ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 21, 2012

ಶುಭಾಶಯಗಳು ನನ್ನೆಲ್ಲಾ ಮಿತ್ರರಿಗೆ: ಹುಟ್ಟುಹಬ್ಬ ಆಚರಿಸಿಕೊಂಡವರಿಗೆ, ಆಚರಿಸಿಕೊಳ್ಳಲಿರುವವರಿಗೆ!


ಚಿತ್ರಋಣ: ಅಂತರ್ಜಾಲ 

ಶುಭಾಶಯಗಳು ನನ್ನೆಲ್ಲಾ ಮಿತ್ರರಿಗೆ: ಹುಟ್ಟುಹಬ್ಬ ಆಚರಿಸಿಕೊಂಡವರಿಗೆ, ಆಚರಿಸಿಕೊಳ್ಳಲಿರುವವರಿಗೆ! 

ಅನೇಕಾವರ್ತಿ ನೀವು ನಿರೀಕ್ಷಿಸಿರುತ್ತೀರಿ:ಈ ಮುನುಷ್ಯನಿಂದ ಏನಾದರೂ ಪ್ರತಿಸ್ಪಂದನವಾಗಬಹುದೇ ಎಂದು! ಹಲವರಿಗೆ ನನ್ನಿಂದ ಯಾವುದೇ ಸ್ಪಂದನವೂ ನೇರವಾಗಿ ಸಿಗದೇ ಇದ್ದಿರಬಹುದು, ಕೆಲವರಿಗೆ ಸಿಕ್ಕಿರಲೂ ಬಹುದು. ಇಲ್ಲಿ ಹೆಚ್ಚು-ಕಮ್ಮಿಯ ಅಳತೆಗೋಲಿಲ್ಲ; ಮೇಲು-ಕೀಳೆಂಬ ಭಾವವಲ್ಲ; ಪೂರ್ವಾಗ್ರಹ ಪೀಡನೆ ಇಲ್ಲವೇ ಇಲ್ಲ. ಟಿವಿಯಲ್ಲಿ ಬರುವ ಜ್ಯೋತಿಷಿಗಳು ’ಆರೂಢ ಪ್ರಶ್ನೆ’ ಎಂಬ ಮಾರ್ಗವನ್ನು ಅನುಸರಿಸಿ ಉತ್ತರಿಸುವುದನ್ನು ನೀವು ನೋಡಿಯೇ ಇರುತ್ತೀರಿ. ಇದೂ ಅಂಥದ್ದೇ ಒಂದು, ದಿನಕ್ಕೊಮ್ಮೆಯೋ ಅಥವಾ ಎರಡುದಿನಕ್ಕೊಮ್ಮೆಯೋ ಫೇಸ್ ಬುಕ್ ತೆರೆದಾಗ ಸಮಯ ಸ್ವಲ್ಪಮಟ್ಟಿಗಾದರೂ ಅನುಮತಿಸಿದರೆ, ಕೆಲವನ್ನು ನೋಡಿ ಲೈಕ್ ಕ್ಲಿಕ್ಕಿಸ್ಸುವುದಿದೆ; ಕೆಲವಕ್ಕೆ ಅಲ್ಲಲ್ಲಿ ಕಾಮೆಂಟು ಹಾಕುವುದಿದೆ; ಕೆಲವನ್ನು ಜಾಸ್ತಿ ಓದಲು ಸಮಯಸಾಲದೇ ಬಿಟ್ಟಿರುವುದೂ ಇದೆ; ಇನ್ನೂ ಕೆಲವನ್ನು ಓದದೇ ಇರುವುದೇ ಲೇಸು ಎಂದು ಬಗೆದು ಮುಂದೆ ಸಾಗುವುದೂ ಇದೆ! ದಿನ ಬೆಳಗಾದರೆ, ರಾತ್ರಿಯಾದರೆ ಯಾರಾದರೂ ಈ ಪುಟವನ್ನು ಲೈಕ್ ಮಾಡಿ ಎಂದು ವಿನಂತಿಸುತ್ತೀರಿ, ಇನ್ಯಾರೋ ಮತ್ಯಾವುದೋ ಸಮಾರಂಭಕ್ಕೆ ಆಹ್ವಾನಿಸುತ್ತೀರಿ, ಒಂದಷ್ಟು ಜನ ಹಲವು ಅಪ್ಲಿಕೇಶನ್ಗಳನ್ನು ಮುಂದೆ ಇಡುತ್ತೀರಿ, ನಾವೂ ನೀವೂ ಒಟ್ಟಿಗೇ ಇಂಥಲ್ಲಿ ಕೆಲಸಮಾಡುವುದಾಗಿ ಘೋಷಿಸೋಣ ಎನ್ನುತ್ತೀರಿ, ಜನ್ಮದಿನ ಸೂಚಿಸುವ ಕ್ಯಾಲೆಂಡರಿಗೆ ಆಸ್ತು ಎನ್ನಿ ಎನ್ನುತ್ತೀರಿ, ಹಲವರು ಆಟವಾಡಲು ಕರೆಯುತ್ತಲೇ ಇರುತ್ತೀರಿ ! 

ದಯಮಾಡಿ ಆಟಕ್ಕೆ ಯಾವ ವಿನಂತಿಯನ್ನೂ ಕಳಿಸಬೇಡಿ, ನನಗೆ ಓದಲೇ ಸಮಯವಿಲ್ಲ ಹಾಗಿದ್ದಾಗ ಆಟವಾಡಲು ಸಮಯವೆಲ್ಲಿ? ಉತ್ತಮ ಪುಸ್ತಕಗಳೇ ನನ್ನ ಸಂಗಾತಿಗಳು ಮತ್ತು ಆಟಪಾಠ, ಮಿಕ್ಕಿದ ಆಟಗಳನ್ನು ಬಾಲ್ಯಕ್ಕೆ ಸೀಮಿತಗೊಳಿಸಿ ಈಗ ಜಗತ್ತನ್ನೇರ್ ಆಡಿಸುವ ಶಕ್ತಿಯ ಆಟಗಳನ್ನು ಅರಿಯಲು ಆ ಬಗ್ಗೆ ಜಾಸ್ತಿ ಆಳವಾಗಿ ಹುಡುಕಲು ಕಾತುರನಾಗಿ ಅದೇ ಆಟ; ಜೊತೆಗೆ ಸ್ವಲ್ಪ ಉದರಂಭರಣೆಯ ಆಟ-ಈ ಎರಡು ಆಟಗಳನ್ನೇ ನಾನು ಹೆಚ್ಚಾಗಿ ಆಡಲು ಬಯಸುತ್ತೇನೆ; ಇವು ನಿಮ್ಮಿಷ್ಟದ ಆಟಗಳಲ್ಲಾ ಎಂಬುದು ನನಗೆ ಗೊತ್ತು! ಎಲ್ಲೋ ಯಾರೋ ಕೆಲವರಿಗೆ ಇಷ್ಟವಾದರೆ ಅಂಥವರು ಇಂಥದ್ದರಲ್ಲಿ ತೊಡಗಿಕೊಳ್ಳಬಹುದು. ಪ್ರಪಂಚದ ಆವಿಷ್ಕಾರವಾಗಿ ೧೪ ಬಿಲಿಯನ್ ವರ್ಷಗಳೇ ಕಳೆದವು ಎನ್ನುತ್ತದೆ ಅಧುನಿಕ ವಿಜ್ಞಾನ,ಆದರೂ ಯಾರೂ ಅದರ ರಹಸ್ಯದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ; ಕಂಡವರು ಮರಳಿ ಹೇಳಲಿಲ್ಲ, ಕಾಣದವರು ಕಾಣಲು ಪ್ರಯತ್ನಿಸುವ ಹೆಜ್ಜೆಯನ್ನೇ ಇಡಲಿಲ್ಲ ಎಂದರೂ ತಪ್ಪಲ್ಲ. ನೀವೀಗೆ ಕೇಳುತ್ತೀರಿ "ನೀವು ಕಂಡಿದ್ದೀರೇ?" ಎಂದು, ಇಲ್ಲ, ಹುಡುಕುವಿಕೆಯಲ್ಲೇ ಇದ್ದೇನೆ, ಸಿಗುವ ಹಲವು ಮಾಹಿತಿಗಳನ್ನು ಆಧಾರವಾಗಿರಿಸಿಕೊಂಡು ಕಾಣದ ಶಕ್ತಿಯ ಜಾಡುಹಿಡಿಯುವ ಜಾಡಿನಲ್ಲಿ ಬೀಡುಬಿಟ್ಟಿದ್ದೇನೆ; ಇದು ಈ ಜನ್ಮಕ್ಕಾದರೂ ಮುಗಿಯಬಹುದು ಅಥವಾ ಇನ್ನೆಷ್ಟೋ ಜನ್ಮಗಳನ್ನೂ ಉತ್ತರಿಸಿ ಬರಬೇಕಾಗಬಹುದು,ಆದರೂ ವಿಶ್ವನಿಯಾಮಕ ಶಕ್ತಿಯಲ್ಲಿ ನನ್ನ ಅರಿಕೆಯೊಂದೇ: ಒಂದಲ್ಲಾ ಒಂದು ಜನ್ಮದಲ್ಲಿ ಪ್ರಪಂಚದ ರಹಸ್ಯದ ಅರಿವು ನನ್ನೊಳಗಿನ ನನಗಾಗಲಿ, ಮತ್ತು ಮರುಜನ್ಮವಿದ್ದರೆ ಹಾಗಾಗಲು ಪ್ರಯತ್ನಿಸುವ ಮೆದುಳುಳ್ಳ ಜನ್ಮವನ್ನೇ ಅನುಗ್ರಹಿಸು ಎಂಬುದು.  

ಗಣಕಯಂತ್ರದ ಸಾಮೀಪ್ಯಕ್ಕೆ ಬಂದಾಗ ಅಂತರ್ಜಾಲಾರೂಢನಾಗಿ ಕುಳಿತಾಗ ಇದು ಆರೂಢ ಸ್ಥಿತಿಯೇ ಆಗುತ್ತದೆ! ಇಲ್ಲಿ ಘಳಿಗೆ,ಲಿಪ್ತಿ, ತಿಥಿ-ಮಿತಿಗಳನ್ನು ಹೊರತುಪಡಿಸಿ ಆರೂಢವಾದಾಗ ಎದುರಿಗೆ ಸಿಕ್ಕ ಕೆಲವರಿಗೆ ಕೆಲವೊಮ್ಮೆ ಸ್ಪಂದನ ಸಿಕ್ಕಿರಲೂ ಸಾಕು. ತುರ್ತಾಗಿ ಅನಾರೂಢವಾಗಬೇಕಾದ ಅಗತ್ಯತೆ ಬಿದ್ದರೆ ಸ್ಪಂದನವಿಲ್ಲದ ನೀರಸ ನಿರ್ಗಮನವಾದರೂ ಆಗಬಹುದು. ಈ ಜಗತ್ತಿನಲ್ಲಿ ನನ್ನ ಹುಟ್ಟೊಂದು ಸೋಜಿಗವಲ್ಲ; ಅದು ಅನಿವಾರ್ಯವೂ ಆಗಿರಲಿಲ್ಲ; ನನ್ನಿಂದ ಯಾರೂ ಉದ್ಧಾರವಾಗುತ್ತಾರೆಂಬ ಕಲ್ಪನೆ ನನ್ನದಲ್ಲ; ಪ್ರಪಂಚಕ್ಕೋ ದೇಶಕ್ಕೋ ನನ್ನಿಂದ ಸಂದಿದ್ದು,ಕೊಡಲ್ಪಟ್ಟಿದ್ದು ಏನೂ ಕಾಣುತ್ತಿಲ್ಲ ಎಂದಮೇಲೆ ನನ್ನ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವ ಪ್ರಮೇಯ ಇಟ್ಟುಕೊಂಡು ಬದುಕುವ ಅಪ್ರಮೇಯ ನಾನಾಗಲಿಲ್ಲ!ಹೀಗಾಗಿ ನಾನು ಹುಟ್ಟಿದ ದಿನಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿಲ್ಲ; ಯಾರಿಗೂ ಅದನ್ನು ಮತ್ತೆ ಮತ್ತೆ ಎತ್ತಿ ಹೇಳುತ್ತಿಲ್ಲ; ಅವರುಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಷ್ಟಾಗಿ ತೊಡಗಿಕೊಳ್ಳುತ್ತಿಲ್ಲ.    

ಈ ಜಗತ್ತು ಅದರಲ್ಲೂ ನಮ್ಮ ಭಾರತ ಅತಿಸಹಜವಾಗಿ ಒಪ್ಪಿಕೊಳ್ಳುವ ಕೆಲವರ ಜನ್ಮದಿನಗಳಿವೆ. ಉದಾಹರಣೆಗೆ ರಾಮನವಮಿ, ಗೋಕುಲಾಷ್ಟಮಿ[ಕೃಷ್ಣಾಷ್ಟಮಿ] ಇತ್ಯಾದಿಗಳು. ಅಂತಹ ದಿನಗಳನ್ನು ಹಬ್ಬವನ್ನಾಗಿ ದೇಶವಾಸಿ ಜನರೆಲ್ಲಾ ಆಚರಿಸಿದರು ಯಾಕೆಂದರೆ ಅವರ ಕೊಡುಗೆಗಳು ಈ ಲೋಕಕ್ಕೆ ಅಪಾರ. ರಾಜಕೀಯದ ಕಾರಣಗಳಿಂದ ದಾರ್ಶನಿಕ, ಕವಿ, ಮಾರ್ಗದರ್ಶಿ, ಮಹಾಮಹೋಪಾಧ್ಯಾಯ, ಶ್ರೇಷ್ಠ ಸಂತ ಆಚಾರ್ಯ ಶಂಕರರ ಜಯಂತಿಯನ್ನೇ ಅದೆಷ್ಟೋ ಜನ ಮರೆತಿದ್ದಾರೆ! ಅಂದಾಗ ಏನನ್ನೂ ಸಾಧಿಸದ ನಾವು ವರ್ಷಕ್ಕೊಮ್ಮೆ ಬರೇ ಕೇಕ್ ಕತ್ತರಿಸಿ ಪಾರ್ಟಿಮಾಡುವುದರಿಂದ ಯಾವ ಮಹತ್ತರವಾದುದನ್ನು ಸಾಧಿಸಿದ ಹಾಗಾಗುತ್ತದೆ ಎಂಬುದು ನನ್ನಲ್ಲಿನ ಪ್ರಶ್ನೆ. ಸತ್ತಮೇಲೂ ನಾಲ್ಕುಜನ ನೆನೆದುಕೊಳ್ಳುವ ಕೆಲಸಮಾಡಿ ಹೋದ ಮಹಾತ್ಮ ಡೀವೀಜಿಯವರನ್ನೇ ನೋಡಿ, ವರಕವಿ ಬೇಂದ್ರೆಯವರನ್ನು ನೋಡಿ, ಸರ್.ಎಂ. ವಿಶ್ವೇಶ್ವರಯ್ಯನವರನ್ನು ನೋಡಿ, ಇನ್ನೂ ಹಲವರನ್ನು ನೋಡಿ...ಅವರು ತಮ್ಮ ಹುಟ್ಟಿದ ದಿನವೆಂದು ಸಂಭ್ರಮಿಸಲೇ ಇಲ್ಲ! ನೈತಿಕವಾಗಿ ಸರಿಯಿಲ್ಲದಿದ್ದ ರಾಜಕಾರಣಿ ನೆಹರೂ ಹುಟ್ಟಿದ ದಿನವನ್ನು ಮಕ್ಕಳದಿನಾಚರಣೆ ಎಂದು ಕೆಲವರು ಆಚರಿಸುತ್ತಾರೆ-ಇರಬಹುದು ಬಿಡಿ ತಿವಾರಿಯ ಹಾಗೇ ನೆಹರೂ ಚಾಚಾನಿಗೆ ಅದೆಷ್ಟು ಮಕ್ಕಳಿದ್ದರೋ ಪರಮಾತ್ಮ ಮಾತ್ರ ಬಲ್ಲ! 

