ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 30, 2012

ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ..........


ಚಿತ್ರ ಋಣ: ಅಂತರ್ಜಾಲ 
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ..........

ಅನೇಕಸಲ ಅಂದುಕೊಳ್ಳುತ್ತೇನೆ ಎಂಥಾ ನತದೃಷ್ಟ ನಾನೆಂದು! ಅದಕ್ಕೆ ಕಾರಣ ಹಣದ ಕೊರತೆಯಲ್ಲ! ಹಾಗಾದ್ರೆ ಮತ್ತೇನು? ಬಯಸಿದ ಹುಡುಗಿ ಬಾಳಿಗೆ ಸಿಗದಾದಳೇ? ಅದೂ ಅಲ್ಲ. ಕೋಟ್ಯಧಿಪತಿಯಾಗುವ ಯೋಗಬರಲಿಲ್ಲವೆಂದೇ? ಛೆ ಛೆ ಹಾಗೆ ಕೋಟಿಗಳಿಗಾಗಿ ಮರುಗಿದ್ದೇ ಇಲ್ಲ! ಮದುವೆ-ಮನಕಾಲ-ಮಕ್ಕಳು? ಎಲ್ಲಾ ಆಗಿ ಆ ವಿಷಯದಲ್ಲಿ ನಾನು ನಿತ್ಯ ಸುಖಿಯೇ! ರಾಜಕಾರಣದಲ್ಲಿ ಮುನ್ನಡೆಯಲು ಪಕ್ಷದ ಸೀಟು ಸಿಗಲಿಲ್ಲವೇ? ಎಂಥಾ ಮಾತಾಡ್ತೀರಿ ಮಾರಾರ್ಯೆ-ಏಳೇಳ್ ಜನ್ಮಕ್ಕೂ ರಾಜಕಾರಣದ ಹೆಸರೆತ್ತಬೇಡಿ. ಸಿನಿಮಾ ನಟನಾಗುವ ಅವಕಾಶ ತಪ್ಪಿಹೋಯ್ತೇನೋ ಅಲ್ವೇ? ನಮಗೆ ಸಿನಿಮಾ ಗಿನಿಮಾ ಎಲ್ಲಾ ಅಗಿಬರೋದಿಲ್ಲ ರಾಯ್ರೆ ನಮ್ಮದೇನಿದ್ರೂ ಸಾಹಿತ್ಯ ರಂಗಮಾತ್ರ. ಗೊತ್ತಾಯ್ತು ಬಿಡಿ ನಿಮಗೆ ಯಾವ ಪ್ರಶಸ್ತಿಯೂ ಸಿಗಲಿಲ್ಲ ಅದಕ್ಕೇ ಅಲ್ಲವೇ? ಪ್ರಶಸ್ತಿಯ ದಿಕ್ಕಿಗೆ ತಲೆ ಹಾಕಿ ಮಲಗಲೂ ಇಲ್ಲ!  ಹಾಗಾದ್ರೆ ನಿಮಗೇನ್ರೀ ಅಂಥಾ ತೊಂದ್ರೆ ಹಾಳಾದ್ದು ?  ಉತ್ತರ ಒಂದೇ ವಾಕ್ಯದಲ್ಲಿ ಪೂರ್ಣಗೊಳಿಸಲು ಬರುವುದಿಲ್ಲ-ಅದನ್ನೇ ನಿಮ್ಮಲ್ಲಿ ಹೇಳಬೇಕೆಂದಿದ್ದೇನೆ ಇಲ್ಲಿ!

ಅದೋ ಅಲ್ಲಿ ಗದ್ದೆಯ ಬದುವಿನಲ್ಲಿ ಕೂತು ಮಧ್ಯೆ ಹಾದುಹೋಗುವ ನೀರ ಅವಳೆಯಲ್ಲಿ ಓಡಾಡುವ ಜಿಗಣೆಗಳನ್ನು ನೋಡುತ್ತಿರುವ ಹುಡುಗ ನಿಮಗೆ ಕಾಣಿಸುತ್ತಿರಬೇಕಲ್ಲಾ? ಕಾಲ ದಾರಿಯಲ್ಲಿ ಕಂಬಳಿಕೊಪ್ಪೆ ಹಾಕಿಕೊಂಡು ಎಲೆಯಡಕೆ ಜಗಿಯುತ್ತಾ ಹೋಗುತ್ತಿರುವ ಕೃಷಿಕಾರ್ಮಿಕರ ಹಿಂಡಿನ ಬಾಜುವಿನಲ್ಲಿ ಅವರಲ್ಲೊಬ್ಬಾತ ಬಿಡುತ್ತಾ ಸಾಗುತ್ತಿರುವ ಬೀಡಿ ಹೊಗೆಯಾದರೂ ಕಂಡಿತೇ? ಪಾಚಿಗಟ್ಟಿದ ಕೆಸರಹೊಂಡಗಳಲ್ಲಿ ಕಮಲದೆಲೆಗಳ ಸಂದಿಗೊಂದಿಗಳಲ್ಲಿ ಹುದುಗಿ ದಪ್ಪನೆಯ ಮುಖವನ್ನಷ್ಟೇ ಮೇಲೆತ್ತಿ ಹುಲಿಯ ಗರ್ಜನೆಯಂತೇ ಗುಟುರುವ ಗೂಕರಕಪ್ಪೆಗಳ ಗಂಡುದನಿ ಕೇಳಿಸಿತೇ? ಇಡೀ ಆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ವಟ್ ವಟ್ ವಟರ್....ವಟ್ ವಟ್ ವಟರ್ ಎಂದು ಹಳೆಯ ಲ್ಯಾಂಬ್ರೆಟಾ ಸ್ಕೂಟರು ಸದ್ದುಮಾಡಿದ ಹಾಗೇ ಕೂಗುವ ಚಿಕ್ಕ ಕಪ್ಪೆಗಳ ಮಾತು ಕೇಳಿಸಲಿಲ್ಲವೇ? ಸರಿಯಾಗಿ ನೋಡಿಕೊಳ್ಳಿ ಇಷ್ಟುಹೊತ್ತಿಗೆ ನಿಮಗೊಂದಾದರೂ ಉಂಬ್ಹುಳ[ರಕ್ತವನ್ನು ಉಂಬುವುದರಿಂದ ಈ ಹೆಸರು, ಪ್ರಾದೇಶಿಕವಾಗಿ ಅಂಬುಳ,ಇಂಬುಳ ಎಂದೆಲ್ಲಾ ಕರೆಯುತ್ತಾರೆ] ಕಾಲಿಗೆ ಹತ್ತಿರಬೇಕು! ಇದೆಲ್ಲಾ ಏನು ಮಹಾ ಅಂತೀರೇ? ಆಚೆಮನೆ ಮಾದಕ್ಕ "ಕಾಲಾಡಲು ಬಿಟ್ಟ ಎಮ್ಮೆಗಳು ಬರಲಿಲ್ಲ ಎಲ್ಲಿ ಹೋಗಿ ಕೂತಿವೆಯೋ ಏನೋ?" ಎಂದಿದ್ದು ನೆನಪಿಗೆ ಬಂತು-ಅಲ್ಲಿವೆ ನೋಡಿ, ಮುತ್ತಿಕೊಳ್ಳುವ ನೂರಾರು ನೊಣ-ನೊರಜುಗಳಿಂದ ಕೆಲಕಾಲವಾದರೂ ಮುಕ್ತಿಪಡೆಯುವ ಸಲುವಾಗಿ, ಮಗ್ಗಲು ಬದಲಿಸುತ್ತಾ ತಲೆಮುಳುಗಿಸಿ ಏಳಿಸಿ ಆ ಅರಲುಹೊಂಡದಲ್ಲಿ ಓಕುಳಿಯಾಟ ನಡೆಸುತ್ತಾ, ’ಸ್ವರ್ಗಸುಖ’ದಲ್ಲಿ ಪರಮಾನಂದ ತುಂದಿಲವಾಗಿ  ಮಲಗಿವೆ! ಕುಂಟದನವನ್ನು ಅದರ ಗುಂಪು ಬಿಟ್ಟು ಮುಂದೆ ಸಾಗಿತೋ ಏನೋ ಪಾಪ ಕುಂಟುತ್ತಾ ಒಂಟಿಯಾಗಿ ಓ ಅಲ್ಲಿ ಹೋಗ್ತಾ ಇದೆ ನೋಡಿ. ಏನಾಗಿದೆ ಈ ಮನುಷ್ಯನಿಗೆ ಏನೇನೂ ಬರೀತಾನಲ್ಲ ಎಂದುಕೊಂಡಿರೇನೋ  ಅಲ್ಲವೇ? ಹೇಳಿದ ದೃಶ್ಯಗಳಲ್ಲಿ ಒಂದೂ ನಿಮಗೆ ಕಾಣಲಿಲ್ಲವೇ? ಹಾಗಾದ್ರೆ ನಿಮಗೆ ನಮ್ಮೂರ ಕಡೆಯ ಹಳ್ಳಿಗಳ ಬಗ್ಗೆ ತಿಳಿದಿಲ್ಲ ಬಿಡಿ. 

ಎಲೆಲೆ ಬೆಳಕಿನ ಬಿತ್ತೆ ಇರುಳು ಮೂಗಿನ ನತ್ತೆ
ಹುಳುವೆಂದು ಹೆಸರಿಟ್ಟು ಹಳಿಯುವರು ನಿನ್ನಾ

ಎಂಬ ಕವನ ಕವಿಮನದಲ್ಲಿ ಜನಿಸಿದ್ದು ಸಂಜೆಯ ಮಿಂಚುಹುಳಗಳನ್ನು ನೋಡಿದಾಗಲೇ ಅಲ್ಲವೇ?  ಸಂಜೆಯ ವೇಳೆಗೆ ಅದೆಲ್ಲಿಂದಲೋ ಧಾವಿಸಿ ಬರುವ ಮಿಣುಕು ಹುಳಗಳು ತಮ್ಮ ದಾರಿಗೆ ತಾವೇ ಬೆಳಕು ಹರಿಸಿಕೊಳ್ಳುತ್ತಾ ಹಾರುವಾಗ ಇಂದಿನ ಸೀರಿಯಲ್ ಲೈಟ್ ಗಳ ಅನುಭವವಾಗುತ್ತಿತ್ತು. ದೀಪ ಹಚ್ಚಿದ ಹೊತ್ತಿಗೆ ಭೂಮಿಯಿಂದ ಭುಗಿಲೆದ್ದ ರೆಕ್ಕೆಯುಳ್ಳ ಗೆದ್ದಲುಜಾತಿಯ ಹುಳಗಳ ದಂಡು ಸೀದಾ ದೀಪಕ್ಕೆ ನುಗ್ಗಿ ನಾ ಮುಂದು ತಾ ಮುಂದು ಎಂದು ಮುತ್ತಿಡಲು ಹಾತೊರೆಯುತ್ತಾ ಬಹುತೇಕವು ರೆಕ್ಕೆ-ಪುಕ್ಕ ಉದುರಿ ಹರೆಯತೊಡಗುತ್ತಿದ್ದವು. ಕಾನು ಜಿರಲೆ-ಜೀರುಂಡೆಗಳ ’ಸಾಮವೇದ’ ಅದೆಷ್ಟೋ ದೂರದವರೆಗೂ ಕೇಳುತ್ತಿತ್ತಾದರೂ ಅವುಗಳು ಕುಳಿತ ಜಾಗವನ್ನು ಶೋಧಿಸುವುದು ಕಷ್ಟವಾಗುತ್ತಿತ್ತು. ನೆಗೆತದಲ್ಲಿ ನಮ್ಮನ್ನು ಬಿಟ್ಟರುಂಟೇ ಎಂದುಕೊಳ್ಳುತ್ತಾ ತರಹೇವಾರಿ ಮಿಡಿತೆ-ಎಲೆಶೆಟ್ಟಿ[ಸೂರ್ಯನ ಕುದುರೆ]ಗಳು ಹಾರುತ್ತಾ ಬರುತ್ತಿದ್ದವು. ತಲೆಯಮೇಲಿನ ಸೂರು ಅದುರಿದ ರೀತಿಯಲ್ಲಿ, ಆಕಾಶದ ಭಾಗವೇ ತುಂಡುತುಂಡಾಗಿ ಕಳಚಿ ಬಿದ್ದ ರೀತಿಯಲ್ಲಿ, ಕರ್ಣಕಠೋರ ಸಪ್ಪಳದೊಂದ ವಾದ್ಯಮೇಳದಲ್ಲಿ,  ನೀರವದ ಕತ್ತಲಲ್ಲಿ ಆಗಾಗ ಮಿಂಚಿನ ಸಂಚಾರವಾಗಿ ಭೂಮಿ ಯೆಂಬ ವೇದಿಕೆ ಬೆಳಗುತ್ತದೆ!  ಮರಗಳಮೇಲಿನ ಹಕ್ಕಿಗಳು ಹೆದರಿ ಚೀಂ ಚೀಂ ಎಂದು ಚೀರುತ್ತಾ ಮತ್ತಲ್ಲೇ ಮುದುಡಿ, ರೊಯ್ಯ ರೊಯ್ಯನೆ ಬೀಸುವ ಗಾಳಿಗೂ-ಧೋ ಗುಟ್ಟಿ ಸುರಿವ ಮುಸಲಧಾರೆಗೂ ಈಡಾಗಿ-ಹರಿದ ಗೂಡಿನಲ್ಲೇ ಅಡ್ಜೆಸ್ಟ್ ಮಾಡಿಕೊಂಡು ಕಳೆಯುವ ರಾತ್ರಿಯನ್ನು ನೆನಪಿಸಿಕೊಂಡಾಗ, ಇಂದಿನ ಮಹಾನಗರಗಳ ತುಂಬಿಸಾಗುವ ನಗರಸಾರಿಗೆ ಬಸ್ಸುಗಳು ಕಣ್ಣೆದುರು ನಿಲ್ಲುತ್ತವೆ! ವಾತಾವರಣದ ಧೂಳು ಕೂತು, ಗಾಳಿಗೆ ಸಾಗಿಬಂದ ಕಸಕಡ್ಡಿ ಸ್ಥಿರವಾಗಿ ನೆಲೆನಿಂತು, ಒಣಗೆದ್ದ ಹಾವಸೆ ತೆವಳುತ್ತಾ ಅಲ್ಲಿಗೇ ಬಂದು ಸೇರಿ, ಮೊದಲ ಹನಿಮಳೆಗೆ ಮಣ್ಣಿನ ಕಟ್ಟೆಕಟ್ಟಿದಂತೇ ಹಂಚುಗಳ ಮಧ್ಯೆ ಅಲ್ಲಲ್ಲೇ ಗಟ್ಟಿಯಾಗಿ  ಸಮ್ಮಿಶ್ರ ಸರಕಾರದಂತಹ ವ್ಯವಸ್ಥೆ ತಯಾರಾಗಿ, ಬಿದ್ದ ಮಳೆಯ ನೀರು ಸರಾಗವಾಗಿ ಛಾವಣಿಯ ಒಳಗೇ ಧಾರೆ ಧಾರೆಯಾಗಿ ಬೀಳುವಾಗ, ಓಡಿಹೋಗಿ ಅಟ್ಟದಮೇಲಿಟ್ಟಹಳೆಯ ಕಂಚು-ತಾಮ್ರ-ಹಿತ್ತಾಳೆ ದಳ್ಳೆ-ಕೌಳಿಗೆ-ಕಡಾಯಿಗಳಂತಹ ಪಾತ್ರೆಗಳನ್ನು ತಂದು ಬೀಳುವ ಧಾರೆಗಳನ್ನು ಅವುಗಳಲ್ಲಿ ಶೇಖರಿಸಿ ಹೊರಚೆಲ್ಲುವ ಪ್ರಮೇಯ ಬರುತ್ತಿತ್ತು. ಉದ್ದದ ಕೋಲಿನಿಂದ ಹೆಂಚುಗಳನ್ನು ನಾಜೂಕಾಗಿ ಸ್ವಲ್ಪವೇ ಅಲ್ಲಾಡಿಸಿದಾಗ ಕೆಲವು ಕಟ್ಟೆಗಳು ಬೆಂಬಲ ಹಿಂಪಡೆದಾಗ ನಿಶ್ಶಕ್ತವಾದ ಸಮ್ಮಿಶ್ರ ಸರಕಾರದಂತೇ ಹಾಗೇ ಕಿತ್ತುಹೋಗಿ, ಆ ಜಾಗಗಳಲ್ಲಿ ಸೋರುವುದು ಖೈದಾಗುತ್ತಿತ್ತು.    

