ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 7, 2010

ವನಿತಾ ದಶಾವತಾರಕೆ ಶರಣು

ಮಹಿಳಾ ದಿನಾಚರಣೆ ಅಂತ ಪ್ರತ್ಯೇಕ ಬೇಕೇ ಎನ್ನುವುದು ನನ್ನ ವಾದ, ಬಲ್ಲವರಿಗೆ ದಿನವೂ ರಾಜ್ಯೋತ್ಸವ, ದಿನವೂ ಮದರ್ಸ್ ಡೇ, ದಿನವೂ ಶಿಕ್ಷಕರ ದಿನಾಚರಣೆ ಹೀಗೇ ಎಲ್ಲವೂ ದಿನವೂ ಇರುತ್ತವೆ ಹೊರತು ಅದು ಒಂದೇ ದಿನಕ್ಕೆ ಆಗುವ- ಆಗಿ ಮುಗಿದುಬಿಡುವ ವ್ಯವಹಾರವಲ್ಲ. ಹೆಂಗಸು-ಗಂಡಸು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ! ಒಂದನ್ನು ಬಿಟ್ಟರೆ ಇನ್ನೊಂದಕ್ಕೆ ಬೆಲೆ ಇರುವುದಿಲ್ಲ. ಈಗೀಗ ನಾವು ಮಹಿಳಾ ದಿನಾಚರಣೆ ಎನ್ನುತ್ತೇವೆ, ಆದರೆ ಮಹಿಳೆಯರು ಒಂದರ್ಥದಲ್ಲಿ ಗಂಡಸರನ್ನು ತಪ್ಪಾಗಿ ಗ್ರಹಿಸಿದ್ದಾರೆ. ಶಾರೀರಿಕ ಪ್ರಕ್ರಿಯೆಯಲ್ಲಂತೂ ಮಹಿಳೆಯರಿಗೂ-ಮಹನೀಯರಿಗೂ ಅಜಗಜಾಂತರವಿದೆ. ಮಹಿಳೆ ದೈಹಿಕವಾಗಿ ಹೊರಗಡೆಯ ಕೆಲಸಕ್ಕೆ ತೊಡಗಿದರೆ ಅವಳಿಗೆ ತೊಂದರೆಯಾಗುತ್ತದೆ ಎಂಬ ಪಾಪಪ್ರಜ್ಞೆಯಿಂದ ನಮ್ಮ ಪೂರ್ವಜರು ಮನೆಯಲ್ಲೇ ಉಳಿಸಿದರು[ಓಡಬೇಡ, ಬುದ್ಧಿವಿಕಾಸಕ್ಕೆ ಪ್ರಯತ್ನಿಸಬೇಡ ಎನ್ನಲಿಲ್ಲ] ಮಾತ್ರವಲ್ಲ ತಿಂಗಳ ನಾಲ್ಕುದಿನ ಅವರ ಋತು ಚಕ್ರದ ಕ್ರಿಯೆಗೆ ಅನುಕೂಲವಾಗಿ, ನೋವನುಭವಿಸುವ ಆ ಮಹಿಳೆ ಆರೋಗ್ಯದಿಂದ ವಿಶ್ರಾಂತಿಪಡೆಯಲಿ ಎಂಬ ಉದ್ದೇಶ ದಿಂದ ಆ ದಿನಗಳನ್ನು 'ಮೈಲಿಗೆಯ ದಿನಗಳು' ಎಂದು ಘೋಷಿಸಿದ್ದರು, ಮಧ್ಯದಲ್ಲಿ ಕೆಲವರ ಮೌಡ್ಯದಿಂದ ಕೆಲವು ಹುಚ್ಚು ಶಾಸ್ತ್ರಗಳು-ಸಂಪ್ರದಾಯಗಳು ಬಂದವು ಬಿಟ್ಟರೆ ಪೂರ್ವೇತಿಹಾಸದಲ್ಲಿ ಅವು ಕಾಣಸಿಗುವುದಿಲ್ಲ. ಇಂದು ಅದನ್ನೆಲ್ಲ ತಿರುವಿಹಾಕಿದ ಮಹಿಳೆ ತನ್ನ ಮೈಮೇಲೆ ತಾನೇ ಚಪ್ಪಡಿ ಕಲ್ಲನ್ನು ಹಾಕಿಕೊಂಡಿದ್ದಾಳೆ. ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ,ದಾದಿಯಾಗಿ, ವೈದ್ಯೆಯಾಗಿ, ದಾಸಿಯಾಗಿ, ಶಿಕ್ಷಕಿಯಾಗಿ ಹೀಗೇ ಹಲವಾರು ವಿಭಿನ್ನ ಪಾತ್ರ ಪೋಷಣೆಯ ಅವಶ್ಯಕತೆ ಅನೇಕ ಮಹಿಳೆಯರ ಜೀವನದ ದಿನಗಳಲ್ಲಿ ಬರುತ್ತದೆ. ಎಲ್ಲವನ್ನೂ ಸಮರಸದಿಂದ, ಸಂತುಷ್ಟಿಯಿಂದ ನಿಭಾಯಿಸುವ ಮಹಿಳೆಯನ್ನು ಆಗಬಹುದಾದ ಕೆಲವು ರೂಪಗಳಿಂದ ಬಣ್ಣಿಸಿ , ಎಲ್ಲರಿಗೂ ಲೋಕದ ಸಮಸ್ತ ಗಂಡಸರ ಪರವಾಗಿ ಶುಭ ಹಾರೈಸಿ ಮಹಿಳೆಯರೆಲ್ಲರ ಗೌರವಾರ್ಥ ಜಾನಪದದ ಶೈಲಿಯಲ್ಲಿ ಅರ್ಪಿಸಿದ ಕವನ ಇಂತಿದೆ --