ಯಾರೋ ಹೇಳಿದರು ಅವರವರಿಗೆ ಅವರವರ ಹುಟ್ಟಿದ ಹಬ್ಬ ದೊಡ್ಡದು. ಹೌದೌದು ಅವರವರಿಗೆ ಅದು ದೊಡ್ಡದೇ ಆದರೆ ಅದರ ಆಚರಣೆಯ ಅಂಧಾನುಕರಣೆ ಮಾತ್ರ ಇನ್ನೂ ದೊಡ್ಡದು. ಮಗುವೊಂದಕ್ಕೆ ಪ್ರತೀವರ್ಷ ಹ್ಯಾಪಿ ಬರ್ತ್ ಡೇ ಆಚರಿಸುವ ನೆಪದಲ್ಲಿ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಹಚ್ಚಿದ ದೀಪಗಳನ್ನು ಆರಿಸುವ ಕೆಲಸ ನಡೆಯುತ್ತದೆ; ಕತ್ತರಿಸುವ ಕೇಕ್ ನ ಹಿಂದೆ ಇನ್ನೊಂದು ಪಕ್ಷಿಯ ಹುಟ್ಟಿಗೆ ಕಾರಣವಾಗುತ್ತಿದ್ದ ಅಂಡದ ಬಳಕೆಯಿರುತ್ತದೆ. ಪಕ್ಕದಲ್ಲಿ ನಿಂತು ಹ್ಯಾಪಿ ಬರ್ತ್ ಡೇ ಟೂ ಯೂ ಎನ್ನುವಾಗ ತೀರಾ ಕ್ರತ್ರಿಮ ಎನ್ನಿಸಿಬಿಡುತ್ತದೆ. ಕೆಲವರಿಗಂತೂ ಹಾಡಲೂ ನಾಚಿಕೆ, ಹಾಡದಿರಲೂ ಆಗದ ಪರಿಸ್ಥಿತಿ-ಅವೆಲ್ಲಾ ನಾವ್ನಾವೇ ಮಾಡಿಕೊಂಡ ರಿವಾಜುಗಳಲ್ಲವೇ?  ಇಂತಹ ಪಾರ್ಟಿಗಳಲ್ಲಿ ತಮ್ಮ ಅಂತಸ್ತನ್ನು ತೋರಿಸಿಕೊಳ್ಳುವವರೇ ಹಲವರು. ಹೊಟ್ಟೆ ತುಂಬದಿದ್ದರೂ ತಿನ್ನುವ ಪ್ಲೇಟಿನಲ್ಲಿ ಸುಮ್ಮನೇ ಒಂದಷ್ಟು ಉಳಿಸಿ ಅದನ್ನು ಬಿಸಾಡುವುದರ ಮೂಲಕ ತಿನ್ನುವ ಸಿದ್ಧಾಹಾರ ನಿಷ್ಪ್ರಯೋಜಕವಾಗುವಂತೇ ಮಾಡುವವರೂ ಅನೇಕರು. ಇಡೀ ದಿನ ದುಡಿದರೂ ತನ್ನ ಹಾಗೂ ತನ್ನ ಮಕ್ಕಳ ಹೊಟ್ಟೆಯನ್ನು ತುಂಬಿಸಿಕೊಳ್ಳಲಾಗದ ಕಾರ್ಮಿಕವರ್ಗದವರಿದ್ದಾರೆ, ಹಸಿದ ಹೊಟ್ಟೆಯಲ್ಲಿ ಅಳಲೂ ಆಗದ ಸ್ಥಿತಿಯಲ್ಲಿರುವ ಭಿಕ್ಷುಕರಿದ್ದಾರೆ, ಬಿತ್ತಿದ ಬೆಳೆ ಕೈಗೆಬರುವ ಮೊದಲೇ ಕಮರಿಹೋಗಿ ಹೊಟ್ಟೆಗೆ ತಣ್ಣೀರುಬಟ್ಟೆ ಹಾಕಿಕೊಳ್ಳುವ ರೈತಾಪಿ ವರ್ಗದವರಿದ್ದಾರೆ, ಹುಟ್ಟಿದಾರಭ್ಯ ಇಲ್ಲೀವರೆಗೆ ಯಾವುದೇ ಚಾಕೊಲೇಟ್, ಬಿಸ್ಕಿಟ್, ಹಣ್ಣು-ಹಂಪಲು ಕಂಡರಿಯದ ಕಂದಮ್ಮಗಳಿದ್ದಾವೆ, ಯಾರೋ ಕೊಟ್ಟರೆ ಉಂಟು-ಕೊಡದಿದ್ದರೆ ಇಲ್ಲಾ ಎಂಬ ಹೀನ ಸ್ಥಿತಿಯಲ್ಲಿರುವ ಅನಾಥರಿದ್ದಾರೆ----ಇಷ್ಟೆಲ್ಲಾ ಇದ್ದುಕೊಂಡೂ ನಮ್ಮ ಹುಟ್ಟಿದ ದಿನವನ್ನು ಬಹಳ ಶ್ರೇಷ್ಠದಿನವೆಂದು ಆಚರಿಸಿಕೊಳ್ಳುವುದಾದರೂ ಹೇಗೆ ಮತ್ತು ಯಾಕೆ?  