ಮಳೆಬಿದ್ದು ತುಸು ನಿಂತ ಮಾರನೇದಿನ ಬೆಳಿಗ್ಗೆ ಅಂಗಳದಂಚಿನಲ್ಲಿ ಹೆಂಚಿನಿಂದ ಉದುರಿದ ಕಸದ ಹೊಟ್ಟುಗಳೂ, ಮಳೆ ನೀರು ಹರಿಯುವ ರಭಸಕ್ಕೆ ಎಲ್ಲೆಲ್ಲಿಂದಲೋ ಸಾಗಿಬಂದ ಹಳೆಯ ಹೂವುಗಳು ಯಾವುದೋ ಕಾಗದ ತುಣುಕುಗಳು ಇವೆಲ್ಲಾ ಬಿದ್ದಿರುತ್ತಿದ್ದರೆ, ದೀಪವನ್ನರಸಿ ಬಂದ ಸಾವಿರ ಸಾವಿರ ರೆಕ್ಕೆಯ ಗೆದ್ದಲುಗಳು ಕುರುಕ್ಷೇತ್ರದಲ್ಲಿ ಸತ್ತುಮಲಗಿದ ಸೈನಿಕರಂತೇ ಧರೆಗುರುಳಿರುತ್ತಿದ್ದವು. ಅಲ್ಲಲ್ಲಿ ದಪ್ಪನೆಯ ಕಪ್ಪಿರುವೆಗಳು ಹರೆಯತೊಡಗುತ್ತಿದ್ದವು. ಬೆಳಗಿನ ಆಗಸದ ಬೆಳಕನ್ನು ಹೊರಗೆ ಕಂಡ ಮಿಡಿತೆಗಳು ಅಡಗಿದ್ದ ಜಾಗದಿಂದ ಪುಸಕ್ಕನೆ ಹಾರಿ ಜಾರಿಕೊಳ್ಳುತ್ತಿದ್ದವು, ಇನ್ನೂ ಕೆಲವು ಹಲ್ಲಿಗಳ ಬಾಯಿಗೆ ಆಹಾರವಾಗುತ್ತಿದ್ದವು. ಮರಗಳ ಟೊಂಗೆಯಮೇಲೆ ಅಲ್ಲಲ್ಲಿ ಕೂತು, ತೋಯ್ದ ರೆಕ್ಕೆಪುಕ್ಕಗಳನ್ನು ಝಾಡಿಸಿ ವದರಿಕೊಳ್ಳುತ್ತಾ ಇರುವ ನಾನಾ ಜಾತಿಯ ಹಕ್ಕಿಗಳು ತಮ್ಮನ್ನೆಲ್ಲಿ ಈ ಜನ ಹೊಡೆದುಬಿಟ್ಟಾರು ಎಂಬ ಸಂಶಯದಿಂದ ನೋಡುತ್ತಾ ಹಾರಿ ಹಾರಿ ಎತ್ತರದ ಟೊಂಗೆಗಳತ್ತ ಸಾಗುತ್ತಿದ್ದವು. ಮನೆಯ ಹೊರಗೂ ಒಳಗೂ ಎಲ್ಲಾ ಥಂಡಿ ಹೊಡೆದು ನೀರಿನ ಪಸೆ ಅಲ್ಲಲ್ಲಿ ಕಾಣುತ್ತಿತ್ತು. ಮನೆಯ ಮಗ್ಗುಲ ಅಡಕೆ ತೋಟಗಳಲ್ಲಿ ಗೊನೆತೂಗಿದ ಅಡಕೆಮರಗಳು ಬೀಸಿದ ಗಾಳಿಗೆ ಮುರಿದುಬಿದ್ದಿರುತ್ತಿದ್ದವು. ತೆಂಗಿನ ಮರಗಳ ಒಣಗಿದ ಗರಿಗಳು ಬೀಳುತ್ತಲೇ ಇರುತ್ತಿದ್ದವು. ಅಡ್ಡಾದಿಡ್ಡಿ ಬಿದ್ದಿರುತ್ತಿದ್ದ ಅವುಗಳನ್ನೆಲ್ಲಾ ಸರಿಪಡಿಸಿಕೊಳ್ಳುತ್ತಾ ತೋಟದ ಅವಳೆಗಳಲ್ಲಿ ನಿಂತ ನೀರನ್ನು ಬಿಡಿಸಿ ಹರಿಯಗೊಡುತ್ತಾ ಮಳೆಗೆ ಒಗ್ಗಿಕೊಳ್ಳಬೇಕಾಗುವುದು ಸಹಜವಾಗಿತ್ತು. ಕೆಲವೊಮ್ಮೆ ೩-೪ ಅಥವಾ ೫-೬ ದಿನಗಳ ಪರ್ಯಂತ ಬಿಟ್ಟೂಬಿಡದೇ ಕುಟ್ಟುವ ಮಳೆಗೆ ನೆರಹಾವಳಿ ಬಂದುಬಿಡುತ್ತಿತ್ತು! ಹಾಗೊಮ್ಮೆ ಅಷ್ಟೆಲ್ಲಾ ಮಳೆ ಬಂದಾಗ ಶಾಲೆಗಳು ರಜಾ ಘೋಷಿಸುತ್ತಿದ್ದವು. ಉಕ್ಕಿಬಂದ ನದಿಯನ್ನು ಭಯ-ಭೀತಿಯಿಂದ ದೂರದಿಂದ ಈಕ್ಷಿಸುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಬಡತನವೇ ಹಾಸುಹೊಕ್ಕಾದ ಹಲವು ಮನೆಗಳಲ್ಲಿ ಬಾಳೇಕಾಯಿ ಪಲ್ಯ ಬೆಳಗಿನ ತಿಂಡಿಯಾಗಿರುತ್ತಿತ್ತು ಎಂದು ಬಲ್ಲೆ. ಹಲಸಿನಕಾಯಿ ಹಪ್ಪಳವನ್ನು ಕೆಂಡದಲ್ಲಿ ಸುಟ್ಟಿ, ಅದರ ಎರಡೂ ಮಗ್ಗಲುಗಳಿಗೆ ಕೊಬ್ಬರಿಎಣ್ಣೆ ಸವರಿ, ತೆಂಗಿನ ತುರಿಯ ಜೊತೆಗೆ ತಿನ್ನುವುದು ಮಕ್ಕಳಿಗೆ ಸಿಗುವ ಸಂಜೆಯ ತಿನಿಸು!   

