ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 12, 2012

ಮದ್ಯ, ಮಾಂಸ, ಮಾನಿನಿಯರ ಮಧ್ಯೆ ಮಿಲಿಯನೇರ್ ಮಲ್ಯ ಬರೆದ ಮತ್ತಿಳಿಸುವ ಕಥೆ!

ಚಿತ್ರಋಣ: ಅಂತರ್ಜಾಲ
ಮದ್ಯ, ಮಾಂಸ, ಮಾನಿನಿಯರ ಮಧ್ಯೆ ಮಿಲಿಯನೇರ್ ಮಲ್ಯ ಬರೆದ ಮತ್ತಿಳಿಸುವ ಕಥೆ!

ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಯನ್ನು ಯಾರು ಯಾವ ಕಾಲದಲ್ಲಿ ಮಾಡಿದರೋ ತಿಳಿಯದಲ್ಲ. ಭರತಭೂಮಿ ಎಂಬುದು ಆದರ್ಶ ಮಾನವ ಮೌಲ್ಯಗಳ ನೆಲೆವೀಡು. ಇಂಥಾ ನೆಲದಲ್ಲೇ ಯುಗದ/ಕಾಲದ ಪ್ರಭಾವದಿಂದ ಮಾನವೀಯ ಮೌಲ್ಯಗಳಿಗೇ ಮೌಲ್ಯವಿಲ್ಲದಂತಾಗಿದೆ. ಶ್ರೀರಾಮ ಜನಿಸಿ, ಆಳಿ, ಆದರ್ಶ ಯಾವುದೆಂದು ತೋರಿಸಿಕೊಟ್ಟ ಈ ದೇಶದಲ್ಲಿ, ಪ್ರಾಜ್ಞರು ಹೇಳುತ್ತಲೇ ಬಂದರು: "ಮದ್ಯ, ಮಾಂಸ ಮತ್ತು ಮಾನಿನಿ" ಈ ಮೂರನ್ನು ದೂರವಿಡಿ ಎಂಬುದಾಗಿ. ಇಲ್ಲಿ ಮಾನಿನಿ ಎಂದರೆ ಕೇವಲ ಬೆಲೆವೆಣ್ಣುಗಳು ಎಂದರ್ಥ. ಮದ್ಯಕುಡಿದ ಯಾವ ಪ್ರಾಣಿಯೂ ತನ್ನ ಇತಿಮಿತಿಯನ್ನು ಮೀರಿ ವಿಚಿತ್ರಗತಿಯಲ್ಲಿ ವರ್ತಿಸುತ್ತದೆ, ಯಾಕೆಂದರೆ ಮದ್ಯದ ಮತ್ತು ನೆತ್ತಿಗೇರಿದಾಗ ಎಲ್ಲಿ ಏನಾಗುತ್ತಿದೆ ಎಂದಾಗಲೀ, ತಾನು ಏನು ಮಾಡುತ್ತಿದ್ದೇನೆ ಎಂದಾಗಲೀ ಅರ್ಥವಾಗದಲ್ಲ. ಮದ್ಯ, ಮಾಂಸ ಮತ್ತು ಮಾನಿನಿ ಈ ಮೂರೂ ಒಮ್ಮೆ ನಮ್ಮನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡರೆ ಅವುಗಳಿಂದ ಬಿಡುಗಡೆ ಬಹುತೇಕ ಸಾಧ್ಯವಿಲ್ಲ. ಅಂಥದ್ದರಲ್ಲಿ ಕಾಲಗತಿಯಲ್ಲಿ ಮದ್ಯ ತಯಾರಿಕೆಯನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡು ಕೆಲವರು ಬೆಳೆದರು. ಅದೆಷ್ಟೋ ಕುಟುಂಬಗಳು ಅವರ ತಯಾರಿಕೆಯ ಮದ್ಯವನ್ನು ನಿತ್ಯವೂ ಕುಡಿಯುತ್ತಾ ಬೀದಿ ಪಾಲಾದವು!

ದುಶ್ಯಂತ-ಶಕುಂತಲೆಯರ ಪ್ರಿಯ ಪುತ್ರ-ಚಕ್ರವರ್ತಿ ಭರತನ ಹೆಸರಿನಿಂದ ಭಾರತವೆನಿಸಿದ ಈ ಪುಣ್ಯನೆಲದಲ್ಲಿ, ಸಗರಪುತ್ರ ಭಗೀರಥ ತನ್ನ ಅಖಂಡ ತಪಸ್ಸಿನಿಂದ ಗಂಗೆಯನ್ನು ಧರೆಗೆ ಕರೆತಂದ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ನಿಜ ಘಟನೆಗಳನ್ನೇ ಕಥೆಯನ್ನಾಗಿಸಿದ ಇತಿಹಾಸವನ್ನು, ವಿಜ್ಞಾನವೆಂಬ ಕನ್ನಡಕ ಹಾಕಿಕೊಂಡು ಹಳದಿ ಬಣ್ಣದಲ್ಲೇ ಎಲ್ಲವನ್ನೂ ನೋಡುತ್ತಾ ನಾವು ತೆರಳುವಾಗ, ಜೀವ ಇರುವ ಜೀವಿಯೂ ನಮಗೆ ಸತ್ತ ಪ್ರಾಣಿಯ ಹಾಗೇ ಕಾಣಿಸುವುದು ಸಹಜ; ಯಾಕೆಂದರೆ ಅದು ನಮ್ಮ ಅಧಿಕಪ್ರಸಂಗದ ಪರಾಕಾಷ್ಠೆ. ಒಬ್ಬ ಓದುಗ ಮಿತ್ರರು ಕಳೆದವಾರದ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ: ವಿಜ್ಞಾನದಲ್ಲಿ ಆತ್ಮ ಎಂದರೆ ಜೀವ, ಜೀವ ಹುಟ್ಟಿತು ಮತ್ತು ಜೀವ ಸತ್ತಿತು ಎಂದರ್ಥವಂತೆ! ಗಣಕಯಂತ್ರದಲ್ಲಿ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಗಳಿರುವಂತೇ ನಮ್ಮ ದೇಹ ಒಂದು ಹಾರ್ಡ್‍ವೇರ್ ಮತ್ತು ನಮ್ಮ ಆತ್ಮವೆಂಬುದು ಸಾಫ್ಟ್‍ವೇರ್ ನಂತೇ ಎಂದರೆ ತಪ್ಪಲ್ಲ. ನಮ್ಮೊಳಗೇ ನೆಲೆಸಿ ನಮ್ಮಿಂದ ಎಲ್ಲಾ ಕೆಲಸಗಳನ್ನೂ ನಡೆಸುವ ದಿವ್ಯ ಚೈತನ್ಯದ ಅನನ್ಯ ಅನುಭವ ಬಹುತೇಕರಿಗೆ ಅನಾವರಣಗೊಳ್ಳುವುದೇ ಇಲ್ಲ! ಯಾಕೆಂದರೆ ಅವರ ಲೆಕ್ಕದಲ್ಲಿ ಆತ್ಮ ಎಂಬುದೊಂದು ಜೀವ ಅಷ್ಟೇ. ಆತ್ಮದ ಒಂದು ರೂಪ ಜೀವಾತ್ಮ ಹೌದು, ಆದರೆ ಅದೇ ಕೇವಲ ಜೀವವಲ್ಲ ಬದಲಾಗಿ ಜೀವಾತ್ಮ. ಆ ದಿವ್ಯ ಚೈತನ್ಯವನ್ನು ನಾವು ಅರ್ಥಮಾಡಿಕೊಳ್ಳಲು ಬಹಳ ಪರಿಶ್ರಮ ಪಡಬೇಕಾಗುತ್ತದೆ. ಸಾಮಾನ್ಯ ದೃಷ್ಟಿಗೆ ಕಾಣದ ತ್ರೀಡೀ ಸಿನಿಮಾಗಳಲ್ಲಿ ವಿಶಿಷ್ಟ ಕನ್ನಡಕಗಳಿಂದ ತ್ರೀಡೀ ಅನುಭವ ಪಡೆಯುವುದು ಸಾಬೀತಾಗಿದೆಯಲ್ಲವೇ? ಅದನ್ನೇ ಸ್ವಲ್ಪ ಭಗವದ್ಗೀತೆಗೆ ಹೋಲಿಸಿದಾಗ ಅಲ್ಲಿ ಅರ್ಜುನನಿಗೆ ಶ್ರೀಕೃಷ್ಣ ದಿವ್ಯಚಕ್ಷುವನ್ನು ಕರುಣಿಸುವುದು ತಿಳಿದುಬರುತ್ತದೆ. ಪ್ರಾಯಶಃ ನಮ್ಮ ಮಾನವ ಶಕ್ತಿಗೆ ಸಹಜಗತಿಯಲ್ಲಿ ಅಂತಹ ದಿವ್ಯ ಚಕ್ಷುಗಳನ್ನು ಪಡೆಯುವ ಯೋಗ್ಯತೆ ಇಲ್ಲವಾಗಿದೆ; ಎಂದಮಾತ್ರಕ್ಕೆ ಕೃಷ್ಣ ದಿವ್ಯಚಕ್ಷುವನ್ನು ನೀಡಿದ್ದು ಬರೇ ಕಥೆ ಎಂಬ ವಾದ ಅಸಮರ್ಪಕವಾಗುತ್ತದೆ. ನವ ನಾಗರಿಕತೆಯೆಂಬ ಧಾವಂತದ ಬದುಕಿನ ಚಣಗಳಲ್ಲಿ ನಮ್ಮವರು ನಮಗೆ ಹೇಳಿಕೊಟ್ಟ ಮೌಲ್ಯಗಳನ್ನೇ ನಾವು ಪ್ರಶ್ನಿಸುವಂತಾದೆವು.

ಹೀಗೊಂದು ಉದಾಹರಣೆ ತೆಗೆದುಕೊಳ್ಳೋಣ: ಹುಟ್ಟಿದಾಗ ಶಿಶುವಿಗೆ ಅಮ್ಮ-ಅಪ್ಪನ ಸ್ಪಷ್ಟ ಗುರುತು ಸಿಗುವುದಿಲ್ಲ. ಅದಕ್ಕೆ ಅಳುವುದೊಂದೇ ಗೊತ್ತು! ಹಸಿವಾದರೆ ಅಥವಾ ಏನೋ ತೊಂದರೆಯಾದರೆ ಅಳುವುದು. ಅಳುವಾಗ ಯಾರೋ ಎತ್ತಿದರೆ ಸ್ವಲ್ಪ ಸುಮ್ಮನಾಗುವ ಶಿಶು ಅಮ್ಮನ ಎದೆಹಾಲು ಕುಡಿದು ಹಸಿವು ನೀಗಿದಾಗ ಉಲ್ಲಾಸದಿಂದಿರುತ್ತದೆ. ನಿತ್ಯವೂ ಕೆಲವುಸರ್ತಿ ಹಾಲು ಕುಡಿಯುತ್ತಾ ಕುಡಿಯುತ್ತಾ ತನ್ನನ್ನು ಆರೈಕೆ ಮಾಡುತ್ತಿರುವ ವ್ಯಕ್ತಿಯೊಡನೆ ಆತ್ಮೀಯ ಬಾಂಧವ್ಯವನ್ನು ಶಿಶು ಪಡೆದುಕೊಳ್ಳುತ್ತದೆ! ಇದು ಹೊರನೋಟಕ್ಕೆ ಕಾಣುವ ದೃಶ್ಯ. ಅಪ್ಪ-ಅಮ್ಮನಿಂದ ಹೊರಡುವ ಆತ್ಮೀಯ ತರಂಗಗಳಿಂದ ಮಗು ಅಪ್ಪ-ಅಮ್ಮನನ್ನು ನಿಧಾನವಾಗಿ ಗುರುತಿಸುತ್ತದೆ ಎಂಬುದು ಭಾರತೀಯ ಸಂಸ್ಕೃತಿಯ ಮೂಲದ ಸಂದೇಶ. ಮಗು ಬೆಳೆದು ದೊಡ್ಡದಾದ ಮೇಲೆ, ಮನೆಯಲ್ಲಿ ಹಿರಿಯರು ಅಥವಾ ಇತರ ಸಂಬಂಧಿಕರು "ನೋಡು ನಿನ್ನ ಅಪ್ಪ-ಅಮ್ಮ" ಎಂದು ಹೇಳಿದರೆ, ವೈಜ್ಞಾನಿಕವಾಗಿ ತರ್ಕಿಸುತ್ತಾ ಅಪ್ಪ-ಅಮ್ಮನನ್ನೇ ಅಲ್ಲಗಳೆಯಬಹುದು. [ಇತ್ತೀಚೆಗೆ ಬಂದ ಡಿ.ಎನ್.ಏ ಪರೀಕ್ಷೆಯಿಂದ ಮಾತ್ರ ಮಗುವಿನ ಅಪ್ಪ-ಅಮ್ಮನನ್ನು ಗುರುತಿಸಲು ಮಗುವಿಗೆ ಸಾಧ್ಯವಿದೆ.] ಹೇಗೆ ಆಳವಾದ ಅಧ್ಯಯನದಿಂದ ಡಿ.ಎನ್.ಏ ಎಂಬ ಪರೀಕ್ಷಾ ಪದ್ಧತಿ ಲಭ್ಯವಾಯ್ತೋ ಅದೇ ತೆರನಾಗಿ ನಾವು ನಮ್ಮದಾದ ಭಾರತೀಯ ಮೌಲ್ಯಗಳ ಪರೀಕ್ಷೆಗೆ ಆಳವಾದ ಅಧ್ಯಯನ ನಡೆಸಿಕೊಳ್ಳುವುದು ಒಳಿತು! ಇಲ್ಲದಿದ್ದರೆ ರಾಮ-ಕೃಷ್ಣ-ಭಗೀರಥ ಇವೆಲ್ಲಾ ಕೇವಲ ಕಪೋಲಕಲ್ಪಿತ ಕಥೆಗಳ ಪಾತ್ರಗಳಾಗಿ ಕಾಣುತ್ತವೆ.

ಇಡೀ ಈ ಭೂಮಿಯಲ್ಲಿ ಘಟಿಸುವ ನೈಸರ್ಗಿಕ ವಿಕೋಪಗಳನ್ನು ಯಾವುದೇ ವಿಜ್ಞಾನವೂ ಇದುವರೆಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ; ಇದಕ್ಕೆ ನಿನ್ನೆ ಘಟಿಸಿದ ಭೂಕಂಪವೂ ಸಾಕ್ಷಿ. ಸುನಾಮಿ ಬಂದರೆ ಸಾಗರ ತೀರದಿಂದ ಎತ್ತರಕ್ಕೆ ಓಡಬಹುದೇ ಹೊರತು ಸುನಾಮಿ ಬಾರದಂತೇ ತಡೆಯಲು ನಮ್ಮಿಂದ ಸದ್ಯಕ್ಕಂತೂ ಸಾಧ್ಯವಿಲ್ಲ! ಸೃಷ್ಟಿ-ಸ್ಥಿತಿ-ವಿನಾಶ ಈ ಮೂರನ್ನೂ ನಿಸರ್ಗ ತನ್ನ ಕೈಯ್ಯಲ್ಲೇ ಇಟ್ಟುಕೊಂಡಿದೆ; ಕಾಣದ ಆ ನೈಸರ್ಗಿಕ ಜಗನ್ನಿಯಾಮಕ ಶಕ್ತಿಯೇ ದೇವರು ಎಂಬುದಾಗಿ ನಮ್ಮಲ್ಲಿನ ಪ್ರಾಜ್ಞರು ವೇದವಿಜ್ಞಾನದಿಂದ ತಿಳಿಸಿಕೊಟ್ಟಿದ್ದಾರೆ.

ಮರಳಿ ಮುಖ್ಯ ವಿಷಯಕ್ಕೆ ಬರೋಣ: ಹಣಗಳಿಕೆಗೆ ಹಲವಾರು ಮಾರ್ಗಗಳಿವೆ. ಈ ಜಗತ್ತಿನಲ್ಲಿ ಇಂದಿನ ದಿನಮಾನದಲ್ಲಿ ಅಡ್ಡದಾರಿಯಲ್ಲಿ ಅಥವಾ ಕೆಟ್ಟಮಾರ್ಗಗಳಲ್ಲಿ ಗಳಿಕೆಯಾಗುವಷ್ಟು ಒಳ್ಳೆಯ ಮಾರ್ಗಗಳಿಂದ ಕಷ್ಟಸಾಧ್ಯ. ಒಳ್ಳೆಯ ಮಾರ್ಗಗಳಲ್ಲಿ ಆದಾಯ ಬರಲಿಕ್ಕೆ ಅಡೆತಡೆಗಳು ಬಹಳ, ಅದೇ ಅಡ್ಡಮಾರ್ಗಗಳಿಂದ ಬರಬಹುದಾದ ಆದಾಯ ಹೇರಳ! ಹಣವನ್ನೇ ಎಲ್ಲದಕ್ಕೂ ವ್ಯವಹಾರ ಮಾಧ್ಯಮವನ್ನಾಗಿ ಬಳಸಿಕೊಂಡಮೇಲೆ ಹಣಗಳಿಕೆಯ ಆಸೆ ಅತಿಯಾಗಿಹೋಯ್ತು. ಹಣವಿಲ್ಲದಿದ್ದರೆ ಏನೂ ನಡೆಯದೆಂಬ ಹೇಳಿಕೆ ಪ್ರಚುರಗೊಂಡು ಹಣಕ್ಕಾಗಿ ಹೆಣವೂ ಬಾಯ್ದೆರೆಯುವ ಸನ್ನಿವೇಶಗಳು ಸೃಷ್ಟಿಯಾದವು. ಮುಂದುವರಿದ ಜಗತ್ತಿನಲ್ಲಿ, ಆಧುನಿಕತೆಯ ಗಳಿಕೆಯ ಮಾರ್ಗವಾಗಿ ಮಲ್ಯ ಕುಟುಂಬ ಹೆಂಡದ ಉದ್ಯಮವನ್ನು ಆಯ್ದುಕೊಂಡಿತು. ಯಾವಾಗ ಹೆಂಡಕ್ಕೆ ರಾಜಮುದ್ರೆ ಬಿದ್ದು ಅದು ಅಧಿಕೃತವಾಗಿ ಮಾರಾಟಮಾಡಲ್ಪಟ್ಟಿತೋ ಆಗ ಅದರ ಸ್ಥಾನ ಬಹಳ ಮೇಲಕ್ಕ್ರ್‍ಏರಿತು ಮಾತ್ರವಲ್ಲ ಹೆಂಡ ಇಳಿಸುವ ಮಂದಿ ದೊರೆಗಳಾಗಿ ಬೆಳೆದರು! ಬಡಕಾರ್ಮಿಕ, ಕೆಳಮಧ್ಯಮ, ಮಧ್ಯಮಧ್ಯಮ ವರ್ಗಗಳ, ಗೃಹಿಣಿಯರ ಅಳಲು ಹೆಂಡದ ದೊರೆಗಳ ಸುಪ್ಪತ್ತಿಗೆಗೆ ಕೇಳಿಸಲೇ ಇಲ್ಲ! ಆದಾಯ ಸಾಲದೇ ಮಗಳ ಮದುವೆ ಮಾಡಲಾಗದ್ದಕ್ಕೋ, ಮನೆಕಟ್ಟಲಾಗದ್ದಕ್ಕೋ, ಪಡೆದಸಾಲ ಮರಳಿಸಲಾಗದ್ದಕ್ಕೋ ಆಯಾಸವಾಗಿ ತಲೆಯಮೇಲೆ ಕೈಹೊತ್ತ ಜನ ನೆಮ್ಮದಿಯನ್ನರಸುತ್ತಾ ನಡೆದಾಗ, ಹೆಂಡದ ದೊರೆಗಳು "ಕುಡಿದು ನೆಮ್ಮದಿ ಗಳಿಸು" ಎಂದು ಕೈಬೀಸಿ ಕರೆದರು. ಕುಡಿದ ಕೆಲಘಳಿಗೆ ಲೋಕವನ್ನೇ ಮರೆಯುವ ಹಂಬಲದಿಂದ ಆರಂಭಿಸಿದ ಕುಡಿತ ಕ್ರಮೇಣ ಇಡೀ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನೇ ಬದಲುಮಾಡಿತು; ಬೀದಿಪಾಲುಮಾಡಿತು. ನಿಯಂತ್ರಣವಿಲ್ಲದೇ ಬೆಳೆದ ಹೆಂಡದ ದೊರೆಗಳಿಗೆ ಸಾಮಾಜಿಕ ಕಳಕಳಿ ಎಂಬುದು ಹಾಸ್ಯಾಸ್ಪದ ವಿಷಯವಾಗಿ ಕಂಡು ಫ್ರೆಂಚ್ ಗಡ್ಡದ ನಡುವಿನಲ್ಲೇ ಅವರು ಮುಸಿಮುಸಿ ನಕ್ಕರು.

ಕುಡಿಯುವವರಿಗೆ ಮಾಂಸವೂ ಜಾಸ್ತಿ ಬೇಕು. ಕುಡಿತವೇ ಹಾಗೆ ಎನ್ನುವವರೂ ಇದ್ದಾರೆ. ಗುಂಡು-ತುಂಡು ಇಲ್ಲದಿದ್ದರೆ ಆತ ಗಂಡೇ ಅಲ್ಲ ಎಂದುಕೊಳ್ಳುವ ಅದೆಷ್ಟೋ ಮಂದಿ ಅವುಗಳಾಚೆಗಿನ ಲೋಕದ ವ್ಯಾಪ್ತಿಯನ್ನು ಕಾಣುವುದೇ ಇಲ್ಲ. ಒಳಗೆ ಹೋದ ಗುಂಡು ಹೊರಗಿನ ಗುಂಡನ್ನೂ ಜೊತೆಗೆ ಮಾಂಸವನ್ನೂ ಕರೆವುದಂತೆ. ನೆಶೆಯೇರಿ ಮಗ್ಗುಲಾಗುವಾಗ [ಅದು ತಿಪ್ಪೆಯಲ್ಲೋ ರಸ್ತೆಯಲ್ಲೋ ಚರಂಡಿಯಲ್ಲೋ ಇನ್ನೆಲ್ಲೋ: ಅದಕ್ಕೆ ಇಂಥದ್ದೇ ಜಾಗವೆಂಬುದಿಲ್ಲ] ಮಾನಿನಿಯ ನೆನಪಾಗುವುದಂತೆ! ಸ್ವಲ್ಪ ಮತ್ತಿಳಿದು ಎದ್ದವರು ಸೀದಾ ಬೆಲೆವೆಣ್ಣುಗಳನ್ನರಸಿ ಹೋಗುವ ಸಂದರ್ಭವೂ ಇದೆಯೆಂದು ಕೇಳಿದ್ದೇನೆ. ನಮ್ಮ ಜೀವನದಲ್ಲಿ ಅದೆಷ್ಟೋ ಹಕ್ಕುಗಳಿಗೆ ’ಜನ್ಮಸಿದ್ಧ’ ಎಂದು ಬೋರ್ಡು ಹಾಕುವ ನಾವು, ಭಕ್ಷಣೆಗಾಗಿ ಜೀವಿಗಳ ಹತ್ಯೆಮಾಡುವುದು ಅವುಗಳ ಜನ್ಮಸಿದ್ಧ ಬದುಕುವ ಹಕ್ಕನ್ನು ಕಸಿದಂತೇ ಆಗುವುದಿಲ್ಲವೇ? ಇನ್ನೊಂದನ್ನು ಹೇಳಬೇಕು: ಅಲ್ಲಿಲ್ಲಿ ಜಾತ್ರೆ, ಮಾರಿದೇವಸ್ಥಾನಗಳಲ್ಲಿ ಬಲಿಹಾಕುವ ಪ್ರಾಣಿಗಳ ಬಗ್ಗೆ ಮಾತ್ರ ದಯೆತೋರುವ ಔದಾರ್ಯ ಮೆರೆಯುವ ನಮ್ಮ ಮಾಧ್ಯಮ ಬಂಧುಗಳಲ್ಲಿ ಬಹುತೇಕರಿಗೆ ನಿತ್ಯ ಹಗಲಿರುಳೂ ಊಟಕ್ಕೆ ಚಿಕನ್, ಮಟನ್ ಗಳೇ ಬೇಕು! ತಿನ್ನುತ್ತಿರುವ ಅಂತಹ ಆಹಾರಗಳ ಹಿಂದೆ ನಡೆಯುವ ಕ್ರೌರ್ಯಗಳನ್ನು ಅವರು ಮರೆಯುತ್ತಾರಲ್ಲಾ ಇದಕ್ಕೇನೆನ್ನಬೇಕು? ಭಾನುವಾರ ಬಂತೆಂದರೆ ನಗರಗಳಲ್ಲಿ ಅಸಂಖ್ಯ ಕುರಿ-ಕೋಳಿಗಳ ಹನನವಾಗುತ್ತದೆ. ಸರ್ವೇಸಾಮಾನ್ಯವಾಗಿರುವ ಈ ಕೆಲಸಕ್ಕೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ! ಯಾಕೆಂದರೆ ಅಧಿಕ ಮಸಾಲೆಯನ್ನು ಹಾಕಿ ತಯಾರಿಸಿದ ತುಂಡಿನ ರುಚಿ ಈ ಎಲ್ಲವನ್ನೂ ಮರೆಸಿಬಿಡುತ್ತದೇನೋ.

ಜೀವಿಗಳ ಹನನವಾಗುವಾಗ ಅವುಗಳ ಸಾವಿನ ಆ ಕ್ಷಣದಲ್ಲಿ ವಿಶೇಷ ರಾಸಾಯನಿಕವೊಂದು ಬಿಡುಗಡೆಯಾಗಿ ಅವುಗಳ ದೇಹವ್ಯಾಪಿ ಹಬ್ಬುವುದಂತೆ. ಇದು ತಿನ್ನುವ ಜನರಿಗೆ ಲೋ ಪಾಯ್ಸನ್ ಎನ್ನುತ್ತಾರೆ ಕೆಲವು ತಜ್ಞರು. ಮಾಂಸಾಹಾರ ತಯಾರಾದ ನಂತರ ರಕ್ಷಿಸುವಾಗ ಅಥವಾ ಹಸಿಮಾಂಸವನ್ನು ಕಾಪಿಡುವಾಗ ಪರಿಸರದಲ್ಲಿ ಮೀಥೇನ್ ಅನಿಲ ಬಿಡುಗಡೆಯಾಗುವುದಂತೆ. ಅದು ಪರಿಸರದ ಉಷ್ಣಾಂಶ ಹೆಚ್ಚಿಸಲು ಕಾರಣವಾಗುತ್ತದೆ ಎಂಬುದನ್ನು ಕೆಲವು ಪರಿಸರವಾದಿಗಳು ತಿಳಿಸುತ್ತಾರೆ. ಈರುಳ್ಳಿ-ಬೆಳ್ಳುಳ್ಳಿಗಳ ವಾಸನೆ ನಮ್ಮನ್ನು ಎಲ್ಲಿದ್ದರೂ ಸೆಳೆಯುತ್ತದಲ್ಲವೇ? ಆಹಾರದಲ್ಲಿ ಅವುಗಳ ಉಪಯೋಗದಿಂದ ಆಹಾರದ ಅಭಿರುಚಿ ಮತ್ತು ವಿವಿಧ ರೀತಿಯ ಆಹಾರಗಳ ವ್ಯಾಮೋಹ ಹೆಚ್ಚುತ್ತದೆ; ಜಿಹ್ವಾಚಾಪಲ್ಯ ಅತಿಯಾಗುತ್ತದೆ. ತುಂಡು ತಿಂದು ಬೆಳೆದ ವ್ಯಕ್ತಿ ತುಂಡಿಲ್ಲದೇ ಬಹುಕಾಲ ಹಾಗೇ ಕಳೆಯುವುದು ಕಷ್ಟಸಾಧ್ಯ. ಲೌಕಿಕದೆಡೆಗೆ ಅಧಿಕವಾಗಿ ಸೆಳೆಯುವ ಈ ಆಹಾರಕ್ರಮದಿಂದ, ಕಣ್ಣಿಗೆ ಕಾಣುವ ಜಗದಲ್ಲಿ ನಾವು ಮತ್ತಷ್ಟು ಹೆಚ್ಚಿನ ಮಟ್ಟದ ವ್ಯಾಮೋಹವನ್ನೂ ಬಾಂಧವ್ಯವನ್ನೂ ಹೊಂದಿ ಇದಕ್ಕೂ ಮೀರಿದ ಚಿಂತನೆಗೆ ನಾವು ತೊಡಗಿಕೊಳ್ಳಲು ಸಾಧ್ಯವಾಗುವುದೇ ಇಲ್ಲ! ಅದಕ್ಕಾಗಿ ಮಾಂಸಾಹಾರ ಮಾನವನಿಗೆ ಒಳಿತಲ್ಲ ಎಂಬ ವಾದವಿದೆ. "ನಮ್ಮ ತಿನ್ನುವ ಆಹಾರಕ್ಕೆ ಕಲ್ಲುಹಾಕುವವರು ನೀವು ಯಾರು? ನಾವು ನಮಗೆ ಬೇಕಾದ್ದನ್ನು ತಿನ್ನುತ್ತೇವೆ, ಮಾಂಸಾಹಾರ ನಮ್ಮ ಜನ್ಮಸಿದ್ಧಹಕ್ಕು" ಎಂದು ವಾದಿಸುವ ಜನ ತುಂಬಾ ಇದ್ದಾರೆ. ಒಳಿತನ್ನು ತಿಳಿಸಬಹುದೇ ಹೊರತು ಹೇರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಕಥೆಯನ್ನು ಹೇಳುತ್ತೇನೆ :

ಬಹುದೊಡ್ಡ ಪೂಜಾರಿಯ ಮನೆಯ ಎದುರಿನ ಮನೆಯಲ್ಲಿ ಪ್ರಸಿದ್ಧ ವೇಶ್ಯೆಯೊಬ್ಬಳು ವಾಸವಿದ್ದಳಂತೆ. ಪ್ರತಿನಿತ್ಯ ಹೊತ್ತಲ್ಲದ ಹೊತ್ತಿನಲ್ಲಿ ಗಿರಾಕಿಗಳು ಬರುತ್ತಲೇ ಇರುತ್ತಿದ್ದರು. ಮೈಮಾರಿ ಗಳಿಸಿದ ಹಣದಿಂದ ಭವ್ಯ ಬಂಗಲೆಯನ್ನೂ ಕಟ್ಟಿಸಿದ್ದಳು, ಬಂಗಲೆಯ ತುಂಬಾ ವೈಭವೋಪೇತ ಪೀಠೋಪಕರಣಗಳನ್ನೂ ಮಾಡಿಸಿಹಾಕಿದ್ದಳು. ಪೂಜಾರಿ ಪೂಜೆ ಮಾಡುತ್ತಾ ಶ್ರೀಮಂತಿಕೆಗಾಗಿ ಪ್ರಾರ್ಥನೆ ಮಾಡುತ್ತಲೇ ಇದ್ದರೂ ಆತ ಬಡವನಾಗಿಯೇ ಇದ್ದ; ನಿತ್ಯವೂ ವೇಶ್ಯೆಯ ಜೀವನವನ್ನು ವೈಭೋಗವನ್ನೂ ನೋಡುತ್ತಿದ್ದ. ಇಬ್ಬರೂ ಮುದುಕಾಗಿ ಸತ್ತರು. ಯಮ ತನ್ನ ನಿಯಮವಾಗಿ ಅವರನ್ನು ವಿಚಾರಣೆಗೊಳಪಡಿಸಿದ. ವೇಶ್ಯೆಗೆ ಸ್ವರ್ಗ ಮತ್ತು ಪೂಜಾರಿಗೆ ನರಕವೆಂದು ಘೋಷಿಸಿದ! ಕಾರಣ ಕೇಳಿದಾಗ ಯಮ ವಿವರಿಸಿದ: "ಪೂಜಾರೀ, ವೇಶ್ಯೆ ತನಗೆ ಯಾರೂ ಗತಿಯಿಲ್ಲದಾಗ ತನ್ನ ದೇಹವನ್ನೇ ಮಾರಿ ಬದುಕಿದಳಾದರೂ ಹೆಚ್ಚಿನ ಹೊತ್ತು ಆಕೆ ಭಗವಂತನ ನೆನಪಿನಲ್ಲಿ ಕಳೆಯುತ್ತಿದ್ದಳು, ಗಿರಾಕಿಗಳ ಜೊತೆ ಮಲಗಿದ್ದಾಗಲೂ ಆಕೆಗೆ ದೈವಧ್ಯಾನ ಇಷ್ಟವಾಗುತ್ತಿತ್ತು. ನೀನಾದರೋ ದೇವರಮುಂದೆ ಕುಳಿತಾಗಲೂ ಈ ವೇಶ್ಯೆಯನ್ನೇ ನೆನೆಯತೊಡಗಿದ್ದೆ. ಆಕೆಯ ಮಾರ್ಗ ಸರಿಯಲ್ಲ ಎಂಬುದನ್ನೇ ಲೆಕ್ಕಹಾಕುತ್ತಾ ಪರೋಕ್ಷ ಅಲ್ಲಿ ಬರಹೋಗುವವರನ್ನೂ ಗಳಿಕೆಯನ್ನೂ ಲೆಕ್ಕಹಾಕುತ್ತಾ ನಿನ್ನ ಸಮಯವನ್ನೆಲ್ಲಾ ಅದರಲ್ಲೇ ಕಳೆದೆ. ಯಾಂತ್ರಿಕವಾಗಿ ದೇವರಪೂಜೆಯನ್ನು ನಡೆಸಿದ್ದರಿಂದ ನಿನ್ನ ಅಕೌಂಟಿನಲ್ಲಿ ಪಾಪ ಸಂಚಯವಾಗಿದೆ. ಹೀಗಾಗಿ ನಿನ್ನನ್ನು ನರಕಕ್ಕೆ ಕಳಿಸಬೇಕಾಗಿದೆ" ಎಂದನಂತೆ.

ಮೇಲಿನ ಕಥೆ ಅರ್ಥವಾಗಿರಬೇಕಲ್ಲ? ಅದರಂತೇ "ಛೇ, ನೀವು ಮಾಂಸ ತಿನ್ನುತ್ತೀರಿ..ಅದು ಸರಿಯಲ್ಲ" ಎಂದು ಹೇಳುವ ಬಗ್ಗೆ ನಾನಂತೂ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಒಳಿತಲ್ಲ ಎಂದಷ್ಟೇ ಹೇಳುವುದು ಮಿತ್ರನಾಗಿ ನನ್ನ ಕರ್ತವ್ಯ ಎಂದು ಭಾವಿಸಿ ನನ್ನ ಸಲಹೆ ಇತ್ತಿದ್ದೇನೆ. ಮಾಂಸಾಹಾರ ಸಲ್ಲ ಎಂದು ನಿಮಗೇ ಸಹಜವಾಗಿ ಅನಿಸುವವರೆಗೂ ಅದು ನಡೆಯುತ್ತಲೇ ಇರುತ್ತದೆ. ಒತ್ತಾಯಕ್ಕೆ ಅದನ್ನು ತ್ಯಜಿಸಿದರೂ ಕುಳಿತಲ್ಲೇ ಅದರ ಧ್ಯಾನಮಾಡುತ್ತಾ ಇದ್ದರೆ ಪುನಃ ಅದನ್ನು ತಿಂದು ಉಂಟಾಗುವ ಮನೋಸ್ಥಿತಿಯೇ ಒದಗುತ್ತದೆ! ಅದಕ್ಕೇ ||ಮನ ಏವ ಮನುಷ್ಯಾಣಾಂ || ಎಂದಿದ್ದಾರೆ. ನಮ್ಮ ಮನಸ್ಸಿನಂತೇ ನಮ್ಮ ನಡೆ; ಅದಕ್ಕೆ ತಕ್ಕಂತೇ ಫಲಪ್ರಾಪ್ತಿ! ಈ ಲೋಕದಲ್ಲಿ ಬೇಡದ ವಿದ್ಯೆಗಳು ಬೇಗನೇ ಹತ್ತುತ್ತವೆ. ಅದೇ, ಬೇಕಾದ ವಿದ್ಯೆಗಳು ಬೇಕೆಂದರೂ ಬರುವುದು ಕಡಿಮೆ. ಆ ಬೇಕಾದ ವಿದ್ಯೆಗಳನ್ನು ಪಡೆಯುವಾಗ ನಮ್ಮ ಕೆಲವು ರೂಢಮೂಲ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಆಗ ’ತ್ಯಾಗ’ ಹುಟ್ಟಿಕೊಳ್ಳುತ್ತದೆ. ಮನುಷ್ಯ ತ್ಯಾಗದಿಂದಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ತ್ಯಾಗಿಯಲ್ಲದವ ಭೋಗಿಯಾಗಿರುತ್ತಾನೆ. ಸದ್ಯಕ್ಕೆ ನಾವು ತ್ಯಾಗ-ಭೋಗಗಳ ಸಮನ್ವಯದಲ್ಲಿ ಇರಲು ಪ್ರಯತ್ನಿಸಿದರೂ ಭೋಗದ ತೂಕವೇ ಜಾಸ್ತಿಯಾಗಿದೆ. ಭೋಗ ಜಾಸ್ತಿಯಾದಷ್ಟೂ ಆಸೆ ಜಾಸ್ತಿಯಾಗುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂಬುದು ಬುದ್ಧನ ಹೇಳಿಕೆಯಾಗಿದೆ. ಆಸೆಯಾದಾಗ ಪಡೆಯುವ ಬಯಕೆಯಾಗುತ್ತದೆ. ಬಯಕೆ ನೆರವೇರದಿದ್ದಾಗ ದುಃಖವಾಗುತ್ತದೆ; ಖೇದವಾಗುತ್ತದೆ.

ಬೆಲೆವೆಣ್ಣುಗಳ ಹೇರಳ ಆಸ್ತಿ ಎಲ್ಲರ ಕಣ್ಣನ್ನೂ ಕೋರೈಸುತ್ತಿದೆ. ಪದ್ಮಾಲಕ್ಷ್ಮಿಯಿರಬಹುದು, ಸನ್ನಿ ಲಿಯಾನ್ ಇರಬಹುದು-- ಇಂಥವರು ನಾಗರಿಕ ಸಮಾಜದಲ್ಲಿ ನೂರಾರು ಶ್ರೀಂಮತರಿಗೆ ತಮ್ಮ ದೇಹವನ್ನು ಮಾರಿಕೊಳ್ಳುತ್ತಾ, ತಮ್ಮ ಕಾಮಕೇಳಿಯ ನೀಲೀಚಿತ್ರಗಳನ್ನೂ ಮಾರುತ್ತಾ ಯಥೇಚ್ಛ ಹಣ-ಒಡವೆಗಳನ್ನೋ ಸ್ಥಿರಾಸ್ತಿಗಳನ್ನೋ ಪಡೆದುಕೊಳ್ಳುತ್ತಾರೆ. ಮಾನಸಿಕ ನೆಮ್ಮದಿಯನ್ನಾಗಲೀ ಉನ್ನತ ಸಂಸ್ಕಾರಗಳನ್ನಾಗಲೀ ಅವರು ಗಳಿಸುವುದೂ ಇಲ್ಲ; ಕೊಡವುದೂ ಇಲ್ಲ. ಹೆಣ್ಣಿಗೆ ಶೀಲ ಮುಖ್ಯ ಎನ್ನುತ್ತೇವಲ್ಲ, ದೇಹಸುಖವನ್ನು ಒಬ್ಬರಿಗಿಂತ ಹೆಚ್ಚಿನ ಜನರಿಗೆ ಹಂಚಿಕೊಂಡಾಗ ಅಲ್ಲಿ ಕೌಟುಂಬಿಕ ನೆಲೆಗಟ್ಟು ಮರೆಯಾಗುತ್ತದೆ; ಹೆಣ್ಣಿನ ಸಹಜ ಶೀಲ ನಶಿಸಿಹೋಗುತ್ತದೆ. [ಈ ವಿಷಯದಲ್ಲಿ ವಿಧವೆಯ ಪುನರ್ವಿವಾಹಕ್ಕೊಂದು ಕ್ಷಮಾಪಣೆ ನೀಡಬಹುದಷ್ಟೇ.] ಅಲ್ಲೇನಿದ್ದರೂ ಕಾಸಿನ ವ್ಯವಹಾರ. ಇವತ್ತು ಹೆಚ್ಚಿನ ಕಾಸಿದ್ದವನ ಜೊತೆ, ನಾಳೆ ಅವನ ಖಜಾನೆ ಖಾಲಿಯಾದಾಗ ಇನ್ನೊಬ್ಬ ಸಿರಿವಂತನ ಜೊತೆ. ಜೀವನದ ಕಷ್ಟ-ಸುಖಗಳಲ್ಲಿ ಅವರೆಂದೂ ಪಾಲುದಾರರಾಗುವುದಿಲ್ಲ. ಅಂಗಡಿಗಳಲ್ಲಿ ಕಾಸುಕೊಟ್ಟು ವಸ್ತುಗಳನ್ನು ಖರೀದಿಸಿದಂತೇ ಬೆಲೆವೆಣ್ಣುಗಳಿಗೆ ಕಾಸುಕೊಟ್ಟು ಕ್ಷಣಿಕ ಸುಖವನ್ನಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಹಲವುಜನರ ಸಂಪರ್ಕದಿಂದ ಸಹಜವಾಗಿ ರೋಗಗ್ರಸ್ತವಾಗುವ, ವೇಶ್ಯೆಯರ ಗುಹ್ಯಾಂಗಗಳ ಸಂಪರ್ಕದಿಂದ ರೋಗಗಳು ಹಬ್ಬುವುದಂತೂ ನಿಶ್ಚಿತವಾಗಿದೆ. ಅವರಾಡುವ ಮತ್ತಿನಾಟಗಳಿಗೆ ಮನಸೋತ ಜನ ಯಾವುದೋ ಸುಖದ ಹುಡುಕಾಟದಲ್ಲಿ ಬೆಲೆವೆಣ್ಣುಗಳನ್ನು ಬಯಸುತ್ತಾರೆ. ಮಾಧ್ಯಮಗಳೂ ಅಂತಹ ಮಹಿಳಾಮಣಿಗಳನ್ನೇ ಹೊಗಳುವುದರಿಂದಲೋ, ಗುರುತಿಸುವುದರಿಂದಲೋ ವೇಶ್ಯೆಯರು ಬೇಡಿಕೆಯನ್ನು ಜಾಸ್ತಿಮಾಡಿಕೊಂಡು ಅಂತರ್ರಾಷ್ಟ್ರೀಯ ಮಟ್ಟದವರಾಗಲೂ ಬಹುದು! ಅಧುನಿಕ ವೇಶ್ಯೆಯರಿಗೆ ಸಂವಹಿಸಲು ಸುಲಭದ ಮಾರ್ಗಗಳಾಗಿ ಸಾಮಾಜಿಕ ಜಾಲತಾಣಗಳಿವೆ! ವೇಶ್ಯೆ ಎಂದಿಗೂ ಒಳಿತನ್ನು ಮಾಡುವುದಿಲ್ಲ ಎಂಬ ಅರಿವು ಇದ್ದರೂ ಕಾಣದ ಸೆಳೆತ, ಗುಂಗು, ಕ್ಷಣಿಕ ಸುಖದ ವ್ಯಾಮೋಹ ಜನರನ್ನು ಅವರೆಡೆಗೆ ಒಡ್ಡಿ, ಮನೆಯ ಧನ-ಕನಕಗಳು ಖಾಲಿಯಾಗುವವರೆಗೂ ಅನೇಕ ಜನ ಬೆಲೆವೆಣ್ಣುಗಳ ಸಹವಾಸದಲ್ಲಿರುತ್ತಾರೆ; ಪಾಪದ ಹೆಂಡಿರು-ಮಕ್ಕಳನ್ನು ಬೀದಿಗೆ ತರುತ್ತಾರೆ.

ವೇಶ್ಯೆಯರಲ್ಲಿ ಹಲವು ಸ್ತರಗಳಿವೆ. ಇವತ್ತಿನ ಜೀವನದಲ್ಲಿ ಪಾಶ್ಚಾತ್ಯ ಶೈಲಿಯ ಲಿವ್-ಇನ್ ಕಾಲಿಟ್ಟಿದೆ.ಇಲ್ಲಿಯೂ ಕೆಲವು ಹೆಣ್ಣುಗಳು ಬೆಲೆವೆಣ್ಣುಗಳ ರೀತಿಯಲ್ಲೇ ಇರುತ್ತಾರೆ. ಬೇಕಾದ ಸುಖವನ್ನು ಬೇಕಷ್ಟು ದಿನ ಪಡೆದುಕೊಂಡು ಆಮೇಲೊಂದು ದಿನ ಪಡೆದಿದ್ದನ್ನೇ ಪಡೆದು ಬೇಸರವಾದಾಗ ಹೊಸದರ ’ಸಂಶೋಧನೆ’ಗೆ ತೊಡಗುವ ಲಿವ್-ಇನ್ ಪಾರ್ಟ್‍ನರ್ಸ್, ಯಾರಾದರೊಬ್ಬರ ’ಹೊಸ ಸಂಶೋಧನೆ’ ಬಹಿರಂಗಗೊಂಡಾಗ ಬೇರಾಗುತ್ತಾರೆ. ನಂತರ ಮತ್ತೊಂದು ಹೊಸ ಲಿವ್-ಇನ್ ! ಹೀಗೇ ಅದೆಷ್ಟು ಲಿವ್-ಇನ್ ನಡೆಯುತ್ತದೋ ದೇವರೇ ಬಲ್ಲ. ಸ್ವೇಚ್ಛೆಗೆ ಇಲ್ಲಿ ಕಡಿವಾಣವಿರುವುದಿಲ್ಲ; ಯಾರೂ ಹೇಳಿಕೇಳಿ ಮಾಡುವವರಿರುವುದಿಲ್ಲ. ಸಮಾಜದ ಯಾರಿಂದಲೂ ಇವರು ನಿಯಂತ್ರಿತರಲ್ಲ. ಅಕಸ್ಮಾತ್ ಮಕ್ಕಳು ಜನಿಸಿದರೆ ಆಗಿನ ಗತಿ ಶಿವನೇಬಲ್ಲ! ಮುಪ್ಪಿನ ದಿನಗಳಲ್ಲಿ ಎಲ್ಲೋ ವೃದ್ಧಾಶ್ರಮದ ಮೂಲೆಗಳಲ್ಲಿ ಮಂಚದಮೇಲೆ ಬಿದ್ದುಕೊಂಡು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವ ಜನ ತಯಾರಾಗುತ್ತಾರೆ.

ಮಲ್ಯ ಮದ್ಯ ತಯಾರು ಮಾಡಿದ. ಮದ್ಯದಿಂದ ಮಂದಿ ಹಾಳಾದರು. ಅದೇ ಮಂದಿ ಮದ್ಯದ ಅಮಲಿನಲ್ಲಿ ಮಾಂಸವನ್ನೂ ಮಾನಿನಿಯರನ್ನೂ ಹುಡುಕಿದರು. ಬಿಕನಿ ತೊಟ್ಟ ಮಗಳವಯಸ್ಸಿನ ಮಾನಿನಿಯರ ಜೊತೆ ಮಲ್ಯ ಕ್ಯಾಲೆಂಡರ್ ತಯಾರಿಸಿ ಹಂಚಿದ! ತಾನೂ ಕುಡಿದ, ಶಿಲ್ಪಾಶೆಟ್ಟಿಯಂತಹ ಬಳುಕುಬಳ್ಳಿ ಲಲನೆಯರನೇಕರನ್ನು ಅಪ್ಪಿ ಕುಣಿದ; ಅವರೊಟ್ಟಿಗೆ ದಿನಗಳನ್ನೇ ಕಳೆದ. ಹೆಂಡದ ಗಳಿಕೆಯಲ್ಲಿ ಏನು ಮಾಡಬೇಕೆಂದು ತೋರಲಿಲ್ಲ. ಕುದುರೆ ರೇಸ್ ಆಡಿದ, ಟಿಪ್ಪೂ ಖಡ್ಗವನ್ನೂ ಗಾಂಧೀಜಿಯ ವಾಚನ್ನೂ ದುಬಾರಿ ಬೆಲೆ ತೆತ್ತು ತಂದು ದೇಶೋದ್ಧಾರಮಾಡುವುದಾಗಿ ಸಾರಿದ! ’ಗೌಡಾ’ ಖರೀದಿಸಿದ! ಹಣಬಲದಿಂದ ರಾಜಕೀಯಕ್ಕೆ ಇಳಿದು ಎಮ್.ಎಲ್.ಸಿಯೂ ಆದ. ಜಗತ್ತಿನಲ್ಲಿ ತನ್ನನ್ನು ಬಿಟ್ಟರೆ ಯಾರೂ ಇಲ್ಲವೆನ್ನುವ ದುರಹಂಕಾರ ಬೆಳೆಸಿಕೊಂಡವ ವಿಮಾನಯಾನದ ವ್ಯವಹಾರಕ್ಕೆ ಆರಂಭಿಸಿದ! ಜನ, "ವೈನ್‍ನಲ್ಲಿ ಬಂದಿದ್ದು ಪ್ಲೇನ್ ನಲ್ಲಿ ಹೋಯ್ತು" ಎಂದು ನಕ್ಕರು, ಕಾರ್ಟೂನು ಕ್ಯಾಲೆಂಡರ್ ನಲ್ಲಿ ಬಿಕನಿ ಹುಡುಗಿಯರು ಅವನಿಂದ ತಪ್ಪಿಸಿಕೊಂಡು ಓಡುತ್ತಿರುವಂತೇ ಚಿತ್ರಿಸಿ ನಕ್ಕರು, ಭಿಕ್ಷುಕನ ಪಕ್ಕದಲ್ಲಿ ಇನ್ನೊಬ್ಬ ಭಿಕ್ಷುಕನನ್ನಾಗಿ ಕಾರ್ಟೂನು ಬರೆದು ನಕ್ಕರು, ಮತ್ತಿನ್ನೇನೇರ್‍ನೋ ಮಾಡಿ ನಕ್ಕರು. ಪ್ರತಿನಿತ್ಯ ಕುಡಿದು ಬರುವ ಗಂಡಂದಿರ ನೊಂದ ಪತ್ನಿಯರ ಶಾಪವೋ ಎಂಬಂತೇ ಪ್ಲೇನ್ ಬ್ಯುಸಿನೆಸ್ಸು ನೆಲಕಚ್ಚಿತು! ಅದು ಹಾಗೆ ಮಕಾಡೆ ಮಲಗುವಾಗ ಮಲ್ಯನ ಕೋಟಿನ ಜೇಬುಗಳಲ್ಲಿ ಹೊಲಿದು ರಿಪೇರಿ ಮಾಡಲಾಗದಷ್ಟು ದೊಡ್ಡ ತೂತುಗಳು ಕಾಣಹತ್ತಿದವು !

ಒಂದುಕಾಲಕ್ಕೆ ವಿದೇಶದಲ್ಲಿ ದುಬಾರಿ ಬೆಲೆಯ ಕಾರ್ ನಿಲ್ಲಿಸಲು ಸುರಕ್ಷಿತವಾದ ಜಾಗ ಹುಡುಕುತ್ತಾ, ಅದನ್ನು ಬ್ಯಾಂಕೊಂದರ ಅಡಮಾನವಾಗಿ ಅಲ್ಲಿನ ನೆಲಮಹಡಿಯಲ್ಲಿ ಇಟ್ಟು ಅತಿದುಬಾರಿ ಬಾಡಿಗೆಹಣವನ್ನು ಉಳಿಸಿದ ಮಹಾನ್ ಮೇಧಾವಿ ಎಂಬ ದಂತಕಥೆ ಸೃಷ್ಟಿಸಿದ್ದ ಮಲ್ಯನಲ್ಲಿ ಮುಂದೊಂದು ದಿನ ಕಾರುಗಳೂ ಇಲ್ಲವಾಗಬಹುದು! ಕರಗದ ಸಾಲಕ್ಕೆ ಪರಿಹಾರವಾಗಿ, ನಿರ್ಮಿಸಿದ ಗಗನಚುಂಬೀ ಕಟ್ಟಡಗಳು ಪರಭಾರೆಯಾಗಲೂ ಬಹುದು. ಹಾರುವ ಕುದುರೆಯನ್ನು ನಾನಂತೂ ಕಂಡಿಲ್ಲ, ರೆಕ್ಕೆಗಳಿರುವ ಆ ಕುದುರೆಯ ರೆಕ್ಕೆಮುರಿದ ಸ್ಥಿತಿ ಈಗಲೇ ಕಾಣುತ್ತಿದೆ ಎಂದರೆ ಇದು ಅತಿಶಯೋಕ್ತಿಯಲ್ಲ! ಜ್ಯೋತಿಷ್ಯದವರು, ಹಕ್ಕಿಶಕುನದವರು, ಸಂಖ್ಯಾಶಾಸ್ತ್ರಿಗಳು, ’ವಾಸ್ತು ತಜ್ಞರು’, ಟೆರಟ್ ಕಾರ್ಡ್ ರೀಡರ್ಸ್, ಕಾಫೀ ಕಪ್ ಓದುವವರು, ಕ್ರಿಸ್ಟಲ್ ಬಾಲ್ ರೀಡರ್ಸ್ ಆದಿಯಾಗಿ ಎಲ್ಲರೂ ಮಲ್ಯನ ಗ್ರಹಗತಿಯ ಬಗ್ಗೆ ಮಾಧ್ಯಮಗಳಲ್ಲಿ ಹರಟುವ [ಹರಟುತ್ತಾ ತಾವು ಪುಗಸಟ್ಟೆ ಪ್ರಚಾರ ಪಡೆದುಕೊಳ್ಳುವ] ಸ್ಥಿತಿ ಈಗಲೇ ಉಂಟಾಗಿದೆ! ಯಾವ ಉತ್ತಮ ಸಲಹೆಗಾರನ ಮಾತನ್ನೂ ಕೇಳದ ಮಲ್ಯನ ಈ ಆರ್ಥಿಕ ಸ್ಥಿತಿಗೆ ಅಜಾಗರೂಕತೆಯ ಮತ್ತು ಅಮಲುಗೊಂಡ ಮನಸ್ಸೇ ಕಾರಣವಾಗಿದೆ. ಎಷ್ಟೇ ಚೇತರಿಸಿಕೊಂಡರೂ ಕಳೆದುಹೋದ ಗೌರವ ಖರೀದಿಸಲು ಬರುವಂಥದ್ದಲ್ಲ. ಯಾವ ಸಮಾಜ ಹಣದಿಂದ ಎಲ್ಲರನ್ನೂ ಅಳೆಯುತ್ತದೋ ಅದೇ ಸಮಾಜ ಮಲ್ಯನನ್ನೂ ಅದೇ ಹಣದಿಂದ ಅಳೆಯುತ್ತಲೇ ಇತ್ತು! ಯಾವಾಗ ಮಲ್ಯನ ಕೊಡೆ

ತಿಪ್ಪಾ ಭಟ್ಟರ ಚಂದಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

ಅಂತನ್ನಿಸುವ ಸ್ಥಿತಿಗೆ ಬಂತೋ ಆಗ ಒಬ್ಬೊಬ್ಬರಾಗಿ ಮಲ್ಯನನ್ನು ತೊರೆಯುತ್ತಿದ್ದಾರೆ. ಬಗಲಲ್ಲಿ ಆತುಕೊಂಡು ಮುತ್ತಿಕ್ಕಿ ಗಮನಸೆಳೆಯುತ್ತಿದ್ದ ಗಗನ ಸಖಿಯರಿಗೂ ಮಲ್ಯ ಬೇಡ, ವರ್ಷಗಟ್ಟಲೇ ಉತ್ತಮ ಸಂಬಳ ಪಡೆದ ವಿಮಾನ ಚಾಲಕರಿಗೂ ಮಲ್ಯ ಬೇಡ, ಸಾವಿರ ಕೋಟಿಗಳಲ್ಲಿ ವ್ಯವಹಾರಿಕ ಖಾತೆ ಚಾಲ್ತಿಯಲ್ಲಿಟ್ಟು ನಡೆಸಿ ಬೇಕಷ್ಟು ಲಾಭವುಣಿಸಿದ್ದರೂ ಅಂತಹ ಬ್ಯಾಂಕಿನವರಿಗೂ ಮಲ್ಯ ಬೇಡ! ಕುರುಕ್ಷೇತ್ರದ ಕೌರವನಂತೇ ದುರಭಿಮಾನದಿಂದ ಸೆಣಸಾಡುತ್ತಿರುವ ಮಲ್ಯ ನನ್ನ ದೃಷ್ಟಿಗೆ ಗೋಚರವಾಗುತ್ತಿದ್ದಾನೆ. ’ಮಿಲಿಯನೇರ್ ಮಲ್ಯನ ಮಗನ ಮನದನ್ನೆ’ಯೆಂದು ಗುರುತಿಸಿಕೊಂಡು, ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಪ್ಪನ ಪಕ್ಕದಲ್ಲೇ ಕುಳಿತ ಆ ಮಗನನ್ನು [ಕುಮಾರಿಸ್ವಾಮಿ-ಬಿ.ಎಸ್.ವೈ ಸಮ್ಮಿಶ್ರ ಸರಕಾರ ಆರಂಭಿಸಿದಾಗ, ಟವೆಲ್ ಮುಚ್ಚಿಕೊಂಡು ಯಾರಿಗೂ ಕಾಣದಹಾಗೇ ತೂತುಗಳ ಮುಖಾಂತರ ದೂರದಿಂದ ಅದನ್ನೇ ದೃಷ್ಟಿಸುತ್ತಿದ್ದ ದೇವೇಗೌಡರ್‍ರ್‍ರಂತೇ]ಅಪ್ಪ ಓರೆನೋಟದಲ್ಲಿ ನೋಡುತ್ತಿದ್ದರೂ, ತುಟಿ ಹರಿಯುವಷ್ಟು ಚುಂಬಿಸಿದ ದೀಪಿಕಾ ಈಗ ’ಬೇರೇ ಸಂಸ್ಥೆಯ ವಿಮಾನ’ ಹತ್ತಿ ಬೈಬೈ ಹೇಳಿದ್ದಾಳೆ ! ಇಲ್ಲೇ ನಿಮಗೂ ನಾನು ಬೈಬೈ ಹೇಳದೇ ಇದ್ದರೆ ’ಪುರಾಣ’ ಬಹಳ ಉದ್ದವಾದೀತಲ್ಲವೇ ? ಗತ್ಯಂತರವಿಲ್ಲ, ಸದ್ಯಕ್ಕೆ ಬೈಬೈ !!