ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, May 21, 2013

ಹೆಚ್ಚುತ್ತಿರುವ ಮೈಗಳ್ಳತನ ; ಕರಾಳ ಭವಿಷ್ಯದ ಅನಾವರಣ

ಚಿತ್ರಋಣ : ಅಂತರ್ಜಾಲ 
ಹೆಚ್ಚುತ್ತಿರುವ ಮೈಗಳ್ಳತನ ; ಕರಾಳ ಭವಿಷ್ಯದ ಅನಾವರಣ

ಬೆಂಗಳೂರಿನ ಔಷಧ ಅಂಗಡಿಯೊಂದರ ಮುಂದೆ ’ಕಂಪ್ಯೂಟರ್ ಗೊತ್ತಿರುವ ಕೌಂಟರ್ ಸೇಲ್ಸ್ ಬಾಯ್ಸ್ ಬೇಕಾಗಿದ್ದಾರೆ, ಸಂಬಳ 8,000/- ದಿಂದ 10,000/-’ ಎಂದು ಬರೆದಿತ್ತು. ಅಂಗಡಿಯಾತನಲ್ಲಿ ನಾನು ಕೇಳಿದೆ "ಹೇಗೆ ಅಷ್ಟೆಲ್ಲಾ ಸಂಬಳ ಕೊಡುತ್ತೀರಿ ನೀವು?" ಎಂದು. ಅದಕ್ಕಾತ ಉತ್ತರಿಸಿದ:"ನೋಡಿ ಸರ್, ಬಿಗ್ ಬಜಾರು, ಮಾಲು ಎಲ್ಲಾಕಡೆಗಳಲ್ಲೂ ಎಸ್.ಎಸ್.ಎಲ್.ಸಿಯಲ್ಲಿ ಫೇಲ್ ಆಗಿರುವ ಹುಡುಗರು ಕೆಲಸಕ್ಕೆ ಸೇರಿಕೊಂಡರೂ ಕನಿಷ್ಠ ಹತ್ತು ಸಾವಿರ ಕೊಡ್ತಾರೆ. ಹಾಗಿರುವಾಗ ನಮ್ಮಲ್ಲಿಗೆ ಕಮ್ಮಿ ಸಂಬಳಕ್ಕೆ ಹುಡುಗರು ಬರುತ್ತಾರೆಯೇ? ಹುಡುಗರು ಬೇಕೆಂದರೆ ಒಳ್ಳೇ ಸಂಬಳ ಕೊಡಲೇಬೇಕು. ನಾವೇ ಮಾಡಿಕೊಳ್ಳುವ ಹಾಗಿದ್ದರೆ ಹುಡುಗರ ಅಗತ್ಯ ಬೀಳೋದಿಲ್ಲ, ಕೆಲಸ ಜಾಸ್ತಿ ಇದೆ ಎಂದಾದರೆ ಆಗ ಹುಡುಗರನ್ನು ಹಾಕ್ಕೊಳ್ಳಬೇಕಾಗುತ್ತೆ." ಔಷಧದ ಅಂಗಡಿಯಲ್ಲಿ ಆ ಬೋರ್ಡು ವರ್ಷದಿಂದ ಹಾಗೇ ಇದೆ. "ಯಾಕೆ ಯಾರೂ ಬರಲಿಲ್ಲವೇ?" ಎಂದರೆ, "ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ, ಅದಕ್ಕೇ ಬೋರ್ಡನ್ನು ಹಾಗೇ ಇಟ್ಟಿದ್ದೇವೆ." ಎಂಬುತ್ತರ ದೊರೆಯಿತು.  

ಬೆಂಗಳೂರು ಮಹಾನಗರದ ಕೈಗಾರಿಕಾ ಪ್ರದೇಶಗಳಲ್ಲಿ ಪೀಣ್ಯ, ಜಿಗಣಿ ಇಂಥಲ್ಲೆಲ್ಲಾ, ಬಹುತೇಕ ವಸಾಹತುಗಳ ಮುಂದೆ ’ಕೆಲಸಗಾರರು ಬೇಕಾಗಿದ್ದಾರೆ’ ಎಂಬ ಫಲಕ ಕಳೆದೆರಡು ವರ್ಷದಿಂದ ಸದಾ ನೇತಾಡುತ್ತಲೇ ಇದೆ; ಆದರೆ ಅವರು ಕರೆಯಿತ್ತ ಕೆಲಸಕ್ಕೆ ತಕ್ಕುದಾದ ಕೆಲಸಿಗರ ಲಭ್ಯತೆ ಮಾತ್ರ ಕಾಣುತ್ತಿಲ್ಲ. ಜಾಗತೀಕರಣಕ್ಕೂ ಕೆಲಸಿಗರ ಕೊರತೆಗೂ ಸಂಬಂಧ ಇದೆ ಎಂಬುದನ್ನು ತೆಗೆದುಹಾಕುವಂತಿಲ್ಲ. ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕಂತೂ ಜನವೇ ಇಲ್ಲ! ಇಂಚಿಂಚು ಕೆಲಸಕ್ಕೂ ತರಾವರಿ ಯಂತ್ರಗಳನ್ನು ಅವಲಂಬಿಸಬೇಕಾಗಿ ಬಂದಿದೆ, ಆದರೆ ಎಲ್ಲಾ ನಮೂನೆಯ ಯಂತ್ರಗಳನ್ನು ಕೊಳ್ಳಲು ಚಿಕ್ಕ ಹಿಡುವಳಿದಾರರಿಗೆ ಸಾಧ್ಯವಾಗುತ್ತಿಲ್ಲ, ಯಂತ್ರಗಳನ್ನು ಆ ಯಾ ಕೃಷಿ ಸ್ಥಳಗಳಿಗೆ ತೆಗೆದುಕೊಂಡು ಹೋಗಲು ಆಗದ ಪ್ರಾದೇಶಿಕ ತೊಂದರೆ ಅವರಲ್ಲೇ ಕೆಲವರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ.

