ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 2, 2010

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.....


ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.....


ಮಾನವೀಯ ಸಂಬಂಧಗಳು ಹಣದ ಝಣತ್ಕಾರದಲ್ಲಿ ತನ್ನತನ ಕಳೆದುಕೊಂಡಿರುವ ಈ ಕಾಲದಲ್ಲೂ ನಮಗೆ ಅಷ್ಟಿಷ್ಟು ಪ್ರತಿಶತ ಜನ ಇನ್ನೂ ’ಮನುಷ್ಯ’ರಾಗಿರುವುದು ಕಂಡುಬರುತ್ತದೆ. ಹಿಂದಿನ ನನ್ನ ಲೇಖನದಲ್ಲಿ ಅದಕ್ಕಾಗಿಯೇ ಹೇಳಿದ್ದು- ಎಲ್ಲರೂ ಒಂದೇ ಥರ ಇರುವುದಿಲ್ಲ ಎಂದು - ಇದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಕೂಡ.

ಗಂಡಸರಲ್ಲೂ ’ಹೃದಯ ಇರುವವರು’ ಇದ್ದಾರೆ. ಅವರ ಅಂತಃಕರಣ ಹೆಣ್ಣಿನ ಅಳಲನ್ನು ಅರ್ಥಮಾಡಿಕೊಳ್ಳುತ್ತದೆ. ಹಿಂದಿನ ಹಲವು ಕವಿಗಳು ತಮ್ಮ ಬದುಕಿನುದ್ದಕ್ಕೂ ತಾವು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ಹೆಂಡತಿ-ಮಕ್ಕಳಿಗೆ ಮಾತ್ರ ಅದರ ಬಿಸಿ ಬಹಳ ತಟ್ಟದಂತೆ ನೋಡಿಕೊಂಡಿದ್ದರು. ಈ ವಿಷಯವನ್ನು ನಾನು ’ಮೈಸೂರು ಮಲ್ಲಿಗೆಯ’ ಪರಿಮಳವನ್ನು ಹಬ್ಬಿಸಿದ ದಿ|ಶ್ರೀ ಕೆ.ಎಸ್.ನರಸಿಂಹ ಸ್ವಾಮಿಯವರ ಮನೆಗೆ ೧೯೯೬-೯೭ರಲ್ಲಿ ಹೋದಾಗ ತಿಳಿದಿದ್ದೆ. ಅದೇ ಮುಗ್ಧ ಮುಗುಳ್ನಗು, ಅದೇ ಮಂದಹಾಸ ಆ ಮುಪ್ಪಡಿರಿದ್ದ ಮುಖದಮೇಲೆ. ಅವರ ದಾಂಪತ್ಯ ಬಹಳ ಉತ್ಕೃಷ್ಟ ಉದಾಹರಣೆ ಎನ್ನಬಹುದು. ಗಂಡನ ಬಡತನವನ್ನು ಯಾವುದೇ ಒತ್ತಡವಿಲ್ಲದೇ ತನ್ನದೆಂದು ಒಪ್ಪಿಕೊಂಡು, ಅವರ ಸಾದಾ ಸೀದಾ ಬಾಳನ್ನೇ ಅಪ್ಪಿಕೊಂಡು ಬದುಕಿದವರು ಅವರ ಪತ್ನಿ ಸಾಧ್ವಿಮಣಿ ದಿ| ಶ್ರೀಮತಿ ವೆಂಕಮ್ಮನವರು. ನಾನವರ ಮನೆಗೆ ಹೋದಾಗ ಕವಿಗಳು ಸಾಯಂಕಾಲ ಹೊರಗಡೆ ಬೆತ್ತದ ಖುರ್ಚಿಯಲ್ಲಿ ಕುಳಿತು ಹೊರನೋಟ ಬೀರಿದ್ದರು. ಪತ್ನಿಯನ್ನು ಅವರು ಕರೆಯುವುದಕ್ಕಿಂತ ಮುಂಚೆಯೇ ಅವರೇ ಬಂದು ನನ್ನನ್ನು ಮಾತಾಡಿಸಿದರು. ಆಗಲೇ ನಾನು ನಮ್ಮ ಶ್ರೀ ನರಸಿಂಹಸ್ವಾಮಿಯವರು ಕಂಡ ’ಶಾರದೆ’ಯನ್ನು ಕಂಡಿದ್ದು. ಎಂತಹ ಅದ್ಬುತ ಸತ್ಕಾರ ಅಂತೀರಿ- ಬೇಡವೆಂದರೂ ಕೇಳದೇ ಅವರು ಕೈಯ್ಯಾರೆ ಮಾಡಿಕೊಟ್ಟ ಲಿಂಬೂ ಪಾನಕವನ್ನು ನನ್ನ ಜನ್ಮ ಪೂರ್ತಿ ನೆನೆಯಬೇಕು. ಮಲ್ಲಿಗೆ ಕವಿ ತನ್ನ ಕವನ ಸಂಕಲನದ ಪೂರ್ತಿ ಹಾಡುಗಳನ್ನೂ ಆಲ್ಮೋಸ್ಟ್ ತನ್ನ ಹೆಂಡತಿಯನ್ನು ನೆನೆದು-ಕಂಡು-ಪ್ರೀತಿಸಿಬರೆದಿದ್ದೆಂಬುದರಲ್ಲಿ ಸಂದೇಹವೇ ಇಲ್ಲಬಿಡಿ.

