

ಚಕ್ಕುಲಿ-ಕೋಡುಬಳೆ !!
ಹೊಸತನಕೊಡಬೇಕೆನ್ನುವ ಹಂಬಲ
ಹೊಸೆಯಲು ಕುಳಿತೇ ಕವನವನು
ಮಿಸುಕಾಡುತ ನೊಸಲಲಿ ಬೆವರಿಳಿಯಲು
ಬಸಿದಿರುವೇ ಈ ಕವಿತೆಯನು
ಗೊರಗೊರ ಗಂಟಲ ಸದ್ದಲಿ ಮಧ್ಯದಿ
ಸರಸರ ಹಾಡಲು ಯತ್ನಿಸುತ
"ಹರಹರ ಏನದು ವಿಚಿತ್ರ ಶಬ್ದ ?"
ಭರದಿ ಕೇಳಿದಳು ಮಡದಿಯು ತಾ
ಚಕ್ಕುಲಿ ಕೋಡುಬಳೆಗಳವು ಕುಣಿದವು
ಬಿಕ್ಕಿತು ಮನವು ತಿಂದುದಕೆ !
ಒಕ್ಕೊರಲಲಿ ಮಾತಾಡಲು ಬರದಕೆ
ಪಕ್ಕನೆ ನಕ್ಕಿತು ಬಯಸಿದಕೆ !
ಗಣಗಣ ಗಣಪತಿ ಬಂದಾ ಘಳಿಗೆಯ
ಬಣಬಣ ಎನ್ನಿಸಿ ಕಳಿಸುವುದೇ ?
ಒಣಕೆಮ್ಮಿಗೆ ’ಅತಿಮಧುರ’ ಕಷಾಯವ
ಹಣತೆತ್ತಾದರೂ ಕೊಳ್ಳುವುದೇ !
ದಿನವೂ ಇರುವುದು ಬಜ್ಜಿಪಕೋಡವು
ನನಗೇನದು ಹೊಸತೆನಿಸಿಲ್ಲ!
ಮನವೇ ನಿಲ್ಲಿಸು ಉಜ್ಜಿ ಚಪಲಗಳ
ತನುವಾನೆಯ ಹೋಲುವುದಲ್ಲ !