
ಬೆಳಗಲಿ ದೀವಿಗೆ ಹೃದಯದಲಿ
ಅದೇ ರಾಗ ಅದೇ ತಾಳದಲ್ಲಿ ಹಾಡದೇ
ಬೇರೆ ಹಿಂದೋಳ ರಾಗದಲ್ಲಿ ಹಾಡುವುದಕೆ ಬರೆದೆ
ಆದರೆ ಹಿಂದೂ ಗೊತ್ತಿಲ್ಲ ಮುಂದೂ ಗೊತ್ತಿಲ್ಲ : ರಾಗವೇ ಗೊತ್ತಿಲ್ಲ
ನೂರಾವೊಂದು ಬಾರಿ ಬರೆದರೂ ಅದೇ ರಾಗ
ಬಂದರೂ ಬಂದೀತೆಂದು ಅನಿಸುತ್ತಿದೆ
ಅದಕ್ಕೇ ಖರಹರಪ್ರಿಯವನ್ನು ಸ್ವಲ್ಪ ಬದಲಾಯಿಸಿ
ಕಲಹಪ್ರಿಯ ರಾಗವೆಂದು ಬರೆದುಬಿಟ್ಟರೆ ಹೇಗೆ ?
ಈ ಪ್ಲಾನಿನಲ್ಲೇ ರಾತ್ರಿಯೆಲ್ಲಾ ತಲೆಯಲ್ಲಿ
ಯಾರೋ ಹುಳಬಿಟ್ಟ ಅನುಭವ !
ಹೋಗಲಿ ರಾಗಯಾವುದಾದರೇನು ಭಾವ ನವನವೀನ
ಎಂದುಕೊಂಡು ಬರೆಯಹೊರಟರೆ ತಂಗಿ-ಬಾವ
ಬರುತ್ತಾರೋ ಕೇಳೋ ಎಂಬ ಫೋನಿಗೆ ಕಿವಿಯಾನಿಸಿ
ಭಾವನೆಗಳ ಕಂತೆಯನ್ನು ಮೂಟೆಕಟ್ಟಿ
ಏಕ್ ದಂ ಹೊರಗೆಬಂದು ಕಾಲುಮಾಡಿದೆ
ಹೋಯ್ ತಂಗಿ-ಬಾವ ಹಬ್ಬಕ್ಕೆ ಬನ್ನಿ
ಅಸಲಿಗೆ ಹಬ್ಬ ಯಾವದಿನ ಶುರು ಮತ್ತು
ಯಾವದಿನ ಮುಕ್ತಾಯ ಏನೇನು ಕಾರ್ಯಕ್ರಮ
ಯಾವ ಕಜ್ಜಾಯ-ಸಿಹಿತಿನಿಸು ಇದೆಲ್ಲಾ ಗೊತ್ತಿರದ
ಕುಂಭಕರ್ಣ ಸಹೋದರ ನಾನು
ಹಾಗಂತ ರಾವಣನಲ್ಲ ವಿಭೀಷಣನೂ ಅಲ್ಲ
ಸ್ವಲ್ಪ ನಿದ್ದೆ ಜಾಸ್ತಿ ಅಷ್ಟೇ
ಏನೂ ಅಂದುಕೊಳ್ಳಬೇಡಿ ಈ ಪಟಾಕಿ ಅಂದರೆ
ನನಗೆ ಬೋ ಅಲರ್ಜಿ ಪಟಾಕಿಯಂತೇ
ಮೈಯ್ಯೆಲ್ಲಾ ಉರಿಯುತ್ತದೆ
ನಿದ್ದೆಮಾಡುವಾಗೆಲ್ಲಾ ಹಚ್ಚುತ್ತಾರೆ
ತಲೆಹಿಡುಕರು ಅವರಿಗೇನು ತಲೆಸರಿಯಿಲ್ಲವೇ ?
ಎಂದುಕೊಂಡು ಬೇಗ ೮ ಘಂಟೆಗೇ ಎದ್ದು
ಕಣ್ಣುಜ್ಜಿ ನೋಡುತ್ತೇನೆ
ಅಂಗಳತುಂಬಾ ರಂಗೋಲಿ
ಬಣ್ಣಬಣ್ಣದ ನಕ್ಷೆಗಳು
ಬದುಕು ರಂಜಿಪ ಚಿತ್ತಾರಗಳು
ಒಬ್ಬರಿಗಿಂತಾ ಒಬ್ಬರು ಮೇಲು ಭಲೇ ಇವರ
ಒಬ್ಬಟ್ಟು ತಿಂದು ಹೊಸಬಟ್ಟೆ ಉಟ್ಟು ಆಗಲೇ
ಸುರು ಹಚ್ಚಿಬಿಟ್ಟಿದ್ದಾರೆ ಹಬ್ಬದಾಚರಣೆಗೆ
ಸಿಗುವ ಮೂರೇ ದಿನ ಹಾಯಾಗಿ ಮಜವಾಗಿ
ಸುಬ್ರಾಯ ಮಾದೇವ ಸದಾಶಿವ
ಇವರೆಲ್ಲರ ಹಿಮ್ಮೇಳದಲ್ಲಿ ಕಳೆಯುತ್ತಿರುವಾಗ
ಎಣ್ಣೆಹನಿಸುವುದು ಅಭ್ಯಂಜನ ನಮ್ಮಲ್ಲಿಯ ಪತ್ರೊಡೆ
ಚೀನೀಕಾಯಿಯ ಸಿಹಿಗಡುಬು
ಕಣ್ ಕಣ್ ಬಿಡುತ್ತಾ ಕುಳಿತ ಬಾಜೀಬಲೀಂದ್ರ
ಹಣ್ಣಡಿಕೆ ಸಿಂಗಾರ ದನಮಾಲೆ ಹೂವು
ಭೂರಿಭೋಜನದ ಮೇಲೆ ಹುತುತು-ಕಬಡ್ಡಿ ಹೊಂಡೆಯಾಟ
ತಮಾಷೆಗೆ ಕುಸ್ತಿ ಬೈಠಕ್ಕಿನಲ್ಲಿ ತಾಳಮದ್ದಲೆ
ಯಕ್ಷಗಾನ ಕೆಲವರ ಲೋಕವನ್ನೇ ಮರೆವ ಇಸ್ಪೀಟಾಟ
ಸ್ನಾನಮಾಡಿಸಿ ಹುಬ್ಬು ಹಾಕಿ ಕೋಡಿಗೆ ಬಣ್ಣಬಳಿದು
ಚಂಡು ಹೂವಿನ ಮಾಲೆ ಚಾಟಿ ಅಡಿಕೆಸರ ಕಟ್ಟಿದಮೇಲಿನ ಗೋಪೂಜೆ
ಜಾಗಟೆ ಬಡಿದು ಓಡಿಸಿ ಗೋಮಾಳ
ಬೆದರಿದ ಹುಲ್ಲೆಗಳಂತಾದ ದನಗಳಿಗೆ
ಸಾಯಂಕಾಲ ಕೆಂಪು ಹಾನ ತೋರಿ ಕರೆತಂದು ಮತ್ತೆ
ಹಸನುಗೊಳಿಸಿದ ಕೊಟ್ಟಿಗೆಯಲ್ಲಿ ಕಟ್ಟಿ ಉಪಚಾರ
ಎಲ್ಲೆಲ್ಲೂ ಬೆಳಗುವ ದೀವಿಗೆಗಳು ಆಕಾಶಬುಟ್ಟಿ
ಒಂದೇ ಎರಡೇ ಹಲವು ಭಾವಗಳ ಭಾವಸಂಗಮ
ನಮ್ಮ ದೀಪಾವಳಿ ಅಡ್ವಾನ್ಸ್ ಆಗಿ ಹೇಳುತ್ತೇನೆ
ಎಲ್ಲರಿಗೂ ಶುಭತರಲಿ ಶುಭಾಶಯ