ಉತ್ಥಾನ ಕ್ರಮ ಮತ್ತು ಸ್ನಾನಾದಿ ಶೌಚ ವಿಧಿಗಳು
[ಮನುಕುಲ ಬದುಕುವ ಅತಿ ಶ್ರೇಷ್ಠ ಹಿಂದೂ ಜೀವನ ಧರ್ಮದ ಈ ಅಧ್ಯಾಯಕ್ಕೆ ತಮಗೆಲ್ಲಾ ಆದರದ ಸ್ವಾಗತ]
ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ ||
---ವಾಲ್ಮೀಕಿ ರಾಮಾಯಣ [ಬಾಲಕಾಂಡ]
ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡು ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ. ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು ಮೇಲಿನ ಮಂಗಳಶ್ಲೋಕವನ್ನು ಹೇಳುತ್ತಾರೆ.
"ಹೇ ರಾಮಾ, ಕೌಸಲ್ಯೆ ನಿನ್ನನ್ನು ಹಡೆದು ಧನ್ಯಳಾದಳು. ಬೆಳಗಿನ ಸಂಧ್ಯಾಕಾಲ ಹತ್ತಿರವಾಗುತ್ತಿದೆ. ಎದ್ದು ಶುಚಿರ್ಭೂತರಾಗಿ ದೇವರಿಗೆ ಆಹ್ನಿಕವನ್ನು ನೀಡುವುದು ಮಾನವರಾದ ನಮ್ಮ ಕರ್ತವ್ಯ. ನರಶ್ರೇಷ್ಠನೇ ಎದ್ದೇಳು"
ದಣಿದು ನಿದ್ದೆಯಲ್ಲಿರುವ ಅಷ್ಟು ಚಿಕ್ಕ ಬಾಲಕರನ್ನು ಆ ಬೆಳಗಿನಜಾವದ ಬ್ರಾಹ್ಮೀ ಮುಹೂರ್ತದಲ್ಲಿ ಎಬ್ಬಿಸಬೇಕಿತ್ತೇ ಎಂಬುದು ಪ್ರಶ್ನೆ. ಪ್ರಕೃತಿಮಾತೆ ತನ್ನದ್ದಾದ ಕೆಲವೊಂದು ನಿಯಮಗಳನ್ನು ಪರೋಕ್ಷವಾಗಿ ತನ್ನ ಕ್ರಿಯೆಗಳಲ್ಲಿ ತಿಳಿಸುತ್ತಾ ಇರುತ್ತಾಳೆ: ನಿತ್ಯವೂ ಸೂರ್ಯ ಹುಟ್ಟುವ ಅದೆಷ್ಟೋ ಸಮಯಕ್ಕೇ ಮೊದಲು ಭೂಭಾಗಕ್ಕೆ ಬೆಳಕು ಬರಲು ಆರಂಭವಾಗುತ್ತದೆ! ಆಗಲೇ ಹಕ್ಕಿಗಳು ಎಚ್ಚೆತ್ತುಕೊಂಡು ತಮ್ಮ ಗೂಡುಗಳಿಂದ ಹೊರಕ್ಕೆ ಬಂದು ಮಧುರಸ್ವರಗಳಿಂದ ಹೊಸದಿನವನ್ನು ಸ್ವಾಗತಿಸುವ ಹಾಡುಗಳನ್ನು ಹಾಡುತ್ತಾ ಆಕಾಶದಲ್ಲಿ ಹಾರಾಡುತ್ತವೆ. ಯೋಗಿಗಳಿಗೆ, ಕವಿಗಳಿಗೆ, ತತ್ತ್ವ ಚಿಂತಕರಿಗೆ ಮತ್ತು ತಮ್ಮ ಜೀವನವನ್ನು ಸಫಲಗೊಳಿಸಲು ಬಯಸುವ ಎಲ್ಲಾ ಸಾಧಕರಿಗೆ ಪ್ರಕೃತಿಯು " ಇಗೋ ನಿಮಗೆ ಸ್ಫೂರ್ತಿಯ ಮತ್ತು ಶಕ್ತಿಯ ಕಾಲ ಇದು ಏಳಿ, ಎದ್ದೇಳಿ " ಎಂದು ಸೂಚಿಸುತ್ತಾಳೆ.
ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನೆ ಎರಕಾವ ಹೊಯ್ದ
ಬಾಗಿಲು ತೆರೆದು ಬೆಳಕೂ ಹರಿದೂ ಜಗವೆಲ್ಲಾ ತೊಯ್ದ
ದೇವನಾ ಜಗವೆಲ್ಲಾ ತೊಯ್ದ
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು.....
ವರಕವಿ ಬೇಂದ್ರೆ ತಮ್ಮ ಪ್ರಾತಃಕಾಲದ ಕವನದಲ್ಲಿ ಹೀಗೆ ಉದ್ಗರಿಸಿದ್ದಾರೆ ಅಲ್ಲವೇ? ವೈಜ್ಞಾನಿಕವಾಗಿ ನಾವು ತರ್ಕಿಸಿದಾಗ ಬ್ರಾಹ್ಮೀ ಮುಹೂರ್ತದಲ್ಲಿ ಓಝೋನ್ ಪದರ ಭೂಮಿಯ ಹತ್ತಿರಕ್ಕೆ ಇಳಿದಿರುತ್ತದೆ. ಅದರಿಂದ ತೃಪ್ತವಾದ ಗಿಡ-ಮರಗಳು, ಮಾನವ ದೇಹವೆಂಬೀ ದೇಶಕ್ಕೆ ಬೇಕಾದ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತವೆ. ಹೊರಗೆ ಅಡ್ಡಾಡಿ ಶುದ್ಧಹವೆಯನ್ನು ಸೇವಿಸಬೇಕು ಎಂದು ಹೇಳುವುದು ಇದೇ ಕಾರಣಕ್ಕೆ. ಪ್ರಾತರ್ವಿಧಿಯಲ್ಲಿ ನಿತ್ಯ ಚಾರಣದ ಅಲ್ಪ ಭಾಗವೂ ಸೇರಿದೆ.
ಹೊತ್ತಾರೆ ಎದ್ದು ಅಗ್ಗವಣಿ ಪತ್ತರೆಯ ತಂದು
ಹೊತ್ತು ಹೋಗುವ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯು ಒಯ್ಯುವ ಮುನ್ನ
ತೊತ್ತುಗೆಲಸವ ಮಾಡು ಕೂಡಲ ಸಂಗಮದೇವ -----ಶ್ರೀ ಬಸವೇಶ್ವರ
"ಬೆಳಗಿನ ಜಾವದ ಅಮೃತ ಘಳಿಗೆಯಲ್ಲಿ ಪರಮೇಶ್ವರನ ದಿವ್ಯ ಭಂಡಾರದ ಬಾಗಿಲು ತೆರೆದಿರುವುದು. ಅದೃಷ್ಟಶಾಲಿಗಳು ಆಗ ಎದ್ದು ತಮಗೆ ಬೇಕಾದಷ್ಟು ರತ್ನಗಳನ್ನು ದೋಚಿಕೊಳ್ಳಬಹುದು, ಮೂರ್ಖರು, ಸೋಮಾರಿಗಳು ಮತ್ತು ಭಾಗ್ಯಹೀನರು ಮಾತ್ರ ಆಗ ಮಲಗಿರುವರು" ----ಗುರು ನಾನಕ್
ಬ್ರಾಹ್ಮೇ ಮುಹೂರ್ತೇ ಉತ್ಥಾಯ ವಾರ್ಯುಪಸ್ಪ್ಮಶ್ಯ ಮಾಧವಃ |
ದಧ್ಯೌ ಪ್ರಸನ್ನಕರಣ ಸ್ವಾತ್ಮಾನಂ ತಮಸಃ ಪರಂ ||
------- ಶ್ರೀಮದ್ಭಾಗವತ
ಮಾಧವನು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ನೀರಿನಿಂದ ಶುದ್ಧಿಮಾಡಿಕೊಂಡನು. ತಮಸ್ಸಿನಿಂದ [ಶರೀರ ಪ್ರಕೃತಿಯಿಂದ]ಆಚೆಗೆ ಇರುವ ಬೆಳಕಿನ ರೂಪವಾದ ತನ್ನ ಆತ್ಮವನ್ನು ಧ್ಯಾನಿಸಿದನು ಎಂದು ವ್ಯಾಸರು ಶ್ರೀಕೃಷ್ಣನ ಉತ್ಥಾನಕ್ರಮವನ್ನು ವರ್ಣಿಸಿದ್ದಾರೆ. ಸೂರ್ಯನು ಹುಟ್ಟುವಾಗ ಇನ್ನೂ ಮಲಗಿರುವವರನ್ನು ’ಅಭ್ಯುದಿತ’ರೆಂದೂ ಸೂರ್ಯನು ಮುಳುಗುವಾಗ ಮಲಗಿರುವವರನ್ನು ’ಅಭಿನಿರ್ಮುಕ್ತ’ರೆಂದೂ ಧರ್ಮಶಾಸ್ತ್ರ ತಿಳಿಸಿ ಅವರನ್ನು ನಿಂದ್ಯರೆಂದು ತೀರ್ಮಾನಿಸಿದೆ. ಹಾಗಾದರೆ ಉಷಃಕಾಲ ಎಂದರೆ ಯಾವುದು ? ಸೂರ್ಯನು ಹುಟ್ಟುವುದಕ್ಕೆ ೫ ಘಳಿಗೆಗಳಷ್ಟು ಮುಂಚಿನಕಾಲ ಉಷಃಕಾಲವೆಂದು ಪರಿಗಣಿತವಾಗಿದೆ. ಒಂದು ಘಳಿಗೆಗೆ ೨೪ ನಿಮಿಷಗಳು ಅಂದರೆ ೫ x ೨೪ = ೧೨೦ ನಿಮಿಷಗಳು ಅರ್ಥಾತ್ ಎರಡುಗಂಟೆಗಳ ಕಾಲ. ಅರುಣೋದಯ ಕಾಲ ಎಂದರೆ ಸೂರ್ಯೋದಯಕ್ಕೂ ೪ ಘಳಿಗೆಗಳು ಮುಂಚಿನ ಕಾಲ ಅಂದರೆ ೪ x ೨೪= ೯೬ ಅರ್ಥಾತ್ ಒಂದು ಗಂಟೆ ಮೂವತ್ತಾರು ನಿಮಿಷಗಳು. ಉಷಃಕಾಲದಿಂದ ಅರುಣೋದಯ ಕಾಲದ ಒಳಗಿನ ಸಮಯವೇ ನಾವು ಏಳಬೇಕಾದ ಬ್ರಾಹ್ಮೀ ಮುಹೂರ್ತ! ಕಷ್ಟಪಟ್ಟು ಹಾಗೆ ಏಳಲು ರೂಢಿಮಾಡಿಕೊಳ್ಳಬೇಕು. ಸಾಧ್ಯವಿಲ್ಲವಾದರೆ ಸೂರ್ಯನು ಹುಟ್ಟುವ ಒಂದು ಗಂಟೆಗೆ ಮೊದಲಾದರೂ ಏಳಬೇಕು, ಅದೂ ಆಗದಿದ್ದರೆ ಕೊನೇಪಕ್ಷ ಸೂರ್ಯನ ಜೊತೆಗಾದರೂ ಏಳಬೇಕು. ಇವನ್ನು ಉತ್ತಮ, ಮಧ್ಯಮ ಮತ್ತು ಅಧಮ ಕಲ್ಪಗಳೆಂದು ಗುರುತಿಸಲಾಗಿದೆ. ಸೂರ್ಯ ಹುಟ್ಟಿದ ನಂತರವೂ ಮಲಗೇ ಇರುವುದು ಪ್ರಕೃತಿ ನಿಯಮಕ್ಕೆ ವಿರುದ್ಧವಾದುದು.
ಆರೋಗ್ಯವಂತನಾದ ವಯಸ್ಕನಿಗೆ ೬-೭ ಗಂಟೆಗಳ ಕಾಲದ ನಿದ್ದೆ ಸಾಕಾಗುತ್ತದೆ. ಬೇಗ ಮಲಗಿ ಬೇಗ ಏಳಬೇಕಾದುದು ಉತ್ತಮ. ಹರಟೆ, ಮನೋರಂಜನೆ, ಅಧ್ಯಯನ, ಬರವಣಿಗೆ ಈ ಯಾವುದೇ ಕಾರಣಕ್ಕಾಗಿಯೂ ಬೇಗ ಮಲಗುವುದನ್ನು ಮುಂದೂಡುತ್ತಾ ಬೆಳಿಗ್ಗೆ ಬೇಗ ಏಳುವುದನ್ನು ತಪ್ಪಿಸಿಕೊಳ್ಳುವುದು ದುರಭ್ಯಾಸವಾಗಿದೆ. ಬೆಳಗಿನಜಾವದ ಒಂದು ಗಂಟೆಯು ರಾತ್ರಿಯ ಎರಡುಗಂಟೆಗಳಿಗೆ ಗುಣದಲ್ಲಿ ಸಮ, ಬುದ್ಧಿವಂತನು ೧೦ ರೂಪಾಯಿ ಬದಲಿಗೆ ೫ ರೂಪಾಯಿ ಪಡೆದು ತೃಪ್ತನಾಗುವನೇ ಎಂದುಕೊಳ್ಳುತ್ತಾ ಬೇಗನೇ ಮಲಗಿ ತಡವಾಗಿ ಏಳುವವರೂ ಇದ್ದಾರೆ-ಇದೂ ಕೂಡ ಸಲ್ಲ. ರಾತ್ರಿ ಮಲಗುವಾಗ ಎಡಮಗ್ಗುಲಾಗಿ ಮಲಗಬೇಕು; ಆಹಾರ ತುಂಬಿದ ಜಠರದ ಭಾಗ ತಲೆಕೆಳಗಾಗಿ ಜೀರ್ಣಕ್ರಿಯೆಗೆ ತೊಂದರೆಯಾಗಬಾರದು, ನಂತರ ನಿದ್ದೆಯಲ್ಲಿ ಅಂಗಾತ ಮಲಗುತ್ತೇವೆ, ಮಗ್ಗುಲುಗಳನ್ನು ಬದಲಾಯಿಸುತ್ತೇವೆ. ಬೆಳಿಗ್ಗೆ ಏಳುವಾಗ ಬಲಮಗ್ಗುಲಲ್ಲೇ ಏಳಬೇಕು. ಎದ್ದು ಕುಳಿತು ಅಂಗೈಗಳನ್ನು ಉಜ್ಜಿಕೊಂಡು ಅವುಗಳನ್ನು ನಮ್ಮ ಮುಖದ ಮುಂದೆ ಹಿಡಿದು ನೋಡಿಕೊಳ್ಳಬೇಕು. ಎದ್ದಕಾಲಕ್ಕೆ ನಮ್ಮ ಅಂಗೈಗಳಲ್ಲಿ ಶಕ್ತಿತುಂಬಿರುತ್ತದೆ. ಮುಖಕ್ಕೆ ಆ ಶಕ್ತಿಯ ವರ್ಗಾವಣೆ ಆಗುವುದರಿಂದ ಕಣ್ಣು ತೇಜಸ್ಸನ್ನು ಪಡೆಯುತ್ತದೆ ಮತ್ತು ಹೊರಜಗತ್ತಿನ ಬೆಳಕಿಗೆ ತನ್ನನ್ನು ಹೊಂದಿಸಿಕೊಳ್ಳಲು ಕಣ್ಣಿಗೆ ಇದು ಪೂರಕವಾಗಿರುತ್ತದೆ.
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ ||
ಇದೊಂದು ಅರ್ಥಹೀನ ಮೂಢನಂಬಿಕೆಯಲ್ಲ! ಶ್ರೇಷ್ಠವಾದ ಭಾವವನ್ನು ಒಳಗೊಂಡ ಸಾಂಕೇತಿಕ ಕ್ರಿಯೆ. . ಲಕ್ಷ್ಮಿ ಎಂದರೆ ಸಂಪತ್ತು-ಚಂಚಲವಾಗಿದ್ದು ಬೆರಳ ತುದಿಯಲ್ಲಿನ ವಸ್ತುವಿನಂತೇ ಜಾರಿಹೋಗಬಹುದು, ಎಚ್ಚರವಿರಲಿ ಎಂಬ ಭಾವ. ಸರಸ್ವತಿ ಎಂದರೆ ಕೈಯ ಮಧ್ಯಭಾಗವಾಗಿದ್ದು ಅದು ಸ್ಥಿರವಾದುದು ಮತ್ತು ವ್ಯಕ್ತಿಗೆ ಸತತವಾಗಿ ಆಧಾರವಾದುದು ಅದನ್ನು ಗಟ್ಟಿಯಾಗಿ ಹಿಡಿದುಕೋ ಎಂಬ ಭಾವ. ಗೌರೀ ಎಂದರೆ ಹಿಂದೆ ವ್ಯಕ್ತಿ ಮಾಡಿದ ಕರ್ಮಗಳ ಫಲ- ಅದು ಈಗಿನ ಇರುವಿಕೆಗೆ ಮೂಲಕಾರಣವಾಗಿ ಆಧಾರವಾಗಿದೆ ಎಂಬ ಭಾವ. ಇನ್ನು ಒಳಗಿನ ಭಾವ ಬಹಳ ಗಹನವಾದುದು! ನಮ್ಮ ಕೈಗಳಲ್ಲಿಯೇ ಭಗವಂತನ ಸನ್ನಿಧಾನವಿದೆ. ಈ ಕೈಗಳಿಂದಲೇ ದೇವನು ಶ್ರೇಷ್ಠವಾದ ಮತ್ತು ಲೌಕಿಕ ಕರ್ಮಗಳನ್ನು ಮಾಡಿಸಲಿ. ಅವನ ಅನುಗ್ರಹದಿಂದ ಈ ಕೈಗಳಿಗೆ ಐಶ್ವರ್ಯವು ಬಂದು ಸೇರಲಿ. ಕೈಗಳಿಂದ ಮಾಡಲಾಗುವ ಕಠಿಣ ಪರಿಶ್ರಮವೇ ಎಲ್ಲಾಬಗೆಯ ರೋಗಗಳಿಗೂ ಮದ್ದು ಇದ್ದಂತೆ. ಇದರಿಂದ ನಾವು ಯಾರನ್ನಾದರೂ ಮುಟ್ಟಿದರೂ ಅಷ್ಟರಿಂದಲೇ ಅವರಿಗೆ ಮಂಗಳವಾಗುವ ದಿವ್ಯ ಶಕ್ತಿ ಕೈಗಳಿಗೆ ಲಭಿಸಲಿ ಎಂಬ ಪ್ರಾರ್ಥನೆ ಕೂಡ ಇದಾಗಿದೆ. ಮಹರ್ಷಿ ರಮಣರು, ರಾಮಕೃಷ್ಣ ಪರಮಹಂಸರು ಮೊದಲಾದವರು ತಮ್ಮ ಕೈಗಳಲ್ಲಿ ಆ ದಿವ್ಯತ್ವವನ್ನು ಹೊಂದಿದ್ದರು, ಇದು ಕೇವಲ ಉದಾಹರಣೆ, ಇಂತಹ ಅಸಂಖ್ಯ ಮಹಿಮಾನ್ವಿತರು ಭಾರತದಲ್ಲಿ ಆಗಿಹೋಗಿದ್ದಾರೆ-ಈಗಲೂ ಇದ್ದಾರೆ! ಅದಕ್ಕೇ ಗುರುಸ್ಥಾನ[ತಪಸ್ವಿ-ಸಾಧಕರುಗಳಿಂದ]ದಲ್ಲಿ ಇರುವವರಿಂದ ವಂದನೆ ಸ್ವೀಕರಿಸಬಾರದು, ಆಶೀರ್ವಾದ ಗ್ರಹಣಮಾಡಬೇಕು. ಸಾಮಾನ್ಯವಾಗಿ ಅದಕ್ಕೇ ದೇವಮೂರ್ತಿಗಳಲ್ಲಿ, ತಪಸ್ವಿಗಳ ಭಾವಚಿತ್ರಗಳಲ್ಲಿ ಬಲಗೈ ಎತ್ತಿ ಆಶೀರ್ವದಿಸುವುದನ್ನು ಕಾಣಬಹುದಾಗಿದೆ.
ಅನಂತರ ಜಲ-ಮಲ-ವಿಸರ್ಜನೆ, ದಂತಧವನ ಅಥವಾ ದಂತಶೋಧನ[ಹಲ್ಲುಜ್ಜುವಿಕೆ], ಜಿಹ್ವಾಶೋಧನ[ಬಲಗೈ ಮಧ್ಯದ ಮೂರು ಬೆರಳುಗಳಿಂದ ನಾಲಿಗೆ ತಿಕ್ಕಿ ತೊಳೆಯಬೇಕು], ಕೈಕಾಲು-ಮುಖಗಳ ಮಾರ್ಜನ ಇವು ನಡೆಯಬೇಕು.ಈ ಕ್ರಿಯೆಗಳಿಗೆಲ್ಲಾ ಶುದ್ಧ ತಣ್ಣೀರನ್ನೇ ಬಳಸಬೇಕು. ಎರಡು ಕಣ್ಣು, ಎರಡು ಕಿವಿ, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಕೆಳಗಿನ ಎರಡು ದ್ವಾರಗಳು ಇವುಗಳನ್ನು ಶುದ್ಧ ನೀರಿನಲ್ಲಿ ತಿಕ್ಕಿ ತೊಳೆದಾಗ, ರಾತ್ರಿಕಾಲದಲ್ಲಿ ಅಲ್ಲಿ ಸೇರಿರಬಹುದಾದ ಮಲಗಳು ಹೋಗಿ ಅವು ಚುರುಕಾಗುತ್ತವೆ; ಶರೀರವು ಅನಾಯಾಸವಾಗಿ ಮುಂದಿನ ಕೆಲಸಗಳಿಗೆ ಅಣಿಯಾಗುತ್ತದೆ.
