ಸಾರಥಿಯೆ ನಿಲ್ಲೊಮ್ಮೆ .....
ದೇಹದೀ ಕೊಳಲಿನಲಿ ನವರಂಧ್ರಗಳ ಕೊರೆದುಜೀವ ನುಡಿಸಿದ ತನ್ನ ಭಾವಗಳು ಹರಿದೂ
ಸಂಸಾರ ಸಾಗರದಿ ನೌಕೆನಡೆಸುತಲರಿದು
ಸುಖ ದುಃಖಗಳೀಯುತ್ತ ತನ್ನೆಡೆಗೆ ಕರೆದೂ
ರಾಜ್ಯಭಾರವ ನಡೆಸಿ ತಾ ಕುಳಿತು ಕಾಣದಲಿ
ಒಂದರೊಳಗೊಂದಾಗಿ ಮೆರೆವುದನು ಕಂಡೆ
ಮಂದಬುದ್ಧಿಗೆ ಕವಿದಿರುವಹಂಕಾರದಲಿ
ಕಂಡರೂ ಕಾಣದಂತಾಗಿಹುದನುಂಡೆ
ಆರೂ ವೈರಿಗಳಿರದ ಬದುಕಿನೀ ದಾರಿಯಲಿ
ಆರು ಅಶ್ವಗಳಿರಿಸಿ ಚಾವಟಿಯ ಬೀಸಿ
ಸಾರಥಿಯೆ ಎಲ್ಲಿಗದು ಪಯಣವೀ ವೇಗದಲಿ ?
ಮಾರುತಿಯ ಮೀರಿಸುವ ರೀತಿಯಲಿ ನಡೆಸಿ
ರಾಗ ಹಲವನು ನುಡಿಸಿ ಕೊಳಲ ಮಾಯೆಯಲಿರಿಸಿ
ಭೋಗದಾ ವೈಭೋಗ ತೆರೆತೆರೆದು ತೋರಿ
ತ್ಯಾಗಮಾಡುತ ಮುರಳಿ ತೊರೆವೆ ಮತ್ತೊಂದರಸಿ
ಯೋಗ ಬಯಸುವೆ ನಿನ್ನ ದರುಶನವ ಕೋರಿ