ಅಡಕೆಯ ಬೆಳೆ ರಕ್ಷಣೆಗಾಗಿ ಔಷಧಿ[ಸುಣ್ಣ ಮಿಶ್ರಿತ ಕಾಪರ್ ಸಲ್ಫೇಟ್] ಸಿಂಪಡಿಸುವುದೇ ಒಂದು ದೊಡ್ಡ ಕಂಬಳ. ಜಾರುವ ಎತ್ತರದ ಮರಗಳನ್ನೇರಿ ಆ ಎತ್ತರಕ್ಕೆ ಇರುವ ಅಡಕೆ ಗೊನೆಗಳಿಗೆ ಔಷಧಿ ಸಿಂಪಡಿಸುವುದು ಎಲ್ಲರಿಂದಲೂ ಆಗುವ ಕೆಲಸವಲ್ಲ; ಅದಕ್ಕೆಂದೇ ’ಮರಕಸುಬಿನವರು’ ಎಂಬ ಮಂದಿ ಇರುತ್ತಾರೆ; ಅವರು ಅದೇ ಕೆಲಸದಲ್ಲಿ ನಿಷ್ಣಾತರು. ಅಂತಹ ನಿಷ್ಣಾತರೂ ಕೆಲವೊಮ್ಮೆ ಮರದಿಂದ ಕೆಳಗೆ ದೊಪ್ಪನೆ ಬಿದ್ದು ಸೊಂಟ ಮುರಿದುಕೊಳ್ಳುವ ಘಟನೆಗಳೂ ಇರುತ್ತಿದ್ದವು! ಪಾದ ಹೂತುಹೋಗುವ ಒದ್ದೆ ನೆಲದ ತೋಟದಲ್ಲಿ, ಅಲ್ಲಲ್ಲಿ ’ಗಟೋರ್’ ಮುಂತಾದ ಕೃಷಿ ಸಲಕರಣೆಗಳನ್ನು ತಯಾರಿಸುವ ಕಂಪನಿಗಳ ಪಂಪುಗಳನ್ನು ಇಟ್ಟುಕೊಂಡು, ಅವುಗಳ ಸಹಾಯದಿಂದ ಪೈಪಿನ ಮೂಲಕ, ದೋಟಿ-ಕಡಕ್ಮಣೆ-ಅಂಡುಗಚ್ಚೆ ಕಟ್ಟಿಕೊಂಡು ಮರವೇರುವ ವೀರನಿಗೆ ಔಷಧಿ ತಲ್ಪಿಸುವುದೇ ಇನ್ನೊಂದು ಕೆಲಸ. ಪಂಪಿಗೆ ಅಳವಡಿಸಿದ ಉದ್ದದ ಹಿಡಿಕೆಯನ್ನು ಹಿಂದಕ್ಕೂ ಮುಂದಕ್ಕೂ ತಳ್ಳಿ ಆ  ಮೂಲಕ ವಾಯುವಿನ ಸೆಳೆತದಿಂದ ಪೈಪಿನಲ್ಲಿ ಔಷಧಿ ಮೇರ್ಲೇರಿಸುವುದು ಅಲ್ಲಿರುವ ಕ್ರಮ. ಹಾಗೆ ಆ ಕೆಲಸಮಾಡುವಾಗ ತೋಟದಲ್ಲಿ ಕೊಳೆತ ಅಡಕೆ ಸೋಗೆಗಳಲ್ಲೋ, ಹಾಳೆಗಳ ರಾಶಿಯಲ್ಲೋ ಜನ್ಮತಳೆದ ಅಸಂಖ್ಯ ದಪ್ಪಸೊಳ್ಳೆಗಳು ಸದಾ ಯಮಯಾತನೆ ನೀಡುತ್ತಿದ್ದವು. ನಮ್ಮಲ್ಲಿನ ತೋಟಗಳಲ್ಲೇ ಹುಟ್ಟಿದ ಸೊಳ್ಳೆಗಳಾದುದರಿಂದ ಅವು ರೋಗಗಳನ್ನು ಹರಡುವ ಸಾಧ್ಯತೆ ಕಮ್ಮಿ ಇತ್ತು. ಇಲ್ಲದಿದ್ದರೆ ಅದೆಷ್ಟೋ ಜನ ಮಲೇರಿಯಾದಂತಹ ಜ್ವರಗಳಿಂದ ಅಸುನೀಗಬೇಕಾಗುತ್ತಿತ್ತು. ಆದರೂ ಇಂಜೆಕ್ಷನ್ ಸೂಜಿಗಿಂತಾ ಮೊನಚಾದ ತಮ್ಮ ಬಾಯ ನಳಿಕೆಗಳಿಂದ ಅವು ರಕ್ತ ಹೀರಿ ಹೊರಟಮೇಲೆ, ಆ ಜಾಗಗಳಲ್ಲಿ ನವೆಯಾಗಿ ಸ್ವಲ ಊದುತ್ತಿತ್ತು. ಇಲ್ಕೇಳಿ ಹೋಯ್, ನಾವೆಲ್ಲಾ ಕಮ್ಮಿ ಕಮ್ಮಿ ಅಂದ್ರೂ ದಿನಕ್ಕೆ ನೂರಾರು ಸೊಳ್ಳೆ ಕಡಿತವನ್ನು ಅನುಭವಿಸಿದವರೇ! ಇದೊಂದು ವಿಶಿಷ್ಟ ಅನುಭವವೇ ಸರಿ.   

