ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 12, 2012

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ ಇನ್ನೊಮ್ಮೆ ಅಂಥ ಸುಖ ಪಡುವೆನೇನು?

ಚಿತ್ರಕೃಪೆ : ಅಂತರ್ಜಾಲ

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು?

ಭಾವಸರೋವರಕ್ಕೆ ಕಲ್ಲೆಸೆದರೆ ಏಳುವ ಅಲೆಗಳು ಬಹುಕಾಲ ಮತ್ತೆ ಮತ್ತೆ ಅಲೆಯಲೆಯಲೆಯಾಗಿ ಹೊಮ್ಮುತ್ತಾ ನಮನ್ನು ಆಗಾಗ ತಮ್ಮತ್ತ ಸೆಳೆಯುತ್ತಾ ಯಾವುದೋ ಲೋಕಕ್ಕೆ ನಮ್ಮನ್ನು ಕರೆದೊಯ್ದುಬಿಡುತ್ತವೆ. ಅಲ್ಲಿ ಏನುಂಟು ಏನಿಲ್ಲ ? ಸಿಗದ ವಸ್ತುವಿಷಯಗಳೇ ಇಲ್ಲ. ಮನುಷ್ಯ ಯಾವುದೇ ವೃತಿಯಲ್ಲೂ ತಾದಾತ್ಮ್ಯತೆಯಿಂದ ತೊಡಗಿಕೊಂಡಾಗ ಅಲ್ಲಿ ಆತನಿಗೆ ಪರಮೋಚ್ಛ ಸ್ಥಿತಿ ಕ್ರಮೇಣ ಲಭ್ಯವಾಗುತ್ತದೆ; ಇದು ಪ್ರಕೃತಿ ನಿಯಮ! ಉನ್ನತ ಸ್ಥಾನಕ್ಕೆ ಏರಿದ ಯಾವುದೇ ವ್ಯಕ್ತಿಯನ್ನು ನೋಡಿ: ವ್ಯಕ್ತಿ ಆ ಸ್ಥಾನಕ್ಕೆ ಏರುವ ಮೊದಲಿನ ಹಂತಗಳನ್ನು ಗಮನಿಸಿದರೆ ಚಿಟ್ಟೆಯ ಮೊಟ್ಟೆ ಮರಿಯಾಗಿ, ಕಂಬಳಿಹುಳುವಾಗಿ ಮತ್ತೆ ಕಾಲಾಂತರದಲ್ಲಿ ಮಾರ್ಪಾಟಾಗಿ ಪತಂಗವಾಗಿ-ಚಿಟ್ಟೆಯಾಗಿ ಮೈದಳೆಯುವ ರೋಮಾಂಚಕ ಸನ್ನಿವೇಶಗಳೂ ಭಾವನಾತ್ಮಕ ಸಂಗತಿಗಳೂ ಅಲ್ಲಿರುತ್ತವೆ.