ಹಿಂದೂ ಸನಾತನ ಪದ್ಧತಿಯಲ್ಲೂ ಆಯುಷ್ಯವೃದ್ಧಿ ಹೋಮ ಎಂಬುದನ್ನು ಹುಟ್ಟಿದ ಮಿತಿಯಂದು ನಡೆಸುವ ಕ್ರಮವಿದೆ; ಅದನ್ನು ಎಲ್ಲರೂ ಆಚರಿಸುವುದಿಲ್ಲ, ಜಾತಕಫಲದಲ್ಲಿ ದೋಷಗಳೇನಾದರೂ ಕಂಡುಬಂದರೆ ಅಂತಹ ಮಂದಿ ಮಾತ್ರ ಆಚರಿಸುತ್ತಾರೆ. ಅದಾದರೂ ಸೃಷ್ಟಿಯ ಆರಾಧನೆ ಎಂದುಕೊಳ್ಳೋಣ; ಅಲ್ಲಿ-ಪೂಜೆಯಿದೆ, ಪ್ರಾರ್ಥನೆಯಿದೆ, ’ನಮಮ’[ನನ್ನದಲ್ಲ] ಎಂದು ಪರಿತ್ಯಜಿಸುವ ಅರ್ಪಣೆಯಿದೆ!  ಅದರಿಂದ ಶಕ್ತಿಯ ಒಂದು ರೂಪವನ್ನಾದರೂ ಸುಪ್ರೀತಗೊಳಿಸಬಹುದು, ತನ್ನ ಜೊತೆಗೆ ಸಮಸ್ತರ ಒಳಿತಿಗಾಗಿ ಪ್ರಾರ್ಥಿಸಬಹುದು. ಹಾಗೆ ಪ್ರಾರ್ಥಿಸುವಾಗ ಈ ಜಗದಲ್ಲಿ ಯಾರಿಗೂ ಹಸಿವನಿಂದ-ನೀರಡಿಕೆಯಿಂದ-ಬಡತನದಿಂದ-ರೋಗರುಜಿನಗಳಿಂದ-ಅಂಗವೈಕಲ್ಯತೆಗಳಿಂದ ಬೆಂದು ಬಳಲುವ ಜೀವಿಗಳನ್ನು ಹುಟ್ಟಿಸಲೇ ಬೇಡಾ ಎಂದೂ ಬೇಡಿಕೊಳ್ಳಬಹುದು. ಮಹಾತ್ಮರು ತನ್ನ ಜಯಂತಿಯನ್ನು ಆಚರಿಸಿ ಎಂದು ಎಲ್ಲೂ ಹೇಳಲಿಲ್ಲ! ಗಾಂಧೀಜಯಂತಿಯನ್ನು ನಾವು ಪ್ರೀತಿಯಿಂದ ಆಚರಿಸುತ್ತೇವೆ. ಅದೇ ರಾಜಕೀಯದ ಒತ್ತಾಯದಿಂದ ಇತ್ತೀಚೆಗೆ ಹೇರಲ್ಪಟ್ಟ ಜಯಂತಿಗಳನ್ನು ಸರಕಾರೀ ರಜೆ ಅನುಭವಿಸಲು ಕೆಲವರು ಆಚರಿಸುತ್ತಾರೆಯೇ ವಿನಃ ಅಲ್ಲಿ ಆ ಪ್ರೀತಿ ಇರುವುದಿಲ್ಲ. ಅಸಡ್ಡೆಮಾಡಿದರೆ ಸಾಮಾಜಿಕ ಮತ್ತು ರಾಜಕೀಯ ಆಘಾತಗಳನ್ನು ಎದುರಿಸಬೇಕಾದೀತು ಎಂದು ಒಪ್ಪಿಕೊಂಡವರೂ ಇದ್ದಾರೆ. ಜಯಂತಿ ಎಂಬ ನೆಪದಲ್ಲಿ ಆಡಳಿತ ಯಂತ್ರದ ಕಚೇರಿಗಳಿಗೆ ರಜಾಘೋಷಣೆಯಾದಾಗ ಕೆಲಸ ನಿಧಾನಗತಿಯಲ್ಲಿ ಸಾಗುತ್ತದೆ. ಹಾಗೆ ನೋಡಿದರೆ ೩೬೫ ದಿನಗಳೂ ಅನೇಕರ ಜಯಂತಿಗಳಿವೆ-ಎಲ್ಲದಕ್ಕೂ ರಜಾ ಘೋಷಿಸಲೂ ವಿಶಿಷ್ಟ ಆಚರಣೆ ಇರಿಸಲೂ ಸಾಧ್ಯವೇ? ಹೀಗಾಗಿ ಸರಕಾರ ಕೂಡ ಸಾರ್ವತ್ರಿಕವಾಗಿ ಒಂದೇ ದಿನ ಎಲ್ಲಾ ಮಹನೀಯರಿಗೂ ’ಗೌರವಾರ್ಪಣ ದಿನ’ ಎಂಬುದನ್ನು ನಮೂದಿಸಿ ಮಿಕ್ಕೆಲ್ಲಾ ಜಯಂತಿಗಳಿಗೂ ರಜಾ ಘೋಷಣೆಯನ್ನು ಕೈಬಿಡುವುದು ದೇಶೋದ್ಧಾರದ ಒಂದು ಹೆಜ್ಜೆಯಾಗುತ್ತದೆ.     

ಪುತ್ಥಳಿ ನಿರ್ಮಾಣ ಮತ್ತೊಂದು ಪಿಡುಗು; ನಿಲ್ಲಿಸಿದ ಪುತ್ಥಳಿಗಳ ನಿರ್ವಹಣೆಯೂ ಅಷ್ಟೇ ಶ್ರಮದಾಯಕ. ಈ ದೇಶದಲ್ಲಿ ಅದೆಷ್ಟೋ ಪುತ್ಥಳಿಗಳು ನಿರ್ಮಿಸಲ್ಪಟ್ಟಿವೆ-ಅವುಗಳಲ್ಲಿ ಯಾವುದು ನಿಜಕ್ಕೂ ಸಿಂಧುವೋ ಯಾವುದು ನಿಜಕ್ಕೂ ಬೇಡವೋ ಯಾರೂ ಕೇಳುವವರಿಲ್ಲ. ಕೆಲವರಿಗೆ ಇದೇ ದೊಡ್ಡದು ಇನ್ನು ಕೆಲವರಿಗೆ ಅವರ ಆ ಆದೇ ದೊಡ್ಡದು, ಮತ್ತೆ ಕೆಲವರಿಗೆ ಇಂಥಲ್ಲೆಲ್ಲಾ ತಾವು ಮೆಚ್ಚುವ, ಬಯಸುವ ಪುತ್ಥಳಿಗಳನ್ನು ನಿಲ್ಲಿಸಿ ಮೀಸೆ ತಿರುವುತ್ತ ನಡೆಯುವಾಸೆ! ಕಾಲಗರ್ಭದಲ್ಲಿ ಈ ರಾಷ್ಟ್ರ ಅದೆಷ್ಟೋ ದಾರ್ಶನಿಕರನ್ನೂ, ಚಕ್ರವರ್ತಿಗಳನ್ನೂ, ರಾಜ-ಮಹಾರಾಜರುಗಳನ್ನೂ, ದೇಶಭಕ್ತರನ್ನೂ ಹುದುಗಿಸಿಕೊಂಡಿದೆ-ಆ ಒಬ್ಬರಿಗೂ ಸರಿಯಾಗಿ ಒಂದೂ ಪ್ರತಿಮೆಗಳಿಲ್ಲ! ಅಜರಾಮರವಾದ ಅವರ ಕೊಡುಗೆಗಳೇ ಅವರ ಪ್ರತಿಮೆಗಳಾಗಿವೆ; ಅವರಿಗೆಲ್ಲಾ ಪ್ರತಿಮೆಗಳೂ ಬೇಡ; ಪ್ರತಿಮೆಗಳನ್ನು ನಿಲ್ಲಿಸಿ ಹಾರಹಾಕಿ ಹಾಲೆರೆಯುವುದೂ ಬೇಡ! ವರ್ಷಕ್ಕೊಮ್ಮೆ ಸ್ವಚ್ಛತೆ ಕಾಣುವ ಪ್ರತಿಮೆಗಳು ಮಿಕ್ಕಿದ ದಿನಗಳಲ್ಲಿ ಧೂಳುತಿನ್ನಬೇಕು, ಕಾಗೆ-ಪಾರಿವಾಳಗಳಂತಹ ಪಕ್ಷಿಗಳ ಹಿಕ್ಕೆಗಳ ಕೊಡುಗೆಯನ್ನು ಪಡೆಯಬೇಕು-ಅದರ ಬದಲು ಪ್ರತಿಮೆಗಳಿರದಿದ್ದರೇ ಒಳ್ಳೆಯದು ಎಂದು ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋದ ಆ ಮಹಾನುಭಾವರುಗಳು ಅಂದುಕೊಂಡಿರಬೇಕು. ರಾಜಕೀಯ ಪ್ರೇರಿತವಾದ ಬೆಂಗಳೂರಿನಲ್ಲಿ ಮುಂಬರುವ ವರ್ಷಗಳಲ್ಲಿ ಪ್ರತಿಮೆಗಳೇ ಹೆಚ್ಚಿ ಕೊನೆಗೆ ಎಲ್ಲೂ ಜಾಗ ಸಿಗದೇ ಪ್ರತಿಮೆಗಳ ಉದ್ಯಾನವನ ಮಾಡಬೇಕಾಗಬಹುದು! ಒಂದರ್ಥದಲ್ಲಿ ಹಾಗೆ ಮಾಡುವುದೇ ಒಳ್ಳೆಯದು. 

ಮಿತ್ರರ ಯಾದಿಯಲ್ಲಿ ನನ್ನ ನಿಲುವುಗಳನ್ನು ಇಷ್ಟಪಟ್ಟವರೂ ಇರಬಹುದು, ಕೆಲವೊಂದನ್ನು ಕಷ್ಟಪಟ್ಟು ಸಹಿಸಿಕೊಂಡವರೂ ಇರಬಹುದು, ಇಷ್ಟಪಡದಿದ್ದರೂ ಇರಲಿ ಸಂಖ್ಯಾ ಭರ್ತಿಗೆ ಎಂದು ಸ್ನೇಹಿತನನ್ನಾಗಿ ಮಾಡಿಕೊಂಡವರೂ ಇರಬಹುದು. ಯಾದಿಯಲ್ಲಿ ಕೆಲವು ಹಿರಿಯರೂ, ಕವಿ-ಸಾಹಿತಿಗಳೂ, ಲೇಖಕರೂ ಇದ್ದಾರೆ ಅದರೆ ಅವರ ಸ್ಪಂದನ ತೀರಾ ಕಂಡುಬರುವುದಿಲ್ಲ! ತಮ್ಮದೂ ಅಕೌಂಟು ಇರಲಿ ಎಂದು ಆರಂಭಿಸಿದವರು ಅಮೇಲೆ ೬ ತಿಂಗಳಿಗೋ ವರ್ಷಕ್ಕೋ ಒಮ್ಮೆ ತೆರೆದು ನೋಡುತ್ತಾರೋ ಏನೋ. ಅನಾದಿಕಾಲದಲ್ಲಿ ಅಚ್ಚಿಸುವ ಮಾಧ್ಯಮವೊಂದೇ ಸಾಹಿತ್ಯವೆಂದು ಪರಿಗಣಿತವಾದಾಗ ಹುಟ್ಟಿದ ಕೆಲವರಿಗೆ ಬರಹಗಳನ್ನು ಪುಸ್ತಕಗಳ ರೂಪದಲ್ಲಿ ಮಾತ್ರ ಮೆಚ್ಚಿಕೊಳ್ಳುವ ಹಂಬಲ. ಅವರ ಬರಹಗಳು ಅಂತರ್ಜಾಲದ ಬ್ಲಾಗ್ ಗಳಲ್ಲಿ ಕಂಡುಬರುವುದೇ ಅಪರೂಪ; ಎಲ್ಲೋ ಸಾವಿರಕ್ಕೆ ಒಬ್ಬರು ಅಂತಹ ಬರಹಗಾರರು ಇರಬಹುದು. ಒಂದು ಪುಸ್ತಕ ರೂಪದಲ್ಲಿ ಬರೆದರೆ ಅದು ಕಳೆಕಟ್ಟುತ್ತದೆ ಎಂಬ ಇರಾದೆಯಾದರೆ ಬ್ಲಾಗ್ ರೂಪದಲ್ಲಿ ಬರೆದರೆ ಎಲ್ಲಿ ಸ್ಥಾನಮಾನಕ್ಕೆ ಬೆಲೆಯಿಲ್ಲದಾಗುತ್ತದೋ ಎಂಬ ಅನಿಸಿಕೆಯೂ ಕೆಲವರಿಗೆ ಇರಬಹುದು. ಬ್ಲಾಗ್ ಬರಹಗಾರ ಎಂದರೆ ಸಣ್ಣಮಟ್ಟದವ ಅಥವಾ ’ಎಲ್. ಬೋರ್ಡು’ ಎಂಬ ಕೀಳುಮನೋಭಾವವೂ ಇರಲುಸಾಕು.  

ಸಾಹಿತ್ಯಕ ಅಭಿರುಚಿಯನ್ನು ಹೊಸದಾಗಿ ಬೆಳೆಸಿಕೊಳ್ಳುತ್ತಿದ್ದೇನೆ ಎನ್ನುತ್ತಾ ಹುಡುಗಿಯರ ಬಗ್ಗೆ ಮಾತ್ರ ಅವರದ್ದೇ ಆದ ವಿಚಿತ್ರ ಛಂದಸ್ಸೋ ಮರ್ದೊಂದೋ ಕೆಲವು ಎಳಬರು ಬರೆಯುವ ರೀತಿ ನನ್ನಂತಹ ಓದುಗರಿಗೆ ಬಹಳ ಮುಜುಗರವನ್ನೂ ಉಂಟುಮಾಡುತ್ತದೆ. ಕೆಲವರ ಕವನಗಳು ಅದೇನನ್ನು ಹೇಳುತ್ತವೋ ಶಿವನೇ ಬಲ್ಲ! ಆದರೂ ಪುಸ್ತಕಗಳ ರೂಪದಲ್ಲಿ ಅವುಗಳನ್ನು ಪ್ರಕಟಿಸುವಲ್ಲಿ, ಪ್ರಕಟಿಸಿ ತಾವೂ ಬರಹಗಾರರು ಎಂಬುದನ್ನು ತೋರಿಸುವಲ್ಲಿ ಅವರು ಶರವೇಗದಲ್ಲಿ ನಡೆಯುತ್ತಿರುತ್ತಾರೆ. ಮಿತ್ರರೊಬ್ಬರಲ್ಲಿ ನಾನು ಹೇಳುತ್ತಿದ್ದೆ-"ಕೆಲಸಕ್ಕೆ ಬಾರದ ಅಸಂಖ್ಯಾತ ಪುಸ್ತಕಗಳನ್ನು ಕೊಳ್ಳುವುದಕ್ಕಿಂತಾ ಕೆಲಸಕ್ಕೆ ಬರುವ ಒಂದೇ ಪುಸ್ತಕ ಹೆಚ್ಚಿನ ಬೆಲೆಯದ್ದಾದರೂ ಕೊಂಡು ಓದುವುದು ಉತ್ತಮ" ಎಂದು, ಅದಕ್ಕೆ ಅವರು ಸಹಮತ ವ್ಯಕ್ತಪಡಿಸಿದರು. ಪುಸ್ತಕವೊಂದನ್ನು ಪ್ರಕಟಿಸುವಾಗ ನಾವು ನೆನಪಿಡಬೇಕಾದ ಪ್ರಮುಖ ಅಂಶ-ಈ ನೆಲದ ಅನೇಕ ಮರಗಳು ನಮ್ಮ ಪುಸ್ತಕಕ್ಕೆ ಬೇಕಾದ ಕಾಗದಗಳರೂಪಕ್ಕೆ ಬರುವಾಗ ಹತವಾಗುತ್ತವೆ! ನಾವು ಪ್ರಕಟಿಸುವ ಕೃತಿ ಕೇವಲ ನಮ್ಮೊಬ್ಬರಿಗಲ್ಲದೇ ಸಮಾಜಕ್ಕೆ ಕಿಂಚಿತ್ತಾದರೂ ಉಪಯೋಗಿ ಎನಿಸುವುದಾದರೆ ಮಾತ್ರ ಅಂತಹ ಪುಸ್ತಕಗಳ ಪ್ರಕಟಣೆಗೆ ಮುಂದಾಗಬೇಕು. ವರ್ಷಕ್ಕೊಂದೋ ಎರಡೋ ಪುಸ್ತಕ ಮಾಡಿ, ಮಾಡಿದ ಪುಸ್ತಕಗಳ ಬಗ್ಗೆ ತಾನೇ ಪ್ರಚಾರಮಾಡಿ ಎಷ್ಟೆಲ್ಲಾ ಪ್ರತಿ ಮಾರಾಟವಾಯ್ತೆಂದು ಕೊಚ್ಚಿಕೊಳ್ಳುವುದರ ಬದಲಿಗೆ ಪುಸ್ತಕಪ್ರಕಟಣೆಯ ಹಿಂದಿನ ವಸ್ತುನಿಷ್ಟ ಧ್ಯೇಯ-ಧೋರಣೆಗಳನ್ನು ನಾವೇ ನಮ್ಮಷ್ಟಕ್ಕೇ ಸಿಂಹಾವಲೋಕನ ಮಾಡಿಕೊಂಡರೆ ಆಗ ಅನೇಕ ಬರಹಗಾರರು ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಮರ್ಯಾದೆಬಿಟ್ಟು ಪ್ರಶಸ್ತಿಗಳನ್ನು ಖರೀದಿಸಲು ಒಳಗಿಂದೊಳಗೇ ಹೆಣಗಾಡುವುದೂ ತಪ್ಪಬಹುದು ಎಂಬುದು ನನ್ನ ಅನಿಸಿಕೆಯಾಗಿದೆ. ಸಾರ್ವಜನಿಕರು ಓದಿ-ಕೃತಿಗಳನ್ನು ಒಪ್ಪಿಕೊಂಡು ಬಹುಕಾಲ ಅಪ್ಪಿಕೊಳ್ಳುವುದೇ ನಿಜವಾದ ಬರಹಗಾರನಿಗೆ ಸಲ್ಲುವ ನಿಜವಾದ ಪ್ರಶಸ್ತಿಯಾಗಿರುತ್ತದೆ.  

ಇರಲಿ ಬಿಡಿ, ’ಊರಿದ್ದಲ್ಲಿ ಹೊಲಗೇಡು ಸಹಜ’ ಎಂಬ ಗಾದೆ ಇದೆಯಲ್ಲಾ? ಆಟಕ್ಕೆ ಕರೆಯುವ ಸ್ನೇಹಿತರೇ ದಯಮಾಡಿ ಹಾಗೆ ಮತ್ತೆ ಕರೆಯಬೇಡಿ, ಬೇರೇ ಬೇರೇ ವಿಷಯಗಳತ್ತ ನನ್ನ ಗಮನ ಸೆಳೆಯಲು ಪ್ರಯತ್ನಿಸಿದರೆ ನಿಮಗೆ ನನ್ನಿಂದ ಉತ್ತರ ಸಿಗಲಾರದು. ಫೇಸ್ ಬುಕ್ ಗುಂಪುಗಳ ನಿಬಂಧನೆಗಳನ್ನು ಅರಿಯದೇ ಗೊತ್ತಿಲ್ಲದ ಗುಂಪಿಗಳಿಗೆ ನನ್ನನ್ನು ಸೇರಿಸುವ ಮಿತ್ರರು ಅಮೇಲೆ ನನ್ನ ಪ್ರಕಟಣೆಯಿಂದ ಬರಬಹುದಾದ ಆಕ್ಷೇಪಣೆಗಳನ್ನೂ ಹೊತ್ತುಕೊಳ್ಳಬೇಕಾಗಬಹುದು. ನಾನು ಯಾವುದೇ ಒತ್ತಾಯಕ್ಕೋ ದಾಕ್ಷಿಣ್ಯಕ್ಕೋ ಬರೆಯುವವನಾಗಲೀ, ಅಳುಕಿ ಬರೆಯದೇ ಇರುವವನಾಗಲೀ ಅಲ್ಲ! ನನಗನ್ನಿಸಿದ್ದನ್ನು ನನ್ನ ಪದಗಳಲ್ಲಿ ನೇರವಾಗಿ ಹಾಗೂ ನಿಷ್ಠುರವಾಗಿ ಹೇಳಿಬಿಡುವುದೇ ನನ್ನ ಜಾಯಮಾನ. ಇದಕ್ಕಾಗಿ ನಾನು ಯಾರ ಮುಲಾಜನ್ನೂ ನೋಡುವುದಿಲ್ಲ. ಅಂತೂ ಲೇಖನದ ಅಂತಿಮ ಹಂತಕ್ಕೆ ಬಂದುಬಿಟ್ಟಿದ್ದೇನೆ. ಅನೇಕರಿಗೆ ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯಗಳನ್ನು ಹೇಳದಿರುವುದಕ್ಕೆ ಬೇಸರವಿರಬಹುದು. ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವ ದಿನಕ್ಕಾಗಿ ನಿರೀಕ್ಷಿಸುವ ಮಿತ್ರರುಗಳೂ ಇರಬಹುದು. ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಶ್ರೀಸೂಕ್ತದ ಈ ಪ್ರಾರ್ಥನೆಯುಕ್ತ ಹಾರೈಕೆಯೊಂದಿಗೆ ನನ್ನ ಸಕಲ ಸನ್ಮಿತ್ರರಿಗೂ ಈ ಮೂಲಕ ಸದಾ ಶುಭಹಾರೈಸುತ್ತಿದ್ದೇನೆ:

ಶ್ರೀವರ್ಚಸ್ಯಮಾರ್ಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|
  ಧನಂ ಧಾನ್ಯಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ||