ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 26, 2010

ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂ


ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂ


ಬದುಕಿನ ಪುಟಗಳಲ್ಲಿ ಹೃದಯ ವೈಶಾಲ್ಯತೆ ಇದ್ದರೆ ಜಗತ್ತು ಸುಂದರವಾಗುವುದಕ್ಕೆ ಬೇರಾವುದೇ ಪರಿಕರ ಬೇಕಾಗುವುದಿಲ್ಲ. ನಮ್ಮ ವ್ಯಕ್ತಿತ್ವ ಸಂಪೂರ್ಣ ವಿಕಸಿತವಾಗಬೇಕಾದರೆ ಅದರ ದರ್ದು ಇದ್ದೇ ಇದೆ. ವಿಶಾಲ ಮನೋಭಾವ ಇಲ್ಲದವರು ಬಾಲಿಶ ವ್ತಕ್ತಿಯಂತೆಯೋ, ಕುಬ್ಜರಂತೆಯೋ, ಲೋಭಿಗಳಂತೆಯೋ ಆಗಿರುವುದು ನಮಗೆ ಕಂಡುಬರುತ್ತದೆ. ಮುಳುಗುವವನಿಗೆ ಹುಲ್ಲುಕಡ್ಡಿ ಭಾರ ಎಂಬೊಂದು ಗಾದೆ ಹೇಗೆ ಹುಟ್ಟಿತೋ ಗೊತ್ತಿಲ್ಲ, ಆದರೆ ಮುಳುಗಿರುವ ವಸ್ತುವನ್ನು ಹುಲ್ಲುಕಡ್ಡಿಯಾದ ದರ್ಬೆಯನ್ನೇ ಇಳಿಬಿಟ್ಟು ಅವು ಒಂದಕ್ಕೊಂದು ಅಂಟಿಕೊಂಡು ದಾರವಾಗಿ, ಆ ದಾರದಿಂದಲೇ ಮೇಲೆತ್ತಿದ ಘಟನೆ ಮಹಾಭಾರತದಲ್ಲಿ ನಮಗೆ ವೇದ್ಯವಾಗುತ್ತದೆ. ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬಹುದಾದ ನಯ ವಿನಯಗಳು ಯಾರಿಂದಲೋ ಕಡ ತಂದು ಬಳಸಬೇಕಾದ ಗುಣನಡತೆಗಳಲ್ಲ. ಮೇಲಾಗಿ ಅವಕ್ಕೆ ಯಾವುದೇ ಖರ್ಚಿನ ಬಾಬತ್ತು ಕೂಡ ಇಲ್ಲ. ನಯ-ವಿನಯ-ವೈಶಾಲ್ಯ-ಕ್ಷಮೆ-ದಾನ-ಧರ್ಮ ಹೀಗೇ ಇವೆಲ್ಲಾ ಒಂದೇ ಸಾಲಿನಲ್ಲಿ ಒಂದಕ್ಕೊಂದು ಅಂಟಿನಿಂತಿರುವ ನಡತೆಯ ಮುಖ್ಯ ಸಲ್ಲಕ್ಷಣಗಳು. ನಾವೇ ಸ್ವತಃ ಎಲ್ಲವನ್ನೂ ಜನ್ಮಜಾತವಾಗಿ ಪಡೆದುಬಂದಿರುವುದಿಲ್ಲವಾದ್ದರಿಂದ ಹಿರಿಯರನ್ನು ಮತ್ತು ಸದ್ಗುಣಿಗಳನ್ನು ನೋಡಿ ನಾವದನ್ನು ಅಳವಡಿಸಿಕೊಳ್ಳುವುದು ಬಹಳ ಒಳ್ಳೆಯದು.

ಇದರ ಕುರಿತು ಹೇಳುವಾಗ ಕೆಲವು ಉದಾಹರಣೆಗಳ ಸಮೇತ ಹೇಳಿದರೆ ಸಮಂಜಸವೆನಿಸಿ ಹಾಗೇ ಸಾಗುತ್ತೇನೆ. ಕೆಲವು ವರ್ಷಗಳ ಹಿಂದೆ ನನ್ನ ಅತ್ಮೀಯ ಗೆಳೆಯರೊಬ್ಬರು ಹೋಟೆಲ್ ಒಂದಕ್ಕೆ ತಿಂಡಿಗೆ ಹೋದರು. ಅವರು ಕುಳಿತ ಹೋಟೆಲ್ ಸಾಮಾನ್ಯ ತರಗತಿಯದ್ದಾಗಿತ್ತು. ಆದ್ರೆ ಸೆಲ್ಫ್ ಸರ್ವಿಸ್ ಥರದ್ದಲ್ಲ. ಅಲ್ಲಿ ಕೂತರು ಕೂತರು ಕೂತರು, ಯಾರೂ ಮಾತಾನಾಡಿಸಲು ಬರಲೇ ಇಲ್ಲ. ಇನ್ನೇನು ಎದ್ದು ಹೋಗಿಬಿಡಬೇಕೆನ್ನುವಷ್ಟು ಅಸಹನೆ ಕೋಪದರೂಪವನ್ನು ಪಡೆಯಬೇಕೆನ್ನುವಷ್ಟರಲ್ಲಿ ಒಬ್ಬ ತಾತ ಬಂದು ಮಾತನಾಡಿಸಿದ

" ಏನ್ ಕೊಡ್ಲಿ ಸರ್ ? "

ಇವರು ಉತ್ತರಿಸುವ ಬದಲು ಆತನನ್ನು ಸುಮ್ಮನೇ ಕೇಳಿದರು

" ಯಜಮಾನ್ರೆ ನೀವು ಇಲ್ಯಾವಾಗ್ ಬಂದ್ರಿ ? "

" ಒಂದ್ತಿಂಗ್ಳಾಯ್ತು ಸಾರ್, ಅಲ್ಲೀ ಯಶವಂತಪುರದಲ್ಲಿದ್ದಾಗ ಸಂಬ್ಳ ತುಂಬಾನೇ ಕಮ್ಮಿ ಕೊಡ್ತಿದ್ರು, ಮೇಲಾಗಿ ಯಜಮಾನ್ರು ತುಂಬಾನೇ ಸಿಡುಕು....ನಂಗೂ ವಯಸ್ಸಾಯ್ತು.....ಮಕ್ಳು-ಮರಿ ಸಂಸಾರ ಎಲ್ಲಾ ನಡೀಬೇಕಲ್ಲಾ ಸ್ವಾಮಿ....ಅದಕ್ಕೇ ಇಲ್ಲೊಂದ್ ಕೆಲ್ಸ ಇದೆ ಅಂತ ನಂ ಸ್ನೇಹಿತರೊಬ್ರು ಹೇಳ್ದ್ರು...ಬಂದೆ ಇಷ್ಟ ಆಯ್ತು. ಯಜಮನ್ರು ತುಂಬಾ ಒಳ್ಳೇಜನ...ಇರುವಷ್ಟು ದಿನ ಇದ್ಬುಡೋಣ ಅನ್ನಿಸ್ತಾ ಇದೆ "

ನನ್ನ ಸ್ನೇಹಿತರಿಗೆ ಆ ಒಂದು ಮಾತಿನಿಂದ ಆರಂಭವಾದ ಉಪಚಾರ ಮನೆಯಲ್ಲೂ ಸಿಗದಷ್ಟು ವ್ಯವಸ್ಥೆಯೊಂದಿಗೆ, ಪುನಃ ಬರುತ್ತಿರಬೇಕೆಂಬ ಆತ್ಮೀಯ ಆಹ್ವಾನದೊಡನೆ ಗೌರವಪೂರ್ವಕ ನಮಸ್ಕಾರ ಸಹಿತದ ಬೀಳ್ಕೊಡುಗೆಯೊಂದಿಗೆ ಅಂದಿಗೆ ಮುಗಿಯಿತು. ಅದೇ ಅಂದು ಅವರು ರೇಗಾಡಿದ್ದರೆ ಆ ಮನುಷ್ಯನೂ ಕೂಡ ಕುಪಿತನಾಗಿ ಕ್ಷಣಾರ್ಧದಲ್ಲಿ ಎಲ್ಲವೂ ಬೇರೆಯದೇ ರೀತಿ ಆಗುತ್ತಿತ್ತು.

ಉದಾ ೨ :

ಎಚ್.ಎಸ್.ವಿ ಬರೆದ ಅನಾತ್ಮಕಥನದಲ್ಲಿ ರಾಜಕುಮಾರ್ ಬಗ್ಗೆ ಬರೆದಾಗ ಅವರು ಹೇಳುತ್ತಾರೆ -- ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ, ಹಿರಿಯಕವಿ ಕೆ.ಎಸ್.ನ. ಅಲ್ಲಿಗೆ ಬಂದಿದ್ದರು. ಡಾ| ರಾಜಕುಮಾರ್ ಕೂಡ ಪಾಲ್ಗೊಳ್ಳಬೇಕಾದ ಸಭೆ. ಬಂದಿಳಿದ ರಾಜಕುಮಾರ್ ನೇರವಾಗಿ ವೇದಿಕೆಯಲ್ಲಿ ಕುಳಿತಿದ್ದ ಕೆ.ಎಸ್.ನ ಗೆ ದೀರ್ಘದಂಡ ನಮಸ್ಕಾರ ಮಾಡಿದರಂತೆ. ಸಭೆಯಲ್ಲಿ ರಾಜಕುಮಾರ್ ಅಭಿಮಾನಿಗಳೆ ಹೆಚ್ಚಿದ್ದು ಕೆ.ಎಸ್.ನ ಅಭಿಮಾನಿಗಳ ಸಂಖ್ಯೆ ಕಮ್ಮಿ ಇತ್ತು ಹೀಗಾಗಿ ಅವರ ವ್ಯಕ್ತಿತ್ವವನ್ನು ಎಲ್ಲರಿಗೂ ಉನ್ನತಮಟ್ಟದಲ್ಲಿ ಪರಿಚಯಿಸುವುದಕ್ಕಾಗಿ ಮೆರುಕಲಾವಿದನೊಬ್ಬ ಇನ್ನೊಂದು ರಂಗದ ಮೇರುಕಲಾವಿದನೊಬ್ಬನಿಗೆ ನಮಸ್ಕರಿಸಿದ್ದು ಎನ್ನುತ್ತಾರೆ ಎಚ್.ಎಸ್.ವಿ. ಇದರಿಂದ ರಾಜಕುಮಾರ್ ಚಿಕ್ಕವರಾಗಲಿಲ್ಲ ಬದಲಿಗೆ ರಾಜಕುಮಾರ್ ಅವರ ಆದರ್ಶವನ್ನು ಎಲ್ಲರೂ ಕಂಡರು.

ಜಗತ್ತಿನ ಪ್ರತೀ ಅಣು ಅಣುವೂ ಗೌರವಯುತವಾದದ್ದೇ. ಸಮಯಬಂದಾಗ ಹುಲ್ಲುಕಡ್ಡಿಯೂ ಕೆಲಸಮಾಡಬಲ್ಲುದು. ಇದನ್ನು ಅರಿಯದೇ ಜನರನ್ನು ನಿಭಾಯಿಸುವುದು ಕಷ್ಟವಾದಾಗ ಕರ್ನಾಟಕ ಈಗ ಕಾಣುತ್ತಿರುವ ಅರಾಜಕತೆ ಕಾಣಬಹುದು. ಅದು ನಮ್ಮ ನಮ್ಮ ಮಟ್ಟದಲ್ಲಿನ ವ್ಯವಹಾರದಲ್ಲಿ ಅರಾಜಕತೆಯೇ ಆಗಿರುತ್ತದೆ. ಹಾಗಂತ ಕೇವಲ ಹೊರತೋರಿಕೆಗಾಗಿ ಆ ವೇಷ ಹಾಕುವುದು ಬೇಡ. ವ್ಯಕ್ತಿಗೆ ಗೌರವ ಕೊಟ್ಟು ಪಡೆಯುವ ಸಂಸ್ಕಾರ ಸಿದ್ಧಿಸಿರಬೇಕು. ಯಾವ ವ್ಯಕ್ತಿಯಲ್ಲಿ ಸದ್ಗುಣಗಳು ಮನೆಮಾಡಿರುತ್ತವೆಯೋ ಆ ವ್ಯಕ್ತಿ ಸ್ವಯಂ ಮೇಲ್ಮಟ್ಟಕ್ಕೆ ಏರುತ್ತಾನೆ.

ಎಚ್.ಎಸ್.ವಿ ಒಂದುಕಡೆ ಬರೆಯುತ್ತಾರೆ-- ಬೆಂಗಳೂರಿಗೆ ಬಂದ ಹೊಸದು, ಸಂಸಾರ ಅವಿಭಕ್ತ ಹಾಗೂ ದೊಡ್ಡದು. ಅವರ ಮನೆಯಲ್ಲಿ ಅಡಿಗೆಗೆ ಗ್ಯಾಸ್ ಇರಲಿಲ್ಲ. ಆ ಕಾಲದಲ್ಲಿ ವರ್ಷಗಟ್ಟಲೆ ಗ್ಯಾಸ್ ಗಾಗಿ ಬುಕ್ ಮಾಡಿ ಕಾಯಬೇಕಾದ ಪ್ರಸಂಗವಿತ್ತು. ಅನಿರೀಕ್ಷಿತವಾಗಿ ಸಿಕ್ಕ ಮುದುಕನೊಬ್ಬ ರಾಮಾ ಶಿವಾ ಅನ್ನುತ್ತಾ, ಕಾಲುಗಂಟು ನೀವಿಕೊಳ್ಳುತ್ತಾ ಅವರನ್ನು ಸಂಧಿಸಿ ಗ್ಯಾಸ್ ಕೊಡಿಸುತ್ತೇನೆಂದು ಹೇಳುತ್ತಾ ಅಂದಿನ ಅವರ ಸಂಬಳದ ಅರ್ಧಹಣ ಅಂದರೆ ಮುನ್ನೂರು ರೂಪಾಯಿ ಪಡೆದು ಮೋಸಮಾಡುತ್ತಾನೆ. ಆ ಮುದುಕನ ತೋರಿಕೆಯ ಲಕ್ಷಣಗಳು ಒಳ್ಳೆಯವನಂತೇ ಕಂಡುಬಂದುದರಿಂದ ಎಚ್.ಎಸ್.ವಿ ಮೋಸಹೋಗುತ್ತಾರೆ. ಇದೇ ರೀತಿ ಇನ್ನೊಮ್ಮೆ ಸಿನಿಮಾ ಥೇಟರ್ ನಲ್ಲಿ ಅಸಹಾಯ ಸ್ಥಿತಿಯಲ್ಲಿ ಹುಡುಗನೊಬ್ಬ ಸಹಕರಿಸಿ ಅವರ ಮನೆಮಂದಿಯೆಲ್ಲರ ಮನಗೆದ್ದು ಅವರ ಮನೆಗೆ ಆತ್ಮೀಯನಾಗಿ ಆಮೇಲೊಂದು ದಿನ ತನಗೆ ತೀವ್ರ ಅನಾರೋಗ್ಯವೆಂದೂ ಆಪರೇಶನ್ ಗೆ ಖರ್ಚಿಗೇ ಇಲ್ಲವೆಂದು ಹೇಳುತ್ತಾ, ಎಚ್.ಎಸ್.ವಿ ತಾವೇ ಸ್ವಲ್ಪ ಕೊಡುತ್ತೇವೆಂದು ಹತ್ತುಸಾವಿರ ಕೊಟ್ಟಾಗ, ಹಣಪಡೆದು ದೂರವಾಗುತ್ತಾನೆ. ಮತ್ತೆ ಮೂವತ್ತು ವರ್ಷಗಳನಂತರ ಅನಿರೀಕ್ಷಿತವಾಗಿ ರವೀಂದ್ರ ಕಲಾಕ್ಷೇತ್ರದ ಹೊರಗೆ ಭೇಟಿಯಾಗಿ ಆತನೇ ಬಂದು ಮಾತನಾಡಿಸಿ ಸಾರಿ ಎಂದು ಚೆಕ್ ಕೊಟ್ಟು ಹೋಗುತ್ತಾನೆ. ಕೆಲಸಕ್ಕೆ ಬಾರದ ಚೆಕ್ ತಗಂಡು ಎಚ್. ಎಸ್.ವಿ ಸುಮ್ಮನೇ ಇರುತ್ತಾರೆ. ಆ ಚೆಕ್ ಎನ್ ಕ್ಯಾಷ್ ಆಯಿತೋ ಇಲ್ಲವೋ ನೀವೇ ಊಹಿಸಿ ಎಂದು ನಮಗೇ ಹೇಳುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ ಎಚ್.ಎಸ್.ವಿ ಕೋಪಗೊಳ್ಳುವ ಬದಲು, ಯಾವುದೇ ಈರ್ಷ್ಯೆ ತೀರಿಸುವ ಬದಲು ಅಂಥವರ ಬಗ್ಗೆ ಮರುಕಪಡುತ್ತಾರೆ.

ಎಚ್.ಎಸ್.ವಿ ಯವರು ಬರೆದ ಲೋಕದ ಕಣ್ಣಿಗೆ ರಾಧೆಯು ಕೂಡ, ಅಮ್ಮಾ ನಾನು ದೇವರಾಣೆ , ನೀರು ತಿಳಿಯಿದ್ದರೂ ಕೊಳವಿರಲಿ ಆಳ ಎಂಬೆಲ್ಲಾ ಹತ್ತುಹಾಡುಗಳನ್ನು ಸೇರಿಸಿ ಖ್ಯಾತ ಸಂಗೀತ ಸ್ವರಸಂಯೋಜಕರಾದ ಸಿ.ಅಶ್ವತ್ಥ್ ಅವರಿಗೆ ನೀಡಿದಾಗ ಕೆಲವುದಿನಗಳ ನಂತರ ಆ ಹಾಡುಗಳ ಲಿಖಿತ ಪ್ರತಿಗಳ ಫೈಲನ್ನು ಮರಳಿ ಕೊಟ್ಟು " ಮೂರ್ತಿ , ಇವು ನನಗ್ಯಾಕೋ ಅಷ್ಟಾಗಿ ಹಿಡಿಸಲಿಲ್ಲ " ಎಂದರಂತೆ. ಎಚ್.ಎಸ್.ವಿ ಮರುಮಾತಾಡದೇ ಸುಮ್ಮನೇ ಪಡೆದರು. ಅದಾದ ಮಾರನೇ ದಿನ ಮೈಸೂರು ಅನಂತಸ್ವಾಮಿ ಎಚ್.ಎಸ್.ವಿ ಯವರ ಮನೆಗೆ ಬಂದವರು ಎಚ್.ಎಸ್.ವಿ ಬರೆದದ್ದರಲ್ಲಿ ಒಂದಷ್ಟು ಭಾವಗೀತೆಗಳನ್ನು ಆಯ್ದುಕೊಡಲು ಹೇಳಿದರಂತೆ. ಅಶ್ವತ್ಥ್ ಮರಳಿಸಿದ ಫೈಲು ಅನಂತಸ್ವಾಮಿಯವರ ಕೈ ಸೇರಿತು. ಅನಂತಸ್ವಾಮಿ ಅದಕ್ಕೆ ರಾಗಸಂಯೋಜಿಸಿ ಹಾಡಿ ಆಮೇಲೆ ಅವು ಅನೇಕ ಹಾಡುಗಾರರಿಂದ ಅನೇಕ ವೇದಿಕೆಗಳಲ್ಲಿ ಹಾಡಲ್ಪಟ್ಟು ಜಗದ್ವಿಖ್ಯಾತವಾದವು ! [ವಿಶ್ವಕನ್ನಡಿಗರೆಲ್ಲರೂ ಇಷ್ಟಪಟ್ಟು ಕೇಳಿರುವ ಹಾಡುಗಳವು]. ಅದಾದಮೇಲೆ ಎಚ್.ಎಸ್.ವಿ ಯವರ ಹಾಗೂ ಅಶ್ವತ್ಥ್ ರ ಸ್ನೇಹಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ನಂತರದ ದಿನಗಳಲ್ಲಿ ಎಚ್.ಎಸ್.ವಿ ಯವರ ಅನೇಕ ಗೀತೆಗಳನ್ನು ಅಶ್ವತ್ಥ್ ಬಳಸಿಕೊಂಡರು, ಹಾಡಿದರು. ವ್ಯಕ್ತಿಗೆ ತನ್ನ ತಪ್ಪಿನ ಅರಿವಾದಾಗ ಆತನೇ ಕುಗ್ಗಿಹೋಗುತ್ತಾನೆ; ಪಶ್ಚಾತ್ತಾಪ ಪಡುತ್ತಾನೆ. ಆ ಪಶ್ಚಾತ್ತಾಪದ ಬೇಗುದಿಯೇ ಆತನನ್ನು ಮನವನ್ನು ದಹಿಸಿ ಶುಚಿಗೊಳಿಸುತ್ತದೆ.

ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ ಎಲ್ಲರಿಗೂ ಒಂದಿಲ್ಲೊಂದು ಅವಕಾಶ ಸಿಕ್ಕೇ ಸಿಗುತ್ತದೆ. ಯಾರೋ ತಿರಸ್ಕರಿಸಿದರು ಎಂದು ಅವರಮೇಲೆ ಹರಿಹಾಯುವುದಾಗಲೀ ಅಥವಾ ನಮ್ಮೊಳಗೇ ನಾವು ಕುಗ್ಗಿಕೊರಗುವುದಾಗಲೀ ಸರಿಯಲ್ಲ.

ಇವತ್ತು ಅವಿಭಕ್ತ ಭಾರತ ವಿಭಕ್ತವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಾರತಗಳೆಂಬ ಮೂರು ರಾಷ್ಟ್ರಗಳಾಗಿವೆ. ಅಕ್ಕಪಕ್ಕದ ರಾಷ್ಟ್ರಗಳವರು ತಿಳುವಳಿಕೆಯಿಲ್ಲದೇ ತಮ್ಮ ಮೌಢ್ಯವನ್ನು ಮೆರೆಯುತ್ತಲೇ ಇದ್ದಾರೆ. ಹಾಗೆ ಅವರು ಹಾರಾಡಿದಾಗಲೆಲ್ಲಾ ನಮ್ಮಲ್ಲಿಯೂ ಕೆಲವರು ಅವರನ್ನು ವಿರೋಧಿಸಿ ಹಾರಾಡುತ್ತಾರೆ. ಅವರಿಗೆ ಬುದ್ಧಿಯಿಲ್ಲವೆಂದು ನಮಗೂ ಬುದ್ಧಿಯಿಲ್ಲವಾಯಿತೇ ? ಉತ್ತರಕರ್ನಾಟಕದ ಅನೇಕ ದೇವಸ್ಥಾನಗಳು ಮತ್ತು ಮಸೀದಿಗಳು ಒಂದೇ ವಿಶ್ವಸ್ಥ ಸಮಿತಿಯ ಅಡಿಯಲ್ಲಿ ನಡೆಯುತ್ತಿವೆ. ಹಿಂದೂ-ಮುಸಲ್ಮಾನ್ ಹಬ್ಬಗಳೆಲ್ಲಾ ಸಮರ್ಪಕವಾಗಿ ಎರಡೂ ಕೋಮುಗಳಿಂದ ಆಚರಿಸಲ್ಪಡುತ್ತವೆ. ಹುಸೇನಾಬಿಯೂ ಸುಶೀಲಕ್ಕನೂ ಒಟ್ಟಿಗೇ ಹಲವು ಕೆಲಸಗಳನ್ನು ಮಾಡುತ್ತಾರೆ. ಪರಸ್ಪರರ ಕಷ್ಟ-ಸುಖಗಳಲ್ಲಿ ನೆರವಾಗುತ್ತಾರೆ. ಎಲ್ಲೂ ವಗ್ವಾದಗಳಿಲ್ಲ. ಚಿಕ್ಕಪುಟ್ಟ ವಾಗ್ವಾದಗಳಿದ್ದರೂ ಅದೆಲ್ಲಾ ಒಂದೇ ಮನೆಯ ಸದಸ್ಯರೊಳಗೆ ನಡೆದಂತೇ ನಡೆದು ಆಮೇಲೆ ಮತ್ತೆ ಬಗೆಹರಿದುಹೋಗುತ್ತವೆ. ಇಮಾಮ್ ಸಾಬಿ ಗೋಕುಲಾಷ್ಟಮಿಯನ್ನೂ ಚೆನ್ನಬಸಣ್ಣ ರಾಮ್ ದಾನ್ ಹಬ್ಬವನ್ನೂ ಆಚರಿಸುತ್ತಾರೆ. ಇಮಾಮ್ ತನ್ನ ಮಿತ್ರರನ್ನು-ಬಂಧುಗಳನ್ನೂ ಕರೆದುಕೊಂಡು ಗೋಕುಲಾಷ್ಟಮಿಯ ಪೂಜೆಯಲ್ಲಿ ಪಾಲ್ಗೊಂಡು ತಿಂಡಿ ತಿಂದರೆ ಚೆನ್ನಬಸಣ್ಣ ರಾಮ್ ದಾನ್ ನ ಆಚರಣೆ-ಪ್ರಾರ್ಥನೆಗಳಲ್ಲಿ ಭಾಗವಹಿಸಿ ಇಫ್ತಾರ್ ಕೂಟಗಳಲ್ಲಿ ಭುಂಜಿಸುತ್ತಾನೆ. ಹಾಡೊಂದರಲ್ಲಿ ಕವಿ ಹೇಳುವಂತೇ

ಓದಿ ಬ್ರಾಹ್ಮಣನಾಗು
ಕಾದು ಕ್ಷತ್ರಿಯನಾಗು
ಏನಾದರೂ ಆಗು ಮೊದಲು ಮಾನವನಾಗು

ಹುಟ್ಟಾ ಯಾರೂ ಯಾವುದೇ ಜಾತಿಮತಗಳಲ್ಲಿ ಜನಿಸಿದರೂ ಬೆಳೆಯುತ್ತಾ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನವಯುಗದಲ್ಲಿ, ನವ ಕಾಲಧರ್ಮದಲ್ಲಿ ಮಾನವಧರ್ಮವಷ್ಟೇ ಶ್ರೇಷ್ಠ. ಮೊದಲು ಮನುಷ್ಯನಾಗಬೇಕಾಗುತ್ತದೆ;ಮನುಷ್ಯನಾಗಲು ಕಲಿಯಬೇಕಾಗುತ್ತದೆ.

ದಕ್ಷಿಣ ಕನ್ನಡದ ದೇವಸ್ಥಾನವೊಂದರ ಅರ್ಚಕರೊಬ್ಬರ ಕುಟುಂಬ ವಾಹನವೊಂದರಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿ ಕುಟುಂಬದ ಎಲ್ಲಾ ಸದಸ್ಯರೂ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವಾಗ ಕೆಲವು ಮುಸ್ಲಿಮ್ ಬಾಂಧವರಿಗೆ ಅವರ್ಯಾರೋ ಪುರೋಹಿತರು ಎಂಬುದು ಹೊರನೋಟದಿಂದ ತಿಳಿಯುತ್ತದೆ. ಆಮೇಲೆ ನೋಡಿದರೆ ಅವರು ಸುಮಾರಾಗಿ ಪರಿಚಯವಿರುವವರಂತೇ ಎಲ್ಲೋ ನೋಡಿರುವಂತೇ ಭಾಸವಾಗುತ್ತದೆ. ಆ ಕ್ಷಣ ಅವರು ಪರಿಚಯಕ್ಕಾಗಿ ನಿಲ್ಲುವುದಿಲ್ಲ, ಹತ್ತಿರದ ಆಸ್ಪತ್ರೆಯೊಂದಕ್ಕೆ ಎಲ್ಲರನ್ನೂ ಬೇರೆ ವಾಹನವೊಂದರಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ--ಇದಲ್ಲವೇ ಇಮಾಮ್ ಸಾಬಿಯ ಗೋಕುಲಾಷ್ಟಮಿಯ ಪೂಜೆ ? ಶಾಸಕರೂ ಮಂತ್ರಿಯೂ ಆಗಿದ್ದ ಭಟ್ಕಳದ ಯಾಹ್ಯಾ ಸಾಹೇಬರಿಗೆ ತುರ್ತಾಗಿ ಚಿಕಿತ್ಸೆಬೇಕಾಗಿ ಬಂದಾಗ, ಹಳ್ಳಿಗಾಡಿನ ಮೂಲೆಯೊಂದರ ಬ್ರಾಹ್ಮಣರೊಬ್ಬರು ದಿನಗಳ ಕಾಲ ಅವರ ಚಿಕಿತ್ಸೆಗೆ ನಿಲ್ಲುತ್ತಾರೆ. ಇದಲ್ಲವೇ
ರಾಮ್ ದಾನ್ ಪ್ರಾರ್ಥನೆ ?

ಹೀಗೇ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳೋಣ, ಸಂಕುಚಿತ ಮನೋವೃತ್ತಿ ಅಳಿಸಿಹಾಕೋಣ, ಆ ಮೂಲಕ ನಮ್ಮ ವ್ಯಕ್ತಿತ್ವ ಎಲ್ಲರಿಗೂ ಹತ್ತಿರವಾಗಿ ಎಲ್ಲರಲ್ಲೂ ಪ್ರೀತಿಯನ್ನು-ಸ್ನೇಹವನ್ನು ಗಳಿಸೋಣ. ಪ್ರತೀ ದೋಡ್ಡ ವ್ಯಕ್ತಿಯಲ್ಲಿ ದೊಡ್ಡ ಹೃದಯವೂ ಇರುತ್ತದೆ [ಕ್ಷಮಿಸಿ ಈ ಮಾತು ಇಂದಿನ ಹಲವು ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲ ].