ಮುಸಲಧಾರೆ
ಏನಿದೀ ಅಬ್ಬರದ ಕಾರ್ಮೋಡ ಕರಗಿರಲು
ಲಕ್ಷಣವ ತೋರ್ಗೊಡದ ಮುಸಲಧಾರೆ ?
ಭೂಮಿಯಾಕಾಶಗಳ ಬೆಸೆದಂತೆ ನೆಟ್ಟಿರುವ
ತಂತಿ ರೂಪದ ಮಳೆಯ ಧಾರೆ ಧಾರೆ
ಸೃಷ್ಟಿ ಕಟ್ಟಳೆಯಂತೆ ವರುಣ ಭೋರ್ಗರೆದಂತ
ಪ್ರಕೃತಿ ವಿಸ್ಮಯ ರೂಪ ಜಲಲಧಾರೆ !
ಅಷ್ಟದಿಕ್ಕುಗಳಲ್ಲು ಮೋಡಗಳು ಮೇಳೈಸಿ
ಒತ್ತಟ್ಟಿಗೇ ಸುರಿದ ತಂಪುಧಾರೆ
ಇಂದ್ರಸಭೆಯಲಿ ಕೋಪಗೊಂಡ ದೇವೇಂದ್ರನ
ಶಾಪಕೀಡಾದ ಅಪ್ಸರೆಯರತ್ತರೇ?
ಚಂದ್ರಲೋಕದ ಕಾಣದಾ ಜೀವರಾಶಿಗಳು
ಕೂಪಗಳ ಮಡಿಲಿಂದ ಹರಿಬಿಟ್ಟರೇ ?
ಗುಡುಗಿನಬ್ಬರ ಕೇಳಿದಾಗೊಮ್ಮೆ ಅನಿಸುತಿದೆ
ಗಡಬಡಿಸಿ ಮೇಲ್ಯಾರೋ ಓಡಿದಂತೆ !
ಬಡಗುದಿಕ್ಕಲಿ ಸೆಳೆ ಮಿಂಚೊಮ್ಮೆ ಮಿಂಚಿರಲು
ಬೆಳಗೋ ಬೈಗೋ ಸಮಯ ಅರಿಯದಂತೆ !
ಭುವಿಯ ಲಿಂಗವಮಾಡಿ ಆಗಸದ ಪಾತ್ರೆಯಿಂ
ಅಭಿಷೇಚಿಸಿದ ದೇವತೆಗಳದಾರು ?
ಭವದ ಜಗಗುಡಿಯಲ್ಲಿ ಭಕ್ತಿಯರ್ಪಿಸಬಂದ
ಮಹಶೇಷ ರೊಪಿಗಳೇ ಅವರಿದ್ದಾರು !
ಯಾವ ಕೆಲಸಕೊ ತೃಪ್ತಿಗೊಂಡಿರುವ ದೇವತೆಗಳ್
ಭಾವಪೂರಿತವಾಗಿ ಭಾಷ್ಪವಿಳಿಸಿದರೇ ?
ಹಾವಭಾವಗಳನ್ನು ತೋರ್ಗೊಡಿಸಲೀಜಗಕೆ
ಜಾವದಲೇ ದನಿಮಾಡಿ ಮಿಂಚುತಿಹರೇ ?