ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 5, 2013

ಪ್ರತೀ ಸರ್ತಿ ಎದುರಾದಾಗಲೂ ಹೊಸದಾಗಿ ಪರಿಚಿತರಾದ ತಾಜಾತನವಿದ್ದರೆ ವಿಶ್ವಾಸವಿದೆಯೆಂದೇ ಅರ್ಥ!

ಚಿತ್ರಋಣ: ಅಂತರ್ಜಾಲ 

ಪ್ರತೀ ಸರ್ತಿ ಎದುರಾದಾಗಲೂ ಹೊಸದಾಗಿ ಪರಿಚಿತರಾದ ತಾಜಾತನವಿದ್ದರೆ ವಿಶ್ವಾಸವಿದೆಯೆಂದೇ ಅರ್ಥ!

ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು
ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ
ಪರಿಪರಿಯ ಭಾವಗಳ ಗೂಢಸ್ವಭಾವಗಳ
ಪರಮೇಷ್ಠಿ ಟೀಕುಕಲೆ-ಮಂಕುತಿಮ್ಮ

ಮುಂಗಾರಿನ ಹಂಗಾಮು ಹಿಂಗಾರಿನವರೆಗೂ ಹಮ್ಮಿಕೊಂಡಂತೇ, ಸುರಿಯುತ್ತಿರುವ ಮಳೆಯಲ್ಲೂ ಜನ ಜಾಗವಿಲ್ಲದೇ ನಿಂತು ನೋಡುವಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು!  ಬೆಂಗಳೂರು-ಮಲ್ಲೇಶ್ವರದ ಸೇವಾಸದನದಲ್ಲಿ ಮೊನ್ನೆ ಶನಿವಾರ 03.08.2013ರಂದು ಸಾಯಂಕಾಲ ಆರರಿಂದ ಒಂಬತ್ತರ ವರೆಗೆ ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟವರು ಶತಾವಧಾನಿ ಗಣೇಶ್. ಹಾಡುಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದವರು ವಿದುಷಿ ರಂಜನಿ ವಾಸುಕಿ. ಎಪ್ಪತ್ತೆರಡು ಮೇಳಕರ್ತ ರಾಗಗಳ ಹುಟ್ಟಿನ ಬಗೆಗೆ ವರ್ಣಿಸುತ್ತಾ, ಜೀವನದಲ್ಲಿ ಹುಟ್ಟು, ಶೈಶವ, ಯೌವ್ವನ, ಮುಪ್ಪು, ಮರಣಗಳ ವರೆಗೆ ಎಲ್ಲೆಲ್ಲಿ ಯಾವಯಾವ ರಾಗಗಳ ಬಳಕೆ ಆಗುತ್ತಿದೆ ಎಂಬುದನ್ನು ನಿರೂಪಿಸಿದ ಶೈಲಿ ಬಹಳ ವಿಭಿನ್ನವಾಗಿತ್ತು. ಆಯುರ್ವೇದ ವೈದ್ಯರು ವಾತ-ಪಿತ್ತ-ಕಫ ಈ ಮೂರು ದೇಹ ಪ್ರಕೃತಿಯವರು ಇರುತ್ತಾರೆ ಎಂದರೆ ನಮ್ಮಬಗ್ಗೆ ನಾವು ಅಳೆಯತೊಡಗಿದಾಗ ನಾವು ಯಾವ ಗುಂಪಿಗೆ ಸೇರಿದವರು ಎಂದು ಹೇಳುವುದು ಕಷ್ಟ! ಯಾಕೆಂದರೆ ವಾತ-ಪಿತ್ತ-ಕಫಗಳಲ್ಲಿ ಯಾವುದಾದರೂ ಒಂದು ಅಂಶ ಅತಿಯಾಗಿದ್ದು ಮಿಕ್ಕುಳಿದವು ಕಮ್ಮಿಮಟ್ಟದಲ್ಲಿ ಇದ್ದೇ ಇರುತ್ತವೆ. ಅದೇ ರೀತಿಯಲ್ಲಿ ಮೂಲ ಸ್ವರ-ರಾಗಗಳ ಗೃಹಬದಲಾಣೆಯಿಂದ ಮತ್ತು ಹೊಸಹೊಸ ಮಟ್ಟುಗಳನ್ನು ಸೇರಿಸುವುದರಿಂದ ಹೇಗೆ ಹೊಸಹೊಸ ರಾಗಗಳು ಹುಟ್ಟಿಕೊಂಡವು ಎಂಬುದು ಸಂಗೀತ ವಿದ್ವಾಂಸರಿಗೆ ಮಾತ್ರ ಗೊತ್ತೇ ಹೊರತು ಅವುಗಳ ವಿಭಜನೆ ಮತ್ತು ಮೂಲ ಚಹರೆಯನ್ನು ಪತ್ತೆಹಚ್ಚುವ ಕೆಲಸ ಮಿಕ್ಕವರಿಂದ ಸಾಧ್ಯವಿಲ್ಲ. ಸ್ವತಃ ಸಂಗೀತವನ್ನು ಬಲ್ಲ ಗಣೇಶರು ಅವುಗಳನ್ನು ಎಳೆಯೆಳೆಯಾಗಿ ವಿಭಜಿಸಿ ತೋರಿಸಬಲ್ಲರು! ಕಾರ್ಯಕ್ರಮ ಬಹಳ ಚೆನ್ನಾಗಿ ಸಂಪನ್ನವಾಯ್ತು.     

ಅತ್ಯಂತದುತ್ಕಟದ ಸನ್ನಿವೇರ್ಶಗಳ ಭರ
ಪ್ರತ್ಯಕ್ಷದರ್ಶನದಿನಲ್ಲದೆಂತಹುದು?
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ
ವಿಸ್ತಾರದದ್ಭುತವ?-ಮಂಕುತಿಮ್ಮ

ಕಾರ್ಯಕ್ರಮದ ತರುವಾಯ ನನ್ನಲ್ಲಿ ಶತಾವಧಾನಿಗಳು ಹೇಳಿದ[ಈ ಲೇಖನದ ಶೀರ್ಷಿಕೆಯಾಗಿ ಬಳಕೆಯಾದ]ಮಾತು ಅನುಭವದ ಮೂಸೆಯಿಂದ ಹುಟ್ಟಿದ್ದಲ್ಲವೇ ಎನಿಸಿತು. ಡಾ|ರಾ.ಗಣೇಶರ-ನನ್ನ ನೇರ ಪರಿಚಯವಾಗಿದ್ದು ೧೯೯೭ರಲ್ಲಿ. ಅಲ್ಲಿಂದೀಚೆಗೆ ಅದೆಷ್ಟೋ ಸರ್ತಿ ನಾನು ಅವರನ್ನು ಭೇಟಿಯಾಗುತ್ತಲೇ ಇದ್ದೇನೆ. ವೈಯ್ಯಕ್ತಿಕ ಜೀವನದ ತಮ್ಮ ಕಷ್ಟಗಳೇನೇ ಇದ್ದರೂ ಮನೆಯ ಹಿರಿಯಣ್ಣನಿಗಿಂತ ತುಸು ಗಾಢವಾದ ಆಪ್ತ ಮಾತುಗಳು ಹೊರಬರುತ್ತಲೇ ಇರುತ್ತವೆ. ಕೇವಲ ಕಾಟಾಚಾರಕ್ಕಾಗಿ ಕೇಳದೇ, ಕರುಳಿನಾಳದಿಂದ "ಎಲ್ಲಾ ಕ್ಷೇಮವೇ?" ಎಂದು ಅವರು ಪ್ರತೀ ಸರ್ತಿ [ನಾನು ಅವರಲ್ಲಿ ಕೇಳದಿದ್ದರೂ] ನನ್ನಲ್ಲಿ ಕೇಳುತ್ತಾರೆ! ಗಣೇಶರ ಸಂಪರ್ಕದಲ್ಲಿರುವ ಹಲವು ಸಾವಿರ ಜನರಿಗೆ ಎಲ್ಲರಲ್ಲೂ ಗಣೇಶರ ಬಗ್ಗೆ ಇದೇ ಅನಿಸಿಕೆ ಇರುವುದು ವಿಶೇರ್ಷ ಮತ್ತು ವಿಶಿಷ್ಟ. ಹದಿನೇಳು ವರ್ಷಗಳಿಂದ ನಾವು ಅನೇಕಾವರ್ತಿ ಭೇಟಿಯಾಗುತ್ತಿದ್ದರೂ ಇದಕ್ಕೆ ಚ್ಯುತಿಯಿಲ್ಲ; ಜೊತೆಗೆ ಪ್ರತೀ ಸಲದ ಮಾತುಕತೆಯಲ್ಲಿ ಯಾವುದೋ ಹೊಸ ಅಂಶವನ್ನು ಅವರಿಂದ ಕಲಿತುಕೊಳ್ಳಬಹುದಾಗಿದೆ. ಪರಿಚಿತರಾದಮೇಲೆ ಬಹುಕಾಲ ಅದೇ ತಾಜಾತನ ಇರುವುದು ಕಷ್ಟ-ಜಗತ್ತಿನ ಸಾಮಾನ್ಯ ನಿಯಮ ಅದು.

ತರಣಿದರ್ಶನಕಿಂತ ಕಿರಣಾನುಭವ ಸುಲಭ
ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ
ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ?
ದೊರೆತಂದು ನೀಂ ಧನ್ಯ-ಮಂಕುತಿಮ್ಮ

ಖ್ಯಾತನಾಮರೊಡನೆ ಸಂಭಾಷಿಸುವುದು, ಪರಿಚಯ ಬೆಳೆಸಿಕೊಳ್ಳುವುದು, ಅವರ-ನಮ್ಮ ನಡುವೆ ಬಹಳ ಸ್ನೇಹವಿದೆ ಎಂದು ಇತರರಲ್ಲಿ ಹೇಳಿಕೊಳ್ಳುವುದು ಜನಸಾಮಾನ್ಯರಾದ ನಮಗೆ ಸಹಜವೇ; ಅಂಥವರ ಸ್ನೇಹಿಗಳು ಎಂದು ತೋರಿಸುವುದರ ಮೂಲಕ ನಮ್ಮ ’ತೂಕ’ ಜಾಸ್ತಿ ಮಾಡಿಕೊಳ್ಳಲು ಪ್ರಯತ್ನಿಸುವುದು ಅಡಕವಾಗಿರುವ ಅಂಶ. ಎಲ್ಲರೂ ಇದೇ ದೃಷ್ಟಿಕೋನದಲ್ಲೇ ಪ್ರಸಿದ್ಧರ ಹೆಸರನ್ನು ಹೇಳಿಕೊಳ್ಳುತ್ತಾರೆ ಎಂಬುದು ಮಾತ್ರ ಸುಳ್ಳು; ಕೆಲವರಲ್ಲಿ ಸಹಜವಾಗಿ ಉಕ್ಕಿ ಹರಿವ ಪ್ರೀತಿಯೂ ಸಹ ಹಾಗೆ ಹೇಳಿಕೊಳ್ಳಲು ಕಾರಣವಾಗಬಹುದು. ಪ್ರಸಿದ್ಧರೆಲ್ಲರೂ ಎಲ್ಲರಿಗೂ ಲಭ್ಯರೋ ಸ್ನೇಹಿತರೋ ಆಗಿರಬೇಕಾದ ನಿಯಮವೇನಿಲ್ಲ. ಪ್ರಸಿದ್ಧರು ತಮ್ಮ ಅಭಿಮಾನೀ ಬಳಗವನ್ನು ಕಟ್ಟಿಕೊಳ್ಳುವ ಸಲುವಾಗಿ ಹಾಗೊಮ್ಮೆ ಕೆಲವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿರಲೂ ಸಾಕು. ಆದರೆ ಸಂಸ್ಕೃತಿಯ ಹರಿಕಾರರಿಗೆ ಈ ಲೌಕಿಕ ಕಾರಣಗಳು ಬೇಕಾಗಿಲ್ಲ. ಗಣೇಶರ ಪರಿಚಯಕ್ಕೂ ಮುನ್ನ ಗಣೇಶರ ಪ್ರೌಢಿಮೆಯ ಬಗ್ಗೆ ನಾನು ನಂಬಿರಲೂ ಇಲ್ಲ, ಒಪ್ಪಿರಲೂ ಇಲ್ಲ! ಅವರೊಡನೆ ಸಂಭಾಷಿಸಿದ ಮೇಲೆ, ಅವರ ಕಾರ್ಯವ್ಯಾಪ್ತಿಯನ್ನು ಅರಿತುಕೊಂಡಮೇಲೆ, ಅವರ ಅಧ್ಯಯನ ಸಾಗರದ ಆಳಗಲ ಅಳೆಯದಾದಮೇಲೆ, ಅವರ ನೆನಪಿನ ಅಗಾಧತೆಯ ಸುಳಿಗೆ ಸಿಲುಕಿದ ಮೇಲೆ ನನಗೆ ಅನಿಸಿದ್ದಿಷ್ಟೇ: ಸಂಸ್ಕೃತಿಯ ಪುನಾರಚನೆಗಾಗಿ, ಸಂಸ್ಕೃತಿಯ ಉಳಿವಿಗಾಗಿ ಅದರ ಹರಿಕಾರರಾಗಿ, ಹಳೆಬೇರು-ಹೊಸಚಿಗುರು ಎಂಬುದನ್ನು ಸಿದ್ಧಮಾಡಿ ತೋರಿಸಲಿಕ್ಕಾಗಿ ಗಣೇಶರಂತಹ ದಾರ್ಶನಿಕರ ಅವತಾರವಾಗುತ್ತದೆ-ನನ್ನ ಅನುಭವದ ಪ್ರಕಾರ ಇದು ಅಕ್ಷರಶಃ ಸತ್ಯ. ಅಂತರಂಗದಲ್ಲಿ ಹುಟ್ಟಿದ ಅಪರಿಮಿತ ಪ್ರೀತಿಯಿಂದ ಸಹಜವಾಗಿ ಹೊರಹೊಮ್ಮಿದ ಭಾವಗಳಿಗೆ ಅಕ್ಷರರೂಪ ಕೊಟ್ಟು ಈ ಲೇಖನ ಬರೆಯಲ್ಪಟ್ಟಿತೇ ಹೊರತು ಇದರ ಹಿಂದೆ ಯಾವುದೇ ಪ್ರಲೋಭನೆಯ ಸ್ವಾರ್ಥವಿಲ್ಲ.

ಧನ್ಯತಮವಾಘಳಿಗೆ ಪುಣ್ಯತಮವಾಘಳಿಗೆ
ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು
ಛಿನ್ನವಾದಂದೆ ಸೊಗ-ಮಂಕುತಿಮ್ಮ

ಪೂರ್ವಜರು ಉಪಜೀವನ ಎಂದು ನಮ್ಮ ಖಾಸಗೀ ಜೀವನವನ್ನು ಹೆಸರಿಸಿದ್ದಾರೆ. ದುಡಿಯುವುದು, ಗಳಿಸುವುದು, ಉಣ್ಣುವುದು, ನಿದ್ರಿಸುವುದು, ಬಟ್ಟೆತೊಟ್ಟುಕೊಂಡು ಹಾಯಾಗಿ ಓಡಾಡುವುದು ಇವೆಲ್ಲಾ ಎಲ್ಲರೂ ಮಾಡುವ ಕೆಲಸಗಳೇ. ಅದನ್ನಷ್ಟೇ ಮಾಡುವುದು ಮನುಷ್ಯ ಜೀವನದ ಗುರಿಯಲ್ಲ. ಹಾಗಾದರೆ ಮುಖ್ಯ ಜೀವನಯಾವುದು? ಅಥವಾ ಮನುಷ್ಯನ ಗುರಿಯಾವುದು? ಎಂದರೆ ನಿಜ-ಜ್ಞಾನದ ದರ್ಶನವೇ ಮುಖ್ಯ ಜೀವನ. ನಿಜ ಜ್ಞಾನವನ್ನು ಗಳಿಸುವುದು ತಿಳಿದಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಪೂರಕವಾದ ವೇರ್ದಿಕೆ, ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವುದು ಪ್ರಥಮ ಹಂತದಲ್ಲಾಗಬೇಕಾದ ಕೆಲಸ. ನಂತರ ಅದಕ್ಕೆ ಬೇಕಾಗಬಹುದಾದ ಮನಸ್ಸನ್ನು ಹದಮಾಡಿಕೊಳ್ಳುವುದು ಮುಂದಿನ ಕೆಲಸ. ಮನಸ್ಸನ್ನು ಹದಮಾಡಿಕೊಳ್ಳುವುದಕ್ಕೆ ಪೂರಕವಾಗಿ ಬರುವುದು ನಮ್ಮ ಸನಾತನ ಸಂಸ್ಕೃತಿ-ಇದು ಅನನ್ಯ! ಸಂಸ್ಕೃತಿ ಎಂದರೇನು ಎಂಬ ಪ್ರಶ್ನೆಗೆ ಪ್ರತ್ಯೇಕ ಲೇಖನದಲ್ಲಿ ಉತ್ತರಿಸುತ್ತೇನೆ. ಆದರೆ ಸಂಸ್ಕೃತಿಯಿಲ್ಲದೇ ಹೇಗಾದರೂ ಪ್ರಾಣಿಗಳು ಬದುಕುವಂತೇ ಬದುಕುವುದು ಮಾನವನ ಮುಖ್ಯಜೀವನವಲ್ಲ ಎಂಬುದನ್ನು ಅನುಭವದಿಂದ ಮನಗಂಡ ಪೂರ್ವಜರು ವೈಯ್ಯಕ್ತಿಕ ಜೀವನಕ್ಕೆ "ಉಪಜೀವಿತ" ಎಂದು ಹೆಸರು ಕೊಟ್ಟಿದ್ದಾರೆ. ಗಳಿಕೆಯೇ ತಮ್ಮ ಜೀವಿತದ ಪರಮೋದ್ದೇಶ ಎಂಬುದನ್ನು ತ್ಯಜಿಸಿ,  ಅತ್ಯಂತ ಸರಳವಾದ ಜೀವನಕ್ರಮವನ್ನು ಅನುಸರಿಸುತ್ತಾ ಸಾಧ್ಯವಾದ ಕಡೆಗಳಲ್ಲಿ ಸಂಸ್ಕೃತಿಯನ್ನು ಎತ್ತಿಹಿಡಿಯುವುದು ಬೆರಳೆಣಿಕೆಯ ತ್ಯಾಗಿಗಳಲ್ಲಿ ಇರುವ ಉದ್ದೇಶ.  

ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ
ಆವ ಧೂಳಿನೊಳಾವ ಚೈತನ್ಯಕಣವೋ!
ಜೀವವಿಂತಜ್ಞಾನ ಸೂತ್ರದಾಟದ ಬೊಂಬೆ
ಭಾವಿಸಾ ಸೂತ್ರಗಳ-ಮಂಕುತಿಮ್ಮ

ರಾಮಾಯಣದಲ್ಲಿ ಬರುವ ತ್ರಿಜಟಾ ಎಂಬ ಬ್ರಾಹ್ಮಣನ ಕಥೆ ಇಲ್ಲಿ ಪ್ರಸ್ತುತ ಎಂದುಕೊಳ್ಳುತ್ತೇನೆ. ತ್ರಿಜಟಾ ಒಬ್ಬ ಬಡ ಬ್ರಾಹ್ಮಣ. ಅವನಿಗೆ ಹನ್ನೊಂದು-ಹನ್ನೆರಡು ಮಕ್ಕಳು. ಸಂಸಾರದ ಭಾರ ಹೆಂಡತಿಯಮೇಲಿತ್ತು. ತ್ರಿಜಟಾ ಸೋಮಾರಿಯೋ ಎಂದುಕೊಂಡರೆ ಅಲ್ಲ, ಆದರೆ ಸಂಸಾರದಲ್ಲಿ ಅತಿಯಾದ ಆಸೆಯನ್ನು ಇಟ್ಟುಕೊಂಡವನಲ್ಲ. ಇದ್ದರೆ ಉಣ್ಣುವ ಇರದಿದ್ದರೆ ಹಸಿವನ್ನೇ ಆನಂದಿಸುವ ಅವಧೂತರಂತಹ ವ್ಯಕ್ತಿತ್ವ! ಹುಟ್ಟಿದ್ದ ಆ ಪುಟ್ಟ ಮಕ್ಕಳಕನ್ನೆಲ್ಲಾ ಸಲಹುವ ಜವಾಬ್ದಾರಿಯನ್ನು ಹೊತ್ತ ಆತನ ಹೆಂಡತಿಯ ಕಥೆ ಏನಾಗಬೇಡ! ಚಿಕ್ಕಮ್ಮ ಕೈಕೇಯಿಗೆ ತಂದೆ ದಶರಥನಿತ್ತ ವರ ಮೂಕ ಆಜ್ಞೆಯಾಗಿ ಪರಿಣಮಿಸಿ ಶ್ರೀರಾಮ ವನವಾಸಕ್ಕೆ ಹೊರಟುನಿಂತಿದ್ದ. ರಾಮ ತನ್ನ ಮೈಮೇಲಿದ್ದ ಆಭರಣಗಳು ಮತ್ತು ತನಗೆ ಸಂಬಂಧಿಸಿದ ಹಲವನ್ನು ದಾನವಾಗಿ ಕೊಟ್ಟು ಆತ ಕಾಡಿಗೆ ಹೋಗುವುದೆಂದು ನಿರ್ಧರಿಸಿದ್ದಾನೆ ಎಂಬ ಸುದ್ದಿ ತ್ರಿಜಟನ ಹೆಂಡತಿಗೆ ಹೇಗೋ ತಿಳಿಯಿತು; ಗಂಡನಿಗೆ ಹೇಳಿ"ನೋಡಿ, ಬಡತನದಲ್ಲಿ ಈ ಮಕ್ಕಳನ್ನು ಸಾಕುವುದು ಬಹಳ ಕಷ್ಟ. ಶ್ರೀರಾಮ ತನ್ನ ವಡವೆ-ವಡ್ಯಾಣ ಮೊದಲಾದ ವಸ್ತುಗಳನ್ನೆಲ್ಲಾ ದಾನಮಾಡುತ್ತಾನಂತೆ. ನೀವೂ ಹೋಗಿ ಏನಾದರೂ ಪಡೆದುಬನ್ನಿ" ಎಂದಳು.

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ
ಜಗವ ಸುಡುಗಾಡೆನುವ ಕಟುತಪಸು ಬೇಡ
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ
ಮಿಗೆಚಿಂತೆ ತಲೆಹರಟೆ-ಮಂಕುತಿಮ್ಮ

ಹೆಂಡತಿಯ ಒತ್ತಾಯಕ್ಕೆ ತ್ರಿಜಟಾ ಅಯೋಧ್ಯಾ ನಗರವನ್ನು ತಲ್ಪಿದ. ಹಾಗೆ ತಲ್ಪುವ ಮೊದಲೇ ಶ್ರೀರಾಮ ಎಲ್ಲವನ್ನೂ ದಾನಮಾಡಿ ಮುಗಿಸಿಯಾಗಿತ್ತು. "ಅಯ್ಯಾ, ಶ್ರೀರಾಮ, ದಾನಕೊಡುವ ಸುದ್ದಿ ತಿಳಿದು ಏನಾದರೂ ಸಿಗಬಹುದೇ ಎಂದುಕೊಂಡು ಬಂದೆ" ಎಂದಿದ್ದಕ್ಕೆ ಉತ್ತರವಾಗಿ ಶ್ರೀರಾಮನೆಂದ:"ವಿಪ್ರೋತ್ತಮರೇ, ಬಹಳ ತಡವಾಗಿ ಬಂದಿದ್ದೀರಿ, ಎಲ್ಲವನ್ನೂ ದಾನವಾಗಿ ಕೊಟ್ಟು ಮುಗಿಸಿದ್ದೇನೆ. ಆದರೊಂದುಮಾತು, ಅಗೋ ನೋಡಿ ಅಲ್ಲಿ ಕಾಣುವ ಗೋವುಗಳ ಮೆಂದೆಯನ್ನು, ಕೋಲೊಂದನ್ನು ಬೀಸಿ ಎಸೆಯಿರಿ, ಆ ಕೋಲು ಹೋಗಿಬಿದ್ದ ಜಾಗದವರೆಗಿನ ಹಸುಗಳನ್ನು ತಮ್ಮದೆಂದು ತಮಗೆ ದಾನವಾಗಿ ನೀಡುತ್ತೇನೆ." ತ್ರಿಜಟಾ ತನ್ನಿಂದಾಗುವಷ್ಟೂ ದೂರಕ್ಕೆ ಕೋಲೊಂದನ್ನು ಬೀಸಿ ಎಸೆದ. ಸಾಕಷ್ಟು ಹಸುಗಳು ಕೋಲುಬಿದ್ದ ಜಾಗದೊಳಭಾಗದಲ್ಲೇ ಇದ್ದವು. "ಪರವಾಗಿಲ್ಲ ವಿಪ್ರೋತ್ತಮರೇ, ತಮಗೆ ಶಕ್ತಿಯೇ ಇಲ್ಲವೆಂದುಕೊಂಡಿದ್ದೆ" ಎಂದ ಶ್ರೀರಾಮ "ತಮ್ಮಂಥಾ ವಿಪ್ರರನ್ನು ಹಾಸ್ಯಮಾಡಿದ್ದಕ್ಕೆ ಕ್ಷಮೆಯಿರಲಿ" ಎಂದು ಕೇಳಿಕೊಂಡು, ಮೆಂದೆಯಲ್ಲಿ ಇರುವ ಎಲ್ಲಾ ಗೋವುಗಳನ್ನೂ ತ್ರಿಜಟನಿಗೆ ದಾನವಾಗಿ ನೀಡಿ ಕಾಡಿ, ಗೋವುಗಳನ್ನು ಸಲಹುವ ಗೋವಳನನ್ನು ಕರೆದು"ನೋಡಪ್ಪಾ, ಇಂದಿನಿಂದ ಈ ಎಲ್ಲಾ ಹಸುಗಳು ಈ ವಿಪ್ರೋತ್ತಮರಿಗೆ ಸೇರಿದ್ದು. ಇಲ್ಲಿ ಅವುಗಳನ್ನು ನೋಡಿಕೊಳ್ಳುತ್ತಿದ್ದಂತೆಯೇ ಅವರ ಜೊತೆಗೂ ಇದ್ದು ಗೋವುಗಳನ್ನು ಪಾಲನೆಮಾಡಿಕೊಂಡಿರು" ಎಂದು ಆಜ್ಞಾಪಿಸಿ ಕಾಡಿಗೆ ಹೊರಟುಹೋದ.

ಸುತ್ತಿ ಸುತ್ತುವ ಖಗವ ಗೂಢ ನೆನಪೆಳೆಯುವುದು
ಗೊತ್ತು ನೂಲ್ ಪಿಡಿದಿಹುದು ದನವ ಬಯಲಿನಲಿ
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು?
ಕಿತ್ತ ಗಾಳಿಯ ಪಟವೊ-ಮಂಕುತಿಮ್ಮ

ತ್ರಿಜಟಾ ಗೋವುಗಳನ್ನು ಸ್ವೀಕರಿಸಿದ. ಆತನ ಹೆಂಡತಿ ಅವುಗಳ ಹಾಲು-ಹೈನಗಳಿಂದ ದೊರೆತ ಆದಾಯದಿಂದ ಮಕ್ಕಳನ್ನೂ ಕುಟುಂಬವನ್ನೂ ಪೊರೆದಳು. ಮಕ್ಕಳೆಲ್ಲಾ ಬೆಳೆದು ದೊಡ್ಡವರಾದರು. ಶ್ರೀರಾಮ ಹದಿನಾಲ್ಕು ವರ್ಷ ವನವಾಸವನ್ನು ಮುಗಿಸಿ ಮರಳುವ ಹೊತ್ತಿಗೆ ತ್ರಿಜಟಾ ಪೋಷಿಸಿದ ಗೋವುಗಳ ಸಂಖ್ಯೆಯಲ್ಲಿ ಮೂರುಪಟ್ಟು ಜಾಸ್ತಿಯಾಗಿತ್ತು. ರಾಮ ಕಾಡಿನಿಂದ ಮರಳಿ ನಂದಿಗ್ರಾಮದೆಡೆಗೆ ಬರುತ್ತಿರುವ ಸುದ್ದಿ ತ್ರಿಜಟಾನ ಹೆಂಡತಿಗೆ ತಿಳಿದುಬಂತು. ಆ ವೇಳೆಗೆ ಬೆಳೆದೋರ್ವ ಮಗನೊಟ್ಟಿಗೆ ತ್ರಿಜಟಾ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ. ಇನ್ನೊಬ್ಬ ಮಗನ ಮೂಲಕ ಸಂದೇಶ ರವಾನಿಸಿ ಮನೆಗೆ ಕರೆಸಿಕೊಂಡ ಹೆಂಡತಿ, "ಇಷ್ಟೊಂದು ಹಸುಗಳು ನಮಗೇಕೆ? ಶ್ರೀರಾಮ ಮೊದಲು ಕೊಟ್ಟಿದ್ದ ಸಂಖ್ಯೆಯ ಗೋವುಗಳನ್ನು ಇಟ್ಟುಕೊಂಡು ಮಿಕ್ಕಿದ್ದನ್ನು ಅವನಿಗೇ ಮರಳಿಸಬಾರದೇ?" ಎಂದಳು ತ್ರಿಜಟಾನ ಹೆಂಡತಿ. "ಗೋವುಗಳನ್ನು ನಾವೇ ಇಟ್ಟುಕೊಳ್ಳಬೇಕೆಂದೇಕೆ ಬಯಸುತ್ತೀಯೆ? ಅವುಗಳನ್ನೆಲ್ಲಾ ಶ್ರೀರಾಮನಿಗೇ ಮರಳಿಸಿ, ಬೆಳೆದ ಮಕ್ಕಳಿಗೆ ಜೀವನೋಪಾಯಕ್ಕೆ ಏನಾದರೂ ಕೆಲಸಕೊಡಿ ಸಾಕೆಂದು ಮಹಾರಾಜ ಶ್ರೀರಾಮನಲ್ಲಿ ಪ್ರಾರ್ಥಿಸೋಣ, ನಾನೂ ನೀನೂ ಕಾಡಿಗೆತೆರಳಿ ಮುಂದಿನ ಬದುಕನ್ನು ತಪಸ್ಸಿನಲ್ಲಿ ಕಳೆಯೋಣ"-ಎಂದುಬಿಟ್ಟ ತ್ರಿಜಟಾ.

ಎಷ್ಟು ನೀನುಂಡರೇಂ? ಪುಷ್ಟಿಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿಪಿಷ್ಟವು ತಾನೆ?-ಮಂಕುತಿಮ್ಮ

ರಾಮಾಯಣದ ಈ ಕಥೆ ಇದ್ದುದರಲ್ಲಿಯೇ ತೃಪ್ತಿಪಡಬೇಕೆಂಬ ಸಂದೇಶದ ಜೊತೆಗೆ ಗೋವುಗಳಿಂದ ಉಪಜೀವನಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಸಂಪತ್ತು-ಭೋಗಭಾಗ್ಯ ಹೆಚ್ಚಿದ್ದಷ್ಟೂ ಸಂಸಾರದ ನಂಟು ಹೆಚ್ಚುತ್ತದೆ; ಸಂಸಾರದ ವ್ಯಾಮೋಹ ಅತಿಯಾದಷ್ಟೂ "ಇನ್ನೂ ಬೇಕು ಇನ್ನೂ ಬೇಕು" ಎಂಬುದು ಹೆಚ್ಚುತ್ತದೆ. "ಇನ್ನೂ ಬೇಕು ಇನ್ನೂ ಬೇಕು" ಎಂಬ ಇಂಗದ ಮನದ ದಾಹ ಅಸಂತೃಪ್ತಿಗೆ, ಅಸಂತೋಷಕ್ಕೆ ಕಾರಣವಾಗುತ್ತದೆ. "ದೈವಾನುಗ್ರಹ ನಮ್ಮಮೇಲಿಷ್ಟಿದೆ" ಎಂದುಕೊಂಡು ಇದ್ದುದರಲ್ಲಿ ಸಂತೃಪ್ತಗೊಂಡರೆ ಚಕ್ರಾಧಿಪತಿಲ್ಲೂ ಇರದ ಸಂತೋಷ ಲಭಿಸುತ್ತದೆ! ಆಚಾರದಲ್ಲಿ-ಬದುಕಿನಲ್ಲಿ ಬಹಳಷ್ಟು ತ್ಯಾಗಮಯಿಯಾಗಿ ಬದುಕುತ್ತಿರುವವರು ಅವಧಾನಿ ಗಣೇಶರು; ಇದ್ದರೂ ಸಂತೋಷ, ಇರದಿದ್ದರೂ ಸಂತೋಷ. ಸಂನ್ಯಾಸಿಯ ವೇಷತೊಡುವವರು ಅನೇಕರು, ವೇಷಧರಿಸದೇ ಇರುವಲ್ಲಿಯೇ ಸಂನ್ಯಾಸಿಗಳಂತೇ ಬದುಕುವವರು ಕೆಲವರು. ಯೋಗಿಯಂತೇ ತ್ಯಾಗಿಯಾಗಿ ಬದುಕುತ್ತಿರುವ ಗಣೇಶರು ಒಬ್ಬ ಶ್ರೇಷ್ಠ ಸಂತನೆಂದು ಹೇಳಲು ಏನೂ ತೊಂದರೆಯಿಲ್ಲ. 

ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ
ಚರಿಸುತಿರೆ ನರನದರ ಗುರುತನರಿಯದೆಯೆ
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ
ತೊರೆಯುವನು ದೊರೆತುದನು-ಮಂಕುತಿಮ್ಮ       

"ನಳಿಕೆ ಹಾಕಿದರೆ ನಾಯಿಯ ಬಾಲ ನೆಟ್ಟಗಾಗುವುದಿಲ್ಲ ಕಣೋ ಯಾಕೆ ಮತ್ತೆ ಮತ್ತೆ ಪ್ರಯತ್ನಿಸ್ತಾ ಇದೀಯಾ?" ಎಂದು ಬಾಲಕ ಗಣೇಶರಿಗೆ ಅವರಮ್ಮ ಹೇಳಿದ್ದರೆ, "ನಾಯಿಯ ಬಾಲ ನೆಟ್ಟಗೆ ಮಾಡುತ್ತಿಲ್ಲಮ್ಮಾ, ಬಾಲಕ್ಕೆ ಪೈಪು ಸಿಕ್ಕಿಸಿ ಬೆಂಡ್ ಮಾಡ್ಕೋತಾ ಇದೀನಿ" ಎಂಬ ಉತ್ತರ ಅಮ್ಮನಿಗೆ ಮಗನಿಂದ ದೊರೆತಿತ್ತಂತೆ!! ಗಣೇಶರು ಮೆಕ್ಯಾನಿಕಲ್ ಎಂಜಿನೀಯರಿಂಗ್ ಓದುವಾಗ ಸಹ ಪಂಚೆಉಟ್ಟುಕೊಂಡೇ ಕಾಲೇಜಿಗೆ ಹೋಗುತ್ತಿದ್ದರಂತೆ-ಇಂತಹ ಸಂಗ್ತಿಗಳನೇಕವು ನಮ್ಮನ್ನು ಅವರತ್ತ ಗಮನಹರಿಸುವಂತೇ ಮಾಡುತ್ತವೆ. ಅವರ ಆಯ್ಕೆಯ ವಿಷಯ ಯಾವುದು ಎಂದು ತಿಳಿಯಹೊರಟರೆ ಗಣೇಶರಿಗೆ ತಿಳಿಯದ ವಿಷಯ ಯಾವುದು ಎಂದು ಆಲೋಚಿಸಬೇಕಾಗುತ್ತದೆ. ಕಂಪ್ಯೂಟರ್ ತಜ್ಞರಿಗೇ ಕಂಪ್ಯೂಟರ್ ಪಾಠಮಾಡಬಲ್ಲ ತಾಕತ್ತು ಗಣೇಶರದ್ದು! ರಾಜಕೀಯ ವಿದ್ಯಮಾನ ಸಾಮಾಜಿಕ ಪರಿಸ್ಥಿತಿ-ವಿಜ್ಞಾನ-ತಂತ್ರಜ್ಞಾನ-ಸಾಹಿತ್ಯ-ಕಲೆ-ಸಂಗೀತ-ವೈದ್ಯಕೀಯ-ವೇದ-ವೇದಾಂತ-ಆಧ್ಯಾತ್ಮ-ಶಾಸ್ತ್ರ-ಸಂಪ್ರದಾಯ-ಗಣಿತ-ಇತಿಹಾಸ-ತತ್ತ್ವಜ್ಞಾನ-ಬಹುಭಾಷೆಗಳು ಹೀಗೇ ಎಲ್ಲವನ್ನೂ ಬಲ್ಲವರು ಅವರಾಗಿದ್ದಾರೆ; ’ಸರ್ವಜ್ಞ’ ಎಂಬ ಪದವಿಯನ್ನು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೇ, ಯಾವುದೇ ಪೂರ್ವಾಗ್ರಹವಿಲ್ಲದೇ, ಯಾವುದೇ ಪಟ್ಟಭದ್ರಹಿತಾಸಕ್ತಿಗಳ ಪ್ರಲೋಭನೆಯಿಲ್ಲದೇ ನೀಡುವುದಾದರೆ ಅಖಂಡ ಭಾರದಲ್ಲೇ ಅದು ನಿರ್ವಿವಾದವಾಗಿ ಸಲ್ಲಬೇಕಾದ್ದು ಶತಾವಧಾನಿ ಗಣೇಶರಿಗೆ. ಅಳಿದುಹೋಗಿದ್ದ ಅವಧಾನ ಕಲೆಯನ್ನು ಕನ್ನಡದಲ್ಲಿ ಮತ್ತೆ ತೋರಿಸಿ, ಹೊಸ ಪ್ರಯೋಗವಾಗಿ ಶತಾವಧಾನಗಳನ್ನೂ ನಡೆಸಿದ ಅವರು ಸಹಸ್ರಾವಧಾನವನ್ನೂ ನಡೆಸಬಲ್ಲರು ಎಂಬುದರಲ್ಲಿ ಸಂಶಯವಿಲ್ಲ-ಇಂತಹ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಗೌರವಿಸಿ ಅವರ ಉಪಜೀವಿತಕ್ಕೆ ವ್ಯವಸ್ಥೆಗಳನ್ನು ರೂಪಿಸುವ ಹೊಣೆಯನ್ನು ಹಿಂದೆ ರಾಜರುಗಳು ಸ್ವತಃ ತಾವೇ ವಹಿಸಿಕೊಳ್ಳುತ್ತಿದ್ದರು. ಇಂದು ರಾಜಕೀಯವೇ ಸ್ಥಾನಪಲ್ಲಟಗೊಂಡು ಪ್ರಜಾ ಸತ್ತೆ ಸಿಂಹಾಸನವನ್ನೇರಿ ಕುಳಿತಿರುವುದರಿಂದ ಮಂತ್ರಿಗಳೆಲ್ಲಾ ಮಾಗಧರಾಗಿದ್ದಾರೆ!

ರಾಮನುಂ ಭರತನುಂ ತಬ್ಬಿಕೊಂಡತ್ತಂದು
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು
ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ
ಕ್ಷೇಮವದು ಜೀವಕ್ಕೆ-ಮಂಕುತಿಮ್ಮ

ತಾಜಾ ಆಗಿಯೇ ಇರುವ ಸ್ನೇಹ-ಸಂಬಂಧಗಳಿಗೆ ಶ್ರೀಕೃಷ್ಣ-ಕುಚೇಲರ ಉದಾಹರಣೆ ಉತ್ತಮವಾದುದು. ದ್ವಾರಕಾಧೀಶ ಕೃಷ್ಣನನ್ನು, ಹೆಂಡತಿಯ ಒತ್ತಾಯದ ಮೇರೆಗೆ ಭೇಟಿಮಾಡಲು ಬಂದ ಸುಧಾಮನಿಗೆ ದ್ವಾರಕೆಯ ಸಿರಿವೈಭೋಗಗಳನ್ನು ಕಂಡು ಆಶ್ಚರ್ಯವಾಯ್ತು. ಸಾಂದೀಪನಿ ಗುರುಕುಲದಲ್ಲಿ ತನ್ನ ಸಹಪಾಠಿಯಾಗಿದ್ದ ಶ್ರೀಕೃಷ್ಣನ ಸಾಧನೆಯನ್ನು ಕಂಡು ಸಂತೋಷವೂ ಆಯ್ತು. ಅಭ್ಯಾಗತನಾಗಿ ಸ್ನೇಹಿತ ಕೃಷ್ಣನ ಅರಮನೆಯ ಉನ್ನತಾಸನದಲ್ಲಿ ಕುಳಿತು ಪಾದಪೂಜೆ ಸ್ವೀಕರಿಸಿದ ಸುಧಾಮನಿಗೆ, ಬರಿಗೈಲಿ ಬಂದೆನಲ್ಲಾ ಎಂಬ ಕಾರಣದಿಂದ ನಾಚಿಕೆಯಾಗಿ ತಾನು ಬಂದ ಕಾರಣವೇ ಮರೆತೇಹೋಯ್ತು! ಗೆಳೆಯನ ಸ್ವಭಾವವನ್ನರಿತಿದ್ದ ರುಕ್ಮಿಣೀಪತಿಗೆ ತನಗಾಗಿ ತನ್ನಾತ್ಮ ಮಿತ್ರ ಏನನ್ನಾದರೂ ತಂದೇ ಇರುತ್ತಾನೆ ಎಂಬುದರಲ್ಲಿ ಸಂದೇಹವಿರಲಿಲ್ಲ. ತೀರಾ ಒತ್ತಾಯಿಸಿದ ಮೇಲೆ ಅಂಜುತ್ತಾ, ಅಳುಕುತ್ತಾ, ತನ್ನ ಹರುಕು ಪಂಚೆಯ ತುದಿಯಲ್ಲಿ ಕಟ್ಟಿದ್ದ ಹಿಡಿಯವಲಕ್ಕಿಯನ್ನು ಬಿಡಿಸಿಕೊಟ್ಟರೆ, ಅವಲಕ್ಕಿಯನ್ನೇ ಮೆದ್ದು- ಮೃಷ್ಟಾನವನ್ನೇ ಮೆಲುತ್ತಿರುವ ಸುಖದಿಂದ ಸಖ ಕೃಷ್ಣ ಆನಂದತುಂದಿಲನಾದನಂತೆ! ದಿನವೊಪ್ಪತ್ತು ಅಲ್ಲಿಯೇ ನಿಂತು ಆತಿಥ್ಯ ಸ್ವೀಕರಿಸಿದ ಕುಚೇಲ ಮನದಿಂಗಿತವನ್ನು ಹೇಳಲಾರದೇ ಹೊರಟುನಿಂತು ಶ್ರೀಕೃಷ್ಣನಿಂದ ಬೀಳ್ಕೊಂಡ; ಊರಿಗೆ ತಲ್ಪುತ್ತಾ ನೋಡುತ್ತಾನೆ-ಮನೆ ಸ್ವರ್ಣಮಹಲಾಗಿದೆ, ಮಡದಿ-ಮಕ್ಕಳು ಬಂಗಾರದ ಆಭರಣಗಳನ್ನೂ, ಉತ್ತಮ ಪೋಷಾಕುಗಳನ್ನೂ ಧರಿಸಿ ಓಡಾಡುತ್ತಿದ್ದಾರೆ!! 

ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು-ಮಂಕುತಿಮ್ಮ

ಇಂದು ನಮಗೆ ಧನಿಕ ಸಹಪಾಠಿಗಳೋ ಸಹೋದ್ಯೋಗಿಗಳೋ ಇದ್ದರೆ, ಒಂದೊಮ್ಮೆ ನಾವು ಅವರಲ್ಲಿ ಹೋದರೆ, ಅವರ ಸಿರಿವಂತಿಕೆಯ ನಡಾವಳಿ ನಮಗೆ ಬಹಳ ಇರುಸುಮುರುಸು ಉಂಟುಮಾಡಿ, ಯಾಕಾದರೂ ಹೋದೆವೋ ಅನಿಸುವಂತೇ ಮಾಡಿಬಿಡುತ್ತದೆ! ಹಿಂದೊಮ್ಮೆ ಸಹಪಾಠಿಗಳಾಗಿದ್ದ ಧನಿಕರೂ ಆರ್ಥಿಕ ಬಡತನವಿದ್ದರೆ ಇಂದು ನಮ್ಮನ್ನು ಮಾತನಾಡಿಸಲು ಮನಸ್ಸು ಮಾಡುವುದಿಲ್ಲ; ಎಲ್ಲಾದರೂ ಸಹಾಯ ಕೇಳಿಬಿಟ್ಟರೆ ಎಂಬ ಅನುಮಾನವೇ ಅದಕ್ಕೆ ಕಾರಣವಾಗಿರಲೂ ಬಹುದು. ಕುಚೇಲನಷ್ಟು ಮರ್ಯಾದಿತರೂ ಇಂದು ಇರುವುದು ಕಷ್ಟ. ತನ್ನ ಸ್ವಂತ ಆಸೆಯಿಂದ ಬಡತನ ನಿವಾರಿಸಿಕೊಳ್ಳಲು ಆತ ಕೃಷ್ಣನಲ್ಲಿ ಹೋಗಲಿಲ್ಲ; ಇಂದು ಅವಕಾಶ ಸಿಕ್ಕರೆ ಮಾಗಧಮಂತ್ರಿಗಳ ಸ್ನೇಹ ಸಿಕ್ಕರೆ ಮರ್ಯಾದೆ ಎಂಬ ಪದದ ಗಂಧಗಾಳಿಯೂ ಇಲ್ಲದಂತೇ ಸಿಕ್ಕಲ್ಲೆಲ್ಲಾ ಮುಕ್ಕಿ ಕೊಬ್ಬಿ ಧನಾಢ್ಯರಾಗುವ ಜನರನ್ನು ನಾವು ನೋಡುತ್ತೇವೆ. ಉಪಜೀವಿತಕ್ಕಾಗಿ ಧರ್ಮದ ಮಿತಿಯನ್ನು ಮೀರದೇ ಬದುಕುವ ಸ್ನೇಹ ಜಗದಲ್ಲಿ ಶ್ರೇಷ್ಠವಾದದ್ದು. ಅಂತಲ್ಲಿ ಯಾವ ವ್ಯಾವಹಾರಿಕ ನಿರೀಕ್ಷೆಗಳೂ ಇರುವುದಿಲ್ಲ. ಇವತ್ತಿನ ಪರಿಸರದಲ್ಲಿ, ಪರಿಚಿತರಾಗುವ, ಸ್ನೇಹಿತರಾಗುವ ಅದೆಷ್ಟೋ ಮಂದಿಗಳ ನಡುವೆ ವ್ಯವಹಾರಿಕ ನಿರೀಕ್ಷೆಗಳು ಹುಸಿಯಾದಾಗ,  ಸ್ನೇಹ ಸೌಹಾರ್ದ ಹಳಸಿಹೋಗುತ್ತಿರುತ್ತದೆ. ಕಂಡರೂ ಕಾಣದಂತೇ ಕೇಳಿಸಿದರೂ ಕೇಳಿರದಂತೇ ವರ್ತಿಸುವ ’ಜಾಣಕುರುಡು’, ’ಜಾಣಕಿವುಡು’ ಎಂಬ ಹಂತವನ್ನು ಜನ ತಲ್ಪುವುದು ಹೀಗೇ. ಪ್ರತೀ ಸರ್ತಿ ಭೆಟ್ಟಿಯಾದಾಗ, ಮುಖಾಮುಖಿಯಾದಾಗ ಪ್ರಥಮಸಲದ ತಾಜಾತನವನ್ನೇ ನಾವು ಕಂಡರೆ ಆ ಸ್ನೇಹ ವಿಶಿಷ್ಟವಾಗಿರುತ್ತದೆ. ಗಂಡ-ಹೆಂಡಿರ ಸ್ನೇಹದಾಂಪತ್ಯದಲ್ಲೂ ಇದೇತೆರನಾದ ತಾಜಾತನವಿದ್ದರೆ ಸ್ನೇಹವೆಂಬುದು ಪರಿಶುದ್ಧವಾಗಿರುತ್ತದೆ, ನಿತ್ಯನೂತನವೆನಿಸುತ್ತದೆ; ಕೌಟುಂಬಿಕ ಕಲಹಗಳಿಗೆ ಆಸ್ಪದವಿರುವುದಿಲ್ಲ. ಮುಗಿಸುವ ಮುನ್ನ ಅವಧಾನಿ ಗಣೇಶರ ಮಾತನ್ನು ನೆನಪಿಸಿಕೊಳ್ಳುತ್ತೇನೆ:"ಪ್ರತೀ ಸರ್ತಿ ಎದುರಾದಾಗಲೂ ಹೊಸದಾಗಿ ಪರಿಚಿತರಾದ ತಾಜಾತನವಿದ್ದರೆ ವಿಶ್ವಾಸವಿದೆಯೆಂದೇ ಅರ್ಥ!"  ನಮಸ್ಕಾರ.