ನಾವೆಲ್ಲಾ ಚಿಕ್ಕವರಿದ್ದಾಗ ಅಪರೂಪಕ್ಕೆ ಅಲ್ಲಿಲ್ಲಿ ಪ್ರವಾಸಕ್ಕೆ ಹೋದಾಗ ಹೋಗಿ ಬರುವ ರಸ್ತೆಯುದ್ದಗಲಕ್ಕೂ ಅಲ್ಲಲ್ಲಿ ನೆರಳಿಗಾಗಿ ನೆಟ್ಟಿದ್ದ ಮರಗಳಿರುತ್ತಿದ್ದವು. ಹಿಂದಿನ ಕಾಲದಲ್ಲಿ ರಾಜರು ಇದಕ್ಕೆ ಬಹಳ ಪ್ರೋತ್ಸಾಹ ನೀಡಿದ್ದರಂತೆ. ಜನರು ದೂರಪ್ರಯಾಣಕ್ಕಾಗಿ ನಡೆದಾಡುದಾಗ ಜಡಿ ಮಳೆಗೂ, ಬಿಸಿಲ ಝಳಕ್ಕೂ ಚಣಕಾಲ ನಿಂತೋ ಕುಂತೋ ಸಲ್ಪ ವಿಶ್ರಮಿಸಿಕೊಳ್ಳಲು ಮರಗಳ ನೆರಳಿನ ಆಶ್ರಯ ಸಿಗುತ್ತಿತ್ತು. ಕೇವಲ ೨೫ ವರ್ಷಗಳಲ್ಲಿ ಆದ ಬದಲಾವಣೆಯನ್ನು ನೋಡಿದರೆ ಇದು ನಾವೇ ಹುಟ್ಟಿಬೆಳೆದ ಪ್ರದೇಶವೇ/ರಾಜ್ಯವೇ ಎನ್ನುವಷ್ಟು ಪರಿಸ್ಥಿತಿ ಬದಲಾಗಿಹೋಯ್ತು. ತುಂಬಿ ತುಳುಕುತ್ತಿದ್ದ ಕೆರೆ ಬಾವಿಗಳು ಬರಿದಾದವು, ನೈಸರ್ಗಿಕವಾಗಿ ಜಿನುಗುತ್ತಿದ್ದ ಚಿಲುಮೆಗಳು ಒಣಗಿಹೋಗಿ ನದೀಪಾತ್ರಗಳು ಬಟಾಬಯಲಾಗಿ ಎಲ್ಲೆಲ್ಲೂ ನೀರೇ ಇಲ್ಲದ ಸ್ಥಿತಿ-ಮಳೆಗಾಲದಲ್ಲಿ ಮಳೆ ಸರಿಯಾಗಿ ಬಂದರೆ ಮಾತ್ರ ರಾಡಿನೀರನ್ನು ಕಾಣಬಹುದಾದ ಸ್ಥಿತಿ!

ಎಲ್ಲಿ ನೋಡಿದರೂ ನಾನಾ ವಿಧದ ಗಣಿಗಳು, ಎಲ್ಲಿನೋಡಿದರೂ ಅನಾವಶ್ಯಕ ಚತುಷ್ಪಥ ರಸ್ತೆಗಳ ತಯಾರಿ, ರಸ್ತೆ ಅಗಲೀಕರಣಕ್ಕೆ ತುತ್ತಾಗಿ ಕುರುಕ್ಷೇತ್ರದಲ್ಲಿ ಕೈಕಾಲುಗಳು ಕತ್ತರಿಸಿಹೋಗಿ ಬಿದ್ದು ರೋದಿಸುತ್ತಿರುವ ಮಹಾಯೋಧರಂತೇ ಕಾಣುವ ಹಳೆಯತಲೆಮಾರಿನ ಹೆಮ್ಮರಗಳು. ಕಾರ್ಖಾನೆಗಳ ಕಲ್ಮಶಗಳನ್ನು ತುಂಬಿಸಾಗಿಸುತ್ತಿರುವ ಚಿಕ್ಕಪುಟ್ಟ ಹೊಲಸುನಾರುವ ನದಿಗಳು--ಇವುಗಳನ್ನೆಲ್ಲಾ ಕಂಡಾಗ ಒಂದು ಕಾಲಕ್ಕೆ ಉಂಡುಟ್ಟು ಇದ್ದುದರಲ್ಲೇ ತೃಪ್ತಿ ಪಡುತ್ತಿದ್ದ ಮಾನವನಿಗೆ ಈಗ ತೃಪ್ತಿಯೇ ಇಲ್ಲವೇ ಎಂಬುದು ಪ್ರಶ್ನೆಯಾಗುತ್ತದೆ. ಇತಿಹಾಸದಲ್ಲಿ, ಪುರಾಣಗಳಲ್ಲಿ ಕೇಳಿದ ಗೊಂಡಾರಣ್ಯಗಳು, ನಿತ್ಯಹರಿದ್ವರ್ಣ ಕಾಡುಗಳು, ಬೃಹದಾರಣ್ಯಗಳು, ಗುಂಜಾರಣ್ಯಗಳು, ಋಷ್ಯಮೂಕ-ಪಂಚವಟಿ-ದಂಡಕಾರಣ್ಯ ಇವೆಲ್ಲಾ ಕೇವಲ ಕೇವಲ ಕಲ್ಪನೆಗೂ ನಿಲುಕದ ರೀತಿ ಮಾಯವಾದವು! ಅವುಗಳಲ್ಲಿ ಮನೆಮಾಡಿದ್ದ ಅಸಂಖ್ಯ ಜೀವರಾಶಿಗಳು ಹೆಸರೇ ಇಲ್ಲದಂತೇ ವಿನಾಶವಾಗಿ ಹೋದವು. ಉಳಿದ ಕೆಲವು ಪ್ರತಿಶತ ಕಾಡುಗಳಿಗೆ ಬೆಂಕಿಯೋ ಮರ್ದೊಂದೋ ಬಿದ್ದು ಅವೂ ನಾಶವಾದಾಗ ಆನೆ-ಚಿರತೆ-ಹುಲಿಗಳಂಥಾ ಕೆಲವೇ ಪ್ರಾಣಿ ಪ್ರಭೇದಗಳು ಬದುಕಲು ಅತಿ ಅವಶ್ಯಕವಾದ ಆಹಾರ ಸಿಗುವುದೇ ದುಸ್ತರವಾಗಿ ತಮ್ಮತನವನ್ನು ಬಿಟ್ಟು ಬದುಕುವುದಕ್ಕಾಗಿ ಹೊಟ್ಟೆಗಾಗಿ ಹಳ್ಳಿ-ಪಟ್ಟಣಗಳಿಗೆ ನುಗ್ಗಿದವು!

ನಾವು ಚಿಕ್ಕವರಿದ್ದಾಗ ಎಲ್ಲಾ ಮನೆಗಳಲ್ಲೂ ಕೇಳಿ ಬರುತ್ತಿದ್ದ ಗೋವಿನಹಾಡು ಅದೆಲ್ಲೋ ಹೋಯ್ತು, ದೇಸೀ ತಳಿಯ ಗೋವುಗಳು ನಿರ್ನಾಮವಾದವು! ಡಾ| ಸತ್ಯನಾರಾಯಣ ಭಟ್ಟರು ತಮ್ಮ ’ಪೃಥಿವೀಸೂಕ್ತ’ದಲ್ಲಿ ಹೇಳಿರುವಂತೇ ಜೀವವೈವಿಧ್ಯಗಳಲ್ಲೂ ಸಸ್ಯವೈವಿಧ್ಯಗಳಲ್ಲೂ ಹಲವನ್ನು ನಾವಿಂದು ಉಳಿಸಿಕೊಂಡಿಲ್ಲ, ಇರುವ ಕೆಲವೂ ನಮ್ಮ ಕೈತಪ್ಪಿಹೋಗುವ ಅಂಚಿನಲ್ಲಿವೆ! ಮಲೆನಾಡ ತಣ್ಣಗಿನ ಗೋಮಾಳದಲ್ಲಿ ಕುಳಿತ ಗೋವಳನಲ್ಲಿ ತನ್ನನ್ನು ಕಂಡು ಕವಿ ಕುವೆಂಪು " ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ’ ಬರೆದರು, ಆದರೆ ಸದ್ದೇ ಇಲ್ಲದಹಾಗೇ ಮಲೆನಾಡ ಮಳೆಕಾಡುಗಳು ಬರಿದಾಗಿ ಗೋಮಾಳಗಳು ವಾಣಿಜ್ಯ ಮಳಿಗೆಗಳಾಗುತ್ತಾ ನಡೆದಿವೆ! ಬಹುಶಃ ಈ ಶತಮಾನದಲ್ಲಿ ಹಿಂದೆಂದೂ ಕಾಣದಿದ್ದ ಪರಿಸರ ನಿರ್ಮೂಲನಾ ಆಂದೋಲನವನ್ನು ನಾವು ಕಂಡಿದ್ದೇವೆ, ಅದನ್ನು ಪರೋಕ್ಷ ಬೆಂಬಲಿಸಿದ್ದೇವೆ ಕೂಡಾ!

