ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 6, 2010

ಜಾಣ ಬಾ ತಡೆದು ಮನೆಗೆ !


ಬೈದುಕೊಳ್ಳಬೇಡಿ ಭಾನುವಾರವೂ ಬಿಡುವುದಿಲ್ಲ ಅಂತ, ನಾನೂ ಅದರ ಬಗ್ಗೇ ತಮ್ಮನ್ನೆಲ್ಲಾ ಸೇರಿಸಿಕೊಂಡು ಒಂದು ಸಣ್ಣ ಹಾಡು ಬರೆದಿದ್ದೇನೆ. ಹಾಡಿಕೊಳ್ಳಲು ಬರುವ, ಮುದನೀಡುವ, ಅಜ್ಞಾಪಿಸುವ,ಪ್ರಶ್ನಿಸುವ ಎಲ್ಲ ಭಾವನೆಗಳನ್ನೂ ನನ್ನಲ್ಲಿ ಭರಪೂರ ತುಂಬಿಕೊಂಡು ನಿಮ್ಮ ಪರವಾಗಿ ವಕೀಲಿ ವೃತ್ತಿ ಮಾಡಿದ್ದೇನೆ ಈ ಹಾಡಿನಲ್ಲಿ ! ನನ್ನೀ ಹಾಡು ತಮ್ಮ ಮನದಲ್ಲಿ ಸದಾ ಭಾನುವಾರದ ಹಾಡಾಗಿ ಗುನುಗುನಿಸಲಿ ಎಂಬುದು ನನ್ನ ಆಶಯ. ಕವಿಗೆ- ಕಲ್ಪನೆಗೆ ಮೊದಲೇ ಹೇಳಿದ ಹಾಗೇ ಹೊತ್ತುಗೊತ್ತು ಇಲ್ಲ. ಇದು ೯:೦೦ ರಿಂದ ೬:೦೦ ರ ಕೆಲಸದ ಅವಧಿಯ ಪರಿಮಿತಿಗೊಳಪಡುವುದಿಲ್ಲ. ಉಪಜೀವನಕ್ಕಾಗಿ ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾ ಬಿಡುವಿರದ ದುಡಿಮೆಯಲ್ಲಿ ತೊಡಗಿರುತ್ತಾನೆ. ಬಿಡುವೇ ಇಲ್ಲದ ಅವನಿಗೆ ಎಲ್ಲೋ ಒಂದು ದಿನ ಸ್ವಲ್ಪ ಜಾಸ್ತಿ ಹೊತ್ತು ಮಲಗಿದ್ದು ತಡವಾಗಿ ಎಳೋಣವೆಂದು ಅನಿಸುತ್ತದೆ, ಆದರೆ ಮನೆಯ ಮಿಕ್ಕುಳಿದ ಜನ, ಬಂಧು-ಮಿತ್ರರು ಏನಂದುಕೊಂಡಾರು ಎಂಬ ಸಂಕೋಚ,ನಾಚಿಕೆಯಿಂದ ಬೇಗ ಏಳುವ ಮನಸ್ಸಿಲ್ಲದಿದ್ದರೂ ಅರೆಬರೆ ಮನಸ್ಸಿನಿಂದ ಎದ್ದು ಕೆಲಸಮಾಡಲು ಆರಂಭಿಸುತ್ತಾನೆ. ಅಂತಹ ಮನಸ್ಸು ಸೂರ್ಯನಿಗೇ ತಡವಾಗಿ ಬರುವಂತೆ ಆದೇಶಿಸುವ ಒಂದು ಸನ್ನಿವೇಶದಲ್ಲಿ ಈ ಹಾಡು ರಚಿತವಾಗಿದೆ.

ಜಾಣ ಬಾ ತಡೆದು ಮನೆಗೆ !

ಸೂರ್ಯ ನಿನಗಾಯಿತದೊ ಭಾಳ ಬೇಗನೆ ಬೆಳಗು
ಬಾರದಿರು ಸ್ವಲ್ಪ ತಾಳು
ಇರುಳ ಪರದೆಯ ಸರಿಸಿ ಜಗಕೆ ಬೆಳಕನು ಹರಿಸಿ
ಸಾರದಿರು ದಿನವ ಕೇಳು !

ಬಹಳ ದಿನವಾಯಿತದೊ ನಿನ್ನಲ್ಲಿ ಹೇಳದೆಯೆ
ಮಲಗದೆಯೆ ಬಹಳ ಸಮಯ
ಕಹಳೆಯೂದುವರೆಲ್ಲ ಹೊತ್ತಾರೆ ಏಳದಿರೆ
ಹಲವು ಥರ ನಾಚಿಕೆ ಭಯ !

ಮಂಜಮುಂಜಾನೆಯಲಿ ಗುಂಜಿಸಿದ ದುಂಬಿಗಳ
ಕಂಡಾಯ್ತು ಬಹಳ ಹಿಂದೆ
ಸಂಜೆಗೆಂಪಿನ ನಿನ್ನ ಹಣ್ಣು ಕೆನ್ನೆಯ ನೋಡೆ
ಎಲ್ಲಿಹುದು ಸಮಯ ಮುಂದೆ ?

ಬೆಳಗು ಬೈಗಿನ ಲೆಕ್ಕ ನಮಗಿಹುದೆ ಕೆಲಸದಲಿ?
ಕಳೆಯುವುದು ಬದುಕು ಹೀಗೇ
ಒಳಗೆ ನೆಮ್ಮದಿಯಿಲ್ಲ ಸಾಕಾಯ್ತು ಅಲೆದಲೆದು
ಅನುದಿನವು ಹೊರಗೆ ಹೊರಗೆ

ಭಾನುವಾರದ ಬೆಳಗು ರಜೆಯ ದಿನದಾ ಸೊಬಗು
ಬಗೆಬಗೆಯ ಭಕ್ಷ್ಯಭೋಜ್ಯ
ಸಾನುರಾಗದ ಬಾಳ್ವೆ ಸಂಗೀತ ಸಾಹಿತ್ಯ
ಸಿಗಲುಂಟೆ ಕೆಲವು ಗಳಿಗೆ ?

ನಾವೂ ಮನುಜರು ಕಣಾ ನಾವೇನು ಯಂತ್ರಗಳೆ ?
ಆಣೆ ಮಾಡುವೆನು ನಿನಗೆ
ನೋವು ಕಳೆಯಲು ಹಾಗೆ ಹೊದ್ದು ಮಲಗಲು ಹೀಗೆ
ಜಾಣ ಬಾ ತಡೆದು ಮನೆಗೆ !