ಆ ನಂತರ ಕಪಿಲ[ಕಂದು, ಕೌಲು]ಬಣ್ಣದ ಹಸು[ಹಸು ಯಾವುದೇ ಬಣ್ಣದ್ದಾದರೂ ಪರವಾಗಿಲ್ಲ, ಅಂತೂ ಹಸುವನ್ನು ನೋಡಬೇಕು], ಕನ್ನಡಿ[ಕನ್ನಡಿಯಲ್ಲಿ ನಮ್ಮ ಮುಖ ದರ್ಶನಮಾಡಿಕೊಂಡು ದಿನದಿನವೂ ಕಾಣಬಹುದಾದ ವ್ಯತ್ಯಾಸಗಳನ್ನು ಅರೆನಿಮಿಷ ಗ್ರಹಿಸಬೇಕು], ಸೂರ್ಯ, ಭಾಗ್ಯವಂತ[ಪುಣ್ಯಶಾಲಿ: ಸಾಧು, ಸಂತ, ಸಜ್ಜನ], ರಾಜ[ಅಧಿಕಾರಿ], ವಿದ್ಯಾಗುರು, ಮತ್ತು ಪತಿವ್ರತಾ ಸ್ತ್ರೀ ಇವರನ್ನು ನೋಡುವುದು ಒಳ್ಳೆಯದೆಂದು ಶಾಸ್ತ್ರ ಹೇಳುತ್ತದೆ. ಸಮಯಕ್ಕೆ ಅವರು ಸಿಗದಿದ್ದರೆ ಹುಡುಕಿಕೊಂಡು ಹೋಗಬೇಕೆಂದು ಅರ್ಥವಲ್ಲ, ಸ್ಮರಣೆಯೂ ಸಾಕು.
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ ||
ಪತಿವ್ರತೆಯರಾದ ಅಹಲ್ಯೆ, ದ್ರೌಪದಿ, ಸೀತೆ, ತಾರಾ ಮತ್ತು ಮಂಡೋದರಿ ತಮ್ಮ ಪತಿವ್ರತಾ ಧರ್ಮದಿಂದ ಜಗತ್ತನ್ನೇ ಬೆರಗುಗೊಳಿಸಿದರು, ಮಾರುವೇಷದಲ್ಲಿ ತಮ್ಮನ್ನು ಪರೀಕ್ಷಿಸಲು ಬಂದ ದೇವ-ದೈವತಕ್ಕೇ ಸವಾಲೆಸೆದರು. ತಮ್ಮ ಪತಿವ್ರತಾ ಧರ್ಮದ ಪಾಲನೆಗಾಗಿ ಅವರು ಅನೇಕ ಸಂಕಷ್ಟಗಳನ್ನು ಎದುರಿಸಿದರೂ ಧರ್ಮಮಾರ್ಗಿಗಳಾಗಿ ಅವುಗಳನ್ನು ನಿವಾರಿಸಿಕೊಳ್ಳುವಲ್ಲಿ ಯಶಸ್ಸು ಪಡೆದರು, ಲೋಕಮಾನ್ಯರಾದರು. ಅಂಥಾ ಪತಿವ್ರತೆಯರನ್ನು ನೆನೆದರೂ ಸಹಿತ ಅದು ಪುಣ್ಯದ ಕೆಲಸ ಎಂಬುದು ಧರ್ಮದ ನೀತಿಸಾರ.
ಪ್ರಾತಃಕಾಲದಲ್ಲಿ ಪಠಿಸಬಹುದಾದ ಸ್ತುತಿಗಳು ಬಹಳ ಇವೆ. ನಮ ಇಷ್ಟದೇವತೆ, ಕುಲದೇವತೆ, ಗುರುಪರಂಪರೆ, ಅಭಿರುಚಿ ಮತ್ತು ಕಾಲಾವಕಾಶ ಅನುಸರಿಸಿ ಆಯ್ಕೆಮಾಡಿಕೊಳ್ಳಬಹುದು. ಪುಣ್ಯಾತ್ಮರು ಗಮಕಿಗಳು ಅಲ್ಲಲ್ಲಿ ಮಂಗಳಾಷ್ಟಕಗಳನ್ನು ಹಾಡುತ್ತಿದ್ದರೆ ಅದನ್ನು ಆಲೈಸಿದರೇ ಸಾಕು. ಉದಯರಾಗ ಭೂಪಾಲಿಯಲ್ಲಿ ಅವರು ಹಾಡುವಾಗ ಮನಸ್ಸು ಮುದಗೊಳ್ಳುತ್ತದೆ, ಎಲ್ಲಿಲ್ಲದ ಉತ್ಸಾಹ ಆವರಿಸಿಕೊಳ್ಳುತ್ತದೆ. ಮನಸ್ಸು ಆಹ್ಲಾದಕರ ಸ್ಥಿತಿಯನ್ನು ಅನುಭವಿಸುತ್ತದೆ.
ಉಷಃಪಾನ : ಆಯುರ್ವೇದದಲ್ಲಿ ಉಷಃಪಾನ ಎಂಬ ಕ್ರಿಯೆಗೆ ಬಹಳ ಮಹತ್ವವಿದೆ. ಚೆನ್ನಾಗಿ ತಿಕ್ಕಿ ತೊಳೆದ ತಾಮ್ರದ ಪಾತ್ರೆಯಲ್ಲಿ ಅಥವಾ ಮಣ್ಣಿನ ಮಡಿಕೆ/ಹೂಜಿಯಲ್ಲಿ ಹಿಂದಿನರಾತ್ರಿ ಸುಮಾರು ಅರ್ಧ ಲೀಟರಿನಷ್ಟು ನೀರನ್ನು ತುಂಬಿ ಇಡಬೇಕು. ಬೆಳಿಗ್ಗೆ ದೇಹಶುದ್ಧಿಯಾದ ನಂತರ ಬೇರೇ ಏನನ್ನೂ ಸ್ವೀಕರಿಸುವ ಮೊದಲು ಆ ನೀರನ್ನು ಕುಡಿಯಬೇಕು. ದೈಹಿಕ ಅನಾರೋಗ್ಯವೇನಾದರೂ ಇದ್ದರೆ ಆ ನೀರಿನ ಬದಲಿಗೆ ವೈದ್ಯರು ಹೇಳುವ ದಾಕ್ಷಿ, ಕಲ್ಲುಸಕ್ಕರೆ, ಕೊತ್ತಂಬರಿ ಬೀಜ ಇತ್ಯಾದಿ ಸೇವಿಸಬಹುದು.
ನಂತರ ವ್ಯಾಯಾಮ ಮತ್ತು ಸ್ನಾನ--ಈ ಎರಡರಲ್ಲಿ ಯಾವುದು ಮೊದಲು? ಮಂತ್ರ ಪಠನೆಮಾಡುತ್ತಾ ಉಪಾಸನೆಯಾಗಿ ಯೋಗಾಸನ ಮತ್ತು ಸೂರ್ಯನಮಸ್ಕಾರಗಳನ್ನು ಮಾಡುವುದಾದರೆ ಮೊದಲು ಸ್ನಾನ ನಂತರ ವ್ಯಾಯಾಮ. ವ್ಯಾಯಾಮದಿಂದ ಆಗುವ ಉಷ್ಣತೆ, ಬೆವರು, ಮೂತ್ರಗಳನ್ನು ಹೊರಹಾಕಿ ದೇಹವನ್ನು ತಂಪಾಗಿಸಿ ಶುದ್ಧಗೊಳಿಸಲು ಸ್ನಾನ ಅನುಕೂಲಿಸುತ್ತದೆ. ಅವರವರ ಅನುಕೂಲಗಳನ್ನು ನೋಡಿಕೊಂಡು ಆಚರಿಸುವ ಸ್ವಾತಂತ್ರ್ಯ ಅವರವರಿಗಿದೆ. ಸ್ನಾನ ಮಾಡಿ, ಯೋಗೋಪಾಸನೆ ಸೂರ್ಯನಮಸ್ಕಾರ ಮಾಡಿ ಮತ್ತೆ ಸ್ನಾನಮಾಡುವ ಮಂದಿಯೂ ಇದ್ದಾರೆ. ಸ್ನಾನ ಹೆಚ್ಚಿದಷ್ಟೂ ದೇಹದ ಶುದ್ಧಿ ಹೆಚ್ಚುತ್ತದೆ, ಮನ ನಿರ್ಮಲಭಾವ ತಾಳಲು ಅನುಕೂಲವಾಗುತ್ತದೆ.
ಏಹೀ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಯ ಮಾಂ ಭಕ್ತ್ಯಾ ಗೃಹಾಣಾರ್ಘ್ಯಂ ದಿವಾಕರ ||
ಈ ರೀತಿಯಾಗಿ ಹೇಳುತ್ತಾ ಜಗತ್ತಿಗೆ ಕಾಣುವ ಪ್ರತ್ಯಕ್ಷ ದೈವವಾದ ಸೂರ್ಯನಿಗೆ ಬೊಗಸೆಯಲ್ಲಿ ಶುದ್ಧಜಲವನ್ನು ತುಂಬಿಸಿಕೊಂಡು ಚೆಲ್ಲುವುದು ವಿಹಿತವಾದುದಾಗಿದೆ. [ಹೇ ಸೂರ್ಯ ಸಹಸ್ರಾಂಶು ತೇಜೋರಾಶಿಯಾದ ಜಗತ್ಪತಿಯೇ ಇದೋ ನಿನಗೆ ನನ್ನ ಅರ್ಘ್ಯ, ನನ್ನಮೇಲೆ ಅನುಕಂಪಿತನಾಗಿ ದಯಮಾಡಿ ಸ್ವೀಕರಿಸು] ನಂತರ ಸೂರ್ಯ ನಮಸ್ಕಾರಾದಿ ಯೋಗ-ಪ್ರಾಣಾಯಾಮಗಳನ್ನು ನಡೆಸಬೇಕು[ಗುರುಮುಖೇನ ಪ್ರಮಾಣಬದ್ಧವಾಗಿ ಕಲಿತುಕೊಂಡು] ಆ ನಂತರ ಬೆಳಗಿನ ತಂಪಾದ ಹವೆಯಲ್ಲಿ ಸ್ವಲ್ಪಕಾಲ ಚುರುಕಾಗಿ ಓಡಾಡುವುದು ’ಚಂಕ್ರಮಣ’ ಎನಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಅಶ್ವತ್ಥವೃಕ್ಷ, ಬಿಲ್ವ, ಮುತ್ತುಗ, ಅಗಸೆ, ತುಳಸಿ ಈ ಗಿಡಮರಗಳ ಸಾಮೀಪ್ಯದಲ್ಲಿ ಸುತ್ತುವುದು ಆರೋಗ್ಯದಾಯಕ[ಇವೆಲ್ಲಾ ನಮ್ಮ ದೇಹಕ್ಕೆ ಬೇಕಾದ ಶುದ್ಧ ಔಷಧೀಯ ಗುಣವುಳ್ಳ ಆಮ್ಲಜನಕವನ್ನು ಹೇರಳವಾಗಿ ಹೊರಸೂಸುತ್ತವೆ ಬೇರೇ ರೀತಿಯ ವ್ಯಾಯಾಮ ಮಾಡಲಾಗದ ಇಳಿವಯಸ್ಸಿಗರಿಗೆ ಇದು ಒಳ್ಳೆಯದು. ಮನೆಯಲ್ಲಿ ತಂದೆ-ತಾಯಿ ಮತ್ತು ಇನ್ನುಳಿದ ಹಿರಿಯರಿಗೆ [ಅಥವಾ ಅವರ ಭಾವಚಿತ್ರಗಳಿಗೆ] ತಲೆಬಾಗಿ, ಬೆನ್ನು ಬಗ್ಗಿಸಿ ಕಾಲುಮುಟ್ಟಿ ನಮಿಸುವುದು ಬೆಳಿಗ್ಗೆ ಮಾಡಬೇಕಾದ ಇನ್ನೊಂದು ಕರ್ತವ್ಯ. ಅವರು ತುಂಬಿಬಂದ ಹೃದಯದಿಂದ ಮಾಡುವ ಅಶೀರ್ವಾದಗಳು ಆ ದಿನವಿಡೀ ನಮಗೆ ಶ್ರೀರಕ್ಷೆ.
One must remember :
Early to bed and early to rise
Makes man healthy, wealthy and wise
and also
A thing well-begun is half done
ಸ್ನಾನದ ಬಗ್ಗೆ ಗಮನಹರಿಸೋಣ
------------------------------
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿಸ್ತಥಾ |
ಆಗಚ್ಛಂತು ಪವಿತ್ರಾಣಿ ಸ್ನಾನಕಾಲೇ ಸದಾ ಮಮ ||
[ಪೂರ್ವದಲ್ಲಿ ನದಿಗಳು, ಸರೋವರಗಳು ಇಂದಿನ ದಿನಗಳಲ್ಲಿ ಕಾಣುವಂತೇ ಕಲ್ಮಷಗೊಂಡಿರಲಿಲ್ಲ; ಕಾರಣವಿಷ್ಟೇ ತಾನು ಬಳಸುವ ಸಾರ್ವಜನಿಕ ಸ್ವತ್ತನ್ನು ತನ್ನಂತೆಯೇ ಬಳಸಬಹುದಾದ ಇತರರಿಗೂ ಅದು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಉಪಲಬ್ಧವಾಗುವ ಹಾಗೇ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಪೂರ್ವಜರಿಗಿತ್ತು. ಉದ್ದಿಮೆಗಳ, ವಸಾಹತುಗಳ, ವಸತಿ ಸಮುಚ್ಛಯಗಳ ಮಲಿನ ನೀರು/ಕಲ್ಮಷ ಪದಾರ್ಥಗಳು ನದಿಯನ್ನೋ ತೊರೆಯನ್ನೋ ಸರೋವರ ಪುಷ್ಕರಣಿಗಳನ್ನೋ ಸೇರಲು ನಮ್ಮ ಜನ ಬಿಡುತ್ತಿರಲಿಲ್ಲ. ಇವತ್ತು ಯಾರಿಗೂ ಆ ಸಾಮಾಜಿಕ ಜವಾಬ್ದಾರಿ ಉಳಿದಿಲ್ಲ, ರಾಜರುಗಳಿಲ್ಲದ ಊರುಗಳಲ್ಲಿ ಅರಾಜಕತೆ ಈ ಅರ್ಥದಲ್ಲಿ ಕಾಣುತ್ತದೆ. ಇಂದಿರುವ ಪ್ರಜಾರಾಜ್ಯದಲ್ಲಿ ಖೂಳರುಗಳೇ ಆಳರಸರಾಗಿ ಆಳುವುದರಿಂದ ಮತ್ತು ಅವರೆಲ್ಲರಿಗೂ ಅವರವರ ’ಸ್ಥಾನ ಭದ್ರತೆಯನ್ನು ಕಲ್ಪಿಸಿಕೊಳ್ಳುವುದೇ ಮಹತ್ತರ ಸಾಧನೆ’ಯಾಗಿರುವುದರಿಂದ ಸಾಮಾಜಿಕ ಹಿತಾಸಕ್ತಿ ಕಡೆಗಣಿತವಾಗಿದೆ. ರಾಜಕೀಯವೂ ದುಡಿಮೆಯ ಉದ್ಯಮವಾಗಿ ಪರಿಣಮಿಸಿದ್ದರಿಂದ ಎಲ್ಲವೂ ವಿಷಮಯ ವಾತಾವರಣವಾಗಿದೆ; ಪುಣ್ಯನದಿಗಳು ಕಲುಷಿತಗೊಂಡು ದಿವ್ಯ ಸಾಧು ಸಂತರು ಅವುಗಳಲ್ಲಿ ಸ್ನಾನ ಮಾಡಲೂ ಹಿಂಜರಿಯುವ ಮಟ್ಟಕ್ಕೆ ತಲ್ಪಿರುವುದು ಅತ್ಯಂತ ಖೇದಕರ.]
ಸ್ನಾನದ ಮಹತ್ವ: ಸ್ನಾನ ಎಂದರೆ ದೇಹವನ್ನೂ ಮನಸ್ಸನ್ನೂ ಚೆನ್ನಾಗಿ ತೊಳೆಯುವಿಕೆ, ಮಜ್ಜನ ಅಥವಾ ಜಳಕ. ಹಿಂದೂ ಜೀವನ ಪದ್ಧತಿಯಲ್ಲಿ ಒಂದು ಮುಖ್ಯವಾದ ಮತ್ತು ನಿತ್ಯವೂ ಬಿಡದೇ ಮಾಡಬೇಕಾದ ಪವಿತ್ರಕರ್ಮ. ಇತರ ಕರ್ಮಗಳಿಗೆ ಪೂರ್ವಾಂಗವಾಗಿ ಅವಶ್ಯಕವಾದ ಶುದ್ಧೀಕರಣ ಮಾತ್ರವಲ್ಲ, ಸರಿಯಾಗಿ ವಿಧಿವತ್ತಾಗಿ ಶ್ರದ್ಧೆಯಿಂದ ಅಚರಿಸಿದಾಗ, ಇದು ಇಹ ಮತ್ತು ಪರಗಳಲ್ಲಿ ಎಲ್ಲಾವಿಧವಾದ ಶ್ರೇಯಸ್ಸನ್ನೂ ಕೊನೆಗೆ ಮುಕ್ತಿಯನ್ನೂ ಕೊಡುವಂತಹ ಪ್ರತ್ಯೇಕವಾದ ಕರ್ಮವೂ ಹೌದು.
ನಿತ್ಯವೂ ಬೆಳಿಗ್ಗೆ ಸ್ನಾನ ಮಾಡುವವನು ನೈರ್ಮಲ್ಯ, ಬಲ, ತೇಜಸ್ಸು, ಓಜಸ್ಸು, ತಪಸ್ಸು, ಮೇಧಾಶಕ್ತಿ, ಇಂದ್ರಿಯ ಚಾಪಲ್ಯದಿಂದ ಬಿಡುಗಡೆ, ಶೋಕ ಹಾಗೂ ಕೆಟ್ಟ ಸ್ವಪ್ನಗಳ ನಾಶ, ಮನಸ್ಸಿನ ಸೌಮ್ಯತೆ, ರೂಪ, ಸೌಭಾಗ್ಯ, ಆಯಸ್ಸು, ಆರೋಗ್ಯ ವೃದ್ಧಿಗಳೆಂಬ ಸುಖ-ಲಾಭಗಳನ್ನು ಪಡೆಯುತ್ತಾನೆ. ರಾತ್ರಿ ಮಲಗಿ ಬೆಳಿಗ್ಗೆ ಏಳುವ ಹೊತ್ತಿಗೆ ಮಾನವನ ದೇಹ, ಇಂದ್ರಿಯ ಮತ್ತು ಮನಸ್ಸುಗಳು ನಾನಾ ರೀತಿಯ ಕೊಳೆಗಳಿಂದ ಮಲಿನವಾಗುತ್ತವೆ. ಇವುಗಳನ್ನು ಶೋಧಿಸಲು ನಿತ್ಯವೂ ಬೆಳಿಗ್ಗೆ ಎದ್ದೊಡನೆ ಸ್ನಾನ ಮಾಡುವುದನ್ನು ಋಷಿಗಳು ತುಂಬಾ ಮೆಚ್ಚುತ್ತಾರೆ --ಎಂದು ಯೋಗಿ ಯಾಜ್ಞವಲ್ಕ್ಯ ಮತ್ತು ಎಲ್ಲಾ ಋಷಿಗಳೂ, ಶಾಸ್ತ್ರಕಾರರೂ, ಸಾಧು-ಸಂತರೂ ಹೇಳಿದ್ದಾರೆ; ಜೊತೆಗೆ ತಾವು ಆಚರಿಸಿ ನಮಗೆ ದಾರಿ ತೋರಿದ್ದಾರೆ.
ನತೋಸ್ಮಿ ತುಂಗಾಂ ವಿಲತಸ್ತರಂಗಾಂ ಅಘೌಘಭಂಗಾಂ ಹರಿಪಾದಸಂಗಾಂ |
ನತೋಸ್ಮಿ ಭದ್ರಾಂ ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ||
ಪಾವನೆಯರಾಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಎಂದು ಕವಿ ಕುವೆಂಪು ಹೇಳಿದ್ದಾರಲ್ಲವೇ? ಭಗವಂತನಿಂದ ಸೃಷ್ಟಿಸಲ್ಪಟ್ಟ ಪುಣ್ಯನದಿಗಳೂ ಸರೋವರಗಳೂ ತಮ್ಮ ದಿವ್ಯಜಲದಿಂದ ನಮ್ಮ ದೇಹ-ಮನಗಳ ಕೊಳೆಯನ್ನು ತೊಳೆಯುತ್ತವೆ ಎಂಬುದು ಅರಿಯಬೇಕಾದ ಅಂಶ ಮತ್ತು ನದಿಗಳನ್ನೂ ಸರೋವರಗಳನ್ನೂ ಸದಾ ಶುದ್ಧವಾಗಿಡಬೇಕಾದುದು ನಮ್ಮ ಆದ್ಯ ಕರ್ತವ್ಯ.
