ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 24, 2011

|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ|||


|| ಅಹಂ ಏಕಂ ಶತಂ ವ್ಯಾಘ್ರಂ
ಸಪ್ತದೀ ಕುಂಜರಂ ಬಲಂ ||


" ಮಗನೇ ಆ ಕುಂಟು ಕುರಿ ಏನು ಹೇಳ್ತು ಬಲ್ಲೆಯಾ ? "

ಹೀಗೆಂದಾಗ ಅತ್ಯಂತ ಧೈರ್ಯದಿಂದಲೂ ಅತೀವ ಸಂತೋಷದಿಂದಲೂ ಕಣ್ಣರಿಳಿಸಿ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿರುವ ನಾನು ಅಜ್ಜಿಯನ್ನು ಕುಳಿತಲ್ಲೇ ತಿರುಗಿ ತಿರುಗಿ ನೋಡುತ್ತಲೇ ಇದ್ದೆ. ಅಜ್ಜಿ ಒತ್ತಾಸೆಯಿಂದ ಹೇಳುತ್ತಿದ್ದ ಆ ಸಂಗತಿ ನನ್ನಲ್ಲಿರುವ ಭಯವನ್ನು ನಿವಾರಿಸಿಕೊಳ್ಳುವಲ್ಲಿ ಅಂದು ನನಗೆ ನೆರವಾಗಿತ್ತು. ಕನ್ನಡ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಯಲ್ಲಿ ಕಲಿಯುತ್ತಿದ್ದ ನನಗೆ ೨ ಕಿಲೋ ಮೀಟರ್ ದೂರದ ಶಾಲೆಗೆ ಓಡಾಡುವಾಗ ಸಹಪಾಠಿಗಳು ಜೊತೆಗಿರದೇ ಇರುವ ಸಂಭವ ಇರುತ್ತಿತ್ತು. ಏಕಾಕಿಯಾಗಿ ಗುಡ್ಡದ ಕಾಲು ದಾರಿಗಳಲ್ಲಿ ಪಾಟಿಚೀಲ ಹೆಗಲಿಗೇರಿಸಿಕೊಂಡು ನಡೆದೇ ಹೋಗುವ ನನಗೆ ಸರಿಯಾದ ಚಪ್ಪಲಿಯೂ ಇರಲಿಲ್ಲ. ಆಗಿನ ಕಾಲವೇ ಹಾಗಿತ್ತು. ನಮಗೆಲ್ಲಾ ನಿತ್ಯವೂ ಹೊಸ ಯುನಿಫಾರ್ಮ ದಿರಿಸುಗಳು ಅಂತೆಲ್ಲಾ ಇರಲಿಲ್ಲ. ಮನೆಯಲ್ಲಿ ಬೇರೇ ಶಾಲೆಗೇ ಬೇರೆ ಎಂಬ ತೀರಾ ಮಡಿವಂತಿಕೆಯ ಜನ ನನ್ನ ಹಿರಿಯರಾಗಿರಲಿಲ್ಲ. ಕೊಳೆಯಾದಾಗ ತೊಳೆದು ಹಾಕಿಕೊಳ್ಳುವ ಎರಡೇ ಸೆಟ್ಟು ಅಂಗಿ ಚಡ್ಡಿಗಳು; ಅವೂ ದೊಗಳೆಗಳೇ !

ಅಂದಿನ ದಿನ ನಾವು ಏನನ್ನು ತೀರಾ ಪಡೆದಿರಲಿಲ್ಲವೋ ಅದಕ್ಕೆ ಹಳ್ಳಿಯ ಜೀವನ ವೈಖರಿಯೂ ಕಾರಣವಾಗಿದ್ದಿರಬಹುದು. ಪಡೆಯದೇ ಇದ್ದ ಆ ಸೌಕರ್ಯಗಳಿಗಿಂತ ಪಡೆದುಕೊಂಡ ಅನನ್ಯ ಅನುಭೂತಿ ಇದೆಯಲ್ಲಾ ಅದು ಇಂದಿನ ಜನಾಂಗಕ್ಕೆ ದುಡ್ಡುಕೊಟ್ಟರೂ ಸಿಗುವಂಥದ್ದಲ್ಲ. ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿಬೆಳೆದ ನಾನು ಮತ್ತು ನನ್ನೋರಗೆಯ ಜನರಿಗೆ, ನಮಗಿಂತಾ ಹಿಂದಿನ ಪೀಳಿಗೆಯವರಿಗೆ ಅದು ಸಿಕ್ಕಿರಬಹುದು. ಮನೆಯಲ್ಲಿ ಹಿರಿಯರು ನೀಡುವ ಪ್ರೀತ್ಯಾದರಗಳು, ವಾತ್ಸಲ್ಯ ಪೂರಿತ ನಡೆಗಳು ನಮಗೆ ಬೇಕಾದ್ದಕ್ಕಿಂತ ತುಸು ಜಾಸ್ತಿಯೇ ಲಭಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಳೆಗಾಲದಲ್ಲಿ ಎಲ್ಲೆಲ್ಲೂ ನಿಂತ ಮಳೆನೀರು. ತುಂಬಿ ಹರಿವ ತೊರೆ ಹಳ್ಳ ಕೆರೆ ಕಟ್ಟೆಗಳ ನೈಸರ್ಗಿಕ ಪುಟ್ಟ ಪುಟ್ಟ ಜಲಪಾತಗಳು. ಎಲ್ಲೆಲ್ಲೂ ಹಸಿರುಟ್ಟ ಭೂಮಿಯ ಅಂದ. ಸ್ವಲ್ಪ ಚಳಿಮಿಶ್ರಿತ ಹವೆಯಲ್ಲಿ ಮನೆಯೊಳಗೆ ಕುಳಿತು ಸೌದೆಯ ಒಲೆಯಲ್ಲಿ ಸುಟ್ಟು, ಕೊಬ್ಬರಿ ಎಣ್ಣೆ ಸವರಿದ ಹಲಸಿನ ಹಪ್ಪಳ ತಿನ್ನುತ್ತಾ ನಾವು ಕೇಳದ ಕಥೆಗಳಿಲ್ಲ. ಈಗ ಕಥೆ ಕೇಳಿ --

ಒಂದಾನೊಂದು ಕಾಲದಲ್ಲಿ ಒಬ್ಬ ಕುರಿಗಳನ್ನು ಸಾಕಿದ್ದನಂತೆ. ಅಮ್ಮಕುರಿ-ಅಪ್ಪಕುರಿ-ತಮ್ಮಕುರಿ-ಅಣ್ಣಕುರಿ-ಅಕ್ಕಕುರಿ-ಚಿಕ್ಕಪ್ಪಕುರಿಯೋ ಎಂಬಿತ್ಯಾದಿ ಹಲವು ಕುರಿಗಳು ಆತನ ಕೊಟ್ಟಿಗೆಯಲ್ಲಿದ್ದವು. ಅವು ದಿನಾಲೂ ತಾವೇ ಮನೆಯಿಂದ ಕೂಗಳತೆ ದೂರದಲ್ಲಿರುವ ಕಾಡಿಗೆ ಮೇಯಲು ಹೋಗ್ತಾ ಇದ್ವು. ಕಾಡಲ್ಲಿ ಅಲ್ಲಿ ಇಲ್ಲಿ ಒಟ್ಟಿಗೇ ಆ ಮಂದೆ ತಿರುಗಾಡ್ತಾ ಮೇಯ್ತಾ ಇದ್ವು. ಹೀಗೇ ಒಂದಿನ ಮಳೆಗಾಲದಲ್ಲಿ ಮೇಯ್ತಾ ಮೇಯ್ತಾ ಸಮಯ ಕಳ್ದಿದ್ದೇ ಗೊತ್ತಾಗ್ಲಿಲ್ಲ. ಸುಮಾರು ದೂರವೂ ಸಾಗಿಬಿಟ್ಟಿದ್ದವು. ಯಾಕೋ ಜೋರಾಗಿ ಗಾಳಿಬೀಸಿದಂತಾಗಿ ಕಪ್ಪುಗಟ್ಟಿದ ಮೋಡ್ದಿಂದ ಮಳೆ ಬರೋ ಹಾಗಾಯ್ತು. ಎಲ್ಲಾ ಕುರಿಗಳೂ ಓಡಿ ಮನೆಕಡೆ ನಡೆದುಬಿಟ್ಟವು. ಓಡುವ ಗಡಿಬಿಡಿಯಲ್ಲಿ ಕುಂಟುಕುರಿಯನ್ನು ಮರೆತುಬಿಟ್ಟವು. ತಾನೆಷ್ಟೇ ಓಡಿದರೂ ಶಾರೀರಿಕ ದೌರ್ಬಲ್ಯದಿಂದ ಆ ಕುಂಟು ಕುರಿಗೆ ಜಾಸ್ತಿ ಓಡಲಿಕ್ಕೆ ಆಗ್ತಾ ಇರಲಿಲ್ಲ. ಹೀಗಾಗಿ ಗುಂಪು ಮುಂದೆ ದೂರ ಓಡುವಾಗ ಇದ್ಕೆ ದಾರಿತಪ್ಪಿಹೋಯ್ತು !