ಕವಿ ಶಿವಾನಂದ ಸಿದ್ದಣ್ಣ ಮಸಳಿ ಬರೆದ ಕವನವೊಂದನ್ನು ಮಿತ್ರ ವಸಂತ್ ಕುಮಾರ್ ಫೇಸ್ ಬುಕ್ ನಲ್ಲಿ ಹಾಕಿದ್ದರು. ನಾವು ಅದನ್ನು ಪಠ್ಯಕ್ರಮದಲ್ಲಿ ಓದಿಲ್ಲ. ಆದರೆ ನಮಲ್ಲಿ ಹಲವರು ಅದನ್ನು ಹಾಡುತ್ತಿದ್ದರು. ಕೆಲವರಿಗೆ ಅದು ಪಠ್ಯದಲ್ಲೂ ಲಭ್ಯವಿತ್ತು ಎಂಬುದು ತಿಳಿದುಬಂದಿದೆ. ಇವತ್ತು ಬೆಳಗಾವಿಯಲ್ಲಿ ತನ್ನ ವೃತ್ತಿಯಲ್ಲಿ ತೊಡಗಿರುವ ಕವಿ ಮಸಳಿಯವರು ಕೊಟ್ಟಿರುವ ಈ ಹಾಡು ಗಿಳಿಯೊಂದರ ಆಂತರ್ಯವನ್ನು ಅದೆಷ್ಟು ಸೆರೆಹಿಡಿದಿದೆಯೆಂದರೆ ಈ ಹಾಡನ್ನು ಕೇಳಿದ ಹೃದಯವುಳ್ಳ ಯಾರೇ ಆಗಲಿ ಪ್ರಾಣಿಹಿಂಸೆಯನ್ನು ಸಹಜವಾಗಿ ನಿಲ್ಲಿಸಿಬಿಡುತ್ತಾರೆ:

ನಾನು ಪಂಜರ ಪಕ್ಷಿ ಇನ್ನು ನನಗಾರು ಗತಿ
ಕೇಳಬಯಸುವಿಯೇನು ನನ್ನ ಕಥೆಯಾ?
ಯಾರ ಸಂತೋಷಕ್ಕೆ ಹಿಡಿದು ತಂದರೋ ನನ್ನ
ಅರಿಯಬಲ್ಲೆಯ ನನ್ನ ಒಡಲ ವ್ಯಥೆಯಾ?

ಗಿಳಿಯನ್ನು ಹಿಡಿದಾಗ ಅದು ತನ್ನ ಗೆಳೆಯರ ಅಥವಾ ಕುಟುಂಬದ ಗುಂಪಿನಿಂದ ಬೇರ್ಪಡುತ್ತದೆ. ಅದನ್ನು ನಮ್ಮ ಸಂತೋಷಕ್ಕಾಗಿ ಪಂಜರದಲ್ಲಿಟ್ಟು ಮಾತು ಕಲಿಸುವಾಗ ನಮಗೇನೋ ಖುಷಿಯೆನಿಸಬಹುದು ಆದರೆ ಅದರ ಅಳಲು ನಮಗರ್ಥವಾದೀತೇ ? ಹೋಗಲಿ ಎಲ್ಲಿತ್ತು ಆ ಗಿಳಿ ನೋಡೋಣ:

ಬಹುದೂರ ಯಾವುದೋ ಪರ್ವತದ ಓರೆಯಲಿ
ಮರದ ಗಿರಿ ಶಿಖರದಲಿ ಜನಿಸಿ ಬಂದೆ!
ಆ ತಂದೆ ತಾಯಿಯರು ನನ್ನಣ್ಣ ತಂಗಿಯರು
ಅವರ ಜೊತೆಯಲಿ ನಾನು ನಲಿಯುತಿದ್ದೆ!

