ಚಿತ್ರಋಣ : ಅಂತರ್ಜಾಲ
ಗಾದೆ ಸುಳ್ಳಾದರೂ ವೇದ ಸುಳ್ಳಾಗದಲ್ಲಾ !!
ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಲಾರ ಎಂಬುದು ನಮ್ಮಲ್ಲಿನ ಗಾದೆ. ಆದರೆ ಹುಲ್ಲನ್ನು ಮೇಯುವ ಹಣೆಬರಹವೇ ಜೀವಿಯ ಹಣೆಯಲ್ಲಿ ಬರೆದಿದ್ದರೆ ಅದನ್ನು ಹುಟ್ಟಿಸಿದ ದೇವರೂ ತಪ್ಪಿಸಲಾರನೇನೋ. ಜಗವನ್ನಾಳುವ ಬಹುರೂಪೀ ಶಕ್ತಿಗೆ ಅದರದ್ದೇ ಆದ ಕೆಲವು ನಿಯಮ-ನಿಬಂಧನೆಗಳಿವೆ: ಅವು ’ಇಂಡಿಯಾ’ದ ಪ್ರಜಾತಂತ್ರದ ಹಾಗೇ ಒಬ್ಬರಿಗೊಂದು ಇನ್ನೊಬ್ಬರಿಗಿನ್ನೊಂದು ಎನ್ನುವ ಪರಿಭೇದ ಹೊಂದಿರುವುದಿಲ್ಲ; ಆದರೆ ಆ ಶಕ್ತಿಯ ಮೂಲ ನಿಯಮಗಳ ಅರಿವು ನಮ್ಮಲ್ಲಿ ಬಹುತೇಕರಿಗೆ ಇರುವುದಿಲ್ಲ! ಆರ್ಷೇಯ ಮಹಾ ಋಷಿಗಳನೇಕರು ತಮ್ಮ ಸುದೀರ್ಘ, ಅಖಂಡ ತಪಸ್ಸಿನ ಮೂಲಕ ಆ ಲೀಲೆಗಳನ್ನು ಅರಿತರು. ಸಹಸ್ರಾರು ವರ್ಷಗಳ ಕಾಲ ಬದುಕುವ ಅರ್ಹತೆಯಿದ್ದ ಅವರ ಅವಿರತ ಕಠಿಣ ಪರಿಶ್ರಮಕ್ಕೆ ಭಗವಂತನೆಂಬ ಶಕ್ತಿ ಕರುಣೆದೋರಿತು. ಕೆಲವರು ಧ್ಯಾನಾಸಕ್ತರಾಗಿ ಕುಳಿತು ಸಮಾಧಿ ಸ್ಥಿತಿಯಲ್ಲಿದ್ದಾಗ ಅವರನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದ [ಶಿಷ್ಯರು] ಇನ್ನೂ ಕೆಲವರು ಪಕ್ಕದಲ್ಲಿ ಎಚ್ಚೆತ್ತಿದ್ದರು. ಐಹಿಕ ದೇಹದ ಪ್ರಜ್ಞೆಯಿಲ್ಲದ ಗುರುಗಳ ಬಾಯಿಂದ, ಸಮಾಧಿಸ್ಥಿತಿಯಲ್ಲಿ ಅವ್ಯಾಹತವಾಗಿ ಹೊರಹರಿದ ಧ್ವನಿಗೆ ಅವರು ಕಿವಿಗೊಟ್ಟರು. ಗುರುಗಳಿ ಕಲಿಸಿದ್ದ ಶ್ರದ್ಧೆ-ಭಕ್ತಿಯ ತೊಡಗಿಕೊಳ್ಳುವಿಕೆಯಿಂದ ಅಪಾರವಾದ ಮನೋಬಲವನ್ನು ಹೊಂದಿದ್ದ ಶಿಷ್ಯರು ಗುರುಗಳು ಅನಿರೀಕ್ಷಿತವಾಗಿ ಬಾಯಿಂದ ಉದ್ಗರಿಸಿದ ಮಾಹಿತಿಯನ್ನು ಮನದಲ್ಲಿ ಶೇಖರಿಸಿಕೊಂಡರು. ಶ್ರುತವಾಗಿ ಶೇಖರಿಸಿಕೊಂಡ ಆ ಮಾಹಿತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಸಲುವಾಗಿ ತಮ್ಮ ಮುಂದಿನ ಶಿಷ್ಯರುಗಳಿಗೆ ಬಾಯಿಪಾಠವಾಗಿ ಹೇಳಿಕೊಟ್ಟು, ಅದರ ಅರ್ಥವನ್ನು ವಿವರಿಸಿದರು. ಹಾಗೆ ಬಂದ ಮಾಹಿತಿಯನ್ನು ಅವರು ವೇದಗಳೆಂದು ಕರೆದರು; ಸಮಾಧಿಸ್ಥಿಯಲ್ಲಿದ್ದ ಪುರುಷನ ಬಾಯಿಂದ ತಂತಾನೇ ಹೊರಟಿದ್ದರಿಂದ ಮತ್ತು ಸಮಾಧಿಯಿಂದ ಎಚ್ಚೆತ್ತ ಬಳಿಕ ಉದ್ಗರಿಸಿದ ಅದೇ ಪುರುಷನಿಗೆ ಅವುಗಳು ಹೊರಬಂದ ಬಗ್ಗೆ ಅಲ್ಲಿಯವರೆಗೆ ತಿಳಿಯದೇ ಇದ್ದದ್ದರಿಂದಲೂ ಅವುಗಳನ್ನು ಅಪೌರುಷೇಯವೆಂದು ಕರೆಯಲಾಯ್ತು. ಹೊರಬಂದ ಮಾಹಿತಿಮಾತ್ರ ನಿಖರವಾಗಿತ್ತು; ಅದು ಅಗಣಿತ ಜ್ಞಾನಬಂಡಾರದ ಕೀಲಿ ಕೈ ಆಗಿತ್ತು! ಅದನ್ನೇ ವೇದಗಳೆಂದು ಮಹರ್ಷಿಗಳು ಹೆಸರಿಸಿದರು; ಕಾಲಾನಂತರದಲ್ಲಿ ವೇದವ್ಯಾಸರು ಅವುಗಳನ್ನು ವಿಂಗಡಿಸಿದರು.
ವನಚರೀ ವನ್ಯಜೀವಿಗಳೇನಕವಕ್ಕೆ ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಬೇಕಾದದ್ದೇ ಜಗನ್ನಿಯಾಮಕನ ಕೆಲಸ. ಆದರೆ ಅಲ್ಲೂ ಕೂಡ ಕೆಲವು ಕಡೆ ಹುಲ್ಲೂ ಸಿಗುವುದಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ! ಹಸಿದ ಹೊಟ್ಟೆಯನ್ನು ಹೊತ್ತು ಮರಿಯೊಂದಿಗೆ ಆಹಾರವನ್ನು ಅರಸುತ್ತಾ ಅನೆ ಹೊರಟಿತ್ತು. ಒಂದು ಕಾಲಕ್ಕೆ ಆ ಪ್ರಾಣಿಯ ರಹದಾರಿಯಾಗಿದ್ದ, ಆಡುಂಬೊಲವಾಗಿದ್ದ ಕಾಡು ಅತಿಕ್ರಮಿಯಾದ ಮಾನವನ ಅತಿರೇಕಗಳ ಫಲವಾಗಿ ನಡುವೆ ಹಲವು ಅಡೆತಡೆಗಳನ್ನು ಹೊಂದಿರುವುದು ಆನೆಗೆ ಗೊತ್ತಾಗಲಿಲ್ಲ. ದಟ್ಟವಾಗಿದ್ದ ಆ ಕಾಡಿನ ಮಧ್ಯೆ ರಸ್ತೆಗಳು ಹಾದುಹೋದವು, ರೈಲ್ವೇ ಹಳಿಗಳೂ ಹಾದುಹೋದವು. ದಿನದ ಅದೆಷ್ಟೋ ವೇಳೆಗಳಲ್ಲಿ ಬುರ್ರನೆ ವಾಹನಗಳು, ರೈಲುಗಳು ಅಲ್ಲಿ ಹಾದುಹೋಗುವವು; ಹಾಗೇನೋ ಹಾದು ಹೋಗುವವು ಎಂಬ ಅರಿವು ಆನೆಗಿದ್ದರೂ ಇಂತಿಷ್ಟೇ ಸಮಯಕ್ಕೆ ಹಾದುಹೋಗುವ ಬಗ್ಗೆ ಅರಿವಿಲ್ಲ; ಧಾವಂತದಲ್ಲಿ ನೂರಾರು ಕಿ.ಮೀ. ವೇಗದಲ್ಲಿ ಹಾದುಹೋಗುತ್ತವೆ ಎಂಬ ಬಗ್ಗೆಯೂ ತಿಳಿಯುವುದಿಲ್ಲ. ಕಾಡಿನಲ್ಲಿ ಕುಡಿಯಲು ಈಗ ನೀರಿಲ್ಲ, ಬಿದಿರಬೊಂಬುಗಳಿಗೆ ಕಳೆದಸಾಲಿನಲ್ಲೇ ಹೂವು ಬಂದಿದ್ದರಿಂದ ಚಿಗುರುಗಳು ಇನ್ನೂ ಬರಲಿಲ್ಲ-ಹೀಗಾಗಿ ಊಟವೂ ಇಲ್ಲ. ಹುಟ್ಟಿಸಿದ ದೇವ ಹೊಟ್ಟೆಯನ್ನು ಕೊಟ್ಟ, ಹಸಿದ ಹೊಟ್ಟೆಗೆ ಆಹಾರವನ್ನೂ ಒಂದಷ್ಟು ಕಾಲ ಕೊಟ್ಟ, ಆಹಾರ ಸಾಲದಾದಾಗ ತಿರುಗಿ, ಹುಡುಕಿ ಏನಾದರೂ ತಿನ್ನಬಲ್ಲದ್ದು ಲಭ್ಯವಾದಾಗ ತಿನ್ನಲು ಬುದ್ಧಿಕೊಟ್ಟ. ಹಸಿದ ಹೊಟ್ಟೆಯ ಭರ್ತಿಗಾಗಿ ಆನೆಗಳು ತಮಗೆ ಗೊತ್ತಿರುವ ಜಾಗದಲ್ಲಿ ಅಲೆವವು, ಹಿಂದೆ ಅವುಗಳ ಪೂರ್ವಜರು ಓಡಾಡಿಕೊಂಡಿದ್ದ ಕಾಡಿನಭಾಗಗಳಲ್ಲಿ ಮನುಷ್ಯ ತನ್ನ ವಸಾಹತುಗಳನ್ನು ಮಾಡಿಕೊಂಡಿದ್ದನ್ನು ಕಾಣುವವು, ಹಾಗೆ ಅಲ್ಲಿಹೋದಾಗ ಸಿಕ್ಕಿದ್ದನ್ನು ತಿನ್ನುವವು. ಹಸಿದ ಹೊಟ್ಟೆಗೆ ಮರ್ಯಾದೆಯ ಪ್ರಶ್ನೆ ಬರುವುದಿಲ್ಲ, ಮನುಜರ ಕೂಗು ಕೇಳಿಸುವುದಿಲ್ಲ.
ಆಹಾರವನ್ನು ಹುಡುಕುತ್ತಾ ಹೊರಟ ಆನೆ ತನ್ನ ಮರಿಯೊಂದಿಗೆ ಅಲೆಯುತ್ತಿರುವಾಗ ಮರಿ ರೈಲು ಹಳಿಗಳಮೇಲೆ ನಿಂತಿತ್ತು. ಮರುಕ್ಷಣದಲ್ಲಿ ಮಿಂಚಿನವೇಗದಲ್ಲಿ ರೈಲು ಹಾದುಹೋದಾಗ ಮರಿ ರೈಲಿಗೆ ಸಿಕ್ಕಿ ಇಹಲೋಕವನ್ನೇ ತ್ಯಜಿಸಿತ್ತು. ಮರಿ ಸತ್ತುಹೋಯ್ತೆಂದು ಕಂಡ ತಾಯಾನೆ ಕೋಪಾವಿಷ್ಟವಾಗಿ ಚಲಿಸುತ್ತಿದ್ದ ಅದೇ ರೈಲನ್ನು ನೂಕಲು ಹೋಯ್ತು. ಆಯತಪ್ಪಿ ತಾನೂ ಹೊಡೆತ ತಿಂದು ಹಸಿದ ಹೊಟ್ಟೆಯಲ್ಲೇ ಸತ್ತುಹೋಯ್ತು. ಇಂತಹ ಅನೇಕ ದಾರುಣ ಪ್ರಸಂಗಗಳು ಇತ್ತೀಚೆಗೆ ನಡೆಯುತ್ತಲೇ ಇರುತ್ತವೆ; ಗೊತ್ತಿದ್ದೂ ತಡೆಯಲಾರದ ಮನುಷ್ಯನ ಸಂಕಲ್ಪಕ್ಕೆ ಇವು ನಿಲುಕಿದ್ದಲ್ಲ. ಕಾಡ ಮಧ್ಯದಲ್ಲಿ ಸಾವಿರಾರು ಕಿ.ಮೀ.ಗಳ ದೂರದವರೆಗೆ ರೈಲು ಹಳಿಯ/ರಸ್ತೆಯ ಇಕ್ಕೆಲಗಳಲ್ಲಿ ಯಾವ ಬೇಲಿಯನ್ನೂ ಹಾಕುವುದು ಸಾಧ್ಯವಾಗದೇ ಹೋಗಬಹುದು, ಬೇಲಿ ಹಾಕಿದರೆ ವನಸಂಚಾರಿಗಳ ಸಂಚಾರಕ್ಕೇ ಸಂಚಕಾರ ಬರಬಹುದು. ಮನುಷ್ಯ ತನ್ನ ಅಗತ್ಯಗಳಿಗೆ ತಕ್ಕಂತೇ ಬೆಳೆಸಿಕೊಂಡ ತನ್ನ ಮಾರ್ಗಗಳು ಪ್ರಕೃತಿಯ ಹಲವು ಜೀವಿಗಳ ಬದುಕಿಗೆ ಮಾರಣಹೋಮ ನಡೆಸುವ ಹೋಮಕುಂಡಗಳಾಗಿ ಪರಿಣಮಿಸಿವೆ. ಹೀಗಾಗಬೇಕೆಂಬುದು ವಿಧಿಲಿಖಿತವಾಗಿದ್ದಾಗ ಅದನ್ನು ತಪ್ಪಿಸುವುದು ಸಾಧ್ಯವೇ? ಹಾಗಂತ ಅನೇಕ ಕಾಡುಪ್ರಾಣಿಗಳು ಆ ರಸ್ತೆಗಳನ್ನೂ/ರೈಲುಹಳಿಗಳನ್ನೂ ದಾಟಿ ಸುರಕ್ಷಿತವಾಗಿ ಓಡಾಡುವುದೂ ಇದೆ. ಆದರೆ ಕೆಲವಕ್ಕೆ ಮಾತ್ರ ಗ್ರಹಚಾರ ಕಾಡುತ್ತದೆ; ಜೀವವನ್ನೇ ಬಲಿತೆಗೆದುಕೊಳ್ಳುತ್ತದೆ ಅಥವಾ ಅರೆಜೀವವನ್ನಾಗಿಸಿ ಬದುಕಲೂ ಆಗದ ಸಾಯಲೂ ಆಗದ ಸ್ಥಿತಿಯಲಿ ತಿಂಗಳಾನು ಗಟ್ಟಲೆ ಬಳಲುವಂತೇ ಮಾಡುತ್ತದೆ.
ಕಾಡುಗಳಲ್ಲಿ ಹೊಸ ಪ್ರಯಾಣ ಮಾರ್ಗಗಳನ್ನು ರೂಪಿಸುವಾಗ ಯೋಚಿಸಬೇಕಾದುದು ಮನುಷ್ಯನ ಕರ್ತವ್ಯ. ಹಾಗೆ ಮಾರ್ಗಗಳನ್ನು ಅಲ್ಲಿ ಹಾಕದೇ ಇರುವುದು ಆಗಬೇಕಾದ ಕೆಲಸ-ಆದರೆ ಊರಿಂದೂರಿಗೆ ನಾಡಿಂದ ನಾಡಿಗೆ ಪ್ರಯಾಣಿಸುವಾಗ ಎದುರಾಗುವ ಉಳಿಕೆಯಾಗಿ ಉಳಿದ ಕೇವಲ ಕೆಲವೇ ಭಾಗಗಳಷ್ಟು ಕಾಡುಗಳಲ್ಲೂ ರಸ್ತೆಗಳು, ರೈಲುಮಾರ್ಗಗಳು ಹಾದುಹೋಗುವಂತೆ ಮಾಡುವುದು ನವನಾಗರಿಕತೆಯ ವಿಪರ್ಯಾಸ! ಕಾಡುಗಳನ್ನೆಲ್ಲಾ ನಮ್ಮ ಸ್ವಾರ್ಥಕ್ಕೆ, ಮನೆ, ಪೀಠೋಪಕರಣ, ಉರುವಲು, ಹಡಗು, ವ್ಯಾವಸಾಯಿಕ ಉಪಕರಣಗಳು, ವಾಹನಗಳನ್ನು ತಯಾರಿಸಿಕೊಳ್ಳುವ ಸಲುವಾಗಿ ಕಡಿದು ನಮ್ಮಾದಾಗಿಸಿಕೊಂಡು ಬೋಳುನೆಲವನ್ನಾಗಿಸಿದವ ಮನುಷ್ಯನೇ ತಾನೇ? ಕಾಡಿ ಬರಿದಾದಮೇಲೆ ಮಳೆಯಿಲ್ಲ, ಮಳೆಯಿಲ್ಲದಿದ್ದಮೇಲೆ ಅಂತರ್ಜಲವಿಲ್ಲ-ಕುಡಿಯುವ ನೀರಿಲ್ಲ, ಬೆಳೆಗಳಿಲ್ಲ, ಬೆಳೆಗಳನ್ನು ಬೆಳೆದುಳಿಯುವ ಹುಲ್ಲನ್ನು ತಿನ್ನುವ ಜಾನುವಾರುಗಳಿಗೆ ಉಳಿಗಾಲವಿಲ್ಲ. ಇರುವೆಯಿಂದ ಹಿಡಿದು ೮೦ ಕೋಟಿಯಂತೆ ಜೀವರಾಶಿಗಳು. ಅಷ್ಟನ್ನೆಲ್ಲಾ ನಾವು ಬರಿಗಣ್ಣಿಗೇ ಕಾಣಲು ಸಾಧ್ಯವಾಗದಿದ್ದರೂ ಇರುವೆಯಿಂದ ಆನೆಯವರೆಗೆ ಅದೆಷ್ಟೋ ಮೂಕ-ಮುಗ್ಧ ಜೀವಗಳನ್ನು ಪ್ರತಿನಿತ್ಯ ಬಲಿಹಾಕುವ ನಮಗೆ ಕಿಂಚಿತ್ತೂ ಕರುಣೆಯಿಲ್ಲ. ಸಮೃದ್ಧ ಕಾಡಿದ್ದರೆ ಬಹು ಮರ್ಯಾದಸ್ಥ ಆನೆ ಕಾಡಿನಿಂದ ನಾಡಿಗೆ ಬರುತ್ತಿರಲಿಲ್ಲ, ಪರಪೀಡನೆ ಅದರ ಉದ್ದೇಶವಲ್ಲ; ಬದಲಾಗಿ ಶಕ್ತಿಗುಂದಿದ ನಾಲ್ಕುಕಾಲುಗಳ ಮೇಲಿನ ಹೊರಲಾರದ ಹಸಿದ ಹೊಟ್ಟೆಯನ್ನು ಹೊತ್ತು ನಾಡಿನೆಡೆಗೆ ಅವು ನುಗ್ಗುತ್ತವೆ, ಉರುಳಿಗೆ, ವಿದ್ಯುತ್ ತಂತಿಗೆ, ಮುಚ್ಚಿಟ್ಟ ಆಳದ ಕಮರಿಗೆ ಬಿದ್ದು, ತಗುಲಿ ದಾರುಣವಾಗಿ ಅಂತ್ಯಕಾಣುತ್ತವೆ. ಹೊಟ್ಟೆಗೆ ಆಹಾರ ಕಡಿಮೆಯಾದ ಹಂತದಲ್ಲಿ ಹುಲಿ-ಚಿರತೆಗಳೂ ಸಹ ಜಾನುವಾರುಗಳ ಬೇಟೆಗಾಗಿ ನಾಡಿಗೆ ನುಗ್ಗುತ್ತವೆ. ರಣಹದ್ದುಗಳಂತಹ ಅನೇಕ ಪಕ್ಷಿ ಪ್ರಭೇದಗಳು, ಪಶು ಪ್ರಭೇದಗಳು ಇಂದು ನಶಿಸಿಹೋಗಿವೆ. ಇರುವುದು ಮೂರು ಹಾವು, ನಾಲ್ಕು ಮಂಗ, ಕೆಲವು ಆನೆಗಳು, ಸ್ವಲ್ಪ ಹುಲಿ-ಚಿರತೆಗಳು ಮಾತ್ರ. ಮಿಕ್ಕಿದ ಜೀವಿಗಳನ್ನೆಲ್ಲಾ ಕೇವಲ ಚಿತ್ರದಲ್ಲಿ ಮಾತ್ರ ನೋಡುವ ಕಾಲ ಬಹುದೂರವಿಲ್ಲ.
ಮನುಷ್ಯರ ಬಗ್ಗೆ ಮಾತನಾಡುವುದಾದರೆ ಬೀಡಾಡಿಗಳು ಚೆನ್ನಾಗಿ ಕಾಲಹಾಕುತ್ತಿದ್ದಾರೆ; ಅವರಿಗೆ ಯಾವುದೇ ತಲೆನೋವು ಹತ್ತಿಕೊಳ್ಳುವುದಿಲ್ಲ. ವ್ಯಸನಿಕರು, ಜೂಜುಕೋರರು, ಮೋಸಗಾರರು, ನಯವಂಚಕರು, ಕೊಲೆಗಡುಕರು, ಭ್ರಷ್ಟರಾಜಕಾರಣಿಗಳು ಎಲ್ಲರೂ ಸುಖವಾಗಿದ್ದಾರೆ, ಆದರೆ ಕೆಲವು ಸಜ್ಜನರಿಗೆ ಇಲ್ಲದ ತೊಂದರೆ ಕಾಣಿಸಿಕೊಳ್ಳುತ್ತದೆ. ಮಕ್ಕಳಿಲ್ಲದ ಮನೆಯಲ್ಲಿ ಅಪರೂಪದಲ್ಲಿ ಅನೇಕವರ್ಷಗಳ ನಂತರ ಹುಟ್ಟಿದ ಏಕೈಕ ಮಗು ಎಲ್ಲೋ ಅಪಹೃತವಾಗುತ್ತದೆ ಅಥವಾ ಶಾರೀರಿಕವಾಗಿ ಬಳಲುತ್ತದೆ, ಅಪಘಾತದಲ್ಲಿ ಸತ್ತುಹೋಗುತ್ತದೆ. ಹುಟ್ಟಿದಾರಭ್ಯ ಯಾವ ತಪ್ಪನ್ನೂ ಮಾಡದ ವ್ಯಕ್ತಿಗೆ ಪರಿಹರಿಸಿಕೊಳ್ಳಲಾಗದ ಆಪತ್ತು ಬಂದೊದಗುತ್ತದೆ, ಇಲ್ಲದ ಸಂಕಟಗಳು ಎದುರಾಗುತ್ತವೆ. ಇದನ್ನೆಲ್ಲಾ ನೋಡುವಾಗ ಸಂಕಲ್ಪ ಬೇರೆಲ್ಲೋ ಆಗಿದೆ, ಸೂತ್ರಧಾರನ ಜಾಲ ವಿಚಿತ್ರವಾಗಿರುತ್ತದೆ ಎನಿಸುತ್ತದೆ. ಒಬ್ಬ ವ್ಯಕ್ತಿಗೆ ಜೀವನದಲ್ಲಿ ಎಷ್ಟು ಶಸ್ತ್ರಕ್ರಿಯೆಗಳು ನಡೆಯಬಹುದು? ಒಂದು ಅಥವಾ ಎರಡು, ಆದರೆ ನಾನು ನೋಡಿದ ಒಬ್ಬ ಸಜ್ಜನನಿಗೆ ನಾಲ್ಕು ಶಸ್ತ್ರಕ್ರಿಯೆಗಳು ನಡೆದಿವೆ; ಎಲ್ಲವೂ ಬಹಳ ಗಂಭೀರ ಮಟ್ಟದ ಶಸ್ತ್ರಕ್ರಿಯೆಗಳೇ. ಸರಕಾರೀ ಅಧಿಕಾರಿಯಾದ ಆತ ಕರ್ತವ್ಯ ನಿರತನಾಗಿ ಓಡಾಡುವಾಗ ಮೋಟಾರು ಬೈಕಿನಿಂದ ಬಿದ್ದು ಸ್ಲಿಪ್ ಡಿಸ್ಕ್ ಆಯ್ತು, ಅದಕ್ಕೊಂದು ದೊಡ್ಡ ಶಸ್ತ್ರಕ್ರಿಯೆ ಬೆನ್ನ ಹಿಂಭಾಗದಲ್ಲಿ ನಡೆಯಿತು. ಅದಾದ ಕೆಲವೇ ವರ್ಷಗಳಲ್ಲಿ ಮೂತ್ರ ಸಂಬಂಧೀ ದೋಷ ಕಾಣಿಸಿಕೊಂಡು, ವಾಸಿಯಾಗದೇ ಸ್ಕ್ಯಾನಿಂಗ್ ಮಾಡಿಸಿದಾಗ ಮೂತ್ರಕೋಶದಿಂದ ಬರುವ ನಾಳದ ಉದ್ದ ಜಾಸ್ತಿ ಇದ್ದು ಅದು ತಿರುಚಿಕೊಂಡಿದೆ-ಇದು ಕೆಲವರಲ್ಲಿ ಹುಟ್ಟುವಾಗಲೇ ಹೀಗಿರುತ್ತದೆ, ತೊಂದರೆಯಾದರೆ ಕತ್ತರಿಸಿ ತೆಗೆಯಬೇಕಾಗುತ್ತದೆ ಎಂದ ವೈದ್ಯರು ಹಾಗೆ ಕತ್ತರಿಸಲು ಶಸ್ತ್ರಕ್ರಿಯೆ ನಡೆಸಿದರು. ಅದಾದ ವರ್ಷಾನಂತರವೂ ಮೂತ್ರದಲ್ಲಿ ದೋಷ ಕಾಣುತ್ತಿದ್ದುದರಿಂದ ಮತ್ತೆ ಪರೀಕ್ಷಿಸಲಾಗಿ ಕತ್ತರಿಸಿದ ನಾಳದ ತುದಿಯ ಜೋಡಣೆ ಸಮರ್ಪಕವಾಗಿಲ್ಲ, ಅದು ಹಾಳಾಗಿದೆ ಮತ್ತೆ ಬೇರೇ ಸ್ಟಂಟ್ ಹಾಕಬೇಕು ಎಂದು ವೈದ್ಯರು ತಿಳಿಸಿದರು. ಆಗ ಇನ್ನೊಂದು ಶಸ್ತ್ರಕ್ರಿಯೆ ನಡೆಯಿತು. ಇದಾದ ವರ್ಷವೆರಡರಲ್ಲೇ ಮೂತ್ರದ ತೊಂದರೆ ಹಾಗೇ ಇರುವುದು ತಿಳಿಯಿತು-ಔಷಧ ನಿಲ್ಲಿಸಿದರೆ ಮತ್ತೆ ತೊಂದರೆ ಕಾಣುತ್ತಿತ್ತು. ಇದೀಗ ಮೊನ್ನೆ ೨೨ ದಿನಗಳ ಹಿಂದೆ ನಾಲ್ಕನೇ ಶಸ್ತ್ರಕ್ರಿಯೆ ನಡೆಯಿತು. ಸಣ್ಣ ಕರುಳಿನ ಭಾಗವನ್ನು ಕತ್ತರಿಸಿ, ಅದನ್ನೇ ಹೊಸ ಮೂತ್ರನಾಳವಾಗಿ ಹಳೆಯ ಮೂತ್ರನಾಳವಿದ್ದ ಜಾಗದಲ್ಲಿ ಜೋಡಿಸಲಾಗಿದೆ! ವ್ಯಕ್ತಿಗೆ ಅದೆಷ್ಟು ಸಲ ಸತ್ತು ಹುಟ್ಟಿದ ಅನುಭವ ಆಯ್ತೋ ಪರಮಾತ್ಮನೇ ಬಲ್ಲ. ಶಸ್ತ್ರಕ್ರಿಯೆ ನಡೆಸಿದಾಗ ಆಗುವ ನೋವು, ನಂತರದ ವರ್ಷಗಳಲ್ಲಿ ತೆಗೆದುಕೊಳ್ಳಬೇಕಾದ ಔಷಧಗಳು, ಅಧಿಕಾರಿಯ ಕರ್ತವ್ಯಕ್ಕೆ ಹಾಜರಾಗದೇ ರಜಾ ತೆಗೆದುಕೊಳ್ಳಬೇಕಾದ ಅನಿವಾರ್ಯತೆ, ಆಸ್ಪತ್ರೆಯಲ್ಲಿ ತಗಲುವ ಲಕ್ಷಾಂತರ ರೂಪಾಯಿಗಳ ವೆಚ್ಚ ಭರಿಸುವಿಕೆ ಇದರೊಂದಿಗೆ ಮಿಕ್ಕುಳಿದವರಂತೇ ಮಾಮೂಲಿ ಸಂಸಾರದ ಜವಾಬ್ದಾರಿ!
ಎಡಪಂಥೀಯ ಜನ ಗಾದೆಯೊಂದನ್ನು ಉಪಯೋಗಿಸುತ್ತಾರೆ: ’ವೇದ ಸುಳ್ಳಾದರೂ ಗಾದೆಸುಳ್ಳಾಗದಲ್ಲಾ’ ಎಂದು; ವೇದವನ್ನು ಅಷ್ಟರಮಟ್ಟಿಗಾದರೂ ಒಪ್ಪಿದ್ದಾರಲ್ಲಾ ಎಂದುಕೊಂಡು ಸುಮ್ಮನಾಗಬೇಕು. ವೇದವೆಂದೂ ಸುಳ್ಳಾಗುವುದಿಲ್ಲ ಯಾಕೆಂದರೆ ಅದು ಮನುಷ್ಯ ಕೂತು ಯೋಚಿಸಿ ಬರೆದಿದ್ದಲ್ಲ, ಜನಸಾಮಾನ್ಯನ ಅನುಭವಕ್ಕೆ ನಿಲುಕಿದ ಹೇಳಿಕೆಗಳ ಯಾದಿಯೂ ಅಲ್ಲ. ಗಾದೆಗಳು ಹಾಗಲ್ಲ-ಅವು ಜನಪದರ ಹೇಳಿಕೆಗಳಾಗಿವೆ. ಗಾದೆಗಳು ಕಾಲಕ್ರಮದಲ್ಲಿ ಬದಲಾಗಬಹುದು ಅಥವಾ ಅರ್ಥಹೀನವೆನಿಸಬಹುದು. ಆದರೆ ವೇದ ಹಾಗಲ್ಲ; ಅದು ಸಾರ್ವಕಾಲಿಕ. ವೇದಗಳ ಸಾರವಾಗಿ ವೇದಾಂತಗಳು ಹುಟ್ಟಿಕೊಂಡರೆ ವೇದಗಳಲ್ಲಿ ಹೇಳಿದ ಕರ್ಮಗಳನ್ನು ಕ್ರಿಯೆಯ ರೂಪಕ್ಕೆ ಇಳಿಸುವ ಸಲುವಾಗಿ ವೇದಾಂಗ ರೂಪಿತವಾಯ್ತು. ಅಂತಹ ವೇದಾಂಗದಲ್ಲಿ ವೇದಾಂಗ ಜ್ಯೋತಿಷ್ಯ ಕೂಡ ಒಂದು. ವೇದಾಂಗ ಜ್ಯೋತಿಷ್ಯದಲ್ಲಿ ಖಗೋಲ ಕಾಯಗಳನೇಕಗಳ ಬಗ್ಗೆ ಮಾಹಿತಿ-ಲೆಕ್ಕಾಚಾರ ಇರುವುದರ ಜೊತೆಗೆ ಗ್ರಹ-ನಕ್ಷತ್ರಗಳ ಕುರಿತಾದ ಮಾಹಿತಿ ಕೂಡ ಇದೆ. ವ್ಯಕ್ತಿಯೋ ವಸ್ತುವೋ ಹೊಸದಾಗಿ ಹುಟ್ಟಿದಾಗ, ಹುಟ್ಟಿದ ಸಮಯವನ್ನಾಧರಿಸಿ ಅದಕ್ಕೊಂದು ಜಾತಕ ನಿರ್ಮಿಸಬಹುದಾಗಿದೆ. ಆ ಜಾತಕ ತಯಾರಿಸುವಾಗ ಹುಟ್ಟಿದ ಸಮಯ, ದಿನಾಂಕ ಮೊದಲಾದವು ಸರಿಯಾಗಿದ್ದರೆ ಜಾತಕದಲ್ಲಿರುವ ಗ್ರಹಕೂಟಗಳ ರೀತ್ಯಾ ವ್ಯಕ್ತಿ ಮುಂದೆ ಏನೇನು ಮಾಡುವುದು ಸಾಧ್ಯ ಎಂಬುದನ್ನು ನಿರ್ಧರಿಸುತ್ತಾರೆ ಅರ್ಥಾತ್ ಜನಿಸಿದ ವ್ಯಕ್ತಿಗೆ ಯಾವೆಲ್ಲಾ ಗುಣಾವಗುಣಗಳು-ಯಾವೆಲ್ಲಾ ಯೋಗಗಳು ಮತ್ತು ಯಾವೆಲ್ಲಾ ತೊಂದರೆಗಳು ಪ್ರಾಪ್ತವಾಗುತ್ತವೆ ಎಂಬುದನ್ನು ಸಾಮಾನ್ಯವಾಗಿ ಹೇಳಬಹುದಾಗಿರುತ್ತದೆ.
ಮಾಧ್ಯಮಗಳಲ್ಲಿ ಗಾಡ್ ಪಾರ್ಟಿಕಲ್ ಅಥವಾ ಹಿಗ್ಸ್ ಬೋಸ್ಸನ್ ಬಗ್ಗೆ ಬಂದಾಗ ವಾರಗಳ ಕಾಲ ಎಡಪಂಥೀಯರು ತಣ್ಣಗಾಗಿದ್ದರು: ಕಾರಣವಿಷ್ಟೇ ವೇದಗಳಲ್ಲಿ ಆ ಬಗ್ಗೆ ಅದೆಷ್ಟು ಮಾಹಿತಿ ಮೊದಲೇ ಇದೆ ಎಂದು ವಿಜ್ಞಾನಿಗಳೇ ಹೊಗಳಿದ್ದರು. ಇಂದಿನ ನವಯುಗದಲ್ಲಿ ಈ ವಿಜ್ಞಾನದ ಮುನ್ನಡೆಯಲ್ಲೂ ನಾವು ಕಾಣಲಾಗದ ಖಗೋಲ ವಸ್ತುವಿಷಯಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆ ಆರ್ಯಭಟನಂಥಾ ತಜ್ಞರು ಅದು ಹೇಗೆ ಮಾಹಿತಿ ಪಡೆದಿರಬಹುದು? ಗ್ರಹಗಳ ಪರಿಭ್ರಮಣಗಳ ಬಗ್ಗೆ ಲೆಕ್ಕವನ್ನಿಡುತ್ತಾ ದೃಗ್ಗಣಿತಾದಿ ಗಣಿತ ಕೋಷ್ಟಕಗಳನ್ನು ಅದು ಹೇಗೆ ಸಿದ್ಧಪಡಿಸಿರಬಹುದು? -ಎಂದು ಯೋಚಿಸುತ್ತಾ ಕುಳಿತರೆ ವೇದಾಂಗ ಜ್ಯೋತಿಷ್ಯದ ನೆನಪಾಗುತ್ತದೆ. ವೇದಾಂಗ ಜ್ಯೋತಿಷ್ಯದ ಸಹಾಯಪಡೆದುಕೊಂಡವರು ಹೊಸಹೊಸ ಕೊಡುಗೆಗಳನ್ನು ಈ ಜಗತ್ತಿನ ಉಪಕಾರಾರ್ಥವಾಗಿ ಕೊಟ್ಟುಹೋದರು. ಹುಟ್ಟಿದ ಪ್ರತಿಯೊಂದೂ ಜೀವಿಗೆ ಜನ್ಮಾಂತರಗಳ ಋಣಾನುಬಂಧ-ಕರ್ಮಾನುಬಂಧ ಇರುತ್ತದೆ. ಜೀವಾತ್ಮವೊಂದು ಇಂಥಾ ಯೋನಿಯಲ್ಲೇ ಜನಿಸಬೇಕು, ಈ ತೆರನಾಗಿಯೇ ಬದುಕಬೇಕು, ಅದರ ಬದುಕಿಗೆ ಈ ಈ ರೀತಿಯ ಸೌಲಭ್ಯಗಳು-ಸೌಕರ್ಯಗಳು ಸಿಗುವಂತಿರಬೇಕು, ಈ ರೀತಿಯಲ್ಲೇ ಬಳಲಬೇಕು ಅಥವಾ ಈ ರೀತಿಯಲ್ಲೇ ಮೆರೆಯಬೇಕು...ಹೀಗೆಲ್ಲಾ. ಜರಾಮರಣದ ಚಕ್ರವನ್ನು ನೆನಪಿಸಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಲೂ ಕೂಡ ಯೋಗಬೇಕು ಎನ್ನುವುದು ಇದಕ್ಕೇನೆ. ಲಕ್ಷಮಂದಿಗಳಲ್ಲಿ ಒಬ್ಬರೋ ಇಬ್ಬರೋ ಅಂಥಾ ಉನ್ನತ ಸಾಧನೆ ಮಾಡುತ್ತಾರೆ. ಹಾಗೆ ಸಾಧನೆ ಮಾಡಿ ಮನಸ್ಸು ಪಕ್ವವಾಗುವ ಮುನ್ನವೇ ಮತ್ತೆ ವಿಷಯಾಸಕ್ತಿಗೆ ತೊಡಗಿದರೂ ಇನ್ನೊಂದು ಜನ್ಮದಲ್ಲಿ ಮತ್ತೆ ಸಾಧನೆಮಾಡುವ ಅವಕಾಶ ಕೊಡುವೆನೆಂದು ಕೃಷ್ಣ ಹೇಳಿದ್ದಾನಲ್ಲವೇ? ವೇದಗಳು ಹೇಳಿದ್ದೆಲ್ಲಾ ಒಂದೊಂದಾಗಿ ಸತ್ಯವಾಗುತ್ತಿರುವಾಗ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಭಂಡರಿಗೆ ಏನೆನ್ನಬೇಕು? ವೇದ ಸುಳ್ಳಾಗಲು ಸಾಧ್ಯವೇ ಇಲ್ಲ, ವೇದಮಂತ್ರಗಳ ಅರ್ಥವನ್ನು ನಾವು ಗ್ರಹಿಸಿದ್ದು ವ್ಯತ್ಯಾಸವಾಗಿ ಸುಳ್ಳುಎಂದು ನಮ್ಮ ಮಿತಿಯಲ್ಲಿ ನಾವು ತೀರ್ಮಾನಿಸಿರಬಹುದು, ಆದರೆ ವಸ್ತುಸ್ಥಿತಿ ಭಿನ್ನವಾಗಿದೆ ಎಂಬುದನ್ನು ಸತ್ಯವರಿತ ದಿನ ಒಪ್ಪಿಕೊಳ್ಳಬೇಕಾಗುತ್ತದೆ; ಅಂತಹ ಅನೇಕ ಉದಾಹರಣೆಗಳು ಈಗಾಗಲೇ ನೋಡಲು ಸಿಗುತ್ತಿವೆ!