ಔಷಧಿ ಹೊಡೆದ ನಂತರದ ವಾರದಲ್ಲಿ ರೈತನಿಗೆ ಇರುವುದರಲ್ಲೇ ತುಸು ಬಿಡುವು. ಛತ್ರಿ ಹಿಡಿದು ಹೊರಗೆ ಹೋಗುವ ಪ್ರಯತ್ನ! ಸೂರ್ಯನನ್ನೇ ಕಾಣದ ತಾಣದಿಂದ ಸೂರ್ಯನನ್ನು ಹುಡುಕುತ್ತಲೋ ಎಂಬಂತೇ, ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಹತ್ತಿರದ ಪಟ್ಟಣಗಳಿಗೆ ಹೋಗುವುದಿತ್ತು. ಸೋರುವ ಬಸ್ಸುಗಳಲ್ಲಿ ನಿಂತೋ ಕುಂತೋ ಅಂತೂ ಸಾಗುವುದು. ಮಳೆನೀರಿಗೆ ಅರ್ಧ ತೋಯ್ದ ಬಟ್ಟೆಗಳು ಬೆವರನ್ನೂ[ಕರಾವಳಿ ಪ್ರಾಂತಗಳಲ್ಲಿ ಮಳೆಯಲ್ಲೂ ಸೆಕೆಯ ವಾತಾವರಣ ಇರುವುದು ಸರ್ವೇ ಸಾಮಾನ್ಯ!] ಹೀರಿಕೊಂಡು ಅಸಹ್ಯಕರ ಮುಗ್ಗಿದ ವಾಸನೆ ಹಬ್ಬಿಸುವಾಗ ಯಾಕಾದರೂ ಬೇಕು ಎನಿಸುತ್ತಿತ್ತು. ಸಾಲದ್ದಕ್ಕೆ ಕರಾವಳಿಯ ಖಾರ್ವೀ ಜನ ಮೀನುಬುಟ್ಟಿ ಇಟ್ಟುಕೊಂಡು ಕುಳಿತುಬಿಟ್ಟರೆ ದೇವರೇಗತಿ! ಟಾರು ರಸ್ತೆಯಮೇಲೆ ಗುಪ್ಪು ಹಾರುತ್ತಾ ಕುಪ್ಪಳಿಸುವ ಸಣ್ಣ ಸಣ್ಣ ಕಪ್ಪೆಗಳೂ ವೇಗದಲ್ಲಿ ತಮ್ಮನ್ನು ಮೀರಿಸುವವೇ ಇಲ್ಲಾ ಎಂದುಕೊಂಡ ಚಿಕ್ಕ ಏಡಿಗಳೂ ತಮ್ಮಲ್ಲೇ ಸ್ಪರ್ಧೆಯನ್ನು ಏರ್ಪಡಿಸಿಕೊಂಡಹಾಗೇ ಇರುತ್ತಿತ್ತು. ದೂರದಿಂದ ಟಾರು ರಸ್ತೆ ನೋಡಲೆಂದೇ ಬಂದವೋ ಎಂಬಂತಿರುವ ಅವುಗಳು ವಾಹನಗಳ ಚಕ್ರಗಳಿಗೆ ಸಿಕ್ಕು ಅಪ್ಪಚ್ಚಿಯಾದ ಚಿತ್ರಣಗಳು ಸದಾ ಇದ್ದೇ ಇರುತ್ತಿದ್ದವು. ಸತ್ತ ಅಂತಹ ಪ್ರಾಣಿಗಳ ಅವಶೇಷ ಮತ್ತೆಂಥದೋ ದುರ್ಗಂಧವನ್ನು ಗಾಳಿಯಲ್ಲಿ ತೂರುತ್ತಿತ್ತು. ಆದರೂ ಅಲ್ಲಲ್ಲಿ ಯಾರೋ ಮುಡಿದ ಹೂವುಗಳಿಂದಲೋ, ಪಟ್ಟಣಪ್ರದೇಶದಲ್ಲಿ ಹೂವಾಡಿಗರು ಇಟ್ಟುಕೊಳ್ಳುತ್ತಿದ್ದ ಜಾಜಿ-ಮಲ್ಲಿಗೆ-ಸಂಪಿಗೆ ಹೂವುಗಳಿಂದಲೋ ಆಹ್ಲಾದಕರ ಪರಿಮಳ ಹಾದು ಬಂದು ಮೂಗಿಗೆ ಬಡಿದು, ಜನ ’ಬದುಕಿದೆಯಾ ಬಡಜೀವವೇ’ ಎಂದುಕೊಳ್ಳುತ್ತಿದ್ದರು. ಹೊರಗೆ ಆಗಾಗ ಬರುತ್ತಲೇ ಇರುವ ಮಳೆಯ ಮಧ್ಯೆಯೇ ಹೊಗೆ ಸೂಸುವ ಕಾಮತರ ಹೋಟೆಲ್ಲಿನಿಂದ, ಕರಿದ ಈರುಳ್ಳಿ ಬಜೆ[ಬಜ್ಜಿ]ಯ ಪರಿಮಳ ಕಿಲೋಮೀಟರಿನ ತನಕ ಸಾಗಿಬರುತ್ತಿತ್ತು! "ಕಾಮತ್ ಮಾಮ್ ಮಿಸಳ್ ಅಸ್ಕಿ ಪಳೆ" ಎಂದು ಕೊಂಕಣಿಯಲ್ಲಿ ನಾವಂದ್ರೆ, ದರ್ಶನಮಾತ್ರದಿಂದಲೇ ಬಂದವರು ಕೊಂಕಣಿ ಭಾಷಿಕರಲ್ಲಾ ಎಂದು ಅಳೆದ ಕಾಮತರು, ಜಾರಿದ ಸೋಡಾಗ್ಲಾಸನ್ನು ಬೆರಳಲ್ಲಿ ಹಿಂದಕ್ಕೆ ತಳ್ಳಿಕೊಂಡು "ಮಿಸಳ್ ಭಾಜಿ ಅದೆ ಮಾರಾಯ್ರೆ ಕೊಡ್ಲಾ? ಎಷ್ಟು ಒಂದ್ ಪ್ಲೇಟಾ?" ಎನ್ನುತ್ತಾ  ಪಟ್ಟಾಪಟ್ಟಿ ದೊಗಳೆ ಚಡ್ಡಿಯ ಎರಡೂ ಬಾಜೂಗಳಿಗೆ ಕೈ ವರೆಸಿಕೊಳ್ಳುತ್ತಾ ಬರುತ್ತಿದ್ದರು; ನಿತ್ಯವೂ ಕೈ ಒರೆಸೀ ಒರೆಸೀ, ಕಾಮತರ ಚಡ್ಡಿಯ ಎರ್ರಡೂ ಪಕ್ಕೆಗಳಿಗೆ ಮಿಶ್ರವರ್ಣದ ಎನಾಮೆಲ್ ಪೇಂಟ್ ಹಚ್ಚಿದ ಹಾಗೇ ಕಾಣುತ್ತಿತ್ತು! "ಒಂದು ಮಿಸ್ಸಳು" ಎಂದು ಕೂಗಿಕೊಂಡು ಅಡುಗೆಮನೆಗೆ ಹೋದರೆ ಅಲ್ಲಿ ಅವರೇ ಅಡುಗೆಭಟ್ಟರಾಗುತ್ತಾರೆ, ಪ್ಲೇಟಿನಲ್ಲಿ ತಿಂಡಿ ಹಾಕಿಕೊಂಡು ಹೊರಗೆ ಬಂದಾಗ ಅವರೇ ಸಪ್ಲೈಯರ್ ಆಗುತ್ತಾರೆ, "ಹೇಯ್ ಟೇಬಲ್ ಕ್ಲೀನ್ ಮಾಡೋ" ಎಂದು ನಾರುವ ಒದ್ದೆಬಟ್ಟೆಹಿಡಿದು ಅವರೇ ಕ್ಲೀನರ್ ಆಗುತ್ತಾರೆ, " ಬಿಲ್ ತಗೊಳಿ ಏಳ್ ರೂಪಾಯ್" ಎಂದು ಗಲ್ಲಾದ ಮೇಲೆ ಕುಳಿತಾಗ ಅವರೇ ಸಾಹುಕಾರರು!  ಥಂಡಾಹೊಡೆದ ವಾತಾವರಣದಲ್ಲಿ ತಿರುಗಾಡುವಾಗ ಬಿಸಿಬಿಸಿ ಏನಾದರೂ ತಿನ್ನುವ ಹಂಬಲಕ್ಕೆ ಇಂತಹ ಕೆಲವು ಹೋಟೆಲ್ಗಳೇ ಇರುತ್ತಿದ್ದವು. ವಿವಿಧತೆಯಲ್ಲೂ ಏಕತೆ ಸಾರುವ ನಮ್ಮ ತಾಕತ್ತಿಗೆ ಇದಕ್ಕಿಂತಾ ಹೆಚ್ಚಿನ ಉದಾಹರಣೆ ಬೇಕೇ ?   

