ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 29, 2012

ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....


ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....

ನನ್ನ ಬಾಲ್ಯದ ಚಳಿಗಾಲದ ಒಂದುದಿನ. ಬೆಳಗಿನ ಚುಮುಚುಮು ಚಳಿ ಇನ್ನೂ ಹರಿಯದ ಸಮಯ. ನಮ್ಮ ಹಳ್ಳಿಯ ರಿವಾಜಿನಂತೇ ಬೆಳಿಗ್ಗೆ ಬೇಗ ಎದ್ದು, ಮುಖಮಾರ್ಜನೆ ಶೌಚವಿಧಿಗಳನ್ನು ತೀರಿಸಿಕೊಂಡು ದೇವರಿಗೆ ಹೂವುಗಳನ್ನು ಕೊಯ್ದಿಟ್ಟು ನಮಿಸಿ, ೭ ಗಂಟೆಗೇ ತಿಂಡಿತಿಂದು ಪ್ರಾಥಮಿಕ ಶಾಲೆಗೆ ನಮ್ಮ ಪಯಣ. ಆದರೆ ಅಂದು ಭಾನುವಾರ ಬೆಳಿಗ್ಗೆ ಎಂದಿನಂತೇ ಮಿಕ್ಕೆಲ್ಲಾ ಮುಗಿದಿತ್ತು. ರಜಾದಿನವಾದ್ದರಿಂದ ಸ್ವಲ್ಪ ಆಟೋಪಚಾರಗಳು ನಡೆಯುವ ಸಮಯ. ಅಂಗಳದ ಮೂಲೆಯಿಂದ ಹಾರ್ಮೋನಿಯಂ ನಿಂದ ಹೊರಟ ಸದ್ದು..ಸ.ರಿ.ಗ.ಮ.ಪ...ಮುದುಕಿಯೊಬ್ಬಳು ಹೆಗಲಿಂದ ಇಳಿದ ದಾರಕ್ಕೆ ಹಾರ್ಮೋನಿಯಂ ಕಟ್ಟಿಕೊಂಡು ನುಡಿಸುತ್ತಾ ಮುಂದೆ ಬರುತ್ತಿದ್ದಳು. ಹಣೆಯಲ್ಲಿ ವಿಭೂತಿ, ಮಧ್ಯೆ ಕಾಸಿನಗಲದ ಕುಂಕುಮ, ಮೊಳಕಾಲ್ಮೂರು ಸೀರೆ ಧರಿಸಿದ್ದಳು. ಬಂದವಳೇ ಅಂಗಳದ ಒಂದು ಪಕ್ಕದಲ್ಲಿ ಕೂತು

ಬಾರೊ ಗೋಪಾಲ ಮುಖವನೇ ತೋರೊ ಶ್ರೀಲೋಲ
ಬಾರಿಬಾರಿಗೂ ಭಾಗ್ಯವ ಕೊಡುವಾ ತುಳಸೀ ವನಮಾಲ ....

ರಾಗವಾಗಿ ಹಾಡುತ್ತಿದ್ದಳು. ಕಂಠ ಸುಮಧುರವಾಗಿತ್ತು, ತಾಳದ ಗತಿಯೂ ಇತ್ತು, ಹಾರ್ಮೋನಿಯಂ ಸಾಥ್ ಕೂಡ ಅವಳೇ ಕೊಟ್ಟುಕೊಂಡು ಕೇಳುಗರಿಗೆ ಮುದನೀಡುವಂತೇ ಭಕ್ತಿ-ಶ್ರದ್ಧೆಯಿಂದ ಹಾಡುತ್ತಿದ್ದಳು. ಹಾಡುವ ಮುಖ ಭಾವದಲ್ಲಿ ಪರಮಾತ್ಮನನ್ನು ಕರೆಯುವ ಭಾವತಲ್ಲೀನತೆ ಕಾಣುತ್ತಿತ್ತು. ಹೇಳೀಕೇಳೀ ಅವಳೊಬ್ಬ ಸಾದಾಸೀದಾ ಬೇಡುವ ಹೆಂಗಸು, ಬಯಲಸೀಮೆಯ ಕಡೆಯವಳು. ಅವಳಿಗೆ ಯಾರು ಸಂಗೀತ ಕಲಿಸಿದರು ? ತಿಳಿದುಬಂದಿಲ್ಲ. ಹಿತಮಿತ ಆಲಾಪದ ಜೊತೆಗೆ ಹಾಡುತ್ತಿದ್ದ ಅವಳ ಹಾಡು

ಇಂದುಧರ ಸಖನೇ ಇಂದ್ರಾದಿ ವಂದಿತನೇ
ಇಂದು ನಿನ್ನಯ ಪಾದವ ಪೊಗಳುವೆ ವೆಂಕಟಾಚಲನೇ .....

ಆಹಾ ...ಇನ್ನೂ ಆ ಗರಳಿನ ನೆನೆಪು ನನಗಾಗುತ್ತಿದೆ. ಹಾಡು ಮುಗಿಸಿ ಕೈಮುಗಿದು " ತಮ್ಮಾ ಅಜ್ಜೀಗೆ ಏನಾರಾ ತಿನ್ನಾಕ್ ಕೊಡಪ್ಪಾ ಶಿವಾ ....ಏನೋ ಒಂಚೂರು ಮನೇಲಿ ಮಾಡಿದ್ದು ಮಿಕ್ಕಿದ್ದು ಪಕ್ಕಿದ್ದು....ಅಜ್ಜಿಗೆ ಚಳಿಗೆ ಹಾಕ್ಕೊಳ್ಳೋದಕ್ಕೆ ಹಳೇ ಹರಿದ ಬಟ್ಟೆಬರೆ ಇದ್ರೆ. " ಯಾವುದಕ್ಕೂ ಆ ಅಜ್ಜಿಯ ಒತ್ತಾಯವಿರಲಿಲ್ಲ. ಅದೊಂದು ಪ್ರಾರ್ಥನೆಯಷ್ಟೇ. ಎಂತಹ ಪ್ರತಿಭೆಗೂ ಇದೆಂತಹ ಸ್ಥಿತಿ ಎಂಬುದು ಮುಗ್ಧಬಾಲಕನಾಗಿದ್ದ ನನ್ನ ಮನಸ್ಸಿಗೆ ಅಂದೇ ನಾಟಿದ ವಿಷಯ! ಎಂತೆಂಥವರಿಗೂ ಎಂತೆಂಥಾ ವಿಶಿಷ್ಟ ಶಕ್ತಿಯನ್ನೂ ಚೈತನ್ಯವನ್ನೂ ಕೊಟ್ಟ ಭಗವಂತ ಅವರವರ ಪಾಲಿಗೆ ಸಂಚಿತ ಕರ್ಮಫಲಗಳನ್ನಷ್ಟೇ ನೀಡುತ್ತಾನೆ ಎಂಬುದು ಸುಳ್ಳಲ್ಲ ಎಂದು ನನಗೀಗ ಅನ್ನಿಸುತ್ತಿದೆ. ಅಜ್ಜಿಗೆ ತಿಂಡಿ, ಹಳೆಬಟ್ಟೆ ಕೊಡಿಸಿ ಅಜ್ಜಿ ಅಕ್ಕ-ಪಕ್ಕದ ಮನೆಗಳಿಗೆ ಹೋಗಿ ಹಾಡುವುದನ್ನೂ ಹಿಂಬಾಲಿಸಿ ಹೋಗಿ ಕೇಳಿ ಸುಖಪಟ್ಟೆ. ಅಜ್ಜಿಯ ರಾಗಕ್ಕೆ ಹಿರಿಕಿರಿಯರಾದಿಯಾಗಿ ಹಲವು ಜನ ನಿಂತು ಆಲೈಸುತ್ತಿದ್ದರು! ಅಂಥಾ ಸುಶ್ರಾವ್ಯ ಸಂಗೀತವದು! ಸಾಹಿತ್ಯದಲ್ಲೂ ತಪ್ಪಿಲ್ಲದೇ ಲಯಬದ್ಧವಾಗಿ ಹಾಡುವ ಕಲೆಗಾರಿಕೆಯನ್ನೇ ಬಂಡವಾಳವನ್ನಾಗಿ ಭಗವಂತ ಆಕೆಗೆ ನೀಡಿದ್ದ.

ಹುಟ್ಟು ಆಯ್ಕೆಯಲ್ಲ, ಅದು ಕೇವಲ ಅನಿವಾರ್ಯ ಸಹಜ ಎಂದು ಹಲವರು ಹೇಳುತ್ತಾರೆ. ಬೆಳೆಯುತ್ತಾ ತಮ್ಮನ್ನು ಬದಲಿಸಿ ದುಡಿಮೆಗೆ ಹಚ್ಚಿಕೊಳ್ಳುವ ದುಡಿದು ಶ್ರೀಮಂತಿಕೆ ಪಡೆಯಬಹುದೆನ್ನುವ ಇರಾದೆ ಬಹುತೇಕರದ್ದು. ಅದರ ಜೊತೆಜೊತೆಗೇ ಬದುಕಿನಲ್ಲಿ ಅದೃಷ್ಟದಾಟವೂ ಕೆಲಮಟ್ಟಿಗೆ ನಡೆಯುತ್ತದೆ ಎಂಬುದನ್ನು ಮರೆಯುವಹಾಗಿಲ್ಲ! ಇದರರ್ಥ ಅದೃಷ್ಟವೇ ಎಲ್ಲವನ್ನೂ ಮಾಡುತ್ತದೆ ಎಂದಲ್ಲ, ಅಡಿಗೆಯಲ್ಲಿ ಉಪ್ಪಿನ ಪಾತ್ರ ಎಷ್ಟು ಮಹತ್ವವೋ ಅಂಥದ್ದೇ ಮಹತ್ವವನ್ನು ಜೀವನದ ಅಡಿಗೆಯಲ್ಲಿ ಅದೃಷ್ಟವೆಂಬ ಉಪ್ಪು ನಿರ್ವಹಿಸುತ್ತದೆ. ಅದೃಷ್ಟ ಸರಿಯಾಗಿಲ್ಲದಿದ್ದರೆ ಎಷ್ಟೇ ದುಡಿದರೂ ಅದರ ಫಲಗಳು ಸಂಚಿತಕರ್ಮ ನಿಷ್ಪನ್ನವಾಗಿರುತ್ತವೆ. ಆಗಲೂ ಜಗನ್ನಿಯಾಮಕ ಶಕ್ತಿ ಯಾವುದೋ ಒಂದು ರೀತಿಯಲ್ಲಿ ಅದನ್ನು ನಿಭಾಯಿಸಲು ಬೇಕಾಗುವ ವಿಶೇಷ ಸೌಲತ್ತುಗಳನ್ನು ಕೊಟ್ಟಿರುತ್ತದೆ ಎಂಬುದಕ್ಕೆ ಹುಟ್ಟಾ ಕಣ್ಣುಗಳಿದ್ದೂ ಶೈಶವಾವಸ್ಥೆಯಲ್ಲಿ ಕುರುಡರಾಗಿಹೋಗಿ ನಂತರ ಗಾನಯೋಗಿ ಎಂದೇ ಖ್ಯಾತರಾದ ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಪಡೆದ ದಿ|ಪುಟ್ಟರಾಜ ಗವಾಯಿಗಳ ಜೀವನಗಾಥೆಯನ್ನು ನೋಡಿ ತಿಳಿಯಬಹುದಾಗಿದೆ. ಕಳೆದುಹೋದ ಚೊಂಬನ್ನೂ ತಮ್ಮ ಆಶ್ರಮದ್ದೆಂದು ಕೇವಲ ಅದನ್ನು ಬಡಿದಾಗ ಹೊರಡುವ ಸದ್ದಿನಿಂದಲೇ ಅವರು ನಿರ್ಧರಿಸಿದ್ದ/ನಿರ್ಧರಿಸಬಲ್ಲ ವಿಶಿಷ್ಟ ಶಕ್ತಿ ಉಳ್ಳವರಾಗಿದ್ದರು. ಇಂದ್ರಿಯಗಳ ನ್ಯೂನತೆ ಹೊಂದಿದ ಜನರಿಗೆಲ್ಲಾ ಸಾಮಾನ್ಯರಿಗೆ ಅಗೋಚರವಾದ ಹೆಚ್ಚಿನ ಶಕ್ತಿಯೊಂದು ಲಭಿಸಿರುತ್ತದೆ.

ಸೃಷ್ಟಿ ಒಂದು ಮಾಯೆ ಅಥವಾ ಮಿಥ್ಯೆ ಎಂಬುದು ಬಲ್ಲವರ/ವಿಮುಕ್ತರ ಮಾತು. ನಾವು ಕಾಣಲಾಗದ ಪರಾಶಕ್ತಿ ತನ್ನ ಲೀಲಾನಾಟಕವಾಗಿ ಈ ಬ್ರಹ್ಮಾಂಡವನ್ನು ಸೃಷ್ಟಿಸಿದೆ, ಇಲ್ಲಿನ ಪ್ರತಿಯೊಂದೂ ಕ್ರಿಯೆಗಳೂ ಆ ಶಕ್ತಿಯ ಪ್ರೇರಣೆಯಿಂದ ನಡೆಯುತ್ತವೆ ಎಂಬುದೂ ಕೂಡ ನಂಬಲರ್ಹ ಸತ್ಯ. ಏನೂ ತಪ್ಪೆಸಗದ ಯಾತ್ರಿಗಳು ಹೊರಟ ವಾಹನದ ಚಾಲಕ ಎಲ್ಲೋ ಅಪಘಾತಕ್ಕೆ ಈಡುಮಾಡಿದಾಗ ಕೆಲವರು ಮಡಿಯಬಹುದು, ಏಟು ಅನುಭವಿಸಬಹುದು, ದೈಹಿಕ ನ್ಯೂನತೆಗಳಿಗೆ ಒಳಗಾಗಬಹುದು. ವಾಹನ ಚಲಾಯಿಸುತ್ತಿರುವ ಚಾಲಕನಿಗೆ ಹೃದಯಾಘಾತವಾಗಿ ಆತ ಬದುಕಿನ ಕೊನೇ ಕ್ಷಣದಲ್ಲೂ ತನ್ನನ್ನು ನಂಬಿ ವಾಹನವೇರಿದ್ದ ಜನರನ್ನು ಬದುಕಿಸಿ ತಾನು ಸತ್ತ ಘಟನೆಗಳನ್ನೂ ಓದಿ ತಿಳಿದುಕೊಂಡಿದ್ದೇವೆ. ಯಾವುದೋ ರಸ್ತೆ ಅಪಘಾತದಲ್ಲಿ ಕಾರಿನಲ್ಲಿರುವ ಎಲ್ಲರೂ ಸತ್ತು ಮಗುವೊಂದು ಹಾರಿಹೋಗಿ ದೂರಬಿದ್ದರೂ ಬದುಕಿರುವುದನ್ನು ಅರಿತಿದ್ದೇವೆ. ಸುನಾಮಿ ಬಂದು ಎಲ್ಲರನ್ನೂ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕೆಲವರು ಮಾತ್ರ ಉಳಿಯುವಂತೇ ಮಾಡುವುದನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಎಂದಮೇಲೆ ನಿಸರ್ಗದ ಕೈಲಿ ಮಾನವನೇ ಹೊರತು ಮಾನವನ ನಿಯಂತ್ರಣಕ್ಕೆ ನಿಸರ್ಗ ಒಳಪಡುವುದಿಲ್ಲ.

ಈ ಬದುಕು ಮಾಯೆಯ ಆಟ ಎಂಬುದನ್ನು ಸ್ವಾನುಭವದಿಂದ ಅರಿತ ಕವಿವರ್ಯ ಬೇಂದ್ರೆ ಅದನ್ನೇ ಒಂದು ಕಾವ್ಯವಾಗಿ ಬರೆದರು. ಪ್ರಾಯಶಃ ಬೇಂದ್ರೆಯಷ್ಟು ಕಷ್ಟದ ಜೀವನಗತಿಯನ್ನು ಯಾವ ಕವಿಯೂ ಅನುಭವಿಸಿರಲಿಕ್ಕಿಲ್ಲ. ಕಷ್ಟಗಳನ್ನು ನುಂಗಿ ಹೇಗೆ ಬದುಕಬೇಕು ಎಂಬುದಕ್ಕೆ ಬೇಂದ್ರೆ ಮಾದರಿಯಾಗುತ್ತಾರೆ. ಸಿರಿವಂತರಾಗಬೇಕೆಂಬ ಆಸೆ, ಆಸಕ್ತಿ ಎಲ್ಲರಿಗೂ ಸಹಜ. ಕಾಣುವ ಓ ಅವರಿಗಿಂತಾ ತಾವೇನೂ ಕಮ್ಮಿಯಿಲ್ಲಾ ಎಂಬ ಅನಿಸಿಕೆಯೂ ಅಹಂಕಾರವೂ ನಮ್ಮನ್ನು ನಮಗೇ ಅರಿವಿಲ್ಲದಂತೇ ಆಕ್ರಮಿಸಿರುತ್ತದೆ. ಎಲ್ಲರಂತೇ ಬದುಕಬೇಕೆಂಬ ತಹತಹ ನಮ್ಮನ್ನು ನಿತ್ಯ ಧನೋಪಾಸಕರನ್ನಾಗುವಂತೇ ಹಚ್ಚುತ್ತದೆ! ಆಸೆಗಳ ಮಟ್ಟ ಅಧಿಕವಾದಾಗ ಅನೇಕಾವರ್ತಿ ನಿರೀಕ್ಷೆಗಳು ಹುಸಿಯಾಗುತ್ತವೆ, ಗುರಿಗಳು ನೆರವೇರದೇ ಚಡಪಡಿಸುವಂತಾಗುತ್ತದೆ. ಮಗ ಕೊನೆಯ ಕ್ಷಣದಲ್ಲಿ ಸಹಾಯಕ್ಕೆ ಬರುತ್ತಾನೆಂದು ನಿರೀಕ್ಷಿಸಿದ ಅಪ್ಪನ-ಅಮ್ಮನ ಮುಪ್ಪಿನ ವಯದಲ್ಲಿ, ಇದ್ದೊಬ್ಬ ಮಗ ಅಮೇರಿಕಾದಲ್ಲಿ ತಂತ್ರಾಂಶ ತಂತ್ರಜ್ಞನಾಗಿದ್ದು, ಅಪ್ಪ-ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ, ಸಾವಿನ ಕ್ಷಣದಲ್ಲೂ ಮಗನ ಮುಖ ಕಾಣುವ ಹಂಬಲದಲ್ಲೇ ಅವರು ಅಸುನೀಗುತ್ತಾರೆ. ಹೀಗೆಲ್ಲಾ ಆಗುವಾಗ ನೆನಪಾಗುವುದು ಬದುಕು ಮಾಯೆಯ ಮಾಟ!

ಮರದಮೇಲಿನ ಮುಸ್ಯಾನನ್ನೂ[ಮಂಗನನ್ನೂ] ಮಾತನಾಡಿಸುವ ಕಲೆ ಬೇಂದ್ರೆಯವರಿಗಿತ್ತು. ಧಾರವಾಡದ ಜನರಿಗಷ್ಟೇ ಅವರ ಬಳಕೆಯಲ್ಲ, ಪಶು-ಪಕ್ಷಿಗಳೂ ಬೇಂದ್ರೆಯವರ ಕವಿಹೃದಯವನ್ನು ಅರಿತಿದ್ದವು ಎಂದರೆ ತಪ್ಪಾಗಲಾರದು. ಸಮಾನ್ಯವಾಗಿ ಬಯಲಸೀಮೆ ಮಂದಿ ಮಂಗಗಳನ್ನೆಲ್ಲಾ ಹತ್ತಿರಬಿಟ್ಟುಕೊಳ್ಳುವುದಿಲ್ಲ. ಕಾಗೆ, ಮಂಗ, ಪಾರಿವಾಳ ಇಂತಹ ಸುತ್ತಲ ವಾಸಿಗಳನ್ನೂ ಬೇಂದ್ರೆ ಹತ್ತಿರ ಕರೆಯುತ್ತಿದ್ದರು. ಅವು ಬರುತ್ತಿದ್ದವು. ಬೇಂದ್ರೆ ಕೊಡುವ ಏನಾದರೂ ಚೂರುಪಾರು ಪಡೆದುಕೊಂಡು ತಿಂದು ಸುಖಿಸುತ್ತಿದ್ದವು! ಇಂತಹ ಬೇಂದ್ರೆ ಹಲವು ಮಕ್ಕಳನ್ನು ಕಳೆದುಕೊಂಡರು. ಶೈಶವಾವಸ್ಥೆಯ ಮಕ್ಕಳು-ಅವರ ನಗು, ಮುಗ್ಧ-ಸ್ನಿಗ್ಧ ಮುಖಭಾವ-ಭಂಗಿ, ಅವರುಗಳ ಆಟ-ಪಾಟ ಯಾರಿಗೆ ತಾನೇ ಹಿತವಲ್ಲ ? ಅದನ್ನು ಮರೆಯಲು ಸಾಧ್ಯವೇ? ರಾಮನನ್ನು ಕಾಡಿಗೆ ಕಳುಹಿಸಿದ ಕೊರಗಿನಲ್ಲೇ ಪುತ್ರನ ಅಗಲುವಿಕೆಯ ಶೋಕದಿಂದ ದಶರಥ ಮಹಾರಾಜ ಸತ್ತ! || ಪುತ್ರಶೋಕಂ ನಿರಂತರಂ|| ಎಂಬೊಂದು ಉಲ್ಲೇಖವಿದೆ. ಇಲ್ಲಿ ಪುತ್ರ ಎಂದರೆ ಕೇವಲ ಗಂಡು ಮಗು ಎಂದಲ್ಲ, ಮಕ್ಕಳು ಎಂಬ ಭಾವ. ರಾಮ ಜೀವಂತವಾಗಿಯೇ ಇದ್ದರೂ ಆತ ವನವಾಸದಲ್ಲಿ ಅದೆಷ್ಟು ಕಷ್ಟಪಡಬೇಕಾಗಬಹುದು ಎಂಬುದನ್ನು ಚಿಂತಿಸಿಯೇ ಕಂಗೆಟ್ಟು ಇಹಲೋಕ ತ್ಯಜಿಸಿದ್ದ ರಾಜಾ ದಶರಥ ಎಂದಮೇಲೆ ಹಲವು ಮಕ್ಕಳ ಸಾವಿನ ಸಮಯದಲ್ಲಿ ಕಣ್ಣಾರೆ ಕಾಣುತ್ತಾ ಬದುಕಿಸಿಕೊಳ್ಳಲಾಗದ ಆ ಅಸಹನೀಯ ಕ್ಷಣಗಳು ತಂದೆ-ತಾಯಿಗೆ ಯಾವ ನೋವನ್ನು ಕೊಡಬಹುದು ಎಂಬುದು ಚಿಂತನ ಮಾಡಬೇಕಾದ ವಿಷಯ.

ಮಗುವನ್ನು ಕಳೆದುಕೊಂಡ ಹಲವು ಘಳಿಗೆಗಳು ಮೌನವಾಗಿದ್ದವು, ಅಲ್ಲಿ ಬರೇ ಬೇಂದ್ರೆಯಲ್ಲ-ಆ ಇಡೀ ವಾತಾವರಣವೇ ರೋದಿಸುತ್ತಿತ್ತು! ಒಮ್ಮೆ ಹೆಂಡತಿ ಮಮ್ಮಲ ಮರುಗುತ್ತಾ ಬೇಂದ್ರೆಯವರನ್ನು ತಿರುಗಿ ನೋಡುವಾಗ ಹುಟ್ಟಿದ್ದು ’ನೀ ಹೀಂಗ ನೋಡಬ್ಯಾಡ ನನ್ನ..’ಕವನವಾದರೆ ಇನೊಮ್ಮೆ ಹೆಂಡತಿಗೆ ಬದುಕೇ ಬೇಡವೆನಿಸಿದಾಗ ಹುಟ್ಟಿದ್ದು ’ಕುಣಿಯೋಣು ಬಾರಾ ಕುಣಿಯೋಣು ಬಾ... .’ ಇಂಥದ್ದೇ ಇನ್ನೊಂದು ಘಳಿಗೆಯಲ್ಲಿ ಬೇಂದ್ರೆ ಬರೆದರು

ಬದುಕು ಮಾಯೆಯೆ ಮಾಟ
ಮಾತು ನೊರೆತೆರೆಯಾಟ
ಜೀವ ಮೌನದ ತುಂಬಾ ...

ಇದನ್ನು ಸಂಗೀತಕ್ಕೆ ಅಳವಡಿಸಿದ್ದ ಸುಗಮ ಸಂಗೀತದ ದಿಗ್ಗಜ ದಿ| ಸಿ. ಅಶ್ವತ್ಥ್ ರವರು ತಮ್ಮ ಬದುಕಿನ ಮಹತ್ತರ ಘಟ್ಟವಾಗಿ ’ ಕನ್ನಡವೇ ಸತ್ಯ’ ಎಂಬ ಸಂಗೀತ ಕಾರ್ಯಕ್ರಮದಂತೇ ಇನ್ನೊಂದು ಅತಿದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮೈಸೂರು ಅನಂತಸ್ವಾಮಿಯವರ ನಂತರ ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಗಾಢವಾಗಿ ಒತ್ತಿ, ಹಲವು ಕವಿಗಳ ಭಾವನೆಗಳಿಗೆ ಕಂಠವಾಗಿದ್ದ, ಅನೇಕ ಕೃತಿಗಳನ್ನು ರಾಗಬದ್ಧವಾಗಿ ಸಂಯೋಜಿಸಿ ನಿರೂಪಿಸಿ ಶ್ರೋತೃಗಳಿಗೆ ತಲುಪಿಸಿದ್ದ ಅಶ್ವತ್ಥರಿಗೂ ಕೂಡ ಅವರ ಬದುಕಿನ ಕೊನೆಯ ಮಾಯೆಯ ಮಾಟ ಗೊತ್ತಿರಲಿಲ್ಲ ಅಲ್ಲವೇ? ಈ ಬದುಕೇ ಹೀಗೆ. ಇರುವಷ್ಟುಕಾಲ ಇರುವಷ್ಟು ಘಳಿಗೆ ಉತ್ತಮ ಕೆಲಸಗಳನ್ನು ಮಾಡಬೇಕು, ಆದಷ್ಟೂ ಪರೋಪಕಾರಿಯಾಗಿ, ನಿಸ್ವಾರ್ಥಿಯಾಗಿ, ಮನುಜಮತವನ್ನು ಅರಿತು ಜೀವನ ನಡೆಸಿದರೆ ಆ ಕರ್ಮಫಲವನ್ನು ಮುಂದಿನ ನಮ್ಮ ಜನ್ಮದಲ್ಲಿ ಪಡೆಯಲು ಅನುಕೂಲವಾಗುತ್ತದೆ. ಮಾಯೆಯ ಮಾಟಕ್ಕೆ ಬಲಿಯಾದ ರಾಜೀವ ದೀಕ್ಷಿತರನ್ನೂ ನಾವು ಕಂಡಿದ್ದೇವೆ. ನಿನ್ನೆ ಕಂಡವರು ಇವತ್ತು ಕಾಣುತ್ತಾರೆಂಬ ಗ್ಯಾರಂಟಿ ಇಲ್ಲ. ಇಂದು ಇರುವವರು ನಾಳೆ ಇರುತ್ತಾರೋ ಗೊತ್ತಿಲ್ಲ. ಯಾರು ಯಾವ ಕ್ಷಣವೂ ಹೋಗಬಹುದು ಇಲ್ಲಾ ನೂರಾರು ವರುಷಗಳ ಕಾಲ ಆರಾಮಾಗಿಯೇ ಬದುಕಬಹುದು! ತಾಮಾಷೆಗೆ ಹನಿಗವಿ ಜೋಕು ಹೇಳಿದ್ದರು :

ರಾತ್ರಿ ಮಲಗುವಾಗ
ನೆನೆಸಿಡಿ ಉದ್ದು

ಎದ್ದರೆ ದೋಸೆ
ಇಲ್ಲದಿದ್ದರೆ ವಡೆ !

ಇಷ್ಟೇ ನಮ್ಮ ಬದುಕು ಎಂದಾದಾಗ ಬದುಕಿನ ಮುಖಗಳ ಅರಿವಿಲ್ಲದೇ ನಾವು ಗಟ್ಟಿ ನಾವು ಗಟ್ಟಿ ಎಂದು ಪರಾಕ್ರಮ ಕೊಚ್ಚಿಕೊಳ್ಳುವ ಹಲವರಿಗೆ ಮಾಯಯೆ ಮಾಟದ ಅರಿವು ಯಾವಕ್ಷಣದಲ್ಲಾದರೂ ಆಗಬಹುದು. ನಾವೆಲ್ಲಾ ಯೋಚಿಸಲೂ ಹಿಂದೇಟುಹಾಕುವ ವಿಷಯವನ್ನು ವರಕವಿ ಬೇಂದ್ರೆ ಕವನವಾಗಿಸಿದರು. ಅಶ್ವತ್ಥರು ಅದಕ್ಕೆ ಸಂಗೀತ ಜೋಡಿಸಿದರು! ಇಬ್ಬರೂ ದಿಗ್ಗಜರೇ ಅವರವರ ಕ್ಷೇತ್ರಗಳಲ್ಲಿ. ಈ ಇಬ್ಬರ ಜೊತೆಗೆ ಎಲ್ಲಾ ಪಕ್ಕವಾದ್ಯಗಳವರಿಗೂ ವಂದಿಸುತ್ತಾ , ಹಾಡನ್ನು ನಿಮ್ಮ ಮುಂದಿಡುತ್ತಾ ಈ ಲೇಖನಕ್ಕೆ ಮಂಗಳಹಾಡುತ್ತೇನೆ.