ನಮ್ಮ ಇತಿಹಾಸವನ್ನು ಕೆದಕಿದರೆ ಅಲ್ಲಿ ಪ್ರೀತಿಗಾಗಿ ಬಹಳ ಅರ್ಪಿಸಿಕೊಂಡ ಷಹಾಜಹಾನ್ ಸಿಗುತ್ತಾನೆ, ಮತ್ತೆಲ್ಲೋ ಲೈಲಾ-ಮಜ್ನೂ ಕಥೆ ಕೇಳಿಬರುತ್ತದೆ. [ಅದರಂತೇ ಕೆಟ್ಟ ಚಾಳಿಯ ಔರಂಗಜೇಬನೂ ಸಿಗುತ್ತಾನೆ!] ರಾಮಾಯಣದಲ್ಲಿ ಸೀತೆಗಾಗಿ ಇಡೀ ರಾಮಾಯಣ ವಿಸ್ತರಿಸಿರುವುದು ತಿಳಿದುಬರುತ್ತದೆ. ಇನ್ನು ಇತ್ತೀಚೆಗೆ ಸಂತ ಶ್ರೀ ರಾಮಕೃಷ್ಣ ಪರಮಹಂಸರು ಮಡದಿ ಶಾರದಾದೇವಿಯವರಲ್ಲಿ ಲೋಕಮಾತೆಯನ್ನೇ ಕಂಡು ಪೂಜಿಸಿದರು ಅಲ್ಲವೇ ? ಇದೇ ಥರದ ಹಲವು ವ್ಯಕ್ತಿಗಳು ನಮ್ಮ ನಡುವೆ ಅಲ್ಲಲ್ಲಿ ಇಂದಿಗೂ ಇದ್ದಾರೆ.

ನಾನು ನೋಡಿದ ಒಂದು ಘಟನೆ- ಮಗ ದ್ವಿತೀಯ ಪಿಯೂಸಿ ಮುಗಿಸಿ ಸಿ.ಈ.ಟಿ. ಬರೆದಿದ್ದ, ಒಳ್ಳೆಯ ರಾಂಕ್ ಪಡೆದ ಆತ ತಂದೆಯೊಟ್ಟಿಗೆ ಬೆಂಗಳೂರಿಗೆ ಕೌನ್ಸೆಲಿಂಗ್ ಗಾಗಿ ಬಂದಿದ್ದ. ಮಗನಿಗೆ ಬೇಕಾದ ತಾಂತ್ರಿಕಕಾಲೇಜು ಸಿಕ್ಕು ತಂದೆ-ಮಗ ಊರಿಗೆ ಒಮ್ಮೆ ಮರಳಿದರು. ಅಷ್ಟರಲ್ಲೇ ಮಗನಿಗೆ ಮುಂಬೈ ವಿಶ್ವವಿದ್ಯಾಲಯದ ರಾಸಾಯನಿಕ ವಿಭಾಗದಿಂದ ಆದ್ಯತೆಯ ಮೇರೆಗೆ ಸೀಟು ಕೊಡಮಾಡಲ್ಪಟ್ಟಿದೆ-ಬಂದು ಕಾಣುವುದು ಎಂಬ ಕರೆ ಬಂತು. ಲಿಖಿತ ಪತ್ರವೂ ಬಂತು. ಈ ಕಡೆ ಆತನ ತಾಯಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ದಿನೇ ದಿನೇ ಉಲ್ಬಣವಾಗುತ್ತಾ ಹೋಯಿತು. ತಂದೆಯನ್ನು ಮನೆಯಲ್ಲೇ ಬಿಟ್ಟು ತಾನೊಬ್ಬನೇ ಗೊತ್ತಿರದ ಮಹಾನಗರಕ್ಕೆ ಧೌಡಾಯಿಸಿದ. ಅಲ್ಲೇ ಸೇರಿಕೊಂಡೂ ಬಿಟ್ಟ. ಆತನ ತಾಯಿಗೆ ಹಲವು ಪರೀಕ್ಷೆಗಳಾದವು-ನಂತರ ತಿಳಿದಿದ್ದು ಲೀವರ್ ಕ್ಯಾನ್ಸರ್ ಎಂಬುದು. ಅದನ್ನು ತಿಳಿದ ನಾವೆಲ್ಲಾ ಬಹಳ ಬೇಸರಗೊಂಡೆವು. ಆಕೆಯ ಯಜಮಾನನಂತೂ ಬದುಕಿದ್ದುದೇ ದೊಡ್ಡದು! ದೇವರಮೇಲೆ ಭಾರಹಾಕಿ ತನ್ನ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿಭಾಯಿಸುತ್ತ ಹಲವು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ. ಕಂಡ ಕಂಡ ದೇವರಲಿ ಬೇಡಿದ,ಪ್ರಾರ್ಥಿಸಿದ-ಆದರೆ ಪಡೆದು ಬಂದಿದ್ದನ್ನು ಅನುಭವಿಸಲೇ ಬೇಕಲ್ಲ! ಐದಾರು ತಿಂಗಳಲ್ಲಿ ಶೀಕು ಅಂತಿಮ ಹಂತ ತಲ್ಪಿತು. ದಿನವೂ ಹೆಂಡತಿಗಾಗಿ ಕಣ್ಣೀರುಗರೆಯುತ್ತಿದ್ದುದನ್ನು ನಾವು ಸ್ವತಃ ನೋಡಿದ್ದೇವೆ. ಅಂತಹ ಅಸಾಧ್ಯ ನೋವುಣ್ಣುತ್ತಿದ್ದರೂ ಒಡಲಲ್ಲಿ ಬೆಂಕಿ ಹೊತ್ತುರಿಯುತ್ತಿದ್ದರೂ ಆ ತಾಯಿ ಸ್ಥಿತಪ್ರಜ್ಞಳಾಗಿದ್ದಳು. ದಿನವೂ ಹಲವು ನೋವುನಿವಾರಕ ಮಾತ್ರೆ ನುಂಗುತ್ತ ಇರುವಷ್ಟು ದಿನ ತನಗಲ್ಲ-ತನ್ನ ಕುಟುಂಬಕ್ಕಾಗಿ ಎಂದು ತೀರ್ಮಾನ ಕೈಗೊಂಡಿದ್ದಳು. ಅಂತಹ ಅಸಹನೀಯ ಸ್ಥಿತಿಯಲ್ಲೂ ಮಗನನ್ನು ಓದಿಗೆ ಹುರಿದುಂಬಿಸಿದಳು. ತಾಯ ನೆನಪು ಎಷ್ಟೇ ಕಾಡಿದರೂ ಮಗ ಹಿಂಜರಿಯಲಿಲ್ಲ. ಆತನೂ ತನ್ನ ಓದನ್ನು ಮುಂದುವರಿಸುತ್ತ ನಡೆದ.

