ದೊಡ್ಡಮ್ಮ ಬರಲೀ..... ಹೋಯ್ ದೊಡ್ಡಮ್ಮ ಬರಲೀ.....
ಬೇಸಿಗೆಯನ್ನು ಹಳ್ಳಿಗಳಲ್ಲಿ ಕಳೆಯುವುದೇ ಒಂದು ಮಜಾ. ಅಲ್ಲಿನ ಹಲವು ಸಂಗತಿಗಳು ನೆನಪಾದಾಗೆಲ್ಲಾ ನಗುತರಿಸುವುದರಜೊತೆಜೊತೆಗೇ ಹಳ್ಳಿಯ ಜನರ ನಿಸ್ಪೃಹ ಮನೋಭಾವವನ್ನೂ ಮುಗ್ಧತೆಯನ್ನೂ ಮನಸ್ಸಿನ ಕೆರೆಯಾಳದಿಂದ ಹೊರಗೆಳೆದುತರುತ್ತವೆ. ಅಲ್ಲಿ ಹಲವಾರು ವಿಶಿಷ್ಟ ಸಂಗತಿಗಳೂ ಘಟನೆಗಳೂ ಮತ್ತೆ ಪುನರ್ಸೃಷ್ಟಿಗೊಂಡು ಆಯಾ ವ್ಯಕ್ತಿಗಳು ಆಯಾಯಮೂಲರೂಪದಲ್ಲೇ ಹಾಯಾಗಿ ಮಾತನಾಡಸಿಗುತ್ತಾರೆ.
ಕಾಡ್ಯನ ಕುಣಿತದ ನಂತರ ನಮ್ಮ ಹಳ್ಳಿ ಬೇಸಿಗೆಯನ್ನು ಕರೆದು ಚಿಗಿತುಕೊಳ್ಳುತ್ತಿತ್ತು. ಹಾಂ .. ಕಾಡ್ಯನ ಕುಣಿತವೆಂದರೆ ಇದು ಬರಿದೇನಾಕಾರು ಜನ ಕೂಲಿ ಕೆಲಸದವರು ಚಳಿಗಾಲ ಮುಗಿಯುವ ಹಂತದಲ್ಲಿ ಗುಮಟೆ ಬಾರಿಸಿಕೊಂಡು ಕುಣಿಯುವುದು. ಅವರಿಗೆತಿಳಿದಿರುವ ಯಾವುದೋ ಒಂದೆರಡು ಜಾನಪದ ಗೀತೆಗಳನ್ನು ಹಾಡಿಕೊಂಡು ಕೆಲವರು ಹೆಜ್ಜೆಹಾಕಿದರೆ ಒಬ್ಬಾತ ಗುಮಟೆ[ವಿಶಿಷ್ಟಆಕಾರದ ಮಡಿಕೆಯ ಬಾಯಿಗೆ ಉಡದ ಚರ್ಮವನ್ನು ಕಟ್ಟಿ ತಯಾರಿಸಿದ ಒಂದು ವಾದ್ಯ]ಬಾರಿಸುತ್ತಿದ್ದ. ಆಗಾಗ ಅಲ್ಲಲ್ಲಿ ಸಿನಿಮಾಹಾಡುಗಳ ತುಣುಕುಗಳನ್ನೂ ತಮಾಷೆಗೆ ಸೇರಿಸಿ ಹಾಡುವ ಪ್ರಾಯದ ಹುಡುಗರ ಗುಂಪೂ ಇರುತ್ತಿತ್ತು. ತಲೆಗೆ ಟವೆಲ್ ಸುತ್ತಿಕೊಂಡುಕುಣಿದು ದಣಿದ ಹುಡುಗರು ಅಕ್ಕಿ, ಭತ್ತ, ತೆಂಗಿನಕಾಯಿ, ಕಾಂಚಾಣ ವಗೈರೆ ಕೊಡುವುದನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದುಮನೆಮನೆಗೂ ಸಾಗಿ ನಡೆಸುವ ಸಂತಸದ ಕುಣಿತವಾಗಿತ್ತು.
ಬಯಲು ಸೀಮೆಯ ಪ್ರಭಾವದಿಂದ ಆಗಾಗ ಸಂಗ್ಯಾ ಬಾಳ್ಯಾ ಆಡುವ ಹರಿಜನರಿದ್ದರು. ಅದು ಎಲ್ಲರ ಮನೆಗಳೆದುರು ಆಡುವಆಟವಾಗಿರಲಿಲ್ಲ. ಹರಿಜನರು ಅವರ ಹಟ್ಟಿಯ ಗೊತ್ತಾದ ಜಾಗವೊಂದರಲ್ಲಿ ಸಣ್ಣ ವೇದಿಕೆ ನಿರ್ಮಿಸಿ ಪೂರ್ಣರಾತ್ರಿ ಚಿಮಣಿಎಣ್ಣೆಯಗ್ಯಾಸ್ ಲೈಟ್ ಬೆಳಕಿನಲ್ಲಿ ಸಂಗ್ಯಾಬಾಳ್ಯಾ ನಡೆಸುತ್ತಿದ್ದರು. ಅಲ್ಲಿ ಎಷ್ಟು ಜನರಿಗೆ ಅದರ ಕಥೆ ಗೊತ್ತಿತ್ತು ಎನ್ನುವುದು ನಮಗಂತೂಅರಿವಿಗಿಲ್ಲ. ಅಸಲಿಗೆ ಸಂಗ್ಯಾಬಾಳ್ಯಾ ಕಥೆ ಸಿನಿಮಾ ಆದಾಗಲೇ ನಮಗೂ ಸರಿಯಾಗಿ ಅರ್ಥವಾಗಿದ್ದು.
" ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........

..................................................."
ದೂರದಲ್ಲಿ ನಿಂತು ನಾವು ನೋಡಿದರೆ ಆಗಾಗ ಅಲ್ಪಸ್ವಲ್ಪ ಇಂತಹ ಹಾಡುಗಳು ಕೇಳುತ್ತಿದ್ದವು..ಆದರೂ ಅರ್ಥಮತ್ರಅಸ್ಪಷ್ಟವಾಗಿರುತ್ತಿತ್ತು. ಏನೇ ಇರಲಿ ಬೆಟ್ಟದ ತಳದಲ್ಲಿ ಅವರು ಸ್ವಸಂತೋಷಕ್ಕೆ ನಡೆಸುವ ಕಾರ್ಯಕ್ರಮ ಅದಾಗಿದ್ದುದರಿಂದನಮಗೆಲ್ಲಾ ಅರ್ಥವಾಯ್ತೋ ಬಿಡ್ತೋ ಅದು ಮುಖ್ಯವಲ್ಲ. ಮಜವೆಂದರೆ ಅಂತಹ ಸಂದರ್ಭದಲ್ಲಿ ತಮ್ಮ ಬದುಕಿನ ನೋವುದುಃಖ-ದುಮ್ಮಾನಗಳನ್ನು ಅವರೆಲ್ಲಾ ಪರಸ್ಪರ ಹಂಚಿಕೊಂಡು ಮಾತನಾಡುತ್ತಾ ಕಳೆಯುವ ಆ ರಾತ್ರಿಗಳಲ್ಲಿ ಅವರೇತಯಾರಿಸಿಕೊಂಡ ಸಾರಾಯಿ ಸಮಾರಾಧನೆಯೂ ನಡೆಯುತ್ತಿತ್ತು. ಕುಡಿದು ಚಿತ್ತಾದ ಕೆಲವು ಜನ ತಮ್ಮ ಸರದಿ ಬಂದಾಗ ಏನೇನೋಹಾಡುವುದೂ ಇರುತ್ತಿತ್ತು. ಬೆಳ್ಯನ ಗಣಪ, ಜಟ್ಟಿ, ಕ್ಯಾಸ, ಬಕ್ಕ, ನಾಗು, ಸಂಕ್ರು, ಮಂಜು, ಸಾತ ಇವೇ ಮೊದಲಾದ ಹರಿಜನಅತಿರಥ ಮಹಾರಥಿಗಳು ಸಂಗ್ಯಾಬಾಳ್ಯಾದಲ್ಲಿ ಹಾಡಿ ಕುಣಿಯುವುದನ್ನು ಅವರ ಹೆಂಗಸರು ಕಣ್ಣೆವೆಮುಚ್ಚದೇ ನೋಡುವಾಗಅವರುಗಳಿಗೆ ಅದಕ್ಕಿಂತಾ ಬೇರೇ ಮಾನ ಸನ್ಮಾನ ಬೇಕಾಗಿರಲಿಲ್ಲ. ವಾಡಿಕೆಯಲ್ಲಿ " ಸಿಂಗಿಬಾಳ " ಎಂದು ಅವರದನ್ನುಹೆಸರಿಸುತ್ತಿದ್ದರು. ಸಿಂಗಿಬಾಳದ ಮರುದಿನ ಎಲ್ಲರಿಗೂ ಗಾಢನಿದ್ರೆ, ವಿಶ್ರಾಂತಿ. ಆ ದಿನ ಎಲ್ಲೂ ಕೆಲಸಕ್ಕೆ ಹೋಗುವುದುಸಾಧ್ಯವಾಗುತ್ತಿರಲಿಲ್ಲ.
ಇನ್ನು ಹೋಳಿ ಹುಣ್ಣಿವೆಗೂ ಮುಂಚೆ ೧೦-೧೨ ದಿನಗಳಕಾಲ ಸುಗ್ಗಿ ಕುಣಿತ ನಡೆಯುತ್ತಿತ್ತು. ಇದಕ್ಕೂ ಪೂರ್ವಭಾವಿಯಾಗಿತಿಂಗಳುಗಟ್ಟಲೆ ಅವರು ಆ ಕುರಿತು ದಿನಾ ಸಂಜೆ ತಾಲೀಮು ನಡೆಸುತ್ತಿದ್ದರು. ಹರೆಯದ ಹುಡುಗರು ನಾ ಮುಂದು ತಾ ಮುಂದುಎಂದು ಸುಗ್ಗಿ ಕಟ್ಟಲು ಹವಣಿಸುತ್ತಿದ್ದರು. ಹರಿಜನರು ಮತ್ತು ನಾಮಧಾರಿ ಜನಾಂಗದವರೂ ಕೂಡ ಸುಗ್ಗಿ ಕುಣಿತದಲ್ಲಿಪಾಲ್ಗೊಳ್ಳುತ್ತಿದ್ದರು. ಮರದಲ್ಲಿ ಸಿಗುವ ಬೆಂಡಿನ ಸಹಾಯದಿಂದ ಗಿಳಿಗಳು, ಹಕ್ಕಿಗಳು ಮತ್ತು ಇನ್ನಿತರ ಕೆಲವು ಚಿಕ್ಕ ಆಕೃತಿಗಳುಳ್ಳತುರಾಯಿ ತಯಾರಾಗುತ್ತಿತ್ತು. ಗುಡಿಗಾರ ಜನಾಂಗ ಮುಂಗಡ ತೆಗೆದುಕೊಂಡು ಇದನ್ನು ತಯಾರಿಸಿ ಮಾರುತ್ತಿತ್ತು. ಬಣ್ಣ ಬಣ್ಣದಬೇಡಗೆಗಳನ್ನೂ ಚಿತ್ತಾರಗಳನ್ನೂ ಹೊದಿಸಿದ ಕಡ್ಡಿಗಳ ಪುಂಜವನ್ನು ತುರಾಯಿ ಎನ್ನುತ್ತಿದ್ದರು. ಮುಂಡಾಸಿನಮೇಲೆ ಅದನ್ನು ಕಟ್ಟಿಹಿಂದಲೆ ಮಲ್ಲಿಗೆಯಂತಹ [ಬೆಂಡಿನಿಂದ ತಯಾರಿಸಿದ] ಹೂವುಗಳ ಮಾಲೆಗಳನ್ನು ಇಳಿಯಬಿಡುತ್ತಿದ್ದರು. ಬಿಳಿಯ ಪೈಜಾಮ ಮತ್ತುಹಳದಿ ಅಥವಾ ಬಿಳಿಯ ತುಂಬುತೋಳಂಗಿ ಧರಿಸಿ ಮದುಮಗನಿಗೆ ಶಲ್ಯವನ್ನು ಕತ್ತರೀ ಆಕಾರದಲ್ಲಿ ಹೊದಿಸಿದಂತೇ ಧರಿಸುತ್ತಿದ್ದರು. ಕಣ್ಣಿಗೆ ಕಾಡಿಗೆ ಮತ್ತು ಹಣೆಗೆ ಕೆಂಪು-ಹಳದಿ ನಾಮಗಳನ್ನು ಧರಿಸುತ್ತಿದ್ದರು. ಸಂಪೂರ್ಣ ತಯಾರಾಗಿ ನಿಂತ ಸುಗ್ಗಿ ವೇಷದಹುಡುಗನನ್ನು ಆ ಯಾ ಜನಾಂಗದ ಹರೆಯದ ಹುಡುಗಿಯರು ನೋಡಿ ಸಂಭ್ರಮಿಸುವಂತೇ ಕಾಣುತ್ತಿದ್ದರು. ಬಹುಶಃ ಹುಡುಗರಿಗೂಇದೇ ಒಂದು ಅನಿಸಿಕೆ ಒಡಲಾಳದಲ್ಲಿದ್ದು ಅವರು ಸುಗ್ಗಿ ಕಟ್ಟುವಲ್ಲಿ ಹಾತೊರೆಯುತ್ತಿದ್ದರೋ ಏನೋ.
ದೇವರ ಹಾಡುಗಳಲ್ಲದೇ ಜಾನಪದ ಹಾಡುಗಳೂ ಮತ್ತು ಕೆಲವು ಭಾವಗೀತೆಗಳಿಗೂ ಅವರು ತಾಳಹಾಕಿ ಕುಣಿಯುತ್ತಿದ್ದರು. ಸುಗ್ಗಿಕಟ್ಟಿದವರು ಕೋಲಾಟವನ್ನೂ ಆಡುತ್ತಿದ್ದರು. ಗುಮಟೆ, ಜಾಗಟೆ, ತಾಳ, ತಾಸ್ಮಾರು[ ಅಗಲದ ಚಂಡೆಯಂತಹ ಒಂದುಚರ್ಮವಾದ್ಯ] ಮೊದಲಾದ ವಾದ್ಯಗಳನ್ನು ಇಲ್ಲಿ ಬಳಸಲಾಗುತ್ತಿತ್ತು. ಸುಗ್ಗಿಮನೆ ಎಂದು ಅವರವರ ಮನೆಗಳಲ್ಲಿ ಒಂದು ಮನೆಯನ್ನುಆ ದಿನಗಳಲ್ಲಿ ಅದಕ್ಕೇ ಮೀಸಲಿಟ್ಟು ಸುಗ್ಗಿ ಕಟ್ಟಿದ ಜನರೆಲ್ಲಾ ಅಲ್ಲೇ ವೃತನಿಷ್ಠರಂತೇ ಇರುತ್ತಿದ್ದರು. ಬೆಳಿಗ್ಗೆ ೯ ಗಂಟೆಗೆ ಸಾಮೂಹಿಕತಿಂಡಿತಿಂದು ಮತ್ತು ಸುಗ್ಗಿಮನೆಯ ದೇವರಲ್ಲಿ ಪ್ರಾರ್ಥಿಸಿ ಹೊರಟರೆ ಊರು ಪರವೂರು ಅಂತ ಮನೆಮನೆಗೆ ತಿರುಗಿ ಕುಣಿಯುತ್ತಾಕಾಯಿ-ಹಣ ಪಡೆದು ತೆರಳುತ್ತಿದ್ದರು. ಹಂದಿ ಕುಣಿತ, ನವಿಲು ಕುಣಿತ, ಕಾಡುಪ್ರಾಣಿಗಳ ಕೂಗಿನ ಅನುಕರಣೆ ಇವೇ ಮೊದಲಾದಹಲವು ಉಪಜೋಡಣೆಗಳು ಇರುತ್ತಿದ್ದವು. ಆಗಾಗ ಚೆನ್ನಾಗಿ ಕುಣಿಯುವ ಎರಡು ಪಂಗಡಗಳ ನಡುವೆ ಸ್ಪರ್ಧೆಯೂ ಇರುತ್ತಿತ್ತು. ಮಕರಗುಮ್ಮ ಅಥವಾ ಮಕ್ಕಳಗುಮ್ಮ ಎನ್ನುವ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಮಾತುಬಾರದವರ ರೀತಿ ನಟಿಸುತ್ತಾ ಬಂದೂಕುಹಿಡಿಸು ಮಕ್ಕಳನ್ನು ಅಟ್ಟಿಸುವಂತೇ ಮಾಡುವುದು, ಕುಣಿತಬಾರದವರ ರೀತಿ ಹೇಗ್ಹೇಗೋ ಕುಣಿದು ಅಡ್ಡಾದಿಡ್ಡಿ ಓಡಾಡಿ ಜನರನ್ನುರಂಜಿಸುವುದು ಮಾಡುತ್ತಿದ್ದ. ಎಳೆಯ ಮಕ್ಕಳ ಕಣ್ಣು ಮಕರಗುಮ್ಮನ ಮೇಲೇ ನೆಟ್ಟಿರುತ್ತಿತ್ತು.
" ಮೋಹನ್ನ ಮುರಲೀ ವಾಲರೇ ಸಖಿ ಮೋಹನ್ನ ಮುರಲೀ ವಾಲರೆ....." ಏಕಕಾಲಕ್ಕೆ ಮಿಡಿಯುವ ಗುಮಟೆ, ತಾಳ, ಜಾಗಟೆ, ತಾಸ್ಮಾರುಗಳ ಹದವಾದ ಶಬ್ದಕ್ಕೆ ಕಾಲಿಗೆ ಕಟ್ಟಿದ ಗೆಜ್ಜೆಯ ಸದ್ದು ಮೇಳೈಸಿ ಇಡೀವಾತಾವರಣ ಸುಗ್ಗಿಯ ಹಿಗ್ಗಿನಿಂದತುಂಬಿಹೋಗುತ್ತಿತ್ತು. ಊರಜನ ಒಂದೆರಡು ಹಾಡುಗಳನ್ನು ಹೆಚ್ಚಿಗೆ ಕುಣಿಸಿ ಆಮೇಲೆ ಯಥಾಯೋಗ್ಯ ಪುರಸ್ಕಾರಗಳನ್ನುನೀಡುತ್ತಿದ್ದರು. ಕಲಸಿದ ಅವಲಕ್ಕಿ-ಬೆಲ್ಲ-ನೀರು, ಚಹ ಇತ್ಯಾದಿ ಉಪಚಾರವಗುತ್ತಿತ್ತು. ಮತ್ತೆ ಕುಣಿದ ಮನೆಗೆ ಮುಂದಿನ ವರುಷಬರುವುದಾಗಿ ಶುಭಕೋರಿ ಸುಗ್ಗಿ ಮುಂದಿನಮನೆಗೆ ಸಾಗುತ್ತಿತ್ತು. ಹಾದಿಯಲ್ಲಿ ಸಿಗುವ ದೇವಸ್ಥಾನಗಳ ಎದುರಲ್ಲಿ ಕನಿಷ್ಠ ೧೫-೨೦ನಿಮಿಷವಾದರೂ ಕುಣಿಯುತ್ತಾ ದೇವರನ್ನು ಸಂತೋಷಪಡಿಸುತ್ತಿದ್ದರು. ಹೋಳಿ ಹುಣ್ಣಿಮೆಯದಿನ ಸುಗ್ಗಿಮನೆಯಲ್ಲಿ ವಿಶೇಷಪೂಜೆಯಾಗಿ ಆ ರಾತ್ರಿ ಅಲ್ಲೇ ಎದುರಲ್ಲಿ ನಿಲ್ಲಿಸಿದ್ದ [ಬೇಡದ/ಉಪಯೋಗಿಸಿಬಿಟ್ಟ ಮರದ ವಸ್ತುಗಳು ಇತ್ಯಾದಿ ರಾಶಿಹಾಕಿ ಪೇರಿಸಿತಯಾರಿಸಿದ ಒಂದು ಆಕಾರವನ್ನು ಕಾಮನೆಂದು ಕರೆಯುತ್ತಿದ್ದರು]ಕಾಮನ ದಹನ ನಡೆಯುತ್ತಿತ್ತು. ಅಲ್ಲಿಗೆ ಆ ಸಲದ ಸುಗ್ಗಿಯಕುಣಿತದ ದಿನಗಳು ಮುಗಿದವು ಅಂತ ಲೆಕ್ಕ. ಬಂದ ಗಳಿಕೆಯನ್ನು ಎಲ್ಲರೂ ಹಂಚಿಕೊಂಡು, ಸಾಮೂಹಿಕವಾಗಿ ಒಂದು ಔತಣವನ್ನೂನಡೆಸಿ ಆಮೇಲೆ ತಂತಮ್ಮ ಮನೆಗಳಿಗೆ ತೆರಳುತ್ತಿದ್ದರು. ಬಳಸಿದ ಪರಿಕರಗಳು ಅವರವರ ಮನೆಗಳಲ್ಲಿ ಗೋಡೆಯಮೇಲೆ ಜಾಗಪಡೆದು ಅವರಿಗೆ ಸುಗ್ಗಿನ ಹಿಗ್ಗಿನ ಆನಂದವನ್ನು ತಂದುಕೊಡುತ್ತಿದ್ದವು.
ಕಾಮದಹನವಾದ ಮಾರನೇದಿನ ’ದುಮ್ಸಾಲೆ’ ಕಾರ್ಯಕ್ರಮ. ಮತ್ತೆ ಸುಗ್ಗಿ ಕಟ್ಟಿದ ಜನರೊಂದಿಗೆ ಸಹಕರಿಸಿದ ಕೆಲಜನಸೇರಿಕೊಂಡು ಮೃದಂಗ ತಾಳ ಬಡಿಯುತ್ತಾ ಮನೆಮನೆಗೆ ಬರುತ್ತಿದ್ದರು.
" ಕಾಮ್ನೋ ಭೀಮ್ನೋ ಕಾಮ್ನಸುಟ್ಟ ಬೆಳಗಾಗೆ ಕಾಯಿ-ಬೆಲ್ಲ ತಿನ್ಬೇಕೂ ದುಮ್ಸಾಲ್ಯೋ ....
ಕಾಯ್ ಕೊಡಿ-ದುಡ್ ಕೊಡಿ ದುಮ್ಸಾಲ್ಯೋ ......ವರ್ಸ್ಕೊಂದ್ ಹಬ್ಬ ದುಮ್ಸಾಲ್ಯೋ "
ಪ್ರತೀ ಮನೆಯಲ್ಲೂ ಕುಣಿದು ಮತ್ತೆ ಕಾಯಿ-ಹಣವನ್ನು ಪಡೆದು ತೆರಳುತ್ತಿದ್ದರು. ಅಲ್ಲಿಗೆ ಆ ವರ್ಷದ ಕುಣಿತದ ಹಬ್ಬಗಳುಮುಗಿದಹಾಗೇ.
ಬೇಸಿಗೆಯಲ್ಲಿ ಜಾತ್ರೆ, ವನಭೋಜನ ಅಂತ ದೇವರುಗಳೆಲ್ಲಾ ಹೊರಟುಬಿಡುತ್ತಿದ್ದವು. ದೇವರಲ್ಲಿ ಎರಡು ಗುಂಪು. ಕೆಲವು ಆಗಮಶಾಸ್ತ್ರ ರೀತ್ಯಾ ಪೂಜೆಗೊಳ್ಳುವ ಸಾತ್ವಿಕ ದೇವರುಗಳಾದರೆ ಕೆಲವು ಹಾಗೇ ಮನಸೋ ಇಚ್ಛೆ ಬೇಕುಬೇಕಾದ ಪೂಜೆಗೊಳ್ಳುವಉಗ್ರದೇವತೆಗಳು. ಈ ಉಗ್ರದೇವತೆಗಳು ಪಾರ್ವತಿಯ ಪ್ರತಿರೂಪಗಳಾಗಿದ್ದು ಅವುಗಳಿಗೆ ಅಲ್ಲಲ್ಲಿ ಕುರಿ-ಕೋಳಿಗಳ ಬಲಿಯೂನಡೆಯುತ್ತಿತ್ತು. ಸಾತ್ವಿಕ ದೇವರುಗಳಿಗೆ ಕುಂಬಳಕಾಯಿ-ಅನ್ನ-ತೆಂಗಿನಕಾಯಿ ಇತ್ಯಾದಿ ಸಾತ್ವಿಕಬಲಿ ಮತ್ತು ಸಾತ್ವಿಕಪೂಜೆಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಕೆಲವು ದೇವರುಗಳಿಗೆ ಹಲವಾರು ಊರುಗಳನ್ನು ಸುತ್ತುವ ಪರಿಪಾಟವಿತ್ತು. ಪಲ್ಲಕ್ಕಿಯಲ್ಲಿ ಪವಡಿಸಿಹೊರಟುಬಿಟ್ಟರೆ ತಿಂಗಳುಗಟ್ಟಲೆ ಅವು ಮತ್ತೆ ಗುಡಿಗೆ ಮರಳುತ್ತಿರಲಿಲ್ಲ. ಸಾವಿರಾರು ಪೂಜೆಗಳು ನಡೆದು ಆಮೇಲೆ ಮರಳಿ ಆಯಾದೇವಸ್ಥಾನಗಳಿಗೆ ಮರಳುವುದು ಅಲ್ಲಿನ ರಿವಾಜು. ಅಂತಹ ದೇವರುಗಳ ಪೈಕಿ ಗೇರುಸೊಪ್ಪೆಯ ಹನುಮಂತದೇವರು, ಚಂದಾವರಹನುಮಂತದೇವರು ಸಾತ್ವಿಕ ರೂಪದ ದೇವರಾದರೆ ಜಲವಳ್ ಕರ್ಕಿ ಅಮ್ಮನವರು ಉಗ್ರರೂಪದ ದೇವರು. ತಾಮಸಾಹಾರಭಕ್ಷಿಸುವ ಉಗ್ರರೂಪದ ದೇವರುಗಳನ್ನು ಬ್ರಾಹ್ಮಣ ಅರ್ಚಕರು ನಿತ್ಯವೂ ಆರಾಧಿಸುವ ಅಭ್ಯಾಸವಿರುವುದಿಲ್ಲ. ಆ ದೇವರುಗಳನ್ನುಹೆಚ್ಚಾಗಿ ಮಾಂಸಾಹಾರ ಭುಂಜಿಸುವ ಜನರುಗಳಲ್ಲೇ ಕೆಲವರು ನಿತ್ಯವೂ ಪೂಜಿಸುತ್ತಾರೆ. ಆದರೆ ಅಲ್ಲಲ್ಲಿ ವಿಶೇಷ ಪೂಜೆಗೆ ಬ್ರಾಹ್ಮಣಅರ್ಚಕರನ್ನು ಕರೆಯುವ ಪದ್ಧತಿ ಇತ್ತು; ಈಗಲೂ ಇದೆ.
ನಮ್ಮೂರ ಗದ್ದೆಯಲ್ಲಿ ಒಂದು ಜಾಗವನ್ನು ’ಅಮ್ಮ ಕೂರುವ ಕೊಡಗಿ’ ಎಂದೇ ಖಾತೆಗಳಲ್ಲಿ ನಮೂದಿಸಿದ್ದಾರೆ. ಗದ್ದೆಯ ಪೈರನ್ನೆಲ್ಲಾಕತ್ತರಿಸಿ ಮುಗಿದ ಕಾಲೀ ಗದ್ದೆಯನ್ನು ಸಮತಟ್ಟುಮಾಡಿ ಅಲ್ಲಿ ಚಪ್ಪರ ನಿರ್ಮಿಸಿ, ತಳಿರುತೋರಣಗಳಿಂದ ಅಲಂಕರಿಸಿಮಂಚವೊಂದನ್ನು ಇರಿಸಿ ದೀಪಮುಡಿಸಿರುತ್ತಾರೆ. ಅಲ್ಲಿಗೆ ಆಗಮಿಸುವ ಜಲವಳ್ ಕರ್ಕಿ ಅಮ್ಮನವರ ಪಲ್ಲಕ್ಕಿಯನ್ನು ಮಂಚದಮೇಲೆಕೂಡ್ರಿಸಿ ಮತ್ತೆ ಮೇಲಿನಿಂದ ಅಲಂಕರಿಸುತ್ತಾರೆ. ಬಂದ ಅಮ್ಮನಿಗೆ ಎಲ್ಲರೂ ವರ್ಗಿಣಿಹಾಕಿ ಊರ ಹತ್ತುಸಮಸ್ತರ ಪೂಜೆ ಬಹಳಗೌರವಯುತವಾಗಿ ನಡೆಯುತ್ತದೆ. ಹತ್ತು ಸಮಸ್ತರ ಪೂಒಜೆಯಲ್ಲಿ ಬ್ರಾಹ್ಮಣರೂ ಸೇರಿರುವುದರಿಂದ ಅವತ್ತು ಕುರಿ-ಕೋಳಿಗಳ ಬಲಿನಿಷಿದ್ಧ. ಅಮ್ಮನಿಗೆ ಸಾತ್ವಿಕ ಪೂಜೆ ನಡೆಯುತ್ತದೆ. ಅಡಿಕೆ ಶಿಂಗಾರ[ಹೊಂಬಾಳೆ]ಗಳಿಂದಲೂ ಬಗೆಬಗೆಯ ದಾಸವಾಳಗಳಿಂದಲೂಇನ್ನಿತರ ಘಮಘಮಿಸುವ ಮಲ್ಲಿಗೆ,ಜಾಜಿ, ಕರವೀರ, ಪುನ್ನಾಗ, ಇತ್ಯೇತ್ಯಾದಿ ಎಲ್ಲಾ ಬಗೆಯ ಹೂವುಗಳನ್ನು ಅಮ್ಮನಿಗೆ ಭಕ್ತಿಯಿಂದಅಲಂಕರಿಸುತ್ತಿದ್ದರು. ಎಳೆನೀರು, ಬಾಳೆಗೊನೆ, ಹಲಸಿನಹಣ್ಣು, ಅನಾನಸು, ಮಾವಿನಹಣ್ಣು, ಬಾಳೇಹಣ್ಣು ಇತ್ಯಾದಿ ಹಲವು ಹಣ್ಣು-ಕಾಯಿಗಳ ರಾಶಿರಾಶಿ ನೈವೇದ್ಯ ಇರುತ್ತಿತು. ಬ್ರಾಹ್ಮಣ ಅರ್ಚಕರೊಬ್ಬರು ಪಂಚಕಜ್ಜಾಯವನ್ನೂ ಮಾಡಿ ತರುತ್ತಿದ್ದರು. ಆದರೆ ಅಲ್ಲಿನಪೂಜೆ ಮಾತ್ರ ’ಗುನಗ’ ಎನ್ನುವ ಜನಾಂಗದಿಂದಲೇ ನಡೆಯುತ್ತಿತ್ತು.
ಗದ್ದೆಯ ಬದುವಿನ ಪಕ್ಕದಲ್ಲಿರುವ ನೀರಗುಂಡಿಯಲ್ಲಿ ಮಿಂದುಬರುವ ಗುನಗರು ಕೆಂಪು ಮಡಿಯುಟ್ಟು ಸಾಲಂಕೃತ ಅಮ್ಮನನ್ನು ಮತ್ತೆಹೊಸದಾಗಿ ಪೂಜಿಸುತ್ತಿದ್ದರು. ಧೂಪ,ದೀಪಗಳು, ಮಂಗಳವಾದ್ಯಗಳು, ಶಂಖ-ಜಗಟೆಗಳು, ಥರಥರದ ಮಂಗಳಾರತಿ, ನೈವೇದ್ಯ, ಕಾಣಿಕೆ ಎಲ್ಲವೂ ಸಮರ್ಪಣೆಯಾದಮೇಲೆ ಅಮ್ಮನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಆಗ ಪೂಜಾರಿಯಮೇಲೆ ಅಮ್ಮ ಬಂದು ಎಲ್ಲರಿಗೂಅಭಯನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ಸೇರಿದ ಹತ್ತುಸಮಸ್ತರು ಭಯಭಕ್ತಿಗಳಿಂದ ಅಮ್ಮನ ದರ್ಶನಾಕಾಂಕ್ಷಿಗಳಾಗಿ ಬಿಟ್ಟಕಣ್ಣು ಬಿಟ್ಟಹಾಗೇ ನೋಡುತ್ತಿದ್ದರು. ಮುಖ್ಯ ಪೂಜಾರಿಯ ಮೈಮೇಲೆ ಬಂದ ಅಮ್ಮ ಪೂಜೆಯಿಂದ ಸಂತೃಪ್ತಳಾದಳೋ ಇಲ್ಲವೋಎಂಬುದು ಪೂಜಾರಿಯ ಬಾಯಿಂದ ಒಕ್ಕಣೆಯಾಗುತ್ತಿತ್ತು. ಮೈಮೇಲೆ ಬಂದ ಅಮನಲ್ಲಿ ಮೊದಲು ಬರುವವಳು ಸಣ್ಣಮ್ಮನಂತೆ! ಸಣ್ಣಮ ತೀರಾ ತಕರಾರೀ ಕುಳವಲ್ಲ. ಆಕೆ ಪರದೇಶಿ; ಕೊಟ್ಟ ಪೂಜೆ ಹೇಗಿದ್ದರೂ ಒಪ್ಪಿ ಕ್ಷಮಿಸಿ ನಡೆಯುವವಳು. ನಂತರ ಬರುವದೊಡ್ಡಮ್ಮ ಮಾತ್ರ ಬಹಳ ಹಠಮಾರಿ. ಎಷ್ಟೆಂದರೂ ಮಾರಿಕಾಂಬೆ ತಾನೇ ? ಅಪ್ಪೀ ತಪ್ಪೀ ಅವಳಿಗೆ ಪೂಜೆ ಸರಿಯಾಗಿನಡೆಯದಿದ್ದರೆ ಆ ವರ್ಷ ಊರಲ್ಲಿ ಮಾರಿಕಾ ಉಪದ್ರವಗಳೆನಿಸಿದ ಸಿಡುಬು,ಗೋಣಿ, ದಡಾರ, ಚಾಪೆ ಇವೆಲ್ಲಾಕಾಣಿಸಿಕೊಳ್ಳುತ್ತವೆಯಂತೆ. ಹೀಗಾಗಿ ಸಣ್ಣಮ್ಮ ಬಂದು ಹೋದ ಮರುಕ್ಷಣ ಅದೇ ಪೂಜಾರಿಯಲ್ಲಿ ದೊಡ್ಡಮ್ಮ ಆಗಮಿಸಿತ್ತಿದ್ದಳು. ಹಾಗೆದೊಡ್ಡಮ್ಮ ಬರುವುದು ಗೊತ್ತಾಗಬೇಕಲ್ಲಾ ? ಆಗ ಪಕ್ಕದಲ್ಲಿ ನಿಂತ ಸಹಾಯಕ ಪೂಜಾರಿ
" ದೊಡ್ಡಮ್ಮ ಬರಲೀ.....ಹೋಯ್ ದೊಡ್ಡಮ್ಮ ಬರಲೀ...." ಎಂದು ಬಡಬಡಿಸುತ್ತಿದ್ದ. ಶಂಖ-ಜಾಗಟೆ, ವಾದ್ಯಗಳು ತಾರಕಸ್ವರದಲ್ಲಿಮೊಳಗುತ್ತಿದ್ದವು. ಕೈಯ್ಯಲ್ಲಿ ಶಿಂಗಾರ ಹಿಡಿದ ಪೂಜಾರಿ ಶರೀರದ ಗಡಗಡ ಅತಿಯಾದಾಗ ಅಲ್ಲಿ ದೊಡ್ಡಮ್ಮ ಬಂದಳೆಂದೇ ಅರ್ಥ. ಅಷ್ಟಾಗುವಾಗ ರಾತ್ರಿ ಹತ್ತುಗಂಟೆಯ ಸಮಯವಾಗುತ್ತಿತ್ತು. ಚಿಮಣಿಎಣ್ಣೆಯ ಗ್ಯಾಸ್ ಲೈಟ್ನಲ್ಲಿ ಕಾಣುವ ದೃಶ್ಯಾವಳಿಗಳು ನಿಜಕ್ಕೂಭಯದ ವಾತಾವರಣವನ್ನೇ ನಿರ್ಮಾಣಮಾಡುತ್ತಿದ್ದವು. ಇದ್ದಕ್ಕಿದ್ದಂತೇ ದೊಡ್ಡಮ್ಮ ಬರುವಾಗ ಪಲ್ಲಕ್ಕಿಯಲ್ಲಿ ಕುಳಿತ ವಿಗ್ರಹದ ಕಣ್ಣುಕೆಂಪಗೆ ದೊಡ್ಡಗೆ ಇರುವ ಹಾಗೇ ಕಾಣಿಸುತ್ತಿದ್ದವು. ಇನ್ನೇನು ನಾಲಿಗೆ ಚಾಚಿಬಿಡುತ್ತಾಳೇನೋ ಅನ್ನಿಸುತ್ತಿತ್ತು. ದೊಡ್ಡಮ್ಮನ ಭಾಷೆಕೆಲವೊಮ್ಮೆ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ! ಇನ್ನೂ ಕೆಲವೊಮ್ಮೆ ಕೇಳುವಷ್ಟು ದೊಡ್ಡದಾಗಿ ಅಮ್ಮ ಉಲಿಯುತ್ತಿರಲಿಲ್ಲ! ಆದರೂನಮ್ಮೂರನ್ನು ಕಂಡರೆ ಅಮ್ಮನಿಗೆ ಬಹಳ ಪ್ರೀತಿಯಿರುವುದರಿಂದಲೂ ಶತಮಾನಗಳಿಂದಲೂ ಅಕೆ ನಮ್ಮೂರಿಗೆ ಬಂದು ಪೂಜೆಗೊಂಡುಬಿಜಯಂಗೈಯ್ಯುತ್ತಿರುವುದರಿಂದಲೂ ಪೂಜೆ ಸಾಕಾಗಲಿಲ್ಲಾ ಎಂದಿದ್ದು ಹೇಳಿದ್ದು ಕಮ್ಮಿಯಂತೆ ಅಂತ ಕೆಲವರುಮಾತಾಡಿಕೊಳ್ಳುತ್ತಿದ್ದರು. ಅಂತೂ ಸುಮಾರು ೧೫ ನಿಮಿಷಗಳ ನಂತರ ಅಮ್ಮ " ಊರಿಗೆಲ್ಲಾ ಕ್ಷೇಮವಾಗಲಿ " ಎಂದುಸಾರಿದಮೇಲೆ ಮತ್ತೆ ಜಾಗಟೆ ವಾದ್ಯಗಳು ಜೋರಾಗಿ ಬಾರಿಸಲ್ಪಟ್ಟು ಪೂಜಾರಿಯ ಮೈಮೇಲೆ ಬಂದ ಅಮ್ಮ ಸ್ವಸ್ಥಾನಕ್ಕೆಹೊರಟುಹೋಗುತ್ತಿದ್ದಳು. ಇಡೀ ಮಡಿ ಒದ್ದೆಯಾಗಿ ಬೆವರಿ ಬಸವಳಿದ ಪೂಜಾರಿಗೆ ಸುಧಾರಿಸಿಕೊಳ್ಳಲು ಜನ ಗಾಳಿ ಬೀಸುತ್ತಿದ್ದರು. ನಂತರ ಎಲ್ಲರಿಗೂ ಪ್ರಸಾದ, ತಿನ್ನಲು ಪಂಚಕಜ್ಜಾಯ, ಬಾಳೇಹಣ್ಣುಗಳು ವಿತರಣೆಯಾಗಿ ಜನ ತಮ್ಮಪಾಲಿಗೆ ಬಂದ ಹಣ್ಣು-ಕಾಯಿಪ್ರಸಾದವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಆ ರಾತ್ರಿ ಅಲ್ಲೇ ಚಪ್ಪರದಲ್ಲಿ ಉಳಿಯಲು ಅಮ್ಮನಿಗೆ ವ್ಯವಸ್ಥೆಯಿರುತ್ತಿತ್ತು. ಮಾರನೇ ಬೆಳಗಾಗಿ ಅಮ್ಮ ಕೆಲವುಜನರೊಟ್ಟಿಗೆ ಮತ್ತೆ ಮುಂದೆ ಸಾಗಬೇಕಾದ ಜಾಗಕ್ಕೆ ತೆರಳುತ್ತಿದ್ದಳು.
ಅಂದಹಾಗೇ ಊರಲ್ಲಿರುವ ಸಾತ್ವಿಕ ದೇವರುಗಳಲ್ಲಿ ವಿಷ್ಣುಮೂರ್ತಿ ಕೂಡಾ ಒಂದು. ನಿತ್ಯನೈಮಿತ್ತಿಕ ಪೂಜಾವಿಧಾನಗಳುಶತಶತಮಾನಗಳಿಂದಲೂ ನಡೆದುಬರುತ್ತಿರುವ ಆ ದೇವಾಲಯದಲ್ಲಿ ಯಾವುದೋ ಕಾಲದಲ್ಲಿ ಕಳ್ಳರು ನುಗ್ಗಿ ಬಹಳ ಪ್ರಚೀನವಾದವಿಗ್ರಹದ ಶಿಲೆಯ ಪ್ರಭಾವಳಿಯನ್ನು ತುಂಡರಿಸಿದ್ದರು. ಭಗ್ನವಾದ ವಿಗ್ರಹ ಎಂಬ ಅಪಕೀರ್ತಿಹೊತ್ತ ಬಹುಸುಂದರ ವಿಗ್ರಹವನ್ನುವಿಸರ್ಜಿಸಿ ಆ ಜಾಗದಲ್ಲಿ ಹೊಸವಿಗ್ರಹವನ್ನು ಪ್ರತಿಷ್ಠಾಪಿಸಿದ್ದೂ ಆಯಿತು. ಆವೇಳೆ ಮೆರವಣಿಗೆಹೊರಟ ಪಂಚಲೋಹದ ಅಜಮಾಸುಒಂದೂವರೆ ಅಡಿ ಎತ್ತರದ ಅತ್ಯಂತ ಸುಂದರವಾಗಿದ್ದ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಕುಳಿತಾಗ ಯಾರೋ ಅದರಮೇಲೆಕಣ್ಣುಹಾಕಿದ್ದಿರಬೇಕು. ಪ್ರತಿಷ್ಠಾಪನಾ ಮಹೋತ್ಸವ ಮುಗಿದ ಒಂದೆರಡು ವರ್ಷಗಳಲ್ಲೇ ಒಂದು ರಾತ್ರಿ ಆ ಉತ್ಸವ ಮೂರ್ತಿಯನ್ನುಕಳ್ಳರು ಕದ್ದುಬಿಟ್ಟರು. ಮಾರನೇದಿನ ಪೂಜೆಗೆ ಬಂದ ಅರ್ಚಕರಿಗೆ ಕಂಡಿದ್ದು ಮುರಿದ ಬೀಗ-ತೆರೆದ ಬಾಗಿಲು. ವರದಹಸ್ತನಾದ ವಿಷ್ಣುಮೂರ್ತಿಯ ಶಿಲಾವಿಗ್ರಹದ ಕೈಮೇಲೆ ತುಳಸೀದಳವೊಂದು ಕಾಣುತ್ತಿತ್ತು. ಭಟ್ಟರು [ಅರ್ಚಕರು] ಹೆದರಿ ಊರಮಧ್ಯೆ ಓಡಿಬಂದರು. ಊರಜನ ಸೇರಿದರು. ತಲೆಗೊಂದರಂತೇ ಸಲಹೆಕೊಟ್ಟರು; ಮಾತನಾಡಿದರು. ಪೋಲೀಸರಿಗೆ ತಿಳಿಸಿ ಅವರೂ ಬಂದು ಹೋದರು. ಆಗೆಲ್ಲಾ ಪೋಲೀಸ್ ನಾಯಿಯ ಬಳಕೆ ಅಷ್ಟಾಗಿ ಇರಲಿಲ್ಲ!
ರಕ್ಷಿಸುವ ದೇವರನ್ನೇ ರಕ್ಷಿಸಬೇಕಾದ ಪ್ರಸಂಗಬಂದಾಗ ನಿಜಕ್ಕೂ ಬೇಸರವಾಗಿತ್ತು. ಕಳ್ಳರಂತೂ ಬಹಳ ದೂರದ ಜನವಾಗಿರಲುಸಾಧ್ಯವೇ ಇರಲಿಲ್ಲ. ಕಲಿಯ ಪ್ರಭಾವ ಆಗಲೇ ಜಾಸ್ತಿಯಾಗುತ್ತಾ ನಡೆದಿತ್ತಾದ್ದರಿಂದ ಪಕ್ಕದ ಊರವರೋ ಯಾರೋ ಅಂತೂ ತಮ್ಮಆಸಕ್ತಿಗೆ ಅನುಗುಣವಾಗಿ ವಿದೇಶಕ್ಕೆ ಮಾರಿ ಕೋಟಿಗಟ್ಟಲೆ ಗಳಿಸಲು ಆ ಕಾರ್ಯ ನಡೆಸಿದ್ದರು. ದಿನಗಳು ಉರುಳುತ್ತಲೇ ಇದ್ದರೂಕಳುವಾದ ವಿಗ್ರಹ ಮಾತ್ರ ಸಿಗಲೇ ಇಲ್ಲ. ಬಾಗಿಲುತಡೆದು ಹೇಳಿಕೊಳ್ಳಬೇಕು ಎಂಬ ಅಭಿಪ್ರಾಯ ಬಂತು. ಹಾಗೆಂದರೇನು ಎಂದುನಾನು ನನ್ನ ಹಿರಿಯರಲ್ಲಿ ಕೇಳಿದಾಗ ಅವರು ಹೇಳಿದ್ದು " ಊರಿಗೆ ಏನಾದರೂ ತೊಂದರೆ, ವಿಪತ್ತು ಬಂದರೆ, ಅನಾನುಕೂಲಉಂಟಾದರೆ, ಅವಘಡ ಸಂಭವಿಸಿದರೆ ಊರಜನರೆಲ್ಲಾ ಸೇರಿ ಅದೇ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಾಗಿಪ್ರಧಾನದ್ವಾರದೆದುರು ಕೈಮುಗಿದು ನಿಂತು ಬಂದ ಸಂಕಷ್ಟವನ್ನು ಪರಿಹರಿಸು ಎಂದು ಪ್ರಾರ್ಥಿಸುವುದು. " ವಾರದಲ್ಲೇಬಾಗಿಲುತಡೆದು ಹೇಳಿಕೊಂಡಿದ್ದೂ ಆಯಿತು.
ಬಂಗಾರಿ ಗೌಡ ಕೂಡ ಬಾಗಿಲು ತಡೆದು ಹೇಳಿಕೊಳುವ ಕಾರ್ಯದಲ್ಲಿ ಭಾಗವಹಿಸಿದ್ದ. ಪೂಜೆಮುಗಿಯುತ್ತಿದ್ದಂತೇ ಅದೆಲ್ಲಿಂದಆವೇಶಬಂತೋ ತಿಳಿಯಲಿಲ್ಲ. ಬಂಗಾರಿ ಹಾರಿ ಹಾರಿ ಬೀಳುತ್ತಿದ್ದ! " ಓಹೋ ನನ್ನಿಷ್ಣು ಮೂರ್ತಿ ನನ್ನಿಷ್ಣುಮೂರ್ತಿ....ನಾಸುಮ್ನಿರುದಿಲ್ಲ....ಬೇಕೇ ಬೇಕೂ ನನ್ನಿಷ್ಣುಮೂರ್ತಿ " ಆವೇಶದಲ್ಲಿ ಎದೆ ಎದೆ ಬಡಿದುಕೊಂಡು ಹಾರುತ್ತಿದ್ದ. ಬಂದವ ’ಬಾಗಿಲಜಟಕ’ ನಂತೆ! ಮಹಾವಿಷ್ಣುವಿನ ಬಾಗಿಲನ್ನು ಕಾಯಲು ಜಯ-ವಿಜಯರು ಬಾಗಿಲಭಟರಲ್ಲವೇ? ಅವರನ್ನೇ ಸಾಂಕೇತಿಕವಾಗಿ ಬಾಗಿಲಜಟ್ಗಅಥವಾ ಬಾಗಿಲಜಟಕ ಎಂಬ ಹೆಸರಲ್ಲಿ ಪ್ರಧಾನದ್ವಾರದ ಹೊರವಲಯದಲ್ಲಿ ಎಲ್ಲಾದರೂ ಪ್ರತಿಷ್ಠಾಪಿಸಿ ಅವರನ್ನೂ ಪೂಜಿಸುತ್ತಾರೆ. ಆಬಾಗಿಲುಜಟ್ಗ ಬಂಗಾರಿಯ ಮೈಮೇಲೆ ಬಂದಿದ್ದ ಎಂದು ಯಾರೋ ಹೇಳಿದರು. ಅರ್ಧಗಂಟೆಯಕಾಲ ಜಿಗಿದಾಡಿದ ಬಂಗಾರಿಕೊನೆಗೊಮ್ಮೆ ಸುಸ್ತಾಗಿ ಸ್ತಬ್ಧವಾಗಿ ಮಲಗಿಬಿಟ್ಟ. ಅದಾಗಿ ದಶಕಗಳೇ ಕಳೆದರೂ ಸುಂದರವಾದ ಆ ಉತ್ಸವಮೂರ್ತಿ ಸಿಗಲೇ ಇಲ್ಲ. ಅಷ್ಟಾಗಿ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಕಾಣದ ಕಾರಣ ಆರಕ್ಷಕರು ತಮ್ಮನ್ನೇ ರಕ್ಷಿಸಿಕೊಳ್ಳುತ್ತಾ ಕುಳಿತುಕೊಂಡುಬಿಟ್ಟರು! ಯಾರೋ ಪೂರ್ವಜರು ಮಕ್ಕಳಾಗದಿದ್ದುದಕ್ಕೆ ಹೇಳಿಕೊಂಡು ಸಂತಾನಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಹರಕೆ ತೀರಿಸಲಾಗಿ ಆವಿಗ್ರಹವನ್ನು ಎರಕದಲ್ಲಿ ಮಾಡಿಸಿ, ಅದಕ್ಕೆ ತಕ್ಕನಾದ ಹಾಲುಕಂಚಿನ ಪ್ರಭಾವಳಿ, ಬಂಗಾರದ ಬಣ್ಣಲೇಪಿಸಿದ ಮೆತ್ತನೆಯಸುಖಾಸನಗಳನ್ನೂ ಮಿರುಗುವ ಮೇಲುಹೊದಿಕೆಯನ್ನೂ ಹೊಂದಿದ್ದ ಪಲ್ಲಕ್ಕಿಎಲ್ಲವನ್ನೂ ಸಜ್ಜುಗೊಳಿಸಿ ವರ್ಷಾವರ್ಷಾ ಉತ್ಸವವನ್ನುನಡೆಸಿಬಂದರು. ಮೂರ್ತಿ ಕಳುವಾದ ವರ್ಷ ಆ ಮನೆತನದವರು ಮೂರ್ತಿಯ ಬದಲಾಗಿ ಕಾಯಿ ಅಭಿಮಂತ್ರಿಸಿ ಪಲ್ಲಕ್ಕಿಯಲ್ಲಿಟ್ಟು ಸೇವೆಸಲ್ಲಿಸಿದರು. ಸರಿಸುಮಾರು ೭-೮ ವರ್ಷಗಳು ಗತಿಸಿದಮೇಲೆ ಇನ್ನು ಮತ್ತೆ ಆ ಮೂರ್ತಿಯನ್ನು ಮರಳಿ ಪಡೆಯುವ ಆಸೆ ಕಮರಿಹೋಗಿಹೊಸದಾದ ವಿಗ್ರಹವೊಂದನ್ನು ಖರೀದಿಸಿ ತಂದರು. ಈಗಿರುವ ವಿಗ್ರಹ ಆ ವಿಗ್ರಹಕ್ಕೆ ಸೌಂದರ್ಯದಲ್ಲಿ ಯಾವಮೂಲೆಗೂತಾಗುವುದಿಲ್ಲ. ಕಳೆದುಹೋದ ಆ ವಿಗ್ರಹವನ್ನು ನಮ್ಮ ಊರಿನಲ್ಲೇ ಊರವರೇ ಆದ ಆಚಾರಿಯೊಬ್ಬರು ತಮ್ಮ ಕಲಾಪ್ರೌಢಿಮೆಯಿಂದತಯಾರಿಸಿದ್ದರಂತೆ. ಅದು ಕೇವಲ ಕಲೆಗಾಗಿ ಮತ್ತು ಸೇವೆಗಾಗಿ ಮಾಡಿದ ವಿಗ್ರಹವಾಗಿತ್ತು. ಇಂದು ವಿಗ್ರಹಗಳು ಮಾರಾಟದವಸ್ತುಗಳಾಗಿರುವುದರಿಂದ ಕೆಲವೊಮ್ಮೆ ಕಲಾಹೀನವಾಗಿಯೂ ಕಳಾಹೀನವಾಗಿಯೂ ಇರುತ್ತವೆ. ಇಂದಿಗೂ ನನ್ನ ಮನಸ್ಸಲ್ಲಿಅಚ್ಚಳಿಯದ ಹಲವು ಮೊಗಗಳಲ್ಲಿ ಆ ಸುಂದರ ವಿಗ್ರಹದ ಮುಗುಳ್ನಗೆಯೂ ಅಡಗಿದೆ. ಆಗಾಗ ಮಾನವನ ದುಷ್ಟತನವನ್ನು ಅಣಕಿಸಿಮತ್ತೆ ನಕ್ಕಂತಾಗುತ್ತದೆ.