ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 8, 2010

'ಕೊಡುವುದೇನು ಕೊಂಬುದೇನು ಸ್ನೇಹ ಪ್ರೀತಿ ಒಲವು .......'



'ಕೊಡುವುದೇನು ಕೊಂಬುದೇನು ಸ್ನೇಹ ಪ್ರೀತಿ ಒಲವು'.......
ಬಾಲ್ಯ

ಸ್ನೇಹಿತರೇ, ನಿಮಗಿದೊ ಮೊದಲಾಗಿ ವಂದನೆ. ನಾವು ಪ್ರಾಥಮಿಕ ಶಾಲೆಯಲ್ಲಿರುವಾಗ ನಮಗೆ ಪಠ್ಯದಲ್ಲಿರದಿದ್ದರೂ ಒಂದು ಪದ್ಯವನ್ನು ಸದಾ ಹಾಡುತ್ತಿದ್ದೆವು. ನಿಂತುಕೊಂಡು ಹಿಂದೆ-ಮುಂದೆ ವಾಲುತ್ತ ನಮ್ಮದೇ ಆದ ಒಂದು ’ಸಾತ್ವಿಕ’ರಾಗದಲ್ಲಿ, ಯಾರಿಗಾದರೂ ’ಪಾಪ’ ಎನ್ನಿಸುವ ರಾಗದಲ್ಲಿ ಹಾಡುತ್ತಿದ್ದೆವು.ಆ ಹಾಡು ’ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲು ತಂಪಿನಲಿ ತಂಗಿರುವೆನು ...’ ಇದರ ಅರ್ಥ ಅಷ್ಟಾಗಿ ನೆಟ್ಟಗೆ ಆಗದಿದ್ದರೂ ಏನೋ ಗೆಳೆತನದ ಬಗ್ಗೆ, ಸ್ನೇಹದ ಬಗ್ಗೆ ಎಂಬುದಷ್ಟೇ ಗೊತ್ತಿತ್ತು. ನಾವು ೭ನೇ ತರಗತಿ ಮುಗಿಸುವಾಗ ಒಂದುದಿನ ’ಬೀಳ್ಕೊಡುವ ಸಮಾರಂಭ’, ಎಲ್ಲಾ ವರ್ಗದ ಶಿಕ್ಷಕರು,ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಸಹಪಾಠಿಗಳು ಎಲ್ಲರೂ ಸೇರಿದ್ದರು. ಊರ ಪ್ರಮುಖರೂ ಒಂದಿಬ್ಬರು ಬಂದಿದ್ದರು. ಹೀಗೇ ಅದೂ ಇದೂ ಭಾಷಣ, ಭಾವಗೀತೆ,ಭಕ್ತಿಗೀತೆ ಇದೆಲ್ಲ ಮುಗೀತು. ಎಲ್ಲರನ್ನೂ ರಂಜಿಸಿದ ನನಗೆ ಅಲ್ಲೀವರೆಗೂ ತಡೆದುಕೊಂಡಿದ್ದ ಗಂಗೆ ಧಾರಾಕಾರವಾಗಿ ಹರಿದೇಬಿಟ್ಟಳು! ಬಹುಶಃ ಅವತ್ತಿನಿಂದ ನಾನು ಭಾವುಕನಾದೆನೋ ಅನ್ನಿಸುತ್ತಿದೆ. ನಾವು ಸ್ನೇಹಿತರಲ್ಲಿ ವಿಭಜನೆಯಾಗಿ ಯಾರ್ಯಾರೋ ಯಾವ ಯಾವುದೋ ಪ್ರೌಢಶಾಲೆಗೆ ಸೇರಿದೆವು. ನಿಜವಾಗಿ ಹೇಳುತ್ತೇನೆ ಕೇಳಿ-ನಂತರ ಕೆಲವರ ಭೇಟಿ ಮತ್ತೆ ಆಗಲೇ ಇಲ್ಲ. ಮತ್ತೆ ಮೂರು ವರ್ಷ ಪ್ರೌಢಶಾಲೆ-ಅಲ್ಲೂ ಹಾಗೇ, ಮೂರು ವರ್ಷ ಮುಗಿದಮೇಲೆ ನಮ್ಮ ಗೆಳೆತನದ ಪಾಡು ಬೇಕೆ?

ಭಾರತ

ಎಂದಿದ್ದರೂ ಬಾಲ್ಯದ ಗೆಳೆಯರನ್ನು ಯಾರೂ ಮರೆಯಲಾಗುವುದಿಲ್ಲ! ಮಹಾಭಾರತದಲ್ಲಿ ಶ್ರೀಕೃಷ್ಣ-ಸುಧಾಮರ ಕಥೆಯನ್ನು ನಾವು ಕೇಳುತ್ತೇವೆ. ಅಪರೂಪಕ್ಕೆ ಎಷ್ಟೋ ವರ್ಷಗಳ ನಂತರ ಬಂದ ಬಾಲ್ಯಸ್ನೇಹಿತ ಸುಧಾಮನನ್ನು ಬಾಗಿಲಭಟರು ಒಳಗಡೆ ಬಿಡುವುದಿಲ್ಲ, ಸುದ್ದಿ ಹೇಗೋ ತಿಳಿದುಕೊಂಡ ಶ್ರೀಕೃಷ್ಣ ಹೆಬ್ಬಾಗಿಲಿಗೇ ಓಡಿಬರುತ್ತಾನೆ,ತಪ್ಪನ್ನು ಕ್ಷಮಿಸುವಂತೆ ಬೇಡುತ್ತಾನೆ. ಬಂದ ಕುಚೇಲನನ್ನು ವಾದ್ಯ-ವೇದಘೋಷಗಳ ಸಹಿತ ಒಳಬರಮಾಡಿಕೊಂಡು, ನವರತ್ನಖಚಿತ ಸಿಂಹಾಸನದಲ್ಲಿ ಕುಳ್ಳಿರಿಸಿ, ಸಪತ್ನೀಕನಾಗಿ ಶ್ರೀಕೃಷ್ಣ ಬಂಗಾರದ ಹರಿವಾಣದಲ್ಲಿ, ಬಂಗಾರದ ಕಲಶದಿಂದ ನೀರೆರೆದು, ಗಂಧ-ಚಂದನಹಚ್ಚಿ, ಹಾರ-ಹೂವುಗಳಿಂದ ಪಾದಪೂಜೆ ಮಾಡುತ್ತಾನೆ! ಕಸ್ತೂರಿ ತಿಲಕವನ್ನಿತ್ತು ಮಂಗಳಾರತಿ ಬೆಳಗುತ್ತಾನೆ! ಸುಧಾಮ ಬಡತನದಲ್ಲಿ ಬೇಡಿತಂದಿದ್ದ,
ಹರಿದ ಬಟ್ಟೆಯ ತುಂಡಿನಲ್ಲಿ ಕಟ್ಟಿಕೊಂಡುಬಂದಿದ್ದ ಅವಲಕ್ಕಿಯನ್ನು ಅಂಜುತ್ತಲೇ ಕೊಟ್ಟಾಗ ಬಾಯಿಚಪ್ಪರಿಸಿ ತಿನ್ನುತ್ತಾನೆ ಶ್ರೀಕೃಷ್ಣ! ಎಂಥ ಉತ್ಕಟ ಸಂಸ್ಕೃತಿ ನಮ್ಮ ಭಾರತದ ನೆಲದ್ದು ! ಇಂದಿಗೂ ಅದಕ್ಕೇ ಲಕ್ಷ್ಮೀ ಪೂಜೆಯಲ್ಲಿ ಅದೇ ಅವಲಕ್ಕಿಗೇ ಶ್ರೇಷ್ಠ ಸ್ಥಾನ! ಹೆಂಗರುಳು ಹೊಂದಿರುವ ಯಾರೇ ಆದರೂ ಇವರೀರ್ವರ ಭೇಟಿಯನ್ನು ದೃಶ್ಯಮಾಧ್ಯಮದಲ್ಲಿ ನೋಡಿದರೆ ಒಂದಿನಿತಾದರೂ ಆನಂದಭಾಷ್ಪದೊಂದಿಗೆ ದುಃಖದ ಕಣ್ಣೀರು ಸುರಿಸಲಾರದೆ ಇರರು.

ಕೌಮಾರ್ಯ

ಹೀಗೇ ನಾನು ನನ್ನ ವಿದ್ಯೆ-ವೃತ್ತಿಗಾಗಿ ಅನೇಕ ಪ್ರದೇಶಗಳಲ್ಲಿ ಸಂಚರಿಸಿದಾಗ ಬಹಳಥರದಲ್ಲಿ ನನಗೆ ಬೇರೆ ಬೇರೆ ಗೆಳೆಯರು-ಸ್ನೇಹಿತರು ಸಿಕ್ಕರು, ಮತ್ತೆ ಕಳೆದುಕೊಂಡೆವು --ಇದು ನನ್ನ ಸ್ನೇಹಿತರೊಬ್ಬರು ಬರೆದಂತೆ ಕಳೆದು ಕೂಡಿ ಕಟ್ಟುವ ಲೆಕ್ಕಾಚಾರದ ಹಂದರವಾಗಿಬಿಟ್ಟಿತ್ತು. ಬದುಕಿನಲ್ಲಿ ಒಳ್ಳೆಯ ಸ್ನೇಹಿತರು ಇರಬೇಕು. ಅನುವು-ಆಪತ್ತಿನಲ್ಲಿ ಅಣ್ಣ-ತಮ್ಮ,ಅಕ್ಕ-ತಂಗಿಯ ಥರ ಜೊತೆಯಾಗಿ ಸಂಬಾಳಿಸುವ ಸ್ನೇಹಿತರಿರಬೇಕು. ಅಂತಹ ಸ್ನೇಹಿತರಿದ್ದಾಗ ಯಾರನ್ನೂ ಒಂಟಿತನ ಕಾಡುವುದಿಲ್ಲ. ಇತ್ತೀಚೆಗೆ ಸಿನಿಮಾರಂಗದಲ್ಲಿ ನಟ ಅಂಬರೀಷ್ ತಮ್ಮ ಗೆಳೆಯ ಡಾ|ವಿಷ್ಣುವರ್ಧನ್ ರನ್ನು ಕಳೆದುಕೊಂಡಾಗ ಅತ್ತರು,ಅಷ್ಟು ಘಾಟಿ ಎನಿಸಿಕೊಂಡ ಮನುಷ್ಯ ಯಾಕೆ ಅತ್ತರು ? ಅದು ಸ್ನೇಹದ ಕೈವಾಡ!

ಅದಕ್ಕೆಂತಲೇ ನಮ್ಮ ತಿಮ್ಮಗುರು ಅಂತಾರೆ -

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ
ಜನರೆಲ್ಲರಾ ಗುಡಿಯ ಕೆಲಸದಾಳುಗಳು
ಮನೆಯೇನು ಮಠವೇನು ಹೊಲವೇನು ನೆಲವೇನು
ಎಣಿಸಲ್ಲವದೆಯದನು | ಮಂಕುತಿಮ್ಮ

ಧ್ಯಾತ್ಮ

ಈ ಜೀವನ ಯಾರಿಗೆ ಎಷ್ಟು ದಿನ-ಯಾವ ರೀತಿ, ಏನು ವೃತ್ತಿ ಏನೊಂದೂ ನಮ್ಮ ಎಣಿಕೆಗೆ ಸಿಗದ ವಿರೋಧಾಭಾಸವಾಗುವ ಅನೇಕ ಸನ್ನಿವೇಶಗಳು ನಡೆಯುತ್ತವೆ. ನಾನೇ ವೃತ್ತಿಯಿಂದ ಮಾನವ ಸಂಪನ್ಮೂಲದ ಬಗ್ಗೆ ತರಬೇತಿ ನಡೆಸುತ್ತೇನೆ, ಆದರೆ ತರಬೇತಿ ಏನೇ ನಡೆಸಿದರೂ ಯಾರ್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದು ನಡೆಯಲೇಬೇಕೆಂಬುದು ಸೃಷ್ಟಿ ನಿಯಮ! ಅದಕ್ಕೇ 'ಪದವೀಂ ಪೂರ್ವ ಪುಣ್ಯಾನಾಂ ..' ಎನ್ನುತ್ತಾರೆ ಪ್ರಾಜ್ಞರು. ಅಂತೆಯೇ

||ಜಾತಸ್ಯ ಮರಣಂ ಧ್ರುವಂ||

ಎಂದಿದ್ದಾರೆ ಸಂಸ್ಕೃತದಲ್ಲಿ ಅಂದರೆ ಹುಟ್ಟಿದ ಯಾವುದೇ ಪಶು-ಪಕ್ಷಿ,ಪ್ರಾಣಿ ಅಥವಾ ಜೀವಿ ತನ್ನ ಕಾಲಸನ್ನಿಹಿತವದಾಗ ಕಾಲವಾಗಲೇಬೇಕು. ಅದರಲ್ಲಂತೂ ಮನುಷ್ಯನಲ್ಲಿ ಅಷ್ಟಚಕ್ರಗಳೊಂದಿಗೆ ’ಸುಷುಮ್ನಾ’ ಎಂಬ ನಾಡಿಯೊಂದಿರುತ್ತದೆ,ಇದು live recording setup ಅಥವಾ black box ,ಮಾಡಿದ ಪ್ರತಿಯೊಂದು ಕರ್ಮ ಇದರಲ್ಲಿ save ಆಗಿರುತ್ತದೆ. ಈ ನಾಡಿ ಜಾಗೃತವಾಗುವುದು ಮನುಷ್ಯನ ಆಯುಷ್ಯಮುಗಿಯುತ್ತಾ ಬರುವ ಗಳಿಗೆಯಲ್ಲಿ. ಅದು ಪ್ರತಿಫಲಿಸಿ ತನ್ನ ವರದಿಯನ್ನು ನಮ್ಮಲ್ಲಿರುವ ’ಆತ್ಮ’ವೆಂಬ ಸುಪ್ತಚೇತನಕ್ಕೆ ರವಾನಿಸುತ್ತದೆ. ಈ ಪ್ರಕ್ರಿಯೆ ಮುಗಿದ ಹಂತದಲ್ಲಿ ಒಟ್ಟಾರೆ ಮನುಜನ ಆತ್ಮ ದೇಹ ತೊರೆಯುತ್ತದೆ. ನೀವು ನಿಮಗೆ ಕೇಳಿಕೊಳ್ಳಿ-’ನಾನು ಯಾರು?’ ಅಂಥವರ ಮಗ/ಮಗಳು ಇದೆಲ್ಲ ಸಾಮಾನ್ಯದ ಉತ್ತರ, ನನಗೆ ಅದು ಬೇಕಾಗಿಲ್ಲ, ನನ್ನೊಳಗಿನ ’ನಾನು’ ಯಾರು? ಎಲ್ಲಿಂದ ಬಂದೆ, ಎಲ್ಲಿಗೆ ಪಯಣ, ಏನು ಉದ್ದೇಶ -ಒಂದೂ ಅರ್ಥವಿಲ್ಲ! ಗೊತ್ತಾಗುವುದೂ ಇಲ್ಲ. ಇದನ್ನು ಅರಿತರೆ ನಮ್ಮ ದ್ವೇಷ,ಅಸೂಯೆ..ಮುಂತಾದ ಎಲ್ಲ ಗುಣಗಳು ಹೋಗಿಬಿಡುತ್ತವಲ್ಲವೇ ? ಇದೇ ಸಂದರ್ಭ ಹೇಳಿಬಿಡುತ್ತೇನೆ -ನಮ್ಮ ಚರ್ಮದಲ್ಲಿ 7 ಪದರಗಳಿವೆ ಎಂಬುದನ್ನು ವೇದ ಅದು ಹುಟ್ಟಿದಾಗಲೇ ಸಾರಿದೆ,ಆದರೆ ನಮ್ಮ ವಿಜ್ಞಾನಿಗಳು ಕಳೆದವರ್ಷವಷ್ಟೇ ಇದನ್ನು ಒಪ್ಪಿಕೊಂಡಿದ್ದಾರೆ ! ಅದಕ್ಕೇ ವಿಜ್ಞಾನವನ್ನು 're-search' ಎನ್ನುವುದು, ಒಮ್ಮೆ ಮಹಾನ್ ದಾರ್ಶನಿಕರು, ಋಷಿಮುನಿಗಳು ಕಂಡು ಹಿಡಿದು ಹೇಳಿದ್ದನ್ನು ಮೊಲಕ್ಕೆ ಮೂರೇಕಾಲು ಎಂಬ ರೀತಿ 'ಸುಳ್ಳು' ಎಂದು ವಾದಿಸಿ, ಯಾವುದೋ ಗಳಿಗೆಯಲ್ಲಿ ತಮಗೆ ಅದರ ಶೋಧ ಆದಾಗ ಮತ್ತೆ ಮೊಲಕ್ಕೆ ನಾಲ್ಕು ಕಾಲು ಇದೆ, ಅದು ವೇಗದಲ್ಲಿ ಹಾರುವಾಗ ತಮಗೆ ಕಂಡಿರಲಿಲ್ಲ ಎಂಬರೀತಿಯಲ್ಲಿ 'ಸತ್ಯ' ವನ್ನು silent ಆಗಿ ಒಪ್ಪಿಕೊಳ್ಳುವುದು!

ದೇವರು ಎರಡು ಬಾರಿ ನಗುವುದನ್ನು ತಮಾಷೆಯಾಗಿ ನಾವು ಕೇಳಿದ್ದರೂ ಅದು ಸತ್ಯದ ಮಾತೇ ಸರಿ. ಒಮ್ಮೆ ವೈದ್ಯರು ಇನ್ನೇನು ಜೀವಹೋಯಿತು ಎನ್ನುವ ವ್ಯಕ್ತಿಯನ್ನು ಬದುಕಿಸುತ್ತೇನೆಂದಾಗ, ಇನ್ನೊಮ್ಮೆ ಅಣ್ಣ-ತಮ್ಮಂದಿರು ಜಮೀನನ್ನು[ಭೂಮಿಯನ್ನು]ತನ್ನದು, ತನ್ನದು ಎಂದು ಅಳೆಯುವಾಗ -ಈ ಎರಡುಬಾರಿ ದೇವರು ನಗುತ್ತಾನಂತೆ ! ಇರುವಾಗ ಎಲ್ಲವುದೂ ಬೇಕು, ಹೋಗುವಾಗ ಯಾವುದು ಬೇಕು? ಯಾವುದು ನಮ್ಮ ಜೊತೆ ಬರುವಂಥದು, ಅಸಲಿಗೆ ನಮಗೆ ನಾವ್ಯಾರೆಂಬುದೇ ಗೊತ್ತಿಲ್ಲ, ತಲೆ-ಬುಡ ಗೊತ್ತಿಲ್ಲ ಇನ್ನ್ಯಾರು ನಮ್ಮ ಹಿಂಬಾಲಕರು? ಬರುತ್ತದೆ ---ಅದೇ ನಮ್ಮ ಕರ್ಮ ! ನಾವು ಮಾಡಿದ ಕರ್ಮ ನಮ್ಮ ಜೊತೆಗೇ ಬರುತ್ತದೆ. ಇದು ನನ್ನ ಮಾತಲ್ಲ, ಭಗವಂತ ಗೀತೆಯಲ್ಲಿ ಹೇಳಿದ್ದು! ಋಷಿಮುನಿಗಳು ತಮ್ಮ ಜ್ಞಾನಚಕ್ಷುವಿನಿಂದ ನೋಡಿದ್ದು,ಬರೆದಿದ್ದು!

ಬಾಲ್ಯದ ಹರಹು

ನಾನು ಚಿಕ್ಕವನಿರುವಾಗ ಹೀಗೊಮ್ಮೆ ಒಂದು ಊರಲ್ಲಿ ನಮ್ಮ ನೆಂಟರೊಬ್ಬರು ಒಂದು ಪ್ರೌಢ ಶಾಲೆಯ ಅಧ್ಯಕ್ಷರಾಗಿದ್ದರು.ಅವರು ಸಂದರ್ಶನವೊಂದರಲ್ಲಿ ಒಬ್ಬ ಶಿಕ್ಷಕಜಾಗದ ಅಭ್ಯರ್ಥಿಯ ಕೂಡ ಒಂದು ಹಾಡನ್ನು ಹಾಡಿಸಿದರು. " ಅಗಣಿತ ತಾರಾಗಣಗಳ ನಡುವೆ ನಿನ್ನನೇ ಮೆಚ್ಚಿಹೆ ನಾನು...." ದಿ|ಕುವೆಂಪು ಅವರು ಬರೆದ ಈ ಭಾವಗೀತೆಯನ್ನು ಆ ಅಭ್ಯರ್ಥಿ ಬಹಳ ಸುಶ್ರಾವ್ಯವಾಗಿ ಹಾಡಿದರು. ಎಳವೆಯಲ್ಲಿ ಕೇಳಿದ ಆ ಹಾಡು ನನ್ನ ಮನಸ್ಸಿಗೆ ತುಂಬಾ ನಾಟಿತ್ತು. ಆ ಹಾಡಿದ ಮೋಡಿಗಾರನ ಮುಖವೇ ಸದಾ ಕಣ್ಣೆದುರು ಬರುತ್ತದೆ. ನನಗೆ ಅವರನ್ನು ನೋಡಿ ತುಂಬ ’ಪಾಪ’ ಅನ್ನಿಸಿಬಿಟ್ಟಿತ್ತು. ಈಗ ಹಾಡಿಸಿದವರು ಕಾಲವಾಗಿ ದಶಕವೇ ಕಳೆಯಿತು, ಹಾಡಿದ ಆ ವ್ಯಕ್ತಿ ಇದ್ದಾರೋ ಇಲ್ಲವೋ ತಿಳಿಯದು. ಹೀಗೆ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಹಲವಾರು ವೃತ್ತಿಯನ್ನು ಅವಲಂಬಿಸಿ ಏನೆಲ್ಲಾ ಮಾಡಬೇಕಾಗುತ್ತದೆ ಎಂಬುದನ್ನು ನೆನೆಸಿಕೊಂಡಾಗ ನಮ್ಮ ಭಾವನೆಗಳು ಕೆರಳುತ್ತವೆ-ಕೆಲಸಮಾಡುತ್ತವೆ. ಒಳ್ಳೆಯ ಭಾವನೆಗಳನ್ನು ಗೌರವಿಸಿ ಮೆಲುಕು ಹಾಕಿ, ಕೆಟ್ಟವನ್ನು ದೂರಮಾಡಿ ಎಂಬುದು ನನ್ನ ಸಲಹೆ ತಮಗೆ.

ನನ್ನ ಹಾಡುಗಳನ್ನು, ಸಾಹಿತ್ಯವನ್ನೂ ಓದುವಾಗ ನನ್ನ ತಪ್ಪುಗಳನ್ನು ಒಪ್ಪಿದ, ಹರಸಿದ,ಹಾರೈಸಿದ,ತಿದ್ದಿದ ತಮ್ಮೆಲ್ಲರ ಉಪಕಾರ ಸ್ಮರಣೆಗೆ ಈ ಕೆಳಗಿನ ಹಾಡು,ನಿಮ್ಮ ಸ್ನೇಹ ಸಕ್ಕರೆಗಿಂತ ಸಿಹಿ, ಈ ಸ್ನೇಹ-ಪ್ರೇಮ ಸದಾ ಇರಲೆಂಬ ಸದಾಶಯದೊಂದಿಗೆ ನನ್ನೀ ಹಾಡಿನೊಂದಿಗೆ ತಮಗೆಲ್ಲಾ ಸತತ ಋಣಿಯಾಗಿದ್ದೇನೆ.....

ಸ್ನೇಹಾಂತರಂಗ

ಎಲ್ಲಿ ತೆರಳಿದಿರಿ ನನ್ನ ಸ್ನೇಹಿತರೆ
ಮಲ್ಲಿಗೆಯ ನಗೆಯ ಚೆಲ್ಲಿ
ಸಲ್ಲದು ಈ ಪರಿತಾಪ ಬಲ್ಲೆನು ನಿಮ್ಮ ಕೋಪ !

ಗಾಳಿಯ ನರುಗಂಪು ಬಿಸಿಲಿನ ಝಳದಿ
ಹಾಳೆಯಮೇಲ್ ನಾಲ್ಕಕ್ಷರ ಬರೆದೆನು ಭರದಿ

ಲಘು-ಗುರು ಗುಣಿಸುತ ಹಾಡನು ಬರೆದವನಲ್ಲ
ಲಘುವಾಗಿಯೆ ಪರಿಗಣಿಸಿರಿ ನೀವಿದನೆಲ್ಲ !

ಅಗಣಿತ ಶಬ್ಧದ ಸಾಗರ ಈ ಕನ್ನಡ ಮಾತೆ
ಸಗಣಿತ ಸಂಧಿಯ-ಛಂದದ ಭಾಗ್ಯವಿಧಾತೆ

ಅಕ್ಷರದಿಂ ಅಕ್ಷರಕು ಇದೆ ಅಂತರ ಬಹಳ
ಸಾಕ್ಷರವಿರೆ ನುಡಿಸಬಹುದು ಸರಿಗಮ ಸರಳ

ಹಾಗೆ ಹೀಗೆ ಓದಿಕೊಂಡು ಸಾಗಲಿ ನಿಮ್ಮಗಾಡಿ
ಭೋಗದ ಸಿರಿವೈಭೋಗಕೆ ಬರಲದು ಕೃಪೆಮಾಡಿ
------
[ಭೋಗ ಷಟ್ಪದಿಯ ಮೆರವಣಿಗೆಯಲ್ಲಿ ಕುಂಟು ಕುರಿಗಳು: ಇವನ್ನು ಹಾಗೇ ಸುಮ್ಮನೇ ಓದಿಕೊಳ್ಳಿ, ಛಂದಸ್ಸು-ಲಘು-ಗುರು ಮಾತ್ರೆಗಳನ್ನು ಅಳವಡಿಸದೆ ಮೂಲರೂಪದಲ್ಲೇ ಕೊಡುತ್ತಿದ್ದೇನೆ,ಮತ್ತೆ ಸಾಧ್ಯವಾದಾಗ ಇನ್ನಷ್ಟು ಸೇರಿಸಿ, 'ಚೂಡಾಕರ್ಮ' ಪೂರೈಸಿ ನಿಮ್ಮಕೈಗಿಡುತ್ತೇನೆ]

ಗಲ್ಲಿಗಲ್ಲಿಗೊಂದು ಬಾರು
ಇಲ್ಲದಿದ್ರು ತಲೆಗೆ ಸೂರು
ಬಲ್ಲವರೇ ನಡೆಸುತಾರೆ ಬಹಳ ವಿಪ್ಲವ
ಚೆಲ್ಲುಹುಡುಗಿಯರನು ಕಂಡು
ಹಲ್ಲುಕಿರಿದು ಹಾಳುಬಿದ್ದ
ಎಲ್ಲಹುಡುಗ್ರಿಗದುವೆ ಅಡ್ಡೆ ‘ನಡೆಸ್ವರೆಲ್ಲವ’

ಪಡ್ಡೆಹುಡುಗರೆಲ್ಲ ಸೇರಿ
ಬಿಡ್ಡಿನಾಟ ಆಡಿದಣಿದು
ಸಡ್ಡುಹೊಡೆದು ನಿಲ್ಲುತಾರೆ ಖಡ್ಗ ಹಿಡಿಯುತ
ವಡ್ಡತನದ ಹಿರಿಯರೆಲ್ಲ
ಒಡ್ಡಿ ಬೆಂಬಲವನು ಅವರ್ಗೆ
ಖೆಡ್ಡವಾಯ್ತು ರೋಡು ರೋಡು ಬದುಕು ದುಷ್ಕೃತ

ಕಾಸುಕೊಟ್ರೆ ಪೂರ್ವಜನ್ಮ
ಪೋಸು ತೋರ್ವೆನೆಂದು ಹೇಳಿ
ವಾಸುದೇವನಾಣೆಹಿಡಿದು ಬೊಗಳೆ ಬಿಟ್ಟರು
ಬೀಸುತಿರುವ ’ಗಾಳಿಯಲ್ಲಿ’
ಸೋಸಿಕೊಂಡು ’ತಮ್ಮ ಧಾನ್ಯ’
ಲೇಸು ಹರಸುತೇನೆ ಎನುತ ಕಳಿಸಿಕೊಟ್ಟರು

ಸೇವೆಯೆಂಬ ಸೋಗಿನಲ್ಲಿ
ಯಾವರೋಗವೆಂದು ತಿಳಿದು
ತಾವೆ ಟ್ರೀಟುಮಾಡುತೇವೆ ಎನುತಲಿದ್ದರು
ಆವರೋಗವಿಲ್ಲದವನ
ಜಾವತನಕ ಲ್ಯಾಬೊಳಿಟ್ಟು
ನೋವುಮರೆಯಲೊಮ್ಮೆ ದೊಡ್ಡ ಬಿಲ್ಲು ಕೊಟ್ಟರು

ವಿದ್ಯೆಕಲಿಸುತೇವೆ ಎಂದು
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಕಂತೆ ಎಣಿಸಿಕೊಂಡರು
ವಾದ್ಯ ನೃತ್ಯ ಗೀತ ಚಿತ್ರ
ಖಾದ್ಯ ಕ್ರೀಡೆ ಟೂರು ಎನುತ
ಸಾಧ್ಯವಾದ ಎಲ್ಲ ರೀತಿ ಸುಲಿದುಬಿಟ್ಟರು

ಅಳೆದು ಸುರಿದು ತೂಗಿ ನೋಡಿ
ಘಳಿಗೆ ಫಲವ ತಿರುಗಿ ನೋಡಿ
ತೊಳೆದು ಪಾದ ಹರುಷದಿಂದ ಮಗಳಕೊಟ್ಟರು
ಕಳೆಯದಿರಲು ಕೆಲವು ವರುಷ
ಅಳಿಯದಿರಲು ನೆನೆಪು ನಿಮಿಷ
ಹಳಿದು ಒಡವೆ ತರಲು ಮನೆಗೆ ಕಳಿಸಿಕೊಟ್ಟರು

ನಿಮ್ಮ ಜೊತೆಗೆ ನಾನು ಸೇರಿ
ಹಮ್ಮು ಬಿಮ್ಮು ಎಲ್ಲ ತೊರೆದು
ಒಮ್ಮೆನಕ್ಕರಾಯ್ತು ಅದುವೆ ಯೋಗರಿಂಗಣ
ಚಿಮ್ಮಿಸಲ್ಕೆ ನಗೆಯ ಬುಗ್ಗೆ
ಹೊಮ್ಮಿಬಂತು ’ಆರುಕಾಲು’
ಹೆಮ್ಮೆಯಂಥದೇನು ಇದುವೆ ಭೋಗರಿಂಗಣ