ಬದುಕಿನ ಕೊನೆಯಘಟ್ಟದಲ್ಲೂ ಬಹಳಕಾಲ ಹೆತ್ತ ಒಬ್ಬನೇ ಮಗನನ್ನೂ ಹತ್ತಿರವಿಟ್ಟುಕೊಂಡು ಆ ಪ್ರೀತಿಯನ್ನು ಅನುಭವಿಸಲಾರದ ಸ್ಥಿತಿ ಆ ತಾಯಿಯದಾಗಿತ್ತು. ಮಗನ ಮೊದಲ್ನೇ ಸೆಮಿಸ್ಟಾರ್ ಮುಗಿಯುವ ಹೊತ್ತಿಗೆ ಆ ತಾಯಿ ಇಹಲೋಕ ತ್ಯಜಿಸಿದಳು. ಅವಳ ಯಜಮಾನಕೂಡ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋದ ಮೇಲೆ ಮನಸ್ಸನ್ನು ಗೆದ್ದಿದ್ದ! ಜೀವನ ಅಂದರೆ ಇದೇ ರೀತಿಯ ಹಲವು ಜಂಜಡಗಳು ಎಂಬುದನ್ನು ಅರ್ಥವಿಸಿದ್ದ. ಹೇಂಡತಿಯ ಉತ್ತರಕ್ರಿಯಾದಿಗಳನ್ನು ಸಮರ್ಪಕವಾಗಿ ಪೂರೈಸಿ ತನ್ನ ಮಗನ ಓದನ್ನು ಮುಂದುವರಿಸಲು ಬೇಕಾಗುವ ಎಲ್ಲಾರೀತಿಯ ಏರ್ಪಾಟು ಮಾಡಿದ. ಮಗ ಬಹುದೊಡ್ಡ ವ್ಯಕ್ತಿಯಾಗಿ ಬೆಳೆಯಲೆಂದು ಆಶಿಸಿದ ಆ ತಾಯಿಯ ಮಾತು ತಂದೆಯ ಕಿವಿಯಲ್ಲಿ ಸದಾ ಗುನುಗುನಿಸುತ್ತಿತ್ತು. ತನ್ನ ಸಕಲ ಕಷ್ಟಗಳನ್ನೂ ಮೆಟ್ಟಿನಿಂತು ಆತ ತನ್ನ ಮಗನ ಓದಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟ. ಹೆಂಡತಿಯ ಮೇಲಿನ ಪ್ರೀತಿಗಾಗಿ ಅವಳ ಆ ಬದುಕಿದ ರೀತಿಯ ನೆನೆಪಿಗಾಗಿ ಮತ್ತೆ ಬೇರೆ ಮದುವೆಯಾಗದೇ ತನ್ನ ನಡುವಯಸ್ಸಿನಿಂದ ಹಾಗೇ ಬ್ರಹ್ಮಚರ್ಯದಲ್ಲಿ ಮುನ್ನಡೆದ. ಹೆಂಡತಿಯ ಭಾವಚಿತ್ರವನ್ನು ದೊಡ್ಡದಾಗಿಸಿ ಕಟ್ಟುಹಾಕಿಸಿಟ್ಟುಕೊಂಡು ಅದಕ್ಕೆ ಜಾಜಿ-ಮಲ್ಲಿಗೆ ಥರದ ಮಾಲೆಗಳನ್ನು ಇಟ್ಟು ಆ ತಾಯಿಯ ಆತ್ಮಕ್ಕೆ ಸ್ವತಃ ಈ ಯಜಮಾನ ಕೈಮುಗಿಯುತ್ತಿರುವುದನ್ನು ನೋಡಿದ ನಾನಿನ್ನೂ ಇದ್ದೇನೆ! ಮಗ ಎಂಜಿನೀಯರ್ ಆದ. ನಂತರವೂ ಓದಿ ಒಳ್ಳೆಯ ರ‍್ಯಾಂಕ್ [RANK] ಆಯ್.ಎ.ಎಸ್. ಪಾಸುಮಾಡಿ ಇವತ್ತು ಉತ್ತಮ ಅಧಿಕಾರದಲ್ಲಿದ್ದಾನೆ, ಭಾರತೀಯ ಸರಕಾರದ ಸೇವೆಯಲ್ಲಿದ್ದಾನೆ. ಆ ಯಜಮಾನ ಬೇರಾರೂ ಅಲ್ಲ, ಸ್ವತಃ ನನ್ನ ಚಿಕ್ಕಪ್ಪ ಶ್ರೀ ಸುಬ್ರಹ್ಮಣ್ಯ ಭಟ್. ಗತಿಸಿದ ಅವರ ಹೇಂಡತಿ ದಿ|ಶ್ರೀಮತಿ ಗಾಯತ್ರಿ. ಓದುವಾಗ ಹಲದಿನ ಅವರಾಶ್ರಯದಲ್ಲಿ ನಾನಿದ್ದೆ. ನನ್ನ ಮದುವೆಯ ಸಂದರ್ಭದಲ್ಲಿ ಆ ತಾಯಿ ಹಾಸಿಗೆ ಹಿಡಿದಿದ್ದರೂ ಮದುವೆಯ ನಂತರ ನಮ್ಮನ್ನು ಕರೆಸಿಕೊಂಡು ಉಡುಗೊರೆ ಇತ್ತಾಗ ನನ್ನ ಹೃದಯ ಉಕ್ಕಿ ಬಂತು, ಅವರ ಅನಾರೋಗ್ಯ ಸ್ಥಿತಿಗೆ ಒಳಗೊಳಗೇ ಮಮ್ಮಲ ಮರುಗಿದ ವ್ಯಕ್ತಿ ನಾನು. ನನ್ನ ಕಣ್ಣಲ್ಲಿ ಸಹಜವಾಗಿ ನೀರು ಹರಿಯಿತು. ಇವತ್ತಿಗೂ ಆ ತಾಯಿಯನ್ನು ನೆನೆಸಿಕೊಳ್ಳುತ್ತೇನೆ. ಅವರ ಋಣವನ್ನು ಖಂಡಿತ ತೀರಿಸಲು ಸಾಧ್ಯವಿಲ್ಲ . ಇದು ಗಂಡ-ಹೆಂಡತಿಯ ಪ್ರೀತಿಗೆ ಹಿಡಿದ ಇನ್ನೊಂದು ಕನ್ನಡಿ.

ಹಿಂದೂ ಮದುವೆಗಳಲ್ಲಿ ಹಿಂದೆಲ್ಲಾ ಹಲವು ಹಾಡುಗಳನ್ನು ಹಾಡುತ್ತಿದ್ದರು. ಇಂದೆಲ್ಲಾ ಅವು ಬರೇ ನೆನೆಪು ಮಾತ್ರ. ಆ ವಿಷಯದಲ್ಲಿ ಹಿಂದಿನ-ಇಂದಿನ ಪೀಳಿಗೆಯ ಕೊಂಡಿಯಾಗಿ ಬೆಳೆದ ನಾವೆಲ್ಲ ಭಾಗ್ಯವಂತರು. ಹಳ್ಳಿಗಳಲ್ಲಿ ಮನೆಯ ಅಂಗಳದಲ್ಲೇ ಚಪ್ಪರ ಹಾಕಿ, ಬಟ್ಟೆಯ ಮೇಲ್ಗಟ್ಟು ಕಟ್ಟಿ, ತಳಿರುತೋರಣಗಳಿಂದ ಅಲಂಕರಿಸಿ, ರಂಗೋಲಿ ಮುಂತಾದುವನ್ನು ಬರೆದು, ಚಪ್ಪರದಲ್ಲಿ ಮಂಟಪ ಕಟ್ಟಿ ಅಲ್ಲಿ ಮದುವೆ ನಡೆಯುತ್ತಿತ್ತು. ನಾವು ಬೆಳೆಯುವ ಹೊತ್ತಿಗೆ ಐದುದಿನ ನಡೆಯುತ್ತಿದ್ದ ಮದುವೆ ೨ ದಿನದ ಸಂಭ್ರಮಕ್ಕೆ ಇಳಿಯಿತು. ಈಗೆಲ್ಲ ಮದುವೆ ಎಂಬುದು ಯಾವಾಗ ಆಯಿತು ಎನ್ನುವಷ್ಟು ತ್ವರಿತಗತಿ. ಹಿಂದಿನ ಮದುವೆಯ ಸಂಭ್ರಮದಲ್ಲಿ ಹಲವು ಹಾಡುಗಳು-ಮನೆಯ ಒಳಗಡೆಯೇ ಆಡುವ ಆಟಗಳು,ಚಿಕ್ಕಪುಟ್ಟ ಸ್ಪರ್ಧೆಗಳು ಇವುಗಳೆಲ್ಲದರ ಹರವಿತ್ತು. ಮುಖ್ಯವಾಗಿ ಅಲ್ಲಿ ಹಲವು ಬಂಧು-ಭಗಿನಿಯರು ಒಟ್ಟಾಗಿ ಪರಸ್ಪರ ಸೌಹಾರ್ದದ ಮಾತುಕತೆ ನಡೆದು ಸಮಾರಂಭಕ್ಕೊಂದು ಜೀವಕಳೆಯಿರುತ್ತಿತ್ತು. ಮದುವೆಯಾದ ಹೆಣ್ಣು ಗಂಡನ ಮನೆ ಸೇರಿದಾಗ ಅಲ್ಲಿ ವಾಸ್ತು ಬಾಗಿಲ ಪೂಜೆಯನ್ನು ಮಾಡಿ ಗೃಹ ಪ್ರವೇಶಿಸಿದ ಬಳಿಕ ಸೇರಿದ ಹತ್ತು ಸಮಸ್ತರ ನಡುವೆ ಹೆಣ್ಣಿನಕಡೆಯವರು - ಗಂಡಿನಕಡೆಯವರಿಗೆ ’ಹೆಣ್ಣೊಪ್ಪಿಸು’ವ ಕಾರ್ಯಕ್ರಮವಿರುತ್ತಿತ್ತು. ಹೆಣ್ಣು ಎಂದರೆ ಹೂವಿನ ಸಸಿ ಅಥವಾ ಹೂವು-ಇವತ್ತಿನ ವರೆಗೆ ನಮ್ಮ ಆಶ್ರಯದಲ್ಲಿ ಇದ್ದ ಈ ಹೂ ಸಸಿಯನ್ನು ನಿಮ್ಮ ಕೈಗೆ ಹಾಕುತ್ತಿದ್ದೇವೆ, ಇನ್ನು ಮುಂದೆ ನಿಮ್ಮ ಆಶ್ರಯಕ್ಕೆ ಬರುವ ಈ ಹೂಸಸಿಗೆ ಕಾಲಕಾಲಕ್ಕೆ ಬೇಕಾದ ನೀರು-ಗೊಬ್ಬರ ಅರ್ಥಾತ್ ಬದುಕಲು ಬೇಕಾದ ಸೌಲಭ್ಯವನ್ನಿತ್ತು ನಿಮ್ಮ ಮಗಳಂತೇ ತಾವು ಪರಾಂಬರಿಸಿ ನೋಡಿಕೊಳ್ಳುವುದು-ಎಂದು ಹೆಣ್ಣಿನ ತಂದೆತಾಯಿ ಹೆಣ್ಣಿನ ಕೈಯ್ಯನ್ನು ಅವಳ ಗಂಡನೂ ಸೇರಿದಂತೆ ಆತನ ತಂದೆ-ತಾಯಿಗಳ ಕೈಗಳಲ್ಲಿ ಇಡಿಸಿ ಈ ಹೇಳಿಕೆ ನೀಡುತ್ತಿದ್ದುದು ಸಾಂಕೇತಿಕವಾಗಿ ಒಂದು ಜವಾಬ್ದಾರಿಯ ಹಸ್ತಾಂತರವಾಗಿತ್ತು.


