ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 19, 2010

ದೀಪಂ ದೇವ ದಯಾನಿಧೇ



ದೀಪಂ ದೇವ ದಯಾನಿಧೇ
[ ಜಗದ್ಗುರು ಶ್ರೀ ಶ್ರೀ ಆದಿಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ ಭಾಗ-೧ ]


ಚೈತನ್ಯಃ ಶಾಶ್ವತಃ ಶಾಂತೋ ವ್ಯೋಮಾತೀತೋ ನಿರಂಜನಃ |
ಬಿಂದುನಾದಕಲಾತೀತಃ ತಸ್ಮೈ ಶ್ರೀಗುರವೇ ನಮಃ ||

ಭಾರತ ಮಾತೆ ಕಂಡ ಅತಿ ಶ್ರೇಷ್ಠ ಯತಿಗಳಲ್ಲಿ ಶ್ರೀ ಆದಿ ಶಂಕರಾಚಾರ್ಯರು ಒಬ್ಬರು, ಬದುಕಿದ್ದು ಕೇವಲ ೩೨ ವರ್ಷವಾದರೂ ಅವರ ಸಾಧನೆಯನ್ನು ಮೀರಿಸುವಂತ ಸಾಧನೆ -ಸಾಹಸ ಯಾರಿಂದಲೂ ಸಾಧ್ಯವಾಗಿಲ್ಲ. ವೇದವನ್ನು ಓದಿದ ಜನರು ಶ್ರೇಷ್ಠರೆಂತಲೂ ಮಿಕ್ಕುಳಿದ ಜನರು ಅವರನ್ನು ಅನುಸರಿಸಲು ಪ್ರಯತ್ನಿಸಿ ಭಾರತದ ಸಂಸ್ಕೃತಿಯನ್ನು ಕಲಿಯಬೇಕೆಂತಲೂ ಅವರು ಪ್ರತಿಪಾದಿಸಿದರು. ಪ್ರತ್ಯಕ್ಷ ಶಂಕರನ ಅವತಾರವೆಂದೇ ಖ್ಯಾತಿಗೊಳಗಾದ ಶಂಕರರು ಮನುಷ್ಯನೊಬ್ಬ ಇಂತಹ ಎಳೆಯ ವಯಸ್ಸಿಗೆ ಸಾಧಿಸಲಾರದ್ದನ್ನು ಸಾಧಿಸಿ ತಾವು ಅವತಾರಿ ಪುರುಷ ಹೌದೆಂಬುದನ್ನು ಸಾಬೀತುಪಡಿಸಿದರು. ವಾಹನ ಸೌಲಭ್ಯವಿಲ್ಲದ ಕಾಲಕ್ಕೆ ಅದು ಯಾವ ವಿಚಿತ್ರದಲ್ಲಿ ಅಷ್ಟೊಂದು ಓಡಾಡಿದರೋ ಅಂತೂ ಆಸೇತು-ಹಿಮಾಚಲ ಓಡಾಡಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಹಿಂದೂ ಧರ್ಮವನ್ನು ಮರುಸ್ಥಾಪಿಸಿ ಅದಕ್ಕೊಂದು ಸಾತ್ವಿಕ ಕಳೆಕೊಟ್ಟರು ! ಹಿಂಸೆಯನ್ನು ತೊರೆಯುವಂತೆ ಬೋಧಿಸಿ ಗ್ಲಾನಿಯಲ್ಲಿದ ಭಾರತದ ಸನಾತನ ಧರ್ಮವನ್ನು 'ಹೀಗೆ ನಡೆದುಕೊಳ್ಳಿ ಎಂದು' ತಿಳಿಹೇಳಿ ಮುನ್ನಡೆಸಿದ ಮಹಾನುಭಾವ ಸಂತ,ಮಹಂತ,ಸಾಧಕ, ಶ್ರೇಷ್ಠಕವಿ,ಉದ್ಧಾಮ ಪಂಡಿತ, ಉತ್ಕೃಷ್ಟ ತತ್ವಜ್ಞಾನಿ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಬದುಕಿರುವಾಗಲೇ ದಂತಕಥೆಯಾಗಿದ್ದ ಅವರ ಜೀವನ ಒಂದು ಅಸಾಮಾನ್ಯ ಯಶೋಗಾಥೆ. ಇಂತಹ ಪುಣ್ಯಕಥಾನಕವನ್ನು ಪ್ರಾರಂಭಿಸಿ ತಮಗೆಲ್ಲ ಹೇಳುವರೇ ಪ್ರಯತ್ನಿಸುತ್ತಿದ್ದೇನೆ. ಇಂದು ಮೊದಲಾಗಿ ಹಲವಾರು ಕಂತುಗಳಲ್ಲಿ 'ಭಕ್ತಿ ಸಿಂಚನದಲ್ಲಿ' ಬಂದು ಹೋಗುವ ಅನೇಕ ನಡುನಡುವಿನ ಕಂತುಗಳು ಶ್ರೀಶಂಕರರ ಜೀವನಕ್ಕೆ ಮೀಸಲಾಗಿದ್ದು ಇಂತಿಷ್ಟೇ ಕಂತಿಗೆ ಮುಗಿಸುವೆನೆಂದು ಮಿತಿಗೊಳಿಸದೆ ಮೊಗೆದು ಬಡಿಸುವ ಕೆಲಸವನ್ನು, ಸೇವೆಯನ್ನು ನನ್ನಿಂದ ಶಂಕರರೇ ನಿಂತು ಮಾಡಿಸಿಕೊಳ್ಳಲಿ ಅಂತ ಪ್ರಾರ್ಥಿಸಿ ಆಸ್ತಿಕ ಭಕ್ತಮಹಾಜನರ ಮನಸ್ಸಿಗೆ ಮುದನೀಡುವ ರೀತಿಯಲ್ಲಿ ಅದನ್ನು ಪ್ರಸ್ತುತ ಪಡಿಸಲು ಉದ್ಯುಕ್ತನಾಗುತ್ತಿದ್ದೇನೆ.

ಕರಿನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತರದ
ಗಣಪತಿಯೇ ಮಾಳ್ಪುದು ಮತಿಗೆ ಮಂಗಳವ

ಕನ್ನಡದ ಮಹಾಕವಿ ಕುಮಾರವ್ಯಾಸ ಬರೆದಂತೆ ಆದಿಪೂಜಿತನನ್ನೊಮ್ಮೆ ಧ್ಯಾನಿಸುತ್ತ ಆತ ಆನಂದ ತುಂದಿಲನಾಗಿ ಅನುಮೋದಿಸಿ ನಿಂತು ನಡೆಸಲೆಂಬಂತೆ ಹಾಗೆ ನಿಂತೊಮ್ಮೆ ಆತನ ಕೃಪೆಯನ್ನು ಅವಲೋಕಿಸಿದ್ದೇನೆ. ವ್ಯಾಸ-ವಾಗ್ದೇವಿಯರ ಅಡಿಗಳಿಗೆರಗಿ ಸಕಲ ಮುನಿಜನ-ಕವಿಜನಸಂದಣಿಗೆ ನಮಿಸುತ್ತಾ ನಿಮಗೆ ಇದನ್ನು ಹೇಳಲು ಉಪಕ್ರಮಿಸುತ್ತೇನೆ.


೮ ನೇ ಶತಮಾನದ ಆದಿ ಭಾಗದಲ್ಲಿ ಕೇರಳದ 'ಕಾಲಟಿ' ಎಂಬ ಸುಂದರವಾದ ಒಂದು ಊರಿತ್ತು-ಅದು ಈಗಲೂ ಅದೇ ಹೆಸರಿಂದ ಪ್ರಸಿದ್ಧವಾಗಿದೆ. ಕೇರಳವೆಂದರೆ ನಿಮಗೆ ಗೊತ್ತೇ ಇದೆ ಅದು GOD'S OWN COUNTRY ಎಂದು ಹೆಸರು ಪಡೆದ ಜಾಗ, ಅಂತಹ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬ ಎಂಬ ಸಂಪ್ರಾದಾಯಸ್ಥ ನಂಬೂದರಿ ಬ್ರಾಹ್ಮಣ ದಂಪತಿಗೆ ಮಕ್ಕಳಿರಲಿಲ್ಲ, ಬಹುಕಾಲ ಮಕ್ಕಳಿಲ್ಲದ ಕೊರಗಿನಲ್ಲೇ ಬದುಕಿದ್ದ ಆಸ್ತಿಕ ದಂಪತಿ ಹಿತೈಷಿಗಳನೇಕರ ಅಭಿಪ್ರಾಯದಂತೆ ಅಂದಿನಕಾಲಕ್ಕೆ ನಂಬಿ ಮೊರೆಹೋಗಿದ್ದು ತ್ರಿಚೂರಿನ ಹತ್ತಿರದಲ್ಲಿರುವ ವೃಷಾಚಲೇಶ್ವರ ದೇವರನ್ನು. ಅಲ್ಲಿನ ದೈವೀಕಳೆಯಿರುವ ಆ ವಿಗ್ರಹ ಅವರನ್ನು ತುಂಬಾ ಆಕರ್ಷಿಸಿತು. ಬಹುವಿಧವಾಗಿ ಬಹಳ ಸೇವೆಗೈಯ್ಯುತ್ತ ವೃಷಾಚಲೇಶ್ವರನಲ್ಲಿ ತಮ್ಮ ಬೇಡಿಕೆಯೊಂದಿಗೆ ಮೊರೆಯಿಟ್ಟರು. ಅನೇಕದಿನಗಳ ತರುವಾಯ ಒಂದು ರಾತ್ರಿ ಈ ದಂಪತಿಗೆ ಕನಸಲ್ಲಿ ವೃಷಾಚಲೇಶ್ವರ ಕಾಣಿಸಿಕೊಂಡು ಒಂದು ಪ್ರಶ್ನೆ ಕೇಳುತ್ತಾನೆ.

" ಭಕ್ತ ದಂಪತಿಯೇ, ನಿಮ್ಮ ಅಚಲ ಶೃದ್ಧಾ-ಭಕ್ತಿಗಳಿಗೆ ಮೆಚ್ಚಿದ್ದೇನೆ,ಪ್ರಸನ್ನನಾಗಿದ್ದೇನೆ, ನಿಮ್ಮ ಬೇಡಿಕೆ ಈಡೇರಿಸಲು ಬಂದಿದ್ದೇನೆ. ನನ್ನದೊಂದು ಪ್ರಶ್ನೆ ನಿಮ್ಮಲ್ಲಿ - ನಿಮಗೆ ಕಡಿಮೆ ಆಯುಷ್ಯವುಳ್ಳ ತತ್ವಜ್ಞಾನಿಯಾಗಿ ಇಡೀ ವಿಶ್ವಕ್ಕೆ ತತ್ವ ಬೋಧಿಸುವ ಶಿಕ್ಷಕನಾಗುವ ಒಬ್ಬನೇ ಮಗ ಬೇಕೋ ಅಥವಾ ದೀರ್ಘಾಯುಷಿಗಳಾಗಿ ಪೆದ್ದರಾಗಿ ಬದುಕುವ ಅನೇಕ ಮಕ್ಕಳು ಬೇಕೋ ? ಎರಡರಲ್ಲಿ ಒಂದನ್ನು ಆಯ್ಕೆಮಾಡಿ "

" ಓ ನಮ್ಮ ದೇವರೇ , ನಾವು ಏನನ್ನೂ ಹೇಳಲು ಅರಿಯೆವು, ಎಲ್ಲಾ ನಿನಗೇ ಬಿಟ್ಟಿದ್ದು,ನಿನ್ನಿಷ್ಟ ಹೇಗೋ ಹಾಗೇ ಆಗಲಿ "

" ನನ್ನ ಪ್ರೀತಿಯ ಭಕ್ತರೇ, ನಿಮಗೆ ಜಗದೋದ್ಧಾರಕನಾದ, ವಿಶ್ವಕ್ಕೆ ಗುರುವಾದ ಮಗು ಸಾಕ್ಷಾತ್ ಈಶ್ವರನ ಪ್ರತಿರೂಪವಾಗಿ ಜನಿಸಲಿ " ಎಂದು ಹರಸುತ್ತಿದ್ದಂತೆ ಮಾರುತ್ತರಕ್ಕೂ ಕಾಯದೇ ಅದೃಶ್ಯನಾಗುತ್ತಾನೆ.ಅದ್ಬುತ ಮತ್ತು ಅತೀ ಸುಂದರವಾದ ಈ ಕನಸು ಅವರಿಗೆ ಬಹಳ ಹರುಷ ತಂದಿತು. ದೇವರು ಕೊಟ್ಟ ಪ್ರಸಾದ ಎಂದಿಕೊಂಡು ಆ ದಂಪತಿ ತಮ್ಮ ಪಾದಯಾಗೆ ತಾವಿರುತ್ತ ಕೆಲವೇ ದಿನಗಳಲ್ಲಿ ಸಾಧ್ವಿ ಶಿರೋಮಣಿ ಆರ್ಯಾಂಬೆ ಗರ್ಭಿಣಿಯ ಲಕ್ಷಣವನ್ನು ಪಡೆಯುತ್ತಾಳೆ; ಗರ್ಭಧರಿಸುತ್ತಾಳೆ. ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲ ! ನವಮಾಸ ತುಂಬಿ ಆ ತಾಯಿ ಒಂದುದಿನ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿಯ ಶುಭ ಗಳಿಗೆಯಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಹಾಗೆ ಹುಟ್ಟಿದ ಮಗುವಿಗೆ ಶಂಕರನ ವರಪುತ್ರನಾದುದರಿಂದ "ಶಂಕರ" ಎಂದೇ ನಾಮಕರಣ ಮಾಡುತ್ತಾರೆ.

ಮುಖದಲ್ಲಿ ಪ್ರಭುದ್ಧ ಕಳೆ ಹೊಂದಿದ್ದ ಸಲ್ಲಕ್ಷಣಭರಿತವಾದ ಮುದ್ದು ಬಾಲಕ ಶಂಕರ ಬಾಲಪ್ರತಿಭೆಯಾಗಿ ದಿನೇ ದಿನೇ ಬೆಳೆಯುತ್ತ ಅನೇಕ ಹೊಸ ಹೊಸ ಮತ್ತು ಮಗುವಿನ ಆ ವಯಸ್ಸಿಗೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಹತ್ತಿದ. ಮೊದಲನೇ ವರ್ಷದಲ್ಲಿ ಮಲೆಯಾಳೀ ಮತ್ತು ಸಂಸ್ಕೃತ ಭಾಷೆಗಳನ್ನು ಮಾತಾಡಲು ಕಲಿತ ಶಂಕರ ಎರಡನೇ ವಯಸ್ಸಿನಲ್ಲಿ ಅವುಗಳನ್ನು ಬರೆಯಲು, ಓದಲು ಕಲಿತ. ಮುಂದೆ ಮೂರನೇ ವಯಸ್ಸಿನಲ್ಲಿ ಈ ಭಾಷೆಗಳಲ್ಲಿ ಕಥೆ-ಕವನ ಸಾಹಿತ್ಯಗಳನ್ನು ಓದಿ ಅವುಗಳ ಅರ್ಥ ಹೇಳತೊಡಗಿದ ! ಯಾವ ವಯಸ್ಸಿನಲ್ಲಿ ಹೊರಗಡೆ ಹೋದರೆ ತೊಂದರೆ ಆಗಿಬಿಡಬಹುದು ಎಂದು ಮಗುವನ್ನು ಜೋಪಾನ ಮಾಡುತ್ತೇವೋ, ಯಾವ ವಯಸ್ಸಿನಲ್ಲಿ ಮಗುವಿಗೆ ಲಾಲಿ ಹಾಡಿ ರಮಿಸುತ್ತೆವೋ ಅಂತಹ ವಯಸ್ಸಿನಲ್ಲಿ ಪುರಾಣ-ಭಾಗವತದ ಕಥೆಗಳನ್ನು ತನ್ನ ಸುತ್ತ ಇರುವ ಜನರಿಗೆ ಹೇಳುತ್ತಿದ್ದ ಶಂಕರ ಅಂದಿಗೆ ವಿಚಿತ್ರ ಮಗು ! ಐದನೇ ವರ್ಷದಲ್ಲಿ ಉಪನಯನ ಪೂರೈಸಿಕೊಂಡ ಶಂಕರ ಎಂಟನೇ ವಯದಲ್ಲಿ ನಾಲ್ಕೂ ವೇದಗಳಲ್ಲಿ ಪಾರಂಗತನಾದ. ಹೀಗೇ ಇಂದು ಇದು ನಂಬಲಸಾಧ್ಯವಾದರೂ ನಡೆದು ದಾಖಲಿಸಿದ ಘಟನೆಯನ್ನು ನಂಬಲೇ ಬೇಕಲ್ಲ ಯಾಕೆಂದರೆ ಅದು ಲಕ್ಷಗಟ್ಟಲೆ ಜನ ನೋಡಿದ ಸತ್ಯ. ಇಂದಿಗೂ ಅಲ್ಲಲ್ಲಿ ಬೇರೆಬೇರೆ ವಿಷಯಗಳಲ್ಲಿ ಬಾಲಪ್ರತಿಭೆ ಗಳನ್ನು ನೋಡುತ್ತೇವೆ. ಅವುಗಳ ಹಿಂದೆ ಪೂರ್ವಜನ್ಮದ ಸಂಸ್ಕಾರವಿರದೆ ಅವು ಹಾಗೆ ಬೆಳೆಯಲು ಸಾಧ್ಯವೇ ಇಲ್ಲ. ಇಂತಹ ಮಹಾತ್ಮನಿಗೆ ಜೋಗುಳ ಹಾಡಿದ್ದೇನೆ ---

ಜೋಜೋ ಹೇಳಲೇ ನಿನಗೇ ಶಂಕರಾ
ರಾಜಿಪ ಕರುಣಾಂಬುಧಿ ಮುನಿವರ || ಪ ||

ಈಶ ನಿನಗೆ ನನ್ನೀ ಮನದಾಳದಿ
ದೋಷವ ಕಳೆಯಲು ರೋಷವ ನೀಗಲು
ರಾಶಿವಿದ್ಯೆ ಕಲಿಸುತ ಸಂಸಾರದಿ
ಭೀಷಣದೀ ಭವ ಸಾಗರ ದಾಟಲು || ೧||

ಕೇರಳ ಕಾಲಟಿಯಾ ಕುಟೀರದಿ
ಹೇರಳ ವಿದ್ಯೆಯ ಬಾಲ್ಯದಿ ಪಡೆದು
ಆರೇಳುವಯಸಲಿ ಆ ನದಿತೀರದಿ
ಗಾರುಡಿ ರೂಪದಿ ಗುರುತನ ಪಿಡಿದು ||೨||

ವೇದ ವೇದಾಂತದ ಸೂತ್ರ ಪಾರಂಗತ
ಆದಿ ಶಂಕರನೆಂಬ ಹೆಸರನು ಪಡೆದೆ
ವ್ಯಾಧಿಯಲೀ ಜೀವನದಂತರ್ಗತ
ಬಾಧೆ ಕಳೆಯೆ ಸನ್ಯಾಸವ ನಡೆಸಿದೆ ||೩||



ಅನುಗಚ್ಛಂತಿ ಗಚ್ಛಂತಿ ಕೌತುಕಂ ಕೌತುಕಾನ್ವಿತಂ |
ಪದೇ ಪದೇ ಕೃತಫಲಂ ಲಭತೇ ನಾತ್ರ ಸಂಶಯಃ ||

[ಮುಂದುವರಿಯುವುದು ............]