ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 21, 2011

ಭಾವಾಂತರಂಗದಲ್ಲಿ .........


ಭಾವಾಂತರಂಗದಲ್ಲಿ .........

ಕೆಲವೊಮ್ಮೆ ಮನಸ್ಸಿನಲ್ಲಿ ಉದ್ಭವವಾಗುವ ಭಾವಗಳನ್ನು ಹಿಡಿದಿಡಲು ಶಬ್ದಗಳು ಸಿಗುವುದೇ ಇಲ್ಲ. ಯಾಕೆಂದರೆ ನಾವೇನು ಹೇಳಬೇಕೆಂದಿರುವೆವೋ ಅದನ್ನು ನಮಗಿಂತ ಚೆನ್ನಾಗಿ ಇನ್ನೊಬ್ಬರು ಹೇಳಿರುವಾಗ ಅದನ್ನು ಓದುವಲ್ಲಿ, ಆಲಿಸುವಲ್ಲಿ ಇರುವ ಆನಂದ ಮತ್ತೆ ಅದನ್ನೇ ಬೇರೇ ಪದಗಳಲ್ಲಿ ಬರೆಯಲು ಹೊರಟಾಗ ಸಿಗುವುದಿಲ್ಲ. ಅದರಲ್ಲಂತೂ ಹಾಡುಗಳು ಘಮ್ಮನೆ ಹೊಮ್ಮಿ ಅರಳಿಸುವ ಆನಂದ ಮನದಲ್ಲಿ ಅಂತಹ ಭಾವಗಳ ಸ್ಫುರಣೆ ಜಾಸ್ತಿಯಾಗಿ ಯಾವುದೋ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುವಲ್ಲಿ ಯಶಸ್ಸು ಪಡೆದುಬಿಡುತ್ತವೆ!

ಆಗಾಗ ಅಲ್ಲಲ್ಲಿ ಓಡಾಡುವಾಗ ಇಂದಿನ ಫ್ರೀಕ್ವೆನ್ಸಿ ಮಾಡ್ಯುಲೇಟೆಡ್ ರೇಡಿಯೋಗಳಲ್ಲಿ, ಆಟೋ ಚಾಲಕನಲ್ಲಿ ಡ್ರಾಪ್ ತೆಗೆದುಕೊಳ್ಳುವಾಗ, ಕೂದಲು ಕತ್ತರಿಸಲು ಹೋಗಿ ಕ್ಯೂನಲ್ಲಿ ಕುಳಿತಾಗ/ಬ್ಯೂಟಿ ಪಾರ್ಲರಿನಲ್ಲಿ ಐಬ್ರೋ ಮಾಡಿಸಲು ಹೋದಾಗ, ಬಸ್ಸಿನಲ್ಲಿ ಪಕ್ಕದವನ ಮೊಬೈಲ್‍ನಲ್ಲಿ ಅಂತಹ ಹಾಡುಗಳು ಕೇಳಿದಾಗ, ದೂರದ ಯಾವುದೋ ಕಾರ್ಯಕ್ರಮದವರು ಧ್ವನಿವರ್ಧಕದಲ್ಲಿ ಹಾಕಿದ ಹಾಡು ಕೇಳಿದಾಗ [ಇವರು ಉತ್ತಮ ಹಾಡುಗಳನ್ನು ಹಾಕುವುದು ಅಪರೂಪ, ಇರಲಿ] , ಯಾರೋ ಚಿಕ್ಕಮಕ್ಕಳು ಶಾಲೆಗಳಲ್ಲಿ ಹಾಡುಗಳಿಗೆ ನೃತ್ಯರೂಪ ಕೊಟ್ಟಾಗ, ಭವ್ಯವೇದಿಕೆಗಳಲ್ಲಿ ಅತಿಥಿಗಳು ಆಗಮಿಸುವುದಕ್ಕೂ ಮೊದಲು ಸಭಿಕರ ಕಾಲಕ್ಷೇಪಕ್ಕಾಗಿ ಅಂತಹ ಹಾಡುಗಳನ್ನು ಹಾಕಿರುವಾಗ..... ಹೀಗೇ ಒಂದಲ್ಲ ಎರಡಲ್ಲ ಯಾಂತ್ರಿಕ ಜೀವನದ ಹಲವಾರು ಸಂದಿಗೊಂದಿಗಳಲ್ಲಿ ಅಲ್ಲಲ್ಲೇ ಬೈಟು ಟೀ ಕುಡಿದಂತೇ ಎರಡೆರಡು ಕೆಲಸಗಳನ್ನು ಒಟ್ಟಿಗೇ ಮಾಡುವ ಪರಿಪಾಟ ನಮ್ಮಂತಹ ಬಹುತೇಕರದು.

ಶಾಸ್ತ್ರೀಯ ಸಂಗೀತಗಳು ನಮ್ಮ ಮಾನಸಿಕ ನೋವನ್ನು ಕಳೆಯುತ್ತವೆ ಎಂಬುದು ಅಪ್ಪಟ ಸತ್ಯ ಮತ್ತು ಹಲವು ರಾಗಗಳು ಅನೇಕ ಕಾಯಿಲೆಗಳು ಬರದಂತೇ ತಡೆಯಲು ಪೂರಕ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಇದನ್ನು ಪದ್ಮಪಾಣಿಯಂತಹ ಸಂಗೀತ ನಿರ್ದೇಶಕರು ಅಳವಡಿಸಿ ತೋರಿಸಿದ್ದಾರೆ. ಆದರೂ ಎಲ್ಲಾ ಸರ್ತಿನೂ ಸಂಗೀತ ಕಚೇರಿಯಲ್ಲಿ ಕೂತು ಗಂಟೆಗಟ್ಟಲೆ ಕೇಳುವ ವ್ಯವಧಾನವಾಗಲೀ ಅವಕಾಶವಾಗಲೀ ಎಲ್ಲರಿಗೂ ಸಿಗುವ ಸಂಭವ ಕಡಿಮೆ. ಇರುವ ಸಮಯದಲ್ಲೇ ಹಾಗೆ ಮನರಂಜಿಸಲು ಬೇಕಾಗಿ ಹುಟ್ಟಿಕೊಂಡ ಸಂಗೀತ ಮಾರ್ಗವೇ ’ಸುಗಮ ಸಂಗೀತ.’ ಪ್ರಾಯಶಃ ಸುಗಮ ಸಂಗೀತದ ಬಳಕೆಯಾಗದಿದ್ದರೆ ಇಂದು ನಾವು ಹಲವು ಇಂತಹ ಗೀತೆಗಳನ್ನು ಇಷ್ಟು ಸುಲಲಿತವಾಗಿ ಕೇಳಲು ಆಗುತ್ತಿರಲಿಲ್ಲವೇನೋ ! ಸುಗಮ ಸಂಗೀತವೆಂಬುದು ಕನ್ನಡಕ್ಕೆ ಸಿಕ್ಕ ವರವೆಂದರೆ ತಪ್ಪಾಗಲಾರದು.

" ನಾವೆಂದೋ ಕೇಳಬೇಕೆಂದು ಬಯಸಿದ್ದ ಆ ಹಾಡು ಇಂದು ಬಂತಲ್ಲಾ " ಎಂದು ಸಹಜವಾಗಿ ಉದ್ಗಾರ ಹೊರಡುವ ಸನ್ನಿವೇಶಗಳೂ ಇವೆ. ಕೆಲವೇ ಕೆಲವು ಸೀಡಿ [ಧ್ವನಿ ಫಲಕ] ಮಾಧ್ಯಮಗಳಲ್ಲಿ ಅವುಗಳನ್ನು ಶೇಖರಿಸಿಟ್ಟು ನಾವೇ ನಾವಾಗಿ ಹಾಕಿಕೊಂಡು ಕೇಳುವಾಗ ಸಿಗದ ಮಜಾ ಅಲ್ಲಲ್ಲಿ ಚೂರುಪಾರು ಯಾರೋ ಹಾಕಿದ ಹಾಡುಗಳನ್ನು ಕೇಳಿದಾಗ ಸಿಗುತ್ತದೆ-ಅದಕ್ಕೆ ಕಾರಣ ನಮ್ಮ ಮನದ ತುಡಿತ. ಭಾವಜೀವಿಯಾದ ಮನುಜನಿಗೆ ದುಡಿಯುವ ಹಲವಾರು ದಿನಗಳಲ್ಲಿ ಕೆಲವೊಮ್ಮೆ ’ಇವತ್ತು ಏನೂ ಮಾಡುವ ಮನಸ್ಸಿಲ್ಲಾ’ ಎಂದಾಗಿರುತ್ತದೆ ಅಥವಾ ಇನ್ಯಾವುದೋ ಕಾರಣಕ್ಕೆ ಕೆಲಸಗಳಲ್ಲಿ ಜಿಗುಪ್ಸೆ ಬಂದಿರುತ್ತದೆ. ಬದುಕಿನ ಆತಂಕ, ಬೇಸರ, ಕಷ್ಟ, ನೋವು, ಭಯ ಮುಂತಾದ ಹಲವು ಸನ್ನಿವೇಶಗಳಲ್ಲಿ ಯಾವುದೋ ಕವಿ ಬರೆದ ಇಂಪಾದ ಹಾಡೊಂದು ಕಿವಿಯಮೇಲೆ ಹಾದುಹೋದರೆ ಅದು ಕೊಡುವ ಅಲ್ಪ ತೃಪ್ತಿ ಮರೆಯಲಾಗದ್ದಾಗಿರುತ್ತದೆ.

ಬೆಳಗಿನ ಜಾವ ಬೀಳುವ ಸಿಹಿಗನಸಿನಂತೇ, ನಮಗೆ ಪ್ರಿಯರಾದ ವ್ಯಕ್ತಿಗಳು ಬಂದು ಚುಂಬಿಸಿದ ಘಳಿಗೆಯಂತೇ, ಮುದ್ದಾದ ಮಗುವೊಂದು ಅಂಬೆಗಾಲಿಡಲು ಆರಂಭಿಸಿದಾಗ ಅದರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವ ಅಮ್ಮನಂತೇ, ಚಿತ್ರಬರೆದ ಕಲಾಕಾರ ದೂರನಿಂತು ಅದನ್ನೇ ಮತ್ತೆ ಮತ್ತೆ ನೋಡಿ ಆನಂದಿಸುವಂತೇ, ಗಾಯಕನೊಬ್ಬ ತನ್ನ ಗಾಯನವನ್ನೇ ಮತ್ತೆ ಮತ್ತೆ ಕೇಳಿ ಇದು ಚೆನ್ನಾಗಿ ಬಂತೆಂದು ಅಂದುಕೊಳುವಂತೇ, ದೊಡ್ಡ ವಾಣಿಜ್ಯ ಸಂಸ್ಥೆಯೊಂದನ್ನು ಕಟ್ಟಿ ಅದು ಹೆಮ್ಮರವಾಗುವುದನ್ನು ಕಂಡ ಸಂಸ್ಥೆಯ ಮೂಲಪುರುಷ/ಸ್ತ್ರೀ ಯಂತೇ ಇಲ್ಲಿನ ಸಂತಸ ಅವರ್ಣನೀಯ, ಅನಿರ್ವಚನೀಯ !

ಇಂತಹ ಅನಿಸಿಕೆಗಳನ್ನು ಹೇಳಬೇಕೆಂದರೂ ಹೇಳಲು ಸಾಧ್ಯವಾಗುವುದೇ ಇಲ್ಲ ! ತಿರುಪತಿ ನೋಡಿದ ಹಲವರು ದೇವರ ವಿಗ್ರಹ ಹೇಗಿತ್ತೆಂದು ನೇರವಾಗಿ ಹೇಳಲು ತಡಕಾಡುತ್ತಾರೆ ಹೇಗೋ, ಪ್ರಿಯತಮನ ಸುಂದರ ವದನವನ್ನು ಕದ್ದು ನೋಡಿದ ಪ್ರಿಯತಮೆಗೆ ತನ್ನ ಸಖಿಯರ ಕೂಡ ಆತನ ರೂಪಲಾವಣ್ಯವನ್ನು ವಿವರಿಸಲಾಗುವುದಿಲ್ಲ ಹೇಗೋ ಹಾಗೇ ಈ ಭಾವನೆಗಳಿಗೆ ಕಟ್ಟುಹಾಕಿ ಅವುಗಳನ್ನು ಬಂಧಿಸುವುದು ಸಾಧ್ಯವಾಗುವ ಮಾತಲ್ಲ. ಹಾಗಂತ ಅವು ನಗಣ್ಯವೆನಿಸಿದರೂ ಅವುಗಳ ವ್ಯುತ್ಫತ್ತಿಯಿಂದ ಸಿಗುವ ರಂಜನೆ ಟಿಕೆಟ್ಟು ಖರೀದಿಸಿ ಕುಳಿತು ಮೂರು ಗಂಟೆಯೋ ಆರು ಗಂಟೆಯೋ ನೋಡಿದ ಮನೋರಂಜನಾ ಕಾರ್ಯಕ್ರಮಗಳಲ್ಲಿ ಸಿಗುವಂಥದ್ದಲ್ಲ!

ಭಾವುಕರಲ್ಲಿ ಕೆಲವು ಜನ ಕವಿಗಳೂ ಇರುತ್ತಾರಲ್ಲವೇ? ತಮ್ಮ ಯಾವುದೋ ದಿನಗಳ ಯಾವುದೋ ಘಳಿಗೆಗಳ ಯಾವ್ಯಾವುದೋ ಸನ್ನಿವೇಶಗಳಲ್ಲಿ ಅಲ್ಲಿ ಹುಟ್ಟಿದ ಭಾವಗಳಿಗೆ ಜೀವ ತುಂಬುವ ಕೆಲಸವನ್ನು ಅವರು ಮಾಡಿರುತ್ತಾರೆ. ನಾನು ಈ ಮೊದಲೇ ಹೇಳಿರುವಂತೇ ಕೂಸು ಹುಟ್ಟುವ ವರೆಗೆ ಅದು ಅಮ್ಮನ ಹೊಟ್ಟೆಯೊಳಗೆ ಅಮ್ಮನಿಗೆ ಮಾತ್ರ ಸಂಬಂಧಿಸಿದ್ದು ಎನ್ನುವ ಹಾಗಿರುತ್ತದೆ- ಯಾವಾಗ ಕೂಸು ಜನಿಸಿತೋ ಅದು ಅಪ್ಪನಿಗೂ ಸುತ್ತಲ ಬಂಧುಗಳಿಗೂ ಸಂಬಂಧಿಸುತ್ತದೆ ಅಲ್ಲವೇ ? ಅದೇ ರೀತಿ ಇಂತಹ ಭಾವಗಳಿಂದ ಕವಿಯ ಮನ ಬಸಿರಾಗಿ ಕವನ ಜನಿಸುವವರೆಗೆ ಅದು ಕವಿಯ ಸ್ವಸಂತೋಷದ್ದಾಗಿರುತ್ತದೆ, ಯಾವಾಗ ಕವನ ಬರೆದು ಪ್ರಕಟಿಸಲ್ಪಟ್ಟಿತೋ ಆಗ ಆ ಕವನ ಹತ್ತಾರು ಜನರಿಗೆ ತಲುಪುತ್ತದೆ-ಸಂಬಂಧ ಬೆಳೆಯುತ್ತದೆ.

ಇಂತಹ ಕೆಲವು ಕವಿಗಳು ಬರೆದ ಕೆಲವು ಗೀತೆಗಳಂತೂ ನಿಜಕ್ಕೂ ಒಂದನ್ನೊಂದು ಮೀರಿಸುವ ಪೈಪೋಟಿಗಿಳಿಯುತ್ತವೆ. ಈ ಸಾಲಿನಲ್ಲಿ ದಿ| ಅಡಿಗರು, ದಿ| ನರಸಿಂಹ ಸ್ವಾಮಿಗಳು, ಇಂದು ನಮ್ಮ ಮಧ್ಯೆ ಇರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಎಚ್.ಎಸ್.ವೆಂಕಟೇಶ್ ಮೂರ್ತಿಗಳು, ಬಿ.ಆರ್ ಲಕ್ಷ್ಮಣರಾಯರು, ಕೆ.ಜಿ. ಶಿವಪ್ಪನವರು .....ಹೀಗೇ ಕೆಲವರನ್ನು ಮಾತ್ರ ನಾನು ಹೆಸರಿಸಿದ್ದೇನೆ...ಇನ್ನೂ ಹಲವರನ್ನು ಹೆಸರಿಸಬಹುದಾಗಿದೆ. ಅನೇಕ ಕವಿಗಳು, ಗಾಯಕ/ಗಾಯಕಿಯರು ಎಲೆಮರೆಯ ಕಾಯಿಯಂತಿದ್ದು ಕಾಣದಂತೇ ತಮ್ಮ ಕಲೆಯನ್ನು ಹಳ್ಳಿಗಳ ಮಟ್ಟದಲ್ಲೋ ತಾಲೂಕು ಮಟ್ಟದಲ್ಲೋ ಪ್ರದರ್ಶಿಸಿ ಹಾಗೇ ಅಲ್ಲಿಗೇ ನಿಂತುಬಿಡುತ್ತಾರೆ ಅಥವಾ ನಿರ್ಗಮಿಸಿಬಿಡುತ್ತಾರೆ. ಸೃಷ್ಟಿಯೊಡೆಯ ಎಲ್ಲರಿಗೂ ಸಮಾನ ಅವಕಾಶ ಕೊಡುವುದಿಲ್ಲವಲ್ಲ..ಅಂತಹ ಅವಕಾಶ ವಂಚಿತರು ತಮಗೆ ಅವಕಾಶ ಕೊಡಿ ಎಂದು ಬಡಿದಾಡುವ ಮನೋವೃತ್ತಿ ಇಲ್ಲಿ ಕಂಡುಬರುವುದಿಲ್ಲ.

ಶಿವಪ್ಪನವರೂ ಚೆನ್ನಾಗಿ ಬರೆಯುತ್ತಾರೆ ಎಂಬುದು ನನಗೆ ಮೊದಲು ಲಕ್ಷ್ಯಕ್ಕೇ ಬಂದಿರಲಿಲ್ಲ. ಅದೇರೀತಿ ಗರ್ತಿಕೆರೆ ರಾಘಣ್ಣನವರು ಚೆನ್ನಾಗಿ ಹಾಡುತ್ತಾರೆ ಎಂಬುದೂ ಸಹ ತಿಳಿದಿರಲಿಲ್ಲ. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಡಾ | ಗಣೇಶರ ಅವಧಾನ ಕಾರ್ಯಕ್ರಮದಲ್ಲಿ ಅವರು ಬಂದು ಜಾಗವಿರದಿದ್ದ ಕಾರಣ ವೇದಿಕೆಯ ಹಿಂಭಾಗ ಕುಳಿತಿದ್ದುದು ಕಂಡಿತು. ಮಧ್ಯೆ ಯಾವುದೋ ಕರೆಬಂದು ಅವರು ಎದ್ದು ಹೋಗಬೇಕಾಯಿತು-ಮಾತನಾಡಲು ಕಾದೆ ಅಂದು ಅವರು ಸಿಗಲಿಲ್ಲ. ಮತ್ತೆಂದೋ ಅವರು ಪುರಭವನದ ಪಕ್ಕ ರಸ್ತೆ ದಾಟುವಾಗ ನಾನು ಬಸ್ಸಿನೊಳಗಿದ್ದೆ-ಆಗಲಿಲ್ಲ. ಆದರೂ ಅವರನ್ನೊಮ್ಮೆ ಕಂಡು ಮಾತನಾಡುವ ಇಚ್ಛೆ ಮಾತ್ರ ಬಲವಾಗಿದೆ. ರಾಘಣ್ಣ ರಾಗವಾಗಿ ಹಾಡುವಾಗ ಬರೇ ಹಾರ್ಮೋನಿಯಂ ಮತ್ತು ತಬಲಾ ಸಾತ್ ಸಾಕು. ಅದಷ್ಟೇ ಇದ್ದರೆ ಚಂದ. ಇಂದಿನ ಕೆಲವು ಸಂಗೀತ ಕಚೇರಿಗಳಲ್ಲಿ ಹಾಡುವವರ ಸ್ವರಮಾಧುರ್ಯಕ್ಕಿಂತ ಪಕ್ಕ ವಾದ್ಯಗಳೇ ಜಾಸ್ತಿಯಾಗಿಬಿಟ್ಟಿರುತ್ತವೆ- ಹೀಗಾಗಿ ಸಂಗೀತದೊಳಗಣ ಸಾಹಿತ್ಯ ಸ್ಪಷ್ಟವಾಗಿ ಕೇಳಿಸುವುದೇ ಇಲ್ಲ. ಸಂಗೀತದ ಸಾಹಿತ್ಯವೂ ನಮ್ಮ ಕಿವಿಗೆ ತಲ್ಪಿದಾಗ ಸಿಗುವ ಪ್ರಸನ್ನ ಮನಸ್ಕ ಸ್ಥಿತಿ ಬರೇ ವಾದ್ಯಪರಿಕರಗಳಿಂದ ಸಿಗುವುದಿಲ್ಲವಲ್ಲ !

ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಎದ್ದು ಏನೋ ಕೆಲ್ಸಮಾಡುವಾಗಲೋ ಅಥವಾ ಯಾವುದೋ ಹಬ್ಬದ ಸಡಗರದ ತಯಾರಿಯಲ್ಲಿ ಬಹುಬೇಗನೇ ಎದ್ದಿರುವಾಗಲೋ ಇಂತಹ ಹಾಡುಗಳು ಉತ್ಸಾಹವನ್ನು ದ್ವಿಗುಣಗೊಳಿಸುತ್ತವೆ. ಯಾರೂ ಇಲ್ಲಾ ನೀರವ ಮೌನ ಯಾಕೋ ಬೋರು ಎಂದಾದಾಗ ಯಾರೋ ಸ್ನೇಹಿತರು ಜೊತೆಗಿದ್ದಂತೇ ಈ ಭಾವಗೀತೆಗಳು ನಮ್ಮ ಜೊತೆಯಾಗುತ್ತವೆ. ದೂರದೂರಿಗೆ ಪ್ರಯಾಣ ಹೊರಟಾಗ ದಾರಿಯುದ್ಧ ಸಾಗುವ ಸಮಯ ಪರಿಸರದ ಮಾಧುರ್ಯವನ್ನು ಅವಲೋಕಿಸುವಾಗ ಈ ಹಾಡುಗಳು ನಮ್ಮೊಡನೆ ತಂತಾನೇ ತಾಳಹಾಕುತ್ತಾ ನರ್ತಿಸುತ್ತವೆ! ಮದುವೆ, ಮುಂಜಿ ಮುಂತಾದ ಹಲವು ಸಮಾರಂಭಗಳಲ್ಲಿ ಇಂತಹ ಭಾವಗೀತೆಗಳು ತೇಲಿಬಂದರೇ ಸಂಭ್ರಮ ಕಳೆಕಟ್ಟುತ್ತದೆ. ಯಾರೋ ನಮ್ಮಂಥವರು ಹಾಡುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಿದರೂ ಹೇಳದೆಯೇ ಇದ್ದು ಆನಂದಾನುಭೂತಿ ಪಡೆವವರೇ ಅನೇಕರಿದ್ದಾರೆ; ಅದೇ ಈ ಹಾಡುಗಳಲ್ಲಿರುವ ಆಕರ್ಷಣೆ.

ನಾನು ನನ್ನ ಅನೇಕ ಮಿತ್ರರಲ್ಲಿ ಒಂದು ಮಾತು ಹೇಳಿದ್ದಿದೆ ಏನೆಂದರೆ ಹಾಡುಗಳಿಲ್ಲದ ಸಮಾರಂಭಗಳು ಎಣ್ಣೆಕಾಣದ ಕೂದಲಿರುವ ತಲೆಯಂತೇ ಬಣಬಣ ಎಂಬುದಾಗಿ. ಇನ್ನು ಸಾಯುವಾಗ ನನ್ನಲ್ಲಿ ಯಮ ನನ್ನ ಕೊನೆಯ ಆಸೆ ಕೇಳಿದರೆ ಒಂದೋ ನಾಕುದಿನ ಗಡುವು ವಿಸ್ತರಿಸು- ಕನ್ನಡದ ಒಂದಷ್ಟು ಇಂಪಾದ ಹಾಡುಗಳನ್ನು ಕೇಳಿ ಬರುತ್ತೇನೆ ಎನ್ನುತ್ತೇನೆ ಅಥವಾ ನನ್ನ ಜೊತೆಗೇ ಹಲವು ಕನ್ನಡದ ಹಾಡುಗಳ ಸೀಡಿಗಳನ್ನೂ ಮತ್ತು ಕೇಳುವ ಉಪಕರಣಗಳನ್ನೂ ತೆಗೆದುಕೊಂಡು ಹೋಗಲು ಪರ್ಮಿಶನ್ ಕೇಳುತ್ತೇನೆ! ಯಾಕೋ ನನಗೆ ಡೌಟು : ಡ್ಯೂಟಿ ಸಮಯದಲ್ಲಿ ಅದೂ ಇದೂ ಸಬೂಬು ಹೇಳಿ ಯಜಮಾನರ ಕಣ್ತಪ್ಪಿಸಿ ಮಜಾಪಡೆಯುವ ಸಂಬಳದ ಕೆಲಸಗಾರರಂತೇ ಯಮನ ದೂತರು ಭೂಮಿಗೆ ಬಂದವರು ಕೆಲಕಾಲ ಇಲ್ಲೇ ಎಲ್ಲೋ ಠಿಕಾಣಿ ಹೂಡಿ ಅಲ್ಲಿಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ಕನ್ನಡದ ಭಾವಗೀತೆಗಳನ್ನು ಮನಸಾರೆ ಕೇಳಿ ಆನಂದಿಸಿ ಆಮೇಲೆ ತಡವಾಗಿದ್ದಕ್ಕೆ ಯಮನಿಗೆ ಇನ್ಯಾವುದೋ ಕಾರಣಕೊಡುತ್ತಾರೆ ಅನ್ನಿಸುತ್ತಿದೆಯಪ್ಪ ! ನಿಜಕ್ಕೂ ಸತ್ತವ್ಯಕ್ತಿಯೂ ಎದ್ದು ಕುಳಿತು ಕಿವಿನಿಮಿರಿಸಿ ಒಮ್ಮೆ ಕೇಳಲಿಷ್ಟಪಡುವ ಹಾಡುಗಳು ನಮ್ಮಲ್ಲಿವೆ! ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಈ ಕನ್ನಡ ದೇಶಮಂ !

ಈ ಹಾಡನ್ನು ಕೇಳಿ -- ಶಿವಪ್ಪ ಕೃಷ್ಣನ ಒಳಹೊಕ್ಕು ಮಾಮರದ ಎಲೆಯಲೆಯಲ್ಲೂ ರಾಧೆಯನ್ನು ಕಾಣುವ ಪರಿ ನಿಜಕ್ಕೂ ಮನದುಂಬುತ್ತದೆ. ಅಲ್ಲೆಲ್ಲೋ ಆ ರಾಧೆ ಅವಿತುಕೊಂಡೇ ಇರಬಹುದೇನೋ ಎಂಬ ಭಾವನೆ ಉಮ್ಮಳಿಸುತ್ತದೆ.



ಅಲ್ಲಲ್ಲಿ ಕೆಲವು ಸಿನಿಮಾ ಸಾಹಿತಿಗಳೂ ಒಳ್ಳೊಳ್ಳೆಯ ಗೀತೆಗಳನ್ನು ಬರೆದಿದ್ದಾರೆ. ಆದರೂ ಯಾಕೋ ಭಾವಗೀತೆಗಳು ನೀಡುವ ವಿಶಿಷ್ಟ ಸಂತೋಷವನ್ನು ಸಿನಿಮಾ ಹಾಡುಗಳು ನೀಡುವುದಿಲ್ಲ. ಭಾವಗೀತೆಗಳು ನಮ್ಮ ಬದುಕಿನ ಮಜಲುಗಳಲ್ಲೇ ಇದ್ದು ಮನೆ ಊಟದಂತೇ ಇರುತ್ತವೆ, ಸಿನಿಮಾ ಹಾಡುಗಳು ಒಂಥರಾ ಹೋಟೆಲ್ ಊಟದ ರೀತಿ ಇದ್ದು ಯಾವಕಾಲಕ್ಕೂ ಇರುವ ಸಂಭವನೀಯತೆ ಕಡಿಮೆ! ಮನ ಗುನಗುನಿಸಲು ಇಷ್ಟಪಡುವ ಭಾವಗೀತೆಗಳಲ್ಲಿ ಅಡಿಗರ ’ಇಂದು ಕೆಂದಾವರೆಯ’, ಡೀವೀಜಿಯವರ 'ನೀಮಹಾನಂದವೇ' , ಲಕ್ಷ್ಮೀನಾರಾಯಣ ಭಟ್ಟರ 'ಯಾವುದೀ ಹೊಸಸಂಚು', 'ಮಲಗೋ ಮಲಗೆನ್ನ ಮಗುವೆ', 'ಎಲ್ಲೆ ಜಾರಿತೋ ಮನವು', ಲಕ್ಷ್ಮಣರಾಯರ 'ಅಮ್ಮಾ ನಿನ್ನ ಎದೆಯಾಳದಲ್ಲಿ', ವೆಂಕಟೇಶಮೂರ್ತಿಗಳ 'ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ', ಇನ್ನು ನರಸಿಂಹ ಸ್ವಾಮಿಗಳ ಇಡೀ ಮೈಸೂರು ಮಲ್ಲಿಗೆ ಸಂಕಲನದ ಹಾಡುಗಳು, ವರಕವಿ ಬೇಂದ್ರೆಗಳ ಹಲವು ಹಾಡುಗಳು,ಕುವೆಂಪುರವರ ಮತ್ತು ಶಿವರುದ್ರಪ್ಪನವರ ಹಲವು ಹಾಡುಗಳು ನಮಗೆ ತರುವ ಆನಂದ ಅಸದಳ. ನಮ್ಮನ್ನು ಮತ್ತೆ ಮತ್ತೆ ರಂಜಿಸುವ ಎಲ್ಲಾ ಕವಿಗಳಿಗೂ ಸಾಹಿತಿಗಳಿಗೂ ನಮಿಸುತ್ತಾ [ಸಂಬಂಧಪಟ್ಟ ಕಲಾವಿದರು, ತಾಂತ್ರಿಕವರ್ಗ, ಹಿನ್ನೆಲೆವಾದ್ಯಮೇಳ, ಸಂಗೀತ ನಿರ್ದೇಶಕರು ಎಲ್ಲರಿಗೂ ನಮ್ಮನೆನಕೆಗಳು] ಇಂಪಾದ ಎರಡು ಕವನಗಳೊಂದಿಗೆ ಇಂದಿನ ಈ ’ಭಾವಾಂತರಂಗದಲ್ಲಿ .....’ ಅನಿಸಿಕೆಗಳನ್ನು ನಿಮ್ಮ ಕೈಗಿಟ್ಟು ಕೈಮುಗಿಯುತ್ತಿದ್ದೇನೆ, ನಮಸ್ಕಾರ.