ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 3, 2012

ಸಂಪನ್ನಗೊಂಡ ಸಂಭ್ರಮದ ಶತಾವಧಾನ; ಹೂವಿನ ಜೊತೆಗೆ ನಾರೂ ದೇವಮುಡಿಗೈದ ವ್ಯಾಖ್ಯಾನ

ಿತ್ರಋಣ: ಅಂತರ್ಜಾಲ
ಸಂಪನ್ನಗೊಂಡ ಸಂಭ್ರಮದ ಶತಾವಧಾನ; ಹೂವಿನ ಜೊತೆಗೆ ನಾರೂ ದೇವಮುಡಿಗೈದ ವ್ಯಾಖ್ಯಾನ 

ಮೂಕ ವೇದಾಂತಕ್ಕೆ ನೋಂತನು
ವಾಕಮಂ ಬಿಟ್ಟಿರಲು ನಿಜಸುತನ್
ಈಕುಮಾರವ್ಯಾಸನಾದನು ಮಾತಿಗೇಧಾತು |
ಶ್ಲೋಕ ಫಣಿತಿಯೊಳಲ್ಲವೇ ಸು
ಶ್ಲೋಕನಾನಿರೆ ಕುವರ ನಿವನೆನ
ಗೇಕಲಿಸಿದನು ಭಾಮಿನಿಯನೀ ವಾರ್ಧಕದೆ ಚತುರಂ ||
 

ಸಾಂಸ್ಕೃತಿಕ ಕುಟುಂಬ ಸ್ವಸ್ಥಾನಕ್ಕೆ ಹೊರಟುನಿಂತಾಗ ಮತ್ತೆಂದು ಸೇರಿಯೇವು ಎಂಬ ಅನಿಸಿಕೆ. ಸೇರಿದ ವಿದ್ವಾಂಸರೊಡನೆ ಮೂರುದಿನಗಳಲ್ಲಿ ಪಡೆದುಕೊಂಡ ಅನುಭವ ಓದಿ ಬರುವಂಥದ್ದಲ್ಲ! ಮರೆಯಲಳವಲ್ಲ! ಒಬ್ಬೊಬ್ಬರಲ್ಲೂ ಒಂದೊಂದು ಕಾವ್ಯ-ಸಾಹಿತ್ಯ ವಿನೋದ ವೈಶಿಷ್ಟ್ಯ. ನಡುನಡುವೆ ಪ್ರೊ| ಅ.ರಾ.ಮಿತ್ರ. ಶತಾಯುಷಿ ಪ್ರೊ| ಜಿ.ವಿ ಇಂಥಾ ಹಿರಿಯರ ಆಗಮನ. ಮಂಗಳವೇದಿಕೆಯಂಗಳದಲ್ಲಿ ’ಪದ್ಯಪಾನ’ ಹಮ್ಮಿಕೊಂಡಿದ್ದ ಶತಾವಧಾನ ಕಾರ್ಯಕ್ರಮ ಅಭೂತಪೂರ್ವವಾಗಿತ್ತು! ಕವಿ-ಕಾವ್ಯ ರಸದೌತಣ ಕಬ್ಬಿಗ ಮನಸ್ಸಿಗೆ ಅಮೋದವೂ ಪ್ರಮೋದವೂ ಪ್ರಬೋಧವೂ ಆಗಿತ್ತು. ಹಿರಿಯರಾದ ಡಾ|ಎಸ್.ಆರ್. ರಾಮಸ್ವಾಮಿಯಂಥವರು ಮೂರು ದಿನವೂ ಕುಳಿತು ಆಸ್ವಾದಿಸುವಷ್ಟರ ಮಟ್ಟಿಗೆ ಅವಧಾನ ಮಹತ್ತು ಪಡೆದಿತ್ತು. ಸಾವಿರ ಸಭಾಸದರು, ಅದಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಹೊರಾಂಗಣದಲ್ಲಿ ಹಾಕಿದ್ದ ಶಾಮಿಯಾನದಲ್ಲಿ ಕುಳಿತು ದೊಡ್ಡ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದವರು, ಅದಕ್ಕೂ ಮಿಕ್ಕಿದ ಸಂಖೆಯಲ್ಲಿ ಅಂತರ್ಜಾಲದ ಮೂಲಕ ವೀಕ್ಷಿಸಿದವರು ...ಹೀಗೇ ಶ್ರೋತೃಗಳ ಸಂಖ್ಯೆ ಬಹಳವಿತ್ತು. ಶತಾವಧಾನದ ಕಾವ್ಯವಾಚನದಲ್ಲಿ ಹಾಡಿದ ಪ್ರಬುದ್ಧ/ಪ್ರಸಿದ್ಧ ಗಮಕಿ ಕೆದಿಲಾಯರನ್ನಾಗಲೀ, "ಅವಧಾನಿಗಳೇ ನಿಮ್ಮ ಮನೆಯಲ್ಲಿ ಸೊಳ್ಳೆ ಯಾವ ಛಂದಸ್ಸಿನಲ್ಲಿ ಗುಂಯ್ ಗುಡುತ್ತದೆ?" ಎಂಬಿತ್ಯಾದಿ ರಸಪ್ರಶ್ನೆಗಳ ಮಹಾಪೂರವನ್ನೇ ಹರಿಸಿದ ಸೂರ್ಯಪ್ರಕಾಶ ಪಂಡಿತರನ್ನಾಗಲೀ ಯಾರಾದರೂ ಮರೆಯಲು ಸಾಧ್ಯವೇ? ಅಷ್ಟೇ ಏಕೆ ’ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್’ ಎಂಬ ಪದ್ಯಪಾನ ಮುಂದೊಡ್ಡಿದ ಸಮಸ್ಯೆಗೆ ಅಭಿಜಾತ ಶಿಷ್ಟ ಸಾಹಿತ್ಯದ ಛಂದಸ್ಸುಗಳನ್ನು ಬಳಸಿ ೩೦ ಕ್ಕೂ ಅಧಿಕ ಪರಿಹಾರಗಳನ್ನು ಬರೆದ ಮೇಲುಕೋಟೆಯ ಅರೈಯರ್ ಶ್ರೀರಾಮಶರ್ಮರು, [ಅನೇಕ ಉತ್ತಮ ಗ್ರಂಥಗಳನ್ನು ಬರೆದ]ತಂಬಾಕಿನಚಟದ ಬಗ್ಗೆ ಆಶುಕವಿತೆಯನ್ನು ಕೇಳಿದ ಎಂ.ಏ ಹೆಗಡೆಯವರು, ವಿದ್ವಾನ್ ತ್ಯಾಗಲಿ ರಾಮಚಂದ್ರ ಶರ್ಮ ಇಂತಹ ಅನೇಕಾನೇಕರ ಸಾಹಿತ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಾಗ ಸಂಭಾವ್ಯ ಜಗತ್ತಿನಲ್ಲಿ ಶಿಷ್ಟಸಾಹಿತ್ಯಕ್ಕೆ ಮತ್ತೆ ಆದ್ಯತೆ ಸಿಗುವುದರಲ್ಲಿ ಸಂಶಯವಿರಲಿಲ್ಲ.           

ಶತಾವಧಾನ ನಡೆದಿದ್ದು ನಿಮಗೆಲ್ಲಾ ಈಗಾಗಲೇ ತಿಳಿದೇ ಇರುವಂತೇ ಬೆಂಗಳೂರಿನ ಜಯನಗರದ, ಎನ್.ಎಮ್.ಕೆ,ಆರ್.ವಿ ಕಾಲೇಜಿನ ಮಂಗಳ ಮಂಟಪದಲ್ಲಿ. ಅರ್ಧ ಕೀ.ಮೀ ದೂರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಅಲ್ಲಿಂದ ಭವ್ಯ ಮೆರವಣಿಗೆ ಆರಂಭವಾಯ್ತು. ಅಲಂಕೃತ ವಾಹನದಲ್ಲಿ ವಾಗ್ದೇವಿ ಶಾರದೆಯ ವಿಗ್ರಹವಿತ್ತು. ಅದರ ಹಿಂದೆ ಶತಾವಧಾನಿ ಗಣೇಶರು ಜನರ ಮಧ್ಯೆ ನಡೆಯುತ್ತಿದ್ದರು. ಅದಕ್ಕೂ ಹಿಂದೆ ಸಾಲಂಕೃತ ಪಲ್ಲಕ್ಕಿಯಲ್ಲಿ ವಿವಿಧ ಅವಧಾನಿಗಳ ಪುಸ್ತಕಗಳನ್ನು ಇರಿಸಲಾಗಿತ್ತು. ಅನೇಕ ಸಾಹಿತಿಗಳು, ವಿದ್ವಾಂಸರು, ಪೃಚ್ಛಕರು ಅಭಿಮಾನದಿಂದ ಸ್ವಯಂಪ್ರೇರಿತರಾಗಿ ಕೈಯ್ಯಲ್ಲಿ ಶತಾವಧಾನ ಎಂದು ಬರೆದ ಕೀರ್ತಿಬಾವುಲಿಗಳನ್ನು ಹಿಡಿದು ನಡೆದಿದ್ದರು. ವೈದಿಕರನೇಕರು ವೇದಘೋಷಗಳನ್ನು ನಡೆಸುತ್ತಾ ನಡೆದಿದ್ದರೆ, ನಾದಸ್ವರ ಮತ್ತು ಚಂಡೆ ವಾದಕರು ಮೆರವಣಿಗೆಗೆ ಕಳೆಯಿತ್ತಿದ್ದರು. ಜಯಘೋಷಗಳು ಆಗಾಗ ಮೊಳಗುತ್ತಿರಲು ಮೆರವಣಿಗೆ ಮಂಗಳಮಂಟಪಕ್ಕೆ ಬಂತು. ಮಂಗಳಮಂಟಪದ ದ್ವಾರದಲ್ಲಿ ಬುಧಜನರನೇಕರು ಶತಾವಧಾನಿಗೆ ಶುಭಕೋರಿ ಸ್ವಾಗತಿಸಿದರು. ವೇದಿಕೆಯೆಡೆಗೆ ಬಿಜಯಂಗೈದ ಗಣೇಶರು ಮಧ್ಯೆ ಆಸೀನರಾದಮೇಲೆ ಪೃಚ್ಛಕರು ತಮ್ಮ ಹೆಸರುಗಳನ್ನು ಕರೆದಂತೆ ಬಂದು ಆಸನದಲ್ಲಿ ಮಂಡಿಸಿದರು. ವಂದನಾ ಗೀತೆಯೊಂದಿಗೆ ಆರಂಭವಾದ ಶತಾವಧಾನ ಸಮಸ್ಯಾಪೂರಣ ಭಾಗದಿಂದ ಮೊದಲನೇ ಸುತ್ತಿನಲ್ಲಿ ಆರಂಭಗೊಂಡಿತು. ದತ್ತಪದಿ, ಆಶುಕವಿತೆ, ಕಾವ್ಯವಾಚನ, ಸಂಖ್ಯಾಬಂಧ, ಚಿತ್ರಕಾವ್ಯ, ಅಪ್ರಸ್ತುತಪ್ರಸ್ತುತಿ ಹೀಗೆ ಹಲವು ಅಂಗಗಳಲ್ಲಿ ಸಾಹಿತ್ಯದ ಮಜಲುಗಳು ಮಗ್ಗುಲು ತಿರುಗುತ್ತಿದ್ದವು. ಸಾಹಿತ್ಯಾಸಕ್ತಿರಿಗೆ ’ಪದ್ಯಪಾನ’ ಅರ್ಪಿಸಿದ ರಾಜ್ಯೋತ್ಸವದ ನಿಜವಾದ ಕೊಡುಗೆ ಇದಾಗಿತ್ತು. ಪದ್ಯಪಾನದ ಮಿತ್ರಬಳಗ, ತಮ್ಮ ತನು-ಮನ-ಧನ ವ್ಯಯಿಸಿ ಹಗಲಿರುಳೂ ಶ್ರಮವಹಿಸಿ ರೂಪಿಸಿದ ಕಾರ್ಯಕ್ರಮ ಇದಾಗಿತ್ತು. ಅವರಿಗೆ ಅಕ್ಷರಗಳಲ್ಲಿ ವಂದನೆಗಳನ್ನು ಹೇಳಿದರೆ ತೀರಾ ಬಾಲಿಶವಾದೀತು; ಕೃತ್ರಿಮವಾದೀತು.   

ಅವಧಾನವನ್ನು ನಾನು ನೋಡಿದ್ದೆನೇ ಹೊರತು ವೇದಿಕೆಯಲ್ಲಿ ಪೃಚ್ಛಕನಾಗಿ ಭಾಗವಹಿಸಿರಲಿಲ್ಲ; ಹಾಗೊಂದು ನಿರೀಕ್ಷೆಕೂಡ ಇಟ್ಟುಕೊಂಡಿರಲಿಲ್ಲ. ೭ ತಿಂಗಳ ಹಿಂದೆ ಪೃಚ್ಛಕರ ಹುಡುಕಾಟ ಆರಂಭಿಸಿದ ’ಪದ್ಯಪಾನ’ ನನ್ನಲ್ಲೂ ಭಾಗವಹಿಸುವಂತೇ ಕೇಳಿತು; ಒಪ್ಪಿಕೊಳ್ಳುವ ಧೈರ್ಯ ಇರಲಿಲ್ಲ, ಯಾಕೆಂದರೆ ಪ್ರಶ್ನೆ ಕೇಳುವುದು ಯಾರಲ್ಲಿ ಎಂಬುದನ್ನು ಬಲ್ಲೆನಾದ್ದರಿಂದ ಪ್ರಶ್ನೆಗಳನ್ನು ಕೇಳಲು ನಾನು ಸಮರ್ಥನೇ ಎಂದು ಚಿಂತಿಸುತ್ತಿದ್ದೆ; ಎರಡುಮೂರು ದಿನಗಳಕಾಲ ಉತ್ತರಕೊಡಲಿಲ್ಲ. ಕೊನೆಗೆ ಮಿಂಚಂಚೆಯಲ್ಲಿ ಒಪ್ಪಿಗೆ ಸೂಚಿಸಿದೆ. ಪ್ರಶ್ನೆಗೆ ಅವಧಾನಿಗಳು ತಿರುಪ್ರಶ್ನೆ ಹಾಕಿಬಿಟ್ಟರೆ ಜೀರ್ಣಿಸಿಕೊಳ್ಳುವ ತಾಕತ್ತು ನನಗೆಲ್ಲಿ ಎಂಬ ಕಾರಣವೇ ನನ್ನನ್ನು ಹಿಂಡುತ್ತಿತ್ತು. ಮೇಲಾಗಿ ಅವಧಾನಿ ಗಣೇಶರು ಅವಧಾನಗಳಲ್ಲಿ ಕಟ್ಟುನಿಟ್ಟು, ಅಲ್ಲಿ ಪ್ರೀತಿನಾತಿಯಿಂದ, ಸ್ನೇಹದ ಸಂಕೋಲೆಯಿಂದ ಯಾರನ್ನೂ ಕರೆಯುವುದಿಲ್ಲ, ಪೃಚ್ಛಕರು ಅವಧಾನ ನಡೆಯುವ ವಾರಕ್ಕೂ ಮುಂಚೆ ಅವರನ್ನು ಸಂಪರ್ಕಿಸುವುದನ್ನು ನಿಲ್ಲಿಸಬೇಕಾಗುತ್ತದೆ; ಯಾಕೆಂದರೆ ಪೃಚ್ಛಕರ-ಅವಧಾನಿಗಳ ನಡುವೆ ಯಾವುದೋ ಮ್ಯಾಚ್ ಫಿಕ್ಸಿಂಗ್ ಇದೆ ಎಂಬ ಭಾವನೆ ಈಗಿನ ಜನರಲ್ಲಿ ಮೂಡಲೂಬಹುದು ಎಂಬ ಕಾರಣಕ್ಕೆ. ಶತಾವಧಾನದಲ್ಲಂತೂ ದೂರದ ಊರುಗಳಿಂದ ಮತ್ತು ವಿದೇಶಗಳಲ್ಲಿ ವಾಸಿಸುವ ಕನ್ನಡಿಗರು ಪೃಚ್ಛಕರಾಗಿ ಬಂದಿದ್ದರು. ವ್ಯವಸ್ಥೆಯ ಹೊಣೆಯನ್ನು ’ಪದ್ಯಪಾನ’ ಹೊತ್ತುಕೊಂಡಿತ್ತು. ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡೂ ಅಭಿಜಾತ ಕಾವ್ಯ-ಸಾಹಿತ್ಯದಲ್ಲಿ ಆಸಕ್ತಿ ತಳೆದು, ಪದ್ಯವಿದ್ಯೆಯನ್ನು ಕಲಿಸುವ ಸಲುವಾಗಿ ಕಲೆತ ಹಲವು ಸಮಾನ ಮನಸ್ಕರ ಸಂಸ್ಥೆ ’ಪದ್ಯಪಾನ.’ ಗಣೇಶರಿಗೆ ೫೦ನೇ ಜನ್ಮದಿನದ ಗುರುತಿಗಾಗಿ ’ಪದ್ಯಪಾನ’, ’ಶತಾವಧಾನ’ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಕಾರ್ಯಕ್ರಮದಲ್ಲಿ ನಖದಿಂದ ಶಿಖದವರೆಗೆ ಎನ್ನುವಂತೇ ಆದಿಯಿಂದ ಅಂತ್ಯದವರೆಗೆ ಪ್ರತೀ ಹೆಜ್ಜೆ ಅಚ್ಚುಕಟ್ಟಾಗಿತ್ತು. ಒಳ್ಳೆಯ ಸಭಾಗೃಹ, ಉತ್ತಮ ವೇದಿಕೆ, ಅದಕ್ಕೆ ಸರಳ ಅಲಂಕಾರ, ಧ್ವನಿ-ಬೆಳಕುಗಳ ಸಂಯೋಜನೆ, ಹೊರವಲಯದಲ್ಲಿ ಗಣೇಶರ ಪುಸ್ತಕಗಳ ಮಾರಾಟದ ಮಳಿಗೆ, ಸಾರ್ವಜನಿಕರಿಗೆ ಊಟ-ತಿಂಡಿಗೆ ಹೋಟೆಲ್, ಪೃಚ್ಛಕರಿಗೆ ವಾಹನಾದಿ ಸಾಗಾಟ ವ್ಯವಸ್ಥೆ, ಊಟ-ತಿಂಡಿ ಎಲ್ಲವನ್ನೂ ಹೇಗಿರಬೇಕೋ ಹಾಗೇ ಇರಿಸಿದ್ದರು. ಸಾಹಿತ್ಯಾಸಕ್ತ ಸ್ವಯಂಸೇವಕರು ತಮ್ಮ ಪೂರ್ಣ ಸಮಯವನ್ನು ನಮ್ಮೆಲ್ಲರ ಸೇವೆಗಾಗಿ ಮೀಸಲಿಟ್ಟು, ಕುಡಿಯುವ ನೀರು, ಕಾಫಿ-ಟೀ ಎಲ್ಲವನ್ನೂ ಸರಬರಾಜು ಮಾಡುತ್ತಿದ್ದರು. ಮಾತಿನಲ್ಲೂ ಅದೆಂಥಾ ಆತ್ಮೀಯತೆ ಅಂತೀರಿ! ಮೂರು ದಿನಗಳು ಕಳೆದಿದ್ದು ತಿಳಿಯಲೇ ಇಲ್ಲ! ಭಾನುವಾರ ರಾತ್ರಿ ೮ ಗಂಟೆಗೆ ಅವಧಾನ ಮುಗಿದಾಗ ಮುಗಿದುಹೋಯ್ತಲ್ಲ ಎಂಬ ಭಾವನೆ; ಇನ್ನಷ್ಟು ಬೇಕಿತ್ತು ಎಂಬ ಹಪಹಪಿಕೆ. ಏನೂ ಅಲ್ಲದ ನನ್ನನ್ನು ವೇದಿಕೆಗೆ ಹತ್ತಿಸಿದ್ದರಲ್ಲಾ ಆ ಗುಂಗಿನಲ್ಲಿ ನನಗೆ ನನ್ನ ಪ್ರಶ್ನಾಭಾಗವಾದ ಆಶುಕವಿತೆಯಲ್ಲಿ ಏನನ್ನು ವಸ್ತುವನ್ನಾಗಿ ಕೊಡಬೇಕೆಂದೇ ತೋಚಲಿಲ್ಲ! ಏನೇನೋ ಚೀಟಿಗಳಲ್ಲಿ ಬರೆದುಕೊಂಡಿದ್ದೆ, ಬರೆದಿದ್ದನ್ನು ಕೇಳಲೇ ಇಲ್ಲ. ವೇದಿಕೆಯಲ್ಲಿ ನಿಜಕ್ಕೂ ಹೂತರಥದ ಗಾಲಿಯನ್ನೆತ್ತುವ ಕರ್ಣನಂತಹ ಮನೋಸ್ಥಿತಿಯಲ್ಲಿ ನನ್ನ ಮನೋಗತವನ್ನು ಯಾರಲ್ಲಿ ಹೇಳಿಕೊಳ್ಳಲಿ? ಸುದೈವದಿಂದ ಬಹಳಹೊತ್ತು  ನನ್ನ ಸರದಿ ಬರಲಿಲ್ಲ; ದೇವರು ಬಚಾವ್ ಮಾಡಿದ ಎಂದುಕೊಂಡೆ. ಸುತ್ತಲೂ ಕಣ್ಣಾಡಿಸಿದಾಗ ಭೀಷ್ಮ, ದ್ರೋಣ, ಜಯದ್ರಥರಂತಹ ವೀರ ಸೇನಾನಿಗಳು ಒಂದೆಡೆಯಾದರೆ ಪರಮಾತ್ಮ ಕೃಷ್ಣ ಗಣೇಶರ ರೂಪದಲ್ಲಿ ಇರುವಂತೇ ಕಂಡಿತು, ಕೌರವ-ಪಾಂಡವ ಎಂಬ ಪಕ್ಷಗಳೇನೂ ಇಲ್ಲದಿದ್ದರೂ ಅತಿರಥ ಮಹಾರಥರ ಮುಂದೆ ನಾನಾದರೂ ಏನು ಎಂದು ಚಿಂತಿಸುವಾಗ ಕುಳಿತಲ್ಲೇ ಸ್ತಬ್ಧನಾದೆ [ಇದು ಕೀಳರಿಮೆಯಲ್ಲ,    ಆತ್ಮವಿಶ್ವಾಸದ ಕೊರತೆಯೂ ಅಲ್ಲ, ಕೇವಲ ಅನಿಸಿಕೆ ಎಂಬುದನ್ನು ಗಮನಿಸಬೇಕು] ; ಆ ಕ್ಷಣಕ್ಕೆ ನೆನಪಾಗಿದ್ದು ’ಬಂಗಾರದ ಅಂಗಡಿಯಲ್ಲಿ ನೊಣಕ್ಕೇರ್ನು ಕೆಲಸ’!  ಶತಾವಧಾನದ ಇಡೀ ವೇದಿಕೆಯೇ ಒಂದು ಬಂಗಾರದ ಅಂಗಡಿಯಾದರೆ ಅಲ್ಲಿ ನಾನೊಬ್ಬ ನೊಣ ಎಂಬುದು ಕಲ್ಪನೆ.  ನನ್ನ ಸರದಿ ಬಂದೇ ಬಿಟ್ಟಿತು ! ನನ್ನ ಮಾತು ಹೀಗಿತ್ತು :

ಶೆಟ್ಟಿಯಂಗಡಿಯಿಟ್ಟ ಸಾವ್ರಾರು ಸಾಮಾನು ! 
ಸಟ್ಟನೆಯೆ ಕೊಟ್ಟನವ ಭಟ್ಟ ಕೇಳಿದನ
ಮಟ್ಟಸದ ಮಾತುಂಟು ಹಾಡುಂಟು ಕಥೆಯುಂಟು
ಗಟ್ಟಿಗನು ಅವಧಾನಿ | ಜಗದಮಿತ್ರ

ಜಗದಮಿತ್ರನ ಕಾವ್ಯದ ಮೂಲಕ ಅವಧಾನಿಗಳಿಗೆ ನುಡಿನಮನ ಸಲ್ಲಿಸಿದ್ದೇನೆ. ಅವಧಾನಕಲಾಪುನರ್ಪ್ರತಿಷ್ಠಾಪನಾಚಾರ್ಯ ಋಷಿ ಗಣೇಶರಿಗೆ ಸಾಷ್ಟಾಂಗ ನಮಸ್ಕಾರಗಳು, ಪ್ರಚ್ಛಕಬಂಧುಗಳಿಗೆ ನಮಸ್ಕಾರಗಳು, ಸಭಾಸದರಿಗೆ ನಮಸ್ಕಾರಗಳು. ವಸ್ತು ಹೀಗಿದೆ-

’ಬಂಗಾರದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ’ ಎಂಬುದನ್ನು ಸಾಂಗತ್ಯದಲ್ಲೂ

ಅಥವಾ ಇನ್ನೊಂದು ಆಯ್ಕೆ,

ಬಿಡದಿ ನಿತ್ಯಾನಂದನ [ರಾಸಲೀಲಾ ರಹಿತ]ವೇಷಗಳನ್ನು ಭೋಗಷಟ್ಪದಿಯಲ್ಲಿ ಕೆಟ್ಟದಾಗಿ ಬಣ್ಣಿಸಬೇಕಾಗಿ ಪ್ರಾರ್ಥನೆ.

ಅವಧಾನಿಗಳು ನೊಣದ ಪ್ರಶ್ನೆಯನ್ನೇ  ತೆಗೆದುಕೊಂಡರು, ಸಾಂಗತ್ಯ ಹೇಳಿದರು :


ಹೊನ್ನೀನ ತೂಕದೆ ನೊಣಕೇನು ಕೆಲಸವು
ಬಿನ್ನಾಣವಾಯ್ತೆನ್ನಬೇಡಾ
ಹೊನ್ನೀನ ತೂಕದಿ ನೊಣಕೇನು ಕಜ್ಜವು
ಭಿನ್ನವು ತಾನಾಯ್ತು ಬೆಲೆಯು

ಹೊನ್ನಿನಂಗಡಿಯಲ್ಲಿ ದುಬಾರಿ ಬೆಲೆಯ ಹೊನ್ನನ್ನು ತೂಗುತ್ತಾರಲ್ಲಾ ಅದನ್ನು ತೂಗುವಾಗ ನೊಣ ತಕ್ಕಡಿಯಲ್ಲಿ ಕೂತರೆ ಅದರ ಭಾರವೂ ಲೆಕ್ಕಕ್ಕೆ ಬರುತ್ತದೆ, ನೊಣದ ತೂಕ ನಗಣ್ಯವಾದರೂ ಹೊನ್ನಿನ ತೂಕದಲ್ಲಿ ಅದು ದುಬಾರಿ ಬೆಲೆಯುಳ್ಳದ್ದು ಎಂಬುದು ಉತ್ತರ.


ನಾನು ಬರೆದ ಪದ್ಯ ಹೀಗಿತ್ತು -

ಕುಳಿತಿತ್ತು ನೊಣವೊಂದು ಸ್ವರ್ಣಮಹಲಿಗೆ ಬಂದು
ಪುಳಕಗೊಳ್ಳುತ ಲೇಸನರಸಿ
ಫಳಫಳನೆ ಹೊಳೆವ ಬಂಗಾರದ ಮೇಲ್ಗಾಳಿ
ಥಳುಕು ರೆಕ್ಕೆಗೆ ತಾಗಲೆನಿಸಿ

ಅಥವಾ

ಕೂತಿತ್ತು ನೊಣವೊಂದು ಸ್ವರ್ಣಮಹಲಿಗೆ ಬಂದು
ನಾಕದ ಲೇಸತಾನರಸಿ
ತೂಕದ ಬಂಗಾರ ಸೋಕಿದ ಗಾಳಿಯು
ತಾಕುತ ಹೊಳೆವುದ ಬಯಸಿ

ಬಂಗಾರದಂಗಡಿಯಲ್ಲಿ ಹೊಳೆವ ಬಂಗಾರದ ಆಭರಣಗಳಮೇಲೆ ಹಾಯ್ದ ಗಾಳಿ ತನ್ನ ರೆಕ್ಕೆಗಳಿಗೆ ತಾಗಿ ಅವುಗಳಿಗೂ ತುಸು ಹೊಂಬಣ್ಣ ಬರಲಿ ಎಂದೆನಿಸಿ ನೊಣ ಬಂಗಾರದಂಗಡಿಯಲ್ಲಿ ಕುಳಿತಿತ್ತು. ಭಾವಾರ್ಥ: ಅವಧಾನದಲ್ಲಿ ಕುಳಿತ ವಿದ್ವಾಂಸರನೇಕರ ರಸಾಭಿಜ್ಞತೆ, ಕರ್ತೃತ್ವಶಕ್ತಿ ಮತ್ತು ಕ್ರಿಯಾಶೀಲತೆಯಿಂದ, ಅವರ ಜ್ಞಾನದಾಸೋಹದಿಂದ ನನಗೂ ಸ್ವಲ್ಪ ಜ್ಞಾನಾನ್ನ ಲಭಿಸಿದರೆ ಒಳಿತು ಎಂದುಕೊಂಡು ನಾನು ವೇದಿಕೆಯಲ್ಲಿ ಕುಳಿತಿದ್ದೆ ಎಂಬುದಾಗಿ.


ಗಂಟೆ ಕಳೆದು ನನ್ನ ಇನ್ನೊಂದು ಪ್ರಶ್ನೆ :


ಕವಿಕಲ್ಪನೆಯಲ್ಲಿ  ವ್ಯಾಸ-ಕುಮಾರವ್ಯಾಸ ಪ್ರಥಮಭೇಟಿಯಲ್ಲಿ ಮೊದಲ ಮಾತು ಎಂಬ ಕುರಿತು ಭಾಮಿನಿಯಲ್ಲಿ ಬಣ್ಣಿಸಬೇಕೆಂಬ ವಿನಂತಿ.

ಅವಧಾನಿಗಳು ಈ ಲೇಖನದ ಆರಂಭದಲ್ಲಿ ಹೇಳಿದ ಭಾಮಿನಿಯನ್ನು ಉತ್ತರವಾಗಿ ನೀಡಿದರು.

ನನ್ನ ನಿವೇದನೆ ಹೀಗಿತ್ತು--

ವ್ಯಾಸರ ಮಾತು :

ಕುವರಬಾರೆಲೆ ಬರೆದು ಭಾರತ
ವಿವರವಾಗಿಯೆ  ತಿಳಿಸುತೆಲ್ಲೆಡೆ
ಪ್ರವರ ಪೇಳದೆ ನುಡಿದ ಪರಿಯದು ಛಂದ ಚಂದನವು |
ಬೆವರ ಹನಿಯಲು ಕಂಡೆ ಭಾಮಿನಿ
ತವರುನಾಡಿಗರೆಲ್ಲ ಧನ್ಯರು
ನವಿರು ಕಾವ್ಯದ ಸೊಬಗು ಸವಿಯಲು ಮನಕೆ ನಂದನವು || 


ಕುಮಾರವ್ಯಾಸನ ಮಾತು :

ದೇವನಾಗರಿ ಅರಿಯದವರಿಗೆ
ದೇವ ನಿಮ್ಮಯ ಮೂಲಕಥೆಯನು
ಭಾವಪೂರಿತವಾಗಿ ತಲುಪಿಸೆ ಓಲೆಕಾರನಿವ |
ಜೀವತುಂಬುತ ಜಡಕೆ ಚೇತನ
ವೀವ ನಾರಾಯಣನ ಚರಣಕೆ
ತೇವಮನದಲಿ ತಲೆಯಬಾಗಿಹೆ ತಿಳಿಸಿ ಕಾರಣವ ||

ಹೀಗೆ ಪದ್ಯಗಳನ್ನು ರಚಿಸುತ್ತಾ ಆಸ್ವಾದಿಸುತ್ತಾ ಸಮಯ ಸರಿದದ್ದು ತಿಳಿಯಲೇ ಇಲ್ಲ. ನೂರು ಪ್ರಶ್ನೆಗಳಿಗೆ ನೂರಕ್ಕಿಂತಾ ಹೆಚ್ಚಿನ ಉತ್ತರಗಳನ್ನು ನೀಡಿದ ಅವಧಾನಿಗಳನ್ನು ಕಂಡಾಗ ನಾವೆಲ್ಲ ಮತ್ತೊಮ್ಮೆ ಬೆರಗಾಗಿದ್ದೆವು. ಅವಧಾನವನ್ನು ಧಾರಣೆ ಮಾಡಿಮುಗಿಸಿದ ಅವಧಾನಿಗಳಿಗೆ ಮೇಲಿನಿಂದ ಪುಷ್ಪವೃಷ್ಟಿಯಾಗುತ್ತಿದ್ದಂತೆಯೇ ನಡುವೇದಿಕೆಯಲ್ಲಿ ಅವಧಾನಿಗಳು ಸಭೆಗೆ ನಮಸ್ಕಾರ ಮಾಡಿದರು. ನಂತರ ’ಪದ್ಯಪಾನ’ ಕೇಳಿಕೊಂಡಮೇರೆಗೆ ಚಿತ್ರಕಾವ್ಯದ ಬಂಧಗಳನ್ನು ಸಭಿಕರಿಗೆ ವಿವರಿಸಿದರು. ಪದ್ಯಪಾನದ ಸಲಹೆಗಾರರಾದ ಡಾ| ರಾಮಸ್ವಾಮಿಯವರು ಎರಡುಮಾತುಗಳನ್ನಾಡಿದರು. ಆ ನಂತರ ಅವಧಾನಿಗಳು  ತಮ್ಮ ಹಸ್ತದಿಂದಲೇ ಪೃಚ್ಛಕರಿಗೆ ಸನ್ಮಾನ ನೆರವೇರಿಸಿದರು. ಪದ್ಯಪಾನದ ವತಿಯಿಂದ  ಗಣೇಶರನ್ನು ಸನ್ಮಾನಿಸಿ ಕೈಗೆ ಬಂಗಾರದ ಕಡಗವನ್ನು ತೊಡಿಸಲಾಯ್ತು. ಶಾಲು ಹೊದೆಸಿ,ಫಲತಾಂಬೂಲ ನೀಡಿ ಗೌರವಿಸಿದ ಜನ ಅವಧಾನಿಗಳನ್ನು ನೋಡುತ್ತಾ ವೇದಿಕೆಯೆಡೆಗೇ ಬರುತ್ತಿದ್ದರು. ಯಾರಿಗೂ ಅವಧಾನ ಮುಗಿಸುವುದು ಬೇಕಿರಲಿಲ್ಲ. ಆದರೆ ಕಾಲನಿಲ್ಲಬೇಕಾಲ್ಲಾ? ಸಮಯ ೮:೩೦ ಸಂದಾಗ ಸಭೆ ಮುಕ್ತಾಯವಾಯ್ತು. ಮಂಗಳಮಂಟಪದಲ್ಲಿ ನಡೆದ ಶತಾವಧಾನ ಮಂಗಳ ಕಂಡಿತು. ರಾಜಕೀಯದವರ ಮೇಜುಗುದ್ದುವ ಕುಟಿಲ ಕಾರಸ್ಥಾನಸಹಿತದ ಕುಹಕದ ಆರ್ಭಟವಾಗಲೀ, ಭಾಷಣದ ಹುಳಗಳೆನಿಸಿದ ಕೆಲವರ ಪುಂಖಾನುಪುಂಕದ ಬಿಂಕದ ಶಂಖನಾದವಾಗಲೀ, ಕಾಡುಜಿರಲೆ [ಕಾನ್ ಜಿರಲೆ]ಕೂಗುವಂತೇ ಬಿಟ್ಟೂಬಿಡದೇ ಕೂಗುವವರು ಕೂಗುವುದಾಗಲೀ, ’ಪಿಟೀಲು ಕುಯ್ಯುವವರು’ ಕುಯ್ಯುವುದಾಗಲೀ  ಶ್ರೋತೃಗಳ ವ್ಯವಧಾನವನ್ನು ಒರೆಗೆಹಚ್ಚುವ ಸನ್ನಿವೇಶ ಎಲ್ಲೂ ಇರಲಿಲ್ಲ ಎಂಬುದು ಅತ್ಯಂತ ದೊಡ್ಡ ವಿಷಯ. ಇದ್ದರೆ ಸಭೆ ಹೀಗಿರಬೇಕು ಎನಿಸಿದ್ದು ಜನ್ಮದಲ್ಲಿಯೇ ನನಗೆ ಇಲ್ಲಿಮಾತ್ರ ಎಂದರೆ ತಪ್ಪಾಗಲಾರದು. ಅಪ್ರಸ್ತುತ ಪ್ರಸಂಗಿ ಕೇಳಿದ "ಯಾವುದು ಸತ್ಯ ಯಾವುದು ಭ್ರಮೆ ಎಂಬ ಬಗ್ಗೆ ಉದಾಹರಣೆ ಕೊಡ್ತೀರಾ?" ಎಂಬ ಪ್ರಶ್ನೆಗೆ ಅವಧಾನಿಗಳು " ಅವಧಾನಿಗಳಿಗೆ ಏನೂ ಸಿದ್ಧಿಯಾಗಲೀ ವಿಶೇಷ ಅತಿಮಾನುಷ ಶಕ್ತಿಯ ಸಹಾಯವಾಗಲೀ ಇಲ್ಲ ಎಂಬುದು ಸತ್ಯ, ಬಹಳಜನ ಹಾಗೇನೋ ಇದೆ ಎಂದುಕೊಂಡಿರುವುದು ಭ್ರಮೆ" ಎಂದುತ್ತರಿಸಿದರು. ಅವಧಾನಿಗಳು ಹೇಳಿದ್ದು ಅವರ ವಿಷಯದಲ್ಲಿ ಸರಿಯೇ ಇದೆ. ಅದರಂತೆಯೇ ಗಣೇಶರಂತಹ ದೇವಲೋಕದ ಹೂವಿನ ಜೊತೆಗೆ ನನ್ನಂತಹ ಭೂಲೋಕದ ನಾರು ಸೇರಿಕೊಂಡು ಅವಧಾನಸರಸ್ವತಿಯ ಮುಡಿಗೇರಿದ್ದು ನನಗಿನ್ನೂ ಜೀರ್ಣವಾಗಿಲ್ಲ ಎಂಬುದು ಮಾತ್ರ ಸತ್ಯ, ಭಟ್ಟರು ಉತ್ತಮ ಪ್ರಶ್ನೆ ಕೇಳಿದರು ಎಂಬುದು ಸಭಿಕರಲ್ಲಿ, ಪೃಚ್ಛಕರಲ್ಲಿ, ಅವಧಾನಿಗಳಲ್ಲಿ ಹುಟ್ಟಿದ ಭ್ರಮೆ.     

ಭುವನದ ಭಾಗ್ಯ ಶತಾವಧಾನಿ ರಾ. ಗಣೇಶರ ಜನ್ಮ ಕನ್ನಡನಾಡಲ್ಲೇ ಆಯ್ತು, ಇವತ್ತು ಅಕ್ಷರಶಃ ಸರ್ವಜ್ಞ ಪದವಿಗೆ ಅರ್ಹರಾದವರೆಂದರೆ ಅತಿಶಯೋಕ್ತಿಯಲ್ಲ. ತಮಾಷೆಯೊಂದು ಹೀಗಿದೆ: ಎಳವೆಯಲ್ಲಿ ಮನೆಯಮುಂದೆ ಓಡಾಡುತ್ತಿದ್ದ ನಾಯಿಯ ಬಾಲಕ್ಕೆ ಕಬ್ಬಿಣದ ಪೈಪಿನ ತುಂಡನ್ನು ಸದಾ ತೂರಿಸಿ ಆಟವಾಡುತ್ತಿದ್ದ ಬಾಲಗಣೇಶರನ್ನು ಕಂಡು ಅಮ್ಮ "ಬೇಡಪ್ಪಾ ಗಣಿ[ಅವರಮ್ಮ ಅವರಿಗೆ ಪ್ರೀತಿಯಿಂದ ಕರೆಯುತ್ತಿದ್ದುದು ಹೀಗೇನೆ]ಅದು ನೆಟ್ಟಗಾಗಲ್ಲ, ಅದು ಸದಾ ಡೊಂಕೇ" ಎಂದರೆ "ಇಲ್ಲಮ್ಮಾ  ನಾನು ಪೈಪನ್ನು ಬೆಂಡ್ ಮಾಡಿಕೊಳ್ತಾ ಇದ್ದೀನಿ" ಎಂದಿದ್ದರಂತೆ ಗಣೇಶರು; ಕ್ರಿಯಾಶೀಲತೆಗೆ ಇದಲ್ಲವೇ ಉದಾಹರಣೆ? ಅವರ ಸಹಪಾಠಿ, ಚಿತ್ರನಟ ರಮೇಶ್ ಅರವಿಂದ್ ಹೇಳಿದ್ದಾರೆ:"ಸದಾ ಪಂಚೆಯನ್ನುಟ್ಟು ಶಾಲು ಹೊದ್ದು ಬರುವ ಗಣೇಶರು ನಮ್ಮಿಂದ ಬೇರೆಯಾಗಿ ತೋರುತ್ತಿದ್ದರು, ಆಟ-ಪಾಠ-ನಾಟಕಗಳಲ್ಲಿ ನಮ್ಮೆಲ್ಲರೊಂದಿಗೂ ಸಹಜವಾಗಿ ಬೆರೆಯುತ್ತಿದ್ದರೂ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಈತ ಮುಂದೇನಾಗಬಹುದು ಎಂಬುದೇ ನಮ್ಮೆಲ್ಲರ ಆಲೋಚನೆಯಾಗಿತ್ತು." ಮೆಟಲರ್ಜಿಕಲ್ ಎಂಜಿನೀಯರಿಂಗ್ ಮುಗಿಸಿಯೂ ಆ ಆಧಾರದ ಉದ್ಯೋಗವನ್ನು ಬಯಸದ ಗಣೇಶರ ಮಾರ್ಗ ಮೊದಲೇ ನಿರ್ಧರಿತವಾಗಿತ್ತು. ಇವತ್ತು ಈ ಅಖಂಡ ಭಾರತದಾದ್ಯಂತ ಇರುವ ಸನ್ಯಾಸಿಗಳಲ್ಲಿಲ್ಲದ ಅಗಣಿತ ಪಾಂಡಿತ್ಯವನ್ನು ಗಣೇಶರು ಪಡೆದುಕೊಂಡಿದ್ದಾರೆ-ಅದು ನಮ್ಮೆಲ್ಲರ ಹೆಮ್ಮೆ. ಅಭಿಜಾತ ಕಾವ್ಯ-ಸಾಹಿತ್ಯವನ್ನೂ ಭಾರತೀಯ ಸಂಸ್ಕೃತಿ ಪರಂಪರೆಯನ್ನೂ ಪುನರುಜ್ಜೀವನಗೊಳಿಸುವಲ್ಲಿ ತನ್ನಿಂದಾಗುವ ಸೇವೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೇ ನಡೆಸುತ್ತಿರುವ ಅವರಿಗೆ ಮುಗಿಯಲು ನನ್ನೊಬ್ಬನ ಕೈ ಸಾಲದು; ಈ ವಿಷಯದಲ್ಲಿ ನನಗೆ ಕಾರ್ತವೀರ್ಯನ ತೋಳುಗಳೇ ಸಿಕ್ಕರೂ ತೀರದಾದೀತು! ಆರ್ಷೇಯ ಋಷಿಪರಂಪರೆಯ ಆದರ್ಶವನ್ನು ಪ್ರಾಮಾಣಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಹಂಚುತ್ತಿರುವ ಗಣೇಶರಿಗೆ ಸಮಾಜ ಯಾವ ಪಡಿನೀಡೀತು? ನೀಡಿದರೂ ಅದು ಅವರ ಸೇವೆಗೆ ಸಂದ ಮೌಲ್ಯವಾಗಲು ಸಾಧ್ಯವಿಲ್ಲ! ಜನಸಾಮಾನ್ಯನೊಬ್ಬ ತನ್ನ ಒಂದು ಜನ್ಮದಲ್ಲಿ ಓದಿ ಮುಗಿಸಲಾರದಷ್ಟು ಓದಿದ, ಬರೆದ, ಹಂಚುತ್ತಿರುವ ಗಣೇಶರ ಜ್ಞಾನಸತ್ರ ಸದಾ ನಮಗೆಲ್ಲ ಸಿಗುತ್ತಿರಲಿ ಎಂಬುದಷ್ಟೇ ಭಗವಂತನಲ್ಲಿ ನಮ್ಮ ಬೇಡಿಕೆಯಾಗಿದೆ. ಅಂತಹ ಗಣೇಶರಿಗೆ ನನ್ನ-ನಮ್ಮೆಲ್ಲರ ಸಾಷ್ಟಾಂಗ ವಂದನೆಗಳು.

ಚಂದ್ರಶೇಖರಾಷ್ಟಕ[’ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ’]ದಾಟಿಯಲ್ಲಿ ಈ ಕೆಳಗಿನ ಪದ್ಯ ರಾ.ಗಣೇಶಾರ್ಪಿತ. 

ರಾಗಣೇಶಗೆ ವಂದನೆ ಅಭಿನಂದನೆ ಅಭಿವಂದನೆ
ಈಜಗದ ಸೋಜಿಗವೆ ಸಾಗಲಿ ಸಾಸಿರದ ಅವಧಾನವು |
ಮಾಗಣಿಯು ನಮ್ಮೆಲ್ಲರದು ಅತಿ ಪ್ರೀತಿಯಂದಲಿ ಕಾಡುತಂ
ಬೇಗದಿಂದದನೆಲ್ಲ ಕಾಣುವ ಯೋಗಬರಲೆಂಬರ್ಥದಿಂ ||