ಯುಗಾದಿಯ ಬಗೆಗೆ ಹೊರಟರೆ ಅದು ಬರೆಯುವ ಅಧ್ಯಾಯ ಬಹಳ ಅಗಾಧ,ಹೊಸ ವರ್ಷವನ್ನು ತನ್ನ ರಂಗೋಲಿಯೊಂದಿಗೆ ಆರಂಭಿಸುವ ಈ ಯುಗಾದಿ ಜೀವನದಲ್ಲಿ ಹೊಸತನವನ್ನು ನೀಡುವ ಹರಿಕಾರ! ಬಳಲಿ ಬೆಂಡಾದ ಮನಕ್ಕೆ, ಹಳತನ್ನೇ ನೋಡಿ ಬೇಸತ್ತ ಮನಕ್ಕೆ ಹೊಸದೇನನ್ನೋ ಹೊತ್ತುತರುವ ಈ ಘಳಿಗೆ ಹೊಸದಾಗಿ ಹಸಿರುಡುವ ಗಿಡಮರಗಳಲ್ಲಿ ಬಣ್ಣ ಬಣ್ಣದ ಹೂಗಳನ್ನರಳಿಸಿ, ತರಾವರಿ ಬಣ್ಣದ ಚಿಟ್ಟೆಗಳನ್ನು ಹಾರಿಸಿ, ದೂರಬಾನಲ್ಲಿ ಸ್ವಲ್ಪ ಮೋಡಗಟ್ಟಿ ತುಂತುರು ಮಳೆಯ ಸಿಂಚನಮಾಡಿ-ಮಂತ್ರದಾತೀರ್ಥ ಪ್ರೋಕ್ಷಣೆ ಮಾಡಿ, ಚಿಕ್ಕ ಚೊಕ್ಕ ಕಾಮನಬಿಲ್ಲು ಸೃಜಿಸಿ, ಆಗಸದ ಗಡಿಗೆ ಒಮ್ಮೊಮ್ಮೆ ಬೆಳ್ಳಿಯ ಚಿತ್ತಾರ ಮೂಡಿಸಿ, ಮಾವಿನ ತೋರಣಕಟ್ಟಿ ನಮ್ಮೆಲ್ಲರ ಕಣ್ಮನ ತಣಿಸುವ ಋತು ವಸಂತ ನಿಜಕ್ಕೂ ನಿಸರ್ಗದಚ್ಚರಿ ! ವಿಧ ವಿಧ ಪಶು ಪಕ್ಷಿಗಳು ಅವುಗಳ ಕೂಗು-ಕಲರವ ಬಹುತರ ಹಣ್ಣು-ಕಾಯಿಗಳು ಇದನ್ನೆಲ್ಲ ನೋಡಲು ಎರಡು ಕಣ್ಣಜೊತೆ ಸಾವಿರ ಕಣ್ಣುಗಳ ಮನಸ್ಸು ಬೇಕು. ಮೈಯೆಲ್ಲಾ ಕಣ್ಣಾಗಿ ಆಸ್ವಾದಿಸಿದಾಗ ಅದರ ಸ್ವಾದವೇ ಬೇರೆ. ನಿಸರ್ಗ ನೋಂಪಿಯ ಈ ಶುಭ ಘಳಿಗೆ ವರುಷ ವರುಷವೂ ಬರಲಿ, ಮರಳಿ ಮರಳಿ ಬರಲಿ, ನಮಗೆಲ್ಲ ಹೊಸ ಹೊಸತನು ತರಲಿ, ಬದುಕು ನವ ನಾವೀನ್ಯತೆ ತುಂಬಿ ನಳನಳಿಸಲಿ, ದೀರ್ಘ ಆಯುಷ್ಯ-ಆರೋಗ್ಯ- ಐಶ್ವರ್ಯ-ಜ್ಞಾನ-ಸುಖ-ಸಮೃದ್ಧಿ ದೊರೆಯಲಿ ಎಂಬುದೀ ಕವಿಮನದ ಆಶಯ, ಸದಾಶಯ, ಶುಭಾಶಯ.




ಬಂದನಾ ವಸಂತ ರಾಜ ಬಣ್ಣದ ರಥವೇರುತಾ
ಚಂದದಾ ವಿಹಾರ ನಡೆಸಿ ನಮ್ಮನೆಲ್ಲ ನಲಿಸುತಾ
ಹೂ ಗಿಡಗಳು ಅರಳಿನಿಂತು ಮಘಮಘಿಸುತ ಮೈಮನ
ಕೂಗುತಿಹವು ಕೋಗಿಲೆಗಳು ಭುವಿಯದಾಯ್ತು ನಂದನ
ಮಾಗಿನಿಂತ ಹಣ್ಣುಗಳವು ಬಾಗಿಕರೆಯೆ ಕಾಮನಾ
ಯೋಗಬೇಕು ಭೋಗಿಸಲ್ಕೆ ಬೀಗುತಿಹುದು ಜನಮನ


ಹಸಿರಸೀರೆ ಉಟ್ಟ ಮರದಿ ಕೆಂಪು ಚಿತ್ರದೌತಣ
ಬಿಸಿಲ ಬೇಗೆ ಕಳೆಯಲದಕೆ ತಂಗಾಳಿಯ ಸೇಚನ
ನಸುನಾಚುವ ಅಳಿಲಮೊಗದಿ ತುಂಟನಗುವ ನರ್ತನ
ರಸಗಳಿಗೆಯ ಕವಿಯು ಹಾಡೆ ಕಬ್ಬವಾಯ್ತು ಕವಿಮನ

ಕೊಸರಿಕೊಂಡು ಹಾರುವಾಗ ಚಿಟ್ಟೆ ಬರೆದ ಪತ್ರವು
ನೊಸಲಿಗಂಟಿದಂಟಿನಾಟ ಅಹಹ ಎಂಥ ಸ್ಪರ್ಶವು
ಒಸಗೆಯದುವೆ ಬದುಕಿನಲ್ಲಿ ಬೀಗತನದ ಹರ್ಷವು
ಪಿಸುಮಾತಿನ ಗಿಳಿಸಾರಿತು ಬರಲಿ ವರ್ಷವರ್ಷವೂ


ಸೇರು ಪಾವು ಅಳೆದು ತೂಗಿ ಕೊಡಲೆನಗೆ ಅಸಮ್ಮತ
ಸಾರಿ ಹೇಳ್ವೆ ಸಾಗರದೋಪಾದಿಯಲಿರೆ ಸಮ್ಮತ
ಸೇರಿಬನ್ನಿರೆಲ್ಲಕೂಡಿ ಮೆರೆವ ಯುಗದ ಪದಪಥ
ಸೂರೆ ಹೊಡೆಯೆ ಸುರರು ನೆನೆದು ಮತ್ಸರಿಸಲಿ ಸಾಂಪ್ರತ

ಮುಂಚಿತವೇ ಹೇಳ್ವ ನಾವು ಯುಗಾದಿ ಜಗದೋತ್ಸವ
ಕಿಂಚಿತ್ತೂ ಕೊರತೆಯಿಲ್ಲ ಶುಭದ ವಸಂತೋತ್ಸವ
ಸಂಚಿಯಿಂದ ತೆಗೆದು ಹಂಚಿ ಬೇವು-ಬೆಲ್ಲದುತ್ಸವ
ಮಿಂಚಲಿ ನಮ್ಮೆಲ್ಲರ ಬಾಳದು ನವನವೋತ್ಸವ



ಮಧುವಾತಾ ಋತಾಯತೇ ಮಧುಕ್ಷರಂತಿ ಸಿಂಧವಃ |
ಮಾಧ್ವೀರ್ನಃ ಸಂತ್ವೋಷ ಧೀಃ ||
ಮಧುನಕ್ತಮುತೋಷಸಿ ಮಧುಮತ್ಪಾರ್ಥಿವಗ್೦ ರಜಃ |
ಮಧು ದ್ಯೌರಸ್ತು ನಃ ಪಿತಾ ||
ಮಧುಮಾನ್ನೋ ವನಸ್ಪತಿರ್ಮಧುಮಾಗ್೦ ಅಸ್ತು ಸೂರ್ಯಃ |
ಮಾಧ್ವೀರ್ಗಾವೋ ಭವಂತು ನಃ ||
ನಮ್ಮ ಸುತ್ತ ಇರುವ ಎಲ್ಲಾ ಗಿಡಮರಗಳು ನಮಗೆ ಅಮೃತತುಲ್ಯವಾದ ಹಣ್ಣು-ಕಾಯಿಗಳನ್ನೂ, ಔಷಧಗಳನ್ನೂ ನೀಡುವಷ್ಟು ಸಶಕ್ತವಾಗಲಿ, ನಮ್ಮ ನದಿ-ತೊರೆ ಜಲಾಶಯಗಳು ಸದಾ ತುಂಬಿರಲಿ,ನಮ್ಮ ಗೋವುಗಳು ಸದಾ ಕ್ಷೀರ ಸಮೃದ್ಧಿಯನ್ನೀಯಲಿ, ದಿನಬೆಳಗುವ ಭಾಸ್ಕರ, ನಮ್ಮೆಲ್ಲರ ಮಿತ್ರ ಸೂರ್ಯ ನಮಗೆ ತನ್ನ ಔಷಧೀಯ ಕಿರಣಗಳನ್ನ ಸೂಸಿ ಹರಸಲಿ, ಒಟ್ಟಾರೆ ನಮ್ಮ ಜೀವಿತಕ್ಕೆ ಬೇಕಾಗುವ ಎಲ್ಲಾ ಕಸುವು-ಸುಖ-ಸಂಪತ್ತನ್ನು ಭಗವಂತ ಕರುಣಿಸಲಿ ಎಂದು ಮನಸಾ ಭಗವಂತನಿಗೆ ಜೇನುತುಪ್ಪದಿಂದ ಅಭಿಷೇಚಿಸಿ ಸಂಪೂರ್ಣ ಪಂಚಾಮೃತವನ್ನೆರೆದು, ಷೋಡಷೋಪಚಾರಗೈದು ಸಂಪೂರ್ಣ ಫಲದ ಹರಿವಾಣವಿಟ್ಟು ನಿವೇದಿಸಿ, ಮಂಗಲಾರತಿಯೆತ್ತಿ ತಮ್ಮೆಲ್ಲರ ಪರವಾಗಿ ಕವಿ ಜಗದಮಿತ್ರ ಪ್ರಾರ್ಥಿಸಿದ್ದಾನೆ -
ವಸುಧೈವಕುಟುಂಬವೆನ್ನದು ನಮ್ಮೊಳಗಿರ್ಪ
ಕೆಸರತೊಳೆಯೆನುತ ಶಿವನನು ಧ್ಯಾನಿಸುತ
ವಸುಧೆಯೋಳ್ ಪಂಚಾಮೃತವಿತ್ತು ತಾ ಬೆಳಗಿ
ಹಸನುಮಾಡೈ ನೀನು | ಜಗದಮಿತ್ರ
ಕೆಸರತೊಳೆಯೆನುತ ಶಿವನನು ಧ್ಯಾನಿಸುತ
ವಸುಧೆಯೋಳ್ ಪಂಚಾಮೃತವಿತ್ತು ತಾ ಬೆಳಗಿ
ಹಸನುಮಾಡೈ ನೀನು | ಜಗದಮಿತ್ರ