ತಾನು ಎಲ್ಲಿ ಹುಟ್ಟಿ ಬೆಳೆದೆ ಎಂಬ ಬಗ್ಗೆ ಗಿಳಿ ಹೇಳುತ್ತಿದೆ--ತಾನು ಬಹುದೂರದಲ್ಲಿ ಅದಾವುದೋ ಗಿರಿ ಶಿಖರದ ಮರದ ಕೊಂಬೆಯ ಗೂಡಿನಲ್ಲಿ ಜನಿಸಿದ್ದೆ, ಅಲ್ಲಿ ನನ್ನ ತಂದೆ-ತಾಯಿ, ಅಣ್ಣ-ತಂಗಿ ಎಲ್ಲರೊಡನೆ ನಾನು ಹಾಯಾಗಿ ನಲಿದಾಡುತ್ತಾ ಇದ್ದೆ. ಇನ್ನು ಮರಳಿ ಅಲ್ಲಿಗೆ ತೆರಳಲು ಸಾಧ್ಯವೇ?

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು?
ಯಾರ ನಂಬಿ ಇನ್ನು ಜೀವ ಹಿಡಿಯಲಿ ನಾನು
ಅರ್ಥವಿಲ್ಲದ ಹಾಡ ಹಾಡಲೇನು?

ಗಿರಿಶಿಖರದಲ್ಲಿ ಹುಟ್ಟಿ ಹರಿವ ತೊರೆಗಳ ಝರಿಗಳ ಸ್ಫಟಿಕಸದೃಶ ಸ್ವಚ್ಛ ನೀರು ಅಲ್ಲಿತ್ತು-ಅದನ್ನು ನಾನು ಕಡಿಯುತ್ತಿದ್ದೆ, ಹಾರಾಡಲು ಧೂಳಿನ ಲವಲೇಶವೂ ಇಲ್ಲದ ನೀಲಾಗಸದ ಅವಕಾಶವಿತ್ತು, ಮತ್ತೆ ಅದು ಸಿಗುತ್ತದೇನು ? ನನ್ನವರೆಲ್ಲರನ್ನೂ ಕಳೆದುಕೊಂಡು ಯಾರನ್ನು ನಂಬಿ ನಾನಿಲ್ಲಿ ಜೀವ ಹಿಡಿದು ಬದುಕಿರಲಿ ?

ನೀಲದಾಕಾಶದಲಿ ಮೋಡದಾ ಮರೆಯಲ್ಲಿ
ಮನತುಂಬಿ ಬಂದಂತೆ ಹಾಡುತಿದ್ದೆ
ಮುಗಿಯಲಾ ಸ್ವಾತಂತ್ಯ ಸವಿಯಿಲ್ಲ ಕಂಠದಲಿ
ದುಗುಡ ತುಂಬೀ ಮನದಿ ಹಾಡದಾದೆ!

ನೀಲಿಯಾಕಾಶದಲ್ಲಿ ಅಲ್ಲಲ್ಲಿ ಕಾಣಿಸುವ ಬೆಳ್ಮುಗಿಲನ್ನು ಕಂಡು ಗಿಡ-ಮರಗಳಲ್ಲಿ ಕೂತು ಹಾಡುತ್ತಿದ್ದೆ, ಆಡುತ್ತಿದ್ದೆ. ಇಂದು ಆ ಸ್ವಾತಂತ್ರ್ಯ ನನ್ನಪಾಲಿಗಿಲ್ಲವಾಗಿದೆ, ದುಗುಡ ತುಂಬಿದ ಮನಸ್ಸಿನ ನನ್ನ ಕಂಠದಲ್ಲಿ ಧ್ವನಿ ಉಡುಗಿಹೋಗಿದೆ, ಈಗ ಹಾಡಲೂ ಆರೆ, ಹಾಡಬಯಸಲೂ ಆರೆ!

ಅಲ್ಲಿ ಬನಬನದಲ್ಲಿ ಕಾಡಗಿಡಗಿಡದಲ್ಲಿ
ಕೊಂಬೆ ಕೊಂಬೆಗೂ ಹೂವು ಸಾವಿರಾರು
ಬನದ ಹಣ್ಣಿನ ರುಚಿಯ ಬರಿ ನೆನೆಯಲೇನುಂಟು
ಮರಳಿದೊರೆಯಲು ಬಹುದೆ ತೌರಿನವರು?

ಅಲ್ಲಿರುವ ವನವನಗಳಲ್ಲೂ ಗಿಡಗಿಡಗಳಲೂ ವಿಧವಿಧದ ಹೂವುಗಳು, ಹಣ್ಣುಗಳು, ಕಾಯಿಗಳು ಸಿಗುತ್ತಿದ್ದವು. ಬಣ್ಣಬಣ್ಣದ ಹೂಗಳನ್ನು ಕಣ್ತುಂಬಾ ನೋಡುತ್ತಿದ್ದೆ, ಹಸಿವೆಯಾದಾಗ ಬೇಕಷ್ಟು ಹಣ್ಣುಗಳನ್ನು ಹೊಟ್ಟೆತುಂಬಾ ತಿನ್ನುತ್ತಿದ್ದೆ. ನನ್ನೆಲ್ಲ ಸಹಜೀವಿಗಳ ಜೊತೆಗೆ ಕುಟುಂಬಿಕರ ಜೊತೆಗೆ ಅಲ್ಲಿ ಕುಳಿತು ಸವಿಯುತ್ತಿದ್ದ ಆ ಹಣ್ಣುಗಳ ರುಚಿಯನ್ನು ಹೇಳಿನ್ನೇನು ಪ್ರಯೋಜನ? ನನ್ನ ತೌರಿನವರನ್ನು ನಾನು ಮರಳಿ ಮತ್ತೆಂದಾದರೂ ಕಾಣಲಾದೀತೇ ?

ಹೀಗೇ ಪಂಜರದ ಹಕ್ಕಿಯಾಗಿ ಹರಿದುಬಂದ ಕವಿಮನದ ಭಾವಗಳಿಗೆ ಯಾವತ್ತಿಗೂ ಜೀವವಿರುತ್ತದೆ! ಸಮಾಜದಲ್ಲಿ ಅನೇಕರು ಕವಿಹೃದಯದ ಮಿಡಿತಕ್ಕೆ ತುಡಿಯುತ್ತಾರೆ ಎಂಬುದಂತೂ ಸತ್ಯ. ಬರೆದ ಕವನಗಳ ಸಂಖ್ಯೆಗಿಂತ ಕವನದ ಸಂದೇಶ ಬಹಳ ಮುಖ್ಯವಾಗುತ್ತದೆ. ಈ ಕವನದ ಸಂದೇಶದಿಂದಲೇ ಕವಿ ನಮ್ಮ ಮನದ ಮೂಸೆಗೆ ಹೋಗಿ ಭದ್ರವಾಗಿ ಕುಳಿತುಬಿಡುತ್ತಾರೆ! ಸಿದ್ದಣ್ಣ ಮಸಳಿಯವರ "ದೀಪಾವತಾರ" ಮತ್ತು "ಮನೆ ತುಂಬಿದ ಬೆಳಕು" ಎರಡು ಕವನ ಸಂಕಲಗಳೂ ಪ್ರಕಟವಾಗಿವೆ. ಪ್ರಸ್ತುತ ಕವನ " ತಟ್ಟು ಚಪ್ಪಾಳೆ ಪುಟ್ಟ ಮಗು" ಎಂಬ ಕವನ ಸಂಕಲನದ್ದಾಗಿದೆ. ಈ ಸಂಕಲನದ ಕೆಲವು ಕವನಗಳನ್ನು ಸುಮಾರು ೫೦ ವರ್ಷಗಳ ಹಿಂದಿನಿಂದಲೂ ಚಿಕ್ಕ ಮಕ್ಕಳಿಗೆ ಪಾಠ ಕ್ರಮದಲ್ಲಿರುವ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸುತ್ತಾ ಬರಲಾಗಿದೆ. ೧೯೫೭ ಇಸವಿ ಮೇ ತಿಂಗಳ ೨೨ನೆ ತಾರೀಕು ಜನಿಸಿದ ಈ ಕವಿ ೧೯೭೯ ರಲ್ಲಿ ಕೆ. ಎಲ್. ಇ ಸೊಸೈಟಿಯ ಲಿಂಗರಾಜ ಕಾಲೇಜಿನಲ್ಲಿ (ಬೆಳಗಾವಿ )ತಮ್ಮ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಪ್ರಾಧ್ಯಾಪಕರಾಗಿದ್ದಾರೆ -ಎಂಬುದನ್ನು ಇನ್ನೊಬ್ಬ ಹಿರಿಯ ಮಿತ್ರ ರವಿ ತಿರುಮಲೈ ಅವರು ತಿಳಿಸಿದ್ದಾರೆ. ಕವಿ ಮಸಳಿಯವರಿಗೂ ಮತ್ತು ಸ್ನೇಹಿತರಾದ ವಸಂತ್ ಕುಮಾರ್, ರವಿ ಈರ್ವರಿಗೂ ನನ್ನ ನಮನಗಳು.

