ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 17, 2010

' ವನಸುಮದೊಳೆನ್ನ ಜೀವನವು ವಿಕಸಿಸುವಂತೆ '

' ವನಸುಮದೊಳೆನ್ನ ಜೀವನವು ವಿಕಸಿಸುವಂತೆ ’

ಪದ್ಮಭೂಷಣ ದಿ| ಡಾ| ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಡಿ.ವಿ.ಗುಂಡಪ್ಪ , [Devanahalli Venkataramanaiah Gundappa Or Padmabhushan Dr. D V Gundappa) ಎಂದೆಲ್ಲ ಕರೆಸಿಕೊಳ್ಳುವ ನಮ್ಮ ಕನ್ನಡದ ಪ್ರಮುಖ ಕವಿ ’ಡೀವೀಜಿ’ ಎಂದೇ ಪ್ರಸಿದ್ಧರು. ಕವಿಯಾಗಿ, ತತ್ವನಿಷ್ಠರಾಗಿ, ತತ್ವಜ್ಞಾನಿಯಾಗಿ ಕನ್ನಡಕ್ಕೆ ಕಾವ್ಯ-ಸಾಹಿತ್ಯಕ್ಕೆ ಹೊಸ ಮುನ್ನುಡಿ ಬರೆದವರು.

ಬಾಲ್ಯ-ವಿದ್ಯಾಭ್ಯಾಸ

ಸ್ವಾತಂತ್ರ್ಯ ಪೂರ್ವ ೧೮೮೭ ರಲ್ಲಿ ಕೋಲಾರದ ಮುಳಬಾಗಿಲು ಎಂಬಲ್ಲಿ ತಮಿಳು ಮೂಲದ ಬ್ರಾಹ್ಮಣ ದಂಪತಿಗೆ ಮಗನಾಗಿ ಜನಿಸಿದ ಶ್ರೀಯುತರು ೧೮೯೮ ರಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿದರು. ಸ್ವಇಚ್ಛೆಯಿಂದ ಅವರು ಇಂಗ್ಲಿಷ್ ನಲ್ಲೂ ಪ್ರಾಥಮಿಕ ಹಂತದ ಓದನ್ನು ಮುಗಿಸಿದ DVG ಜಗದಮಿತ್ರ ಗಹನವಾಗಿ ತೆಗೆದು ಓದಿಕೊಂಡವರು.ಅವರು ಪ್ರೌಢಶಾಲಾ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿ ಮಹಾರಾಜಾ ಹೈಸ್ಕೂಲ್ ನಲ್ಲಿ ಓಡತೊಡಗಿದರು. ಕಾರಣಾಂತರಗಳಿಂದ ಅವರು ಮೆಟ್ರಿಕ್ಯುಲೇಶನ್ ಪಾಸು ಮಾಡಲು ಸಾಧ್ಯವಾಗಲಿಲ್ಲ. ಇಲ್ಲಿಗೆ ಅವರ ವ್ಯವಸ್ಥಿತ ಕಲಿಕಾ ಪದ್ಧತಿಗೆ ಇತಿಶ್ರೀ ಹಾಡಿದರೂ ಅವರ ಜ್ಞಾನಾರ್ಜನೆ ಮಾತ್ರ ಮುಂದುವರಿದೇ ಇತ್ತು. ಅನೇಕ ವಿಷಯಗಳಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು; ಇದು ಅವರ ಶ್ರದ್ಧೆಯ ಓದಿನ ಫಲ ಎನ್ನಬಹುದು.

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
ತಾನೇನು ಹುಲುಕಡ್ಡಿ ಎಂಬ ನುಡಿ ಬೇಡ
ಹೀನಮಾವುದುಮಿಲ್ಲ ಜಗದಗುಡಿಯೂಳಿಗದಿ
ತಾಣನಿನಗಿಹುದಿಲ್ಲಿ | ಮಂಕುತಿಮ್ಮ

* ವೇದ, ವೇದಾಂತ, ಬ್ರಹ್ಮಸೂತ್ರ, ಧರ್ಮಸೂತ್ರಾದಿ ಮಹಾ ಮಹಾ ಉದ್ಗ್ರಂಥಗಳಲ್ಲಿ ಪಾಂಡಿತ್ಯ
* ಕನ್ನಡ , ಇಂಗ್ಲಿಷ್ ಮತ್ತು ಇತರೆ ಕೆಲವು ಭಾಷೆಗಳಲ್ಲಿ ಪಾಂಡಿತ್ಯ
* ಅಂದಿನ ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಪಾಂಡಿತ್ಯ
* ರಾಮಾಯಣ, ಮಹಾಭಾರತಗಳಲ್ಲಿ ಆಳ -ಅಗಾಧ ಜ್ಞಾನ
* ಅಂದಿನ ಕಾಲದಲ್ಲಿ ಏಷ್ಯದಲ್ಲೇ ಮೊದಲನೇ ದೊಡ್ಡ ಅಣೆಕಟ್ಟೆಂಬ ಹೆಗ್ಗಳಿಕೆಗೆ ಪಾತ್ರವಾದ KRS ಅಥವಾ ಕೃಷ್ಣ ರಾಜ ಸಾಗರ ಇದರ ನಿರ್ಮಾಣ ಕಾರ್ಯ ನಡೆಯುವ ಸಮಯ ತಂತ್ರಜ್ಞಾನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರಿಗೆ ಸಹಾಯಕರಾಗಿದ್ದರು DVG
* ಮಹಾತ್ಮ ಗಾಂಧೀ ಮತ್ತು ಲೋಕಮಾನ್ಯ ತಿಲಕರ ಸಹಯೋಗದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲೂ ಶ್ರೀಯುತರು ಇದ್ದರು.
* ಶೇಕ್ ಸ್ಪೀಯರ್ ನ ಕೃತಿಗಳು ಮತ್ತು ಗ್ರೀಕ್ ನ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದ ಖ್ಯಾತಿ ಇವರದ್ದು.
* ಉಮರ್ ಖಯ್ಯಾಂ ಎಂಬ ಉರ್ದು ಮೂಲದ ಕವಿಯ ಕೃತಿಯನ್ನು ಕನಡಕ್ಕೆ ಭಾಷಾಂತರಿಸಿ ’ಉಮರನ ಒಸಗೆ’ ಎಂದು ಹೆಸರಿಸಿದರು.

ಈ ಹಂತದಲ್ಲಿ ಅವರ ಅನೇಕ ಕೃತಿಗಳು ಕಾಲೇಜು ಪದವಿ ವ್ಯಾಸಂಗದವರಿಗೆ ಪಠ್ಯದಲ್ಲಿ ಪಾಠವಾಗಿ ಬಳಸಲ್ಪಟ್ಟಿದ್ದವು ಅಲ್ಲದೇ ಕೆಲವು ಕೃತಿಗಳು ತತ್ವಜ್ಞಾನ ಓದುವ ವಿದ್ಯಾರ್ಥಿಗಳಿಗೆ ’ವಿಷಯವಸ್ತು’ [ thesis ].ವಾಗಿ ಬಳಕೆಗೊಂಡವು.

ಶ್ರೀಯುತರು ಬರೆದ ’ ಮಂಕುತಿಮ್ಮನ ಕಗ್ಗ ’ ಕನಡದ ಭಗವದ್ಗೀತೆ ಎಂಬ ಹೆಸರನ್ನು ಪಡೆದು ಪ್ರಸಿಧ್ಧವಾಯಿತು. ಒಂದೊಮ್ಮೆ ಇದನ್ನು ಇಂಗ್ಲಿಷ್ ನಲ್ಲಿ ಬರೆದಿದ್ದರೆ ಇದು ನೋಬೆಲ್ ಪ್ರಶಸ್ತಿಗೆ ಅರ್ಹತೆ ಪಡೆಯುತ್ತಿತ್ತು. ಇದರ ಅತೀ ವಿಶಿಷ್ಟ ಲಕ್ಷಣವೆಂದರೆ ಸಮಾಜದ ಯಾವುದೇ ವ್ಯಕ್ತಿ ಜಾತಿ,ಮತ,ಕುಲ ಭೇದವಿಲ್ಲದೇ ಈ ನಾಲ್ಕು ಸಾಲುಗಳ ಪದ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರ ಅರ್ಥವನ್ನೂ, ತತ್ವವನ್ನೂ ಪಡೆಯಬಹುದಿತ್ತು. ಸಮಾಜದ ಎಲ್ಲಾ ವರ್ಗಗಳಿಗೆ ಹೊಂದಾಣಿಕೆಯಾಗಿರುವ ಏಕೈಕ ಗ್ರಂಥ ಇದಾಗಿದೆ!

1. ಮಂಕುತಿಮ್ಮನ ಕಗ್ಗ
2. ಮರುಳ ಮುನಿಯನ ಕಗ್ಗ
3. ಅಂತಃಪುರ ಗೀತೆಗಳು
4. ಬಾಳಿಗೊಂದು ನಂಬಿಕೆ
5. ಸಂಸ್ಕೃತಿ
6. ಪುರುಷಸೂಕ್ತ
7. ದೇವರು
8. ರುಥ, ಸತ್ಯ ಮತ್ತು ಧರ್ಮ
9. ಈಶಾವಾಸ್ಯ ಉಪನಿಷತ್
10. ಸಾಹಿತ್ಯ ಶಕ್ತಿ
11. ಹಲವು ಮಹನೀಯರು
12. ಮೈಸೂರಿನ ದಿವಾನರು
13. ಕಲೋಪಾಸಕರು
14. ಉಮರನ ಒಸಗೆ

ಇವೆಲ್ಲ ಶ್ರೀಯುತರ ಪ್ರಮುಖ ಕೃತಿಗಳು.
೫೦೦ ಪುಟಗಳುಳ್ಳ ೧೧ ಸಂಪುಟದ ’ಜೀವನಧರ್ಮಯೋಗ ’ವೆಂಬ ಮಾಲಿಕೆ ಜನಸಾಮಾನ್ಯರ ನಿತ್ಯ ಜೀವನ ದರ್ಪಣವಾಗಿದ್ದು ಅದರಲ್ಲಿ DVG ಯವರ ಅನೇಕ ಸಮಕಾಲೀನ ಸಾಹಿತಿಗಳ ಪ್ರತಿಕ್ರಿಯೆಗಳೂ ಅಡಕವಾಗಿವೆ. ಇದನ್ನು ಡಾ|ಹಾ.ಮಾ.ನಾಯಕರು ತಮ್ಮ ಸಂಪಾದಕತ್ವದಲ್ಲಿ ೧೯೮೫ರಲ್ಲಿ ಪುಸ್ತಕಗಳರೂಪದಲ್ಲಿ ಪ್ರಕಟಿಸಿದರು.


ಕೆಲವು ಸಾಹಸಗಳು

ಅಗ್ಗಿನ ಕಾಲದಲ್ಲಿ ಶ್ರೀಯುತರು ಕನ್ನಡದಲ್ಲಿ ’ಭಾರತ’ ಮತ್ತು ’ಕರ್ನಾಟಕ’ ಎಂಬ ಕನ್ನಡ ಪತ್ರಿಕೆಗಳನ್ನು ನಡೆಸುತ್ತಿದ್ದರು! ಶ್ರೀಯುತರು ೧೯೪೫ ರಲ್ಲಿ, ಬಸವನ ಗುಡಿ ರಸ್ತೆಯಲ್ಲಿ ’ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್’ ನ್ನು ಸ್ಥಾಪಿಸಿದರು. ಆಕಾಲಕ್ಕೆ ಸ್ವಂತ ಕೃತಿಗಳಲ್ಲಿ ಅನೇಕವನ್ನು ಮುದ್ರಿಸಿದ ಇವರ ಮುದ್ರಿತ ಪುಟಗಳ ಸಂಖ್ಯೆ ಸುಮಾರು ೧೦,೦೦೦ ಮೀರಿತ್ತು.

ಶ್ರೀಯುತರು ಎಂದೂ ಪ್ರಚಾರವನ್ನು ಬಯಸಿರಲಿಲ್ಲ. ಅವರ ’ವನಸುಮದೊಳೆನ್ನ ಜೀವನವು ವಿಕಸಿಸುವಂತೆ’ ಹಾಡು ಅನೇಕರ ಗಮನಸೆಳೆಯಿತು. ಎಲೆಮರೆಯ ಕಾಯಿಯಂತೆ, ಅಡಗಿ ಪರಿಮಳ ಬೀರುವ ಹೂವಿನಂತೆ ಇರಬೇಕೆಂಬ ಅವರ ಇಂಗಿತ ಅವರ ನಿಸ್ಪೃಹ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಇದನ್ನು ಕರ್ನಾಟಕ ಸಂಗೀತ ವಿದುಷಿ ಡಾ| ನಾಗವಲ್ಲಿ ನಾಗರಾಜ್ ಅವರ ಕಂಠ ಸಿರಿಯಲ್ಲಿ ತಾವು ಕೇಳಬಹುದಾಗಿದೆ. ಅವರಿಗೆ ಧನ್ಯವಾದಗಳು

[here is the link below, please copy & paste it in address bar of the browser, to enjoy the song
http://www.youtube.com/watch?v=hEE8XzDyibs ]


