ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 4, 2011

ಭರಿಸಲಾಗದ ನಷ್ಟ ವಾಗಿದೆ !



ಭರಿಸಲಾಗದ ನಷ್ಟ ವಾಗಿದೆ !

ಬಿನ್ ಲ್ಯಾಡನ್ ನಿಧನದಿಂದ ಪಾತಕಲೋಕಕ್ಕೆ ತುಂಬಲಾರದ ನಷ್ಟವಾಗಿದೆ ! ಅಬ್ಬರಿಸಿ ಅಕಾಲಮೃತ್ಯುವನ್ನು ಸ್ವಾಗತಿಸಿದ ಆತನ ದುರ್ಮರಣಕ್ಕೆ ಇಡೀ ಜಗತ್ತು ಶೋಕತಪ್ತವಾಗಿ ಕಂಬನಿಮಿಡಿದಿದೆ ! ---ಓಹೊಹೋ ಸಾರಿ ಕಣ್ರೀ ಇದು ಬೈಹಾರ್ಟೆಡ್ ಶೋಕ ಸಂದೇಶ ! ಮಾಮೂಲಾಗಿ ನಮ್ಮ ಮಾಧ್ಯಮಗಳಲ್ಲಿ ಸಲೀಸಾಗಿ ಕೆಲವು ಸಂದೇಶಗಳನ್ನು ಬಿತ್ತರಿಸುತ್ತಿರುತ್ತಾರೆ; ಕೊನೇಪಕ್ಷ ನಿರೂಪಕರೋ ವಾಚಕರೋ ತಾವು ಏನು ಹೇಳುತ್ತಿದ್ದೇವೆಂಬುದರ ಕಡೆಗೆ ಗಮನ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

ನೀವೆಲ್ಲಾ ಕೇಳಿದ್ದು ನೋಡಿದ್ದೇ ಹೊಸದೇನಲ್ಲ ಹಲವುಸಲ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿಕೊಂಡು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಉದಾ : __________ರವರ ನಿಧನದಿಂದ ____________ರಂಗಕ್ಕೆ ಭರಿಸಲಾಗದ ನಷ್ಟವಾಗಿದೆ. ___________ರವರ ಸಾವಿಗೆ ಪ್ರಧಾನಿ ___________ ಹಾಗೂ ಮುಖ್ಯಮಂತ್ರಿ ________________ಸೇರಿದಂತೇ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ______ ಹಾರೈಸುತ್ತದೆ.

ರೆಡೀ ಇಟ್ಟುಕೊಂಡಿರುವ ಇಂತಹ ಸಾಲುಗಳ ಬಿಟ್ಟ ಸ್ಥಳಗಳನ್ನು ತುಂಬಿಕೊಂಡು ಬೈಹಾರ್ಟ್ ಮಾಡಿಕೊಂಡುಬಿಟ್ಟರೆ ಸಾಕು.

ನನ್ನ ತಮ್ಮ ತಮಾಷೆಗೆ ಹವಾಮಾನ ವರದಿ ಹೇಳುತ್ತಿದ್ದ :

ಬೆಂಗಳೂರಿನ ಸುತ್ತಮುತ್ತ ಮೋಡಕವಿದ ವಾತಾವರಣವಿದ್ದು ಸಂಜೆಯ ವೇಳೆಗೆ ತುಂತುರು ಮಳೆ ಅಥವಾ ಜಡಿಮಳೆ ಬೀಳುವ ಸಂಭವನೀಯತೆ ಇದೆ ! ಮಿಕ್ಕುಳಿದಂತೇ ಒಳನಾಡಿನನಲ್ಲಿ ಒಣಹವೆ ಮುಂದುವರಿದಿದ್ದು ನಿರೀಕ್ಷಿಸುವ ಬದಲಾವಣೆಯೇನೂ ಕಂಡುಬಂದಿಲ್ಲ. ಆಗಾಗ ಸುಂಟರಗಾಳಿ ಬೀಸುತ್ತಿರುವುದರಿಂದ ತೀರಪ್ರದೇಶದ ಮೀನುಗಾರರಿಗೆ ಮುನ್ನಚ್ಚೆರಿಕೆ ವಹಿಸುವಂತೆ ಸೂಚಿಸಲಾಗಿದೆ ! ----ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಯಾಕೆಂದರೆ ಸುಮಾರು ೨೫-೩೦ ವರ್ಷಗಳಿಂದ ರೇಡಿಯೋದಲ್ಲಿ ಇಂಥದ್ದನ್ನೇ ಕೇಳುತ್ತಿದ್ದೇವೆ. ಶಬ್ದ ಶಬ್ದವೂ ಅದೇ, ಬ್ಯಾಂಕಿನ ಜಾಹೀರಾತೊಂದರಲ್ಲಿ ಹೇಳುವಂತೇ ’ಅದೇ ಮುಗುಳ್ನಗೆ ಮತ್ತು ಹೊಸ ಟೆಕ್ನಾಲಜಿ’ -- ಆ ಬ್ಯಾಂಕಿನವರು ಮುಗಳ್ನಗೆ ನಕ್ಕಿದ್ದು ಯಾವಾಗ ಎಂತ ತಿಳಿಯಲಿಲ್ಲ. ಬ್ಯಾಂಕಿನ ಕೌಂಟರುಗಳಲ್ಲಿ ಕುಳಿತ ಬಹುತೇಕ ಮೇಡಮ್ [ಮಡ್ಡಮ್ಮ]ಗಳು ಅಡುಗೆ-ಸೀರೆ-ಬಂಗಾರ ಇತ್ಯಾದಿ ಲೋಕಾಭಿರಾಮವಾಗಿ ಮಾತನಾಡುವ ಅಡ್ಡೆ ಅದಾಗಿರುವುದರಿಂದ ಮಧ್ಯೆ ಮಧ್ಯೆ ಬರುವ ಗಿರಾಕಿಗಳನ್ನು ಹುಲಿಗಣ್ಣಿನಿಂದ ನೋಡಿ " ಏನ್ಬೇಕ್ರೀ ?ಅಲ್ಹೋಗ್ರಿ " ಎಂದು ಎಗರಾಡುತ್ತಾ ಬಹಳ ಅಪ್ಯಾಯಮಾನವಾಗಿ ಸಂಭಾಳಿಸುವ ಪರಿ ಇಂದಿಗೂ ಕಾಣಸಿಗುವಂಥದ್ದೇ! ಕಂಪ್ಯೂಟರುಗಳು ಬಂದು ಎಷ್ಟೆಲ್ಲಾ ಕೆಲಸಗಳು ಗಣಕೀಕೃತವಾಗಿ ಬರೆಯುವ ಕೆಲಸವೇ ಅತಿ ಕಮ್ಮಿಯಾದ ಬ್ಯಾಂಕಿನಲ್ಲಿ ಹೀಗಿದ್ದೂ ಹೀಗೆ ಇನ್ನು ಮೊದಲಿನಹಾಗೇ ಕಂಪ್ಯೂಟರ್ ಇರದ ಕಾಲವಾಗಿದ್ದರೆ ಗಿರಾಕಿಗಳ ಕೆಲಸಕ್ಕೆ ದೇವರೇಗತಿಯಾಗಬೇಕಾಗಿತ್ತೇನೋ. ಪ್ರಾಯಶಃ ಅವರು ಹೇಳುವುದು ಹೀಗಿರಬೇಕು--ನಾವು ನಗುತ್ತಿರುತ್ತೇವೆ, ಕಂಪ್ಯೂಟರುಗಳು ಕೆಲಸಮಾಡುತ್ತಿರುತ್ತವೆ--ಇದೇ ಆ ಹೊಸ ಟೆಕ್ನಾಲಜಿ!

ಮಾಧ್ಯಮ ವಾಹಿನಿಗಳ ಕಾರ್ಯಕ್ರಮ ನಿರೂಪಕರಿಗಂತೂ ಕೆಲವೆಲ್ಲಾ ನಿದ್ದೆಯಲ್ಲೂ ಬಡಬಡಿಸುವ ಶಬ್ದಗಳು. ಇತ್ತೀಚೆಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿಗೆ ನಿರೂಪಕ ಮಹಾಶಯನೊಬ್ಬ ’ಗಣ್ಯ ಅತಿಥಿ’ಯಾಗಿ ಬಂದಿದ್ದ. ಮಾತನಾಡಬೇಕಲ್ಲ. ಮಾತಿನ ಮಧ್ಯೆ ಹಲವುಬಾರಿ ಆತನ ಎಂದಿನ ಶೈಲಿಯ ಶಬ್ದಗಳು ಬಂದವು, ಕಾರ್ಯಕ್ರಮ ಇನ್ನೂ ಮಧ್ಯಭಾಗದಲ್ಲಿತ್ತು. ತನ್ನ ಮಾತು ಮುಗಿದಕೂಡಲೇ " ಇಷ್ಟು ಹೇಳಿ ಈ ಕಾರ್ಯಕ್ರಮವನ್ನು ಮುಗಿಸ್ತಾ ಇದೇನೆ, ಕ್ಷಣಕ್ಷಣದ ಮಾಹಿತಿಗಾಗಿ ನೋಡ್ತಾಇರಿ " ಎಂದ. ಇಡೀ ಸಭೆಯಲ್ಲಿ ಗೊಳ್ಳನೆ ನಗೆ ! ಇನ್ನು ಲಲನಾಮಣಿಗಳು ಉದುರಿಸುವ ಮುತ್ತುಗಳನ್ನು ನೋಡಬೇಕು " ಈಗ ಚಿಕ್ಕದೊಂದು ಬ್ರೇಕ್ ಬ್ರೇಕ್ ನಂತರ ______ ಕಾರ್ಯಕ್ರಮ ಮುಂದುವರಿಯುತ್ತೆ " ೩೦ ನಿಮಿಷಗಳ ಕಾರ್ಯಕ್ರಮದಲ್ಲಿ ೨೦ ನಿಮಿಷಗಳು ಜಾಹೀರಾತಿಗೇ ಮೀಸಲು !

ಮೊನ್ನೆ ಸತ್ಯಸಾಯಿ ಬಾಬಾ ದೇಹಾಂತ್ಯವಾಯಿತು. ಆಗ ಹಲವರು " ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ " ಎಂತಿದ್ದರು. ಸನ್ಯಾಸಿಗಳು, ಅವಧೂತರು, ಸಂತರು ಸಹಜವಾಗಿ ಎಲ್ಲಿದ್ದರೂ ಅವರ ಆತ್ಮ ಸದಾ ಶಾಂತಿಯಲ್ಲೇ ಇರುತ್ತದೆ! ಇದನ್ನು ಸಾಯಿಬಾಬಾ ಅಂತೂ ಎತ್ತಿ ತೋರಿಸಿದ್ದಾರೆ. ಅವರ ಆತ್ಮಕ್ಕೇ ಶಾಂತಿಯನ್ನು ಕೋರುವ ಮಹಾನ್ ಮಹಿಮಾನ್ವಿತರು ಅದೆಷ್ಟು ಮಂದಿ ! ಪುಣ್ಯಕ್ಕೆ ’ಸಾಯಿಬಾಬಾ ಅವರ ಕುಟುಂಬಕ್ಕೆ ಅವರ ಸಾವಿನಿಂದಾದ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ’ ಎಂದು ಜಾಸ್ತಿ ಯಾರೂ ಹೇಳಲಿಲ್ಲ, ಯಾರೋ ಒಬ್ಬಿಬ್ಬರು ಅವರು ಜನಿಸಿದ ಮನೆಯನ್ನು ನೆನೆದು ಹೇಳಿದರು. ವಸುಧೈವ ಕುಟುಂಬಕಮ್ ಎಂಬುದನ್ನು ಕೃತಿಯಲ್ಲಿ ಬದುಕಿದ ವ್ಯಕ್ತಿಗೆ ವಿಶ್ವಕುಟುಂಬವೆಂಬ ಅರ್ಥದಲ್ಲಿ ಹಾಗೆ ಹೇಳಬಹುದಾದರೂ ಮೇಲ್ನೋಟಕ್ಕೆ ಕುಟುಂಬ ಬಂಧನವನ್ನು ಕಟ್ಟಿಕೊಳ್ಳದ ಬಾಬಾರಿಗೆ ಹಾಗೆ ಹೇಳುವುದು ಸರಿಯಾಗುತ್ತಿತ್ತೇ ?

ಪ್ರಚಾರಕ್ಕಾಗಿ ಋಷಿಕುಮಾರರಂತೆ, ಗುರೂಜಿಯಂತೆ ಹಲವರು ಮಾಧ್ಯಮಗಳ ಮೊರೆಹೋಗಿದ್ದಾರೆ. ಜ್ಯೋತಿಷಿಗಳು-ವಾಸ್ತು ತಜ್ಞರು ತಲೆಹುಣ್ಣಾಗುವಷ್ಟು ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇಲ್ಲದ್ದನ್ನೂ ಊಹಿಸಿ ನಡೆಸುವ ಅನೇಕ ಕಾರ್ಯಕ್ರಮಗಳು ಜರುಗುತ್ತವೆ! ಜ್ಯೋತಿಷ್ಯ-ವಾಸ್ತು ಶಾಸ್ತ್ರವೇ ಹಣಮಾಡುವ ದಂಧೆಯೇ ಎನ್ನುವ ಕಾರ್ಯಕ್ರಮವನ್ನು ವಾರಗಳವರೆಗೆ ಬಿತ್ತರಿಸುವ ಮಾಧ್ಯಮವಾಹಿನಿಯೊಂದು ದಿನಂಪ್ರತಿ ಬೆಳಿಗ್ಗೆ ಜ್ಯೋತಿಷಿಗಳನ್ನು ಕೂರಿಸಿ ಯಥಾವತ್ ಫೋನ್-ಇನ್ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿದ್ದು-ನಡೆಸುತ್ತಿರುವುದು ಹಾಸ್ಯಾಸ್ಪದ.

ಲೈಬ್ರರಿಯೊಂದರ ಬಳಿ ನಿಲ್ಲಿಸಿದ್ದ ಗಾಡಿಯಮೇಲೆ ’ಪ್ರೆಸ್’ ಎಂದು ಕೆಂಪಕ್ಷರದಲ್ಲಿ ಬರೆದಿತ್ತು. " ಪ್ರೆಸ್’ ಅಂತ ಬರೆದಿದ್ದೀರಲ್ಲಾ ....ಯಾವ ಮಾಧ್ಯಮದಲ್ಲಿ ಕೆಲಸಮಾಡುತ್ತೀರಿ ? " ಎನ್ನುವ ವಾಕ್ಯ ಅರ್ಧವಾಗುತ್ತಿದ್ದಂತೆಯೇ ಮೈಮೇಲೆ ಹಾರಿಬಂದ ಆತ " ಯಾಕೆ ನಿಮ್ ಪರ್ಮಿಶನ್ ಬೇಕಾ ? " ಎಂದ! ಪತ್ರಕರ್ತರಲ್ಲಿ ರೌಡಿಗಳೂ ಇದ್ದಾರೆ -ಹುಷಾರು!---ಇದು ಅಗ್ನಿ ಯಷ್ಟೇ ನಿಗಿನಿಗಿ ಉರಿಯುವ ಸತ್ಯ. ಒಂದುಕಾಲದಲ್ಲಿ ಪತ್ರಕರ್ತರೆಂದರೆ ಅವರು ಸಾಹಿತ್ಯಾಸಕ್ತರೂ, ದೇಶಪ್ರೇಮಿಗಳೂ ಆಗಿರುತ್ತಿದ್ದರು; ಸಮಾಜವನ್ನು ಸುಧಾರಿಸುವ ಲೇಖನ, ವರದಿಗಳನ್ನು ಬರೆಯುತ್ತಿದ್ದರು. ಇಂದು ರೋಲ್ ಕಾಲ್ ಮಾಡಿದವರೂ ಪತ್ರಕರ್ತರಾಗುತ್ತಾರೆ, ಮತ್ತೆ ಒಳಗೇ ಬಟ್ಟೆಯ ಹಾವು ಬಿಟ್ಟು ರೋಲ್‍ಕಾಲ್ ಮುಂದುವರಿಸುತ್ತಾರೆ! ಕನ್ನಡದ ಒಂದೆರಡು ಪತ್ರಿಕೆಗಳು ಹಾಗೆ ಬೆಳೆದಿವೆ. ಅದರ ಮಾಲೀಕರು ಬಹುಮಹಡಿಗಳನ್ನು ಕಟ್ಟಿಸಿದ್ದಾರೆ, ಕಾರುಗಳನ್ನು ಕೊಂಡು ಜಾಲಿಯಾಗಿದ್ದಾರೆ! ಕೆಟ್ಟದಾಗಿ ಬರೆಯುವ ಕುಚೋದ್ಯ ಲೇಖನಗಳನ್ನು ಕದ್ದು ಬಾಯ್ತುಂಬಾ ನೀರೂರಿಸಿಕೊಳ್ಳುತ್ತಾ ಓದುವ ಆಸಾಮಿಗಳೂ ಇದ್ದಾರೆ. ಅಂತಹ ಪತ್ರಿಕೆಗಳು ಬಿಸಿದೋಸೆಯಂತೇ ಖಾಲಿಯಾಗುತ್ತವೆ!

ಎಲ್ಲೆಲ್ಲಿ ಯಾವ್ಯಾವುದು ಇದ್ದರೆ ಚೆನ್ನವೋ ಹಾಗಿದ್ದರೆ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುದಿಲ್ಲ. ಶಿಷ್ಟಾಚಾರಗಳನ್ನೆಲ್ಲಾ ಗಾಳಿಗೆ ತೂರಿ ಕೇವಲ ಹಣಗಳಿಸುವುದನ್ನೇ ಮುಖ್ಯವಾಗಿಸಿಕೊಳ್ಳುವ ಇವತ್ತಿನ ಬಹುಮಾಧ್ಯಮಗಳ ’ಅನುಕೂಲ ಸಿಂಧು’ ಸ್ಥಿತಿಗೆ ಏನುಹೇಳೋಣ?

ನಿನ್ನೆ ಕೂಡ ಮಾಧ್ಯಮವಾಹಿನಿಯೊಂದರಲ್ಲಿ ಮಾಧ್ಯಮಗಳು ಹಿಡಿದ ದಾರಿಯ ಕುರಿತು ಚರ್ಚೆ ನಡೆದಿತ್ತು. ಅದರಲ್ಲಿ ಒಬ ಪುಣ್ಯಾತ್ಮ ಹಿರಿಯ ಪತ್ರಕರ್ತ ಹೇಳಿದ್ದು, ಪತ್ರಿಕೆಗಳು ಯಾವುದೇ ಒಂದು ಪಕ್ಷವನ್ನು ವಹಿಸಿಕೊಂಡು ಮಾತನಾಡಿದರೆ ತಪ್ಪಿಲ್ಲವಂತೆ. ಮಾಧ್ಯಮಗಳು ಸತ್ಯವನ್ನಷ್ಟೇ ಹೇಳಬೇಕಂತೆ. ಆದರೆ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡ ಮಾಧ್ಯಮ ಸತ್ಯವನ್ನು ಅನುಸರಿಸುವುದು ಸಾಧ್ಯವೇ ? ಇದು ಯಾರ ಕಿವಿಯಮೇಲೆ ಹೂವಿಡುವ ಪ್ಲ್ಯಾನು ? ’ಹಳ್ಳೀ ಹುಡ್ಗೀರ್ ಪ್ಯಾಟೇಲೈಫು’ ನಿಧಾನವಾಗಿ ಹಳ್ಳಹಿಡಿಯುತ್ತಿರುವುದು ಮಾಧ್ಯಮಗಳಲ್ಲೇ ಬಿತ್ತರಗೊಳ್ಳುತ್ತಿರುವ ವಿಷಯ. ಇಂಥಾ ರಿಯಾಲಿಟಿ ಶೋಗಳೆಲ್ಲಾ ಯಾಕೆ ಬೇಕು ಎಂಬುದು ಮಾತ್ರ ನಿಜವಾಗಿಯೂ ಸೋಜಿಗದ ಸಂಗತಿ!

ಪಾತಾಳವಾಣಿ, ಈಗ ಮತ್ತೊಮ್ಮೆ ರಸವಾರ್ತೆಗಳು : ಓದುತ್ತಿರುವವರು ಓದಗಾರ ಮಾಲಿಂಗ
ಭೂಮಿಯಮೇಲಿನ ಲಂಡನ್‍ನಲ್ಲಿ ರಾಜಕುಮಾರ ವಿಲಿಯಮ್ಸ್ ಮದುವೆಯಾದದ್ದನ್ನು ನಮ್ಮೆಲ್ಲಾ ಮಾಧ್ಯಮಗಳು ಗಂಟೆಗಟ್ಟಲೇ ತೋರಿಸಿ ಪುಣ್ಯಸಂಪಾದಿಸಿವೆ! ಜಗತ್ತಿನ ಅತೀ ದುಬಾರಿ ಮದುವೆಯನ್ನು ನಿಮಗಾಗಿ ’ಎಕ್ಸ್‍ಕ್ಲೂಸಿವ್’ ಆಗಿ ತಂದಿದ್ದೇವೆ ಎಲ್ಲರೂ ಅದೇ ಬೋರ್ಡನ್ನೇ ಹಾಕಿದ್ದರು, ಆದರೆ ಯಾರದ್ದು ಎಕ್ಸ್‍ಕ್ಲೂಸಿವ್ ಎಂಬುದು ಮಾತ್ರ ಗೊತ್ತಾಗಲಿಲ್ಲ. ಸಾಧ್ವಿ ಉಮಾಭಾರತಿ ಮತ್ತೆ ಬಿಜೆಪಿ ಸೇರುತ್ತೇನೆಂದು ಸಣ್ಣಗೆ ಸುದ್ದಿ ಬಿಟ್ಟಿದ್ದು ಈಗ ಹಳೇಮಾತು ಮತ್ತು ಆಗಾಗ ಕೇಳಿ ಹಳಸಿಹೋದ ಮಾತು ಆದರೆ ನಮ್ ಮಣ್ಣಿನಮಕ್ಳು ಬ್ರಷ್ಟಾಚಾರ ನಿರ್ಮೂಲನೆಗೆ ಹೊರಟುನಿಂತವ್ರೆ ಐ ! ಬಿನ್ ಲಾಡೆನ್ ಭೂತ ಅಮೇರಿಕಾಕ್ಕೆ ಪ್ರವೇಶ ಮಾಡಿದ್ಯಂತೆ ! ಬಾಬಾ ಇನ್ನೂ ದೇಹಬಿಟ್ಟು ಹೋಗಿದ್ದರೋ ಇಲ್ಲವೋ ಅಷ್ಟೊತ್ತಿಗಾಗ್ಲೇ ’ಗುರೂಜಿ’ ಬಾಬಾ ಆತ್ಮಾನ ಕರೆಸಿ ಮಾತಾಡ್ಸ್ಬುಟ್ಟವ್ರೆ ! "ನಾನು ಏಪ್ರಿಲ್ ೧೭ಕ್ಕೇ ಬೆಳಿಗ್ಗೆ ಐದೂವರೇಲೇ ಹೊಂಟೋದೆ ಆದ್ರೆ ಯಾರಿಗೂ ಗೊತ್ತಾಗಿಲ್ಲಾ ಅದ್ಕೇಯ ತಡವಾಗಿ ಹೇಳ್ಯವ್ರೆ ನಂಗೆ ದೇಹದಲ್ಲಿ ತುಂಬಾ ತೊಂದ್ರೆ ಇತ್ತು ಅದ್ಕೇ ಹೊಂಟ್ಬುಟ್ಟೆ" ಎಂದು ಮಲಗಿದ್ದ ವ್ಯಕ್ತಿ ’ಬಾಬಾ’ ಆದಾಗ ’ಗುರೂಜಿ’ ಕೈಮುಗ್ದಿದ್ದೇ ಕೈಮುಗದಿದ್ದು! "ಸ್ವಾಮೀ ನಿಮ್ಮನ್ ಕರ್ಸ್ಬುಟ್ಟು ತುಂಬಾ ತೊಂದ್ರೆ ಕೊಟ್ಟೆ, ಕ್ಷಮ್ಸಿ" ಅಂತ ಯೋಳಿದ್ದೇ ಯೋಳಿದ್ದು !

ನೀವು ಈ ರಸವಾರ್ತೆಗಳನ್ನು ಪಾತಾಳವಾಣಿಯಿಂದ ಕೇಳುತ್ತಿದ್ದೀರಿ !

ಮಳೆಬಂದಾಗ ಬೆಂಗ್ಳೂರಲ್ಲಿ ಪಾಲಿಕೆ ಮೇಯರು ಉಪಮೇಯರು ಕಂಟ್ರೋಲ್ ರೂಮ್ನಾಗೆ ಕೂರ್ತಾರಂತೆ! ಇದೆಲ್ಲಾ ಹಳೇ ಇಸ್ಯ ಇನ್ನೇನಾನಾ ಒಸದೈತಾ ಒರಸೆ ಅಂತಿದ್ದ ನಮ್ಮ ಲೂಸ್ ಮಾದ! ಎಲ್ಲಾ ಕಡೀಕ್ಕೂ ನೀರು ತುಂಬದ್ರೆ ಬರೀ ಕಂಟ್ರೋಲ್ ರೂಮ್ನಾಗೆ ಕುಂತ್ಗಬುಟ್ರೆ ಹೋತದಾ ? ಅಂತ ಕಿಸಕ್ಕಂತ ನಕ್ಕವ್ನೆ ಯಂಕ್ಟು. ಜ್ಯೂನಿಯರ್ ಎನ್.ಟಿ.ಆರ್ ಮದ್ಯೆಯಂತೆ ಮಾಧ್ಯಮದೋರು ಮೈಕು ಕ್ಯಾಮರಾ ಹಿಡ್ಕಂಡು ’ಎಕ್ಸ್‍ಕ್ಲೂಸಿವ್’ ತೋರ್ಸೋಕೆ ಸಿದ್ಧವಾಗಿದಾರೆ! ಬ್ರೇಕಿಂಗ್ ನ್ಯೂಜು -- ಸಿದ್ಧಾರ್ಥ ಮಲ್ಯ ದಡ್ಡ ಆದ್ರೂ ಪರವಾಗಿಲ್ಲ ಅಂತ ದೀಪಿಕಾ ಹೇಳವ್ಳಂತೆ ಅದನ ತೋರ್ಸೋಕೇಂತ್ಲೇ ಬಾಯಿಗೆ ಬಾಯಿ ಹಾಕಿ ಹಲ್ಲಿಗೆ ಹಲ್ಲು ಸಿಕ್ಕಾಕೊಂಡಿತ್ತು ಅಂತಾರೆ ! ಅಪ್ಪ ’ನಾ ಮುದ್ಕಾದ್ರೂ ನೀ ಕಲಿಯಾಕಿಲ್ಲ ಬಿಡು’ ಅಂತಿದ್ನಂತೆ ಅದ್ಕೇ ಪಕ್ದಲ್ಲೇ ನಿಂತಿರೋವಾಗ್ಲೇ ಒಂದ್ ಕೈ ತೋರ್ಸ್ಯವನೆ! ರಾಧಿಕಾ ಪರಿಣಯ ಪತ್ರಿಕೆಗಳಲ್ಲಿ ಫೋಟೋ ಸಮೇತ ಬಂದ್ರೂ ರಾಜಕಾರಣಿಗೊಳ್ಗೆ ಒಂದಕ್ಕಿಂತಾ ಹೆಚ್ಚು ಎಷ್ಟುಬೇಕಾದರೂ ಮಡೀಕಬಹುದು ಅಂಬೋ ಲಾ ಪಾಯಿಂಟ್ ಅದ್ಯಂತೆ, ಅದಕೇ ಯಾರೂ ಕಮಕ್ ಕಿಮಕ್ ಅನ್ದೇ ಕೂತಿರೋದು! ಹೊಸಗಾದೆ ಕಳೆದವಾರದಿಂದ ಜಾರೀಲಿದೆ : ಹುಡುಗರೇ ಪ್ರೀತಿ ಮಾಡ್ಬ್ಯಾಡಿ ಕಣ್ ಹೋಯ್ತದೆ ! ಬೋರ್ವೆಲ್ ನೀರ್ಗೆ ಬಾಟ್ಲಿ ಹಿಡ್ದು ಒಂದು ಜಿಲೆಟಿನ್ ಟ್ಯಾಬ್ಲೆಟ್ ಬಿಟ್ರೆ ಬೆಳ್ಳಗೆ ಸೈನಿಂಗ್ ಬತ್ತದೆ-ಹದನ್ನೇ ಮಾರ್ಕಂಡು ಕೋಟಿ ಸಂಪಾದ್ನೆ ಭೂಲೋಕದ ಬೆಂಗ್ಳೂರಾಗೆ!

ಇಲ್ಲಿಗೆ ರಸವಾರ್ತೆ ಮುಗೀತು, ಕೇಳಿಸ್ಕ್ಯಂಡ ನಮ್ಮೈಕ್ಳಗೆಲ್ಲಾ ವಂದನೆಗಳು.