ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 7, 2010

ರಾಜ ನೀತಿ

ಇವತ್ತಿನ ದಿನಮಾನವನ್ನು ನೆನೆಸಿಕೊಂಡರೆ ಒಮ್ಮೆ ನಗುವೂ ಇನ್ನೊಮ್ಮೆ ವಿಷಾದವೂ, ಮಗುದೊಮ್ಮೆ ಭಯವೂ, ಮತ್ತೊಮ್ಮೆ ಕ್ಲೇಶವೂ ಆವರಿಸುತ್ತದೆ. ಕಾರಣ ಹುಡುಕಿದರೆ ಧುತ್ತನೆ ಎದುರಾಗುವುದು ಪ್ರಕ್ಷುಬ್ಧ ರಾಜಕೀಯ! ಎಲ್ಲಿಲ್ಲ ರಾಜಕೀಯ ಹೇಳಿ? ದಿಲ್ಲಿಯಲ್ಲಿರಬೇಕಾದ ರಾಜಕೀಯ ಹಳ್ಳಿಯ ಮೂಲೆ ಮೂಲೆಗೂ ತಲುಪಿ ಹುಲುಸಾಗಿದ್ದ ಜೀವನ ಹೊಲಸಾಗಿಬಿಟ್ಟಿದೆ! ಮಿತ್ರರು, ದಾಯದಿಗಳು ಹೆಚ್ಚೇಕೆ ಮನೆಮಂದಿಯೇ ತಮ್ಮೊಳಗೆ ಪಕ್ಷಪಂಗಡವೆಂತ ಹೊಡೆದಾಡಲು ತೊಡಗಿರುವುದು ಈ ದುರಂತ ರಾಜಕೀಯದ ಅಪಶ್ರುತಿ ಫಲಶ್ರುತಿ. ಸಿಂಹದ ಹೊಟ್ಟೆಯಲ್ಲಿ ಹೇಗೆ ಸಿಂಹವೇ ಜನಿಸುವುದೋ ನರಿಯ ಹೊಟ್ಟೆಯಲ್ಲಿ ಹೇಗೆ ನರಿಯೇ ಹುಟ್ಟುವುದೋ ಹಾಗೇ ಖೂಳರೇ ತುಂಬಿದ ರಾಜಕೀಯದಲ್ಲಿ ಮತ್ತೆ ಸಾಕಷ್ಟು ಖೂಳರು ಸೇರಿಕೊಳ್ಳುತ್ತಿದ್ದಾರೆ. ರಾಜಕೀಯವೆಂದರೆ ಅದೊಂದು ಅಘೋಷಿತ ’ಸಮಾನ ಮನಸ್ಕ ದುಡ್ಡುಮಾಡುವವರ ಸಹಕರ ಸಂಘ’! ಅಲ್ಲಿ ಒಬ್ಬರಿಗೊಬ್ಬರು ಪಕ್ಷಭೇದ ಮರೆತು ಒಳಗೊಳಗೆ ಮಿತ್ರರಾಗಿರುತ್ತಾರೆ,ಆಗಾಗ ದೂರವಾಣಿಯಲ್ಲಿ ಮಾತನಾಡುತ್ತ ಹರಟುತ್ತ ಪರಸ್ಪರರ ವೈಯ್ಯಕ್ತಿಕ ಹಿತಾಸಕ್ತಿಗಳಿಗೆ ಸೊಪ್ಪುಹಾಕುತ್ತಿರುತ್ತಾರೆ ! ಎನೂ ಅರಿಯದ ಮುಗ್ಢ ಜನಸಾಮಾನ್ಯ ಪಕ್ಷದ ಹೆಸರಿನ ರಾಜಕೀಯದಲ್ಲಿ ಬಲಿಪಶುವಿನರೀತಿ ಬದುಕುತ್ತಿದ್ದಾನೆ. ’ಯಾರು ಬಂದ್ರೂ ಇಷ್ಟೇ ಹಣೆಬರಹ’ ಎಂದುಕೊಂಡು ಸುಮ್ಮನಾಗಿ ಪಾಲಿಗೆ ಬಂದ ತಲೆಯಮೇಲಿನ ತಲಗಂದಾಯವನ್ನು ಸಂದಾಯಮಾಡುತ್ತ ರಾಜಕೀಯದವರ ಡೊಂಬರಾಟಕ್ಕೆ ಪರೋಕ್ಷ ದೇಣಿಗೆ ನೀಡುತ್ತ ಬದುಕು ಸವೆಸುತ್ತಿದ್ದಾನೆ.

ರಾಜಕೀಯದಲಿ ಇಂದು ಮುತ್ಸದ್ಧಿಗಳು ದೂರ್ವಾಗುತ್ತಿದ್ದಾರೆ, ಇನ್ನೇನಿದ್ದರೂ ಅದು ಕನಸಿನ ಮಾತೇ ಸರಿ! ಇನ್ನು ಮುಂದೆ ರಾಜಕೀಯ ಬರೇ ರೌಡಿಗಳ,ಕಿಡಿಗೇಡಿಗಳ,ಖೂಳರ ಅಧಿಕೃತ ಅಡ್ಡೆಯಾಗಿ ಮಾರ್ಪಡುತ್ತದೆ. ಯಾವ ಹಿಂದೂಸ್ಥಾನದಲ್ಲಿ,ಯಾವ ಭಾರತದಲ್ಲಿ ಅಮೇರಿಕದ ಥರ ಕೇವಲ ಎರ್‍ಅಡು ದೊಡ್ಡಪಕ್ಷಗಳಿರಬೇಕಿತ್ತೋ ಅಂಥಲ್ಲಿ ಈಗ ಸಾವಿರಾರು ಪಕ್ಷಗಳಿವೆ, ಮನೆಗೊಂದು,ಜಾತಿಗೊಂದು,ಗಲ್ಲಿಗೊಂದು,ಹಳ್ಳಿಗೊಂದು ಹೀಗೇ ಪಕ್ಷಗಳಿಗೆ ಲೆಕ್ಕವೇ ಇಲ್ಲ. ದುಡ್ಡಿದೆಯಾ ಬನ್ನಿ ಪಕ್ಷಮಾಡೋಣ! ನನಗೆ ಸೀಟು ಸಿಕ್ಕಿಲ್ಲ, ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ, ನನಗೆ ಬೇಕಾದ ಖಾತೆ ಸಿಕ್ಕಿಲ್ಲ, ನನಗೆ ಪಕ್ಷದಲ್ಲಿ ಆದ್ಯತೆ ಸಿಕ್ಕಿಲ್ಲ --ಎಂಬೀಥರದ ಕ್ಷುಲ್ಲಕ ಕಾರಣಗಳಿಂದ ಪಕ್ಷಾಂತರ ಅಥವಾ ಹೊಸ ಪಕ್ಷದ ಉದಯ! ನ್ಯಾಯ ನೀತಿ ಕೇವಲ ಬೋರ್ಡಿನಲ್ಲಿರುವ ಅಂಕಿಅಂಶಗಳು! ’ಮೌಲ್ಯಯುತ ರಾಜಕಾರ್‍ಅಣ’ ಎಂಬ ಹೇಸಿಗೆ ಹುಟ್ಟಿಸಿದ ಶಬ್ಧದ ಸತತ ಬಳಕೆ. ಹೀಗೇ ಹೇಳಹೊರಟರೆ ಸರಕಾರದ ಕೆಲಸ (ಎದುರಿಗೆ ಬಂದು ಉಗಿಯಲಾರದೇ ಕಳವಳಿಸುತ್ತ ಕುಳಿತ) ಕೆಲಸ ! ಸಂವಿಧಾನವನ್ನು ಸ್ವಾತಂತ್ರ್ಯ ಬಂದಾಗ ಅಂದಿನ ಕಾಲಕ್ಕೆ ನಾವು ಬರೆದೆವು, ಅಂದು ಅದರ ಬಗ್ಗೆ ಬಹಳ ವಿಶ್ಲೇಷಣೆ ನಡೆಯಲು ಸಮಯವಿರಲಿಲ್ಲ, ಇಂದು ಅದು ನಮಗೆ ಆಸ್ತಿಭಾರ-ಅದನ್ನು ತಿದ್ದಲು ನಾವು ಬಿಡುವುದಿಲ್ಲ ಯಾಕೆಂದರೆ ನಮಗೆ ಬೇಕಾದ ರೀತಿಯ ರಾಜಕಾರ್‍ಅಣಕ್ಕೆ ಮುಂದೆ ಅವಕಾಶವಿರುವುದಿಲ್ಲ ಎಂದು ಮನಸಲ್ಲೇ ಮಂತ್ರ ಜಪಿಸಿ ಹಾಗೇ ಕಾಲಕಳೆಯುತ್ತಿದ್ದರೆ ನಮ್ಮ ರಾಜಕರಣಿಗಳು; ಇದು ದೇಶದ ದುರಂತ, ದೇಶದ ಜನರ ದುರಂತ! ೨೧ನೇ ಶತಮಾನದ ಅಕ್ಷರಸ್ಥ ಪ್ರಜೆಗಳ ದುರಂತ! ಒಮ್ಮೆ ಸಂವಿಧಾನವನ್ನು ಸರಿಯಾಗಿ ಪುಸ್ತಕ ರೂಪದಲ್ಲಿ ತಂದು ಎಲ್ಲರಿಗೂ ಓದಿಸಿ, ಅದಕ್ಕೆ ಸ್ವಲ್ಪ ಬದಲಾವಣೆಗಳು ಅನಿವಾರ್ಯ,ಭಾಷೆ ಹೇಗೆ ಬೆಳೆಯುತ್ತದೋ ಹಾಗೇ ಸಂವಿಧಾನಕೂಡ ಬೆಳೆಯುತ್ತದೆ. ಪ್ರಸಕ್ತ ಅಲ್ಲಿರುವ ಅನೇಕ ರೂಪರೇಷೆಗಳು ಈಗಿನ ಖೂಳ ರಾಜಕರಣಿಗಳ ಖೊಳ್ಳೆಹೊಡೆಯುವ ಸಂಸ್ಕೃತಿಗೆ ಪೂರಕವಗಿವೆ, ಹೀಗಾಗಿ ಅವುಗಳ ಮಾರ್ಪಾಟು ಆಗಲೇ ಬೇಕೆಂದರೆ ಬೆಕ್ಕಿಗೆ ಗಂಟೆಕಟ್ಟುವ ಕಥೆಯಾಗಿದೆ ನಮ್ಮ ಜೀವನ, ಕಥೆಯಲ್ಲ ಜೀವನ.


ಇಂತಹ ದಿನಗಳಲ್ಲಿ ಹಿಂದಿನ ತನ್ನ ಆದರ್ಶ ಜೀವನ ಕ್ರಮದಿಂದ ಶಾಶ್ವತ ದೈವತ್ವವನ್ನು ಪಡೆದ ಶ್ರೀರಾಮನ ಅಂದಿನ ರಾಜಕಾರ್ಯವೆಲ್ಲಿ ಇಂದಿನ ರಾಮನ ವೇಷದವರ ರಾಜಕೀಯವೆಲ್ಲಿ! ಛೆ ಛೆ .. ಈ ಜನ ರಾಮನ ವೇಷವಲ್ಲ ಹೆಸರು ಹೇಳಲೂ ಅರ್ಹರಲ್ಲ! ಆದರೆ ಹೆಚ್ಚಾಗಿ ವೇದಿಕೆಯೇರಿ ರಾಮನ ವೇಷಹಾಕುವವರೇ ಇವರಾಗಿರುವುದು ವಿಪರ್ಯಾಸವೂ ಉಪದ್ವ್ಯಾಪವೂ ಆಗಿದೆ. ಕಂಡಲ್ಲಿ ನುಗ್ಗುವ ನುಸುಳುವ ಕಚ್ಚೆಹರುಕ ರಾಜಕರಣಿಗೆ ದೊಡ್ಡ ಕಚ್ಚೆಹರುಕರಿಂದ ಶ್ರೀರಕ್ಷೆ ಬೇರೆ! ಇದು ನಮಗೇ ನಾವು ಮಾಡಿಕೊಂಡ ಅವಮಾನವಲ್ಲವೇ? ಒಪ್ಪ ಆಪಾದಿತ ರಾಜಕಾರಣಿ ಇದ್ದಕ್ಕಿದ್ದಲ್ಲೇ ಭೂಗತನಾದಾಗ ಬಂಧಿಸಲಾಗದ ನಮ್ಮ ಆರಕ್ಷಕರು, ಸುಳಿವೇ ಸಿಗದ ಯಾವುದೋ ಮೂಲೆಯಿಂದ ನಿತ್ಯಾನಂದನನ್ನು ಹುಡುಕಿತಂದರು! ಗೊತ್ತಾಗದ್ದೋ ಗೊತ್ತಾಗಿದ್ದೋ ಅಂತೂ ನಾವೆಲ್ಲ ಕಣ್ಣೀದ್ದೂ ಕುರುಡರು,ಕಿವಿಯಿದ್ದೂ ಕಿವುಡರು! ಪ್ರತೀಬಾರಿ ಯಾರೋ ಬರುತ್ತಾರೆ, " ಅಮ್ಮಾ ತಾಯೇ, ಹಸಿವೂ " ಅಂದ ಹಾಗೇ ಮತದಾರರಾದ ನಮ್ಮ ಕಾಲಿಗೆ ಬೀಳುತ್ತಾರೆ-ತಮ್ಮ ಸ್ವಾರ್ಥಸಾಧನೆಯಾಗುವವರೆಗೆ. ಹುಟ್ಟಿದ ತಪ್ಪಿಗೋ, ಒತ್ತಾಯಕ್ಕೋ,ಅನಿವಾರ್ಯತೆಗೋ, ದೇಶಾಭಿಮಾನಕ್ಕೋ ಕಟ್ಟುಬಿದ್ದು ನಾವು ಮತದಾನಮಾಡುತ್ತೇವೆ-ಅಪಾತ್ರರಿಗೆ! ನೆನಪಿಡಿ ಸ್ನೇಹಿತರೇ ನಾವು ಮಾಡುವುದು ಬಹುತೇಕ ಅಪಾತ್ರದಾನ! [ಅಪಾತ್ರದಾನಮಾಡುವುದರಿಂದ ಕೇಡು, ಅದಕ್ಕಿಂತ ದಾನಮಾಡದಿರುವುದು ಒಳ್ಳೆಯದು ಎಂದಿದ್ದಾರೆ ಪ್ರಾಜ್ಞರು.] ಚುನಾಯಿತ ಪ್ರತಿನಿಧಿ ಯಾರೆಂದು ನಾವು ಟಿ.ವಿ.ಯಲ್ಲೇ ನಾವು ನೋಡಬೇಕೇ ಹೊರತು ಅವರು ರಾತ್ರಿ ಕಳೆದು ಬೆಳಗಾಗುವಾಗ ಹೀರ್‍ಓ ಆಗಿರುತ್ತಾರೆ! ನಮ ಕೈಗೆಸಿಗಲಾರದ, ಸಮಾಜದ ಅವಶ್ಯಕ ಕೆಲಸ ಮಾಡಿಕೊಡಲಾಗದ ’ಜನನಾಯಕ’ ರಾಗಿ ಅಭಿಮಾನಿಗಳೆಂಬ ಸೋಗಿನಲ್ಲಿ ಬೆಂಗಾವಲಿಗೆ ರೌಡಿಪಡೆನಿರ್ಮಿಸಿಕೊಂಡು ನಾವು ಕೆಲಸ ಮಾಡಿಕೊಡಿ ಎಂದು ಒತ್ತಾಯಿಸಿದರೆ ನಮ್ಮ ಮೇಲೆ ಚೂ ಬಿಡುತ್ತಾರೆ! ಅನೇಕ ಹೀನಾಯ ಕೆಲಸ, ಕೊಲೆ-ಸುಲಿಗೆ,ದುರಾಚಾರ,ಅತ್ಯಾಚಾರ,ಬ್ರಷ್ಟಾಚಾರ ನಡೆಸುತ್ತ, ಜನರಿಂದ ತೆರಿಗೆ ಬಂದ ಹಣದಲ್ಲಿ ಸಿಂಹಪಾಲನ್ನು ನೀರಿನಂತೆ ಖರ್ಚುಮಾಡುತ್ತಾರೆ-ತಮ್ಮ ಕೆಲಸಕ್ಕೆ,ಪಡೆದ ಲಂಚವನ್ನು ವರ್ಗಾಯಿಸುತ್ತರೆ ತಮ್ಮ ಗುಪ್ತ ಖಾತೆಗೆ. ಸನ್ಮಾನ್ಯ ಲೋಕಾಯುಕ್ತರೆಂಬವರು ಇಂಥವರನ್ನು ಹಿಡಿಯಲು ಯೋಗ್ಯರಲ್ಲ! ಯಾಕೆಂದರೆ ನಮ್ಮ ಸಂವಿಧಾನದಲ್ಲಿ ಅದಕ್ಕೆ ಆಸ್ಪದವಿಲ್ಲ! ಯಾರೋ ಪುಣ್ಯಾತ್ಮರು ಇಂಥವರ ಕಥೆಯನ್ನು ಬಹಿರಂಗಗೊಳಿಸಿದರೆ ಅವರಮೇಲೆ ಸಾಕಿಕೊಂಡ ರೌಡಿಪಡೆಯನ್ನು ಚೂ ಬಿಡುತ್ತಾರೆ, ಬದುಕಿದೆಯಾ ಬಡಜೀವವೇ ಅಂದು ತಪ್ಪಿಸಿಕೊಳ್ಳಲು ಏನೇ ಮಾಡಿದರೂ ಅನೇಕಾವರ್ತಿ ಸೋಲು ಖಚಿತ;ಸಾವು ಉಚಿತ! ಅನಾಥ ಶವವಾಗಿ ಎಲ್ಲೆಲ್ಲೋ ಬೀಳುವುದಕ್ಕಿಂತ ’ನಮಗೆ ಯಾಕೆ ಬೇಕು ಎನ್ನುತ್ತ’ ಕಾಲಹಾಕುವ ಪಾಪದ ಜನ ನಾವಾಗುತ್ತೇವೆ;ಇದು ಇಂದಿನ ನಮ್ಮ ಪ್ರಜಾಪ್ರಭುತ್ವ! ಒಬ್ಬ ರೇಣುಕಾಚಾರ್ಯ, ಒಬ್ಬ ಸಂಪಂಗಿ, ಒಬ್ಬ ಹಾಲಪ್ಪ ಹೀಗೇ ನಮ್ಮ ಸುತ್ತಲ ರಾಜಕೀಯವೇ ಎಲ್ಲಾ ಈ ರೀತಿ ರಾಮವೇಷದವರ ವೇದಿಕೆಯಾಗಿಬಿಟ್ಟಿದೆ. ನಿನ್ನೆ ಸಂಪಾದಕರೊಬ್ಬರು ಬರೆದಿದ್ದಾರೆ-ಬರೆಯುವ ಮನಸ್ಸು ಬರುತ್ತಿಲ್ಲ ಎಂದು, ಸ್ವಾಮೀ ಬರೆಯಲು ಮನಸ್ಸಿಲ್ಲದಿದ್ದರೂ ಬರೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಬರೆಯಬೇಕಾಗಿದೆ. ಬರೆದರೆ ಮಿತ್ರರನೇಕರು ಓದಿ ಮುಂದಿನ ಸಮಾಜದ ಉದ್ಧಾರಕ್ಕೆ ಅಲ್ಲೆಲ್ಲೋ ಅವರಲ್ಲೊಬ್ಬ ವಿವೇಕಾನಂದ ಹುಟ್ಟಿಬರಬಹುದು, ಸುಭಾಷ್ಚಂದ್ರ ಬೋಸ್ ಹುಟ್ಟಿಬರಬಹುದು, ಲಾ ಲಾ ಲಜಪತರಾಯ್ ಬರಬಹುದು, ಲೋಕಮಾನ್ಯ ಮತ್ತೆ ಜನಿಸಬಹುದು ಎಂಬುದೇ ನನ್ನ ಆಶಯ. ನಾವಂತೂ ಅಂತಹ ಮೇಧಾವಿಗಳಾಗಲು,ದೇಶಾಭಿಮಾನಿಗಳಾಗಲು ಸಾಧ್ಯವಾಗಿಲ್ಲ ನಮ್ಮ ಕೃತಿಯನ್ನು ಓದಿ ಸ್ಪೂರ್ತಿಪಡೆದು ಯಾರಾದರೂ ಅಂಥವರು ಒಡಮೂಡಲಿ, ದೇಶದ ಹೊಲಸು ರಾಜಕೀಯವನ್ನು ಬೇರು ಕಿತ್ತು, ಬೆಂಕಿಹಚ್ಚಿ ಬೂದಿಮಾಡಿ, ಸಾಗರಗಳಲ್ಲಿ ಚೆಲ್ಲಲಿ, ಇಲ್ಲಿ ಪುನಃ ಚಪ್ಪನ್ನೈವತ್ತಾರು ರಾಜರು ಬಂದರೂ ಚಿಂತೆಯಿಲ್ಲ ಶ್ರೀರಾಮನ ಸ್ವಭಾವದ ಲಕ್ಷಭಾಗಗಳಲ್ಲಿ ಒಂದು ಭಾಗವನ್ನಾದರೂ ಅಳವಡಿಸಿಕೊಂಡ ರಾಜರು ಬರಲಿ, ನಮಗೆ ಆಗ ಇಂದಿನ ಈ ಹೊಲಸು ತುಂಬಿದ, ಹೂಳುತುಂಬಿದ, ಹಾಳಪ್ಪಗಳು-ಖೂಳರು ನಡೆಸುವ ಪ್ರಜಾಪ್ರಭುತ್ವವೆಂಬ ನಾಟಕವೇ ಬೇಡ!



ರಾಜ ನೀತಿ
ಅಂದು....

ಜನನಿ ಜನಕರ ಮನದ ಅಳಲುಗಳ ತಾನರಿದು
ವನಕೆ ನಡೆದನು ರಾಮ ಸಿರಿಭೋಗ ತೊರೆದು
ಜನತೆ ಕಣ್ಣೀರಿಡುತ ತಾವ್ ನಡೆಯಲ್ಜೊತೆಯಲ್ಲಿ
ಮನುಕುಲೋತ್ತಮ ಮರುಗಿ | ಜಗದಮಿತ್ರ


ಭಾರ್ಯೆಯನು ಕಳಕೊಂಡು ಮನದಿ ಚಿಂತಿತನಾಗಿ
ಆರ್ಯಾವರ್ತದಿ ಹುಡುಕಿ ಮುನ್ನಡೆದ ರಾಮ
ವೀರ್ಯವಂತನು ಗುಡುಗಿ ವಧಿಸುತಾರಾವಣನ
ಶೌರ್ಯಮೆರೆಯುತ ಗೆದ್ದ | ಜಗದಮಿತ್ರ


ಕಲ್ಲಾಗಿ ಬಿದ್ದ ಅಹಲ್ಯೆ ತಾ ಕೂಗಿರಲು
ಅಲ್ಲಿಗೈತಂದು ಮನ್ನಿಸಿ ದೋಷತೊಡೆದು
ಎಲ್ಲವನು ಕ್ಷಮಿಸಿ ಮರುಜನುಮವಂ ನೀಡಿ
ಬಲ್ಲನೆನ್ನುತ ನುಡಿದ | ಜಗದಮಿತ್ರ


ಶಬರಿ ಭಕ್ತಿಗೆ ಮೆಚ್ಚಿ ಹಣ್ಣು ಎತ್ತುತ ಕಚ್ಚಿ
ಶಬರರಂದದಿ ಮಗನ ಪ್ರೀತಿಯನು ತೋರಿ
ಶುಭವು ಸತತವು ಎಂದು ಹರಸಿ ಹಾರೈಸುತ್ತ
ಅಭಯನೀಡಿದ ನೋಡ | ಜಗದಮಿತ್ರ


ಅಗಸನಾಡಿದ ಮಾತು ಅನುಗಾಲ ಮನಕೆಣಕಿ
ಅರಸ ಕಳುಹಿದ ಮಡದಿ ಜಾನಕಿಯ ವನಕೆ
ಸೊಗಸಲ್ಲ ಜನಮನದ ನುಡಿಯ ಕಡೆಗಣಿಸಿದರೆ
ವರಸೆಯಲಿ ಮಿಗಿಲಿಲ್ಲ | ಜಗದಮಿತ್ರ


....ಇಂದು

ಪ್ರಜೆಗಳಾಡುವ ಮಾತು ಪ್ರಭುವಾಲಿಸದೆ ಕುಂತು
ರಜವಹಾಕುತ ಭೂಗತರಾಗಿ ಕ್ಷಣದಿ
ಮಜದಿ ಮಾರ್ಜಾಲ ಕಣ್ಮುಚ್ಚಿ ಹಾಲ್ಕುಡಿದಂತೆ
ನಜಭಂಡರಾಗಿಹರು | ಜಗದಮಿತ್ರ

ರಾಜಕಾರ್ಯದಿ ಹಲವು ನೀತಿ ಬಾಹಿರರಾಗಿ
ರಾಜಿಪರು ಧನಮದದಿ ಗೆಲುವೆನೆಂದೆನುತ
ಬೀಜದಲೇ ಕುಷ್ಟ ಹಿಡಿದಿಹ ನಮ್ಮ ಪ್ರಭುಗಳಿಗೆ
ರಾಜಿಸೂತ್ರವು ಒಳಗೆ | ಜಗದಮಿತ್ರ

ಚಡ್ಡಿಹರುಕರು ಕುಡುಕ ಖೂಳರಕ್ಕಸ ರೌಡಿ
ಬಡ್ಡಿಕಾಸಿನ ದೊರೆಗಳ್ ಸೇರುತದುಪಕ್ಷ
ದುಡ್ಡುಮಾಡುವ ದಂಧೆ ಪ್ರಜೆಗೆ ಪುಂಗಿಯ ಊದಿ
ಖಡ್ಡ ಕೆಂಚರ ತಾಣ | ಜಗದಮಿತ್ರ

ಹಾಲೋ ಹಾಲಾಹಲವೋ ತಿಳಿಯದಾಗಿದೆ ಜಗದಿ
ಕಾಲನೆಳೆಯುತ ಬೇಯಿಸುತ ತಮ್ಮ ಬೇಳೆ
ವಾಲಿ ರಾವಣರೆಲ್ಲ ರಾಮವೇಷದಿ ಬಂದು
’ಹಾಲಪ್ಪ’ರಾಗಿಹರು | ಜಗದಮಿತ್ರ