ವನಿತಾ ದಶಾವತಾರಕೆ ಶರಣು
[ಚಿತ್ರ ಋಣ : ೧೨೩ ಗ್ರೀಟಿಂಗ್ಸ್. ಕಾಂ ]

ಒಂಬತ್ತು ತಿಂಗಳು ನಮ್ಮನ್ನು ಹೊತಗೊಂಡು
ಅಮ್ಮ ಹಡೆದಳು ತನ್ನ ಕನಸ ನೆನೆಸಿ
ತುಂಬಿತ್ತು ಹದಿನೆಂಟು ಓದುತ್ತ ಕೂತ್ಗೊಂಡು
ಬೆಂಬಿಡದೆ ಕಾಡಿದೆವು ಕೆಲಸ ವಿಧಿಸಿ

ಅಕ್ಕ ಬಂದಳು ಮನೆಗೆ ಚೊಕ್ಕ ಬಟ್ಟೆಯ ಕೊಡಲು
ಬೆಕ್ಕಸ ಬೆರಗು ಈ ಮನೆತುಂಬೆಲ್ಲ
ಅಕ್ಕಿಕಾಳಿನ ಮೇಲೆ ಹೆಸರು ಬರೆದಿಹರೆಂದು
ಅಕ್ಕರೆಯ ಮಾತಲ್ಲಿ ಬುದ್ಧಿ ತಿಳಿಸಿ

ತಂಗಿಗ್ಯಾತಕೋ ಕೋಪ ಆದ್ರೂ ಒಂಥರಾ ಪಾಪ!
ಭಂಗ ತಾರಳು ನಮ್ಮ ಇರವ ಗಣಿಸಿ
ಬೃಂಗದಾ ಬೆನ್ನೇರಿ ಬಂತು ತೋಂ ತನ ಎನುತ
ಅಂಗಳದಿ ಜಿಗಿದಾಡಿ ಗೆಲುವಲಿರಿಸಿ

ಮಲ್ಲಿಗೆ ಹೂವನ್ನು ಮುಡಿದ ಮಾದಕ್ಕಂಗೆ
ಗಲ್ಲದ ಮೇಲಿನ ಮಚ್ಚೆ ಗುರುತು
ಬೆಲ್ಲದಂತಹ ಮಾತು ಆಡ್ಯಾಳ ಎಲ್ಲರೊಡೆ
ಬಲ್ಲವರೇ ಕೇಳಿ ನೀವ್ ದಾಯಿಯವಳು

'ಮಡದಿಮಾತನು ಕೇಳೆ ಗಿಡಕೆಲ್ಲ ನೋವಕ್ಕು'
ಗುಡಿಸಿ ಸ್ವಚ್ಛಗೊಳಿಸಿ ಈ ಮಾತನ್ನು
ಒಡಲುತುಂಬಾ ಊಟ ಮನತುಂಬುವಾ ನೋಟ
ಬಡಿಸಿ ಪ್ರೇಮದ ಮೂರ್ತಿ ತಾನಾದಳು

ವೈದ್ಯೆ ಪ್ರೇಮಕ್ಕನು ಬಡರೋಗಿಗಳ ಕೂಡ
ಚೋದ್ಯವಿಲ್ಲದೆ ಮಾತನಾಡುವಳು
ಆದ್ಯತೆ ನೀಡುತಾ ಪಾಪ ಅವರ ಕಷ್ಟ
ಬಾಧ್ಯತೆಗಳ ಮೀರಿ ಹರಿಸುವಳು


ಊರ ಶಾಲೇಲಿ ಮತ್ತೆ ಗ್ರಾಮಪಂಚಾಯ್ತಿಯಲಿ
ಭಾರೀ ಕೆಲಸದ ಜನರು ಹೆಂಗಳೆಯರು
ಯಾರೇನೇ ಅಂದರೂ ಖಾರಸಹಿಸುತ ನಡೆದು
ದಾರೀ ತುಂಬೆಲ್ಲ ಶುಭ ಹರಸಿಹರು