ರಾಮನೇ ತನ್ನ ಸರ್ವಸ್ವ ಎಂದು ಬಗೆದು ಆಂಜನೇಯನಂತೆ ರಾಮನನ್ನು ತನ್ನ ಹೃತ್ಕಮಲದಲ್ಲಿ ಹುದುಗಿಸಿಕೊಂಡು ಬದುಕಿದ ಮುದಿ ಜೀವ ಶಬರಿ. ಗಾಳಿಗೆ ತರಗೆಲೆಗಳ ಸದ್ದಾದರೂ ರಾಮ ಬಂದನೇನೋ ಎಂದುಕೊಂಡು ಹುಡುಕುವ ಮನೋವೃತ್ತಿ ಆಕೆಯದ್ದು. ಬಹಳ ಜನರಿಂದ ಕೇಳಿ ತಿಳಿದಿದ್ದಳು ರಾಮನ ಬಗೆಗೆ. ಪ್ರತಿದಿನವೂ ಈಗಬಂದಾನು ಆಗ ಬಂದಾನು ಎಂದುಕೊಳ್ಳುತ್ತ ಹಲವತ್ತುಕೊಳ್ಳುವ ಆಕೆ ಮುಪ್ಪಡರಿದ ಶರೀರದಲ್ಲೇ ಎಳೆಯ ಮನವನ್ನು ಹೊಂದಿದ್ದಾಕೆ. ಕಾಡುಮೇಡುಗಳಲ್ಲಿ ಅಲೆದು ಫಲಪುಷ್ಪಗಳನ್ನು ತಂದು ಅವುಗಳನ್ನೆಲ್ಲ ಕೂಗಲ ಬಳ್ಳಿಯಿಂದ ನೇಯ್ದು ಮಾಡಿದ ಬುಟ್ಟಿಗಳನ್ನು ತೊಳೆದು ಆ ಬುಟ್ಟಿಗಳಲ್ಲಿ ಹಾಕಿಟ್ಟು, ಗುಡಿಸಲ ಮುಂದಿನ ಅಂಗಳದಂಥ ಸ್ವಲ್ಪ ಜಾಗವನ್ನು ಸಾರಿಸಿ ರಂಗವಲ್ಲಿ ಇಟ್ಟು-ಹೂಗಳನ್ನು ಹರಡಿ, ಅಲ್ಲೇ ಇರುವ ಸಪಾಟಾದ ಅಗಲದ ಕಲ್ಲೊಂದನ್ನು ಸ್ವಚ್ಛಗೊಳಿಸಿ ಇಟ್ಟು ಅದರಮೇಲೆ ತನ್ನದೊಂದು ನಾರುಮಡಿ ಹಾಸಿ ರಾಮ ಇನ್ನೇನು ಬಂದೇ ಬಿಟ್ಟನೇನೋ ಎಂಬಂತೆ ದಿನವೂ ಕಾಯ್ದೇ ಕಾಯ್ವಳು.
ಕಾಡುಜನರು ಜೇನಿಗೋ, ಕಟ್ಟಿಗೆಗೋ, ಗೆಡ್ಡೆ-ಗೆಣಸಿಗೋ ಬಂದವರು ತಮ್ಮೊಳಗೆ ಕೂಗಿ ಕರೆದರೆ ಅಲ್ಲೆಲ್ಲೋ ರಾಮನ ಕೂಗು ಕೇಳಿಸಿತೇನೋ ಅನ್ನುವಂತೆ ಗುಡಿಸಲಿನಿಂದ ಆಚೆ ಬಂದು ಹಿಮ್ಮಡ ಎತ್ತರಿಸಿ ಎರಗಿ ಎರಗಿ ನೋಡಿ ರಾಮನ ಇರವನ್ನು ಹುಡುಕುತ್ತಿದ್ದಳು. ದಿನವೂ ರಾಮ ಬರುವುದು ಕೇವಲ ಒಂದು ಮರೀಚಿಕೆಯಾಗುತ್ತಿತ್ತು. ಆದರೂ ಆಕೆಯ ಆಂತರ್ಯ ’ರಾಮ ಬಂದೇ ಬರುತ್ತಾನೆ ಮಗಳೇ ನೀನು ಕಾಯುತ್ತಲೇ ಇರು’ ಎನ್ನುವ ಸಂದೇಶ ಕೊಡುತ್ತಿದ್ದುದರಿಂದ ರಾಮ ಬರುವ ನಿರೀಕ್ಷೆಯಲ್ಲೇ ಪ್ರತಿದಿನವನ್ನೂ ಹೊಸದಿನವೇನೋ ಎಂಬರೀತಿಯಲ್ಲಿ ಜಾವದಲ್ಲೇ ಕಾಡಿಗೆ ಹೋಗಿ ಹಣ್ಣ್-ಹೂವು ಆಯ್ದು ತಂದು ಅವನ್ನೆಲ್ಲ ದಿನವೂ ಮೊದಲು ಹೇಳಿದ ರೀತಿಯಲ್ಲೇ ಅಲಂಕರಿಸುತ್ತಿದ್ದಳು. ರಾಮ ಬರುವನೋ ಬರನೋ ಅವಳಿಗೆ ಅದು ಅರ್ಥವಿಲ್ಲ,ಆದರೆ ರಾಮ ಬಂದೇ ಬರುವನೆಂಬ ಅಚಲ ವಿಶ್ವಾಸವೊಂದಿತ್ತು, ಅದು ಅಂಧಶ್ರದ್ಧೆಯಾಗಿರಲಿಲ್ಲ, ಆಂತರ್ಯದ ಕರೆಯನ್ನು ಅನುಸರಿಸಿದ ಭಕ್ತಿ ಪುರಸ್ಸರ ಕಾರ್ಯವಾಗಿತ್ತು.