ಸ್ನಾನ ಕಾಲ:
ಉಷಃಕಾಲ ಅಥವಾ ಅರುಣೋದಯ ಕಾಲಗಳು ಸ್ನಾನಕ್ಕೆ ಪ್ರಶಸ್ತ. ಅದಿಲ್ಲಾ ಸೂರ್ಯೋದಯಕ್ಕೂ ಮುಂಚೆ ಅಥವಾ ಸೂರ್ಯೋದಯದ ಕಾಲದಲ್ಲಿ, ಅದೂ ಆಗದಿದ್ದರೆ ಸೂರ್ಯೋದಯದ ಅನಂತರ ಆದಷ್ಟು ಬೇಗನೇ ಸ್ನಾನಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಲು ಅಸಾಧ್ಯ ಎನ್ನುವ ಅನಿವಾರ್ಯತೆಯಲ್ಲಿರುವವರು ಮಧ್ಯಾಹ್ನದ ಊಟಕ್ಕೂ ಮೊದಲು ಸ್ನಾನ ಮಾಡಬೇಕು. ಶ್ರಮಜೀವಿಗಳು-ರೈತರು, ಗಿರಣಿ, ಗಣಿ, ಕಾರ್ಖಾನೆ, ಉದ್ಯಮ ಮೊದಲಾದ ಕಡೆಗಳಲ್ಲಿ ದುಡಿಯುವವರು ತಮ್ಮ ದಿನದ ಕೆಲಸದ ಅನಂತರ ಸಂಜೆ ಸ್ನಾನ ಮಾಡುತ್ತಾರೆ. ಇದು ಅವರ ವೃತ್ತಿಗಳಿಗೆ ಹೊಂದಿಕೊಂಡಂತಹ ಅಚಾರ. ಅಂಥವರು ನಿತ್ಯ ಬೆಳಿಗ್ಗೆಯೂ ಸಹ ಒಮ್ಮೆ ಸ್ನಾನ ಮಾಡಿಯೇ ಕೆಲಸಕ್ಕೆ ತೊಡಗಿದರೆ ಒಳ್ಳೆಯದು. ಗ್ರಹಣಕಾಲ, ಸಂಕ್ರಾಂತಿ ಮುಹೂರ್ತಗಳು, ತೀರ್ಥಯಾತ್ರೆ, ಅಶುಚಿಯಾದ ಸ್ಥಳಗಳಿಗೆ ಹೋಗಿಬಂದ ನಂತರ, ಶಿಶುಜನನದ ವಾರ್ತೆ ಕೇಳಿದಾಗ, ಸೂತಕ, ಮೃತಕ ಮುಂತಾದ ಅಶೌಚ ಕಾಲಗಳು ಎದುರಾದಾಗ ಮಾನಸಿಕ ಹಾಗೂ ದೈಹಿಕ ನೆಮ್ಮದಿಗಾಗಿ ಅನೇಕಾವರ್ತಿ ಸ್ನಾನಗಳನ್ನು ಮಾಡಬಹುದಾಗಿದೆ.
ಸ್ನಾನದ ದ್ರವ್ಯ ಮತ್ತು ಸ್ನಾನವಿಧಿಗಳು :
ಸ್ನಾನಕ್ಕೆ ಮುಖ್ಯವಾದ ದ್ರವ್ಯ ಶುದ್ಧವಾದ ನೀರು. ತಣ್ಣೀರೇ ಒಳ್ಳೆಯದು. ಆನಾರೋಗ್ಯದಿಂದ ಬಳಲುತ್ತಿದ್ದರೆ ತುಸು ಬಿಸಿಯಾದ ನೀರಿನಿಂದ ಸ್ನಾನ ಮಾಡಬಹುದು.ಚರ್ಮ ಸುಡುವಷ್ಟು ಬಿಸಿಯಿರುವ ನೀರಿನ ಸ್ನಾನ ಯೋಗ್ಯವಲ್ಲ. ನಿತ್ಯವೂ ತಣ್ಣೀರಿನಿಂದಲೇ ಸ್ನಾನ ಮಾಡುವವನು ಪುಷ್ಕರ ತೀರ್ಥಗಳ ಪುಣ್ಯಸ್ನಾನದ ಫಲವನ್ನು ಪಡೆಯುವನೆಂದು ಋಷಿಗಳ ಹೇಳಿಕೆಯಿದೆ. ಆರುವಿಧವಾದ ಸ್ನಾನಗಳು ಹೇಳಲ್ಪಟ್ಟಿವೆ : ೧. ಮಂತ್ರಸ್ನಾನ, ೨. ಭೌಮಸ್ನಾನ, ೩. ಆಗ್ನೇಯಸ್ನಾನ, ೪.ವಾಯುವ್ಯಸ್ನಾನ, ೫. ದಿವ್ಯಸ್ನಾನ, ೬. ಧ್ಯಾನಸ್ನಾನ ಹೀಗೇ ಆರು ವಿಧದ ಸ್ನಾನಗಳು ಬಳಕೆಯಲ್ಲಿವೆ.
೧. ಮಂತ್ರ ಸ್ನಾನ: ಭಗಂತನ ಸ್ತುತಿ ಮತ್ತು ಶ್ಲೋಕಗಳನ್ನು ಹೇಳುತ್ತಾ ತನ್ನ ಕಾಲಿನಿಂದ ಆರಂಭಿಸಿ ತಲೆಯವರೆಗಿನ ಎಲ್ಲಾ ಭಾಗಗಳಿಗೂ ನೀರಿನ ಹನಿಗಳನ್ನು ಪ್ರೋಕ್ಷಿಸಿಕೊಳ್ಳುವುದು.[ವೈದಿಕ ಕಾರ್ಯಕ್ರಮಗಳ ಪುಣ್ಯಾಹವಾಚನ ಸಮಯದಲ್ಲಿ ಪುರೋಹಿತರು ಈ ಸ್ನಾನವನ್ನು ಮಾಡಿಸುವುದನ್ನು ನೆನೆಪಿಸಿಕೊಳ್ಳಬಹುದು]
೨. ಭೌಮಸ್ನಾನ: ಭೂಮಿಯಲ್ಲಿ ಸಿಗುವ ಗೋಪಿಚಂದನ, ತುಳಸೀ ಗಿಡ ಮೊದಲಾದ ವನಸ್ಪತಿಗಳ ಬುಡದಲ್ಲಿಂದ ತೆಗೆದ ಮಣ್ಣು, ಪುಣ್ಯನದಿಗಳ ದಡದ ಶುದ್ಧವಾದ ಮಣ್ಣು ಇತ್ಯಾದಿ ಮೃತ್ತಿಕೆಗಳನ್ನು ನೀರಲ್ಲಿ ಕಲಸಿ ನಿರ್ದಿಷ್ಟ ಆಕಾರದಲ್ಲಿ ಶರೀರದ ನಿರ್ದಿಷ್ಟ ಭಾಗಗಳಲ್ಲಿ ಲೇಪಿಸಿಕೊಂಡು ಸ್ನಾನ ಮಾಡುವುದು.
೩. ಆಗ್ನೇಯ ಸ್ನಾನ: ವಿಧಿಪ್ರಕಾರ ತಯಾರಿಸಿದ ವಿಭೂತಿಯನ್ನು ನಿರ್ದಿಷ್ಟ ಆಕಾರದಲ್ಲಿ, ಶರೀರದ ನಿರ್ದಿಷ್ಟ ಜಾಗಗಳಿಗೆ ಲೇಪಿಸಿಕೊಳ್ಳುವುದು. [ಭಸ್ಮವಾಗಿರುವ ದ್ರವ್ಯಕ್ಕೆ ಅಗ್ನಿಯ ಸಂಪರ್ಕ ಇದ್ದದ್ದರಿಂದ ಇದಕ್ಕೆ ಆಗ್ನೇಯಸ್ನಾನವೆಂದು ಕರೆಯುತ್ತಾರೆ.]
೪. ವಾಯುವ್ಯಸ್ನಾನ: ಇದಕ್ಕೆ ಗೋರಜಃ ಸ್ನಾನವೆಂದು ಇನ್ನೊಂದು ಹೆಸರು. ಹಸುಗಳ ಕಾಲುಗಳ ಗೊರಸುಗಳಿಂದ ಎದ್ದ ಪವಿತ್ರವಾದ ಧೂಳನ್ನು ತಲೆಯ ಮೇಲೆ ಸಿಂಪಡಿಸಿಕೊಳ್ಳುವುದು. [ಗೋವಿಗೆ ಭಾರತೀಯರಲ್ಲಿ ಎಂಥಾ ಮಹತ್ವವಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ]
೫. ದಿವ್ಯಸ್ನಾನ: ಬಿಸಿಲಿನಿಂದ ಕೂಡಿದ ಮಳೆಯಲ್ಲಿ ನೆನೆಯುವುದೇ ದಿವ್ಯಸ್ನಾನವೆಂಬುದು ಯಾಜ್ಞವಲ್ಕ್ಯರ ಅಭಿಮತ. ದ್ಯುಲೋಕ ಅಥವಾ ಮೇಲಿನ ಲೋಕದಿಂದ ಹನಿಸಲ್ಪಡುವ ನೀರಿನಿಂದಾಗುವ ಸ್ನಾನವಾದ ಕಾರಣ ಇದಕ್ಕೆ ದಿವ್ಯ ಸ್ನಾನವೆಂದು ಹೆಸರು. [ಉತ್ತರಭಾರತದಲ್ಲಿ ಚೈತ್ರಮಾಸದಲ್ಲಿ ವಸಂತಪಂಚಮಿಯ ಸಮಯದಲ್ಲಿ ಅನೇಕ ಕಡೆ ಮಳೆಗಳಾದಾಗ ಜನ ಉಟ್ಟಬಟ್ಟೆಯಲ್ಲಿ ಬಿಸಿಲಿನಲ್ಲಿ ಹೊರಗಡೆ ನಿಂತು ಮಳೆಯಲ್ಲಿ ನೆನೆದು ಅಲ್ಲೇ ಮೈ ಒರೆಸಿಕೊಳ್ಳುತ್ತಾರೆ. ಇದಕ್ಕೆ ದಿವ್ಯಸ್ನಾನದ ರೂಪಾಂತರ ಎನ್ನಬಹುದು]
೬. ಧ್ಯಾನಸ್ನಾನ: ಯೌಗಿಕಸ್ನಾನ ಅಥವಾ ಮಾನಸಿಕ ಸ್ನಾನ ಎಂತಲೂ ಹೇಳುತ್ತಾರೆ.
ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಭ್ಯಂತರಃ ಶುಚಿಃ ||
ಅತಿನೀಲ ಘನಶ್ಯಾಮಂ ನಳಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭವಾಮ್ಯಹಂ ||
ಸನತ್ಕುಮಾರ ಋಷಿಗಳು ಇದನ್ನೇ ಹೇಳಿದ್ದಾರೆ. ಪುಂಡರೀಕಾಕ್ಷನ ನೆನಪಿನಿಂದ ಯಾವುದೇ ಸ್ಥಿತಿಯಲ್ಲಿದ್ದರೂ ಸ್ನಾತನಾಗಿ ಶುದ್ಧನಾದೆನೆಂದು ತಿಳಿಯಬಹುದು. ಧ್ಯಾನದಲ್ಲಿ ಹೃದಯ ಕಮಲವನ್ನು ಗುರುತಿಸಿ, ಅಲ್ಲಿ ಪರಮಾತ್ಮನನ್ನು ಆವಾಹಿಸುವುದೇ ಒಂದು ಸ್ನಾನ; ಇದು ಯೋಗಿಗಳಿಗೆ ಮಾತ್ರ ಸಾಧ್ಯ, ಯೋಗದಿಂದ ಮಾತ್ರ ಸಾಧ್ಯ. ಆದ್ದರಿಂದ ಇದು ಯೌಗಿಕಸ್ನಾನವೆನಿಸಿದೆ.
ಹಾಗಾದರೆ ಕಷ್ಟಪಟ್ಟು, ನೀರನ್ನೋ ಮಿಕ್ಕುಳಿದ ದ್ರವ್ಯ/ಸಾಮಗ್ರಿಗಳನ್ನೋ ಸಂಪಾದಿಸಿಕೊಂಡು ಸ್ನಾನ ಮಾಡುವ ಬದಲು ಕುಳಿತಲ್ಲೇ ಧ್ಯಾನಸ್ನಾನಮಾಡಿಬಿಡಬಹುದಲ್ಲವೇ? ಅದು ಸಲ್ಲ. ಎಂದೋ ಒಮ್ಮೆ, ಯಾವುದೋ ನಿಭಾಯಿಸಲಾಗದ ಸನ್ನಿವೇಶದಲ್ಲಿ, ಪ್ರವಾಹ-ಭೂಕಂಪನಾದಿ ತಲ್ಲಣದ ಸನ್ನಿವೇಶ, ನಿರಂತರ ಪ್ರಯಾಣದಲ್ಲಿ ನೀರಿನ ಅಭಾವ, ಅತೀವ ಶಾರೀರಿಕ ಅಸ್ವಾಸ್ಥ್ಯ ಇಂತಹ ಸನ್ನಿವೇಶಗಳಲ್ಲಿ ಮಾತ್ರ ಧ್ಯಾನಸ್ನಾನ ಅಥವಾ ಮಂತ್ರಸ್ನಾನವನ್ನು ಮಾಡಬಹುದಾಗಿದೆ. ಪ್ರಾಕೃತಿಕ ಮತ್ತು ಶಾರೀರಿಕ ಅನುಕೂಲವಿದ್ದೂ ಭೌತಿಕ ಸ್ನಾನವನ್ನು ಮಾಡದವರು ಸೋಮಾರಿಗಳೆನಿಸುತ್ತಾರೆ-ಅಂಥವರಿಗೆ ಸ್ನಾನದ ಫಲಗಳು ಲಭ್ಯವಾಗುವುದಿಲ್ಲ. ನೀರಿನ ಸ್ನಾನವು ಪ್ರಾಥಮಿಕ ಮತ್ತು ಸಾರ್ವಜನಿಕ. ಅದು ಸಿಗದೇ ಇದ್ದಾಗ ಹೇಳಲ್ಪಟ್ಟ ಇತರ ವಸ್ತುಗಳಿಂದ ಸ್ನಾನಮಾಡಬಹುದು. ನೀರಿನಿಂದ ಸ್ನಾತರಾದರೂ ಸಜ್ಜನರು ಪ್ರೋಕ್ಷಣೆ, ಮೃತ್ತಿಕೆ ವಿಭೂತಿ ಮೊದಲಾದವುಗಳ ಲೇಪನ, ಪರಮಾತ್ಮನ ಸ್ತುತಿ ಮತ್ತು ಚಿಂತನೆಗಳಿಂದ ಸ್ನಾನಾಚರಣೆ ಮಾಡುವ ಪರಿಪಾಟವಿದೆ.
ಕಾಯಾ, ವಾಚಾ, ಮನಸಾ ಅಥವಾ ದೇಹ, ಮಾತು ಮತು ಮನಸ್ಸು [ಶ್ರದ್ಧೆ,ಭಕ್ತಿಭಾವ ಮತ್ತು ಜ್ಞಾನ] ಇವು ತ್ರಿಕರಣಗಳು-ಕರ್ಮವನ್ನು ಮಾಡಲು ಸಮರ್ಥರಾದ ನಾವು ಬಳಸುವ ಮೂರು ಸಾಧನಗಳು. ಯಾವ ಕರ್ಮವನ್ನೇ ಆಗಲಿ ನಾವು ತ್ರಿಕರಣಗಳಿಂದ ಮಾಡಬೇಕು. ಜೊತೆಗೆ ಆಯಾ ದೇಶ, ಕಾಲ, ಸಂದರ್ಭಗಳನ್ನು ಅನುಸರಿಸಿ ಶಾಸ್ತ್ರವು ವಿಧಿಸಿರುವ ಹೊರಗಿನ ದ್ರವ್ಯಗಳನ್ನು ಸಮಯೋಚಿತವಾಗಿ ಒದಗಿಸಿಕೊಳ್ಳಬೇಕು. ಬಾವಿಯ ನೀರಿಗಿಂತ ಬುಗ್ಗೆಯ/ಚಿಲುಮೆಯ ನೀರು ಉತ್ತಮ, ಬುಗ್ಗೆಯ ನೀರಿಗಿಂತ ಕೊಳ/ಸರೋವರಗಳ ನೀರು ಉತ್ತಮ, ಕೊಳ/ಸರೋವರಗಳ ನೀರಿಗಿಂತ ಹರಿಯುವ ಹಳ್ಳ,ನದಿಗಳ ನೀರು ಉತ್ತಮ. ಇವೆಲ್ಲದಕ್ಕಿಂತಾ ಎಲ್ಲಾನದಿಗಳ ಸಂಗಮರೂಪವಾದ ಸಮುದ್ರದ ನೀರು ಉತ್ತಮ. [ಆದರೂ ವಾಡಿಕೆಯಲ್ಲಿ ಸಮುದ್ರದ ನೀರು ಉಪ್ಪೆನಿಸಿ ಮೈಗೆ ಅಂಟಿನ ಭಾವ ಪ್ರಾಪ್ತವಾಗುವುದರಿಂದ ಸಮುದ್ರ ಸ್ನಾನಾನಂತರ ಸಿಹಿನೀರಿನ ಸ್ನಾನವನ್ನು ಮಾಡುತ್ತಾರೆ]
ಬಳಸುವ ಜಲಾಶಯವು ಸಾರ್ವಜನಿಕವಲ್ಲದೇ ಖಾಸಗಿಯವರ ಒಡೆತನಕ್ಕೊಳಪಟ್ಟಿದ್ದರೆ, ಅದು ಸುಲಭಲಭ್ಯವಿದ್ದರೂ ಸಹ, ಅನುಮತಿಯಿಲ್ಲದೇ ಅಲ್ಲಿ ಸ್ನಾನಮಾಡಬಾರದು. ಹಾಗೊಮ್ಮೆ ಅನುಮತಿ ಪಡೆಯದೇ ಅತಿಕ್ರಮಿಸಿ ಸ್ನಾನ ಮಾಡುವವರಿಗೆ ಸ್ನಾನದ ಪುಣ್ಯಫಲ ಪ್ರಾಪ್ತವಾಗುವುದಿಲ್ಲ. ಸ್ನಾನಕಾಲದಲ್ಲಿ ಸ್ನಾಮಾಡುವ ನೀರು ಪವಿತ್ರ ತೀರ್ಥವೆಂಬ ಭಾವವನ್ನು ತಳೆಯಬೇಕು. ನೀರು ಕೇವಲ ಕೊಳೆ ತೊಳೆಯುವ ಜಲವೆಂದು ಭಾವಿಸಿದರೆ ಪಶುವಿನ ಮೈತೊಳೆದಂತೇ, ವಾಹನಗಳನ್ನು ತೊಳೆದಂತೇರ್ ಸ್ನಾನವು ಮಾನಸಿಕಸ್ನಾನವನ್ನು ಜೊತೆಗೂಡುವುದಿಲ್ಲ-ಹೀಗಾಗಿ ನಿಷ್ಫಲವಾಗುತ್ತದೆ. ಕಪ್ಪೆ, ಆಮೆ, ಮೀನುಗಳು ಸದಾ ಪವಿತ್ರ ತೀರ್ಥಗಳಲ್ಲೇ ಮುಳುಗಿದ್ದರೂ ಅವುಗಳಲ್ಲಿ ಆ ಭಾವನೆಯಿಲ್ಲವಾದ ಕಾರಣ ಅವುಗಳಿಗೆ ಸ್ನಾನದ ಫಲವಿಲ್ಲ ಎಂಬುದನ್ನು ಗಮನಿಸಬೇಕು.