ಹೆಂಗಸರ ಕೆಲಸಗಳನ್ನು ಸುಲಭವಾಗಿಸಲು ಬಂದ ಮಿಕ್ಸರ್, ಗ್ರ್ಐಂಡರ್ ಮೊದಲಾದ ಯಂತ್ರಗಳ ಬಳಕೆಯಿಂದಾಗಿ ಹೆಂಗಳೆಯರು ಹೆಚ್ಚುಸಮಯ ಟಿವಿ ಮುಂದೆ ಕುಳಿತು, ಪ್ರಯೋಜನಕ್ಕೆ ಬಾರದ ಧಾರಾವಾಹಿಗಳು, ಅಪರಾಧ ಪ್ರಕರಣಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವುದರಿಂದ, ಶರೀರದಲ್ಲಿ ಅನಾವಶ್ಯಕ ಬೊಜ್ಜು ಬೆಳೆದು ಅದನ್ನು ಕರಗಿಸಲು ಹಣವ್ಯಯಿಸಿ ಜಿಮ್ ಮತ್ತು ಏರೋಬಿಕ್ಸ್ ಗಳಿಗೆ ಹೋಗುವುದು ನಗರಗಳಲ್ಲಿ ಕಂಡುಬಂದರೆ, ಗ್ರಾಮೀಣ ಜನತೆಯೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸ್ವಲ್ಪ ಓಡಾಡಿ ನೋಡಿದಾಗ ಅನುಭವಕ್ಕೆ ಬರುತ್ತದೆ. ತಿಳಿಗೊಳಕ್ಕೆ ಕಲ್ಲುಗಳನ್ನೆಸೆದು ಶಬ್ದಗಳ ಗುಲ್ಲೆಬ್ಬಿಸಿದಂತೇ ಬೇಡದ ಧಾರಾವಾಹಿಗಳ ಕೆಟ್ಟ ಸಂದೇಶಗಳು ಮತ್ತು ಅಪರಾಧ ಪ್ರಕರಣಗಳ ಪುನಾರಚಿತ ದೃಶ್ಯಾವಳಿಗಳಿಂದ ಅವರ ಮನಸ್ಸೂ ಮಲಿನಗೊಳ್ಳುತ್ತಿದೆ, ಮನೆಮನೆಗಳಲ್ಲಿ ಕಿಂಚಿತ್ ಕ್ಷುಲ್ಲಕ ಕಾರಣಕ್ಕೂ ಜಗಳ-ವೈಮನಸ್ಸು ಆರಂಭವಾಗಿದೆ; ವಿನಾಕಾರಣ ವಿಚ್ಛೇದನಗಳೂ ಹೆಚ್ಚುತ್ತಿವೆ.          

’ಅಸಂಘಟಿತ ಕಾರ್ಮಿಕ ವಲಯ’ ಎಂಬ ಬುದ್ಧಿ ಜೀವಿಗಳ ಹೇಳಿಕೆ ಕೆಲವೊಮ್ಮೆ ವಿಪರ್ಯಾಸಕ್ಕೂ ಕಾರಣವಾಗುತ್ತದೆ. ಇಂದಿನ ಈ ದಿನಮಾನದಲ್ಲಿ ಯಾರೆಂದರೆ ಯಾರಿಗೂ ನಿರ್ವಹಿಸಬೇಕಾದ ಕೆಲಸಗಳ ಜವಾಬ್ದಾರಿಯೇ ಇಲ್ಲವಾಗಿದೆ. ಮಲ್ಲೇಶ್ವರದ ಹೋಟೆಲ್ ಮಾಲೀಕರೊಬ್ಬರು ಉಂಡುಟ್ಟು ಸುಖವಾಗಿದ್ದರು; ಆದರೆ ಈಗೀಗ ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲವಂತೆ! ಕಾರಣವಿಷ್ಟೇ: ಬೆಳಗಾದರೆ ಯಾವ ಅಡುಗೆಯವ ಮತ್ತು ಯಾವ ಕೆಲಸದ ಹುಡುಗ ಓಡಿಹೋದ ಎಂಬುದನ್ನು ನೋಡುತ್ತಲೇ ಇರಬೇಕಂತೆ. ಬರುವ ಗಿರಾಕಿಗಳಲ್ಲಿ ತಮ್ಮೊಳಗಿನ ತುಮುಲಗಳನ್ನು ಹೇಳಿಕೊಳ್ಳುವ ಹಾಗಿಲ್ಲ, ಗಿರಾಕಿಗಳಿಗೆ ಒದಗಿಸಬೇಕಾದ ತಿಂಡಿ-ತೀರ್ಥ ಪದಾರ್ಥಗಳಲ್ಲಿ ಜಾಸ್ತಿ ವ್ಯತ್ಯಯ ಮಾಡುವಂತಿಲ್ಲ. ಕೆಲಸದವರೇ ಇಲ್ಲದಿದ್ದರೆ ಯಜಮಾನರು ಎಷ್ಟೂ ಅಂತ ಒಬ್ಬರೇ ನಿಭಾಯಿಸಲು ಸಾಧ್ಯ? ಈ ಕಥೆ ಕೇವಲ ಮಲ್ಲೇಶ್ವರದ ಹೋಟೆಲ್ಲಿಗೆ ಸಂಬಂಧಿಸಿದ್ದಲ್ಲ, ಎಲ್ಲೇ ಹೋಗಿ, ಬಹುತೇಕ ಎಲ್ಲಾ ಹೋಟೆಲ್ ಮಾಲೀಕರು ಅನುಭವಿಸುತ್ತಿರುವುದೂ ಇದನ್ನೇ.

ತಾವು ಕಷ್ಟಪಟ್ಟಿದ್ದು ಸಾಕು, ತಮ್ಮ ಮಕ್ಕಳಿಗೆ ತಮ್ಮ ಪಾಡು ಬರುವುದು ಬೇಡ ಎಂದುಕೊಳ್ಳುತ್ತಿದ್ದ ಎಲ್ಲಾ ರಂಗಗಳ, ಎಲ್ಲಾ ವಲಯಗಳ ಕೆಲಸಿಗ ಪಾಲಕರು ಮಕ್ಕಳಿಗೆ ವಿದ್ಯೆಯನ್ನೇನೋ ಕೊಡಿಸಿದರು, ಆದರೆ ಉತ್ತಮ ಸಂಸ್ಕಾರವನ್ನು ಕೊಡಲು ಸಾಧ್ಯವಾಗಲಿಲ್ಲ. ಬೆಳೆದ ಮಕ್ಕಳು ಉನ್ನತ ಔದ್ಯೋಗಿಕ ರಂಗದಲ್ಲಿ ತೊಡಗಿಕೊಂಡರೂ ಸಂಬಳಕೊಡುವ ಕಂಪನಿಗೆಂದೂ ನಿಷ್ಠರಾಗಿ ನಡೆದುಕೊಳ್ಳಲು ಮುಂದಾಗುತ್ತಿಲ್ಲ. ಕೆಲಸ ಕೊಡುವ ಮಾಲೀಕರ ವೃತ್ತಿ-ಉತ್ಪನ್ನ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯತೆ ಕೆಲಸಗಾರರಲ್ಲಿ ಕಂಡುಬರುತ್ತಿಲ್ಲ. ದುಡಿಮೆ ಕೇವಲ ಸಂಬಳಕ್ಕಾಗಿದೆಯೇ ಹೊರತು ದುಡಿಮೆಯೊಂದು ಪವಿತ್ರ ಕೆಲಸ ಎಂಬ ಭಾವನೆ ಎಂದೋ ಹೊರಟುಹೋಗಿದೆ. ವರ್ಷಗಳಕಾಲ ಉತ್ತಮ ಸಂಬಳವನ್ನೇ ಪಡೆದರೂ, ಇನ್ನೊಂದು ಜಾಗದಲ್ಲಿ ನೂರೋ ಇನ್ನೂರೋ ರೂಪಾಯಿ ಜಾಸ್ತಿ ದೊರೆಯುವುದಾದರೆ ಅಲ್ಲಿಗೇ ಹಾರುವ ಸ್ವಭಾವ ಇಂದಿನ ಯುವ ಕೆಲಸಿಗರದು. ಇಂತಿರುವ ದಿನಗಳಲ್ಲಿ ಕೆಲಸದಲ್ಲಿ ಗುಣಮಟ್ಟವನ್ನು ಬಯಸುವುದು ಅಥವಾ ಕಾಣುವುದು ಸಾಧ್ಯವೇ?

ಅಸಂಘಟಿತ ವಲಯದ ಮಕ್ಕಳೆಲ್ಲಾ ತಮ್ಮ ಹಿತಾರ್ಥವಾಗಿ-ತಮ್ಮ ಸುಖಾರ್ಥವಾಗಿ, ತಮ್ಮ ನೇರಕ್ಕೇ ನಡೆಯುತ್ತಿರುವಾಗ, ಅವರನ್ನು ಹೇಗಾದರೂ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವವರು ಕಂಪನಿಗಳ/ಕೃಷಿಭೂಮಿಗಳ/ಉದ್ಯಮಗಳ ಮಾಲೀಕರು. ಕಾರ್ಮಿಕರು/ಕೆಲಸಿಗರು ಇಲ್ಲದೇ ವ್ಯವಹಾರ ನಡೆಯುವುದಿಲ್ಲ; ಕೆಲಸಿಗರು ಇರಬೇಕೆಂದರೆ ಅವರು ಮಾಡುವ ಕೆಲಸವನ್ನು ಅದು ಹೇಗೇ ಇದ್ದರೂ ಉಸಿರೆತ್ತದೇ ಒಪ್ಪಿಕೊಳ್ಳಬೇಕಾದ ಪ್ರಸಂಗವೂ ತಪ್ಪುತ್ತಿಲ್ಲ. ತಮ್ಮ ತೊಡಗಿಕೊಳ್ಳುವಿಕೆಯನ್ನು ಬಯಸುವ, ಬಳಸುವ ಯಜಮಾನರ ಅನಿವಾರ್ಯತೆಯನ್ನು ಮನಗಂಡ ಯುವ ಕೆಲಸಿಗರು, ಅದರ ದುರುಪಯೋಗ ಪಡಿಸಿಕೊಳ್ಳುತ್ತಿರುವುದಂತೂ ಗ್ಯಾರಂಟಿ. ಇವತ್ತು ಇಲ್ಲಿ, ವಾರದಲ್ಲೋ ತಿಂಗಳಲ್ಲೋ ಇನ್ನೊಂದೆಡೆಗೆ, ಆ ನಂತರ ಮತ್ತೆಲ್ಲೋ ಹೀಗೇ ಕೆಲಸವನ್ನು ಬದಲಿಸುತ್ತಲೇ ಇರುವುದರಿಂದ ಮಾಲೀಕ-ಕೆಲಸಿಗರ ಪ್ರೀತಿಯ ಸಂಕೋಲೆ ಇಂದು ಬದುಕಿ ಉಳಿದಿಲ್ಲ. ಕಾಯ್ದೆ ಬದ್ಧವಾಗಿ ತಮಗೆ ಸಿಗಬೇಕಾದುದನ್ನು ಹಠಮಾಡಿಯಾದರೂ ಪಡೆಯುವ ಕೆಲಸಿಗರು ಯಜಮಾನರ ಮನಸ್ಸನ್ನು ಗೆಲ್ಲಲಂತೂ ಸಾಧ್ಯವಾಗುತ್ತಿಲ್ಲ.

ಇನ್ನೊಂದು ಅನಾಹುತಕಾರೀ ಬೆಳವಣಿಗೆಯೆಂದರೆ, ಕೆಲವು ರಂಗಗಳಲ್ಲಿ ಕೆಲಸಗಳ ಗುಣಮಟ್ಟ ಪಾತಾಳಕ್ಕೆ ಇಳಿಯುತ್ತಿದೆ. ’ಊರಿಗೊಬ್ಳೇ ಪದ್ಮಾವತಿ’ ಎಂಬ ರೀತಿಯಲ್ಲಿ ತಮ್ಮನ್ನು ತೋರಿಸಿಕೊಳ್ಳುತ್ತಿರುವ ಕೆಲಸಿಗರಲ್ಲಿ, ಮಾಡುವ ಕೆಲಸಗಳ ಬಗ್ಗೆ ನೈಪುಣ್ಯ ಇಲ್ಲವಾಗುತ್ತಿದೆ. ’ಯಾರೂ ಸಿಗುತ್ತಿಲ್ಲ’ ಎಂಬ ಅಂಜಿಕೆಯಿಂದ, ಸಿಕ್ಕವರ ಮನಸ್ಸಿಗೆ ವಿರೋಧ ಉಂಟುಮಾಡಿದರೆ ಅವರೂ ಓಡಿಹೋದಾರೆಂಬ ಅಳುಕಿನಿಂದ, ಕೆಲಸಿಗರ ಕಳಪೆ ಕೆಲಸಗಳನ್ನೂ ಮಾಲೀಕರು ಒಪ್ಪಿಕೊಳ್ಳುವ ಸ್ಥಿತಿ ಬಂದೊದಗಿದೆ. ನಾವೆಲ್ಲಾ ಚಿಕ್ಕವರಿದ್ದಾಗ ಆಗಷ್ಟೇ ಪ್ಲಾಸ್ಟಿಕ್ ಉಪಕರಣಗಳು ಮಾರುಕಟ್ಟೆಗೆ ಕಾಲಿಟ್ಟಿದ್ದರೂ ಮರದ ಬಾಚಣಿಗೆಗಳು ಸಿಗುತ್ತಿದ್ದವು; ಬಾಚಣಿಗೆಗಳಿಗೆ ಸಿಗುವ ಪ್ರತಿಫಲ ಎಷ್ಟು ಎಂಬುದನ್ನೇ ಯೋಚಿಸುತ್ತಾ ಅವುಗಳನ್ನು ಬೇಕಾಬಿಟ್ಟಿ ಎಂಬರ್ಥದಲ್ಲಿ ತಯಾರಿಸದೇ ಬಹಳ ನಾಜೂಕಾಗಿ ಸಿದ್ಧಪಡಿಸುತ್ತಿದ್ದುದು ಗಮನಕ್ಕೆ ಬರುತ್ತದೆ. ಗಡಿಗೆಮಾಡುವ ಕುಂಬಾರನಿಗೆ ಗಡಿಗೆ-ದಂಧೆ ತನ್ನ ಒಡಲನ್ನು ತುಂಬುತ್ತದೆ ಎಂಬುದು ಸ್ಪಷ್ಟವಿತ್ತಷ್ಟೆ; ಹೆಚ್ಚಿನದನ್ನು ಆತ ಅಪೇಕ್ಷಿಸಲಿಲ್ಲ.

ಜಾಗತೀಕರಣದಿಂದ ಮರದ ಬಾಚಣಿಗೆ, ಮಣ್ಣಿನಗಡಿಗೆ ಮಾಡುವ ಕುಲಕಸುಬುದಾರರಿಗೆ ಹೊಡೆತ ಬಿದ್ದಿದೆ ಎಂಬುದು ಒಪ್ಪಲೇಬೇಕಾದ ವಿಷಯ. ಆದರೆ ಜಾಗತೀಕರಣವೇ ಎಲ್ಲಾ ರಂಗಗಳನ್ನೂ ಹಾಳುಗೆಡವಿತು ಎಂಬುದನ್ನು ಒಪ್ಪಲು ಬರುವುದಿಲ್ಲ. ಹಾಗಂತ ಜಾಗತೀಕರಣ ಭಾರತದ ಕೆಲಸಗಾರರಮೇಲೆ ಪರಿಣಾಮ ಬೀರುತ್ತಾ, ಬಹುರಾಷ್ಟ್ರೀಯ ಕಂಪನಿಗಳು, ವಸಾಹತುಗಳು ಕೆಲಸಗಾರರನ್ನು ತಮ್ಮೆಡೆ ಸೆಳೆದವು. ಅವರು ಕೊಡುವ ಕೆಲಸ ಶಾಶ್ವತವಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾರದ ಜನ ಅವರಲ್ಲಿನ ಕೆಲಸಕ್ಕೆ ಮನಸೋತರು. ನಮ್ಮಲ್ಲಿನ ಕೆಲಸಗಾರರಿಂದ ತಮ್ಮ ಕೆಲಸಗಳನ್ನು ಪೂರೈಸಿಕೊಂಡು, ನಮ್ಮಲ್ಲಿನ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ತಾವೇ ಮೆದ್ದುಕೊಂಡ ವಿದೇಶಿಗರು, ದೇಶೀಯ ಕುಲಕಸುಬುಗಳಿಗೆ, ವ್ಯವಸಾಯೋತ್ಪನ್ನಗಳಿಗೆ, ಕೈಗಾರಿಕೋತ್ಪನ್ನಗಳಿಗೆ ಹಲವು ವಿಧದಲ್ಲಿ ಪರೋಕ್ಷವಾಗಿಯೂ ಮತ್ತು ಕೆಲವು ವಿಧದಲ್ಲಿ ನೇರವಾಗಿಯೂ ದುಷ್ಪರಿಣಾಮ ಬೀರಿದ್ದಾರೆ ಎಂಬುದು ಕನ್ನಡಿಯ ಪ್ರತಿಬಿಂಬದಷ್ಟೇ ಢಾಳಾಗಿ ಕಾಣುತ್ತಿರುವುದು ಖಚಿತ. 

ಮೇಲಾಗಿ ವಿದೇಶೀ ಕಂಪನಿಗಳತ್ತ ಬೆರಳು ತೋರಿಸುತ್ತಾ, ಸ್ವದೇಶೀ ಕಂಪನಿಗಳ/ಉದ್ಯಮಿಗಳ/ಕೃಷಿಭೂಮಾಲೀಕರ ಗಮನವನ್ನು ಅತ್ತಕಡೆ ಸೆಳೆದು, ನೈಪುಣ್ಯ ಇರುವ ಮಂದಿ ಹೆಚ್ಚಿನ ಸಂಬಳ ಕೇಳುವುದರ ಜೊತೆಗೆ,’ಕೆಲಸಗಾರರು ಬೇಕೆಂಬ ಬೇಡಿಕೆ ಹೆಚ್ಚಿದೆ’ ಎಂಬ ಊಹಾಪೋಹದಿಂದ    ಎಲ್ಲೆಡೆಗೂ ಅಲ್ಪಸ್ವಲ್ಪ ಕೆಲಸ ಗೊತ್ತಿದ್ದವರೂ ತಮ್ಮ ವೈಯ್ಯಕ್ತಿಕ ಬೇಡಿಕೆಗಳನ್ನು ಹೆಚ್ಚಿಸಿಕೊಂಡರು. ಅದರ ಪರಿಣಾಮವಾಗಿ ಕೆಲಸದ ಗಂಧಗಾಳಿಯೇ ಇಲ್ಲದ ಇನ್ನುಳಿದ ಜನ ಕೂಡ ಹೂವಿನ ಜೊತೆಗೆ ನಾರು ಕೂಡ ಸಾಗಿಹೋದಂತೇ ಕೆಲಸಗಳಿಗೆ ಸೇರಿಕೊಂಡರು. ಮಾಡುವ ಕೆಲಸಗಳಲ್ಲಿ ಸಾಮೂಹಿಕ ಕೆಲಸಗಳು ಕೆಲವಾದರೆ ಏಕವ್ಯಕ್ತಿ ಕೇಂದ್ರೀಕೃತ ಕೆಲಸಗಳು ಹಲವು. ಏಕವ್ಯಕ್ತಿ ಕೇಂದ್ರಿತ ಕೆಲಸಗಳಿಗೆ ಕೆಲಸಗಾರರು ಸಿಗುವುದು ದುರ್ಲಭವಾಯ್ತು. ರಸ್ತೆ-ಸೇತುವೆಗಳ ನಿರ್ಮಾಣ, ಅರಣ್ಯ ಇಲಾಖೆಯ ಕೆಲಸಗಳು ಮೊದಲಾದ ಸಾಮೂಹಿಕ ಕೆಲಸಗಳಲ್ಲಿ ಕೆಲಸ ಕಡಿಮೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸವನ್ನೇ ಮಾಡದಿದ್ದರೂ ಮಾಡಿದಂತೇ ತೋರಿಸಿದರೆ ಸಂಬಳ ಸಿಗುವುದರಿಂದ, ಅಸಂಘಟಿತ ವಲಯದ ಹಲವುಮಂದಿ ಯುವಕರು ಅವುಗಳನ್ನು ಆತುಕೊಂಡರು.

ದಿನಗಳೆದಂತೇ ಯುವಜನಾಂಗಕ್ಕೆ ಮಾಡುವ ಕೆಲಸಕ್ಕಿಂತಾ ಆಡುವ ಕೆಲಸಗಳತ್ತ ದೃಷ್ಟಿ ಹರಿಯಿತು. ಆಡುತ್ತಾ ಆಡುತ್ತಾ 8 ಗಂಟೆ ಕಾರ್ಯ ನಿರ್ವಹಿಸಿದಂತೇ ತೋರಿಸಿದರೆ ಸಾಕಾಗುವ ಕೆಲಸಗಳತ್ತ ಮನಸ್ಸು ಹರಿಯಿತು. ಹೀಗಾಗಿ ಕೃಷಿ ಅಥವಾ ಕೈಗಾರಿಕಾ ವಲಯಗಳಲ್ಲಿ ಮೈಮುರಿದು ದುಡಿಯುವ ಜವಾಬ್ದಾರಿ ಹುದ್ದೆಗಳಿಗಿಂತಾ ಆಡುತ್ತಾ ಮಾಡುವ ಕೆಲಸಗಳಿಗೆ ಯುವಕರು ಆದ್ಯತೆ ನೀಡಿದರು. ಅದರಲ್ಲೂ ಯುವಕರು ಮತ್ತು ಯುವತಿಯರು ಒಟ್ಟಾಗಿ ಆಡುತ್ತಾ ಮಾಡುವ ಕೆಲಸಗಳನ್ನು ಯುವಕರು ತಮ್ಮ ಗುರಿಯಾಗಿಸಿಕೊಂಡರು; ಎಂಜಾಯ್ ಮಾಡಿದರು. ಪರಿಣಾಮವಾಗಿ ವೃತ್ತಿಪರ ಕೆಲಸಗಳಲ್ಲಿನ ನೈಪುಣ್ಯ ಕಳೆಗುಂದುತ್ತಾ ನಡೆದು ಕೆಲಸಗಳು ಒಟ್ಟಾರೆ ಹೇಗೋ ನಡೆಯುತ್ತಿವೆ; ಕೆಲಸ ಕೊಡುವವರು ಗೊಣಗುತ್ತಲೇ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ.  ಇದೇ ಕಾರಣದಿಂದ ಇಂದು ಶೆಟ್ಟರ ಅಂಗಡಿಯಲ್ಲಿ ಸಾಮಾನು ಕೊಡಲೂ ಹುಡುಗರಿಲ್ಲ, ಭಟ್ಟರ ಗದ್ದೆಯಲ್ಲಿ ನಾಟಿಮಾಡಲೂ ಜನರಿಲ್ಲ!

ಕೆಲವುಕಡೆ ಜನಜೀವನದಲ್ಲಿ, ಹಾಸಿಗೆಗಿಂತಾ ಉದ್ದ ಕಾಲುಚಾಚಿದ ಪರಿಣಾಮವಾಗಿಯೋ, ಪ್ರಕೃತಿ ವೈಪರೀತ್ಯದಿಂದ ಬೆಳೆಯಾಗದುದರಿಂದಲೋ ಅಥವಾ ರಫ್ತು ವ್ಯವಹಾರ ಕಂಗೆಟ್ಟುಹೋಗಿರುವುದರಿಂದಲೋ, ತಮ್ಮ ಹಿರಿಯರು ಮಾಡಿಕೊಂಡ ಸಾಲವನ್ನು ಕಂಡ ಯುವಜನಾಂಗಕ್ಕೆ, ಕಷ್ಟದ ಕೆಲಸಗಳು ಮತ್ತು ಫಲಾಫಲದ ಸಾಧ್ಯಾಸಾಧ್ಯತೆಗಳು ಸಿಂಹಸ್ವಪ್ನವಾಗಿ ಕಾಡಿದ್ದರಿಂದ, ಹಿರಿಯರು ಮಾಡುತ್ತಿದ್ದ ಕೆಲಸಗಳಲ್ಲಿ ಕಷ್ಟವೇ ಹೆಚ್ಚೆನಿಸಿ, ದೀರ್ಘಕಾಲೀನ ಉತ್ತಮ ಪ್ರತಿಫಲದ ಇತಿಹಾಸವನ್ನು ಅವರು ಮರೆತು, ಕ್ಷಣಿಕ ಪ್ರತಿಫಲವನ್ನೇ ಬಯಸುತ್ತಾ ಸಾಂಪ್ರದಾಯಿಕ ಕುಲಕಸುಬು ಮತ್ತು ಕೃಷಿ, ಕೈಗಾರಿಕೆಗಳನ್ನು ಅವಗಣಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಈಜಾಡುತ್ತಾ ಬಂದ ವಿದೇಶೀ ಕಂಪನಿಗಳ ಪೈಪೋಟಿ ಅತಿಯಾಗಿ, ದೇಶೀಯ ಕೃಷಿ-ವ್ಯವಸಾಯ-ಕೈಗಾರಿಕೆಗಳು ಅವುಗಳಿಗೆ ಸಡ್ಡುಹೊಡೆದು ನಿಲ್ಲುವುದು ಕಷ್ಟವಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿ ಭೂಮಿಗಳಲ್ಲಿ ಕೆಲಸಕ್ಕೆ ಜನರಿಲ್ಲ, ಕೈಗಾರಿಕೆಗಳಲ್ಲಿ ಕಾರ್ಮಿಕರಿಲ್ಲದ ಕೊರತೆ ನೀಗುತ್ತಿಲ್ಲ, ದೇಶೀಯ ಉದ್ಯಮಗಳಲ್ಲೂ ಕೆಲಸಗಾರರ ಅಭಾವ ಬಹಳವಾಗಿದೆ.        

ಸಾಲದ್ದಕ್ಕೆ, ಅದಾಗಲೇ ಇದ್ದ ಯಮಯಾತನೆಯ ಹುಲಿಹುಣ್ಣುಗಳಮೇಲೆ ಬರೆ ಎಳೆದಂತೇ, ಸರಕಾರ ಕೊಡಮಾಡುವ ಒಂದು ರೂಪಾಯಿಗೆ ಕೆಜಿ ಅಕ್ಕಿಯಂತಹ ಸೌಲಭ್ಯಗಳಿಂದ ಹಳ್ಳಿಗಳಲ್ಲಿ ಯುವಜನತೆಯಲ್ಲಿ ಮೈಗಳ್ಳತನ ವಿಪರೀತ ಹೆಚ್ಚಿ, ವಿದೇಶೀ ಉತ್ಪನ್ನಗಳನ್ನೇ ದೇಶವಾಸಿಗಳು ಅವಲಂಬಿಸಬೇಕಾದ ಅನಿವಾರ್ಯತೆ ಬಂದರೂ ಅಚ್ಚರಿಯೆನಿಸುವುದಿಲ್ಲ, ವಿಶೇಷವೂ ಎನಿಸುವುದಿಲ್ಲ. ಮುಂಬರುವ ಲೋಕಸಭೆಯ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ’ಬಡಜನರ, ದೀನದಲಿತರ ಕಣ್ಣೀರೊರೆಸುವ ಯೋಜನೆ’ ಎಂಬ ಸ್ಲೋಗನ್ ಅಡಿಯಲ್ಲಿ ಪಕ್ಷವೊಂದು ಮಾಡುತ್ತಿರುವ ಇಂಥಾ ’ಘನಂದಾರಿ’ ಕೆಲಸಗಳಿಂದ ಯುವಜನತೆ ಕೆಲಸ ಮಾಡುವುದನ್ನೇ ಮರೆಯುತ್ತಾರೆ; ಪರಮ ಆಳಸಿಗಳಾಗುತ್ತಾರೆ. ಕುಂತಲ್ಲೇ 30 ಕೆಜಿ ಅಕ್ಕಿ ತಿಂಗಳಿಗೆ ದೊರೆಯುವಾಗ ಕೆಲಸವಾದರೂ ಏಕೆ ಬೇಕು? ಅಲ್ಲವೇ? ಅದರಲ್ಲಂತೂ ಹಡಾಲೆದ್ದುಹೋದ ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ, ಅನೇಕ ಹಳ್ಳಿಗಳಲ್ಲಿ/ಪಟ್ಟಣಗಳಲ್ಲಿ ಮನೆಗಳ ಪ್ರತಿಯೊಬ್ಬ ಸದಸ್ಯನೂ ಪ್ರತ್ಯೇಕ ಪ್ರತ್ಯೇಕ ಬೇನಾಮಿ ಬಿ.ಪಿಎಲ್. ಕಾರ್ಡನ್ನು ಹೊಂದಿರುವುದು ಕಂಡುಬರುತ್ತಿದೆ.

’ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬ ಗಾದೆಯನ್ನು ನಮ್ಮ ಪೂರ್ವಜ-ಪ್ರಾಜ್ಞರು ಮಾಡಿಟ್ಟು ಹೋದರು, ಅದರಂತೇ ರೂಪಾಯಿಗೆ ಕೆಜಿ ಅಕ್ಕಿ ಕೊಡುವ ಅಥವಾ ಪಡೆಯುವ ಕಾರ್ಯ ಎಲ್ಲಿಯವರೆಗೆ ಶಾಶ್ವತವಾಗಿದ್ದೀತು? ಅಂತಹ ಯೋಜನೆಗಳನ್ನು ಜಾರಿಯಲ್ಲಿಡಲು ವಿದೇಶೀಯ ಮೂಲಗಳಿಂದ ಸರಕಾರ ಪಡೆಯುವ ಸಾಲದಿಂದ ಭಾರತ ಎಂದಿಗೆ ಮುಕ್ತವಾದೀತು? ಅಥವಾ ಸಾಲದ ಶೂಲ ದೇಶದ ಬೆನ್ನೆಲುಬಿಗೇ ನಾಟಿ ದೇಶ ಮರಳಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸ್ಥಿತಿ ಬಂದೀತೇ? ಗೊತ್ತಿಲ್ಲ. ಆಳಸಿಗಳಾಗಿ ಬದಲಾಗುವ ಜನರನ್ನು ಮತ್ತೆ ಕೆಲಸಗಳತ್ತ ಗಮನ ಹರಿಸುವಂತೇ ಮಾಡುವುದು ಸರಕಾರಕ್ಕೆ ಸಾಧ್ಯವೇ? ಉತ್ತರವಿಲ್ಲ. ನಮ್ಮ ದುಡಿಮೆಯನ್ನು ನಾವು ಮಾಡಿಕೊಳ್ಳಬೇಕು, ನಮ್ಮ ಅನ್ನವನ್ನು ನಾವೇ ಸಂಪಾದಿಸಿಕೊಳ್ಳಬೇಕು ಎಂಬ ಭಾರತೀಯ ಮೂಲ ಸಂಸ್ಕೃತಿಯ ಸಂದೇಶವನ್ನೇ ಕಡೆಗಣಿಸಿ, ದೇಶೋದ್ಧಾರದ ನೆಪವೊಡ್ಡಿ, ಕೆಲಸಿಗರಲ್ಲಿ ಮೈಗಳ್ಳತನ ಹೆಚ್ಚಿಸುತ್ತಿರುವ ಆಳರಸರಿಗೆ, ಭವಿಷ್ಯದ ದಿನಗಳ ದೂರಾಲೋಚನೆ ಇಲ್ಲವೆಂಬುದಂತೂ ಸ್ಪಷ್ಟ; ಇದೇ ಗತಿಯ-ಇದೇ ಸ್ಥಿತಿಯ-ಇದೇ ರೀತಿಯ ಯೋಜನೆಗಳು ಮುಂದರಿದರೆ, ದೇಶ ಮುಂದೊಮ್ಮೆ ಅನುಭವಿಸಲಿಕ್ಕಿದೆ: ತುಂಬಲಾರದ ನಷ್ಟ !