವಿಲಂಬ, ಅದು ನಿರ್ವಿಕಾರ, ಅದು ಸದಾಕಾರ, ಅದು ಸದಾಲಂಬ,ಅದು ನಿರಾಲಂಬ ಹೀಗೆ ಏನೆಲ್ಲಾ ಹೇಳಹೊರಟರೂ ಅದು ಗಣನಾಯಕನ ಸಹಸ್ರನಾಮಗಳಲ್ಲಿ ಒಂದಾಗುತ್ತದೆ.

ಮಕ್ಕಳಿಗೆ ಬಾಲಗಣಪ ಆಟದ ವಸ್ತುವಾಗಿ ಲಭಿಸಿದರೆ ಕೆಲವರಿಗೆ ಆತ ಸ್ನೇಹಿತ, ಹಲವರಿಗೆ ಆದಿ ಪೂಜ್ಯನಾದರೆ ಇನ್ನೂ ಕೆಲವರು ಅವನನ್ನು ಅಲಂಕಾರಿಕ ವಸ್ತುವಾಗಿ ಮನೆಯಲ್ಲಿ ಇಟ್ಟುಕೊಳ್ಳಬಯಸುವವರು. ಯಾವುದೇ ಮಡಿ-ಮೈಲಿಗೆ-ಭಯ-ಭಕ್ತಿ ಇವುಗಳನ್ನೆಲ್ಲ ಮೀರಿದ ಅತಿ ಹೃದಯಸ್ಪರ್ಶೀ ದೇವರು ನಮ್ಮ ಗಣೇಶ. ಹಲ್ಲನ್ನು ವಕ್ರವಾಗಿ ಹೊಂದಿರುವುದರಿಂದ ವಕ್ರತುಂಡ ಎಂತಲೂ, ಕೋಪದಲ್ಲಿ ಒಂದು ಹಲ್ಲನ್ನು ಚಂದ್ರನತ್ತ ಮುರಿದೆಸೆದು ಇನ್ನೊಂದು ಕೋರೆದಾಡೆಯನ್ನು ಮಾತ್ರ ಇಟ್ಟುಕೊಂಡಿರುವುದರಿಂದ ಏಕದಂತ ಎಂತಲೂ, ಕೃಷ್ಣಮೃಗದ ಕಣ್ಣನ್ನು ಹೋಲುವ ಸಣ್ಣ ಕಣ್ಣುಳ್ಳವನದುದರಿಂದ ಕೃಷ್ಣಪಿಂಗಾಕ್ಷ ಎಂತಲೂ,ಆನೆಯ ಬಹುತೇಕ ಮೇಲ್ನೋಟವನ್ನು ಪ್ರದರ್ಶಿಸುವುದರಿಂದ ಗಜವಕ್ತ್ರ ಎಂತಲೂ, ಉದ್ದನೆಯ ದೊಡ್ಡ ಹೊಟ್ಟೆಯನ್ನು ಪಡೆದು ಲಂಬೋದರನೆಂತಲೂ,ವಿಕಟ ನಾಟಕದ ಸಕ್ರಿಯ ರೂವಾರಿಯಾಗುವುದರಿಂದ ವಿಕಟನೆಂತಲೂ,ವಿಘ್ನವನ್ನು ಕಾರಕ-ವಿಘ್ನ ನಿವಾರಕ ಎರಡೂ ಆಗಿರುವುದರಿಂದ ವಿಘ್ನರಾಜೇಂದ್ರನೆಂದೂ,ಹೊಗೆಯಬಣ್ಣದಲ್ಲೂ ಕಾಣಿಸುವುದರಿಂದ ಧೂಮ್ರವರ್ಣ ಎಂತಲೂ, ಬಿದಿಗೆಯ ಚಂದ್ರನನ್ನು ಹೋಲುವುದರಿಂದ ಮತ್ತು ಚಂದ್ರನಿಂದ ಪೂಜಿತನಾಗಿ ಅವನನ್ನು ಧರಿಸಿರುವುದರಿಂದ ಭಾಲಚಂದ್ರ ಎಂತಲೂ, ನಾಯಕರಿಗೆ ನಾಯಕನಾದುದರಿಂದ ವಿನಾಯಕ ಎಂತಲೂ ವರ್ಣಿಸಲ್ಪಟ್ಟಿದ್ದಾನೆ.

ಹಲವಾರು ಗಾಡಿಗಳ ಮುಂಭಾಗದಲ್ಲಿ ಕುಳಿತು ಕಣ್ಣಿಗೆ ಹರುಷತರುವ ಈತ ಮನೆಗಳ ಮುಂಭಾಗದಲ್ಲಿ, ಕಾರ್ಖಾನೆಗಳ ಮುಂಭಾಗದಲ್ಲಿ, ವಸತಿ ಸಮುಚ್ಚಯ-ಆಸ್ಪತ್ರೆ-ಹೋಟೆಲ್ ಹೀಗೇ ಎಲ್ಲೆಂದರಲ್ಲಿ ಗಣೇಶನ ಅತಿ ಚಿಕ್ಕ ವಿಗ್ರಹದಿಂದ ಹಿಡಿದು ಅತಿ ದೊಡ್ಡವಿಗ್ರಹಗಳನ್ನು ಕಾಣಬಹುದು. ಬೆನಕನ ಮೂರ್ತಿ ಇದ್ದುಬಿಟ್ಟರೆ ಅದೊಂದು ಸೇಕ್ಯುರ್ಡ್ ಪ್ಲೇಸ್ ಟು ಲಿವ್-ಇನ್ ಎಂದುಕೊಳ್ಳುವವರು ಎಷ್ಟೋ ಮಂದಿ. ಕೆಲವೆಡೆ ಘಟ್ಟದ ರಸ್ತೆಗಳಲ್ಲಿ ಅಲ್ಲೆಲ್ಲೋ ಅಡ್ಡಸಿಕ್ಕು ಪೂಜೆಗೊಳ್ಳುವ ’ಹಾದಿ ಗಣಪತಿ’ ಕೂಡ ಇರುತ್ತಾನೆ. ದುರ್ಗಮ ಪ್ರದೇಶಗಳಲ್ಲಿ, ಕಾಡು-ಮೇಡುಗಳಲ್ಲಿ ಅಂಡಲೆಯುವವರು ಕಷ್ಟಕಳೆಯಲು ನೆನೆದರೆ ಮೀನುಗಾರರು, ಸಮುದ್ರಯಾನಿಗಳು ತಮ್ಮನ್ನು ಸಂಕಷ್ಟದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಆತನನ್ನು ಇಟ್ಟು ಪ್ರಾರ್ಥಿಸುತ್ತಾರೆ. ಶಾಲೆಗಳಲ್ಲಿ ನಿಂತು ವಿದ್ಯಾಗಣಪತಿ ಎಂಬ ಅಭಿದಾನ ಪಡೆದ ಈತ ಕಾಶಿಯಲ್ಲಿ ಡುಂಢಿರಾಜನಾಗಿದ್ದಾನೆ! ಇತ್ತೀಚೆಗೆ ದೃಷ್ಟಿಗಣೇಶ ಎಂಬ ಹೊಸ ನಾಮವನ್ನು ಪಡೆದು ಅಂಗಡಿ-ಮುಂಗಟ್ಟು ಹಾಗೂ ಮನೆ-ಮಹಲುಗಳಲ್ಲಿ ಚಿತ್ರರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅಂತೂ ಗಣಪತಿಯನ್ನು ಬಿಟ್ಟು ನಮಗೆ ಯಾವ ಪೂಜೆಯನ್ನು ಮಾಡಿದರೂ ಅದು ತೃಪ್ತಿ ತರುವುದಿಲ್ಲ.

ಇಂತಹ ಸುಮುಖ ಕೆಲವುಕಡೆ ದುರ್ಮುಖನಾಗಿಯೂ ಕಾಣುವುದರಿಂದ ಏಕದರಲ್ಲಿ ಅನೇಕ-ಅನೇಕದರಲ್ಲಿ ಏಕ ಎಂಬುದನ್ನು ತನ್ನ ಬಹುರೂಪೀ ಪ್ರಸ್ತುತಿಯೊಂದಿಗೆ ಸಾದರಪಡಿಸುತ್ತಾನೆ. ಈ ವಿನಾಯಕ ವಿವಾಹಿತ ಎನ್ನುವವರು ಕೆಲವರಾದರೆ ಈತ ಅವಿವಾಹಿತ ಅಂತ ನಂಬಿ ಪೂಜಿಸುವವರು ಹಲವರು. ಅಣಿಮಾ,ಗರಿಮಾ,ಲಘಿಮಾದಿ ಹಲವು ಮೂಲ ಶಕ್ತಿಗಳ ಆಗರವನ್ನು ತನ್ನಲ್ಲೇ ಇರಿಸಿಕೊಂಡು ಅನಂತ ಶಕ್ತಿ ಸಂದೋಹನೆಂಬ ಹೆಗ್ಗಳಿಕೆಗೆ ಪಾತ್ರನಾದ ಈತ ಹಲವು ಹತ್ತು ಕೈಗಳು, ತಲೆಗಳು, ವಿರಾಟ್ ರೂಪಗಳನ್ನೆಲ್ಲ ತೋರಿಸಿ ಪರಮಾತ್ಮನ ಪೂರ್ಣರೂಪವೆಂತಲೂ ಕರೆಯಲ್ಪಟ್ಟಿದ್ದಾನೆ. ಕಾರ್ಯಗಳಿಗೆ ಜಯವನ್ನು ತಂದುಕೊಡುವ ಸಿದ್ಧಿ ಮತ್ತು ಮನಸ್ಸಿಗೆ ಹೆಚ್ಚಿನ ಮಟ್ಟದ ಜ್ಞಾನವನ್ನು ಕೊಡುವ ಬುದ್ಧಿ ಈ ಈರ್ವರನ್ನೂ ಹೆಂಡಿರನ್ನಾಗಿ ಪಡೆದು ಸಿದ್ಧಿ-ಬುದ್ಧಿವಿನಾಯಕನಾಗಿದ್ದಾನೆ. ಹಲವರು ಕ್ಷೇತ್ರಗಳಲ್ಲಿ ಅಲ್ಲಲ್ಲಿ ಸ್ಥಾನಿಕವಾಗಿ ಏನನ್ನೋ ಪಡೆದು ಹರಸುತ್ತ-ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಕಡ್ಲೆಗಣಪತಿ, ಬಟ್ಟೆವಿನಾಯಕ,ಉಪ್ಪಿನಗಣಪತಿ, ಟಿಟ್ವಾಳಾ ಗಣಪತಿ, ಜಂಭುಗಣಪತಿ ಹೀಗೆಲ್ಲ ಹಲವಾರು ಹೆಸರಿನಿಂದ ಮೆರೆಯುತ್ತಾನೆ.

ಬಹುತೇಕ ಹಿಂದೂ ಹಿರಿಯಡಿಗೆಗಳಲ್ಲಿ ದೇವರಿಗೆ ಉಪ್ಪು ನಿಷಿದ್ಧ, ಆದರೆ ಉಪ್ಪಿನಲ್ಲೇ ಸಿಕ್ಕು ಪ್ರತಿಷ್ಠಾಪಿತನಾಗಿ ಉಪ್ಪನ್ನೇ ನೇರವಾಗಿ ಹರಕೆಯಾಗಿ ಪಡೆಯುವ ಉಪ್ಪಿನಗಣಪನಿದ್ದಾನೆ ! ಮಯವಾದ ಬಟ್ಟೆಯ ಗಂಟನ್ನು ತನ್ನ ಮೈಮೇಲೆ ಪ್ರದರ್ಶಿಸುವುದರ ಮೂಲಕ ತನಗೆ ಬಟ್ಟೆ ಎಂದರೆ ಪ್ರೀತಿ ಎಂಬುದಾಗಿ ಪರೋಕ್ಷ ತಿಳಿಸಿ ಅದನ್ನೇ ಹರಕೆಯಾಗಿ ಪಡೆದು ಹರಸುವ ಬಟ್ಟೆವಿನಾಯಕನಿದ್ದಾನೆ. ಇದೆಲ್ಲ ಹೇಗಿದ್ದರೂ ವಿನಾಯಕ ಎಲ್ಲ ಶಕ್ತಿಗಳ ಸಂಗಮವೆನ್ನಲು ಕಾರಣಗಳಿವೆ. ಈತನಿಗೆ ಅಲಂಕಾರವೂ ಬೇಕು, ಅಭಿಷೇಕವೂ ಬೇಕು, ನೈವೇದ್ಯವೂ ಭರಪೂರಬೇಕು[ಹಾಗಂತ ನೈವೇದ್ಯ ನೀಡದಿದ್ದರೆ ಒಣಗಣೇಶನಾಗಿಯೂ ಇರಲು ಸಿದ್ಧ!]--ಅಂದರೆ ಯಾವುದು ಬೇಡ ಈತನಿಗೆ?ತಿನ್ನುವ ಎಲ್ಲಾ ವಸ್ತುಗಳೂ ಅತ್ಯಂತ ಮೋದಕರ-ಅತ್ಯಂತ ಸತ್ವಭರಿತ, ನಡೆಸುವ ಎಲ್ಲಾಕಾರ್ಯಗಳೂ ಅಷ್ಟೇ ತತ್ವಪೂರಿತ, ತೋರುವ ಆಕಾರಗಳೂ ತತ್ವ ಪ್ರೇರಿತ. ಹರಿ-ಹರ-ಬ್ರಹ್ಮರನ್ನು ಸೇರಿಸಿದಂತಿರುವ ಈತ ಇವರೆಲ್ಲರ ಮೂಲವಾದ ಪರಬ್ರಹ್ಮ ಎಂಬ ತತ್ವವನ್ನು ಸಾರಿ ತೋರಿಸುತ್ತಾನೆ.

ದೇವರನ್ನು ಹೆಚ್ಚಾಗಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸುತ್ತಾರೆ. ಆದರೆ ನಮ್ಮ ಬೆನವನಿಗೆ ದಿಕ್ಕೇ ಇಲ್ಲ. ಅದರಲ್ಲೂ ನೆಗೆಟಿವ್ ಎನರ್ಜಿಯ ದಿಕ್ಕು ಎಂದೇ ಖ್ಯಾತವಾದ ದಕ್ಷಿಣದಿಕ್ಕಿಗೆ ಮುಖಮಾಡಿರುವ ಗಣೇಶ ಸಿಕ್ಕರೆ ಅಲ್ಲಿ ನಮಗೆ ಅದು ಕನ್ವಟ್ ಆಗಿ ಪಾಸಿಟಿವ್ ಎನರ್ಜಿ ಆಗುತ್ತದೆ ಎಂಬುದು ಬಹಳ ವಿಶೇಷ! ಮನೆಯ ಎದುರಿಗೇ ರಸ್ತೆಯೊಂದು ನೇರವಾಗಿ ಬಂದು ಸೇರುವಂತಿದ್ದರೆ ಅಲ್ಲಿ ಗಣೇಶನ ವಿಗ್ರಹವನ್ನು ಇಡುತ್ತಾರೆ, ನಡೆಯಬಹುದಾದ ವಾಹನ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಸಿಗಲೆಂದು ಹಾಗೆ ಮಾಡಿರುತ್ತಾರೆ.

ಉಳಿದ ದೇವತೆಗಳು ತಾವು ಮಾಡಿಕೊಂಡ ಉಪದ್ವ್ಯಾಪಕ್ಕೆ ಗಣೇಶನ ಮೊರೆಹೊಕ್ಕು ಪರಿಹಾರ ಕಂಡುಕೊಂಡಿದ್ದು ಸರ್ವೇ ಸಾಮಾನ್ಯ. ಯಾಕೆಂದರೆ ಅತೀ ಬುದ್ಧಿವಂತ ದೇವರಾದ ಈತನಿಗೆ ಯಾವುದಾದರೊಂದು ಹೊಸಮಾರ್ಗಕಂಡುಬರುತ್ತದೆ ಎಂಬುದು ಅವರಿಗೆಲ್ಲ ತಿಳಿದೇಇದೆ. ಪರರು ಮಾಡಿದ ತಪ್ಪಿಗೆ ತಾನು ನೋವು ಸಹಿಸಿ ಅವರನ್ನು ಕಾಪಾಡಿದ ಪೇಚಿನಪ್ರಸಂಗಗಳು ಒಂದೆರಡಲ್ಲ. ಆತ್ಮಲಿಂಗವನ್ನು ರಾವಣನ ಕೈಯ್ಯಿಂದ ತಪ್ಪಿಸುವಾಗ ರಾವಣ ಕೊಟ್ಟ ಹೊಡೆತವನ್ನು ಒಂದಿನಿತೂ ಹೆದರದೇ ತಿಂದ ಈತ ಮಹಾನ್ ಧೈರ್ಯಶಾಲಿಯೂ ಕೂಡ. ತಂದೆ-ತಾಯಿಗೆ ಮೂರು ಸುತ್ತು ಬಂದು ಜಗತ್ತೇ ನಿಮ್ಮಲ್ಲಡಗಿದೆ ಎಂಬ ತತ್ವವನ್ನು ಬೋಧಿಸಿದ ಬುದ್ಧಿವಂತನೂ ಇವನೇ ಅಲ್ಲವೇ ? ಸ್ವಾಮಿನಿಷ್ಠೆಗೆ ಪ್ರತೀಕವಾದ ಈತ ಅಮ್ಮ ತನ್ನನ್ನು ದ್ವಾರದ ಕಾವಲುಗಾರನಾಗಿ ನಿಯೋಜಿಸಿದಾಗ ಅರಿಯದೇ ಮಾಡಿದ-ಶಿವನನ್ನೇ ಒಳಗೆ ಬಿಡದ ತಪ್ಪಿಗೆ ತನ್ನನ್ನೇ ಒಮ್ಮೆ ಬಲಿಕೊಟ್ಟುಕೊಂಡ ವೀರ ಮತ್ತು ಶೂರ!

ವೇದವ್ಯಾಸರು ಮಹಾವಿಷ್ಣುವಿನ ಸ್ವರೂಪವೇ ಅನ್ನುತ್ತಾರೆ. ಅಂಥವರು ಭಾರತ ಬರೆಯುವಾಗ ಅವರು ಶೀಘ್ರಗತಿಯಲ್ಲಿ ಹೇಳುತ್ತ ಹೋಗುವಾಗ ಬರೆದುಕೊಳ್ಳುವ ಲಿಪಿಕಾರನ ಅವಶ್ಯಕತೆಯಿತ್ತು. ಬರೇ ತಲೆಯಿಲ್ಲದ ಲಿಪಿಕಾರನಾದರೆ ಆತ ತಪ್ಪು ಮಾಡಿಯಾನು ಎಂದು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವ ಲಿಪಿಕಾರನೇ ಬೇಕೆಂಬ ಹುಡುಕಾಟಕ್ಕೆ ಮಿತಿಯಿರಲಿಲ್ಲ, ಯಾರೂ ಸಿಗುವ ಕುರುಹೇ ಇರಲಿಲ್ಲ! ಚಿಂತಾಕ್ರಾಂತರಾದ ವ್ಯಾಸರಲ್ಲಿಗೆ ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರ ನಾರದರೇ ಬಂದು ನಿಮ್ಮ ಚಿಂತೆಗೆ ಕಾರಣವೇನು ಎಂದು ಕೇಳಬೇಕಾಯಿತು! ವ್ಯಾಸರಿಂದ ಉತ್ತರ ಪಡೆದ ನಾರದರು ಗಣೇಶನ ಉಲ್ಲೇಖವನ್ನೂ ಆತ ಆವಿರ್ಭಾವವಾಗುವ ಕ್ರಮವನ್ನೂ ಅವನನ್ನು ಒಲಿಸಿಕೊಳ್ಳುವ ವೈಖರಿಯನ್ನೂ ತಿಳಿಸಿ ಈ ಬರವಣಿಗೆ ಆತನಿಂದಲ್ಲದೇ ಬೇರೆಯವರಿಂದ ಸಾಧ್ಯವಿಲ್ಲ ಎಂದುಬಿಟ್ಟರು. ವ್ಯಾಸರು ಗಣಪನನ್ನು ಆರಾಧಿಸಲಾಗಿ ಪ್ರಸನ್ನನಾದ ಸಿದ್ಧಿವಿನಾಯಕ ತನ್ನನ್ನು ಕರೆಸಿದ ಕಾರಣ ತಿಳಿದುಕೊಂದು ಅವರಿಗೊಂದು ನಿಬಂಧನೆ ವಿಧಿಸಿದ, ಏನೆಂದರೆ ವ್ಯಾಸರೇ ನೀವು ನಿಲ್ಲಿಸದೇ ನಿರರ್ಗಳವಾಗಿ ತೈಲಧಾರೆಯಂತೆ ಹೇಳುತ್ತ ಹೋಗಬೇಕು, ನೀವು ಮಧ್ಯೆ ಎಲ್ಲಾದರೂ ನಿಲ್ಲಿಸಿದರೆ ತಾನು ಲೇಖನಿ ಬಿಸುಟು ಹೊರಡುತ್ತೇನೆ ಎಂದು! ವ್ಯಾಸರಿಗೆ ವ್ಯಸನವಯಿತು, ಪುನಃ ಪ್ರಾರ್ಥಿಸಿ ತಾನು ಹೇಳುವುದನ್ನು ಅರ್ಥವಿಸಿಕೊಂಡು ಬರೆಯಬೇಕಾಗಿ ವಿನಂತಿಸಿದರು, ಇದಕ್ಕೆ ಇಬ್ಬರೂ ಸಮ್ಮತಿಸಿ ಭಾರತ ಬರೆಯಲ್ಪಟ್ಟಿತು, ತನ್ಮಧ್ಯೆ ಬರುವ ಹಲವು ಸಂಶಯಗಳನ್ನು ಬೇಕೆಂತಲೇ ಗಣೇಶ ಪ್ರಶ್ನೆಮಾಡಿ ತಿಳಿದುಕೊಂಡ. ಭಗವದ್ಗೀತೆಯನ್ನೂ ಒಳಗೊಂಡ ಮಹಾಭಾರತ ಗಣೇಶಗೀತೆಯನ್ನೂ ಸೇರಿಸಿಕೊಂಡಿತು! ಬರೆದು ಮುಗಿಸಿದ ಮಹಾಗಣಪತಿ ವೇದವ್ಯಾಸರಿಂದ ರಚಿಸಲ್ಪಟ್ಟ ಈ ಕಾವ್ಯ ಪಂಚಮವೇದವಾಗಲಿ ಎಂದು ಹರಸಿ ಹಾರೈಸಿ ಹೊರಟ. ಅದರ ಫಲವಾಗಿ ನಾವಿಂದು ಭಾರತವನ್ನು ಮೂಲ ಸಂಸ್ಕೃತದಲ್ಲಿ ಕಾವ್ಯವಾಗಿ ಪಡೆದಿದ್ದೇವೆ.

ನಿರಾಕಾರ ಮತ್ತು ಸದಾಕಾರ ಈ ಎರಡು ಮೂಲ ಸ್ವರೂಪದ ಆರಾಧನೆಯ ಕ್ರಮಗಳಾದರೆ ವಿಗ್ರಹರೂಪದ ಗಣಪನ ಉಪಾಸನೆಯಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎಂಬ ಎರಡು ವಿಧಗಳು. ಭಾಗಶಃ ಕುತ್ತಿಗೆಯ ಮೇಲ್ಭಾಗವನ್ನಷ್ಟೇ ಇಟ್ಟುಕೊಂಡು ಪೂಜಿಸುವುದು ಖಂಡೋಪಾಸನೆ, ಇಡೀ ಮೂರ್ತಿಯನ್ನು ಇಟ್ಟುಕೊಂಡು ಆರಾಧಿಸುವುದು ಅಖಂಡೋಪಾಸನೆ. [ಇನ್ನು ಕೆಲವರಂತೂ ಬರೇ ಒಂದು ಉರುಟು ಪ್ಲಾಸ್ಟಿಕ್ ರೂಪದಲ್ಲಿ ಅಲ್ಲೇ ಮಧ್ಯೆ ಸ್ವಲ್ಪ ಉಬ್ಬು ಸೊಂಡಿಲಾಕಾರಮಾಡಿ ನಮ್ಮ ವಾಹನಗಳಲ್ಲಿ ಇಟ್ಟುಕೊಂಡಿರುತ್ತೇವೆ.] ಭಾರತದ ಹಲವು ಪ್ರದೇಶಗಳಲ್ಲಿ,ರಾಜ್ಯಗಳಲ್ಲಿ ವಿವಿಧ ನಮೂನೆಯ ವಿಘ್ನೇಶ ವಿಗ್ರಹಗಳು ಕಾಣಸಿಗುತ್ತವೆ. ಕೆಲವು ಕೇಸರಿ ಬಣ್ಣದವು, ಹಲವು ಕಪ್ಪು ಶಿಲೆಯವು, ಇನ್ನು ಕೆಲವು ಬಿಳಿಯ ಗ್ರಾನೈಟ್ ನಿಂದ ಮಾಡಿದವು ಮತ್ತಿನ್ನೂ ಕೆಲವು ಮಣ್ಣಿನಿಂದ ಮಾಡಿದವುಗಳು. ಅಪರೂಪದಲ್ಲಿ ಮರದಲ್ಲಿ ತಯಾರಿಸಿದ ವಿಗ್ರಹಗಳು ಮತ್ತು ಲೋಹದಲ್ಲಿ ತಯಾರಿಸಿದವುಗಳೂ ಬಳಕೆಯಲ್ಲಿವೆ. ಮೂರ್ತಿ ಯಾವುದೇ ಆಗಿರಲಿ ಅದನ್ನು ತಂದ ಮೇಲೆ ಅದಕ್ಕೊಂದು ಸಂಸ್ಕಾರದ ಕ್ರಮ ಇರುತ್ತದೆ. ಅದನ್ನು ಮಾಡದ ಹೊರತು ಆ ಮೂರ್ತಿಯಲ್ಲಿ ದೇವರ ಪ್ರತಿಬಿಂಬ ಅಥವಾ ಛಾಯಾಬಿಂಬ ಪೂಜೆಗೆ ಅಣಿಗೊಂಡಿರುವುದಿಲ್ಲ. ಇದರಲ್ಲೂ ದೇವಸ್ಥಾನ, ಮನೆ/ಗೃಹ/ಮಹಲು, ವಾಹನ ಈ ರೀತಿ ಮೂರು ರೀತ್ಯಾ ವಿಭಜಿಸಿ ಆಯಾಯ ಸ್ಥಳಕ್ಕೆ ತಕ್ಕುದಾದ ವಿಗ್ರಹವನ್ನು ಪಡೆಯಬಹುದಾಗಿದೆ. ಇಲ್ಲಿ ಪೂಜೆಗೂ ಮುನ್ನ ನಡೆಸುವ ವೈದಿಕ ವಿಧಿ-ವಿಧಾನ ಸಂಸ್ಕಾರಗಳು ಆಯಾಯ ಸ್ಥಳ ಮತ್ತು ವಿಗ್ರಹದ ಸ್ವರೂಪಕ್ಕೆ ತಕ್ಕಂತೆ ಇರುತ್ತವೆ. ಉದಾಹರಣೆಗೆ ದೇವಸ್ಥಾನಕ್ಕಾದರೆ ಅಲ್ಲಿ ಆಗಮ ಶಾಸ್ತ್ರ ರೀತ್ಯಾ ಹೋಮಗಳು-ಶುದ್ಧೀಕರಣ,ಸಾತ್ವಿಕ ಬಲಿ[ಪ್ರಾಣಿ ಬಲಿಯಲ್ಲ], ಅಷ್ಟಬಂಧ ಇವೇ ಮೊದಲಾದ ಹಲವು ಹತ್ತು ಕಾರ್ಯಕ್ರಮಗಳಾದರೆ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಆವಾಹನಾ ಕಾರ್ಯಕ್ರಮದ ಪ್ರಮಾಣ ತುಂಬಾ ಕಮ್ಮಿ ಇರುತ್ತದೆ. ಅಂತೆಯೇ ವಾಹನದಲ್ಲಿ ಇಡುವ ಮೂರ್ತಿಗಳಿಗೆ ಅತೀ ಕಡಿಮೆ ಕಾರ್ಯದಿಂದ ಅವುಗಳಿಗೊಂದು ಸಂಸ್ಕಾರ ಕೊಡುತ್ತಾರೆ. ಈ ಸಂಸ್ಕಾರ ಕೊಡುವಿಕೆಯಿಂದ ವಿಗ್ರಹದ ತಯಾರಿಕಾ ಹಂತದಲ್ಲಿ ಆಗಿರಬಹುದಾದ ದೋಷಗಳು ಅಥವಾ ವಿಗ್ರಹ ರೂಪಕ್ಕೂ ಬರುವ ಮೊದಲು ಆ ಮೂಲವಸ್ತುವಿದ್ದ ರೀತಿ, ಅದರ ಹೀನ ಸ್ವರೂಪ, ಅದರಲ್ಲಿರುವ ನೆಗೆಟಿವ್ ಎನರ್ಜಿ ಎಲ್ಲಾ ತೆಗೆದು ಹಾಕಲ್ಪಡುತ್ತದೆ. ಇಷ್ಟಾದ ಮೇಲೆಯೇ ಮೂರ್ತಿ ಪೂಜೆಗೆ ಅರ್ಹವೇ ಹೊರತು ಅದಕ್ಕೂ ಮೊದಲು ಅದೊಂದು ಕಲಾಕೃತಿ ಅಷ್ಟೇ! ದೇವಸ್ಥನಗಳಲ್ಲಿ ಇರುವ ವಿಗ್ರಹಗಳು ಸ್ಥಿರ ಅಥವ ಅಚಲ ವಿಗ್ರಹಗಳೆಂದೂ ಮನೆ ಹಾಗೂ ವಾಹನಗಳಲ್ಲಿರುವ ವಿಗ್ರಹಗಳು ಚರ ಅಥವಾ ಚಲವಿಗ್ರಹಗಳೆಂದೂ ಗುರುತಿಸಲ್ಪಡುತ್ತವೆ. ದೇವಸ್ಥಾನಗಳಲ್ಲಿರುವ ವಿಗ್ರಹಗಳಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿ ಇದ್ದು ಮನೆಯಲ್ಲಿರುವ ವಿಗ್ರಹಗಳಲ್ಲಿ ಕಡಿಮೆ ಮತ್ತು ಇತರೆಡೆಗಳಲ್ಲಿರುವ ವಿಗ್ರಹಗಳಲ್ಲಿ ಅದು ಇನ್ನೂ ಕಡಿಮೆ ಇರುತ್ತದೆ.

ನಮಗೆ ಗೊತ್ತಿರದ ಅನೇಕ ಚೀನೀಯರ ಕಪ್ಪೆಯನ್ನೋ-ಕವಡೆಯನ್ನೋ ತಂದು ಅದು ವಾಸ್ತು ಎಂದು ದುಡ್ಡುಮಾಡುವವರು ಭಾರತದ ಎಲ್ಲೆಡೆ ಹಬ್ಬಿದ್ದಾರೆ. ಅದಕ್ಕೆ ಬದಲಾಗಿ ನಮ್ಮ ಕಣ್ಣೆದುರು ಕುಳಿತರೆ ಅತ್ಯಂತ ಕಿರಿದದ ವಿಗ್ರಹವಾಗಿಯೂ ಎಲ್ಲ ಪಾಸಿಟಿವ್ ಎನರ್ಜಿಯನ್ನು ಎಳೆದು ತರಬಲ್ಲ ಗಣೇಶನನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ ? ಒಬ್ಬ ಲಾಫಿಂಗ್ ಮ್ಯಾನ್ ಬದಲಿಗೆ ನಗುತ್ತ ನೃತ್ಯಮಾಡುವ ನಾಟ್ಯಗಣೇಶನನ್ನು ಇಟ್ಟುಕೊಳ್ಳಬಹುದಲ್ಲ ?


ಸರಿಗಮಪದನಿಸ ಹಾಡೀ
ನಮ್ಮ ಬೆನಕಣ್ಣನ ಕೊಂಡಾಡೀ ||ಪ||

ಮೊರದಗಲದ ಕಿವಿಯಿಂದಾ ದುಗುಡವ
ಹರ ಸುತ ಕೇಳುತ ಬಂದಾ
ಮಿರಿಮಿರಿ ಮಿಂಚುವ ಕಣ್ಣು ಸೊಂಡಿಲ
ಹರಿದಾಡಿಸಿ ತಾ ನಿಂದಾ ||೧||

ಲಂಬೋದರನನು ಹೊತ್ತು ಮೂಷಕ
ಅಂಬೆಗಾಲಿಡುವ ಪರಿಯು
ತುಂಬಿತು ಹೃನ್ಮನವೆಲ್ಲಾ ಖುಷಿಯಲಿ
ಸಂಭ್ರಮಿಸುವ ದಿನಚರಿಯೂ ||೨||

ಅದ್ಭುತ ಮಾಯಾಲೋಕ ಈ ಗಣಪ
ಸದ್ದುಮಾಡದಲೇ ಬರುವಾ
ನಿದ್ದೆಯಲಿಹ ಜನವೆಲ್ಲಾ ಕೇಳಿ
ಎದ್ದು ನಿಂತು ನಾವ್ ಕರೆವ ||೩||

ಶುದ್ಧಮನವು ಸಾಕವಗೆ ನಮ್ಮನು
ಉದ್ಧರಿಸಲು ಬರುವವಗೆ
ಪೆದ್ದುತನದಿ ನಾವೆಲ್ಲಾ ಈ ಪರಿ
ಗುದ್ದಾಡಲೇಕೆ ಒಳಗೆ ||೪||