ಮೊದ್ಲೇ ಕಾಡು ಹುಲಿ-ಸಿಂಹ-ಕರಡಿ ಇತ್ಯಾದಿ ಕ್ರೂರ ಪ್ರಾಣಿಗಳು ಇರೋ ಜಾಗ. [ಅಜ್ಜಿ ಇಷ್ಟನ್ನು ಹೇಳುತ್ತಿರುವಾಗ ನಮಗೆ ಮೈಯ್ಯೆಲ್ಲಾ ರೋಮಾಂಚನ ] ಕೇಳಬೇಕೇ ? ಪಾಪ ಈ ಕುಂಟುಕುರಿ [ನೋಡಿ ಅಜ್ಜಿ ಕುಂಟುಕುರಿ ಪಕ್ಷ! ಹೋದ ಕುರಿಮಂದೆಯನ್ನು ’ಆ’ ಎಂದರು, ಕುಂಟುಕುರಿಗೆ ’ಈ ’ ಎಂದರು-ನಮ್ಮ ಕನ್ನಡದಲ್ಲಿ ಹತ್ತಿರ ಇರುವ ವ್ಯಕ್ತಿ-ವಸ್ತು-ಪ್ರದೇಶಕ್ಕೆ ’ಈ’ ಕಾರ ಬಳಸುತ್ತೇವೆ, ದೂರವಿದ್ದರೆ ’ಆ’ ಕಾರ ಬಳಕೆಯಾಗುತ್ತದೆ] ಹಾಗೇ ಕುಂಟ್ತಾ ಕುಂಟ್ತಾ ಸ್ವಲ್ಪ ಮುನ್ನಡೀತು. ಅಷ್ಟರಲ್ಲೇ ಕತ್ತಲಾಗೇ ಹೋಯ್ತು. ಮಂದಬೆಳಕಿನಲ್ಲಿ ಹತ್ರದಲ್ಲೇ ಅದ್ಕೊಂದು ಗುಹೆ ಕಾಣಿಸ್ತು. ಹೇಗೂ ತಾನಂತೂ ಇವತ್ತು ಮನೆಗೆ ಹೋಗೋದಕ್ಕೆ ಸಾಧ್ಯವಿಲ್ಲಾ ಇಲ್ಲೇ ರಾತ್ರಿ ಕಳಿವಾ ಅಂತೇಳಿ ಕುಂಟುಕುರಿ ಆ ಗುಹೆಯೊಳಗೆ ಹೋಯ್ತು. ಹಗಲಿಡೀ ತಿರುಗಿ ಸುಸ್ತಾಗಿದ್ದ ಅದಕ್ಕೆ ಹೊಟ್ಟೆಯಂತೂ ತುಂಬಿತ್ತು. ಗುಹೆಯ ಒಳಗೆ ಹೋಗ್ತಾ ಹೋಗ್ತಾ ಅಲ್ಲೇ ಒಂದು ಜಾಗ ಹಿಡ್ದು ಮಲಗಿಬಿಡ್ತು. ಮಲ್ಗಿದ ಅದ್ಕೆ ಅಲ್ಲೇ ಜೋಂಪು ಹತ್ತತು.

ರಾತ್ರಿ ಹನ್ನೆರಡು ಹೊಡೆದಿರಬಹುದು. [ನಮ್ಮ ಕಣ್ಣು ಆಗ ಗೋಡೆಯಮೇಲೆ ಅಲ್ಲಾಡಿಸಿಕೊಂಡಿರುತ್ತಿದ್ದ ಸೊಕ್ಕಿನ ಗಡಿಯಾರದ ಮೇಲೆ ಹೋಗುತ್ತಿತ್ತು. ಎಲ್ಲಾ ಕಲ್ಪನೆ ತಾನೇ ಹನ್ನೆರಡು ಹೊಡೀವಾಗ ನಾವು ಮಲ್ಗಿರ್ತೀವಿ, ರಾತ್ರಿ ಅಷ್ಟೊತ್ತು ಎದ್ದಿದ್ದು ದಾಖ್ಲೇನೇ ಇಲ್ಲ. ಅಕಸ್ಮಾತ್ ಎಲ್ಲೋ ಕೃಷ್ಣಾಷ್ಟಮಿಯಂಥಾ ದಿನ ಇದ್ರೆ ಮನೆಯ ಒಳಗೇ ಇದ್ದು ಗೊತ್ತು ಬಿಟ್ರೆ ರಾತ್ರಿ ಹೊರಗೆ ಕಾಡಿಗೆಲ್ಲಾ ಹೋಗಿ ಗೊತ್ತಿದ್ದವರಲ್ಲ. ] ಗುಹೆಯ ಹೊರಗೆ " ಘಾಂವ್ ಘಾಂವ್ ಘಾಂವ್ " ಸಿಂಹ ಘರ್ಜನೆ! ಪಾಪ ಕುರಿಗೆ ಎಚ್ಚರಿಕೆಯಾಗೋಯ್ತು. ಒಬ್ಬನೇ ಅದೂ ಗುಹೆಯೊಳಗೆ ಇದೆಯಲ್ಲಾ ಅದರ ಫಜೀತಿ ಯಾರಿಗೂ ಬೇಡ. ಮೈಯ್ಯೆಲ್ಲಾ ಥರಥರ ನಡುಗ್ತಾ ಇತ್ತು. ಇನ್ನೇನು ಸಿಂಹ ಒಳಗೆ ಬಂದ್ರೆ ಕೊಂದು ತಿನ್ನೋದು ನಿಕ್ಕಿ. ಕುರಿ ಇರೋಬರೋ ಧೈರ್ಯಾನೆಲ್ಲಾ ಸೇರ್ಸ್ಕೊಂಡು ಮನಸ್ನಲ್ಲೇ ಎಲ್ಲಾ ದೇವ್ರನ್ನೂ ಸ್ಮರಣೆಮಾಡ್ಕೊಂಡು [ನೋಡಿ ಈ ಕಥೇಲಿ ಕುರಿಗೂ ದೇವರಿದ್ದಾನೆ !] ಸ್ವಲ್ಪ ಗಂಟ್ಲನ್ನ ಸರಿಮಾಡ್ಕೊಂಡ್ತು. ಹೇಗೂ ಸಾಯೂದ್ ಸಾಯೂದೇ ಬದಕ್ಲಿಕ್ಕೆ ಆದ್ರೆ ನೋಡ್ವ ಹೇಳಿ ಯಾವ್ದೋ ಹೊಸ ಭಯಂಕರ ಕಾಡು ಪ್ರಾಣಿ ಸ್ವರದಲ್ಲಿ ಹೇಳ್ತು " ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ. "

[ಆ ಸಮಯದಲ್ಲಿ ಕುತೂಹಲ ಹೇಗಿತ್ತು ನಮ್ಗೆ ಅಂದ್ರೆ ನಿಜಕ್ಕೂ ಅದನ್ನು ಶಬ್ದಗಳಲ್ಲಿ ಹೇಳೋದಕ್ಕೆ ಸಾಧ್ಯಾವಾಗ್ತಾ ಇಲ್ಲ, ಅಜ್ಜಿ ಮುಂದುವರಿಸಿದ್ರು ] ಅಂಥಾ ಮಾದೊಡ್ಡ ಸಿಂಹಕ್ಕೆ ಗುಹೆಯ ಒಳಗಿನ ವಿಚಿತ್ರ ಪ್ರಾಣಿಯ ಆ ಕೂಗು ಕೇಳಿ ಎದೇಲಿ ಪುಕುಪುಕು ನಡುಕ ಶುರುವಾಯ್ತಂತೆ. ಈ ಕುಂಟುಕುರಿ ಹೇಳ್ತಲ್ಲಾ ಹಾಗಂದ್ರೇನು ಗೊತ್ತೇ ? ನಾನು ಒಬ್ಬನೇ ನೂರಾರು ಹುಲಿಗಳನ್ನೂ ಮತ್ತು ಆನೆಗಳನ್ನೂ ಒಟ್ಟಿಗೆ ಸೇರ್ಸಿದ್ರೆ ಎಷ್ಟು ಶಕ್ತಿ ಇರ್ತದೋ ಅಷ್ಟು ಶಕ್ತಿ ಹೊಂದಿದ್ದೇನೆ ಅಂತ. ಈ ಕೂಗಿಗೇ ಸಿಂಹ ಒಂದೇ ಸಲಕ್ಕೆ ಹೆದರಿಬಿಡ್ತಂತೆ! ಗುಹೆಯೊಳಗೆ ಪ್ರವೇಶಮಾಡೋ ಬದ್ಲು ಅಲ್ಲಿಂದ ಬೇಗ ಬೇಗ ಜಾಗ ಖಾಲಿ ಮಾಡ್ತಂತೆ! ಕುಂಟುಕುರಿ ಅಂತೂ ಬದ್ಕಿದ್ನಲ್ಲಪ್ಪಾ ಅಂದ್ಕೊಂಡು ರಾತ್ರಿ ಅಲ್ಲೇ ಇದ್ದು ಮಾರ್ನೇ ದಿವ್ಸ ಬೆಳಿಗ್ಗೆ ಹೊರಗೆ ಬಂತಂತೆ. ನಿಧಾನಕ್ಕೆ ತಿರುಗ್ತಾ ತನ್ನ ಗುಂಪನ್ನು ಹುಡುಕಿ ಸೇರ್ಕೊಂಡ್ತಂತೆ.

--ಇದು ಪೂರ್ಣಕಥೆ. ಇಂತಹ ಹಲವಾರು ಕಥೆಗಳು ನಮ್ಮನ್ನೆಲ್ಲಾ ಅಂದು ಸ್ವಲ್ಪವಾದರೂ ಸಂಸ್ಕಾರವಂತರನ್ನಾಗಿ, ಸುಸ್ವಭಾವ ಉಳ್ಳವರನ್ನಾಗಿ ಮಾಡಲು ಕಾರಣವಾಯ್ತು ಎಂಬುದು ಇಂದಿನ ನನ್ನೋರಗೆಯ ಹಲವರ ಅಭಿಪ್ರಾಯ. ಇಂದು ಕೂಡುಕುಟುಂಬಗಳೂ ಇಲ್ಲ, ಕಥೆಹೇಳುವ ಹಿರಿಯರೂ ಇಲ್ಲ. ಎಲ್ಲರಿಗೂ ಟಿವಿಯೇ ಪರದೈವ! ಇರೋ ಸ್ವಲ್ಪ ಸಮಯವನ್ನು ಅದರ ಮುಂದೇ ಕಳೆಯುವ ಬಯಕೆ. ಇನ್ನು ಮಕ್ಕಳು ಹೇಗೆ ಸಂಸ್ಕಾರವಂತರಾಗಬೇಕು? ಮುಂದಿನೆ ಪೀಳಿಗೆ ಯಾವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ? ಭಗವದ್ಗೀತೆಯಂತಹ ಒಳಿತನ್ನು ಮತ್ತು ಸರಳ ಸುಖ ಜೀವನ ಸೂತ್ರಗಳನ್ನು ಬೋಧಿಸುವ ಗ್ರಂಥಗಳನ್ನು ಮಕ್ಕಳಿಗೆ ಬೋಧಿಸಲು ತಿಳಿಸಿದರೆ ನಾಗರಿಕತೆ ಅತಿ ಹೆಚ್ಚಾದ ನಮ್ಮಲ್ಲೇ ಕೆಲವರಿಗೆ ಅದು ಧರ್ಮಪ್ರಚಾರವಾಗಿ ಕಾಣುತ್ತದೆ. ಕಾಮಾಲೆಯ ಕಣ್ಣಿಗೆ ಲೋಕವೆಲ್ಲಾ ಹಳದಿ ಎಂಬಂತೇ ಕಂಡಿದ್ದೆಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಂಡರೆ ವಿಷಮಪರಿಸ್ಥಿತಿ ಉದ್ಭವಿಸುತ್ತದೆ. ಒಳ್ಳೆಯದು ಯಾವ ಮತದ ಮೂಲದಿಂದ ಬಂದರೇನು ಅದನ್ನು ಸ್ವೀಕರಿಸೋಣ. ಮತಗಳೆಲ್ಲದರ ಕುರುಡು ನಂಬಿಕೆಗಳನ್ನು ಬಿಟ್ಟುಬಿಡೋಣ ಅಲ್ಲವೇ ?

ಸತ್ಯವನ್ನು ಹೇಳುವುದಾದರೆ ಭಗವದ್ಗೀತೆಯ ಆಂಗ್ಲ ಅನುವಾದವನ್ನೂ, ಅದರ ವ್ಯಾಖ್ಯಾನಗಳನ್ನೂ ಇಡೀ ವಿಶ್ವದ ಎಲ್ಲೆಡೆಯ ಜನ ಒಪ್ಪುತ್ತಾರೆ; ಆದರೂ ಹೊರಗಿನಿಂದ ತಾವು ಅದನ್ನು ಅಳವಡಿಸಿಕೊಂಡಿದ್ದನ್ನು ಹೇಳುವುದಿಲ್ಲ, ತೋರಗೊಡುವುದಿಲ್ಲ. ಎಲ್ಲೋ ಒಬ್ಬಿಬ್ಬರು ಒಬಾಮಾ ಥರದವರು ಹೊರಗಿನಿಂದಲೂ ಒಪ್ಪುತ್ತಾರೆ. ಮನುಷ್ಯ ಹುಟ್ಟುವುದು ಸಾಯುವುದು ನಡೆದೇ ಇರುತ್ತದೆ. ತೀರಾ ಆಧ್ಯಾತ್ಮಿಕವಾಗಿ ನೋಡುವುದಾದದರೆ ಯಾರೂ ಯಾರಿಗೂ ಏನೂ ಅಲ್ಲ ! ಯಾವ ಸಂಬಂಧವೂ ಇಲ್ಲ. ಆದರೂ ಲೌಕಿಕವಾಗಿ ಬದುಕಿರುವವರೆಗೆ ಇಲ್ಲಿರುವ ಸುಖವನ್ನು ಅನುಕೂಲತೆಗಳನ್ನು ಪಡೆಯುವುದು ಜನಸಾಮಾನ್ಯರ ಇಚ್ಛೆಯಾಗಿರುತ್ತದೆ. ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದ ವಿಶ್ವದ ಜನತೆ ವಿಶ್ವಮಾನವ ತತ್ವವನ್ನು ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದೆ!

ಹೀಗೆ ನಾವೊಮ್ಮೆ ಯೋಚಿಸೋಣ. ನಮಗೆಲ್ಲಾ ತಿಳಿದಿರುವಂತೇ ವೈದ್ಯಕೀಯ ಚಿಕಿತ್ಸೆಗಳಿಗೆ ಪ್ರಯೋಗಶಾಲೆ, ಪರಿಕರಗಳು, ಯಂತ್ರಗಳು ಬೇಕು. ಹೊಟ್ಟೆಯೊಳಗಡೆ ಕರುಳಿನಲ್ಲಿ ಏನಾಗುತ್ತಿದೆ ಎಂದು ನೋಡುವುದೇ ಅಲೋಪಥಿ ಚಿಕಿತ್ಸೆಯಲ್ಲ, ಅದು ಆಯುರ್ವೇದವೂ ಅಲ್ಲ, ಹೋಮಿಯೋಪಥಿಯೂ ಅಲ್ಲ. ಏನಾಗಿದೆ ಎಂಬುದನ್ನು ವೈಜ್ಞಾನಿಕ ಉಪಕರಣಗಳ ಮೂಲಕ ತಿಳಿದುಕೊಳ್ಳುವುದು ಆ ಹಂತ. ನಂತರದ ಉಪಚಾರ ಪ್ರಕ್ರಿಯೆಮಾತ್ರ ಆ ಯಾ ಚಿಕಿತ್ಸಾ ಕ್ರಮಗಳಿಗೆ ಬದ್ಧವಾಗಿದ್ದು. ಅದೇ ರೀತಿ ಹಿಂದೂ ಧರ್ಮದಲ್ಲಿ ಬಳಕೆಯಾದ ಭಗವದ್ಗೀತೆ ಕೆಲವು ವೈಜ್ಞಾನಿಕ ಉಪಕರಣಗಳು ಮತ್ತು ಪ್ರಯೋಗಾಲಯವನ್ನು ಬಿಂಬಿಸಿದರೆ ಹೋಮ/ಹವನ/ಪೂಜೆ/ಪುನಸ್ಕಾರಗಳು ಹಿಂದೂ ಮತಕ್ಕಷ್ಟೇ ಮೀಸಲಾದ ಕೈಂಕರ್ಯಗಳಾಗಿರುತ್ತವೆ. ಹೀಗಾಗಿ ಭಗವದ್ಗೀತೆ ಎಂಬಮಾತ್ರಕ್ಕೆ ಜಗತ್ತಿಗೆ ಯಾವನೋ ಮಹಾಜ್ಞಾನಿ ಒದಗಿಸಿಕೊಟ್ಟ ಈ ಮಹಾಯಂತ್ರದ ಪ್ರಯೋಗ ಪರಿವೀಕ್ಷಣಾ ಪಟ್ಟಿ ಸಿಗದೇ ಹೋದರೆ ಅದು ಮನುಕುಲಕ್ಕೆ ನಾವೆಸಗುವ ಅಪಚಾರ ಎಂದರೆ ತಪ್ಪಾಗುವುದಿಲ್ಲ.

ನಿನ್ನೆ ನಾನು ಒಂದು ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಕಾರ್ಯಕ್ರಮ. ಹರಟೆಯ ವಿಷಯ ಹೀಗಿತ್ತು-- ಸಂಸಾರ, ಸಂಸ್ಕಾರ ಮತ್ತು ಸಮಾಚಾರ. ಅನೇಕ ವಿದ್ವಾಂಸರು ವೇದಿಕೆಯ ಮೇಲೂ ಕೆಳಗೂ ಇದ್ದರು. ಅದೊಂದು ಸಾಮಾಜಿಕ ಕಾರ್ಯವಾಗಿದ್ದರಿಂದ ಎಲ್ಲಾ ಮತಗಳವರೂ ಅಲ್ಲಿದ್ದರು. ಸಂಸಾರದ ಸರಿಗಮವನ್ನು ನಿಭಾಯಿಸುವ ಕಲೆ, ಆಧುನಿಕ ಜೀವನದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಸಂಸ್ಕಾರ ಕೊಡಬೇಕು ಹೀಗೆಲ್ಲಾ ಲೋಕಾಭಿರಾಮವಾಗಿ ನಾಕುಜನ ಕಲೆತು ಮಾತನಾಡುವ ಕ್ರಿಯೆ ಒಂದು ರೀತಿಯ ಹರಟೆ. ಅಲ್ಲಿ ಮುಕ್ತವಾಗಿ ಯಾರೂ ಏನನ್ನೂ ಸಂವಹಿಸಬಹುದಿತ್ತು. ಆಗ ವ್ಯಕ್ತವಾಗಿದ್ದೇ ಮನೆಯಲ್ಲಿ ಹಿರಿಯರ, ಅಜ್ಜ-ಅಜ್ಜಿಯರ ಕೊರತೆ ಕಾಣುವುದರಿಂದಲೂ ಮತ್ತು ಅಪ್ಪ-ಅಮ್ಮ ಇಬ್ಬರೂ ಕೆಲಸದ ನಿಮಿತ್ತ ಮಕ್ಕಳನ್ನು ದಾದಿಯರ ಕೈಗೋ ಇನ್ನಾರಕೈಗೋ ಕೊಟ್ಟು ಇಡೀ ದಿನದಲ್ಲಿ ಒಂದಾವರ್ತಿಯೂ ಮಕ್ಕಳನ್ನು ಸರಿಯಾಗಿ ಗಮನಿಸಲಾರದ್ದೇ ಹೋಗುವುದೂ ಹಲವು ನ್ಯೂನತೆಗಳಿಗೆ ಕಾರಣವಾಗುತ್ತದೆ ಎಂಬುದು.

ಪೂರಕ ನೀರು,ಗೊಬ್ಬರ, ಫಲವತ್ತಾದ ಮಣ್ಣು ಇವಿಷ್ಟಿದ್ದಲ್ಲಿ ಒಂದು ಸಸ್ಯ ಹೇಗೆ ಲೀಲಾಜಾಲವಾಗಿ ಬೆಳೆಯುವುದೋ ಹಾಗೇ ಸರಿಯಾದ ಮಾಹಿತಿ, ಪ್ರೀತಿ,ವಾತ್ಸಲ್ಯ, ಹೊತ್ತಿಗೆ ಸರಿಯಾದ ಆಹಾರ, ನಿದ್ರೆ, ವಿದ್ಯೆ ಇವುಗಳನ್ನೆಲ್ಲಾ ಒದಗಿಸಿದಾಗ ಮಾತ್ರ ಹುಟ್ಟಿದ ಮಗು ಸಮರ್ಪಕವಾಗಿ ಬೆಳೆಯುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ’ಕ್ಯಾಲ್ಶಿಯಮ್ ಡೆಫೀಶಿಯೆನ್ಸಿ’ ಅಂತಲೋ ಇನ್ನೇನೋ ಕೊರತೆ ಅಂತಲೋ ಹೇಳುವಂತೇ ಸಲ್ಲಬೇಕಾದ ಹಲವು ಉಪಚಾರಗಳಲ್ಲಿ ಯಾವುದೇ ವ್ಯತ್ಯಯವಾದರೂ ಮಗು ಅದರ ಫಲವನ್ನು ಉಣ್ಣಬೇಕಾಗುತ್ತದೆ-ಪರೋಕ್ಷ ಪಾಲಕರೂ ಅದರ ಫಲಿತ ಫಲವನ್ನು ಅನುಭವಿಸಬೇಕಾಗುತ್ತದೆ. ಎಲ್ಲವೂ ಯಾಂತ್ರಿಕವಾಗಿಯೇ ನಡೆದರೆ ನಮ್ನಮ್ಮಲ್ಲಿ ಆತ್ಮೀಯತೆ ಎಲ್ಲಿ ಬರುತ್ತದೆ ? ಈರುಳ್ಳಿಯ ಒಳಪದರದಲ್ಲಿರುವ ಪಾರದರ್ಶಕ ಸಿಪ್ಪೆಯಂತೇ ಒಂದು ಆತ್ಮಕ್ಕೂ ಇನ್ನೊಂದು ಆತ್ಮಕ್ಕೂ ಇರಬೇಕಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಕೇವಲ ಹತ್ತಿರದ ತೊಡಗಿಕೊಳ್ಳುವಿಕೆಯಿಂದ. ಇವತ್ತು ನಮ್ಮಲ್ಲಿ ಅಪ್ಪ-ಅಮ್ಮ [ ಬೆಟರ್ ಮಾಮ್ ಅಂಡ್ ಡ್ಯಾಡ್ !] ಮಕ್ಕಳನ್ನು ದಿನಕ್ಕೊಂದಾವರ್ತಿಯಾದರೂ ಅಪ್ಪಿಕೊಂಡು ಮುದ್ದಿಸುತ್ತಾರೆಯೇ ? ಅಥವಾ ಮಕ್ಕಳು ಪಾಲಕರನ್ನು ಹಾಗೆ ಪ್ರೀತಿಸುತ್ತಾರೆಯೇ ? -ಕೇಳಿಕೊಳ್ಳಬೇಕಾಗಿದೆ!

ಮಕ್ಕಳೇ ಇರುವ ಸಭೆಯಲ್ಲಿ ಸುಮ್ನೇ ಒಬ್ಬೊಬ್ಬರಿಗೂ ಪ್ರತ್ಯೇಕ ಕಾಗದ ಕೊಟ್ಟು ಹೆಸರು, ವಿಳಾಸ [ಐಡೆಂಟಿಟಿ] ಬರೆಯದೇ ನಿಮ್ಮಪ್ಪ ಅಮ್ಮನ ಬಗ್ಗೆ ಏನಾದರೂ ದೂರುಗಳಿದ್ದರೆ ದಾಖಲಿಸಿ ಎಂದರೆ ಪ್ರತೀ ಮಗುವೂ ಕೊಟ್ಟ ಸಮಯವನ್ನೂ ಮೀರಿ ಬರೆಯುತ್ತಿರುತ್ತದೆ ಮತ್ತು ಮತ್ತೊಂದು ಖಾಲೀ ಹಾಳೆಗೆ ಬೇಡಿಕೆ ಇಡುತ್ತದೆ! ಅಂದಮೇಲೆ ಪಾಲಕರ-ಮಕ್ಕಳ ನಡುವೆ ಹೇಳಿಕೊಳ್ಳಲಾಗದ ದುಗುಡಗಳು ಇರುತ್ತವೆ ಎಂದಾಯಿತಲ್ಲ. ಅಷ್ಟೆಲ್ಲಾ ದುಗುಡಗಳನ್ನು ಮಡುಗಟ್ಟಿಸಿಕೊಂಡೇ ಬೆಳೆವ ಮಗುವಿಗೆ ಸಹಜವಾಗಿ ಪ್ರಾಪ್ತವಯಸ್ಸು ಬಂದಮೇಲೆ ಪಾಲಕರ ಮೇಲೆ ಪ್ರೀತಿ-ಮಮತ್ಕಾರ ಇರಲೇಬೇಕೆಂದೇನೂ ಇಲ್ಲ. ಅಪವಾದಕ್ಕೆ ಕೆಲವರಿಗೆ ಇರಬಹುದು. ಬಹುತೇಕರು ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಬಿಡುವವರೇ ಆಗುತ್ತಾರೆ !

ಅರ್ಧ ಶತಮಾನದ ಹಿಂದಿನವರೆಗೂ ನಮ್ಮ ಕನ್ನಡದ ಮನೆಗಳಲ್ಲಿ ಕೆಲವು ಶಿಷ್ಟಾಚಾರಗಳಿದ್ದವು. ಬೆಳಿಗ್ಗೆ ಹೀಗೀಗೆ, ಮಧ್ಯಾಹ್ನ ಹೀಗೀಗೆ, ಸಾಯಂಕಾಲ ಹೀಗೀಗೆ ಎಂದೆಲ್ಲಾ ಒಂದು ನಿಯಮಿತ ಜೀವನ ಕ್ರಮ ಅಳವಡಿಕೆಯಾಗಿತ್ತು. ಅಲ್ಲಿ ’ದೇವರ ಹೆಸರಿ’ನಲ್ಲಿ ಆ ಭಯದಲ್ಲಿ ಹಲವು ವೈಜ್ಞಾನಿಕ ಶುದ್ಧಾಚರಣೆಗಳು ನಡೆಸಲ್ಪಡುತ್ತಿದ್ದವು. ಮಕ್ಕಳಿಗೆ ಸಾಯಂಕಾಲವಾದರೆ ಕೈಕಾಲು ಮುಖತೊಳೆದು ದೇವರಿಗೆ ದೀಪ ಮುಡಿಸಿ, ಅಜ್ಜಿಯೋ ಅಜ್ಜನೋ ಇನ್ಯಾರೋ ಹಿರಿಯರ ಜೊತೆ ನೆಲದಮೇಲೆ ಕುಳಿತು ಕೋಷ್ಟಕಗಳು, ಮಗ್ಗಿ, ಸುಭಾಷಿತಗಳು, ಶ್ಲೋಕಗಳೇ ಆದಿಯಾಗಿ ಹಲವಾರು ಮಾಹಿತಿಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ತಿನ್ನುವುದಕ್ಕಾಗಿ ಬದುಕುವುದೋ ಬದುಕುವುದಕ್ಕಾಗಿ ತಿನ್ನುವುದೋ ಎಂಬುದರ ಅರ್ಥವನ್ನು ಹಿರಿಯರು ಬಿಡಿಸಿ ಹೇಳುತ್ತಿದ್ದರು. ಎಂತಹ ಆಹಾರ ಹೇಗೆ ಯಾವಾಗ ಎಲ್ಲಿ ಯಾವರೀತಿ ಸ್ವೀಕರಿಸಬೇಕು ಎಂಬುದನ್ನೂ ಕೂಡ ಕಲಿಸಿಕೊಡುತ್ತಿದ್ದರು. ನಶಿಸಿಹೋದ ರಾಜವಂಶದಂತೇ ಇಂದು ಅಂತಹ ಅಪ್ರತಿಮ ಮೇಧಾವಿ ಹಿರಿಯರೂ, ಪಂಡಿತರೂ ನಮ್ಮೊಡನೆ ಸಿಗುತ್ತಿಲ್ಲ, ಎಲ್ಲವೂ ಕನಸಲ್ಲಿ ಕಂಡ ದೃಶ್ಯಗಳಂತೇ ಕಾಣುತ್ತವೆ; ಕನ್ನಡಿಯಲ್ಲಿನ ಗಂಟಾಗಿ ಪರಿಣಮಿಸಿವೆ.

ಸಮಾಜದಲ್ಲಿ ಸ್ವೇಚ್ಛಾಚಾರ, ಸ್ವೈರವರ್ತನೆ ಜಾಸ್ತಿಯಾದಾಗ, ಗುರು-ಹಿರಿಯ ಮಾರ್ಗದರ್ಶಕರು ಇಲ್ಲದೇ ಇರುವಾಗ, ಯಾವುದೇ ಕಟ್ಟುಪಾಡುಗಳಾಗಲೀ ದೈವಭಯವಾಗಲೀ ಇಲ್ಲದೇ ಹೋದಾಗ ನಡೆಯಬಾರದ್ದು ನಡೆಯುತ್ತದೆ, ಘಟಿಸಬಾರದ್ದು ಘಟಿಸುತ್ತದೆ. ಅದರ ಫಲವೇ ಏನೋ ಎಂಬಂತೇ ನಾವಿಂದು ಅತ್ಯಾಧುನಿಕ ಲೈಫ್ ಸ್ಟೈಲ್ ಎಂದುಕೊಳ್ಳುತ್ತಾ ಲಿವ್-ಇನ್ ರಿಲೇಶನ್‍ಶಿಪ್, ಗಂಡನಿಲ್ಲದೇ ಮಗುಪಡೆಯುವ ಕ್ರಿಯೆ ಇನ್ನೂ ಮುಂತಾದ ಹಲವು ತೆರನಾದ ಬದುಕನ್ನು ಕಾಣುತ್ತಿದ್ದೇವೆ. ಒಬ್ಬ ಹುಡುಗನೋ ಹುಡುಗಿಯೋ ತನ್ನನ್ನು ಇನ್ನೊಬ್ಬರೊಂದಿಗೆ ಶಾರೀರಿಕ ಸಂಬಂಧದಲ್ಲಿ ಸಂಪರ್ಕಗಳಲ್ಲಿ ತೊಡಗಿಸಿಕೊಳ್ಳುವಾಗ ಅಲ್ಲಿ ಕೇವಲ ’ ಆ ಯಂತ್ರ ’ ಮಾತ್ರ ಕೆಲಸಮಾಡುವುದೇ ? ಯಾವುದೇ ಭಾವನೆಗಳು ಇಲ್ಲದೇ ಹೋದರೆ ’ ಆ ಕೆಲಸಕ್ಕೆ ಸಿಗಬಹುದಾದ ಯಂತ್ರಗಳ’ನ್ನೇ ಉಪಯೋಗಿಸಬಹುದಿತ್ತಲ್ಲಾ! ಒಬ್ಬ ಹುಡುಗ ಯಾ ಹುಡುಗಿ ಹಲವಾರು ವ್ಯಕ್ತಿಗಳೊಡನೆ ಆ ರೀತಿಯ ಸಂಬಂಧ ಇಟ್ಟುಕೊಳ್ಳಬಹುದೇ ? ಅದರಿಂದ ತೊಂದರೆಯೇನೂ ಇಲ್ಲವೇ? ಮುಂದೆ ಪ್ರಾಯ ಕಳೆದಮೇಲೆ ಮುದುಕಾದಾಗ ಮಕ್ಕಳೂ ಇರದಿದ್ದರೆ ಆಗ ಯಾವ ಲಿವ್-ಇನ್ ಸೌಲಭ್ಯ ಅವರಿಗೆ ದೊರೆಯಬಹುದು? ಎಲ್ಲರೂ ಚಿಂತಿಸಬೇಕಾದ ವಿಷಯ ಎಂದುಕೊಂಡಿದ್ದೇನೆ.

ಹಾದರಕ್ಕೆ ಹುಟ್ಟುವ ಮಕ್ಕಳು ಹಾದಿಯಲ್ಲೇ ಬಿಸುಡಲ್ಪಡುವ ಹಗಲುರಹಸ್ಯ ಪಾಪದ ಆ ಶಿಶುಗಳ ಮಾರಣಹೋಮ ನೋಡಿದರೆ ನಿಜಕ್ಕೂ ನಾಗರಿಕ ಸಮಾಜ ಎಷ್ಟು ಕ್ರೂರಿ ಎನಿಸುತ್ತದೆ. ಬೇಡದ ಮಗುವನ್ನು ಎಲ್ಲೆಲ್ಲೋ ಯಾರಿಗೋ ಸಿಗುವಂತೇ ಕಾಣಿಸಿ ಬಿಟ್ಟು ಕಣ್ಮರೆಯಾಗುವುದೂ ಕಂಡುಬರುತ್ತದೆ. ಇನ್ನು ಕೆಲವರು ನೇರವಾಗಿ ಬೇನಾಮಿ ಹೆಸರಿನಲ್ಲಿ ಅನಾಥಾಶ್ರಮಕ್ಕೆ ಬಿಟ್ಟುಬರುವುದು ತಿಳಿದುಬಂದಿದೆ. ನಾಳೆ ಆ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಿಂದ ವಂಚಿಸಿದ ಸಾಮಾಜಿಕ ಪಾಪ ಆ ಹಾದರದ ಪಾಲಕರದಾಗಲಿಕ್ಕಿಲ್ಲವೇ? ಕಾಲೇಜಿಗೆ ಹೋಗುವ ಹುಡುಗನಿಗೆ ಏಕಾಂತದಲ್ಲಿ ಮಜಾ ಉಡಾಯಿಸಲು ’ಅವಳು’ ಬೇಕು ಆದರೆ ತಾನು ಮದುವೆಯಾಗುವಾಗ ತನಗೆ ’ಕನ್ಯಾಪೊರೆಹರಿಯದ ಕನ್ಯೆಯೇ ಬೇಕು’ ಎಂಬುದು ಎಷ್ಟು ಧೂರ್ತತನ ಅಲ್ಲವೇ? ಪಾಲಕರ ಕಣ್ತಪ್ಪಿಸಿ ಪಾರ್ಕಿನಲ್ಲೋ ಸಿನಿಮಾ ಟಾಕೀಸಿನಲ್ಲೋ ಮತ್ತೆಲ್ಲೋ ಕುಳಿತು ಚಕ್ಕಂದವಾಡುವ ಹುಡುಗಿಗೆ ಎಲ್ಲಾಮುಗಿದು ಮದುವೆಯಾಗುವಾಗ ’ಸರಿಯಿರುವ ಗಂಡು’ ಬೇಕು; ಸರಿಯಿರುವ ಗಂಡು ಎಲ್ಲಾ ಆಟ ಮುಗಿಸಿನಿಂತ ಹುಡುಗಿಗೆ ಸಿಗಲು ಏನವರಪ್ನಮನೆ ಆಸ್ತಿಯೇ ? ಅಂಥಾ ಜನ ಮದುವೆಯಾದಮೇಲೂ ಮೊದಮೊದಲು ಕೀಲಿ ತಿರುಗಿಸಿದ/ತಿರುಗಿಸಿಕೊಂಡ ಹಳೇ ಕೊಂಡಿಗಳ ನೆನಪಾಗಿ ಮತ್ತೆ ಅವರ ಸಂಪರ್ಕವನ್ನು ಪಡೆಯುವ ಕಳ್ಳಮಾರ್ಗವನ್ನು ಹಿಡಿಯುದಿಲ್ಲವೇ?

ಇದನ್ನೆಲ್ಲಾ ತಿಳಿದೇ ನಮ್ಮ ಪೂರ್ವಜರು ಭಾರತೀಯ ಸಂಸ್ಕಾರವನ್ನು ನಮಗೆ ಕೊಟ್ಟರು ಎನ್ನುವುದಕ್ಕಿಂತ ಅನುಗ್ರಹಿಸಿದರು ಎನ್ನುವುದು ಸರಿಯೆನಿಸುತ್ತದೆ. ರಾಮಾಯಣ ಮಹಾಭಾರತಗಳೆಲ್ಲಾ ಕೇವಲ ಪುಸ್ತಕದ ಕಥೆಗಳೆಂದೂ ಅವು ನಡೆಯಲೇ ಇಲ್ಲಾ ಎಂದೂ ವಾದಿಸುವ ಅರ್ತಂಡ ವಿಜ್ಜಾನಿಗಳೂ ಸಮಾಜದ ದಿಕ್ಕುತಪ್ಪಿಸುವಲ್ಲಿ ಮುಂದಿದ್ದಾರೆ. ನೀವು ಹಿಂದೂ ಮುಸ್ಲಿಮ್ ಕ್ರೈಸ್ತ ಬೌದ್ಧ, ಜೈನ ಯಾವುದೇ ಮತದವರಾಗಿರಲಿ ಪ್ರಾಥಮಿಕವಾಗಿ ಜೀವನದ ಸ್ವಾಸ್ಥ್ಯಸಂಹಿತೆಯನ್ನು ನೋಡಿ. ಮಾನವ ಜೀವನಕ್ಕೆ ಬೇಕಾಗುವ ಅಮೂಲ್ಯ ಆದರ್ಶಗಳು ಕೇವಲ ಭಗದ್ಗೀತೆಯಲ್ಲಿ ಹೇಳಲ್ಪಟ್ಟಿವೆ ಎಂಬುದನ್ನು ಎದೆತಟ್ಟಿಹೇಳುತ್ತಿದ್ದೇನೆ. ಅದು ಭಗವಂತ ಹೇಳಿದ್ದೋ ಇನ್ಯಾರೋ ಹೇಳಿದ್ದೋ ಆಗಿರಲಿ, ಪರವಾಗಿಲ್ಲ; ಆದರೆ ಜಗತ್ತಿನಲ್ಲಿ ಅಂತಹುದೇ ಮತ್ತೊಂದು ಮ್ಯಾನೇಜ್‍ಮೆಂಟ್ ಬೋಧಿಸುವ ಗ್ರಂಥದ ಅಸ್ಥಿತ್ವ ಇಲ್ಲ! ಜಗತ್ತಿಗೆ ಅದನ್ನು ನೀಡಿದಾತ ಹೇಳುತ್ತಾನೆ --ನೀವು ನಿಮ್ಮ ನಿಮ್ಮ ಧರ್ಮದಲ್ಲೇ, ನಿಮ್ಮ ನಿಮ್ಮ ವೃತ್ತಿಯಲ್ಲೇ ಇದ್ದುಕೊಂಡು ಭಗವಂತನನ್ನು ಕಾಣಲು ಸಾಧ್ಯವಿದೆ--ಎಂದು. ಮಾಡುವ ಕೆಲಸಗಳನ್ನು ಹೇಗೆ ಮಾಡಬೇಕು, ಕೈಸೋತಾಗ ಹೇಗೆ ಧೃತಿಗೆಡಬಾರದು ಎಂಬಿತ್ಯಾದಿ ಸುಖೀ ಸಮಾಜದ ಸುಖಬೋಧೆಗಳು ಕೇವಲ 'ಮತಪ್ರಚಾರ'ವೆಂದು ರಾಜಕೀಯದವರಿಂದ ಪರಿಗಣಿಸಲ್ಪಟ್ಟಿರುವುದರಿಂದಲೇ ಇಂದು ಭಾರತದ ಜನರ ಜನನಾಯಕರ ಗುಣಗಳು ಈ ರೀತಿ ಅವನತಿಯ ಹಾದಿ ಹಿಡಿಯುತ್ತಿವೆ.

ಯಾಕೆ ಹೀಗೆಲ್ಲಾ ಆಗುತ್ತಿದೆ? ಯಾರು ಇದನ್ನು ಹಾಳುಮಾಡಿದರು? ಯಾರು ಇದನ್ನು ಸರಿಪಡಿಸುವವರು ಎಂದು ಒಮ್ಮೆ ಆಲೋಚಿಸಿ. ಪಾಶ್ಚಾತ್ಯರು ಎಲ್ಲಾ ಸೌಲಭ್ಯಗಳನ್ನೂ ಶ್ರೀಮಂತಿಕೆಯ ಸುಪ್ಪತ್ತಿಗೆಯನ್ನೂ ಅನುಭವಿಸಿ ಅಲ್ಲೆಲ್ಲೂ ’ಶಾಂತಿ’ ಎಂಬುದು ಸಿಗದೇ ಹುಡುಗಾಟ ಬಿಟ್ಟು ’ಶಾಂತಿ’ಗಾಗಿ ಹುಡುಕಾಟ ನಡೆಸಿ ಭಾರತಕ್ಕೆ ಬರುತ್ತಾರೆ. ಯಾರೋ ಒಬ್ಬಾಕೆ ಶ್ರೀ ಸಾಯಿಬಾಬಾರಿಗೆ ಐನೂರು ಕೋಟಿ ರೂಪಾಯಿಗಳ ಚೆಕ್ ಬರೆದ ಕಥೆಯನ್ನು ಹಿಂದೊಮ್ಮೆ ಹೇಳಿದ್ದೆ. ಇವತ್ತು ನೀವು ಸುದ್ದಿ ಮಾಧ್ಯಮಗಳಲ್ಲಿ ’ಎಲ್ಲಾ ಇದ್ದರೂ ಸಾಯಿಬಾಬಾರವರು ಏನನ್ನೂ ಬಳಸುತ್ತಿರಲಿಲ್ಲ’ ಎಂಬುದನ್ನು ಓದುತ್ತಿದ್ದೀರಿ. ತನ್ನ ದರ್ಶನಕ್ಕೆ, ತನ್ನ ಹತ್ತಿರಕ್ಕೆ ಬರುವ ಭಕ್ತರಿಗೆ ತನ್ನ ಭೌತಿಕ ಕಾಯದ ಬೆವರು, ಎಂಜಲು ಇತ್ಯಾದಿ ಯಾವುದೇ ವಾಸನೆಯು ತಲುಪಬಾರದೆಂಬ ಕಾಳಜಿಯಿಂದ ಅತ್ಯುತ್ಕೃಷ್ಟ ಸುಗಂಧ ದ್ರವ್ಯಗಳನ್ನು ಅವರು ಬಳಸುತ್ತಿದ್ದರು-ಇದನ್ನು ಕೆಲವು ಮಠಾಧಿಪತಿಗಳೂ ಬಳಸುತ್ತಾರೆ ; ಮನುಜ ಸಹಜ-ತಪ್ಪೇನಿದೆ ?

’ಶಾಂತಿ’ ಎಂಬುದು ಕೊಳ್ಳುವ ಆಸ್ತಿಯಲ್ಲ, ಅದು ನಮ್ಮೊಳಗೇ ಉದ್ಭವವಾಗುವ ಒಂದು ಮನೋದೈಹಿಕ ಸ್ಥಿತಿ ಅಲ್ಲವೇ ? ಕುರುಬರ ಕಾಳ[ಕಾಳಿದಾಸ]ನಂತೇ ಮರದ ಕೊಂಬೆಯಮೇಲೆ ನಿಂತು ಬುಡವನ್ನು ಕಡಿದರೆ ಏನಾಗಬಹುದು ? ಸಮಾಜದ ಸ್ವಾಸ್ಥ್ಯ ಹದಗೆಟ್ಟಾಗ ಅದರಮೇಲೇ ನಿಂತ ನಮ್ಮ ಸ್ಥಿತಿ ಏನಾಗಬಹುದು? ಯೋಚಿಸುವ ಕಾಲ ಬಂದುಬಿಟ್ಟಿದೆ. ರಸ್ತೆಯಲ್ಲಿ ಓಡಾಡುವಾಗ ಮುಸುಕುಹಾಕಿಕೊಂಡು ಹುಡುಗರನ್ನು ಅಪ್ಪಿಹಿಡಿದು ಓಡಾಡುವ ಹುಡುಗಿಯರನ್ನು ಕಂಡಾಗ ಯಾರೂ ಪ್ರಶ್ನಿಸುವ ಅವಕಾಶವಿಲ್ಲ; ಹಾಗೇನಾದರೂ ಮಾಡಿದರೆ ಮಾಡಿದವನಿಗೆ ಕಠಿಣ ಸಜೆಯಾಗಬಹುದು! ಹೆಣ್ಣುಮಕ್ಕಳನ್ನು ಹೆತ್ತ ಪಾಲಕರೇ ತಮ್ಮ ಅಳಿಯನಾಗುವ ಹುಡುಗನಿಗೆ ಅಪ್ಪ-ಅಮ್ಮ ಸತ್ತಿರಬೇಕು ಅಥವಾ ಬದುಕಿದ್ದರೆ ಜೊತೆಗಿರಬಾರದು ಎಂದು ನಿರ್ಧರಿಸುವುದು, ಅಕ್ಕ-ತಂಗಿ-ಅಣ್ಣ-ತಮ್ಮ ಇವರುಗಳು ಇದ್ದರೆ ಪದೇ ಪದೇ ಅವರು ಬಂದುಹೋಗಿ ಮಾಡಬಾರದು ಎಂಬಿತ್ಯಾದಿಯೆಲ್ಲಾ ಕರಾರುಗಳನ್ನು ಮಗಳಿಗೆ ಕಲಿಸಿಕೊಡುವುದರಿಂದ ’ಅವಿಭಕ್ತ ಕುಟುಂಬ’ ವೆಂಬ ಶಬ್ದ ಇತಿಹಾಸದ ಪುಟಗಳನ್ನು ಸೇರುತ್ತಿದೆ!

ಭೂಮಿ ಯಾರಿಗೂ ಶಾಶ್ವತವಲ್ಲ. ಎಲ್ಲರೂ ಬಂದುಹೋಗುವವರೇ! ಆದರೂ ನಾವೇ ಏರಿಕೊಳ್ಳುವ ಚಲಿಸುತ್ತಿರುವ ರೈಲಿನಲ್ಲಿ ಬೋಗಿಗಳು ಗಲೀಜಾಗಿದ್ದರೆ, ತುಕ್ಕು ಹಿಡಿದು ಕೊಂಡಿ ಕಳಚಿಕೊಳ್ಳುವ ಹಂತ ತಲ್ಪಿದ್ದರೆ ಯಾರಿಗಾದರೂ ಏರಿಕೊಳ್ಳಲು ಇಷ್ಟವಾಗುವುದೇ? ನಾಟಕವೊಂದನ್ನು ಮಾಡಲು ಹೊರಟಾಗ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ ಪಾತ್ರವನ್ನು ಹೇಗೆ ಸಮರ್ಪಕವಾಗಿ ನಿಭಾಯಿಸಲು ಪ್ರಯತ್ನಿಸುವನೋ/ಳೋ ಹಾಗೇ ಭಗವಂತ ಕೊಟ್ಟ ಜೀವನನಾಟಕದ ಪಾತ್ರಧಾರಿಗಳಾದ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸಲು ಬರುತ್ತಿಲ್ಲವಲ್ಲ! ಈ ನಾಟಕದಲ್ಲಿ ಯಾರೂ ಯಾರಿಗೂ ಸಂಬಂಧವಲ್ಲ, ಆದರೆ ನಾಟಕ ಮುಗಿಯುವವರೆಗೂ ಅಣ್ಣನೋ ಅಪ್ಪನೋ ಸ್ನೇಹಿತೆಯೋ ಗಂಡನೋ ಹೆಂಡತಿಯೋ ಮತ್ತಿನ್ಯಾರೋ ಆಗಿ ಪಾತ್ರ ನಿರ್ವಹಿಸುವ ಅನಿವಾರ್ಯತೆ ಇದೆ. ನಾಟಕ ನಡೆಯುತ್ತಿರುವಾಗಲೇ ಅದನ್ನು ಕೆಡಿಸುವ [ಬಾಂಬ್ ಅಟ್ಯಾಕ್, ಹೈಜಾಕ್, ಮತಾಂತರ ಮೊದಲಾದ] ಕೆಲಸ ಎಷ್ಟು ಸಮಂಜಸ?

ಆರ್ಷೇಯ ಋಷಿವರ್ಯರುಗಳು ತಮ್ಮ ದಿವ್ಯಜ್ಞಾನಕ್ಕೆ ಲಭಿಸಿದ ಉತ್ತಮ ಅಂಶಗಳನ್ನು ಜಗತ್ತಿನ ಎಲ್ಲರ ಒಳಿತಿಗಾಗಿ ತಮ್ಮ ಔದಾರ್ಯದಿಂದ ಹಂಚಿಹೋದರು. ವೇದಗಳು ಪುರಾಣಗಳು ಉಪನಿಷತ್ತುಗಳು ಹೀಗೇ ಹಲವಾರು ಜ್ಞಾನನಿಧಿಗಳು ನಮಗೆ ಇಂದಿಗೂ ಲಭಿಸುತ್ತಿವೆ. ಸಾವಿರ ಸುತ್ತುಗಳನ್ನು ಹಾಕಿದರೂ ಗಂಟು ಒಂದೇ ಎಂಬ ತತ್ವದಂತೇ ಅವೆಲ್ಲವೂ ಕೊನೆಗೊಮ್ಮೆ ಸಾರುವುದು : ಮನುಜಮತ-ವಿಶ್ವಪಥ ! |ವಸುಧೈವ ಕುಟುಂಬಕಮ್ | ಎನ್ನುವುದು ಹೊಸದಾಗಿ ಮತಾಂಧರ ದಾಂಧಲೆ ಆರಂಭವಾದ ಮೇಲೆ ಜೋಡಿಸಿದ ವ್ಯಾಖ್ಯೆಯಲ್ಲವಲ್ಲ! ಶ್ರೀಸೂಕ್ತ ಸಾರುತ್ತದೆ --

|| ಪ್ರಾದುರ್ಭೂತೋಸ್ಮಿರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||

'ಉತ್ತಮವಾದ ದೇಶದಲ್ಲಿ ಜನಿಸಿರುವ ನನ್ನ ಪ್ರಾರ್ಥನೆ : ನನ್ನ ರಾಷ್ಟ್ರಕ್ಕೆ ಕೀರ್ತಿಯನ್ನೂ ಸಮೃದ್ಧಿಯನ್ನೂ ಕೊಡು' ಎಂದು. ಯಾವನೋ ಒಬ್ಬ ವ್ಯಕ್ತಿಯೋ ಬ್ರಾಹ್ಮಣನೋ ಎಲ್ಲೋ ಒಂದುಕಡೆ ಕುಳಿತು ಗಾಯತ್ರಿಯನ್ನು ಪಠಿಸಿದರೆ ಅದರಲ್ಲಿ

’ಧೀಯೋ’

ಎಂಬ ಶಬ್ದವನ್ನು ಉಚ್ಚರಿಸುತ್ತಾನೆ-ಅದು ಸಂಸ್ಕೃತ ವ್ಯಾಕರಣದ ಪ್ರಕಾರ ಬಹುವಚನ ಸೂಚಕವಾಗಿದೆ. ಕೇವಲ ತನಗೆ ಮಾತ್ರವಲ್ಲದೇ ನಮಗೆ ಅಥವಾ ಹಲವರಿಗೆ ಎಂಬ ಅರ್ಥವನ್ನು ಕೊಡುತ್ತದೆ. ಹೀಗಿರುವಾಗ ಕಬ್ಬಿಣದ ಕಡಲೆಯೆಂದು ಭ್ರಮಿಸಿ ಓದದೇ ಹೀಗಳೆಯುವ [ದ್ರಾಕ್ಷಿತಿನ್ನಲಾರದ ನರಿಯಂತೇ] ನಮ್ಮ ಯುವಜನಾಂಗ ನಮ್ಮ ಆರ್ಷೇಯ ವಾದಗಳನ್ನೂ ಸೂತ್ರಗಳನ್ನೂ ದೂರೀಕರಿಸಿದೆ. ಕೇವಲ ಅಲ್ಪಕಾಲದಲ್ಲಿ ಸಿಗಬಹುದಾದ ಕ್ಷಣಿಕ ಸುಖವೈಭೋಗಗಳಿಗೆ ಮಾರುಹೋಗಿ ನಿಜವಾದ ಆನಂದವನ್ನೂ ಸುಖವನ್ನೂ ಕಳೆದುಕೊಳ್ಳುತ್ತಿದ್ದಾರೆ. life is short, enjoy the fullest ಎಂದು ಯಾರೋ ರಾಬರ್ಟೋ ಲೋಬೋವೋ ಅಮೇರಿಕಾದಲ್ಲಿ ಹೇಳಿದ್ದನ್ನು ಇಲ್ಲಿನ ನಮ್ಮ ಪಡ್ಡೆಗಳು ನಿತ್ಯವೂ ಪಠಿಸುತ್ತಾರೆ. ಮೊಬೈಲ್ ನಲ್ಲಿ ಎಸ್ಸೆಮ್ಮೆಸ್ಸು ಕಳಿಸುತ್ತಾರೆ ! ಇನ್ನು ನೋಡಬಾರದ ಎಸ್ಸೆಮ್ಮೆಸ್ಸುಗಳು ಎಮ್ಮೆಮ್ಮೆಸ್ಸುಗಳು ಹುಡುಗ-ಹುಡುಗಿಯರು ಕದ್ದುಮುಚ್ಚಿನೋಡುವುದೂ ಪ್ರಸರಿಸುವುದೂ ನಡೆದೇ ಇದೆ. ತಮಾಷೆಗೆ ಕೆಲವರು ಹೇಳುವುದಿದೆ- ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆಯನ್ನು ಮಾತ್ರ ಇಲ್ಲೇ ಬಿಟ್ಟುಹೋದರು-ಎಂದು, ಈಗ ಅದಕ್ಕೆ ಇನ್ನೊಂದನ್ನೂ ಸೇರಿಸಬೇಕು, ’ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆ ಮತ್ತು ಸಂಸ್ಕೃತಿಗಳ ಬೀಜಗಳನ್ನು ಮಾತ್ರ ಇಲ್ಲೇ ಬಿತ್ತುಹೋದರು ’ !


’ನಾವು ನಾವೇ ನಾವು ಅವರಲ್ಲ’ ಎಂದು ನಿನ್ನೆ ಬ್ಲಾಗಿಗ ಮಿತ್ರರೊಬ್ಬರು ಬರೆದಿದ್ದರು, ಅದು ನಿಜವೇ. ನಾವು ನಾವಾಗಿರಬೇಕೇ ಹೊರತು ನಾವು ಅವರಾಗಬಾರದು. ಖ್ಯಾತ ಬರಹಗಾರ ಯಂಡಮೂರಿ ವೀರೇಂದ್ರನಾಥ್ ತಮ್ಮ ’ಮೈಂಡ್ ಪವರ್ ’ ಎಂಬ ಹೊತ್ತಗೆಯಲ್ಲಿ ಬರೆಯುತ್ತಾರೆ [ತುಂಬಾ ಉತ್ತಮ ಪುಸ್ತಕ-ಅಂಥದ್ದನ್ನು ನೀವೆಲ್ಲಾ [ಓದಿರದವರು] ಓದಬೇಕು]-- ಪ್ರತಿಯೊಬ್ಬರ ಜೀವನವೂ ಅವರವರಿಗೆ ಮುಖ್ಯವೇ. ನೀವು ನೀವಾಗಿ ಇಷ್ಟಪಡುವ ವೃತ್ತಿಯನ್ನು ಆಯ್ದುಕೊಳ್ಳಿ ಮತ್ತು ಆ ವೃತ್ತಿಯಲ್ಲಿ ನೀವೇ ಎಲ್ಲರಿಗಿಂತಲೂ ಉತ್ತಮ ಎಂಬುದನ್ನು ನಿಮ್ಮ ಕೃತಿಯಿಂದ ತೋರಿಸಿ. ಆಗ ನಿಮ್ಮ ಜೀವನವೆಂಬ ಸಿನಿಮಾದ ಹೀರೋ ನೀವೇ ಆಗಿರುತ್ತೀರಿ--ಎಂದು. ಭಗವದ್ಗೀತೆ ’ಕರ್ಮಯೋಗ’ದಲ್ಲಿ ಇದನ್ನೇ ಹೇಳುತ್ತದಲ್ಲಾ ! ಬಹುತೇಕ ಅವರ ಆ ಪುಸ್ತಕದ ಬರಹಗಳು ಭಗವದ್ಗೀತೆಯ ಸಾರವನ್ನೇ ಒಳಗೊಂಡಿವೆ. ಜಗತ್ತಿನಲ್ಲಿಯೇ ಅತ್ಯುತ್ತಮ ಪುಸ್ತಕವೆನಿಸಬಲ್ಲ ಆ ಅಂತಹ ಪುಸ್ತಕಗಳಿಗೂ ಆಧಾರವಾಗಿ ಭಗವದ್ಗೀತೆ ನಿಲ್ಲುತ್ತದೆ, ಸಲ್ಲುತ್ತದೆ ಎಂದಾದಾಗ ನಮಗೆ ಮಾತ್ರ ಅದು ಯಾಕೆ ವರ್ಜ್ಯವೋ ತಿಳಿಯದಾಗಿದೆ.

ಓ ನನ್ನ ರಾಷ್ಟ್ರಬಂಧುಗಳೇ, ನೀವು ಯಾವುದೇ ಮತದ ಅನುಯಾಯಿಗಳಾಗಿದ್ದರೂ ಅಡ್ಡಿಯಿಲ್ಲ, ನೀವು ಹಿಂದೂಗಳಾಗಬೇಕೆಂಬ ಆಗ್ರಹವಾಗಲೀ ಬೇಡಿಕೆಯಾಗಲೀ ಇರುವುದಿಲ್ಲ. ಎಲ್ಲಾ ಪೂರ್ವಾಗ್ರಹಗಳನ್ನು ಕಿತ್ತೊಗೆದು ಒಮ್ಮೆ ಮುಕ್ತ ಮನಸ್ಸಿನಿಂದ ಗೀತಾಮೃತವನ್ನು ಪಾನಮಾಡಿ, ಅದರ ರುಚಿಯನ್ನು ಒಮ್ಮೆ ಅರಿತಿರಾದರೆ ಮತ್ತೆ ಆವಾಗ ನಿಮಗೇ ಅದರ ಮಹತ್ವದ ಅರಿವಾಗುತ್ತದೆ. ಯಾರೂ ಜೀವನದಲ್ಲಿ ಸೋಲಬಾರದು, ಜೀವನ ಕೇವಲ ನಾಟಕ, ಯಾವ ಯಾವ ಮಾರ್ಗಗಳಿಂದ ಹೇಗೆ ಹೇಗೆ ಗೆಲ್ಲಬೇಕೆಂಬ ಸುಲಭ ಸೂತ್ರಗಳನ್ನು ಲೇಖಕ ಕೊಟ್ಟಿದ್ದಾನೆ. ಲೇಖಕ ’ಶ್ರೀಕೃಷ್ಣ’ ಎನ್ನುವುದನ್ನೂ ಅದು ’ಭಗವದ್ಗೀತೆ’ ಎಂಬುದನ್ನೂ ಮುಚ್ಚಿಟ್ಟು ಅದೊಂದು ಬರೇ ಉತ್ತಮ ಪುಸ್ತಕವೆಂದು ತಿಳಿದು ಓದಿನೋಡಿ. ನನ್ನ ದೇಶವಾಸಿಗಳು ಬದುಕಿನಲ್ಲಿ ಸಕಲ ಸುಖ ಶಾಂತಿ ಸಮೃದ್ಧಿ ಓಜಸ್ಸು ತೇಜಸ್ಸು ಧೈರ್ಯ ಹೀಗೇ ಎಲ್ಲವನ್ನೂ ಪಡೆದು ತಮ್ಮ ಜೀವನ ನಾಟಕದ ಪಾತ್ರವನ್ನು ಹೀರೋ ಆಗಿ ನಿರ್ವಹಿಸಬೇಕು ಮತ್ತು ಅದನ್ನೇ ಮುಂದಿನ ನಮ್ಮ ದೇಶವಾಸಿಗಳಿಗೆ ಕಲಿಸಬೇಕೆಂಬ ಕಳಕಳಿಯಿಂದ ಇವತ್ತೀ ಲೇಖನ ಬರೆದೆ. ಜಗತ್ತಿನ ಎಲ್ಲರೂ ಸುಖದಿಂದಿರಲಿ ಎಂದು ಪ್ರಾರ್ಥಿಸಿ ಅದನ್ನೇ ಹಾರೈಸಿ ಸದ್ಯ ವಿರಮಿಸುವುದಕ್ಕೆ ತಮ್ಮಲ್ಲಿ ಅಪ್ಪಣೆ ಕೇಳುತ್ತಿದ್ದೇನೆ, ನಮಸ್ಕಾರಗಳು.