ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 24, 2010

'ಆಪ್ತ ರಕ್ಷಕ'

ಮನುಷ್ಯ ಹುಟ್ಟಿನಿಂದ ಎಲ್ಲವನ್ನೂ ಗಳಿಸಿರುವುದಿಲ್ಲ, ಪಡೆದ ಸುಕೃತದಿಂದ ಅನೇಕ ಅವಕಾಶಗಳನ್ನು ಆತ ಪಡೆದುಕೊಳ್ಳುತ್ತಾನೆ. ಎಷ್ಟೋ ಬಾರಿ ಒಳ್ಳೆಯ ಮನುಷ್ಯನೂ ಕೂಡ ತನ್ನದಲ್ಲದ ತಪ್ಪಿಗೆ ಯಾವುದೇ ತಪ್ಪು ಗ್ರಹಿಕೆಯಿಂದ ಜೀವನಪೂರ್ತಿಮಾನಸಿಕವಾಗಿ,ದೈಹಿಕವಾಗಿ ಶಿಕ್ಷೆಗೊಳಗಾಗುತ್ತಾನೆ ! ಆಧುನಿಕ ಜೀವನದ ಇಂತಹ ಒತ್ತಡಗಳಿಂದ ಸಕ್ಕರೆ ಕಾಯಿಲೆಯಂತಹದನ್ನು ಅನುಭವಿಸುತ್ತಾರೆ. ಅಂತಹ ವಿಷಮ ಪರಿಸ್ಥಿತಿಯಲ್ಲೂ ಹುಟ್ಟಿದ ಮನೆಗೂ, ಊರಿಗೂ, ರಾಜ್ಯ-ದೇಶಂಗಳಿಗೂ ಒಳಿತನ್ನೇ ಬಯಸುವಕರ್ಮಯೋಗಿಗಳಾಗಿ ಜೀವಿಸುತ್ತಾರೆ. ಬಲಗೈಯ್ಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಹಾಗೇ ಇರುತ್ತಾ ತನ್ನಿಂದಾದ ರೀತಿಯಲ್ಲಿ ದಾನ-ಧರ್ಮಾದಿ ಸತ್ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಹೇಳಲಾರದ-ಅನುಭವಿಸಲಾರದ ತನ್ನಿರವನ್ನೂ ಮೀರಿ ಉಪಕರಿಸುವ ಇಂತಹ ವ್ಯಕ್ತಿಗಳು ಬಹು ಅರ್ಥದಲ್ಲಿ ಯೋಗಿಗಳು-ಕರ್ಮಯೋಗಿಗಳು. ಅದರಲ್ಲಂತೂ ವ್ಯಕ್ತಿ ಸಿನಿಮಾ ಮಾಧ್ಯಮದ ವ್ಯಕ್ತಿಯಾದರೆ ಅವರ ವೃತ್ತಿಜನ್ಯ ಅನಿವಾರ್ಯತೆಗಳನ್ನು ಮರೆತು ಬೇರೆಯವರಿಗೆ ಆದರ್ಶವಾಗಿ, ರೋಲ್ ಮಾಡೆಲ್ ಆಗಿ ಬದುಕುವವರು ವಿರಳ-ಅತಿ ವಿರಳ. ಅವರದೇನಿದ್ದರೂ ಗಳಿಕೆ-ಪ್ರಚಾರ [Money, Name & Fame].ಜನಸಾಮಾನ್ಯರಿಗೆ ಅವರು ಲಭ್ಯರಲ್ಲ, ಪರದೆಯಮೇಲೆ ಬಿಟ್ಟು ಹಾಗೆಲ್ಲ ಕಾಣಸಿಗುವುದೂ ಇಲ್ಲ. ಇಂತಹ ಹೀರೋ ಒಬ್ಬ ನಿಜಜೀವನದಲ್ಲಿಯೂ ಹೀರೋ ಆಗಿ ಬದುಕಿ ವೀರೋದಾತ್ತ ಮರಣವನ್ನು ಪಡೆದು ಮಡಿದೂ ಬದುಕಿದ್ದಾನೆ. ಎಲ್ಲೋ ರಸ್ತೆಯಲ್ಲಿ ಹೋಗುವಾಗ ಬಡವನೊಬ್ಬ ಅಡ್ಡ ಬಂದು ಅಂಗಲಾಚಿದರೆ ಇಂಥವರೂ ಅದನ್ನು ನೋಡುವುದುಂಟೇ ಎಂಬುದಕ್ಕೆ ವಿರುಧ್ಧವಾಗಿ ಗೊತ್ತಿರದ,ಸರಿಯಾಗಿ ಆಸರೆಯಿರದ ಮುದುಕನೋರ್ವನ ಅಹವಾಲಿಗೆ ಕಟ್ಟುಬಿದ್ದು ಕಣ್ಣುಕೊಡಿಸಿದ ಆ ವ್ಯಕ್ತಿ ನಮ್ಮ ಹೆಮ್ಮೆಯ ಕನ್ನಡ ಕುವರ ದಿ| ಡಾ| ವಿಷ್ಣುವರ್ಧನ್ ! ಹೀಗೆ ಬದುಕಿದವರ ಬದುಕು ಎಲ್ಲರಿಗೂ ಆದರ್ಶವಾಗಲಿ ಎಂಬ ನನ್ಲುಡಿಯೊಂದಿಗೆ ನನ್ನ ಕವಿಹೃದಯ ಅವರಿಗೆ ನುಡಿನಮನ ಸಲ್ಲಿಸುತ್ತಿದೆ; ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬದುಕಿದರೆ 'ಆಪ್ತರಕ್ಷಕ'ರಾಗಿ ಬದುಕೋಣ ಎಂಬ ಸಂದೇಶದೊಂದಿಗೆ !


'ಆಪ್ತ ರಕ್ಷಕ'
[ಚಿತ್ರಗಳ ಋಣ : ಅಂತರ್ಜಾಲ]

ಮಾಡಿದನ ಹೊಗಳಿದರೆ ಮಾರನಾಗಲು ಬೇಡ
ಆಡಿಕೊಂಬರು ನಿನ್ನ ಮತ್ತೊಂದು ಗಳಿಗೆ
ಕಾಡದಿರಲೀ ನಿನ್ನ ಮನುಜಸಹಜದ ವಾಂಛೆ
ರೂಢಿಗುತ್ತಮನಾಗು | ಜಗದಮಿತ್ರ

ನಡೆಯುವರು ಎಡಹುವುದು ಪ್ರಕೃತಿ ಸಹಜದಧರ್ಮ
ನಡೆಯದೆಯೇ ಆಡುವುದು ಬಲು ವಿಕೃತಕರ್ಮ
ಅಡಿಯಿಡಲು ಅಂಜುತ್ತ ಹಿಂದೇಟು ಹಾಕಿದರೆ
ಪಡಪೋಶಿ ನೀನಪ್ಪೆ | ಜಗದಮಿತ್ರ

ಹಾರತುರಾಯಿಗಳು ಭಾರೀ ಭಾರವದಕ್ಕು
ವಾರದಲಿ ದಿನಬೆಳಗು ತಾನರಸಿ ಬರಲು
ಯಾರಕೃಪೆಗಾಗಿ ನೀ ಕೈಯ್ಯೊಡ್ಡದಿರು ಮುನ್ನ
ವೀರಯೋಧನ ನೆನೆಯೊ | ಜಗದಮಿತ್ರ



















ವೇಷದಲಿ
ಕಾಯುವರು ದೇಶದಂಚಲಿನಿಂತು
ಕೋಶ ಓದದೆ ಬಹಳ ನಿಸ್ವಾರ್ಥದಿಂದ
ರಾಶಿವಿದ್ಯೆಯನರಿತು ನೀನಾಗು ಉಪಕಾರಿ
ಭೂಷಣವು ನಿನಗದುವೆ | ಜಗದಮಿತ್ರ

ಆರ್ತರನು ರಕ್ಷಿಪುದು ಅತಿ ವಿಶೇಷದ ಕೆಲಸ
ಕಾರ್ತವೀರ್ಯನ ತೋಳು ನೀಡುತೀ ಜಗದಿ
ವಾರ್ತಾಲಾಪದಿ ಕಾಲಕಳೆಯದೇ ಕೈಗೊಳ್ಳು
ಪ್ರಾರ್ಥಿಸುತ ಸಂಘಟಿಸು | ಜಗದಮಿತ್ರ

ಉಡಿತುಂಬ ಗುಡಿತುಂಬ ಗಳಿಸಿ ಕೂಡಲುಬೇಡ
ಬಡಬಡಿಸಿ ಹೆದರಿಸುತ ಬಡಜನಂಗಳನು
ಒಡವೆ-ವಸ್ತ್ರವು ಬರದು ಕಡಿದಾಗ ಭೂ ಋಣವು
ಮಡಿದರೂ ಬದುಕು ನೀ | ಜಗದಮಿತ್ರ














ವ್ಯಾಪ್ತಿಯನು
ವಿಸ್ತರಿಸಿ ಸ್ನೇಹದಿಂ ಬದುಕುತಲಿ
ಪ್ರಾಪ್ತ ಕರ್ತವ್ಯದಲಿ ತನ್ಮಯತೆಯಿಂದ
ತಪ್ತ ದೇಶದ ಭೂಮಿ ವಿಸ್ತಾರಗಳಲೆಲ್ಲ
ಆಪ್ತ ರಕ್ಷಕನಾಗು | ಜಗದಮಿತ್ರ