ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 2, 2011

ಶಿವ ಎಂದರೆ ಶುಭ


ಶಿವ ಎಂದರೆ ಶುಭ

ಜಗನ್ನಿಯಾಮಕನ ಹಲವು ಸಾಕಾರ-ರೂಪಗಳಲ್ಲಿ ಶಿವನಾಗಿಯೂ ಒಂದುರೂಪ ಕಾಣುತ್ತದೆ. ಸಮಷ್ಟಿಯಿಂದ ನೋಡುವವರಿಗೆ ಹರಿ ಹರ ಬ್ರಹ್ಮಾದಿಗಳಲ್ಲಿ ಭೇದ ಕಾಣಸಿಗುವುದಿಲ್ಲ. ವಾದಕ್ಕೆ ಕೆಲವರು ಬ್ರಹ್ಮನ ಮಗಳಾದ ಶಾರದೆಯನ್ನೇ ಬ್ರಹ್ಮ ಮದುವೆಯಾಗಿರುವುದು ತೀರಾ ಹಾಸ್ಯಾಸ್ಪದ ಮತ್ತು ಖಂಡನಾರ್ಹ ಎಂದು ಹೇಳಿದರೂ ನಮಗೆ ಕಾಣದ ಆ ಆನಂದಲೋಕದಲ್ಲಿ ಯಾವ ಬ್ರಹ್ಮನೂ ಇಲ್ಲ, ಶಾರದೆಯೂ ಇಲ್ಲ, ವಿಷ್ಣುವಾಗಲೀ ಶಿವನಾಗಲೀ ಇಲ್ಲ. ಅಥವಾ ಎಲ್ಲರೂ ಇದ್ದಾರೆ ಎಂಬುದಾಗಿ ತೋರಿಸುವ ಕೈವಾಡ ಮೂಲ ಪರಬ್ರಹ್ಮನದ್ದು. ಒಂದು ಕಡೆ ಕೈಲಾಸ ಇನ್ನೊಂದು ಕಡೆ ವೈಕುಂಠ ಅಲ್ಲೇ ಕಮಲವುದ್ಭವಿಸಿ ಮೇಲೆದ್ದು ಬ್ರಹ್ಮಲೋಕ. ಒಟ್ಟಾರೆ ನಮ್ಮ ಮಾನವೀಯ ಸಂಪರ್ಕ-ಸಂಬಂಧ-ಕ್ಲೀಷೆ-ಭಾವನೆ ಎಲ್ಲವನ್ನೂ ತುಂಬಿ ನಾವು ಕಾಣಬಹುದಾದ ಎಲ್ಲಾ ರೂಪಗಳಲ್ಲೂ ಭಗವಂತನನ್ನು ಕಂಡಿದ್ದೇವೆ, ಚಿತ್ರಿಸಿದ್ದೇವೆ.

ಹಾಗೆ ಚಿತ್ರಿಸಿರುವುದು ತಪ್ಪೆಂದು ಹೇಳುವುದಕ್ಕಿಂತಾ ಆದ್ಯ ಋಷಿಮುನಿಗಳು ಅ ಥರದ ಹಲವು ರೂಪಗಳಲ್ಲಿ ಪರಬ್ರಹ್ಮನ ಅನುಸಂಧಾನ ಮಾಡಿದರು. ಮೂಲಶಕ್ತಿ ತನ್ನನ್ನೇ ಹಲವು ರೂಪಗಳಲ್ಲಿ ಪ್ರಕಟಪಡಿಸಿಕೊಂಡು ಹಲವು ದೇವಾನುದೇವತೆಗಳ ಮುಖಹೊತ್ತು ಅಲ್ಲಿಯೂ ಭಾವ ಮಾವ ಅಣ್ಣ-ತಮ್ಮ ತಂದೆ-ತಾಯಿ ಇಂತಹ ಸಂಬಂಧಗಳಲ್ಲಿ ವಿಜೃಂಭಿಸಿ ತೋರಿಸಿತು. ಹೀಗೆ ನೋಡುವಾಗ ಶಾರದೆ ಬ್ರಹ್ಮನ ಮಗಳೂ ಅಲ್ಲ, ಬ್ರಹ್ಮ ಶಾರದೆಗೆ ಗಂಡನೂ ಅಲ್ಲ. ’ಏಕೋ ದೇವಃ ಕೇಶವೋವಾಂ ಶಿವೋವಾಂ’ ಎಂಬುದನ್ನು ನೆನೆದರೆ ದೇವನೊಬ್ಬನೇ ನಾಮ ಹಲವು ಎಂಬುದು ಸ್ಪಷ್ಟವಾಗುತ್ತದೆ. ಈ ಹಲವು ನಾಮಗಳನ್ನು ಉಪಯೋಗಿಸಿಕೊಂಡೇ ಇಂದಿನ ಮಾಧ್ಯಮಚಾಲಿತ ಜ್ಯೋತಿಷಿಗಳು ಎಲ್ಲರಿಗೂ ನಾಮ ಎಳೆಯುವ ಕೆಲಸಮಾಡುತ್ತಿದ್ದಾರೆ ಎಂಬುದೂ ಕೂಡ ಅಷ್ಟೇ ವಿಷಾದನೀಯ.

ಮುನಿಜನ ಕಂಡ ಪರಬ್ರಹ್ಮನ ಹಲವು ರೂಪವಿನ್ಯಾಸಗಳಲ್ಲಿ ಶಿವನರೂಪವೂ ಒಂದು. ಅಲಂಕಾರದ ದೇವರಾಗಿ ವಿಷ್ಣುವನ್ನು ಗುರುತಿಸಿದ ನಮ್ಮ ಜನ ನಿರಾಡಂಬರ ಸರಳರೂಪದಲ್ಲಿ ಶಿವನನ್ನು ಕಂಡರು. ಸೃಷ್ಟಿಗೆ ಬ್ರಹ್ಮನೆಂದೂ ಪಾಲನೆಗೆ ವಿಷ್ಣುವೆಂದೂ ಲಯಕರ್ತ ಶಿವನೆಂದೂ ತಿಳಿದ ಕೆಲವರು ಶಿವನು ತಮ್ಮನ್ನು ನಾಶಗೊಳಿಸುವಾತನೆಂದು ತಿಳಿದು ಆತನನ್ನು ದೂರವೇ ಇಟ್ಟರು; ದ್ವೇಷಿಸಿದರು. ಹಲವು ಪೌರಾಣಿಕ ಕಥೆಗಳಲ್ಲಿ ಸಮಸ್ಯೆಗಳನ್ನು ತಾನೇ ಸೃಜಿಸಿಕೊಂಡು ಅವುಗಳ ಸುಳಿಯೊಳಗೆ ತಾನೇ ಸಿಲುಕಿ ಒದ್ದಾಡುವ ಶಿವನನ್ನು ಕಂಡು ಜನ ’ಬೋಳೇ ಶಂಕರ’ ’ಬೋಲೇನಾಥ್’ ಎಂದು ಕರೆದರು. ಲಯಕರ್ತನೆಂಬ ತಿಳುವಳಿಕೆಯಿಂದ ಆತ ಸ್ಮಶಾನವಾಸಿ ಎಂದರು, ಬೂದಿಬಡಕ ಎಂದರು. ಆದರೆ ಆತ ಲೋಕದ ಕಂಟಕವನ್ನು ನಾಶಮಾಡುವ ಸಲುವಾಗಿ ತನ್ನನ್ನೇ ಸಂಕಷ್ಟಕ್ಕೆ ಸಿಲುಕಿಸಿಕೊಂಡು ಪರೋಕ್ಷವಾಗಿ ಉಪಕರಿಸಿದ. ಸಮುದ್ರಮಥನದಲ್ಲಿ ಪ್ರಪ್ರಥಮವಾಗಿ ಲಭಿಸಿದ ಹಾಲಾಹಲವನ್ನು ಕುಡಿದು ನಂಜುಡಿಯಾದ. ತನ್ನದೇ ಇನ್ನೊಂದು ರೂಪ ಪಾರ್ವತಿ ಓಡಿಬಂದು ಕುಡಿದ ನಂಜು ಶರೀರದ ಒಳಗೆ ಇಳಿಯದಂತೇ ಗಂಟಲನ್ನು ನಾಗನಿಂದ ಬಂಧಿಸಿದಾಗ ನೀಲಿಯಾದ ಕಂಠಕಾಣಿಸಿ ನೀಲಕಂಠನಾದ. ನಾಗನನ್ನು ಮನಸಾರೆ ಧರಿಸಿ ನಾಗಾಭರಣನಾದ. ಚಂದದ ಚಂದ್ರಮನನ್ನು ಶಿರದಲ್ಲಿ ಧರಿಸಿ ಚಂದ್ರಮೌಳಿಯಾದ. ಹರಿಯುವ ಗಂಗೆಯನ್ನು ಮುಡಿಯಲ್ಲಿ ಜೋಪಾನವಾಗಿಸಿ ಗಂಗಾಧರನಾದ.

ಇದೇ ಬೋಳೇ ಶಂಕರ ನಂದಿಯನ್ನೇ ವಾಹನವನ್ನಾಗಿಸಿಕೊಂಡು ಪಶುಪತಿಯಾದ. ಮೃತ್ಯುವಿನ ದವಡೆಯಲ್ಲಿ ಸಿಲುಕಿದ್ದ ಭಕ್ತ ಮಾರ್ಕಾಂಡೆಯನಿಗೆ ಜೀವದಾನ ನೀಡಿ ಮೃತ್ಯುಂಜಯನಾದ! ತಿಳಿಯದೇ ಬೇಡನೊಬ್ಬ ಪ್ರದೋಷಕಾಲದಿಂದ ಬೆಳಗಿನತನಕ ನಡೆಸಿದ ಬಿಲ್ವಾರ್ಚನೆಗೆ ಒಲಿದ ಪರಮಶಿವನಾದ. ಮಾಂಸವನ್ನೇ ಉಣಬಡಿಸಿ ತನ್ನ ಕಣ್ಣನ್ನೇ ಕಿತ್ತು ಲಿಂಗಕ್ಕೆ ಅಂಟಿಸಿದ ಭಕ್ತ ಬೇಡರ ಕಣ್ಣಪ್ಪನಿಗೆ ಪ್ರತ್ಯಕ್ಷನಾದ. ಒಂದೇ ಎರಡೇ ....ಹೇಳುತ್ತಾ ಹೋದರೆ ತಿಂಗಳುಗಟ್ಟಲೇ ಹೇಳುವಂತಹ ಸ್ವಾರಸ್ಯಕರ ಘಟನೆಗಳು ನಮ ಶಿವನ ಸುತ್ತ ಇವೆ.

ಕೈಲಾಗದ ಮನುಜರಿಗೆ ಕುಳಿತಲ್ಲೇ ಹೃದಯದಲ್ಲೇ ಮನಸ್ಸಿನಲ್ಲೇ ಪೂಜಿಸಲು ಅನುವಾಗಲೆನ್ನುವ ಅರ್ಥದಲ್ಲಿ ಪರಶಿವನ ಲೌಕಿಕದ ಮೂರ್ತರೂಪವಾದ ಶ್ರೀಆದಿ ಶಂಕರರು ಒಂದು ಸ್ತುತಿಗೀತೆಯನ್ನು ರಚಿಸಿದರು. ಅದೇ ’ಶಿವ ಮಾನಸ ಪೂಜಾ’ ಎಂಬ ಹೆಸರಲ್ಲಿ ಜನಜನಿತವಾಯಿತು.

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ
ನಾನಾರತ್ನ-ವಿಭೂಷಿತಂ ಮೃಗಮದಾ-ಮೋದಾಂಕಿತಂ ಚಂದನಂ |
ಜಾತೀ-ಚಂಪಕ-ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || ೧ ||

ತಾತ್ಪರ್ಯ ---

ಹೇ ಪರಶಿವನೇ, ರತ್ನಖಚಿತ ಸಿಂಹಾಸನದಲ್ಲಿ ನಿನ್ನನ್ನು ಕೂರಿಸಿ ಶುದ್ಧವಾದ ಹಿಮಜಲದಿಂದ ಅಭಿಷೇಚಿಸಿ ದಿವ್ಯ ಪೀತಾಂಬರವನ್ನು ಅರ್ಪಿಸುತ್ತಿದ್ದೇನೆ, ನಾನಾ ವಿಧದ ರತ್ನಾಭರಣಗಳಿಂದ ಅಲಂಕರಿಸಿ ಕಸ್ತೂರೀಯುಕ್ತ ಚಂದನವನ್ನು ಪೂಸಿ ತಿಲಕವನ್ನು ಹಚ್ಚಿದ್ದೇನೆ. ಜಾತೀ ಚಂಪಕಾದಿ ಹಲವು ಪುಷ್ಪಗಳಿಂದಲೂ ಬಿಲ್ವಪತ್ರೆಯಿಂದಲೂ ಅರ್ಚಿಸಿ ಸುಗಂಧಭರಿತ ಧೂಪವನ್ನು ಬೆಳಗಿದ್ದೇನೆ, ಸುಂದರ ದೀಪವನ್ನು ಉರಿಸಿ ಆರತಿಮಾಡುತ್ತಿದ್ದೇನೆ. ಈ ಎಲ್ಲವನ್ನೂ ನನ್ನ ಹೃದಯದಲ್ಲಿಯೇ ಮನಸಾ ನಿನಗೆ ಅರ್ಪಿಸುತ್ತಿದ್ದೇನೆ....ಸ್ವೀಕರಿಸು.

ಎಲ್ಲವನ್ನೂ ಕೇವಲ ಪರಿಶುದ್ಧ ಮನದಿಂದ ಕಲ್ಪಿಸಿಕೊಂಡು ನಡೆಸಬಹುದಾದ ಈ ಪೂಜೆಯಲ್ಲಿ ಶಿವನಿಗೆ ಅವರು ಸಲ್ಲಿಸಿದ ವೈಭವೋಪೇತ ಪೂಜೆಯನ್ನು ನಾವು ಕಾಣಬೇಕು.

ಮುಂದುವರಿದು ಶಂಕರರು ಹೇಳಿದ್ದಾರೆ....

ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ|
ಶಾಖಾನಾಮಯುತಂ ಜಲಂ ರುಚಿಕರಂ ಕರ್ಪೂರ-ಖಂಡೋಜ್ವಲಂ
ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ೨ ||

ನವರತ್ನ ಖಚಿತವಾದ ಬಂಗಾರದ ಪಾತ್ರೆಗಳಲ್ಲಿ ತುಪ್ಪಸಹಿತ ಪಾಯಸವನ್ನು ನೀಡುತ್ತಿದ್ದೇನೆ, ಹಾಲು ಮೊಸರು ಬಳಸಿದ ಸೇರಿದಂತೇ ಪಂಚ ಭಕ್ಷ್ಯವನ್ನು ನೀಡುತ್ತಿದ್ದೇನೆ, ಬಾಳೇಹಣ್ಣುಗಳನ್ನು ಕೊಡುತ್ತಿದ್ದೇನೆ, ಕುಡಿಯಲು ಪಚ್ಚಕರ್ಪೂರಭರಿತ ಸ್ವಾದಿಷ್ಟ ಪಾನಕವನ್ನು ನೀಡುತ್ತಿದ್ದೇನೆ, ಯಾಲಕ್ಕೀ-ಲವಂಗಾದಿ ಪಚ್ಚಕರ್ಪೂರ ಮಿಶ್ರಿತ ನಾಗವಲ್ಲೀ ವೀಳ್ಯದೆಲೆಯ ತಾಂಬೂಲವನ್ನು ಮೆಲ್ಲಲು ಮನಸಾರೆ ಕಲ್ಪಿಸಿಕೊಂಡು ನೀಡುತ್ತಿದ್ದೇನೆ ಪ್ರಭೋ ನೀನು ಸ್ವೀಕರಿಸುವಂಥವನಾಗು.

ಮತ್ತೆ ಹೇಗೆಲ್ಲಾ ಶಿವನನ್ನು ಸೇವಿಸಬೇಕೆಂಬುದನ್ನು ಶಂಕರರು ಮುಂದೆ ಹೇಳುತ್ತಾರೆ....

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ
ವೀಣಾ-ಭೇರಿ-ಮೃದಂಗ-ಕಾಹಲ-ಕಲಾ ಗೀತಂ ಚ ನೃತ್ಯಂ ತಥಾ |
ಸಾಷ್ಟಾಂಗ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತ ತವ ವಿಭೋ ಪೂಜಾಂ ಗೃಹಾಣ ಪ್ರಭೋ || ೩ ||

ಚತ್ರಿಯನ್ನು ಹಿಡಿದ್ದೇನೆ, ಚಾಮರದಿಂದ ಗಾಳಿಬೀಸುತ್ತಿದ್ದೇನೆ, ಪಲ್ಲಂಗವೇ ಮೊದಲಾದ ಎಲ್ಲವನ್ನೂ ಸಮರ್ಪಿಸುತ್ತಿದ್ದೇನೆ, ಹೊಳೆಯುವ ದರ್ಪಣವನ್ನು ತೋರಿಸಿದ್ದೇನೆ, ವೀಣೆ ಭೇರಿ ಮೃದಂಗವೇ ಮೊದಲಾದ ಸಂಗೀತವಾದ್ಯಗಳನ್ನು ನುಡಿಸಿ/ಬಾರಿಸಿ ಹಾಡುಗಳನ್ನು ಹಾಡಿ ನರ್ತಿಸುತ್ತಿದ್ದೇನೆ. ಹಲವು ವಿಧ ಸ್ತುತಿಗಳನ್ನು ಹೇಳಿ ಸಾಷ್ಟಾಂಗವೆರಗುವ ಈ ಎಲ್ಲಾ ಕಾರ್ಯಗಳನ್ನೂ ಸಂಕಲ್ಪಮಾತ್ರದಲ್ಲೇ ಮನದಲ್ಲಿ ಕಲ್ಪಿಸಿಕೊಂಡು ಕೊಡುತ್ತಿದ್ದೇನೆ ಪ್ರಭುವೇ ದಯಮಾಡಿ ನನ್ನ ಪೂಜೆಯನ್ನು ಗ್ರಹಿಸು.

ಇನ್ನೇನು ಮಾಡಲಾದೀತು ಎಂಬುದನ್ನು ಶಿವನಲ್ಲೇ ಕೇಳುತ್ತಾರೆ ...

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || ೪ ||

ವಿಷಯೋಪಭೋಗಗಳಲ್ಲಿ ನಿರತವಾದ ಪ್ರಾಣಭರಿತ ಈ ಮನುಜ ಶರೀರದಲ್ಲಿ ಪಾದಗಳಿಂದ ಸಂಚರಿಸುವುದೇ ಪ್ರದಕ್ಷಿಣವಿಧಿಯೆಂದು ತಿಳಿದು ನಡೆಸುತ್ತಿರುವ ಈ ಪೂಜೆಯನ್ನು ಆತ್ಮರೂಪದಲ್ಲಿ ಗಿರಿಜಾ ಸಹಿತನಾಗಿ ಒಳಗೊಳಗೇ ಸಂಚರಿಸುತ್ತಿರುವ/ಕುಳಿತಿರುವ ನಿನ್ನ ಆರಾಧನೆಯ ಕರ್ಮ ನನ್ನಿಂದ ನಡೆಯಿತೆಂದು ತಿಳಿಯುತ್ತೇನೆ.

ಇದೆಲ್ಲವೂ ಮುಗಿದಮೇಲೆ ಬೇಡುವುದೇ ಅಪರಾಧ ಕ್ಷಮಾಪಣೆಗಾಗಿ .....

ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ || ೫ ||

ಹೇ ಮಹಾದೇವ ಶಂಭೋ, ನನ್ನ ಕೈ-ಕಾಲುಗಳಿಂದ ದೇಹದಿಂದ ನಡೆದ ಕರ್ಮದಿಂದ, ಕಣ್ಣು-ಕಿವಿ-ಮೂಗು-ಬಾಯಿ-ಚರ್ಮ ಈ ಪಂಚೇಂದ್ರಿಯಗಳಿಂದ, ಮನಸ್ಸಿನಿಂದ ವಿಹಿತವೋ ಅವಿಹಿತವೋ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದ ಅಪರಾಧಗಳನ್ನೆಲ್ಲಾ ಕ್ಷಮಿಸು.

ಸಂಸ್ಕೃತಭಾಷೆಯ ರಸಪಾಕದೊಂದಿಗೆ ಸರಳಪೂಜೆಯ ಸುಲಭಮಾರ್ಗವನ್ನು ಶಂಕರರೆಂಬ ಪಾಕಶಾಸ್ತ್ರ ಪಂಡಿತ ’ಶಿವ ಮಾನಸ ಪೂಜಾ’ ಎಂಬ ಶಿರೋನಾಮೆಯಡಿ ಎರಕವೆರೆದು ಜನಸಾಮಾನ್ಯರಿಗೆ ಉಪಕರಿಸಿದರು. ಕೃತಿಕಾರರಿಗೆ ನಮಿಸುವುದೂ ಒಂದೇ ಸಾಕ್ಷಾತ್ ಶಂಭುವಿಗೆ ವಂದಿಸುವುದೂ ಒಂದೇ ಆಗಿರುವುದರಿಂದ ಈ ಸ್ತುತಿಯನ್ನು ಓದುತ್ತಿರುವಂತೆಯೇ ನಾವು ಅಸದೃಶ ಆನಂದಕ್ಕೆ ಒಳಗಾಗಿ ತಂತಾನೇ ಅವರೀರ್ವರಿಗೂ ನಮಿಸಿರುತ್ತೇವೆ; ಪರಮಾತ್ಮನಿಗೆ ಮಣಿದಿರುತ್ತೇವೆ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುತ್ತಾರಲ್ಲಾ ಹಾಗೇ ಕಂಠಸ್ಥವಾಗಿ ಈ ಮಾನಸ ಪೂಜೆಯನ್ನು ಹಾಡಿದಾಗ/ಹಾಡಿದ್ದನ್ನು ಕೇಳಿದಾಗ ಸಿಗುವ ಆನಂದ ಸ್ಥಿತಿಯನ್ನು ಅನುಭವಿಸಿದವರೇ ಬಲ್ಲರು!

ಅರಿತವರಿಗೆ ಹರಿಯೂ ಒಂದೇ ಹರನೂ ಒಂದೇ. ಕವಿ ದಿ| ಪು.ತಿ. ನರಸಿಂಹಾಚಾರ್ಯರು ಸಾರಿದರು---

ಹರಿಯ ಹೃದಯದಿ ಹರನ ಕಂಡೆನು
ಹರನ ಹೃದಯದಿ ಹರಿಯನು
ಸಿರಿಯ ಹೃದಯದಿ ಶಿವೆಯ ಕಂಡೆನು
ಶಿವೆಯ ಹೃದಯದಿ ಸಿರಿಯನೂ

ಇದರರ್ಥ ತಮಗೆಲ್ಲಾ ವಿದಿತವಷ್ಟೇ ? ಬೇಡನೊಬ್ಬ ರಾತ್ರಿಹೊತ್ತು ಕಾಡಲ್ಲಿ ದಾರಿತಪ್ಪಿ, ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ ಶೋಕಭರಿತನಾಗಿ, ಪ್ರಾಣಭೀತಿಯಿಂದ ಕಾಡುಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ರಾತ್ರಿಕಳೆಯುವ ಸಲುವಾಗಿ ಗೊತ್ತಿಲ್ಲದೇ ಬಿಲ್ವದಮರವನ್ನೇರಿ ಕುಳಿತು, ಬೇಸರ ಕಳೆಯಲು ಆಗಾಗ ಬಿಲ್ವದಳಗಳನ್ನು ಕಿತ್ತು ಕೆಳಗೆ ಬಿಸುಟಿದ್ದು ಮರದಡಿಯಲ್ಲಿ ಯಾವುದೋ ಕಾಲಘಟ್ಟದಲ್ಲಿ ಸ್ಥಾಪಿತವಾಗಿದ್ದ ಲಿಂಗದಮೇಲೆ ಅದು ಬೀಳುತ್ತಿದ್ದು, ಕೇವಲ ಈ ಪೂಜೆಯಿಂದಲೇ ಪ್ರಸನ್ನನಾದ ಭಕ್ತಾಗ್ರೇಸರ ಬೋಳೇ ಶಂಕರನನ್ನು ಮೈಸೂರಿನ ಕಡೆಯ ಜನ ಅಪ್ಪಟ ಕನ್ನಡದಲ್ಲಿ ರಾಗವಾಗಿ

ಮಲ್ಲೀಗಿ ಹೂವಿರಿಸಿ ಮಣ್ಣ ಹಣತೆಯ ಬೆಳಗಿ

........ಸ್ವಾಮೀ ನಂಜುಂಡೂ ಮನಗಂಡೂ

-ಎಂದು ನಮ್ಮ ಜನಪದರು ಕಟ್ಟಿದ ಹಾಡನ್ನು ಹಾಡುವಾಗ ಕೂಡ ಸ್ವಾಮಿ ನಂಜುಂಡು ಇವರೆಲ್ಲಾ ಹೇಳುತ್ತಿರುವುದನ್ನು ನಂಜನಗೂಡಿನಲ್ಲಿ ಕೂತು ಆಲೈಸುತ್ತಿದ್ದಾನೇನೋ ಅನಿಸುವಷ್ಟು ಭಾವನೆ ಉಕ್ಕಿ ಹರಿಯುತ್ತದೆ. ಜನತೆ ತಮ್ಮ ಕಷ್ಟ-ಸುಖಗಳನ್ನು ಸಖನಾದ/ಗೆಳೆಯನಾದ/ ರಕ್ಷಕನಾದ ಶಿವನಲ್ಲಿ ಹೇಳಿಕೊಳ್ಳುವ ಪರಿ ಇದೆಯಲ್ಲಾ ಅದನ್ನೊಮ್ಮೆ ಕೇಳಿದರೆ ಭಾವುಕರ ಕಣ್ಣು ತೇವವಾಗಿ ಆನಂದಭಾಷ್ಪ ಉದುರುವುದರಲ್ಲಿ ಯಾವುದೇ ಸಂಶಯವಿಲ್ಲ.

ಶಿವವೆಂದರೆ ಶುಭವೇ ಹೊರತು ಶಿವ ಎನ್ನುವುದು ಕೇವಲ ಪರಶಿವ ಎಂಬರ್ಥದಲ್ಲಲ್ಲ. ಶುಭವೆಲ್ಲವೂ ಶಿವನಿಂದಲೇ ಘಟಿಸುವುದರಿಂದ ಅವನಿಗೆ ಅದು ಅನ್ವರ್ಥನಾಮ. ಇಂತಹ ಶಿವನಿಗೆ ಇಂಥದ್ದೇ ರೂಪವೆಂದಿಲ್ಲ.

ಶಿವಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ |
ಮಮ ಶತ್ರು ಹಿತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

--ಎನ್ನುತ್ತೇವೆ. ಇಲ್ಲಿಯೂ ’ಶಿವಂ’ ಎಂಬ ಹೆಸರು ಬಂತು. ಶುಭವನ್ನುಂಟು ಮಾಡುವ, ಆರೋಗ್ಯವನ್ನೂ ಧನಕನಕ ಸಂಪತ್ತನ್ನೂ ತರುವ ಜ್ಯೋತಿಯೇ ನನ್ನ ಶತ್ರುವಿನ ಒಳಿತಿಗಾಗಿಯೂ ಕೂಡ ಸಂಜೆಹೊತ್ತಲ್ಲಿ ನಿನ್ನನ್ನು ಬೆಳಗಿ ಪ್ರಾರ್ಥಿಸುತ್ತೇನೆ--ಎಂತಹ ಆದರ್ಶ ತತ್ವ-ಸಂಪ್ರದಾಯ. ಇಂತಹ ಜ್ಯೋತಿಸ್ವರೂಪನೂ ಶಿವನೇ ಆಗಿರುವಾಗ ಪರ್ವಕಾಲದಲ್ಲಿ ಹಲವು ದೀಪಗಳನ್ನು/ಜ್ಯೋತಿಗಳನ್ನು ಬೆಳಗಿ ಪ್ರಾರ್ಥಿಸುವುದರಿಂದ ನಮ್ಮ ಅಂಧಕಾರ ತೊಲಗುತ್ತದೆ ಎಂಬುದು ನಮ್ಮ ಪೂರ್ವಿಕರು ಕಂಡ ಸತ್ಯ. ಶಿವರಾತ್ರಿಯ ಈ ದಿನ/ಈ ಸಂಜೆ ಹಲವು ಜ್ಯೋತಿಗಳನ್ನು ಬೆಳಗೋಣ ಮತ್ತು ಶಿವನನ್ನು ಧ್ಯಾನಿಸೋಣ, ಜಗದ ಎಲ್ಲರ ಒಳಿತಿಗಾಗಿ ಪ್ರಾರ್ಥಿಸೋಣ ಅಲ್ಲವೇ ?