ಪ್ರಶಸ್ತಿ-ಪುರಸ್ಕಾರಗಳು













ಮೈಸೂರು
ಯುನಿವರ್ಸಿಟಿ ಶ್ರೀಯುತರ ಧೀಮಂತ ಕಾರ್ಯಗಳನ್ನು ಗಮನಿಸಿ ಗೌರವ ಡಾಕ್ಟರೇಟ್ ನೀಡಿ ತನ್ನ ಗೌರವ ಹೆಚ್ಚಿಸಿಕೊಂಡಿತು. ಇವರ ಕೃತಿ ಶ್ರೇಣಿಗಳಲ್ಲಿ ಒಂದಾದ ’ಜೀವನಧರ್ಮಯೋಗ ’(yoga of everyday life) ಕೇಂದ್ರ ಸಾಹಿತಿ ಅಕಾಡೆಮಿಯ ಪುರಸ್ಕಾರ ಪಡೆಯಿತು. ೧೯೭೪ ರಲ್ಲಿ ಭಾರತ ಸರಕಾರ ಡಾ | ಡೀವೀಜಿ ಯವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ೧೯೭೦ರಲ್ಲಿ ಕರ್ನಾಟಕ ಸರಕಾರದ ಆಗಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ, ಕನ್ನಡದ ಸೇವೆಗಾಗಿ ಹಾಗೂ ಸಾಧನೆಗಾಗಿ ಡಾ|ಡೀವೀಜಿಯವರನ್ನು ೯೦,೦೦೦ ರೂಪಾಯಿಗಳ ಗೌರವಧನ ಸಮರ್ಪಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀಯುತರನ್ನು ಗೌರವಿಸಿತು; ಆ ಸಂಪೂರ್ಣ ಮೊತ್ತವನ್ನು ಶ್ರೀಯುತರು ಬಸವನ ಗುಡಿ ರಸ್ತೆಯಲ್ಲಿರುವ’ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್’ ಗೆ ದಾನವಾಗಿ ಕೊಟ್ಟು ಅದನ್ನು ಸ್ಥಾಪಿಸಿದರು. ಶ್ರೀಯುತರು ಮಡಿಕೇರಿಯಲ್ಲಿ ನಡೆದ ೧೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೮೮ ರಲ್ಲಿ ಭಾರತೀಯ ಅಂಚೆ ಅವರ ನೆನಪಲ್ಲಿ ಒಂದು ಅಂಚೆ ಚೀಟಿಯನ್ನು ಹೊರತಂತು. ೨೦೦೨-೦೩ ರಲ್ಲಿ DVG ಯವರ ಸ್ಮರಣಾರ್ಥ ಗಣಪತಿ ದೇವಸ್ಥಾನದ ಹಿಂಬಾಗ ’ಬ್ಯೂಗಲ್ ರಾಕ್ ಪಾರ್ಕ್’ ನಲ್ಲಿ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ವಿಪರ್ಯಾಸ

ಎಲ್ಲಿ ಡೀವೀಜಿ ದಶಕಗಳ ಕಾಲ ವಾಸವಾಗಿದ್ದು ಕನ್ನಡಕ್ಕೆ ಮಹಾನ್ ಕೃತಿಗಳನ್ನು ಬರೆದರೋ ಅಲ್ಲಿ ಇಂದು ಯಾವುದೇ ಸ್ಮಾರಕ ಉಳಿದಿಲ್ಲ, ಬದಲಾಗಿ ಕವಿಯ ಬಡತನವೋ ಎಂಬಂತೆ ಆ ಹಳೆಯ ಮನೆಯನ್ನು ಯಾರೋ ಕೊಂಡು ಇನ್ಯಾರಿಗೋ ಮಾರಾಟಮಾಡಿ ಈಗಲ್ಲಿ ಕಮರ್ಷಿಯಲ್ ಶಾಪಿಂಗ್ ಕಾಂಪ್ಲೆಕ್ಸ್ ಒಂದು ನಡೆಯುತ್ತಿದೆ, ಇದು ನಮ್ಮ ರಾಜಕೀಯದ ದೊಂಬರಾಟ ಕವಿಗೆ ಕೊಟ್ಟ ಅತೆದೊಡ್ಡ ’memorable memento' ಅನ್ನೋಣವೇ ? ಕೊನೇಪಕ್ಷ ಅವರ ಮನೆಯಿದ್ದ ಆ ರಸ್ತೆಯನ್ನಾದರೂ 'ಡಿ.ವಿ.ಜಿ.ರಸ್ತೆ' ಅಂತ ನಾಮಕರಣಮಾಡಿದ್ದಾರಲ್ಲ ಎಂದು ತೃಪ್ತಿಪಟ್ಟುಕೊಳ್ಳಬೇಕಾಗಿದೆ !


ಕುಟುಂಬ-ಸ್ನೇಹಿತರು

ಒಬ್ಬನೇ ಮಗ ದಿ| ಬಿ.ಜಿ.ಎಲ್ ಸ್ವಾಮೀ [ಮದ್ರಾಸ್ ಯುನಿವರ್ಸಿಟಿಯಲ್ಲಿ ಬಾಟನಿ ಪ್ರೊಫೆಸ್ಸರ್ ಆಗಿದ್ದರು]ಮತ್ತು ಇಬ್ಬರು ಪುತ್ರಿಯರನ್ನು ಹೊಂದಿದ್ದ ಡೀವೀಜಿ ಇದ್ದುದರಲ್ಲೇ ತೃಪ್ತ ಜೀವನ ನಡೆಸಿದವರು. ಸರ್ ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ‌ಇಸ್ಮಾಯಲ್,ದಿ|ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್, ಜಿ. ಎ. ನಟೇಸನ್ ಮುಂತಾದ ಕೆಲವು ಸ್ನೇಹಿತರ ಬಳಗವನ್ನು ಹೊಂದಿದ್ದರು. ಗಾಂಧೀ ಬಜಾರಿನ ವಿದ್ಯಾರ್ಥಿಭವನದಲ್ಲಿ ಎಷ್ಟೋ ಸಮಯ ಸಮಕಾಲೀನ ಕವಿ-ಸಾಹಿತಿಗಳೊಂದಿಗೆ ಕಾಪಿ ಕುಡಿಯುತ್ತ ಹರಟುವ ಮೃದು-ಮಧುರ ಭಾವದ ಸರಳ ಸಜ್ಜನ ಬಹಳ ತಮಾಷೆಯ ವ್ಯಕ್ತಿಯಾಗಿದ್ದರು ಕೂಡ ! ತಮ್ಮ ಅನುಭವಜನ್ಯ ಪಾಠಗಳೇ ’ಮಂಕುತಿಮ್ಮನ ಕಗ್ಗ’ ಮತ್ತು ’ಜೀವನಧರ್ಮ ಯೋಗ’ ಗಳೆಂಬ ಪುಸ್ತಕಗಳಾಗಿ ಹೊರಬಂದವೆಂಬುದು ಅನೇಕರು ಅಭಿಪ್ರಾಯ. ೧೯೭೫ ಅಕ್ಟೋಬರ್ ೭ ರಂದು ತಮ್ಮ ಇಹ ಜೀವನ ಯಾತ್ರೆ ಪೂರೈಸಿದರು; ಇತಿಹಾಸ ಸೇರಿದರು, ಅಮರರಾದರು, ಪೂಜ್ಯರಾದರು.ಅವರು ಕೊಟ್ಟ ಕಗ್ಗದ ಅತಿ ಜನಪ್ರಿಯ ಸಾಲುಗಳ ಮುಖಾಂತರ ಅವರನ್ನೊಮ್ಮೆ ಸ್ಮರಿಸೋಣ-

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು | ಮಂಕುತಿಮ್ಮ

ನುಡಿನಮನ
ಡೀವೀಜಿಯಂತಹ ವ್ಯಕ್ತಿಗಳ ಬಗೆಗೆ ಹೇಳಿಮುಗಿಯಿತು ಎನ್ನುವ ಮಾತು ಬರುವುದೇ ಇಲ್ಲ. ಪ್ರತಿಯೊಂದೂ analytical. ಆದರೂ ಕಾಲದ ಪರಿಮಿತಿಯಿಂದ ಇನ್ನೂ ಜಾಸ್ತಿ ಬರೆಯಲಾಗದಿದ್ದುದಕ್ಕೆ ತಮ್ಮಲ್ಲಿ ಕ್ಷಮೆಯಾಚಿಸುತ್ತ , ಕೃತಿಯಿಂದ ಕರ್ಮಯೋಗಿಯಾಗಿ ಹಲವರಿಗೆ ದಾರಿ ದೀವಿಗೆಯಾದ ಗುರು ಡೀವೀಜಿಯವರಿಗೆ ಜಗದ ಮಿತ್ರ ಈ ರೀತಿಯಲ್ಲಿ ಸದಾ ನುಡಿನಮನ ಸಲ್ಲಿಸುತ್ತಾನೆ -

ಗೀತೆಯನು ಬೋಧಿಸಿದ ಕನ್ನಡದಿ ಗುರುತಾನು
ಪಾತಿಮಾಡುತ ನೆಲದಿ ಸರಳತನದಲ್ಲಿ
ವೇತನದ ಚಿಂತೆಯದು ಕಾಡಲಿಲ್ಲಾತನನು
ಆತುರದಿ ನೀ ಸ್ಮರಿಸೋ | ಜಗದಮಿತ್ರ