ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 30, 2012

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲು ನೋಡಿದರಲ್ಲಿ ಶ್ರೀರಾಮ !

ಚಿತ್ರಗಳ ಋಣ: ಅಂತರ್ಜಾಲ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲು ನೋಡಿದರಲ್ಲಿ ಶ್ರೀರಾಮ !

ಶ್ರೀರಾಮನ ಬಗ್ಗೆ ಆತನ ಜೀವನದ ಕುರಿತಾಗಿ ಇರುವ ರಾಮಾಯಣ ಕೇವಲ ಕಾಲ್ಪನಿಕ ಎಂದು ವಾದಿಸುವವರಿಗೆ ಕೊರತೆಯೇ ಇಲ್ಲ! ಅಂತೆಯೇ ರಾಮನ ಹೆಸರು ಕೇಳಿದಾಕ್ಷಣ ಮೈಯ್ಯ ರಕ್ತಕಣಕಣದಲ್ಲಿ ಮಿಂಚಿನ ಸಂಚಾರದ ವಿಶಿಷ್ಟ ಅನುಭೂತಿಯನ್ನು ಪಡೆಯುವವರಿಗೂ ಕೊರತೆಯಿಲ್ಲ. ರಾಮ ಸೀತಾಪರಿತ್ಯಾಗ ಮಾಡಿದ್ದು ಸರಿಯಲ್ಲವೆಂದು ವಾದಿಸಿ ರಾಮನನ್ನು ವಿರೋಧಿಸುವ ಮಹಿಳಾಮಣಿಗಳೂ ಅವರನ್ನು ಅನುಮೋದಿಸುವ ಗಂಡುಮಣಿಗಳೂ ಇದ್ದಾರೆ! ರಾಮ ತನ್ನೆಲ್ಲ ಅನುಕೂಲಗಳನ್ನೂ ಸೌಲಭ್ಯಗಳನ್ನೂ ತೊರೆದು ತಂದೆಯ ಮೂಕ ಆಜ್ಞಾಧಾರಕನಾಗಿ ವನವಾಸವನ್ನೂ ತನ್ಮೂಲಕ ಬಹುತೇಕ ಜೀವಿತದ ನೋವಿನ ಭಾಗವನ್ನೂ ಸಹಿಸಿ ಸಂಯಮದಿಂದ ಅನುಭವಿಸಿದ್ದನ್ನು ಹಾಡಿ ಹೊಗಳುವ ಜನವೂ ಇದ್ದಾರೆ. ರಾಮನ ಬಗ್ಗೆ ಹಲವಾರು ಸರ್ತಿ ಬರೆದಿದ್ದಿದೆ, ಆಗಾಗ ಬರೆಯುವುದೂ ಇದೆ. ಬರೆದದ್ದನ್ನೇ ಬರೆದಗತಿಯಲ್ಲೇ ಮತ್ತೆ ಬರೆದರೆ ಓದುವ ಅಧುನಿಕರಿಗೆ ಅದು ರುಚಿಸದೇ ಹೋಗಬಹುದು. ಮಗ್ಗಲು ತಿರುವಿದಾಗ ಸಿಕ್ಕ ಶ್ರೀರಾಮನ ಜೀವನದ ಒಂದೆರಡು ಘಟನೆಗಳನ್ನು ರಾಮನವಮಿಯ ಈ ಸುಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶ ನನ್ನದಾಗಿದ್ದಕ್ಕೆ ಶ್ರೀರಾಮನಿಗೆ ಭೂಯೋ ಭೂಯೋ ನಮಾಮ್ಯಹಮ್ ಎಂದು ಸಾಷ್ಟಾಂಗವೆರಗುತ್ತಾ ಈ ಪೀಠಿಕೆ ಇಡುತ್ತಿದ್ದೇನೆ.

ಶ್ರೀರಾಮನ ಕುರಿತಾಗಿ ಹೇಳಿಕೊಳ್ಳಬಹುದಾದ ಕೆಲವು ಶ್ಲೋಕಗಳ, ಮಂತ್ರಗಳ ಜೊತೆಗೆ ಅವುಗಳಿಂದ ಸಿಗಬಹುದಾದ ಫಲವನ್ನೂ ಸೂಚಿಸುತ್ತಾ ಈ ಹೊಸ ಶ್ರೀರಾಮ ಕಥೆಯನ್ನು ನನ್ನ ಬಾಯಲ್ಲಿ ಕೇಳುವರೇ ನಿಮಗೆಲ್ಲಾ ಹಾರ್ದಿಕ ಸ್ವಾಗತ. ಶ್ರೀರಾಮ ರಾಜಾರಾಮನಾಗಿದ್ದನಷ್ಟೇ ? ರಾಜಾರಾಮನ ಸ್ವಾಗತಕ್ಕೆ ರಾಜೋಚಿತ ವಂದನಾ ಶ್ಲೋಕದೊಂದಿಗೆ ಆರಂಭಿಸುತ್ತಿದ್ದೇನೆ:

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುಸ್ಥಂ ಕರುಣಾನಿಧಿಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ |
ರಾಜೇಂದ್ರಂ ಸತ್ಯಸಂದಂ ದಶರಥತನಯಂ ಕೇವಲಮ್ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್||

ರಾಮಾಯಣದ ಸುತ್ತಮುತ್ತ ನಾವು ಹೇಳಿಕೊಳ್ಳಬಹುದಾದ ಯಾವುದೇ ಕಥೆಯಿರಲಿ ಅಲ್ಲಿ ಮನೀಷಿ ವಾಲ್ಮೀಕಿಯನ್ನು ನೆನಪಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ಪ್ರಥಮವಾಗಿ ರಾಮಾಯಣ ಎಂಬ ರಾಮನ ಜೀವನಚರಿತ್ರೆ ಬರೆಯಲ್ಪಟ್ಟಿದ್ದು ವಾಲ್ಮೀಕಿಯಿಂದಲೇ.

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||

ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವಂದೇ ಪ್ರಾಚೇತಸಮಕಲ್ಮಷಮ್ ||

ವಾಲ್ಮೀಕಿ ಮುನಿಗಳನ್ನು ರಾಮಾ ರಾಮಾ ಎಂದು ಕೂಗುವ ಕೋಗಿಲೆಯೆಂದೂ, ಕವಿತಾವನದಲ್ಲಿ ಸಂಚರಿಸುವ ಮುನಿಸಿಂಹವೆಂದೂ ಸ್ತುತಿಸಿದ್ದನ್ನು ಈ ಮೇಲಿನ ಶ್ಲೋಕಗಳಲ್ಲಿ ಕಾಣಬಹುದಾಗಿದೆ.

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪ ವಾರಿಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡ ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ.ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು

ಕೌಸಲ್ಯಾ ಸುಪ್ರಜಾ ರಾಮಾ
ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಂ ||

ಎಂದು ಎಬ್ಬಿಸುವ ಆ ದೃಶ್ಯ ಮಕ್ಕಳಿರುವ ಯಾವ ಪಾಲಕರ ಕಣ್ಣಲ್ಲೂ ನೀರುತರಿಸದೇ ಇರುವಂತಹುದಲ್ಲ. ಜಗದ ಜೀವರಾಶಿಗಳ ದುಃಖವನ್ನು ತೊಡೆಯುವ ಇಂತಹ ಶ್ರೀರಾಮ ಜನಿಸಿದ್ದು ಚೈತ್ರ ಶುದ್ಧ ನವಮಿಯಂದು ಬೆಳಗಿನ ಜಾವದಲ್ಲಿ. ಪ್ರಜಾರಂಜಕ ಗುಣವೂ ಸೇರಿದಂತೇ ಸಕಲ ಸದ್ಗುಣಗಳ ಗಣಿಯಾಗಿದ್ದ ಶ್ರೀರಾಮ ಅದಕ್ಕೇ ಇಂದಿಗೂ ಸರ್ವಜನಾನುರಾಗಿ. ರಾಮನಿಗೆ ಕ್ಷುದ್ರ ಶಕ್ತಿಗಳು ನಿಶಾಚರ ಶಕ್ತಿಗಳು ಹೆದರುತ್ತವಂತೆ. ರಾಮ ಹೆಜ್ಜೆಯಿಟ್ಟಲ್ಲಿ ಅವುಗಳು ನಾಶಹೊಂದುತ್ತವಂತೆ.

ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಅಹಲ್ಯೆಯ ಪ್ರಸ್ತಾಪ ಬರುತ್ತದೆ. ಮಹರ್ಷಿ ಗೌತಮರ ರೂಪವತೀ ಸಾಧ್ವಿ ಅಹಲ್ಯೆ. ಗೌತಮರು ತಮ್ಮ ಪರ್ಣಕುಟಿಯಿಂದ ದೂರವೆಲ್ಲೋ ತೆರಳಿದ್ದಾಗ ದೇವೇಂದ್ರ ಗೌತಮರ ರೂಪದಲ್ಲಿ ಅಹಲ್ಯೆಗೆ ಕಾಣಿಸಿಕೊಂಡ! ಅಹಲ್ಯೆಯ ಪತಿವ್ರತಾ ಭಂಗವೊಂದು ಕಡೆಗಾದರೆ ಅಹಲ್ಯೆಯನ್ನು ಪಡೆದ ಮೋಜು ಇನ್ನೊಂದು ಕಡೆ ಎಂಬ ಒಳತೋಟಿಯಿಂದ ಗೌತಮರ ವೇಷದಲ್ಲಿ ಬಂದ ಇಂದ್ರನನ್ನು ಅಹಲ್ಯೆ ತನ್ನ ಪತಿಯೆಂದೇ ಭಾವಿಸಿದಳು. ಅಕಾಲದಲ್ಲಿ ಅವಳರಿವಿಗೆ ಬಾರದಾಗಿ ಇಂದ್ರ ಅವಳೊಡನೆ ಸುಖಿಸಿದ, ತನ್ಮೂಲಕ ಅಹಲ್ಯೆ ಪರಪುರುಷನೊಬ್ಬನಿಗೆ ತನ್ನನ್ನು ಅರ್ಪಿಸಿಕೊಂಡಳು. ಇನ್ನೇನು ಇಂದ್ರ ಹೊರಟು ತಪ್ಪಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಸ್ವತಃ ಗೌತಮರು ಅಲ್ಲಿಗೆ ಆಗಮಿಸಿಬಿಟ್ಟರು! ಅಹಲ್ಯೆ ಇಬ್ಬಿಬ್ಬರು ಗೌತಮರುಗಳನ್ನು ಕಾಣುತ್ತಾ ತಬ್ಬಿಬಬ್ಬಾದಳು. ತಾನು ಯಾರೊಡನಿದ್ದೇನೆ? ಏನು ನಡೆಯುತ್ತಿದೆ? -ಎಂಬುದೇ ತೋಚದಾಯ್ತು. ಗೌತಮರು ತಮ್ಮ ಜ್ಞಾನ ಚಕ್ಷುವಿನಿಂದ ಬಂದಾತ ಇಂದ್ರ ಎಂಬುದನ್ನು ಅರಿತುಕೊಂಡರು. ಇಂದ್ರನಿಗೆ ವೃಷಣವೇ ಇಲ್ಲದೇ ಹೋಗಲಿ ಎಂದು ಶಪಿಸಿಬಿಟ್ಟರು! ಅರಿಯದೇ ಮಾಡಿದ್ದರೂ ಅಹಲ್ಯೆಗೆ ಸಾವಿರಾರು ವರ್ಷಗಳ ಕಾಲ ಶಿಲೆಯಾಗಿ ಬಿದ್ದಿರು ಎಂದು ಶಾಪವಿತ್ತರು. ಪಾಪದ ಅಹಲ್ಯೆ ಆ ಕ್ಷಣದಲ್ಲೇ ಅತ್ತೂ ಕರೆದೂ ಪರಿಪರಿಯಿಂದ ಪ್ರಾರ್ಥಿಸಿಕೊಳ್ಳಲಾಗಿ ತ್ರೇತಾಯುಗದಲ್ಲಿ ರಾಮ ಬರುವವರೆಗೂ ಹಾಗೇ ಬಿದ್ದಿರಬೇಕೆಂದೂ ರಾಮನ ಸ್ಪರ್ಶಮಾತ್ರದಿಂದ ಶಾಪ ವಿಮೋಚನೆಯಾಗುವುದೆಂದೂ ಉಶ್ಶಾಪ[ವಿಮೋಚನಾ ಸೂತ್ರ]ವಿತ್ತರು.


ಮಹರ್ಷಿ ವಿಶ್ವಾಮಿತ್ರರೊಡನೆ ಬಾಲ ರಾಮ ಮತ್ತು ಲಕ್ಷ್ಮಣರು ಕಾಡೊಳಗೆ ನಡೆಯುತ್ತಿರುವಾಗ ಒಂದೆಡೆಯಲ್ಲೊಂದು ದಿನ ಒಂದು ಶಿಲೆಯೆದುರು ನಿಂತ ವಿಶ್ವಾಮಿತ್ರರು ರಾಮನಿಗೆ ಅಹಲ್ಯೆಯ ಕುರಿತು ತಿಳಿಸುತ್ತಾ ಸಂಸ್ಕೃತದಲ್ಲಿ ಉತ್ತಮರಿಗೆ ಸಂಬೋಧಿಸುವ ’ಮಹಾಭಾಗ’ ಎನ್ನುವ ಪದವನ್ನು ಬಹಳ ಸರ್ತಿ ಬಳಸಿದರು. ಗುರುಗಳ ಆಂತರ್ಯವನ್ನರಿತ ಶ್ರೀರಾಮ ಆ ಶಿಲೆಯನ್ನು ಸ್ಪರ್ಶಿಸಿದ. ಆ ಕ್ಷಣದಲ್ಲಿ ಶಿಲೆ ಮಾಯವಾಗಿ ಅಹಲ್ಯೆ ಎದ್ದು ನಿಂತಳು. ಶ್ರೀರಾಮನಿಗೆ ತನ್ನ ಜೀವನದ ಕಹಿ ಘಟನೆಯನ್ನು ಅರುಹಿದಳು. ತನ್ನದಲ್ಲದ ತಪ್ಪಿಗೆ ತಾನು ಅನುಭವಿಸಬೇಕಾಗಿ ಬಂದುದನ್ನು ತಿಳಿಸುತ್ತಾ ಕಾಯಾ ವಾಚಾ ಮನಸಾ ತಾನು ಗೌತಮರಿಗೆ ಮಾತ್ರ ಅರ್ಪಿತಳು ಎಂದು ಹೇಳಿದಾಗ ರಾಮ ಅದಕ್ಕೆ ಸಮ್ಮತಿಸಿದ; ನಡೆದುಹೋದ ಘಟನೆಗೆ ವಿಷಾದಿಸಿದ. ಹೀಗೇ ಅಹಲ್ಯೆಗೆ ಮರುಜನ್ಮ ಕೊಟ್ಟ ಪುಣ್ಯಪುರುಷ ಶ್ರೀರಾಮ ಅಹಲ್ಯಾರಾಮನಾದ.

ವಿದ್ಯಾಭ್ಯಾಸವನ್ನು ವಿಶ್ವಾಮಿತ್ರರಲ್ಲಿ ಪೂರೈಸಿದ ರಾಮನನ್ನು ಮಿಥಿಲೆಯ ಜನಕರಾಯ ಏರ್ಪಡಿಸಿದ್ದ ಸ್ವಯಂವರಕ್ಕೆ ಹೋಗಲು ಪ್ರೇರೇಪಿಸಿದವರು ವಿಶ್ವಾಮಿತ್ರರು. ವಿದೇಹ ರಾಜನ ಮಗಳಾಗಿ ವೈದೇಹಿಯೆಂದೂ, ಜನಕನ ಮಗಳಾಗಿ ಜಾನಕಿಯೆಂದೂ ಹೆಸರುಳ್ಳ ಸೀತೆಯ ಸ್ವಯಂವರ ಅಲ್ಲಿ ನಡೆಯುತ್ತಿತ್ತು. ಅನೇಕ ಮಂದಿ ರಾಜಕುಮಾರರು ಅಲ್ಲಿಗೆ ಬಂದು, ಅಲ್ಲಿ ಇಡಲ್ಪಟ್ಟಿದ್ದ ಶಿವಧನುಸ್ಸನ್ನು ಎತ್ತಲಾಗದೇ ತೆರಳಿದ್ದರು. ಶ್ರೀರಾಮಚಂದ್ರ ಸಭೆಗೆ ನಡೆದ. ಮನದಲ್ಲಿ ಗುರುಹಿರಿಯರನ್ನು ನೆನೆದು ಶಿವಧನುಸ್ಸನ್ನು ಹೆದೆಯೇರಿಸುತ್ತಿದ್ದಂತೆಯೇ ಅದು ಮುರಿದುಹೋಯ್ತು! ಸ್ಫುರದ್ರೂಪಿ ಸೀತೆ ಮೆಲ್ಲನೆ ನಡೆತಂದು ಶ್ರೀರಾಮನ ಕೊರಳಿಗೆ ಪುಷ್ಪಮಾಲಿಕೆಯನ್ನು ಅರ್ಪಿಸಿದಳು ಎಂಬಲ್ಲಿಗೆ ಸೀತಾರಾಮರ ಕಲ್ಯಾಣ ನಡೆದು ಶ್ರೀರಾಮ ಸೀತಾರಾಮನಾದ.

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

[ಈ ಶ್ಲೋಕದಿಂದ ಆಪತ್ತು ತೊಲಗಿ, ಸಂಪತ್ತು ಪ್ರಾಪ್ತವಾಗುತ್ತದೆ]

ರಾಮ-ಸೀತೆಯರ ವಿವಾಹ ವೈಭವಗಳೆಲ್ಲ ಮುಗಿದು ಕೆಲವು ಸಮಯದ ನಂತರ ಮಂಥರೆ ಎಂಬ ಕೆಟ್ಟ ಮನದ ಸೇವಕಿಯ ಕಿವಿಯೂದುವಿಕೆಗೆ ದಶರಥನ ಮಡದಿ ಕೈಕೇಯಿ ಓಗೊಟ್ಟಳು. ಯುವರಾಜ ಪಟ್ಟಾಭಿಷೇಕದಲ್ಲಿ ರಾಮನಿಗೆ ಬದಲು ಕೈಕೇಯಿಯ ಮಗ ಭರತನಿಗೇ ಪಟ್ಟವಾಗಬೇಕೆಂದೂ, ರಾಮ ಅಯೋಧ್ಯೆಯಲ್ಲೇ ಇದ್ದರೆ ಅದು ಅಸಾಧ್ಯವಾಗುವುದರಿಂದ ರಾಮನನ್ನು ೧೪ ವರುಷ ಕಾಡಿಗಟ್ಟಬೇಕೆಂದೂ, ಹಿಂದೆ ಕೊಟ್ಟಿದ್ದ ವರಗಳಿಗೆ ಈ ವಿಷಯಗಳನ್ನಿಟ್ಟು ಕೇಳಬೇಕೆಂದೂ ಮಂಥರೆ ಹೇಳಿಕೊಟ್ಟ ಪ್ರಕಾರ ಕೈಕೇಯಿ ಕುಣಿದಳು. ಪರಿಸ್ಥಿತಿಯ ಅರಿವಾದ ದಶರಥ ತನ್ನ ರಾಜ್ಯವೇ ಹಾಳಾಗುತ್ತದೆಂಬ ಭಾವನೆ ತಳೆದ. ಚಿಕ್ಕಮ್ಮನಿಗೆ ಅಪ್ಪಕೊಟ್ಟ ವರಗಳನ್ನು ಮನಸಾ ಈಡೇರಿಸಿಕೊಡುವುದಾಗಿ ಶ್ರೀರಾಮ ಘೋಷಿಸಿದ.

ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಶರಥಿರ್ಯದಿ |
ಪೌರುಷೇ ಚಾಪ್ರತಿದ್ವಂದ್ಯಃ ಶರೈನಂ ಜಹಿ ರಾವಣಿಮ್ ||

[ಈ ಶ್ಲೋಕದಿಂದ ಕಾಮ-ಕ್ರೋಧಾದಿಗಳನ್ನು ಜಯಿಸಲು ಮನಸ್ಸು ಹೆಜ್ಜೆಯಿಡುತ್ತದೆ]


ಪ್ರೀತಿಯ ಮಗನನ್ನು ಅಗಲಿರಲಾರದ ದಶರಥ ಅನ್ನ-ನೀರನ್ನು ತ್ಯಜಿಸಿದ್ದರಿಂದ ರಾಮ ಕಾಡಿಗೆ ನಡೆದ ಕೆಲವೇ ದಿನಗಳಲ್ಲಿ ಕ್ಷೀಣಿಸುತ್ತಾ ನಡೆದ. ಕ್ಷಣ ಕ್ಷಣದಲ್ಲೂ ಶ್ರವಣಕುಮಾರನ ತಂದೆಯ ಶಾಪ ದಶರಥನನ್ನು ಕೆಣಕುತ್ತಿತ್ತು. ವೃದ್ಧಾಪ್ಯದ ತಂದೆ-ತಾಯಿಗಳಿಗೆ ಇದ್ದೊಬ್ಬ ಮಗನಾದ ಶ್ರವಣಕುಮಾರನನ್ನು ಅರಿವಿಲ್ಲದೇ, ಶಬ್ದವೇದಿ ವಿದ್ಯೆಯಿಂದ ಬಾಣ ಬಿಟ್ಟು ಕೊಂದಿದ್ದ ದಶರಥ! ಮೃಗಬೇಟೆಗೆ ತೆರಳಿದ್ದ ದಶರಥ ಕಾಡುಗಿಡಗಳ ಪೊದೆಯೊಳಗೆ ಅವಿತಿದ್ದು ದೂರದ ಕೊಳದಲ್ಲಿ ನೀರು ಕುಡಿಯಲು ಪ್ರಾಣಿಯಾವುದೋ ಬಂದಿರಬೇಕೆಂದು ಕೇವಲ ಅಲ್ಲುಂಟಾದ ಶಬ್ದದಿಂದ ಗ್ರಹಿಸಿದ. ಪ್ರತ್ಯಕ್ಷವಾಗಿ ಕಾಣದೇ ಇರುವಲ್ಲಿಂದಲೇ ಅಲ್ಲಿಗೆ ಬಾಣ ಹೊಡೆದ. ಬಾಯಾರಿಕೆಯಿಂದ ಬಳಲುತ್ತಿದ್ದ ತಂದೆ-ತಾಯಿಗಳಿಗಾಗಿ ಬಿಂದಿಗೆಯಲ್ಲಿ ನೀರನ್ನು ತುಂಬಿಸಿಕೊಳ್ಳುತ್ತಿದ್ದ ಶ್ರವಣನಿಗೆ ಬಾಣ ನಾಟಿತ್ತು. ಬಾಣತಾಗಿ ಸತ್ತಿರಬಹುದಾದ ಪ್ರಾಣಿಯನ್ನು ಹುಡುಕುತ್ತ ಬಂದ ದಶರಥ ಕಂಡಿದ್ದು ಮಾತ್ರ ಕೊನೆಯ ಘಳಿಗೆಯಲ್ಲಿ ಇರುವ ಶ್ರವಣನನ್ನು. ಅವನಿಂದಲೇ ಅವನ ಮಾತಾ-ಪಿತೃಗಳಿರುವುದನ್ನೂ ತಿಳಿದ. ಪಶ್ಚಾತ್ತಾಪ ಪಟ್ಟು, ಬಿಂದಿಗೆಯಲ್ಲಿ ನೀರನ್ನು ತಾನೇ ತುಂಬಿಸಿಕೊಂಡು ಶ್ರವಣನ ಪಾಲಕರೆಡೆಗೆ ನಡೆದಿದ್ದ. ಶ್ರವಣನ ನಿರೀಕ್ಷೆಯಲ್ಲಿದ್ದ ಆ ವೃದ್ಧ ಕುರುಡರು ಹೆಜ್ಜೆಯ ಸಪ್ಪಳ ಕೇಳಿ ಮಗನೇ ಬಂದಿರಬೇಕು ಎಂದುಕೊಳ್ಳುವಾಗ ದಶರಥ ತನ್ನಿಂದಾದ ತಪ್ಪನ್ನು ತಿಳಿಸಿ ಕ್ಷಮೆ ಯಾಚಿಸಿದ. ಕೋಪಗೊಂಡ ಶಾಂತನವ ಮತ್ತು ಜ್ಞಾನವತಿ, ಮುಪ್ಪಿನಲ್ಲಿ ತಮಗಾದಂತೇ ದಶರಥನಿಗೂ ಪುತ್ರವಿಯೋಗದ ದುಃಖ ಬಾಧಿಸಲಿ ಎಂದು ಶಾಪವಿತ್ತರು. ಅಂದು ಅವರು ನೀಡಿದ ಶಾಪದ ಫಲವಾಗಿ ದಶರಥ ಮಗನನ್ನು ಕಾಡಿಗೆ ಕಳುಹಿಸುವ ಪ್ರಸಂಗ ಬಂದಿತ್ತು. ಮುದ್ದಿನ ಮಗನ ವಿಯೋಗದಿಂದ ಬಸವಳಿದ ದಶರಥ ಬಹುಕಾಲ ಬಾಳಲಿಲ್ಲ.

ದಶರಥನ ದೇಹಾಂತ್ಯವಾದ ಘಳಿಗೆಯಲ್ಲಿ ಅಯೋಧ್ಯೆಗೆ ಅಜ್ಜನಮನೆಯಿಂದ ಮರಳಿದ ಇನ್ನೊಬ್ಬ ಮಗ ಭರತ ಅಣ್ಣ ರಾಮನೆಲ್ಲಿದ್ದಾನೆ ಎಂದು ತಾಯಿಯನ್ನು ಕೇಳಿದ. ನಿಮಿಷಗಳಲ್ಲಿ ಅಲ್ಲಿನ ವ್ಯವಹಾರಗಳನ್ನೆಲ್ಲಾ ಅರಿತ ಭರತನಿಗೆ ತಾಯಿ ಕೈಕೇಯಿಯ ಅಪ್ರಬುದ್ಧ ಮನಸ್ಸು ಅರ್ಥವಾಗಿತ್ತು. ನೋವಿನಿಂದ ಭರತ ರಾಮನನ್ನರಸಿ ಕಾಡಿಗೆ ತೆರಳಲು ಅನುವಾದ. ಭರತ ಕಾಡಿಗೆ ರಾಮನನ್ನು ಕಾಣಲು ಹೋಗುವ ಸುದ್ದಿಯನ್ನು ಕೇಳಿ ಅಯೋಧ್ಯಾವಾಸಿಗಳು ಪುಳಕಿತರಾದರು. ರಾಮನಿಲ್ಲದೇ ಅವರೂ ಬಹಳಕಾಲ ಇರಲಾರರು. ಎಲ್ಲರಿಗೂ ರಾಮ ಬೇಕು..ರಾಮ ಬೇಕೇ ಬೇಕು. ಸಾವಿರಾರು ಸಂಖ್ಯೆಯಲ್ಲಿ ಪುರಜನರು, ಪರಿಜನರು, ಸೈನಿಕರು ಎಲ್ಲರೂ ಭರತನನ್ನು ಸೇರಿಕೊಂಡರು. ಆ ಮಹಾ ತಂಡ ಸರಯೂ ನದಿಯನ್ನು ದಾಟಿ ಅಡವಿಯ ಹಾದಿಯನ್ನು ಕ್ರಮಿಸುತ್ತಾ ದಂಡಕಾರಣ್ಯದಲ್ಲಿದ್ದ ರಾಮನನ್ನು ಕಾಣಲು ಮುನ್ನಡೆದು ಬಂದಿತು. ಅಹೋರಾತ್ರಿ ನಡೆದೂ ನಡೆದೂ ರಾಮನಿರುವ ಕುರುಹನ್ನು ದೂರದಿಂದ ಅವರೆಲ್ಲಾ ಕಂಡರು. ಅಣ್ಣ ಶ್ರೀರಾಮಚಂದ್ರನನ್ನು ಪ್ರೀತಿಯ ತಮ್ಮ ಮನದಲ್ಲೇ ನೆನೆದ:

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯ ರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಾಕ್ಷಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

[ಈ ಶ್ಲೋಕವನ್ನು ಪಠಿಸುವುದರಿಂದ ಭಯ ನಿವಾರಣೆಯಾಗುತ್ತದೆ.]

ದೂರದಲ್ಲಿ ಸೈನಿಕರೊಟ್ಟಿಗೆ ಬರುತ್ತಿರುವ ಭರತನನ್ನು ಕಂಡು ಲಕ್ಷ್ಮಣನಿಗೆ ಎಲ್ಲಿಲ್ಲದ ಕೋಪವುಕ್ಕೇರಿತು! ನಾಡಿನ ಹಂಗುತೊರೆದು ಕಾಡೊಳಗೆ ಇರಬಂದರೂ ಇಲ್ಲಿಯೂ ತಮಗೆ ನೆಮ್ಮದಿಯಿಂದಿರಲು ಬಿಡುವುದಿಲ್ಲವಲ್ಲ ಎಂಬ ಅನಿಸಿಕೆಯಿಂದ ಲಕ್ಷ್ಮಣ ಕ್ರುದ್ಧನಾದ. ಲಕ್ಷ್ಮಣನ ಕೋಪವನ್ನರಿತ ಶ್ರೀರಾಮ ಸನ್ನೆಯಲ್ಲೇ ಲಕ್ಷ್ಮಣನಿಗೆ ಸುಮ್ಮನಿರುವಂತೇ ಆಜ್ಞೆಮಾಡಿದ. ಭರತ ಮುಂದಾಗಿ ಬರಲಿ ಆತ ಯುದ್ಧಕ್ಕಾಗಿಯೇ ಬಂದರೂ ಆತ ನಮ್ಮವನೇ. ನಮಗಿಂತಾ ಚಿಕ್ಕವಯಸ್ಸಿನವನಾದ ಆತನಿಗೆ ತಿಳಿಹೇಳಿದರಾಯ್ತು ಎಂಬ ಭಾವನೆ ರಾಮಚಂದ್ರನದ್ದು. ಸಾಗಿಬಂದ ಭರತ ಬಹುಕಾಲದಿಂದ ಕಂಡಿರದ ಅಣ್ಣನನ್ನು ಕಂಡು ಕೈಮುಗಿದ, ಬಿಗಿದಪ್ಪಿ ತನ್ನ ತಾಯಿ ಎಸಗಿದ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಕಣ್ಣೀರ್ಗರೆದ.

ತಮ್ಮ ಭರತನನ್ನು ಆದರಿಸಿದ ರಾಮ ಅಯೋಧ್ಯೆಯಿಂದ ಅಲ್ಲಿನವರೆಗೆ ಅಭಿಮಾನ-ಪ್ರೀತಿಯಿಂದ ಭರತನೊಟ್ಟಿಗೆ ನಡೆದುಬಂದ ಜನಸ್ತೋಮಕ್ಕೆ ವಂದಿಸಿದ. ಎಲ್ಲರಲ್ಲಿಯೂ ಕ್ಷೇಮವೇ ? ಎಂದು ಸಾಮೂಹಿಕವಾಗಿ ವಿಚಾರಿಸಿದ. ತಮ್ಮ ಭರತನಲ್ಲಿ ಆಮೇಲೆ ಮನೆಯ ಕಡೆಗಿನ ವಿಷಯ ಕೇಳತೊಡಗಿದ. ರಾಮ ಕಾಡಿಗೆ ನಡೆದ ತರುವಾಯ ನಡೆದ ಘಟನೆಗಳನ್ನು ಭರತ ಅಣ್ಣನಿಗೆ ಚಾಚೂ ತಪ್ಪದೇ ತಿಳಿಸಿ, ತಂದೆ ಸ್ವರ್ಗಸ್ಥರಾದ ವಿಷಯವನ್ನೂ ತಿಳಿಸಿದ. ತಮ್ಮೆಲ್ಲರನ್ನೂ ಅತ್ಯಂತ ಪ್ರೀತಿಯಿಂದ ಸಲಹುತ್ತಿದ್ದ ತಂದೆಯ ಅವಸಾನವನ್ನು ಆಲಿಸಿದ ಶ್ರೀರಾಮನ ಅರವಿಂದ ಲೋಚನಗಳಿಂದ ಧಾರಾಕಾರವಾಗಿ ನೀರು ಹರಿಯಿತು. ಪಿತೃವಾಕ್ಯ ಪರಿಪಾಲನೆಯ ಕರ್ತವ್ಯಕ್ಕೆ ತಲೆಬಾಗಿ ಕಾಡಿಗೆ ತಾನು ಬಂದಿದ್ದೇ ತನ್ನ ತಂದೆಯ ಅವಸಾನಕ್ಕೆ ಕಾರಣವಾಯ್ತೇ ಎಂದು ಮಮ್ಮಲ ಮರುಗಿದ. ಚೇತರಿಸಿಕೊಂಡ ಶ್ರೀರಾಮ ತಮ್ಮಂದಿರಾದ ಭರತ ಮತ್ತು ಲಕ್ಷ್ಮಣರೊಂದಿಗೆ ಹತ್ತಿರದಲ್ಲಿರುವ ಕೊಳದಲ್ಲಿ ಮುಳುಗೆದ್ದು ಶುಚಿರ್ಭೂತನಾಗಿ ಪಿತೃಕಾರ್ಯವಾಗಿ ತನ್ನಲ್ಲಿರುವ ಭುಂಜಿಸುವ ವಸ್ತುಗಳಿಂದ ಪಿಂಡಪ್ರದಾನ ಮಾಡಿದ.

ಬಂದ ದಣಿವಾರಿಸಿಕೊಂಡ ಜನರೆಲ್ಲರೂ ಹೊರಡಲಣಿಯಾಗಿ ತಾವು ರಾಮನನ್ನು ಮರಳಿ ಕರೆದೊಯ್ಯಲು ಬಂದಿದ್ದನ್ನು ತಿಳಿಸಿದರು. ಭರತ ಒಂದೇ ಸಮನೆ ರಾಮ ಬರಲೇಬೇಕೆಂದು ಹಠಹಿಡಿದ. ವ್ರತಭಂಗವಾಗಕೂಡದೆಂದು ತಿಳಿಸಿದ ರಾಮನಲ್ಲಿ ಕೊನೇಪಕ್ಷ ಪಾದುಕೆಯನ್ನಾದರೂ ಕೊಡುವಂತೆಯೂ, ಅಣ್ಣ ಬರುವವರೆಗೆ ತಾನು ಅದನ್ನೇ ಸಿಂಹಾಸನದಮೇಲೆ ಇರಿಸಿ ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುವುದಾಗಿ ವಿನಂತಿಸಿದ. ತಮ್ಮ ಭರತನ ಉತ್ಕಟೇಚ್ಛೆಯಂತೇ ಶ್ರೀರಾಮ ಪಾದುಕಾ ಪ್ರದಾನ ನಡೆಸಿದ. ೧೪ ವರುಷಗಳನ್ನು ಕಳೆದು ತಾನು ಮರಳುವುದಾಗಿಯೂ ಭರವಸೆಯಿತ್ತ. ರಾಮಪಾದುಕೆಗಳೊಡನೆ ಅಯೋಧ್ಯೆಗೆ ಮರಳಿದ ಆ ಮಹಾಜನಸಂದಣಿ ಪಾದುಕಾ ಪಟ್ಟಾಭಿಷೇಕ ನಡೆಸಿತು. ನಂದಿಗ್ರಾಮದಲ್ಲಿ ನೆಲೆನಿಂತು ಅಲ್ಲಿಂದಲೇ ಅಣ್ಣನ ಹೆಸರಿನಲ್ಲಿ ಭರತ ರಾಜ್ಯಭಾರವನ್ನು ನಡೆಸಿದ.

ನಮೋಸ್ತು ರಾಮಾಯ ಸುಲಕ್ಷ್ಮಣಾಯ ದೇವ್ಯೈ ಚ ತಸ್ಯೈ ಜನಕಾತ್ಮಜಾಯೈ |
ನಮೋಸ್ತುರುದ್ರೇಂದ್ರಯಯಾನಿಲೇಭ್ಯೋ ನಮೋಸ್ತು ಚಂದ್ರಾರ್ಕಮರುದ್ಗಣೇಭ್ಯಃ ||

[ಈ ಶ್ಲೋಕದಿಂದ ಉತ್ತಮ ಸಂಕಲ್ಪದಿಂದ ಪ್ರಾರಂಭಿಸಿದ ಕಾರ್ಯವು ಸಫಲವಾಗುತ್ತದೆ]


ಎಲ್ಲಿಲ್ಲದ ಬಂಗಾರದ ಮೈಬಣ್ಣದ ಜಿಂಕೆ ಕಾಣಿಸಿಕೊಂಡು ಸೀತೆಯ ಮನಸ್ಸನ್ನು ಕದ್ದು ಆಕೆ ಬೇಕೆಂದು ಹಠ ಹಿಡಿದಾಗ, ವಿಧಿಯಿಲ್ಲದೇ ಜಿಂಕೆಯ ಬೆನ್ನಟ್ಟಿದ ರಾಮನಿಗೆ ಸೀತೆಯ ಅಪಹರಣ ಆಗಬಹುದು ಎಂಬ ಭಾವನೆಯಿರಲಿಲ್ಲ. ಆಡವಿಯಲ್ಲಿ ಮಾಯಾವಿಗಳು-ರಕ್ಕಸರು ಇರುತ್ತಾರೆ-ಉಪಟಳ ನೀಡುತ್ತಾರೆ ಎಂಬುದೆಲ್ಲಾ ತಿಳಿದದ್ದೇ ಆಗಿತ್ತು. ಗುಡಿಸಲಿನಲ್ಲಿ ಲಕ್ಷ್ಮಣ ಸೀತೆಯ ಬೆಂಗಾವಲಿಗೆ ಇದ್ದನೆಂಬ ಭರವಸೆಯಿತ್ತು. ಯಾವಾಗ ಮಾಯಾಜಿಂಕೆ ರಾಮನ ಬಾಣದಿಂದ ಮಾರೀಚನಾಗಿ ಬದಲಾಗುತ್ತಾ ಸಾಯುವುದಕ್ಕೂ ಮೊದಲು " ಹಾ ಸೀತಾ, ಹಾ ಲಕ್ಷ್ಮಣಾ " ಎಂದು ಕೂಗಿದ್ದು ಕೇಳಿಸಿತೋ ಆಗ ರಾಮನಿಗೆ ಏಲ್ಲೋ ತಾಳತಪ್ಪುತ್ತಿರುವ ಅನುಭವ ಸ್ವಲ್ಪ ಆಯ್ತು. ಅಣ್ಣನ ದನಿಯ ಅಣುಕುದನಿಯನ್ನು ಗುರುತಿಸಲು ವಿಫಲನಾದ ಲಕ್ಷ್ಮಣ, ಅಣ್ಣನಿಗೇನೋ ಆಪತ್ತು ಬಂದಿದೆಯೆಂದು ಭಾವಿಸಿ ತಳಮಳಗೊಂಡು ಅನ್ಯಮಾರ್ಗವಿಲ್ಲದೇ, ಗುಡಿಸಲಿನ ಸುತ್ತ ಹೊರಗೆ ಮೂರು ರೇಖೆಗಳನ್ನೆಳೆದು ಅಗ್ನಿಯಲ್ಲಿ ಪ್ರಾರ್ಥಿಸಿದ. " ಭವತಿ ಭಿಕ್ಷಾಂ ದೇಹಿ" ಎಂದ ವೇಷಧಾರೀ ರಾವಣನಿಗೆ ಗುಡಿಸಲಿನೊಳಗೆ ನುಗ್ಗದಂತೇ ಅಗ್ನಿ ಜ್ವಲಿಸಿ ತಡೆದ! "ತಾಯೀ ಒಬ್ಬಳೇ ಇದ್ದೀಯಲ್ಲಾ ನಾನು ಒಳ ಬರುವುದು ತರವಲ್ಲ ನೀನೇ ಹೊರಗೆ ಬಂದು ನೀಡು" ಎಂದ ಕಳ್ಳ ಸನ್ಯಾಸಿಗೆ ಭಿಕ್ಷೆ ನೀಡಲು ಹೋದ ಆ ಕ್ಷಣದಿಂದ ಸೀತೆ ರಾವಣನ ರಾಜ್ಯಕ್ಕೆ ಹೋಗಬೇಕಾಯ್ತು! ವನವಾಸದಲ್ಲಿದ್ದಾಗ ಸೀತಾಪಹರಣದಿಂದ ಬಹುವಾಗಿ ನೊಂದಿದ್ದ ರಾಮ ಅಡವಿಯ ಗಿಡ-ಗೋಪಾಲರ ಕೂಡ, ಹರಿವ ತೊರೆ-ಝರಿಗಳ ಕೂಡ ಸಹಿತ " ಓ ಗಿಡಮರಗಳೇ ನನ್ನ ಸೀತೆಯನ್ನು ಕಂಡಿರೇ? ಓ ಪಶುಪಕ್ಷಿಗಳೇ ನನ್ನ ಸೀತೆಯನ್ನು ಕಂಡಿರೇ? ಓ ಹರಿಯುವ ತೊರೆಗಳೇ ನನ್ನ ಸೀತೆಯನ್ನು ಕಂಡಿರೇ?" ಎನ್ನುತ್ತಿದ್ದನಂತೆ.

ತದುನ್ನ ಸಂ ಪಾಂಡು ರದಂತಮವ್ರಣಂ ಶುಚಿಸ್ಮಿತಂ ಪದ್ಮಪಲಾಶಲೋಚನಮ್|
ದ್ರಕ್ಷ್ಯೇ ತದಾರ್ಯಾವದನಂ ಕದಾ ನ್ವಹಂ ಪ್ರಪನ್ನ ತಾರಾಧಿಪತುಲ್ಯ ದರ್ಶನಮ್ ||

[ಈ ಶ್ಲೋಕದಿಂದ ಕಳೆದುಹೋದ ವಸ್ತುವು ಪುನರ್ಪ್ರಾಪ್ತಿಯಾಗುತ್ತದೆ]

ಸಾದಾ ಮಾನವನಾಗಿ ಸೀತೆಯನ್ನು ಹುಡುಕುತ್ತಾ ಸವೆಸಿದ ಕಾಡಹಾದಿ ಅದೆಷ್ಟು ಯೋಜನಗಳೋ, ಎಷ್ಟು ಗಾವುದಗಳೋ ಲೆಕ್ಕವಿಲ್ಲ. ಆ ಕಲಘಟ್ಟದಲ್ಲಿ ಈ ಅಣ್ಣ-ತಮ್ಮ ಅನುಭವಿಸಿದ ಮಾನಸಿಕ ವ್ಯಾಧಿ ಅಳೆಯಲಾಗುವುದಿಲ್ಲ. ಎಲ್ಲೆಲ್ಲಿ ಇದ್ದರೋ ಏನನ್ನು ತಿಂದರೋ ಹಗಲೂ ರಾತ್ರಿ ಸೀತೆಯನ್ನರಸುತ್ತಾ ಮುನ್ನಡೆದಿದ್ದರು. ಜಠಾಯು, ಸಂಪಾತಿ ರಾವಣನನ್ನು ಕಂಡೆವೆಂದರು, ಆತ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕದ್ದೊಯ್ವಾಗ ಆತನ ಕೂಡ ಜಗಳವಾಡಿದ್ದಕಾಗಿ ಖಡ್ಗದಿಂದ ಆತ ಜಠಾಯುವಿನ ರೆಕ್ಕೆಯನ್ನು ಕಡಿದು ಬಿಸುಟಿದ್ದ. ರೆಕ್ಕೆಮುರಿದ ಹದ್ದು ಕೆಳಗೆ ಬಿದ್ದು, ರಾಮನ ಬರುವಿಕೆಗಾಗಿ ಕಾದು ಜೀವಹಿಡಿದಿದ್ದು, ರಾಮನಿಗೆ ಎಲ್ಲವನ್ನೂ ಅರುಹಿತು.

ರಾಮಭದ್ರ ಮಹೇಶ್ವಾಸ ರಘುವೀರ ನೃಪೋತ್ತಮ|
ಭೋ ದಶಾಸ್ಯಾಂತ ಕಾಸ್ಮಾಕಂ ರಕ್ಷಾಂ ದೇಹಿ ಶ್ರಿಯಂ ಚ ಮೇ ||

[ಈ ಶ್ಲೋಕದಿಂದ ವ್ಯಾಧಿ ನಿವಾರಣೆಯಾಗುತ್ತದೆ]

ನಡೆಯುತ್ತಾ ನಡೆಯುತ್ತಾ ಋಷ್ಯಮೂಕ ಪರ್ವತದ ತಪ್ಪಲಿಗೆ ಬಂದಾಗ ಪರ್ವತದ ಎತ್ತರದ ತುದಿಯಿಂದ ಸುಗ್ರೀವ ಇವರನ್ನು ಕಂಡ. ಇಬ್ಬರನ್ನೂ ಕರೆತರುವಂತೇ ಮಂತ್ರಿ ಹನುಮನನ್ನು ಕಳಿಸಿದ. ನಡೆಯಲು ಬಹುದೂರವಾಗುವ ಕಾರಣ ಹನುಮ ಇಬ್ಬರನ್ನೂ ಹೆಗಲಮೇಲೆ ಹೊತ್ತು ಸುಗ್ರೀವನಲ್ಲಿಗೆ ಬಂದ. ಇಲ್ಲಿಯೇ ರಾಮ-ಹನುಮರ ಮೊದಲ ಭೇಟಿ ನಡೆದಿದ್ದು. ಸುಗ್ರೀವನದ್ದೂ ಹೆಂಡತಿಯನ್ನು ಕಳೆದುಕೊಂಡ ಕಥೆ! ಅಣ್ಣ ವಾಲಿ ಅಕ್ರಮದಿಂದ ಸುಗ್ರೀವನ ಹೆಂಡತಿಯನ್ನು ತನ್ನ ರಾಣಿಯನ್ನಾಗಿ ಮಾಡಿಕೊಂಡು ರಾಜ್ಯನಡೆಸುತ್ತಿದ್ದ. ಅದರ ಹಿನ್ನೆಲೆಯರಿತ ಸದ್ಧರ್ಮಿ ಶ್ರೀರಾಮ ವಾಲಿಯನ್ನು ವಧಿಸಿ ಸುಗ್ರೀವನಿಗೆ ಪಟ್ಟಗಟ್ಟಿದ. ಆ ಸಹಾಯಕ್ಕೆ ಪ್ರತಿ ಸಹಾಯವಾಗಿ ಇಡೀ ವಾನರಸೇನೆ ಸೀತೆಯ ಹುಡುಕುವಿಕೆಯಲ್ಲಿ ತೊಡಗಿತು. ಹನುಮನ ಮುಂದಾಳತ್ವದಲ್ಲಿ ಮುನ್ನಡೆದ ಆ ಸೇನೆಗೆ ಯಾವ ದಿಕ್ಕಿನಲ್ಲಿ ಹೇಗೆ ಹೋಗಬೇಕೆಂಬುದನ್ನು ಸನ್ಯಾಸಿಯೊಬ್ಬ ಹನುಮನಿಗೆ ವಿವರಿಸಿದ. ಬೃಹದಾಕಾರವಾಗಿ ಬೆಳೆದ ವೀರಾಂಜನೇಯ ಸಾಗರೋಲ್ಲಂಘನ ಮಾಡಿ ಲಂಕೆಗೆ ತೆರಳಿದ. ಅಲ್ಲಿ ಎಲ್ಲೆಲ್ಲೂ ಹುಡುಕಾಡಿ ಕೆಲವು ರಕ್ಕಸರನ್ನು ಬಡಿದುರುಳಿಸಿ ಅಶೋಕವನದಲ್ಲಿ ಕುಳಿತಿರುವ ಸೀತಾಮಾತೆಯನ್ನು ಕಂಡ.

ಸರ್ವಾನ್ ಲೋಕಾನ್ ಸುಸಂಹೃತ್ಯ ಸಭೂತಾನ್ ಸಚರಾಚರಾನ್|
ಪುನರೇವ ತಥಾ ಸ್ರಷ್ಟುಂ ಶಕ್ತೋ ರಾಮೋ ಮಹಾಯಶಾಃ ||

[ಈ ಶ್ಲೋಕದಿಂದ ದುಷ್ಕರ ಕಾರ್ಯಸಿದ್ಧಿಯಾಗುತ್ತದೆ]

ರಾಮನ ದೂತನಾಗಿ ಹನುಮ ತಾನು ಬಂದೆನೆಂದೂ ಶ್ರೀರಾಮಚಂದ್ರ ಕ್ಷೇಮವೆಂದೂ ಸೀತೆಯಲ್ಲಿ ವಿಷಯ ಭಿನ್ನವಿಸಿ ಶೀಘ್ರದಲ್ಲಿ ಆಕೆಯನ್ನು ರಕ್ಷಿಸಿ ಕರೆದೊಯ್ಯುವುದಾಗಿ ಭರವಸೆಯಿತ್ತ ಹನುಮ ಸೀತೆಯಿಂದ ಗುರುತಿಗಾಗಿ ಚೂಡಾಮಣಿಯನ್ನು ಪಡೆದು, ತಾನು ಬಂದ ಸುದ್ದಿ ತಿಳಿದು ತನ್ನನ್ನು ಕರೆಯಿಸಿ ಅವಮಾನಿಸಿದ ರಕ್ಕಸ ರಾವಣನಿಗೆ ಬುದ್ಧಿ ಕಲಿಸುವ ಸಲುವಾಗಿ, ಲಂಕೆಗೇ ಬೆಂಕಿ ಇಟ್ಟು ಹೊರಟ ಹನುಮಂತ ಮರಳಿ ರಾಮನಲ್ಲಿಗೆ ಬಂದ. ಗುರುತಿಗಾಗಿ ಚೂಡಾಮಣಿಯನ್ನು ತಂದೆನೆಂದು ರಾಮನ ಕೈಗೆ ಅದನ್ನಿತ್ತ ವೇಳೆ ರಾಮನಿಗೆ ಸೀತೆಯೆಂಬ ಅನರ್ಘ್ಯರತ್ನದ ಪ್ರೀತಿ ಮತ್ತೆ ಹೃದಯ ತುಂಬಿತು. ಸಕಲ ವಾನರಸೇನಾ ಸಮೇತನಾಗಿ ನಡೆದ ಶ್ರೀರಾಮ ಸಾಗರದ ದಡದಲ್ಲಿ ನಿಂತು ದಾಟುವ ಪರಿಯನ್ನು ಚಿಂತಿಸಿದ. ಸೇತುವೆಯನ್ನು ಕಟ್ಟುವುದೇ ಅನಿವಾರ್ಯ ಎಂದು ನಿರ್ಣಯಿಸಿದ ರಾಮನ ಸೇವೆಗೆ ಪುಟ್ಟ ಅಳಿಲೂ ಸೇರಿದಂತೇ ವಾನರರೆಲ್ಲರೂ ಕಲ್ಲು-ಮಣ್ಣುಗಳನ್ನು ತಂದು ತಂದು ಸುರಿದರು.

ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ |
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ||

ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ |
ಹನುಮಾನ್ ಶತ್ರುಸೈನ್ಯಾನಾಂ ನಿಹಂತಾ ಮಾರುತಾತ್ಮಜಃ ||

ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್ |
ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ ||

ಅರ್ದಯಿತ್ವಾ ಪುರೀಂ ಲಂಕಾಮಭಿವಾದ್ಯ ಚ ಮೈಥಿಲೀಮ್ |
ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ ||

ಅರ್ಥಸಿದ್ಧಿಂ ತು ವೈದೇಹ್ಯಾ ಪಶ್ಯಾಮ್ಯಹ ಮುಪಸ್ಥಿತಾಮ್ |
ರಾಕ್ಷಸೇಂದ್ರ ವಿನಾಶಂ ಚ ವಿಜಯಂ ರಾಘವಸ್ಯ ಚ ||

[ ಆ ಶ್ಲೋಕಗಳಿಂದ ಸರ್ವಕಾರ್ಯ ಸಿದ್ಧಿಯಾಗುತ್ತದೆ]

ರಾಮಸೇತುವಿನ ನಿರ್ಮಾಣ ನಡೆದೇ ಹೋಯ್ತು. ಎಲ್ಲೆಲ್ಲೂ ಜಯಜಯಕಾರ ಮೊಳಗುತ್ತಿತ್ತು. ಶಂಖ, ಜಾಗಟೆ, ಕೊಂಬು-ಕಹಳೆ, ಭೇರಿ, ನಗಾರಿ ಮುಂತಾದ ವಾದ್ಯಗಳು ಮೊಳಗುತ್ತಿದ್ದವು. ಕಪಿವೀರರು ಈಟಿ, ಭರ್ಚಿ, ಬಿಲ್ಲು-ಬಾಣ, ಮುಸಲ, ತೋಮರ ಮೊದಲಾದ ಹಲವಾರು ಆಯುಧಗಳನ್ನು ಹಿಡಿದು ಲಂಕೆಗೆ ಧಾವಿಸಿದರು. ಘನಘೋರ ಯುದ್ಧದಲ್ಲಿ ರಾವಣ, ಕುಂಭಕರ್ಣ, ಮೇಘನಾದ ಮೊದಲಾದ ಮಹಾ ಮಹಾ ರಕ್ಕಸರು ಮಡಿದರು. ವಿನೀತನಾಗಿ ರಾಮನಲ್ಲಿ ಶರಣುಬಂದಿದ್ದ, ಧರ್ಮಮಾರ್ಗಿಯಾದ ವಿಭೀಷಣನನ್ನು ಯುದ್ಧಾನಂತರದಲ್ಲಿ ರಾವಣನ ಲಂಕೆಗೆ ಅಧಿಪತಿಯನ್ನಾಗಿ ಕೂಡ್ರಿಸಿ ಪಟ್ಟಾಭಿಷೇಕ ಮಾಡಲಾಯ್ತು. ಸೀತೆಯ ಪುನರ್ಮಿಲನವಾದ ಸಂತಸದಲ್ಲಿ ವಿಜಯೋತ್ಸವ ನಡೆದು ಸೀತಾಸಮೇತ ಶ್ರೀರಾಮ ಅಯೋಧ್ಯೆಗೆ ಮರಳಿದ. ಅಲ್ಲಿಗೆ ಹದಿನಾಲ್ಕುವರ್ಷಗಳ ವನವಾಸವೂ ಮುಗಿದು ರಾಮ ಅಯೋಧ್ಯೆಗೆ ಬರುವ ನಿರೀಕ್ಷೆ ಇದ್ದಿದ್ದರಿಂದ ಇಡೀ ಅಯೋಧ್ಯಾ ನಗರ ತಳಿರುತೋರಣಗಳಿಂದ ಕಂಗೊಳಿಸುತ್ತಿತ್ತು. ಪುರದ ಜನರು ರಸ್ತೆಗಳನ್ನು ಸ್ವಚ್ಛಗೊಳಿಸಿ ಸಗಣಿಯಿಂದ ಸಾರಿಸಿ ರಂಗೋಲಿಗಳನ್ನು ಬರೆದಿದ್ದರು. ಭರತ-ಶತ್ರುಘ್ನರು ಅಣ್ಣನ ಬರುವಿಕೆಗಾಗಿ ಕಾದಿದ್ದರು. ಹೇಳಿದ ಮಾತಿನಂತೇ ಶ್ರೀರಾಮ ಸಪತ್ನೀಕನಾಗಿ, ಲಕ್ಷ್ಮಣ ಸಹಿತನಾಗಿ ನಡೆದುಬಂದ. ಜೊತೆಗೆ ಹೊಸ ಸೇರ್ಪಡೆಯಾಗಿ ಹನುಮನೂ ಇದ್ದ!

ಅಯೋಧ್ಯೆಯ ಪ್ರಜೆಗಳು ರಾಮ ಬರುವ ರಸ್ತೆಯ ಇಕ್ಕೆಲಗಳಲ್ಲಿ ಇರುವೆಯೋಪಾದಿಯಲ್ಲಿ ಜಾಗವೇ ಇಲ್ಲದಷ್ಟು ಜಮಾಯಿಸಿದ್ದರು. ಎಲ್ಲರೂ ಕೈಯ್ಯಲ್ಲಿ ಆರತಿ ತಟ್ಟೆಗಳನ್ನು ಹಿಡಿದಿದ್ದರು. ಗಜಗಾಂಭೀರ್ಯದಿಂದ ನಗುಮೊಗಹೊತ್ತು ನಡೆದುಬಂದ ಸೀತಾ-ರಾಮ-ಲಕ್ಷ್ಮಣರಿಗೆ ಗುಲಾಬಿ ಹೂವಿನ ದಳಗಳನ್ನೆರಚಿ ಸ್ವಾಗತ ನಡೆಯಿತು. ಅರಮನೆಯ ಪುರೋಹಿತರುಗಳು ವೇದಘೋಷ ನಡೆಸಿದರು. ತೆಂಗಿನಕಾಯಿ ಸುಳಿದು ನೆಲಕ್ಕೆ ಅಪ್ಪಳಿಸಿದರು. ಹೆಂಗಳೆಯರು ಪಾದಗಳನ್ನು ತೊಳೆದು ಅರಿಶಿನ-ಕುಂಕುಮಾದಿ ಮಂಗಳದ್ರವ್ಯಗಳನ್ನು ಪೂಸಿದರು. ವಿಧವಿಧದ ಹೂಗಳಿಂದ ಅರ್ಚಿಸಿದರು. ಕೆಲವರು ಓಕುಳಿಯೆತ್ತಿದರೆ ಇನ್ನೂ ಕೆಲವರು ದೃಷ್ಟಿ ಬಳಿದರು. ಒಟ್ಟಾರೆ ತಮತಮಗೆ ತೋಚಿದ ರೀತಿಯಲ್ಲಿ ಭವ್ಯವಾಗಿ ಸ್ವಾಗತ ಕೋರಿದರು. ಪಂಚವಾದ್ಯಾದಿ ಮಂಗಳವಾದ್ಯಗಳು ಮೊಳಗುತ್ತಲಿದ್ದವು. ಎಲ್ಲೆಲ್ಲೂ " ಶ್ರೀರಾಮ್ ಜೀ ಕೀ ಜೈ ಶ್ರೀರಾಮ್ ಜೀ ಕೀ ಜೈ " ಎಂಬ ಜೈಕಾರ ಕೇಳಿಬರುತ್ತಲಿತ್ತು.

ಮೆಲ್ಲಗೆ ಎಲ್ಲರೊಡನೆ ಒಂದಾಗುತ್ತಾ ನಡೆದುಬಂದ ಶ್ರೀರಾಮ ಅರಮನೆಯೆಡೆಗೆ ನಡೆದ. ಅರಮನೆಯಲ್ಲಿ ಮತ್ತೆ ಅರಮನೆಯ ಮುಖಪಂಟಪದಲ್ಲಿ ವಿಶೇಷ ಸ್ವಾಗತ ದೊರೆಯಿತು. ತಮ್ಮಂದಿರಾದ ಭರತ-ಶತ್ರುಘ್ನರು ಅಣ್ಣನ-ಅತ್ತಿಗೆ-ಲಕ್ಷ್ಮಣರ ಪಾದಗಳನ್ನು ತೊಳೆದರು. ಸುಗಂಧಭರಿತ ಹೂಹಾರಗಳನ್ನು ಅರ್ಪಿಸಿದರು. ನೀರಾಜನಗಳನ್ನು ಬೆಳಗಿ ಓಕುಳಿಯೆತ್ತಿ ಒಳಗೆ ಕರೆತಂದರು.

ಅಯೋಧ್ಯಾಗಮನದ ಕೆಲವುದಿನಗಳ ತರುವಾಯ ಒಂದು ಶುಭ ಮುಹೂರ್ತವನ್ನು ರಾಜಗುರುಗಳು ನಿರ್ಧರಿಸಿದರು. ಅಂದಿನದಿನ ನಸುಕಿನಲ್ಲೇ ಶೌಚ-ಸ್ನಾನಾದಿಗಳನ್ನೂ, ಮಧುಪರ್ಕಾದಿಗಳನ್ನೂ ತೀರಿಸಿಕೊಂಡ ಶ್ರೀರಾಮಚಂದ್ರ ವಿಧಿಯುಕ್ತವಾಗಿ ವೈದಿಕ ಹೋಮ-ಪೂಜಾದಿಗಳನ್ನು ನೆರವೇರಿಸಿದ. ಅತಿ ವಿಶಿಷ್ಟವಾಗಿ ಅಲಂಕೃತಗೊಂಡಿದ್ದ ಅರಮನೆಯಲ್ಲಿ, ಗೊತ್ತಾದ ಸಮಯಕ್ಕೆ ಸರಿಯಾಗಿ ಮಂಗಳವಾದ್ಯಗಳ ಇಂಪಾದ ಸಂಗೀತದಲ್ಲಿ ಶ್ರೀರಾಮಚಂದ್ರನನ್ನು ಸೀತಾಸಹಿತನಾಗಿ ಬಂಗಾರದ ಸಿಂಹಾಸನದಮೇಲೆ ಕುಳ್ಳಿರಿಸಿದ ರಾಜಗುರುಗಳು ರಾಮನ ತಲೆಗೆ ವಜ್ರ-ವೈಡೂರ್ಯಖಚಿತ ರಾಜಕಿರೀಟ ತೊಡಿಸಿದರು. ವೇದಘೋಷಗಳೂ ಜೈಕಾರಗಳೂ ಮುಗಿಲುಮುಟ್ಟಿದವು. ಪುಣ್ಯನದಿಗಳ ಅಭಿಮಂತ್ರಿತ ಜಲವನ್ನು ಮಾವಿನ ಎಲೆಗಳಿಂದ ಪ್ರೋಕ್ಷಿಸಿದ ರಾಜಗುರುಗಳು ರಾಜಾರಾಮನ ಪಟ್ಟಾಭಿಷೇಕದಲ್ಲಿ ರಾಜೋಪಚಾರ ಪೂಜೆಯನ್ನು ನಡೆಸಿದರು. ಭರತ-ಶತ್ರುಘ್ನ-ಲಕ್ಷ್ಮಣ-ಹನುಮತ್ಸಮೇತ ಶ್ರೀಸೀತಾರಾಮಚಂದ್ರರ ಪಟ್ಟಾಭಿಷೇಕ ಮಹೋತ್ಸವವು ಬಹಳ ವಿಜೃಂಭಣೆಯಿಂದ ಸಂಪನ್ನವಾಯ್ತು ಎಂಬಲ್ಲಿಗೆ ಕಥೆಗೆ ಸಾಕ್ಷೀಭೂತನಾಗಿ ಕಣ್ತುಂಬಿಕೊಂಡ ಆಂಜನೇಯ ಆನಂದಬಾಷ್ಪ ಸುರಿಸಿದ.

ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಂಭಂಜನಸುತೇ ತತ್ತ್ವಂ ಮುನಿಭ್ಯಃ ಪರಂ
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

ವಾಮೇ ಭೂಮಿಸುತಾ ಪುರಶ್ಚ ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ|
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಮ್ ||

[ ಅಹ...ಅಹ..ಅಹ ...ರಾಗವಾಗಿ ಉಚ್ಚರಿಸಲು ಬರುವವರಿಗೆ ಎಂತಹ ಸುಲಲಿತ ಮಧುರಸಪಾನವೀ ಶ್ಲೋಕಗಳು ಅಲ್ಲವೇ? ಸಂಸ್ಕೃತಕ್ಕಿರುವ ಈ ತಾಕತ್ತು ಬೇರಾವ ಭಾಷೆಗೂ ಒಗ್ಗದಲ್ಲ! ಇದಲ್ಲವೇ ಭಾಷಾ ಸೊಬಗು ? ]

ಮಂಗಲಂ ಕೋಸಲೇಂದ್ರಾಯ ಮಹನೀಯಗುಣಾಬ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್ ||

ಮಹನೀಯರೇ, ಅತ್ಯಾಸಕ್ತಿಯಿಂದ ರಾಮಕಥೆಯನ್ನು ಶ್ರೀರಾಮನ ಹುಟ್ಟಿನಿಂದ ಪಟ್ಟದವರೆಗೂ ಕೇಳಿದಿರಿ. ರಾಮಕಥೆಯೇ ಹಾಗೆ, ಅದು ವಾಲ್ಮೀಕಿ ಎಂಬ ಕೋಗಿಲೆಗೊಂದೇ ಅಲ್ಲ ಮಿಕ್ಕುಳಿದ ಹಕ್ಕಿಗಳಿಗೂ ಕೋಗಿಲೆಯ ಉಲಿಯನ್ನು ಅನುಕರಿಸಲು ಕಲಿಸುತ್ತದೆ, ಎಷ್ಟುಸರ್ತಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಮತ್ತೊಮ್ಮೆ ಸಪರಿವಾರ ಸಹಿತನಾದ ಶ್ರೀ ಪಟ್ಟಾಭಿರಾಮನಿಗೆ ಸಾಷ್ಟಾಂಗವೆರಗುತ್ತಾ, ನಮ್ಮೆಲ್ಲರಿಗೂ ಶ್ರೀರಾಮಚಂದ್ರ ಸಕಲ ಸುಖವನ್ನೂ-ಸಮೃದ್ಧಿಯನ್ನೂ ಕರುಣಿಸಲಿ ಎಂಬ ಪ್ರಾರ್ಥನಾ ಶ್ಲೋಕದೊಂದಿಗೆ ರಾಮಕಥೆಗೆ ಸದ್ಯಕ್ಕೆ ಮಂಗಳಹಾಡೋಣ.

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾ ಸುಖಿನೋ ಭವಂತು ||

Wednesday, March 28, 2012

ನಿದಿಧ್ಯಾಸನ ಮಾಡಿ ಜಯಶೀಲರಾಗಿ !

ಚಿತ್ರಋಣ: ಅಂತರ್ಜಾಲ

ನಿದಿಧ್ಯಾಸನ ಮಾಡಿ ಜಯಶೀಲರಾಗಿ !


ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ |
ಅವಸ್ಥಾತ್ರಯ-ಸಾಕ್ಷ್ಯಸ್ಮಿ ಅಹಮೇವಾಹಮವ್ಯಯಃ ||

ಈ ವಿದ್ಯೆಯನ್ನು ಅನೌಪಚಾರಿಕವಾಗಿ ಹೇಳಿಕೊಟ್ಟ ಗುರುವೃಂದಕ್ಕೆ ಮೊದಲು ಶಿರಬಾಗಿ ಕರಮುಗಿದು ಪ್ರಾರ್ಥಿಸಿ ನಿಮ್ಮಲ್ಲಿ ಈ ವಿಷಯ ಪ್ರಸ್ತಾವಿಸುತ್ತಿದ್ದೇನೆ. ಹೊಸದೊಂದು ವಿಷಯ ನನ್ನ ಗಮನ ಸೆಳೆದಿತ್ತು. ನಿದಿಧ್ಯಾಸನ ಕ್ರಿಯೆ ! ಹಾಗೆಂದರೇನು ? ಎಲ್ಲಿ ಹೇಗೆ ಅದನ್ನು ಆಚರಿಸುವುದು ? ಯಾರು ಮತ್ತು ಯಾವಾಗ ಮಾಡಬಹುದು ? ಅದರ ಪರಿಣಾಮಗಳೇನು ? ಈ ರೀತಿ ಒಂದರಮೇಲೊಂದು ಪ್ರಶ್ನೆಗಳು ಬರುತ್ತಲೇ ಇದ್ದವು; ಉತ್ತರ ಅಷ್ಟು ಸಲೀಸಾಗಿ ಸಿಗಲಿಲ್ಲ. ಹುಡುಕಿದೆ ಹುಡುಕಿದೆ ಹಲವು ಯೋಗಿಗಳಲ್ಲಿ ಹೋದರೂ ಅದೊಂದು ಸ್ವಾನುಭವ ಕ್ರಿಯೆಯಾಗಿರುವುದರಿಂದ ಅದನ್ನು ವಿವರಿಸುವುದು ಸ್ವಲ್ಪ ಕಷ್ಟ.

ಭಾರತೀಯ ಮೂಲದ ಯಾವುದೇ ತತ್ವಗಳನ್ನು ತೆಗೆದುಕೊಳ್ಳಿ ಅವು ಆದರ್ಶಪ್ರಾಯ. ಅವು ಮತಗಳ ಬಗ್ಗೆ ಹೇಳುವುದಿಲ್ಲ; ಆದರೆ ಧರ್ಮದ ಬಗ್ಗೆ ತಿಳಿಸುತ್ತವೆ, ಮಾನವ ಧರ್ಮದ ಬಗ್ಗೆ ವಿವರಿಸುತ್ತವೆ. ಅಲ್ಲಿಲ್ಲಿ ಆರ್ಟ್ ಆಫ್ ಲಿವಿಂಗ್ ಅಥವಾ ಇನ್ನೂ ಹಲವಾರು ಯೋಗ ಕೇಂದ್ರಗಳಿಂದ ಕೆಲವರು ಇದನ್ನು ತಿಳಿದುಕೊಂಡಿರಬಹುದು. ಅಷ್ಟಾಂಗ ಯೋಗದ ಬಗ್ಗೆಯೂ ಅಲ್ಪಸ್ವಲ್ಪ ಗೊತ್ತಾಗಿರಬಹುದು. ಆದರೆ ಅಷ್ಟಾಂಗಯೋಗದ ಉಪಯೋಗವನ್ನು ಅರಿತವರು ಭಾಗಶಃ ಯೋಗವನ್ನಾದರೂ ಕಲಿಯುತ್ತಾರೆ. ಯೋಗವೆಂಬುದು ಕೇವಲ ಯೋಗಾಸನವಲ್ಲ, ಅದು ಕೇವಲ ಭೌತಿಕ ಅಥವಾ ಶಾರೀರಿಕ ವ್ಯಾಯಾಮ ಕ್ರಿಯೆಯಲ್ಲ. ಅದು ದೇಹ ಮತ್ತು ಮನಸ್ಸುಗಳನ್ನು ಬಳಸಿ ಆತ್ಮಾನುಸಂಧಾನ ಮಾಡುವ ಕ್ರಿಯೆ! ಈ ಬ್ಲಾಗಿನ ಆರಂಭದಲ್ಲಿ ನಾನು ಬರೆದ ಹಾಡೊಂದು ನೆನಪಾಗುತ್ತಿದೆ. ಅದನ್ನು ಕೆಲವರು ಓದಿದರು; ಕೆಲವರು ತುಂಬಾ ಚೆನ್ನಾಗಿದೆಯೆಂದರು, ಇನ್ನೂ ಕೆಲವರು ತೀರಾ ವಿರಕ್ತ ಗೀತೆ ಎಂದರು. ಅದರ ಆಳವಾದ ಗಹನವಾದ ಅರ್ಥವನ್ನು ಯಾರೂ ಅರಿಯದಾದರು.

ಹಲವು ಸರ್ತಿ ನಾನು ಹೇಳಿದ್ದಿದೆ, ಶರೀರದ ಸ್ವಚ್ಛತೆಗಾಗಿ ಹೇಗೆ ಸ್ನಾನ ಮಾಡುತ್ತೇವೆಯೋ ಹಾಗೆಯೇ ಮನಸ್ಸಿನ ಸ್ವಚ್ಛತೆಗಾಗಿ ಧ್ಯಾನ ಮಾಡಿ ಎಂದು. ಮನಸ್ಸು-ಆತ್ಮ ಬೇರೇ ಬೇರೇ. ಆತ್ಮ ಶುದ್ಧವಾಗಿರುತ್ತದೆ; ಕಲ್ಮಶರಹಿತವಾಗುತ್ತದೆ. ಯಾವಾಗ ಆತ್ಮ ಶರೀರದೊಳಗೆ ಸೇರಿ ಮನಸ್ಸಿನ ಹತೋಟಿಯಲ್ಲಿ ಸಿಕ್ಕಿಬೀಳುತ್ತದೋ ಆಗ ಅದು ಗೌಣವಾಗಿ ಸುಪ್ತವಾಗಿ ಶರೀರದೊಳಗೆ ಹುದುಗಿರುತ್ತದೆಯೇ ವಿನಃ ತನ್ನಶಕ್ತಿಯನ್ನು ಅದು ಮರೆತಿರುತ್ತದೆ ! ಈ ಶರೀರದೊಳಗೆ ಆತ್ಮ ಎಂಬುದು ಮೊಬೈಲ್ ಹ್ಯಾಂಡ್ ಸೆಟ್ ನಲ್ಲಿ ಸಿಮ್ಮು ಇರುವಂತೇ. ನಮ್ಮಲ್ಲಿಯೂ ಡ್ಯೂಯಲ್ ಸಿಮ್ಮು! ಒಂದು ಒಳಗಿನ ನಾನು ಒನ್ನೊಂದು ಹೊರಗಿನ ನಾನು. ಆದರೆ ಇಲ್ಲಿ at a time both are functioning! ಆಗಾಗ ನನ್ನಜೊತೆಗಿರುವ ನಾನು ಒಳಗಿನ ನನ್ನನ್ನು ಬಿಟ್ಟು ಪರಸ್ಪರ ಕೆಲಸಮಾಡುತ್ತೇನೋ ಆ ಕೆಲಸ ಯಶಸ್ವಿಯಾಗುವುದಿಲ್ಲ ಅಥವಾ ಕೇಡಿನ ಕೆಲಸವಾಗಿರುತ್ತದೆ!

ಹೀಗಿರುತ್ತ ನಮ್ಮ ಲೌಕಿಕ ಜೀವನದಲ್ಲಿ ಹಿಂದಿನ ಜನ್ಮಾಂತರಗಳ ಕರ್ಮಾವಶೇಷಗಳು ನಮ್ಮನ್ನು ಬಾಧಿಸುತ್ತವೆ. ಅದಕ್ಕೆಲ್ಲಾ ನಾವು ಬಾಧ್ಯಸ್ಥರೇ. ಬುದ್ಧ ಜಾತಕ ಕಥೆಗಳನ್ನು ಕೇಳಿದ್ದೀರಿ, ಕರ್ಣ-ಭೀಷ್ಮರಂತಹ ಹಲವು ಮಹನೀಯರು ಯಾಕೆ ಹಾಗೆ ನೋವನುಭವಿಸಿದರು ಎಂಬುದನ್ನು ನೋಡಿದ್ದೀರಿ. ಭೀಷ್ಮನ ಬಗ್ಗೆ ಹಿಂದೊಮ್ಮೆ ಬರೆದಿದ್ದೆ, ಆಗಾಗ ಈ ಕಡೆ ನೀವು ಬಂದಿದ್ದರೆ ಅವುಗಳನ್ನೆಲ್ಲಾ ಓದಿರುತ್ತೀರಿ. ಉತ್ತಮವಾದ ಕೆಲಸಗಳನ್ನು ಮಾಡಿದವರು ಉತ್ತಮ ಫಲಗಳನ್ನೂ ಮಧ್ಯಮರು ಮಿಶ್ರ ಫಲಗಳನ್ನೂ ಅಧಮರು ಕೆಟ್ಟ ಫಲಗಳನ್ನೂ ಪಡೆಯುತ್ತಾರೆ. ನಿತ್ಯವೂ ನಾವು ಮಡುವ ಕೆಲಸವನ್ನೆಲ್ಲಾ ಒಮ್ಮೆ ಕೂತು ಅವಲೋಕಿಸುತ್ತಾ ಅಂತರಾತ್ಮನ ಜೊತೆಗೆ ನಿಕಟವರ್ತಿಯಾಗಿ ನಿಜದ ವರದಿಯನ್ನು ಆತನಿಗೆ ಒಪ್ಪಿಸಿ ಅವನಿಂದ ರಶೀದಿ ಪಡೆಯುವುದೇ ನಿದಿಧ್ಯಾಸನ ಕ್ರಿಯೆ.

ಮನವ ಶೋಧಿಸಬೇಕು ನಿತ್ಯ
ನಾವು ಅನುದಿನ ಮಾಡುವ ಪಾಪ-ಪುಣ್ಯದ ವೆಚ್ಚ

ಎಂದು ಪುರಂದರ ದಾಸರು ಹೇಳಿದ್ದು ಬರಿದೇ ಅಲ್ಲ. ನವಕೋಟಿ ನಾರಾಯಣನೆನಿಸಿದ್ದ ಶೀನಿವಾಸ ನಾಯಕನನ್ನು ತನ್ನ ಆಟಕ್ಕೆ ಬಳಸಿಕೊಂಡ ಶ್ರೀಮನ್ನಾರಾಯಣ ಅವರ ಲೋಭತ್ವವನ್ನು ತೊರೆಯಿಸಿ ತನ್ನ ದಾಸನನ್ನಾಗಿ ಸ್ವೀಕರಿಸಿದ. ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದ ಶ್ರೀಮಂತ ವ್ಯಾಪಾರಿಯೊಬ್ಬ ಹೀಗೆ ಪುರಂದರರಾಗುತ್ತಾರೆಂದು ಯಾರೂ ಎಣಿಸಿರಲಿಲ್ಲ. ಮಾನವ ಮನಸ್ಸಿಗೆ ಆಸೆ ಎಂಬುದು ತೀರುವುದಿಲ್ಲ. ಇಷ್ಟಿದ್ದರೆ ಅಷ್ಟಿರಲಿ ಎಂಬ ಆಸೆ, ಅಷ್ಟಿದ್ದರೆ ಮತ್ತಷ್ಟಿರಲಿ ಎಂಬ ಬಯಕೆ, ಮತ್ತಷ್ಟಿದ್ದರೆ ಮಗುದಷ್ಟಿರಲಿ ಎಂಬ ಅಪೇಕ್ಷೆ ಹೀಗೇ ಆಸೆಯ ಹಕ್ಕಿ ಹಾರುತ್ತಾ ಹಾರುತ್ತಾ ಎಲ್ಲೂ ಕೂರದೇ ಹಾರುತ್ತದೆ! ಇಂತಹ ಆಸೆಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಜೀವನದಲ್ಲಿ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ.