ಬೇಸಿಗೆಯಂಚಿನಲ್ಲಿ ನಾವೆಲ್ಲಾ ಪಕ್ಕದೂರಲ್ಲಿ ಜಾತ್ರೆಗೆ ಹೋಗುತ್ತಿದ್ದುದುಂಟು. ಅಲ್ಲಿ ನಡೆಯುತ್ತಾ ನಡೆಯುತ್ತಾ ಸಾಗುವ ದಾರಿಹೋಕರಿಗೆ ಬಾಯಾರಿಕೆ ಸಹಜ. ಜಾತ್ರೆಗೆ ಸ್ವಸಂತೋಷಕ್ಕಾಗಿಯೂ ಊರದೇವರು ತೇರನೇರಿದ ಸಂಭ್ರಮವನ್ನು ಕಣ್ತುಂಬಿಕೊಂಡು ಹಣ್ಣು-ಕಾಯಿ ಸಮರ್ಪಿಸಲಾಗಿಯೂ ಬರುವ ಮಂದಿಗೆ ಕುಡಿಯುವ ನೀರು ದಾರಿಯಲ್ಲಿ ಸಿಗುವುದು ದುರ್ಲಭ. ಅಂತಹ ಸನ್ನಿವೇಶವನ್ನು ಅರ್ಥಮಾಡಿಕೊಂಡ ಪುಣ್ಯಾತ್ಮರೊಬ್ಬರು ನಮ್ಮ ಪಕ್ಕದೂರಲ್ಲಿದ್ದರು. ಹೆಬ್ಬಾರ ಸಣ್ಣಪ್ಪ ಎಂಬ ಹೆಸರಿನ ಈ ವ್ಯಕ್ತಿ ನಾಕಾರು ಮಡಕೆ [ನಮ್ಮಲ್ಲಿ ಜೋನಿ ಬೆಲ್ಲವನ್ನು ಆಗೆಲ್ಲಾ ತುಂಬಿಸುತ್ತಿದ್ದುದು ಮಣ್ಣಿನ ವಿಶಿಷ್ಟ ಆಕಾರದ ಮಡಕೆಗಳಲ್ಲಿ!]ಬೆಲ್ಲವನ್ನು ತಂದಿಟ್ಟುಕೊಂಡು, ಲಿಂಬೆಹಣ್ಣುಗಳನ್ನೂ, ಕಾಳುಮೆಣಸು, ಯಾಲಕ್ಕಿ ಇತ್ಯಾದಿಗಳನ್ನೂ ಜೋಡಿಸಿಕೊಂಡು, [ನೀರಂತೂ ಸಹಜವಾಗಿ ಬೇಕಲ್ಲ]ಪಾನಕ ಸಿದ್ಧಪಡಿಸಿ ಹಾದಿಹೋಕರಿಗೆ ಜಾತ್ರೆಯಲ್ಲಿ ಒಂದುವಾರಕಾಲ ಅದನ್ನು ನಿಶ್ಶುಲ್ಕ ನೀಡುತ್ತಿದ್ದರು. ಮಾತನಾಡಿಸಿದಾಗ ಅವರು ಹೇಳುತ್ತಿದ್ದುದು "ಇದೊಂದು ಸೇವೆ, ಯಾವುದನ್ನು ಕೊಟ್ಟರೂ ತೃಪ್ತವಾಗದ ಮನುಷ್ಯರು ಹೊಟ್ಟೆಗೆ ನೀರು-ಆಹಾರ ಕೊಟ್ಟಾಗ ತೃಪ್ತರಾಗುತ್ತಾರಲ್ಲ, ಆ ತೃಪ್ತಿಯಿಂದ ಭಗವಂತ ತೃಪ್ತನಾಗುತ್ತಾನೆ!" ಎಂಥಾ ಮಾತು ಮತ್ತು ಎಂಥಾ ಸೇವೆ ಅಲ್ಲವೇ? ಇಂಥಾದ್ದನ್ನೆಲ್ಲಾ ನಾವಿವತ್ತು ಅಪರೂಪಕ್ಕಾದರೂ ಕಾಣಲು ಸಾಧ್ಯವೇ ?

ರಾಜರುಗಳೂ ಕೂಡ ಆ ಕಾಲದಲ್ಲಿ ದಾರಿಹೋಕರಿಗೆ ಕುಡಿಯುವ ನೀರಿಗೆ ಅರವಟ್ಟಿಗೆಗಳನ್ನು ಕಟ್ಟಿಸಿದ್ದರಂತೆ. ಇಂದು ಅಲ್ಲಿಲ್ಲಿ ಜೈನ ಸಮುದಾಯ ಅರವಟ್ಟಿಗೆಗಳನ್ನು ಮಾಡಿದೆ ಬಿಟ್ಟರೆ ಕುಡಿಯುವ ನೀರು ಬಾಟಲಿಗಳಲ್ಲಿ ಹಣಕ್ಕೆ ಮಾತ್ರ ಲಭ್ಯ. ಅದೂ ಕೂಡ ಕೆಲವೊಮ್ಮೆ ರಾಸಾಯನಿಕ ಮಿಶ್ರಿತ! ಇಂದು ಗೂಡಿನ ಪಕ್ಷಿಯರೀತಿಯಲ್ಲೇ ನಮ್ಮಂತಹ ಅನೇಕ ಜನ ವ್ಯಾವಹಾರಿಕ ಬಂಧನದಲ್ಲಿ ಸಿಲುಕಿರುತ್ತೇವೆ. ಮತ್ತೆ ಆ ತಿಳಿನೀಲ ಆಕಾಶ, ಸ್ವಚ್ಛಗಾಳಿ-ನೀರು, ಗಿರಿಶಿಖರ ಇವುಗಳ ಸುತ್ತ ವಾಸಿಸುವ ಅವಕಾಶ ನಮಗೆಲ್ಲಿದೆ? ನಮಗಿರಲಿ ಸದ್ಯ ಅಳಿದುಳಿದ ವನ್ಯಜೀವಿಗಳಿಗಾದರೂ ಆ ಅವಕಾಶ ಇದೆಯೇ ? ಇದಕ್ಕೆಲ್ಲಾ ಕಾರಣೀಭೂತರಾರು ? ತಪ್ಪುತ್ತಿರುವ ನೈಸರ್ಗಿಕ ಸಮತೋಲನ ತಹಬಂದಿಗೆ ಬರಲು ಸ್ವಲ್ಪವಾದರೂ ನಾವು ಕಾರ್ಯಪ್ರವೃತ್ತರಾಗಬೇಡವೇ? ರಾಜಕಾರಣಿಗಳ ’ಹಗಲು-ರಾತ್ರಿ ನಾಟಕ’ಗಳಿಂದ ನೈಸರ್ಗಿಕ ಸಂಪತ್ತನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ?