ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 11, 2010

ಮನದಿ ನೀರವ ಮೌನ


ಮನಸ್ಸಿನ ಮೂಲೆಯಲ್ಲಿ ಒಂದು ಕತ್ತಲ ಕೋಣೆ ಇದೆ ಅಂತ ತಿಳಿದುಕೊಳ್ಳೋಣ, ಅದರ ತುಂಬಾ ಭಾವನೆಗಳ ಹರವು. ಆಂಗ್ಲ ಭಾಷೆಯಲ್ಲಿ quickening ಅಂತಾರಲ್ಲ ಆ ಥರ ಮೊಟ್ಟೆಯ ಒಳಗೆ ಏನೋ ಅಲುಗಾಡಿದಂತೆ ಭಾಸ. ಇನ್ನೇನು ಮೊಟ್ಟೆಯೊಡೆದು ಭಾವನೆಗಳ ರೆಕ್ಕೆ-ಪುಕ್ಕ ಸಹಿತದ ಹಕ್ಕಿಗೆ ಹೊರಬರಲು ತವಕ. ಆದರೂ ಬರಲಾರದು, ಮಳೆ ಬಂದೇ ಬಿಟ್ಟಿತೇನೋ ಎಂಬ ಗುಡುಗು ಆದರೆ ಮಳೆ ಬರುವುದಿಲ್ಲ! ಮಳೆಗೆ ಪೂರಕ ಸನಿವೇಶಕ್ಕಾಗಿ ಕಾದಿದೆ ಪರಿಸರ ! ಒಳಗೆ ತುಡಿಯುವ ಆ ಶಕ್ತಿ ಅದರ ಭಕ್ತಿಯ ಪರಾಕಾಷ್ಟೆ ಮೆರೆದಾಗ, ಇಹದ ಮೇರೆ ಮೀರಿದಾಗ,ನಿಸ್ವಾರ್ಥದಲ್ಲಿ ಜಗದ ಒಳಿತಿಗೆ ತಪಿಸಿದಾಗ, ಮಾಯೆಯ ಜಗವೆಂಬುದನು ಅರಿತು ಅವಲೋಕಿಸಿ ಮುನ್ನಡೆದಾಗ, ಕುಂಟೆಬಿಲ್ಲೆ ಆಡುವ ಕೆಲಸಕ್ಕೆ ಬಾರದ ಸಾಗರದೋಪಾದಿಯ ಹಲವು ಭಾವನೆಗಳಿಗೆ ಬ್ರೇಕ್ ಹಾಕಿದಾಗ, ಆ ಮಧ್ಯೆ ಮೊಸರು ಕಡೆದು ಬೆಣ್ಣೆ ತೆಗೆದಂತೆ ಮಥಿತ ಮನದಿಂದ ಪರಿಪಕ್ವಗೊಂಡ [selected,hand picked ! ] ಭಾವನೆಗಳನ್ನು ಆಯ್ದುಕೊಂಡಾಗ, ಜಗದುದ್ಧಾರಕರ ಹಾದಿ ತುಳಿದಾಗ, ಅದು ಆಚೆ ಬರುತ್ತದೆ-ಬ್ರಹ್ಮರಂದ್ರದಿಂದ, ಬ್ರಹ್ಮರಂದ್ರ ಒಡೆದು ! ಅಲ್ಲಿ ಬರುವ ಆ ತಂಗಾಳಿ ಯಾವುದೋ ಅದ್ಭುತ ಶಕ್ತಿಯ ವ್ಯಕ್ತಿಯನ್ನು ಕಾಣದ ರೀತಿಯಲ್ಲಿ ಮಾರುವೇಷದಲ್ಲಿ ನಮ್ಮ ಹತ್ತಿರ ತಂದು ಪರಿಚಯಿಸಿ--" ಈತನೇ ನೋಡು ಪರಮಾತ್ಮ ನಿನ್ನ ಸನ್ನಿಧಿಯನ್ನು ಕಾಣ ಬಯಸಿದ್ದು, ನಿನ್ನ ದರುಶನ ಬಯಸಿದ್ದು " ಎಂದು ಉಸುರಿದಂತೆ, ಮತ್ತೆ ಜಾರಿ ಜಾರಿ ಲೌಕಿಕದೆಡೆಗೆ ಸುಳಿವ ಮನಕ್ಕೆ ಆ ಭಾವನೆಗಳ ಅಲೆಗಳ ಮಾಲೆಗಳ ಸಮರ್ಪಣೆ ಆದಂತೆ ಅನಿಸುತ್ತದೆ. ಅದೇ ಈಗ ಕವನದ ರೂಪದಲ್ಲಿ ---ಮನದಿ ನೀರವ ಮೌನ


ಮನದಿ ನೀರವ ಮೌನದಾ ಕತ್ತಲೆಯ ಕೋಣೆ
ಒಳಗೆ ಏನೋ ತವಕ ನಡೆದಿಹುದು ಕೆಲಸ
ವನದಿ ರೋದಿಸಿದಂತೆ ಕೇಳದಿಹ ಕೂಗುಗಳು
ಗಳಿಗೆ ಗಳಿಗೆಗು ತುಡಿತ ಕಾಣದಿಹ ವಿರಸ

ಮೊಟ್ಟೆಯೊಡೆಯುತ ಹಕ್ಕಿ ಹೊರಬರುವ ರೀತಿಯಲಿ
ಕಟ್ಟಕಟರೆಂಬ ಸದ್ದಿನ ತಾಳಗಳಲಿ
ಕುಟ್ಟುತಾ ತಲೆಯ ಭಾಗವನೊಮ್ಮೆ ಒಳಗಿಂದ
ಸಟ್ಟನೆ ನೀಡುತಿದೆ ಹಲವು ಸಂದೇಶ

ಜಗವು ಕಾಣದ ಮಾಯೆ ಬರಹ ಬದುಕಿನ ಛಾಯೆ
ಖಗವೊ ಉರಗವೊ ಅದರ ವಿಷಯದಲಿ ಬರೆದು
ನಗೆಯು ನಾಟಕವು ಕಥೆ ಕವನಗಳ ಸಾಲಿನಲಿ
ಬಗೆದು ಒಳಿತನು ಮಿಕ್ಕ ಜೀವ ಪರಿಧಿಯಲಿ

ನಾಮುಂದು ತಾಮುಂದು ಭಾವಗಳ ತಹತಹದ
ಆ ಮಂದ ಮತಿಯೊಳಗೆ ಕುಂಟೆಬಿಲ್ಲೆಗಳು
ಸಾನಂದ ಪರಿಪಕ್ವ ತತ್ವಗಳ ಒಡ ಒಡನೆ
ನಾನೆಂದೂ ಎಣಿಸದಿಹ ನೂರು ನೋಟಗಳು

ದೂರದೂರಿಂದ ಬರುವಾ ತಣ್ಣನೆಯ ಗಾಳಿ
ಮಾರು ವೇಷದಿ ಯಾರನೋ ತಂದ ರೀತಿ
ಏರುತಿಳಿಯುತ ಸುಯ್ಯನದು ತಾನು ತೊಯ್ದಿರಲು
ಜಾರುವೀ ಮನಕೆ ಅಲೆಗಳ ಮಾಲೆ ತೊಡಿಸಿ

12 comments:

 1. ಸಾಗರದಾ ಮನದೊಳಗೆ ಭಾವಗಳ ಅಲೆಗಳ ಹೊಡೆತ !ಅಲೆಗಳ ಎಣಿಸಿದವರಿಲ್ಲ! ಮನದಾಳವ ಅರಿವರಿಲ್ಲ !.ಕವನ ಚೆನ್ನಾಗಿ ಮೂಡಿ ಬಂದಿದೆ.

  ReplyDelete
 2. ಕವನಕ್ಕೆ ಮುಂಚೆ ನಿಮ್ಮ ಮಾತುಗಳೆಲ್ಲಿ? ಚಿಂತನಶೀಲರಿಗಾಗಿ ಬರೆದಿರುವಂತಿದೆ! ನಮ್ಮಂತವರಿಗೂ ತಿಳಿಯುವಂತೆ ಸ್ವಲ್ಪ ವಿವರಣೆ ಇರಲಿ.

  ReplyDelete
 3. ಬಹಳ ಅವಸರದ ಮಧ್ಯೆ ಬರೆದಿರುವ ಕವನ, ಅರ್ಥ ಸ್ವಲ್ಪಮಟ್ಟಿಗೆ ಈಗ ಜೋಡಿಸಿದ್ದೇನೆ, ಇದಕ್ಕೆ ವಿಸ್ತೃತ ಅರ್ಥವಿದೆ, ಇದನ್ನು ವ್ಯಖ್ಯಾನಿಸಿದರೆ ಇದು ಬಹಳ ಪುಟಗಟ್ಟಲೆ ಅರ್ಥ ಬರೆದುಕೊಳ್ಳುವ ಕವನ, ಆದರೂ ತಕ್ಕಮಟ್ಟಿಗೆ ಇದರ ಮಥಿತಾರ್ಥ ಬರೆದಿದ್ದೇನೆ. ಓದಿ ಆನಂದಿಸಿದ ಡಾ|ಕೃಷ್ಣಮೂರ್ತಿ, ವೇದಸುಧೆಯ ನಿರ್ಮಾತೃ ಸಂಪಾದಕ,ಸಂಚಾಲಕ ಶ್ರೀ ಹರಿಹರಪುರ ಶ್ರೀಧರ್ ತಮ್ಮಿಬ್ಬರಿಗೂ, ಓದಲಿರುವ ಅನೇಕರಿಗೂ ಅನಂಟ ನಮನಗಳು.

  ReplyDelete
 4. ನಿಮ್ಮ ಕಲ್ಪನೆ,ಚಿಂತನೆ ಅದ್ಭುತ.ವೇದಸುಧೆ ನನ್ನ ಕಲ್ಪನೆ, ನಿಮ್ಮ ಮುದ್ದಿನಕೂಸು. ನಿಮ್ಮ ಆರೈಕೆ, ಹಾರೈಕೆಗಳಲ್ಲಿ ಬೆಳೆಯುತ್ತಿದೆ. ನಿಮ್ಮಂತೆ ಇನ್ನು ಹಲವರು ಈ ದೀಪವನ್ನು ಪ್ರಕಾಶಿಸುವಂತೆ ಮಾಡಿ ನೂರಾರು ವೇದಾಭಿಮಾನಿಗಳು ಇಲ್ಲಿ ಬರಲು ಕಾರಣವಾಗಿದ್ದಾರೆ. ಸಂಪಾದಕ,ಸಂಚಾಲಕ ನಾನಲ್ಲ.ನನ್ನದೇನೂ ಇಲ್ಲ. ಅವನದೇ ಎಲ್ಲಾ-ಎಂಬುದು ನನ್ನ ಅಂತರಾಳದ ಮಾತು. "ವೇದಸುಧೆ" ಎಲ್ಲರದ್ದೂ ಹೌದು. ನನ್ನ ಭಾವನೆಗಳಷ್ಟೇ ಸಾಕಾಗುವುದಿಲ್ಲವೆಂಬ ಸತ್ಯವು ನನಗೆ ಚೆನ್ನಾಗಿ ಗೊತ್ತಿದೆ.ಎಲ್ಲಿಯವರಗೆ ವೇದಸುಧೆಯು ಎಲ್ಲರದ್ದಾಗಿರುತ್ತದೆ ಅಲ್ಲಿಯವರೆಗೆ ನಿಷ್ಚಿಂತೆ.
  hariharapura sridhar

  ReplyDelete
 5. ಶ್ರೀಧರ್ ಸಾಹೇಬರೇ , ನನ್ನದೂ ಕೂಡ ಏನೂ ಇಲ್ಲಾ ಎಂಬುದೇ ಮೇಲಿನ ಕವನದ ಸಾರ.ಮತ್ತೊಮ್ಮೆ ತಮಗೆ ಧನ್ಯವಾದಗಳು

  ReplyDelete
 6. ಮನದ ಮೂಲೆಯ ಭಾವನೆಗಳು ಕವನರೂಪ ಪಡೆಯುವದನ್ನು ಚೆನ್ನಾಗಿ ಕವನಿಸಿದ್ದೀರಿ.

  ReplyDelete
 7. ನಿಮ್ಮ ಕವನಗಳು ನನಗೆ ತುಂಬಾ ಖುಷಿ ಕೊಡುತ್ತವೆ, ತಮ್ಮ ಕವನ ಮತ್ತು ಲೆಖನಗಳು ಅರ್ಥಗರ್ಭಿತವಾಗಿಯೂ ಮತ್ತು ಜೀವನದ ಬಗೆಗಿನ ಒಂದಲ್ಲಾ ಒಂದು ಸಾರವನ್ನು ಥಳಕು ಹಾಕಿಕೊಂಡಿರುತ್ತದೆ.
  ತಮ್ಮಲ್ಲಿ ಮತ್ತೊಂದು ವಿನಂತಿಯೆಂದರೆ ನನ್ನ ಬ್ಲಾಗಿನಲ್ಲಿ ತಮಗೆ ನಾನು ಪ್ರತಿಕ್ರೀಯಿಸಿದ ರೀತಿ ಖಾರವೆನಿಸಿದರೆ ಅಥವಾ ಉದ್ಢಟತನದ ಪರಮಾವಧಿ ಎನ್ನಿಸಿದರೆ ನನ್ನನ್ನು ಕ್ಷಮಿಸಬೇಕು. ತಮ್ಮಷ್ಟು ಓದಿದವಳು ನಾನಲ್ಲ, ಏನೋ ಜೀವನ ಪ್ರೀತಿಯಿಂದ ಹಾಗೆ ಹೇಳಬೇಕಾಯ್ತು, ನಿಮ್ಮನ್ನು ನೋಯಿಸುವ ಅಥವಾ ಖಾರವಾಗಿ ವರ್ತಿಸುವ ಉದ್ದೆಶವಿರಲಿಲ್ಲ.,

  ReplyDelete
 8. ಸಾಗರಿಯವರೇ ಹಾಗೂ ಪ್ರೋತ್ಸಾಹಿಸಿದ ಅನೇಕ ಓದುಗ ಮಿತ್ರರೇ, ನಿಮ್ಮೆಲ್ಲರನ್ನು ಉದ್ದೇಶಿಸಿ ಎರಡು ಮಾತು, ಬುದ್ಧನ ಎದುರಿಗೆ ಸತ್ತು ಮಗುವನ್ನು ತಂದಿಟ್ಟು ಬದುಕಿಸುವಂತೆ ಗೋಳಿಟ್ಟಾಗ ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತಂದುಕೊಟ್ಟರೆ ಮಗುವನ್ನು ಬದುಕಿಸುತ್ತೇನೆ ಎಂದು ಬುದ್ಧ ಹೇಳಿದನಂತೆ, ಅದೇ ರೀತಿ ಕಷ್ಟವಿಲ್ಲದ, ರೋಗ ಮುಕ್ತ ಮನೆ ಎಂಬುದು ಇದ್ದರೆ ಅದು ಕನಸು, ಪ್ರತೀ ಮನೆಯಲ್ಲಿ ಇಂದು ಬೊಗಸೆ ಬೊಗಸೆ ಮಾತ್ರೆ ತಿನ್ನುತ್ತಾರೆ, ಎಲ್ಲಾ ಗಲ್ಲಿಗಲ್ಲಿಗಳಲ್ಲಿ ಒಂದೋ ಎರಡೋ ಔಷಧ ಅಂಗಡಿಗಳಿವೆ.ಹೀಗಾಗಿ ಬಹುತೇಕ ಜನ ಸುಖದಿಂದ್ದಾರೆ ಎಂಬ ವಾದ ಸುಳ್ಳು.

  ಇನ್ನು ಪ್ರತಿ ವ್ಯಕ್ತಿ ತನ್ನ ಕಷ್ಟವನ್ನು ಹೇಳಿಕೊಳ್ಳಲು ಹಲವಾರು ಮಾರ್ಗಗಳಿವೆ, ಹಲವಾರು ಮಾಧ್ಯಮಗಳಿವೆ, ಹಲವಾರು ಸರಕಾರೇತರ ಸಂಸ್ಥೆಗಳಿವೆ, ಈ ಕಾಲ ಹಿಂದಿನಕಾಲದ ಹಾಗೇ ಕಾರ್ಗತ್ತಲ ಕಾಲವಲ್ಲ, ನಮ್ಮ ಜನ ಶ್ರೀಮಂತರಲ್ಲದಿದ್ದರೂ ಉದಾರಿಗಳು,ಹೃದಯವಂತರು. ಮೊನ್ನೆ ಉತ್ತರಕರ್ನಾಟಕದ ಜನತೆ ಮಳೆಯಿಂದ ತತ್ತರಿಸಿದಾಗ ಬರೇ ಬೆಂಗಳೂರಿಂದಲೇ ಕೋಟಿಗಟ್ಟಲೆ ಸಹಾಯ ಮಾಡಿದರು, ತನು-ಮನ-ಧನ ಸಹಾಯಕ್ಕೆ ಉದಾಹರಣೆ ಇನ್ನೂ ಬೇಕೇ ? ಬಡತನದಲ್ಲಿ ನೋಯುವ, ಬೇಯುವ ಬಸವಳಿಯುವ, ಎಳವೆಯಲ್ಲೇ ತಲೆಬಿಸಿಯಿಂದ ಮುದುಕಾಗುವ ಹಲವು ಹತ್ತು ವ್ಯಕ್ತಿಗಳಿದ್ದಾರೆ. ಅದಕ್ಕೆಲ್ಲ ಪರಿಹಾರ ಕೇವಲ ವೇಶ್ಯಾವಾಟಿಕೆಯಲ್ಲ, ಒಂದೊಮ್ಮೆ ವೇಶ್ಯಾವಾಟಿಕೆ ಮಾಡಿದರೂ ಎಲ್ಲಿಯತನಕ ಅದು ಮುಂದುವರಿಯಲು ಸಾಧ್ಯ ಅಥವಾ ಅದರಿಂದ ಬರುವ ಹಣದಿಂದ ನೀವೇ ಹೇಳಿದ ಕ್ಯಾನ್ಸರ್ ಪೀಡಿತ ಗಂಡ, ಕಣ್ಣು ಕಾಣದ ಮುಡುಕು ಅತ್ತೆ, ಸಣ್ಣ ಸಣ್ಣ ಹಲವು ಮಕ್ಕಳು--ಇಲ್ಲಿ ಬಡತನಕ್ಕೆ ನೂರೆಂಟು ಮಕ್ಕಳೇಕೆ, ಇವತ್ತಿಗೆ ಅಜಮಾಸು ೪೦ವರ್ಷಗಳಾದವು ಕುಟುಂಬ ಯೋಜನೆ ಬಂದು,ಇವತ್ತಿನ ಯಾವ ಕಸ-ಮುಸುರೆ ತೊಳೆಯುವವಳಿಗೂ ಬರ್ತ ಕಂಟ್ರೋಲ್ ಅಂದ್ರೆ ಏನೂಂತ ಗೊತ್ತು, ಅಂದಮೇಲೆ ಮಕ್ಕಳು ಎಷ್ಟು ಬೇಕು,ಎಷ್ಟಾದರೆ ಸಾಕಲು ಸಾಧ್ಯ ಎಂಬ ವಿಚಾರ ಅವರಿಗಿರಲಿಲ್ಲವೇ? ಬೆಂಕಿಗೆ ಮಕ್ಕಳೂ ಒಂದೇ ದೊಡ್ಡವರೂ ಒಂದೇ, ಗೊತ್ತಿದ್ದರೂ ಒಂದೇ, ಗೊತ್ತಿರದಿದ್ದರೂ ಒಂದೇ, ಬೆಂಕಿಯ ಬಗ್ಗೆ ತಿಳಿದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಅಲ್ಲವೇ. ಹೀಗಾಗಿ ಪ್ರಜ್ಞಾವಂತ ಜನಾಂಗ ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಬಾರದು, ಅವರನ್ನು ಅಲ್ಲಿಂದ ಆಚೆತರಲು ಪ್ರಯತ್ನಿಸಬೇಕು. ವೆಶ್ಯೇಯರನ್ನೇ ಹೊರದಬ್ಬಿ ಅಟ್ಟಿ ಅಂತ ನಾನು ಹೇಳಿಲ್ಲ, ಅವರನ್ನು ಪರ್ಯಾಯ ಕೆಲಸದಲ್ಲಿ ತೊಡಗಿಸಿ, ಇದಕ್ಕೆ ತಮ್ಮಂಥವರು ಅನೇಕರು ಸೇರಿಕೊಂಡು ಶ್ರೀಶಕ್ತಿ ಸಂಘಗಳ ಮೂಲಕ ಕೆಲಸ ಮಾಡಬಹುದಲ್ಲ ? ಯಾಕೆಂದರೆ ನಾವು ಕೊಡುವ ಪುಡಿಗಾಸು ಎಷ್ಟುದಿನ ಅವರಿಗೆ ಸಾಕು ಅಲ್ಲವೇ ಸಾಗರಿಯವರೇ ?

  ಇನ್ನು ನೀವು ನನ್ನ ವೈಯಕ್ತಿಕದ ಬಗ್ಗೆ ಬರೆದಿರಿ, ಜೀವನದಲ್ಲಿ ಎಳೆಯ ವಯಸ್ಸಿಗೆ ಯಾವುದನ್ನು ಅನುಭವಿಸಬಾರದೋ ಅಂತಹ ಕಷ್ಟ ನಾನು ಅನುಭವಿಸಿದ್ದೇನೆ, ನನ್ನ ಅನುಭವ ಕಥನವೇ ಬೇರೆ, ನಾನು ಪರಿಸ್ಥಿತಿಯ ಕೈಗೊಂಬೆಯಾಗಲಿಲ್ಲ, ದೃಢವಾಗಿ ಅಚಲವಾಗಿ ನಾನು ನಂಬಿದ ಶಕ್ತಿಯನ್ನು ಧ್ಯಾನಿಸುತ್ತ [ ಸನ್ಯಾಸಿಯಾಗಿ ಓಡಿ ಹೋಗಲಿಲ್ಲ, ಸಂಸಾರಿ ಸದಚಾರದಿಂದಿದ್ದೂ ಸನ್ಯಾಸಿಯ ಥರ ಬದುಕಬಹುದು ಎಂಬುದಕ್ಕೆ ನಿಮಗೆ ಇತ್ತೀಚಿನ ಪ್ರಮುಖ ಉದಾಹರಣೆ ಡಾ| ವಿಷ್ಣುವರ್ಧನ್, ಹಲವಾರು ವಿಶೇಷ ವೈದ್ಯರು ಕೈಚೆಲ್ಲಿ ಕಣ್ಣು ಮಿಟುಕಿಸುತ್ತ ಕುಳಿತ ಒಂದು ಸಂದರ್ಭವನ್ನು ನನ್ನ ಮನೋ ದಾರ್ಷ್ಟ್ಯತೆಯಿಂದ ಸಹಿಸಿಕೊಂಡು ಭಾರತೀಯ ಮೂಲದ ಆಯುರ್ವೇದವನ್ನು ಅನುಸರಿಸಿ ಬಂದ ಪರಿಸ್ಥಿತಿಯನ್ನು ಗೆದ್ದಿದ್ದೇನೆ ಎಂದೂ ನಿಮಗೆ ತಿಳಿಸಲು ಹರುಷಪಡುತ್ತೇನೆ ! ಹಾಗಾಗಿಯೇ ನನ್ನ ಕಥನ-ಕವನಗಳಲ್ಲಿ ಅನುಭವ ಜನ್ಯ ವಸ್ತು ವಿಷಯಗಳೇ ಇರುತ್ತವೆ.

  ಹೀಗಾಗಿ ನೀವು ಬರೆದ ಕವನ ಕವನವೇ ಆಗಿರಲಿ ಎಂದು ಬೂಟಾಟಿಕೆಗೆ ಹೇಳಿಲ್ಲ, ಬದಲಾಗಿ ಸಮಾಜ ಮುಂದೆ ಅಂತಹ ವೇಶ್ಯಾವೃತ್ತಿ ಆದಷ್ಟೂ ನಿವಾರಣೆಯಾಗುವಂತೆ ಮಾಡಬೇಕೆಂಬುದೇ ನನ್ನ ಅನಿಸಿಕೆ. ನೀವೇ ಹೇಳಿದಿರಿ ಸೊಟ್ಟ ಭಿಕ್ಷುಕ ಕಂಡರೆ ರೂಪಾಯಿ ಹಾಕುತ್ತೇನೆ, ಅಂಥವರಿಗೆ ಪರ್ಯಾಯವನ್ನು ಸರ್ಕಾರ,ಸಂಘ ಸಂಸ್ಥೆಗಳು ಹುಡುಕುತ್ತಿವೆ, ಭಿಕ್ಷಾಟನೆ ಹೋಗಬೇಕೆಂದು ಕಡ್ಡಾಯ ಕಾನೂನು ಕೂಡ ಬಂತು, ಒಮ್ಮೆ ಇಲ್ಲಿ ಕೇಳಿ- ಕೆಲ ಸೊಟ್ಟ ಭಿಕ್ಷುಕರು ಗಳಿಸಿದಷ್ಟು ನಮ್ಮ ಸಾದಾ ಸೀದಾ ನೌಕರರು ಗಳಿಸುತ್ತಿಲ್ಲ! ಅವರಲ್ಲಿರುವ ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಮಧ್ಯಮ ವರ್ಗದ ಅನೇಕರಲ್ಲಿಲ್ಲ ! ನನ್ನ ನಿಲುವಿಗೆ ನಾನು ಬದ್ಧ, ಇಷ್ಟು ಸಾಕು ಅನಿಸುತ್ತದೆ, ಇನ್ನೂ ನಿಮಗೆ ಉತ್ತರ ಬೇಕೆಂದರೆ ಹೇಳಿ ದೂರವಾಣಿಯಲ್ಲೇ ನಿಮಗೆ ಸವಿವರವಾಗಿ ಹೇಳುತ್ತೇನೆ.

  ReplyDelete
 9. ಪ್ರತಿಕ್ರಿಯಿಸಿದ ಸುನಾಥ್ ಮತ್ತು ಸಾಗರಿಯವರಿಗೂ , ಓದಿದ-ಓದುವ-ಓದದ ಎಲ್ಲಾ ಮಿತ್ರರಿಗೂ ಧನ್ಯವಾದಗಳು

  ReplyDelete
 10. sir idu nanna modalaneya beti nimma bloggige..tumba chennagide nimma kavana.. :)

  ReplyDelete
 11. NICE POEM
  ತಮ್ಮ ಅನುಭವದ ಹರವು ಅಪಾರ. ಅದನ್ನು ಈ ರೀತಿ ಪಾಠವಾಗಿ ಉಣಬಡಿಸುತ್ತಿರುವದು ತಮ್ಮ ವಿಶಿಷ್ಠ ಕಾಯಕ. ನಾವೆಲ್ಲಾ ಇದರ ಸಾರ ಸವಿಯುತ್ತಿರುವೆವು.

  ReplyDelete
 12. Thanks to Owner of 'Snow White' & Sri Sitaram

  ReplyDelete