ಯೋಗದ ಕೊನೆಯಘಟ್ಟಕ್ಕಿಂತ ಹಿಂದಿನ ಎರಡನೇ ಘಟ್ಟವಾದ ಧ್ಯಾನದಲ್ಲಿ ಶ್ರವಣ ಮತ್ತು ಮನನ ಕ್ರಿಯೆಗಳು ನಡೆಯುತ್ತವೆ. ಶ್ರವಣ ಎಂದರೆ ಉತ್ತಮವಾದುದನ್ನು ಕೇಳುವುದು ಮತ್ತು ಮನನ ಎಂದರೆ ಕೇಳಿದ್ದನ್ನೇ ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಗೆ ತಂದುಕೊಳ್ಳುವುದು. ಇವೆರಡೂ ಮುಗಿದ ನಂತರದ ಹಂತ ನಿದಿಧ್ಯಾಸನ. ನಿದಿಧ್ಯಾಸನದಲ್ಲಿ ಎರಡು ಹಂತಗಳು. ಮೊದಲನೆಯದು ಮಿಥ್ಯೆಯನ್ನು ವಿಸರ್ಜಿಸುವುದು : ನಾನೆಂದರೆ ಈ ಶರೀರವಲ್ಲ, ನಾನು ಎತ್ತರವಿಲ್ಲ, ನಾನು ಚಿಕ್ಕವನಲ್ಲ, ನಾನು ದೊಡ್ಡವನೂ ಅಲ್ಲ, ನಾನು ಸುಂದರನಲ್ಲ, ನಾನು ಕುರೂಪಿಯೂ ಅಲ್ಲ, ನಾನು ಸೂಕ್ಷ್ಮನಲ್ಲ, ನಾನು ಸ್ಥೂಲವೂ ಅಲ್ಲ, ನಾನು ಬುದ್ಧಿಯಲ್ಲ, ನಾನು ಮನಸ್ಸಲ್ಲ, ನಾನು ಚಿತ್ತವಲ್ಲ, ನಾನು ಅಹಂಕಾರವಲ್ಲ ಹೀಗೆಲ್ಲಾ. ಎರಡನೆಯದು ಬ್ರಹ್ಮತ್ವವನ್ನು ಒಪ್ಪಿಕೊಳ್ಳುವುದು: ನಾನು ಆತ್ಮ, ನಾನು ಶುದ್ಧ, ನಾನು ಬುದ್ಧ[ಬೌದ್ಧಿಕವಾಗಿ ಬೆಳೆದವನು], ನಾನು ಮುಕ್ತ ಮತ್ತು ನಾನು ಕ್ರಿಯೆಯಲ್ಲದ, ಯಾವುದೇ ಸಂಗವಿಲ್ಲದ, ಜನನ-ಮರಣಗಳೂ ಬಾಧಿಸದ ಬ್ರಹ್ಮ ರೂಪ.

ಈ ಹಂತಕ್ಕೆ ತಲುಪುವುದು ಸುಲಭದ ಮಾತಲ್ಲ. ಎಷ್ಟೋ ಜನರಿಗೆ ಇದೆಲ್ಲಾ ಅರ್ಥವಾಗುವುದು ದೂರದ ಮಾತು. ಬಾವಿಯೊಳಗಿದ್ದ ಕಪ್ಪೆ ತನ್ನ ಬಾವಿಯೇ ಜಗತ್ತು ಎಂದುಕೊಂಡ ಹಾಗೇ ನಿಜದ ಜಗತ್ತನ್ನು ಅರಿಯದೇ ಮಿಥ್ಯೆಯ ಜಗತ್ತಿನಲ್ಲಿ ಲೌಕಿಕ ಜಗದಲ್ಲಿ ಪ್ರತಿಯೊಂದು ಕ್ಷಣವೂ ತೊಡಗಿಕೊಂಡ ನಿಜವಾದ ನಾನು ನನ್ನನ್ನೇ ಮರೆತಿರುತ್ತೇನೆ. ಒಂದೊಮ್ಮೆ ನಿದಿಧ್ಯಾಸನ ಕ್ರಿಯೆಯಲ್ಲಿ ತೊಡಗಿಕೊಂಡರೆ ಈ ಜಗದ ವ್ಯಾವಹಾರಿಕ ಒಳತಿರುಳಿನ ಅರ್ಥ ನಮಗಾಗುತ್ತದೆ; ನಾವು ಬಂಧಮುಕ್ತರಾಗುತ್ತೇವೆ. ನಿದಿಧ್ಯಾಸನ ಕ್ರಿಯೆ ಯೋಗನಿದ್ರೆಯನ್ನು ನೀಡುತ್ತದೆ. ಆತ್ಮನೊಡನೆ ನಾನು ಅಂದರೆ ನನ್ನೊಡನೆ ನಾನು ಮತ್ತು ನಾನು ಮತ್ತು ನಾನು ಮತ್ತು ನಾನು ಮತ್ತು ನಿಜವಾದ ನಾನು. ಆ ನಿಜವಾದ ನಾನು ಎಚ್ಚೆತ್ತಾಗ, ಜಾಗ್ರತವಾದಾಗ ಈ ಮಿಥ್ಯೆಯ ನಾನುವನ್ನು ನಿಯಂತ್ರಿಸುತ್ತದೆ! ಒಳಗಿನ ನಾನು ಮತ್ತು ದೇವರು ಇವೆರಡರಲ್ಲಿ ಭೇದ ಎಣಿಸದೇ ಇದ್ದರೆ ಒಳಗಿನ ನಾನು ಹೇಳುವುದನ್ನು ಹೊರಗಿನ ನಾನು ಕಾರ್ಯಗತಗೊಳಿಸಬೇಕಾಗುತ್ತದೆ. ದೇವರಲ್ಲಿ ನಾವು ಸತ್ಯವನ್ನು ಬಚ್ಚಿಡಲಾರೆವು, ದೇವನಿಗೆ ಮೋಸಮಾಡಲಾರೆವು, ದೇವನಿಗೆ ಅನ್ಯಾಯಮಾಡಲಾರೆವು, ದೇವನನ್ನು ದೂಷಿಸಲಾರೆವು, ದೇವನನ್ನು ಶಿಕ್ಷಿಸಲಾರೆವು, ದೇವನಿಗೆ ಬೇಡದ್ದನ್ನು ನಿವೇದಿಸಲಾರೆವು, ದೇವ ಕೆಟ್ಟ ಚಟಗಳಿಗೆ ಅಧೀನನಾಗಲಾರ...ಹೀಗೇ ನನ್ನೊಳಗೇ ದೇವ ಇದ್ದಾನೆಂದಮೇಲೆ ಆತನಿಗೆ ಸರಿಯಾಗಿ ಹೊರಗಿನ ನಾನು ನಡೆದುಕೊಳ್ಳಬೇಕಾಯ್ತು!

ಆಗ ಶ್ರೀಶಂಕರರ ’ಅಹಂ ಬ್ರಹ್ಮಾಸ್ಮಿ’ಯನ್ನು ನಾವು ಅನುಷ್ಠಾನದಲ್ಲಿ ಕಾಣುತ್ತೇವೆ! ದೇವರೇ ನಾನಾದಾಗ ನನ್ನ ಸುತ್ತ ಇರುವ ಪ್ರತಿಯೊಂದೂ ಜೀವಿಯಲ್ಲಿ, ವಸ್ತುವಿನಲ್ಲಿ, ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಲ್ಲೂ ನನ್ನದೇ ಇನ್ನೊಂದು ಅಂಶವನ್ನು ಕಾಣತೊಡಗುತ್ತೇನೆ. ಯಾರಿಗೂ ಅನ್ಯಾಯ ಮಾಡಲಾರೆ, ಯಾರಿಗೂ ಕೆಟ್ಟದ್ದನ್ನು ಬಯಸಲಾರೆ, ಯಾರಿಗೂ ಮೋಸಮಾಡಲಾರೆ, ಯಾರಿಗೂ ನೋವನ್ನು ಉಂಟುಮಾಡಲಾರೆ, ಎಲ್ಲರೂ ನನ್ನವರೇ ನನ್ನ ಭಾಗವೇ ಎಂಬ ಏಕದರಲ್ಲಿ ಅನೇಕ ಮತ್ತು ಅನೇಕದರಲ್ಲಿ ಏಕ ತತ್ವವನ್ನು ಕಾಣುತ್ತಾ ವಸುಧೆಯಲ್ಲಿರುವ ಎಲ್ಲಾ ಜೀವಿಗಳೂ ನನ್ನದೇ ಕುಟುಂಬ ಎಂಬ ಭಾವಕ್ಕೆ ತಲುಪುತ್ತೇವೆ. || ವಸುಧೈವ ಕುಟುಂಬಕಮ್ || ಎಂಬ ಭಾವ ಜಾಗೃತವಾದಾಗ ನಾವು ತಪ್ಪನ್ನೆಂದೂ ಮಾಡುವ ಗೋಜಿಗೆ ಹೋಗುವುದಿಲ್ಲ.

ಹೀಗೇ ಪುನರಪಿ ಪ್ರತಿನಿತ್ಯ ನಾವು ನಮ್ಮೊಳಗೆ ಅಂದರೆ ಹೊರಗಿನ ನಾನು ಒಳಗಿನ ನಾನುವನ್ನು ಸಂಪರ್ಕಿಸಿ, ಸಂದರ್ಶಿಸಿ ಕೆಲಹೊತ್ತು ತದೇಕ ಚಿತ್ತದಿಂದ ಒಳಗಿನ ನಾನುವಿನೊಡನೆ ಆಟವಾಡುವ ಪ್ರಕ್ರಿಯೆಯೇ ನಿದಿಧ್ಯಾಸನ. ನಿದಿಧ್ಯಾಸನ ಕ್ರಿಯೆಯಲ್ಲಿ ತಲ್ಲೀರಾದಾಗ ಇಹದ ಜಂಜಡಗಳನ್ನೆಲ್ಲಾ ಮರೆಯಲು ಸಾಧ್ಯವಾಗುತ್ತದೆ. ಆಗ ಯಾವ ಮೊಬೈಲೂ ರಿಂಗಣಿಸುವುದು ನಮಗೆ ಕೇಳುವುದಿಲ್ಲ, ಯಾವುದೇ ವಾಹನ ಓಡಾಡಿದ ಗೌಜಿ ಕೇಳುವುದಿಲ್ಲ, ಯಾವುದೇ ಟಿವಿ ಧಾರಾವಹಿಯ ಭರಾಟೆಯಿಲ್ಲ, ಯಾರೂ ಮಡೆಸ್ನಾನ ಮಾಡುತ್ತಿಲ್ಲ, ಯಾರೂ ಧರಣಿಕೂರುತ್ತಿಲ್ಲ, ಎಲ್ಲೂ ಜಗಳಗಳಾಗುತ್ತಿಲ್ಲ, ಎಲ್ಲೂ ರಾಜಕೀಯದ ಒತ್ತಡವಿಲ್ಲ, ಯಾವುದೇ ಉದ್ವಿಗ್ನ ಪರಿಸ್ಥಿತಿಯೂ ಇಲ್ಲ, ಯಾರೂ ಏನನ್ನೂ ಕದ್ದೊಯ್ಯುವುದಿಲ್ಲ, ಯಾರೂ ಏನ್ನನ್ನೋ ಕೇಳಬಂದು ಕರೆಗಂಟೆ ಬಾರಿಸುವುದಿಲ್ಲ! ಸಮಯವೆಲ್ಲಾ ನನಗೇ ಮೀಸಲು ಮತ್ತೆ ನಮಗೇ ಮೀಸಲು ಮತ್ತು ನನಗೇ ಮೀಸಲು.

ಈ ನಿದಿಧ್ಯಾಸನವೆಂಬ ಮಾನಸಿಕ ಸ್ನಾನ ಮುಗಿದಾಗ ಸಿಗುವ ಅಲೌಕಿಕ ಆನಂದ ಬೇರಾವ ಆನಂದಕ್ಕಿಂತಾ ಹೆಚ್ಚಿನದಿರುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರವನ್ನು ನಮಗೆ ನಾವೇ ಕಂಡುಕೊಳ್ಳಬಲ್ಲೆವು. ಪರಿಹಾರ ಎಂದರೆ ಮರೆಯಾಗುವುದಲ್ಲ, ಓಡಿಹೋಗುವುದಲ್ಲ, ಅಡಗಿಕೂರುವುದಲ್ಲ, ಆತ್ಮಹತ್ಯೆಮಾಡಿಕೊಳುವುದಲ್ಲ, ಯಾರಲ್ಲೋ ಬೇಡುವುದಲ್ಲ, ಯಾರನ್ನೋ ಕಾಡುವುದಲ್ಲ. ಅದು ಒಳಗಿನ ನನ್ನಿಂದ ಹೊರಗಿನ ನನಗಾಗಿ ನನ್ನೊಳಗೇ ಉದ್ಭವವಾಗುವ ಸ್ವಯಂಭೂ ಪರಿಹಾರ! ಆ ಪರಿಹಾರ ಸಿಕ್ಕರೆ ನಾವು ಯಾರನ್ನೂ ಎದುರಿಸಬಹುದು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಬಹುದು, ಉತ್ತಮ ಆರೋಗ್ಯವನ್ನು ಮರಳಿ ಗಳಿಸಬಹುದು, ಸಾಲಗಾರರನ್ನು ದಾರಿಯಲ್ಲೇ ನಿಲ್ಲಿಸಿ ಅವಧಿಯಲ್ಲಿ ಸಾಲ ಮರಳಿಸಬಹುದು, ಏರಲಾರದ ಬೆಟ್ಟವನ್ನು ಯಾವುದೋ ಮಾರ್ಗಬಳಸಿ ಏರಬಹುದು!

ಯಾಕಾಗಿ ನಿದಿಧ್ಯಾಸನ ಕ್ರಿಯೆ ಬೇಕು ?

ಧಾವಂತದ ಜೀವನ ಶೈಲಿಯಲ್ಲಿ ನಮಗೆ ನಮ್ಮೊಟ್ಟಿಗೆ ಕಳೆಯಲು ಮಾತ್ರ ಸಮಯವಿಲ್ಲ! ನಿಂತೇ ತಿಂಡಿ, ನಿಂತೇ ಊಟ ಎಲ್ಲವೂ ಫಾಸ್ಟ್ ಫಾಸ್ಟ್ ಫಾಸ್ಟ್. ಯಾವುದಕ್ಕೂ ಒಂದು ಶಿಷ್ಟಾಚಾರ ಎಂಬುದೇ ಇಲ್ಲ. ಕಂಡಲ್ಲಿ ನುಗ್ಗುವುದು ಬೇಕಾದ್ದು ಬೇಡದ್ದು ಎಲ್ಲವನ್ನೂ ಒಟ್ಟಾರೆ ಖರೀದಿಸುವುದು. ಬೇಕು ಬೇಕಾದ ಹಾಗೇ ಕ್ರೆಡಿಟ್ ಕಾರ್ಡ್ ಬಳಸುವುದು. ಪಕ್ಕದಮೆನೆಗಿಂತಾ ಕಮ್ಮಿ ಇಲ್ಲಾ ಎಂದು ತೋರಿಸಲು ಅವರ ಸ್ಯಾಂಟ್ರೋ ಕಾರಿಗಿಂತಲೂ ಉನ್ನತ ದರ್ಜೆಯ ಮಹಿಂದ್ರಾ ಸ್ಕಾರ್ಪಿಯೋ ಖರೀದಿಸುವುದು.... ಹೀಗೆಲ್ಲಾ. ಈ ಜಗತ್ತಿನಲ್ಲಿ ನಾನೂ ಏನೂ ಕಮ್ಮಿ ಇಲ್ಲಾ ಎಂಬ ಅಹಂ ನಮ್ಮನ್ನು ಬೇರೆ ಬೇರೇ ಕೆಲಸಗಳಿಗೆ ಹಚ್ಚುತ್ತದೆ.

ನಮ್ಮ ಅಹಮಿಕೆ ಎಷ್ಟು ವಿಸ್ತೃತವಾದುದು ಎಂದರೆ ದೇವಸ್ಥಾನಗಳಿಗೆ ಒಂದೊಮ್ಮೆ ಟ್ಯೂಬ್ ಲೈಟ್ ಅಥವಾ ಗೋಡೆಗಡಿಯಾರ ಕೊಟ್ಟರೆ ಅದರ ಮೈತುಂಬಾ ನಮ್ಮ ಹೆಸರು ಬರೆದು, ಅಲ್ಲಿ ಬಂದವರಿಗೆ/ನೋಡಿದವರಿಗೆ " ಓ ಇಂಥವರು ದಾನಶೂರರಪ್ಪಾ" ಎನಿಸಬೇಕು ಎಂಬುದು ನಮ್ಮ ಮನದ ಬಯಕೆ! ಬಡರೋಗಿಗೋ ಬಡವಿದ್ಯಾರ್ಥಿಗೋ ೧೦ ರೂಪಾಯಿಗಳನ್ನು ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರಬೇಕೆಂಬ ಆಸೆ! ಹಲವರ ದೇಣಿಗೆಯಿಂದ ನಡೆಸುವ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಪ್ರಧಾನವಾಗಿ ಘೋಷಿಸಲ್ಪಡಬೇಕೆಂಬ ಆಸೆ! ನಾಕು ಜನರಿಗೆ ಖಾಲೀ ಕಾಫಿ ಟೀ ಕೊಟ್ಟರೂ ’ಅತಿಥಿಸತ್ಕಾರ ದುರಂಧರ’ ಎಂಬ ಬಿರುದು ಪಡೆವಾಸೆ! ಮನೆಯ ಪಕ್ಕದಲ್ಲಿ ಕಾಣುವ ಹಸಿದ ನಾಯಿಗೆ/ಕಾಗೆಗೆ ತುತ್ತು ಕೂಳನ್ನೂ ಹಾಕದೇ ಯಾವುದೋ ಮೃಗಾಲಯದಲ್ಲಿ ೧೦೦೦ ರೂಪಾಯಿ ನೀಡಿ "ಇಂಥದ್ದನ್ನು ಶ್ರೀಯುತರು ದತ್ತುಪಡೆದರು" ಎಂದು ಹೆಸರು ಬರೆಸುವಾಸೆ! ಎಲ್ಲೋ ಹೊಡೆದ ದುಡ್ಡಿನಲ್ಲಿ ಯಾವುದೋ ಕೆಲವು ಬಡ ವಿದ್ಯಾರ್ಥಿಗಳಿಗೆ ಒಂದೆರಡು ಪಟ್ಟಿಪುಸ್ತಕಗಳನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಕಾರ್ಪೋರೇಟರ್ ಜಾಗಕ್ಕೆ ಸ್ಪರ್ಧಿಸುವಾಸೆ! ಈ ಎಲ್ಲಾ ಆಸೆಗಳ ಹಿಂದೆ ಕೆಲಸಮಾಡುವುದು ಒಂದೇ : ಅದು ’ಅಹಂ’ಕಾರ!

ನಟ ದಿ|ವಿಷ್ಣುವರ್ಧನ್ ಅವರು ಯಾರ್ಯಾರಿಗೋ ಕೈಲಾದ ಎಷ್ಟೆಷ್ಟೋ ದಾನಮಾಡಿದರು, ಆದರೆ ಅವರು ದಾನ ಕೊಟ್ಟಿದ್ದು ಸ್ವತಃ ಅವರಿಗೇ ನೆನಪುಳಿಯಲಿಲ್ಲ; ಮನೆಗಂತೂ ತಿಳಿಯಲೇ ಇಲ್ಲ! ದಾನವಿದ್ದರೆ ಹೀಗಿರಬೇಕೇ ವಿನಃ ಹೆಸರಿಗಾಗಿ ಮಾಡುವ ದಾನ ದಾನವೇ ಅಲ್ಲ; ಅಥವಾ ದಾನಕ್ಕೆ ದಕ್ಕಬಹುದಾದ ಪುಣ್ಯ, ಮೆರೆಯುವ ಅಹಂಕಾರದಿಂದ ನಶಿಸಿಹೋಗುತ್ತದೆ. ಇನ್ನು ಕಾರ್ಪೋರೇಟ್ ಕಲ್ಚರ್ ಒಂದಿದೆ: ಅವರು ದಾನ ಮಾಡಿದ್ದೇವೆ ಎಂದು ಹೆಸರು ಹಾಕಿಸುವುದರ ಜೊತೆಗೆ ಪತ್ರಿಕೆಗಳಲ್ಲಿ ತಾವು ಮಾಡಿದ ದಾನದ ಕಥೆಗಳನ್ನು ರಂಜನೀಯವಾಗಿ ಬರೆಯುತ್ತಾರೆ! ’ನಾವು ಇಂತಿಷ್ಟು ವರ್ಷ ಇಂಥಾ ಕಡೆಗಳಲ್ಲಿ ಇಂತಿಂಥವರಿಗೆ ಇಂತಿಂಥದ್ದನ್ನು ಕೊಡುತ್ತಿದ್ದೆವು’!! ಭಲಿಭಲಿರೇ ! ನೀವು ನಿಮ್ಮ ಸಂಸ್ಥೆಗೆ ಜಾಗ, ನೀರು, ರಸ್ತೆ, ವಿದ್ಯುತ್ತು ಮೊದಲಾದವುಗಳನ್ನು ಇದೇ ನೆಲದಿಂದ ಅಥವಾ ಈ ಪ್ರದೇಶದಿಂದ ಪಡೆದಿದ್ದೀರಿ-ಅದರಿಂದ ನಿಮ್ಮ ಸಂಸ್ಥೆಯ ಉತ್ಫನ್ನ ಬಹುಪಾಲು ಹೆಚ್ಚಿದಾಗ ಅದರಲ್ಲಿ ಅತ್ಯಲ್ಪ ಹಣವನ್ನು ಈ ತರಹದ ಕೆಲಸಕ್ಕೆ ವಿನಿಯೋಗಿಸಿದರೆ ಅದಕ್ಕೆ ಸಮಯ ಸಿಕ್ಕಾಗ ಹೇಳಿಕೊಳ್ಳಬೇಕೇನು?

ಮರಳಿ ಮೂಲ ವಿಷಯಕ್ಕೆ ಬರೋಣ. ಕ್ರೆಡಿಟ್ ಕಾರ್ಡುಗಳನ್ನು ವಿಪರೀತ ಉಪಯೋಗಿಸಿ ಉಪಯೋಗಿಸಿ ಧಾರಾಳವಾಗಿ ಸಾಲಮಾಡಿಕೊಳ್ಳುವ ಜನ ಇದ್ದಾರೆ. ಸಾಲದಲ್ಲೇ ಜಾಗ, ಸಾಲದಲ್ಲೇ ಭವ್ಯ ಬಂಗಲೆ, ಸಾಲದಲ್ಲೇ ಕಾರು, ಸಾಲದಲ್ಲೇ ಇಟಾಲಿಯನ್ ಕಿಚನ್ ಕ್ಯಾಬಿನೆಟ್ಟು ಇನ್ನೇನೇನೋ ಎಲ್ಲಾ ಸಾಲದಲ್ಲೇ! ಒಂದೊಮ್ಮೆ ಮಾಡುತ್ತಿರುವ ಕೆಲಸ ಕಳೆದುಕೊಂಡುಬಿಟ್ಟರೆ ಏನಾಗಬಹುದೆಂಬ ಪರಿವೆಯೇ ಇರುವುದಿಲ್ಲ.ಗಂಡ-ಹೆಂಡತಿ ಇಬ್ಬರೂ ದುಡಿದರೂ ದುಡಿಮೆಯ ಬಹುತೇಕ ಭಾಗ ಸಾಲಗಳ ಮರುಪಾವತಿಗೆ, ಮಿಕ್ಕಿದ್ದು ಸ್ವಲ್ಪ ಯಾವುದೋ ಇನ್ಶೂರನ್ಸ್ ಮತ್ತಿನ್ನವುದೋ ಖಾಸಗೀ ಖರ್ಚು ಇದಕ್ಕೆ ಹೋಗಿ ತಿಂಗಳ ಕೊನೆಗೆ ಮತ್ತೆ ಕೈ ಖಾಲಿ ಖಾಲಿ! ಮತ್ತೆ ಕ್ರೆಡಿಟ್ ಕಾರ್ಡಿನಲ್ಲೇ ಕಾರಿಗೆ ಪೆಟ್ರೋಲ್ ಹಾಕಿಸುವ ಪ್ರಸಂಗ! ಮಹಾನಗರಗಳಲ್ಲಿ ಅತೀ ದೊಡ್ಡ ವ್ಯಕ್ತಿಯೂ ಬದುಕುತ್ತಿದ್ದಾನೆ, ಅತೀ ಚಿಕ್ಕ ಜವಾನನ ಕೆಲಸದವನೂ ಬದುಕುತ್ತಿದ್ದಾನೆ. ದೇಣಿಗೆ ಎಂದು ಬಾಗಿಲಿಗೆ ಹೋದರೆ ಇರುವ ಅಲ್ಪ ಹಣದಲ್ಲೇ ಚಿಕ್ಕಾಸನ್ನಾದರೂ ಜವಾನನಂಥವನು ನೀಡುತ್ತಾನೆಯೇ ಹೊರತು ಉನ್ನತ ಹುದ್ದೆಗಳಲ್ಲಿ ಇರುವ ಜನ ಅದಕ್ಕೆ ಮನಸ್ಸು ಮಾಡಲಾರರು!

ಯಾರೋ ಒಬ್ಬ ಪುಣ್ಯಾತ್ಮ ನನಗೆ ಮಿಂಚಂಚೆ ಕಳಿಸಿದ್ದಾರೆ ಏನೆಂದರೆ ಆತನಿಗೆ ಸಂಗೀತ-ಸಾಹಿತ್ಯ-ಕಲೆ ಎಂದರೆ ಅಷ್ಟಕ್ಕಷ್ಟೇಯಂತೆ!

ಸಂಗೀತ ಸಾಹಿತ್ಯ ಕಲಾ ವಿಹೀನಾಂ |
ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ ||

ಈ ಬದುಕನ್ನು ನಿಭಾಯಿಸಿಲಿಕ್ಕೆ ಬರೇ ಹಣದ ಥೈಲಿ ಇದ್ದರಾಗುವುದಿಲ್ಲ. ನೋಡಿ ಎಂತೆಂಥಾ ಎಳೆಯ ವಯಸ್ಸಿನಲ್ಲಿ ಹೃದಯಸ್ತಂಭನವಾಗಿ ಸತ್ತುಹೋಗುತ್ತಾರೆ. ಇಂತಹ ಘಟನೆಗಳು ಜಾಸ್ತಿ ಆಗುತ್ತಿವೆ ಯಾಕೆ? ಯಾಕೆಂದರೆ ಧಾವಂತದ ಜೀವನದಲ್ಲಿ ಸಾಕಷ್ಟು ಗಳಿಸಲಿಲ್ಲವಲ್ಲಾ ಎಂಬ ಹತಾಶ ಮನೋಸ್ಥಿತಿ ಅವರನ್ನು ಸದಾ ಕಾಡುತ್ತಿರುತ್ತದೆ. ಅನುಗಾಲವೂ ಒತ್ತಡದಲ್ಲೇ ಬದುಕುವ ಅವರಿಗೆ ಸಂಗೀತ ಎಂದರೇನು, ಸಾಹಿತ್ಯ ಯಾಕೆ ಬೇಕು, ಕಲೆ ಹೇಗಿರುತ್ತದೆ ಎಂಬುದರ ಬಗ್ಗೆ ಗಮನವೂ ಇಲ್ಲ, ಆಸಕ್ತಿಯೂ ಇಲ್ಲ. ಹೃದಯದ ಒತ್ತಡ ಜಾಸ್ತಿಯಾಗಿ ನೋವು ಉಲ್ಬಣಿಸಿ, ವೈದ್ಯರಲ್ಲಿಗೆ ಹೋದಾಗ ಅವರು ಹೇಳುತ್ತಾರೆ-- ವಿಶ್ರಾಂತಿ ತೆಗೆದುಕೊಳ್ಳಿ, ಮಾನಸಿಕವಾಗಿ ನಿಮಗೆ ಹಿತವೆನಿಸುವ ಜಾಗದಲ್ಲಿ ನಿರುಮ್ಮಳವಾಗಿ ಒಂದಷ್ಟು ದಿನ ಇದ್ದುಬನ್ನಿ! ಸಂಗೀತ-ಸಾಹಿತ್ಯ-ಕಲೆ ಇವು ಮೂರು ನಮ್ಮ ಜೀವನದಲ್ಲಿ ಮನಸ್ಸಿನಮೇಲೂ ತನ್ಮೂಲಕ ಹೃದಯದಮೇಲೂ ಬೀಳುವ ಭಾರವನ್ನು ಒತ್ತಡವನ್ನು ಕಮ್ಮಿ ಮಾಡುತ್ತವೆ!

ಅದೇ ರೀತಿ ನಮ್ಮೊಳಗಿನ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ನಮಗೆ ಧ್ಯಾನ ಬೇಕು. ಶಾರೀರಿಕ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಮಾಡುವ ಧ್ಯಾನದಲ್ಲಿ ಮೂರನೇ ಹಂತವೇ ನಿದಿಧ್ಯಾಸನ ಕ್ರಿಯೆ! ಮೊದಲನೆಯದು ಶ್ರವಣ ಅಂದರೆ ಕೇಳುವುದು--ಯಾವುದನ್ನು? ಉತ್ತಮವಾದುದನ್ನು. ಎರಡನೆಯದು-ಮನನ ಅಂದರೆ ಕೇಳಿದ್ದನ್ನು ಬಹಳಹೊತ್ತು ಮನದಲ್ಲೇ ಪುನರಪಿ ಮೆಲುಕುಹಾಕುವುದು. ಮೂರನೆಯದು ನಿದಿಧ್ಯಾಸನ ಅಂದರೆ ನಮ್ಮೊಳಗಿನ ಆಳಕ್ಕೇ ನಾವು ಇಳಿಯುವುದು! ನಾವು ಹರನನ್ನು ಧ್ಯಾನಿಸಿದರೆ ಅಲ್ಲಿ ಹರಿಕಾಣದೇ ಇರಬಹುದು, ನಾವು ಹರಿಯನ್ನು ನೆನೆಪಿಸಿಕೊಂಡರೆ ಅಲ್ಲಿ ಗಣೇಶ ಸಿಗದೇ ಇರಬಹುದು, ಆದರೆ ಈ ಆಕಾರರೂಪೀ ಭಗವಂತನನ್ನು ಬಿಟ್ಟು ನಿರಾಕಾರ ರೂಪೀ ಭಗವಂತನಮೇಲೆ ಮನಸ್ಸುನೆಟ್ಟು ನಿರ್ವಿಷಯಧ್ಯಾನ ಮಾಡುವುದೇ ನಿದಿಧ್ಯಾಸನ ಕ್ರಿಯೆಯಾಗಿದೆ. ಅಲ್ಲಿ ಎಲ್ಲವೂ ನಿಶ್ಶಬ್ದ, ಶಾಂತ, ಪ್ರಶಾಂತ. ಅದು ಸದಾ ಶಾಂತ ಸರೋವರ. ಅಲ್ಲೊಬ್ಬ ಸೂರ್ಯ, ಅವನ ಪ್ರಕಾಶದಲ್ಲಿ ಆಸರೋವರದಲ್ಲಿ ಆತ್ಮವೆಂಬ ಹಂಸ ಈಜಾಡುತ್ತದೆ. ನಾನು ಯಾರು ಎಂಬುದಕ್ಕೆ ಅಲ್ಲಿ ಉತ್ತರ ಸಿಗುತ್ತದೆ! ಆ ನಾನು ನಿಜವಾದ ನಾನು, ಆ ನಾನುವಿಗೆ ಹೆಸರಿಲ್ಲ, ಬಣ್ಣವಿಲ್ಲ, ಶರೀರವಿಲ್ಲ, ರೂಪವಿಲ್ಲ, ಆಕಾರವಿಲ್ಲ! ಆ ನಾನುವನ್ನು ನೆನಪಿಸಿಕೊಳ್ಳಲು ಮುಂದಾದಲ್ಲಿ ಈ ’ನಾನು’ ಸಹಜವಾಗಿ ಕರಗತೊಡಗುತ್ತದೆ. ಈ ನಾನು ಸಂಪೂರ್ಣ ಕರಗಿ ಆ ನಾನು ಗೋಚರಿಸಿದಾಗ ನಾವು ಮೇರೆ ಮೀರಿದ ಆನಂದವನ್ನು ಪಡೆಯಲು ಸಾಧ್ಯ. ಅಲ್ಲಿ ಎಲ್ಲವೂ ಇದೆ. ಯಾವುದನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾಗುವುದಿಲ್ಲ.

ಆದರೆ ಇದು ಹೇಳಿದಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಅದಕ್ಕಾಗಿ ಮನಃಪರಿವರ್ತನೆಯಾಗಬೇಕಾಗುತ್ತದೆ. ಧ್ಯಾನಕ್ಕೆ ನಾವು ಒಗ್ಗಿಕೊಳ್ಳಬೇಕಾಗುತ್ತದೆ.

ಎರಡುಕೋಣೆಗಳ ನೀಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ

ತಿಮ್ಮಗುರುವಿನ ಪದ್ಯದ ಅರ್ಥದ ಆಳ ಎಲ್ಲಿದೆ ಎಂಬುದನ್ನು ತಾವು ಇಲ್ಲಿ ಸ್ವಲ್ಪ ತಿಳಿಯಬಹುದಾಗಿದೆ! ಮನಸ್ಸನ್ನು ಎರಡು ಕಂಪಾರ್ಟ್‍ಮೆಂಟ್ ರೀತಿ ಮಾಡಿಕೊಂಡು ಒಂದನ್ನು ಎಲ್ಲರೊಡನೆ ಪ್ರಾಪಂಚಿಕ ವ್ಯವಹಾರದಲ್ಲಿ ತೊಡಗಿಕೊಳ್ಳಲು ಬಳಸು ಎಂದಿದ್ದಾರೆ ಡೀವೀಜಿ. ಹೀಗೆ ನಾವು ಧ್ಯಾನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದರಿಂದ ನಾಳೆ ಏನು ಎಂಬ ಭೀತಿ ನಮ್ಮಿಂದ ದೂರ ಸರಿಯುತ್ತದೆ. ನಮ್ಮ ಆತ್ಮಕ್ಕೆ ಪುನಶ್ಚೇತನವುಂಟಾಗಿ ನ್ಯಾಯಮಾರ್ಗದಲ್ಲಿ ಕಾರ್ಯತತ್ಪರವಾಗಲು ಅದು ಸಹಕಾರಿಯಾಗುತ್ತದೆ. ’ಬೇಕು’ ಎಂಬ ಅತಿರೇಕದ ಬಯಕೆಗಳಿಗೆ ಕಡಿವಾಣ ಬಿದ್ದಾಗ ಆಯ-ವ್ಯಯದ [ಬ್ಯಾಲೆನ್ಸ್ ಶೀಟ್]ಅಢಾವೆ ಪತ್ರಿಕೆ ಸರಿಯಾಗಿ ಅನುಸರಿಸಲ್ಪಡುತ್ತದೆ. ಎಂತಹುದೇ ಪ್ರಸಂಗ ಬಂದರೂ ಮನಸ್ಸು ಅದನ್ನು ನಿಭಾಯಿಸುವ ತಾಕತ್ತನ್ನು ಪಡೆದುಕೊಳ್ಳುತ್ತದೆ.

ಅಧಿಕ ಅಥವಾ ಕಮ್ಮಿ ರಕ್ತದೊತ್ತಡ, ಹೃದಯಸ್ತಂಭನ, ಮಧುಮೇಹ, ಅಲ್ಸರ್ ಮುಂತಾದ ಶಾರೀರಿಕ ಅಸೌಖ್ಯ ಸ್ಥಿತಿ ನಮ್ಮಿಂದ ದೂರವಿರಬೇಕೆಂದರೆ ನಾವು ಯೋಗ ಮತ್ತು ಧ್ಯಾನ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು. ಜನಸಾಮಾನ್ಯರೊಡನೆ ಬೆರೆಯಬೇಕು. ನೀರೊಳಗಿದ್ದರೂ ಕೆಸವೆಯ/ತಾವರೆಯ ಎಲೆ ಒದ್ದೆಯಾಗದಿರುವಂತೆಯೇ ಸಂಸಾರದ ಲೌಕಿಕ ನೀರೊಳಗಿದ್ದರೂ ಜಂಜಾಟದ ಒದ್ದೆಯಿಂದ ಮುಕ್ತರಾಗಬಹುದಾಗಿದೆ. ಯಾವಾಗ ಅ-ದ್ವೈತ ಎಂಬುದನ್ನು ಕಾಣಲು ನಮ್ಮಿಂದ ಆಗುತ್ತದೋ ಅಂದೇ ನಮಗೆ ನಿರಾಕಾರ ಪರಮಾತ್ಮನ ಅರಿವು ಗೋಚರವಾಗುತ್ತದೆ. ಆ ದಿಸೆಯಲ್ಲಿ ಹೆಜ್ಜೆಯಿಡುತ್ತಾ ಮುಂದಕ್ಕೆ ಮುಂದಕ್ಕೆ ಸಾಗೋಣ ಎಂಬುದು ನನ್ನ ಸಲಹೆಯಾಗಿದೆ.

Monday, March 26, 2012

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ ...


ಚಿತ್ರಋಣ: ಅಂತರ್ಜಾಲ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ ...

ಆಧುನಿಕತೆಯೆಂಬ ಕೆಟ್ಟಸುಂಟರಗಾಳಿಗೆ ಬಲಿಯಾದ ಭಾರತೀಯ ಮೂಲದ ಸಂಸ್ಕೃತಿಯಲ್ಲಿ, ಮನೆಯಲ್ಲಿ ಸಾಯಂಕಾಲ ಹೇಳಿಕೊಡುತ್ತಿದ್ದ ಸಂಧ್ಯಾಸ್ಮರಣೆಗಳೂ ಬಾಯಿಪಾಠವೂ ಸೇರಿವೆ. ಒಂದಾನೊಂದು ಕಾಲದಲ್ಲಿ ನಮ್ಮ ಪೂರ್ವಜರು ತಮ್ಮ ಮುಂದಿನ ಪೀಳಿಗೆ ಉತ್ತಮವಾದುದೆಲ್ಲವನ್ನೂ ಕಲಿತು ಒಳಿತನ್ನು ಸಾಧಿಸಲಿ ಎಂಬ ಸದಾಶಯದಿಂದ ಒಳ್ಳೊಳ್ಳೆಯ ಕಥಾನಕಗಳನ್ನೂ ಪ್ರಾತಃಕಾಲದಲ್ಲಿ, ಸಾಯಾಂಕಾಲದಲ್ಲಿ ಹೇಳಿ ನೆನಪಿಸಿಕೊಳ್ಳಬೇಕಾದ ಆದರ್ಶ ಸ್ತ್ರೀ/ಪುರುಷರ ಸ್ಮರಣೆಗಳು ಅಡಕವಾಗಿರುವ ಶ್ಲೋಕಗಳನ್ನೂ ಎಳೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಅದರ ಫಲವಾಗಿಯೇ ನಮಗೂ ನಮ್ಮ ಹಿಂದಿನ ತಲೆಮಾರುಗಳಿಗೂ ಭಾರತೀಯ ಸಂಸ್ಕೃತಿಯ ಪರಿಚಯ ಸಮರ್ಪಕವಾಗಿ ಆಗುತ್ತಿತ್ತು.

ಎಡಪಂಥೀಯರು ಎಂಬ ’ಸಮಾಜ ಸುಧಾರಕರು’ ಬೆಳೆದು ಅವರುಗಳ ರೆಕ್ಕೆ ಬಲಿತು ಕೆಟ್ಟದ್ದನ್ನೇ ಒಳ್ಳೆಯದೆಂದು ಬೋಧಿಸುವ ಮತ್ತು ಅಂತಹ ಬೋಧನೆಯ ಮೂಲಕ ತಮ್ಮ ಬೇಳೇ ಬೇಯಿಸಿಕೊಳ್ಳುವ ಕೆಲಸ ಆರಂಭವಾದಮೇಲೆ, ಯಾರಾದರೂ ಕೆಲವರು ಉತ್ತಮವಾದುದನ್ನು ಹೇಳಿದರೆ ಸಾಕು ಅವರಿಗೆ ಪುರೋಹಿತಶಾಹಿ ಎಂದೋ ಆರ್.ಎಸ್.ಎಸ್. ಎಂದೋ ಹಣೆಪಟ್ಟಿ ಹಚ್ಚುವವರು ತಯಾರಾಗಿರುವುದೂ ಮತ್ತು ಇಂದಿನ ಸಮಾಜದಲ್ಲಿ ಬಹುತೇಕ ಆ ಜನ ತಮ್ಮ ಮಾತೇ ನಡೆಯಬೇಕು ಎಂಬ ವಿಕೃತ ಧೋರಣೆ ತಳೆದಿರುವುದೂ ಸಮಾಜ ಅಧೋಗತಿಗೆ ಇಳಿಯಲು ಕಾರಣವಾಗಿದೆ. ತಪ್ಪನ್ನು ತಪ್ಪು ಎನ್ನುವಹಾಗಿಲ್ಲ, ಕುಡುಕನಿಗೆ ಕುಡಿಯುವುದು ಒಳ್ಳೆಯದಲ್ಲಾ ಎಂದು ತಿಳಿಹೇಳುವ ಹಾಗಿಲ್ಲ, ಎಲ್ಲೆಲ್ಲೂ ’ಬುದ್ಧಿಜೀವಿಗಳ’ ಸಂಘ ಕೆಲಸಕ್ಕೆ ಬಾರದ ಹಾವಿನಬುಟ್ಟಿಯ ಚೀಲ ಹೆಗಲಿಗೇರಿಸಿಕೊಂಡು ಓಡಾಡುತ್ತಿರುತ್ತದೆ! ಮಹಾತ್ಮರ ಬಗ್ಗೆ, ಸಾಧಕರ ಬಗ್ಗೆ, ರಾಷ್ಟ್ರಭಕ್ತರ ಬಗ್ಗೆ ಪಠ್ಯಗಳಲ್ಲಿ ಒತ್ತಾಯಪೂರ್ವಕ ಇಲ್ಲದ್ದನ್ನೇ ಬರೆಯಲಾಗುತ್ತಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂತಿಂಥವರು ಭಾಗವಹಿಸಿ ತಮ್ಮ ಪ್ರಾಣಾರ್ಪಣೆಗೈದರು ಎಂದರೆ ಸಾಕು ಮತ್ತೆ ಅಲ್ಲಿ ಆರ್.ಎಸ್.ಎಸ್ ಎಂದು ಸಂಬೋಧಿಸುತ್ತಾರೆ. ಈ ದೇಶದ ಮೂಲನಿವಾಸಿಗಳೆಲ್ಲಾ ಒಂದು ಕಾಲಕ್ಕೆ ಹಿಂದೂಗಳೇ ಆಗಿದ್ದರು. ಪರಕೀಯ ಮತಾಂಧರ ದಾಳಿಯ ಪರಿಣಾಮವಾಗಿ ಬಲವಂತವಾಗಿ ಮತಾಂತರಗೊಂಡ ಅನೇಕ ಹಿಂದೂಗಳೇ ನಮ್ಮ ನೆಲದಲ್ಲಿ ಅಲ್ಪಸಂಖ್ಯಾತರೆಂದು ಘೋಷಿಸಿಕೊಂಡರು. ಬರುಬರುತ್ತಾ ಅಲ್ಪ ಹೋಗಿಬಿಟ್ಟಿದೆ. ಈಗ ಯಾರೂ ಅಲ್ಪಸಂಖ್ಯಾತರಿಲ್ಲ. ಆದರೂ ತಾವು ಅಲ್ಪಸಂಖ್ಯಾತರು ತಾವು ಹೇಳಿದ್ದನ್ನೇ ನೀವು ಕೇಳಿ ಎಂದು ವಾದಿಸುವ ಜನಾಂಗಗಳೂ ಇವೆ! ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಈ ದೇಶದ ಮೂಲನಿವಾಸಿಗಳ ಸಂಸ್ಕೃತಿ ಕಾರಣವಾಗಿತ್ತೆಂಬುದು ಇತಿಹಾಸ ಮತ್ತು ಪುರಾಣಗಳಿಂದ ತಿಳಿದುಬರುತ್ತದೆ. ಪುರಾಣಗಳೆಂದರೆ ಅವುಗಳೂ ಇತಿಹಾಸಗಳೇ ಆಗಿವೆ! ರಾಮ ಹುಟ್ಟಿದ ನೆಲದಲ್ಲಿ ರಾಮನನ್ನೇ ಅಲ್ಲಗಳೆಯುವ ಸಂಸ್ಕೃತಿಗಳು ವಿಜೃಂಭಿಸುವುದು ಯಾವ ಸುಧಾರಣೆಯ ದ್ಯೋತಕ ಹೇಳಿ? ಹಿಂದೂಗಳ ನೆಲದಲ್ಲೇ ಹಿಂದೂಗಳಿಗಿಂತ ತಮಗೇ ಮಹತ್ತರ ಸ್ಥಾನಕೊಡಿ ಎಂದು ಕೇಳುವುದು ಯಾವ ನ್ಯಾಯ ಸ್ವಾಮಿ ?

ಅಷ್ಟಕ್ಕೂ ಸನಾತನ ಧರ್ಮ ಉತ್ಕೃಷ್ಟ ಮಾನವೀಯ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದಂಥದ್ದು; ಅದು ಹಿಂದೂ ಇಂದೂ ಮುಂದೂ ಎಂದೆಂದೂ! ಖ್ಯಾತ ಹೃದಯತಜ್ಞೆಯೂ ಉತ್ತಮ ಬರಹಗಾರ್ತಿಯೂ ಆದ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಪಾಶ್ಚಾತ್ಯ ದೇಶಗಳಿಗೆ ತೆರಳುವಾಗ ತಮಗಾದ ಅನುಭವಗಳನ್ನು ದಿನಪತ್ರಿಕೆಯೊಂದರಲ್ಲಿ ಹಂಚಿಕೊಂಡಿದ್ದಾರೆ. ವಿದೇಶೀಯರು ಇಲ್ಲಿನ ಯೋಗ, ಆಯುರ್ವೇದ, ವ್ಯಾಯಾಮ, ಧ್ಯಾನ ಇವುಗಳತ್ತ ಎಷ್ಟು ಆಕರ್ಷಿತರಾಗಿದ್ದಾರೆ ಎಂಬುದು ಅವರ ಇತ್ತೀಚಿನ ಒಂದು ಲೇಖನದಿಂದ ತಿಳಿಯಿತು. ವಿದೇಶದ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿ, ವಿದೇಶೀಯಳೊಬ್ಬಳ ವಿನಂತಿಯ ಮೇರೆಗೆ ಆಕೆಯ ಶ್ರದ್ಧೆಯನ್ನರಿತು, ಸಿಕ್ಕ ತುಸು ವಿರಾಮಕಾಲದಲ್ಲೇ ಸೂರ್ಯನಮಸ್ಕಾರಗಳನ್ನು ಕಲಿಸಿದ ಬಗ್ಗೆ ಅವರು ಬರೆದಿದ್ದರು. ಅದೇ ರೀತಿ ಮೊನ್ನೆ ಓರ್ವ ವಿದೇಶೀ ಮಹಿಳೆ ಅದ್ಬುದರೋಗದಿಂದ ಬೆಂಗಳೂರಿನಲ್ಲೇ ಮರಣಿಸಿದಳು-ಆಕೆಯ ಬಯಕೆ ಹಿಂದೂ ಪದ್ಧತಿಯಂತೇ ತನ್ನ ಅಂತ್ಯೇಷ್ಟಿಗಳು ನಡೆಯಬೇಕು ಎಂಬುದಾಗಿತ್ತು! ಸಾವಿನ ಬಾಗಿಲಲ್ಲಿರುವಾಗಲೂ ಆಕೆ ಭಾರತದ ಅನೇಕ ದೇವಸ್ಥಾನಗಳಿಗೆ ಭೇರ್‍ಟಿ ನೀಡಿದಳು. ಸತ್ತನಂತರ ಆಕೆಯ ಪತಿ ಆಕೆಯೆ ಇಚ್ಛೆಯಂತೇ ಅಂತ್ಯಸಂಸ್ಕಾರವನ್ನು ನಡೆಸಿದ್ದನ್ನು ಮಾಧ್ಯಮವಾಹಿನಿಯೊಂದು ಬಿತ್ತರಿಸಿತು.

ಈ ದಿನಗಳಲ್ಲಿ ನಡೆಯುವ ಯಾವ ಕ್ರೌರ್ಯದ/ಕಳ್ಳತನದ/ಕೊಲೆಸುಲಿಗೆಯ ಘಟನೆಯ ದಾಖಲೆಗಳನ್ನು ತೆಗೆದು ನೋಡಿದಲ್ಲಿ ವಿದೇಶೀಧರ್ಮಗಳವರೇ ಇರುತ್ತಾರಲ್ಲ, ಅದರಲ್ಲೂ ಒಂದೇ ಧರ್ಮಕ್ಕೆ ಸಂಬಂಧಿಸಿದ ಜನ ಜಾಸ್ತಿ ಕಾಣಿಸುತ್ತಿರುವುದರ ಹಿನ್ನೆಲೆಯ ಕುರಿತು ನಾವು ಕೆಲವರು ಚಿಂತನ-ಮಂಥನ ನಡೆಸುತ್ತಿದ್ದೆವು. ಅಲ್ಲಿ ನಮಗೆ ಕಾಣಸಿಕ್ಕ ಪ್ರಬಲ ಕಾರಣ ತಿನ್ನುವ ಅತ್ಯಂತ ತಾಮಸಾಹಾರ ಮತ್ತು ವಿಕಾರಗಳೇ ಸಂಸ್ಕಾರಗಳೆಂದು ಅರಿತು ನಡೆಯುವ ಕ್ರಮ! ಅಂತಹ ಜನರನ್ನು ಗುರುತಿಸಿ ನೀವು ಉತ್ತಮ ಸಂಸ್ಕಾರ ಪಡೆಯಿರಿ, ಉತ್ತಮ ಬಾಳ್ವೆ ನಡೆಸಿ, ಮನುಷ್ಯರಾಗಿ ಎಂದರೆ ಮತ್ತೆ ’ಸಮಾಜ ಸುಧಾರಕರು’ ನಮಗೆ ಕಲ್ಲು ಹೊಡೆಯಲು ಬರುತ್ತಾರೆ; ನಮ್ಮ ವಿರುದ್ಧ ಅವರನ್ನು ಸೇರಿಸಿಕೊಂಡು ಹಾದಿಬೀದಿಯಲ್ಲಿ ಕೂತು ’ಸತ್ಯಾಗ್ರಹ’ ಎನ್ನುತ್ತಾರೆ!

ಇಂದಿನ ಯುವ ಜನಾಂಗ ಸಂಸ್ಕಾರ ರಹಿತವಾಗುತ್ತಿದೆ. ಯಾರಿಗೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿಯಿಲ್ಲ. ಆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವೂ ಇಲ್ಲ. ಬದಲಾಗಿ ತಮಗೆ ಏನೋ ಸ್ವಲ್ಪ ತಪ್ಪಾಗಿ ತಿಳಿದದ್ದನ್ನೇ ಸರಿಯೆಂದು ವಾದಿಸುತ್ತಾ ಎಲ್ಲರಿಗೂ ಅದನ್ನೇ ಮನದಟ್ಟುಮಾಡಿಸುವ ’ಸಮಾಜ ಸುಧಾರಕ’ ಕೆಲಸ ಮನೆಹಾಳರ ಕೆಲಸವಲ್ಲದೇ ಮತ್ತೇನೂ ಅಲ್ಲ. ನವಜೀವನವೆಂಬ ಸೋಗಿನ ವ್ಯವಹಾರದಲ್ಲಿ ಪ್ರೈವೇಸಿಯ ಅವಶ್ಯಕತೆ ಎನ್ನುತ್ತಾ ಮನೆಯ ಹಿರಿಯರನ್ನೂ ಒಡಹುಟ್ಟಿದವರನ್ನೂ ಬೇರೆ ಬೇರೆಯಾಗಿಸಿ ಪ್ರತ್ಯೇಕವಾಗಿ ಯಾ ವಿಭಕ್ತವಾಗಿ ಜೀವಿಸಲು ಆರಂಭಿಸಿದ ಕುಟುಂಬಗಳಲ್ಲಿ ಭಾರತೀಯ ಮೂಲದ ಸಂಸ್ಕಾರಕ್ಕೆ ಅದ್ಯತೆಯೂ ಇಲ್ಲ; ಅದನ್ನು ತಿಳಿಸುವ ಹಿರಿಯರೂ ಇರುವುದಿಲ್ಲ.

ನಮ್ಮ ಬಾಲ್ಯದಲ್ಲಿ ನಾವೆಲ್ಲಾ ಪುಣ್ಯವಂತರಾಗಿದ್ದೆವು: ನಮಗೆ ನಮ್ಮ ಹಿರಿಯರೆಲ್ಲರೊಟ್ಟಿಗೆ ಜೀವಿಸುವ ಅವಕಾಶ ದೊರೆತಿತ್ತು. ಅವರು ಹೇಳಿಕೊಡುವ ಉತ್ತಮ ಅಂಶಗಳು ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತಿದ್ದವು. ಹಸೀಗೋಡೆಗೆ ಹರಳಿಟ್ಟಹಾಗೇ ಎಳೆಯ ಮಕ್ಕಳ ಮನಸ್ಸೆಂಬುದೊಂದು ಹಸೀ ಹಸೀ ಗೋಡೆ! ಅದಕ್ಕೆ ಉತ್ತಮವಾದ ಬಣ್ಣ ಬಣ್ಣದ ಹರಳುಗಳನ್ನು ಆಗಲೇ ಜೋಡಿಸಬೇಕು. ಗೋಡೆ ಒಣಗಿದಮೇಲೆ ಹರಳು ಅಂಟಿಕೊಳ್ಳುವುದಿಲ್ಲ. ಅದೇ ಕಾರಣಕ್ಕೇ ನಮಗೆ ನಮ್ಮ ಹಿರಿಯರು ಹಲವು ಆದರ್ಶಗಳನ್ನು ತಿಳಿಸಿಕೊಟ್ಟು ಉಪಕಾರ ಮಾಡಿದರು.

ನಮ್ಮಷ್ಟಕ್ಕೆ ನಾವಿದ್ದರೂ ಪರಕೀಯ ಜನಾಂಗಗಳು ನಮ್ಮ ಜೀವನಧರ್ಮದಮೇಲೆ, ದೇವಸ್ಥಾನ-ಪೂಜಾಮಂದಿರಗಳ ಮೇಲೆ ದಾಳಿಮಾಡಿದ್ದರಿಂದಾಗಿ ಇಂದು ರಾಮಂದಿರ-ಬಾಬರೀ ಮಸೀದಿಗಳಂಥಾ ಹಲವು ಜಾಗಗಳು ಕಾಣಸಿಗುತ್ತವೆ. ಹಿಂದೂ ಸನಾತನಿಗಳು ಇನ್ನೊಂದು ಧರ್ಮದವರನ್ನು ಒತ್ತಾಯಪೂರ್ವಕವಾಗಿಯೋ ಮನಃಪರಿವರ್ತಿಸಿಯೋ ನಮ್ಮ ಧರ್ಮಕ್ಕೆ ಮತಾಂತರಮಾಡಲಿಲ್ಲ. ಎಲ್ಲರಿಗೂ ತಂತಮ್ಮ ಧರ್ಮದಲ್ಲೇ ಸ್ವತಂತ್ರವಾಗಿ ಒಳಿತನ್ನು ಕಾಣಲು ತಿಳಿಸಿದರೂ ಇಂದು ಹಿಂದೂ ಎಂದರೇ ಆರ್.ಎಸ್.ಎಸ್. ಎಂದು ಬೆರಳು ತೋರಿಸುವ ’ಸಮಾಜಸುಧಾರಕ’ರ ಸೋಗಿನ ಸಂಘಗಳು ಇರಬೇಕಾದರೂ ಯಾಕೆ? ಕಾಡಿನ ಆನೆ ನಾಡಿಗೇಕೆ ಬಂತು? -ಎಂಬುದರ ಕುರಿತು ಅವಲೋಕಿಸಿದಾಗ ಆನೆಗಳ ವಸಾಹತುಗಳನ್ನು ಮನುಷ್ಯ ತನ್ನದಾಗಿ ಮಾಡಿಕೊಳ್ಳತೊಡಗಿದ್ದರಿಂದ ಅವುಗಳ ಜೀವನಧರ್ಮಕ್ಕೆ ಕುತ್ತುಬಂದಿದೆ. ಕಾಡುಗಳಲ್ಲಿ ಆಹಾರ ನಾಶವಾದಾಗ ಹಸಿದ ಹೊಟ್ಟೆ ಹೊತ್ತು ನಾಡಿಗೆ ಆಹಾರ ಹುಡುಕುತ್ತ ಬಂದವು ಆನೆಗಳು! ಅದರಂತೇ ಹಿಂದೂ ಸನಾತನ ಧರ್ಮದ ನೆಲೆಗಟ್ಟಿನ ಪ್ರದೇಶವಾದ ಭಾರತದಲ್ಲಿ ಇಂದು ಹಿಂದೂ ಎಂಬ ಪದಪ್ರಯೋಗವನ್ನು ಮಾಡಲೂ ನಮಗೆ ಹಕ್ಕಿಲ್ಲದಂತಾಗುತ್ತಿರುವುದು ವಿಪರ್ಯಾಸವಲ್ಲದೇ ಮತ್ತೇನು ? ನೇರವಾಗಿ ಹೇಳಿಬಿಡುವುದಾದರೆ ಆರ್.ಎಸ್.ಎಸ್. ಇರದಿದ್ದರೆ ಭಾರತದಲ್ಲಿ ಹಿಂದೂ ಸನಾತನ ಧರ್ಮ ಅಳಿಸಿಹೋಗುವ ಪ್ರಮೇಯವಿತ್ತು. ನಿಜವಾದ ದೇಶಭಕ್ತ ಜನ ತಮ್ಮದೇ ಆದ ರೀತಿಯಲ್ಲಿ ಸನಾತನ ಧರ್ಮದ ಉಳಿವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಟ್ಟಿದರು. ಅಂತಹ ದಿವ್ಯಚೇತನಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತಿದ್ದೇನೆ.

ಕನ್ನಡ ಭಾಷೆಯ ಬಳಕೆಯ ಬಗ್ಗೆ ಕೆಲವರು ಮಾತನಾಡುತ್ತಾರೆ. ಹಾಗೆ ಮಾತನಾಡುವ ಬಹುತೇಕರಿಗೆ ಇಂದು ಕನ್ನಡದ ವ್ಯಾಕರಣ, ಛಂದಸ್ಸು, ಸಂಧಿ-ಸಮಾಸ ಇವುಗಳ ಬಗ್ಗೆ ಏನೇನೂ ಗೊತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಮೋಸಕ್ಕೂ ಸಮಾಸಕ್ಕೂ ವ್ಯತ್ಯಾಸ ಗುರುತಿಸಲಾಗದವರು ಕಾವ್ಯ ಬರೆಯುತ್ತೇವೆ ಎನ್ನುತ್ತಾರೆ. ಎರಡಕ್ಷರ ಆಂಗ್ಲದಲ್ಲಿ ಕಂಡರೆ ಅದು ತಪ್ಪು ಎನ್ನುವ ಆ ಜನರಿಗೆ ಕನ್ನಡ ಸಾಹಿತ್ಯಕ ಭಾಷೆ ಎಷ್ಟರಮಟ್ಟಿಗೆ ಗೊತ್ತು ಎಂಬುದನ್ನು ಅವರೇ ಅರಿಯಬೇಕಾಗಿದೆ! ಬರೆದಿದ್ದೆಲ್ಲಾ ಕನ್ನಡವಾಗುವುದಿಲ್ಲವಲ್ಲ? ನವ್ಯ ಮತ್ತು ನವೋದಯ ಬಂದಮೇಲೆ ಕನ್ನಡ ಭಾಷೆ ಅಲ್ಲಲ್ಲಿ ದಡವಿಲ್ಲದ ನದಿಯಂತೇ ಕಂಡಲ್ಲಿ ಹರಿಯುತ್ತಿದೆ! ನದೀಪಾತ್ರಯಾವುದು ಬೇರೇ ಜಾಗಯಾವುದು ತಿಳಿಯದೇ ನದೀಪಾತ್ರವೇ ಮರೆಯಾಗಿ ಅಲೆಮಾರಿ ನದಿಯಾಗುವ ಸಂಭವನೀಯತೆ ಗಮನಿಸಿದ ಕೆಲವು ಗಣ್ಯರು ಇಂದಿಗೂ ಸಾಹಿತ್ಯಕ ಚೌಕಟ್ಟಿನಲ್ಲಿ ಭಾಷಾ ಪ್ರಯೋಗವನ್ನು ಮಾಡಲು ಬಯಸುತ್ತಿದ್ದಾರೆ. ಕಾಗುಣಿತ ದೋಷಗಳು ವಿಪರೀತವಾಗಿ, ’ಅ’ಕಾರ ಮತ್ತು ’ಹ’ಕಾರಗಳ ಸ್ಥಾನಬದಲಾವಣೆಯಾಗಿ, ಪರಭಾಷೆಗಳ ಪದಗಳೂ ಕನ್ನಡದಲ್ಲಿ ಸೇರಿಕೊಂಡು ಅಪ್ಪಟ ಕನ್ನಡ ಯಾವುದು ಎಂಬುದನ್ನು ಹುಡುಕಿಕೊಳ್ಳಬೇಕಾದ ಪ್ರಮೇಯವಿದೆ. ಸಂಸ್ಕೃತ ಪದಗಳಿಗೆ ಮಾತ್ರ ಕನ್ನಡದಲ್ಲಿ ಪರಕಾಯ ಪ್ರವೇಶಮಾಡುವ ಅಧಿಕಾರವಿದೆ ಯಾಕೆಂದರೆ ಸಂಸ್ಕೃತ ಕನ್ನಡಕ್ಕೆ ಮಾತೃಭಾಷೆ! ಪುರೋಹಿತಶಾಹಿ ಎಂಬ ಹೆಸರನ್ನು ಉಚ್ಚರಿಸುವ ಕೆಲವರಿಗೆ ಸಂಸ್ಕೃತ ಸತ್ತಭಷೆಯಾಗಿ ಕಾಣುತ್ತದೆ; ಕನಸಿನಲ್ಲೂ ಅರಗಿಸಿಕೊಳ್ಳಲಾಗದ್ದಕ್ಕೆ ಕಾಡುತ್ತದೆ! ಅರ್ಥಹೀನ ವಿತಂಡವಾದಿಗಳಿಗೆ ಉತ್ತರಿಸಿ ಅನಾವಶ್ಯಕ ಕಾಲಹರಣ ಮಾಡುವ ಬದಲು ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದ್ದೇನೆ. ಹೀಗಾಗಿ ಕೆಲವು ಕಡೆ ನನ್ನ ಬರಹಗಳ ಜಾಡುಹಿಡಿದು ಬರಲು ಕೊಡುವ ಸಂಪರ್ಕಕೊಂಡಿಯನ್ನೇ ನಾನು ನಿಲ್ಲಿಸಿದ್ದೇನೆ.

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಕಾರಣದಿಂದ, ನಮ್ಮಲ್ಲಿ ಹಿಂದಕ್ಕೆ ರಾಮಾಯಣ ಮಹಭಾರತಗಳನ್ನು ನಿತ್ಯವೂ ಭಾರತೀಯರು ನೆನೆಯುತ್ತಿದ್ದರು. ವಿಸ್ತೃತವಾದ ರಾಮಾಯಣವನ್ನೂ ಭಾರತವನ್ನೂ ಅತಿಸಂಕ್ಷಿಪ್ತವಾಗಿ ಶ್ಲೋಕಗಳ ರೂಪದಲ್ಲಿ ಹೇಳುತ್ತಿದ್ದರು:

ಪೂರ್ವೌ ರಾಮ ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ |
ವೈದೇಹೀ ಹರಣಂ ಜಠಾಯು ಮರಣಂ
ಸುಗ್ರೀವ ಸಂಭಾಷಣಂ |
ವಾಲೀನಿಗ್ರಹಣಂ ಸಮುದ್ರ ತರಣಂ
ಲಂಕಾಪುರೀ ದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಹನನಂ
ಏತದ್ದಿ ರಾಮಾಯಣಂ ||


ಆದೌ ದೇವಕಿದೇವಿ ಗರ್ಭ ಜನನಂ
ಗೋಪೀಗೃಹೇ ವರ್ಧನಂ |
ಮಾಯಾಪೂತನಿ ಜೀವಿತಾಪಹರಣಂ
ಗೋವರ್ಧನೋದ್ಧಾರಣಂ|
ಕಂಸಃ ಛೇದನ ಕೌರವಾದಿ ಹನನಂ
ಕುಂತೀಸುತಃ ಪಾಲನಂ |
ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ
ಶ್ರೀಕೃಷ್ಣ ಲೀಲಾಮೃತಂ ||


ಇಂತಹ ದಿವ್ಯ ಮಂಗಳ ಶ್ಲೋಕಗಳು ಇಂದು ಯಾರ ಬಾಯಲ್ಲೂ ಕೇಳಬರುವುದಿಲ್ಲ. ಎಲ್ಲೆಲ್ಲೂ ವ್ಹಾಯ್ ದಿಸ್ ಕೊಲವೆರಿಯಂತಹ ಮಹಾಮಾರಿಯೇ ಹಬ್ಬಿದೆಯೇ ಬಿಟ್ಟರೆ ಉತ್ತಮವಾದುದು ಯಾರಿಗೆ ಬೇಕಾಗಿದೆ? ನಮಲ್ಲಿ ಊಟವಾದ ನಂತರ ಹಳ್ಳಿಗಳಲ್ಲಿ ಜನ ಜೀರ್ಣಕ್ರಿಯೆಗಾಗಿ ನಡೆದಾಡುವ ಪರಿಪಾಟವಿತ್ತು.

ಉಂಡುನೂರಡಿ ಎಣಿಸಿ ಕೆಂಡಕ್ಕೆ ಕೈಕಾಸಿ
ಗಂಡುಮೇಲಾಗಿ ಮಲಗಿದರೆ | ವೈದ್ಯನ
ಗಂಡಕಾಣಯ್ಯ-ಸರ್ವಜ್ಞ

ಊಟಮಾಡಿ ಕನಿಷ್ಠ ನೂರು ಹೆಜ್ಜೆಗಳನ್ನಾದರೂ ನಡೆದು, ಕೈಯ್ಯನ್ನು ತುಸು ಬಿಸಿಯಾಗಿಸಿ ಆರ್ದ್ರತೆಯನ್ನು ಆರಿಸಿಕೊಂಡು, ಅಂಗಾತ ಮಲಗಿದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತ ವೈದ್ಯನನ್ನು ತತ್ಸಂಬಂಧೀ ಅಜೀರ್ಣಕಾಯಿಲೆಗೆ ಸಂಪರ್ಕಿಸುವ ಪ್ರಮೇಯ ಬರುವುದಿಲ್ಲ ಎಂಬುದು ಸರ್ವಜ್ಞನ ಹಿತವಚನ. ಹಾಗೆ ಊಟಮಾಡಿ ನಡೆದಾಡುವಾಗ ರಾಮಾಯಣ ಭಾರತಗಳನ್ನು ಈ ಮೇಲೆ ಹೇಳಿದ ಶ್ಲೋಕಗಳ ಮೂಲಕ ರಾಗವಾಗಿ ಹೇಳಿ ನೆನೆಯುತ್ತಿದ್ದರು ನಮ್ಮ ಹಿರಿಯರು.

ಹೆಂಗಳೆಯರನ್ನು ಕಡೆಗಣಿಸಿದ್ದರು ಎಂಬುದನ್ನು ನಾನಂತೂ ಒಪ್ಪುವುದಿಲ್ಲ:

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರಿ ತಥಾ |
ಪಂಚಕನ್ಯಾಸ್ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ || --ಎಂದಿದ್ದಾರೆ ಪ್ರಾಜ್ಞರು.

ಮೇಲಾಗಿ ಯಾವುದೇ ಪೂಜೆ-ಪುನಸ್ಕಾರಗಳಿರಲಿ ಅಲ್ಲಿ ಸುಹಾಸಿನೀ ಮತ್ತು ಕನ್ಯಾಕುಮಾರೀ ಪೂಜೆಯನ್ನು ನೆರವೇರಿಸುತ್ತಿದ್ದರು. || ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾ || ಎಂಬ ಪರಿಕಲ್ಪನೆ ಇಂದಿನ ಅಧುನಿಕರಲ್ಲಿದೆಯೇ? ಮಾತೆತ್ತಿದರೆ ’ಸಮಾಜಸುಧಾರಕರು’ ಹೆಂಗಸರನ್ನು ಕೀಳಾಗಿ ನೋಡಿದರು ಎಂದು ಅಲ್ಲಿ ಮತ್ತೆ ಒಡೆದಾಳುವ ಹುನ್ನಾರವನ್ನು ಸೃಜಿಸುತ್ತಾರಲ್ಲಾ ಹಿಂದಿನ ಶತಮಾನವನ್ನೇ ತೆಗೆದುಕೊಳ್ಳಿ ಇವತ್ತಿನಷ್ಟು ಮನೆಮುರುಕ ಜನಾಂಗ ಅಲ್ಲಿರಲಿಲ್ಲ! ವಿವಾಹ ವಿಚ್ಛೇದನಗಳು ಇಲ್ಲವೇ ಇಲ್ಲಾ ಎಂಬಷ್ಟು ಕಮ್ಮಿ ಇದ್ದವು! ಮುಂದುವರಿದ ನಾಗರಿಕತೆಯ ಇಂದಿನ ಜನಾಂಗದಲ್ಲಿ ಅದೂ ನಮ್ಮ ಬೆಂಗಳೂರಿನಲ್ಲಿ ತಿಂಗಳಲ್ಲಿ ನೂರಾರು ವಿಚ್ಛೇದನಗಳು ನಡೆಯುತ್ತಲಿವೆ ಎಂದರೆ ಇದಕ್ಕೆ ಭಾರತೀಯ ಸಂಸ್ಕೃತಿ ಕಾರಣವೇ? ಆರ್.ಎಸ್.ಎಸ್. ಕಾರಣವೇ? ಅಥವಾ ಹಣದ ವ್ಯಾಮೋಹ ಮತ್ತು ಲಿವ್-ಇನ್ ಥರದ ಪಾಶ್ಚಾತ್ಯ ಅಂಧಾನುಕರಣೆ ಕಾರಣವೋ ಎಂಬುದನ್ನು ಅವರವರೇ ಆತ್ಮವಿಮರ್ಶೆಮಾಡಿಕೊಳ್ಳಬೇಕಾಗಿದೆ.

ಸಿನಿಮಾಗಳ ಬಗ್ಗೆ ಹೇಳುತ್ತಲೇ ಇದ್ದೇನೆ. ಮೊನ್ನೆ ನಿರ್ದೇಶಕರೊಬ್ಬರು ಬೇಸರದಿಂದ ನಿವೃತ್ತರಾದರಂತೆ! ಕೋಟಿಗಳಲ್ಲಿ ಸಂಭಾವನೆ ಪಡೆಯುವ ನಾಯಕ ನಟರಿಂದ ಸಿನಿಮಾರಂಗದ ನಿರ್ದೇಶಕ ಮತ್ತು ನಿರ್ಮಾಪಕರು ದಿವಾಳಿ ಏಳುತ್ತಾರೆ ಎಂಬುದು ಅವರ ಅಭಿಪ್ರಾಯ. ನಾಯಕನಟರೋ ನಟಿಯರೋ ಅವರಿಗೆಲ್ಲಾ ಕೋಟಿಗಳಲ್ಲಿ ಕೊಟ್ಟು ಕಲಿಸಿದವರಾರು? ಅಷ್ಟಕ್ಕೂ ಇಂದಿನ ಸಿನಿಮಾಗಳಲ್ಲಿ ಯಾವ ನ್ಯಾಯ-ನೀತಿ ಕಥೆಗಳಿವೆ? ಆಪ್ತಮಿತ್ರ, ಆಪ್ತರಕ್ಷಕ, ಮುಂಗಾರುಮಳೆ ಮುಂತಾದ ಕಥೆಗಳನ್ನು ಆಧರಿಸಿದ ಚಿತ್ರಗಳು ಯಶಸ್ವಿಯಾಗಿದ್ದು ಕಾಣುತ್ತಿಲ್ಲವೇ? ಹಿಂದಿನ ನಿರ್ದೇಶಕರುಗಳು ಉತ್ತಮ ಕಾದಂಬರಿಗಳನ್ನೋ ಕಥೆಗಳನ್ನೋ ಆಯ್ದುಕೊಳ್ಳುತ್ತಿದ್ದರು, ತಕ್ಕಂತೇ ಪಾತ್ರಗಳನ್ನು ರೂಪಿಸಿ ಅವುಗಳನ್ನು ಪೋಷಿಸುವ ಉತ್ತಮ ಕಲಾವಿದರನ್ನು ಹುಡುಕುತ್ತಿದ್ದರು. ಅಲ್ಲಿ ಭರ್ಜರೀ ಸೆಟ್ ಗಳಿಗಿಂತಾ ಹೆಚ್ಚಾಗಿ ಭರ್ಜರೀ ಕಥೆಗಳು ರಾರಾಜಿಸುತ್ತಿದ್ದವು. ವಿಕೃತ ಸಂಭಾಷಣೆಗಳು ಇರುತ್ತಿರಲಿಲ್ಲ. ಸಿನಿಮಾ ಹಣಮಾಡಬೇಕೆಂಬ ಒಂದೇ ಉದ್ದೇಶದಿಂದ ಕೂಡಿರುತ್ತಿರಲಿಲ್ಲ. ಜನತೆಗೆ ಉತ್ತಮ ಸಂದೇಶವನ್ನು ಕೊಡುವ ಪ್ರಯತ್ನಗಳೂ ಸಿನಿಮಾಗಳ ಮೂಲಕ ನಡೆಯುತ್ತಿದ್ದವು. ಇಂದಿನ ನಿರ್ದೇಶಕರಿಗೆ ಚಾ ಕುಡಿದಷ್ಟೇ ಹೊತ್ತಿನಲ್ಲಿ ಸಿನಿಮಾಗಳು ತಯಾರಾಗಬೇಕು-ವರ್ಷಕ್ಕೆ ಹತ್ತಾರು ಸಿನಿಮಾಗಳು ಆಗಬೇಕು, ಕಿಸೆ ಭರ್ತಿಯಾಗುತ್ತಲೇ ಇರಬೇಕು. ಕೆಲವೊಮ್ಮೆ ನಿರ್ದೇಶಕ-ನಿರ್ಮಾಪಕ-ಸಂಭಾಷಣೆಕಾರ-ಸಂಗೀತನಿರ್ದೇಶಕ-ಗೀತೆರಚನೆಗಾರ ಎಲ್ಲವೂ ಒಬ್ಬನೇ: ಇದೊಂಥರಾ ಹುಂಡುಗುತ್ತಿಗೆ ಲೆಕ್ಕಾಚಾರ. ಅತಿಯಾದ ಕಮರ್ಷಿಯಲ್ ಫ್ಲಾಪ್ ಸಿನಿಮಾಗಳನ್ನು ನೀಡಿದ ನಿರ್ದೇಶಕರುಗಳಿಗೆ ನಿದ್ರೆಮಾತ್ರೆಯೇ ಗತಿಯಾಗುತ್ತದೆ. ಇದರ ವಿವೇಚನೆ ಬೇಡವೇ? ಮಚ್ಚು-ಲಾಂಗುಗಳ ಸಿನಿಮಾಗಳೇ ಅತಿಯಾಗಿರುವಾಗ ಉತ್ತಮ ಸಂಸ್ಕೃತಿಯನ್ನು ಸಮಾಜದಲ್ಲಿ ನಾವು ನಿರೀಕ್ಷಿಸಬಹುದೇ?

ದೀಪಮೂಲೇ ಸ್ಥಿತೋಬ್ರಹ್ಮಾ ದೀಪಮಧ್ಯೇ ಸ್ಥಿತೋ ಹರಿಃ |
ದೀಪಾಗ್ರೇ ಶಂಕರಃ ಪ್ರೋಕ್ತಂ ದೀಪರಾಜಾಯತೇ ನಮಃ ||

ಶಿವಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ |
ಮಮಶತ್ರು ಹಿತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

ಇಂತಹ ಸಾಯಂಕಾಲದ ಸ್ತುತಿಗಳು ಇಂದೆಲ್ಲಿ ಕಾಣಸಿಗುತ್ತವೆ? ಸಂಜೆ ಬೆಳಗುವ ದೀಪದಲ್ಲೂ ಜಗನ್ನಿಯಾಮಕ ಶಕ್ತಿಯನ್ನು ಕಂಡು ತನ್ನ ಶತ್ರು ಎಂದರೆ ಅಂಧಕಾರ, ಅದಕ್ಕೂ ಹಿತವನ್ನೇ ಬಯಸುವ ಆದರ್ಶವೆಂಥದು ನೋಡಿ! ಒಂದೊಮ್ಮೆ ಕಾರ್ಯಕಾರಣ ಶತ್ರುಗಳಿದ್ದರೂ ಅವರೆಲ್ಲರಿಗೂ ಸಹಿತ ಒಳಿತಾಗಲಿ ಎಂದು ಬಯಸುವ ಮನೋಗತವನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ. ಇದು ಅನನ್ಯ ಸದೃಶವಾಗಿದೆ.