ಆ ಕಾಲದಲ್ಲಿ ಹಲವು ಅಜ್ಞಾತ ಕವಿಗಳ ಹಾಡುಗಳು ನಮ್ಮ ಗ್ರಾಮಗಳಲ್ಲೆಲ್ಲ ಬಳಸಲ್ಪಡುತ್ತಿದ್ದವು. ಅವು ಹೇಗೆ ಪ್ರಚುರಗೊಳ್ಳಲ್ಪಟ್ಟವು-ಯಾರು ರಾಗ ಹಾಕಿ ಹಾಡಲು ಪ್ರಾರಂಭಿಸಿದ್ದು ಎಂಬುದು ನನಗೆ ವಿದಿತವಲ್ಲ. ಒಟ್ಟಾರೆ ಅವುಗಳೆಲ್ಲ ಬಹಳ ಭಾವನೆ ಕೆರಳಿಸುವಂತಹ ಹಾಡುಗಳಾಗಿದ್ದವು. ಮೌಲ್ಯವನ್ನು ಒತ್ತಿ ಹೇಳಿ ಎತ್ತಿಹಿಡಿಯುವ ಪದಗಳಾಗಿದ್ದವು. ಕವಿ ಪ್ರೊಫೆಸರ್ ದಿ| ವಿ. ಸೀತಾರಮಯ್ಯನವರು ಅಂತಹ ಒಬ್ಬ ಮಹಾನುಭಾವರು. ಇವರ ರೀತಿಯಲ್ಲೇ ಇನ್ನೂ ಅನೇಕ ಜನ ಬರೆದರು ಆದರೆ ನನ್ನ ಅತೀ ಬಾಲ್ಯದ ಕಾಲವಾದ್ದರಿಂದ ಹೆಸರುಗಳು ನೆನಪಿಗೆ ಬರುವುದಿಲ್ಲ. ನಮ್ಗೆ ಇವುಗಳೆಲ್ಲ ಕವಿಗಳು ಬರೆದಿದ್ದೆಂಬುದು ಗೊತ್ತಿರಲಿಲ್ಲ. ಹೆಂಗಸರು ಒಬ್ಬರಿಂದೊಬ್ಬರು ಬಾಯಿಂದ ಬಾಯಿಗೆ ಹಾಡಿಸಿ ಕೇಳಿ ಕಂಠಪಾಠ ಮಾಡುವಾಗ ನಾವೆಲ್ಲ ಮೂದಲಿಸುತ್ತಿದ್ದೆವು; ಅವುಗಳ ಅರ್ಥ ಗೊತ್ತಿರದೇ, ಅವುಗಳ ಮೌಲ್ಯ ತಿಳಿಯದೇ! ಇಂದು ಬೇಕೆಂದರೂ ಆ ಹಾಡುಗಳು ಕೇಳಸಿಗುವುದಿಲ್ಲ. ಮದುವೆಯ ಬಹುತೇಕ ಹಂತಗಳನ್ನು ಆದರ್ಶ ಸತಿಪತಿಗಳಾದ ಶ್ರೀ ಸೀತಾರಾಮಚಂದ್ರರ ಮದುವೆಯ ಸುತ್ತ ಹೆಣೆಯಲ್ಪಟ್ಟ ಹಾಡುಗಳಾಗಿದ್ದವು. ಉದಾಹರಣೆಗೆ --

ಧಾರೇ ಎರೆದ ರಾಯ ನಾರೀ ಜಾನಕಿಯ...
ಶ್ರೀರಾಮಚಂದ್ರಗೆ ಧಾರುಣೀ ಸುತೆಯಾ ....


--ಎಷ್ಟು ರಸವತ್ತಾಗಿದೆ ನೋಡಿ. ಧರಣಿಯಲ್ಲಿ ಜನಿಸಿದ್ದರಿಂದ ಧರಣೀಸುತೆಯಾದ ಜಾನಕಿಯನ್ನು ಸಾಕು ತಂದೆ ಜನಕ ಶ್ರೀರಾಮಚಂದ್ರನಿಗೆ ಧಾರೆಯೆರೆದ ಎಂದು ಹೇಳಲ್ಪಟ್ಟಿದೆ. ಮದುವೆಗೆ ಮುನ್ನ ಮಾಂಗಲ್ಯದ ಸಂಕೇತವಾದ ಕುಂಕುಮ ಹಾಕಿ ಅಕ್ಷತೆ ಕಲೆಸುವುದರಿಂದ ಹಿಡಿದು ’ಸಟ್ಟುಮುಡಿ’ [ಅನ್ನ ಬಡಿಸುವ ಸೌಟಿಗೆ ನಮ್ಮಲ್ಲಿ ಸಟ್ಟುಗ ಎಂದು ಕರೆಯುತ್ತಾರೆ, ಅದನ್ನು ಕೈಲಿ ಹಿಡಿದು ಹೊಸಸೊಸೆ ಅಡಿಗೆಮನೆಯ ಜವಾಬ್ದಾರಿ ವಹಿಸಿಕೊಂಡು ನಿಮಗೆಲ್ಲಾ ಅನ್ನಪೂರ್ಣೆ ಆದೆ ಎನ್ನುವುದೇ ಈ ಕಾರ್ಯಕ್ರಮ] ಎನ್ನುವ ಕಾರ್ಯಕ್ರಮದ ವರೆಗೂ ನೂರಾರು ಹಾಡುಗಳ ಹರವಿತ್ತು. ಊಟಕ್ಕೆ ಕುಳಿತಾಗ ಬೀಗರು ಬೀಗರನ್ನು ತಮಾಷೆಗಾಗಿ

ಆಚೆ ಪಂಕ್ತಿಗೆ ದೊನ್ನೆ ಈಚೆ ಪಂಕ್ತಿಗೆ ದೊನ್ನೆ
ಬೀಗರ ಪಂಕ್ತಿಗೆ ಹರಕ್ದೊನ್ನೆ ....

--ಎಂದು ಗೇಲಿಯಾಡುವುದೇ ಆಗಲೀ

ನಲಿದಾರತಿಗೈವಾ ಸಖಿಯೇ
ಎಲೆ ಶೋಭಿಪ ಸೀತಾರಾಮಚಂದ್ರರಿಗೇ ...

ಇವತ್ತಿಗೆ ಇವೆಲ್ಲ ಯಾರೋ ಅಜ್ಜಿಯರು ಇದ್ದರೆ, ಅವರ ಗಂಟಲು ಸರಿ ಇದ್ದರೆ ಹೇಳುತ್ತೀರಾ ಅಂತ ಕಾಡಿ ಬೇಡಿ ಹೇಳಿಸಿ ಕೇಳಬೇಕಾದ ಹಾಡುಗಳಷ್ಟೇ!

ಸೊಸೆಯಾ ನೋಡಿಕೋ ಜಾಣೆ
ಬಾ ಸುಪ್ರವೀಣೇ ......

--ಇದು ಸೊಸೆಯನ್ನು ಹೇಗಿದ್ದಾಳೆ ಎಂದು ನೋಡಿಕೊಳ್ಳಲು ಹೆಣ್ಣಿನ ಕಡೆಯವರು ಅತ್ತ್ಯಮ್ಮಂಗೆ ಹೇಳಿದರೆ

ಇಂದು ಬಂದ ಸೊಸೆಯಾ
ಇಂದು ನೋಡ್ವರೇನೆ ......

--ಇದು ಗಂಡಿನಕಡೆಯವರ ತಿರುಗುಬಾಣವಾಗಿತ್ತು!

ಅಂತೂ ಬದುಕು ಪೂರ್ತಿ ಹಸನಾಗಲೀ ಎಂಬ ಕಾರಣಕ್ಕೇ ಹಿಂದಿನವರು ಹಲವು ಘಟನೆಗಳನ್ನು ದಾಖಲಿಸಿ ಹಾಡಿನ ರೂಪದಲ್ಲಿ ಬಳಸುತ್ತಿದ್ದರು.

ಜನಪದರಲ್ಲೂ ಒಮ್ಮೆ ಕಣ್ಣಾಡಿಸಿ ನೋಡಿ: ಮದುವೆಯಾಗಿ ಮನೆಗೆ ಬಂದ ಕೆಲದಿನಗಳ ತರುವಾಯ ತವರಿನ ನೆನಪಲ್ಲಿ ಕೊರಗುವ ಹೆಂಡತಿಯನ್ನು ಕಂಡ ಗಂಡ ಆಕೆಯ ಮುಂಗುರುಳು ನೇವರಿಸಿ-

ಹಾಸೀಗಿ ಹಾಸಂದ ಮಲ್ಲೀಗಿ ಮುಡಿಯೆಂದ
ಬ್ಯಾಸತ್ರ ಮಡದೀ ಮಲಗಂದ....
ಬ್ಯಾಸತ್ರ ಮಡದೀ ಮಲಗಂದ ಪ್ರೀತೀಲೇ ತನ್ನೋಡಿ ತವರಾ ಮರೆಯೆಂದಾ....

ತನ್ನಲ್ಲೇ ಎಲ್ಲವನ್ನೂ ಕಾಣು, ಅಪ್ಪ-ಅಮ್ಮ,ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರ ಪ್ರೀತಿಯನ್ನು ತಾನೇ ಕೊಡುತ್ತೇನೆ ಮಡದೀ ಹಾಸಿಗೆ ಹಾಸಿಕೊಡು, ಇಲ್ಲವೇ ಇದೋ ತಗೋ ಮಲ್ಲಿಗೆ ಹೂವು ನೋಡು ಎಷ್ಟು ಚೆನ್ನಾಗಿದೆ ಮುಡಿದುಕೋ ಎಂದೆಲ್ಲಾ ಹೇಳಿ ಅವಳ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುವ ಆತ, ನಿಂಗೆ ಬೇಜಾರಾಗಿದ್ರೆ ತನ್ನನ್ನೇ ನೋಡಿ ಎಲ್ಲವನ್ನೂ ಮರೆ ಎಂದು ಸಂತೈಸುತ್ತಾನೆ. ಹೆಂಡತಿಯಾದರೂ ಅಷ್ಟೇ ತನ್ನ ಗಂಡ ಬಡವನೇ ಆಗಿದ್ದರೂ ಆತ ಒಳ್ಳೆಯವ, ತನಗೆ ಬದುಕು ಕೊಟ್ಟವ ಎಂಬ ತುಂಬಿದ ಹಂಬಲದಿಂದ--

ಕೂಲಿ ಮಾಡಿದರೇನ ಕಂಬಳಿ ಹೊದ್ದರೇನ
ನಮಗ ನಮರಾಯ ಬಡವೇನ ?

--ಇತರರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಿದ್ದಳು. ಇಂದಿಗೆ ಆ ಮೌಲ್ಯವೆಲ್ಲ ಕುಸಿದು ಗಂಡನಿಗೆ ಹೆಂಡತಿ ಎಷ್ಟು ದುಡಿಯುತ್ತಾಳೆ ಎಂದಾದರೆ ಹೆಂಡತಿಗೆ ಗಂಡ ತರುವ ಸಂಬಳ ಯಾತಕ್ಕೂ ಸಾಲದಾಗಿದೆ. ಶಹರ-ಪಟ್ಟಣಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವಾಗ ಹುಟ್ಟಿ ಬೆಳೆಯುತ್ತಿರುವ ಚಿಕ್ಕ ಮಗುವಿಗೆ ಕೇವಲ ’ಸಾಕಮ್ಮ’ ಅಥವಾ ’ಸಾಕಮ್ಮನ ಗೂಡು’ [ಬೇಬಿ ಸಿಟ್ಟರ್]ಗಳೇ ದಾರಿಯಾಗಿವೆ. ಅಲ್ಲಿ ಅವರು ನೀಡಿದ್ದೇ ಆಹಾರ! ಕೆಲವು ಸಾಕಮ್ಮ ಗೂಡುಗಳಲ್ಲಿ ಸಣ್ಣ ಪ್ರಮಾಣದಲ್ಲಿ ನಿದ್ರೆ ಮಾತ್ರೆ ತೇಯ್ದು ಕುಡಿಸಿ ಎಲ್ಲಾ ಮಕ್ಕಳೂ ಮಲಗುವಂತೇ ಮಾಡಿ ಸಾಕಮ್ಮಗಳು ಬೇರೆ ಕೆಲಸಮಾಡುತ್ತಿರುತ್ತವೆ ಎಂಬುದು ನನಗೆ ಗೊತ್ತಾದ ಖೇದಕರ ವಿಷಯ! ಹಾಗೆ ಬೆಳೆಯುವ ಮಗುವಿಗೆ ಯಾವ ಸಂಸ್ಕಾರ ಸಿಗಬಹುದು- ಆ ಬಾಳು ಒಂಥರಾ ನರಕದ ಬಾಳು ಅನ್ನಿಸೋದಿಲ್ವಾ? ತಂದೆ-ತಾಯಿ ಇದ್ದೂ ಮಗುವನ್ನು ಬೇರೆಯವರ ಬುಟ್ಟಿಯಲ್ಲಿ ಕೂಡ್ರಿಸಿ ಟಾಟಾ ಮಾಡಿ ಹೋದಾಗ ಆ ಮಗುವಿಗೆ ಏನನ್ನಿಸಬಹುದು? ಶಹರದ ಮಕ್ಕಳಲ್ಲಿ ಬಹುತೇಕರನ್ನು ಮಾತಾಡಿಸಿ ಅವುಗಳಿಗೆ ಆಂಗ್ಲ ಭಾಷೆಯ ಕೆಲವು ಪಲುಕುಗಳನ್ನು ಬಿಟ್ಟರೆ ಬೇರೆ ಯಾವ ಪರಿಜ್ಞಾನ ಕೂಡ ಬಂದಿರುವುದಿಲ್ಲ. ಊರಿಂದ ಹಿರಿಯರು ಬಂದಿದ್ದರೆ" ನೋಡೋ ನಿನ್ನ ಮಾವ ಬಂದಿದಾರೆ " ಅಂದರೆ "ಹಾಯ್" ಎನ್ನುವಂತೆಯೂ ಎಲ್ಲಿಗಾದರೂ ಹೊರಟರೆ " ಬಾಯ್ " ಎನ್ನುವಂತೆಯೂ ಕಲಿಸಿರುವುದನ್ನು ಬಿಟ್ಟರೆ ನಿಜಜೀವನದ ರೀಯಾಲಿಟಿ ಶೋ ಗೆ ಬೇಕಾದ ಯಾವ ತಯಾರಿ ಕೂಡ ನಡೆದಿರುವುದಿಲ್ಲ. ’ದುಡ್ಡು ಕೊಡು ಸೀಟು ಪಡಿ’ ಇದಿಷ್ಟೇ ಅನುಸರಣೆ ತಂದೆ-ತಾಯಿಗಳದ್ದು!

ಇಂದು ನಾವು ಶಹರದ ಬದುಕಿಗೆ ನಮ್ಮನ್ನು ಮಾರಿಕೊಂಡಿದ್ದೇವೆ. ಪ್ರಾಕ್ಟಿಕಲ್ ಆಗಿ ಯಾರಿಗೂ ನಾವು ಹಳ್ಳಿಯಲ್ಲಿ ಬದುಕಬಲ್ಲೆವು ಎಂದು ಹೇಳುವ ಗಟ್ಟಿ ಎದೆ ಕೂಡ ಇಲ್ಲ! ನಮಗೆ ನಮ್ಮ ಹಿರಿಯರು ಬೇಕಾಗಿಲ್ಲ! ನಾವಿಬ್ಬರು-ನಮಗೊಬ್ಬ ಹೋಗ್ತಾ ಹೋಗ್ತಾ ನಾವಿಬ್ಬರು-ನಮಗಾರು? ಎನ್ನುವ ಸ್ಥಿತಿ ಬರುತ್ತಿದೆ. ಹುಡುಗಿಯರು ಈ ವಿಷಯದಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು. ತಮ್ಮ ತಂದೆ-ತಾಯಿಗಳನ್ನು ಆದರಿಸುವ ಅವರು ಅತ್ತೆ-ಮಾವಂದಿರನ್ನೂ ಅದೇ ಮಟ್ಟದಲ್ಲಿ ನೋಡಿಕೊಳ್ಳಬೇಕು. ಒಂದೊಮ್ಮೆ ತಮಗೆ ಒಬ್ಬನೇ ಮಗ ಎಂದು ಜೊತೆಗೆ ಇರಲು ಬಯಸಿದರೆ ಅವರನ್ನು ವೃದ್ಧಾಶ್ರಮಕ್ಕೆ ಸಾಗಹಾಕುವ ಸಾಹಸ ಮೆರೆಯಬಾರದು! ಎಷ್ಟೇ ಆಗಲಿ ನಮ್ಮವರು ನಮ್ಮವರೇ-ದುಡ್ಡಿಗೆ ಸಿಗುವ ಸಾಕಮ್ಮಗಳು ಬರೇ ಹಣಕ್ಕಾಗಿ ಮಾಡುವವರು. ಮನೆಯಲ್ಲಿ ಹಿರಿಯರು ಇದ್ದಾಗ ಕೆಲವೊಮ್ಮೆ ಹೊಸ ಬದುಕಿನ ಚಟುವಟಿಕೆಗಳು ಆಡಂಬರಗಳು, ನವನವೀನ ವಿನ್ಯಾಸದ ಹೆಂಗಸರು ತೊಡಬಾರದ ದಿರಿಸುಗಳು, ಮೇಕಪ್ ಸಾಮಗ್ರಿಗಳು ಇವುಗಳನ್ನೆಲ್ಲ ನೋಡಿ ಇರುಸುಮುರುಸು ಉಂಟಾಗಿ ಅವರೇನಾದರೂ ಅನ್ನಬಹುದು-ಆದ್ರೆ ದೇವರಾಣೆ ಹೇಳುತ್ತೇನೆ ಕೇಳಿ ಯಾವ ತಂದೆ-ತಾಯಿಯೇ ಆಗಲಿ ತಮ್ಮ ಮಕ್ಕಳಿಗಾಗಿ ತಮ್ಮ ಆಚರಣೆ-ಸಂಪ್ರದಾಯಗಳಲ್ಲೇ ಬದಲಾವಣೆ ಮಾಡಿಕೊಳ್ಳುತ್ತಾರೆ. ಅವರಿಗೆ ತಿಳಿಸಿ ಹೇಳುವ-ಹೊರ ಜಗತ್ತನ್ನು ತೋರಿಸಿ ಮನವೊಲಿಸುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಕೆಟ್ಟ ಚಾಳಿಯೊಂದು ಆಚರಣೆಯಲ್ಲಿದೆ-ಇಂದು ಮದುವೆಗೆ ತಯಾರಾಗುವ ಹುಡುಗಿ " ಹುಡುಗನಿಗೆ ಅಪ್ಪ-ಅಮ್ಮ ಜೊತೆಯಲ್ಲೇ ಇದ್ದರೆ ಬೇಡ, ಆಮೇಲೆ ಕಷ್ಟವಾಗುತ್ತೆ " ಎಂದು ತನ್ನ ತಂದೆ-ತಾಯಿಗಳಿಗೆ ಹೇಳುತ್ತಾರೆ. ಬದುಕಿನ ಬಹುದಿನ ಅನೇಕ ಮಹಡಿಗಳಿರುವ ಕಟ್ಟಡ ಕಟ್ಟಿದಂತೇ ಇಳಿವಯಸ್ಸಿನಲ್ಲಿ ತಮಗೆ ಸುಖಕಾಣುವ ಕನಸು ಕಟ್ಟಿ ಹಡೆದು-ಪೋಷಿಸಿ-ಬೆಳೆಸಿ-ವಿದ್ಯೆಕಲಿಸಿ ಬದುಕಿನಲ್ಲಿ ದಡ ಹತ್ತಿಸಿದ ಇದ್ದೊಬ್ಬ ಮಗನ ಒಳಿತಿಗಾಗಿ ’ವೃದ್ಧರ ಗೂಡು’ ಸೇರುವ ಹಲವು ಮಾತಾಪಿತೃಗಳಿಲ್ಲವೇ? ಇದಕ್ಕೆಲ್ಲ ನಮ್ಮ ಸಮಾಜದ ಬೇಜವಾಬ್ದಾರಿತನವೇ ಕಾರಣ ಅಲ್ಲಾಂತೀರಾ? ನಾಳೆ ನಾವೊ ನೀವೂ ಈಗ ಓದುತ್ತಿರುವ ಅಕ್ಷರಗಳನ್ನು ಓದಲಾರದಷ್ಟು ಮುದುಕಾಗಿ, ಸೋಡಾ ಗ್ಲಾಸನ್ನು ಕಣ್ಣಿಗೆ ಇಟ್ಟುಕೊಂಡು, ಕೈಲಿ ಕೋಲು ಹಿಡಿದು " ಮಗಾ ಮಗಾ ಮಗಾ" ಅಂತ ನಡೆವಾಗ ನಮಗೂ ಆ ಸ್ಥಿತಿ ಬಂದರೆ ಅದಕ್ಕೂ ನಾವೇ ಹೊಣೆಯಲ್ಲವೇ?

ಹೆಣ್ಣು ಮಕ್ಕಳ ಪಾಲಕರೇ ತಮ್ಮಲ್ಲಿ ಒಂದು ವಿನಂತಿ- ನಿಮ್ಮ ಮಗಳಿಗೆ ಹುಟ್ಟಿದ ಮನೆಗೂ-ಕೊಟ್ಟಮನೆಗೂ ಕೀರ್ತಿ ತರುವಂತಹ ಕೆಲಸಮಾಡಲು, ಅತ್ತೆ-ಮಾವಂದಿರಿದ್ದರೆ ಅವರನ್ನು ಸಂಭಾಳಿಸಿಕೊಂಡು ಹೋಗಲು, ಬದುಕಿನಲ್ಲಿ ಸಹಕಾರ ಮತ್ತು ಸಹಬಾಳ್ವೆಯನ್ನು ಅಳವಡಿಸಿಕೊಳ್ಳಲು, ಕೇವಲ ಕೂಪಮಂಡೂಕಗಳಾಗಿ ಮೆರೆಯದೇ-ಮೆರೆದು ಮರುಗದೇ ವಿಶಾಲ ಮನೋಭಾವ ಬೆಳೆಸಿಕೊಳ್ಳಲು, ಜೀವನದಲ್ಲಿ ರಾಮಾಯಣ-ಭಾರತಗಳಂತಹ ದಾರ್ಶನಿಕರ ಕಥೆಗಳ ತತ್ವವನ್ನು ಹೀರಿ ಅನುಸರಿಸಲು, ಗಂಡನ ದುಡಿಮೆಗೆ ಲೆಕ್ಕಹಾಕದೇ ಇದ್ದುದರಲ್ಲಿ ತೃಪ್ತಿಪಡಲು --ಕಲಿಸಬಹುದೇ ತಾವು? ’ ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೇ’ ಅಂತಾರಲ್ಲ ಈ ಗಾದೆ ತಮಗೂ ಅರ್ಥವಾಗಬಹುದಲ್ಲ ?

ಅಂತಹ ಸುಸಂಸ್ಕೃತ ಮಗಳನ್ನು ಬೆಳೆಸಿ,ಅನೇಕ ಮನಗಳನ್ನು ಬೆಳಗಿಸುವ ಮಗಳನ್ನು ಬೆಳೆಸಿ, ಒಳ್ಳೆಯ ಮನದಿಂದ ಬೆಳೆಸಿ, ಆಗ ಜನಕರಾಯ ಜಾನಕಿಯನ್ನು ಶ್ರೀರಾಮಚಂದ್ರನಿಗೆ ಧಾರೆ ಎರೆದಂತೇ ನೀವೂ ಧಾರೆ ಎರೆದು ಕೊಡಲು ಹಾಗೂ ಅದನ್ನು ಸ್ವೀಕರಿಸಲು ಶ್ರೀರಾಮಚಂದ್ರನಂತಹದೇ ವ್ಯಕ್ತಿಯೊಬ್ಬ ಒಡಮೂಡುತ್ತಾನೆ- ಇದು ಸತ್ಯ ಸಂಕಲ್ಪ, ಇದು ದೈವೀ ಸಂಕಲ್ಪ, ಇದು ನಿತ್ಯ ನಿಸರ್ಗದ ಸಂಕಲ್ಪ ಎಂಬುದರೊಂದಿಗೆ ಅಂತಹ ಸಂದರ್ಭದಲ್ಲಿ ನಾವೆಲ್ಲಾ ಅರ್ಥಗರ್ಭಿತವಾಗಿ, ಮನದಂದು ಹಾಡೋಣ ದಿ| ವೀ.ಸೀ. ಬರೆದ ಹಾಡು --

" ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು "


ನಮಸ್ಕಾರ.