ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 11, 2010

ಮನದಿ ನೀರವ ಮೌನ


ಮನಸ್ಸಿನ ಮೂಲೆಯಲ್ಲಿ ಒಂದು ಕತ್ತಲ ಕೋಣೆ ಇದೆ ಅಂತ ತಿಳಿದುಕೊಳ್ಳೋಣ, ಅದರ ತುಂಬಾ ಭಾವನೆಗಳ ಹರವು. ಆಂಗ್ಲ ಭಾಷೆಯಲ್ಲಿ quickening ಅಂತಾರಲ್ಲ ಆ ಥರ ಮೊಟ್ಟೆಯ ಒಳಗೆ ಏನೋ ಅಲುಗಾಡಿದಂತೆ ಭಾಸ. ಇನ್ನೇನು ಮೊಟ್ಟೆಯೊಡೆದು ಭಾವನೆಗಳ ರೆಕ್ಕೆ-ಪುಕ್ಕ ಸಹಿತದ ಹಕ್ಕಿಗೆ ಹೊರಬರಲು ತವಕ. ಆದರೂ ಬರಲಾರದು, ಮಳೆ ಬಂದೇ ಬಿಟ್ಟಿತೇನೋ ಎಂಬ ಗುಡುಗು ಆದರೆ ಮಳೆ ಬರುವುದಿಲ್ಲ! ಮಳೆಗೆ ಪೂರಕ ಸನಿವೇಶಕ್ಕಾಗಿ ಕಾದಿದೆ ಪರಿಸರ ! ಒಳಗೆ ತುಡಿಯುವ ಆ ಶಕ್ತಿ ಅದರ ಭಕ್ತಿಯ ಪರಾಕಾಷ್ಟೆ ಮೆರೆದಾಗ, ಇಹದ ಮೇರೆ ಮೀರಿದಾಗ,ನಿಸ್ವಾರ್ಥದಲ್ಲಿ ಜಗದ ಒಳಿತಿಗೆ ತಪಿಸಿದಾಗ, ಮಾಯೆಯ ಜಗವೆಂಬುದನು ಅರಿತು ಅವಲೋಕಿಸಿ ಮುನ್ನಡೆದಾಗ, ಕುಂಟೆಬಿಲ್ಲೆ ಆಡುವ ಕೆಲಸಕ್ಕೆ ಬಾರದ ಸಾಗರದೋಪಾದಿಯ ಹಲವು ಭಾವನೆಗಳಿಗೆ ಬ್ರೇಕ್ ಹಾಕಿದಾಗ, ಆ ಮಧ್ಯೆ ಮೊಸರು ಕಡೆದು ಬೆಣ್ಣೆ ತೆಗೆದಂತೆ ಮಥಿತ ಮನದಿಂದ ಪರಿಪಕ್ವಗೊಂಡ [selected,hand picked ! ] ಭಾವನೆಗಳನ್ನು ಆಯ್ದುಕೊಂಡಾಗ, ಜಗದುದ್ಧಾರಕರ ಹಾದಿ ತುಳಿದಾಗ, ಅದು ಆಚೆ ಬರುತ್ತದೆ-ಬ್ರಹ್ಮರಂದ್ರದಿಂದ, ಬ್ರಹ್ಮರಂದ್ರ ಒಡೆದು ! ಅಲ್ಲಿ ಬರುವ ಆ ತಂಗಾಳಿ ಯಾವುದೋ ಅದ್ಭುತ ಶಕ್ತಿಯ ವ್ಯಕ್ತಿಯನ್ನು ಕಾಣದ ರೀತಿಯಲ್ಲಿ ಮಾರುವೇಷದಲ್ಲಿ ನಮ್ಮ ಹತ್ತಿರ ತಂದು ಪರಿಚಯಿಸಿ--" ಈತನೇ ನೋಡು ಪರಮಾತ್ಮ ನಿನ್ನ ಸನ್ನಿಧಿಯನ್ನು ಕಾಣ ಬಯಸಿದ್ದು, ನಿನ್ನ ದರುಶನ ಬಯಸಿದ್ದು " ಎಂದು ಉಸುರಿದಂತೆ, ಮತ್ತೆ ಜಾರಿ ಜಾರಿ ಲೌಕಿಕದೆಡೆಗೆ ಸುಳಿವ ಮನಕ್ಕೆ ಆ ಭಾವನೆಗಳ ಅಲೆಗಳ ಮಾಲೆಗಳ ಸಮರ್ಪಣೆ ಆದಂತೆ ಅನಿಸುತ್ತದೆ. ಅದೇ ಈಗ ಕವನದ ರೂಪದಲ್ಲಿ ---



ಮನದಿ ನೀರವ ಮೌನ


ಮನದಿ ನೀರವ ಮೌನದಾ ಕತ್ತಲೆಯ ಕೋಣೆ
ಒಳಗೆ ಏನೋ ತವಕ ನಡೆದಿಹುದು ಕೆಲಸ
ವನದಿ ರೋದಿಸಿದಂತೆ ಕೇಳದಿಹ ಕೂಗುಗಳು
ಗಳಿಗೆ ಗಳಿಗೆಗು ತುಡಿತ ಕಾಣದಿಹ ವಿರಸ

ಮೊಟ್ಟೆಯೊಡೆಯುತ ಹಕ್ಕಿ ಹೊರಬರುವ ರೀತಿಯಲಿ
ಕಟ್ಟಕಟರೆಂಬ ಸದ್ದಿನ ತಾಳಗಳಲಿ
ಕುಟ್ಟುತಾ ತಲೆಯ ಭಾಗವನೊಮ್ಮೆ ಒಳಗಿಂದ
ಸಟ್ಟನೆ ನೀಡುತಿದೆ ಹಲವು ಸಂದೇಶ

ಜಗವು ಕಾಣದ ಮಾಯೆ ಬರಹ ಬದುಕಿನ ಛಾಯೆ
ಖಗವೊ ಉರಗವೊ ಅದರ ವಿಷಯದಲಿ ಬರೆದು
ನಗೆಯು ನಾಟಕವು ಕಥೆ ಕವನಗಳ ಸಾಲಿನಲಿ
ಬಗೆದು ಒಳಿತನು ಮಿಕ್ಕ ಜೀವ ಪರಿಧಿಯಲಿ

ನಾಮುಂದು ತಾಮುಂದು ಭಾವಗಳ ತಹತಹದ
ಆ ಮಂದ ಮತಿಯೊಳಗೆ ಕುಂಟೆಬಿಲ್ಲೆಗಳು
ಸಾನಂದ ಪರಿಪಕ್ವ ತತ್ವಗಳ ಒಡ ಒಡನೆ
ನಾನೆಂದೂ ಎಣಿಸದಿಹ ನೂರು ನೋಟಗಳು

ದೂರದೂರಿಂದ ಬರುವಾ ತಣ್ಣನೆಯ ಗಾಳಿ
ಮಾರು ವೇಷದಿ ಯಾರನೋ ತಂದ ರೀತಿ
ಏರುತಿಳಿಯುತ ಸುಯ್ಯನದು ತಾನು ತೊಯ್ದಿರಲು
ಜಾರುವೀ ಮನಕೆ ಅಲೆಗಳ ಮಾಲೆ ತೊಡಿಸಿ