ಇನ್ನು ಮಾಘ, ವೈಶಾಖ ಮತ್ತು ಕಾರ್ತಿಕ ಮಾಸಗಳಲ್ಲಿ ನದಿ ಅಥವಾ ಸರೋವರಗಳಲ್ಲಿ ಸ್ನಾನ ಮಾಡುವ ವ್ರತವನ್ನು ಶಾಸ್ತ್ರಗಳಲ್ಲಿ ವಿಶೇಷವಾಗಿ ಹೊಗಳಲಾಗಿದೆ. ಪೂರ್ತಿ ಒಂದು ತಿಂಗಳು ಸ್ನಾನ ಮಾಡಲಾಗದಿದ್ದರೆ ಕೊನೆಯ ಮೂರುದಿನಗಳಲ್ಲಾದರೂ ಸ್ನಾನಮಾಡಬೇಕೆಂದು ತಿಳಿಸಲಾಗಿದೆ. ಹಾಗೆಯೇ ಕೆಲವು ನದಿಗಳಿಗೆ ಕೆಲವು ನದಿಗಳ ಸಂಗಮಪ್ರದೇಶಗಳಿಗೆ ಕೆಲವು ವಿಶೇಷ ಕಾಲಗಳಲ್ಲಿ ಸ್ನಾನಕ್ಕೆ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಉದಾ: ಕಾವೇರಿ ನದಿಗೆ ತುಲಾಮಾಸ. ಪ್ರಯಾಗದಲ್ಲಿನ ತ್ರಿವೇಣಿ ಸಂಗಮದಲ್ಲಿ ಮಕರಮಾಸ ಇತ್ಯಾದಿ. ಸಮುದ್ರ ಸ್ನಾನವನ್ನು ಅಮಾವಾಸ್ಯೆ ಅಥವಾ ಸಂಕ್ರಮಣದ ದಿನಗಳಂದು ಮಾಡಿದರೆ ಒಳಿತು. ನಮ್ಮ ಜೀವನದಲ್ಲಿ ಒಮ್ಮೆಯಾದರೂ ಅಖಿಲ ಭಾರತ ಯಾತ್ರೆ ಕೈಗೊಂಡು ಎಲ್ಲಾ ನದಿಗಳಲ್ಲೂ ಒಂದೊಂದು ದಿನ ಸ್ನಾನಮಾಡಿದರೆ ಅದು ಅತ್ಯುತ್ತಮ ಕರ್ಮ. ಹಿಮಾಲಯದಲ್ಲಿನ ಮಾನಸ ಸರೋವರ ಮತ್ತು ಮುಕ್ತಿನಾಥ ಕ್ಷೇತ್ರದಲ್ಲಿನ ಗಂಡಕೀನದಿ ಸ್ನಾನ ಬಹುಕಷ್ಟದ ಕೆಲಸವಾದರೂ ಪ್ರತಿಫಲವೂ ಅಷ್ಟೇ ದೊಡ್ಡದು.[ಹಾಗಂತ ಇಲ್ಲಿಗೆ ರಾಜಕಾರಣಿಗಳು ಅನ್ಯಾಯದಿಂದ ದುಡಿದ ದುಡ್ಡನ್ನು ಬಳಸಿ, ವಿಮಾನದ ಮೂಲಕ ತಲ್ಪಿ ಸ್ನಾನಮಾಡಿ ಪೂರೈಸಿದರೂ ಅವರಿಗೆ ಪುಣ್ಯಫಲದ ಪ್ರಾಪ್ತಿ ಅಷ್ಟಕ್ಕಷ್ಟೆ]
ಈಗ ತೀರ್ಥಸ್ನಾನದ ವಿಧಿಗಳನ್ನು ನೋಡೋಣ:
ಸ್ನಾನವನ್ನು ಒಂದು ಧಾರ್ಮಿಕ ವಿಧಿಯಾಗಿ, ಪವಿತ್ರ ಕರ್ಮವಾಗಿ ನಡೆಸುವಾಗ ಅದಕ್ಕೆ ವಿಧಿಸಲಾದ ಆರು ಅಂಗಗಳು ಇಂತಿವೆ: ೧. ಸಂಕಲ್ಪ, ೨. ಸ್ತುತಿ, ೩. ಅರ್ಘ್ಯ, ೪. ಅವಗಾಹನಸ್ನಾನ, ೫. ತರ್ಪಣ ಮತ್ತು ೬. ಪೂಜೆ
೧. ಸಂಕಲ್ಪ: ಇಂಥಾ ದೇಶ, ಇಂಥಾ ಕಾಲದಲ್ಲಿ, ಇಂಥಾ ಫಲವನ್ನು ಬಯಸಿ, ಇಂಥಾ ದೇವತೆಯ ಪ್ರೀತಿಯನ್ನು ಗಳಿಸಲು ಈ ತೀರ್ಥದಲ್ಲಿ ಅವಗಾಹನ ಸ್ನಾನ[ಮುಳುಗಿ ಸ್ನಾನ] ಮಾಡುವೆನೆಂದು ಘೋಷಿಸುವುದು.
ಯೋಗ್ಯ ಫಲವನ್ನು ಬಯಸಿ ಕರ್ಮವನ್ನು ಮಾಡುವುದು ತಪ್ಪಲ್ಲ, ಅನ್ಯಮನಸ್ಕರಾಗಿ ದುಷ್ಕರ್ಮಗಳನ್ನು ಮಾಡುವುದಕ್ಕಿಂತಾ ಫಲವನ್ನು ಬಯಸಿ ಉತ್ತಮಕರ್ಮವನ್ನು ಮಾಡುವುದು ವಿಹಿತವಾದದ್ದು-ಅದು ಸಕಾಮಕರ್ಮವೆನಿಸುತ್ತದೆ. ಯಾವ ಫಲವನ್ನೂ ಬಯಸದೇ ಕೇವಲ ಭಗವತ್ ಪ್ರೀತಿಗಾಗಿ ಮಾಡುವ ಕರ್ಮ ಸಕಾಮಕರ್ಮಕ್ಕಿಂತಾ ಮೇಲು-ಅದು ನಿಷ್ಕಾಮಕರ್ಮವೆನಿಸುತ್ತದೆ. ನಮಗೆ ಕಾಮನೆಯೂ ಇಲ್ಲ, ಯಾವ ಕರ್ಮವೂ ಬೇಡಾ ಎನ್ನುವುದು ತಾಮಸ ಭಾವನೆ ಎನಿಸಿಕೊಳ್ಳುತ್ತದೆ!
೨. ಸ್ತುತಿ: ಎಲ್ಲ ನದಿಗಳಲ್ಲೂ ಗಂಗೆಯ ಸನ್ನಿಧಾನವಿದೆ. ಆದರಿಂದ ಸ್ನಾನಕ್ಕೂ ಮೊದಲು ಗಂಗಾ ಸ್ತುತಿಯ ಜೊತೆಗೆ ಇತರ ನದಿಗಳ ಕುರಿತು ಸ್ತುತಿಗಳನ್ನು ಪಠಿಸಿ ಪ್ರಾರ್ಥಿಸುವುದು ಅಗತ್ಯ.
೩. ಅರ್ಘ್ಯ: ಪರಮಾತ್ಮ, ಇಷ್ಟದೇವತೆ, ಸೂರ್ಯ, ಗಂಗೆ ಇತ್ಯಾದಿಯಾಗಿ ದೇವರಿಗೆ ಬೊಗಸೆಯಲ್ಲಿ ನೀರನ್ನು ತುಂಬಿಕೊಂಡು ಎತ್ತಿ ಸ್ತುತಿಪೂರ್ವಕವಾಗಿ ಅರ್ಪಿಸುವುದು ಅರ್ಘ್ಯವೆನಿಸುತ್ತದೆ.
೪. ಅವಗಾಹನ ಸ್ನಾನ: ನೀರಿನಲ್ಲಿ ಮೂರಾವರ್ತಿ ಮುಳುಗುಹಾಕುವುದು ಮತ್ತು ಪ್ರಾಣಾಯಾಮ ಬಲ್ಲವರಾದರೆ ಅಲ್ಲೇ ಕುಂಭಕ ಪ್ರಾಣಾಯಾಮಮಾಡಿ ಶಕ್ತ್ಯಾನುಸಾರ ಜಪವನ್ನು ನಡೆಸುವುದು. [ಪ್ರಾಣಾಯಾಮ ಅರಿಯದವರು ಹಾಗೆ ಪ್ರಯತ್ನಿಸಬಾರದು]
೫. ತರ್ಪಣ: ನೀರಿನಲ್ಲಿಯೇ ನಿಂತು, ಋಷಿಗಳಿಗೆ, ಪಿತೃಗಳಿಗೆ ನೀರಿನಿಂದ ತರ್ಪಣ ಕೊಡುವುದು.
೬. ಪೂಜೆ: ನೀರಿನಿಂದ ಮೇಲೆದ್ದು ಹೊರಗೆಬಂದು ಮೈ ಒರೆಸಿಕೊಂಡು, ಶುದ್ಧವಸ್ತ್ರ ಧರಿಸಿ, ಸಂಕ್ಷೇಪವಾಗಿ ಇಷ್ಟದೇವತೆಯನ್ನು ಪೂಜೆಮಾಡುವುದು, ಮಾಡಿದ ಪೊಜೆಯ ಫಲಪ್ರಾಪ್ತಿಗಾಗಿ ಫಲ-ತಾಂಬೂಲ ಮತ್ತು ದಕ್ಷಿಣೆಗಳನ್ನು ದಾನಮಾಡುವುದು. ಮಧ್ಯೆ ಮಧ್ಯೆ ಆಗಿರಬಹುದಾದ ಲೋಪದೋಷಗಳಿಗಾಗಿ ಪ್ರಾಯಶ್ಚಿತ್ತವಾಗಿ ಹೇಳಿರುವ ನಾಮ ಜಪಮಾಡುವುದು ಮತ್ತು ಅಂತ್ಯದಲ್ಲಿ ಎಲ್ಲಾ ಕರ್ಮವನ್ನೂ ಭಗವಂತನ ಪಾದಾರವಿಂದಗಳಲ್ಲಿ ಸಮರ್ಪಿಸಿ ಧನ್ಯರಾಗುವುದು.
ಗಂಗೆ-ಯಮುನೆ-ಸರಸ್ವತಿಯರ ತ್ರಿವೇಣಿ ಸಂಗಮದಲ್ಲಿ ಜನ್ಮದಲ್ಲಿ ಒಮ್ಮೆಯಾದರೂ ಸ್ನಾನಮಾಡಲೇ ಬೇಕೆಂಬುದು ಭಕ್ತ-ಭಾವುಕರ ಆಸೆ. ’ಬಿಳಿ ಮತ್ತು ಕಪ್ಪು ನದಿಗಳು ಸೇರುವೆಡೆಯಲ್ಲಿ ಸ್ನಾನಮಾಡಿದರೆ ಸ್ವರ್ಗಕ್ಕೆ ಏರುವರು ಅಲ್ಲಿ ತಮ್ಮ ದೇಹಗಳನ್ನು ಬಿಡುವ ಧೀರರು ಅಮೃತತ್ವವನ್ನು ಹೊಂದುವರು ’ ಎಂದು ವೇದದಲ್ಲಿ ಹೇಳಿದೆ. ಮನುಸ್ಮೃತಿ ಅದನ್ನೇ ಹೀಗೆ ತಿಳಿಸುತ್ತದೆ : ಜಹ್ನು ಋಷಿಯ ಮಗಳಾದ ಗಂಗೆ ಬಿಳಿಯ ಬಣ್ಣದ ಅಲೆಗಳಿಂದಲೂ ಸೂರ್ಯನ ಮಗಳಾದ ಯಮುನೆ ಕಪ್ಪುಬಣ್ಣದ ಅಲೆಗಳಿಂದಲೂ ಶೋಭಿಸುತ್ತಾರೆ. ಆ ನದಿಗಳು ಎಲ್ಲಿ ಸೇರುತ್ತವೆಯೋ ಮತ್ತು ಎಲ್ಲಿ ಅಕ್ಷಯವಾದ ಆಲದಮರ ಇದೆಯೋ ಆ ಸ್ಥಳವೇ ತೀರ್ಥರಾಜ ಪ್ರಯಾಗವಾಗಿ ಮೆರೆಯುತ್ತಿದೆ.
ಹಾಗಾದರೆ ಶೌಚ-ಯೋಗ-ಪ್ರಾಣಾಯಮ-ಸ್ನಾನಾದಿಗಳಿಗೇ ಇಷ್ಟೆಲ್ಲಾ ಸಮಯ ವ್ಯಯಿಸಿಬಿಟ್ಟರೆ ದುಡಿಯುವ ನಮಗೆ ಅರ್ಧದಿನದಷ್ಟು ಸಮಯ ಕಳೆದುಹೋಗಿಬಿಡುವುದಿಲ್ಲವೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಬೇಗನೇ ಏಳುವುದರಿಂದ ಶಾರೀರಿಕ ಕ್ರಿಯೆಗಳ ಜೊತೆಜೊತೆಗೇ ಅನೇಕ ವಾಚನಿಕ, ಮಾನಸಿಕ ಕ್ರಿಯೆಗಳನ್ನು[ಸಹಯೋಗದಲ್ಲಿ] ಮಾಡುವುದು ಸಾಧ್ಯವಾಗುತ್ತದೆ. ನಿತ್ಯವೂ ಒಂದು ಕ್ರಮವನ್ನು ಅನುಸರಿಸಿಕೊಂಡುಬಿಟ್ಟರೆ ಒಟ್ಟಾರೆಯಾಗಿ ಬೇಕಾಗುವ ಸಮಯದ ಲೆಕ್ಕ ಸಿಕ್ಕಿಬಿಡುತ್ತದೆ. ಸಮಯದ ಅಭಾವವಿದ್ದರೆ ಅಮುಖ್ಯವಾದ ಕೆಲವು ಕ್ರಿಯೆಗಳನ್ನು ದಿನದ ಉಳಿಕೆಯ ಸಮಯದಲ್ಲಿ ಅನುಕೂಲವಾದಾಗ ಮಾಡಬಹುದಾಗಿದೆ. ಈ ಎಲ್ಲಾ ಕರ್ಮಗಳಿಗೂ ಹೆಚ್ಚೆಂದರೆ ಎರಡು ಗಂಟೆಗಳು ಸಾಕು. ಚುರುಕಿನಿಂದ ತ್ವರಿತವಾಗಿ ಮುಗಿಸುವವರು ಒಂದೇ ಗಂಟೆಯಲ್ಲಿ ಅಷ್ಟನ್ನೂ ಪೂರೈಸಬಲ್ಲರು, ಕೆಲವರಿಗೆ ಒಂದೂವರೆ ಗಂಟೆ ಬೇಕು. ದೀರ್ಘಕಾಲದ ಯೋಗಾಸನಗಳು ಮತ್ತು ಧ್ಯಾನವನ್ನು ಕೈಗೊಳ್ಳುವವರಿಗೆ ಮಾತ್ರ ೩ ಗಂಟೆಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಬೇಕಾಗಬಹುದು.
ಹೊರಗೆ ಕರ್ಮವಾಗಿ ಆಚರಿಸುವ ಸ್ನಾನವನ್ನು ನಾವು ಈ ರೀತಿ ಹೋಲಿಸಬಹುದಾಗಿದೆ:ಇಡಾ ಎಂಬ ಒಂದು ನಾಡಿ ನಮ್ಮ ಮೂಗಿನ ಎಡ ಹೊಳ್ಳೆಯಿಂದ ಹೊರಟು ಶರೀರದ ಒಳಗಿಳಿದು ನೇರವಾಗಿ ಮೂಲಾಧಾರದ ವರೆಗೂ ಹೋಗುತ್ತದೆ; ಶೀತಲ ಗುಣದಿಂದ ಕೂಡಿದ ಇದನ್ನು ಚಂದ್ರನಾಡಿ ಎನ್ನುತ್ತಾರೆ. ಪಿಂಗಳಾ ಎಂಬ ಇನ್ನೊಂದು ನಾಡಿ ಮೂಗಿನ ಬಲಹೊಳ್ಳೆಯಿಂದ ಹೊರಟು ಶರೀರದಲ್ಲಿ ಸಾಗಿ ಮೂಲಾಧಾರವನ್ನು ಸೇರುತ್ತದೆ; ಉಷ್ಣಗುಣವುಳ್ಳ ಇದನ್ನು ಸೂರ್ಯನಾಡಿ ಎಂದು ಕರೆದಿದ್ದಾರೆ. ಬೆನ್ನುಮೂಳೆಯ ಒಳಗೆ ಸುಪ್ತವಾಗಿ ಸಾಗಿರುವ ನಾಡಿಯೇ ಸುಷುಮ್ನಾನಾಡಿ. ಈ ಮೂರೂ ನಾಡಿಗಳನ್ನು ಕ್ರಮವಾಗಿ ಗಂಗೆ, ಯಮುನೆ ಮತ್ತು ಸರಸ್ವತಿ ಎಂದು ಭಾವಿಸಬಹುದಾಗಿದೆ [ಮತ್ತು ಬೆನ್ನುಮೂಳೆಯನ್ನು ಮೇರುದಂಡವೆಂದು ಪರಿಭಾವಿಸಬಹುದಾಗಿದೆ]. ಈ ಮೂರೂ ಮೇರುದಂಡದ ಆರು ಚಕ್ರಗಳಲ್ಲಿ ಸಂಧಿಸುತ್ತವೆ. ಪ್ರಾಣಾಯಾಮದಿಂದ ಪ್ರಾಣವನ್ನು ಮತ್ತು ಚಿತ್ತವನ್ನು ಈ ಚಕ್ರಗಳಲ್ಲಿ ನಿಲ್ಲಿಸಿ ಧ್ಯಾನಮಾಡುವುದೇ ಸಂಗಮಸ್ನಾನವೆನಿಸುತ್ತದೆ; ಇದರ ಫಲ ಸ್ವರ್ಗ. ಸುಷುಮ್ನಾ ನಾಡಿಯ ಮೂಲಕ ಪ್ರಾಣವನ್ನು ಜೊತೆಗೆ ಚಿತ್ತವನ್ನೂ ತಲೆಯ ತುದಿಯಲ್ಲಿರುವ ಅಥವಾ ನೆತ್ತಿಯಲ್ಲಿರುವ ಬ್ರಹ್ಮರಂಧ್ರದವರೆಗೆ ಒಯ್ದು, ಅದರ ಮೂಲಕ ದೇಹವನ್ನು ಬಿಟ್ಟುಹೋಗುವುದೇ ಪ್ರಯಾಗದಲ್ಲಿ ದೇಹತ್ಯಾಗ ಮಾಡಿದಂತೆನಿಸುತ್ತದೆ-ಇದಕ್ಕೆ ಫಲ: ಮುಕ್ತಿ.
ಮಹಾಭಾರತದ ಅರಣ್ಯಪರ್ವದಲ್ಲಿ ಧರ್ಮರಾಜನಿಗೆ ಲೋಮಶ ಎಂಬ ಮಹರ್ಷಿಯ ಪರಿಚಯವಾಗುತ್ತದೆ; ಆ ಮಹರ್ಷಿ, ವಿವಿಧ ಕ್ಷೇತ್ರಗಳ ಮತ್ತು ತೀರ್ಥಗಳ ವಿಸ್ತಾರವಾದ ವರ್ಣನೆಯನ್ನು ಮಾಡಿ, ಅವುಗಳಿಗೆ ಯಾತ್ರೆ ಹೋಗಿ ಸ್ನಾನ-ದಾನಾದಿಗಳನ್ನು ಮಡುವುದರ ಫಲಗಳನ್ನು ಪ್ರಶಂಸೆ ಮಾಡುತ್ತಾನೆ. ಪಾಂಡವರು ಋಷಿಗಳ ಜೊತೆ ಹೊರಟು ತೀರ್ಥಯಾತ್ರೆಯನ್ನೂ ಮಾಡುತ್ತಾರೆ. ಆ ಪ್ರಕರಣದಲ್ಲಿ ಋಷಿ ಹೀಗೆ ಹೇಳುತ್ತಾನೆ:
"ನಮ್ಮ ಒಳಗೆ ಹೃದಯದಲ್ಲಿ ಆತ್ಮನೆಂಬ ನದಿಯಿದೆ, ಅಲ್ಲಿ ಸತ್ಯವೇ ಆಳವಾದ ಮಡುವು. ಸಂಯಮ ಎಂಬ ನೀರು ಅಲ್ಲಿ ತುಂಬಿಕೊಂಡಿದೆ. ಶೀಲವೇ ಆ ನದಿಯ ದಡ. ದಯೆಯೆಂಬ ಅಲೆಗಳು ಆ ನೀರಿನಲ್ಲಿ ಏಳುತ್ತಿರುತ್ತವೆ. ಪಾಂಡುಪುತ್ರ, ನೀನು ಅಲ್ಲಿ ಅಭಿಷೇಕ ಮಾಡಿಕೋ, ಅಂತರಾತ್ಮನು ಹೊರಗಿನ ನೀರಿನಿಂದ ಶುದ್ಧನಾಗನು. ಮಾನಸ ತೀರ್ಥವೆಂಬುದೊಂದಿದೆ. ಅಲ್ಲಿ ಧ್ಯಾನವೇ ನೀರು, ಜ್ಞಾನವೇ ಮಡುವು, ಅದು ರಾಗ-ದ್ವೇಷಗಳನ್ನು ತೊಳೆಯಬಲ್ಲದು. ಈ ತೀರ್ಥದಲ್ಲಿಯೇ ದೇವತೆಗಳೂ, ವೇದಗಳೂ ಪವಿತ್ರ ರೂಪದಲ್ಲಿ ಒಂದುಗೂಡಿವೆ. ಅಲ್ಲಿ ಸ್ನಾನಮಾಡಿದವನು ಅಮೃತನಾಗುವನು. ಅವನು ಪರಮಗತಿಯನ್ನು ಹೊಂದುತ್ತಾನೆ."
ಅಂತಹ ಮಾನಸತೀರ್ಥ ಸ್ನಾನಕ್ಕೆ ನಾವು ಪ್ರತಿನಿತ್ಯಮಾಡುವ ಹೊರಗಿನ ಸ್ನಾನವು ಒಂದು ಸಂಕೇತ, ಅದೊಂದು ಸೋಪಾನ, ಒಂದು ಪ್ರಾಥಮಿಕ ಹೆಜ್ಜೆ, ಒಂದು ಸ್ಥೂಲವಾದ ಕ್ರಿಯೆ. ಆದ್ದರಿಂದಲೇ ಹಿಂದೂ ಜೀವನದಲ್ಲಿ ಅದಕ್ಕೆ ಅಷ್ಟು ಹಿರಿಮೆ, ಆ ಹಿರಿಮೆ ಎಲ್ಲರಿಗೂ ಅರ್ಥವಾಗಲಿ, ಎಲ್ಲರೂ ಸದಾ ಶುಚಿರ್ಭೂತರಾಗಿ ಗಮ್ಯವನ್ನು ತಲುಪಲು ಪ್ರಯತ್ನಶೀಲರಾಗಲಿ ಎಂಬುದೇ ನನ್ನ ಶುಭ ಹಾರೈಕೆ. [ಈ ಕೆಳಗಿನ ಶ್ಲೋಕದಲ್ಲಿ ವರಾಹತನಯಾ ಎಂದರೆ ವಾರಾಹಿ ತುಂಗಾ ಮತ್ತು ಭದ್ರಾ ಎಂಬರ್ಥ]
ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||