ಮುಗಿಸುವ ಮುನ್ನ ನಿಮಗೊಂದು ಗೀತೆಯನ್ನು ಕೇಳಿಸಲೇಬೇಕು. ಈ ಗೀತೆ ನನ್ನನ್ನು ಬಹಳವಾಗಿ ತಟ್ಟಿದೆ. ಕಂಚಿನಕಂಠದ ಗಾಯಕ ಪಿ.ಬಿ.ಶ್ರೀನಿವಾಸ್ ಹಾಡಿರುವ ಅಂದಿನ ಸಿನಿಮಾಗೀತೆ ಎಂತಹ ಸಂಸ್ಕಾರವನ್ನು ಬೋಧಿಸುತ್ತಿತ್ತು ಎಂಬುದು ತಿಳಿಯುತ್ತದೆ. ದೃಶ್ಯಗಳಲ್ಲಿ ಶಿಕ್ಷಕರು ಮಕ್ಕಳು, ಆ ಹಳ್ಳಿಯ ಶಾಲಾ ಪರಿಸರ, ಮಕ್ಕಳ ಮುಗ್ಧ ಮನೋಭಾವ ಇವುಗಳನ್ನೆಲ್ಲಾ ಭಾರತೀಯ ಸಂಸ್ಕೃತಿಯಾಧಾರದಲ್ಲಿ ಸೆರೆಹಿಡಿಯಲಾಗಿದೆ. ಹಾಡಿನ ಗಾಯಕರು, ಸಂಗೀತ ಅಳವಡಿಸಿದವರು, ತಂತ್ರಜ್ಞರು, ಕಲಾವಿದರು, ಮಕ್ಕಳು ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತಾ ಇವತ್ತಿನ ಈ ಲೇಖನದಿಂದ ಬೀಳ್ಕೊಳ್ಳುತ್ತಿದ್ದೇನೆ, ತಾಯಿ ಶಾರದೆ ಎಲ್ಲರಿಗೂ ಓದು-ಬರಹಗಳನ್ನು ನೀಡಲಿ, ತನ್ಮೂಲಕ ಓದಿಕೊಂಡ ಜನ ಸಜ್ಜನರಾಗಲಿ, ಜಗತ್ತಿನಲ್ಲಿಯೇ ಆದರ್ಶಪ್ರಾಯವಾದ ಭಾರತೀಯ ಸನಾತನ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ, ನಮಸ್ಕಾರ.





Sunday, March 25, 2012

ದೀಪಂ ದೇವ ದಯಾನಿಧೇ-೫

ಚಿತ್ರಋಣ: ಶೃಂಗೇರಿ. ಕೋ.ಇನ್

ದೀಪಂ ದೇವ ದಯಾನಿಧೇ-೫

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ವೈದಿಕರು ತನಗೆ ಆಯುಷ್ಯ ಕಮ್ಮಿ ಎಂದು ಅಮ್ಮನಿಗೆ ತಿಳಿಸಿ ಹೊರಟಿದ್ದು ಶಂಕರನಿಗೆ ಕೇಳಿಸಿಬಿಟ್ಟಿತ್ತು! ಬ್ರಾಹ್ಮಣರು ಹೋದಮೇಲೆ ತಾಯಿಯನ್ನು ಬಾಲಶಂಕರ ತಾನೇ ಸಂತೈಸಿದ. ತಾಯಿಯ ಆಂತರ್ಯದ ಅಳಲು ಶಂಕರರಿಗೆ ಅರ್ಥವಾಗಿಹೋಯ್ತು. ಯಾವ ತಾಯಿಯೂ ತನ್ನ ಮಗನಿಗೆ ಕೆಟ್ಟದಾಗುವುದನ್ನೋ ಮಗ/ಮಕ್ಕಳು ಬಳಲುವುದನ್ನೋ ಬಯಸುವುದಿಲ್ಲ.ಕಷ್ಟಕೋಟಲೆಗಳೆಲ್ಲಾ ಏನಿದ್ದರೂ ಮಕ್ಕಳ ಬದಲಾಗಿ ತನಗೇ ಬಂದುಬಿಡಲಿ ಎಂದು ಬಯಸುವ ಮಾತೃಹೃದಯ ಅದು.

"ಅಮ್ಮಾ ನಿನ್ನ ಮನದಲ್ಲಿ ಉಂಟಾಗಿರುವ ವೇದನೆಯನ್ನು ನಾನು ಬಲ್ಲೆ. ಹುಟ್ಟಿದ ಎಲ್ಲಾ ಜೀವಿಗಳಿಗೂ ತಾಯಿ ಎಂಬ ಪ್ರತ್ಯಕ್ಷ ದೇವರನ್ನು ಕರುಣಿಸಿದ ಆ ದೇವರು ಜೀವನವನ್ನು ಆರಂಭಿಸಲು ಬೇಕಾದ ಪ್ರಾಥಮಿಕ ವಿದ್ಯೆಗಳನ್ನೂ ಸಂಸ್ಕಾರಗಳನ್ನೂ ತಾಯಿಯಿಂದಲೇ ಕೊಡಮಾಡುವುದು ಆಶ್ಚರ್ಯಕರ ಸಂಗತಿ. ಆ ವಿಷಯದಲ್ಲಿ ನಿನ್ನಂತಹ ತಾಯಿಯನ್ನು ಪಡೆದ ನಾನು ಧನ್ಯ. ಜಗತ್ತು ಹೇಗೆ ನಡೆಯುತ್ತದೆ ಎಂಬುದನ್ನು ನೀನು ತಿಳಿದುಕೊಂಡೇ ಇದ್ದೀಯ. ಈ ಜಗದಲ್ಲಿ ದಿನನಿತ್ಯ ಹಲವಾರು ಘಟನೆಗಳು ಸಂಭವಿಸುತ್ತಿರುತ್ತವೆ. ಇಲ್ಲಿನ ಯಾವುದೂ ಶಾಶ್ವತವಲ್ಲ. ಸಿಕ್ಕ ಸಮಯವನ್ನು ಭಗವಂತನ ಸೇವೆಗೆ ಸದುಪಯೋಗ ಪಡಿಸಿಕೊಳ್ಳುವುದೊಂದೇ ಉನ್ನತ ಕೆಲಸವಾಗುತ್ತದೆ. ಕ್ಷಣಿಕ ಜೀವನದಲ್ಲಿ ಇದಕ್ಕಿಂತ ಮಹೋನ್ನತ ಭಾಗ್ಯ ಬೇರೇ ಯಾವುದಿದೆ?"

"ಮಗನೇ ಕಂದಾ" ಎನ್ನುತ್ತಾ ಮಗನನ್ನು ಬಾಚಿತಬ್ಬಿಕೊಂಡು ಗಳಗಳನೆ ಅತ್ತುಬಿಟ್ಟಳು ಆರ್ಯಾಂಬೆ. ವಿಶ್ವದಲ್ಲಿ ಮಕ್ಕಳಾಗಲಿಲ್ಲಾ ಎಂಬ ಕೊರಗು ಹಲವರದಾದರೆ ಹುಟ್ಟಿದ ಮಕ್ಕಳ ಕೆಟ್ಟನಡತೆಯಿಂದ ನೋಯುವ ಪಾಲಕರು ಇನ್ನೂ ಹಲವರು. ಉತ್ತಮವಾದ ಮಗುವೊಂದು ತಮ್ಮ ಜೀವನದಲ್ಲಿ ತಡವಾಗಿ ಜನಿಸಿಯೂ ಅಲ್ಪಾಯುಷಿಯಾಗುತ್ತದೆಂದರೆ ಯಾವ ತಾಯಿ ಸಹಿಸಿಯಾಳು. ಕನಸಿನಲ್ಲಿ ಕಂಡ ಭಗವಂತ ಕೇಳಿದ್ದಕ್ಕೆ "ಅಲ್ಪಾಯುವಾದರೂ ಪರವಾಗಿಲ್ಲ ಲೋಕೋಪಕಾರಿಯಾದ ಮಗನೇ ಜನಿಸಲಿ" ಎಂದು ಉತ್ತರಿಸಿದ್ದರು, ಆದರೆ ಮಗ ಹುಟ್ಟಿದಮೇಲೆ ಅಲ್ಪಾಯುಷಿ ಎಂಬುದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗುತ್ತಿರಲಿಲ್ಲ. ಹೀಗೇ ಆ ದಿನ ದುಃಖದ ಕಡಲಲ್ಲೇ ಕಳೆದುಹೋಯಿತು. ಅಮ್ಮನ ದುಃಖ ಅತ್ತೂ ಅತ್ತೂ ಹೊರಬಂದು ಮನಸ್ಸು ಅದನ್ನು ಸಹಿಸಿಕೊಳ್ಳುವ ಸಿದ್ಧತೆ ನಡೆಸುವವರೆಗೆ ಸುಮ್ಮನಿದ್ದ ಶಂಕರ ದಿನವೆರಡು ಕಳೆದು ತನ್ನ ಸನ್ಯಾಸಮಾರ್ಗದ ಸಂಕಲ್ಪವನ್ನು ಪ್ರಕಟಿಸಿಯೇಬಿಟ್ಟ.

"ಅಮ್ಮಾ ನಿನ್ನಲ್ಲಿ ಇವತ್ತು ನನ್ನ ನಿರ್ಧಾರವನ್ನು ತಿಳಿಸಬೇಕಾಗಿದೆಯಮ್ಮ"

"ಏನಪ್ಪಾ ಮಗನೇ ? ನಿನಗೆ ನಾನು ಬೇಡ ಈ ಲೋಕದ ಸಂಸಾರಬಂಧನ ಬೇಡ ಎಂದಲ್ಲವೇ ?"

"ಅಮ್ಮಾ ನಾನು ಸನ್ಯಾಸಿಯಾಗುವ ನಿರ್ಧಾರಕ್ಕೆ ಬಂದಿದ್ದೇನೆ."

ಶಂಕರ ತನ್ನ ಖಂಡಿತವಾದವನ್ನು ಮಂಡಿಸಿದ್ದನ್ನು ನೋಡಿ ಮತ್ತೆ ದುಃಖಿತಳಾದಳು ತಾಯಿ ಆರ್ಯಾಂಬೆ. ಇದ್ದೊಬ್ಬ ಮಗ ಅತೀ ಎಳೆಯವಯಸ್ಸಿನಲ್ಲಿ ಸನ್ಯಾಸಿಯಾಗಿ ತನ್ನನ್ನು ತೊರೆದುಹೋಗುತ್ತಾನಲ್ಲಾ ಎಂಬ ಕೊರಗು ಅವಳದು. ಮಗ ತನಗಾಗಿ ಜೊತೆಗಿರದಿದ್ದರೂ ಲೋಕೋಪಕಾರಕ್ಕಾಗಿಯೇ ಜನಿಸಿದ ಆತನಿಂದ ಏನೇನೆಲ್ಲ ನಡೆಯುವುದೋ ಎಂಬ ಕುತೂಹಲವಿದ್ದರೂ ಅಮ್ಮನಾಗಿ ಮುದ್ದುಮಗು ಶಂಕರನನ್ನು ತೊರೆದು ಜೀವಿಸಲು ಅವಳಿನ್ನೂ ಪೂರ್ಣವಾಗಿ ಸಿದ್ಧಳಾಗಿರಲಿಲ್ಲ. ಯಾವ ತಾಯಿಯೂ ತನ್ನ ಮಗನನ್ನು ಅಗಲಿರುವುದಕ್ಕೆ ಇಷ್ಟಪಡುವುದಿಲ್ಲ, ಒಂದೊಮ್ಮೆ ಆತ ದೂರದಲ್ಲೇ ಇದ್ದರೂ ಸಂಸಾರಿಯಾಗಿ ಸುಖಿಯಾಗಿ ಜೀವನ ನಡೆಸುತ್ತಿರುವ ಸುದ್ದಿಯನ್ನು ತಿಳಿಯುತ್ತಲೇ ಇರುವುದಕ್ಕೆ ತಾಯಿಯಾದವಳು ಬಯಸುತ್ತಾಳೆ.

"ಮಗನೇ, ಅನೇಕ ವರ್ಷಗಳ ತಪಸನ್ನು ನಡೆಸಿ ಅದರ ಫಲವಾಗಿ ನಾವು ನಿನ್ನನ್ನು ಪಡೆದೆವಪ್ಪಾ, ನನಗೋ ಮುಪ್ಪಿನ ವಯಸ್ಸು, ನೀನು ಸನ್ಯಾಸಿಯಾಗಿ ಮನೆಯನ್ನು ತ್ಯಜಿಸಿ ಹೋದರೆ ಯಾರೆಂದರೆ ಯಾರೂ ಇಲ್ಲದ ನನ್ನನ್ನು ನೋಡಿಕೊಳ್ಳುವವರಾದರೂ ಯಾರಪ್ಪಾ?"

ಅಮ್ಮ ಹೇಳುತ್ತಿರುವುದೂ ಹೌದೆನಿಸಿತು ಶಂಕರನಿಗೆ. ವಯಸ್ಸಿನಲ್ಲಿ ರೂಪದಲ್ಲಿ ಚಿಕ್ಕವನಾದರೂ ಅಮ್ಮನ ಸಂಕಟವನ್ನು ಅರಿಯದ ಬಾಲಮನಸ್ಸು ಶಂಕರನದಲ್ಲ! ಅದೇ ಆ ಪ್ರಬುದ್ಧ ಮನಸ್ಸು ಹೊರಜಗತ್ತಿನಲ್ಲಿ ನಶಿಸಿಹೋಗುತ್ತಿರುವ ಸನಾತನ ಧರ್ಮದ ಪುನರುತ್ಥಾನವನ್ನೂ ಮಾಡಬಯಸಿತ್ತು. ಬಲಹೀನವಾದ ಹಿಂದೂಧರ್ಮವನ್ನು ಯಾರೂ ಬಲಶಾಲೀ ಧರ್ಮವೆಂದು ಪ್ರತಿಪಾದಿಸುವ ಕೆಲಸವನ್ನು ಮಾಡುವವರಿರಲಿಲ್ಲ. ತಾನಾದರೂ ಆ ಕೆಲಸವನ್ನು ಕರ್ತವ್ಯವಾಗಿ ನಡೆಸಬೇಕು ಎಂಬುದು ಶಂಕರನ ಗುರಿಯಾಗಿತ್ತು. ಯಾವುದರಿಂದ ಜಗತ್ತಿಗೇ ಒಳಿತಾಗುವುದೋ, ಯಾವುದು ವೇದಗಳ ಭದ್ರಬುನಾದಿಯಮೇಲೆ ನಿಲ್ಲಿಸಲ್ಪಟ್ಟ ಮಾನವ ಸಹಜ ಜೀವನಕ್ರಮ ಎಂಬುದನ್ನು ಅರಿತಿದ್ದ ಶಂಕರ ಅಮ್ಮನಲ್ಲಿ ಮತ್ತೆ ಬಿನ್ನವಿಸತೊಡಗಿದ.

"ಮಗನೇ ಶಂಕರ, ನಿನ್ನನ್ನು ತೊರೆದು ಬದುಕಲು ನನ್ನ ಮನಸ್ಸು ಒಪ್ಪುತ್ತಲೇ ಇಲ್ಲ. ಒಂದೊಮ್ಮೆ ನೀನು ಸನ್ಯಾಸಿಯೇ ಆಗುವುದು ಎಂದು ನಿರ್ಧಾರ ತಳೆದಿದ್ದರೆ ನಾನು ಸತ್ತಮೇಲೆ ಸನ್ಯಾಸ ಸ್ವೀಕರಿಸು" ಎಂದಳು ತಾಯಿ ಆರ್ಯಾಂಬೆ.

ಶಂಕರ ಕ್ಷಣಕಾಲ ಅವಲೋಕಿಸಿದ. ಉಭಯಸಂಕಟದಲ್ಲಿ ಬಳಲಿದ. ಮನುಷ್ಯ ಜೀವನದಲ್ಲಿ ಸಹಜವಾಗಿ ನಾಲ್ಕು ಆಶ್ರಮಗಳು: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. ಸನ್ಯಾಸದಿಂದ ಮಾತ್ರ ಮೋಕ್ಷಸಾಧನೆಯಾಗುವುದರ ಜೊತೆಗೆ ಲೋಕೋಪಕಾರವೂ ನಡೆಯುತ್ತದೆ. ಪ್ರಯಾಣಿಕರಿಗೆ ದಾರಿಯಲ್ಲಿ ಅಲ್ಲಲ್ಲಿ ನಿಂತು ವಿಶ್ರಮಿಸಿಕೊಳ್ಳಲು ವಿಶ್ರಾಂತಿಗೃಹಗಳಿರುವಂತೇ ಜೀವನದ ಈ ನಾಲ್ಕು ಆಶ್ರಮಗಳಲ್ಲಿ, ಸಾಧನೆ ಬಯಸುವ ವ್ಯಕ್ತಿ ಅಲ್ಲಲ್ಲಿ ನಿಂತು ಮುನ್ನಡೆಯುತ್ತಾನೆ. ಮೊದಲ ಮೂರು ಆಶ್ರಮಗಳನ್ನು ಮುಗಿಸಿ ನಾಲ್ಕನೇ ಆಶ್ರಮಕ್ಕೆ ವ್ಯಕ್ತಿ ಹೊರಳಿದಾಗ ಸಾಂಸಾರಿಕ ಮತ್ತು ಐಹಿಕ ಬಂಧಗಳಿಂದ ಮುಕ್ತನಾಗುತ್ತಾನೆ ಎಂಬುದು ಮನುಸ್ಮೃತಿಯ ಉಲ್ಲೇಖ.

ನ್ಯಾಸ ಎಂದರೆ ತ್ಯಾಗ, ತ್ಯಜಿಸುವುದು ಎಂದರ್ಥ. ಸನ್ಯಾಸ ಎಂದರೆ ಎಲ್ಲವನ್ನೂ ತ್ಯಜಿಸುವುದರ ಮೂಲಕ ವಿರಕ್ತನಾಗಿ ಇಡೀ ದೇಶವೇ/ಲೋಕವೇ ತನ್ನ ಮನೆ, ಸಮಾಜದ ಸತ್ಪ್ರಜೆಗಳೇ ತನ್ನ ಬಂಧುಗಳು ಎಂಬ ಅನಿಸಿಕೆಯಿಂದ, ಸಮಾಜದ ಒಳಿತನ್ನು ಬಯಸುತ್ತಾ, ಕರತಲ ಭಿಕ್ಷೆಯನ್ನು ಸ್ವೀಕರಿಸುತ್ತಾ ಕೆಲವೊಮ್ಮೆ ತರುವೃಕ್ಷಗಳಡಿಯಲ್ಲಿ ಕುಳಿತು ತಪಗೈಯ್ಯುತ್ತಾ ನಡೆಯುವ ಆತನಿಗೆ ಮುಮುಕ್ಷುತ್ವದಿಂದ ಪಡೆವ ಆನಂದಮಯ ಸ್ವರೂಪವೇ ಪರಮೋದ್ದೇಶವಾಗಿರುತ್ತದೆ. ಸಮಾಜದ ಜನರೊಟ್ಟಿಗೇ ಇದ್ದರೂ ಸಮಾಜಕ್ಕೆ ಅಂಟಿಕೊಳ್ಳದೇ ಮೌನವಾಗಿ ಸಮಾಜದ ಆಗುಹೋಗುಗಳನ್ನು ವೀಕ್ಷಿಸುತ್ತಾ ಸರ್ವರ ಹಿತಬಯಸಿ ಮೌನದಲ್ಲೇ ಪ್ರಾರ್ಥಿಸುವ ಆತ ಮೌನಿ-ಮುನಿ. ಸನ್ಯಾಸಿಯಾಗಲು ಸದಾ ಮನುಷ್ಯ ಪ್ರಯತ್ನಿಸುತ್ತಲೇ ಇರಬೇಕು. ಅದು ಆತನ ಕೈಲೇ ಇರುತ್ತದೆ. ಹಾಗೆ ಸದಾ ಬಯಸುತ್ತಿದ್ದರೆ ಕ್ರಮೇಣ ಕ್ರಮೇಣ ಸನ್ಯಾಸಿಯಾಗುವ ಅವಕಾಶ ಸಿದ್ಧಗೊಳ್ಳುತ್ತದೆ.

ತಾನಂತೂ ಮನದಲ್ಲಿ ಸನ್ಯಾಸಿಯೇ ಆಗಿಬಿಟ್ಟಿದ್ದೇನೆ-ಆ ಸಂಕಲ್ಪ ಅದೆಂದೋ ಆಗಿಬಿಟ್ಟಿದೆ. ಮುಪ್ಪಿನ ಅಮ್ಮನಲ್ಲಿ ಮತ್ತೆ ಹೇಗೆ ಪ್ರಾರ್ಥಿಸಲಿ? ಎಂಬುದೇ ಶಂಕರನ ಚಿಂತೆಯಾಗಿತ್ತು. ಶಂಕರನ ವಿಷಯದಲ್ಲಿ ಕಾಣದ ಶಕ್ತಿಯ ಕೈವಾಡವೊಂದು ನಡೆಯಿತೋ ಎಂಬಂತೇ ಘಟನೆಯೊಂದು ನಡೆದುಹೋಯಿತು:

ಶಂಕರ ಎಂದಿನಂತೇ ಒಂದು ಪ್ರಾತಃಕಾಲ ಮನೆಯ ಪಕ್ಕದಲ್ಲೇ ಹರಿಯತೊಡಗಿದ್ದ ಪೂರ್ಣಾನದಿಗಿಳಿದು ಸ್ನಾನಮಾಡುತ್ತಲಿದ್ದ. ಈಜುತ್ತಿರುವಾಗ ಎಲ್ಲಿಂದಲೋ ಮೊಸಳೆಯೊಂದು ಬಂದು ಶಂಕರನ ಕಾಲು ಹಿಡಿದು ನದಿಯ ನೀರಿನಾಳಕ್ಕೆ ಎಳೆದೊಯ್ಯತೊಡಗಿತು. ಮೊಸಳೆಯ ಹಿಡಿತದಿಂದ ಹಾಗೆಲ್ಲಾ ತಪ್ಪಿಸಿಕೊಳ್ಳಲು ಸಾಧ್ಯವೇ? ಗಜೇಂದ್ರನ ಕಾಲು ಹಿಡಿದಾಗ ಗರುಡವಾಹನನೇ ಸ್ವತಃ ಬಂದು ರಕ್ಷಿಸಬೇಕಾಯ್ತೇ ವಿನಃ ಬಲಶಾಲಿಯಾದ ಆನೆಗೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದಮೇಲೆ ಬಾಲಕ ಶಂಕರ ಮೊಸಳೆಯಿಂದ ಪಾರಾಗುವುದು ಸಾಧ್ಯವೇ? ದೈವನಿಯಮದಂತೇ ತನ್ನ ವಯಸ್ಸು ಎಂಟಾಗಿದ್ದುದರಿಂದ ತನ್ನ ಜೀವಿತಾವಧಿ ಮುಗಿದಿದೆ ಎಂದೇ ಶಂಕರ ಭಾವಿಸಿದ.

"ಅಮ್ಮಾ... ಅಮ್ಮಾ" ಎಂಬ ಮಗನ ಆಕ್ರಂದನಕ್ಕೆ ಅಮ್ಮ ಓಡೋಡಿ ಹೊರಗೆ ಬಂದು ಮಗನನ್ನು ಹುಡುಕಿದಾಗ ನದಿಯಲ್ಲಿ ಮೊಸಳೆಯ ಸೆಳೆತದಿಂದ ಬಳಲುತ್ತಿರುವ ಮಗನನ್ನು ಕಂಡು ದಿಗ್ಭ್ರಾಂತಳಾದಳು.

"ಅಮ್ಮಾ ಮೊಸಳೆ ನನ್ನ ಕಾಲನ್ನು ಹಿಡಿದಿದೆ, ನನ್ನು ಅಂತ್ಯಕಾಲ ಸಮೀಪಿಸಿದೆ, ಬದುಕಿನ ಕೊನೆಯ ಕ್ಷಣದಲ್ಲಾದರೂ ಸನ್ಯಾಸಿಯಾಗಲು ಅಪ್ಪಣೆ ಕೊಡು, ಆತುರಸನ್ಯಾಸ ಸ್ವೀಕರಿಸಿ ಭಗವಂತನ ಸ್ಮರಣೆಯೊಂದಿಗೆ ಸದ್ಗತಿ ಪಡೆಯುತ್ತೇನೆ "

ಇದ್ದೊಬ್ಬ ಮಗ ಹೀಗೆ ಬಳಲುತ್ತಿರುವಾಗ ದಿಕ್ಕೇ ತೋಚದಾದ ಆರ್ಯಾಂಬೆಗೆ ಮಗನ ಕೊನೆಯ ಆಸೆಯನ್ನು ನೆರವೇರಿಸುವ ಇಚ್ಛೆಯಾಯಿತು. ಅದನ್ನೇ ಚಿಂತಿಸುತ್ತಿರುವಷ್ಟರಲ್ಲಿ ಅದಾಗಲೇ, ಸನ್ಯಾಸ ಸ್ವೀಕಾರವೆಂದರೆ ಹೇಗೂ ಒಂದು ಜನ್ಮಹೋಗಿ ಮತ್ತೊಂದು ಜನ್ಮ ಪಡೆದಂತೆಯೇ, ಸನ್ಯಾಸ ಪಡೆದಮೇಲೆ ಜೀವಿಸಿದ್ದರೆ ಅದೇ ಹೊಸಜನ್ಮ ಅದಿಲ್ಲಾ ಸತ್ತನಂತರ ಮತ್ತೆ ಸಹಜವಾಗಿ ಇನ್ನೊಂದು ಜನ್ಮ ಎಂಬ ತಿಳುವಳಿಕೆಯನ್ನು ಶಂಕರ ಹೊಂದಿದ್ದ!

"ಅಮ್ಮಾ ಬೇಗ ಅಪ್ಪಣೆಕೊಡು...ಮೊಸಳೆ ಅತಿಯಾಗಿ ನನ್ನನ್ನು ಬಾಧಿಸುತ್ತಿದೆ" ಎನ್ನುವ ಶಂಕರನ ಕೂಗು ಕೇಳುತ್ತಲೇ ಇತ್ತು.

ಸನ್ಯಾಸಿಯಾಗಿಯಾದರೂ ಮಗ ಬದುಕಿದರೆ ಸಾಕು, ಅದು ದೈವೇಚ್ಛೆ ಎಂದುಕೊಳ್ಳುತ್ತಾ ಕಣ್ಣೀರ್ಗರೆಯುತ್ತಾ "ಮಗನೇ ಆಗಲಿ ನೀನು ಸನ್ಯಾಸಿಯಾಗು" ಎನ್ನುತ್ತಾ ಮೂರ್ಛೆಹೋದಳು.

ಬಾಲಕ ಶಂಕರ ಶಂಕರರಾದದ್ದು ಇಲ್ಲಿಯೇ ! ಬಹಳವಾಗಿ ಬಾಧಿಸುತ್ತಿದ್ದ ಪೀಡೆ ತೊಲಗಿದಂತಾಗಿತ್ತು, ಬಹುಶಃ ಐಹಿಕ ಬಂಧನದಿಂದ ಬಿಡುಗಡೆಗೊಳಿಸಲೇ ಬಂದಿತ್ತೋ ಎಂಬಂತೇ ಕಾಲು ಹಿಡಿದು ಪೀಡಿಸುತ್ತಿದ್ದ ಮೊಸಳೆ ಶಂಕರರನ್ನು ಬಿಟ್ಟು ನದಿಯಲ್ಲೆಲ್ಲೋ ಮಾಯವಾಗಿತ್ತು! ಶಂಕರರು ಈಜಿ ದಡಸೇರಿ ಕುಳಿತುಕೊಂಡು ಸುಧಾರಿಸಿಕೊಳ್ಳುತ್ತಿರುವಾಗ ತಾಯಿ ಆರ್ಯಾಂಬೆ ಎಚ್ಚೆತ್ತಳು. ಮಗ ಶಂಕರ ಮೊಸಳೆಯಿಂದ ಪಾರಾಗಿಬಂದು ನದಿಯ ದಡದಲ್ಲಿ ಕುಳಿತುಕೊಂಡಿರುವುದನ್ನು ಕಂಡಳು.

"ಸದ್ಯ ಭಗವಂತ ಪಾರುಮಾಡಿದನಲ್ಲ. ಮಗೂ ಬಾ ಮನೆಗೆ ಹೋಗೋಣ"

"ನಾನು ಸನ್ಯಾಸಿ. ಸನ್ಯಾಸಿ ಸಂಸಾರ-ಸರ್ವಸಂಗ ಪರಿತ್ಯಾಗಿ. ಸನ್ಯಾಸಿ ತನ್ನ ಪೂರ್ವಾಶ್ರಮದ ಮನೆಯಲ್ಲೇ ಇರುವುದು ತರವಲ್ಲ. ನನಗಿನ್ನು ಯಾವಮನೆಯೂ ಇಲ್ಲ"

[ಓದುಗರ ಗಮನಕ್ಕೆ : ಸನ್ಯಾಸಗಳಲ್ಲಿ ಹಲವು ಮಾರ್ಗಗಳಿವೆ. ಅವುಗಳಲ್ಲಿ ಪ್ರಮುಖವೆನಿಸುವುದು ಈ ೨೩ ಮಾರ್ಗಗಳು :

೧. ಬ್ರಹ್ಮ
೨. ಜಾಬಾಲ
೩. ಶ್ವೇತಾಶ್ವತಾರ
೪. ಆರುಣೇಯ
೫. ಗರ್ಭ
೬. ಪರಮಹಂಸ
೭. ಮೈತ್ರಾಯಣಿ
೮. ಮೈತ್ರೇಯಿ
೯. ತೇಜೋಬಿಂದು
೧೦.ಪರಿವ್ರಾಟ ಅಥವಾ ನಾರದಪರಿವ್ರಾಜಕ
೧೧.ನಿರ್ವಾಣ
೧೨.ಅದ್ವಯತಾರಕ
೧೩.ಭಿಕ್ಷು
೧೪.ತುರ್ಯಾತೀತ
೧೫.ಸಂನ್ಯಾಸ
೧೬.ಪರಮಹಂಸ ಪರಿವ್ರಾಜಕ
೧೭.ಕುಂಡಿಕ
೧೮.ಪರಬ್ರಹ್ಮ
೧೯.ಅವಧೂತ
೨೦.ಕಠರುದ್ರ
೨೧.ಯಾಜ್ಞವಲ್ಕ್ಯ
೨೨.ವರಾಹ
೨೩.ಸಾತ್ಯಾಯಣಿ

ಆತುರ ಸನ್ಯಾಸ ಇವೆಲ್ಲವುಗಳಿಗಿಂತ ಹಿರಿದು, ಇವೆಲ್ಲಾ ಕ್ರಮಗಳಲ್ಲಿರುವ ಅತ್ಯುನ್ನತವಾದ ಅಂಶಗಳನ್ನು ಒಳಗೊಂಡಿದ್ದು. ಇನ್ನೇನು ಸಾವು ಬರುತ್ತಿದೆ ಅನ್ನುವಾಗ ಆಕ್ಷಣದಲ್ಲೂ ಸನ್ಯಾಸಿಯಾಗಬೇಕೆಂದು ಹಪಹಪಿಸುವ ವಿರಕ್ತ ಮನೋಸ್ಥಿತಿಗೆ ಮಾತ್ರ ಆತುರ ಸನ್ಯಾಸ ಸಾಧ್ಯ! ಶಿವನೇ ಶಂಕರನಾದ ಶಂಕರರಿಗೆ ಸನ್ಯಾಸವಾಗಲೀ ಗುರುವಾಗಲೀ ಬೇಕೇ ? ಆದರೂ ಲೌಕಿಕವಾಗಿ ನಡೆಯಬೇಕಾಗುವ ಆಚರಣೆಗಳನ್ನು ಜಗತ್ತಿಗೆ ಬೋಧಿಸುವ ಆಚಾರ್ಯರಾಗಿ ಸ್ವತಃ ಅವರೇ ಮಾಡಿತೋರಿಸಿದ್ದಾರೆ. ಶಂಕರರು ಆ ಕ್ಷಣದಲ್ಲಿ ಆತುರ ಸನ್ಯಾಸ ಪಡೆದುಕೊಂಡರೂ ಮುಂದೆ ಗೋವಿಂದಭಗತ್ಪಾದರಿಂದ ದೀಕ್ಷೆಯನ್ನು ಪಡೆದುಕೊಂಡರು ಎಂಬುದನ್ನು ಮುಂದಿನ ಕಂತಿನಲ್ಲಿ ತಿಳಿಯುತ್ತೀರಿ.]

"ಮಗೂ ನೀನಿನ್ನೂ ಚಿಕ್ಕ ಹುಡುಗ. ನಿನಗೆ ಸನ್ಯಾಸವೇ? ಮುಪ್ಪಿನ ನನ್ನನ್ನು ಯಾರು ರಕ್ಷಣೆಮಾಡುತ್ತಾರಪ್ಪಾ? ನಿನ್ನನ್ನು ಬಿಟ್ಟು ಬದುಕಲಾರೆನಪ್ಪಾ ಕಂದಾ. ಅಂತ್ಯಕಾಲದಲ್ಲಿ ನನಗೊದಗಿ ಬರುವವರಾರು ಮಗನೇ? ಬೇಡ ಎನ್ನುವುದಿಲ್ಲ, ನನ್ನ ಅಂತ್ಯವಾದಮೇಲೆ ವಿಧಿಯುಕ್ತವಾಗಿ ನನ್ನ ಅಂತ್ಯವಿಧಿಗಳನ್ನು ಮುಗಿಸಿ ಅಮೇಲೆ ನೀನು ಸನ್ಯಾಸ ಸ್ವೀಕರಿಸು" ಎಂದು ಪರಿಪರಿಯಾಗಿ ಆ ಎಳೆಯ ಬಾಲಕ ಶಂಕರರಲ್ಲಿ ಬೇಡಿಕೊಂಡಳು.

ಶಂಕರರು ಆತುರಸನ್ಯಾಸ ಸ್ವೀಕರಿಸಿ ಆಗಿಬಿಟ್ಟಿತ್ತಲ್ಲ. ಅಮ್ಮ ಈಗ ಅದನ್ನು ಅಲ್ಲಗಳೆಯುವಂತಿರಲಿಲ್ಲ!
"ಅಮ್ಮಾ, ನಾನಿಲ್ಲವಾದರೆ ಅಂತ್ಯಕಾಲದಲ್ಲಿ ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ ಎಂದೆಯಾ? ಜಗದ ಎಲ್ಲರನ್ನೂ ರಕ್ಷಿಸುವ ಪರಮಾತ್ಮನಿಗೆ ನೀನೊಬ್ಬಳು ಹೆಚ್ಚೇ? ಭಗವಂತ ನಿನ್ನನ್ನು ನೋಡಿಕೊಳ್ಳುತ್ತಾನೆ. ನಾನಿಲ್ಲವಾದರೇನು ಅವನಿಲ್ಲವೇ? ನಿನ್ನ ಯೋಗಕ್ಷೇಮವನ್ನು ಊರಿನಲ್ಲಿರುವ ನಿನ್ನ ಬಂಧುಗಳು ನೋಡಿಕೊಳ್ಳುತ್ತಾರೆ." ಎಂದರು ಶಂಕರರು.

ಶಂಕರರು ಸನ್ಯಾಸ ಸ್ವೀಕರಿಸಿದ ಸುದ್ದಿ ಊರತುಂಬಾ ವ್ಯಾಪಿಸಿತು. ಅನೇಕಜನ ಬಾಲಸನ್ಯಾಸಿಯನ್ನು ಹತ್ತಿರದಿಂದ ನೋಡಿ ಮಾತನಾಡಿಸಲು ಬಂದರು. ಹಾಗೆ ಬಂದ ಊರ ಬಂಧು-ಮಿತ್ರರಲ್ಲಿ ಅಮ್ಮನ ಯೋಗಕ್ಷೇಮವನ್ನು ನೋಡಿಕೊಳ್ಳುವಂತೇ ಶಂಕರರು ವಿನಂತಿಸಿದರು. ಶಂಕರರು ಲೋಕಸೇವೆಗೆ ಹುಟ್ಟಿದ ಮಗುವೆಂಬುದು ಆರ್ಯಾಂಬೆಗೆ ಅನಿಸದೇ ಇರಲಿಲ್ಲ. ಈಶ್ವರ ಸಂಕಲ್ಪದಂತೇ ಹುಟ್ಟಿದ ಆತನನ್ನು ತಾನಿನ್ನು ತಡೆಯಲು ಹಕ್ಕುದಾರಳಲ್ಲ ಎಂಬ ಭಾವನೆಯಿಂದ ಉಮ್ಮಳಿಸಿ ಬರುತ್ತಿರುವ ದುಃಖವನ್ನೂ ಹತ್ತಿಕ್ಕಿದಳು. ಬಳಿಕ ಶಂಕರರು ತಾಯಿಯ ಬಳಿಗೆ ನಡೆದುಬಂದು ಸಾಷ್ಟಾಂಗ ನಮಸ್ಕಾರ ಮಾಡಿ,

"ಅಮ್ಮಾ ನನ್ನನ್ನು ಆಶೀರ್ವದಿಸು. ಜ್ಞಾನಮಾರ್ಗದಿಂದ ಸಿದ್ಧಿಪಡೆಯಲೆಂದು ಹರಸು" ಎಂದು ಪ್ರಾರ್ಥಿಸಿದರು.

|| ಸರ್ವವಂದ್ಯೇಣ ಯತಿನಾಂ ಪ್ರಸೂರ್ಮಾತಾ ಪ್ರಯತ್ನತಃ || ಈ ಲೋಕದ ಯಾವುದೇ ಋಣವೂ ತೀರಿಹೋಗಬಹುದು ಆದರೆ ಹೆತ್ತಮ್ಮನ ಋಣವನ್ನು ಮಾತ್ರ ಸನ್ಯಾಸಿಯೂ ತೀರಿಸಲಾರ ಎನ್ನುತ್ತದೆ ಸಂಸ್ಕೃತದ ಈ ಉಲ್ಲೇಖ. ಸಾಕ್ಷಾತ್ ಜಗದ್ಗುರುಗಳೂ ಕೂಡ ಪೀಠದಲ್ಲಿ ವಿರಾಜಮಾನರಾಗಿರುವಾಗ ಅಮ್ಮನಿಂದ ಮಾತ್ರ ನಮಸ್ಕಾರವನ್ನು ಸ್ವೀಕರಿಸುವುದಿಲ್ಲ! ನನಗೆ ಗೊತ್ತಿರುವ ಒಂದು ಮಠದಲ್ಲಿ ಹಿಂದಕ್ಕೆ ಸ್ವಾಮಿಗಳಾಗಿದ್ದವರ ತಾಯಿ ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಮಗನ ನೆನಪು ಅತಿಯಾಗಿ ಬಾಧಿಸಿದಾಗ ಬಂದು ಕಾಣುತ್ತಿದ್ದರಂತೆ. ಮುಖಾಮುಖಿಯಾದಾಗ ಸ್ವಾಮಿಗಳು ಅವರನ್ನು ಎಲ್ಲಾ ಶಿಷ್ಯರಂತೆಯೇ ಕಂಡರೂ ಅಮ್ಮನಿಗೆ ನಮಸ್ಕರಿಸುತ್ತಿದ್ದರೇ ವಿನಃ ಅಮ್ಮನಿಂದ ನಮಸ್ಕಾರ ಪಡೆಯುತ್ತಿರಲಿಲ್ಲವಂತೆ. ಅಷ್ಟಾಗಿಯೂ ಸ್ವಾಮಿಗಳು ಪೀಠದಿಂದಿಳಿದು ಸ್ನಾನಕ್ಕೋ ಜಪ-ತಪಕ್ಕೋ ತೆರಳಿದಾಗ ಆದಿಶಂಕರರು ಸ್ಥಾಪಿಸಿದ ದಿವ್ಯ ಪೀಠಕ್ಕೆ ಈ ಸ್ವಾಮಿಗಳ ತಾಯಿ ನಮಸ್ಕಾರ ಮಾಡುತ್ತಿದ್ದರಂತೆ! ಇದು ಸನ್ಯಾಸಿಗಳ ಜೀವನದಲ್ಲಿ ನಡೆಯಬಹುದಾದ ಕ್ರಮ.

