ಧರ್ಮ ಸಂಕಟ !
’ಅಹಿಂಸಾ ಪರಮೋಧರ್ಮ’
ಎಂದು ಪ್ರವಚಿಸುತ್ತಿರುವಾಗ
ಎದುರಿನ ಬಯಲಿನಲ್ಲಿ ಮೇಯುತ್ತಿರುವ
ಆಕಳಿನ ಮೈಮೇಲೆ ಕುಳಿತ
ಕಾಗೆ ಉಣ್ಣಿಯನ್ನು ಕುಕ್ಕುತ್ತಾ
ಆ ನೆಪದಲ್ಲಿ ಆಕಳ ರಕ್ತದ
ರುಚಿನೋಡುತ್ತಿತ್ತು
ಆದರೂ ಸುಮ್ಮನಿದ್ದೆ
ಭಾಷಣ ಬಿಗಿಯುತ್ತಿದ್ದಾಗಲೇ
ಗುಂಯ್ಯನೇ ಹಾರಿಬಂದ ಮೂರು ಸೊಳ್ಳೆಗಳು
ಕಾಲಿಗೆ ಕಚ್ಚ ಹತ್ತಿದ್ದವು
ಅದೇ ರಾತ್ರಿ ಪ್ರವಾಸಿ ಹೋಟೆಲಿನ
ಕೊಠಡಿಯಲ್ಲಿ ಮಲಗಿದ್ದಾಗ
ತಿಗಣೆಗಳು ಕಚ್ಚತೊಡಗಿದವು
ಮನೆಯಲ್ಲಿ ಎಲ್ಲೆಲ್ಲೂ
ಕಾಲಿಗೆ ಅಡರುವ ಜಿರಲೆಗಳ
ಹಿಕ್ಕೆಯ ಅಸಹ್ಯ ವಾಸನೆ
ನೊಣಗಳ ಹೂಂಕಾರದ ಮುತ್ತಿಗೆ
ಇಲಿಗಳ ಅಹರ್ನಿಶಿ ದರೋಡೆ !
ಜೋಳಿಗೆ ಹಾಕಿ ಹೊರಟ ನನ್ನ
ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು
ಹೊಡೆದರೆ ನನ್ನಿಂದ ಅವುಗಳಿಗೆ ಹಿಂಸೆ
ಹೊಡೆಯದೇ ಇದ್ದರೆ ಅವುಗಳಿಂದ
ತಾಳಲಾರದ ಹಿಂಸೆ !
ಬಡಿದರೆ ಅವು ಸಾಯುತ್ತವೆ
ಬಡಿಯದಿದ್ದರೆ ನನ್ನ ಜೀವಹಿಂಡುತ್ತವೆ
ಆಗ ಈ ಬುದ್ಧನಿಗೆ
ಅಲ್ಲಿ ಜ್ಞಾನೋದಯವಾಯಿತು !
ಧರ್ಮಸಂಕಟವೆಂದರೆ ಇಂಥದ್ದೇ ಎಂಬುದು
ಎಷ್ಟು ಸರಳವಾಗಿದೆಯಲ್ಲವೇ ?