ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, April 29, 2011

ನೆನಪಿನಾಗಸ ತುಂಬ ಒನಪುಳ್ಳ ತಾರೆಗಳು!


ನೆನಪಿನಾಗಸ ತುಂಬ ಒನಪುಳ್ಳ ತಾರೆಗಳು!

೯ ಬಾಗಿಲಮನೆ, ಉಪ್ಪಿನಕಾಯಿ ಭಟ್ಟರಮನೆ, ಎಣ್ಣೆಗಿಂಡಿ ಭಟ್ಟರಮನೆ, ಸಾಂಯಿಮನೆ, ನೆಡ್ಗೆಮನೆ, ಕಣ್ಣೀಮನೆ, ತೋಟಿಮನೆ, ಕಡೇಮನೆ, ಕೊಡೆಮನೆ, ನಡೂಕ್ಲಮನೆ, ಅಂಚಿಮನೆ, ಕೈಗಳ್ ಮನೆ, ಹೊಸ್ಮನೆ, ಹಳೆಮನೆ, ಕಲ್ಮನೆ, ಲಕ್ಮನೆ, ಕೊಡ್ಲಮನೆ, ಸುಕ್ಕಿನುಂಡೆಮನೆ, ಅಕ್ಕಿ ಶಂಭುಭಟ್ಟರಮನೆ, ಗೋರನ್ಮನೆ, ಮಲೆಮನೆ, ಹೆಗಡೆಮನೆ, ಜಾರ್ಕೆಮನೆ, ಸೋರ್ಕೆಮನೆ ......ಹೀಗೇ ಹಳ್ಳಿಗಳಲ್ಲಿ ಮನೆಗಳನ್ನು ಗುರುತಿಸುವುದು ಇತ್ತೀಚಿನವರೆಗೂ ಇಂತಹ ಹೆಸರುಗಳಿಂದಲೇ. ಈ ಹೆಸರುಗಳೆಲ್ಲಾ ಆಯಾಯ ಪ್ರದೇಶದ ಜನರೇ ಕೊಟ್ಟುಕೊಂಡಿದ್ದು. ಮನೆಗೆ ಹೆಸರು ಕೊಟ್ಟ ಹಾಗೇ ವ್ಯಕ್ತಿಗಳಿಗೂ ಹಲವು ಹೆಸರುಗಳನ್ನು ಕೊಡುತ್ತಿದ್ದರು. ಇದು ಕೇವಲ ಗುರುತಿಸಲು ಅನುಕೂಲವಾಗಲಿ ಎಂಬ ಅನುಕೂಲಕ್ಕಾಗಿ. ಕೆಲವು ಹೆಸರುಗಳು ವೃತ್ತಿ ಸೂಚಕವಾದರೆ ಇನ್ನು ಕೆಲವು ಅವರು ಹೆಚ್ಚಾಗಿ ಬಳಸುತ್ತಿದ್ದ ವಸ್ತುಗಳ ಸೂಚಕವಾಗಿರುತ್ತಿತ್ತು. ಇನ್ನೂ ಕೆಲವು ತಲೆತಲಾಂತರಗಳ ಹಿಂದೆ ಅವರ ಮನೆಗಳಲ್ಲಿ ನಡೆಯುತ್ತಿದ್ದ ಘಟನೆಗಳಿಗೋ ಅಥವಾ ಆ ಮನೆಗಳಲ್ಲಿ ವಾಸವಿದ್ದವರ ಹವ್ಯಾಸಗಳಿಗೋ ಚಟಗಳಿಗೋ, ಭಂಡತನಕ್ಕೋ ಖಂಜೂಸೀ ಸ್ವಭಾವಕ್ಕೋ ತಕ್ಕುದಾಗಿ ಇಟ್ಟ ಹೆಸರುಗಳಾಗಿರುತ್ತಿದ್ದವು.

ಮನೆತನದ ಹೆಸರು ಹೇಳಿದರೇ ಸಾಕು ಆ ವ್ಯಕ್ತಿಯ ಜಾತಕ ಜನರಬಾಯಲ್ಲಿರುತ್ತಿತ್ತು! ಕೆಲವರಿಗೆ ಹೆಚ್ಚಿನ ಗೌರವ ದೊರೆತರೆ ಇನ್ನೂ ಕೆಲವರಿಗೆ ಅದರಿಂದ ಸಾಮಾನ್ಯ ಮಟ್ಟದ್ದು ಮತ್ತನೇಕರಿಗೆ ಅವರು ನಗಣ್ಯರು ಎಂದು ಅಸಡ್ಡೆ ತೋರುವ ಬಳಕೆಯ ಮಾರ್ಗೋಪಾಯಗಳನ್ನು ಅಂದಿನ ಜನಸಮುದಾಯ ನಿರ್ಮಿಸಿಕೊಂಡಿತ್ತು. ಉದಾಹರಿಸಿದ ಕೆಲವು ಹೆಸರುಗಳು ಕೇವಲ ನಮ್ಮ ಆವಗಾಹನೆಗಾಗಿ ಮಾತ್ರ. ಇದು ಯಾವುದೇ ಅಪಹಾಸ್ಯಕ್ಕೆ ಅವಕಾಶಮಾಡುವ ಹುನ್ನಾರವಲ್ಲ. ತೆರೆದ ಮನದಿಂದ ಸಮಾಜದ ಕಾಲಮಾನಗಳನ್ನು ನೋಡಿದಾಗ ಅಲ್ಲಿರುವ ರೀತಿ ರಿವಾಜುಗಳ ಬಗ್ಗೆ ಬಹಳ ಸಂತಸವಾಗುತ್ತದೆ. ಹೀಗೆ ಹೆಸರಿಸುವಾಗ ಜಾತಿ-ಮತಗಳ ಭೇದವಿರುತ್ತಿರಲಿಲ್ಲ. ಇದು ಕೇವಲ ವ್ಯಕ್ತಿ, ಮನೆತನ, ವೃತ್ತಿ ಸೂಚಕ ಹೆಸರುಗಳಷ್ಟೇ. ಉದಾಹರಣೆಗೆ ಎಣ್ಣೆಗಿಂಡಿ ಭಟ್ಟರ ಮನೆಯಲ್ಲಿ ಕೊಬ್ಬರಿ ಎಣ್ಣೆತುಂಬಿದ ಕಂಚಿನ ಗಿಂಡಿಗಳು ಜಾಸ್ತಿ ಬಳಕೆಯಲ್ಲಿದ್ದವು ಅದಕ್ಕೇ ಎಣ್ಣೆಗಿಂಡಿ ಭಟ್ಟರ ಮನೆ, ಗದ್ದೆಗಳು ಜಾಸ್ತಿ ಇದ್ದು ಉಳುವ ಕಾರ್ಯ ಆಗಾಗ ಇದ್ದೇ ಇರುತ್ತಿದ್ದ ಮನಗೆ ಹೂಡ್ಲಮನೆ, ಪಂಚಾಂಗವನ್ನು ತಯಾರಿಸುತ್ತಿದ್ದ ಮನಗೆ ಪಂಚಾಂಗದಮನೆ, ೯ ಮುಖ್ಯ ಬಾಗಿಲುಳ್ಳ ಮನೆಗೆ ೯ ಬಾಗಿಲಮನೆ--ಹೀಗೇ ಇರುತ್ತಿದ್ದವು ಎಂದಿಟ್ಟುಕೊಳ್ಳೋಣ.

ವ್ಯಕ್ತಿಗಳಿಗೂ ಥರಥರದ ಹೆಸರುಗಳಿರುತ್ತಿದ್ದವು. ಮಿಡಿ ಆಚಾರಿ, ಭಟ್ಟಾಚಾರಿ, ಗಂಗಮ್ಮನ ರಾಮಚಂದ್ರ, ಕಾಯಮ್ಮನ ರಾಮಚಂದ್ರ, ಜನ್ಸಾಲೆ ರಾಮ, ಚಿಟ್ಟಾಣಿ ರಾಮಚಂದ್ರ, ಕಣ್ಣಿ ಗಣಪತಿ, ವ್ಯಾನ್ನ ಶಂಭುಹೆಗಡೆ, ವ್ಯಾನ್ನ ಸುಬ್ರಾಯ ಹೆಗಡೆ, ಅಳ್ಳಂಕಿ ಗಣಪ, ಶಿರಂಕಿ ಜೋಯ್ಸ, ಹಂದಿಮೂಲೆ ಸುಬ್ರಾಯ, ಹೊಸ್ತೋಟ ಮಂಜುನಾಥ, ಕೆರೆಮನೆ ಶಂಭು, ಅಬ್ಳಿಮನೆ ಮಾಬ್ಲ, ಅಂಚಿಮನೆ ನಾರಣ--ಇಲ್ಲಿ ಕೆಲವು ಸ್ಥಳ ಸೂಚಕವದರೆ ಇನ್ನು ಕೆಲವು ವೃತ್ತಿ ಸೂಚಕ ಮತ್ತೂ ಕೆಲವು ತಮಾಷೆಯ ಧ್ಯೋತಕ! [ಇಲ್ಲಿ ಬಳಸಿದ ಹೆಸರುಗಳಲ್ಲಿ ಪ್ರಸಿದ್ಧ ಕಲಾವಿದರುಗಳೂ ಇದ್ದಾರೆ, ನೆನಪಿಸಿ ಕೊಳ್ಳುವಾಗ ಅವರನ್ನೇ ಯಾಕೆ ನೆನಪಿಸಿಕೊಳ್ಳಬಾರದು ಎಂದು ಹಾಗೆ ಬಳಸುತ್ತಿದ್ದೇನೆ].

ಯಾವಾಗಲೋ ಬೇಸರವದಾಗೊಮ್ಮೆ ನಿಂತು ತಿರುಗಿ ನೋಡಿದಾಗ ಒಂದೊಂದೇ ವರ್ಷ ಹಿಂದಕ್ಕೆ ತೆರಳುತ್ತಾ ಹೋದರೆ ಉಳಿದವರ ಜೊತೆಗೆ ಅಳಿದ ಮಹಾನುಭಾವರುಗಳ ಕಾಲ ನೆನಪಾಗುತ್ತದೆ. ಪ್ರತೀವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜಕ್ಕೆ ತನ್ನ ಕೊಡುಗೆ ಕೊಟ್ಟೇ ಇರುತ್ತಾನೆ. ಕೆಲವದು ಸಕಾರಾತ್ಮಕ ಕೊಡುಗೆಯಾದರೆ ಇನ್ನು ಕೆಲವರದು ನಕಾರಾತ್ಮಕ ಕೊಡುಗೆ. ಸಕಾರಾತ್ಮಕ ಕೊಡುಗೆ ಸಣ್ಣ ಮಟ್ಟದ್ದೇ ಆದರೂ ಅವರಲ್ಲಿ ಕೊಡುವ ಭಾವ ಇತ್ತಲ್ಲಾ ಅದನ್ನು ನೋಡಿದರೆ ಸಂತೋಷವಾಗುತ್ತದೆ. ಕೆಲವರ ಮೌಢ್ಯವನ್ನು ನೆನೆದು ಮರುಗಬೇಕಾಗುತ್ತದೆ. ಕೆಲವರ ದ್ವಂದ ಧೋರಣೆ ನೆನೆದು ಇಂಥವರೂ ಇದ್ದರಲ್ಲಾ ಎನಿಸುತ್ತದೆ.

ಹಳ್ಳಿಗಳಲ್ಲಿ ಇವತ್ತಿನ ರಾಜಕೀಯ ಸ್ಥಿತಿ ಇಲ್ಲದ ದಿನಗಳಲ್ಲಿಯೇ ಜನ ಸುಖವಾಗಿದ್ದರು ಎಂಬುದು ನನ್ನನಿಸಿಕೆ. ಗ್ರಾಮಸ್ವರಾಜ್ಯ ಎಂಬ ಗಾಂಧೀಜಿಯವರ ಕಲ್ಪನೆಗೆ ಇಂದು ಅಪಾರ್ಥ ಕಲ್ಪಿಸಲಾಗಿದೆ: ಇಂದು ಗ್ರಾಮ ಸ್ವರಾಜ್ಯವಾಗಿ ಉಳಿದಿದೆಯೇ ? ಆಧುನಿಕತೆಯಲ್ಲಿ ಭರಾಟೆಯಲ್ಲಿ ನಾವು ಎಲ್ಲವನ್ನೂ ಶಾಸ್ತ್ರೀಯವೆಂದು ಘೋಷಿಸುತ್ತಾ ಹಳ್ಳಿಯ ಜೀವನದ ಸೊಬಗನ್ನೂ ಕೂಡ ನಾಶಪಡಿಸುತ್ತಿದ್ದೇವೆ-ಅಲ್ಲೂ ಒಂದೇ ಮನೆಯಲ್ಲಿ ಕಾಂಗ್ರೆಸ್ಸು, ಬಿಜೆಪಿ, ದಳ! ಮನೆಗಳೆಲ್ಲಾ ಒಡೆದ ದ್ವಿದಳಧಾನ್ಯಗಳಂತೇ ದಳದಳ! ಹಳ್ಳಿಗಳನ್ನು ನಿಭಾಯಿಸುವಲ್ಲಿ ಕಟ್ಟೆ ಪಂಚಾಯತಿಗಿರುವ ಕೂದಲಿನ ಯೋಗ್ಯತೆ ಈಗಿನ ರಾಜಕೀಯಕ್ಕಿಲ್ಲ. ಪ್ರಾದೇಶಿಕವಾಗಿ ಅಲ್ಲಲ್ಲಿನ ಹಿರಿಯರು ನಡೆಸುತ್ತಿದ್ದ ಆ ಪಂಚಾಯತಿ ಅಲ್ಲಲ್ಲಿಗೆ ಸಮರ್ಪಕವಾಗಿ ಇರುತ್ತಿತ್ತು. ಯಾವಾಗ ರಾಜಕೀಯದ ಪ್ರವೇಶವಾಯಿತೋ ಆಗ ಕಲಿಪುರುಷ ಹಳ್ಳಿಗಳಿಗೂ ಕಾಲಿಟ್ಟುಬಿಟ್ಟ!

’ಆಪ್ತ’ ಎನ್ನುವ ಪದಕ್ಕೆ ಇನ್ನಿಲ್ಲದ ಒತ್ತಿದೆ, ಒನಪಿದೆ, ಒಯ್ಯಾರವಿದೆ, ನಾಜೂಕುತನವಿದೆ, ಒಪ್ಪವಿದೆ, ಓರಣವಿದೆ, ನಾಚಿಕೆಯಿದೆ, ಅನ್ಯೋನ್ಯ-ಅವಿನಾಭಾವ ಸಂಬಂಧದ ಸಂಕೋಲೆಯಿದೆ! ನೀವೇ ನೋಡಿ ನಗರ-ಪಟ್ಟಣಗಳಲ್ಲಿ ಯಾಂತ್ರಿಕವಾಗಿ ಮೇಜಿನಮೇಲೆ ಚಮಚದಲ್ಲಿ ಊಟಮಾಡುತ್ತಾ ದಿನಗಳೆದು ಅಭ್ಯಾಸವದ ಅನೇಕರಿಗೆ ಯಾವಾಗಲೋ ನೆಲದಮೇಲೆ ಬಾಳೆಲೆಯನ್ನಿಟ್ಟು ಕೈಯ್ಯಿಂದಲೇ ಊಟಮಾಡಿದಾಗ ಅದೆಂಥದೋ ಹೇಳಲಾರದ ಆನಂದ, ಹಸಿರೆಲೆಯ ತುಂಬ ಭಕ್ಷ್ಯಭೋಜ್ಯಗಳು- ತರಾವರಿ ಪಲ್ಯ ಕೋಸಂಬರಿಗಳು, ನೆಂಜಿಕೊಳ್ಳುವ ಪದಾರ್ಥಗಳು, ಬಲಕೆಳಭಾಗದಲ್ಲಿ ಅಭಿಗಾರ[ತುಪ್ಪ], ಹಪ್ಪಳ-ಸಂಡಿಗೆ ಉಪ್ಪಿನಕಾಯಿಗಳು ಒಂದೊಂದೂ ಒಂದೊಂದು ರಂಗಿನವು! ಆ ರಂಗುತುಂಬಿದ ಎಲೆಯನ್ನು ನೋಡುವುದೇ ಮಂಗಳಕರ ಭಾವ ಜನನಕ್ಕೆ ಕಾರಣವಗುತ್ತದೆ. ಇವತ್ತಿನ ಟೇಬಲ್ ಊಟದಲ್ಲಿ ಆ ಆಪ್ತತೆ ಕಾಣುವುದಿಲ್ಲ.

ದೀಪಾವಳಿಗಳಂಥಾ ಹಬ್ಬಗಳ ಸಮಯದಲ್ಲಿ ಅಪರೂಪಕ್ಕೊಮ್ಮೆ ಅಭ್ಯಂಗ ಸ್ನಾನಮಾಡುತ್ತೇವೆ. ಕಾದ ಮರಳುವ ನೀರನ್ನು ಅಭ್ಯಂಗದ ಬಾನಿ[ದೊಡ್ಡ ಮಣ್ಣ ಹೂಜಿ]ಗೆ ತುಂಬಿಸಿ, ತಣ್ಣೀರನ್ನು ಬೆರೆಸಿ ಅದನ್ನು ತಡೆದುಕೊಳ್ಳುವ ಬಿಸಿಗೆ ಹದಮಾಡಿಕೊಂಡು ಅದರೊಳಗೆ ಎಣ್ಣೆಹಚ್ಚಿದ ಮೈನ ವ್ಯಕ್ತಿ ಮುಳುಗಿ ಕುಳಿತು ಸುಮಾರು ಹೊತ್ತು ಅದರಲ್ಲೇ ಇರುತ್ತಾ ಮತ್ತೆ ಮತ್ತೆ ಸ್ವಲ್ಪ ಸ್ವಲ್ಪ ಬಿಸಿನೀರು ಎರಚಿಕೊಳ್ಳುತ್ತಾ ಸ್ನಾನಮಾಡುವುದೇ ನಿಜವಾದ ಅಭ್ಯಂಜನ ಅಥವಾ ಅಭ್ಯಂಗ. ಇಂದು ಅಭ್ಯಂಗದ ಬಾನಿಯ ಬದಲಿಗೆ ಬಾತ್ ಟಬ್‍ಗಳು ಬಂದಿಯೆವಾದರೂ ಅವುಗಳಿಗೆ ಎಣ್ಣೆಯ ಪಸೆ ತಾಗಬಾರದೆಂದು ನಾವು ಹಾಗೆಲ್ಲಾ ಅವುಗಳನ್ನು ಬಳಸುವುದಿಲ್ಲ. ಮೇಲಾಗಿ ಸೌದೆ ಒಲೆಯ ಬೆಂಕಿಯಿಂದ ಹಂಡೆಯಲ್ಲಿ ಕಾದ ನೀರಿಗೂ ವಿದ್ಯುತ್ತಿನಿಂದ ಸೌರವಿದ್ಯುತ್ತಿನಿಂದ ಕಾದ ನೀರಿಗೂ ಗುಣಾತ್ಮಕ ವಿಷಯಗಳಲ್ಲಿ ಬಹಳ ಅಂತರವಿದೆ. ಒಲೆ, ಹಂಡೆ, ಸೌದೆ ಇವೆಲ್ಲಾ ಚಿತ್ರಗಳಲ್ಲೇ ಕಾಣಬೇಕಾದ ದಿನಗಳು ಹತ್ತಿರವಾಗುತ್ತಿವೆ. ಕಾಡು ನಶಿಸಿಹೋಗಿರುವುದರಿಂದ ಸೌದೆಯನ್ನು ಬಳಸಲು ಉಪಕ್ರಮಿಸಿದರೆ ಅಳಿದುಳಿದ ಕೊನೇ ಹಂತದ ಕಾಡೂ ವಿನಾಶವಾಗಿ ಹೋಗುತ್ತದೆ.[ ಈ ಅನಿಸಿಕೆ ನಮನಿಮಗೆ ಇದೆಯೇ ಬಿಟ್ಟರೆ ಧೂರ್ತ ರಾಜಕಾರಣಿಗಳಿಗಾಗಲೀ ಕಾಡುಗಳ್ಳರಿಗಾಗಲೀ ಇಲ್ಲ.] ಹೀಗಾಗಿ ಅಭ್ಯಂಗಕ್ಕೂ ತಿಲಾಂಜಲಿ ಇಟ್ಟಾಗಿದೆ. ಅಂತಹ ಅಭ್ಯಂಗದಲ್ಲಿ ಮಿಂದು ಲೋಟ ಹುಣಿಸೇಹಣ್ಣು ಮಿಶ್ರಿತ ಬೆಲ್ಲದ ಪಾನಕ ಕುಡಿದು ಕಂಬಳಿಹೊದ್ದು ಅರ್ಧಘಂಟೆ ಮಲಗಿದರೆ ಮೈ ಪೂರ್ತಿ ಬೆವರಿಳಿದು ಶರೀರದ ಒಳಗಿನ ಹಲವು ನರನಾಡಿಗಳು ಸದೃಢವಾಗುತ್ತಿದ್ದವು ಮಾತ್ರವಲ್ಲ ಚರ್ಮಸಂಬಂಧೀ ವ್ಯಾಧಿಗಳು ಹತ್ತಿರವೂ ಬರುತ್ತಿರಲಿಲ್ಲ, ಮೈಕೈನೋವು ಹೋಗುತ್ತಿತ್ತು. ಈಗಿನ ಆಯುರ್ವೇದ ತಜ್ಞರು ಈ ಆಭ್ಯಂಗವನ್ನು ಸ್ವಲ್ಪ ಪರಿವರ್ತಿಸಿ ಹೊಸರೂಪದಲ್ಲಿ ಹಬೆಯನ್ನು ನೀಡುವುದರ ಮೂಲಕ ಪಂಚಕರ್ಮ ಚಿಕಿತ್ಸೆಯಲ್ಲಿ ಬಳಸುತ್ತಾರದರೂ ಮೂಲ ಅಭ್ಯಂಗದ ಆಶಯವನ್ನಾಗಲೀ ಪರಿಣಾಮವನ್ನಾಗಲ್ಲೀ ಇದು ಸರಿದೂಗಿಸುವುದಿಲ್ಲ.

ಹೇಗೆ ಬಾಳೆಲೆಯ ಊಟ, ಹಂಡೆ ನೀರಿನ ಅಭ್ಯಂಗ ಬಹಳ ಆಪ್ತವಾಗಿತ್ತೋ ಹಾಗೇ ನಮ್ಮ ಹಳ್ಳಿಯ ಜನರ ಒಡನಾಟವೂ ಅಷ್ಟೇ ಆಪ್ತವಾಗಿರುತ್ತಿತ್ತು. ಊರಲ್ಲಿ ಕೇರಿಯಲ್ಲಿ ಮದುವೆ ಮುಂಜಿಗಳು ನಡೆದರೆ ತಿಂಗಳದಿನ ಇಡೀ ಊರಿಗೆ ಊರೇ ಸಂಭ್ರಮವನ್ನು ಅನುಭವಿಸುವ ವಾತಾವರಣವಿರುತ್ತಿತ್ತು. ಯಾರಾದರೂ ಮಡಿದಾಗಲೂ ಕೂಡ ಇಡೀ ಊರು ನೀರವ ಮೌನವನ್ನು ತೋರುತ್ತಾ ದುಃಖದಲ್ಲಿ ಸಹಭಾಗಿತ್ವ ಅನುಭವಿಸುತ್ತಿತ್ತು. ಚಪ್ಪರಾ-ಚಾವಡಿ ಅಡುಗೆ ಮುಂತಾದ ಎಲ್ಲಾ ಕಾರ್ಯಗಳು ಕೇವಲ ಗ್ರಾಮಸ್ಥರಿಂದಲೇ ನಡೆಯುತ್ತಿದವು-ಇದಕ್ಕೆ ಗುತ್ತಿಗೆದಾರು, ಛತ್ರ ಹೀಗೆ ಬೇಕಾಗಿರಲಿಲ್ಲ. ಮಳೆಗಾಲದಲ್ಲಿ ನಿರೀಕ್ಷಿತವೇ ಆದರೂ ಅನಿವಾರ್ಯವಾಗಿ ಹೊರಗೆಲ್ಲೋ ಸಿಕ್ಕಿಹಾಕಿಕೊಂಡ ಸಾಣ್ಮನೆ ಸುಬ್ರಾಯನಿಗೆ ವಣಾಸಿಮನೆ ಗಣೇಶ ಗುರ್ಗುಬ್ಬೆ, ಕಂಬಳಿಕೊಪ್ಪೆ, ತಾಳಿವಾಲೆ ಕೊಡೆ ಅಥವಾ ಕೊಡೆ ಇವುಗಳಲ್ಲಿ ಯಾವುದನ್ನೋ ಕೊಟ್ಟು ಸುಗಮವಾಗಿ ಮನೆಸೇರಲು ಸಹಕರಿಸುತ್ತಿದ್ದ. ಎದುರಿಗೇ ಮಳೆಯಲ್ಲಿ ನೆನೆಯುತ್ತಿದ್ದರೂ ರಸ್ತೆಯ ಗುಳಿಯಲ್ಲಿ ನಿಂತ ನೀರನ್ನು ಪುರ್ರನೆ ಮೈಗೆ ಹಾರಿಸಿ ಕಂಡರೂ ಕಾಣದಹಾಗೇ ಸಾಗಿಹೋಗುವ ಶರತ್, ಸಾರ್ಥಕ್, ಅನೂಪ್ ಬಂದುಬಿಟ್ಟರು ! ಇದನ್ನೇ ಆಪ್ತತೆಯ ಕೊರತೆ ಎನ್ನುವುದು.

ಒಮ್ಮೆ ನಾನು ಕನ್ನಡಶಾಲೆಯಲ್ಲಿ ನಾಟಕವೊಂದರಲ್ಲಿ ಪಾತ್ರಮಾಡುತ್ತಿದ್ದೆ. ನನಗೆ ಅದೇ ಹೊಸದು. ಆಗ ಬಣ್ಣ ಹಚ್ಚಿದವರಾರೋ, ಚಂದದ ಬಟ್ಟೆ ತೊಡಿಸಿದವರಾರೋ, ರಟ್ಟಿನ ಕಿರೀಟ ಮತ್ತೇನೇನೋ ಕಟ್ಟಿ ಹರಸಿದವರಾರೋ ! ಊರವರಲ್ಲೇ ಕೆಲವು ಕೈಗಳು ನಮ್ಮನ್ನು ಚೌಕಿಯಲ್ಲಿ[ ಗ್ರೀನ್ ರೂಮ್] ತಯಾರುಮಾಡಿದರೆ ಇನ್ನೂ ಹಲವು ಮುಖಗಳು ನಮ್ಮ ಪಾತ್ರನಿರ್ವಹಣೆಯನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದವು. ಪಾತ್ರ ಮುಗಿದಮೇಲೆ ಯಾರ್ಯಾರದು ಯಾವ್ಯಾವ ಸಾಮಾನು ಎಂದು ನಾವೇ ಕೇಳಿಕೊಂಡು ತಲುಪಿಸಿಬೇಕಾಗಿತ್ತು. ಶಿಕ್ಷಕರಿಗೂ ನಮ್ಮನ್ನೆಲ್ಲಾ ತಯಾರುಮಾಡುವ ಆಸೆ, ಆಸ್ತೆ, ಆಸಕ್ತಿ, ಶ್ರದ್ಧೆ ಇರುತ್ತಿತ್ತು.

ಊರಲ್ಲಿ ಸತ್ಯ ಹೆಗಡೇರು ಮತ್ತು ದೇವಪ್ಪಶೆಟ್ಟರು ಯಕ್ಷಗಾನ ಪಾತ್ರ ಮಾಡುತ್ತಿದ್ದರು, ಭೇತಾಳ ಪಾಲನಕರ್ ಗಣೇಶಹಬ್ಬಕ್ಕೆ ಗಣಪನ ವಿಗ್ರಹಗಳನ್ನು ಮಾಡುತ್ತಿದ್ದರು, ಮಿಡಿ ಆಚಾರ್ರು ಮರದ ಕೆತ್ತನೆಗೆ ಹೆಸರುವಾಸಿಯಾಗಿದ್ದರು-ಮನೆ ಕಟ್ಟುತ್ತಿದ್ದರು, ಗುಡಿಗಾರ ರಾಮಚಂದ್ರ ಬಣ್ಣದ ಗೋಡೆಯಮೇಲೆ ಚಿತ್ತಾರಗಳನ್ನು ಬರೆಯುತ್ತಿದ್ದರು, ನೋಡಲು ಭಟ್ಟರಂತೇ ವಿಭೂತಿ ಧರಿಸಿ ಜುಟ್ಟು ಬಿಟ್ಟಿರುವ ಭಟ್ಟಾಚಾರ್ರು ಕತ್ತಿಗೆ ಹಿಡಿ[ಕೆ], ಕೊಡಲಿಗೆ ಕಾವು ಮುಂತಾದವುಗಳನ್ನು ಮಾಡಿಕೊಡುತ್ತಿದ್ದರು, ಕ್ರಿಸ್ತಿಯನ್ ಮೇರಿಬಾಯಿ ಹೆರಿಗೆಗೆ ನೆರವಾಗುತ್ತಿದ್ದಳು, ದೇವಿ-ಷಣ್ಮಗು-ನಾಗು ಇವರೆಲ್ಲಾ ತೆಂಗಿನಗರಿ ನೇದು ತಡಿಕೆ ತಯಾರಿಸುತ್ತಿದ್ದರು, ಸಂಕ್ರು, ಸಾತ ಇವರೆಲ್ಲಾ ಗೊಬ್ಬರ ಹೊತ್ತು ಹರಗುತ್ತಿದ್ದರು, ಮಾದೇವ ಮಡಿವಾಳ ಬಟ್ಟೆಗಳನ್ನು ಚೆನ್ನಾಗಿ ಒಗೆದು ಇಸ್ರಿಮಾಡಿ ತರುತ್ತಿದ್ದ, ಗಾಬ್ರಿಲ್ಲ [ಗೇಬ್ರಿಯಲ್] ದರ್ಜಿಯಾಗಿದ್ದ ಹೀಗೇ ಇಂತಹ ಜನಗಳೆಲ್ಲಾ ಇಂದು ನಿಧಾನವಾಗಿ ಮರೆಯಾಗುತ್ತಿದ್ದಾರೆ. ಇಂದು ಎಲ್ಲವೂ | ಕಾಂಚಾಣಂ ಕಾರ್ಯಸಿದ್ಧಿಃ | ಆಗಿಬಿಟ್ಟಿದೆ. ಆದರೂ ಟಿವಿ ಮಾಧ್ಯಮಗಳ ಹಾಗೂ ಕ್ರಿಕೆಟ್ ಹಾವಳಿಯಿಂದ ಯುವಕರಲ್ಲಿ ಅನೇಕರು ಮೈಗಳ್ಳರೇ ಆಗಿದ್ದಾರೆ, ಕೆಲಸಮಡುವ ಬುದ್ಧಿ ಇಲ್ಲ-ಕಾಸುಮಾತ್ರ ಬೇಕಾಗಿದೆ. ಹಲವರು ಗುಟ್ಕಾತುಂಬಿಕೊಂಡು ಢಾಂಬಿಕತೆಯಲ್ಲಿ ಬರಿದೇ ನಗುತ್ತಾರೆ ಬಿಟ್ಟರೆ ಯಾರಿಗೂ ಯಾವ ಕೆಲಸದಲ್ಲೂ ಮೊದಲಿನ ಶ್ರದ್ಧೆ ಇಲ್ಲ, ಯಾರಲ್ಲೂ ಹಳ್ಳಿಯ ಆಪ್ತತೆ ಉಳಿದಿಲ್ಲ. ಅವಿಭಕ್ತ ಕುಟುಂಬಗಳು ಎಲ್ಲೋ ಸಾವಿರಕ್ಕೊಂದು ಮಾತ್ರ, ಅಲ್ಲೂ ಒಳಜಗಳ- ಬೇರೆಯಾಗುವ ಮನೋಭಾವ.

ಪುಣ್ಯಕ್ಕೆ ನಮಗೆಲ್ಲಾ ಅವಿಭಕ್ತ ಕುಟುಂಬದ ಆ ಆಪ್ತ ಮನೋಭಾವದ ಹೊದಿಕೆ ಸಿಕ್ಕಿತ್ತು. ಅಜ್ಜ-ಅಜ್ಜಿ ಹಿರಿಯರು ಇರುವ ಮನೆಗಳಲ್ಲಿ ಬೆಳೆಯುವ ಮಕ್ಕಳಿಗೂ ಹಿರಿಯರಾರೂ ಇರದ ಮನೆಗಳಲ್ಲಿ ಬೆಳೆಯುವ ಮಕ್ಕಳಿಗೂ ಬಹಳ ಅಂತರವಿರುತ್ತದೆ. ಸಂಸ್ಕೃತಿ-ಸಂಸ್ಕಾರ, ಆಚರಣೆ, ಶಿಷ್ಟಾಚಾರ ಇವುಗಳನ್ನೆಲ್ಲಾ ಅಂದಿಗೆ ಹಿರಿಯರು ಕಲಿಸುತ್ತಿದ್ದರು, ಇಂದು ಅಪ್ಪ-ಅಮ್ಮ ಇಬ್ಬರೂ ಬ್ಯೂಸಿ, ಅಪ್ಪ-ಅಮ್ಮ ಬಂದಮೇಲೆ ಅವರಿಗೇ ಮಕ್ಕಳು ಮೊಬೈಲ್‍ನಲ್ಲಿ ಗೇಮ್ ಆಡಲೋ ಎಸ್ಸೆಮ್ಮೆಸ್ ಇಂಟರ್ನೆಟ್ಟು ಇತ್ಯಾದಿ ಬಳಸಲೋ ಕಲಿಸುತ್ತಿರುತ್ತಾರೆ! ಅಂದು ನಮ್ಮಜ್ಜ ದಿನವೂ ಬೋರ್ನ್‍ವೀಟಾ ಕುಡಿಯುತ್ತಿದ್ದರು. ನಂಗೆ ಹೇಳಲು ಬರುತ್ತಿರಲಿಲ್ಲ ’ಬೋಲ್ ಮೀಟರು’ ಅಂತಿದ್ದೆ. ಅವರು ಕುಡಿಯುವಾಗ ಮೊಮ್ಮಗನಿಗೆ ಅದರಲ್ಲಿ ಕಾಲುಭಾಗ ಕೊಡಲೇಬೇಕು. ಅವರು ಕುಡಿದ ಕಪ್ಪಿನಲ್ಲಿ ಚಮಚೆಯಷ್ಟು ಮಿಕ್ಕಿದ್ದರೆ ನಾನು ’ಆಪಾಯಸ್ವಾಹಾ’ ! ಅಜ್ಜ ಕುಡಿದ ಎಂಜಲು ಕಪ್ಪು ಎಂಬ ಮನೋಭಾವ ನಮ್ಮಲ್ಲಿರಲಿಲ್ಲ. ಅವರೊಟ್ಟಿಗೆ ತೋಟಕ್ಕೆ ತೆರಳುವ ನಾನು ಅವರು ಮಾಡುವ ಕೆಲಸಗಳನ್ನು ವೀಕ್ಷಿಸುತ್ತಿದ್ದೆ. ಮಳೆಗಾಲದಲ್ಲೂ ಹಾಗೆ ಹೋದಾಗ ಕೆಲವೊಮ್ಮೆ ಒಂದೇ ಕಂಬಳಿಕೊಪ್ಪೆಯಲ್ಲಿ ಅವರ ಕಾಲಸಂದಿಯಲ್ಲಿ ತೂರಿ ನಿಲ್ಲಿಸಿಕೊಳ್ಳುತ್ತಿದ್ದರು. ಏನೂ ಇಲ್ಲದಿದ್ದರೆ ದೊಡ್ಡ ಬಾಳೆಯಮರಗಳ ಹಿಂಡಿನ ಕೆಳಗೆ ಅವರ ಪಕ್ಕ ನಿಲ್ಲಿಸಿಕೊಂಡು ಅವರ ಉತ್ತರೀಯ[ ಪಂಚೆ/ಟವೆಲ್ಲು]ದಿಂದ ಮುಚ್ಚಿ ನನಗೆ ಮಳೆತಾಗದಂತೇ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಅಜ್ಜ ಉಂಡು ಮಲಗಿದಾಗ ಅವರ ಕಾಲುಗಳ ಮಧ್ಯೆ ನನಗೊಂದು ಪುಟ್ಟ ಜಾಗ. ಜೊತೆಗೆ ಕಥೆಗಳ ಮೇಲೋಗರ ! ಅಂದಿನ ಆ ವೈಭೋಗ ಇಂದಿನ ಮಕ್ಕಳ ನಿಲುವಿಗೂ ಬಾರದ್ದು.

ಒಂದು ಮನೆಯಲ್ಲಿ ಬೆಳೆದ ಹಣ್ಣು-ತರಕಾರಿಗಳು ಇತರರ ಮನೆಗಳಿಗೂ ಹಂಚಲ್ಪಡುತ್ತಿದ್ದವು. ಕೆಲವೊಮ್ಮೆ ಇದು ಎಷ್ಟರ ಮಟ್ಟಿಗೆ ಎಂದರೆ ವಿಶೇಷ ಕಜ್ಜಾಯ-ತಿನಿಸುಗಳನ್ನು ಮಾಡಿದರೂ ಸುತ್ತ ನಾಲ್ಕಾರು ಮನೆಗಳಿಗೆ ಅದು ಹಂಚಲ್ಪಡುತ್ತಿತ್ತು. ಅಂಬಾ ಎಂದುಲಿಯುವ ದನಗಳ ದನಿ ಆಗಾಗ ಕೇಳುತ್ತಿತ್ತು-ಇವತ್ತು ಈ ಜಾಗದಲ್ಲಿ ಅತ್ತ ಕತ್ತೆಯೂ ಅಲ್ಲದ ಇತ್ತ ಕುದುರೆಯೂ ಅಲ್ಲದ ’ಜರ್ಸಿದನ’ ಗಳು ಬಂದಿವೆ-ಹಾಲುಕರೆಯುವ ಯಂತ್ರಗಳಂತೇ ಕಾಣುತ್ತವೆ. ಗೋಮಾಳಗಳೂ ಇಲ್ಲ, ಗೋವಳರೂ ಇಲ್ಲ, ಅಸಲಿಗೆ ಗೋವೇ ಅಪರೂಪ! ಮುದ್ದಾದ ದನಗಳು ಕರುಹಾಕಿದ ಸಂದರ್ಭ ಹನ್ನೆರಡುದಿನಗಳೆದು ಆಮೇಲೆ ಬರುವ ಹಾಲಿನಿಂದ ಗಿಣ್ಣ ಮಾಡುತ್ತಿದ್ದರು. ತೆಂಗಿನ ಮರದ ಹೂವು ಅದರ ಹೊರಕವಚದಲ್ಲಿದ್ದಾಗ ಅದನ್ನು ’ತೆಂಗಿನ ಕೊನೆ’ ಎನ್ನುತ್ತೇವೆ, ಮಳೆಗಾಳಿಗೆ ಬಿದ್ದ ತೆಂಗಿನ ಮರದ ಹೂವನ್ನು ತಂದು ಶುಚಿಗೊಳಿಸಿ ಕರುಹಾಕಿದ ಹಸುವಿನ ಹಾಲನ್ನು ಬಳಸಿ ವಿಶೇಷ ಖಾದ್ಯ [ ಖುಂದಾ ರೀತಿಯದ್ದು] ತಯಾರಿಸುತ್ತಿದ್ದರು. ಇದಕ್ಕೂ ’ತೆಂಗಿನಕೊನೆ’ ಎಂತಲೇ ಕರೆಯುತ್ತಿದ್ದರು. ಇದು ಬಾಳಂತಿಯರಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ.

ಕೊನೆಗೊಮ್ಮೆ ನಿಮಗೆ ಹೇಳಲೇಬೇಕಾದ ನನ್ನ ಬಂಧುಗಳಲ್ಲಿ ನಾಯಿಗಳು, ಬೆಕ್ಕುಗಳು ವಿಶೇಷವಾಗಿ ಹಸು-ಕರುಗಳು ಬಾಕಿ ಉಳಿದಿವೆ. ಮನೆಯ ಅಂಗಳದಲ್ಲಿ ಮಲಗಿರುತ್ತಿದ್ದ ನಾಯಿಯನ್ನು ಗೋಳು ಹುಯ್ದುಕೊಂಡಷ್ಟು ಯಾವಪ್ರಾಣಿಯನ್ನೂ ನಡೆಸಿಕೊಂಡಿರಲಿಕ್ಕಿಲ್ಲ. ಅದರ ಬಾಯಿಗೆ ಕೈ ಹಾಕುವುದು, ಬಾಲ ಎಳೆಯುವುದು, ಕಿವಿ ಹಿಂಡುವುದು-ಏನು ಮಾಡಿದರೂ ಅದು ನಮ್ಮ ದೋಸ್ತು, ಗುರ್ರೆಂದ ದಾಖಲೆಯೇ ಇಲ್ಲ. ನಮ್ಮನೆಯಲ್ಲಿ ಬೆಕ್ಕಿರಲಿಲ್ಲ, ಅಕ್ಕಪಕ್ಕದ ಮನೆಗಳಿಂದ ಬಂದ ಬೆಕ್ಕನ್ನು ಕರೆದು ಆಟವಾಡುವ ಹವ್ಯಾಸ ಇತ್ತು. ಅದರೊಟ್ಟಿಗೂ ಮತ್ತವೇ ಆಟಗಳು. ಸ್ನಾನಮಾಡುವ ಮುನ್ನ ನಾನು ಕೊಟ್ಟಿಗೆಗೆ ಹೋಗಿ ಬನೀನು ತೆಗೆದು ಕುಳಿತುಬಿಟ್ಟರೆ [ಮುದುಕಾಗಿದ್ದ ಆಕಳೊಂದು ಸದಾ ಕೊಟ್ಟಿಗೆಯಲ್ಲೇ ಇರುತ್ತಿತ್ತು] ಇಡೀ ಮೈಯ್ಯನ್ನು ಮರಳುಮರಳಾದ ತನ್ನ ನಾಲಿಗೆಯಿಂದ ನೆಕ್ಕುತ್ತಿತ್ತು. ಎಳೆಯ ಕರುಗಳು ಕಟ್ಟುಬಿಡಿಸಿದರೆ ಚಂಗನೆ ಜಿಗಿಜಿಗಿದು ಕುಣಿಯುತ್ತಿದ್ದವು. ನಮ್ಮಲ್ಲಿ ಕೊಟ್ಟಿಗೆಗೆ ಹತ್ತಿರವೇ ಬಚ್ಚಲುಮನೆ ಇದ್ದಿತ್ತಾದ್ದರಿಂದ ಮಳೆ/ಚಳಿಗಾಲದಲ್ಲಿ ಕೆಲವು ಕರುಗಳು ಒಲೆಯ ಬೆಂಕಿ ಕಾಯಿಸಿ ಬೆಚ್ಚಗೆಮಾಡಿಕೊಳ್ಳಲು ಬಂದುನಿಲ್ಲುತ್ತಿದ್ದವು. ಅವುಗಳ ಕತ್ತಿನ ಕೆಳಭಾಗವನ್ನು ತುರಿಸಿಕೊಟ್ಟರೆ ಕುಳಿತಿರುವ ನಮ್ಮ ತಲೆಯಮೇಲೆ ತಮ್ಮ ತಲೆಯನ್ನು ಹಾಯಾಗಿ ಇಟ್ಟು ಆನಂದಪಡುತ್ತಿದ್ದವು. ಇಂತಹ ನಮ್ಮಲ್ಲಿ ಒಂದು ಹೋರಿಗರು ಕಾಯಂ ಚಳಿ ಕಾಯಿಸುವ ಹವ್ಯಾಸಕ್ಕೆ ಗಂಟುಬಿದ್ದಿತ್ತು. ಅದಕ್ಕೆ ’ಹೊಗೆಗೂಳಿ’ ಎನ್ನುತ್ತಿದ್ದರು. ಹೊಟ್ಟೆತುಂಬಿದ್ದರೂ ಯಾರೋ ಪಕ್ಕದ ಬಚ್ಚಲುಮನೆಯಲ್ಲಿ ಸದ್ದುಮಾಡಿದರೆ ಅದು ಕೂಗುತ್ತಿತ್ತು. ಕಾರಣ ಅದಕ್ಕೆ ಬೆಂಕಿ ಕಾಯಿಸಬೇಕಾಗಿರುತ್ತಿತ್ತು.

ಹಲಸಿನ ಹಣ್ಣಾಗುವ ಸಮಯದಲ್ಲಿ ಮನೆಯಲ್ಲಿ ಅಂಟುಮೆತ್ತಿಕೊಳ್ಳುತ್ತದೆ ಎಂಬ ಕಾರಣಕ್ಕೆ ಬಚ್ಚಲುಮನೆಯ ಹೊರಭಾಗದಲ್ಲಿ ಹೇರಳ ಜಾಗ ಇದ್ದುದರಿಂದ ಅಲ್ಲಿ ಅದನ್ನು ಬಿಡಿಸುತ್ತಿದ್ದರು. ವಾಸನಾಬಲ ಅತ್ಯುತ್ತಮವಾಗಿರುವ ಹಸು-ಕರುಗಳು ಹಲಸಿನ ಹಣ್ಣು ಕುಯ್ದ ಕೆಲವೇ ನಿಮಿಷಗಳಲ್ಲಿ ಒಟ್ಟೊಟ್ಟಿಗೆ ೬-೭ ಸೇರಿ ಕೂಗುತ್ತಿದ್ದವು. ತಮಗೂ ಪಾಲು ಬರಲಿ ಎಂಬುದು ಅವರ ಬಯಕೆ. ಕೊನೆಗೆ ನಾವು ಸೊಳೆ[ತೊಳೆ]ಯನ್ನೆಲ್ಲಾ ತೆಗೆದುಕೊಂಡು ಚೂರೂಪಾರೂ ಉಳಿಸಿ ಸಾರೆ[ ಉಳಿದ ಭಾಗ]ಕಡಿಗಳನ್ನು ಅವುಗಳಿಗೆ ನೀಡುತ್ತಿದ್ದೆವು. ಗಬಗಬನೆ ಹಾತೊರೆದು ಮುಕ್ಕುವುದು ನೋಡಿದರೆ [ನಮ್ಮ ರಾಜಕಾರಣಿಗಳು ಈಗ ಹಣಮುಕ್ಕುತ್ತಾರಲ್ಲ ಅದರ ನೆನಪಾಗುತ್ತದೆ!] ಮತ್ತೆಂದೂ ಭೂಮಿಯ ಸಿಗದ ಅಮೃತತುಲ್ಯ ವಸ್ತುವೇನೋ ಸಿಕ್ಕಿರಬೇಕು ಎನಿಸುತ್ತಿತ್ತು. ಮಲೆನಾಡ ಗಿಡ್ಡ ಜಾತಿಗೆ ಸೇರಿದ್ದ ಆ ಹಸುಕರುಗಳು ಬುದ್ಧಿಮತ್ತೆಯಲ್ಲಿ ಅಸದೃಶ ಛಾಪನ್ನು ಒತ್ತಿವೆ. ಹೆಸರು ಇಟ್ಟರೆ ಗೊತ್ತಾಗುತ್ತಿತ್ತು, ಒಂದು ದನವಂತೂ ’ಬೆಳ್ಳೀ’ [ಬೆಳ್ಳಗಿನ ದನವಾಗಿತ್ತು] ಎಂದರೆ ಸಾಕು ಸುಮಾರು ಕಿಲೋಮೀಟರು ದೂರದಿಂದಲೇ ಅಂಬಾ ಎಂದು ಅರಚುತ್ತಾ ಓಡೋಡಿ ಬರುತ್ತಿತ್ತು. ಹೇಳಿದರೆ ಕಥೆ-ಹೇಳದಿದ್ದರೆ ಏನೋ ವ್ಯಥೆ!

ನಿಜಕ್ಕೂ ಈ ಎಲ್ಲಾ ಸಂಗತಿಗಳಲ್ಲೂ ಹಲವು ಮಿನುಗು ನಕ್ಷತ್ರಗಳಿವೆ. ನೆನಪಿನ ಬಾನಿನಲ್ಲಿ ಒನಪು ಒಯ್ಯಾರಗಳಿಂದ ನಮ್ಮ ಮನವನ್ನು ತಮ್ಮತ್ತ ಸೆಳೆಯುವ ಅವುಗಳ ಬದುಕನ್ನು ಅವಲೋಕಿಸಿದಾಗ ಹೊಸದಾಗಿ ಜನ್ಮತಳೆದ ಅನುಭವವಾಗುತ್ತದೆ, ಮನ ಹಲವು ನೋವುಗಳನ್ನುಮರೆತು ಹಗುರವಾಗುತ್ತದೆ. ಮತ್ತೊಮ್ಮೆ ಸಮಯವಾದಾಗ ಮೆಲುಕೋಣ, ನಮಸ್ಕಾರ.