ಅಜ್ಜಮ್ಮನ ಸುತ್ತ ನೋಡಿಕೊಳ್ಳಲು ಅವಳಿಗೆ ತನ್ನವರು ಎಂದು ಯಾರೂ ಇರಲಿಲ್ಲ. ಗುಡಿಸಲ ಅಕ್ಕ-ಪಕ್ಕ ಅಥವಾ ಆ ಭೂ ಪ್ರದೇಶದಲ್ಲೇ ಅವಳದೊಂದೇ ಗುಡಿಸಲು. ಮುಪ್ಪಡರಿದ ದೇಹಕ್ಕೆ ದೇವರದೇ ಕಾವಲು! ತನ್ನ ಇರುವಿಕೆ, ಅರೋಗ್ಯ ಇದರ ಬಗ್ಗೆಲ್ಲ ಚಿಂತೆಗೀಡಾದವಳಲ್ಲ ಶಬರಿ. ಅವಳಿಗೆ ರಾಮನ ದರ್ಶನವಷ್ಟೇ ಬೇಕಾಗಿತ್ತು. ಭೂಮಿಯಲ್ಲಿ ಮಿಕ್ಕೆಲ್ಲ ಕಾರ್ಯಗಳು ಆ ಕೆಲಸದ ಮುಂದೆ ಕಳಾಹೀನವಾಗಿದ್ದವು. ಕಾಡುಮರಗಳು ಒಂದಕ್ಕೊಂದು ಹೊಸೆದು ಪೀಂ ಪೀಂ ಅಂತ ಶಬ್ಧ ಹೊರಟರೆ ರಾಮ ಬಂದನೇನೋ ಅಂದುಕೊಳ್ಳುವಳು. ಮಂದ ಮರುತ ಬೀಸಿ ಕಾಡಹೊಗಳ ಪರಿಮಳ ಬಂದರೆ ಅದು ರಾಮ ತೊಟ್ಟ ನಾರುಡುಗೆಗೆ ನೈಸರ್ಗಿಕವಾಗಿ ಪೂಸಿದ ಪರಿಮಳವೇನೋ ಅಂದುಕೊಳ್ಳುವಳು. ಕಣ್ಣು ಮಂಜಾಗಿ ಕತ್ತಲಾವರಿಸುವವರೆಗೂ ರಾಮನಿಗಾಗಿ ಹೊರಗೆ ಕಾಯುವ ಸಂಪ್ರದಾಯ ಅವಳದ್ದು. ಊಟ-ತಿಂಡಿ ಇವುಗಳ ಗೊಡವೆ ಅವಳಿಗಿರಲಿಲ್ಲ, ಆದರೆ ಮಾಡುವಳು ಇಲ್ಲದಿರೆ ರಾಮನನ್ನು ನೆನೆದು ನೀರನ್ನು ಕುಡಿದೇ ಹಾಯಾಗಿರುತ್ತಿದ್ದಳಾಕೆ. ಶರೀರ ಬಿದ್ದುಹೋಗುವ ಮೊದಲು ರಾಮ ಒಮ್ಮೆ ಬರಲಿ ಎಂದು ಸುತ್ತಲ ಎಲ್ಲಾ ದೇವಾನುದೇವತೆಗಳನ್ನು ನೆನೆದು ಪ್ರಾರ್ಥಿಸುವಳು.
ಮಗನ ರೀತಿಯಲ್ಲಿ ರಾಮನನ್ನು ಉಪಚರಿಸಲು ಬಯಸುವ ಆಕೆ ಕಾಡ ಮಿಕಗಳ ಕೂಗನ್ನು ಆಲೈಸುವ ಶಬರಿ, ಮೊದಲ ಬಾಣಂತನದಲ್ಲಿ ಹಸುಗೂಸನ್ನು ಬಹಳಹೊತ್ತು ಬಿಟ್ಟಿದ್ದು ಆಮೆಲೆ ಭೆಟ್ಟಿಯಾದಗ ಮುದ್ದಿಸುವ ಅಮ್ಮನ ಪ್ರೀತಿಯನ್ನು ರಾಮನಿಗಾಗಿ ಹೊಂದಿದ್ದಳಾಕೆ. ಬದುಕಿನಲ್ಲಿ ಪಡೆದ ಮಹತ್ತರ ಭಾಗ್ಯವೇ ರಾಮನನ್ನು ಕಾಣುವುದು ಎಂಬ ಅಭೀಪ್ಸೆಯನ್ನು ಹೊಂದಿದ್ದಳಾಕೆ. ಯಾರೇ ಬರಲಿ ಇರಲಿ ಯಾವುದೂ ಅವಳಿಗೆ ಮುಖ್ಯವಲ್ಲ, ಶ್ರೀರಾಮನ ಮುಖ ಕಮಲವನ್ನು ದರ್ಶಿಸಿ, ರಾಮನ ಪಾದಾರವಿಂದಗಳಲ್ಲಿ ಬಗೆಬಗೆಯ ಹೂವುಗಳನ್ನಿಟ್ಟು ಆತ ಮನಸಾರೆ ತಿನ್ನಲು ಅನುಕೂಲವಾಗುವ ಬೋರೆಹಣ್ಣುಗಳನ್ನು ಕೊಡುವ ಬಯಕೆ ಅವಳದಾಗಿತ್ತಷ್ಟೇ.
ಅಂತೂ ಶ್ರೀರಾಮ ಬಂದ, ಶಬರಿಯ ಭಕ್ತಿಯ ಆದರಾತಿಥ್ಯ ಸ್ವೀಕರಿಸಿದ, ಆಕೆ ಸಿಹಿಯಿದೆಯೋ ಎಂದು ನೋಡಲು ಶುದ್ಧಮನದಿಂದ ಕಚ್ಚಿ ಕೊಟ್ಟ ಹಣ್ಣುಗಳನ್ನು ಅಷ್ಟೇ ಭಕ್ತಿಯಿಂದ,ಪ್ರೀತಿಯಿಂದ ರಾಮ ತಿಂದ. ಅವಳ ಕೋರಿಕೆಗಾಗಿ ಎದುರುನೋಡಿದ. ಅವಳ ಕೋರಿಕೆ ಜಗದ ಹಿತವೇ ತನ್ನ ಹಿತವೆಂಬುದಾಗಿತ್ತು, ತನಗೆ ಸತತವಾಗಿ ಜನ್ಮಾಂತರಗಳಲ್ಲೂ ನಿನ್ನ ಭಕ್ತಿಯಿರಲಿ, ನಿನ್ನ ಕೃಪೆಯಿರಲಿ --ಇವಿಷ್ಟೆ ಆಗಿತ್ತು.
ಸ್ವಾಮೀ ಬಂದೆಯಾ ನಿನ್ನ ಕಾಣದೇ ಹಗಲಿರುಳು
ಧ್ಯಾನಿಸುತ ಇರುತಿದ್ದೆ ಕಾಲಪರ್ವದಲಿ
ರಾಮನಿನ್ನಯ ಪಾದ ಧೂಳಿಯನು ಸ್ವೀಕರಿಸಿ
ಧನ್ಯನಾದೆನು ಮುದುಕಿ ಜನ್ಮ ಜನ್ಮದಲಿ
ಬಾಷ್ಪವಿಳಿಯಿತು ಮನಕೆ ಬಹಳ ಸಂತಸವಾಗಿ
ಕಾಶ್ಯಪಾದಿಗಳೆಲ್ಲ ಹರಸಿಹರು ರಾಮಾ
ನಿಷ್ಫಲವು ಎಂದು ಹಳಹಳಿಸುತ್ತ ನೊಂದಿದ್ದೆ
ಪುಷ್ಪಗಳ ಹಂದರವು ಈಗ ಜೀವನವು
ಏಸೋ ದಿನಗಳು ನಿನ್ನ ಹಂಬಲಿಸಿ ಹಲವತ್ತು
ವಾಸಿಯಾಗದ ನೋವ ಮರೆತೆ ನಾ ರಾಮಾ
ನಾಸಿಕದಿ ಆಘ್ರಾಣಿಸುತಲೊಮ್ಮೆ ಹೂವುಗಳ
ವಾಸುಕೀಶಯನ ನಿನಗರ್ಪಿಸಲು ತಂದೆ
ಘಟ್ಟ ಘನಘೋರ ದುರ್ಗಮ ಕಾಡು ಕಣಿವೆಗಳ
ದಿಟ್ಟೆಯಾಗುತ ಜಯಿಸಿ ಹಣ್ಣುಗಳ ರಾಮಾ
ಬುಟ್ಟಿಯಲಿ ಕೊಯ್ದಿರಿಸಿ ಕಾದಿದ್ದೆ ನಿನಗಾಗಿ
ಕೊಟ್ಟು ನಮಿಸುವೆ ಕಚ್ಚಿ ಸಿಹಿಯಾದುದಾಯ್ದು
ನನ್ನತನವೆನಗಿಲ್ಲ ಬಂದುಹೋಗುವರಿಲ್ಲ
ಬಿನ್ನಾಣ ಬೆಡಗುಗಳ ಅರಿವಿಲ್ಲ ರಾಮಾ
ನನ್ನ ಹೃದಯದ ತುಂಬ ನಿನ್ನದೇ ಪ್ರತಿಬಿಂಬ
ಇನ್ನಾಯ್ತು ಸಾರ್ಥಕವು ಬದುಕಿದ್ದು ಜೀವ
ಮಗನ ರೂಪದಿ ಶುಭ್ರ ಗೌರವರ್ಣದಿ ಬಂದು
ಖಗವಾಹನನೆ ನಿಜದ ನೆಲೆಮರೆತು ರಾಮಾ
ಬಗೆಬಗೆಯ ಹೂವು ಹಣ್ಣುಗಳಿಹವು ನಿನಗಾಗಿ
ಜಗದ ಜೀವರ ಹರಸೋ ತಿಂದು ಸುಖದಿಂದ

ಶಬರಿ
ಸ್ವಾಮೀ ಬಂದೆಯಾ ನಿನ್ನ ಕಾಣದೇ ಹಗಲಿರುಳು
ಧ್ಯಾನಿಸುತ ಇರುತಿದ್ದೆ ಕಾಲಪರ್ವದಲಿ
ರಾಮನಿನ್ನಯ ಪಾದ ಧೂಳಿಯನು ಸ್ವೀಕರಿಸಿ
ಧನ್ಯನಾದೆನು ಮುದುಕಿ ಜನ್ಮ ಜನ್ಮದಲಿ
ಬಾಷ್ಪವಿಳಿಯಿತು ಮನಕೆ ಬಹಳ ಸಂತಸವಾಗಿ
ಕಾಶ್ಯಪಾದಿಗಳೆಲ್ಲ ಹರಸಿಹರು ರಾಮಾ
ನಿಷ್ಫಲವು ಎಂದು ಹಳಹಳಿಸುತ್ತ ನೊಂದಿದ್ದೆ
ಪುಷ್ಪಗಳ ಹಂದರವು ಈಗ ಜೀವನವು
ಏಸೋ ದಿನಗಳು ನಿನ್ನ ಹಂಬಲಿಸಿ ಹಲವತ್ತು
ವಾಸಿಯಾಗದ ನೋವ ಮರೆತೆ ನಾ ರಾಮಾ
ನಾಸಿಕದಿ ಆಘ್ರಾಣಿಸುತಲೊಮ್ಮೆ ಹೂವುಗಳ
ವಾಸುಕೀಶಯನ ನಿನಗರ್ಪಿಸಲು ತಂದೆ
ಘಟ್ಟ ಘನಘೋರ ದುರ್ಗಮ ಕಾಡು ಕಣಿವೆಗಳ
ದಿಟ್ಟೆಯಾಗುತ ಜಯಿಸಿ ಹಣ್ಣುಗಳ ರಾಮಾ
ಬುಟ್ಟಿಯಲಿ ಕೊಯ್ದಿರಿಸಿ ಕಾದಿದ್ದೆ ನಿನಗಾಗಿ
ಕೊಟ್ಟು ನಮಿಸುವೆ ಕಚ್ಚಿ ಸಿಹಿಯಾದುದಾಯ್ದು
ನನ್ನತನವೆನಗಿಲ್ಲ ಬಂದುಹೋಗುವರಿಲ್ಲ
ಬಿನ್ನಾಣ ಬೆಡಗುಗಳ ಅರಿವಿಲ್ಲ ರಾಮಾ
ನನ್ನ ಹೃದಯದ ತುಂಬ ನಿನ್ನದೇ ಪ್ರತಿಬಿಂಬ
ಇನ್ನಾಯ್ತು ಸಾರ್ಥಕವು ಬದುಕಿದ್ದು ಜೀವ
ಮಗನ ರೂಪದಿ ಶುಭ್ರ ಗೌರವರ್ಣದಿ ಬಂದು
ಖಗವಾಹನನೆ ನಿಜದ ನೆಲೆಮರೆತು ರಾಮಾ
ಬಗೆಬಗೆಯ ಹೂವು ಹಣ್ಣುಗಳಿಹವು ನಿನಗಾಗಿ
ಜಗದ ಜೀವರ ಹರಸೋ ತಿಂದು ಸುಖದಿಂದ