ಆರ್ಯಾಂಬೆ ಕಣ್ಣೀರಿಡುತ್ತಾ "ಮಗನೇ, ನಾನು ಸಾಯುವುದಕ್ಕೆ ಮೊದಲು ಒಮ್ಮೆಯಾದರೂ ನಿನ್ನನ್ನು ನೋಡಲು ಸಾಧ್ಯವೇನಪ್ಪಾ ?" ಎಂದು ಗದ್ಗದಿತಳಾಗಿ ಕೇಳಿದಳು.

ತಾಯಹೃದಯವನ್ನು ಮೊದಲೇ ಅರಿತಿದ್ದ ಶಂಕರರು,

"ಅಮ್ಮಾ, ನಿನ್ನ ಅಂತ್ಯಕಾಲದಲ್ಲಿ ನನ್ನನ್ನು ಸ್ಮರಿಸಿಕೋ, ಯೋಗಶಕ್ತಿಯಿಂದ ನಾನು ನಿನ್ನಲ್ಲಿಗೆ ಧಾವಿಸಿಬರುತ್ತೇನೆ. ಅಂತ್ಯಕಾಲದಲ್ಲಿ ನಿನ್ನ ಸೇವೆಮಾಡುವ ಭಾಗ್ಯ ನನಗೆ ಭಗವಂತ ಅನುಗ್ರಹಿಸಲಿ ಎಂದು ಆತನಲ್ಲಿ ಪ್ರಾರ್ಥಿಸುತ್ತೇನೆ. ಮರಣಾನಂತರ ನಿನ್ನ ಅಂತ್ಯವಿಧಿಯನ್ನು ನೆರವೇರಿಸಲು ನೆರವಾಗುತ್ತೇನೆ. ನನ್ನ ಸನ್ಯಾಸ ಸಫಲವಾಗಲಿ ಎಂದು ಆಶೀರ್ವದಿಸಮ್ಮ" ಎಂದರು.

ಮರುದಿನ ತಾಯಿಯ ಕೈಯಾರೆ ಕಾಷಾಯವಸ್ತ್ರ ತರಿಸಿ ಸ್ವೀಕರಿಸಿ ಧರಿಸಿಕೊಂಡ ಶಂಕರರು ತಾಯಿಯ ಮನಸ್ಸು ಭಗವಂತನಲ್ಲಿ ತಲ್ಲೀನವಾಗಲಿ ಎಂಬ ಕಾರಣಕ್ಕಾಗಿ ಹೊರಡುವುದಕ್ಕೂ ಮುನ್ನ ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹವೊಂದನ್ನು ಸ್ಥಾಪಿಸಿ "ಅಮ್ಮನನ್ನು ನೀನೇ ನೋಡಿಕೋ" ಎಂದು ಪ್ರಾರ್ಥಿಸಿದರು.

ಕಾಲಟಿಯ ಕೇಶವ ದೇವಸ್ಥಾನಕ್ಕೆ ಬಂದು ಅಲ್ಲಿ ಪ್ರಾರ್ಥಿಸಿದರು. ಸೇರಿದ್ದ ಊರ ಜನರಿಗೆ ಬಾಲಸನ್ಯಾನಿ ಶಂಕರರು ಎಲ್ಲಿಗೆ ಹೋಗುವರೆಂಬುದೇ ತಿಳಿಯದಾಯಿತು! "ಕೀರ್ತಿಶಾಲಿಯಾಗು ಮಗನೇ" ಎಂಬ ಅಮ್ಮನ ಅಶೀರ್ವಾದವನ್ನು ಹೊತ್ತ ಶಂಕರರು ಧರ್ಮದಿಗ್ವಿಜಯವನ್ನು ಆರಂಭಿಸಿದ್ದರು! ಕಾಲಟಿಯಲ್ಲಿ ಪುರಜನರು ಪರಿಜನರು ಅಬಾಲವೃದ್ಧರಾದಿಯಾಗಿ ಎಲ್ಲರೂ ಬಾಲಸನ್ಯಾಸಿಯನ್ನೇ ನೋಡುತ್ತಿದ್ದರು. ಎಲ್ಲರಲ್ಲೂ ಹೇಳಿಕೊಳ್ಳಲಾಗದ ದುಗುಡ, ಅತಂಕವಿತ್ತು; ಬಾಲ ಶಂಕರರನ್ನು ಬಹಳಕಾಲ ಬಿಟ್ಟಿರಲಾರದ ಅನ್ಯೋನ್ಯತೆಯಿತ್ತು. ಎಲ್ಲರೂ ನೋಡುತ್ತಿರುವಂತೆಯೇ ಜ್ಞಾನದಾಹಿಯಾದ ಶಂಕರರು ಕಾಡಿನ ದಾರಿ ಹಿಡಿದು ಮುನ್ನಡೆದರು. ಭರತಭೂಮಿಯ ಪುಣ್ಯದ ಫಲವಾಗಿ ಮಹಾನ್ ದಾರ್ಶನಿಕನೊಬ್ಬನ ಉಗಮವಾಗಿತ್ತು. ಅದು ದೈವೀ ಸಂಕಲ್ಪವಾಗಿತ್ತು. ನವಸಿದ್ಧಾಂತವೊಂದನ್ನು ಪ್ರತಿಪಾದಿಸುವ ಮಹಾಪುರುಷನೊಬ್ಬ ಬಾಲಶಂಕರನಾಗಿ ದಟ್ಟಕಾನನದೆಡೆಗೆ ನಡೆದ.


ಬಾಲಕ ಶಂಕರ ಮಾತೆಗೆ ನಮಿಸುತ
ಕಾಲದಿ ಬೇಡಿದ ದೀಕ್ಷೆಯನು |
ಆಲಯಗಳೇ ತನ್ನರಮನೆಯೆನ್ನುತ
ಜಾಲದಿ ಮುಕ್ತಿಯ ಬಯಸಿದನು ||

ಕಾಲಟಿ ಗ್ರಾಮದ ಪೂರ್ಣಾನದಿಯೊಳು
ಕಾಲನು ಮೊಸಳೆಯು ಹಿಡಿದಿರಲು |
ವಾಲುತ ನೀರೊಳಗಮ್ಮನ ಕರೆದೂ
ಕಾಲನ ಧರ್ಮವನರುಹಿದನು ||

ಆಲಿಸಿ ಮರುಗಿದ ಅಮ್ಮನ ಕರುಳಿಗೆ
ಪಾಲಿಸೆ ನ್ಯಾಸವ ನೀಡೆನಲು |
ಸೋಲುತಲೊಪ್ಪಿದ ತಾಯಿಗೆ ಮೂರ್ಛೆಯು
ಲೀಲೆಯು ಮಕರವು ತೊಲಗಿಹುದು!

ಮೇಲೇಳುತ ಸನ್ಯಾಸಿಯು ನಡೆದನು
ಮೂಲದ ರೂಪವ ಕಾಣುವೊಲು |
ಬಾಲನ ಬಿಟ್ಟಿರಲಾರದ ಜನತೆಯು
ಕಾಲಟಿಯಲಿ ಕಣ್ಣೀರ್ಗರೆದು ||

ಜಯಜಯ ಶಂಕರ ಹರಹರ ಶಂಕರ
ಜಯಜಯ ಶಂಕರ ಪಾಲಯ ಮಾಂ |
ಜಯಜಯ ಶಂಕರ ಭವಬಂಧನಹರ
ಜಯಜಯ ಶಂಕರ ರಕ್ಷಯ ಮಾಂ ||

Wednesday, March 21, 2012

ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ...

ಚಿತ್ರಕೃಪೆ: ಶುಭಾಶಯ.ಕಾಂ
ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ...

ಸೋಮಾಲಿಯಾದ ಕಳ್ಳರು ಸೆರೆಹಿಡಿದು ಆತನನ್ನೂ ಆತನ ಜೊತೆಗಾರರನ್ನೂ ಹಡಗಿನಲ್ಲೇ ಬಂಧಿಸಿದ್ದರು. ಅನ್ನ-ನೀರು ಸರಿಯಾಗಿ ಇಲ್ಲದೇ ಮೂರುಹಗಲು ಮೂರು ರಾತ್ರಿ ಕಳೆದುಹೋಗಿತ್ತು. ಶರೀರ ನಿತ್ರಾಣವಾಗಿತ್ತು. ಸಿರಿವಂತ ವ್ಯಾಪಾರಿಯ ಉದ್ಯೋಗಿಯಾಗಿ ಯಾಕಾದರೂ ಸೇರಿಕೊಂಡೆನೋ ಎನ್ನಿಸಿಬಿಟ್ಟಿತ್ತು. ಆತ ಮಲಗೇ ಇದ್ದ. ಜೊತೆಗಾರರನ್ನೂ ಅದೇ ಹಡಗಿನಲ್ಲಿ ಎಲ್ಲೆಲ್ಲೋ ಬಂಧಿಸಲಾಗಿತ್ತು. ನಾಳೆ ಬೆಳಗಾದರೆ ತಮ್ಮೆಲ್ಲರನ್ನೂ ಕೊಲ್ಲುವುದಾಗಿ ಹೇಳಿದ್ದನ್ನು ಆತ ಕೇಳಿದ್ದ. ಭಾರತ ಸರಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮನ್ನು ಕಳ್ಳರು ಹೈಜಾಕ್ ಮಾಡಿ ಬಂಧಿಸಿದ ವರದಿ ತಲ್ಪಿದೆಯೋ ಇಲ್ಲವೋ ತಿಳಿದಿರಲಿಲ್ಲ. ಭಾರತೀಯ ನೌಕಾಪಡೆಯ ತುಕಡಿಗಳನ್ನಾದರೂ ಕಳಿಸಿ ತಮ್ಮನ್ನೆಲ್ಲಾ ರಕ್ಷಿಸಿ ಕರೆದೊಯ್ಯಬಹುದಿತ್ತಲ್ಲ ಎಂದು ಆತ ಯೋಚಿಸುತ್ತಿದ್ದ.

ಕಳ್ಳರು ಸಾಮಾನ್ಯ ಕ್ರೂರಿಗಳಾಗಿರಲಿಲ್ಲ; ಹಿಡಿದ ಜನರನ್ನು ಏನೂ ಮಾಡಲು ಹೇಸದ ಜನ ಅವರಾಗಿದ್ದರು. ಮನುಷ್ಯರನ್ನೇ ಕೊಂದು ತಿಂದು ಬದುಕಬಹುದಾದ ಮಾನವರೇ ಅಲ್ಲದ ರಕ್ಕಸರು ಅವರು. ಒಬ್ಬೊಬ್ಬರೂ ಯಮದೂತರಂತೇ ಕಾಣುತ್ತಿದ್ದರು. ಅವರ ಕೆಂಗಣ್ಣುಗಳನ್ನು ನೆಟ್ಟಗೆ ನೋಡಲು ಹೆದರಿಕೆಯಾಗುತ್ತಿತ್ತು. ಉದ್ದುದ್ದ ಬೆಳೆದ ಉಗುರುಗಳು ಬಾಕುಗಳಂತೇ ಕೆಲಸಮಾಡುತ್ತಿದ್ದವು. ಮೊಂಡುತಲೆಯ ಕುರುಚಲು ಕೂದಲು, ಚಿತ್ರವಿಚಿತ್ರ ಗತಿಯ ಗಡ್ಡ-ಮೀಸೆಗಳು, ನಾರುವ ಜೀನ್ಸು ದಿರಿಸುಗಳು ಇವುಗಳನ್ನೆಲ್ಲಾ ನೋಡಿದಾಗ ಬಹಳ ಅಸಹ್ಯವಾಗುತ್ತಿತ್ತು. ಬದುಕಿನ ಕೊನೆಗಳಿಗೆ ಬಂದೇಬಿಡುತ್ತದೆಂದು ಕನಸಲ್ಲೂ ಎಣಿಸದ ಆತ ಪಶ್ಚಾತ್ತಾಪ ಪಡುತ್ತಿದ್ದ. ತಾನು ಸತ್ತರೆ ಹೆಂಡತಿ-ಮಕ್ಕಳ ಗತಿ ಮುಂದೇನು ಎಂಬ ಚಿಂತೆಯಲ್ಲಿ ಹೊಟ್ಟೆಯ ಹಸಿವೂ ಅಡಗಿಹೋಗಿತ್ತು! ನಿರ್ದಯಿಗಳ ಕೂಗು-ಘರ್ಜನೆ ಸದಾ ನಡೆದೇ ಇತ್ತು. ಆಗಾಗ ಪಿಸ್ತೂಲಿನಿಂದ ಸಿಡಿಯುವ ಗುಂಡುಗಳ ಸದ್ದು ಕೇಳಿಸುತ್ತಿತ್ತು. ಅದು ಯಾರು ಯಾರಿಗೆ ಹಾರಿಸಿದ್ದು ಎಂಬುದು ಮಾತ್ರ ಗೊತ್ತಾಗುತ್ತಿರಲಿಲ್ಲ.

ಕಳ್ಳರಲ್ಲಿ ಒಬ್ಬಾತನಿಗೆ ವಿಪರೀತ ಚರ್ಮರೋಗ-ಕುಷ್ಠ. ತುರಿಸೀ ತುರಿಸೀ ಅಲ್ಲಲ್ಲಿ ಚಿಕ್ಕ ಚಿಕ್ಕ ಗಾಯಗಳಾಗಿ ರಕ್ತ ಒಸರುತ್ತಿತ್ತು. ಹತ್ತಿರಬಂದ ಆ ಕಳ್ಳನನ್ನು ಆತ ಚೆನ್ನಾಗಿ ಗಮನಿಸಿದ್ದ. ಹೇಗಾದರೂ ತನಗೆ ಜೀವದಾನವಾಗಬಹುದೇ ಎಂಬ ಕೊನೇ ಆಸೆಯಿಂದ ರೋಗಿಷ್ಟ ಕಳ್ಳನಿಗೆ ಉಪಚರಿಸಲೋ ಎಂಬಂತೇ ಇದ್ದಬದ್ದ ಧೈರ್ಯ ಸೇರಿಸಿ ಹತ್ತಿರಕ್ಕೆ ಕರೆದ. ಮೈ ಕೆರೆದು ಕೊಳ್ಳುತ್ತಾ ಹತ್ತಿರಬಂದ ಆ ಕಳ್ಳನಿಗೆ ತನ್ನಲ್ಲಿ ಔಷಧವಿದೆ ಎಂದ! ಕಳ್ಳ ಕ್ಷಣಕಾಲ ಆತನನ್ನು ನಂಬದಾದ. ಬೆಂಗಳೂರಿನಲ್ಲಿರುವಾಗ ಆತ ಮಲ್ಲೇಶ್ವರದಲ್ಲಿರುವ ಮಾರ್ಗೋಸ ರಸ್ತೆಯಲ್ಲಿ ಅನೇಕ ಸಲ ಓಡಾಡಿದ್ದಿದೆ. ’ಮಾರ್ಗೋಸ’ ಎಂದರೆ ನಿಂಬಕ ಅರ್ಥಾತ್ ಕಹಿಬೇವಿಗೂ ಹಾಗೆ ಹೇಳುತ್ತಾರೆ ಎಂಬುದನ್ನು ಆತ ಕುತೂಹಲಿಯಾಗಿ ಅರಿತಿದ್ದ. ಒಂದುಕಾಲದಲ್ಲಿ ಆ ರಸ್ತೆಯ ಇಕ್ಕೆಲಗಳಲ್ಲೂ ಕಹಿಬೇವಿನ ಮರಗಳೇ ಇದ್ದವೋ ಏನೋ! ಯಾಕೋ ಜಾಸ್ತಿ ಚಕಿತನಾಗಿ ನಿಂಬಕದಳಗಳ ಬಹೂಪಯೋಗಿ ಪರಿಣಾಮಗಳ ಬಗ್ಗೆ ಅರಿತಿದ್ದ. ಅಲ್ಲಿಂದಾಚೆ ಅನೇಕರಿಗೆ ಬೇವಿನ ಎಲೆಗಳ ಉಪಯೋಗದ ಬಗ್ಗೆ ತಿಳಿಸಿ ಹೇಳಿಯೂ ಇದ್ದ. ಮನೆಯಲ್ಲಿ ಬೇವಿನ ಎಣ್ಣೆ, ಬೇವಿನ ಹಿಂಡಿ, ಬೇವಿನ ಸೊಪ್ಪು ಇವುಗಳ ಉಪಯೋಗ ಆಗಾಗ ಜಾರಿಯಲ್ಲಿಟ್ಟಿದ್ದ. ಬೇವಿನ ಎಣ್ಣೆ ಚರ್ಮರೋಗಕ್ಕೆ ರಾಮಬಾಣ ಎನ್ನುವುದನ್ನು ಅರಿತ ಆತ ಕ್ರೂರಿಯಾದ ಕಳ್ಳನ ಮನಗೆಲ್ಲಲು ಆ ಅಸ್ತ್ರವನ್ನು ಬಳಕೆಮಾಡಿದ!

ತನ್ನ ಬ್ಯಾಗಿನಲ್ಲಿದ್ದ ಚಿಕ್ಕ ಬೇವಿನೆಣ್ಣೆ ಬಾಟಲಿ ತೆಗೆದು ಹಚ್ಚಿಕೊಳ್ಳುವಂತೇ ತಿಳಿಸಿ, ಶೀಘ್ರ ವಾಸಿಯಾಗಲಿ ಎಂದು ಹಾರೈಸಿ ಕಳ್ಳನಿಗೆ ಕೈಮುಗಿದಿದ್ದ.ಒಮ್ಮೆ ಕಾಡುಕೋಣದಂತೇ ತೀಕ್ಷ್ಣದೃಷ್ಟಿ ಬೀರಿದರೂ ಏನೋ ಇರಬೇಕೆಂದು ಬೇವಿನೆಣ್ಣೆಯ ಸೇವೆ ಪಡೆದ ರೋಗಿಷ್ಟ ಕಳ್ಳ ಆತನ ವಿಷಯದಲ್ಲಿ ಚಣಕಾಲ ತುಸು ಮೆತ್ತಗಿದ್ದ. ಕಳ್ಳ ಸ್ವಲ್ಪ ನಿರುಮ್ಮಳನಾಗಿರಲು ಅನುಮತಿಸಿದ ಕೊಡಲೇ ಆಯಾಸದಿಂದ ಆತನಿಗೆ ನಿದ್ದೆ ಬಂದುಬಿಟ್ಟಿತು.

ಗೋಕುಲದಲ್ಲಿ ಯುಗಾದಿಯ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಹೇಳೀಕೇಳೀ ಚಂದ್ರವಂಶ, ಕೇಳಬೇಕೇ? ಚಾಂದ್ರಮಾನ ಯುಗಾದಿಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿಬಿಟ್ಟಿತ್ತು. ಎಲ್ಲಿ ನೋಡಿದರೂ ಮಾವು-ಬೇವಿನ ತಳಿರುತೋರಣ, ಬಣ್ಣಬಣ್ಣದ ರಂಗೋಲಿಗಳು, ಊರಿಗೆ ಊರೇ ಸ್ನಾನಮಾಡಿ ಹೊಸಬಟ್ಟೆತೊಟ್ಟಂತೇ ಅನಿಸುತ್ತಿತ್ತು. ಹೆಂಗಳೆಯರೆಲ್ಲಾ ಬೆಳ್ಳಂಬೆಳಿಗ್ಗೆಯೇ ತಲೆಸ್ನಾನವನ್ನೂ ಪೂರೈಸಿಕೊಂಡು ಕೂದಲು ಝಾಡಿಸಿಕೊಳ್ಳುತ್ತಾ ಕಟ್ಟಿಕೊಳ್ಳುತ್ತಾ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರು. ಸೂರ್ಯನನ್ನು ಪೂಜಿಸುವವರು, ಸೂರ್ಯನಿಗೆ ಅರ್ಘ್ಯ ನೀಡುತ್ತಿರುವವರು, ದೇವರ ಪೂಜೆ ನಡೆಸಿದವರು, ತುಳಸೀ ಪೂಜೆಯಲ್ಲಿ ನಿರತರಾದವರು, ಬೇವು-ಬೆಲ್ಲ ನೈವೇದ್ಯಕ್ಕೆ ಅಣಿಗೊಳಿಸಿದವರು, ಬಿಸಿಬಿಸಿ ಹೋಳಿಗೆಗೆ ತಯಾರಿ ನಡೆಸುವವರು, ಹೊಸಬಟ್ಟೆ ತೊಟ್ಟು ಹೊರಗಡೆ ಆಟದಲ್ಲಿ ನಿರತರಾದ ಮಕ್ಕಳು, ಹಾಡುಹಾಡುತ್ತಿರುವ ನಡುವಯಸ್ಸು ಮೀರಿದ ಕೆಲ ಹೆಂಗಸರು, ಪಂಚಾಂಗ ಶ್ರವಣಮಾಡಲು ಪುರೋಹಿತರನ್ನು ಕರೆತರಲು ತೆರಳಿದ ಜನ....ಒಂದೇ ಎರಡೇ ಎಲ್ಲೆಲ್ಲೂ ಯುಗಾದಿಯ ಭರ್ಜರಿ ಗಮ್ಮತ್ತು ಕಾಣುತ್ತಿತ್ತು.

ಬಿರುಬೇಸಿಗೆಯು ಹರವಿಕೊಳ್ಳುತ್ತಿದ್ದರೂ ಪರಿಪರಿಯ ಪುಷ್ಪಗಳು ಅರಳಿ ಘಮಘಮಿಸುತ್ತಿದ್ದವು. ಮಳೆನೀರಿನ ಹಂಗನ್ನೇ ತೊರೆದ ಗಿಡಮರಗಳು ಎಲೆಯುದುರಿಸಿ ಮತ್ತೆ ಚಿಗುರಿ ತಾಜಾ ತಾಜಾ ಹಸಿರು ಎಲೆಗಳಿಂದ ಮಘಮಘಿಸುತ್ತಿದ್ದವು;ಕಂಗೊಳಿಸುತ್ತಿದ್ದವು. ಆ ಇಡೀ ವಸುಂಧರೆ ವರ ವಸಂತನ ಆಗಮನವಾಗುವಾಗ ಸ್ವಾಗತಿಸಲು ಅಣಿಗೊಂಡ ವಧುವಿನಂತೇ ಕಾಣುತ್ತಿದ್ದಳು! ಕೋಗಿಲೆಗಳು ಚಿಗುರೆಲೆಯ ರಸವನ್ನು ಹೀರುತ್ತಾ ಕುಹೂ ಕುಹೂ ಎಂದು ಇಂಪಾಗಿ ಕೂಗುತ್ತಿದ್ದವು. ತುಸುಮೋಡವೂ ಆಗಾಗ ಕಾಣಿಸಿಕೊಂಡು, ಮೋಡಗಳನ್ನು ನೋಡಿದ ನವಿಲುಗಳ ಲಾಸ್ಯವೂ ಅಲ್ಲಲ್ಲಿ ಕಂಡುಬರುತ್ತಿತ್ತು. ಹಲಸು, ಮಾವು, ಬಾಳೆ, ಚಿಕ್ಕು, ಕಿತ್ತಳೆ, ಮೂಸಂಬಿ, ಅನಾನಸು, ಹೀಗೇ ತೆಂಗು-ಕಂಗು ಕಪಿತ್ಥ ಕದಳೀ ಎಲ್ಲಾ ಅಂಗೋಡಂಗ ಫಲಭರಿತ ಮರಗಳೆಲ್ಲಾ ತೂಗಿ ತೊನೆಯುತ್ತಿದ್ದವು. ಎಲ್ಲವೂ ಸರಿಯಾಗಿದೆ ಎನ್ನುವಾಗ ಯಾರೋ ಕೃಷ್ಣ ಮಾತ್ರ ಕಾಣಿಸುತ್ತಲೇ ಇಲ್ಲಾ ಎಂದು ಕೂಗಿದರು. ಅಷ್ಟರಲ್ಲಿ ಅಲ್ಲಿದ್ದ ಆತನೂ ಕೃಷ್ಣನನ್ನು ಹುಡುಕುತ್ತಾ ಹುಡುಕುತ್ತಾ ಸುತ್ತತೊಡಗಿದ.

ಗೊಲ್ಲ ಗೋವಳರು, ಗೋಪಿಕಾಸ್ತ್ರೀಯರು, ಪುರಜನರು ಪರಿಜನರು ಎಲ್ಲರ ಬಾಯಲ್ಲೂ ಅದೇ ಉದ್ಗಾರ "ಎಲ್ಲಿ ನಮ್ಮ ಕೃಷ್ಣ? ಎಲ್ಲಿ ನಮ್ಮ ಕೃಷ್ಣ?" ಯಾರು ಎಷ್ಟೇ ಹುಡುಕಿದರೂ ಕೃಷ್ಣ ಕಾಣಿಸಲೇ ಇಲ್ಲ. ಮುರಳಿಯನ್ನು ಬಚ್ಚಿಟ್ಟ ಮುರಳಿ ತೆರಳಿಬಿಟ್ಟಿದ್ದನೆಲ್ಲಿಗೋ ಹೊರಳಿ! ಯಾರೋ ದಾಸರಪದವನ್ನೂ ಹಾಡಿದರು..

ಪಿಳ್ಳಂಗೋವಿಯ ಚೆಲ್ವ ಕೃಷ್ಣನ
ಎಲ್ಲಿ ನೋಡಿದಿರಿ ?
ರಂಗನ ಎಲ್ಲಿ ನೋಡಿದಿರಿ ?

ನಂದಗೋಪನ ಮಂದಿರಗಳಲ್ಲಿ, ಅಂದದ ಆಕಳುಗಳ ಚಂದದ ಕರುಗಳ ಮಂದೆಮಂದೆಗಳಲ್ಲಿ, ಸುಂದರಾಂಗದ ಸುಂದರೀಯರ ಹಿಂದು-ಮುಂದಿನಲಿ, ಆ ಪ್ರದೇಶದ ಸಂದುಗೊಂದುಗಳಲ್ಲಿ...ಎಲ್ಲೆಲ್ಲಿ ಹುಡುಕಿದರೂ ಕೃಷ್ಣ ಸಿಗಲೇ ಇಲ್ಲ! ಆತ ತನಗೆ ಗೊತ್ತಿರುವ ಜಾಗದಲ್ಲೆಲ್ಲಾ ಹುಡುಕಾಡಿದ. ಯುಗಾದಿ ಇನ್ನೇನು ಮುಗಿದೇ ಹೋಯ್ತು ಅನ್ನುವಂತೇ ಸಂಜೆಯಾಗಿಬಿಟ್ಟಿತು.

ಕತ್ತಲಾವರಿಸಿದಾಗ ಕಂದೀಲು ಹಚ್ಚಿದ ಆತ ಅದನ್ನೇ ಹಿಡಿದು ಗೋಪಾಲನನ್ನು ಹುಡುಕತೊಡಗಿದ. ಆತನ ಮನೆಯ ಹತ್ತಿರದ ಗುಡ್ಡದ ಬದಿಯಲ್ಲಿ ನಿಂತು ಭಕ್ತಿಯಿಂದ ಕರೆದ"ಕೃಷ್ಣಾ ಹೇ ಕೃಷ್ಣಾ ಬರಲಾರೆಯಾ ಹರಿಯೇ? ನಿನಗಾಗಿ ಹೋಳಿಗೆ, ಪಾಯಸ, ಪಂಚಭಕ್ಷ್ಯ ಪರಮಾನ್ನಗಳನ್ನು ಮಾಡಿಟ್ಟಿದ್ದೇವೆ. ನಿನಗಾಗಿ ಹೊಸಬಟ್ಟೆ ತಂದಿದ್ದೇವೆ. ಊರ ಜನರೆಲ್ಲಾ ನಿನ್ನನ್ನು ಕಾಣದೇ ಹಬ್ಬದ ಸಡಗರವನ್ನೇ ಮರೆತಿದ್ದಾರೆ. ಕಟ್ಟಿದ ತೋರಣ ನೀನಿಲ್ಲದೇ ಕಳಾಹೀನವಾಗಿದೆ. ಯಾರಿಗೂ ಇಂದು ಊಟ ರುಚಿಸುತ್ತಿಲ್ಲ. ಹೇ ಮಾಧವಾ ಬರಲಾರೆಯಾ ?"

ಆತನ ಭಕ್ತಿಯ ಕೂಗಿಗೆ ಅದೆಲ್ಲಿಂದಲೋ ಕೃಷ್ಣ ಗುಡ್ಡದ ಇಳಿಜಾರಿನಲ್ಲಿ ನಡೆದು ಬಂದೇಬಿಟ್ಟ! ನೀಲಮೇಘಶ್ಯಾಮ ತಾನು ಧರಿಸಿದ್ದ ಜರಿಯ ಪೀತಾಂಬರವನ್ನು ಅಲ್ಲಾಡಿಸುತ್ತಾ, ಸುಗಂಧಭರಿತ ಹೂಗಳ ಉದ್ದದ ಮಾಲೆಯನ್ನು ಕೈಯ್ಯಲ್ಲಿ ಸರಿಸಿ ಹಿಡಿಯುತ್ತಾ ಇನ್ನೊಂದು ಕೈಲಿ ಕೊಳಲನ್ನು ಹಿಡಿದ ಶ್ರೀಕೃಷ್ಣ ಆತನ ಕರೆಯನ್ನು ಕೇಳಿದ್ದ ಮಾತ್ರವಲ್ಲ ಬಹಳ ಪ್ರೀತಿಯಿಂದ ಆತನಲ್ಲಿಗೆ ಬಂದ. ಕಾರಿರುಳ ಕತ್ತಲ ದಾರಿಯಲ್ಲಿ ಕಲ್ಲು-ಮುಳ್ಳು ತಗುಲಿ ಕೃಷ್ಣನಿಗೆ ತೊಂದರೆಯಾದೀತೆಂದು ತನ್ನ ಕೈಲಿದ್ದ ಕಂದೀಲನ್ನು ಆತ " ಕಾಣಿಸುತ್ತಿದೆಯೇ ಈಗ ಸರಿಯಾಗಿ ಕಾಣಿಸುತ್ತಿದೆಯೇ ?" ಎಂದು ಜಗದೋದ್ಧಾರಕ ಕೃಷ್ಣನಿಗೇ ದಾರಿ ತೋರಿಸುತ್ತಾ ಊರೊಳಗೆ ಕರೆತರುತ್ತಿದ್ದ. ಹಬ್ಬದ ಸಡಗರದ ಅಬ್ಬರ ಆ ರಾತ್ರಿಯಲ್ಲೂ ಕೇಳಿಬರುತ್ತಿತ್ತು. ಜನ ಅಲ್ಲಲ್ಲಿ ಹಾಡುಗಳಲ್ಲೂ ಭಜನೆಗಳಲ್ಲೂ ನಿರತರಾಗಿದ್ದರು. ಕೆಲವರು ಸಿಗುವ ಎಲ್ಲಾ ಹಣ್ಣು-ಹಂಪಲುಗಳನ್ನು ತಂದು ರಾಶಿಹಾಕಿ ದೇವರಿಗೆ ವಸಂತಪೂಜೆಯನ್ನು ಕೈಗೊಂಡಿದ್ದರು.

ಯಾರಿಗೂ ಕಾಣದ ಕೃಷ್ಣ ಆತನಿಗೆ ಕಂಡಿದ್ದೂ ತನ್ನ ಜೊತೆಯಲ್ಲೇ ಬರುತ್ತಿರುವುದೂ ಆತನಿಗೆ ಹೇಳಿಕೊಳ್ಳಲಾಗದಷ್ಟು ಸಂತೋಷವನ್ನುಂಟುಮಾಡಿತ್ತು. ಬಹುದೊಡ್ಡ ಸಾಧನೆಯನ್ನು ಮಾಡಿದ ವ್ಯಕ್ತಿಯಂತೇ ಆತ ತನ್ನೊಳಗೇ ಏರಿಬಿಟ್ಟಿದ್ದ. "ಯಾರ್ಯಾರಿಗೂ ಕಾಣದಿದ್ದ ಕೃಷ್ಣ ತಾನು ಕರೆದಾಗ ಬಂದಿದ್ದಾನೆ ನೋಡಿ ಇಗೋ ಇಲ್ಲಿ" ಎಂದು ತಿರುಗಿ ಮಗ್ಗುಲಾದ ಬಡವನಿಗೆ ಬೆಂಗಳೂರಿನ ಮಲ್ಲೇಶ್ವರದ ಯುಗಾದಿಯ ದಿನದ ಬೆಳಗು ಸ್ವಾಗತಿಸುತ್ತಿತ್ತು!

ಕನಸುಗಳನ್ನು ಕಾಣುತ್ತಿದ್ದ ಆತನಿಗೆ ಒಂದಂತೂ ಸತ್ಯವೆನಿಸಿತು. ಈ ಜೀವನವೇ ಹೀಗೆ : ಸುಖ-ದುಃಖಗಳ ಸಮ್ಮಿಶ್ರಣ. ಅದನ್ನು ತಾತ್ವಿಕವಾಗಿ ಸಾಂಕೇತಿಕವಾಗಿ ಅನುಭವಿಸಲು ಸಿದ್ಧರಾಗುವುದಕ್ಕಾಗಿ ಯುಗಾದಿಯ ದಿನ ಬೇವು-ಬೆಲ್ಲವನ್ನು ತಿನ್ನುತ್ತೇವೆ. ’ಸರ್ವರೋಗನಿವಾರಿಣಿ’ ಎಂಬ ಬಿರುದು ಪಡೆದ ಆಯುರ್ವೇದೀಯ ಔಷಧ ವಸ್ತು ನಿಂಬಕದಳ ಅಥವಾ ಕಹಿಬೇವಿನ ಎಲೆ. ಬೇಸಿಗೆಯ ಆರಂಭದಲ್ಲಿ ಸಿಡುಬು, ಮೈಲಿ, ದಡಾರ, ಗೋಣಿ[ಚಾಪೆ] ಇತ್ಯಾದಿ ಹಲವು ಚರ್ಮವ್ಯಾಧಿಗಳು ಎಡತಾಕಬಹುದು. ಅಂತಹ ಎಲ್ಲಾ ವ್ಯಾಧಿಗಳಿಗೂ ಸೇರಿದಂತೇ ಹಲವು ಕಾಯಿಲೆಗಳಿಗೆ ಪರಿಹಾರ ಕಹಿಬೇವಿನಲ್ಲಿದೆ. ನಿತ್ಯದ ಹಲ್ಲುಜ್ಜುವ ಪ್ರಕ್ರಿಯೆಯಿಂದ ಹಿಡಿದು ಮಹಾಮಾರೀ ರೋಗಗಳನ್ನು ಹತ್ತಿಕ್ಕುವವರೆಗೆ ಬೇಕಾದ, ನೈಸರ್ಗಿಕವಾದ, ಉತ್ಕೃಷ್ಟ ಔಷಧ ಇದರಲ್ಲಿದೆ. ಆ ಮಹತ್ವವನ್ನು ಯುಗಾರಂಭವಾದ ದಿನದ ನೆಪದಲ್ಲೇ ನೆನಪಿಸುವ ಕ್ರಮವನ್ನು ಪೂರ್ವಜರು ಜಾರಿಯಲ್ಲಿಟ್ಟರು. ಸೃಷ್ಟಿಕರ್ತ ಭಗವಂತ ತನ್ನ ಸೃಷ್ಟಿಯಲ್ಲೇ ಆಹಾರಗಳನ್ನೂ ಔಷಧಗಳನ್ನೂ ಇಟ್ಟಿದ್ದಾನೆ. ಮನುಷ್ಯ ಎಂಬ ಪ್ರಾಣಿಗೆ ಬಹುಮಟ್ಟಿಗೆ ಸ್ವೇಚ್ಛೆಯಿಂದ ಕರ್ಮಗಳನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾನೆ! ಕರ್ಮಗಳಿಗೆ ತಕ್ಕ ಫಲವನ್ನು ಕರುಣಿಸುವ ಭಾರವನ್ನೂ ಹೊತ್ತಿದ್ದಾನೆ.

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲೇ ಆಹಾರವಿತ್ತವರು ಯಾರು?

ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು ?

ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದಮೇಲೆ
ಕೊಟ್ಟುರಕ್ಷಿಪನದಕೆ ಸಂದೇಹಬೇಡ..

ತಲ್ಲಣಿಸದಿರು ಕಂಡ್ಯ ತಾಳು ಮನವೇ .. ಎಂದಿದ್ದಾರೆ ಕನಕರು.

ಕಷ್ಟವೆಂದು ಕುಗ್ಗುವುದೂ ಬೇಡ, ಸುಖವೆಂದು ಹಿಗ್ಗುವುದೂ ಬೇಡ. ಈ ಮೇಲಿನ ಕನಸುಗಳ ಹಂದರದಲ್ಲೇ ವ್ಯಕ್ತಿ ಕಳ್ಳರೊಡನಿದ್ದಾಗ ನೊಂದಿದ್ದೂ ಕೃಷ್ಣನನ್ನು ಕಂಡಾಗ ನಲಿದಿದ್ದೂ ಕಾಣುತ್ತೇವಷ್ಟೇ? ಬದುಕು ಈ ಎರಡರ ಸಮ್ಮಿಶ್ರಣ ಬೇವು-ಬೆಲ್ಲದಂತೇ ಎಂಬುದು ಯುಗಾದಿಯ ಸಂದೇಶವಾಗಿದೆ. ಬಹುಸಂಖ್ಯಾಕ ಭಾರತೀಯರಿಗೆ ಚೈತ್ರಮಾಸದ ಶುಕ್ಲಪಕ್ಷನ ಪಾಡ್ಯವೇ ಯುಗಾದಿಯಾಗಿದೆ. ಇದು ಚಾಂದ್ರಮಾನ ಯುಗಾದಿ; ಚಂದ್ರನನ್ನು ಲೆಕ್ಕಿಸಿ ಲೆಕ್ಕ ಇಡುವ ಖಗೋಳ ಗಣಿತ ಪದ್ಧತಿ! ಇನ್ನೊಂದು ಸೌರಮಾನ ಯುಗಾದಿ; ಸೂರ್ಯನನ್ನು ಆಧರಿಸಿ ಲೆಕ್ಕ ಇಡುವಂಥದ್ದು. ತಮಿಳುನಾಡು, ತುಳುನಾಡು ಮತ್ತು ಕೇರಳಗಳಲ್ಲಿ ಮಾತ್ರ ಸೌರಮಾನ ಯುಗಾದಿಯ ಆಚರಣೆ ಇದೆ. ಕ್ರಿಸ್ತ ಹುಟ್ಟುವುದಕ್ಕೂ ೩೧೦೦ಕ್ಕೂ ಹೆಚ್ಚು ವರ್ಷಗಳ ಮುಂಚೆಯೇ ಕಲಿಯುಗ ಆರಂಭವಾಯ್ತಂತೆ. ಕಲಿಯುಗಕ್ಕೆ ಇರುವ ಅವಧಿ ೫೦,೦೦೦ ವರ್ಷಗಳು ಎನ್ನುತ್ತಾರೆ ಕೆಲವರು. ಯುಗಾಬ್ದ ಎಂಬ ಗುಣಕ ಪ್ರತೀವರ್ಷ ಅದನ್ನು ಲೆಕ್ಕಿಸುತ್ತಲೇ ಇರುತ್ತದೆ.

ಯುಗವೊಂದಕ್ಕೆ ನಾಲ್ಕು ಪಾದಗಳು.ಕಲಿಯುಗೇ-ಪ್ರಥಮಪಾದೇ, ಭರತಖಂಡೇ, ಭರತವರ್ಷೇ, ಭಾರತದೇಶೇ, ಶ್ರೀಮದ್ಗೋದಾವರ್ಯಾಃ ದಕ್ಷಿಣೇ ತೀರೇ, ಭಾಸ್ಕರಕ್ಷೇತ್ರೇ/ಶ್ರೀರಾಮಕ್ಷೇತ್ರೇ .... ಈಗಿನ್ನೂ ನಾವು ಕಲಿಯುಗದ ಪ್ರಥಮ ಪಾದದಲ್ಲೇ ಇದ್ದೇವೆ ಎಂದು ನಮ್ಮ ದೇಶ-ಕಾಲವನ್ನು ಸಂಕೀರ್ತಿಸುವ ಸಂಕಲ್ಪವೆಂದು ಆಚರಿಸಲ್ಪಡುವ ಮಂತ್ರ ತಿಳಿಸಿಕೊಡುತ್ತದೆ. ಅಂದಮೇಲೆ ಬ್ರಹ್ಮಾಂಡದ ಜ್ಯೋತಿಷಿಗಳು ರೈಲುಬಿಟ್ಟಹಾಗೇ ಸದ್ಯಕ್ಕೆ ಜಗತ್ಪ್ರಳಯ ಆಗುತ್ತದೆ ಎಂಬುದು ಅಲ್ಲಗಳೆದ ಮಾತು! ಹಾಗೂ ಒಂದೊಮ್ಮೆ ಪ್ರಳಯವಾದರೆ ಆಗಲಿ ಬಿಡಿ; ಜಗತ್ತಿನ ಜಂಜಾಟ ಒಮ್ಮೆ ನಿಂತು ಶುದ್ಧವಾಗುತ್ತದೆ. ಜೀವನ ಸುಗಮವಾಗಿ ಸಾಗಬೇಕಾದರೆ ಟಿವಿ ಜ್ಯೋತಿಷಿಗಳನ್ನೂ ಮತ್ತು ವಾಸ್ತುತಜ್ಞರನ್ನೂ ಆದಷ್ಟೂ ದೂರವಿಡಿ ಎಂಬುದು ಯುಗಾದಿಯ ಸಂದರ್ಭದಲ್ಲಿ ನಾನು ಕೊಡುತ್ತಿರುವ ಸಂದೇಶ!

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ
ವಿಹಿತವಾಗಿಹುದವರ ಗತಿ ಸೃಷ್ಟಿ ವಿಧಿಯಿಂ
ಸಹಿಸದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ-ಮಂಕುತಿಮ್ಮ

ಎಂದಿದ್ದಾರೆ ಡೀವೀಜಿ. ಹಣೆಬರಹ ಗರ್ಭದಲ್ಲೇ ನಿರ್ಣಯಿಸಲ್ಪಟ್ಟಿರುತ್ತದೆ. ಅದನ್ನು ಕುಂಡಲಿ ಬರೆಯುವುದರಿಂದ ತಿದ್ದಲು ಸಾಧ್ಯವಾಗುವುದಿಲ್ಲ; ಹೋಮಮಾಡಿದ ಮಾತ್ರಕ್ಕೆ ನೇಮ ಬದಲಾಗುವುದಿಲ್ಲ. ಪಡೆದು ಬಂದಿದ್ದು ನಡೆದೇ ತೀರಬೇಕು. ಶ್ರೀಮಂತನ ಮಾತುಬಾರದ ಮಗನಿಗೆ ಹಣತೆತ್ತು ಮಾತು ಹೊರಡಿಸಲು ಸಾಧ್ಯವೇ? ನೆನೆದರೆ ಆಶ್ಚರ್ಯ ತರುವ ಕ್ರಿಯೆ ಈ ಆಕಾಶ ಕಾಯಗಳ ನಿಯಂತ್ರಣ! ಅದನ್ನು ನಿಯಂತ್ರಿಸುವ ಜಗನ್ನಿಯಾಮಕ ಶಕ್ತಿಯೇ ನಮ್ಮನ್ನೂ ನಮ್ಮ ಹಣೆಬರಹವನ್ನೂ ತಿದ್ದಬೇಕೇ ಶಿವಾಯಿ ಯಾರೋ ಜ್ಯೋತಿಷಿ ಯಾವುದೇ ಯಂತ್ರತಂತ್ರಮಂತ್ರಗಳಿಂದಲೂ ಅದನ್ನು ಬದಲಿಸಲು ಅರ್ಹನಲ್ಲ.

ಪಂಚಾಂಗದ ಪ್ರಕಾರ ನಮ್ಮಲ್ಲಿ ಮುಂಚಿನಿಂದಲೂ ಗೃಹ-ಗೋಷ್ಠ [ಮನೆ-ಕೊಟ್ಟಿಗೆ], ಮಠ ಇವುಗಳನ್ನೆಲ್ಲಾ ಕಟ್ಟಲಿಕ್ಕೆ ಗಜಾಯ, ಸಿಂಹಾಯ ಮೊದಲಾದ ಕೆಲವು ಪದ್ಧತಿಗಳ ಮೂಲಕ ವಾಸ್ತುವನ್ನು ತಿಳಿಸಿದ್ದಾರೆ. ನಿರುಂಬಳವಾಗಿ ಅಥವಾ ಸಲೀಸಾಗಿ ಬದುಕಲು ತೊಡಕು ನೀಡದ ಅರ್ಥಬದ್ಧವ್ಯವಸ್ಥೆಯೇ ವಾಸ್ತು! ಅದು ಅವರವರ ಅನುಕೂಲಕ್ಕೆ ಸಂಬಂಧಿಸಿದ್ದು. ವಾಯುವ್ಯಕ್ಕೆ ಯಾವುದೂ ಭಾರವಾಗುವುದೂ ಇಲ್ಲ, ದಕ್ಷಿಣಕ್ಕೆ ಯಾವುದೂ ಕಮ್ಮಿಯಾಗುವುದೂ ಇಲ್ಲ. ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೇ ಮನೆಗಳನ್ನು ಕಟ್ಟಿಸಿಕೊಂಡಾಗ ಅಲ್ಲಿ ವಾಸ್ತು ಬಂದಿದೆ ಎಂತಲೇ ಅರ್ಥ! ಹೊಸದಾಗಿ ವಾಸ್ತುತಜ್ಞರನ್ನು ಕರೆಸಿ ಮನಸ್ಸಿನಲ್ಲಿ ಹಲ್ಲಿರೋಗ ತಂದುಕೊಳ್ಳಬೇಡಿ!

ಶಕೆ ಎಂದರೆ ಆಳುವ ದೊರೆಯ ಅಥವಾ ವ್ಯಕ್ತಿಯ ಪ್ರಭಾವ/ಪ್ರಭಾವಳಿ ಎಂದರ್ಥ. ಉದಾಹರಣೆಗೆ ವಿಕ್ರಮಾರ್ಕ ಶಕೆ-ಇದು ರಾಜಾ ವಿಕ್ರಮಾದಿತ್ಯನನ್ನು ಸೂಚಿಸುತ್ತದೆ. ಹಿಂದಕ್ಕೆ ಶಾತವಾಹನರು ನಮ್ಮಲ್ಲಿ ಆಳಿದ ಒಂದು ರಾಜಮನೆತನದವರು. ಅವರಲ್ಲಿ ಚಕ್ರವರ್ತಿ ಶಾಲಿವಾಹನನೂ ಒಬ್ಬ. ತನ್ನ ಜೀವಿತಾವಧಿಯಿಂದ ಕಾಲಮಾನವನ್ನು ಅಳೆಯಲಿಕ್ಕೆ ತನ್ನ ಹೆಸರಿನಲ್ಲೇ ಶಕೆಯನ್ನು ಬಳಸಬೇಕೆಂಬ ಇಚ್ಛೆ ಅವನಿಗಿತ್ತು. ಪ್ರಜಾನುರಾಗಿಯಾದ ರಾಜನ ಮನದಿಚ್ಛೆಯನ್ನು ಶಿರಸಾವಹಿಸಿ ಪೂರೈಸಿದ ಅಂದಿನ ಜನ ಶಾಲಿವಾಹನಶಕೆಯನ್ನೇ ಬಳಸಲು ಆರಂಭಿಸಿದರು.

ಸ್ವಸ್ತಿ ಶ್ರೀಮಜ್ಜಯಾಭ್ಯುದಯ ನೃಪಶಾಲಿವಾಹನ ಗತಶಕಾಬ್ದಾಃ ೧೯೩೪, ಶ್ರೀ ವಿಕ್ರಮಾರ್ಕ ಶಕೆ ೨೦೬೮-೬೯, ಗತಕಲ್ಯಾಬ್ದಾಃ ೫೧೧೩, ಶ್ರೀ ನಂದನ ಸಂವತ್ಸರ ಧಾವಿಸಿ ಬರುತ್ತಿದೆ. ಯುಗಾದಿಯ ಹೊಸ್ತಿಲಲ್ಲಿ ನಿಂತು ಜಗದ ಸಮಸ್ತರಿಗೂ ಒಳಿತಾಗಲೆಂದು ಪ್ರಾರ್ಥಿಸಿ ಈ ಕೆಳಗಿನ ಮಂತ್ರದೊಡನೆ ಸಕಲಶುಭವನ್ನೂ ಹಾರೈಸುತ್ತಿದ್ದೇನೆ:

ಶ್ರೀವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ |
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ||

Monday, March 19, 2012

ಸ್ಥಾನ-ಮಾನ-ಸನ್ಮಾನದ ಅಂಗಡಿಮಾಡಿಬಿಟ್ಟರೆ ಹೇಗೆ ?


ಸ್ಥಾನ-ಮಾನ-ಸನ್ಮಾನದ ಅಂಗಡಿಮಾಡಿಬಿಟ್ಟರೆ ಹೇಗೆ?

ಮೊನ್ನೆ ಕೇಂದ್ರ ಬಜೆಟ್ ಕುರಿತು ಬರೆಯಬೇಕೆಂದಿದ್ದೆ, ಯಾವ ಪತ್ರಿಕೆಯಲ್ಲಿ ಯಾವ ಪುಟ ತಿರುವಿದರೂ ಅದೇ ಕತೆ, ಮತ್ತೆ ಅದೇ ಕತೆ ಸುಮ್ನೇ ಯಾಕೆ ಅಂತ ಸುಮನಾಗಿದ್ದೆ. ಬಜೆಟ್ ಎಂಬುದಕ್ಕೆ ಕನ್ನಡಲ್ಲಿ ಇನ್ನೊಂದು ಹೊಸ ಅರ್ಥದ ಪದ ಸೇರಿಸಬೇಕಾಗಿದೆ. ಬಜೆಟ್=ಹುಲಿಹುಣ್ಣಿನ ದುರಸ್ತಿ! ಪ್ರತೀವರ್ಷವೂ ಇದೇ ಕಥೆ-ವ್ಯಥೆ-ಮಾತು ಎಲ್ಲಾ. ಬಜೆಟ್ ಸಮಾಧಾನಕರ ಎಂದು ಎಲ್ಲರಬಾಯಲ್ಲೂ ಹೇಳಿಸುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಕುರ್ಚಿಉಳಿಸಿಕೊಳ್ಳುವ ಬಜೆಟ್‍ನಲ್ಲಿ ಮಿಕ್ಕೆಲ್ಲಾ ಬಜೆಟ್ ಯಾವ ಲೆಕ್ಕ ? ಚುನಾವಣೆ ಬಂತೆಂದರೆ ಆಗ ಒಂಥರಾ ಬಜೆಟ್, ಚುನಾವಣೆ ಆದಮೇಲೆ ಇನ್ನೊಂಥರಾ ಬಜೆಟ್, ಇದು ಕಿತ್ತು-ಕೂಡಿ-ಕಟ್ಟುತ್ತೇವೆ ಎನ್ನುವ ರಾಜಕೀಯದಾಟ. ಹುಲಿಗೆ ಹುಣ್ಣಾದಾಗ "ಛೆ, ನೊಣ ಕೂತು ಜೀವ ಹಿಂಡುತ್ತದೆ ಮಾಡ್ತೇನೆ ಗಾಯಕ್ಕೆ ಮದ್ದು" ಎನ್ನುತ್ತಾ ತನ್ನದೇ ಮೈಯ್ಯ ಇನ್ನೊಂದು ಭಾಗವನ್ನು ಪರಚಿ ಚರ್ಮತೆಗೆದು ಹಳೆಯಗಾಯಕ್ಕೆ ತುಂಬುತ್ತದಂತೆ. ಪರಚಿ ತೆಗೆದ ಜಾಗದಲ್ಲಿ ಮತ್ತೆ ಹೊಸಗಾಯ! ಇದು ನೆವರ್ ಎಂಡಿಂಗ್ ಪ್ರಾಸೆಸ್. ಹೀಗಾಗಿ ಬಜೆಟ್ ಎಂಬುದು ಸದ್ಯದ ಭಾರತೀಯ ಆರ್ಥಿಕ ಸ್ಥಿತಿಯಲ್ಲಿ ಹುಲಿಹುಣ್ಣಿನದ್ದೇ ಕಥೆ! ಅಂದಹಾಗೇ ಸ್ವಿಸ್ ಬ್ಯಾಂಕಿನ ಹಣದ ಬಗ್ಗೆ ಸುದ್ದಿಯೇ ಇಲ್ಲ; ನಮ್ಮ ಕರ್ನಾಟಕದ ಯುವದೊರೆಗಳೂ ಕೆಲವರು ಅಲ್ಲಿ ಹಣ ಇಟ್ಟುಬಂದಿದ್ದಾರಂತೆ-ಇರಲಿ ಬಿಡಿ ಪಾಪ ಇಲ್ಲೇ ಇದ್ದರೆ ಅವರು ಮಣ್ಣಿನಮಗನ ಮಗನಾಗುವುದಾದರೂ ಹೇಗೆ ? ಬಿಟ್ಬಿಡಿ ಹೋಗ್ಲತ್ಲಗೆ ಈಗ ಹುಣ್ಣಿನಮಕ್ಕಳ ಗೋಲೀ ಆಟದ ಕಥೆ ತಿಳಿಯೋಣ.
_________

ನಾನಂತೂ ಸ್ಥಾನ-ಮಾನ-ಸನ್ಮಾನದ ಅಂಗಡಿ ತೆರೆದುಬಿಟ್ಟರೆ ಹೇಗೆ ಎಂದು ಚಿಂತಿಸುತ್ತಿದ್ದೇನೆ.ಗೌಡಾ ಸೇರಿದಂತೇ ಪ್ರಶಸ್ತಿಗಳ/ಪದವಿಗಳ ಅಂಗಡಿಯನ್ನು ಅದಾಗಲೇ ಹಲವರು ಆರಂಭಿಸಿದ್ದಾರೆ! ಅಲಲ್ಲಿ ಅಲ್ಲಲ್ಲಿ ಕೂತು ಮಾರುವ ಅವರದ್ದು ಒಂಥರಾ ಎಲ್ಲೂ ನೆಟ್ಟಗೆ ಹಿಡಿತಕ್ಕೆ ಸಿಗದ ತಳ್ಳುಗಾಡಿಯ ಬ್ಯುಸಿನೆಸ್ಸು! ಸ್ಥಿರ ಅಂಗಡಿಯಾದರೆ ಮಾಲು ಸರಿಯಿಲ್ಲಾ ಎಂತಲೋ ಹೋಯ್ ನಿಮ್ಮ ಅಂಗಡೀಲಿ ಕದ್ದಮಾಲು ವ್ಯಾಪಾರ ಆಗ್ತಿದೆ ಅಂತಲೋ ಯಾರೋ ಹುಡುಕಿಕೊಂಡು ಬರಬಹುದು, ಚರ ಅಂಗಡಿಯಾಗಿಬಿಟ್ಟರೆ ಇವತ್ತು ಈ ಬೀದಿ ನಾಳೆ ಮತ್ಯಾವ್ದೋ ಬೀದಿ! "ಅರೇ ಸ್ಥಾನ-ಮಾನ-ಸನ್ಮಾನ ರೀ!" ಅಂತ ದೊಡ್ಡದಾಗಿ ಕೂಗುತ್ತಾ ಹೊರಟುಬಿಟ್ಟರೆ ಆಗಲೂ ಕಷ್ಟವಾಗಿಬಿಡಬಹುದು, ಅದಕೇ ಬೋರ್ಡಿಲ್ಲದ ತಳ್ಳುಗಾಡೀಲಿ ಸುಮ್ನೇ ತಳ್ಕೋತಾ ಬ್ರೌನ್ ಶುಗರು, ಅಫೀಮು, ಗಾಂಜಾ ಮಾರುಕಟ್ಟೆಗಳಂತೇ ತೀರಾ ಯಾರಿಗೂ ಏನೂ ತಿಳಿಸದಂತೇ ಬೇಕಾದವರಿಗೆ ಮಾತ್ರ ಗುಟ್ಟಾಗಿ ತಿಳಿಸಿ ಮಾರಾಟ ಮಾಡಬೇಕಾಗುವುದು ಈ ಅಂಗಡಿಯ ಅನಿವಾರ್ಯತೆ! ಮೇಲ್ನೋಟಕ್ಕೆ ಕತ್ತರಿಸಿದ್ದೋ ಕೆಲಸಕ್ಕೆ ಬರದ್ದೋ ಒಂದೆರಡು ಒಣಗಿದ/ಕೊಳೆತ ಹಣ್ಣು-ಕಾಯಿ ಇಟ್ಕೊಂಡು ತಳ್ಕೋತಾ ಹೋದ್ರೆ ಕಂಡವರೆಲ್ರೂ ಹಾಗೆಲ್ಲಾ ಬರೊಲ್ಲಾ; ನಮಗೆ ಬೇಕಾದವರು ಮಾತ್ರ ಬರ್ತಾರೆ ಅನ್ನೋದು ನನ್ನ ಅನಿಸಿಕೆ!

ಯಾರೋ ಏನೋ ಹೇಳ್ತಾ ಅವ್ರಲ್ಲಾ ಅಂತ ಕಿವಿಕೊಟ್ಟೆ ನೋಡಿ: ಸ್ವಲ್ಪ ನೀವೂ ಕೇಳಿಸ್ಕೊಂಬುಡಿ ದೇವ್ರೂ :
ಅದ್ಯಾವ್ದೋ ಕಾಲ ಇತ್ತಂತೆ, ರಾಮ-ಸೀತೆ-ಕೃಷ್ಣ-ಹರಿಶ್ಚಂದ್ರ ಅವೆಲ್ಲಾ ಕಥೆಗಳಾಗಿರಲಿಕ್ಕೇ ಲಾಯಕ್ಕು ಬಿಡಿ. ಸ್ಥಾನ ಇಲ್ದೇ ಮಾನವಾದ್ರೂ ಸಿಗೋದು ಹೇಗೆ ? ಸ್ಥಾನ ಮೊದ್ಲು ಪಡೀಬೇಕು. ಅದಕೇ ನಮ್ಮಂಥಾ ಅಂಗಡೀ ಜನರನ್ನು ಹುಡುಕಿಕೊಂಡು ಬೇಕಾದವ್ರು ಬರ್ತಾರೆ. ಇನ್ನು ದೇಶೋದ್ಧಾರ, ರಾಜ್ಯೋದ್ಧಾರ ಇವೆಲ್ಲಾ ಕನ್ನಡ ನಿಘಂಟಿನಲ್ಲಿ ಸದಾ ಇರಬೇಕಾದ ಪದಗಳು-ಅದಕ್ಕೇನೋ ಡೌಟಿಲ್ಲ, ಹಾಗಂತ ಅಲ್ಲೆಲ್ಲೋ ಬರಗಾಲವಂತೆ-ಬೆಳೆನಾಶವಂತೆ, ಬೆಳೆದ ಬೆಳೆಗೆ ಬೆಲೆಯಿಲ್ವಂತೆ, ನದಿಗೆ ಕಟ್ಟಿದ ಸೇತುವೆ ಮುರಿದು ಬೀಳ್ತಾ ಇದ್ಯಂತೆ, ನದೀ ಮೇಲ್ದಂಡೆಯ ಕಾಲುವೆಗಳ ಕೆಲಸ ಕಳಪೆಯಾಗಿದ್ಯಂತೆ, ರಸ್ತೆ ಹಾಳುಬಿದ್ದು ೫೦ ವರ್ಷ ಆಗೋಯ್ತಂತೆ ಇವೆಲ್ಲಾ ನಿತ್ಯಕೇಳೋ ಹಾಡುಗಳು ಸ್ವಾಮೀ. ಅದೆಲ್ಲಾ ನಮ್ಮಂಥೋರಿಗೆ ಮೈಗೊಂಡೋಗಿರೋ ಹಾಡುಗಳು. ಯಾವಾಗ ನೋಡ್ದ್ರೂ ಅದೇ ರಾಗ ಅದೇ ತಾಳ ನಮಗೂ ಸ್ವಲ್ಪ ಬೇರೇ ರಾಗ ಕೇಳ್ಬೇಕೂ ಅನ್ಸೊಲ್ವೇ ? ಅದಕೇ ಸ್ವಲ್ಪ ನಾವೂ ಸ್ಟಾರ್ ಗಿರಿ ಅನುಭವಿಸಿ ನೋಡೋಣ ಅಂತ ಈಗ ರಿಸಾರ್ಟ್‍ಗಳ ಕಡೆಗೆ ಮುಖ ಮಾಡಿದೀವಿ.

ಯಾರೋ ಸ್ಥಾನ-ಮಾನ ಕೊಡ್ತಾರೆ ಅಂತ ಕಾಯೋ ಕೆಲ್ಸ ಮಾಡ್ಕಂಡಿದ್ರೆ ಅದು ಆಗೋ ಬಾಬಲ್ಲ. ಅದ್ಕೇ ರುಬಾಬು ಮಾಡಿಯಾದ್ರೂ ಸ್ಥಾನ-ಮಾನ ಪಡೀಬೇಕು ಎಂಬೋದು ಹೊಸಾ ಗಾದೆ. "ನೀವು ಕುರ್ಚಿ ಕೊಡ್ದಿದ್ರೆ ಏನಂತೆ ನಮಗೆ ತಗೊಳೋಕೆ ಗೊತ್ತಿಲ್ವೇ?" ನಮ್ ಥರಾನೇ ಸ್ಥಾನ-ಮಾನ ಬೇಕಾದೋರ್ನ ಬನ್ನಿ ನನ್ಹಿಂದೆ ಎಂದು ಎತ್ತಾಕೊಂಡ್ಹೋದ್ರೆ ಕೆಲಸ ಸಲೀಸು. ಹ್ಯಾಂಗೂ ಅವರಿಗೂ ಸ್ಥಾನ-ಮಾನ-ಸನ್ಮಾನ ಬೇಕು! ಡಾಕ್ಟರ್ ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು!

....ಯಾರೋ ತನ್ನೊಳಗೇ ಸಣ್ಕೆ ಹೇಳ್ಕೋತಾ ಇದ್ರು! ಹೋಗ್ಲಿ ಬಿಡಿ, ಇಂಥವರಿದ್ರೇ ಇನ್ಮುಂದೆ ನಮಗೂ ಅನಕೂಲವೇನೋ! ಅಂದಹಾಗೇ ಒಂದ್ ದೇಶ ಇತ್ತಂತೆ. ಅಲ್ಲಿ ಪ್ರಜಾಪ್ರಭುತ್ವ. ಜನ ಇಷ್ಟಪಟ್ಟೋರಿಗೆ ಸ್ಥಾನ ಸಿಗ್ತಾ ಇತ್ತು ಅಂತಾಯ್ತು. ಸ್ಥಾನ ಪಡದೋರು ಮರ್ಯಾದೆ-ಮಾನಕ್ಕೆ ಅಂಜಿ ಬಾಳ ಕಾಳಜಿಯಿಂದ ಜನಸೇವೆ ನಡಸೋರು. ಜನರಿಗಾಗಿ ಬಹಳ ಉತ್ತಮ ಕೆಲಸ ಮಾಡ್ದೋರಿಗೆ ಜನ ಸ್ವಯಂಪ್ರೇರಿತರಾಗಿ "ನಮ್ ಕೆಲಸ ಮಾಡ್ಕೊಟ್ಟ ಆ ಮಹನೀಯರಿಗೆ ಸನ್ಮಾನ" ಅಂದ್ಕಂಡು ಮಾಡೋರು. ಇವತ್ತು ಪ್ರಜಾಪ್ರಭುತ್ವ ಅಂಬೋದು ಬರೇ ಪುಸ್ತಕದಲ್ಲಿರೋ ವಿಷ್ಯ. ಹಣ-ಹೆಂಡ ಕೊಟ್ರೆ ಹುಚ್ ನನ್ಮಗ ಮತದಾರ ಪ್ರಜೆ ಮತ ಹಾಕ್ತಾನೆ. ಸ್ಥಾನ ಬಂದ್ಬುಡ್ತದೆ, ಅದು ಬಂದ್ಮೇಲೆ ಮೂರೂ ಬಂದಹಾಗೇ! ಅದು ಬರ್ಬೇಕೂ ಅಂತ ಮೂರೂ ಬಿಟ್ಟು ವ್ಯಾಪಾರ ಕಲೀಬೇಕು!

ಕ.ಸಾ.ಪ ದಂತಹ ಚಿಕ್ಕ ಜಾಗದಲ್ಲೇ ಸ್ಥಾನ-ಮಾನ-ಸನ್ಮಾನಕ್ಕೆ ವ್ಯಾಪಾರ ಮಾಡೋವರೂ ಇದ್ದಾರಂತೆ! "ಚುನಾವಣೆಗೆ ನಿಲ್ತೀವಿ ಹಣವಿಲ್ಲ, ಏನಾದ್ರೂ ಧರ್ಮಾ ಮಾಡ್ರೀ" ಅನ್ನುವ ಮಟ್ಟಕ್ಕೆ ಇಳಿದಿದಾರಂತೆ. ಅಲ್ಲಾ ಸ್ವಾಮೀ ಕ.ಸಾ.ಪ. ಅಂಬೋದನ್ನ ಕಟ್ದೋರು ಸಮಾಜಮುಖಿ ಜನ. ಸಮಾಜಕ್ಕೆ ಒಳ್ಳೇದಾಗಲಿ, ನಮ್ ಸಂಸ್ಕೃತಿ ಉಳೀಲಿ ಅಂತ ಅದನ್ನು ಕಟ್ಟಿದ್ರು-ತಮ್ದೇ ಹಣ ಹಾಕಿ ಅಲ್ಲೀ ಕೆಲಸಗಳನ್ನೂ ನಡೆಸಿದ್ರು. ಇಂದು ಅಲ್ಲಿ ಕೆಲಸ ನಿಭಾಯಿಸೋಕೆ ಸ್ಥಾನ ಪಡೆಯೋದಕ್ಕೆ ಹಣ ಕರ್ಚುಮಾಡ್ಬೇಕಂತೆ ಕೆಲವ್ರಿಗೆ! ಮೆಜೆಸ್ಟಿಕ್ ಕಡೆ ಹಾಸಿ ಕೂತು ’ಚುನಾವಣೆಗೆ ನಿಲ್ತೀನಿ ಧರ್ಮಾಮಾಡಿ’ ಅನ್ನೋ ಅದೇ ಬೋರ್ಡ್ನ ಪ್ರದರ್ಶಿಸಿದ್ರೆ ಆದ್ರೂ ಒಂದ್ ಲೆಕ್ಕ. ಅದು ಬಿಟ್ಟು ಇಲ್ಲೆಲ್ಲಾ ಅಲ್ಲೆಲ್ಲೋ ಅದನ ಹೇಳ್ಕೋತಾ ತಿರುಗಿದ್ರೆ ಇದ್ಯಾವ ಲೆಕ್ಕ ಅಲ್ವೇ? ಮತ್ತೇನಿಲ್ಲ ಕ.ಸಾ.ಪ ದೊಳಗೆ ಸೇರ್ಕಂಡ್ರೆ ಮತ್ತೊಂದಷ್ಟು ಸ್ಥಾನ-ಮಾನ-ಸನ್ಮಾನ ಬರ್ತದೆ ಎಂಬೋದು ಅವರ ಇರಾದ್ಯಂತೆ. ಹಾಂ.... ಹೇಳಲಿಕ್ಕೆ ಮರ್ತಿದ್ದೆ: ಅವರಿಗೆ ಅನೇಕ ’ಪ್ರಶಸ್ತಿ’ಗಳು ’ಬಂದಿವೆ.’ ಹಾಂ...ಹಾಂ... ’ಬಂದಿವೆ!’ ’ಗೌಡಾ’ ಕೂಡ ಹಾದೀಲಿದೆ, ನನ್ನಂಥಾ ತಳ್ಳುಗಾಡ್ಯೋರು ಇಟ್ಕಂಡು ಕೂತವ್ರೆ... ಆ ಯಪ್ಪ ಜಾಸ್ತಿ ಕೊಡಾಕ್ ತಯಾರಿಲ್ಲ, ಇನ್ನೊಂದ್ ಸಲ್ಪದಿನ ಹೋಗ್ಲಿ ಸರಕಾರ್ದಲ್ಲಿರೋರ್ನ ಹಿಡ್ಕಂಡು ಅಂಗಂಗೇ ಎಗರಸ್ಕಳವ ಎಂಬ ದೂ[ದು]ರಾಲೋಚನೆ ಇದೆ! ಮುಂದಿನ ಸರ್ತಿ ತಳ್ಳೂ ಗಾಡೀಲಿ ನಾನು ವೆರೈಟಿ ಮಡಗ್ಬೇಕೂ ಅಂತ ಆಸೆ ಇದೆ. ಕೆಲವು ಕವಿ-ಸಾಹಿತಿಗಳ ಹೆಸ್ರಲ್ಲಿ ಕೊಡೋ ಪ್ರಶಸ್ತಿಗಳ್ನೂ ಮಡೀಕಂಡ್ರೆ ಜಾಸ್ತಿ ಜನ ಬರ್ತಾರೆ.

ಸದಾ ಆನಂದವಾಗಿರಬೇಕು ಹೇಗೆ ಎಂಬೋದರ ಬಗ್ಗೆ ಕೆಲವು ಪುಸ್ತಕ ಬರ್ದು ಅದನ್ನೂ ಮಡೀಕತೀನಿ. ಎಡೆ ಇಟ್ಟು ಊರೂರ್ನೇ ಅಳೆಯೋ ಕೆಲಸಮಾಡೋದರ ಬಗ್ಗೂ ಒಬ್ರು ಬರೀತೀನಿ ಪುಸ್ತಕ ಅಂದವ್ರೆ. ಮಾಲು ಜಾಸ್ತಿ ಜಾಸ್ತಿ ಇದ್ದಾಂಗೂ ನಾನಾ ಥರ ಜನ ಬರ್ತಾರೆ. ಖರೀದ್ಯೂ ಜೋರು! ಒಳ್ಳೇ ವ್ಯಾಪಾರ. ನೋಡೋಕೆ ತಳ್ಳೋಗಾಡಿ, ಬಾಡಿಗೆ ಕಟ್ಟಂಗಿಲ್ಲ, ಕರ-ಸುಂಕ ತೆರವಾಂಗಿಲ್ಲ. ಬೇಕಾದ್ರೆ ಅಂಗ್ಡಿ ಹಾಕ್ದ, ಇಲ್ಲಾಂದ್ರೆ ಸುಮ್ನೇ ಕೂತು ಆರಾಮ್ ತಗಂಡ! ಯಾರೋ ಗಲಾಟೆ ಮಾಡದ್ರೆ ಒಂದ್ ಕೆಲು ದಿನ ಭೂಗತವಾಗ್ಬುಟ್ರೆ ಆಯ್ತಪ್ಪ! ಯಾರೋ ಬರ್ತವರಲ್ಲಾ .....ಬಿಳೀ ಜುಬ್ಬಾ ಪೈಜಾಮು ...ಓ ನಮ್ ಗಿರಾಕಿನೇ ಇರ್ಬೇಕು ಬಿಡಿ.

" ಯೇನ್ರೀ ಯೇನೈತೆ ಗಾಡೀಲಿ ? "

" ತಮ್ ಪರಿಚಯ ? "

" ನಾನು ಎಡೆಯಿಡೋರ್ಕಡೆಯವ್ನು "

" ಯಾವಾಗ್ನಿಂದ ? "

" ಕಳೆದ ಸರ್ತಿ ಹೈದ್ರಾಬಾದಿಗೆ ಹೋಗಿದ್ವಲ್ಲಾ ಅಲ್ಲಿಂದ ಬಂದ್ ಮ್ಯಾಲಿಂದ ಒಂಥರಾ ಹಂಗೇಯ"

" ಏನ್ ಕೊಡ್ಲಿ ಸ್ಥಾನ-ಮಾನ-ಸನ್ಮಾನ ?"

" ಹೂಂ ಕಣಪ್ಪಾ ಎಲ್ಲಾನೂ ಬೇಕು...ಎಲ್ಲಾ ಒಟ್ಟೂ ಎಷ್ಟಾಗ್ಬೋದು ? "

" ಛೆ ಛೆ ಜಾಸ್ತಿಯೇನಿಲ್ಲ, ಮಾಮೂಲೀ ಸೂಟ್ ಕೇಸು ತಮಗೆ ಗೊತ್ತಿರ್ಬೋದು ತಾವು ಎಡೆಯಿಕ್ಕೋರಕಡ್ಯೋರು "

" ಪರವಾಗಿಲ್ಲ ಕಣಯ್ಯಾ ಅಂಗ್ಡಿ ಚೆನ್ನಾಗದೆ "

" ಎನಾರಾ ಮಾಡ್ಬೇಕಲ್ಲಾ ಸಾಮಿ...ನಾನಂತೂ ಚುನಾವಣೆ ಅಂತೆಲ್ಲಾ ನಿಲ್ಲಾಕಿಲ್ಲ .... ಆದ್ರೆ ಒಂದ್ಮಾತು ಇವತ್ತು ಎಡೆಯಿಕ್ಕೋರು ಸಲ್ಪ ಬ್ಯೂಸಿ ಅವ್ರೆ ನಾಳೆ ಇಟ್ಕೊಂಬುಡನ, ಸದ್ಯಕ್ಕೆ ನೀವೂ ಅವರೇಳೋದಕ್ಕೆಲ್ಲಾ ಊಂ ... ಅಂತಾ ಇರಿ, ಅವರು ಸಲ್ಪ ಫ್ರೀ ಆಗುತ್ಲೇ ವಿಷ್ಯ ಮಾತಾಡವ ಎಲ್ಲಾ ಸಲೀಸಾಗೋತದೆ "

" ಆಯ್ತು ಬಿಡು ನೀನು ಸುಮಾರ್ ವರ್ಸದಿಂದ ಇದೇ ವ್ಯಾಪಾರ ಮಾಡ್ತಾ ಇದ್ದೀಯಾಂತ ಕೇಳೀನಿ"

" ವ್ಯಾಪಾರ ಏನ್ ಸ್ವಾಮಿ? ದೇಶ ಸೇವೆ ಕೈಲಾದ್ನ ಮಾಡೋದು. ನೋಡಿ ಇದೇ ತಳ್ಳೋಗಾಡಿ..ಇದೇ ಹಾದಿಬೀದಿ"

" ಚೆನ್ನಾಗ್ಹೇಳ್ತೀಯ ಕಣಯ್ಯಾ ಹಹ್ಹಹ್ಹ"

Sunday, March 18, 2012

ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು- ಕವಿತೆಯಾಯಿತು ಪದ್ಯ ಕಟ್ಟಕಡೆಗೆ...

ಚಿತ್ರಕೃಪೆ : ಅಂತರ್ಜಾಲ

ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು-
ಕವಿತೆಯಾಯಿತು ಪದ್ಯ ಕಟ್ಟಕಡೆಗೆ...

ಸಿಕ್ಕಿದ ವ್ಯಕ್ತಿಯಲ್ಲೇ ದಕ್ಕದ ವ್ಯಕ್ತಿಯನ್ನೂ ಕಂಡುಕೊಳ್ಳುವ ಮತ್ತು ಯಾರಿಗೂ ನೋವನ್ನು ಬಯಸದೇ ತಾನೇ ನೊಂದುಕೊಂಡ ಜೀವದ ಬಗೆಗೆ ಬರೆಯಲು ಬಹಳಹೊತ್ತು ಮನಸ್ಸು ತಿಣುಕಾಡುತ್ತಿತ್ತು! ಅದು ಸುಲಭಕ್ಕೆ ಸಾಧ್ಯವಾಗದ ವಿಷಯ! ಕಾಲವೊಂದಿತ್ತು: ಹಿಂದಿನ ಶತಮಾನದ ಪೂರ್ವಾರ್ಧದ ವರೆಗೂ ವ್ಯಕ್ತಿಗತ ಮೌಲ್ಯಗಳಿಗೆ ತುಂಬಾ ಬೆಲೆಯಿತ್ತು. ಗುರು-ಹಿರಿಯರ ಮಾತುಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಅದರಲ್ಲೇ ತೃಪ್ತರಾಗುವ ಜೀವನಕ್ರಮ ಅಂದಿನದಾಗಿತ್ತು. ನಮ್ಮಜನ ಬಡತನವನ್ನೇ ಬಹಳವಾಗಿ ಹಾಸುಹೊದ್ದವರು; ಅದರಲ್ಲೇ ಸುಖವನ್ನೂ ನೆಮ್ಮದಿಯನ್ನೂ ಕಂಡವರು! ಬಡತನ ಭಾರ ಎನಿಸುವಷ್ಟು ಅಸಹಜವಾಗಿರಲೇ ಇಲ್ಲ; ಯಾಕೆಂದರೆ ಸಮಾಜದಲ್ಲಿ ಕಷ್ಟಸುಖಗಳಿಗೆ ಪರಸ್ಪರ ಸ್ಪಂದಿಸುತ್ತಿದ್ದ, ಪರಸ್ಪರ ಆಗಿಬರುತ್ತಿದ್ದ ಕಾಲಮಾನ ಅದು. ಇಲ್ಲದ್ದನ್ನೂ ಇದೆಯೆಂದೇ ಕವಿಗಳಂತೇ ಮಾನಸಿಕವಾಗಿ ಕಲ್ಪಿಸಿಕೊಂಡು ಸಂಭ್ರಮಿಸುವ ಕಾಲಘಟ್ಟ ಅಂದಿನದು. ಅಂತಹ ಕಾಲಘಟ್ಟದ ಪ್ರೇಮಪರ್ವವೊಂದು ಹೇಗೆ ಕೊನೆಯವರೆಗೂ ತನ್ನ ಸೆಳವನ್ನು ತನ್ನ ಪ್ರೀತಿಯ ಬಿಸುಪನ್ನು ಕಾದುಕೊಂಡಿತ್ತು ಎಂಬುದನ್ನು ಅವಲೋಕಿಸುತ್ತಾ ಪ್ರೇಮಕವಿಯ ಜೀವನದ ಇನ್ನೊಂದು ಮಜಲಿಗೆ ಇಣುಕುವ ಒಂದು ಪ್ರಯತ್ನ ಇದಾಗಿದೆ.

ಅಕ್ಕಿ ಆರಿಸುವಾಸ ಚಿಕ್ಕ ನುಚ್ಚಿನ ನಡುವೆ | ಬಂಗಾರವಿಲ್ಲದ ಬೆರಳು |
ತಗ್ಗಿರುವ ಕೊರಳಿನಾ ಸುತ್ತ ಕರಿಮಣಿ ಒಂದೆ | ಸಿಂಗಾರ ಕಾಣದಾ ಹರಳು |

ಕುಳಿತು ಅಕ್ಕಿ ಆರಿಸಿಕೊಳ್ಳಬೇಕಾದ ಜೀವನ ಅಂದಿನ ಬಹುತೇಕ ಗೃಹಿಣಿಯರಿಗೆ! ನುಚ್ಚನ್ನೂ ಇಡಿಭತ್ತವನ್ನೂ ಬೇರ್ಪಡಿಸಿ ಅನ್ನಮಾಡಲು ಯೋಗ್ಯವಾದ ಅಕ್ಕಿಯನ್ನು ಸಿದ್ಧಪಡಿಸಿಕೊಳ್ಳುವುದು ಬಿಡುವಿರುವಾಗೆಲ್ಲಾ ನಡೆಯುತ್ತಿದ್ದ ಕ್ರಮ. ಗೃಹೋಪಯೋಗೀ ಯಂತ್ರಗಳೆಂದು ಯಾವುವೂ ಇರಲಿಲ್ಲ! ಮಿಕ್ಸರ್, ಕುಕ್ಕರ್, ಗ್ರೈಂಡರ್, ವಾಷಿಂಗ್ ಮಶಿನ್, ಫ್ರಿಜ್ ಇಲ್ಲದ ಕಾಲ. ಎಲ್ಲವಕ್ಕೂ ದೈಹಿಕಶ್ರಮದ ಉಪಯೋಗ! ಮಜ್ಜಿಗೆ ಕಡೆಯುವಾಗ ಪಕ್ಕೆಗಳ ಸ್ನಾಯುಗಳಿಗೆ ವ್ಯಾಯಾಮವಾಗಿ ಬೊಜ್ಜು ಕರಗಿದರೆ, ಹಿಟ್ಟು ರುಬ್ಬುವಾಗ ರಟ್ಟೆಗಳಿಗೆ ಸಂಪೂರ್ಣ ವ್ಯಾಯಾಮ! ರಾಗಿ-ಗೋಧೀ ಬೀಸುವಾಗ ಸೊಂಟದಿಂದ ಹಿಡಿದು ಇಡೀ ಮೇಲ್ಭಾಗದ ಶರೀರಕ್ಕೇ ವ್ಯಾಯಾಮ. ಸ್ವಲ್ಪ ಆಯಾಸವೆನಿಸಿದರೂ ಹೆಂಗಸರಿಗೆ ಇಂದಿನಂತೇ ದುಡ್ಡುಕೊಟ್ಟು ಬೊಜ್ಜು ಕರಗಿಸಿಕೊಳ್ಳಬೇಕಾದ ಪ್ರಮೇಯವಿರಲಿಲ್ಲ. ಏನನ್ನೇ ತಿಂದರೂ ಅರಗಿಸಿಕೊಳ್ಳುವ, ಎಷ್ಟು ತಿಂದರೂ ಬೊಜ್ಜು ಬೆಳೆಯದ ಜೀವನಕ್ರಮ. ಅಂತಹ ದಿನಗಳ ಜೀವನದಲ್ಲಿ ಅಕ್ಕಿ ಆರಿಸುತ್ತ ಕುಳಿತ ಮಡದಿಯನ್ನು ಪಕ್ಕದಲ್ಲಿ ಕುಳಿತು ಕಂಡ ಕವಿ ನರಸಿಂಹಸ್ವಾಮಿಯವರಿಗೆ ಮೇಲಿನ ಹಾಡು ತಂತಾನೆ ಹೊಳೆದಿದ್ದು. ಅಕ್ಕಿ ಆರಿಸುತ್ತಿರುವ ಹೆಂಡತಿಯ ಬೆರಳಲ್ಲಿ ಉಂಗುರವೂ ಇರಲಿಲ್ಲ, ಕೊರಳಲ್ಲಿ ಕರಿಮಣಿ ಬಿಟ್ಟರೆ ಬೇರೇ ಹೊಳೆಯುವ ಹರಳಿನ ಸರವಿಲ್ಲ; ಆದರೂ ಆ ಬಗ್ಗೆ ಒಂದಿನಿತೂ ಕೊರಗಿಲ್ಲ!

ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ| ಹದಿನಾರು ವರುಷದ ನೆರಳು |
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ | ಹುಚ್ಚುಹೊಳೆ
ಮುಂಗಾರಿನುರುಳು | ಬಂಗಾರವಿಲ್ಲದ ಬೆರಳು |

ಮದುವೆಯಾಗಿ ಅದಾಗಲೇ ಹದಿನಾರು ವರುಷವೇ ಕಳೆದರೂ ಬಡತನದ ಛಾಯೆ ತೋರದೇ, ಅದಕ್ಕಾಗಿ ಕೊರಗದೇ ಸೊರಗದೇ, ಸದಾ ದೀಪದಂತೇ ಹೊಳೆವ ಕಣ್ಣುಗಳನ್ನು ಕವಿ ಕಾಣುತ್ತಾರೆ. ಅಂದಿನ ಕಾಲದಲ್ಲಿ ಒಂದು ಮದುವೆಯೋ ಮುಂಜಿಯೋ ಮತ್ತಿನ್ನೇನೋ ಮಂಗಳಕಾರ್ಯವಿದ್ದರೆ ಬಂಗಾರದ ಅಭರಣಗಳನ್ನೊ ರೇಷ್ಮೆ ಸೀರೆ ಇತ್ಯಾದಿಗಳನ್ನೂ ನೆಂಟರಿಷ್ಟರಲ್ಲಿ ಕೆಲವರು ಬಳಕೆಗೆ ಕೊಡುವುದು/ತರುವುದು ಇರುತ್ತಿತ್ತು. ಇದನ್ನು ಸ್ವತಃ ನಾನೇ ಎಳವೆಯಲ್ಲಿ ಕಂಡಿದ್ದೇನೆ. ಮಂಗಳಕಾರ್ಯಗಳಲ್ಲಿ ಒಂದಷ್ಟು ಒಡವೆ ವಸ್ತ್ರಗಳನ್ನು ಕಂಡು ಸಂಭ್ರಮಿಸುವ ಸಮಯದಲ್ಲಿ ಉಳ್ಳವರು ಇಲ್ಲದ ನೆಂಟರಿಗೆ ಕೆಲವೊಮ್ಮೆ ಕೊಡುತ್ತಿದ್ದರು; ಕಾರ್ಯ ಸಾಂಗವಾದ ಮರುದಿನ ಪಡೆದವರು ಅದನ್ನು ಕೃತಜ್ಞತಾ ಪೂರ್ವಕವಾಗಿ ಮರಳಿಸುತ್ತಿದ್ದರು. ಇದಷ್ಟೇ ಅಲ್ಲ, ಮನೆಗಳಲ್ಲಿ ಹಾಸು-ಹೊದಿಕೆಗೆ ಕಮ್ಮಿ ಬಿದ್ದರೆ ಗುಡಾರ, ಕಂಬಳಿ, ಚಾದರಗಳು ಇತ್ಯಾದಿ ಬಟ್ಟೆಗಳನ್ನೂ ಹಾಗೇ ಕೊಡುವುದು/ತರುವುದು ನಡೆಯುತ್ತಿದ್ದ ಕ್ರಮ. ಇಂದು ಅವನ್ನೆಲ್ಲಾ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಧಾವಂತದ ಜೀವನಕ್ರಮದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲ.

ಕಲ್ಲಹರಳನು ಹುಡುಕಿ ಎಲ್ಲಿಗೋ ಎಸೆವಾಗ| ಝಲ್ಲೆನುವ ಬಳೆಯ ಸದ್ದೂ |
ಅತ್ತಯಾರೋ ಹೋದ ಇತ್ತ ಯಾರೋ ಬಂದ ಕಡೆಗೆಲ್ಲ ಕಣ್ಣುಬಿದ್ದೂ |
ಬಂಗಾರವಿಲ್ಲದ ಬೆರಳು|

ಅಕ್ಕಿಯನ್ನು ಆರಿಸುವುದು ಅಂಗಳದಲ್ಲಿ ಕುಳಿತು ಅಲ್ಲವೇ? ಅಂಗಳದ ಅಂಚಿನಲ್ಲೋ ಅಲ್ಲಿರಬಹುದಾದ ಕಟ್ಟೆಯಮೇಲೋ ಕುಳಿತು ಆರಿಸುವಾಗ ಕಲ್ಲಿನ ಹರಳುಗಳನ್ನು ಹುಡುಕಿತೆಗೆದು ಎಸೆಯುವುದು, ಆಗ ಕೈಗಳಲ್ಲಿರುವ ಗಾಜಿನ ಬಳೆಗಳ ಸದ್ದು, ಅಂಗಳದ ಹೊರವಲಯದಲ್ಲಿ ಆಕಡೆ ಈಕಡೆ ಹಾದಿಹೋಕರು ಓಡಾಡುವಾಗ ಆ ಕಡೆಗೆಲ್ಲಾ ಕಣ್ಣು ಓಡುತ್ತಿತ್ತು, ಬೆರಳಲ್ಲಿ ಮಾತ್ರ ಬಂಗಾರವೆಂಬುದು ಇರಲಿಲ್ಲ ಎಂಬುದನ್ನು ಕವಿ ಸಹಜ ಸ್ಫುರಿತ ಭಾವಗಳಿಂದ ಅತ್ಯಂತ ಸಾಮಾನ್ಯ ಪದಗಳಲ್ಲಿ ಕವನವಾಗಿಸಿದ್ದಾರೆ.

ಮನೆಗೆಲಸ ಬೆಟ್ಟದಷ್ಟಿರಲು | ಸುಮ್ಮನೆ ಇವಳು |
ಚಿತ್ರದಲಿ ತಂದಂತೆ ಇಹಳು |
ಬೇಸರಿಯ ಕಿರಿಹೊತ್ತು ನುಚ್ಚಿನಲಿ ಮುಚ್ಚಿಡಲು |
ಹುಡುಕುತಿವೆ ಆ ಹತ್ತು ಬೆರಳೂ |
ಬಂಗಾರವಿಲ್ಲದ ಬೆರಳು |

ಮನೆಗಲಸ ಇಂದಿನ ಹಾಗಲ್ಲವಲ್ಲ. ಎಲ್ಲಕ್ಕೂ ಸ್ವಾವಲಂಬನೆ! ಕಸಗುಡಿಸಲು ವ್ಯಾಕ್ಯೂಮ್ ಕ್ಲೀನರ್ ಇಲ್ಲ, ಬಟ್ಟೆ ಒಗೆಯಲು ವಾಷಿಂಗ್ ಮಶಿನ್ ಇಲ್ಲ, ಪಾತ್ರೆ ತೊಳೆಯಲು ಡಿಶ್ ವಾಶರ್ ಇಲ್ಲ. ಎಲ್ಲವೂ ಮಾನವಯಂತ್ರದಿಂದಲೇ ನಡೆಯಬೇಕು. ನೆಂಟರು-ಇಷ್ಟರು ಬಂದುಹೋಗುವವರ ಸಂಖ್ಯೆ ಕೂಡ ಜಾಸ್ತಿನೇ ಇರುತ್ತಿದ್ದ ಕಾಲ. ಜನರಿಗೆ ಅಷ್ಟೆಲ್ಲಾ ಕೆಲಸಗಳ ಮಧ್ಯೆಯೂ ಜೀವನವನ್ನು ಇದ್ದಹಾಗೇ ಸ್ವೀಕರಿಸಿ ಸುಖಿಸುವ ಕಲೆ ಗೊತ್ತಿತ್ತು; ಇಂದಿನಂತೇ ದಂಪತಿಯ ನಡುವೆ ಕುಟುಂಬ ಕಲಹಗಳು ಎದ್ದು ವಿಚ್ಛೇದನ ಕೊಟ್ಟುಕೊಳ್ಳುವ ಕಾಲ ಅದಾಗಿರಲಿಲ್ಲ.

ಇಂತಹ ಅನೇಕ ಹಾಡುಗಳನ್ನು ಬರೆದ ಕವಿಗಳ ಮನದಲ್ಲಿ ನೋವೊಂದು ಉಳಿದುಕೊಂಡಿತ್ತು. ವೈಯ್ಯಕ್ತಿಕ ಜೀವನದಲ್ಲಿ ಎಳವೆಯಲ್ಲೇ ಒಬ್ಬಳು ಹುಡುಗಿಯನ್ನು ಪ್ರೀತಿಸಿದ್ದರು ನಮ್ಮ ಕೆ.ಎಸ್.ನ. ! ಸುಮಾರಾಗಿ ಬುದ್ಧಿ ತಿಳಿದಾಗಿನಿಂದಲೂ ಅವರ ಆಪ್ತವಲಯದಲ್ಲಿ ಸಖಿಗೀತದ ಆರಂಭವಾಗಿಬಿಟ್ಟಿತ್ತು. ೧೯೪೫ರಲ್ಲಿ ’ಐರಾವತ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ ಕೆ.ಎಸ್.ನ. ಅವರ ಆ ಹೊತ್ತಗೆಯಲ್ಲಿ ’ಅವಳೇ ಇವಳು’ ಎಂಬ ಕವನವೂ ಇತ್ತು ಎನ್ನುತ್ತಾರೆ ಖ್ಯಾತ ವಿಮರ್ಶಕ ಸುಮತೀಂದ್ರ ನಾಡಿಗರು. ಆ ಹಾಡಿನಲ್ಲಿ ಅಡಕವಾಗಿರುವ ಕಥಾಭಾಗದ ನಾಯಕ, ಪದ್ಮಾ ಎಂಬೊಬ್ಬ ಹುಡುಗಿಯೊಡನೆ ಇನ್ನೊಬ್ಬ ಹುಡುಗಿಯ ಪ್ರಸ್ತಾವನೆ ಮಾಡುತ್ತಾನೆ. ಹೇಮಗಿರಿಗೆ ಜಾತ್ರೆಗೆ ತೆರಳಿದ್ದೂ, ಜಾತ್ರೆಯ ದಿನ ಹೇಮಾನದಿಯ ದಡದಲ್ಲಿ ಬೆಳದಿಂಗಳ ಊಟಮಾಡುವಾಗ ಆಕೆ ಕಂಡಿದ್ದಾಗಿಯೂ ಆಕೆಯ ತುಟಿಯಂಚಿನಲ್ಲಿ ಸಿಡುಬಿನ ಕಲೆಯೊಂದು ಸದಾ ಇತ್ತು ಎಂದು ಹೇಳುತ್ತಾನೆ.

ಅಲ್ಲಿಗೆ ಹಾಗೆ ಬಂದಿದ್ದಾಕೆ ಯಾರು ಎಂದು ಪ್ರಶ್ನಿಸುವ ನಾಯಕ ಯಾರಾದರೇನಂತೆ? ಅದನ್ನು ಕಟ್ಟಿಕೊಂಡು ಏನಾಗಬೇಕೀಗ ? ಎಂತಲೂ ತನ್ನನ್ನೇ ಕೇಳಿಕೊಳ್ಳುತ್ತಾನೆ. ದೊಡ್ಡ ಹಣೆ, ಉದ್ದಜಡೆಯ ಹುಡುಗಿಯಾದ ಅವಳು ಪದ್ಮಾಳ ಕಿವಿಯಲ್ಲಿ ಏನೋ ಹೇಳಿದಳಂತೆ, ದಿಟ್ಟೆಯವಳು ಅನ್ನುತ್ತಾನೆ! ಊಟಕ್ಕೆ ಹಾಕಿದ ಬಾಳೆ ಎಲೆಗಳ ಮುಂದೆ ರಂಗೋಲೀ ಹಾಕಿದಳಂತೆ ಅವಳು. ಝರಿಯ ರವಿಕೆ ತೊಟ್ಟ ಅವಳು ತುಟಿಯರಳಿಸಿ ನಗುತ್ತಿದ್ದಳೆಂದೂ ಊಟದ ತರುವಾಗ ಕೈತೊಳೆಯುವಾಗ ನದಿಯನೀರಿನಲ್ಲಿ ಅವಳ ಜಡೆ ತೇಲುತ್ತಿತ್ತೆಂದೂ, ಧರಿಸಿದ್ದ ಕೆಂಪು ಹರಳಿನ ಉಂಗುರವನ್ನು ಕೆನ್ನೆಗೆ ತಾಗಿಸಿಕೊಂಡಾಗ ಗೀರುಬಿದ್ದಿತ್ತೆಂದೂ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ಒಪ್ಪಿಸುವ ಆತನ ಮಾತು ಆಡಿ ಮುಗಿಯುವುದಲ್ಲ! ಮತ್ತೆ ಮತ್ತೆ ಯಾರವಳು ಯಾರವಳು ಎಂಬ ಪ್ರಶ್ನೆ ಹಣುಕುತ್ತದೆ. ಮೈಸೂರಿನ ಬೀದಿಯಲ್ಲಿ ನಡೆದಿದ್ದಳು ಅವಳು ಎನ್ನುವ ನಾಯಕ ಅವಳು ರಾಮರಾಯರ ಮಗಳಲ್ಲವೇ? ಈಗ ಎಲ್ಲಿದ್ದಾಳೆ ಅವಳು? ಎಂದೂ ಪ್ರಶ್ನಿಸುತ್ತಾನೆ. ಆ ಹುಡುಗಿಗೆ ಮದುವೆ ಆಗಬಾರದಿತ್ತೇ? ಇನ್ನೂ ಆಗಲಿಲ್ಲವೇ ? ಎಂದೂ ಕೇಳುತ್ತಾನೆ. ಆಮೇಲೆ "ಬಾರೇ ಲಕ್ಷ್ಮಿ ಹೊರಗೆ ಒಂದು ಗಳಿಗೆ" ಎಂದು ಕರೆಯುತ್ತಾನೆ.

ಯಾವ ಲಕ್ಷ್ಮಿ ಅವಳು? ಎಲ್ಲಿಯವಳು? ಹೇಗಿದ್ದಳು? ಯಾರಿಗೂ ಅದರ ಮಾಹಿತಿ ಸಿಕ್ಕಿರಲಿಲ್ಲ. ೧೯೪೧ರಲ್ಲಿ ’ಪ್ರಬುದ್ಧ ಕರ್ನಾಟಕ’ದಲ್ಲಿ, ಇದು ತನ್ನದೇ ಕಥೆಯೆಂಬ ಗುರುತು ಹತ್ತಬಾರದೆಂಬ ಉದ್ದೇಶದಿಂದ ’ಅಚ್ಚಣ್ಣ’ ಎಂಬ ಹೆಸರಿನಲ್ಲಿ ’ಮಾವನ ಮಗಳು’ ಎಂಬ ಕಥೆಯನ್ನು ಬರೆದಿದ್ದರಂತೆ. ೧೯೪೫ರಲ್ಲಿ ’ಸುಧಾ’ ಮಾಸಪತ್ರಿಕೆಯಲ್ಲಿ ’ತುಂಬಿದಮನೆ’ ಎಂಬ ಕಥೆಯನ್ನೂ ಬರೆದಿದ್ದರಂತೆ. ಅದರಂತೇ ೧೯೯೯ರಲ್ಲಿ ’ಮುಗಿದ ಬೆಳಕು’ ಎಂಬ ಕವನ ಅಡಕವಾಗಿರುವ ’ನವಿಲದನಿ’ ಕವನ ಸಂಕಲನ ಹೊರತಂದಿದ್ದರು. ಈ ಎಲ್ಲಾ ಕಡೆಗಳಲ್ಲೂ ತುಟಿಯಂಚಿನ ಸಿಡುಬಿನ ಕಲೆಯ ಹುಡುಗಿಯ ಪ್ರಸ್ತಾಪ ಬರುತ್ತದೆ. ಆದರೆ ನರಸಿಂಹಸ್ವಾಮಿಯವರ ಪತ್ನಿ ವೆಂಕಮ್ಮನವರಿಗೆ ಆ ರೀತಿಯ ಸಿಡುಬಿನ ಕಲೆ ಇರಲಿಲ್ಲ! ಹಾಗಾದರೆ ಯಾರಾಕೆ ಸಿಡುಬಿನ ಕಲೆಯವಳು ಎಂಬುದು ಬಹುಜನರನ್ನು ಕಾವ್ಯಾತ್ಮಕವಾಗಿ ಕುತೂಹಲಕ್ಕೆಳಸಿದರೂ ಕೆಲಜನರನ್ನು ಆಳವಾಗಿ ಹೊಕ್ಕು ಮರುಪ್ರಶ್ನಿಸುವಂತೇ ಮಾಡಿತು. ಕವಿಯ ಆಶಯವೇನಿತ್ತು ಎಂಬುದನ್ನು ತಿಳಿಯುವ ಕವನ ಕುತೂಹಲಿಯಾಗಿ ನಾಡಿಗರು ನರಸಿಂಹ ಸ್ವಾಮಿಯವರ ಸಹೋದರ ಕೆ.ಎಸ್. ಸುಬ್ಬನರಸಿಂಹಯ್ಯನವರನ್ನು ಕಂಡು ವಿಚಾರಿಸಿದ್ದಾರೆ.

೧೯೪೧ ರಿಂದ ೧೯೯೯ರ ವರೆಗಿನ ಕಾಲಾವಧಿಯಲ್ಲಿ ಯಾವತ್ತೂ ಮರೆಯಲಾಗದೇ ಆಗಾಗ ನೆನೆಯುತ್ತಲೇ ಇದ್ದ ಅ ಸಿಡುಬಿನ ಕಲೆಯ ಹುಡುಗಿ ಯಾರಾಗಿರಬಹುದು ?

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ |
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ
ಮೂವತ್ತು ತುಂಬಿಹುದು ಮದುವೆಯಿಲ್ಲ !

ಈ ಕವನದಲ್ಲಿ ಕಂಡ ಸೀತೆಯೂ ಬೇರಾರೂ ಅಲ್ಲ, ’ಅವಳೇ ಇವಳು!’ ತುಟಿಯಂಚಿನ ಸಿಡುಬಿನ ಕಲೆಯವಳು! ಕಥಾನಾಯಕಿಗೆ ಇಲ್ಲಿ ತಾಯಿಯಿರುವುದಿಲ್ಲ, ತಂದೆ ಶಾನುಭೋಗರಾಗಿ ಕೆಲಸಮಾಡುತ್ತಿರುತ್ತಾರೆ. ಹುಡುಗಿಗೆ ವಿನಾಕಾರಣ ವರಸಾಮ್ಯ ಕೂಡಿಬರುವುದೇ ಇಲ್ಲ. ಯಾರ್ಯಾರೋ ಗಂಡುಗಳು ಬರುತ್ತಾರೆ; ತಾಳಮೇಳ ಕೂಡುವುದಿಲ್ಲ. ತಾಯಿಯಿಲ್ಲದ ತಬ್ಬಲಿ ಎಂಬ ಅನಿಸಿಕೆ ಕವಿಯ ಹೃದಯವನ್ನು ಹಿಂಡುತ್ತಿದೆ.

ಎಂತೆಂತಹ ಅದ್ಭುತ ದಾಂಪತ್ಯಗೀತೆಗಳನ್ನು ಬರೆದ ಕೆ.ಎಸ್.ನ. ಅವರ ನಿಜವಾದ ’ಮೈಸೂರು ಮಲ್ಲಿಗೆ’ ಹುಟ್ಟಿದ್ದು ನೋವಿನ ನಲಿವಿನಲ್ಲಿ! ಕವಿಗೆ ಹಲವುಬಾರಿ ಕಾವ್ಯ ಜನಿಸುವುದೇ ಹಾಗೆ!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರೂಪಾಯಿ... ಬರೆದವರು

ಮದುವೆಯಾಗಿ ತಿಂಗಳಿಲ್ಲಾ ನೋಡಿರಣ್ಣ ಹೇಗಿದೆ
ನಾನು ಕೂಗಿ ಕರೆಯುವಾಗ ಬರುವಳೆನ್ನ ಶಾರದೆ....

ಬರೆದಿದ್ದಾರೆ; ಒಂದೊಂದೂ ಕವನ ತನ್ನ ಭಾವರಸದಿಂದ ಓದುಗನ ಮನಕ್ಕೆ ತಂಪೆರೆದು ಪ್ರೇಮಮಯ ಸರಸಮಯ ದಾಂಪತ್ಯವನ್ನು ಸೆರೆಹಿಡಿದುಕೊಡುವಲ್ಲಿ ಯಶಸ್ವಿಯಾಗಿದೆ.

ತನ್ನ ೮೪ನೇ ವಯಸ್ಸಿನಲ್ಲೂ ’ಪದ್ಯ ಮುಗಿದ ಬೆಳಗು’ ಎಂಬ ಕವನವೊಂದನ್ನು ಕೆ.ಎಸ್.ನ. ಬರೆದಿದ್ದಾರೆ. ಯಾವ ಹೃದ್ಯ ಅಂತರ್ಗತ ಪದ್ಯಗಳಾಗಿ ಹೊರಹೊಮ್ಮುತ್ತಿತ್ತೋ ಆ ಪದ್ಯದ ಗತಿಗೆ ಅಂತ್ಯ ಹಾಡಿದೆ ಎಂದು ಅವರೇ ಹೇಳಿಕೊಂಡರೇ? ಅರಿವಾಗದಲ್ಲ!

ಎಲ್ಲರಿಗೂ ನಗುವನ್ನು ಕೊಟ್ಟ ಈ ಕವಿ ತನ್ನ ಮುಖದಲ್ಲಿ ಪೂರ್ಣಪ್ರಮಾಣದ ನಗುವನ್ನು ಹೊರಲು ಸಾಧ್ಯವೇ ಆಗಲಿಲ್ಲವೇ ಎಂಬುದು ಉತ್ತರ ಸಿಗದ ಪ್ರಶ್ನೆ. ಆದರೆ ಒಂದಂತೂ ಸತ್ಯ: ಅವರ ಕೆಲವು ಇಷ್ಟಾರ್ಥಗಳು ನೇರವೇರಿರಲಿಲ್ಲ. ತನ್ನ ಸೋದರಮಾವನ ಮಗಳು ’ವಿಜಯಲಕ್ಷ್ಮೀ’ ಎಂಬಾಕೆಯನ್ನು ಕವಿ ಪ್ರೀತಿಸಿದ್ದರಂತೆ. ಅದು ಒಮ್ಮುಖ ಪ್ರೀತಿಯಲ್ಲ! ವರಸೆಯಲ್ಲಿ ಅತ್ತೆಯಮಗನಾದ ನರಸಿಂಹಸ್ವಾಮಿಯವರನ್ನು ಆಕೆ ಕೂಡ ಅಷ್ಟಾಗಿ ಪ್ರೀತಿಸುತ್ತಿದ್ದಳಂತೆ! [ಪದ್ಯ ಮುಗಿದ ಬೆಳಗು ಹಾಡಿನೊಂದಿಗೆ ಈ ಕವಿಜೀವನ ಕಥೆಯನ್ನು ಮುಂದುವರಿಸೋಣ]

ಕರೆದಾಗ ಬರುವುದೇತರ ಸೊಗಸು ನನ್ನವಳೆ
ಕರೆಸಿಕೊಳ್ಳದೆ ಬಾರ ನನ್ನಬಳಿಗೆ
ಬೀಸಣಿಗೆ ಇಲ್ಲದೆಯೇ ಬೇಸಿಗೆಯ ಕಳೆದೇನು
ನನ್ನೊಡನೆ ನೀನಿರುವ ತನಕ, ಚಲುವೆ!

ಅನ್ಯೋನ್ಯ ಪ್ರೀತಿಯ ಅನುಬಂಧದಲ್ಲಿ ಸಿಲುಕಿದ್ದ ಈ ಜೋಡಿಗೆ ಮದುವೆಯಾಗಲು ಅನುಮತಿ ಸಿಗಲೇ ಇಲ್ಲ! ೧೯೩೪ರಲ್ಲಿ ಕೆ.ಎಸ್. ನ ಅವರ ತಂದೆ ಗತಿಸಿದಮೇಲೆ ಕೆ.ಎಸ್.ನ ಅವರಿಗೆ ಮದುವೆ ಮಾಡುವುದೆಂತ ತಯಾರಿ ನಡೆಯುತ್ತಿತ್ತು. ತನ್ನ ಪ್ರೀತಿಯನ್ನು ಮನೆಮಂದಿಗೆ ಅರುಹಿದ್ದರೂ ತಾಯಿಯಿಲ್ಲದ ಹುಡುಗಿ ವಿಜಯಲಕ್ಷ್ಮಿಯನ್ನು ಮದುವೆಯಾದರೆ ಅಳಿಯ ಮಾವನ ಮನೆಗೆ ಹೋದಾಗ ಉಪಚರಿಸಲು ಯಾರಿರುತ್ತಾರೆ? ಅಥವಾ ಮೊದಲ ಬಾಣಂತನ ನೋಡಿಕೊಳ್ಳುವವರಾರು ಎಂಬ ಪ್ರಶ್ನೆಗಳು ಕೆ.ಎಸ್.ನ ಅವರ ತಾಯಿಯನ್ನು ಕಾಡಿದ್ದರಿಂದ, ಜೋಯಿಸರಿಗೆ ಗುಟ್ಟಾಗಿ ತಿಳಿಸಿ-"ಜಾತಕಕ್ಕೆ ಕೂಡಿಬರುತ್ತಿಲ್ಲಾ" ಎಂಬ ಸಬೂಬು ನೀಡಿಸಿ ಆ ಹುಡುಗಿಯನ್ನು ಮದುವೆಯಾಗದಂತೇ ತಪ್ಪಿಸಿದ್ದರಂತೆ. ಮೊದಲೇ ತಾಯಿಯಿಲ್ಲದ ತಬ್ಬಲಿ ಹೆಣ್ಣುಮಗಳನ್ನು ಮನಸಾರೆ ಪ್ರೀತಿಸಿದ್ದ ಕವಿ ಮದುವೆಯ ಭರವಸೆಯನ್ನೂ ನೀಡಿದ್ದರು! ತಪ್ಪಿದ ತಾಳಕ್ಕೆ ಬಲಿಯಾದ ತನ್ನ ಪ್ರೀತಿಗೆ ತನ್ನ ಜೀವನದ ಅಂತ್ಯದವರೆಗೂ ಆ ಕೊರಗಿನಲ್ಲೇ ಅವರಿದ್ದರು ಎನ್ನಬಹುದಾಗಿದೆ. ಹಾಗಂತ ವೆಂಕಮ್ಮನವರನ್ನು ಅವರು ಕಡೆಗಣಿಸಲಿಲ್ಲ. ಬಹುಕಾಲ ವೆಂಕಮ್ಮನವರಲ್ಲೇ ಆ ಹುಡುಗಿಯ ಪ್ರತಿರೂಪವನ್ನು ಕವಿ ಕಂಡಿದ್ದಾರೆ.

ನನಗೆ ತಿಳಿಯದು ನೋಡು ನಿನ್ನ ಒಲವಿನ ಜಾಡು
ಮುಡಿದ ಹೂ ಎಸೆದುಬಿಡು ನನ್ನಮೇಲೆ
ಪದ್ಯವನು ಬದಿಗಿಟ್ಟೆ ನಾನು,ನೀನೇ ಕವಿತೆ
ನಿನ್ನಾಣೆಗೂ ನೀನೇ, ನನ್ನ ನಲಿವೆ!

ನೋವಿನ ನರಗಳನ್ನು ಎಳೆ ಎಳೆಯಾಗಿ ಹೊರಗೆಳೆದಂತೇ ಭಾಸವಾಗುವ ಈ ಕವನದಲ್ಲಿ ಪೂರೈಸಲಾಗದ ಪ್ರೀತಿಯ ಭರವನೆಯನ್ನು ಅಲವತ್ತುಕೊಂಡರೇ ?

ನಿನ್ನ ಕೆಳದುಟಿಯಲ್ಲಿ ಇರುವ ಸಿಡುಬಿನ ಕಲೆಯ
ನನ್ನ ಸಾವಿರ ಮುತ್ತು ತೊಡೆಯಲಿಲ್ಲ;
ನಿನ್ನ ಪಾಲಿಗೆ ನಾನು ತಂತಿಯಿಲ್ಲದ ವೀಣೆ
ವೀಣೆ ಬಂದರು ನೀನು ಮಿಡಿಯಲಿಲ್ಲ!

ಕೆಳದುಟಿಯಲ್ಲಿ ಸಿಡುಬಿನ ಕಲೆಯುಳ್ಳ ನನ್ನವಳೇ ನಿನ್ನ ಪಾಲಿಗೆ ನಾನು ತಂತಿಯೇ ಇಲ್ಲದ/ ಮೀಟಲಾಗದ ವೀಣೆಯಾಗಿಬಿಟ್ಟೆ! ಮದುವೆಯಾದರೂ, ಹೊಸದೊಂದು ವೀಣೆ ಬಂದರೂ ಅದನ್ನು ನೀನು ಮೀಟದಾದೆ!

ಸಿರಿಮೌನದಲ್ಲಿ ನಾನೊಲವ ಹುಡುಕಲು ನಡೆದೆ
ಊರ ಕಟ್ಟೋಡಿದೆನು ಹೊಳೆಯವರೆಗೆ;
ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು-
ಕವಿತೆಯಾಯಿತು ಪದ್ಯ ಕಟ್ಟಕಡೆಗೆ

ತನ್ನ ಹರೆಯದ ಆ ದಿನದಲ್ಲಿ ಹೊಳೆಯಂಚಿನಲ್ಲಿ ಅವಳೊಂದಿಗೆ ಕೈಹಿಡಿದು ಮಾತನಾಡುವಾಗ ಮೈಬಿಸಿಬಿಸಿಯಾಗಿತ್ತು, ಹೇಗೂ ಆಗದ ತಮ್ಮ ಸಾಂಗತ್ಯವನ್ನು ಮೌನದಲ್ಲೇ ಅಡಗಿಸಿ ಕಾವ್ಯಕನ್ಯೆಯಾಗಿ ನಿನ್ನನ್ನು ನಿರೂಪಿಸಿದೆನೆಂಬ ಕವಿಮನದ ಈ ಭಾವಕ್ಕೆ ಅನ್ಯವುಂಟೇ? ನಾಡಿಗರು ತಿಳಿಸಿದ ಈ ವಿಷಯ ಕೇಳಿ ಭಾರವಾದ ಮನಸ್ಸು ಬಹಳ ಹೊತ್ತು ಸ್ಪಂದಿಸಲಿಲ್ಲ. ಅದೊಂಥರಾ ಡೆಡ್ ಲಾಕ್ ಆದಹಾಗೇ ಸುಮ್ಮನಾಗಿಬಿಟ್ಟಿತ್ತು. ಅಮರಪ್ರೇಮಕ್ಕೆ ತಾಜಮಹಲನ್ನೋ ಮತ್ತೊಂದನ್ನೋ ನಾವು ಹೆಸರಿಸುತ್ತೇವೆ. ಇಬ್ಬಂದಿತನದಲ್ಲಿಯೂ ತನ್ನ ಜೀವಿತದಲ್ಲಿ ಸಿಕ್ಕಿದವಳಲ್ಲೇ ದಕ್ಕದ ಆ ಹುಡುಗಿಯನ್ನೂ ಕಂಡುಕೊಳ್ಳುತ್ತಾ, ಕೊಡಲಾಗದ ಜೀವನಪ್ರೀತಿಗೆ ತನ್ನೊಳಗೇ ಕೊನೇ ಕ್ಷಣದವರೆಗೂ ಮರುಗುತ್ತಾ ಬಾಳಿದ, ಇನ್ನು ತನ್ನಿಂದಾಗದು-ಪದ್ಯ ನಿಲ್ಲಿಸುತ್ತೇನೆಂಬುದನ್ನೂ ಪದ್ಯದಲ್ಲೇ ಹೇಳಿದ ಕವಿಯ ಈ ಪ್ರೇಮ ನಿಜವಾದ ಪ್ರೇಮಕ್ಕೆ ಹಿಡಿದ ಕನ್ನಡಿ. ಇವತ್ತು ಪ್ರೀತಿಸಿದ್ದೇವೆ ಎಂದುಕೊಳ್ಳುವ ಅನೇಕ ಹುಡುಗರು ತಮಗೆ ಸಿಕ್ಕದ ಹುಡುಗಿ ಇನ್ನಾರಿಗೂ ಸಿಗಬಾರದು ಎಂಬಂತಹ ದುಷ್ಟವರ್ತನೆಗೆ ಮುಂದಾಗುತ್ತರಲ್ಲಾ, ಪ್ರೇಮ ಎಂಬುದು ನಿಜವಾಗಿ ಅವರದಾಗಿದ್ದರೆ ಪ್ರೇಮಿಸಿದ ಜೀವ ಸುಖವಾಗಿರಲಿ ಎಂದು ಹಾರೈಸುವುದು, ಹಾರೈಸಿ ಬೀಳ್ಕೊಡುವುದು ಒಪ್ಪತಕ್ಕ ಕೆಲಸ. ಇವತ್ತಿನ ದಿನಮಾನದಲ್ಲಿ ಹಣದ-ಸೌಲಭ್ಯದ ಹಿಂದೆ ಬಿದ್ದಿರುವ ಹುಡುಗಿಯರ ಮನೋಭೂಮಿಕೆಯಲ್ಲಿ ಪ್ರೇಮ ಎಂಬ ಪದಕ್ಕೆ ಅರ್ಥವಿಲ್ಲ; ಆ ಅನುಭೂತಿಯೇ ಇಲ್ಲವಾದಾಗ ಕೆ.ಎಸ್.ನ. ಬರೆದಂತಹ ಪ್ರೇಮ ಪದ್ಯಗಳ ಹುಟ್ಟೂ ಸಾಧ್ಯವಿಲ್ಲ.