ಮಳೆಗಾಲದ ಕಡಲು ರುದ್ರ ರಮಣೀಯ!! ಅಬ್ಬರಿಸುತ್ತಾ ಉಕ್ಕಿಬರುವ ತೆರೆಗಳ ಎತ್ತರ ಜಾಸ್ತಿ; ತೆರೆಗಳು ಏಳುವುದೂ ಜಾಸ್ತಿ. ಬಂದುಸೇರುವ ಹೊರಗಿನ ಕಲ್ಮಶಗಳನ್ನೆಲ್ಲಾ ತಂದು ದಡಕ್ಕೆ "ಬೇಡಾ ನೀವೇ ಇಟ್ಕೊಳಿ" ಎಂದು ಅಬ್ಬರಿಸಿ ಬಿಸುಟುಹೋದ ಹಾಗೇ ಬಿಸುಡುವ ಅಲೆಗಳನ್ನು ನೋಡುತ್ತಾ ಮರಳಲ್ಲಿ ಹೆಜ್ಜೆಹಾಕುತ್ತಾ ನಡೆದರೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ಶಂಖ, ಹವಳ, ಮುತ್ತು ಇವುಗಳನ್ನೆಲ್ಲಾ ಹುಡುಕುವ ತವಕ ಎದೆಯೊಳಗಿದ್ದರೂ ಸಾಮಾನ್ಯವಾಗಿ ಅವುಗಳು ದೊರೆಯುತ್ತಿರಲಿಲ್ಲ. ಕಪ್ಪೆಚಿಪ್ಪು, ನಕ್ಷತ್ರಮೀನು, ’ಸಮುದ್ರನಾಲಿಗೆ’ ಎನಿಸಿಕೊಳ್ಳುವ ಜೀವಿಯ ಅವಶೇಷ ಇತ್ಯಾದಿಗಳೇ ಸಿಗುತ್ತಿದ್ದವು. ಸಾಗರ ಕಿನಾರೆಯಲ್ಲಿ ಒಂದಷ್ಟು ಹೊತ್ತು ಕಳೆಯುವ ಹೊತ್ತಿಗೆ ಇನ್ನೇನು ಮತ್ತೆ ಮಳೆ ಬಂತು ಎಂತಲೇ ಅರ್ಥ!

ಹಳ್ಳಿಗಳಿಗೆ ಸಾರ್ವತ್ರಿಕವಾಗಿ ವಾಚನಾಲಯಗಳಾಗಲೀ ಪತ್ರಿಕೆ/ಮಾಧ್ಯಮಗಳ ವ್ಯವಸ್ಥೆಯಾಗಲೀ ಇರುತ್ತಿರಲಿಲ್ಲ. ಗ್ರಾಮಚಾವಡಿ ಎಂಬುದಕ್ಕೆ ಸರಕಾರ ಗ್ರಾಮಫೋನ್ ಎಂಬುದನ್ನು ಕೊಟ್ಟಿತ್ತು. ಅದನ್ನು ನೋಡಲು ನಾವೆಲ್ಲಾ ಹೋಗಿದ್ದೆವು. ಅಲ್ಲಿನ ಸರಪಂಚರು "ಹತ್ತಿರಹೋಗಬೇಡಿ,ಅಲ್ಲಿದೆ ನೋಡಿ" ಎಂದು ಬೆರಳುತೋರಿದೆಡೆಗೆ ನಾವು ದೂರದಲ್ಲಿ ನಿಂತು ಅದರ ವೈಖರಿಯನ್ನು ನೋಡಿದ್ದೆವು. ಅದು ತಿರುಗಿದಾಗ ಕಹಳೆಯಂಥದ್ದರಲ್ಲಿ ಮಾನವ ಧ್ವನಿ ಹೊರಹೊಮ್ಮುತ್ತಿತ್ತು. ಆ ಉಪಕರಣದಲ್ಲಿ ಮಾನವರು ಎಲ್ಲಿ ಕೂತಿದ್ದಾರೆ ಎಂಬುದೇ ಕೊನೆಗೂ ನಮಗೆಲ್ಲಾ ಅರ್ಥವಾಗದ ಚಿದಂಬರ ರಹಸ್ಯವಾಗಿತ್ತು!! ರೇಡಿಯೋದಲ್ಲಿ ಆಗಾಗ ವಾರ್ತೆಗಳು ಬಿತ್ತರಗೊಳ್ಳುತ್ತಿದ್ದವು. ಗೊರಗೊರ ಗುಡುವ ರೇಡಿಯೋಗಳಲ್ಲಿ ಸರಿಯಾಗಿ ಸುದ್ದಿ ಕೇಳಬೇಕೆಂದರೆ ಅವುಗಳಿಗೆ ಎತ್ತರದ ಏರಿಯಲ್ [ಹಾಗಂದ್ರೆ ಏನು ಎಂದು ಗೊತ್ತಿರಲಿಲ್ಲ ದಯಮಾಡಿ ಕ್ಷಮಿಸಿ, ಎತ್ತರದ ಬಿದಿರು ಗಳವನ್ನು ಮನೆಯ ಹತ್ತಿರದ ಮರಕ್ಕೋ ಛಾವಣಿಗೋ ಕಟ್ಟಿ, ಅದರ ತುದಿಯಿಂದ ತಂತಿಯೊಂದನ್ನು ತಂದು ಈ ರೇಡಿಯೋಗೆ ಸಿಕ್ಕಿಸುತ್ತಿದ್ದರು: ಆಕಾಶದಲ್ಲಿ ಓಡಾಡುವ ದೇವತೆಗಳ ಕೃಪೆಯಿಂದ ರೇಡಿಯೋದಲ್ಲಿ ಕಟ್ಟಿದ ಕಫ ಸಡಿಲವಾಗಿ ಗೊರಗೊರ ಸದ್ದು ಅಡಗುತ್ತಿತ್ತು ಎಂಬುದು ನಮ್ಮ ಕಲ್ಪನೇ ಅಷ್ಟೇ! ಯಾಕೆಂದ್ರೆ ನಾವೆಲ್ಲಾ ಆಗ ಚಿಕ್ಕ ಮಕ್ಕಳು ಮಾರಾಯ್ರೆ]ಬೇಕಾಗುತ್ತಿತ್ತು. ಇಂದಿನಂತೇ ಅಪಘಾತಗಳ, ಅಪರಾಧಗಳ ವರದಿ ಆಗುತ್ತಿರುವಂತೆಯೇ ಬರಲು ಸಾಧ್ಯವಿತ್ತೇ? ಇಲ್ಲ. ಯಾರೋ ಮಂತ್ರಿ-ಮಹೋದಯರಿಗೆ ಹಲ್ಲು ನೋವು ಬಂದಿದ್ದನ್ನೇ ಹತ್ತಿಪ್ಪತ್ತು ಸರ್ತಿ ಬಿತ್ತರಿಸುತ್ತಿದ್ದರು! ಎಲ್ಲೋ ಯಾರೋ ವಾಹನಾಪಘಾತದಲ್ಲೋ ಅಥವಾ ಇನ್ಯಾವುದೋ ಅಪಘಾತದಲ್ಲೋ ಸತ್ತಿದ್ದರೆ ಅವರು ಸತ್ತ ಹನ್ನೊಂದು ದಿನ ಕಳೆದಮೇಲೇ ಸುದ್ದಿ ಬರುತ್ತಿದ್ದುದು ವಿಶೇಷ[ಕ್ಷಮಿಸಿ ರಾಜಕಾರಣಿಗಳಿಗೆ ನಾನು ಹೇಳಿದ್ದರಲ್ಲಿ ವಿನಾಯತಿ ಇತ್ತು; ಅಂಥವರು ಸತ್ತರೆ ಆ ದಿನವೇ ಅಥವಾ ಮಾರನೇ ದಿನವೇ ಬಿತ್ತರಗೊಳ್ಳುತ್ತಿತ್ತು!] ರೇಡಿಯೋದಲ್ಲಿ ಶಹನಾಯಿ ವಾದನ ತೇಲಿಬಂದರೆ ಯಾರೋ ಸತ್ತಿದ್ದಾರೆ ಅಂತಲೇ ನಮ್ಮಲೆಕ್ಕ!  ಆಫ್ಕೋರ್ಸ್ ರಾಜಕಾರಣಿಗಳು ಸತ್ತರೆ ನಮಗೆ ಶಾಲೆಗೆ ರಜಾ ಸಿಗುತ್ತಿತ್ತಲ್ಲಾ ಹೀಗಾಗಿ ಆ ಕಡೆ ಸ್ವಲ್ಪ ಕಿವಿ ಜಾಸ್ತಿ ನಿಮಿರುತ್ತಿರುತ್ತಿತ್ತು!  

ಮಳೆಗಾಲದಲ್ಲಿ ಸರಿಸುಮಾರು ೬ ತಿಂಗಳಕಾಲ ತೀರಾ ಎಲ್ಲೂ ಹೋಗಲಾಗುತ್ತಿರಲಿಲ್ಲ. ಶ್ರಾವಣ-ಭಾದ್ರಪದ-ಆಶ್ವೀಜ-ಕಾರ್ತೀಕ ಮಾಸಗಳಲ್ಲಿ ಬರುವ ಹಬ್ಬಗಳೇ ನಮಗೆ ಮನರಂಜನೆ. ಹಬ್ಬಗಳ ದಿನಗಳಲ್ಲೋ ಅಥವಾ ದಿನಮುಂಚೆಯೋ ನಂತರವೋ ಅಲ್ಲಲ್ಲಿ ತಾಳಮದ್ದಲೆ, ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಯಾವುದೂ ಇರದಿದ್ದರೆ ಭಜನೆ ನಡೆಯುತ್ತಿತ್ತು. ದೇವಸ್ಥಾನಗಳಲ್ಲಿ ಹೂವಿನ ಪೂಜೆ ನಡೆಯುತ್ತಿತ್ತು. ಎಲ್ಲಾವಿಧದ ಹೂವುಗಳ ಜೊತೆಗೆ ಜಾಜಿ-ಸೇವಂತಿಗೆಗಳನ್ನು ಜಾಸ್ತಿ ಬಳಸಿ ಅವುಗಳಿಂದಲೇ ವಿಗ್ರಹದ ಸುತ್ತ ಮಂಟಪದಂತೇ ಅಲಂಕರಿಸುವುದಿತ್ತು; ನಮ್ಮ ಕಣ್ಣುಗಳಿಗೆ ಇವೆಲ್ಲಾ ವಿಶೇಷವೇ ಸರಿ. ತಾಳಮದ್ದಲೆಯಲ್ಲಿ ನಡೆಸುವ ಪ್ರಸಂಗದ ಅರ್ಥವಿವರಣೆ ಗೊತ್ತಾಗದಿದ್ದರೂ ಪರವಾಗಿಲ್ಲ, ಭಾಗವತಿಕೆ ಇಂಪಾಗಿದ್ದರೆ ಸಾಕು ಎಂದುಕೊಂಡು, ಹಿರಿಯರ ಜೊತೆಗೆ, ಹಠಮಾಡಿಕೊಂಡು ಹೋಗುತ್ತಿದ್ದ ನಮಗೆ ಮನೆಗೆ ಯಾವಾಗ ಬಂದೆವು ಎಂಬುದು ಬೆಳಗಾದಮೇಲಿನ ಅಚ್ಚರಿ! "ರಾತ್ರಿ ಬರಬೇಡ ಅಂದ್ರೆ ಬಂದ್ಯಲ್ಲಾ ನಿನ್ನನ್ನು ಅಲ್ಲಿಂದ ಮನೆತನಕ ಹೊತ್ತು ಹೆಗಲೆಲ್ಲಾ ನೋವು" ಎಂದು ಹಿರಿಯರು ಬೈಯ್ದಾಗಲೇ ನಡೆದದ್ದರ ಅರಿವು!

ಶಾಲೆಗೆ ರಜಾ ಇದ್ದರೆ ಹೊರಟುಬಿಡುತ್ತಿದ್ದ ನಮ್ಮ ಸವಾರಿ ಊರ ಸುತ್ತಲ ಗುಡ್ಡ-ಬೆಟ್ಟಗಳ ಕಡೆಗೆ ಹೋಗಿಬಿಡುತ್ತಿತ್ತು. ಹೇರಳ ಮಳೆಯನ್ನು ಹೀರಿ ಹೀರಿ ನೆಲದಲ್ಲಿ ಒರತೆಗಳು ಎದ್ದು ನೀರು ಜಿನುಗಿ ಹರಿಯುವುದು ಕಾಣುತ್ತಿತ್ತು. ಮರಗಳು ಮೈಕೈ ತುಂಬಿಕೊಂಡು ಸುಪುಷ್ಟವಾಗಿರುತ್ತಿದ್ದರೆ ಇಡೀ ಪ್ರದೇಶ ಹಸಿರು ಹುಲ್ಲಿನಿಂದ ಕಂಗೊಳಿಸುತ್ತಿತ್ತು. ಕೆಲವೊಮ್ಮೆ ನಮ್ಮ ಜೊತೆಗೆ ಆಗಿನ್ನೂ ಅಮ್ಮನ ಹಾಲೂಡುವುದನ್ನು ನಿಲ್ಲಿಸಿದ ಚಿಕ್ಕ ಆಕಳ ಕರುಗಳನ್ನು ಕರೆದೊಯ್ಯುವುದಿತ್ತು. ಅವುಗಳಿಗೆ ಉದ್ದನೆಯ ಹಗ್ಗ ಕಟ್ಟಿ ಹುಲ್ಲುಗಾವಲುಗಳಲ್ಲಿ ಮೇಯಲು ಬಿಡುತ್ತಿದ್ದೆವು. ಬಹಳ ಹೊತ್ತು ಎಳೆತನದ ಹೊಸಲೋಕ ಅವುಗಳಿಗೆ ಕಸಿವಿಸಿಯುಂಟುಮಾಡುತ್ತಿತ್ತೋ ಏನೋ. ಕಿವಿಯಲ್ಲಿ ಗಾಳಿ ಸುಯ್ಯನೆ ಸುಳಿದಾಗ ಚಂಗನೆ ಅವುಗಳು ಜಿಗಿದಾಡುತ್ತಿದ್ದವು. "ಅಂಬೇ" ಎಂದು ಕೂಗುತ್ತಿದ್ದವು. ಅವುಗಳೊಡನೆ ಆಟವಾಡುತ್ತಾ ಕಾಲ ಸರಿದು ಹೋಗುತ್ತಿದ್ದಾಗ ಸುತ್ತಲ ಮರಗಿಡಗಳಮೇಲೆ ಗಿಳಿ, ಅಳಿಲು, ಕೆಂಬೂತ, ಮರಕುಟಿಗ, ಚಾರ್ವಾಕ[ಓಬಲ್ಹಕ್ಕಿ]ಗಳು ನಲಿದಾಡುತ್ತಿದ್ದವು. ಕೋಡಗಳು ಮರದಿಂದ ಮರಕ್ಕೆ ಹಾರಿ-ಜಿಗಿಯುತ್ತಿದ್ದರೆ ಮರಿಕೋಡಗಳು ಮರದ ಅಲೆಯುವ ಬೀಳಲುಗಳನ್ನು ಹಿಡಿದು ಜೋಕಾಲಿ ಜೀಕುತ್ತಿದ್ದವು!   ದೂರದಲ್ಲೆಲ್ಲೋ ನವಿಲುಗಳು "ಯಾಂವೋ ಯಾಂವೋ" ಎಂದು ಕೂಗುವುದು ಕೇಳುತ್ತಿತ್ತು. ಮಧ್ಯೆ ಮೋಡಗಟ್ಟಿ ಮತ್ತೆ ಮಳೆಬರಲಾರಂಭಿಸಿದಾಗ ನಮ್ಮ ತಾಪತ್ರಯ ಹೇಳಬೇಕೇ? ಒಂದೆಡೆ ಗುಡುಗು-ಸಿಡಿಲಿನ ಭಯ, ಇನ್ನೊಂದೆಡೆ ಅಂದದ ಕರುಗಳು ನೆನೆಯುತ್ತವಲ್ಲಾ ಎಂಬ ಆತಂಕ. ಅಕಸ್ಮಾತ್ ಮನುಷ್ಯರಾಗಿದ್ದರೆ "ಹೇ ಯಾಕ್ರೋ ನಮ್ಮ ಮಕ್ಕಳನ್ನ ಮಳೇಲಿ ನೆನೆಸಿದ್ರಿ? ನಿಮಗೆ ತಲೆ ಸರಿಯಿದ್ಯಾ?"ಎಂದು ಅಮ್ಮಂದಿರು ಬೈಯ್ಯುತ್ತಿದ್ದರು, ಕರುಗಳಿಗೆ ಪಾಪ ಹಾಗುಂಟೇ? ಅಮ್ಮ ಎಲ್ಲೋ ಮೇಯಲು ದೂರದ ಗೋಮಾಳಕ್ಕೆ ಹೋಗಿರುತ್ತಾಳೆ, ಬಂದಮೇಲೆ ನೆಕ್ಕುತ್ತಾಳೆ ಬಿಟ್ಟರೆ ಬೇರೇನೂ ತಕರಾರಿಲ್ಲ ಅಲ್ಲವೇ? ಕರುಗಳು ಆಡುತ್ತಿರುವಾಗ ನಾವು ಅಕ್ಕಪಕ್ಕದ ಚಿಕ್ಕಪುಟ್ಟ ಮರಗಳನ್ನೇರುವುದೂ ಇತ್ತು. ಅಲ್ಲಿಂದ ದೃಷ್ಟಿ ಹಾಯಿಸಿದಾಗ ನೊರೆಯುಕ್ಕಿಸುತ್ತಾ ಹರಿಯುವ ಮಳೆಗಾಲದ ತೊರೆಗಳು ಕಾಣಿಸುತ್ತಿದ್ದವು. ಆಹಾ ಎಂತಹ ಸುಂದರಿ ಭೂಮಿತಾಯಿ!! ಸರ್ವಾಭರಣ ಭೂಷಿತೆಯಾಗಿ ಮದುಮಗಳಂತೇ ಅಣಿಯಾದ ಆಕೆಯ ಅಲಂಕಾರಕ್ಕೆ ಇನ್ನೇನು ಬೇಕು?  

ಊರ ಹೊರಗಿನ ಬೆಟ್ಟಕ್ಕೆ ತೆರಳಿದರೆ ಅಲ್ಲಿ ಪ್ರಶಾಂತ ವಾತಾವರಣ. ಯಾರ ಹಂಗಿಲ್ಲದ ನಿಸರ್ಗ ತನ್ನೊಳಗೇ ತಾನು ತನ್ನನ್ನೇ ಕಂಡುಕೊಂಡ ಮುಮುಕ್ಷುವಿನಂತೇ, ನಿಸರ್ಗೇತರ ಸದ್ದುಗದ್ದಲವಿಲ್ಲದೇ, ಮಾನವ ನಿರ್ಮಿತ ಯಂತ್ರಗಳ ಸದ್ದಿಲ್ಲದೇ, ಜನಗಳ ಮಾತಿನ ಗೌಜಿಲ್ಲದೇ, ಕಾರ್ಖಾನೆಗಳ ದೂಷಿತ ಹೊಗೆಯಿಲ್ಲದೇ, ಕಲ್ಮಶವಾದ ನೀರಿನ ಹರಿವಿಲ್ಲದೇ ಎಷ್ಟು ಶುಭ್ರ, ಎಂಥಾ ಸ್ವಚ್ಛ! ವನ್ಯಜೀವಿಗಳಲ್ಲಿ ಆಹಾರ ಸರಪಣಿಯೊಂದು ನೋವನ್ನು ತರುವಂಥದ್ದು ಬಿಟ್ಟರೆ, ಮಿಕ್ಕುಳಿದ ರೀತಿಯಲ್ಲಿ ನಿಸರ್ಗದ ನಿಜವಾದ ಮಕ್ಕಳು ಅವಾಗಿವೆ. ಅಲ್ಲಿ ಬಡವ-ಬಲ್ಲಿದ, ಮಂತ್ರಿ-ಶ್ರೀಸಾಮಾನ್ಯ,ಜಾತಿ-ಮತ, ಮೇಲು-ಕೀಳು, ಮಡಿ-ಮೈಲಿಗೆ, ಧರ್ಮ-ಅಧರ್ಮ ಈ ಯಾವ ಗೋಜಲುಗಳೂ ಇಲ್ಲ! ನಿಸರ್ಗಕ್ಕೆ ಅದರದ್ದೇ ಆದ ಧರ್ಮ ಅದು ಪ್ರಕೃತಿ ಸಹಜಧರ್ಮ. ಅಂತಹ ಆ ನಿಸರ್ಗದಲ್ಲಿ ಯವುದೋ ಮರದ ಕೆಳಗೆ ಕೂತು ಕೊಳಲೂದುತ್ತಾ, ಹಾಡು ಗುನುಗುತ್ತಾ ಮೈಮರೆತು ಒಂದಷ್ಟು ಹೊತ್ತು ಕಳೆದರೆ, ಒಂದಷ್ಟು ಹೊತ್ತು ಯಾಕೆ ಜೀವನಪೂರ್ತಿ ಅಂತಹ ವಾತಾವರಣವೇ ಇದ್ದರೆ ಅದೆಷ್ಟು ಖುಷಿಯಲ್ಲವೇ? ಪ್ರಾಯಶಃ ಹಿಂದಿನ ನಮ್ಮ ಋಷಿಮುನಿಗಳು ಏಕಾಂತಕ್ಕಾಗಿ-ತಪಸ್ಸಿಗಾಗಿ ಕಾಡನ್ನೇ ಬಯಸುತ್ತಿದ್ದುದು ಇದಕ್ಕೇ ಏನೋ ಅನ್ನಿಸುತ್ತಿದೆ. ಕಾಡಾಡಿಗಳ ಮಧ್ಯದ ಸುಂದರ ಹಳ್ಳಿಯ ಜೀವನವನ್ನು ತೊರೆದು ಉದರಂಭರಣೆಗಾಗಿ ನಗರಗಳಿಗೆ ಬಂದ ನಮ್ಮಂತಹ ಅನೇಕರಿಗೆ, ಹಸಿರುಟ್ಟ ಭೂತಾಯಿಯನ್ನು ಸತತವಾಗಿ ನೋಡಲಾಗಲೀ ಅವಳ ತೊಡೆಯಲ್ಲಿ ಮಲಗಿ ಆಡಲಾಗಲೀ ಹೆಚ್ಚಿನ ಸಮಯ ಲಭಿಸುವುದೇ? ಹುಟ್ಟಿದ ’ಗೋಕುಲ’ವನ್ನು ಬಿಟ್ಟು ಹೊಟ್ಟೆಯ ಹಿಟ್ಟಿಗಾಗಿ ಸೇರಿದ ’ಮಥುರೆ’ ಎಷ್ಟರಮಟ್ಟಿಗೆ ಯೋಗ್ಯ? ಇದನ್ನು ನೆನೆದಾಗ ನತದೃಷ್ಟ ನಾನೆಂದುಕೊಂಡರೆ ತಪ್ಪೆನ್ನುತ್ತೀರೇನು ?ಇದು ನನ್ನೊಬ್ಬನ ಕಥೆಯಲ್ಲ.... ಯಾದವೀ ಕಲಹವಿಲ್ಲದ ಈ ಯಾದಿಯಲ್ಲಿ ಹಲವರು ನನಗೆ ದಾಯಾದರಿದ್ದಾರೆ; ದಾಯಾದರಾಗುವವರಿದ್ದಾರೆ!