ಅಂತರ್ಜಾಲದ್ವಾರಾ ಲಭಿತ ಚಿತ್ರಋಣ: ಫೇಸ್ ಬುಕ್
ಅನನ್ಯ ಶರಣಾಗತಿ ಮತ್ತು ಅತ್ಯಂತ ಆಸಕ್ತ ವಿಷಯ ನಿಮ್ಮ ಆಯ್ಕೆಯಾಗಿರಲಿ
ರಾಮನಗರದ ಹತ್ತಿರವಿರುವ ದಿ| ನಾಗೇಗೌಡರ ಜಾನಪದ ಲೋಕದಲ್ಲಿ ಒಮ್ಮೆ ವಿಹರಿಸುತ್ತಿದ್ದೆ. ಜೀವನದಲ್ಲಿ ಅದುವರೆಗೆ ತಿಗರಿಯನ್ನಾಗಲೀ ಕುಂಬಾರನ ಕಲೆಯನ್ನಾಗಲೀ ನೇರವಾಗಿ ನೋಡಿರಲಿಲ್ಲ. ಹದವಾಗಿ ಕಲಸಿದ ಮಣ್ಣಿನ ಮುದ್ದೆಯನ್ನು ತಿರುಗುವ ತಿಗರಿಯಮೇಲಿಟ್ಟು, ಅದನ್ನು ವಿವಿಧ ಆಕಾರಗಳಿಗೆ ಮಾರ್ಪಾಟುಗೊಳಿಸುವುದು ಒಂದು ಕುಶಲಕಲೆ; ಕುಲಕಸುಬು. ಮಣ್ಣಿನ ಪಾತ್ರೆಗಳು, ಸಾಮಾನುಗಳು ಬಹುತೇಕ ಮರೆಯಾದ ಈ ಕಾಲದಲ್ಲಿ ಕುಂಬಾರರ ಜೀವನಪಥ ಕಷ್ಟದಲ್ಲಿ ಸಾಗಿದೆ ಎಂಬುದು ಸ್ಪಷ್ಟ. ನಮ್ಮ ಎಳವೆಯಲ್ಲಿ ಊರ ಜಾತ್ರೆಗಳಲ್ಲಿ ಮಣ್ಣಿನ ಪಾತ್ರೆಗಳನ್ನು ಕೊಂಬ ಸೊಬಗು ಆಕರ್ಷಣೆ ಬಹಳವಾಗಿತ್ತು; ಯಾಕೆಂದರೆ ಅದು ಅಜ್ಜಿಯ ಕಾಲ, ಅಜ್ಜಿಗೆ ಅವೇ ಬಹಳ ಇಷ್ಟದ ಸಂಗಾತಿಗಳಾಗಿದ್ದವು. ಮಣ್ಣಿನ ಪಾತ್ರೆಯಲ್ಲಿನ ಅಡಿಗೆ ಬಹಳ ರುಚಿಕಟ್ಟು ಎಂಬುದು ಇವತ್ತಿನ ಯುವ ಪೀಳಿಗೆಗೆ ತಿಳಿಹೇಳುವವರು ಯಾರೂ ಇಲ್ಲ. ಮಣ್ಣಿನ ಪಾತ್ರೆಗಳು ರಾಸಾಯನಿಕ ಕ್ರಿಯೆಗಳಿಗೆ ಸ್ಪಂದಿಸದಿರುವುದರಿಂದ ಮಾನವನ ಆರೋಗ್ಯಕ್ಕೆ ಅವು ಪೂರಕ ಎಂಬುದು ಅನೇಕರಿಗೆ ತಿಳಿದಿಲ್ಲ! ಇರಲಿ ನಾವು ಮುಖ್ಯ ಕಥಾನಕದತ್ತ ಸಾಗೋಣ: ಮಣ್ಣಿನಲ್ಲಿ ಮೂಡುವ ಈ ಕಲೆಯಲ್ಲಿ ಪರಿಣತಿ ಎಲ್ಲರಿಗೂ ಇರುವುದಿಲ್ಲ. ಅಂಬಿಗನೊಬ್ಬ ದೋಣಿ ನಡೆಸಿದಷ್ಟು ಸಲೀಸಾಗಿ, ಬಡಿಗ[ಆಚಾರಿ] ಒಬ್ಬ ಮರಗೆಲಸ ಮಾಡಿದಷ್ಟು ಉತ್ತಮವಾಗಿ, ಕಂಚುಗಾರನೊಬ್ಬ ಕಂಚು-ತಾಮ್ರದ ಪಾತ್ರೆಗಳನ್ನು ತಯಾರಿಸುವಷ್ಟು ನೈಪುಣ್ಯದಿಂದ, ಅಕ್ಕಸಾಲಿಗನೊಬ್ಬ ಬಂಗಾರದ ಆಭರಣಗಳನ್ನು ರೂಪಿಸಿದ ನಾಜೂಕುತನದಿಂದ, ಗುಡಿಗಾರನೊಬ್ಬ ಗೃಹಶೃಂಗಾರದ ಮರದ ಸಾಮಗ್ರಿಗಳನ್ನು ತಯಾರಿಸುವ ಕುಶಲಕರ್ಮದಿಂದ ಆ ಯಾ ಕೆಲಸಗಳನ್ನು ಬೇರೇ ಯಾರೋ ಕಲಿತು ಮಾಡುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ.
ಯಾವುದೇ ಕೆಲಸವನ್ನು ವೃತ್ತಿ ಎಂದು ಆಯ್ದುಕೊಳ್ಳುವ ಸುಲಭ ಸೂತ್ರವನ್ನು ಹೇಳುತ್ತಿದ್ದೇನೆ: ಪ್ರತೀ ವ್ಯಕ್ತಿಗೂ ಐಚ್ಛಿಕ ವಿಷಯಗಳು ಹಲವು. ಇಷ್ಟದ ಎಲ್ಲಾ ವಿಷಯಗಳನ್ನೂ ಪಟ್ಟಿಮಾಡಬೇಕು. ಅಂತಹ ಇಷ್ಟದ ವಿಷಯಗಳಲ್ಲಿ ಒಂದು ಮಾತ್ರ ಅತ್ಯಂತ ಹೆಚ್ಚಿಗೆ ಇಷ್ಟವಾಗುವುದು ಇದ್ದೇ ಇರುತ್ತದೆ. ಆ ವಿಷಯಕ್ಕಾಗಿ ನಮ್ಮ ಮನ ಮಿಡಿಯುತ್ತದೆ. ಮನಸ್ಸು ಆ ಕೆಲಸಮಾಡುವುದಾದರೆ ಅದರಲ್ಲಿ ತಲ್ಲೀನವಾಗುತ್ತದೆ; ಆ ಕೆಲಸದಲ್ಲಿ ವ್ಯಕ್ತಿಗೆ ತಾದಾತ್ಮ್ಯತೆ ಇರುತ್ತದೆ. ಆ ಕೆಲಸವನ್ನು ಮಾಡುವಾಗ ಯಾವುದೇ ಬೇಸರ ಇರುವುದಿಲ್ಲ. ಅಲ್ಲಿ ಉಪಜೀವಿತಕ್ಕೆ ಸಾಕಾಗುವಷ್ಟು ಆದಾಯ ಬಂದರೆ ಸಾಕು ಎಂಬ ಭಾವನೆ ಇರುತ್ತದೆ. ಆ ಕೆಲಸ ಮಾಡುವುದರಿಂದ ಪ್ರತಿದಿನ ಮನಸ್ಸು ನಿರುಮ್ಮಳವೂ ಉಲ್ಲಸಭರಿತವೂ ಆಗಿರುತ್ತದೆ. ಯಾವ ವ್ಯಕ್ತಿ ತನಗೆ ಅತಿ ಇಷ್ಟವಾದ ಅಂತಹ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲವೋ ಜೀವನಪರ್ಯಂತ ಆತ ಕೊರಗುತ್ತಲೇ ಇರುತ್ತಾನೆ; ತನ್ನಿಷ್ಟದ ಕೆಲಸದಲ್ಲಿ ತೊಡಗಿಕೊಂಡವನಿಗೆ ಸಂತೃಪ್ತ ಭಾವ ಸಿಗುತ್ತದೆ ಮತ್ತು ಆತ ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸುತ್ತಾನೆ! ಅಧುನಿಕ ಯುಗದಲ್ಲಿ ಜನಿಸಿದ ನಾವು, ಮಾತಾ-ಪಿತೃಗಳ ಒತ್ತಾಸೆಗಾಗಿಯೋ ಸುತ್ತಲ ಬಂಧುಮಿತ್ರರ ಇಚ್ಛೆಯಂತೆಯೋ, ಎಂಜಿನೀಯರಿಂಗ್ ಮತ್ತು ವೈದ್ಯಕೀಯ ರಂಗಗಳನ್ನು ಮಾತ್ರ ಬೆರಗುಗಣ್ಣುಗಳಿಂದ ನೋಡುತ್ತೇವೆ. ಅವೆರಡನ್ನು ಕಲಿತರೆ ಮಾತ್ರ ಜೀವನದಲ್ಲಿ ಹೇರಳವಾಗಿ ಗಳಿಸಿ ಹಾಯಾಗಿ ಬದುಕಬಹುದು ಎಂದುಕೊಳ್ಳುತ್ತೇವೆ. ವೈದ್ಯಕೀಯ ಶಿಕ್ಷಣ ಮುಗಿದಾವೇಳೆ ಸಮಾಜದ ಆರ್ತರ ಸೇವೆಗಾಗಿ ವಿದ್ಯೆಯನ್ನು ಬಳಸುತ್ತೇನೆ ಎಂದು ಔಪಚಾರಿಕವಾಗಿ/ಕೃತ್ರಿಮವಾಗಿ ದೀಪದಾಣೆಯಾಗಿ [ಅಗ್ನಿ ಸಾಕ್ಷಿಯಾಗಿ] ಪ್ರತಿಜ್ಞೆಗೈಯ್ಯುತ್ತೇವೆ; ಹೊರಗೆ ಬಂದಮೇಲೆ ಎಲ್ಲವನ್ನೂ ಮರೆತು ರೋಗಿಗಳ ಜೇಬಿಗೆ ಕತ್ತರಿ-ಕರ್ಮಣಿ ಪ್ರಯೋಗ ಮಾಡಲು ಆರಂಭಿಸಿಬಿಡುತ್ತೇವೆ; ದೊಡ್ಡ ದೊಡ್ಡ ಆಸ್ಪತ್ರೆ ತೆರೆಯುತ್ತೇವೆ-ಹೆಚ್ಚಿನ ಮೊತ್ತವನ್ನು ಪಾವತಿಸುವಂತೇ ರೋಗಿಗಳಲ್ಲಿ ಅವರ ವಾರಸುದಾರರಲ್ಲಿ ಕೇಳುತ್ತೇವೆ. ಹಾಗೆ ಮಾಡಬೇಕಾದುದು ನಮಗೆ ಅನಿವಾರ್ಯ ಯಾಕೆಂದರೆ ನಮ್ಮ ಓದಿನ ಸಲುವಾಗಿ ನಾವು ಸಾಲಮಾಡಿ ತೆತ್ತ ಹಣವನ್ನು ಮರಳಿ ಸಂಪಾದಿಸಬೇಕಲ್ಲಾ?
ಒಲ್ಲದ ಮನಸ್ಸಿನಿಂದಲೇ ಅನೇಕ ಕೆಲಸಗಳನ್ನು ಮಾಡುವ ನಮಗೆ ಅಂತಹ ಕೆಲಸಗಳು ಯಶಸ್ಸು ನೀಡುವುದಿಲ್ಲ ಎಂಬ ಬಗ್ಗೆ ಚಿಂತೆಯೇ ಇರುವುದಿಲ್ಲ! ಓದಿಗಾಗಿ ಪಡೆದ ಸಾಲವನ್ನು ಮರಳಿಸುವ ಸಲುವಾಗಿ ಮೂಲಭೂತ ಸೇವಾಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಸಮಂಜಸವೇ? ನಾವು ಆ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ಆರ್ತರಿಗೆ ಆಪತ್ತಿನ ಕ್ಷಣದಲ್ಲಿ ಹಣಪಾವತಿ ಮಾಡದೇ ಇದ್ದಾಗಲೂ ಶುಶ್ರೂಷೆ ಮಾಡುವ ಯಾವುದಾದರೂ ಅಸ್ಪತ್ರೆ ಇದೆಯೇ? ಬಹಳ ಅಪರೂಪ. ದುಃಖಿಗಳ ಕಣ್ಣೀರಿನ್ನು ಒರೆಸಲಾಗದ ಸದ್ವಿದ್ಯೆ ಇದ್ದಾದರೂ ಪ್ರಯೋಜನವೇಕೆ? ಹುಟ್ಟಿದ ಪ್ರತೀ ವ್ಯಕ್ತಿಯೂ ತಂತ್ರಜ್ಞನೋ ವೈದ್ಯನೋ ಆಗಲು ಸಾಧ್ಯವಿಲ್ಲ. ಹೇಗೆ ಮಾನವ ರೂಪ ಮತ್ತು ಚಹರೆಗಳಲ್ಲಿ ವ್ಯತ್ಯಾಸಗಳಿವೆಯೋ ಹಾಗೆಯೇ ವೃತ್ತಿ ಸಂಬಂಧೀ ನೈಪುಣ್ಯದಲ್ಲೂ ವ್ಯತ್ಯಾಸಗಳಿವೆ. ಯಾರಿಗೆ ಯಾವುದು ಅತ್ಯಂತ ಇಷ್ಟವೋ ಅವರು ಅದನ್ನೇ ಮಾಡುವುದರಿಂದ ಅದರಲ್ಲಿ ಅವರಿಗೆ ಸಿದ್ಧಿ ದೊರೆಯುತ್ತದೆ; ಅವರ ಜೀವನ ಸುಗಮವಾಗಿ ನಡೆಯುತ್ತದೆ.
ನನ್ನನ್ನೇ ತೆಗೆದುಕೊಳ್ಳಿ: ಬರಹದಿಂದ ನಿಮ್ಮನ್ನು ಕರೆಯಬಲ್ಲೆ, ಕ್ಷಣಕಾಲ ನಿಮ್ಮನ್ನು ಓದಿನಲ್ಲಿ ಬಂಧಿಸಬಲ್ಲೆನೆಂಬ ಆತ್ಮವಿಶ್ವಾಸ ನನ್ನಲ್ಲಿದೆ. ಈ ವಿಷಯಕವಾಗಿ ಹಲವರು ದೂರವಾಣಿಯಲ್ಲಿ ಸಂಭಾಷಿಸಿದ್ದಾರೆ, ಮೌಖಿಕವಾಗಿ ಹೇಳಿಕೆ ನೀಡಿದ್ದಾರೆ. "ನಿಮ್ಮ ಬರಹಗಳಲ್ಲಿ ಒಂಥರಾ ಮ್ಯಾಗ್ನೆಟಿಸಮ್ ಇದೆ " ಎಂದವರೂ ಇದ್ದಾರೆ. ಪದಗಳೆಂಬ ಹೂಗಳನ್ನು ಶ್ರದ್ಧೆಯಿಂದ ಆಯ್ದು ಮನವೆಂಬ ದಾರ-ಬುದ್ಧಿಯೆಂಬ ಸೂಜಿ ಬಳಸಿ ಪೋಣಿಸಿದ ಬರಹಗಳೆಂಬ ಹಾರಗಳನ್ನು ನಿಮ್ಮೆಲ್ಲರಲ್ಲೂ ಇರುವ ಭಗವಂತನ ಪ್ರತಿಮೆಗಳಿಗೆ ಅರ್ಪಿಸುವುದೇ ನನ್ನ ತಾದಾತ್ಮ್ಯತೆ ಇರುವ ಕೆಲಸವಾಗಿದೆ; ನನಗಿದೇ ವೃತ್ತಿಯಾಗಿದೆ. ಬರಹಗಳು ಚೆನ್ನಾಗಿವೆ ಎಂದಾಕ್ಷಣ ನಾನು ಹಿಗ್ಗುವುದಿಲ್ಲ, ಚೆನಾಗಿಲ್ಲವೆಂದರೆ ಕುಗ್ಗುವುದೂ ಇಲ್ಲ. ಚೆನ್ನಾಗಿಯೇ ಬರೆಯಬೇಕೆಂಬುದು ನನ್ನ ನಿತ್ಯದ ಅಪೇಕ್ಷೆ. ಅದಕ್ಕಾಗಿ ಜಗವನ್ನೇ ನಿತ್ಯನೂತನವನ್ನಾಗಿ ಕಾಣುತ್ತಾ ಬರೆಯುವುದು ನನ್ನ ಅಭ್ಯಾಸ. ಬರೆಯುತ್ತಿದ್ದರೆ ನನಗೆ ಇನ್ನೇನೂ ಬೇಡ, ನನ್ನ ಬರಹಗಳು ನಾಕು ಜನರಿಗೆ ತಲ್ಪಿ ಅದರಿಂದ ಕೆಲವರಿಗಾದರೂ ಏನಾದರೂ ಪ್ರಯೋಜನವಾದರೆ ಅಲ್ಲಿಗೆ ನನ್ನ ಕಾರ್ಯಸಿದ್ಧಿಯಾದಂತೆನಿಸುತ್ತದೆ. ಬರವಣಿಗೆ ಓಘವನ್ನು ನೋಡಿ ಕೆಲವರು " ನೀವೇ ಎದುರುನಿಂತು ಮಾತನಾಡಿದ ಹಾಗೇ ಇರುತ್ತದೆ" ಎನ್ನುತ್ತಾರೆ. ಅದು ನನಗೂ ಗೊತ್ತು. ಅದು ಭಗವಂತ ನನಗಿತ್ತ ವರ! ನನ್ನ ಮಾತಿಗಾಗಿ ಕಾದವರಿದ್ದಾರೆ; ನನ್ನನ್ನು ಭಾಷಣಕ್ಕೆ ಆಹ್ವಾನಿಸಿದವರಿದ್ದಾರೆ. ವೃತ್ತಿನಿರತ ಮಾನವ ಸಂಪನ್ಮೂಲ ತರಬೇತುದಾರ ನಾನಾದುದರಿಂದ ನನ್ನ ಸಮಯಮಿತಿಯನ್ನು ಅರಿತುಕೊಂಡು ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಜನರ ಮತ್ತು ಮಾಧ್ಯಮಗಳ ನಡುವಿನ, ಜನರ ಮತ್ತು ಅನೇಕ ಸಂಘ-ಸಂಸ್ಥೆಗಳ ನಡುವಿನ, ಜನರ ಮತ್ತು ವಾಣಿಜ್ಯ ವ್ಯವಹಾರ ನಿರತ ಉದ್ದಿಮೆದಾರರ ನಡುವಿನ ಕೊಂಡಿಯಾಗಿ ನಾನು ಕೆಲಸಮಾಡುತ್ತಿದ್ದೇನೆ. ವಿದ್ಯೆಯಲ್ಲೂ ಭಾಗಶಃ ವೃತ್ತಿಯಲ್ಲೂ ಗಣಕತಂತ್ರಜ್ಞ ಕೂಡಾ ಆಗಿದ್ದೇನೆ. ನನ್ನ ಬಗ್ಗೆ ನೀವು ಕೇಳಿದರೆ ನಾನು ಹೇಳುವುದಿಷ್ಟೇ:
ವಿಶ್ವಾಮಿತ್ರ ದೇವರಾತ ಔದಲೇತಿ ತ್ರಯಾ ಋಷಯಃ ಪ್ರವರಾನ್ವಿತ
ವಿಶ್ವಾಮಿತ್ರ ಗೋತ್ರೋತ್ಫನ್ನ ವಿಷ್ಣುಶರ್ಮಣಃ
ಅಹಂ ಅಸ್ಮಿ ಅಹಂ ಭೋ ಅಭಿವಾದಯೇ |
ಅಹಂ ಅಸ್ಮಿ ಅಹಂ ಭೋ ಅಭಿವಾದಯೇ |
ಆರ್ಷೇಯ ಋಷಿ ಸಂಸ್ಕೃತಿಯನ್ನು ಆರಾಧಿಸುವ ನನಗೆ ನನ್ನ ಹಿರಿಯರು ಸರಿಯಾದ ಮಾರ್ಗವನ್ನು ತೋರಿಸಿದ್ದಾರೆ. ಬಾಲ್ಯದಿಂದಲೇ ನನ್ನನ್ನು ಉತ್ತಮ ಸಂಸ್ಕಾರಗಳನ್ನಿತ್ತು ಬೆಳೆಸಿದರು. ಆ ಸಂಸ್ಕಾರಗಳೇ ನನಗೆ ಹಲವು ಬಗೆಯ ಉತ್ತಮ ಹೊತ್ತಗೆಗಳನ್ನು ಓದಲು ಕಾರಣಗಳಾದವು. ನಾನೇನೂ ಮಾಡಲಾಗದಿದ್ದರೂ ನನ್ನ ಬರಹಗಳಿಂದ ಅನೇಕ ಜಡಜೀವಗಳಲ್ಲಿ ಚೈತನ್ಯ ಉಕ್ಕಿ ಹರಿವಂತೇ ಮಾಡಬಲ್ಲೆನೆಂಬ ವಿಶ್ವಾಸ ನನ್ನಲ್ಲಿದೆ. ಇದು ಅಹಂಕಾರವಲ್ಲ, ಇದು ದುರಭಿಮಾನವಲ್ಲ, ಇದು ಭಗವಂತನಲ್ಲಿ ನಾನಿಟ್ಟ ಶ್ರದ್ಧೆಯ ರೂಪ. ಭಗವಂತ ನನ್ನನ್ನೆಂದೂ ವಿಚಲಿತನಾಗುವಂತೇ ಮಾಡಲಿಲ್ಲ. ನನ್ನ ಕಾರ್ಯಗಳಲ್ಲಿ ನಾನು ಹೆಜ್ಜೆ ಹಿಂದಿಟ್ಟ ದಿನಗಳಿಲ್ಲ. ಹಣದ ಹಿಂಬಾಲಕನಾಗಿ ನಾನು ಹೊರಡಲಿಲ್ಲ. ವೃತ್ತಿ ಮತ್ತು ಪ್ರವೃತ್ತಿಗಳೊಂದಾಗಿ, ದೇಹದಲ್ಲಿ ದೇವನ ಅನುಸಂಧಾನ ನಿರಂತರವಾಗಿ, ಜೀವ ಬರವಣಿಗೆ-ಭಾಷಣಗಳಿಗೆ ಮುಂದಾಗಿ ಅದರಿಂದ ಪಡೆಯುವ ಪ್ರಯೋಜನವನ್ನು ಕಂಡ ಜನ ತಾವಾಗೇ ಹಣ ನೀಡಿದ್ದಾರೆ. ಅವರಿಷ್ಟದ ರೀತಿಯಲ್ಲಿ ಅವರ ಪ್ರೀತಿಯಲ್ಲಿ ಅವರು ಕೊಟ್ಟಿದ್ದನ್ನು ಸ್ವೀಕರಿಸಿದ್ದೇನೆ. ಬರಹಗಳು ಪುಸ್ತಕಗಳ ರೂಪಧರಿಸಿ ಬರುವ ಕಾಲ ಹತ್ತಿರವಾಗುತ್ತಿದೆ. ಜನಮಾನಸದಲ್ಲಿ ಬರಹಗಳಿಗೆ ಮೆಚ್ಚುಗೆ ದೊರೆತರೆ ಅದು ನನ್ನ ಸೌಭಾಗ್ಯವೆನಿಸುತ್ತದೆ.
ಪತ್ರಿಕೆಗಳಲ್ಲಿ, ಮಾಧ್ಯಮ ವಾಹಿನಿಗಳಲ್ಲಿ, ಯೂಟ್ಯೂಬ್ ನಲ್ಲಿ ನಿಕೋಲಾಸ್ ವುಜಿಸಿಕ್ [Nick Vujicic]ಬಗ್ಗೆ ನೀವು ತಿಳಿದಿದ್ದೀರಿ. ನಿಕ್ ಗೆ ಕೈ-ಕಾಲ್ಗಳಿಲ್ಲ. ಕೇವಲ ಮಧ್ಯ ಶರೀರ ಮತ್ತು ತಲೆ ಮಾತ್ರ. ಮೆದುಳು ಅದ್ಭುತವಾಗಿದೆ! ನಿಕೋಲಾಸ್ ಎಂಬ ಅಂಗಹೀನ ಮಗು ಹುಟ್ಟಿದಾಗ ಆತನ ತಂದೆ-ತಾಯಿಗಳಿಗೆ ಆದ ನೋವು ನಮಗೆ ವಿದಿತವಲ್ಲ. ಎಳವೆಯಿಂದಲೇ ನಿಕೋಲಾಸ್ ಆ ಬಗ್ಗೆ ಪರಿತಾಪ ಪಡದಂತೇ ಬೆಳೆಸಿದವರು ಅವರ ತಂದೆ-ತಾಯಿಗಳು. ಆದರೂ ಒಳಗೊಳಗೇ ಅವರಿಗೆ ಅಳುಕು. ಭಾರತದಲ್ಲಿ ಅಂತಹ ಮಗು ಜನಿಸಿದರೆ ಇಂದಿನ ತಂದೆ-ತಾಯಿಗಳು ಅಂತಹ ಮಗುವಿಗೆ ದಯಾಮರಣ ಕೊಡಿಸಲೂ ಬಹುದು! ನಿಕ್ ಕೂಡ ಎಲ್ಲರಂತೇ ಸಹಜವಾಗಿ ಬೆಳೆಯಬೇಕೆಂಬ ಹಂಬಲ ಅವನ ಮಾತಾ-ಪಿತೃಗಳದ್ದು. ಬಾಲ್ಯದಲ್ಲಿ ಕೃತಕವಾಗಿ ಜೋಡಿಸಿದ ಬಹುಭಾರದ ಕೈಗಳನ್ನು ನಿಕ್ ಕಿತ್ತೆಸೆದ, ನಂತರ ಲಯನ್ಸ್ ಕ್ಲಬ್ ದೊರಕಿಸಿಕೊಟ್ಟ ಇಲೆಕ್ಟ್ರಾನಿಕ್ ತಂತ್ರಾಂಶ ಮಿಳಿತವಾದ ಹಗುರವಾದ ಕೃತಕ ಕೈಗಳೂ ಆತನಿಗೆ ಹಿಡಿಸಲಿಲ್ಲ! ಅಂಗವೈಕಲ್ಯದ ಮಕ್ಕಳು ಓದುವ ಶಾಲೆಗೆ ಸೇರಿಸಿದರೆ ನಿಕ್ ಅಲ್ಲಿಂದ ವಾಪಸು ಬಂದುಬಿಟ್ಟ; ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಓದುವ ಶಾಲೆಯಲ್ಲೇ ಓದು ಮುಗಿಸಿದ. ನಿಕ್ ಡಬಲ್ ಗ್ರಾಜುಏಟ್ ಆದ.[ಎರಡು ಪದವಿಗಳಧರನಾದ]. ನಿಕ್ ನ ಶೋಚನೀಯ ದೈಹಿಕ ಸ್ಥಿತಿ ಹಲವರನ್ನು ಕಂಗೆಡಿಸಿತ್ತು; ಆದರೆ ನಿಕ್ ಕಂಗೆಡುವಂಥಾ ಸಣ್ಣ ಮನುಷ್ಯನಾಗಿರಲಿಲ್ಲ. ಬದುಕುವ, ಬೆಳೆಯುವ ಮತ್ತು ತನ್ನಲ್ಲಿರುವ ವೈಕಲ್ಯವನ್ನು ಮೀರಿ ಅಸಾಧ್ಯವಾದುದನ್ನು ಸಾಧಿಸುವ ಛಲ ನಿಕ್ ನಲ್ಲಿತ್ತು! ಹಾಗಂತ ನಿಶ್ಚೇಷ್ಟಿತನಾದ ದಿನಗಳು ಇರಲಿಲ್ಲವೆಂದಲ್ಲ; ಆದರೆ ಆ ನಿಶ್ಚೇಷ್ಟಿತ ಮನದ ಮಜಲು ಬಹಳಕಾಲ ಆತನನ್ನು ಅಲ್ಲೇ ಬಂಧಿಸಲಿಲ್ಲ. ಈ ಲೋಕದಲ್ಲಿ ನಿರ್ದಿಷ್ಟ ಕರ್ತವ್ಯಕ್ಕಾಗಿ ತನ್ನನ್ನು ದೇವರು ಕಳಿಸಿದ್ದಾನೆ ಎಂಬ ಧೋರಣೆ ನಿಕ್ ನಲ್ಲಿದೆ.
ನಿಕ್ ತನಗೆ ಅಂಗವಿಕಲರಿಗೆ ನೀಡುವ ಸಕಲ ಸೌಲಭ್ಯಗಳನ್ನಾಗಲೀ ಸೌಕರ್ಯಗಳನ್ನಾಗಲೀ ಕೊಡಿ ಎಂದು ಸರಕಾರದಲ್ಲಿ ಕೇಳಲಿಲ್ಲ. ತಾನು ಅಂಗವಿಕಲ ಎಂದು ಹೇಳಿಕೊಳ್ಳುವುದೇ ಇಲ್ಲ. ತನ್ನಲ್ಲೇನೋ ಅದ್ಭುತ ಚೈತನ್ಯವಿದೆ ಎಂಬುದನ್ನು ನಿಕ್ ಅರಿತಿದ್ದ. ಮೇಲಾಗಿ ಸೃಷ್ಟಿಕರ್ತನ ಮೇಲೆ ದೋಷಾರೋಪಣೆ ಮಾಡುವ ಬದಲು ಬದುಕೇ ವಿಶಿಷ್ಟ ಎಂದು ಸ್ವೀಕರಿಸಿಬಿಟ್ಟ! ಭೋರ್ಗರೆಯುವ ಸಮುದ್ರದಲ್ಲಿ ಸರ್ವಾಂಗ ಸುಂದರ ಈಜುಗಾರರೂ ಸಾಹಸನಡೆಸಲು ಹಿಮ್ಮೆಟ್ಟುವ ಕೆಲಸ ’ಸರ್ಫಿಂಗ್’. ಕೈಕಾಲುಗಳೇ ಅಲ್ಲಿ ಬ್ಯಾಲೆನ್ಸಿಂಗ್ ನಡೆಸಬೇಕಾಗುತ್ತದೆ. ಅಂತಹ ಅಂಗಗಳೇ ಇಲ್ಲದ ನಿಕ್ ಸರ್ಫಿಂಗ್ ಮಾಡಿದ್ದು ಈಗ ದಾಖಲೆಯಾಗಿದೆ. ಸರ್ಫಿಂಗ್ ಬೋರ್ಡಿಗೆ ಕಟ್ಟಿದ ಬಟ್ಟೆಯಮೇಲೆ ತನ್ನ ತಲೆಯನ್ನೊತ್ತಿ ಎದ್ದುನಿಂತ ನಿಕ್ ೬ ಸರ್ತಿ ಮಗುಚಿ ಬಿದ್ದರೂ ತನ್ನ ಛಲ ಬಿಡಲಿಲ್ಲ; ೭ನೇ ಸರ್ತಿ ಗೆದ್ದೇಗೆದ್ದ, ಆ ನಂತರ ಅನೇಕಬಾರಿ ಸರ್ಫಿಂಗ್ ನಡೆಸಿದ. ಸುತ್ತನಿಂತ ಜನ ವೀಡಿಯೋ ತೆಗೆದು ನಿಕ್ ಬಿದ್ದುಬಿಟ್ಟ ಎಂದಷ್ಟೇ ಯೂಟ್ಯೂಬ್ ನಲ್ಲಿ ತೋರಿಸಬಾರದು, ನಿಕ್ ಸರ್ಫಿಂಗ್ ಮಾಡಿ ಗೆದ್ದ ಎಂಬುದನ್ನು ತೋರಿಸಲೇ ಬೇಕು ಎಂಬುದು ಆತನ ಮನದಿಚ್ಛೆಯಾಗಿತ್ತು; ಅಂತೂ ನಿಕ್ ಗೆದ್ದುಬಿಟ್ಟ!
ಅತಿಯಾದ ಪರಾವಲಂಬನೆ ಆತನಿಗೆ ಹಿಡಿಸುವುದಿಲ್ಲ. ಯಾರೋ ತನಗಾಗಿ ಬಾಗಿಲು ತೆರೆದರೆ, ತನಗೆ ಗ್ಲಾಸಿನಲ್ಲಿ ನೀರು ಕುಡಿಸಿದರೆ, ತನ್ನನ್ನೆತ್ತಿ ವಾಹನಗಳಲ್ಲಿ ಕರೆದೊಯ್ದರೆ ಆತ ಕೃತಜ್ಞನಾಗುತ್ತಾನೆ. ಎಡ ಪಾದದ ರೀತಿಯ ಒಂದೇ ಅಂಗ ಸಶಕ್ತವಾಗಿದೆ ಎನ್ನುವ ನಿಕ್ ಅದನ್ನೇ ಪ್ರೊಪೆಲರ್ ಥರ ಬಳಸಿ ಈಜುವುದೇ ಮೋಜು ಎನ್ನುತ್ತಾನೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತನ್ನ ಬದುಕುವಿಕೆಯ ಧನಾತ್ಮಕ ಸಂದೇಶವನ್ನು ಸಾರುತ್ತಾ ನಡೆಯುತ್ತಿರುವ ಆತ, ’ಲಿವಿಂಗ್ ವಿದೌಟ್ ಲಿಮಿಟ್ಸ್’ ಎಂಬ ಪುಸ್ತಕವನ್ನು ಬರೆದಿದ್ದಾನೆ. ಅಂಗವಿಕಲನಾದ ತನಗೆ ಜೀವನಸಂಗಾತಿ ದೊರೆಯುವುದು ಕಷ್ಟವಾದರೂ ಮನಸ್ಸಿನಿಂದ ಹುಡುಗಿಯೊಬ್ಬಳನ್ನು ಸಂಗಾತಿಯಾಗಿ ಪಡೆಯುತ್ತೇನೆಂಬ ಅನಿಸಿಕೆ ಆತನಿಗಿತ್ತು; ಅದು ಸಾರ್ಥಕವಾಗಿದೆ, ನಿಕ್ ಮದುವೆಯಾಗಿದ್ದಾನೆ. ತನ್ನ ವಂಶಾವಳಿ ಮುಂದುವರಿಯುವ ಬಗ್ಗೆ ಆತನಿಗೆ ಸಂದೇಹವಿಲ್ಲ. ನಿಕ್ ಹೆಂಡತಿ ಈಗ ಗರ್ಭವತಿಯಾಗಿದ್ದಾಳೆ. ನಿಕ್ ತನ್ನ ಮಗಳ ಮದುವೆಯ ಸಮಯ ಮತ್ತು ಅದರಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ನೆನೆದು ಹರ್ಷಪಡುತ್ತಾನೆ.
ಸರ್ವಾಂಗ ಸುಂದರರೇ ಹಿನ್ನಡೆ ಅನುಭವಿಸುವ ಈ ದಿನಗಳಲ್ಲಿ ಕೈಕಾಲುಗಳೇ ಇಲ್ಲದ ವ್ಯಕ್ತಿ ಜಗತ್ತಿನಾದ್ಯಂತ ತನ್ನ ಸಾಧನೆ ತೋರಿಸುತ್ತಿರುವುದು ಪದಗಳಲ್ಲಿ ಹೇಳಲಾಗದ ಮಹಿಮೆ! ಬಂದವರು ಮರಳಲೇ ಬೇಕು, ಬಂದುಹೋಗುವ ನಡುವಿನ ಕಾಲದ ಅಂತರವೇ ಜೀವನ. ಈ ಜೀವನದಲ್ಲಿ ಇಲ್ಲಿಗೆ ಬಂದುದಕ್ಕೆ ಏನನ್ನಾದರೂ ಸಾಧಿಸುತ್ತೇನೆ ಎಂಬ ಛಲವಿರಲೇಬೇಕು, ಅಚಲ ನಿರ್ಧಾರವಿರಬೇಕು ಮತ್ತು ನಮ್ಮ ನಿರ್ಧಾರಗಳನ್ನು ಸಾಧಾರಗೊಳಿಸಿಕೊಳ್ಳುವಲ್ಲಿ, ಸಾಫಲ್ಯತೆ ಪಡೆಯುವಲ್ಲಿ ಭಗವಂತನ ಅನುಗ್ರಹ ಬೇಕು. ಜಗನ್ನಿಯಾಮಕ ಶಕ್ತಿಯಲ್ಲಿ ನಂಬಿಕೆ ಇದ್ದರೆ, ಅನನ್ಯ ಶರಣತೆ ಇದ್ದರೆ ಆ ಶಕ್ತಿ ನಮ್ಮ ಕೈಬಿಡುವುದಿಲ್ಲ.
ಒಡಲ ಜಾಗಟೆ ಮಾಡಿ
ತುಡಿವ ನಾಲಿಗೆ ಪಿಡಿದು
ಬಿಡದೆ ಢಣ ಢಣರೆಂದು
ಬಡಿದು ಚಪ್ಪsರಿಸುತ
ಡಂಗುರವ ಸಾರಿ ಹರಿಯ
ಡಿಂಗರಿಗರೆಲ್ಲ ಕೂಡಿ ಭೂ
ಮಂಡಲಕೆ ಪಾಂಡುರಂಗ ವಿಠಲ ಪರದೈವವೆಂದು
--ಹೀಗೆ ದಾಸರು ಹೇಳಿದ್ದಾರೆ. ಹೊಟ್ಟೆಯನ್ನೇ ಜಾಗಟೆಮಾಡಿಕೊಂಡು, ನಾಲಿಗೆಯನ್ನು ಕೋಲುಮಾಡಿಕೊಂಡು, ಸದಾ ಢಣ ಢಣ ಢಣ ಎಂದು ಬಡಿದು ಇಡೀ ಈ ಭೂಮಂಡಲಕ್ಕೆ ಪಾಂಡುರಂಗನೇ ಪರದೈವ ಎಂದು ಡಂಗುರ ಹೊಡೆಯಿರಿ ಎನ್ನುತ್ತಾರೆ. ಇದರರ್ಥ ಪರಮಾತ್ಮ ಶಿವನೋ, ಕೇಶವನೋ, ಬುದ್ಧನೋ, ಕ್ರಿಸ್ತನೋ ಯಾವುದೇ ರೂಪದಲ್ಲೂ ಇರಬಹುದು-ಆತನನ್ನು ಮರೆಯಬೇಡಿ, ಆತನಿಂದಲೇ ಈ ಜಗತ್ತು ವಿನಃ ಬೇರಾವುದೇ ಮಾನುಷ ಶಕ್ತಿ ಈ ಜಗತ್ತನ್ನು ಆಳುತ್ತಿಲ್ಲ. ತುಂಬಿದ ಸಭೆಯಲ್ಲಿ ದ್ರೌಪದಿಗೆ ಅಕ್ಷಯಾಂಬರ ನೀಡಿದವ, ಪಾಪಿ ಅಜಮಿಳಗೆ ಸ್ವರ್ಗವನ್ನು ಕರುಣಿಸಿದವ, ನೊಂದ ಗಜೇಂದ್ರನಿಗೆ ಮೋಕ್ಷವನ್ನು ಕರುಣಿಸಿದವ, ತರಳ ಪ್ರಹ್ಲಾದನ ಸರಳ ಭಕ್ತಿಗೆ ಒಲಿದವ, ಅಕ್ರೂರನ ಭಕ್ತಿಗೆ ಅನಾಯಾಸವಾಗಿ ಆತುಕೊಂಡವ, ವಿದುರನ ಬಿಂದು ಹಾಲುಂಡು ಹಾಲಿನ ಸಿಂಧುವನ್ನೇ ಹರಿಸಿದವ, ದಾನಶೂರ ಕರ್ಣನಿಗೆ ನಿಜರೂಪ ದರ್ಶಿಸಿದವ, ಹೆಚ್ಚೇಕೆ ಬಲಿಯ ಭಾಗ್ಯಕ್ಕೆ ಆತನ ಬಾಗಿಲ ಕಾವಲುಗಾರನಾಗಿ ವರ್ಷಂಪ್ರತಿ ಮೂರುದಿನ ನಿಲ್ಲುವವ ಬಂದೇಬರುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ಮನದಲ್ಲಿ ಯಾವುದೇ ಕಪಟವನ್ನಿಟ್ಟುಕೊಳ್ಳದೇ ಮಾಡುವ ಕೆಲಸವನ್ನು ದೈವಾರ್ಪಣ ಭಾವದಿಂದ ಮಾಡಿದರೆ, ಅಂತಹ ಶುದ್ಧ ಮನಸ್ಕರಾಗಿ ನಮ್ಮ ವೃತ್ತಿಯನ್ನು ನಡೆಸಿದರೆ ಯಶಸ್ಸು ಸಿಕ್ಕೇ-ಸಿಗುತ್ತದೆ: ಅದಕ್ಕೆ ನಿಕ್ ಕೂಡ ಒಂದು ಉದಾಹರಣೆ. ಅಂತಹ ಯಶಸ್ಸು ಜೀವನದಲ್ಲಿ ಎಲ್ಲರಿಗೂ ದೊರಕಲಿ ಎನ್ನುವುದರೊಂದಿಗೆ ಶುಭಾಶಂಸನೆಗಳನ್ನು ಸಲ್ಲಿಸುತ್ತಿದ್ದೇನೆ.